Tuesday, February 9, 2010

ಈ ಬರ್ತ್ ಡೇ ಗಿಫ್ಟ್ ಕೊಡೋಕೆ ಆಗತ್ತಾ ಮಮ್ಮಾ?

"ಅಮ್ಮಾ ನಿನ್ನನ್ನ ಅಮ್ಮಾ ಅಂತ ಕರೆದ್ರೆ ಬೈತೀಯಾ ಮತ್ತೆ ಏನಂತ ಕರೆದ್ರೆ ನಿಂಗೆ ಖುಶಿ ಆಗುತ್ತೆ. ಹಾ ಮಮ್ಮ ಅಂತ ಕರೆದ್ರೆ ಅಲ್ವಾ? ಸರಿ ಮಮ್ಮಾ ನೆನ್ನೆ ನೀನು ನನ್ನ ಹತ್ರ "ವಿನು ನೆನ್ನೆ ನೀನು ಹುಟ್ಟಿ ನಾಳೆಗೆ ೩ ಯಿಯರ್ಸ್ ಆಗುತ್ತೆ ನಿಂಗೇನು ಬೇಕು ಪುಟ್ಟಾ ಅಂತ ಕೇಳಿದೆಯಲ್ಲಾ . ಮಮ್ಮ ನಂಗೆ ಐಸ್ ಕ್ರೀಮ್ ಬೇಡಾ ಚಾಕ್ಲೇಟ್ ಬೇಡಾ, ಡಾಲ್ಸ್ ಬೇಡಾ. ನಂಗೆ ನೀವಿಬ್ರೂ ಬೇಕು ಅಂತಾ ಹೇಳಿಬಿಡೋಣ ಅನ್ನಿಸ್ತು . ಆದರೆ ನಿಂಗೆ ಬೇಜಾರಾಗುತ್ತೆ ಅಂತಾ ನಾನೇನೂ ಹೇಳಲಿಲ್ಲ ಮಮ್ಮಾ. ಇನ್ನೂ ನಂಗೇನೇನೋ ಅನ್ನಿಸ್ತಾ ಇದೆ ಎಲಾ ಹೇಳಿ ಬಿಡ್ತೀನಿ ಅಳ್ತಾನೆ . ಅರ್ಥ ಆದರೆ ಮಾಡಿಕೋ ಇಲ್ಲಾಂದ್ರೆ ಯಾವಾಗಲೂ ಮಾಡೋ ಹಾಗೆ ಆ ಕೆಲ್ಸದ ನ್ಯಾನಿ ಹತ್ರ ಕೊಟ್ಟು ಕಳಿಸಿಬಿಡು ನನ್ನನ್ನ

ಮಮ್ಮಾ ನಾನು ಹುಟ್ಟಿದಾಗ ಸುತ್ತಾ ಮುತ್ತಾ ನೋಡಿದೆ ಬಿಳಿ ಬಟ್ಟೇ ಹಾಕೊಂಡಿದ್ದವರಿಬ್ಬರೂ ನನ್ನನ್ನ ಎತ್ತಿ ನೋಡಿ ಮೇಲ್ ಬೇಬಿ ಅಂದರು. ನಂಗೆ ಅವರ ಮಾತು ಬೇಕಿರಲಿಲ್ಲ . ನಂಗೆ ನೀನು ಬೇಕಿತ್ತು. ಆದರೆ ನಿಂಗೆ ಸಿಸೇರಿಯನ್ ಮಾಡಿಬಿಟ್ಟಿದ್ರಲ್ಲಾ ಹಾಗಾಗಿ ನನ್ನನ್ನ ದೂರಾನೇ ಇಟ್ಟುಬಿಟ್ರು. ಹುಟ್ಟಿದ ತಕ್ಶಣ ಅಮ್ಮನ ಹಾಲನ್ನು ಹೀರುವ ಭಾಗ್ಯ ಸಿಗಲಿಲ್ಲ. ಆ ಎರೆಡು ದಿನಾ ನಾನು ಅಮ್ಮಾ ಅಮ್ಮ ಅಂತ ಅಳ್ತಾನೆ ಇದ್ದೆ . ಅಪ್ಪ ಬಂದು ಒಮ್ಮೆ ನನ್ನನ್ನು ನೋಡಿ ನೈಸ್ ಬೇಬಿ ಅಂದು ಕೆನ್ನೆ ಜಿಗುಟಿ ಸಾರಿ ಡಿಯರ್ ಇ ಹ್ಯಾವ್ ಲಾಟ್ಸ್ ಆಫ್ ವರ್ಕ್ ಅಂತ ಹೇಳಿ ಹೋದದ್ದಷ್ಟೇ ಆಮೇಲೆ ಕಾಣಲೇ ಇಲ್ಲ. ನಂಗೆ ನರ್ಸ್ ಹಾಕಿದ ಮೇಲು ಹಾಲು ಕುಡಿಯೋದು ಅಮ್ಮನ ಪಕ್ಕ ಸಿಗುತ್ತಾ ಅಂತ ನೋಡೋದು ಅಳೋದು . ನಾನು ಅಳ್ತಾನೆ ಇದ್ದೆ. ಇದೊಂದು ಸುಮ್ನೆ ಅಳ್ತಾನೆ ಇರುತ್ತೆ ಅಂತ ಮತ್ತೆ ಮತ್ತೆ ಮೇಲು ಹಾಲು ಹಾಕೋಳು. ಅವಳಿಗೇನು ಗೊತ್ತು ನಂಗೆ ಅಮ್ಮನ ಬೆಚ್ಚನೆಯ ಪಕ್ಕ , ಅಮ್ಮನ ಹಾಲು ಬೇಕು ಅಂತ.

ಮಮ್ಮಾ ಕೊನೆಗೂ ಆ ದಿನಾ ಬಂದೇ ಬಿಟ್ಟಿತು. ನನ್ನ ಸೌಭಾಗ್ಯದ ದಿನ . ನನ್ನನ್ನ ನಿನ್ನ ಪಕ್ಕ ಮಲಗಿಸಿದರು. ನಾನಂತೂ ಸಂತಸದಲ್ಲಿ ತೇಲಾಡಿದೆ. ನೀನೂ ನನ್ನನ್ನ ಮುದ್ದಾಡಿದೆ .

ಆ ಮೂರು ತಿಂಗಳು ನಾನು ನಿನ್ನ ಬಳಿ ಇದ್ದುದ್ದೇ ನನ್ನ ಲಾಭ. ಮೂರನೇ ತಿಂಗಳಾಗುತ್ತಿದ್ದ ಹಾಗೆ ಎಂದಿನಂತೆ ನಿನ್ನ ಬಳಿ ಮಲಗಿ ಹಾಲನ್ನು ಸವಿಯುವ ಕನಸು ಕಾಣುತ್ತಿದ್ದ ನನ್ನ ಬಾಯಿಗೆ ಏನೋ ಬೇರೆಯ ವಸ್ತುವಿನ ಸ್ಪರ್ಷ ವಾಯ್ತು ನೋಡಿದರೆ ಬಾಟಲಿ ಹಾಲು . ಮಮ್ಮಾ ಆಗಲ್ಲಾ ಆಗಲ್ಲಾ ಎಂದೂ ನಾನು ಕಿರುಚಿದ್ದು ನಿನಗೆ ಕೇಳಿಸಲೇ ಇಲ್ಲವೇನೋ ಎನ್ನುವಂತೆ ನೀನು ಕನ್ನಡಿ ಮುಂದೆ ರೆಡಿಯಾಗುತ್ತಿದ್ದೆ.

"ಚಿನ್ನು ಬಾಯ್. ಟುಡೇ ಆನ್ವಾರ್ಡ್ಸ್ ಐ ಹ್ಯಾವ್ ಟು ಗೋ ಟು ವರ್ಕ್" ಎಂದು ಮುತ್ತು ಕೊಟ್ಟು ಹೋಗೇ ಬಿಟ್ಟೇ. ನನ್ನ ಅಳು ಕೇಳಲೇ ಇಲ್ಲ ನಿಂಗೆ

ಮಮ್ಮಾ ಅವತ್ತ ನಾನೆಷ್ಟುಅತ್ತೆ ಗೊತ್ತಾ. ಆಗಲೇ ಈ ನ್ಯಾನಿ ಮನೆಗೆ ಬಂದದ್ದು . ನನ್ನನ್ನ್ ನೋಡಿಕೊಳ್ಳೋಕೆ. ಮಮ್ಮಾ ನಾನು ನಿಜ ಹೇಳ್ತೀನಿ ನಂಗೆ ಎಷ್ಟಿ ಬೇಜಾರಾಯ್ತು ಅಂದರೆ ಆವತ್ತೆಲ್ಲಾ ಅಳ್ತಾನೆ ಇದ್ದೆ ನೀನಿದ್ದಿದ್ರೆ ನನ್ನನ್ನ ಎತ್ತ್ಕೋತಿದ್ದೆ ಮುದ್ದಾಡ್ತಿದೆ ಆದರೆ ನ್ಯಾನಿ ಬೈಕೊಂಡು ನನ್ನನ್ನ ಒಂದು ತೊಟ್ಟಿಲಲ್ಲಿ ಹಾಕಿದಳು. ಆವತ್ತಿಂದ ನಂಗೆ ನಿನ್ನ ಹಾಲು ಸಿಗಲಿಲ್ಲಾಮ್ಮ

ಹಿಂಗೆ ನಾನು ನಿನ್ನನ್ನ ತುಂಬಾ ಮಿಸ್ ಮಾಡ್ಕೋತಿದ್ದೆ. ನೀನು ಬರೋ ಸಮಯಕ್ಕೆ ನಂಗೆ ಅತ್ತೂ ಅತ್ತೂ ನಿದ್ರೆ ಬಂದಿರ್ತಿತ್ತು. ಯಾವಾಗಲೋ ಎಚ್ಚರ ಆಗಿ ನಿನ್ನ ಬಳಿ ಬೆಚ್ಚಗೆ ಮಲಗಬೇಕು ಅಂತನ್ನಿಸಿ ನಿನಗಾಗಿ ತಡಕಾಡ್ತಾ ಇದ್ದಾಗ ನೀನು ಪಪ್ಪಾ ಹತ್ರ ಮಲಗಿರ್ತಿದ್ದೆ .ಅತ್ತರೆ ಬೈಕೊಂಡು ಬಂದು ಮಲಗ್ತಿದ್ದೆ. ಹೇಗೋ ಹೊಂದ್ಕೊಂಡುಬಿಟ್ಟೆ. ನಾನು ಮಮ್ಮಾ ಅಂದದ್ದೂನಿಂಗೆ ಗೊತ್ತಾಗಿರಲಿಲ್ಲ.

ನಂಗೆ ನಡೆಯೋಕೆ ಬಂದ ದಿನ ನಾನು ನಡೆದದ್ದನ್ನ ನ್ಯಾನಿ ನಿಂಗೆ ಫೋನ್ ಮಾಡಿ ಹೇಳಿದಳು. ಆವತ್ತಾದ್ರೂ ನೀನು ಬೇಗ ಬರ್ತೀಯಾ ಅನ್ಕೊಂಡೆ.
ಊಹೂ ನೀನು ಬರಲೇ ಇಲ್ಲಾ ಬೇಗ. ಲೇಟಾಗಿ ಬಂದು ಸಾರಿ ಬೇಬಿ ಎಲ್ಲಾ ನಿಂಗೋಸ್ಕರ ಚಿನ್ನೂ ಅಂತ ಮುತ್ತು ಕೊಟ್ಟು ಮಲಗೇ ಬಿಟ್ಟೆ.
ಮಮ್ಮಾ ನಂಗೆ ನೀನು ಬೇಕು .ನಂಗೋಸ್ಕರ ಏನು ಮಾಡ್ಟೀಯಾ ನೀನು . ನಾನು ಬಯಸಿದಾಗ ನೀನಿರಬೇಕು. ಅದಿಲ್ಲವಾದರೆ ನೀನೇನು ಮಾಡಿದರೂ ನಂಗೆ ಪ್ರಯೋಜನ ಇಲ್ಲಾಮ್ಮ
ಅದಾದ ಮೇಲೆ ನನ್ನ ಪ್ಲೇ ಹೋಮ್‌ಗೆ ಸೇರಿಸಿದೆ.
ಮಮ್ಮಾ ಅಲ್ಲಿ ಎಲ್ಲರ ಅಮ್ಮಾನೂ ಬಂದು ಮಕ್ಕಳಿಗೆ ಮಮ್ಮು ತಿನ್ನಿಸಿ ಹೋಗ್ತಾರೆ. ಆದರೆ ನೀನು ಮಾತ್ರ ಬರೋದಿಲ್ಲ. ಮದ್ಯಾಹ್ನ ಎಲ್ಲರ ಮಮ್ಮಾನೂ ಬಂದು ಅವರವರ ಪಾಪುಗಳನ್ನು ಕರ್ಕೊಂಡು ಹೋಗ್ತಾರೆ ಆದರೂ ನೀನು ಮಾತ್ರ ಬರೋಲ್ಲಾ.
ನನ್ನ ಸ್ಕೂಲ್ ಆಯಾ ಕರ್ಕೊಂಡು ಬರ್ತಾಳೆ .
ನಮ್ಮನೆ ಎದುರಿಗೆ ಮನೆ ಕಟ್ತಾ ಇದ್ದಾರಲ್ಲಾ ಮಮ್ಮಾ ಅಲ್ಲಿ ಒಂದು ಪಾಪು ಇದೆ. ಅದು ಕೂಲಿಯವರ ಪಾಪು ಇರಬೇಕು .ಅದೂ ಅಮ್ಮನ ಹಾಗೆ ಮೈಗೆ ಮುಖಕ್ಕೆ ಮಣ್ಣು ಮೆತ್ಕೊಂಡಿರುತ್ತೆ.
ಆದರೂ ಅದರಮ್ಮ ಅದನ್ನು ಎತ್ತಿಕೊಂಡು ಮುತ್ತು ಕೊಟ್ಟು ತನ್ನ ಜೊತೇನೆ ಇಟ್ಟುಕೊಳ್ತಾಳೆ. ಅದಕ್ಕೆ ಮುದ್ದು ಮಾಡಿ ಊಟ ಮಾಡಿಸ್ತಾಳೆ . ಹಾಡು ಹೇಳ್ತಾಳೆ, ಲಾಲಿ ಲಾಲಿ ಅಂತಾಳೆ . ನಂಗೆ ತುಂಬಾ ಬೇಜಾರಾಗುತ್ತೆ ಮಮ್ಮ ನೀನು ಮಾತ್ರ ನಂಜೊತೆ ಇರಲ್ಲಾ.
ನಮ್ಮ ಮನೆ ಮುಂದೆ ಇರೋ ಮರದಲ್ಲಿ ಗುಬ್ಬಚ್ಚಿ ಯಾವಾಗಲೂ ತನ್ನ ಮರೀ ಜೊತೇನೆ ಇರುತ್ತೆ. ಕೆಳಗಡೆ ಇರೋ ನಾಯಿಗೂ ಪಾಪುಇದೆ. ಅದೂ ಯಾವಾಗಲೂ ಪಾಪೂ ಜೊತೇನೆ ಇರುತ್ತೆ. ಆದರೆ ನೀನ್ಮಾತ್ರ ನಿನ್ನ ಪಾಪು ಜೊತೆ ಇರಲ್ಲಾಮ್ಮ. ಯಾಕಮ್ಮಾ?
ಸ್ಕೂಲಿಂದ ಬಂದ ತಕ್ಷಣ ನ್ಯಾನಿ ಏನೋ ತಿನ್ನಿಸ್ತಾಳೆ ಆದರೆ ನೀನು ತೋರೋ ಥರಾ ಪ್ರೀತಿ ಇರಲ್ಲಾ ಅದು ಬರೀ ಮಮ್ಮು ಆಗಿರುತ್ತೆ. ಆಮೇಲೆ ಮಲಗಿಸ್ತಾಳೆ ಇಲ್ಲಾ ಟಿವಿ ನೋಡು ಅಂತಾಳೆ. ಆದರೆ ನಿನ್ನ ಜೊತೆ ಇರೋ ಅಂತಾ ಫೀಲಿಂಗ್ ಇರೋದಿಲ್ಲಾಮ್ಮ.ರಾತ್ರಿ ಮಮ್ಮು ತಿನ್ನಿಸಿ ಮಲಗಿಸ್ತಾಳೆ ಹಾಡಿಲ್ಲಾ ಮಾತಿಲ್ಲ. ನಾನು ಮಲಗಿರ್ತೀನಿ. ನೀನು ಬರ್ತೀಯ ಬೆಳಗ್ಗೆ ನಾನು ಎದ್ದು ನೋಡೋ ಅಷ್ಟ್ರಲ್ಲಿ ಆಫೀಸಿಗೆ ಹೋಗೋಕೆ ರೆಡಿಯಾಗಿರ್ತೀಯಾ.
ಹೋದಸಲ ಅಜ್ಜಿ ಬಂದಾಗ ಪುಣ್ಯ ಕೋಟಿ ಹಾಡು ಹೇಳಿಕೊಟ್ಟಿದ್ದರು
ಆ ಕರು ಅಮ್ಮನ್ನ ಕೇಳುತ್ತಾಲ್ಲಾ ಹಾಗೆ ನಾನು ನಿನ್ನನ್ನ ಕೇಳ್ತೀನಿ
ಆರ ಬಳಿಯಲಿ ಮಲಗಲಮ್ಮ
ಆರ ಸೇರಿ ಆಡಲಮ್ಮ
ಆರು ನನಗೆ ಹಿತವರು

ನಂಗೆ ಗೊಂಬೆ ಬೇಡ ಚಾಕಲೇಟ್ ಬೇಡ ನಂಗೆ ಬಿಸ್ಕತ್ ಬೇಡ ಹೊಸ ಬಟ್ಟೇ ಬೇಡ, ನಂಗೆ ನೀನು ನನ್ನ ಜೊತೇನೆ ಇದ್ದರೆ ಸಾಕು . ಅದೇ ನನ್ನ ಬರ್ತಡೇ ಗಿಫ್ಟ್ . ಇದನ್ನ ನಾನು ಕೇಳ್ತಾ ಇದ್ದೀನಿ ಕೊಡೋದಿಕ್ಕೆ ಆಗತ್ತಾ ಅಮ್ಮಾ?