Monday, March 7, 2011

ಹೆಣ್ಣು ಮಹಿಳೆಯಾಗುತ್ತ್ದಿದ್ದಾಳೇಯೇ

ಇವತ್ತು ಮಹಿಳಾ ದಿನಾಚರಣೆ, ಎಷ್ಟೊ ಶುಭಾಶಯಗಳು, ಆಕಾಂಕ್ಷೆಗಳು. ಹಾರೈಕೆಗಳು. ಒಮ್ಮೆಗೆ ಕೂತು ಯೋಚಿಸುತ್ತಿದ್ದಾಗ, ಮೂಡಿದ ಯೋಚನೆಗಳು ಹಲವಾರು

ಅದರಲ್ಲಿ ಮೂಡಿದ ಒಂದು ಪ್ರಶ್ನೆ, ಮಹಿಳೆ ಎನಿಸಿಕೊಳ್ಳುವ ಹಂಬಲದಲ್ಲಿ ಹೆಣ್ಣಿನ ಸಹಜ ಸಂವೇದನೆಗಳನ್ನು ಕಳೆದುಕೊಳ್ಳುತ್ತಿದ್ದೇವೆಯೇ ನಾವುಗಳು?
ಅಷ್ಟಕ್ಕೂ ಹೆಣ್ಣಿಗೂ ಮಹಿಳೆಗೂ ಏನು ವ್ಯತ್ಯಾಸ?
ಹೌದ್ದು ಅರ್ಥದ ಪ್ರಕಾರ ಯಾವುದೂ ಇಲ್ಲ
ಆದರೆ ಮನಸಿಗೆ ಹೆಣ್ಣು ಆಪ್ತಳಾಗುತ್ತಾಳೆ, ಆದರೆ ಮಹಿಳೆ ದೂರದಲ್ಲಿಯೇ ನಿಲ್ಲುತ್ತಾಳೆ .
ಇದರ ಬಗ್ಗೆ ನನ್ನದೊಂದಿಷ್ಟು ಸಂವೇದನೆಗಳು

ಹೆಣ್ಣಿನ ಮೊದಲ ಹಂತವೇ ಹೆಣ್ಣಾಗುವುದು.
ಬಾಲಕಿ ಹೆಣ್ಣಾಗುವ ಆ ಹಂತದಲ್ಲಿ ಎಷ್ಟೋ ಕಾತುರತೆ , ನಿರೀಕ್ಷೆಗಳು, ನಾಚಿಕೆ , ಲಜ್ಜೆ, ಕನಸುಕಂಗಳು, ಕೆನ್ನೆಯ ಚುಂಬಿಸುತ್ತಲೆ ಇರುವ ರೆಪ್ಪೆಗಳು........... ಹೀಗೆ ಏನೇನೋ ಲಕ್ಷಣಗಳು ................ ಹೌದು ಇವೆಲ್ಲಾವನ್ನು ಓದಿರುತ್ತೇವೆ, ನೋಡಿರುತ್ತೇವೆ ಎಲ್ಲಿ ಕಥೆಗಳಲ್ಲಿ ಕಾವ್ಯಗಳಲ್ಲಿ , ನಮ್ಮ ತಾಯಿ ಅಥವ ಅವರ ತಾಯಿಯ ಕಾಲಕ್ಕಿರಬಹುದೇನೋ................
ಈಗ ಬಾಲಕಿ ಹೆಣ್ಣಾಗುವುದಿಲ್ಲ ಸೀದಾ ಮಹಿಳೆಯಾಗುವ ಹಂತಕ್ಕೆ ತಲುಪಿರುತ್ತಾಳೆ, ಅದೇನು ಗಾಂಭೀರ್ಯ , ಎಲ್ಲವನ್ನೂ ತಿಳಿದಿರುವವರ ಲಕ್ಷಣ, ಹುಡುಗರೆಂಬ ಕುತೂಹಲವಿರಲಿ ಅವರನು ಹೇಗೆ ಆಟ ಆಡಿಸುವುದೆಂಬ ಯೋಚನೆಯಲ್ಲಿ ತೊಡಗುತ್ತಾಳೆ..
ಯಾವುದೇ ವಿಚಾರಕ್ಕಿರಲಿ ದೊಡ್ಡವರನ್ನು ಕೇಳಬೇಕಾದ ಅನಿವಾರ್ಯತೆ ಈಗ ಇಲ್ಲ . ಎಲ್ಲಕ್ಕೂ ಅಂತರ್ಜಾಲವಿದೆ. ಯಾವುದೇ ಕುತೂಹಲ,ಪ್ರಶ್ನೆಗೆ ಉತ್ತರ ಅಗತ್ಯಕ್ಕಿಂತ ಹೆಚ್ಚಾಗಿಯೇ ಸಿಗುತ್ತದೆ. ಹಾಗಾಗಿ ಲೈಂಗಿಕತೆ ಎಂಬುದು ಅವಳಿಗೆ ದೊಡ್ಡ ವಿಷಯವೇ ಅನ್ನಿಸುವುದಿಲ್ಲ.
ಈಗೀಗ ಕಾಲೇಜಿನಲ್ಲಿ ಹುಡುಗ ಕೈ ಕೊಟ್ಟ ಎಂಬ ಮಾತುಗಳಿಗಿಂತ ಹುಡುಗಿ ಬಿಟ್ಟು ಹೋದಳು ಎಂಬ ದೂರುಗಳೇ ಹಚ್ಚು,
ಅಪ್ಪ ಅಮ್ಮನ ನಂತರ ಹುಡುಗಿ ಹುಡುಕುವುದೇ ಸೂಕ್ತ ಗೆಳೆಯನಿಗಾಗಿ, ಹುಡುಗನಲ್ಲಿ ಗೆಳೆಯನನ್ನು ಹುಡುಕುತ್ತಾಳ್ಖೆ, ಆಪ್ತವಾದ ಭಾವನೆ ಹುಟ್ಟು ಹಾಕುವ ಹುಡುಗ ಅವಳಿಗೆ ಹಿಡಿಸುತ್ತಾನೆ. ಆದರೆ ಯಾವುದೋ ಒಂದು ಘಳಿಗೆ ಯಲ್ಲಿ ತಾನು ಬಂದಿರುವುದು ಓದಲು ಪ್ರೀತಿಸಲು ಅಲ್ಲ ಎಂಬ ದಿವ್ಯ ತಿಳುವಳಿಕೆ ಬರುತ್ತದೆ. ಇದ್ದಕ್ಕಿದ್ದಂತೆಯೇ ಬಾಳಿನ ಗುರಿಗಳು ನೆನಪಾಗುತ್ತವೆ. ತನ್ನ ಮೊದಲ ಆದ್ಯತೆ ತಂದೆ ತಾಯಿ ಹಾಗು ಗುರಿ ಈ ಹುಡುಗ ಅಲ್ಲ ಎಂಬ ಆಲೋಚನೆಗಳು ಮುತ್ತಿಡಲಾರಂಭಿಸಿದೊಡನೆಯೇ ಹುಡುಗನ ಚಿತ್ರ ಮನದಿಂದ ದೂರವಾಗಲಾರಂಭಿಸುತ್ತದೆ. ಅದು ತಾತ್ಕಾಲಿಕ, ಮತ್ತೊಬ್ಬ ಹುಡುಗ ಬಂದು ಮನದಲ್ಲಿ ಕೂರುವವರೆಗೆ..
ಇರುವ ಹುಡುಗನಿಗೆ ನನ್ನ ನಿನ್ನ ಸಂಬಂಧ ಗೆಳೆತನವಾಗಿಯೇ ಇರಲಿ ಎಂದು ಸಂದೇಶವನ್ನು ಕಳಿಸಿ ನಿರಾಳವಾಗುತ್ತಾಳೆ . ಇದು ಕಾಲೇಜಿನಲ್ಲಿ ಇರುವವರೆಗೂ ನಡೆಯುವ ಪ್ರಕ್ರಿಯೆ.
ಇದನ್ನು ಹುಡುಗರು ಫ್ಲರ್ಟಿಂಗ್ ಎಂದು ಕರೆಯುತ್ತಾರೆ. ಹುಡುಗಿ ಅಪ್ಪ ಅಮ್ಮನಿಗಾಗಿ ಮಾಡಿದ ತ್ಯಾಗ ಎಂದು ನೆಮ್ಮಧಿಸಿಕೊಳ್ಳುತ್ತಾಳೆ

ಯಾವುದೋ ಕ್ಯಾಂಪಸ್ ಇಂಟರ್ವ್ಯೂನಲ್ಲಿ ಸೆಲೆಕ್ಟ ಆಗಿ ವಯಸಿಗೆ ಮೀರಿದ ಸಂಬಳ, ವಯಸಿಗೆ ಮೀರಿದ ಹುದ್ದೆಗಳಲ್ಲಿ ಕೈತುಂಬ ಹಣ ಸಂಪಾದಿಸುತ್ತಿದ್ದಂತೆಯೇ ಮದುವೆಯಾಗು ಎನ್ನುವ ಹಿರಿಯರ ಒತ್ತಾಯಕ್ಕೋ ವಯೋಸಹಜ ಬಯಕೆಗೋ ಗಂಡಿನ ಶೋಧಕ್ಕೆ ತೊಡಗುತ್ತಾಳೇ
ಈಗ ಅಪ್ಪ ಅಮ್ಮನೇ ಹುಡುಕಿ ಮದುವೆ ಮಾಡಬೇಕೆನ್ನುವ ನಿಯಮವೇ ಇಲ್ಲ
ತನಗೆ ಬೇಕಾದವರನ್ನು ಫೇಸ್ ಬುಕನಲ್ಲೋ ಮತ್ತ್ಯಾವುದೋ ಸೋಶಿಯಲ್ ನೆಟವರ್ಕ್ ಸೈಟಿನಲ್ಲಿಯೇ ಹುಡುಕಿ, ಅಲ್ಲಿಯೇ ಅವನ ವಿಚಾರಗಳನ್ನೆಲ್ಲಾ ತಾಳೆ ಮಾಡಿ, ಅಂತಸ್ತು, ಜಾತಿಗಳನ್ನು ಗುರುತಿಸಿ ಆತ ತನಗೆ ಸೆಟ್ ಆಗಬಹುದೇ ಎಂದು ಯೋಚಿಸಿ, ಕೆಲವೊಂದೆಡೆ ಅವನ ಜೊತೆ ಓಡಾಡಿ ಅವನ ಒಳಿತು ಕೆಡಕುಗಳನ್ನು ಅರಿತುಕೊಂಡು ಎಲ್ಲಾ ಸರಿ ಹೋದಲ್ಲಿ ಮದುವೆ ಅಥವ ಮುಂದಿನ ಅರಸುವಿಕೆಯತ್ತ ಹೆಜ್ಜೆ
ಹಾಗೂ ಹೀಗೂ
ಮದುವೆಯ ಹಂತ ದಾಟಿ ಹೆಂಡತಿಯ ಪಟ್ಟ ವಹಿಸಿಕೊಳ್ಳುವ ಹೆಣ್ಣು, ಎರೆಡೆರೆಡು ಪಾತ್ರ ನಿರ್ವಹಿಸಬೇಕಾಗುತ್ತದೆ,
ಒಂದು ವೃತ್ತಿ, ಮತ್ತೊಂದು ಸಂಸಾರ, ಎರೆಡೆರೆಡನ್ನೂ ನಿಭಾಯಿಸಿಕೊಂಡು ಹೋಗುವಾಗ ’ಈಗೋ’ ಎನ್ನುವುದು ಹೆಡೆಯಾಡತೊಡಗುತ್ತದೆ. ಗಂಡ ಸರಿ ಇಲ್ಲದಿದ್ದರೂ ಅವನನ್ನು ಸರಿ ದಾರಿಗೆ ತರುವಂತ ಮಲ್ಲಮ್ಮನಂಥವರ ಪವಾಡ ಈಗ ನಡೆಯುತ್ತಿಲ್ಲ. ಅಂತಹ ಮಲ್ಲಮ್ಮಂದಿರೂ ಈಗ ಇಲ್ಲ
ಏನಿದ್ದರೂ ತನಗೆ ಹೊಂದಿಕೆ ಆಗದಂತಹ ಗಂಡನಿದ್ದಲ್ಲಿ ನೀನಿಲ್ಲದಿದ್ದರೂ ಬದುಕಬಲ್ಲೇ ಎಂದು ಬೆನ್ನು ತೋರಿಸಿ ನಡೆಯುವ ಛಲವಾದಿಗಳು, ಭೈರಪ್ಪನವರ ಮಂಗಳೆಯಂತಹವರು ಎಲ್ಲೆಲ್ಲೂ ಹೆಚ್ಚುತ್ತಿದ್ದಾರೆ.
ಹಾಗೂ ಹೀಗೂ ಮಗುವೊಂದಾಯಿತೆಂದರೂ, ಅಮ್ಮನ ಪಾತ್ರಕ್ಕಿಂತ ಮಾಮ್‍ನ ಪಾತ್ರವೇ ಈಗ ಹೆಚ್ಚು ನಡೆಯುತ್ತಿದೆ. ಮಗುವನ್ನು ಹೇಗೆ ಬೆಳೆಸಬೇಕೆಂಬ ನಿರ್ಧಾರವಿರಲಿ, ಹೇಗೆ ಯಾವಾಗ ಹುಟ್ಟಬೇಕೆಂಬ ನಿರ್ಧಾರವನ್ನು ತೆಗೆದುಕೊಳ್ಳುವಷ್ಟರ ಮಟ್ಟಿಗೆ ಹೆಣ್ಣಿನ ಪಾತ್ರ ಬೆಳೆದಿದೆ.
ಆದರೆ ಈ ಮಾಮ್ ಟೀಮ್ ಲೀಡರ್, ಪ್ರಾಜೆಕ್ಟ ಮ್ಯಾನೇಜರ್‌ನ್ ಪಾತ್ರಗಳಲ್ಲಿ ಹರಿದು ಹಂಚಿ ಹೋಗಿದ್ದಾಳೇ ಅರ್ಧ ಮಾಮ್. ಅರ್ಧ ತಾಯಿ, ಅರ್ಧ ಅಮ್ಮ .
ಮಗುವನ್ನು ಹೊತ್ತಿರಬೇಕಾದ ತೊಡೆ ಈಗ ಲ್ಯಾಪ್‌ಟಾಪ್‌ಗೆ ಮೀಸಲಾಗಿದೆ, ಮಗುವಿಗೆ ಜೋಗುಳ ಹೇಳಬೇಕಾದ ಅಮ್ಮನ ದನಿ ಮೊಬೈಲ್‌ನಲ್ಲಿ ಹೂತು ಹೋಗಿದೆ. ಮಗುವೂ ಈಗ ಲ್ಯಾಪ್‌ಟಾಪ್‌ ಒಳಗೆ ತೂರಿಕೊಳ್ಳುತ್ತಿದೆ. ಜೀನಿಯಸ್ ಕಿಡ್‌ನ ಮಾಮ್ ಅನ್ನಿಸಿಕೊಳ್ಳುವ ಬಯಕೆಯನ್ನೂ ತುಂಬಿಕೊಂಡಿದ್ದಾಳೆ

ಹೀಗೆ ಹೆಣ್ಣು ಮಹಿಳೆಯಾಗಿ ರೂಪುಗೊಳ್ಳುತ್ತಿರುವ ಈ ಪರ್ವ ಕಾಲದಲ್ಲಿ

ಕಾಳಿದಾಸನ ಶಾಕುಂತಲೆ, ವಾಲ್ಮೀಕಿಯ ಸೀತೆ, ವ್ಯಾಸರ ದ್ರೌಪದಿ, ಅಂಬೆ, ಕುಂತಿ ಯಾರಲ್ಲೂ ಕಾಣುತ್ತಿಲ್ಲ.
ಅವರುಗಳ ಕಥೆಯ ಅಗತ್ಯವೂ ಇಲ್ಲ

ಕಷ್ಟವಿದ್ದಲ್ಲಿ ಗೊಳೋ ಎಂದು ಅಳುವ ಅಳು ಮುಂಜಿ ಪಾತ್ರ ಹೆಣ್ಣಿಗೆ ಈಗ ಸರಿ ಹೊಂದುತ್ತಿಲ್ಲ
ದಿಟ್ಟೆಯಾಗಿ ಜೀವನದ ಪ್ರತಿಯೊಂದು ಸಮಸ್ಯೆಯನ್ನೂ ಪರಿಹರಿಸಿಕೊಳ್ಳುವ ಸಮಾಧಾನದ ವ್ಯಕ್ತಿತ್ವದ ಜೊತೆಗೇ ,
ತಾನು ಯಾರಿಗೂಕಡಿಮೆಯಿಲ್ಲಾ, ಗಂಡಿಗೆ ತಾನೂ ಸಮಳೂ ಎಂಬ ಅಹಂ ಕೂಡಿಕೊಳ್ಳುತ್ತದೆ.
ಸೆಕ್ಸ್ ಎಂಬ ಪದಕ್ಕೇ ಅಂಜುತ್ತಿದ್ದ ಹೆಣ್ಣು, ಇಂದಿಗೆ ಲೈಂಗಿಕತೆಯನ್ನುಮುಕ್ತವಾಗಿ ಭಿನ್ನವಾಗಿ ಚಿತ್ರಿಸುತ್ತಾಳೆ, ಲೇಖನ ಬರೆಯುತ್ತಾಳೇ, ಸಿನಿಮಾ ನಿರ್ದೇಶಕಿಯಾಗಿ ಲೈಂಗಿಕತೆಯ ಪದರವನ್ನು ಬಿಚ್ಚಿಡುತ್ತಾಳೆ, ನಿರ್ಮಾಪಕ ನಿರ್ದೇಶಕ, ನಾಯಕ ಆಗುತ್ತಿದ್ದ ಗಂಡಿಗೆ ಸೆಡ್ಡು ಹೊಡೆಯುವಂತೆ, ನಿರ್ಮಾಪಕಿ, ನಿರ್ದೇಶಕಿ, ನಾಯಕಿ ಆಗಿ ಬೆಚ್ಚಿ ಬೀಳಿಸುತ್ತಾಳೇ
ಅರವತ್ತರ ಹರೆಯದ ಲೈಂಗಿಕ ಆಕಾಂಕ್ಷೆಗಳನ್ನು ತೆರೆದಿಡುತ್ತಾಳೆ.

ಒಟ್ಟಿನಲ್ಲಿ ಹೆಣ್ಣು , ಅಬಲೆಯಿಂದ ಸಬಲೆಯಾಗುವ ನಿಟ್ಟಿನಲ್ಲಿ ಎಷ್ಟನ್ನು ಗಳಿಸಿಕೊಳ್ಳುತ್ತಿದ್ದಾಳೋ ಅಷ್ಟೇ ಸ್ತ್ರೀ ಸಂವೇದನೆಯನ್ನು ಕಳೆದುಕೊಳ್ಳುತ್ತಿದ್ದಾಳೆ
ಆದರೆ ಈ ಕಳೆದುಕೊಳ್ಳುವ ಗಳಿಸಿಕೊಳ್ಳುವ ಆಟದಲ್ಲಿ ಮಾತ್ರ ನಷ್ಟವಾಗುವುದು ಯಾರಿಗೆ ಲಾಭವಾಗುವುದು ಯಾರಿಗೆ ಎಂಬ ಕ್ಲೀಷೆ ಮನಸನ್ನು ಕಾಡುತ್ತದೆ.
ಆದರೆ ಮತ್ತೊಂದೆಡೆ, ಮದುವೆಯಾಗಿ ಮೂರನೇ ದಿನಕ್ಕೆ ಪಕ್ಕದ ಮನೆಯವಳೊಡನೆ ಓಡಿಹೋದವನ ಹೆಂಡತಿ , ಹೆಣ್ಣುಮಗುವಿನ ತಾಯಿಯಾದೆ ಎಂದು ಮನೆಯಿಂದ ಹೊರದೂಡಿಸಿಕೊಂಡವಳು, ಅವನ ಜೊತೆ ಯಾಕೆ ಮಾತಾಡಿದೆ ಎಂದು ಮುಖ ಮೂತಿ ನೋಡದೆ ಗಂಡನಿಂದ ಹೊಡೆಸಿಕೊಂಡವಳು, ಇವತ್ತು ರಾತ್ರಿ ನನ್ನ ಜೊತೆ ಬರ್ತೀಯಾ ಎಂದು ಕೇಳಿದ ಸೂಪರ್‌ವೈಸರ್ ‌ಬಗ್ಗೆ ಬೆದರುವ ಗಾರ್ಮೆಂಟ್ಸ್ ಹುಡುಗಿ ಇವರೆಲ್ಲಾ ಹೆಣ್ಣಾಗಿಯೇ ಇದ್ದಾರೆ. ಜೊತೆಗೆ ಹೆಣ್ಣಾಗಿಯೇ ಇರುವುದರ ತೊಂದರೆಗಳ ಉದಾಹರಣೆಗಳಾಗಿದ್ದಾರೆ.
ಹಾಗಾಗಿ ಹೆಣ್ಣು ಹೆಣ್ಣಾಗಿಯೇ ಇರಬೇಕೆ ಅಥವ ಮಹಿಳೆಯಾಗಿಯೇ ಬದಲಾಗಬೇಕೆ ಎನ್ನುವ ಪ್ರಶ್ನೆ ಮಾತ್ರ ಮನಸನ್ನು ಮತ್ತಷ್ಟು ಕೊರೆಯುತ್ತದೆ
ಎಲ್ಲರಿಗೂ ಮಹಿಳಾ(ಹೆಣ್ಣಿನ) ದಿನಾಚರಣೆಯ ಶುಭಾಶಯಗಳು

4 comments:

 1. ಹೆಣ್ಣು ಅಬಲೆಯಾಗಬಾರದು. ಸಬಲೆಯಾಗಬೇಕು. ಗಂಡು ಹೆಣ್ಣಿಗಿಂತ ಪ್ರಬಲವಾಗಿರಲು ಯಾವಾಗಲೂ ಬಯಸುತ್ತಾನೆ. ಸಬಲೆಯಾದ ಹೆಣ್ಣಿಗಿಂತ ಸಬಲನಾದರೆ ಅದು ಒಳ್ಳೆಯದಲ್ಲವೇ

  ReplyDelete
 2. ಹೆಣ್ಣು ಹೆಣ್ಣಾಗದಿದ್ದರೂ ಚಿಂತೆಯಿಲ್ಲ, ಆದರೆ ಗಂಡಸನ್ನು ಎದಿರಿಸುವಷ್ಟು ಸಬಲೆಯಾಗಬೇಕು.

  ReplyDelete
 3. ಅಬಲೆಯೋ..
  ಸಬಲೆಯೋ..

  ಅಸಹಾಯಕಳಾಗಬಾರದು...

  ಪ್ರೀತಿ ಮಮತೆಯ ಸುಧೆಯನ್ನು ಯಾವಾಗಲು ಹರಿಸಲಿ..
  ಬಾಳಿಗೆ ಕಣ್ಣಾಗಲಿ..

  ReplyDelete
 4. ವಾವ್ !!! ರೂಪಾ !!! ನಿಜಾ ಹೇಳಲಾ ? ಹೆಣ್ಣು -ಮಹಿಳೆ ಈ ಎರಡರ ವ್ಯತ್ಯಾಸ ಗೊತ್ತಿರಲಿಲ್ಲ ,ಹುಡುಕ್ತಿದ್ದೆ . ನಿಮ್ಮ ಬರಹ ಮೆಚ್ಚಿದೆ .ಸ್ತ್ರೀ --ಇಲ್ಲದೆ ಏನಿದೆ ? ಎಷ್ಟು ಬರೆದರೂ ಬಹಳಷ್ಟಿದೆ .ಅವಳು ಹೇಗಿರಬೇಕು ಅನ್ನುವುದನ್ನು ಯೋಚಿಸುವಂತಿದೆ ನಿಮ್ಮ ಬರಹ .

  ReplyDelete

ರವರು ನುಡಿಯುತ್ತಾರೆ