Wednesday, December 2, 2009

ಗಮ್ಯ ಹುಡುಕುತ್ತಾ ನಾಲ್ಕನೇ ಕಂತು

ಸ್ವಾತಿಗೆ ಅದು ತಮಿಳು ಎಂದು ಗೊತ್ತಿತ್ತಷ್ಟೆ ಹೊರತಾಗಿ ಓದಲು ಬರುತ್ತಿರಲಿಲ್ಲ. ಕೂಡಲೆ ಮೊಬೈಲ್ ಇಂದ ಅದರ ಭಾವಚಿತ್ರ ತೆಗೆದು ಗೆಳತಿ ವಲ್ಲಿಗೆ mms ಕಳಿಸಿದಳು. valli ಅವಳ ಕಾಲೇಜ್ ಮೇಟ್ ತಮಿಳಿನಲ್ಲೇ ಓದಿದ್ದು.
ಕೂಡಲೆ ವಲ್ಲಿ ಅದರ ಮೇಲಿದ್ದುದ್ದೇನು ಎಂದು ಸುದ್ದಿ ಕಳಿಸಿದಳು. ಅದು "ಕಣ್ಣಮ್ಮ " ಎಂದು
"ಸ್ವಾತಿ ನಿಮ್ಮ ತಾಯಿ ಹೆಸರು ಕಣ್ಣಮ್ಮ ಅಂತ ಅನ್ಸುತ್ತೆ ಕಣ್ಣು ಕಣ್ಣು ಕಣ್ಣಮ್ಮ "ಶಿವು ರೇಗಿಸಿದನಾದರೂ ಚಿಂತಾಮಗ್ನಳಾದ ಅವಳನ್ನುಕಂಡು ತಮಾಷೆಗೆ ಇದು ಸರಿಯಾದ ಸಮಯವಲ್ಲ ಅನ್ನಿಸಿ ಸುಮ್ಮನಾದ.
ಸ್ವಾತಿ ಯೋಚನೆಗೆ ಬಿದ್ದಿದ್ದಳು.
ಇದು ತನ್ನ ತಾಯಿಯ ಹೆಸರೇ? ಹಾಗೇನಾದರೂ ಆದರೆ ತಾನು ತಮಿಳಿಗಳಾಗುತ್ತೇನಾ?
ಇನ್ನು ಆ ತಾಯಿಯನ್ನು ಎಲ್ಲಿ ಎಂದು ಹುಡುಕುವುದು. ತಮಿಳು ನಾಡಿನಲ್ಲಾ.ಇಲ್ಲಾ ಕರ್ನಾಟಕದಲ್ಲಾ?
ಏಕೋ ತಾಯಿಯನ್ನು ಹುಡುಕುವ ಪಯಣಕ್ಕೆ ಕೊನೆಯೇ ಸಿಗುವುದಿಲ್ಲ ಎಂದನಿಸಿತು ಗುರಿ ಇರದೆ ಅಂಬು ಎತ್ತಲೋ ಹಾರಿಸುತ್ತಿರುವುದು . ಕಣ್ಣಾಲಿ ಭಾರವಾಗಿತ್ತು. ತನ್ನ ಗಮ್ಯ ಸಿಗುವುದೇ ಇಲ್ಲ ಎಂದನಿಸುತ್ತಿತ್ತು
"ಸ್ವಾತಿ ಡೋಂಟ್ ವರಿ ನಿಮ್ಮ ತಾಯಿ ಹೆಸರು ಗೊತ್ತಾಗಿರುವ ಹಾಗೆಯೇ ಅವರು ಸಿಕ್ಕೇ ಸಿಗುತ್ತಾರೆ ಇವತ್ತಲ್ಲಾ ನಾಳೆ ಖಂಡಿತಾ."
ಶಿವೂ ಹೇಳುತ್ತಿದ್ದರೂ ಕೇವಲ ತನ್ನ ಮನಸಿನ ಸಮಾಧಾನಕ್ಕಾಗಿ ಎಂಬುದು ಮಾತಿನ ಧಾಟಿ ಇಂದಲೇ ತಿಳಿಯುತ್ತಿತ್ತು.
ಕಾರ್ ಮನೆಯತ್ತ ಸಾಗುತ್ತಿದ್ದಂತೆ ಸ್ವಾತಿಯ ಮನಸಿನ ತುಂಬಾ ನೂರಾರು ಅಸ್ಪಷ್ಟ ಚಿತ್ರಗಳು .
ಮನೆಯಲ್ಲಿ ಅಪ್ಪನಿಗೆ ತೋರಿಸಿ ಅಳಲಾರಂಭಿಸಿದಳು ಸ್ವಾತಿ.
"ಅಪ್ಪಾ ಇದು ನಮ್ಮ ತಾಯಿಯದು ನನ್ನ ನಿಷ್ಕಾರುಣ್ಯವಾಗಿ ಯಾರಿಗೋ ಕೊಟ್ಟು ಕೈ ತೊಳೆದುಕೊಂಡವಳದು . ಒಂದು ನಾಯಿ ಕೂಡ ಮಗೂನ ಜೋಪಾನ ಮಾಡುತ್ತೆ ಆದರೆ ನನ್ನ ತಾಯಿ ತಂದೆ ಎನಿಸಿಕೊಂಡವರು ಅದಕ್ಕಿಂತ ಕಡೆಯಾಗಿ ಬಿಟ್ಟರಲ್ಲ"
ಸ್ವಾತಿಯ ಅಳು ನೋಡಿ ಪಾರ್ವತಮ್ಮನವರ ಕಣ್ಣು ಒದ್ದ್ಯೆಯಾಯ್ತು. ಮಗಳನ್ನು ತನ್ನ ಎದೆಗೊರಗಿಸಿಕೊಂಡರು. ಅದಲ್ಲದೇ ತಮ್ಮ ಯಾವುದೇ ಸಮಾಧಾನದ ಮಾತು ಅವಳನ್ನು ಸಂತೈಸುವುದಿಲ್ಲ ಎಂದು ತಿಳಿದಿತ್ತು.

"ಅಮ್ಮಾ ನಾನು ಸೋತು ಹೋದೆ, ನಾನು ಅನಾಥೆ "ಸ್ವಾತಿ ಬಡಬಡಿಸುತ್ತಿದ್ದಳು. ಹಾಗೆ ಅವರ ಮಡಿಲಿನಲ್ಲಿ ನಿದ್ರಿಸಿದಳು.

ಮಾರನೇ ದಿನ ಶಿವು ಬಂದ

"ಸ್ವಾತಿ ಈ ಶಾಲಿನ ಚಿತ್ರ ತಗೊಂಡು ಎಲ್ಲಾ ತಮಿಳು ಟಿವಿ ಚಾನೆಲ್‌ಗಳಲ್ಲಿ ಪೇಪರ್ಸ್‌ನಲ್ಲಿ ಜಾಹಿರಾತು ಕೊಡೋಣ. ಈ ಶಾಲಿನ ಗುರುತು ಹಿಡಿದು ಯಾರಾದರೂ ಬರಬಹುದು"

ಸ್ವಾತಿ ತಲೆ ಆಡಿಸಿದಳು. ಅದರಲ್ಲೂ ನಂಬಿಕೆ ಇರಲಿಲ್ಲ ಅವಳಿಗೆ. ರೆಡ್ಡಿಯವರು ಒಮ್ಮೆಯೂ ಕೈ ಬಿಚ್ಚಿ ಹಣ ಖರ್ಚು ಮಾಡಿದವರಲ್ಲ

ಅಂತಹುದರಲ್ಲಿ ಎಲ್ಲಾ ಟಿವಿ ಚಾನೆಲ್‌ಗಳಿಗೂ ಹಣವನ್ನು ನೀರಿನಂತೆ ಖರ್ಚು ಮಾಡಿದರು .ಒಟ್ಟಿನಲ್ಲಿ ಮಗಳ ಮುಖದಲ್ಲಿ ಸಂತಸ ಕಾಣಬೇಕು ಎಂಬುದೇ ಅವರ ಉದ್ದೇಶ. ತಿಂಗಳುಗಳು ಕಳೆದವು ಆದರೂ ಯಾವುದೇ ಫಲ ನೀಡಲಿಲ್ಲ. ಯಾರು ಅದನ್ನು ಗುರುತಿಸಲೂ ಇಲ್ಲ
ಇತ್ತ ಸ್ವಾತಿಯ ಮದುವೆಯ ಮಾತುಕಥೆ ಮುಂದುವರೆಯಲಿಲ್ಲ ಎಂಬುದಕ್ಕಿಂತ ತಾನ್ಯಾರು ಎಂಬುದು ತಿಳಿಯದೆ ಮದುವೆಯಾಗಲು ಸ್ವಾತಿ ಒಪ್ಪಲಿಲ್ಲ. ಅವಳ ಪಿಯುಸಿಯ ಫಲಿತಾಂಶ ಬಂದಿತ್ತು . ಮೊದಲ ದರ್ಜೆಯಲ್ಲಿಯೇ ತೇರ್ಗಡೆಯಾಗಿದ್ದಳು.

ಬಿಎ ಹಿಸ್ಟರಿ ಮುಂದುವರೆಸಲಾರಂಭಿಸಿದಳು.

ಜೀವನ ಮೊದಲಿನಂತೆ ನಡೆಯಲಾರಂಭಿಸಿತು. ಆದರೆ ಮೊದಲಿದ್ದ ಸ್ವಾತಿ ಬದಲಾಗಿದ್ದಳು. ನೆಂಟರಿಷ್ಟರ ಮುಂದೆ ಹೋಗಲು ಸ್ವಾತಿಯೇ ಇಷ್ಟ ಪಡುತ್ತಿರಲಿಲ್ಲ. ಏನಾದರೂ ಪ್ರಶ್ನಿಸಿಯಾರು ಎಂಬ ಹಿಂಜರಿಕೆ. ತಾನೆ ಒಂದು ಚಿಪ್ಪಲ್ಲಿ ಅಡಗಲಾರಂಭಿಸಿದಳು.
ಕಾಲೇಜಿನಲ್ಲಿಯೂ ಹೆಚ್ಚು ಜನರೊಂದಿಗೆ ಬೆರೆಯುತ್ತಿರಲಿಲ್ಲ. ಮನೆಗೆ ಬಂದರೆ ತಾಯಿಯೊಡನೆಯಾಗಲಿ ತಂದೆಯೊಡನೆಯಾಗಲಿ ಹೆಚ್ಚು ಮಾತಾಡುತ್ತಿರಲಿಲ್ಲ. ಪಾರ್ವತಮ್ಮನವರ ಮನಸೂ ಒಮ್ಮೊಮ್ಮೆ ಹಾಗೊಮ್ಮೆ ಹೀಗೊಮ್ಮೆ ತೊಯ್ದಾಡುತ್ತಿತ್ತು. ಹುಟ್ಟುತ್ತಲೇ ಕಳೆದುಹೋದ ಮಗನನ್ನ ನೆನೆಸಿಕೊಂಡು ಕೆಲವೊಮ್ಮೆ ಅಳುತ್ತಿದ್ದರೆ ಮಗದೊಮ್ಮೆ ಚೈತನ್ಯದ ಚಿಲುಮೆಯಾಗಿದ್ದ ಮಗಳು ಮೌನ ಗೌರಿಯಾದದ್ದು ನೋಡಿ ಕರುಳು ಕಿವುಚುತ್ತಿತ್ತು.

ರೆಡ್ಡಿಯವರೂ ಮಾತು ಕಡಿಮೆ ಮಾಡಿದ್ದರು. ಮಗಳನ್ನು ಮೊದಲಿನ ಸ್ಥಿತಿಗೆ ತರಲು ಮಾಡಿದ ಪ್ರಯತ್ನಗಳೆಲ್ಲವೂ ನಿಶ್ಫಲವಾಗಿದ್ದವು. ಅವರ ಗತ್ತು ಇಂಗಿಯೇ ಹೋಗಿತ್ತು ಎಂಬ ಮಟ್ಟಿಗೆ ಕಡಿಮೆ ಆಗಿತ್ತು.

ಇದ್ದುದರಲ್ಲಿ ಶಿವೂನೆ ಆಗಾಗ ಬಂದು ಸ್ವಾತಿಯನ್ನು ಮಾತಾಡಿಸಿ ನಗಿಸುತ್ತಿದ್ದ. ಅವನನ್ನು ಅವಳಿಂದ ದೂರವಿಡುವ ಅವನ ತಂದೆ ತಾಯಿಯ ಪ್ರಯತ್ನ ವಿಫಲವಾಗಿತ್ತು. ಏನಾದರಾಗಲಿ ಎಂದು ಅವರೂ ಕೈ ಚೆಲ್ಲಿದ್ದರು

ಎರೆಡು ವರ್ಷಗಳು ಕಳೆದವು .

ಅಂದು ಕಾಲೇಜಿನಿಂದ ಬಂದವಳೇ ರೂಮನ್ನು ಹೊಕ್ಕಳು ಸ್ವಾತಿ. "ಸ್ವಾತಿ" ಪಾರ್ವತಮ್ಮ ರೂಮಿಗೆ ಬಂದರು.
"ಹೇಳಮ್ಮ" ಕೈನಲ್ಲಿ ಯಾವುದೋ ಪುಸ್ತಕವಿತ್ತು ಅಷ್ಟೇ .ಕಣ್ಣು ಮಾತ್ರ ಎಲ್ಲೋ ನೋಡುತ್ತಿತ್ತು
"ಸ್ವಾತಿ ನಂಗ್ಯಾಕೋ ಮನಸಿಗೆ ಸರಿ ಇಲ್ಲ . ಒಂಥರಾ ಬೇಜಾರಾಗ್ತಿದೆ. ಪರಮ ಹಂಸ ಸದಾನಂದ ಸ್ವಾಮೀಜಿಯವರನ್ನ ನೋಡಿಕೊಂಡು ಬರೋಣವಾ? ಸ್ವಲ್ಪ ಮನಸಿಗೆ ನೆಮ್ಮದಿ ಸಿಗುತ್ತೆ"
"ಅಮ್ಮಾ ನೀನು ಹೋಗು ನಾನೆಲ್ಲೂ ಬರೊದಿಲ್ಲ" ಎಂದವಳು ಅಮ್ಮನ ಮುಖ ನೋಡಿದಳು. ಪಾರ್ವತಮ್ಮನ ಮುಖ ಬಾಡಿತು. ರೆಡ್ದಿಯ ಹೆಂಡತಿ ಕಳೆ ಎಂದೋ ಕಳೆದುಕೊಂಡುಬಿಟ್ಟಿದ್ದರು.ಮನೆಯಲ್ಲಿ ಸ್ಮಶಾನ ಮೌನ. ತನ್ನಿಂದ ಹೀಗಾದರೂ ಸಂತಸ ಸಿಗಬಹುದಾದರೆ ತಾನೇಕೆ ಅಡ್ಡಿ ಮಾಡಲಿ ಎಂದನಿಸಿತು.
"ಸರಿ ಅಮ್ಮ ಯಾವತ್ತು ಹೋಗೋಣ? ಹೇಳು"
ಪಾರ್ವತಮ್ಮನ ಮುಖ ಅರಳಿತು
"ಸಾಯಂಕಾಲ ಹೋಗೋಣ "
"ಆಯ್ತಮ್ಮ"
ಪರಮ ಹಂಸ ಸ್ವಾಮಿ ಸದಾನಂದರ ಹೆಸರನ್ನು ಕೇಳದವರಿರಲಿಲ್ಲ .ಅವರು ಉತ್ತರ ಭಾರತದಲ್ಲಿ ಬಹಳ ಪ್ರಸಿದ್ದರಾದವರು. ಫೋಟೋ ನೋಡಿಯೇ ಜನ ಮೋಡಿಗೆ ಒಳಗಾಗುತ್ತಿದ್ದರು. ಅಂತಹ ಕಾಂತಿ, ತೇಜಸ್ಸು ಅವರಲ್ಲಿತ್ತು. ಸ್ವಾಮೀಜಿ ಎಂದರೆ ಗಡ್ಡ ಮೀಸೆ ಪೊದೆಗಳಿಂದ ತುಂಬಿದ ಮುಖದವರು ಎಂಬುದನ್ನು ಸುಳ್ಳುಮಾಡಿದ್ದ ಕೆಲವೇ ಕೆಲವು ಪರಮಹಂಸರಲ್ಲಿ ಅವರೂ ಒಬ್ಬರು.ನೀಟಾಗಿ ಶೇವ್ ಮಾಡಿದ ಮೊಗ. ಇನ್ನೂ ತುಂಬಾ ಚಿಕ್ಕವರೇನೋ ಎಂದನಿಸುತ್ತಿತ್ತು. ಆದ್ಯಾತ್ಮದ ಬಗ್ಗೆಗಿನ ಅವರ ಮಾತಿಗೆ ಮರುಳಾಗದವರೇ ಇರಲಿಲ್ಲ. ದೇಶೀಯರಿಗಿಂತ ವಿದೇಶಿಯ ಶಿಷ್ಯರೇ ಜಾಸ್ತಿ . ಇತ್ತೀಚಿಗೆ ಕನಕ ಪುರದಲ್ಲಿ ನೂರು ಎಕರೆಜಾಗವನ್ನು ಶಿಷ್ಯರು ಬಳುವಳಿಯಾಗಿ ಕೊಟ್ಟಿದ್ದರು . ಆ ಶಿಷ್ಯರಲ್ಲಿ ರೆಡ್ದಿಯವರೂ ಒಬ್ಬರು. ಮೂರೆಕರೆ ಜಾಗವನ್ನು ಸದಾನಂದರ ಆಶ್ರಮಕ್ಕೆ ಕೊಡಿಸಿದ್ದರು. ಹಾಗಾಗಿ ಸದಾನಂದರ ಮೆಚ್ಚಿನ ಶಿಷ್ಯರಲ್ಲಿ ರೆಡ್ಡಿಗಳು ಒಬ್ಬರಾಗಿದ್ದರು. ರೆಡ್ಡಿಯವರಿಗೆ ಆಶ್ರಮದಲ್ಲಿ ವಿಶೇಷ ಸ್ಥಾನ ಮಾನ. ಆಗಾಗ ಅವರಲ್ಲಿ ಹೋಗಿ ಬರುತ್ತಿದ್ದರು. ಸ್ವಾತಿಯೂ ಒಂದೆರೆಡು ಬಾರಿ ಹೋಗಿದ್ದಳು. ಅವರ ಮಾತು ಚೆನ್ನಾಗಿರುತ್ತಿತ್ತು. ಆ ಮಾತುಗಳನ್ನು ಕೇಳಿದರೆ ಏನೋ ನೆಮ್ಮದಿ ಸಿಗುತ್ತಿತ್ತು ಎನ್ನುವುದು ನಿಜವೂ ಆಗಿತ್ತು ಅವಳ ಪಾಲಿಗೆ. ಹೇಳಿಕೊಳ್ಳುವುದಕ್ಕೆ ಆಶ್ರಮ . ಒಳಗೆ ಅರಮನೆಯಂತಿತ್ತು
ತಮ್ಮ ಭಕ್ತರು ಕೊಟ್ಟಿದ್ದ ಚಿನ್ನದ ಲೇಪದ ಸಿಂಹಾಸನಲ್ಲಿ ಕುಳಿತ್ತಿದ್ದರು ಪರಮಹಂಸರು
ನಗುತ್ತಾ ತಾಯಿ ಮಗಳನ್ನು ಸ್ವಾಗತಿಸಿದರು. ತಮಗಾಗಿಯೇ ವಿಶೇಷವಾಗಿ ಈ ಅವಧಿಯನ್ನು ಕೊಟ್ಟಿದ್ದಾರೆ ಎಂಬುದು ಸ್ವಾತಿಗೆ ತಿಳಿಯಿತು
ಪಾರ್ವತಮ್ಮ ಸ್ವಲ್ಪ ಹೊತ್ತು ಮಾತಾಡಿದ ನಂತರ ಈಗಲೆ ಬರುವುದಾಗಿ ಹೇಳಿ ಹೊರಗೆ ಹೋದರು.
ಏನುಮಾತಾಡುವುದೆಂದು ತೋಚದೆ ಕುಳಿತಿದ್ದ ಸ್ವಾತಿಯನ್ನು ನೋಡಿ ಪರಮಹಂಸರು ಮುಗಳ್ನಕ್ಕರು
ಅವಳ ಕಣ್ಣಲ್ಲಿ ಕಣ್ಣನ್ನು ಇಟ್ಟು ಮಾತಾಡಿದರು
"ಸ್ವಾತಿ . ನಾನು ಹೇಳೋದನ್ನು ಗಮನವಿಟ್ಟು ಕೇಳಿಸಿಕೋ. ನಿನ್ನ ಹುಟ್ಟು ಆಕಸ್ಮಿಕವಾದುದಲ್ಲ . ವಿಧಿಯಾಟವೂ ಅಲ್ಲ. ನಿನ್ನಿಂದ ಈ ಜಗತ್ತಿಗೆ ಏನೋ ಬೇಕಿದೆ ಹಾಗಾಗಿಯೇ ಎಲ್ಲೋ ಹುಟ್ಟಿದ ನೀನು ಈ ಮನೆಗೆ ಬಂದಿರುವೆ. ನಿನ್ನ ಪೂರ್ವದ ಬಗ್ಗೆ ಯೋಚಿಸುತ್ತಾ ಕುಳಿತಿರುವ ಬದಲು ನಿನ್ನ ಮುಂದಿನ ಕಾರ್ಯಗಳನ್ನು ಸಾಗಿಸುವತ್ತ ನೋಡು . ನದಿಮೂಲ ಹಾಗು ಋಷಿಮುಲ ಕೆದಕಬಾರದಂತೆ ಹಾಗೆಯೇ ನೀನೂ ಸಹ ನಿನ್ನ ಗಮ್ಯಕ್ಕಿಂತ ನಿನ್ನ ಗುರಿಯೇ ಬಹಳ ಮುಖ್ಯ. ಜೀವನದಲ್ಲಿ ಹಳೆಯ ನೀರು ಕರಗಬೇಕು ಹೊಸ ನೀರು ಬರಬೇಕು ಹಾಗೆಯೇ ನಿನ್ನ ಪೂರ್ವ ಇತಿಹಾಸದ ನೆನಪು ದೂರಾಗಬೇಕು . ವರ್ತಮಾನದಲ್ಲಿ ನೀನೇನಾಗಿರುವೆ ಎಂಬುದು ಮುಖ್ಯ . ಏಕೆಂದರೆ ಈ ವರ್ತಮಾನವೇ ನಿನ್ನನ್ನು ಭವಿಷ್ಯದಲ್ಲಿ ಎಲ್ಲರೂ ನೆನಪಿಡುವ ಇತಿಹಾಸಕ್ಕೆ ಸೇರಿಸುತ್ತದೆ.ಸೋ ಫರ್‌ಗೆಟ್ ದ ಪಾಸ್ಟ್ ಗೆಟ್ ರೆಡಿ ಟು ಫೇಸ್ ದ ಪ್ರೆಸೆಂಟ್"
ಅವಳ ಹಣೆಯನ್ನು ತಮ್ಮ ಕೈಯ್ಯ ಹೆಬ್ಬೆಟ್ಟಿನಿಂದ ಒತ್ತಿದರು. ಒಂದು ತರಹ ನಿರಾಳತೆ ಮೂಡಿತು ಸ್ವಾತಿಯಲ್ಲಿ .
ನಿಶ್ಚಿಂತೆ ತುಂಬಿದಂತೆ ಅನ್ನಿಸಿತು ಅವರಿಗೆ ಕೈ ಮುಗಿದಳು.
ಹೊರಗಡೆ ಹೋಗಿದ್ದ ಪಾರ್ವತಮ್ಮ ಒಳಗೆ ಬಂದರು.
ಸ್ವಾತಿಯ ಕಣ್ಣಲ್ಲಿ ತುಂಬಿದ್ದ ನೀರು ನೋಡಿ ಪರಮಹಂಸರತ್ತ ನೋಡಿದರು. ಅವರು ತಿಳಿಯಾದ ಮುಗಳ್ನಗೆ ಬೀರಿದರು.ಎಲ್ಲವು ತಿಳಿಯಾದಂತೆ ಭಾಸವಾಯಿತು.
ಸ್ವಾತಿಯನ್ನು ಮನೆಗೆ ಕರೆದೊಯ್ದರು
ಅಂದಿನಿಂದ ಮನಸು ತಹಂಬದಿಗೆ ಬಂದಿತು. ಅಂದಿನಿಂದ ಪರಮಹಂಸರ ಆಶ್ರಮಕ್ಕೆ ವಾರಕ್ಕೊಮ್ಮೆಯಾದರೂ ಹೋಗಿಬರುತ್ತಿದ್ದಳು. ಸಹಜ ಸ್ಥಿತಿಗೆ ಬರಲಾರಂಭಿಸಿದಳು. ಮೊದಲಿನ ಹರ್ಷ ಕಾಣದಿದ್ದರೂ ತುಂಬಾ ವಿಮುಖಿಯಾಗಿರಲಿಲ್ಲ

ಎಲ್ಲವೂ ಸರಿಯಾಗಿದೆ ಎನ್ನುತ್ತಿದ್ದಂತೆ ರೆಡ್ಡಿಯವರ ಮನೆ ನಂಬರಿಗೆ ಫೋನ್ ಬಂದಿತ್ತು.

ಸ್ವಾತಿಯೇ ರಿಸೀವ್ ಮಾಡಿದಳು ಅತ್ತಲಿಂದ ತಮಿಳಿನಲ್ಲಿ ಮಾತಾಡಿದರು

"ನಾ ಕಣ್ಣಮ್ಮ ಪೇಸರೆ ರೆಡ್ಡಿ ಇರ್ಕಾಂಗಳಾ?" ನಡುಗುವ ದ್ವನಿಯಲ್ಲಿ ಕೇಳಿ ಬಂತು ಸ್ವರ

ಸ್ವಾತಿಗೆ ನಂಬಲಾಗಲಿಲ್ಲ.

ತಮಿಳು ಬರುತ್ತಿರಲಿಲ್ಲವಾದರೂ ಕಣ್ಣಮ್ಮ ಎಂಬ ಹೆಸರು ಕಿವಿಯನ್ನು ಹೊಕ್ಕಿತು
"ಕಣ್ಣಮ್ಮ ಅಮ್ಮಾ?............" ಸಂಭ್ರಮಾಶ್ಚರ್ಯಾ ಅವಳ ದನಿಯಲ್ಲಿ ಕುಣಿಯುತ್ತಿತ್ತು.
"ಆಮಾ ನಾ ಕಣ್ಣಮ್ಮಾತಾ" ದ್ವನಿ ಕೇಳುತ್ತಿದ್ದರೆ ಅವರ್ಯಾರೀ ತುಂಬಾ ವಯಸ್ಸಾದವರಂತೆ ಇತ್ತು
ತಮಿಳು ಬರದ ತನ್ನನ್ನ ತಾನೆ ಹಳಿದು ಕೊಂಡಳು. ತನ್ನ ತಾಯಿಯಾ ಇದು ? ಎಂಬ ಯೋಚನೆಯ ಜೊತೆಯಲ್ಲಿಯೇ

"ಒಂದು ನಿಮಿಷ" ಎಂದು

"ಅಪ್ಪಾ ಅಪ್ಪಾ" ತಂದೆಯನ್ನು ಕೂಗಿದಳು

ಆಫೀಸ ರೂಮಲ್ಲಿದ್ದ ರೆಡ್ಡಿಯವರು ಏನೋ ಆಗಿ ಹೋಯಿತೆಂದು ಬಗೆದು ಓಡುತ್ತಲೇ ಬಂದರು.

ಟಿವಿ ಮುಂದು ಕೂತಿದ್ದ ಪಾರ್ವತಮ್ಮನವರೂ ಹಾಲಿಗೆ ಬಂದರು

"ಅಪ್ಪಾ ಕಣ್ಣಮ್ಮ ನಮ್ಮ ತಾಯಿ.........." ಮುಂದೆ ಮಾತಾಡಲಾಗದೆ ಫೋನನ್ನು ಮಾತ್ರ ತೋರಿಸಿದಳು ಗಂಟಲಲ್ಲಿ ಸ್ವರವೇ ಹೊರಡದಂತಾಗಿತ್ತು.

ದಿಗ್ಬ್ರಾಂತ್ರರಾದ ರೆಡ್ಡಿಯವರು ಸ್ವಾತಿಯನ್ನೇ ನೋಡುತ್ತಾ ಫೋನ್ ರಿಸೀವ್ ಮಾಡಿದರು

"ಹಲ್ಲೋ .ನಾ ಕ್ರಿಷ್ಣಾರೆಡ್ಡಿ .ಸೊಲ್ಲಂಗೋ"

ಮುಂದಿನ ಮಾತುಕಥೆ ಸ್ವಾತಿಗೆ ಅರ್ಥವಾಗಲಿಲ್ಲ

ರೆಡ್ಡಿಯವರ ಮಾತು ಮುಗಿಯುವುದನ್ನೇ ಕಾದವಳಂತೆ
"ಅಪ್ಪಾ ?ಏನಂತೆ"

ಎಲ್ಲಾ ಮರೆತಿರುವಾಗ ಮತ್ತೆ ಕದಡಿತಲ್ಲ ಎಂಬ ಆಲೋಚನೆಗೆ ಬಿದ್ದರು ರೆಡ್ಡಿಯವರು.
"ಅವರು ಕಣ್ಣಮ್ಮಾನೆ ಅಂತೆ ಆ ಶಾಲು ಅವರದೇ ಅಂತೆ. ಇಲ್ಲೇ ಸಂಜಯನಗರದ ಸ್ಲಮ್ಮಲ್ಲಿ ಇದ್ದಾರೆ. .ತುಂಬಾ ವಯಸ್ಸಾಗಿದೆ ನಡೆಯೋದಕ್ಕೆ ಸಹಿತ ಆಗಲ್ಲ ಅಂತೆ ನಾವೇ ಹೋಗಿ ಅಲ್ಲಿ ನೋಡಬೇಕು"
ಏನು ಹೇಳುವುದೋ ತೋಚಲಿಲ್ಲ ಸ್ವಾತಿಗೆ.
"ಅಪ್ಪಾ ಯಾವಾಗ ಹೋಗೋಣ"
ಪಾರ್ವತಮ್ಮನವರಿಗೆ ಅಳು ತಡೆಯಲಾಗಲಿಲ್ಲ. ಇನ್ನು ಸ್ವಾತಿ ತನ್ನ ಮಗಳಲ್ಲ ಆ ಯೋಚನೆ ಅವರಿಗೆ ಆಘಾತವಾಗಿತ್ತು.ಇನ್ನು ಸ್ವಾತಿಯ ತಾಯಿ ಸಿಕ್ಕಿಬಿಟ್ಟರೆ
ದು:ಖ ಕಟ್ಟೆಯೊಡೆದು ಜೋರಾಗಿ ಅಳಲಾರಂಭಿಸಿದರು
ಅವರ ಸಂಕಟ ಅರಿವಾದರೂ ಅಸಹಾಯಕಳಾಗಿದ್ದಳು ಸ್ವಾತಿ
ತನ್ನ ಹೆತ್ತ ತಾಯಿಯನ್ನು ನೋಡಲೇ ಬೇಕೆಂಬ ಹಂಬಲದ ಎದುರಿಗೆ ಸಾಕಿದ ತಾಯಿಯ ಸಂಕಟ ನಗಣ್ಯವೆನಿಸಿತು.
ಹೆಂಡತಿಯತ್ತ ಒಮ್ಮೆ ಮಗಳತ್ತ ಇನ್ನೊಮ್ಮೆ ನೋಡಿದರು
" ಈಗಲೇ ಹೋಗೋಣ ನಡೀ ಸ್ವಾತಿ"
ಅಲ್ಲಿಂದಲೇ ಶಿವೂಗೆ ಫೋನ್ ಮಾಡಿದಳು. ಏನೋ ಸಂಭ್ರಮ
ಆಫೀಸಿಂದ ಹಾಗೆಯೇ ಬರುವುದಾಗಿ ಹೇಳಿದ.
ಸ್ವಾತಿ ಹಾಗು ರೆಡ್ಡಿಯವರಿಬ್ಬರೇ ಹೊರಟರು.
ಕೊನೆಗೂ ಸಂಜಯನಗರದ ಸ್ಲಮ್ಮಿಗೆ ಬಂದಾಗ ಸಾಯಂಕಾಲ ಆರು ಘಂಟೆಯಾಗಿತ್ತು
ಕಣ್ಣಮ್ಮನ ಮನೆಯನ್ನು ಹುಡುಕುತ್ತಾ ಹೋದಂತೆ ಯಾವುದೋ ಕಿಷ್ಕಿಂದೆಯೊಳಗೆ ಹೋದಂತೆ ಭಾಸವಾಯ್ತು.
ಪ್ರತಿ ಕ್ಷಣವೂ ಯುಗವಾದಂತೆ ಅನ್ನಿಸುತ್ತಿತ್ತು ಸ್ವಾತಿಗೆ.
ಕೊನೆಗೂ ಕಣ್ಣಮ್ಮನ ಮನೆ ಸಿಕ್ಕಿತು .ಗುಡಿಸಲಂತಹ ಮನೆಯ ಬಾಗಿಲು ತಟ್ಟಿದರು
"ವುಳ್ಳೆ ವಾಂಗೋ" ಕೆಮ್ಮುತ್ತಾ ಕರೆಯಿತು ಒಂದು ದ್ವನಿ
ಬಾಗಿಲೆಂದು ಕರೆಸಿಕೊಳ್ಳುವ ಆ ಹಲಗೆಯನ್ನು ನೂಕಿದಾಗ ಕಂಡಿದ್ದು
ಒಬ್ಬ ಹಣ್ಣು ಹಣ್ಣು ಮುದುಕಿ. ಒಂದು ಚಾಪೆಯ ಮೇಲೆ ಮಲಗಿತ್ತು.ಸ್ವಾತಿಯ ಮುಖ ಬಾಡಿತು
ವಯಸೇನಿಲ್ಲವಾದರೂ ಎಂಬತ್ತರ ಮೇಲೆ ಈಕೆ ತನ್ನ ತಾಯಿಯಾಗಲು ಸಾಧ್ಯವೇ?ಹಾಗಿದ್ದಲ್ಲಿ ಈಕೆಗೆ ನಾನ್ಯಾವಾಗ ಹುಟ್ಟಿರಬಹುದು?
ಪ್ರಶ್ನೆಗಳ ಸರಮಾಲೆಯೊಂದಿಗೆ ಒಳಗೆ ಕಾಲಿಟ್ಟಳು ಸ್ವಾತಿ
ರೆಡ್ಡಿಯವರು ಒಳಗೆ ಬಂದರು ಅಷ್ಟ್ರಲ್ಲಿ ಶಿವೂ ಸಹಾ ಬಂದ.
ರೆಡ್ಡಿಯವರು
"ಕಣ್ಣಮ್ಮಾ?"
"ಆಮಂಗೋ ನಾನ್ ದಾ ಕಣ್ಣಮ್ಮ ವಕ್ಕಾರುಂಗೋ" ಮತ್ತೆ ಕೆಮ್ಮುತ್ತಾ ಮೇಲೇಳಲು ಪ್ರಯತ್ನಿಸಿತು. ಹಾಗೆಯೇ ಉರುಟಿತು
ಸ್ವಾತಿ ಆ ಮುದುಕಿಯನ್ನೆ ಕುತೂಹಲದಿಂದ ನೋಡಲಾರಂಭಿಸಿದಳು
ಮುಂದಿನ ಮಾತುಕಥೆಗಳೆಲ್ಲಾ ನಡೆದದ್ದನ್ನು
ರೆಡ್ಡಿಯವರು ಕನ್ನಡದಲ್ಲಿ ಹೇಳಲಾರಂಭಿಸಿದರು
"ಸ್ವಾತಿ ಇವಳು ನಿನ್ನ ತಾಯಿ ಅಲ್ಲಾಂತೆ ಆದರೆ ಆ ಶಾಲು ಇವಳದೇ ಅಂತೆ. " ರೆಡ್ಡಿಯವರು ಅವಳ ಮಾತು ಮುಗಿದ ಒಡನೆ ಸ್ವಾತಿಗೆ ಹೇಳಿದರು
ಸ್ವಾತಿಗೆ ತಲೆ ಬುಡ ಅರ್ಥವಾಗಲಿಲ್ಲ. ಒಟ್ಟಿನಲ್ಲಿ ಆಕೆ ತನ್ನ ತಾಯಿ ಅಲ್ಲ ಎಂಬುದು ಮಾತ್ರ ತಿಳಿಯಿತು. ಮತ್ತೆ ತನ್ನ ತಾಯಿ ಯಾರು? ಎಲ್ಲಿದ್ದಾಳೆ?
ಆ ಪ್ರಶ್ನೆಯನ್ನು ಅಪ್ಪನಿಗೆ ದಾಟಿಸಿದಳು.
ಉತ್ತರಕ್ಕಾಗಿ ಕಾದಳು.
(ಮುಂದುವರೆಯುವುದು)