Friday, February 27, 2009

ವಿದಾಯ-೨

ಮಗಳನ್ನು ಮೊದಲ ರಾತ್ರಿಯ ಕೋಣೆಗೆ ಕಳಿಸಿ ಮಂಚದ ಮೇಲೆ ಉರುಳಿದಳು ಪ್ರಮೀಳಾ. ನಾಳೆಯ ವಿದಾಯಕ್ಕೆ ಸಿದ್ದತೆಗಳನ್ನುಮಾಡುತ್ತಿದ್ದಂತೆ ಹಳೆಯ ನೆನಪುಗಳ ಮರ ಚಿಗುರತೊಡಗಿತು.

ಪ್ರಮೀಳಾ ಹಾಗು ಶ್ರೀನಿವಾಸ್‌ ಒಬ್ಬರನೊಬ್ಬರು ಪ್ರೀತಿಸಿ ಮದುವೆಯಾದರು ಮನೆಯಲ್ಲಿಯೂ ಅಂತಹ ವಿರೋಧವೇನು ಇರಲಿಲ್ಲ . ಏಕೆಂದರೆ ಪ್ರಮೀಳಾಗೆ ಹದಿನೆಂಟರ ಹರೆಯದಲ್ಲಿಯೇ p w d ಯಲ್ಲಿ ಕೆಲಸ ಸಿಕ್ಕಿತ್ತು. ಅವಳ ಸಂಬಳವೂ ಆಗ ಜೋರಾಗಿಯೇ ಇತ್ತು . ಹಾಗೆ ಶ್ರೀನಿವಾಸ್ ಸಹಾ ಕೆ.ಇ.ಬಿ ನಲ್ಲಿ ಕೆಲಸ ಮಾಡುತ್ತಿದ್ದ. ಕಾಲೇಜುದಿನಗಳಿಂದಲೆ ಒಬ್ಬರೊನೊಬರು ಪ್ರೀತಿಸುತ್ತಿದ್ದರು.

ಮೆಚ್ಚಿದ ಮಡದಿ, ನೆಚ್ಚಿನ ಸ್ವಂತ ಮನೆ , ಕಿರಿಯ ಮಗನಾದ್ದರಿಂದ ಶ್ರೀನಿವಾಸ್‌ಗೆ ಯಾವ ಜವಾಬ್ದಾರಿಯೂ ಇರಲಿಲ್ಲ , ಅಕ್ಕನ ಮದುವೆ ಆಗಿ ಹೋಗಿತ್ತು. ಅವನ ಅಪ್ಪ ಅಮ್ಮ ಹಳ್ಳಿಯಲ್ಲೇ ವಾಸವಾಗಿದ್ದರು. ಹಾಗಾಗಿ ಪ್ರಮೀಳಾಗೆ ಯಾವ ತೊಂದರೆಯೂ ಇರಲಿಲ್ಲ

ಸಂತಸ ಪುಟಿದೇಳುತ್ತಿತ್ತು ಮನೆಯಲ್ಲಿ, ಜೊತೆಗೆ ಪ್ರೀತಿ ಹುಟ್ಟಿದಾಗಂತೂ ಇನ್ನೂ ಆನಂದ. ಪ್ರಮೀಳಾ ತಾಯಿ ಮನೆಯಲ್ಲಿಯೇ ಇದ್ದು ಪ್ರೀತಿಯನ್ನು ನೋಡಿಕೊಳ್ಳುತ್ತಿದ್ದರು


ಒಟ್ಟಿನಲ್ಲಿ ಸುಖೀ ದಾಂಪತ್ಯಕ್ಕೆ ಇನ್ನೊಂದು ಹೆಸರೇ ಪ್ರಮೀಳಾ ಹಾಗು ಶ್ರೀನಿವಾಸ್ ಎನ್ನುವಂತೆ ನಡೆದಿತ್ತು . ಈ ನಡುವೆ ಪ್ರಮೀಳಾಳ ತಾಯಿ ಅಪಘಾತಕ್ಕೆ ಈಡಾದರು

ವರ್ಷದಲ್ಲಿ ಮಗುವಾದರೂ ಅದರ ಲಾಲನೆ ಪಾಲನೆ ಅವಳ ತಾಯಿ ನೋಡಿಕೊಳ್ಳುತ್ತಿದ್ದುದರಿಂದ ಪ್ರಮೀಳಾಗೆ ಆ ಕಷ್ಟ ಗೊತ್ತಿರಲಿಲ್ಲ. ಕೆಲಸ ಬಿಡಲು ಪ್ರಮೀಳಾ ಸಿದ್ದಳಿರಲಿಲ್ಲ .ಮನೆ ಕೆಲಸ , ಮಗು, ಸರ್ಕಾರಿ ನೌಕರಿ ಇವುಗಳ ನಡುವಿನಲ್ಲಿ ಹಣ್ಣಾಗುತ್ತಿದ್ದಳು.

ತಾನೂ ದುಡಿಯುತ್ತೇನೆ ಎಂಬ ಅಹಂ ಪ್ರಮೀಳಾಳ ಮನದಲ್ಲಿ ಮನೆ ಮಾಡಿದ್ದರಿಂದ ಸಂಸಾರ ಹೋರಾಟವಾಯ್ತು. ಆ ಕಾಲದಲ್ಲಿ ಹೆಚ್ಚಿರದಿದ್ದ ಪ್ಲೇ ಹೋಮ್‌ಗಳನ್ನು ಹುಡುಕಿದ್ದಕ್ಕೆ ಸಿಕ್ಕಿದ್ದು ದೂರದಲ್ಲೆಲ್ಲೋ ಇದ್ದ ಒಂದು ಶಿಶುವಿಹಾರ. ಬೆಳಗ್ಗೆ ಎದ್ದು ಅಡಿಗೆ ಮಾಡಿ ಮಗುವನ್ನು ರೆಡಿ ಮಾಡಿ ಶ್ರೀನಿವಾಸನಿಗೂ ಮಾಡಿ ಕೊಟ್ಟಿ ಕಳಿಸಿ, ಪ್ರೀತಿಯನ್ನು ಶಿಶುವಿಹಾರಕ್ಕೆ ಬಿಟ್ಟು ಬರುವುದರಲ್ಲಿ ಸುಸ್ತಾಗಿರುತ್ತಿದ್ದಳು

ನಂತರ ಸಣ್ಣಗೆ ಕಿರಿ ಕಿರಿ ಶುರುವಾಯಿತು. ಮಗುವನ್ನು ನೋಡಿಕೊಳ್ಳಲು ಶ್ರೀನಿವಾಸ್ ಸಿದ್ದನಿರಲಿಲ್ಲ . . ಕೆಲಸದವರು ಬಂದರೂ ಮೂರು ದಿನ ನಿಲ್ಲುತ್ತಿರಲಿಲ್ಲ. ಎಲ್ಲಕ್ಕೂ ಪ್ರಮೀಳಾ ಹೆಣಗಲಾರಂಭಿಸಿದಳು. ಶ್ರೀನಿವಾಸ್ ಸ್ವಭಾವತ: ಒಳ್ಳೆಯವನಾದರೂ ಅದೇನೋ ಗಂಡೆಂಬ ಅಹಂ ಜೊತೆಗೆ ನೌಕರಿಯಲ್ಲಿ ಪ್ರಮೋಶನ್ ಸಹಾ ಸಿಕ್ಕು ಅದರ ಮದವೂ ಏರಿದ್ದರಿಂದ ಪ್ರಮೀಳಾಗೆ ಸಹಾಯ ಮಾಡುವ ಮನಸ್ಸು ಬರಲಿಲ್ಲ

ಸಣ್ಣ ಸಣ್ಣದಕ್ಕೆಲ್ಲಾ ಸಿಡುಕಲು ಪ್ರಾರಂಭಿಸಿದಳು. ಶ್ರೀನಿವಾಸ್ ಸಹಾ ನೌಕರಿಯಲ್ಲಿ ಹೆಚ್ಚಿದ ಜವಾಬ್ದಾರಿಯಿಂದ ಅವಳಿಗೂ ಮೀರಿ ಕೋಪಗೊಳ್ಳುತ್ತಿದ್ದ, ಮನೆಯಲ್ಲಿ ಶಾಂತಿ ಎನ್ನುವ ಪದ ಮಾಯವಾಯ್ತು.

ಮನೆಗೆ ಬಂದರೆ ಹೆಂಡತಿಯ ಕದನ , ಮಗುವಿನ ರಗಳೆ , ಶ್ರೀನಿವಾಸ್‌ಗೆ ಬೇಜಾರಾಗಿ ಹೋಯ್ತು, ನಿಧಾನವಾಗಿ ಮನೆಯಲ್ಲಿ ಇರುವ ಸಮಯ ಕಡಿಮೆ ಮಾಡಲಾರಂಭಿಸಿದ. ಇದು ಪ್ರಮೀಳಾಗೂ ತಿಳಿಯಿತು. ಆಕೆ ಇನ್ನೂ ಚಂಡಿಯಾದಳು.

ತನಗಾಗಿ ಒಂದಷ್ಟೂ ಪರಿತಪಿಸದ ಶ್ರೀನಿವಾಸ್ ಅವಳ ಪಾಲಿಗೆ ಉಗುಳಲಾಗದ ಬಿಸಿ ತುಪ್ಪವಾಗಿದ್ದ.

ತಾನು ಮಾತ್ರ ದಿನವೆಲ್ಲಾ ದುಡಿದು ಬಂದು ಮನೆಗೆ ಬಂದು ಮಗುವನ್ನು ನೋಡಿಕೊಳ್ಳಬೇಕೇಕೆ ಎಂಬ ಅನಿಸಿಕೆ ಬಂತು.

ಇದಕ್ಕಾಗಿ ಪ್ರಮೀಳಾ ಮಾಡಿದ ಉಪಾಯ ಅಂದಿನ ಆ ಕರಾಳಾ ದಿನ ಪ್ರಮೀಳಾಗೆ ಇನ್ನೂ ನೆನಪಿದೆ.

"ರೀ ಇವತ್ತು ನಂಗೆ ಸ್ವಲ್ಪ ಕೆಲಸ ಜಾಸ್ತಿ ಇದೆ ಬರುವುದು ಲೇಟ್ ಆಗಬಹುದು , ಮಗುವನ್ನು ಕರ್ಕೊಂಡುಬಂದುಬಿಡಿ" ತಲೆ ಬಾಚಿಕೊಳ್ಳುತ್ತಾ ನುಡಿದಿದ್ದಳು

"ನೋಡೋಣ ಆಗಲ್ಲಾ ಅನ್ನಿಸುತ್ತೆ . ಮೀಟಿಂಗ್ ಇದೆ ರಾತ್ರಿಯವರೆಗೂ ಆಗಬಹುದುನೀನೆ ಕರ್ಕೊಂಡು ಬಾ ಮಗು ಹೆಚ್ಚಾ ಕೆಲಸ ಹೆಚ್ಚ ನಿಂಗೆ" ಕನ್ನಡಿಯಲ್ಲಿ ನೋಡಿಕೊಳ್ಳುತ್ತಾ ಪ್ರತಿನುಡಿದ್ದಿದ್ದ

ಪ್ರಮೀಳಾ ಕೆರಳಿದಳು

"ಯಾಕೆ ನಿಮಗೂ ಅದೇ ಪ್ರಶ್ನೆ ಕೇಳಬಹುದಲ್ವಾ . ಇಷ್ಟು ದಿನ ಆಯ್ತು ಒಮ್ಮೆಯಾದ್ರೂ ಮಗೂನ ಕರ್ಕೊಂಡು ಹೋಗೋದು , ಬರೋದು ಮಾಡಿದ್ದೀರಾ. ನೀವಿವತ್ತು ಕರ್ಕೊಂಡು ಬರ್ಲೇ ಬೇಕು"

ಪ್ರೀತಿಯ ಕೈ ಹಿಡಿದುಕೊಂಡು ದಡ ದಡ ಹೊರಗಡೆ ನಡೆಯುತ್ತಾ ನುಡಿದಳು

ಪ್ರೀತಿಯನ್ನು ಪ್ಲೇ ಹೋಮ್‌ಗೆ ಬಿಟ್ಟು ಆಫೀಸಿಗೆ ಬಂದಳು . ಕೆಲಸ ಎಂದಿಗಿಂತ ಸ್ವಲ್ಪ ಬೇಗನೇ ಆಯಿತಾದರೂ ಶ್ರೀನಿವಾಸ ಇವತ್ತಾದರೂ ಮಗುವನ್ನು ಕರೆದುಕೊಂಡು ಬರಲಿ ಎಂದು ಗೆಳತಿ ಜ್ಯೋತಿಯ ಮಗಳ ಹುಟ್ಟಿದ ಹಬ್ಬಕ್ಕೆ ಹೊರಟು ನಿಂತಳು. ಫೋನ್ ಮಾಡೋಣ ಎಂದುಕೊಂಡರೂ ಮಾಡಿದರೆ ಪ್ರೀತಿಯನ್ನು ಕರೆದುಕೊಂಡು ಬರುವ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾನೆ ಎಂದೆನಿಸಿ ಮಾಡಲಿಲ್ಲ




ಸಮಾರಂಭ ಮುಗಿಸಿ ರಾತ್ರಿ ಎಂಟು ವರೆ ಘಂಟೆಗೆ ಮನೆಗೆ ಬಂದಳು ಪ್ರಮೀಳಾ
ಮನೆಗೆ ಬೀಗ ಹಾಕಿತ್ತು. ಇದೇನು ಎಲ್ಲಿಗೆ ಹೋದ ಜೊತೆಗೆ ಪ್ರೀತಿನ ಕರೆದುಕೊಂಡು ಬಂದರಾ ಇಲ್ಲವಾ? ಗೊತ್ತಾಗದೆ ಹೋಯ್ತು
ಪಕ್ಕದ ಮನೆಯಿಂದ ಗಂಡನ ಕಛೇರಿಗೆ ಫೋನ್ ಮಾಡಿದಳು.
"ಅವರು ಮೀಟಿಂಗ್‍ನಲ್ಲಿದ್ದಾರೆ ಮೇಡಮ್ ಈಗ ಕರೆಯೋಕೆ ಆಗಲ್ಲ" ಎಂದು ಟೆಲಿ ಆಪರೇಟರ್ ಹೇಳಿದ
ಅಂದರೆ ಮಗಳನ್ನು ಇನ್ನೂ ಕರೆತಂದಿಲ್ಲ
ಹೃದಯ ಮಗಳಿಗಾಗಿ ಡವಡವ ಎನ್ನಲಾರಂಭಿಸಿತು.
ಈ ರಾತ್ರಿಯಲ್ಲಿ ಮಗಳು ಅಲ್ಲಿ ಒಬ್ಬಳೇ ಏನು ಮಾಡುತ್ತಿರುತ್ತಳೋ ಎಂಬ ಆತಂಕದಿಂದಲೇ ಆ ಒಂಬತ್ತು ಘಂಟೆ ರಾತ್ರಿಯಲ್ಲೇ ಮಗುವನ್ನು ಕರೆತರಲು ಹೋದಳು.
ಶಿಶುವಿಹಾರ ಮುಚ್ಚಿದ್ದರು. ಹತ್ತಿರದಲ್ಲಿ ಯಾವ ಅಂಗಡಿಯೂ ಇರದೆ ಯಾರಿಗೂ ಫೋನ್ ಸಹಾ ಮಾಡಲಾಗಲಿಲ್ಲ. ಆ ಶಿಶು ವಿಹಾರದ ಪಕ್ಕದ ಮನೆಯೊಂದರಲ್ಲಿ ವಿಚಾರಿಸಿದಳು. ಒಬ್ಬವಯಸ್ಸಾದ ಹೆಂಗಸೊಬ್ಬಳು ಬಂದರು
"ಇಲ್ಲಿ ನನ್ನ ಮಗು ಬಿಟ್ಟಿದ್ದೆ . ಈಗ ಬಾಗಿಲು ಹಾಕಿದ್ದಾರೆ "ಎಂದು ತನ್ನ ಪರಿಚಯ ಮಾಡಿಕೊಂಡಳು
ಅವಳು ಒಮ್ಮೆ ಪ್ರಮೀಳಾಳನ್ನು ಮೇಲಿನಿಂದ ಕೆಳಗಿನವರೆಗೂ ನೋಡಿ
" ಬಹಳ ಹೊತ್ತಿನಿಂದ ಯಾರೂ ಬರದೆ ಇದ್ದುದ್ದರಿಂದ ಮಗುವನ್ನು ಮೇಡಮ್ ಮನೆಗೆ ಕರೆದುಕೊಂಡು ಹೋಗಿದ್ದಾರೆ ಅವರು ನಿಮ್ಮ ಆಫೀಸಿಗೆ ಫೋನ್ ಮಾಡಿದಾಗ ನೀವು ಆಗಲೆ ಆಫೀಸ್ ಬಿಟ್ಟಿದ್ದೀರಾ ಎಂದರು , ನಿಮ್ಮ ಯಜಮಾನರಿಗೆ ಫೋನ್ ಮಾಡಿದಾಗ ಅವರು ಸಿಗಲಿಲ್ಲವಂತೆ, ನಾಳೆ ಬಂದು ಮಗುವನ್ನು ಕರ್ಕೊಂಡು ಹೋಗಿ, ಮಗು ತುಂಬಾ ಅಳ್ತಾ ಇತ್ತು. ಅಲ್ಲಮ್ಮ ಮಗುವಿನ ಮೇಲೆ ಸ್ವಲ್ಪವಾದ್ರೂ ಕಾಳಜಿ ಬೇಡ್ವೇ, ದುಡ್ಡು ಇವತ್ತಲ್ಲ ನಾಳೆ ಬರುತ್ತೆ , ಮಗು ಹೋದ್ರೆ ಸಿಗುತ್ತಾ . ಏನಾಗಿದ್ಯೋ ಈಗಿನ ಕಾಲದ ಜನರಿಗೆ" ಆಕೆ ಬಡಬಡಿಸಿದಳು
ಅವರ ಮನೆಗೆ ಫೋನ್ ಮಾಡಬೇಕಿತ್ತು.ನಂಬರ್ ಇದೆ ಆದ್ರೆ ನಮ್ಮ ಮನೆಲಿ ಫೋನ್ ಇಲ್ಲ ಬೇರೆ ಕಡೆಯಿಂದ ಫೋನ್ ಮಾಡಿ " ನಂಬರ್ ತೆಗೆದುಕೊಂಡು ಮತ್ತದೇ ಆಟೋದಲ್ಲಿ ಮನೆಗೆ ಬಂದಳು

ಮನಸ್ಸು ಕುದ್ದು ಹೋಯಿತು. ಅಳುತ್ತಳುತ್ತಲೇ ಮನೆಗೆ ಬಂದಳು

ಅಷ್ತ್ರಲ್ಲಿ ಆಗಲೆ ಶ್ರೀನಿವಾಸ್ ಮನೆಗೆ ಬಂದಿದ್ದ

ಆಟೋದಿಂದ ಇಳಿದು ದುಡ್ಡು ಕೊಟ್ಟು ಬಂದಳು ಪ್ರಮೀಳಾ . ಬಾಗಿಲು ಬಡಿದಳು

"ಪ್ರೀತಿ ಎಲ್ಲಿ" ಬಾಗಿಲು ತೆರೆಯುತ್ತಲೇ ಕೇಳಿದ
’ನಾನು ಹೇಳಿರ್ಲಿಲ್ವಾ ಬರೋದು ಲೇಟ್ ಆಗುತ್ತೆ. ಪ್ರೀತಿನ ಕರೆದುಕೊಂಡು ಬನ್ನಿ ಅಂತ, ಮಗಳಿಗಿಂತ ಮೀಟಿಂಗ್ ಹೆಚ್ಚಾಯ್ತಲ್ಲ ನಿಮಗೆ" ಕಣ್ಣೀರ ನಡುವೆ ಆಕ್ರೋಶದಿಂದಲೇ ಹೇಳಿದಳು
"ನೀನು ಬರೋದು ಲೇಟ್ ಯಾಕೆ ಆಯ್ತು" ಪ್ರಶ್ನಿಸಿದ
"ಕೆಲಸ ಜಾಸ್ತಿ ಇತ್ತು" ಸುಳ್ಳು ಹೇಳಲು ಭಯವಾದರೂ ದಿಟ್ಟವಾಗಿಯೇ ನುಡಿದಳು
"ಸುಳ್ಳು ಹೇಳ್ಬೇಡ ನಾನು ಸಂಜೆ ಐದು ಘಂಟೆಗೆ ನಿಮ್ಮ ಆಫೀಸಿಗೆ ಫೋನ್ ಮಾಡಿದ್ದೆ, ನೀನು ನಾಲ್ಕು ಘಂಟೆಗೆ ಹೋಗಿದ್ದೀಯ ಎಂದು ಗೊತ್ತಾಯ್ತು,ಎಲ್ಲಿಗೆ ಹೋಗಿದ್ದೆ"
ಪ್ರಮಿಳಾ ಸಿಕ್ಕಿಹಾಕಿಕೊಂಡಿದ್ದಳು
ಮಾತಾಡಲಿಲ್ಲ.
"ನೋಡು ಪ್ರಮೀಳಾ , ನಿನ್ನ ನಡತೆ ಮೇಲೆ ಗೌರವ ಇದೆ ನನಗೆ ಅದನ್ನ ಹಾಳು ಮಾಡೋ ಅಂತ ಕೆಲಸಮಾಡ್ಬೇಡ"
"ಅಂದ್ರೆ ನನ್ನಮೇಲೆ ನಿಮಗೆ ಅನುಮಾನಾನ"
ಹೀಗೆ ಮಾತು ಜೋರಾಯ್ತು
ಎತ್ತೆತ್ತಲೋ ಹರಿದು ಬಂತು ಮಾತುಗಳು
ಇಬ್ಬರ ನಡತೆಗಳೂ ಮಾತಿಗೆ ಸಿಕ್ಕವು
ಹದಗೆಟ್ಟಿದ್ದ ಸಂಬಂಧವನ್ನು ಹಿಡಿದಿರಿಸುವುದರಲ್ಲಿ ಯಾವ ಆಸಕ್ತಿಯೂ ಉಳಿಯಲಿಲ್ಲ ಇಬ್ಬರಿಗೂ
ಮಾರನೆಯದಿನ ಮಗುವನ್ನು ಕರೆದುಕೊಂಡು ಬಂದಳು.
ದಾಂಪತ್ಯಕ್ಕೆ ಒಂದು ಕೊನೆ ಹಾಡಬೇಕಾಗಿದ್ದರಿಂದ ಇಬ್ಬರೂ ಮನೆಯಲ್ಲಿಯೇ ಉಳಿದಿದ್ದರು
ಆದರೆ ತಮ್ಮಿಬ್ಬರ ನಡುವಿನಲ್ಲಿ ಪ್ರೀತಿಯ ಬದುಕು ಹಾಳಾಗುವುದು ಇಬ್ಬರಿಗೂ ಇಷ್ಟವಿರಲಿಲ್ಲ.
ಇನ್ನೂ ಡೈವೋರ್ಸ್ ಎಂಬ ಪದ ಅಷ್ಟಾಗಿ ಬಳಕೆಯಲ್ಲಿಲ್ಲದ ಕಾಲ ಅದು.
ಇಷ್ತವಿದ್ದರೆ ಮದುವೆಯಾಗದೆ ಜೊತೆ ಇರಬಹುದಾದದ್ದು ಈ ಕಾಲ ಆದರೆ ಇಷ್ಟವಿಲ್ಲದಿದ್ದರೂ ಮದುವೆಯಾದ ಮೇಲೆ ಜೊತೆ ಬಾಳಲೇ ಬೇಕಿತ್ತು
ಪ್ರೀತಿಯ ಮದುವೆಯವರೆಗೂ ಜೊತೆಗೆ ಇರುವುದು. ಮದುವೆಯಾದ ನಂತರದ ದಿನದಲ್ಲಿ ಇಬ್ಬರೂ ಬೇರೆಯಾಗುವುದೆಂದು ನಿರ್ಧರಿಸಿದರು.
ಈ ಗುಟ್ಟು ಅಲ್ಲಿಯವರೆಗೂ ಗುಟ್ಟಾಗಿಯೇ ಇಡಬೇಕೆಂದೂ ನಿಶ್ಚಯವಾಯ್ತು
ಅಂದಿನಿಂದ ಅವರು ದಂಪತಿಗಳಂತೆ ಹೊರ ಜಗತ್ತಿಗೆ ಕಂಡರೂ ಒಳಗೆ ಅಪರಿಚಿತರಂತೆ ಇರಲಾರಂಭಿಸಿದರು
ಹಾಗಿರುವುದು ಬಹಳ ಕಷ್ಟವಾಗಿತ್ತು. ಅದರಲ್ಲೂ ಶ್ರೀನಿವಾಸ್ ಬಹು ಒದ್ದಾಡಿದ,
ಪ್ರಮೀಳಾಳ ಬಳಿ ಕ್ಷಮೆ ಕೇಳಿದ., ಆದರೂ ತನ್ನ ನಡತೆಯ ಬಗ್ಗೆ ಅನುಮಾನಿಸಿದ ಅವನ ತಪ್ಪನ್ನು ಒಪ್ಪಿಕೊಳ್ಲುವುದು ಸಾಧ್ಯವಿತ್ತಾದರೂ ಒಂದು ರೀತಿಯ ಅಹಮ್ ,ಅಥವ ಸ್ವಾಭಿಮಾನವೋ ಪ್ರಮೀಳಾಳನ್ನು ಕಠಿಣ ಮನದವಳಾಗಿಯೇ ಇರಲು ಉತ್ತೇಜಿಸಿತ್ತು
ರೂಮಿನ ಬಾಗಿಲು ಬಡಿದ ಸದ್ದಾಯಿತು . ಬಾಗಿಲು ತೆರೆದಳು
ಹೊರಗೆ ಶ್ರೀನಿವಾಸ
"ಪ್ರಮೀಳಾ ನೀನು ಹೋಗಲೇಬೇಕಾ? ಇಪ್ಪತ್ತು ವರ್ಷದ ಹಿಂದಿನ ದ್ವೇಷ ಇನ್ನೂ ಆರಿಲ್ಲವೇ? "
ದೀನನಾಗಿ ಕೇಳಿದ
ಪ್ರಮೀಳಾ ಮುಖ ತಿರುಗಿಸಿದಳು
(ಮುಂದುವರೆಯುವುದು)