Wednesday, February 25, 2009

ವಿದಾಯ-೧

ಮದುವೆಯ ಸಡಗರ ತೆರೆ ಸರಿಸುವ ಕಾರ್ಯಕ್ರಮ ನಡೆಯುತ್ತಿತ್ತು. ಅಲ್ಲಿದ್ದ ಎಲ್ಲಾ ಜನರಿಗೂ ಅದೊಂದು ರೀತಿಯ ತಮಾಷೆಯ ಕಾರ್ಯಕ್ರಮ. ಎಲ್ಲರ ಮುಖದಲ್ಲೂ ನಗು . ಯಾರು ಅಕ್ಕಿ ಮೊದಲು ಹಾಕುತ್ತಾರೆ ಎಂಬ ನಿರೀಕ್ಷೆಯಲ್ಲಿ ಜನರಿದ್ದರು. ಪ್ರಮೀಳಾಳೂ ವಧುವಿನ ಅಲಂಕಾರದಲ್ಲಿದ್ದ ಮಗಳ ಕೈ ಎತ್ತಿ ಹಿಡಿದು ನಿಂತಿದ್ದಳು. ಎಲ್ಲರೂ ಪ್ರೀತಿ ಮೊದಲು ನೀನೆ ಹಾಕು ನಿನ್ನ ಗಂಡ ನಿನ್ನ ಮಾತನ್ನೇ ಕೇಳುತ್ತಾನೆ ಎಂದು ಪ್ರೀತಿಯನ್ನು ಹುರಿದುಂಬಿಸುತ್ತಿದ್ದರು . ಅತ್ತ ಗಂಡಿನ ಮನೆಯವರೂ ಹಾಗೆಯೇ ವರನನ್ನು ಉಬ್ಬಿಸುತ್ತಿದ್ದರು. ವಧು ವರರಿಗೆ ಮಾತ್ರ ಅಸ್ಪಷ್ಟವಾಗಿ ಕಾಣುತ್ತಿದ್ದ ತೆರೆಯ ಆಚೆ ಬದಿಯ ತಮ್ಮ ಸಂಗಾತಿಯನ್ನು ನೋಡುವ ಕಾತುರ .
ತೆರೆ ಸರಿಯುತ್ತಿದ್ದಂತೆ ಮಗಳೇ ಮೊದಲು ಬಣ್ಣದಅಕ್ಕಿ ಹಾಕಿದಳು. ವಧುವಿನ ಮನೆಯವರಿಗೆಲ್ಲಾ ಸಡಗರ, ಮಾಂಗಲ್ಯ ಧಾರಣೆ ಹಾರ ಬದಲಾವಣೆ ಎಲ್ಲಾ ನಡೆದವು.

ಶ್ರೀನಿವಾಸ ಮಗಳ ಮದುವೆ ನೋಡಿ ಸಂತೋಷ ಪಡುತ್ತಿದ್ದ ಧಾರೆ ಎರೆದ ನಂತರದ ವಿದಾಯದ ಘಳಿಗೆಗಾಗಿ ಇನ್ನೂ ಮನಸ್ಸು ಸಿದ್ದವಾಗಿರಲಿಲ್ಲ.
ಅತ್ತ ಪ್ರಮೀಳಾ ಬಂದವರಿಗೆಲ್ಲಾ ಉಡುಗೊರೆಗಳನ್ನು ಕೊಡಲು ಅಣಿ ಮಾಡುತ್ತಿದ್ದಳು. ಆದರೂ ಮನಸಲ್ಲಿ ಏನೋ ಕಸಿವಿಸಿ . ಈ ರೀತಿಯ ವಿದಾಯಕ್ಕಾಗಿಯೇ ಅಲ್ಲವೇ ಇಷ್ಟು ದಿನದಿಂದ ಕಾದಿದ್ದು. ಈ ಸ್ವಾತಂತ್ರ್ಯಕ್ಕಾಗಿ ಅಲ್ಲವೇ ಮನಸ್ಸು ಬೇಡಿದ್ದು. ಇಂದೇಕೆ ಮನಸ್ಸು ಹೀಗೆ ತೊಳಲಾಡುತ್ತಿದೆ ಅರಿವೇ ಆಗುತ್ತಿಲ್ಲ
"ಪ್ರಮೀಳಾ ಬೇಗ ಬೇಗ ಕೊಡಮ್ಮ . ಕೆಲವರು ತಿಂಡಿ ತಿಂದು ಮನೆಗೆ ಹೋಗ್ತಿದಾರೆ ಊಟಕ್ಕೆ ಕಾಯಲ್ಲ ಅಂತಿದಾರೆ. . ಅವರಿಗೆ ಏನು ಕೊಡಬೇಕು ಅದನ್ನು ಕೊಡು" ಪ್ರಮೀಳಾಳ ಚಿಕ್ಕಮ್ಮನ ಕೂಗು ಮಾತು
"ಆಯ್ತು ಚಿಕ್ಕಮ್ಮ . ಒಂದ್ನಿಮಿಷ ಕೊಟ್ಟೆ"ಹೇಳಿ ಅರಿಷಿನ ಕುಂಕುಮ ತಟ್ಟೆ ಕೊಟ್ಟಳು. ಮುಂದೆ ಸೀರೆ , ಹಾಗು ಉಡುಗೊರೆಗಳ ಪ್ಯಾಕ್
"ಚಿಕ್ಕಮ್ಮ ಇದು ನಮ್ಮ ಕಡೆಯವರಿಗೆ ಪ್ರತಿ ಸೀರೆ ಪಂಚೆ ಪ್ಯಾಕ್ ಮೇಲೆ ಹೆಸರು ಬರೆದಿದ್ದೇನೆ , ಹಾಗೆ ಈ ಚಿಕ್ಕ ಬೆಳ್ಲಿ ಬಾಕ್ಸ್ ಎಲ್ಲಾ ಅಕ್ಕ ಪಕ್ಕದ ಮನೆಯವರಿಗೆ ಕೊಟ್ಬಿಡು"
"ಪ್ರಮೀಳಾ ಬರ್ತೀಯಾ ಇಲ್ಲಿ ನಿನಗೆ ಉಡುಗೊರೆ ಕೊಡ್ಬೇಕು ಅಂತ ಕರಿತಿದಾರೆ, ಏ ಸೀನು ನೀನೂ ಬಾರೋ ಅಲ್ಲಿ ಕೂತ್ಕೊಂಡು ಏನ್ಮಾಡ್ತಿದ್ದೀಯಾ" ಶ್ರೀನಿವಾಸನ ಅಕ್ಕನ ದನಿ
ಪ್ರಮೀಳಾಗೆ ಈಗ ವಿಧಿಯೇ ಇಲ್ಲ ಶ್ರೀನಿವಾಸ್‌ ಜೊತೆ ಕೂರಲೇ ಬೇಕಿತ್ತು, ಬಹುಷ ಇದೇ ಕೊನೆಯ ಜೊತೆಯಾಗಿ ಕೂರುವುದಿರಬಹುದು. ಉಡುಗೊರೆ ಸ್ವೀಕರಿಸಲು ಇಬ್ಬರೂ ಕೂತರು. ಪ್ರಮೀಳಾ ಸಾಮಿಪ್ಯ ಹಿತವೆನಿಸಿತು ಶ್ರೀನಿವಾಸನಿಗೆ
ಸ್ನೇಹ ಹಾಗು ಅವಳ ಗಂಡ ಇಬ್ಬರಿಗೂ ಚಿನ್ನದ ಉಂಗುರಗಳನ್ನು ತಂದುಕೊಟ್ಟರು .
"ಆಂಟಿ ಇಲ್ಲೇ ಹಾಕಿಕೊಳ್ಳಿ ಹಾ ಇಬ್ಬರೂ ಬದಲಾಯಿಸಿಕೊಳ್ಬೇಕು"
ಏಕೋ ಅವನ ಕೈಗೆ ಉಂಗುರ ತೊಡಿಸುವುದು . ಅವನು ತನ್ನ ಕೈ ಮುಟ್ಟುವುದು ಹಿಡಿಸಲೇ ಇಲ್ಲ ಪ್ರಮೀಳಾಗೆ. ಆದರೂ ಹಾಗೆ ಮಾಡುವಂತಿಲ್ಲ. ಶ್ರೀನಿವಾಸ ಮಾತ್ರ ತೊಡಿಸಲು ಸಿದ್ದನಾಗಿದ್ದ . ಸಂತೋಷ ಅವನ ಮುಖದಲಿ ಕಾಣುತ್ತಿತ್ತು

ಶ್ರೀನಿವಾಸ್ ಮೊದಲು ಉಂಗುರ ತೊಡಿಸಲು ಮುಂದಾದ. ಎಡಗೈಯಲ್ಲಿ ಅವಳ ಕೈ ಎತ್ತಿ ಹಿಡಿದು ಬಲಗೈ ಇಂದ ನಿಧಾನವಾಗಿ ಉಂಗುರವನ್ನು ನಡುಬೆರಳಿಗೆ ನಿಧಾನವಾಗಿ ನೂಕಿದ . ನೂಕುವಾಗ ಅವಳ ಬೆರಳನ್ನು ಮೃದುವಾಗಿ ಒತ್ತಿದ ಅವಳಿಗಷ್ಟೆ ತಿಳಿಯುವಂತಿತ್ತು. ಇದನ್ನ ಇಪ್ಪತ್ತೆಂಟು ವರ್ಷಗಳ ಹಿಂದೆ ಅವರಿಬ್ಬರ ನಿಶ್ಚಿತಾರ್ಥದಲ್ಲಿ ಮಾಡಿದ್ದಾಗ ಅವಳ ಮುಖದಲ್ಲಿ ಕಂಡೂ ಕಾಣದ ನಾಚಿಕೆ. ಆದರೆ ಇಂದು ಅವಳ ಮೊಗದಲ್ಲಿ ಅಸಹ್ಯವೆನಿಸುವ ಭಾವನೆ. ಇಂತಹ ಸ್ಪರ್ಷ ಇಪ್ಪತ್ತು ವರ್ಷಗಳ ಹಿಂದೆ ಮಾಡಿದ್ದರೆ ಅವಳ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ. ಆದರೆ ಈಗ ಎಲ್ಲಾ ಸುಮಧುರ ಭಾವನೆಗಳನ್ನು ಆಚೆ ನೂಕಿದ್ದಳು
ಯಾಂತ್ರಿಕವಾಗಿ ಅವನ ಬೆರಳಿಗೆ ಉಂಗುರ ತೊಡಿಸಿದಳು.
ಎಲ್ಲರೂ ಚಪ್ಪಾಳೆ ತಟ್ತಿದರು . ಆ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾಯಿತು
ಕೊನೆಗೂ ಮದುವೆ ಎಂಬ ಸಮಾರಂಭ ಮುಗಿಯಿತು.
ಇಂದು ರಾತ್ರಿ ಮಗಳ ಮೊದಲ ರಾತ್ರಿ
ಆದರೆ

ಇಂದು ಈ ಮನೆಯಲ್ಲಿ ಅವಳ ತಂದೆ ಹಾಗು ತಾಯಿಯ ಕೊನೆಯ ರಾತ್ರಿಯಾಗಿತ್ತು
(ಮುಂದುವರೆಯುವುದು)