Wednesday, December 4, 2013

ಕಣ್ಣು ಮುಚ್ಹೆಂದೆ ನೀ,

ಕಣ್ಣು ಮುಚ್ಹೆಂದೆ ನೀ, 
ನಾ ಮುಚ್ಚಿದ ಕಣ್ಣಿನಿಂದಲೂ 
ಜಗವ ನೋಡಬಹುದೆಂದು ತಿಳಿಯದೆ 
******************************************
ಲೇಖನಿ ಕಿತ್ತರೇನು ಹಾಳೆ ಹರಿದರೇನು 
ಮನದ ಪುಸ್ತಕದಲ್ಲಿ , ಕಣ್ ಪೆನ್ನಿನಲ್ಲಿ 
ನನ್ನದೇ ಜಗದಲ್ಲಿ ಬರೆಯಬಹುದು 
ನಾ ನಿನ್ನ ಹಂಗಿಲ್ಲದೆ
*************************************

ಸೋಲಿಲ್ಲದ ಸರದಾರ

ಸೋಲು ಗೆಲುವಿನ ಹುಡುಕಾಟವಲ್ಲ 
ಮೇಲು ಕೆಳಗೆಂಬ ಪ್ರಶ್ನೆಯೇ ಇಲ್ಲ 
ನಲಿವು, ನರಳಿಕೆಯೂ ನೋವೇ ಇಲ್ಲ 

ಸೂರೆಗೊಂಡ ಸುಖಕೆ ವಾರಸುದಾರರಾರಿಲ್ಲಿ 
ನೀನೋ?, ನಾನೋ? ,ನಾ ನೀ ಬೇರೆಯಾದದ್ದೆಲ್ಲಿ 
ನಾ ನೀ ,ನೀ ನಾ ಆಗಿ ಹೋದ ಶುಭ ಘಳಿಗೆಯಲ್ಲಿ 

ಸೋತರೂ ,ಮೀಸೆಯಡಿ 
ಗೆಲುವಿನ ನಸುನಗೆ 
ನಿಜ ಗೆದ್ದವನು ನೀ,
ಸೋತವಳು ನಾ ನಿನಗೆ

ಗೆಲುವು ಸೋಲತ್ತಟ್ಟಿಗಿರಲಿ ,
ಮತ್ತೆಂದು ಈ ಆಟ
ಸೋಲಿಲ್ಲದ ಸರದಾರ
ಸೋತ ಈ ನೋಟ

ಅಂದು ಇಂದು

ಅಂದು 
ತಣ್ಣನೆ ಗಾಳಿ ಸರ್ರೆಂದು ನೇವರಿಸಿದಂತೆ 
ಆವರಿಸಿದ ದಟ್ಟ ಪರಿಮಳದ ಸೆಳೆತಕೆ 
ಮನ ಮರಳಾಗಿದ್ದು ನಿಜ 

ಎತ್ತಿಟ್ಟ ಹಂಬಲಗಳ ಮೂಟೆಯೊಂದರಲ್ಲಿ 
ಕಾದು ಕಾದು ಸೊರಗಿದ ಆಸೆಯೊಂದು 
ಚಿಗುರಿ ಹಣ್ಣಾಗಿದ್ದೂ ನಿಜ 

ಪೋಣಿಸಿಟ್ಟ ಮುತ್ತುಗಳು ಸಾಲು 
ಸಾಲಾಗಿ ಕೆನ್ನೆಯ ನೇವರಿಸಿ ಆವರಿಸಿ
ಮತ್ತೇರಿಸಿದ್ದೂ ನಿಜ

ಗುಪ್ತ ಗಾಮಿನಿಯ ಗಮನದ ಗಮ್ಯ
ಬದಲಾಗಿ ದಿಕ್ಕಾಪಾಲಾಗಿ ಸುತ್ತಿ
ಸಂತಸದಿ ಬೆವರಾದದ್ದೂ ನಿಜ

ಇಂದು
ಗಾಳಿ ಸುಂಟರಗಾಳಿಯಾಗಿ
ಮೂಟೆ ಮೊಟ್ಟೆಯಾಗಿ
ಮುತ್ತುಗಳು ಕುತ್ತಾಗಿ ದಾರಿ
ಕತ್ತಲಾಗಿದ್ದೂ ನಿಜ

ಮದ್ಯದಂಗಡಿಯ ಹಾದಿಯಲ್ಲಿ ನಡೆದ ತಪ್ಪಿಗೆ ಮದಿರಾ ಮೋಹಿಯ

ದೀಪದಂತಿದ್ದ ಕಂಗಳಿಂದು 
ಜ್ವಾಲೆಯಾಗಿ ಉರಿದುರಿದು 
ಬೀಳುತಿವೆ ಕಣ್ಣೀರ ಜಲಪಾತಕೂ 
ಸೊಪ್ಪು ಹಾಕದೆ ಆರದೆ 
ಮತ್ತೆ ಅಳಿಸುತಲಿದೆ ಗಾಳಿಯಂತೆ 
************
ಅಂದೊಮ್ಮೆ ಸ್ವೀಕಾರ 
ಎಲ್ಲಿಲ್ಲದ ಮಮಕಾರ 
ಪ್ರೀತಿಯ ಮದರಂಗಿಯಲ್ಲ್ಲಿ 
ಹುದುಗಿತ್ತೇ ಅಪಚಾರ 
************
ಹಚ್ಚಿದ ಬೆಣ್ಣೆಯಲಿ
ಸುಣ್ಣವ ಬೆರೆಸಿದ್ದು
ಕಂಡರೂ ಕಾಣದಂತಿದ್ದಿದ್ದು
ಕಂಗಳ ದೋಷವೋ,
ಮನ ಮುಸುಕಿದ್ದ ಮೋಹವೋ
************
ಉರಿತವೋ ಉಳಿದವನ್ನೂ
ಕಳೆವ ಚೂರಿಯಲುಗಿನ ಇರಿತವೋ
ಸಂಭ್ರಮದ ಮಂಟಪದಲ್ಲಿ ಮಸಣದ
ಜಾತ್ರೆ ಬೇಕೆ ?
************
ಮದ್ಯದಂಗಡಿಯ ಹಾದಿಯಲ್ಲಿ
ನಡೆದ ತಪ್ಪಿಗೆ ಮದಿರಾ ಮೋಹಿಯ
ಪಟ್ಟ ಸರಿಯೇ?

ಇತ್ತಿದ್ದ ದರವ ಅತ್ತೇರಿಸಿ

ಇತ್ತಿದ್ದ  ದರವ ಅತ್ತೇರಿಸಿ
ಅತ್ತಿದ್ದ ಬೆಲೆಯ ಇತ್ತಿಳಿಸಿ
ಕಡಲೆ ಕೆಲಸವ ಗುಡ್ಡ ಮಾಡಿ
ಗುಡ್ಡವ  ಬೆಟ್ಟ ಮಾಡಿ
ಬೆಟ್ಟವ  ಏರಲಾರದೆ
ಉಸಿರೆಳೆದೆಳೆದು
ಉಸ್ಸೆನ್ನುವಷ್ಟ್ರರಲ್ಲಿ ರಾತ್ರಿ
ಅಣಕಿಸುತ್ತಿತ್ತು
ನಿನ್ನ ದಿನ ಮುಗಿಯಿತೆಂದು

ಬೆಂಗಳೂರು ಬೆಚ್ಚೆದ್ದು ಹುಚ್ಚೆದ್ದು ಬೀಳುತಿದೆ

ಬೆಂಗಳೂರು ಬೆಚ್ಚೆದ್ದು
ಹುಚ್ಚೆದ್ದು ಬೀಳುತಿದೆ

ಚಿಗುರು ಮೀಸೆಯ ಪಡ್ಡೆಗಳು
ಗಡಸು ದನಿಯ ಪುಂಡರು
ಒಗರೊಗರು ಮೊಗದೋರು
ಪುಡಿ ಮರಿ ರೌಡಿಗಳು
 ಧಾವಿಸಿ ಬರುತಿರಲು ತನ್ನತ್ತ
ಬೆಂಗಳೂರು ಬೆಚ್ಚೆದ್ದು
ಬೀಳುತಿದೆ

ಉದ್ದ ಜಡೆಯ  ಲಲನೆಯರು
ಸುಂದರ ಸಖಿಯರು
ಸುಮಧುರ ವಾಣಿಯರು
ಶಾಂತ ಕನ್ಯೆಯರು
ತನ್ನೊಡಲಿಗೆ ಬಂದಿಳಿವುದ ನೋಡಿ
ಹುಚ್ಚೆದ್ದು  ಕುಣಿಯುತಿದೆ  

ಜಗದೆಲ್ಲಾ  ಮೋಟಾರು ಕಾರುಗಳು
ಮನೆಗೆರೆಡು  ಬೋರುವೆಲ್ಲುಗಳು
ದಾರಿಗತ್ತು ಬಾರುಗಳು
ಅಲ್ಲಲ್ಲಿ ಮಚ್ಚ ಮಾಮಗಳು
ತನ್ನಲ್ಲಿ ನೆಲೆಸಿರುವುದ ನೋಡಿ
ಗಾಬರಿಯಾಗುತಿದೆ

ಅಮ್ಮ ಅಕ್ಕ ಆಂಟಿ ಎಂಬೆಲ್ಲ
ಬೈಗುಳಗಳು
ಅಂಟಿ  ಕೂತ ಹೆಣ್ಣು
ಗಂಡುಗಳು
ಟಿವಿ ಬಿಟ್ಟಿರದ ಮುದ್ದು
ಕಂದಮ್ಮಗಳು
ಪಾರ್ಲರ್ ದಾರಿ ಹಿಡಿದ
ಎಲ್ಲ್ಲಾ ಲಿಂಗಗಳು
,ತನ್ನೊಳಗೊಂದಾದ ಪರಿಗೆ
ಅಚ್ಚರಿ ಪಡುತಲಿದೆ

ಹುಚ್ಚರಾದ ಮೊಬೈಲ್ ಮಂದಿಗಳು
ಇನ್ನೂ ಸರಿಯಾಗದ ರಸ್ತೆ ಬಿರುಕುಗಳು
ಗಗನ ಚುಂಬಿಸೊ  ಕಟ್ಟಡಗಳು.
ಕಟ್ಟಡದೊಳಗಿನ ಬಿಳಿ ಅಂಗಿಗಳು
ಅಂಗಿಯೊಳಗಿನ ಕರಿಮನಸುಗಳು
ತಾನೇ ಆಗಿ ಹೋದ ಪರಿಗೆ
ನಜ್ಜು ಗೊಜ್ಜಾಗಿದೆ ಬೆಂಗಳೂರು

ಸಾಲ  ಕೊಡುವ ಬ್ಯಾಂಕ್ಗಳು
ಹಣ ಕೊಡುವ ಎಟಿಎಂಗಳು
ಅಲ್ಲಿಂದಲೆ ದೋಚುವ ಕರಗಳು
ಸಾಲ ವಸೂಲಾತಿಯ ಗೂಂಡಾಗಳು
ಕಿರಿಕಿರಿ  ಟೆಲಿಕಾಲರ್ಗಳು
ದಾರಿಯಲಿ  ತಡೆವ  'ಹೊಯ್ಸಳ'ರು
ಹಣ ಕೀಳುವ ಮಂಗಳೆಯರು
ತನ್ನಲ್ಲಿ ನೆಲೆಸಿರುವುದ ನೋಡಿ
ಗಾಬರಿಯಾಗುತಿದೆ

ಅಪರಿಚಿತ ದನಿಗೆ ಬೆರಗಾಗಿ
ಕರಗುವ ಹದಿಹರೆಯದವರು
ಪರಿಚಿತರನ್ನೂ ಅಪರಿಚಿತರಾಗಿಸೊ
ಫೇಸ್ ಬುಕ್ ಇ ಮೇಲ್ ಕಮಾಲುಗಳು
ಎಫ್ ಬಿ ಚಾಟುಗಳು ಕಾಫಿ ಡೇ
ಮೀಟುಗಳು, ಡೇಟಿಂಗ್ಗಳು ,
ಕೊನೆಗೆ ಬ್ರೇಕ್ ಆಗುವ
ಹಾರ್ಟುಗಳು
ಹೆಚಾಗಿ ,ಹಾರ್ಟು
 ಕಳೆದುಕೊಳ್ಳುತ್ತಿದೆ ಬೆಂಗಳೂರು

Wednesday, October 23, 2013

ಸವಕಲಾದವು

ಏನೆನ್ನಲಿ ಗೆಳೆಯ ...
ನಿನ್ನೊಂದಿಗಾಡಿದ ಮಾತುಗಳು
ಮರೆತು ಹೋದವು
ನನ್ನೊಳಗಿದ್ದ ಮುನಿಸು,ಬೇಸರ
ಕರಗಿಹೋದವು

ಇತ್ತ ಆಣೆಗಳು ಕೊಟ್ಟ ಭಾಷೆಗಳು
ಕೂಡಿಟ್ಟ ಸಿಟ್ಟಿನ ಸನ್ನಿವೇಶಗಳು
ಅಬ್ಬರಿಸಿ ದಡಕೊರಗಿ ನೀರಾದ
ಅಲೆಗಳಾದವು  

ಅವನ ಮರೆಯಬೇಕೆಂದುಕೊಂಡ
ಮಾತುಗಳೇ ಸವಕಲಾದವು
ನಾ ನಾನಾಗಬೇಕೆಂಬ ಕನಸುಗಳು
ಗಾಳಿಗೆ ಜಾರಿಬಿದ್ದ ಎಲೆಗಳಾದವು

ಕಂಡ ಚಣ ಅವನ ಮನಸು
ಸಿಹಿ ಕಂಡ ಮಗುವಂತಾಯ್ತು
ಕಹಿಎಲ್ಲ  ಮರೆತು ಕುದಿವ ಒಡಲು
ಶಾಂತ ಕಡಲಾಯ್ತು

Wednesday, September 18, 2013

ನಿದಿರೆಗೆ ರಜವನೀ

********************************
ನಿದಿರೆಗೆ ರಜವನೀ ಎಂದನಾತ ಕೇಳೇ
ಮದಿರೆಯ ನಿಶೆಯ ಸುರಿದನಾತ ಕಣೆ
[ಕುದಿವ ಕಡಲ ಕಲುಕಿದವನಾತ  ಗೆಳತಿ
 
ಆಧರವ ತೋರ್ಬೆರಳಲಿ ಮೀಟಿದನೇ
ನಾಸಿಕದ  ನಾಚಿಕೆಯಾ ತೊಲಗಿಸಿದನೇ
ಕಂಗಳಂಚಿಗೆ ತುಟಿಯ ಸಂಗವನೀಯ್ದ ಕಣೇ  

ಕರಕೆ ಸಲ್ಲದ ಸಲುಗೆಯನಿತ್ತನವ
ನೆಲಕೆ ಮೆಲ್ಲಗೆ  ಸೆರಗ ದೂಡಿದನವ
ಬಾಹುವಿಗೆ ನನ್ನ ಒಡ್ಡಿಕೊಂಡವ

ಆ  ಕರಗದ ಆಸೆಗೆ ಸೋತೆನೇ ನಾ ಗೆಳತಿ
 ಈ ಇಂಗದ ದಾಹಕೆ ನೀರಾದನೇ ಆವ ಗೆಳತಿ


Friday, September 6, 2013

ಭಾನುಮತಿ

"ಅರಮನೆ  ಇನ್ನು ನಮ್ಮದಲ್ಲ ತಾಯಿ ಹೊರಡಬೇಕು  ಎಂದ ಸೋಮಿಕನ ಮೊಗ ನೋಡಿದೆ . ಕರುಣೆಯೋ ಆತಂಕವೋ ದುಗುಡವೋ ,ಅಥವಾ ನೆಲೆ ಇಲ್ಲದ ನನ್ನನ್ನೂ ನೋಡಿಕೊಳ್ಳಬೇಕೆ ಎಂಬ  ಪ್ರಶ್ನೆಯೋ ಕಾಣುತಿತ್ತು . "
"ಮಹಾರಾಜರು  ಕೊನೆಯ ಘಳಿಗೆಯವರೆಗೂ ಹೋರಾಡಿದರು ಮಹಾರಾಣಿ . ಆದರೆ ಯುದ್ದಕ್ಕೆ ವಿರುದ್ದ  ನೀತಿಯನ್ನ  ಬಳಸಿ  ಅವರನ್ನ ಮೋಸದಿಂದ ಕೊಂದರಂತೆ " ಹೇಳುವಾಗ, ದನಿ ಮೆತ್ತಗಾಗಿತ್ತು .
"ಮಹಾಭಾರತದ  ಈ ಹದಿನೆಂಟು ದಿನಗಳಲ್ಲಿ ಮೋಸವಿಲ್ಲದೆ ನಡೆದ ಯುದ್ದದ ದಿನ ನೆನಪಿದೆಯೇ ಸೋಮಿಕ?" ಅವನನ್ನ ಪ್ರಶ್ನಿಸಿದೆ . ಆತ  ಉತ್ತರಿಸಲಿಲ್ಲ .
ಮೋಸದಿಂದ ಶುರುವಾದ ದಳ್ಳುರಿ ಮೋಸದೊಡನೆಯೇ ಅಂತ್ಯವಾಗಿತ್ತು . ಪತಿ ಸತ್ತನೆಂಬ ನೋವು ನನ್ನನ್ನು ಸುಡುತ್ತಿರಲಿಲ್ಲ . ಮಗನನ್ನು ಕಳೆದುಕೊಂಡೆ ನೋವೆ ಆಗುತ್ತಿಲ್ಲ  . ಮೈದುನ , ಅಳಿಯ  ಎಲ್ಲರೂ  ಇಡೀ ಕುರುವಂಶವೇ ನಾಮಾವಷೇಶವಾಗಿತ್ತು . ಆದರೂ ಕಣ್ಣಲ್ಲಿ ನೀರು ಬರುತ್ತಿಲ್ಲ . ಬರುವುದಾದರೂ ಹೇಗೆ . ಇಡೀ ನಾಟಕದ ಉದ್ದಕ್ಕೂ ಬೇಡವೆಂದು ಎಷ್ಟು ಹೇಳಿದರೂ  ಸ್ವಪ್ರತಿಷ್ಠೆಗಳೇ ಪ್ರಾಮುಖ್ಯತೆ ಪಡೆದು. ಹೆಂಗಳೆಯರ ಕಣ್ಣೀರಿಗೆ ಬೆಲೆಯೇ ಇಲ್ಲದಂತಾಗಿ .....................  ಅಷ್ಟಕ್ಕೂ ಹೆಣ್ಣಿನ ಮಾತಿಗೆ ಬೆಲೆ ಎಲ್ಲಿದೆ ಮದುವೆಯಿಂದ ಹಿಡಿದು ಆವಳ  ಸಾವಿನವರೆಗೂ ಅವಳ ನಿರ್ಧಾರ  ಆವಳದೆಲ್ಲಿ  ಆಗಿರುತ್ತದೆ?
ಅಷ್ಟಕ್ಕೂ  ಅಂದು ಸ್ವಯಂವರಕ್ಕೆ ಬಂದವರಲ್ಲಿ ಮನಸನ್ನ ಗೆದ್ದಿದ್ದು ಅವನು.. ಕರ್ಣ . ಸ್ವಾಮಿನಿಷ್ಟೆಗೆ ಮತ್ತೊಂದು ಹೆಸರು  ಕರ್ಣ ...  ಅವನಿಗೂ ನನ್ನ ಮೇಲೆ ಮನಸಿದ್ದಿದ್ದು ಸ್ಪಷ್ಟವಾಗಿತ್ತು. ಆದರೂ  ಪ್ರಾಣ ಮಿತ್ರ ಅದಾಗಲೇ  ದ್ರೌಪದಿಯನ್ನು ಗೆಲ್ಲಲಾಗದ ಅಪಮಾನದಿಂದ ಕುದಿಯುತ್ತಿದ್ದನಾದ್ದರಿಂದ  ನನ್ನನ್ನು ಗೆದ್ದು  ಸ್ವಾಮಿಗೆ ಅರ್ಪಿಸಿದ. ಅಂದೆ ನನ್ನ ಮಿತಿ ಅರ್ಥವಾಗಿತ್ತು
ದುರ್ಯೋದನ ನ ಪಟ್ಟ ಮಹಿಷಿ ಯಾಗಿ ಕಾಲಿಟ್ಟ ದಿನವೇ ನೂರಾರು ವಿಷಯಗಳು . ಕುರುಡು ಮಾವ , ಕಣ್ಣಿದ್ದೂ ಗಂಡನಿಗೆ ಕಣ್ಣಾಗದೇ ಬಟ್ಟೆ ಕಟ್ಟಿಕೊಂಡ ಗಾಂಧಾರಿ.
ಮೊದಲಿನಿಂದಲೂ ದ್ವೇಷದ ಭಾವನೇಯೇ ..ಎಷ್ಟು ಸಲ  ಹೇಳಿದ್ದೆ . ಬೇಡ ಅಸೂಯೆ, ದ್ವೇಷ ಸ್ವ ಪ್ರತಿಷ್ಟೆ ಇವುಗಳ ಅಂತ್ಯ ಅವಸಾನದಲ್ಲೇ ಎಂದು
ಕೇಳಲಿಲ್ಲ
ಕರ್ಣನಿಗೂ ಸೆರಗೊಡ್ಡಿ ಬೇಡಿದ್ದೆ. ನಿನ್ನ ಮಿತ್ರನಿಗೆ ಬುದ್ದಿ ಹೇಳೆಂದು
ಆತನೊಬ್ಬ ಕೆಲಸಕ್ಕೆ ಬಾರದ ಒಳ್ಳೇತನದ ಮಿತ್ರ.
ಒಂದೊಳ್ಳೇ ಕೆಲಸಕ್ಕೆ ಒಬ್ಬರೂ  ಕೈ ಚಾಚುವುದಿಲ್ಲ. ಆದರೆ ಕೆಟ್ಟ ಕೆಲಸಕ್ಕೆ ಹಲವಾರು ಮನಸುಗಳು ಜೊತೆಗೂಡುತ್ತವೆ
ಹಾಗೆಯೇ ಆಯ್ತು. ಕೋತಿ ಹೆಂಡ ಕುಡಿದಂತೆ ಆಡತೊಡಗಿದರು ಇವರು.
ಇವರ ತಾಳಕ್ಕೆ ತಕ್ಕಂತೆ ಜೊತೆಗಾರರು
ಅಂದು ದ್ಯೂತದ ದಿನ ಬೇಡಿದ್ದೆ. "ಬೇಡ ದಯವಿಟ್ಟು ನಿಲ್ಲಿಸಿ
ನಿಮ್ಮ ಕಿಚ್ಚು ಪಾಂಡವರ ಮೇಲಿರಲಿ . ಆ ಸಾಧ್ವಿ ದ್ರೌಪದಿಯ  ಮೇಲೇಕೆ" ಎಂದು .  ಕೇಳಲಿಲ್ಲ. ಸೀರೆ ಕಿತ್ತೆಸೆದರು... ಕಿತ್ತೆಸೆದದ್ದು ಬರೀ ಸೀರೆಯನ್ನಲ್ಲ ಹೆಣ್ತನದ  ತಾಳ್ಮೆಯ ಸೆರಗನ್ನು.

ತುಂಬಿದ ಸಭೆಯಲ್ಲಿ  ಆದ ಅವಮಾನವನ್ನು ಹೇಗೆ ತಾನೇ ಮರೆತಾಳು . ಮೊದಲೇ ಅಗ್ನಿ ಶಿಖೆ ...  ಬಂದವಳು ಇಡೀ ಕುರುವಂಶವನ್ನೇ ನಿರ್ನಾಮ ಮಾಡಿದಳು . ಮೊತ್ತ ಮೊದಲಿಗೆ ಹೆಣ್ಣೊಬ್ಬಳು ಸೊಲ್ಲೆತ್ತಬಹುದೆಂದು  ಲೋಕಕ್ಕ್ಕೆ  ತಿಳಿಸಿಕೊಟ್ಟವಳು .

ಎಲ್ಲಾ ಮುಗಿಯಿತು ಅವಳ ಐವರೂ ಪತಿಯಂದಿರು ಉಳಿದರು ಆದರೆ ಮಕ್ಕಳನ್ನೂ ಕಳೆದುಕೊಂಡಳು ನನ್ನಂತೆಯೇ . ಕೊನೆಗೆ ಏನು ಸಾಧಿಸಿದಂತಾಯ್ತು . ರಕ್ತದ ಹೊಳೆಯಲ್ಲಿ ಮತ್ತೆ  ಇರಬೇಕೇ?
ಕುಂತಿ ಹೇಳಿದಳು " ಭಾನುಮತಿ ನೀನು ನನ್ನ ಸೊಸೆಯೇ ಇಲ್ಲೇ ಇರು " ಎಂದು.  ಹಂಗಿನರಮನೆ ಬೇಕೆ ?
ಲಕ್ಷ್ಮಣ ನ ಮಡದಿ ಇನ್ನೂ ಚಿಕ್ಕ ವಯಸ್ಸು ಪಾಪ " ಅತ್ತೆ ನಮ್ಮ ಊರಿಗೆ ಬಂದು ಬಿಡಿ " ಎಂದಳು.
ಅದೂ ಹಂಗಿನರಮನೆಯೇ . ಇನ್ನೂ ತವರು ಯಾರಿದ್ದಾರೆ ಅಲ್ಲಿ ತನ್ನವರೆನ್ನುವವವರು.  ಯಾರೂ ಇಲ್ಲದೆಡೆ ಹೋಗಿಬಿಡೋಣವೆನಿಸುತ್ತಿದೆ . ವಾನ ಪ್ರಸ್ತ್ಯ ವೇ ಪ್ರಾಶಸ್ತ್ಯ .
ಎದ್ದೆ . ಸೋಮಿಕನಿಗೆ ಕೊರಳಲಿ ಉದ್ದ ಹಾರವೊಂದನ್ನು ಕೊಟ್ಟು ನಡೆದೆ .. ಕಾಡಿನತ್ತ  ....
(ಭಾನುಮತಿ ಆಗಾಗ ಕಾಡುತ್ತಾಳೆ ನನ್ನ್ನ ಅವಳ ಅಂತರಂಗ ನಿರೂಪಿಸುವ  ಸಣ್ಣ ಪ್ರಯತ್ನ

Monday, July 1, 2013

ಲೋಪ ಮುದ್ರೆ ..........................ಕಾವೇರಿಯಾಗಿ


"ಲೋಪ ಮುದ್ರೆ ಬಂದೆಯಾ ?"
ಅಗಸ್ತ್ಯನ ದನಿಗೆ ಎಚ್ಚೆತ್ತೆ.. ಈಗಷ್ಟೇ ಊಟ ಬಡಿಸಿ , ಆತ ಊಟ ಮುಗಿಸಿ ಹೊರಗೆ ಹೋದ .. ವಿಶ್ರಮಿಸಲೆಂದು  ಚಾಪೆಯ ಮೇಲೆ ಪವಡಿಸಿದವಳಿಗೆ  ಅಸಾಧ್ಯ ನಿದ್ದೆ .ಕೊಂಚ ಕ್ಷಣಗಳಾಗಿರಬೇಕು . ಆಗಲೇ ಮತ್ತೆ ಬಂದನಲ್ಲ
ಒಂದರೆ ಘಳಿಗೆ ನನ್ನ ಬಿಟ್ಟಿರಲಾರ ಈತ. ಎಲ್ಲಿ ಹೋದರಲ್ಲಿ ಆತನ ಜೊತೆ ನಾನಿರಲೇಬೇಕು ಅದೇನು ಪ್ರೀತಿಯೋ, ಮೋಹವೋ, ಮತ್ತಾರೂ ಮೋಹಿಸಬಾರದೆಂಬ ಜಾಗರೂಕತೆಯೋ ಗೊತ್ತಿಲ್ಲ
ಜನರೆಲ್ಲಾ ನನ್ನನ್ನು ಅಗಸ್ತ್ಯನ ಕಮಂಡಲದಲ್ಲಿ ಬಂಧಿಯಾದವಳೆಂದು ತಮಾಷೆ ಮಾಡುತ್ತಾರೆ. ಹಾಗೆಯೇ ನೀರಾಗಿಯೇ ಬಿಡುತ್ತೆನೋ ಏನೋ. ನನ್ನದೆಂಬ ಆಸೆ ಇಲ್ಲ. ಆತ ಕೂರೆಂದರೆ ಕೂರುವುದು, ನಿಲ್ಲೆಂದ ಕಡೆ ನಿಲ್ಲುವುದು. ಒಟ್ಟಿನಲ್ಲಿ ಸೇರಿದ ಪಾತ್ರೆಯ ರೂಪಕ್ಕೆ ತಕ್ಕಂತೆ ಬದಲಾಗುವ ನೀರಿಗೂ ನನಗೂ ವ್ಯತ್ಯಾಸವಿಲ್ಲದಂತಾಗಿದೆ ...

ಈ ದಕ್ಷಿಣ ಭಾಗಕ್ಕೆ ನಾನು ಬಂದು ಸೇರಿದುದು ಒಂದು ನಿಗೂಢ ರಹಸ್ಯವೇ ಸರಿ

ಸ್ವಯಂ ಈಶ್ವರ ಮತ್ತ್ ಗಂಗಾಮಾತೆ ನನ್ನ ತಂದೆ ತಾಯಿ . ಅವರಿಂದ ನನ್ನ ದತ್ತು ಪಡೆದು ಬಂದವ ಈ ಅಗಸ್ತ್ಯ. ಈ ದಕ್ಷಿಣ ಭಾಗದಲ್ಲಿ ನೀರು ಇಲ್ಲದೆ ನದಿಯೂ ಇಲ್ಲದೆ ವ್ಯವಸಾಯವಿಲ್ಲದೆ ದನಕರುಗಳು, ಜನರು ಸಾಯುತ್ತಿದ್ದರಂತೆ . ಉತ್ತರದಲ್ಲಿ ಯಥೇಚ್ಚವಾಗಿ ನೀರಿದ್ದುದರಿಂದ ಅಲ್ಲಿಂದ ಬಂದ ಹೆಣ್ಣೊಬ್ಬಳು ಇಲ್ಲಿನ ನೀರಿಗೆ ಹಾರವಾದರೆ ನದಿ ನೀರು ಉಕ್ಕಿ ಹರಿಯುತ್ತದೆ ಎಂಬ ಕಾರಣಕ್ಕಾಗಿ ಈ ಅಗಸ್ಯ್ತ ತನ್ನನ್ನು ಅಲ್ಲಿಂದ ದತ್ತು ಪಡೆದದ್ದು. ಆಗಿನ್ನೂ ಪುಟ್ಟ ಕಂದಮ್ಮಳಾಗಿದ್ದ ನನ್ನನ್ನು ತಂದೆಯಂತೆ ಬೆಳೆಸುತ್ತಿದ್ದವನು ಯಾವಾಗ ಯೌವ್ವನ ಕಾಲಿಟ್ಟಿತೋ ಅಂದಿನಿಂದ ಪ್ರೇಮಿಸತೊಡಗಿದ. ಅದೂ ಹುಚ್ಚು ಪ್ರೀತಿ. ನನ್ನನ್ನ ಇಲ್ಲಿ ಕರೆತಂದ ಕಾರಣವನ್ನೆ ಮರೆತುಬಿಟ್ಟ.  ಸದಾ ನನ್ನನ್ನ ಜೊತೆಯೇ ಕರೆದುಕೊಂಡು ಹೋಗುತ್ತಿದ್ದ.. ಕೆಲವೊಮ್ಮೆ ಅವನ ಉತ್ತರೀಯಕ್ಕೆ ನನ್ನ ಸೆರಗನ್ನ ಗಂಟು ಹಾಕಿ ಕಾಯುತ್ತಿದ್ದ. ಮದುವೆಯ ದಿನವಿನ್ನೂ  ಕೂಡಿ ಬಂದಿರಲಿಲ್ಲವಂತೆ. ಆದ್ದರಿಂದ ನನ್ನ ಕೌಮಾರ್ಯ ಹಾಗೆಯೇ ಇತ್ತು. ಅದು ಈ ಮುಪ್ಪಡರಿದ ಮುನಿವರ್ಯನಿಗೇ ಮುಡಿಪು ಎಂದಾಗಿತ್ತು

"ಮುದ್ರಾ  ವನವಿಹಾರಕ್ಕೆ ಹೋಗೋಣಾ ಬಾ" ಕಟ್ಟಿದ ಹಸುವಂತೆ ಅವನ ಹಿಂದೆ ಹೊರಟೆ.. ಗಮಿಸುತಿದ್ದಂತೆ ಮತ್ತೆ ಯೋಚನೆಗಳು ಧಾಳಿ ಇಡಲಾರಂಭಿಸುತ್ತಿದ್ದವು

ನಿಜ ಊಟ ತಿಂಡಿಗೆ ಅಥವ ವಿಹಾರಕ್ಕೆ ಕೊರತೆ ಏನಿಲ್ಲ ಇವನೊಡನೆ . ಆದರೂ ಮನುಷ್ಯನಾದವನಿಗೆ ಬೇಕಾದ ಯಶ್ಚಿಕತ್ ಸ್ವಾತಂತ್ರ್ಯ ಸಿಗದ ಬಾಳೂ ಒಂದು ಬಾಳೇ?

ಒಂದು  ಹೆಜ್ಜೆ ನಡೆಯಬೇಕಾದರೂ ಇವನಾಣತಿ ಬೇಕು, ಇಲ್ಲವಾದಲ್ಲಿ ಮುನಿ ಶಾಪದ ಬೀತಿ

"ಸುತ್ತಲೂ ಅರಳಿದ ಹೂಗಳು, ಹಸಿರು ಕಾಡು, ವನದೇವತೆಯಂತೆ ಜೊತೆಯಲ್ಲಿ ನೀನು.ನನ್ನ ಭಾಗ್ಯವೇ ಭಾಗ್ಯ"

ಮುನಿವರ್ಯ ಗುನುಗುತ್ತಿದ್ದ. ಅದು ಕೇಳಿದರೂ ಕೇಳದಂತೆ ನಡೆಯುತ್ತಿದ್ದೆ..

ನದಿಯೊಂದು ಹರಿಯುತ್ತಿತ್ತು.. ಶಾಂತವಾಗಿ ತನಗಿಷ್ಟ ಬಂದೆಡೆ .. ಯಾರನ್ನೂ ಕೇಳದೆ , ಯಾರನ್ನೂ ಲೆಕ್ಕಿಸದೇ ತನ್ನಷ್ಟಕ್ಕೆ ತಾನು ಹರಿಯುತಿದೆ..

"ಇಲ್ಲೇ ಇರು ಮುದ್ರಾ ಇಲ್ಲಿಂದ ಕದಲಬೇಡ. ನಾನು  ಒಂದಷ್ಟು ಹೂವನ್ನು ಆರಿಸಿ ತರುತ್ತೇನೆ ನಿನ್ನ ಈ ನೀಳ ಕೇಶರಾಶಿಗಾಗಿ, ಈ ಕಮಂಡಲ ನಿನ್ನಬಳಿಯೇ ಇರಲಿ"

ಅಗಸ್ತ್ಯ ಅಲ್ಲಿಂದ ಹೊರಟ.. ಅವನ ಬೆನ್ನನ್ನೆ ದಿಟ್ಟಿಸುತ್ತಾ  ಹಾಗೆ  ನದಿಯದಂಡೆಯಲ್ಲಿ ಕೂತೆ

ಚಿಟ್ಟೆಯೊಂದು ಹಾರುತ್ತಿತ್ತು.. ಹೂವಿಂದ ಹೂವಿಗೆ. ತನಗೆ ಬೇಕಾದಂತೆ ಅತ್ತಿತ್ತ ಆಟವಾಡುತ್ತಾ..

ಜಿಂಕೆ ಮರಿಯೊಂದು ಚಂಗನೆಗರಿ ಓಡಿತ್ತು ತನ್ನವರ ಕೂಡಿಕೊಳ್ಳುವ ಹಂಬಲದಲ್ಲಿ

ನಾ ಮಾತ್ರ ಹೀಗೆಯೇ  ಕಲ್ಲಾಗಿ............

ಮುನಿವರ್ಯನ ಕಮಂಡಲ ಕೈ ತಾಗಿ ಯಾವ ಮಾಯದಲ್ಲೋ ಕೆಳಗೆ ಬಿತ್ತು...

ದುಡದುಡನೆಂದು ಸದ್ದು ಮಾಡುತ್ತಾ ಹೋಗುತ್ತಿದ್ದುದ್ದನ್ನು ಹಿಡಿಯಬೇಕು . ಇಲ್ಲವಾದಲ್ಲಿ ಮುನಿಗೆ ಕೋಪ ಬಂದು ಬೈದಾನು ಎಂದುಕೊಳ್ಳುತ್ತಲೇ ಓಡಿದೆ. ಅದೂ ಓಡುತ್ತಿತ್ತು ನನ್ನೊಡನೆ ಹಮ್ಮಿಗೆ ಬೀಳುವಂತೆ. ಥೇಟ್ ಮುನಿವರ್ಯನಂತೆಯೇ ಜಂಭದಿಂದ.

ಹಾಗೆ ಓಡುತ್ತಿದ್ದವಳ ತಡೆದು ನಿಲ್ಲಿಸಿದ್ದು ಆಜಾನುಬಾಹು ಆ ತರುಣನ ನೆರಳು.

ತೀರ ಸನಿಹದಲ್ಲಿ ನಿಂತವನ ಬಿಸಿಯುಸಿರು ನನ್ನ ತಾಗುತ್ತಿದ್ದಂತೆಯೇ ಮೈ ಮರೆಯುವಂತಾಯ್ತು.
ಮೊಗ ಬಿಸಿಯಾಯ್ತು ಹಾಗೆ ಒಮ್ಮೆ ಉಸಿರೆಳೆದುಕೊಂಡೆ. ಆತನ ಕಂಗಳನ್ನು ಎದುರಿಸದಾದೆ. ಸುಮ್ಮನೆ ತಲೆ ತಗ್ಗಿಸಿನಿಂತವಳ ಕೈ ಹಿಡಿದಾಗ ಮೈ ಜುಮ್ಮೆಂದು ಮತ್ತೂ ಭೂ ಮುಖಿಯಾದೆ. ಕೊಂಚ ಕಾಲವಾಯ್ತೇನೋ
ಅಷ್ಗ್ತೆ

"ಜಾರಿಣಿ" ಅಬ್ಬರದ ದನಿಗೆ ಬೆಚ್ಚಿಬಿದ್ದೆ

ಆ ಯುವಕನೂ ಬೆದರಿದನೆಂದೆನಿಸುತ್ತದೆ. ಮುನಿವರ್ಯರೆಂದರೆ ಸಾಮಾನ್ಯವೇ?

ಶಾಪಕ್ಕೆ ಬೆದರಿ ಆತ ಅಲ್ಲಿಂದ ಕಾಲು ಕಿತ್ತ.

ಉಳಿದವಳು ನಾನು ಮತ್ತು ಅಗಸ್ತ್ಯ

"ಚಂಚಲತೆಗೆ ಮತ್ತೊಂದು ಹೆಸರೇ ಹೆಣ್ಣೆಂದು ನೀನು ಇಂದು ನಿರೂಪಿಸಿದೆ. ಮೊದಲೇ  ನಿರ್ಧರಿಸಿದಂತೆ ನಿನ್ನನ್ನ ಕೆರೆಗೆ ಹಾರವಾಗಿ ಮಾಡಿರಬೇಕಿತ್ತು.. ಇನ್ನೊಬ್ಬನಲ್ಲಿ ಅನುರಕ್ತೆಯಾದ ನೀನು ನನಗೆ ಬೇಡ ಈಗಲೇ ಇದೇ ನದಿಗೆ ಬಿದ್ದು ಸಾಯಿ"

ನನಗೂ ಅದೇ ಬೇಕಿತ್ತು
ಬೇಸತ್ತಿದ್ದೆ.
ಸಾಯುವುದಕ್ಕೂ ಸ್ವಾತಂತ್ರ್ಯವಿಲ್ಲ
ಬದುಕಿಗೂ
ಈ ಬದುಕಿಗೆ ವಿದಾಯ

ಮತ್ತುಚ್ಚರಿಸಲಿಲ್ಲ
ಸುಮ್ಮನೇ ನೀರಿನತ್ತ ನಡೆದೆ... ನೀರಲಿ ಲೀನವಾಗಲಾರಂಭಿಸಿದೆ

ಅಗಸ್ತ್ಯ ಅಬ್ಬರಿಸಿ ನುಡಿಯುತ್ತಿದ್ದ
"ಈ ನದಿ ಕಾವೇರಿ ಎಂದು ಹೆಸರು ಪಡೆಯಲಿ, ನಿನ್ನ ಹೆಸರೂ ಕೂಡ ಇದಕ್ಕೆ ಬೇಡ ... ಕಾವೇರಿ....................................."

ಕಾವೇರಿ ಎಂದುಚ್ಚರಿಸುತ್ತಾ  ನಾ ಮುಂದೆ ನಡೆಯತೊಡಗಿದೆ

ಆಬ್ಬರಿಸಿ ಬರುತ್ತಿತ್ತು ನದಿಯ ನೀರು ಮುಂದೆ ಮುಂದೆ

ಕಾಲು, ಹೊಟ್ಟೆ, ಎದೆಯನ್ನೆಲ್ಲಾ ತಡವಿ ಮುದ್ದಿಸುತ್ತಾ ನನ್ನ ಸೆಳೆದುಕೊಳ್ಳಲಾರಂಭಿಸಿತು

ಕಾವೇರಿಯಾಗತೊಡಗಿದೆ ನಾನೂ
ಅದೇ ನೀರಿನಂತೆ ನಾನೂ
 ಹರಿಯಬೇಕು... ಹರಿಯುತ್ತಲೇ ಇರಬೇಕು

ಶ್ವಾಸ ಕಟ್ಟತೊಡಗಿತು ಕಣ್ ಮುಚ್ಚಲಾರಂಭಿಸಿದೆ
ಲೋಪಮುದ್ರೆ ಕಾವೇರಿಯಾಗಿ ಪರಿವರ್ತಿತಳಾಗತೊಡಗಿದಳು ...ಬಯಸಿದ ಸ್ವಾತಂತ್ರದೊಂದಿಗೆ
ನೀರಿನಲ್ಲಿ ವಿಲೀನವಾದಳು






Sunday, May 5, 2013

ನಾ ಮಾತುಗಾತಿಯಲ್ಲ ನೀ ಮಾತು ಕಲಿಸಲಿಲ್ಲ


ನಾ ಮಾತುಗಾತಿಯಲ್ಲ ನೀ ಮಾತು ಕಲಿಸಲಿಲ್ಲ 
ಆದರೂ ನಿನ್ನೊಡನೆ ನನ್ನ ಮಾತು ನಿಲ್ಲುವುದೇ ಇಲ್ಲ  

ನಾ ಕನಸುಗಾತಿಯಲ್ಲ , ನೀ ಕನಸಲ್ಲಿ ಬರುವುದಿಲ್ಲ 
ಆದರೂ ನನ್ನ ಕನಸು ನಿನ್ನ ಬಿಟ್ಟು ಮುಂದೆ  ಸಾಗುವುದೇ ಇಲ್ಲ 

ನಾ ಪ್ರೀತಿಗಾಗಿ ಅಲ್ಲ, ನೀ ನನ್ನ ಪ್ರೀತಿಸಲೇ ಇಲ್ಲ 
ಆದರೂ ಈ ಮನ ನಿನಪ್ರೀತಿಗಾಗಿ ಮಿಡಿಯುತಿದೆಯಲ್ಲ  

ನಾ ಅಳುವವಳಲ್ಲ , ನೀ ನನ್ನ  ಅಳಿಸಲೇ ಇಲ್ಲ 
ಆದರೂ ನಿನಗಾಗಿ ನಾನತ್ತ ಇರುಳಿಗೆ ಲೆಕ್ಕವೇ ಇಲ್ಲ  

ನಾ ನಿನಗೇನೂ  ಅಲ್ಲ , ನೀ ನನಗಾಗಿ ಅಲ್ಲ 
ಆದರೂ ಜೀವವಿದು ನಿನಗಾಗಿ ಕಾದಿದೆಯಲ್ಲ 

Tuesday, April 30, 2013

ದಾರೀಲಿ ಒಬ್ಬಳೇ ಹೋಗ್ತಿದೀನಿ ಕೊಂಚ ದೂರ ಕಂಪೆನಿ ಕೊಡ್ತೀರಾ?


"ದಾರೀಲಿ ಒಬ್ಬಳೇ ಹೋಗ್ತಿದೀನಿ ಕೊಂಚ ದೂರ ಕಂಪೆನಿ ಕೊಡ್ತೀರಾ?"
ಅವಳ ಮಾತಿಗೆ ಬೆಕ್ಕಸ ಬೆರಗಾಗಿದ್ದೆ
ಹೀಗೂ ಉಂಟೆ.
"ನಾನಾಆಆಆಅ?"
"ಹೌದು ನೀವೆ .ತುಂಬಾ ದೂರ ಒಬ್ಬಳೆ ನಡೆದೂ ನಡೆದೂ ಬೇಸರ ಬಂದಿದೆ.. ಆದರೆ ಸೇರಬೇಕಿರೋ ಕಡೆ ಒಬ್ಬಳೇ ಹೋಗೋದು ಅಂತ ನಿರ್ಧರಿಸಿದ್ದೇನೆ.. ಆದ್ದರಿಂದ ನೀವು ಜೊತೆಗೆ ನಡೀಬೇಕು.. ಅದೋ ಅಲ್ಲಿ ಕಾಣುತ್ತಲ್ಲ ಆ ಪರ್ವತದ ತುದಿಯಾಚೆ ಇರೋ ಒಂದು ಸಣ್ಣ ಹೂವು ನನ್ನ ಗಮ್ಯ"
"ರೀ ನೀವ್ಯಾರು ಅಂತ ಗೊತ್ತಿಲ್ಲ ಹೇಗೆ ಬರೋದು.. ನಾನ್ಯಾರು ಅಂತ ಗೊತ್ತಿಲ್ಲ ಹೇಗೆ ನಂಬ್ತೀರಾ?"
"ಪರಿಚಯವಾಗೋ ಮೊದಲು ಯಾರೂ ಪರಿಚಿತರಾಗಿರಲ್ಲ, ನಿಮ್ಮನ್ನ ನೋಡಿ ನೀವು ನನ್ ಜೊತೆ ಬರಬಹುದು ಅನ್ನಿಸ್ತು. ಕೇಳಿದೆ. ಆಗತ್ತಾ ಇಲ್ವಾ ಹೇಳಿ"..
ಅಬ್ಬಾ ಎಂಥಾ ಖಡಕ್ ಮಾತು ನೋಡಿದರೆ ಒಳ್ಳೆಯವಳ ಹಾಗೆ ಕಾಣ್ತಾಳೆ, ಜೊತೆಗೆ ಚೆನ್ನಾಗೂ ಇದ್ದಾಳೆ. ಒಂದು ಕೈ ನೋಡೆ ಬಿಡೋಣ ಅಂತ ನನ್ನೆಲ್ಲಾ ಕೆಲಸಗಳನ್ನ ಬದಿಗಿಟ್ಟು ಅವಳೊಂದಿಗೆ ಹೊರಡಲನುವಾದೆ
"ಆಯ್ತು ಬರ್ತೀನೆ. ನಡೀರಿ"
"ಸೋ ನೈಸ್ ಆಫ್ ಯು... "
"ಎಲ್ಲಿಂದ ಬರ್ತೀದೀರಿ ಏನ್ ಕತೆ... ಹಿಂಗೆ ಚೆಂದ ಇರೋ ಹುಡುಗೀರು ಒಬ್ಬೊಬ್ಬರೇ  ಓಡಾಡ್ಬೇಡಿ,,ಕಾಲ ಕೆಟ್ಟು ಹೋಗಿದೆ."
ಮಾತಿಗೇಳೀಲೇಬೇಕಿತ್ತು
"ನಾನು ಬರ್ತಿರೋದು ಎಲ್ಲಿಂದ ಅನ್ನೋದು ನಂಗೇ ಗೊತ್ತಿರದ ವಿಷಯ. ಯಾಕೆಂದರೆ ನನಗೆ ನೆನಪಿದ್ದಾಗಿಂದಾನೂ ಜೀವನ ಅಲೆದಾಟದಲ್ಲೆ ಸಾಗಿದೆ.. ಅಪ್ಪ ಅಮ್ಮ ಊಹೂ ನೆನಪಿಲ್ಲ... ಕತೆ ಇನ್ನೂ ಶುರೂನೆ ಆಗಿಲ್ಲ... "
ತಲೆ ಕೆಡ್ತಿತ್ತು. ಇವಳ ಜೊತೆ ಬಂದು ತಪ್ಪು ಮಾಡಿದೆ ಅನ್ನಿಸ್ತಿತ್ತು
"ಅಲ್ಲ ಹುಚ್ಚರ ಥರ ಮಾತಾಡ್ತಿದೀರ ಅಂತ ಅನ್ನಿಸ್ತಿಲ್ವಾ?"
"ಹೌದು ಕೆಲವರಿಗೆ ನಾನು ಹುಚ್ಚಿ ಅಂತಾನೆ ಅನ್ನಿಸುತ್ತೆ..ಆದರೆ ನಾನು ಹುಚ್ಚಿ ಅಲ್ಲ "
"ಮತ್ತೆ ಯಾಕೆ ಈ ಥರ ಒಗಟಿನ ಜೀವನ?ಮಾತು"
"ನಿಮಗೆ ಒಗಟು ಅನ್ಸುತ್ತೆ. ಆದರೆ ನನಗೆ ಅದು ನನ್ನ ಮಾತು...  ನನ್ನ ಜೀವನದಲ್ಲಿ ಏನು ನಡೆದಿದೆ ಅಂತ ನಿಮಗೆ ಹೇಗೆ ಗೊತ್ತಾಗುತ್ತೆ?"
"ಬಟ್ ನಂಗೆ ಅರ್ಥಾ ಆಗ್ತಿಲ್ಲ ನಿಮ್ಮ ಮಾತು ಎಲ್ಲ"
"ಬೇಡ ಅರ್ಥ ಆಗೋ ಅಷ್ಟು ಸುಲಭವಾಗಿ ನಾನು ಯಾರಿಗೂ ದಕ್ಕೋಳಲ್ಲ. ಹಾಗಾಗಿ ಅರ್ಥ ಮಾಡಿಕೊಂಡರೂ ಉಪಯೋಗ ಇಲ್ಲ"
"ಯಾಕೋ ನಿಮ್ಮ ಜೊತೆ ಬಂದು ತಪ್ಪು ಮಾಡಿದೆ ಅನ್ಸುತ್ತೆ"ಸೋಲೊಪ್ಪಿಕೊಂಡೆ
"ಹಾಗಿದ್ದರೆ ನಿಮ್ಮ ತಪ್ಪನ್ನ ಇಲ್ಲೇ ನಿಲ್ಲಿಸಿ. ನೀವು ವಾಪಾಸ್ ಹೋಗಬಹುದು"
"ಅದೇ ಬೆಟರ್ ಅನ್ಸುತ್ತೆ. ಮತ್ತೆ ಎಂದಾದರೂ ಸಿಗೋಣ ಬರ್ತೀನಿ" ಹಿಂದೆ ತಿರುಗಿ ಹೋಗುತ್ತಿದ್ದಂತೆ ಕೇಳಿಸಿತು ಅದೇ ದನಿ ಮತ್ತಾರದೋ ಬಳಿಯಲ್ಲಿ
"ದಾರೀಲಿ ಒಬ್ಬಳೇ ಹೋಗ್ತಿದೀನಿ ಕೊಂಚ ದೊರ ಕಂಪೆನಿ ಕೊಡ್ತೀರಾ?"

Tuesday, April 2, 2013

ರಾಧೆ ನನ್ನ ಕಣ್ಣಲ್ಲಿ...........


ನೆನ್ನೆ ಒಬ್ಬರು ಕಳಿಸಿದ ರಾಧಾಕೃಷ್ಣರ ಚಿತ್ರವನ್ನ ನೋಡಿ ಅನಿಸಿದ್ದು
ಇಲ್ಲಿಯವರೆಗೂ ನನಗೆ ಕಗ್ಗಂಟಾಗಿರುವುದೇ ಈ ರಾಧಾ ಕೃಷ್ಣರ ಕಲ್ಪನೆ
ಕೇವಲ  ಕ್ರಿಷ್ಣನ ಗೋಕುಲ  ನಿರ್ಗಮನದವರೆಗೆ ಮಾತ್ರ ರಾಧೆ ಇರುತಾಳೆ . ನಂತರ ಆಕೆ ಏನಾದಳು . ಎಲ್ಲಿ ಹೋದಳು?
ಮದುವೆಯಾದ ಹೆಣ್ಣೊಬ್ಬಳು ತನಗಿಂತ ಕಿರಿಯನೊಬ್ಬನನ್ನು ಪ್ರೀತಿಸುತ್ತಾಳೆ ಅವರಿಬ್ಬರ  ನಡುವೆ ಇದ್ದಿದ್ದು ನಿಷ್ಕಾಮ ಪ್ರೀತಿಯೇ ಸ್ನೇಹವೇ? ರಾಧಾಕೃಷ್ಣರ ಪ್ರೇಮವನ್ನ ಅನುಪಮವೆಂದು ಕೊಂಡಾಡುವ ಲೋಕ ಅದೇ ಬಗೆಯ ಸಂಬಂಧಕ್ಕೆ ಅನೈತಿಕತೆ ಎಂಬ ಹೆಸರನ್ನು ಇಡುತ್ತೆ.
ಆತನನ್ನು ನೋಡಲು ಮಗುವನ್ನು ಪತಿಯನ್ನು ಬಿಟ್ಟು ಯಮುನೆಯ ತೀರಕ್ಕೆ ಬರುತ್ತಾಳೆ ಅದು ಕೃಷ್ಣನ ಮೇಲಿರುವ ಭಕ್ತಿ ಎನ್ನುತ್ತದೆ ಪುರಾಣ. ಅದೇ ಬಗೆಯಲ್ಲಿ ಮದುವೆಯಾದ ಹೆಣ್ಣೊಬ್ಬಳು  ತನಗಿಷ್ಟವಾದವರನ್ನ ಹುಡುಕುತ್ತಾ ಹೊರಟರೆ ಲೋಕ ಕಳಂಕಿನಿ ಎಂಬ ಪಟ್ಟ ಕಟ್ಟುತ್ತದೆ
ಒಂದು ಕಡೆ ವೈವಾಹಿಕ ಬಂಧಕ್ಕೆ  ಕಟ್ಟು ಪಾಡು ಎಸೆಯುವ  ಈ ಲೋಕ, ಅದೇ ವಿವಾಹಕ್ಕೆ ಹೊರತಾದ ಕಲ್ಪನೆಗಳಿಗೆ ಮಣೆ ಹಾಕುತ್ತದೆ.
ಆದರೂ ರಾಧೆ ನನಗೆ ಅಂತಲ್ಲ ಎಲ್ಲಾ ಹೆಂಗಸರಿಗೂ ಒಂದು ಬಗೆಯ ಕುತೂಹಲಭರಿತ ರಸಕಾವ್ಯ
ಆಕೆ ಏಕೆ ಮತ್ತು ಹೇಗೆ ಕೃಷ್ಣನಲ್ಲಿ ಅನುರಕ್ತೆಯಾದಳು
ಎಲ್ಲೂ ಆಕೆ ಪತಿಯಿಂದ ಬೇಸತ್ತ ಅಥವ ನೊಂದ ಸನ್ನಿವೇಶಗಳು ಉಲ್ಲೇಖವಾಗಿಲ್ಲ. ಆದರೂ ಆಕೆ ಅನುರಕ್ತೆಯಾದದ್ದು ಕೃಷ್ಣನ ಚೆಲುವಿಗೆ ಆತನ ತುಂಟಾಟಕ್ಕೆ ಮತ್ತು ಮುರಳಿಗಾನಕ್ಕೆ
ಇಂದಿಗೂ ರಾಧೆ ಕೃಷ್ಣರ ಸಂಬಂಧ ಅನುಪಮ  ಪ್ರೇಮಕ್ಕೆ ಸಾಕ್ಷಿಯಾಗಿದೆ ಅಂತಾರೆ
ಹಾಗಾದರೆ ಪರಿಶುದ್ದ ಪ್ರೇಮದ ಪರಿಕಲ್ಪನೆ ಏನು? ಸಂಬಂಧಗಳನ್ನು ಮೀರಿದ ಮೋಹವೇ, ಭಕ್ತಿಯೇ, ಅನುಬಂಧವೇ?
ಗೊತ್ತಿಲ್ಲ
ಆದರೂ ರಾಧೆ ನನ್ನನ್ನ ಸೆಳೆಯುತ್ತಾಳೆ ಕೃಷ್ಣನನ್ನ ಮೀರಿಸಿ
ಎಲ್ಲೋ ರಾಧೆ ಪ್ರತಿ ಮಹಿಳೆಯರ ಪ್ರತಿರೂಪವೇನೋ ಅನ್ನುವಂತೆ



Saturday, March 2, 2013

ಕಣ್ಣ ಹನಿಗಳು ಕೆನ್ನೆಯ ಮೇಲೆ ಜಾರುತಿಲ್ಲ

ಕಣ್ಣ ಹನಿಗಳು ಕೆನ್ನೆಯ ಮೇಲೆ ಜಾರುತಿಲ್ಲ 
ಕಣ್ಣ ಬಿಡಲೊಲ್ಲದ ಆ ಪ್ರೀತಿ ನಿನಗೇಕೆ ಇಲ್ಲ ?

ಕೆನ್ನೆಗಳವು ತೋಯದೇ ಬಾಡುತಿವೆ 
ಬಾಡದ ಪ್ರೀತಿಗೆ ಈ ತಿರಸ್ಕಾರ ತರವೇ

ತುಟಿಯ ಕೊಂಕಲಿ ನೋವು ಮಿಡಿಯುತಿದೆ 
ಕೊಂಕಿರದ ಒಲವಿಗೆ ನೀನೇಕೆ ಬೆನ್ನಾದೆ 

ಮುಂಗುರುಳು ಹಣೆಯ ಮೇಲೆಯೇ ಎಂದೆಂದೂ 
ಪಾಪದ ಈ ಮನಸು ಮುಡಿಪು ನಿನಗೆಂದೂ

ನನಗೂ ಒಂದು ತಪರಾಕಿ ಸಾಂಗ್ ಬರೆಯೋಕೆ ಬರುತ್ತಾ ಅಂತ ಒಂದು ಟೆಸ್ಟ್

ನನಗೂ ಒಂದು ತಪರಾಕಿ ಸಾಂಗ್ ಬರೆಯೋಕೆ ಬರುತ್ತಾ ಅಂತ ಒಂದು ಟೆಸ್ಟ್ 
ಏನೋ ಹುಡುಗ  ಕಣ್ಣಲ್ಲಿ ಗಲಿಬಿಲಿ 
ನಗುವೇ ಏಕೆ ಇಡದೆ  ಕಚಗುಳಿ 
ಥೈ ಥಕ್ ಎನಿಸುತಾ ಆಡಿಸಲೇ ಕಥಕಳಿ

ಇದು ಮೆಂಟಲ್  ಹಾಸ್ಪಿಟಲ್  ಕೇಸಾ 
ನಿನ್ ಬ್ರೈನ್  ಒಳಗೆ ಲೂಸಾ?
ನಡೆಯೋಲ್ಲ ನಿನ್ನ ಆಟ  ಜಾ ಜಾ 

ಕೆದರಿದ ತಲೆಯೋ ಕೆಂಪೋ ಕಣ್ಣೋ 
 ಅಯ್ಯೋ  ರಾಮ ನೋಡೆ ನಾ ಅಣ್ಣೋ 
 ರಾತ್ರಿಯೂ ನಿದಿರೆ ಇಲ್ಲವೇ 
ಹಗಲೂ ಮದಿರೆ ಬೇಕೇ?
ತರಳೆ   ತರಲೆ ಸಾಕಾಯ್ತೇ?

ಪೀಸು ಫಿಗರು  ಅಂದುಕೊಂಡು 
ಅಲೆದಾಡಿ ನೀನಾದೆ ಪುಂಡು 
ನೀ ಮಾಡಿದ್ದು  ಸಾಕು   ಎಂ ಬಿ ಬಿ ಎಸ್ 
ಮನೆ ಬಿಟ್ಟು ಬೀದಿ  ಸುತ್ತಿ ಟೈಮ್ ವೇಸ್ಟ್
ಇನ್ನಾದರೂ ಆಗು ಎಲ್ಲರಿಗೂ  ನೈಸ್  ನೈಸ್  

Thursday, February 28, 2013

ಸಚ್ ಕೆಹ ರಹಾ ಹೈ ದಿವಾನ ಹಾಡಿನ ಭಾವಾನುವಾದ , ಹೆಣ್ಣಿನ ಮನಸಿನಂತೆ)

ಸಚ್ ಕೆಹ ರಹಾ ಹೈ ದಿವಾನ ಹಾಡಿನ ಭಾವಾನುವಾದ , ಹೆಣ್ಣಿನ ಮನಸಿನಂತೆ)

ಸತ್ಯವ ಹೇಳುವೆ ಹುಡುಗಿ
ನೀ ಹೋಗಬೇಡ ಕರಗಿ
ಸತ್ಯವ ಹೇಳುವೆ ಹುಡುಗಿ ಕೇಳು
ನೀ ಹೋಗಬೇಡ ಕರಗಿ

ಸುಳ್ಳದು ಪ್ರೇಮದ ಆಣೆ ಎಲ್ಲ
ಸುಳ್ಳದು ನಂಬಲೇಬೇಡ

ಯಾರ ಪ್ರತಿ ಕ್ಷಣವೂ
ನಂಬಿಕೆ ಇಟ್ಟು ,ಪೂಜಿಸುತ್ತಿದ್ದೆ
ಅವನೇನೆ ನನ್ನ ಹೃದಯ ಒಡೆದ
ಒಂಟಿ ಮಾಡಿ ಹೋದಾಆಆಅ
!ಸತ್ಯವ ಹೇಳುವೆ ಹುಡುಗಿ!

ಸಂಜೆ ಸಂಜೆ ಅಂತಹ ಒಂದು ಸಂಜೆ
ಅಂದೇ ಸಂಜೆ ಅವನಾ ನಾ ಕಂಡೆ ಕಂಡೆ
ಶರಣಾಗೇ ಹೋದೆ ಹುಸಿ ಮಾತಿಗೆ
ಸಂಜೆ ಸಂಜೆ ಅಂತಹ ಒಂದು ಸಂಜೆ
ಅಂದೇ ಸಂಜೆ ಅವನಾ ನಾ ಕಂಡೆ ಕಂಡೆ
ಶರಣಾಗೇ ಹೋದೆ ಹುಸಿ ಮಾತಿಗೆ

ಬಂದೆನ್ನ ಮನವ ಸೇರಿರುವ
ಈಗವನ ಕೊರತೆ ಕಾಡುತಿದೆ
ನನ್ನಿಂದ ದೂರವಾಗಿರುವ
ನಾನವನ ಬಯಸಲೇಕೆ
!ಸತ್ಯವ ಹೇಳುವೆ ಹುಡುಗಿ!

ಅವನು ಅವನೇ ಹುಲಿಯಂಥವನು
ಅವನು ಅವನೇ ಕಲ್ಲಾದವನು
ಅವನ ನಶೆಯಲಿ ಮನ ನೋಯುತಿದೆ
ಅವನು ಅವನೇ ಹುಲಿಯಂಥವನು
ಅವನು ಅವನೇ ಕಲ್ಲಾದವನು
ಅವನ ನೆನಪಲಿ ಮನ ಮರಗುತಿದೆ
ಒಂದಲ್ಲ ಒಂದು ದಿನ ಮರೆಯುವೆ ನಾನವನ
ಅಳಿಸಿಬಿಡುವ ಅವನಾ ನೆನಪನ್ನ
ಆ ಕಲ್ಲ ನಾನು ಬಯಸಲ್ಲ 
ಹೇಳವಗೆ ಈ ಮಾತಾ....

Such Keh Raha Hain Deewana
Dil Dil Na Kisi Se Lagana
Such Keh Raha Hain Deewana
Dil Dil Na Kisi Se Lagana
Jhoothe Hain Yaar Ke Vaade Saare
Jhoothi Hain Pyaar Ki Kasme
Maine Har Lamha Jise Chaaha
Jise Pooja Usi Ne Yaaron Mera Dil Toda 
Toda Tanha Tanha Chhoda
Such Keh Raha Hain Deewana
Dil Dil Na Kisi Se Lagana
Jhoothe Hain Yaar Ke Vaade Saare
Jhoothi Hain Pyaar Ki Kasme
Maine Har Lamha Jise Chaaha
Jise Pooja Usi Ne Yaaron Mera Dil Toda 
Toda Tanha Tanha Chhoda

Mausam Mausam Tha Suhana Bada
Mausam Mausam Maine Dekha Use
Hua Main Paagal Bas Palbhar Mein
Mausam Mausam Tha Suhana Bada
Mausam Mausam Maine Dekha Use
Hua Main Paagal Bas Palbhar Mein
Aake Basi Hain Woh Mere Mann Mein
Uski Kami Hain Ab Jeevan Mein
Woh Door Hain Meri Nazron Se
Kyon Use Main Chaahon
Such Keh Raha Hain Deewana
Dil Dil Na Kisi Se Lagana
Jhoothe Hain Yaar Ke Vaade Saare
Jhoothi Hain Pyaar Ki Kasme
Maine Har Lamha Jise Chaaha
Jise Pooja Usi Ne Yaaron Mera Dil Toda 
Toda Tanha Tanha Chhoda

Sundar Sundar Woh Haseena Badi
Sundar Sundar Main To Khone Laga
Uske Nashe Mein Bin Piye Behka
Sundar Sundar Woh Haseena Badi
Sundar Sundar Main To Khone Laga
Uske Nashe Mein Bin Piye Behka
Ek Din Use Bhoola Doonga Main
Uske Nishaan Mita Doonga Main
Chaahonga Na Main Us Patthar Ko
Jaa Use Bata De
Maine Har Lamha Jise Chaaha
Jise Pooja Usi Ne Yaaron Mera Dil Toda 
Toda Tanha Tanha Chhoda

Monday, January 28, 2013

ಮುವತ್ತು


ಮುವತ್ತು
***********************************
ಅತ್ತ ಇಪ್ಪತ್ತಲ್ಲ ಇತ್ತ ನಲವತ್ತಲ್ಲ .
ಎರೆಡಕ್ಕೂ ನಡುವಿನ ಈ
ಮುವತ್ತಿದೆಯಲ್ಲ ಇದು
ತರುವುದು ನೋಡಿ ನಾನಾ ಅಪತ್ತು

ತಂಟೆಮಾಡದ ವಯಸಲ್ಲ
ಆದರೂ ವಯಸಾಗಿದೆ
 ಸುಮ್ಮನಿರೆಂದು ಹೇಳುವರೆಲ್ಲ
ಸುಮ್ಮನಿರುವ ವಯಸಲ್ಲ
ಸುಮ್ಮನಾಗಿರಲೇಬೇಕಲ್ಲ

ಮೊಗದ ಮೇಲೊಂದು ಗೆರೆ ಕಾಣಿಸಿತು
ಅಯ್ಯೋ ನನಗೂ ವಯಸಾಯ್ತು
ಎಂಬ ಭೀತಿಯ ಜೊತೆಯಲ್ಲಿಯೇ
ನೆನ್ನೆ ಅಕ್ಕ ಎನ್ನುತ್ತಿದ್ದ
ಹುಡುಗ ಆಂಟಿ ಎಂದುಬಿಟ್ಟರೆಂಬ
ಯೋಚನೆ

ಇಪ್ಪತ್ತರಲ್ಲಿ ಎಲ್ಲಕ್ಕೂ ರಾಯರಪ್ಪಣೆ ಕೇಳುತ್ತಾ
ಕೇಳುತ್ತಾ  ಸುಸ್ತಾಗಿದ್ದವಳಿಗೀಗ
ಇದ್ದಕಿದ್ದಂತೆ ಜವಾಬ್ದಾರಿಯ ನೊಗ
ಎಲ್ಲರೂ ತನ್ನಡಿಯಲ್ಲಿ ಎಂಬ
ಖುಷಿಯ ಸೊಗಸು

ಬೆಳ್ಳಿ ಗೆರೆ ಕಾಣಿಸಿತು ತಲೆಯಲ್ಲಿ.
ಅಜ್ಜಿಯಾಗಿಬಿಟ್ಟೆನೇ ..
ಯೋಚನೆ

ಆ ಕಾಲೇಜು ಹುಡುಗ ನೋಡುತ್ತಿದ್ದಾನೆ
ನೋಡು ತಿನ್ನುವ ಹಾಗೆ
ನಾನಿಲ್ಲವೇ ಅವನಮ್ಮನ ಹಾಗೆ

ಈಗಲೂ ನೋಡುವವರ ಕಣ್ಣಲ್ಲಿದೆಯಲ್ಲ ಮೆಚ್ಚುಗೆ
ಓ ಹಾಗಿದ್ದರೆ ವಯಸಾಗಿಲ್ಲ ಇನ್ನು ನನಗೆ
ಆ ಐಶ್ ,ವಿದ್ಯಾಬಾಲನ್, ಕರೀನಾ
ಬಿಪಾಶ ಎಲ್ಲರೂ ಮುವತ್ತು ದಾಟಿದವರೇ
ಇಲ್ಲವೇ ಇನ್ನೂ ಹುಡುಗಿಯರಂತೆ

ವಯಸು ಮುವತ್ತು ದಾಟಿತು ಮನಸು
ಇಪ್ಪತ್ತನ್ನು ಬಿಟ್ಟು ಬರುತಿಲ್ಲ
ಇನ್ನು ನಲವತ್ತನ್ನು ಸ್ವಾಗತಿಸಬೇಕಿದೆಯೇ
ಕನ್ನಡಿ ನಕ್ಕು ನುಡಿಯುತ್ತಿದೆ
ಅಯ್ಯೋ ಮರುಳೆ
ಇದುವೇ ಜೀವನ
ನೆನ್ನೆ ನಿನ್ನಮ್ಮ ಇಂದು ನೀನು
ನಾಳೆ ನಿನ್ನ ಮಗಳು

Thursday, January 17, 2013

ಮೇನಕಾ.................



ದಟ್ಟ ಕಾಡು.......... ಅದಕಿಂತ ದಟ್ಟ ಈ ಮುನಿವರ್ಯನ ಗಡ್ಡ ಮೀಸೆ, ಇವನಿಗೋ ಕರಗದ ಆಸೆಯಂತೆ ನನ್ನ ಮೇಲೆ .. ಎಂದಿಗೆ ಈ ಮುನಿಯಿಂದ ಬಿಡುಗಡೆ. ಈ ದೇವೇಂದ್ರನಿಗೆ ಸಲ್ಲದ ಭಯ. ಯಾರೋ ತಪಸ್ಸಿಗೆ ಕೂತರೆ ಅವರು ಎಲ್ಲಿ ತನ್ನ ಪಟ್ಟವನ್ನ ಕಿತ್ತುಕೊಳ್ಳುತ್ತಾರೋ ಎಂಬ ಭಯ ... ಅವನು ಸರಿ ಇದ್ದಿದ್ದರೆ ಅವನ ಸಿಂಹಾಸನವೇಕೆ ಹೀಗೆ ಅಲ್ಲಾಡುತ್ತಿತ್ತು. ಸದಾ ಅಪ್ಸರೆಯರ ಜೊತೆ ಸರಸ. ಇಲ್ಲವಾದಲ್ಲಿ  ಸೋಮರಸದ ಸಹವಾಸ, ಅಥವ ಯಾವುದಾದರೂ ರಾಕ್ಷಸನಿಗೆ ಹೆದರಿಕೊಂಡು ಅಡಗಿಕೊಳ್ಲುವುದರಲ್ಲೇ ಕಾಲ ಹರಣ.
"ಮೇನಕಾ  ಎಲ್ಲೇ ಇದ್ದೀಯಾ ಕರೆಯೋದು ಕೇಳಿಸ್ತಿಲ್ವೇ?" ಈ ಮುನಿಗೇಕೆ ಸಂಸಾರದ ಬಂಧ ನನ್ನನ್ನೇನು ಕಟ್ಟಿಕೊಂಡ ಹೆಂಡತಿ ಅಂದುಕೊಂಡಿದ್ದಾನೇಯೇ . ಕರೆದಾಗೆಲ್ಲಾ ಬರಬೇಕಂತೆ....
ಈ ವಿಶ್ವಾಮಿತ್ರ ಎಂಬುವವನು  ರಾಜನಂತೆ... ಕ್ಷತ್ರಿಯರು ಮುನಿಗಳಾದರೆ ಹೆಸರಿಗೆ ತಕ್ಕಂತೆ ಸದಾ ಸಿಟ್ಟು ಸಿಡುಕು, ಹಟ ದೇವರೇ ಬಂದರೂ ಇವನ ಅಹಂಕಾರವನ್ನು ಅಡಗಿಸಲಾಗುವುದಿಲ್ಲ.. ಅಂತಹವನು ಇವನು ತಪಸ್ಸಿಗೆ ಕೂತಿದ್ದನಲ್ಲವೇ
 "ಎದ್ದು ಅವನತ್ತ ನಡೆದೆ... ಎಲ್ಲೋ ಹೋಗುತ್ತಿದ್ದಾನೆ .. "ಮೇನಕೆ ಮೇನಕೆ "ಪ್ರೀತಿಯಿಂದ  ಆಲಂಗಿಸಿದ ಆಲಂಗನವೇ ಅದು, ಕಾಡಿನ ಒರಟನ್ನೆಲ್ಲಾ ತುಂಬಿಕೊಂಡ ಮೈ...ಇವನ ಒರಟಿಗೆ ಕೋಪಕ್ಕೆ ಆಲ್ವವೇ ದೇವೇಂದ್ರನೂ ಹೆದರಿದ್ದು.
ರಾಕ್ಷ್ಗಸ ಅಪ್ಪುಗೆಯಿಂದ ಬಿಡುಗಡೆ ಸಿಕ್ಕಿತು. ಸಂಜೆ ಬರುತ್ತಿದ್ದೇನೆ ಅಂತ ಹೇಳಿ ಹೊರಟ..
ದೇವೇಂದ್ರನಿಗೆ ಮತ್ತೆ ಹೆದರಿಕೆ ಇವನ ತಪಸ್ಸನು ಮುರಿಯಬೇಕು ಅನ್ನೋ ದುರ್ಯೋಚನೆ .ದೂರಾಲೋಚನೆ ಇಲ್ಲದ ದುಡುಕಿನವ. ಮೊದಲು ವರುಣ, ವಾಯು ಮೇಘ ಎಲ್ಲಾರನ್ನು ಕಳಿಸಿದ ಎಲ್ಲರೂ ಈ ಮುನಿಯ ತಪಸನ್ನು  ಎಲ್ಲರೂ ಅವನ ಏಕಾಗ್ರತೆಯನ್ನ ಮುರಿಯಲು ವಿಫಲರಾದರು.ಸೋಲು ಬರೀ ಸೋಲು ದೇವತೆಗಳು ಹೆಸರಿಗಷ್ಟೆ ದೇವತೆಗಳು, ಮಾನವನ   ಶಕ್ತಿ ಮತ್ತೆ ಭಕ್ತಿ ಮುಂದೆ ಇವರೆಲ್ಲಾ ಹುಳಗಳು ಛೆ.
ಆವತ್ತು   ಇಂದ್ರ ತನ್ನನ್ನ ಕರೆದು ಹೇಳಿದ್ದು "ಮೇನಕೆ ನೀನು ಅವನ ತಪಸ್ಸನ್ನ ಮುರಿಯಬೇಕು"
"ನಾನಾ ?" ಅಚ್ಚರಿಯಾಗಿತ್ತು
"ಹೌದು , ಸುಂದರಿಯರಲ್ಲೆಲ್ಲಾ ಸುಂದರಿ , ಅಮೋಘ ಚೆಲುವು, ನಿನ್ನನ್ನ ನೋಡಿದ ಯಾವ ವ್ಯಕ್ತಿಯೂ ಮರುಳಾಗದಿರನು, ದಂಡದಿಂದ ಅವನನ್ನ ತಡೆಯಲು ಸಾಧ್ಯವಾಗುತ್ತಿಲ್ಲ. ಇರೋದೊಂದೇ ದಾರಿ ಮೋಹ... ನೀನು ಅವನಿಗೆ ಮೋಹಗೊಳಿಸಬೇಕು"
"ಆಗೋದಿಲ್ಲ. " ಎಂದು ಹೇಳಬೇಕೆನಿಸಿತು. ಹೇಳಲಾಗಲ್ಲಿಲ್ಲ . ಅಪ್ಸರೆ ಹೆಸರಿಗಷ್ಟೆ , ಇವನ ಸಂಬಳಕ್ಕೆ ಕಾದು ನಿಂತ ವೇಶ್ಯೆ ನಾನು. ನಾನಷ್ಟೇ ಅಲ್ಲ ಊರ್ವಶಿ, ರಂಭೆ. ಎಲ್ಲರೂ. ಚೆಂದದ ಮೋಹದ ಗೊಂಬೆಗಳು ನಿಜ ಗೊಂಬೆಗಳು ಕುಣಿ ಎಂದಾಗ ಕುಣಿಯಬೇಕು , ತಣಿಸೆಂದಾಗ ತಣಿಸಬೇಕು, ಹೋಗೆಂದಾಗ ಹೋಗಬೇಕು. ಮತ್ತಾರನ್ನೋ ಕಾಮಿಸೆಂದಾಗ ಕಾಮಿಸಬೇಕು. ಇಷ್ಟೆ ನಮ್ಮಗಳ ಜೀವನ
ಒಪ್ಪಿಕೊಂಡು ಈ ಕಾಡಿಗೆ ಬಂದು ಏಕಾಗ್ರತೆಯಿಂದ ತಪಸಿಗೆ ಕೂತವನ ಮುಂದೆ ಹಾದು ಹೋದದ್ದೇ ತಡ. ಆತ ಕಾಮಿ ಬೆಕ್ಕಿನಂತೆ ಹಿಂದೆ ಬಂದೇಬಿಟ್ಟ. ಹ್ಮ್ಮ್ ಇಷ್ಟೇ ಈ ಗಂಡಸರ ಹಣೆ ಬರಹ . ಎಂದು ನಕ್ಕಿದ್ದೆ, ಗರ್ವ ಕೂಡ
ಪೂಜೆ ಮರೆತ, ತಪಸ್ಸು ಮರೆತ,. ಸದಾ ನನ್ನಲ್ಲೇ .. ಎಷ್ಟು ವರ್ಷದ ಹಸಿವೋ, ನಾನು ಬಳಲಿ ಹೋಗಿದ್ದೇನೆ. ಸ್ವರ್ಗದಲ್ಲಿ ಸುಖ ಸೋಪಾನ ಇಲ್ಲೋ ಕಲ್ಲುಗಳೇ ಶಯನಾಸನ. ಕಾಮಕ್ಕೆ ಮನಸಾದಾರೂ ಹೇಗೆ ಬಂದೀತು. ಆದರೆ..ಅವನಿಗೆ ಯಾವ ಯೋಚನೆಯೂ ಇಲ್ಲ.  ಗರ್ಭಿಣಿ ತಾನು ಹೇಳಿಲ್ಲ ಇನ್ನೂ ಈ ವಿಷಯ ಅವನಿಗೆ
ಈಗ ಹೊಟ್ಟೆಯಲ್ಲಿ ಇರುವ ಮಗು.. ಏನು ಮಾಡುವುದು . ಹೇಳಿದ ಕೂಡಲೆ ಹೌಹಾರಿ ಹೋಗಿದ್ದು ಇಂದ್ರ, ನಿನ್ನ ಚೆಲುವೆಲ್ಲಾ ಹಾಳಾಗಿ ಹೋಗಿಬಿಡುತ್ತೆ. ಮತ್ತೆ ಮುಂದೆ ನಮ್ಮಗಳ ಗತಿ ಎಂದೆಲ್ಲಾ ಬೈದನು. ನಾನೊಂದು ಕಾಮದ ಯಂತ್ರವಷ್ಟೆ ಅವನ ಪಾಲಿಗೆ. ಇನ್ನು ವಿಶ್ವಾಮಿತ್ರನಿಗೆ ಈ ವಿಷಯ ಹೇಳುವುದು ಇವತ್ತು  .ಸಂಜೆ ಬಂದ ಕೂಡಲೇ ವಿಷಯ ಹೇಳಬೇಕು. ಖುಷಿ ಪಡುತ್ತಾನೆಯೇ ಇಲ್ಲವೇ . ತಂದೆಯಾಗುವ ಸಂತೋಷ ಪ್ರತಿಯೊಬ್ಬರಿಗೂ ಇರುತ್ತೆ . ತಾನು ತಾಯಿಯಾಗಿ ಸಂತೋಷವಾಗಿದ್ದೇನೆಯೇ? ಹೌದು ಮನಸು ಸಂತೋಷವಾಗಿದೆ. ಆ ಕಂದ ಅಮ್ಮ ಅಂತ ಕರೆದರೆ ಎಂತ ಸಂತೋಷ. ಒಂದೊಮ್ಮೆ ಈ ಮುನಿ ಒಪ್ಪಿಕೊಂಡರೆ ಇವನೊಂದಿಗೇ ಬಾಳಿಬಿಡಬೇಕು ಸಂಸಾರಸ್ತೆಯಂತೆ. ಆ ಹಾಳು ದೇವಲೋಕದ ಗೊಡವೆಯೇ ಬೇಡ.
"ಮೇನಕೆ ನಾನು ಸಂಸಾರದ ಬಂಧನಕ್ಕೆ ಸಿಲುಕಲು ಇಷ್ಟ ಪಡೋಲ್ಲ"ತನ್ನ ಉದ್ದ ಗಡ್ಡವನ್ನ್ ನೇವರಿಸಿಕೊಂಡು ಎತ್ತಲೋ ನೋಡುತ್ತಾ ನುಡಿದ... ಸಂಜೆ ಬಂದ ಕೂಡಲೇ ಮೇನಕೆ ಬಾ ನನ್ನ ತಣಿಸು ಎಂದು ಕೂಗಿ ಕರೆದವನಿಗೆ ನಾ ಗರ್ಭಿಣಿ ಅನ್ನೋದನ್ನ  ಹೇಳಿದ್ದೇ ತಡ ಹಾವು ಮೆಟ್ಟಿದವನಂತೆ ಹಿಂದೆ ಸರಿದು ಹೋದ.
ಹೆಣ್ಣು ಬೇಕು. ಆದರೆ ಹೆಣ್ಣಿನ ಜವಾಭ್ದಾರಿ ಬೇಡ ಎನ್ನುವ ಗಂಡಸರು . ತಮ್ಮ ಬೇಜವಾಬ್ದಾರಿತನಕ್ಕೆ ತಪಸಿನ ಹೆಸರು ಕೊಡವವರು.  ಸಂಸಾರದ ನೊಗ ಹೊರಲಾಗದವರು ಕಾಮಕ್ಕೇಕೆ ಅಡಿಯಾಳಾಗಬೇಕು, ಕಾಮ ಬೇಕು ಕೋಪ ಉಂಟು, ಕ್ರೋಧವೂ ಉಂಟು ಇವನಾವ ಸೀಮೆಯ ಮುನಿ.
ಕೋಪ ಬಂದಿತು. ಆದರೂ ಸಮಾಧಾನಿಯಾಗಿಯೇ ನುಡಿದೆ
" ಮುನಿವರ್ಯರೇ ನಾವು ಒಟ್ಟಾಗಿ ಇರೋಣ, ಸಂಸಾರದ ಪ್ರತಿ ಹೆಜ್ಜೆಗೂ ನಾನು ಜೊತೆಜೊತೆಯಾಗಿಯೇ ಇರುತ್ತೇನೆ.   ನಿಮಗೆ ಸಂಸಾರದ ಜವಾಬ್ದಾರಿ ಬೇಡ, ಅದನ್ನ್ ನಾನು ನೋಡಿಕೊಳ್ಳುತ್ತೇನೆ, ನಿಮಗೆ ನಾನು ಭಾರವಗಿರುವುದಿಲ್ಲ"
"ಓಹೋ ಇತ್ತ ನನ್ನ ಪತ್ನಿಯಾಗಿ ಅತ್ತ ವೇಶ್ಯಾವೃತ್ತಿಯನ್ನ್ನೂ ಮಾಡುತ್ತಾ ನನ್ನನ್ನ ಸಾಕ್ತೀನಿ ಅಂತಿದೀಯಾ? ಎಲ್ಲಿ ಹೋಗುತ್ತೆ ವೇಶ್ಯಾ ಬುದ್ದಿ . ವೇಶ್ಯೆಯನ್ನ ಹೆಂಡತಿಯನ್ನಾಗಿ ಮಾಡಿಕೊಂಡರೆ ನನ್ನನ್ನ ಜನ ಹುಚ್ಚ ಅಂತಾರೆ . ಈ ಭ್ರಮೆಯನ್ನೆಲ್ಲಾ ಪಕ್ಕಕ್ಕೆ ಇಟ್ಟು ನಿನ್ನನ್ನ ಕಳಿಸಿದವನ ಬಳಿಗೇ ಹೋಗು. ಇನ್ನೀಗ ನಿನ್ನ ಸಂಗ ಮಾಡಿದ್ದು ಸಾಕು. ನಡೆ ಇಲ್ಲಿಂದ ". ಅಕ್ಷರಷ ಹೊರ ನೂಕಿದ್ದ
ಬೈಯ್ಯಬೇಕನಿಸಿತು. "ನನ್ನ ವೇಶ್ಯೆಯನ್ನಾಗಿ ಮಾಡಿದ್ದು ನೀನು ಮತ್ತು ನಿನ್ನಂತ ಗಂಡಸರು. ನಿಮ್ಮಂತಹ ಗಂಡಸರಿಗೆ ತಣಿಸಲು ನಾವುಗಳು ಬೇಕು, ಆದರೆ ಹೆಂಡತಿಯನ್ನಾಗಿ ನೋಡಲು ನಾವು ಬೇಕಿಲ್ಲ. ಅಲ್ಲವೇ?ಬೆಂಕಿ ಬಿತ್ತು ನಿನ್ನಾ ತಪಸಿಗೆ, ನೀನೇನೆ ಮಾಡಿದರೂ ನಿನ್ನ ಈ ವಕ್ರ ಬುದ್ದಿಯಿಂದ ಇಂದ್ರ ಪದವಿ ದಕ್ಕೋದಿಲ್ಲ ನಿನಗೆ." ಎಂದು ನುಡಿದು ಹೊರಬಂದೆ
ಬಂದವಳು ಹೋಗುವುದಾದರೂ ಎಲ್ಲಿಗೆ . ಗೆಳತಿಯೊಬ್ಬಳ ಮನೆಯಲ್ಲಿ ಉಳಿದ ದಿನಗಳನ್ನು ಕಳೆದೆ. ಮಗುವೂ ಆಯ್ತು .  ಮುದ್ದಾದ ಹೆಣ್ಣು ಮಗು. ಗೆಳತಿ ಮರಳುವಂತೆ ನುಡಿದಳು. ನನ್ನನ್ನ ಇಲ್ಲಿಗೆ  ಕಳಿಸಿದವನ ಬಳಿಗೇ ನಡೆದೆ.
"ಮೇನಕೆ ನೀನು ಹೋಗಿದ್ದು ಒಬ್ಬಳೇ ಬರುವುದೂ ಒಬ್ಬಳೇ . ನಿನ್ನ ಮಗುವಿಗೆ ಇಲ್ಲಿ ಪ್ರವೇಶವಿಲ್ಲ. ಮಗುವನ್ನು ಬಿಟ್ಟು ಬಾ:" ಇಂದ್ರ ನಿಷ್ಟುರನಾಗಿ ನುಡಿದ . ಎಷ್ಟು ಕ್ರೂರಿ ಆತ ಇನ್ನೂ ಹಾಲುಗಲ್ಲದ ಹಸುಳೆ.. ಮಗುವನ್ನೆತ್ತಿಕೊಂಡು ಹೊರಗಡೆ ನಡೆಯಲು  ಹೊರಟೆ.
"ನನ್ನ ಮಗುವಿಗೆ ಇರದ ಜಾಗ ನನಗೂ ಬೇಡ"
"ಹಾಗೆ ನಿರ್ಧರಿಸಲು ನೀನು ಯಾರು? ನೀನು ನನ್ನ ದಾಸಿ, ನೀನು ಯಾರಿಗೂ ಅಮ್ಮನಾಗಲೂ ಸಾಧ್ಯವಿಲ್ಲ ಹೆಂಡತಿಯಾಗಲೂ ಸಾಧ್ಯವಿಲ್ಲ, ತಂಗಿಯಾಗಲೂ ಸಾಧ್ಯವಿಲ್ಲ ನೀನೇನಿದ್ದರೂ ಕಾಮಿನಿ ಅಷ್ಟೆ. ಆ ಮಗುವನ್ನು  ಸೇವಕರು ಕಾಡಿನಲ್ಲಿ ಬಿಟ್ಟು ಬರುತ್ತಾರೆ ನೀನು ನನ್ನ ದಾಸಿ ನಡೆ ಒಳಗೆ.". ಬಲವಂತವಾಗಿ ಮಗುವನ್ನು ಕಿತ್ತು ಕೊಂಡರು
ಮಗು ಅಳುತ್ತಿತ್ತು. ಎದೆ ತುಂಬಿ ಸೋರುತ್ತಿತ್ತು. ಕಣ್ಣ ನೀರು ಬತ್ತಿ ಹೋಗಿತ್ತು. ಯಾರೋ ಒಳಗೆ ನೂಕಿದರು. ಎಂದೂ ಹೊರಬರಲಾಗದ ಕೂಪದೊಳಗೆ. ಮಗುವಿನ ಅಳು ಮಾತ್ರ ಕಿವಿಗೆ ಕೇಳುತ್ತಲೇ ಇತ್ತು...... ಜೊತೆಗೆ   "ನೀನು ನನ್ನ ದಾಸಿ, ನೀನು ಯಾರಿಗೂ ಅಮ್ಮನಾಗಲೂ ಸಾಧ್ಯವಿಲ್ಲ ಹೆಂಡತಿಯಾಗಲೂ ಸಾಧ್ಯವಿಲ್ಲ, ತಂಗಿಯಾಗಲೂ ಸಾಧ್ಯವಿಲ್ಲ ನೀನೇನಿದ್ದರೂ ಕಾಮಿನಿ ಅಷ್ಟೆ." ಎಂಬ ಇಂದ್ರ ಕಟು ಮಾತುಗಳು............

Friday, January 4, 2013

ಪುರಾಣದ ದ್ರೌಪದಿ, ಸೀತೆಗೂ ತಪ್ಪಲಿಲ್ಲ ಅತ್ಯಾಚಾರಿಗಳ ಹಾವಳಿ

ಹೊಗಳಿ ಅಟ್ಟ ಹತ್ತಿಸಿ ಪಟ್ಟಕೆ ಕೂರಿಸಿ
ದೇವತೆಯ ಮಾಡದಿರಿ
ಮರಳಿ ಸುತ್ತ ಬೆಂಕಿ ಹತ್ತಿಸಿ ಅಟ್ಟ-
-ಹಾಸಗೈಯ್ಯದಿರಿ

ನೀ ಹೆಣ್ಣೆಂದು ಜರೆಯದಿರಿ
ನಾ ಗಂಡೆಂದು ಬೀಗದಿರಿ
ಗಂಡು ಹೆಣ್ಣು ಬಾಳಿನೆರೆಡು
ಕಣ್ಣೆಂಬುದ ಮರೆಯದಿರಿ

ನಿನಗೆಲ್ಲ ನಿಯಮ, ಕಟ್ಟುಪಾಡು
ನನದೋ ನನ್ನದೇ ದಾರಿ, ಹಾಡು
ಕೇಳುವರಿಲ್ಲವೆಂದು ಕೂಗದಿರಿ
ನೀತಿ ನಿಯಮಕೆ ಬೇಧವಿಲ್ಲ ಮರೆಯದಿರಿ 

ಹಾಗಿರಿ, ಹೀಗಿರಿ, ಭಾರತೀಯ ನಾರಿಯರಾಗಿ
ಎಂದೆಲ್ಲಾ ಉಪದೇಶಿಸದಿರಿ,
ಪುರಾಣದ ದ್ರೌಪದಿ, ಸೀತೆಗೂ 
ತಪ್ಪಲಿಲ್ಲ ಅತ್ಯಾಚಾರಿಗಳ ಹಾವಳಿ

ಎಲ್ಲರೂ ಮನುಜರೆಂಬ ಸತ್ಯ ಅರಿಯಿರಿ
ಹೆಂಗಳೆಯರು ಭೋಗಕಲ್ಲ ತ್ಯಾಗಕಲ್ಲ
ಯೋಗಕಲ್ಲ, ಅನುರಾಗಕೆ ಎಂಬುದ
ಅರಿತು ಮುನ್ನಡೆದು ಮಾದರಿಯಾಗಿರಿ