Tuesday, September 4, 2012

ಶಕುಂತಲಾ


ಏನೆಲ್ಲಾ ಆಸೆ ಹುಟ್ಟಿಸಿದೆ
ರಾಜನಾಗಿಯೂ ಪೋರನಾಗಿ
 ಮನಸ ಕದ್ದ್ದು ನಕ್ಕಿದ್ದೆ

ದುಂಬಿ ಮೊಗವ ಕಾಡಿತು
ದುಂಬಿಯ ಸರಿಸಿದೆಯೋ
ಮನದ ತೆರೆ ಎಳೆದೆಯೋ
ನೀ ಮನಸ ಕಾಡಿದೆ

ನೆಪ ಮಾತ್ರಕೆ ನೆಲದತ್ತ
ನಾ ನೋಟ ಹರಿಸಿದ್ದೆ ,
ಹೃದಯವದು ಆಗಲೇ
 ವಾಲಿತ್ತು ನಿನ್ನೆಡೆಗೆ

ಒಪ್ಪಿಗೆಯೇ? ಎಂದೂ ಕೇಳಲಿಲ್ಲ
ಅಪ್ಪುಗೆಗೆ ಪಕ್ಕಾಗಿದ್ದೆ
ಕೈ ಹಿಡಿದೆಳೆದವನ ಕೈ
ಕೊಸರಲೂ ಮನಸಿದು
ಒಪ್ಪಲಿಲ್ಲ

ಮೈ ಮನ ಸೂರೆಗೊಂಡು
ಮನಸಾದವಳ ಬಳಿಗೆಳೆದು
ನೀನಾಡಿದ ಮಾತುಗಳ
ನಂಬಿದ್ದೆ ಮಗುವಿನಂತೆ


ಕೆನ್ನೆಗೆ ತುಟಿಯ ಉಂಗುರ
-ವನಿಟ್ಟು ,ಚಿನ್ನದ ಉಂಗುರ
 ಕೊಟ್ಟೆ ನೀ, ನಿನ್ನ
ನೆನಪಾಗಲಿಕ್ಕೆ, ಅದು ಬೇಕಿತ್ತೇ?

ಮುನಿ ಶಾಪವೋ  ನಾ ಮಾಡಿದ ಪಾಪವೋ
ನೀ ಕೊಟ್ಟ ಉಂಗುರವೇ ಹಾವಾಗಿ ಕಳೆದಿತ್ತು
 ಎಷ್ಟು ಕಠೋರ ನಿನ್ನೀ ಗಂಡು ಮನ
ಮರೆತಿದ್ದೆ ಅಯ್ಯೋ ನೀ ನನ್ನ

ಮರೆಯುವುದು, ತೊರೆಯುವುದು
ಹೊಳೆ ದಾಟಿದ ಮೇಲೆ ಅಂಬಿಗನ
ಮರೆತಷ್ಟೆ ಸುಲಭವೇ ನಿಮಗೆ
ನಿನ್ನಂಥ ಕಪಟಿಗಳಿಗೆ?

ಬಾಳಬಲ್ಲೇ ನಾನೂ ,ವಿಧಿಯದು ಕ್ರೂರ
ಇರಬಹುದು, ನಿನ್ನಂತೆ ಕಲ್ಲು  ನಾನಲ್ಲ
ಕಂದ  ನನಗೆ ಮಾತ್ರ
ಈತ ಇನ್ನು ನಿನ್ನವನಲ್ಲ