Sunday, October 11, 2009

ವಯಸ್ಸಾದರೆ ನಾನೂ ಹೀಗೇನಾ

ಯಾಕೇಂತ ಗೊತ್ತಿಲ್ಲಾ ಮನಸು ತುಂಬಾ ನೊಂದುಕೊಳ್ಳುತ್ತೆ. ಅಮ್ಮಾ ನನ್ನ ಕೈ ಹಿಡಿದು ಬೆಳೆಸಿದ ಅಮ್ಮ ನಾನು ಬಿದ್ದರೆ ಅವಳ ಕಣ್ಣಲ್ಲಿ ನೀರು ನಾನು ನಕ್ಕರೆ ಅವಳ ಕಣ್ಣಲ್ಲಿ ಹೊಳಪು ಅಂತಹ ಅಮ್ಮಾ ನನ್ನಿಂದ ದೂರಾ ಆಗ್ತಿದಾಳಾ? ಅಥವಾ ನಾನೇ ದೂರಾ ನೂಕುತ್ತಿದ್ದೀನಾ? ನಾನ್ಯಾವ ರೀತೀಲಿ ಅವಳನ್ನ ನೋಯಿಸುತ್ತಿದ್ದೇನೆ? ಅವಳು ಹೇಳಿದ ಹಾಗೆ ಕೇಳ್ತಾ ಇಲ್ಲವಾ? ಅಥವ ನಾನು ಕೇಳಿದರೂ ಅವಳಿಗೆ ಹಿಡಿಸುತ್ತಿಲ್ಲವಾ? ಸಂಸಾರದ ದೊಂಬಿಯಲ್ಲಿ ನಾನೇ ಮರೆಯುತ್ತಿದ್ದೀನಾ ಅಥವಾ ನಾನು ಮರೆತಿದ್ದೇನೆ ಅಂತ ಅವಳೇ ಅಂದುಕೊಳ್ಳುತ್ತಿದ್ದಾಳಾ?ನಾನು ನಕ್ಕಾಗಲೆಲ್ಲಾ ಅವಳ ಕಣ್ಣಲ್ಲಿ ಕಾಣುತ್ತಿದ್ದ ಹರುಷ ಈಗೆಲ್ಲಿ. ಬಹುಷ ನನ್ನ ನಗೆಯಲ್ಲಿ ಪಾಲುದಾರರು ಹೆಚ್ದ್ಚಾದರೆಂದನಿಸಿತೇ?
ನಾನು ಅತ್ತಾಗಲೆಲ್ಲಾ ಅವಳ ಮೊಗದಲ್ಲಿ ಕಾಣುತ್ತಿದ್ದ ಆತಂಕವೆಲ್ಲಿ?. ಪ್ರಾಯಶ? ಕಣ್ಣೊರೆಸುವ ಕೈ ಹೆಚ್ಚದವೆಂದೆನಿಸಿತೇ?
ನನ್ನ ನೋಡಿದಾಗಲೆಲ್ಲಾ ಅರಳುತ್ತಿದ್ದ ಮೊಗವೆಲ್ಲಿ ? ನನ್ನ ಬರುವನ್ನು ಕಾಯುವ ಜೀವಗಳು ಬೇರಿದ್ದರೆನಿಸಿತೆ?
ಯಾಕೀ ಮ್ಲಾನವದನ ಅವಳಿಗೆ ನಾನ್ಯಾವತ್ತೂ ಅವಳು ಬೇರೊಬ್ಬಳೆಂದಂದುಕೊಳ್ಳಲ್ಲಿಲ್ಲ. ಸಿಡುಕು, ಕೋಪ ತಾಪ , ಹರುಷ ಮದುವೆಗೆ ಮುನ್ನವೂ ಇದ್ದವು ಈಗಲೂ ಇವೆ ಅದೇಕೆ ಅವಳಿಗೆ ಈಗಿನದು ಮಾತ್ರ ಎದ್ದು ಕಾಣುತ್ತಿದೆ. ಜೀವನದಲ್ಲಿ ನಾನು ನನ್ನಕ್ಕ ಪಯಣಿಗರಾಗಿದ್ದಾಗ ಅವಳೇ ನಾವಿಕಳಾಗಿದ್ದಳು ಸಂಸಾರದ ಹರಿಗೋಲನ್ನು ನೂಕಿ ನೂಕಿ ಅವಳಿಗೂ ಆಯಾಸವಾಗಿದೀಯೆಂದೆಣಿಸಿ ನಾನು ಹಿಡಿದದ್ದೇ ಅವಳಿಗೆ ಬೇಸರವಾಗಿದೆಯೇ? ಅಥವ ಅವಳೇ ಬೇರಾದಳೆಂದೆಣಿಸಿ ಮತ್ತೊಂದು ನೌಕೆಯಲ್ಲಿ ಬರುವ ಯೋಜನೆಯೇ?
ಇದೇಕೆ ಹೀಗೆ ಸಿಟ್ಟು ಸೆಡವು, ಸಿಡುಕು, ಅಸಹನೆ ಅಮ್ಮನಿಗೆ. ಮತ್ತೆ ಕೆಲವೊಮ್ಮೆ ಇದ್ದಕಿದ್ದಂತೆ ಅಳು . ಯಾಕೆ ಹೀಗೆ
ಬದುಕೆಲ್ಲಾ ಬರೀ ನೋವಿಂದ ಕೂಡಿದ್ದಾಗಲೂ ನಗುತ್ತಾ ನಮ್ಮನ್ನೂ ನಗಿಸುತ್ತಿದ್ದ ಅಮ್ಮ ಜೀವನದ ಮುಸ್ಸಂಜೆಯಲ್ಲಿ ಸಂತಸದ ಸುಖದ ಸರೋವರದಲ್ಲಿದ್ದಾಗಲೂ ನೋವಿಂದ ನರುಳುವುದೇಕೆ? ಅಥವಾ ಎಲ್ಲರಿಗೂ ಹೀಗೆಯೇ ಆಗುತ್ತದೆಯೇ?
ಜೀವನದ ಮುಸ್ಸಂಜೆಯಲ್ಲಿ ನಾನೂಹೀಗೆಯೇ ಆಡುತ್ತೇನಾ?