Friday, March 5, 2010

ಸಾಧ್ಯವಾದಾಗಲೆಲ್ಲ ನಿನ್ನನ್ನು ಇರಿಯಲು ಕಾಯುತ್ತಿರುತ್ತದೆ ಈ ಸಮಾಜ

ಅಪ್ಪಾ,
ನನಗೆ ಗೊತ್ತು ನನ್ ಪತ್ರ ನೋಡುತ್ತಿದ್ದಂತೆ ಇವಳೇಕೆ ಪತ್ರ ಬರೆದಳು ಎಂದು ಎಲ್ಲರೆದುರಿಗೆ ಹಾರಾಡಿ ಕೊನೆಗೆ ಪತ್ರವನ್ನ ಚಿಂದಿ ಚಿಂದಿ ಮಾಡಿ ಕಸದ ಬುಟ್ಟಿಗೆ ಎಸೀತೀಯಾ . ಆದರೆ ನಿನ್ನ ಕಣ್ಣೀರು ಮಾತ್ರ ಕಟ್ಟೇಯೊಡೆಯೋಕೆ ಕಾಯ್ತಾ ಇರುತ್ತೆ. ಯಾರು ಇಲ್ಲದ ಸಮಯಾ ನೋಡಿ ಕಸದ ಬುಟ್ಟಿಯಿಂದ ನನ್ನ ಪತ್ರಾನ ಆಯ್ದು ತಂದು ಬಿಕ್ಕಳಿಸಿ ಬಿಕ್ಕಳಿಸಿ ಅಳ್ತೀಯಾ ಅಂತಾ. ಹಾಗೆ ಮಾಡೋಕೆ ಮುಂಚೆ ಇದನ್ನ ಓದು ಪ್ಲೀಸ್ ಇಪ್ಪತ್ತು ವರುಷ ನೀನೆ ಬೆಳೆಸಿದ ನಿನ್ನ ಗೊಂಬೆಗೋಸ್ಕರ .
ಯಾಕಪ್ಪಾ ಈ ನಾಟಕಾ? ಯಾರಿಗಾಗಿ ನಾಟಕಾ? ನಾವು ನಾವಾಗಿ ಇರೋಕೆ ಬಿಡದ ಈ ಸಮಾಜಕ್ಕಾ? ಅಥವಾ ನಮ್ಮನ್ನು ನೆಮ್ಮದಿಯಿಂದ ಇರೋಕೆ ಬಿಡದ ಈ ನೆಂಟರಿಗಾಗಿಯಾ?
ಈ ಇಳಿ ವಯಸಲ್ಲಿ ನಾನು ನಿಂಗೆ ಕೊಡಬಾರದ ನೋವು ಕೊಟ್ಟೇ ಅಂತ ನಿಂಗನ್ನಿಸುತ್ತಿದೆ. ಆದರೆ ನಂಗೆ ಏನನ್ನಿಸುತ್ತಿದೆ ಗೊತ್ತಾ. ಆ ನೋವನ್ನ ನೀನೆ ಮಾಡಿಕೊಂಡಿರೋದು. ನಿನ್ನ ಮಗಳಿಗಿಂತ ಈ ಸಮಾಜಾನೇ ಮುಖ್ಯಾಂತ ನೀನು ತಿಳ್ಕೊಂಡಿರೋದೆ ಇದಕ್ಕೆಲ್ಲಾ ಕಾರಣ.
ಅಪ್ಪಾ ಹೆಣ್ಣು ಅಮ್ಮನ ಹೊಟ್ಟೇಲಿ ಇರೋವರೆಗೂ ಅಮ್ಮಾನೆ ಸರ್ವಸ್ವ ಅಂತ ಅವಳ ಬೆಚ್ಚನೆಯ ಒಡಲಲ್ಲಿ ಹಾಯಾಗಿ ಇರುತ್ತಾಳೆ.ನಂತರ ತಾಯಿ ತನ್ನನ್ನ ಆ ಬೆಚ್ಚಗಿನ ಒಡಲಿಂದ ನೂಕಿಬಿಟ್ಟಳಲ್ಲ ಎಂದು ಅಳುತ್ತಾಳೆ. ನಾನೂ ಅತ್ತಿದ್ದೆ ಆದರೆ ಎತ್ತಿಕೊಳ್ಳಲ್ಲು ನನ್ನ ತಾಯಿ ಇರಲಿಲ್ಲ . ನೀನಿದ್ದೆ . ತಾಯಿಯನ್ನೂ ಮೀರಿಸುವ ಬೆಚ್ಚಗಿನ ಪ್ರೀತಿಯಲ್ಲಿ ನನ್ನನ್ನು ಮುಳುಗಿಸಿದೆ. ದೇವರು ಅಮ್ಮನನ್ನು ಕರೆದುಕೊಂಡೂ ನನಗೆ ಅಮ್ಮನ ಪ್ರೀತಿಯ ನೆನಪೇ ಆಗದಷ್ಟು ಅಗಾಧವಾಗಿ ಮಮತೆ ತೋರಿದ ಅಪ್ಪನನ್ನು ಕೊಟ್ಟ
ಹಾಗೆ ಅಪ್ಪಾ ನಾನೂ ನಿನ್ನ ಬಿಟ್ಟರೆ ಬೇರೆ ಲೋಕವೇ ಇಲ್ಲಾ ಎಂಬಷ್ಟು ನಿನ್ನನ್ನು ಪ್ರೀತಿಸುತ್ತಿದ್ದೆ. ಬದುಕಿನ ಯಾವ ಹಂತದಲ್ಲೂ ಅಮ್ಮನ ಕೊರತೆ ನನ್ನನ್ನು ಕಾಡಲಿಲ್ಲ. ಹುಡುಗಿ ಹೆಣ್ಣಾದ ಘಳಿಗೆಯನ್ನು ಮೊದಲು ಹೇಳುವುದು ಅಮ್ಮನಿಗೆ ಆದರೆ ಆ ವಿಷಯವೂ ಮೊದಲು ನಿನಗೆ ತಿಳಿದಿದ್ದು. ಇಂಟರ್ ನೆಟ್ನಿಂದ ನನಗಾಗಿ ಎಷ್ಟೊಂದು ವಿಷಯಗಳನ್ನು ಸಂಗ್ರಹಿಸಿಕೊಟ್ಟಿದ್ದೆ ನೀನು. ನಾನು ಹೊಟ್ಟೆನೋವು ಎಂದು ಅತ್ತಾಗ ಆ ನೋವು ನಿನ್ನ ಕಣ್ಣಿನಿಂದ ನೀರಾಗಿ ಬರುತ್ತಿತ್ತು. ಅಪ್ಪಾ ಅಪ್ಪಾ ನೀನು ನನಗಾಗಿ ಪಟ್ಟಕಷ್ಟ ನೋವು ನೆನೆಸಿಕೊಂಡರೆ ನಾನು ದೊಡ್ಡ ಅಪರಾಧಿ ಎಂದನಿಸುತ್ತದೆ. ಆದರೆ ಮರುಕ್ಷಣವೇ ನಾನು ಮಾಡಿದ್ದು ತಪ್ಪಲ್ಲ ಎಂದನಿಸಿ ಸಮಾಧಾನ ಮಾಡಿಕೊಳ್ಳುತ್ತೇನೆ
ಅಪ್ಪಾ ನಂಗೆ ನೆನಪಿದೆ ನಾನು ಆವತ್ತು ಹುಡುಗನೊಬ್ಬ ಹಿಂಬಾಲಿಸಿ ಹಾಡು ಹೇಳಿದ ಎಂದಂದ ಮಾತ್ರಕ್ಕೆ ಹುಡುಕಿಕೊಂಡು ಹೋಗಿ ಆತ ಸತ್ತೇ ಎಂದುಕೂಗುವಷ್ಟು ಹೊಡೆದದ್ದು. ಯಾವ ಹುಡುಗರ ನೆರಳೂ ಬೀಳದಂತೆ ನನ್ನನ್ನು ಕಾದಿದ್ದ ನಿನಗೆ ಪಕ್ಕದ ಮನೆಯಲ್ಲಿದ್ದ ಇರ್ಫಾನ್ ಕಾಣಿಸಲಿಲ್ಲ .
ಆದರೆ ಅವ ಕಂಡದ್ದು ನನಗೆ . ನನ್ನನ್ನು ನಿನ್ನಷ್ಟು ಪ್ರೀತಿಸಲೇ ಸಾಧ್ಯವಿಲ್ಲ ಎಂದುಕೊಳ್ಳುತ್ತಿದ್ದ ನನಗೆ ಪ್ರೀತಿ ಬೇರೆ ವಾತ್ಸಲ್ಯ ಬೇರೆ ಎಂದು ಕಲಿಸಿಕೊಟ್ಟ. ಅವನೂ ನನ್ನನ್ನು ಪ್ರಾಣಕ್ಕಿಂತ ಮಿಗಿಲಾಗಿ ಇಷ್ಟ ಪಟ್ಟ .

ಅಪ್ಪಾ ನಾನು ಮಾಡಿದ್ದು ತಪ್ಪಾಗಿರಲಿಲ್ಲ. ನಾನು ಅವನ್ನ ಮದುವೆಯಾಗುತ್ತೇನೆ ಎಂದು ಹೇಳಿದ್ದೇ ನಿನಗೆ ಇನ್ನಿಲ್ಲದ ಕೋಪ ಬಂತು. ಮಗಳು ಮಮಕಾರ ಎಲ್ಲಾ ಮಾಯವಾಯ್ತು. ಥೇಟ್ ಅದೇ ಭೈರಪ್ಪನವರ ಆವರಣದಲ್ಲಿನ ಅಪ್ಪನ ಥರಾ ಕೋಪಿಸಿಕೊಂಡೆ.ಮಗಳು ಸತ್ತೇ ಹೋದಳು ಎಂದು ನನ್ನ ಶ್ರಾದ್ದ ಮಾಡಿದೆ. ಲವ್ ಜಿಹಾದ್ ಎಂದು ನನ್ನನ್ನು ನನ್ನ ಇರ್ಫಾನ್‌ನನ್ನು ಕೋರ್ಟಿಗೆಳೆದೆ . ಕೊನೆಗೆ ನಾನು ನಿನ್ನ ವಿರುದ್ದವಾಗಿ ಮಾತಾಡಲೇ ಬೇಕಿತ್ತು. ಅಪ್ಪಾ ಆಗ ನನಗಾದ ಸಂಕಟ ಈ ಪತ್ರದಲ್ಲಿ ಬರೆಯಲಾಗುವುದಿಲ್ಲ.

ಅಪ್ಪಾ ಲವ್ ಅನ್ನೋದು ಪವಿತ್ರ ಅದನ್ನು ಜಿಹಾದ್ ಜೊತೆ ಒಡಗೂಡಿಸುವ ಕಲ್ಪನೆಯೇ ವಿಚಿತ್ರ ಎಲ್ಲೋ ಯಾರೋ ಒಬ್ಬ ಹಾಗೆ ಮಾಡುತ್ತಾನೆಂದರೆ ಪ್ರತಿಯೊಬ್ಬರೂ ಹಾಗೆಯೇ ಎಂದು ಭಾವಿಸಿ ಅವರನ್ನು ಅಪರಾಧಿಯಂತೆ ಕಾಣುವುದೇಕೆ? ಅಂತಹ ಪ್ರೀತಿ ಪ್ರೀತಿಯೇ ಅಲ್ಲಾ.
ಅಪ್ಪಾ ಇರ್ಫಾನ್ ನಿನ್ನ ಹಾಗು ಸಮಾಜದ ಪಾಲಿಗೆ ಏನೇ ಆಗಿರಬಹುದು. ನನ್ನ ಪಾಲಿಗೆ ಆತ ಕೇವಲ ನನ್ನ ಪ್ರೀತಿಯ ಹುಡುಗ.
ನಿನ್ನನ್ನು ಬಿಟ್ಟು ಬರುವುದು ಬಹಳ ಕಷ್ಟವಾಗಿತ್ತು ಆದರೆ ಇರ್ಫಾನ್‌ನಿಗಾದ ಅವಮಾನ ಅದಕ್ಕಿಂತ ದೊಡ್ಡದಿತ್ತು
ಈಗ ಪತ್ರ ಬರೆದ ಉದ್ದೇಶವೇನೆಂದರೆ

ನಾನೀಗ ಇರ್ಫಾನ್ ಮನೆಯಲ್ಲಿಯೂ ಇಲ್ಲ . ನಮ್ಮನ್ನು ಅಲ್ಲಿ ಸೇರಿಸಲಿಲ್ಲ ಎಂಬುದು ನಿನಗೆ ಚೆನ್ನಾಗಿ ಗೊತ್ತು .

ಸಣ್ಣ ಪುಟ್ಟ ಭಿನ್ನಾಭಿಪ್ರಾಯದ ಹೊರತು ನಾವಿಬ್ಬರೂ ಈಗ ಸುಖವಾಗಿದ್ದೇವೆ ನೀನು ನನ್ನನ್ನು ಪುಟ್ಟ ಗೊಂಬೆ ಎಂದು ಕರೆಯುತ್ತಿದ್ದೆ . ನಿನ್ನ ಪುಟ್ಟ ಗೊಂಬೆ ಮತ್ತೊಂದು ಪುಟ್ಟ ಗೊಂಬೆಯೊಂದಕ್ಕೆ ತಾಯಿಯಾಗಿದ್ದಾಳೆ.
ಈ ನಿನ್ನ ಪುಟ್ಟಗೊಂಬೆಯ ಪುಟ್ಟಿಯನ್ನು ನೋಡುವುದಕ್ಕೆ ಮನಸು ಎಳೆಯುತ್ತಿದ್ದರೂ ನೀನು ಬರುವುದಿಲ್ಲ ಎಂದು ಗೊತ್ತಿದೆ.

ಅಪ್ಪಾ ಒಂದು ತಿಳಿದುಕೋ . ನೀನು ಯಾವ ಸಮಾಜಕ್ಕಾಗಿ ನನ್ನನ್ನು ದೂರ್ ಅಟ್ಟಿದ್ದೀಯೋ ಆ ಸಮಾಜ ನಿನ್ನ ಮಗಳಂತೆ ನಿನಗೆ ಪ್ರೀತಿ ಕೊಡಲು ಸಾಧ್ಯವಿಲ್ಲ . ಪದೇ ಪದೇ ಸಾಧ್ಯವಾದಾಗಲೆಲ್ಲ ನಿನ್ನನ್ನು ಇರಿಯಲು ಕಾಯುತ್ತಿರುತ್ತದೆ. ಆ ಸಮಾಜ ನಿನಗೆ ಬೇಕಾ? ಅಮ್ಮನಂತೂ ಇಂತಹ ಸಮಯದಲ್ಲಿ ಇಲ್ಲಾ ನೀನಾದರೂ ಬರುವೆ ಏನೋ ಎಂದು ನಿನ್ನ ಬರುವಿಕೆಯನ್ನೇ ಕಾಯುತ್ತಿರುವ ಈ ನಿನ್ನಮುದ್ದು ಕಂದಾ ನಿನಗೇ ಬೇಡವಾ?
ನಿನ್ನ ಪುಟ್ಟ ಗೊಂಬೆ
ಶಮಿತಾ

7 comments:

  1. ರೂಪಾ,
    ಪತ್ರದ ರೂಪದಲ್ಲಿ ಕತೆಯನ್ನು ಕೊಟ್ಟಿದ್ದೀರಿ. ಸುಂದರವಾಗಿದೆ, ಮನ ಕಲಕುವಂತಿದೆ.
    ಹಿರಿಯರಿಗೆ ಒಂದು ಪಾಠವನ್ನೂ ಹೇಳುತ್ತದೆ. ಮಕ್ಕಳನ್ನು ಅರ್ಥ ಮಾಡಿಕೊಳ್ಳಬೇಕು, ಅವರ ಸುಖಕ್ಕಿಂತ ಮರ್ಯಾದೆ ದೊಡ್ಡದಲ್ಲ ಎಂದು.

    ReplyDelete
  2. ಇಲ್ಲಿ ಸಮಾಜಕ್ಕಿ೦ತ ನ೦ಬಿದ ಮೌಲ್ಯಗಳಿಗೆ ತ೦ದೆ ಕಟ್ಟು ಬಿದ್ದು ಮಗಳನ್ನು ತಿರಸ್ಕರಿಸಿರಬಹುದು. ಮಗಳ ದೃಷ್ಠಿಯಲ್ಲಿ ಅವಳು ಸರಿ ಇರಬಹುದು ಆದರೇ ತ೦ದೇ ದೃಷ್ಠಿಯಲ್ಲಿ?
    ಆದರೇ ಮಗಳ ವಿಷಯದಲ್ಲಿ ಕಾಯ್ದೇ ಕಚೇರಿ- ರ೦ಪ ತಪ್ಪೇನಿಸಬಹುದು.
    ಆದರೇ ಮಗಳ ಪತ್ರ ಮನ ಕಲುಕುವ೦ತಿದೆ. ವಿಚಾರ ಪ್ರಚೋದನೆಯ ಲೇಖನ ಚೆನ್ನಾಗಿ ಮೂಡಿದೆ. ತ೦ದೆ ಎಲ್ಲವನ್ನು ಮರೆತು ಮಗಳು-ಅಳಿಯ-ಮೊಮ್ಮಗುವನ್ನ ಸೇರಲಿ ಎ೦ದು ಹಾರೈಸೋಣ.
    ಚೆ೦ದದ ಕthe.

    ReplyDelete
  3. patra tumba chennagide, aa heNNina manadaaLadalli enide endu chennagi chitrisiddeeri.

    ReplyDelete
  4. ರೂಪ ಮೇಡಮ್,

    ತುಂಬಾ ದಿನಗಳ ನಂತರ ಒಂದು ಭಾವನಾತ್ಮಕವಾದ ಲೇಖನವನ್ನು ಬರೆದಿದ್ದೀರಿ...ಸಮಾಜಕ್ಕೆ, ಬದುಕಿಗೆ ಅದರ ನಿಲುವುಗಳಿಗೆ ಬೇಕಾಗುವಂತ ವಿಚಾರಗಳು ಲೇಖನದಲ್ಲಿ ಇರುವುದರಿಂದ ಇಷ್ಟವಾಗುತ್ತದೆ..

    ReplyDelete
  5. ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ

    ReplyDelete
  6. igina kaalada sanniveshakke takkanthe barediddiri but este preethisidaru hetavarige novu kododu samanjasavala embudu nanna anisike ene aagali ondu olle lekhana kottidakke nimage tumbu hrudayada danyavaadagaLu

    ReplyDelete

ರವರು ನುಡಿಯುತ್ತಾರೆ