Friday, May 9, 2008

ಅತ್ಯಾಚಾರ ಮತ್ತು ಕಾರಣಗಳು

ಇಂದು ಅಕಸ್ಮಾತ್ ಆಗಿ ಟೀನಾ ರವರ ಬ್ಲಾಗ್ಗೆ ಭೇಟಿ ನೀಡಿದೆ ಅಲ್ಲಿ ನಡೆಯುತಿದ್ದ ಕೆಲವು ಚರ್ಚೆಗಳು ಸ್ವಾರಸ್ಯ ಹಾಗು ಯೋಚಿಸಬೇಕಾದ ಗಂಭೀರ ವಿಚಾರಗಳೇ ಸರಿ.

ಹೆಣ್ಣಿನ ಮೇಲೆ ಅತ್ಯಾಚಾರ ಯಾಕೆ ನಡೆಯುತ್ತದೆ ಎಂಬುದನ್ನು ಮೊದಲು ವಿಶ್ಲೇಷಿಸಿದಾಗ ಈ ಕಾರಣಗಳು ನನಗೆ ಹೊಳೆದವು. ನನ್ನ ಜೀವನ ಯಾತ್ರೆಯಲ್ಲಿ ಕೆಲವು ಇಂತಹ ಸಂಗತಿಗಳೂ ನಡೆದಿವೆ. ಅದನ್ನೂ ಇಲ್ಲಿ ಬರೆದ್ದಿದ್ದೇನೆ
ಸಂಧರ್ಭ:
ಗಂಡಸರು ಅನುಕೂಲಸಿಂಧುಗಳು.
ಇಂದು ಕ್ಲೋಸ್ ಫ್ರೆಂಡ್ ಆಗಿರುವುವನೇ ನಾಳೆ ರೇಪಿಸ್ಟ್ ಆಗಬಹುದು.
ನಾನು ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿನ ಲೈಬ್ರರಿಯಲ್ಲಿ ಶನಿವಾರ (ಅಂದು ರಜಾ) ಭೇಟಿ ಕೊಟ್ಟಿದ್ದೆ.
ಯಾರು ಇರಲಿಲ್ಲ ವಾದ್ದರಿಂದ ಆತನ ಬುದ್ದಿಗೇನಾಯಿತೊ ಮೇಲೆ ಬೀಳಲು ಹವಣಿಸಿದ.
ಇಷ್ಟು ದಿನ ಕ್ಲೋಸ್ ಆಗಿ ಮಾತಾಡುತ್ತಿದ್ದೆಯಲ್ಲ . ಇಂದು ಇದಕ್ಕೂ ಒಪ್ಪಿಕೋ ಎಂದ./ ಹ್ಯಾಗೊ ಅವನಿಂದ ತಪ್ಪಿಸಿಕೊಂಡು ಬಂದಾಗಲಷ್ಟೆ ನೆಮ್ಮದಿಯ ಉಸಿರು ಬಿಟ್ಟೆ. ಯಾರಿಗೂ ಹೇಳಲಿಲ್ಲ . ಹೇಳಿದರೆ ನೀನ್ಯಾಕೆ ರಜಾದಿನದಲ್ಲಿ ಹೋದೆ . ನಿನ್ನದೇ ತಪ್ಪು ಅಂತಾರೆ.

ಹೆಣ್ಣಿನ ಸ್ಥಿತಿ
ಅಕಸ್ಮಾತ್ ಹೆಣ್ಣು ಗಂಡಿಗಿಂತ ಆರ್ಥಿಕವಾಗಿಯೋ ಅಥವ ದೈಹಿಕವಾಗಿಯೊ ದುರ್ಬಲಳಾಗಿದ್ದರೆ ಅವಳು ಗಂಡಿಗೆ ಬಡಿಸಿಟ್ಟ ಎಲೆ ಎಂದುಕೊಳ್ಳುತ್ತಾನೆ . ಸಾಮಾನ್ಯವಾಗಿ ಹುಡುಗಿಯರು ತಮ್ಮ ಕೆಲಸದಲ್ಲಿ ಅಥವ ಕಾಲೇಜಿನಲ್ಲಿ ಇಂತಹ ಸಂಧರ್ಭ ಎದುರಿಸಬೇಕಾಗುತ್ತದೆ.
ಗಂಡಿನ ಸ್ಥಿತಿ
ಗಂಡು ಕೆಲವೊಮ್ಮೆ ಇಲ್ಲೀವರೆಗೆ ಹೆಣ್ಣನ್ನೂ ಕಾಣದಿದ್ದಾಗ(ಬ್ರಹ್ಮಚಾರಿಗಳಾಗಿದ್ದವರು) ಮತ್ತು ತಮ್ಮ ಕಾಮ ತೀವ್ರತೆಯನ್ನು ಹತೋಟಿಯಲ್ಲಿಟ್ಟುಕೊಳ್ಳದೇ ಇದ್ದಾಗ ಅತ್ಯಾಚಾರಕ್ಕೆ ದಾರಿ ಯಾಗಬಹುದು.
ಹೆಣ್ಣಿನ ನಡತೆ
ಯಾರೇನೆ ಅಂದರೂ ಹೆಣ್ಣು ಯಾರೊಡನೆಯಾದರೂ ನಗುತ್ತಾ ಮಾತನಾಡಿದರೆ ಅವಳು ’ಅದಕ್ಕೆ ಕೊಡುವ ಇಂಡೈರೆಕ್ಟ್ ಇನ್ವಿಟೇಶನ್ ಅಂತ ಅಂದುಕೊಳ್ಳುವ ಸಮಾಜ ಇನ್ನೂ ಬದಲಾಗುವುದಿಲ್ಲ. ಆಗುವುದೂ ಇಲ್ಲ.

ಒಮ್ಮೆ ಒಂದು ಸಂಸ್ಥೆಯ ಅಧಿಕಾರಿಯಾಗಿ ನಾನು ಒಬ್ಬ ವಿದ್ಯಾರ್ಥಿಯೊಡನೆ ರಸ್ತೆಯಲ್ಲಿ ಸಿಕ್ಕನೆಂದು ಮಾತನಾಡಿ ಸ್ವಲ್ಪ ದೂರ ಬಂದೊಡನೆ ಯಾರೋ " ಅವನ ಜೊತೇಲಿ ಮಾತ್ರ ಬರ್ತೀರ ನಮ್ಮ ಜೊತೆ ಬರಲ್ಲ್ವಾ " ಅಂತ ಕೆಟ್ಟಾದಾಗಿ ಕೇಳಿದಾಗ ಇನ್ನೊಮ್ಮೆ ಯಾರೊಡನೆಯೂ ರಸ್ತೆಯಲ್ಲಿ ಮಾತನಾಡುತ್ತಾ ನಿಲ್ಲಬಾರದು ಎನಿಸಿತು.
ಹೆಣ್ಣಿನ ಉಡುಪು
ಖಂಡಿತಾ ಇದು ಸತ್ಯ.
ಈಗಿನ ಫ್ಯಾಶನ್ ಕಡಿಮೆ ಬಟ್ಟೆ ಹಾಕುವುದು. ಅದು ನಿಜ . ನಾನೂ ಒಪ್ಪುತ್ತೇನೆ. ಅದು ಎಲ್ಲಿವರೆಗೆ?
ನಾವು ಸಮಾಜದಲ್ಲಿ ಬದುಕುತ್ತಿದ್ದಾಗ ಸಮಾಜದ ಕಟ್ಟುಪಾಡುಗಳು ಅತಿ ಮುಖ್ಯ. ಅದನ್ನು ಮೀರಿದವಳು, ’ಅಂತಹವಳು’ ಎಂದು ಬ್ರಾಂಡ್ ಆಗುವುದು ನಿಜ. ಅಂತಹವರು ಗಂಡನ್ನು ಪ್ರಚೋದಿಸುವುದೂ ನಿಜ
ನಾನು ಚಿಕ್ಕವಳಿದ್ದಾಗ (೧೫ ವರ್ಷದವಳು)ಒಂದು ನಗರವಾಗುತ್ತಿರುವ ಹಳ್ಳಿಯಲ್ಲಿ ಕೆಲ ಕಾಲ ಇದ್ದೆವು . ಕೇವಲ ಪ್ಯಾಂಟ್ ಶರ್ಟ್ ಧರಿಸಿ ನಾನು ಆ ಹಳ್ಳಿಯಲ್ಲಿ ಬರುತ್ತಿದ್ದಾಗ ಸಭ್ಯತೆಯ ಎಲ್ಲೆ ಮೀರಿ ಅಲ್ಲಿನ ಗಂಡಸರು ಮಾತನಾಡಿದ್ದು ನೆನಪಿದೆ.. ಅಂದಿನಿಂದ ಆ ಹಳ್ಳಿಯಲ್ಲಿ ಇರುವಷ್ಟು ದಿನ ನಾನು ಚೂಡಿದಾರ ಹಾಕಿಯೇ ಒಡಾಡುತ್ತಿದೆ. ಅಂತಹ ಪ್ರಸಂಗ ನನಗೆ ಎದುರಾಗಲೇ ಇಲ್ಲ.
ಪಾಶ್ಚಾತ್ಯ ರಾಷ್ತ್ರಗಳಲ್ಲಿ ಹೇಗೊ ಗೊತ್ತಿಲ್ಲ .
ಆದರೆ ನಮ್ಮ ಸಮಾಜದ ಲಕ್ಶ್ಮಣ ರೇಖೆ ಯನ್ನೂ ದಾಟದೇ ಇರುವ ವರೆಗೂ ಹೆಣ್ಣು ಎಂದಿಗೂ ಈ ಅತ್ಯಾಚಾರಕ್ಕೆ ಬಲಿಯಾಗುವುದು ಕಡಿಮೆ

ಹೆಣ್ಣು ಇದಕ್ಕೆ ಏನು ಮಾಡಬಹುದು
ನನ್ನ ಅನಿಸಿಕೆಗಳು
ಆದಷ್ಟು ರಾತ್ರಿ ಒಬ್ಬಳೆ ಒಡಾಡುವುದನ್ನು ಕಡಿಮೆ ಮಾಡಬೇಕು ಇಲ್ಲವಾದರೆ ಜನರಿರುವ ರಸ್ತೆಯಲ್ಲಿ ಓಡಾಡಬೇಕು ಇಲ್ಲವಾದರೆ ಯಾರಾದರೂ ಗೊತ್ತಿರುವವರು ಜೊತೆ ಇರಬೇಕು
ಟೀನಾರವರು ಹೇಳಿದಂತೆ ಆತ್ಮರಕ್ಶಣೆಯ ಕಲೆಯನ್ನು ರೂಡಿಸಿಕೊಳ್ಳಬೇಕು, ಜೊತೆಯಲ್ಲಿ ಪೆಪ್ಪರ್ ಸ್ಪ್ರೇ ಆಥವ ಆ ಥರಹದ ಇನ್ನೇನಾದರೂ ಇಟ್ಟುಕೊಳ್ಳಾಬೇಕು
ನಾನು ಯಾವುದೇ ಸಮಯ್ದಲ್ಲೂ ಆಟೊನಲ್ಲಿ ಅಥವ ಟ್ಯಾಕ್ಸಿಯಲ್ಲಿ ಬರುತ್ತಿದ್ದಾಗಲೆಲ್ಲಾ . ಆ ಡ್ರೈವರ್‌ನ ಪೋಲಿಸ್ ನಂಬರನ್ನು ನನಗೆ ತಿಳಿದವರಿಗೆ ಎಸ್. ಎಮ್ .ಎಸ್ ಮಾಡುತ್ತೇನೆ. ದಾರಿಯಲ್ಲಿ ಫೋನನ್ನಲ್ಲಿ ಮಾತಾಡುತ್ತಾ ನನಗೆ ತಿಳಿದವರು ಈ ರಸ್ತೆಯಲ್ಲಿ ಸಿಕ್ಕಿ ಹತ್ತುತ್ತಾರೆ ಎಂಬುದನ್ನು ಅವನಿಗೆ ಸೂಚ್ಯವಾಗಿ ಹೇಳುತ್ತೇನೆ. ನಂತರ ಅವನ ಜೊತೆ ಮಾತನಾಡಲಾರಂಭಿಸುತ್ತೇನೆ. ಅವನ ಜೊತೆ ಮಾತಾನಾಡುತ್ತಾ ಒಂದು ರೀತಿಯ ಅತ್ಮೀಯ ವಾತವರಣ ನಿರ್ಮಿಸುತ್ತೇನೆ ಅಂತಹ ಪರಿಸ್ಥಿತಿಯಲ್ಲಿ ಯಾವುದೇ ಜಾರಿಕೆಯ ಮಾತಾಗಲಿ , ವೈಯುಕ್ತಿಕ ವಿಷಯ ವಾಗಲಿ ನುಸುಳದಂತೆ ಎಚ್ಚರ ವಹಿಸುತ್ತೇನೆ.
ತನ್ನ ಬಟ್ಟೆ ಹಾಗೂ ತನ್ನ ನಡುವಳಿಕೆಯ ಮೇಲೆ ಗಮನ(ಎಚ್ಚರ ) ವಿರಬೇಕು. ಯಾವುದೇ ಕಾರಣಕೂ ತನ್ನ ಉಡುಪಿನಿಂದ ಅಂಗಾಂಗ ಪ್ರದರ್ಶನವಾಗಬಾರದು (ಯಾವುದೇ ಉಡುಪು ಧರಿಸಿದರೂ). ಹಾಗೂ ಎಷ್ಟೆ ಮಾತನಾಡಿದರೂ ದೈಹಿಕ ಸ್ಪರ್ಶವನ್ನು ಕಡಿಮೆ ಮಾಡಬೇಕು. (ಹೆಂಗಸರು ತಮ್ಮ ಗೆಳತಿಯರಂತೆ ತಮ್ಮ ಗೆಳೆಯರ ಮೇಲೂ ಕೈ ಹಾಕಿ ನಡೆಯುವುದನ್ನು ನಾನು ನೋಡಿದ್ದೇನೆ).
ಸಣ್ಣ ಪುಟ್ಟ ಸಹಾಯ ಡ್ರಾಪ್ ಮಾಡು ಕಾಫಿ ಕೊಡಿಸು. ತೆಗೆದುಕೊಂಡು ಬಾ ಎಂಬ ತಾವೆ ಮಾಡಬಹುದಾದಂತಹ ಕೆಲಸಗಳಿಗೆ ಗಂಡಸರ ಸಹಾಯ ಪಡೆಯುವುದು ತಪ್ಪು

ಇದನ್ನೆಲ್ಲಾ ಮಾಡಿದರೆ ಅತ್ಯಾಚಾರ ಎನ್ನುವುದೇ ಇಲ್ಲವಾಗುತ್ತವೆ ಎಂಬುದು ಸುಳ್ಳು
ಮುಖ್ಯವಾಗಿ ಗಂಡಸರಲ್ಲಿ ಹೆಣ್ಣಿನ ಬಗ್ಗೆ ಗೌರವ ಮೂಡಬೇಕು. ಅದನ್ನು ಮೂಡಿಸುವ ಕೆಲಸ ಆಗಬೇಕು ಅದು ಹೆಂಗಸರಿಂದ (ನಮ್ಮಿಂದಲೇ) ಆಗುವ ಕೆಲಸ

ಗಮನಿಸಿ . ಇಲ್ಲಿ ಯಾವುದನ್ನು ಜೆನರಲೈಸ್ಡ್ ಆಗಿ ಹೇಳಿಲ್ಲ .

Friday, May 2, 2008

ಗುರಿ

ಗುರಿ
ಬಿಡದ ಛಲದ ನಂಬಿಕೆ
ಮನದ ಹಠದ ಕೂಗಿಗೆ
ಶರಣಾಗಿ ಬಂದೆ ನಾ ನಿನಗೆ

ದೂರದಿ ಕಂಡು
ನನ್ನ ಸನಿಹ ಕರೆದು
ನಡೆದಿಹೆ ನೀ ಮುಂದು

ಪ್ರೀತಿ ಬಿಟ್ಟು, ಸ್ನೇಹ ಬಿಟ್ಟು
ನಿನ್ನರಸಿ ಬಂದೆ
ನಾನೆಲ್ಲಾ ಬಿಟ್ಟು

ಹರೆಯದಾಟ ಬೇಡ ಎಂದೆ
ಬರಿಯ ಹಣ ಒಲ್ಲೆ ಎಂದೆ
ನಿನ್ನ ತಲುಪಲೆನ್ನ ಗಮನ ಒಂದೆ

ನೀ ಬದುಕಿನರ್ಥ ನನಗೆ
ನಿನ್ನ ಹುಡುಕಿ ಮನದಿ ಮಿಡುಕಿ
ಬಾಳು ವ್ಯರ್ಥ ವಾಗದೆನಗೆ

ನೀ ಸಿಗುವ ತನಕ ಸಾಯಲಾರೆ
ನಿನ ಹಿಡಿಯದೆ ಹೋಗಲಾರೆ
ನೀನಿರದ ಎಡೆಯ ಬಯಸಲಾರೆ

ಎಲ್ಲಿಯೋ ನೀನಿರುವೆ
ಇಲ್ಲಿಯೇ ನಾನಿರುವೆ
ನಮ್ಮಿಬ್ಬರ ಮಿಲನಕಾಗೆ ನಾ ಕಾದಿರುವೆ
---
----
----

ಓ ಗುರಿ

Thursday, May 1, 2008

ಕತೆಯಾಗದ ಹುಡುಗಿ

ಆಕೆ ಈಗಷ್ಟೆ ಅರಳಿದ ಸುಂದರ ಪುಷ್ಪ. ಮುಗ್ಧತೆಯೇ ಮೈವೆತ್ತಿದ ಹುಡುಗಿ. ಪ್ರೀತಿ ಪ್ರೇಮದ ಹಂಬಲಕ್ಕೆ ಬಿದ್ದವಳಲ್ಲ. ಯಾರ ಹೃದಯದ ಬಾಗಿಲನ್ನೂ ಬಡಿದವಳಲ್ಲ. ತನ್ನ ಎದೆಯ ಕದವ ತಟ್ಟಿದವರಿಗೆ ಕದ ತೆರೆದವಳಲ್ಲ. ಕಾಲೇಜಿಗೆ ಒಂದು ಥರದ ಮಾದರಿಯಾಗಿದ್ದಳು.
ಆಕೆ ಒಮ್ಮೆ ಅವನನ್ನ ನೋಡಿದಳು ಅವನು ಅಂದರೆ ಆ ಸಿನಿಮಾದ ಹೀರೊ. ಟಿವಿಯಲ್ಲಿ ಆ ಹೀರೊನ ಹಾಡು ನೋಡಿ ಅವನ ರೂಪಕ್ಕೆ ಮನ ಸೋತಳು. ಅವನ ಕಣ್ಣ ಭಾವಕ್ಕೆ , ನರ್ತಿಸುವ ಶೈಲಿಗೆ ಮಾರು ಹೋದಳು
ಚಿತ್ರ ನೋಡಿ ಬಂದ ಮೇಲಂತೂ ಅವನದೇ ’ಧ್ಯಾನ’ವಾಯಿತು . ಅವನು ಇನ್ನೂ ಬ್ಯಾಚುಲರ್ ಎಂಬುದನ್ನು ಕೇಳಿದ ಮೇಲೆ ತಾನೆ ಅವನ ’ಮೊನಾಲೀಸ ’ ಎಂದು ತೀರ್ಮಾನಿಸಿದಳು. ಎಲ್ಲಿ ನೋಡಿದರೂ ಅವನ ಹೆಸರನ್ನೇ ಗೀಚುತ್ತಿದ್ದಳು. ಕಷ್ಟ ಪಟ್ಟು ಅವನ ಆಡ್ರೆಸ್ ಹುಡುಕಿ ಅವನಿಗೊಂದು ಪ್ರೀತಿ ತುಂಬಿದ ಪತ್ರ ಹಾಗು ತನ್ನ ಭಾವಚಿತ್ರ ಕಳಿಸಿದಳು.
ಅವನೋ ಯಾರೋ’ಹುಡುಗಾಟಕ್ಕೆ ’ ಕಳಿಸಿದ ಪತ್ರವಿರಬೇಕು ಎಂದು ಮೊದಲು ಕಡೆಗಣಿಸಿದನಾದರೂ , ನಂತರ ಭಾವಚಿತ್ರಕ್ಕೆ ಮನಸೋತನು . ಅವಳ ಪ್ರೀತಿಯ ’ಮುಂಗಾರು ಮಳೆ"ಯಲ್ಲಿ ತೋಯ್ದು ಹೋದನು . ಅವಳಿಗೆ ಮರು ಓಲೆ ಕಳಿಸಿದ . "ಚೆಲುವಿನ ಚಿತ್ತಾರ"ವೆಲ್ಲಾ ತನ್ನ ಹೃದಯ ಚೋರನು ಕಳಿಸಿದ ಪತ್ರದಲ್ಲೆ ಇದೆ ಎಂದೆನಿಸಿತು. ಪ್ರೀತಿ ಆರಂಭವಾಯಿತು. ಅಥವ ಹಾಗೆಂದುಕೊಂಡಳು.
ಒಮ್ಮೆ ಅವನನ್ನು ಭೇಟಿ ಮಾಡುವ ಇಂಗಿತ ವ್ಯಕ್ತ ಪಡಿಸಿದಳು.. ಹೀರೊ ತಥಾಸ್ತು ಎಂದ.
ಇಬ್ಬರೂ ಭೇಟಿಯಾದರು. ತನ್ನ ಮನದಾಸೆಯನ್ನು ಅವನ ಮುಂದೆ ತೋಡಿಕೊಂಡಳು. ತಾನು ಮದುವೆ ಎನ್ನುವುದಾದರೆ ನಿನ್ನನ್ನೇ ಎಂದಳು. ಅದಕ್ಕೇನು ಪುರಾವೆ ಎಂದು ಕೇಳಿದ. ತನ್ನ ಚೆಲುವೆಲ್ಲಾ ನಿನ್ನದೆ ಎಂದು ತನ್ನನ್ನು ತಾನೆ ಅರ್ಪಿಸಿಕೊಂಡಳು. ಆತನೋ ಜಾಣ ಏನನ್ನೂ ಬಾಯಿ ಬಿಡದೆ ಏನನ್ನೂ ಕೇಳದೆ ಎಲ್ಲಾ ಪಡೆದುಕೊಂಡ. ಎಲ್ಲವನ್ನೂ ಸೂರೆಹೊಡೆದ.
ಚೆಲುವೆ ತನ್ನ ಬಾಳು ಪಾವನವಾಯ್ತು ಎಂದುಕೊಂಡಳು.
ಸರಿ ಮನೆಯವರನ್ನು ಒಪ್ಪಿಸಿ ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಹೇಳಿ ಅವಳನ್ನು ಮರಳಿ ಕಳಿಸಿದ.
ಕೊಂಚ ದಿನದಲ್ಲೇ ಆತ ಪ್ರಸಿದ್ದ ನಾಯಕನಾಗಿ ಬದಲಾದ ಅವನಿಗಾಗಿ ಕೋಟಿ ಕೋಟಿ ಸುರಿಯಲು ನಿರ್ಮಾಪಕರು ಸಾಲು ನಿಂತರು. ಸಾಲು ಸಾಲಾಗಿ ಚಿತ್ರ ಬಿಡುಗಡೆಯಾಗತೊಡಗಿದವು. ಹುಡುಗಿಯ ಕೈಗೆ ಸಿಗಲೂ ಆತ ಬಿಡುವಾಗಲಿಲ್ಲ
ಕೆಲವು ದಿನದಲ್ಲೆ ಆತನ ಮದುವೆ ಸುದ್ದಿ ಪತ್ರಿಕೆಗಳಲ್ಲಿ ಬಂತು. ಹುಡುಗಿ ಗಾಬರಿಯಾದಳು. ಹೀರೋನ ಮನೆ ಮುಂದೆ ಹೋಗಿ ಅತ್ತುಕೊಂಡಳು. ನಿಂಥರ ಎಷ್ಟೊಂದು ಹುಡುಗೀರು ಬರ್ತಾರೆ ಗೊತ್ತ. ಒಬ್ಬ ದೊಡ್ಡ ಹೀರೋ ಅಂದ್ರೆ ಅವನ ಹೆಸರು ಕೆಡಿಸೋಕೆ ಜನ ಕಾಯ್ತಾ ಇರ್ತಾರೆ ಎಂದು ಅಲ್ಲಿದ್ದ ಜನ ಅವಳನ್ನ ಓಡಿಸಿದರು.
ಮನೆಗೆ ಬಂದವಳೇ ಆಳಲೂ ಶಕ್ತಿ ಇಲ್ಲದವಳಂತೆ ಕೂತಳು . ಇನ್ನೂ ಹದಿನೆಂಟು ತುಂಬದ ವಯಸ್ಸು. ಆತ ತನ್ನವನಾಗಲಿಲ್ಲ ಎಂಬ ಬೇಗುದಿ ಒಂದೆಡೆಯಾದರೆ, ತಾನು ಯಾರವಳೂ ಆಗಲಾಗದ ದಳ್ಳುರಿ ಸುಡಲಾರಂಭಿಸಿತು. ಮುಂದೆ...........
ಆ ಹೀರೋನ ಮದುವೆ ವಿಜ್ರಂಭಣೆಯಿಂದ ಜರುಗಿತು.
ಪತ್ರಿಕೆಗಳಲ್ಲಿ ಈ ಸುದ್ದಿಯ ಜೊತೆ ಕೆಳಗಡೆ ಇಂತಹ ಹೀರೊ ಮದುವೆಯಾಗುತ್ತಿದ್ದಾನೆಂದು ಸಹಿಸದ ಹುಡುಗಿಯೊಬ್ಬಳ ಆತ್ಮಹತ್ಯೆ ಎಂಬ ಬರಹ ಕಾಣಿಸಿತು.
ಆ ಹೀರೊ " ಸಿನಿ ನಾಯಕರೂ ನಿಮ್ಮ ಹಾಗೆ ಮನುಶ್ಯರು . ಅವರೇ ನಿಮ್ಮ ಹೀರೊಗಳಲ್ಲ. ದಯವಿಟ್ಟು ಇಂಟಹ ನಿರ್ಧಾರ ತೆಗೆದುಕೊಳ್ಳಬೇಡಿ " ಎಂದು ಹುಡುಗಿಯರಿಗೆ ಕಿವಿ ಮಾತು ಹೇಳಿದ.
ಜನ ಚಪ್ಪಾಳೆ ಹೊಡೆದರು.