Monday, July 1, 2013

ಲೋಪ ಮುದ್ರೆ ..........................ಕಾವೇರಿಯಾಗಿ


"ಲೋಪ ಮುದ್ರೆ ಬಂದೆಯಾ ?"
ಅಗಸ್ತ್ಯನ ದನಿಗೆ ಎಚ್ಚೆತ್ತೆ.. ಈಗಷ್ಟೇ ಊಟ ಬಡಿಸಿ , ಆತ ಊಟ ಮುಗಿಸಿ ಹೊರಗೆ ಹೋದ .. ವಿಶ್ರಮಿಸಲೆಂದು  ಚಾಪೆಯ ಮೇಲೆ ಪವಡಿಸಿದವಳಿಗೆ  ಅಸಾಧ್ಯ ನಿದ್ದೆ .ಕೊಂಚ ಕ್ಷಣಗಳಾಗಿರಬೇಕು . ಆಗಲೇ ಮತ್ತೆ ಬಂದನಲ್ಲ
ಒಂದರೆ ಘಳಿಗೆ ನನ್ನ ಬಿಟ್ಟಿರಲಾರ ಈತ. ಎಲ್ಲಿ ಹೋದರಲ್ಲಿ ಆತನ ಜೊತೆ ನಾನಿರಲೇಬೇಕು ಅದೇನು ಪ್ರೀತಿಯೋ, ಮೋಹವೋ, ಮತ್ತಾರೂ ಮೋಹಿಸಬಾರದೆಂಬ ಜಾಗರೂಕತೆಯೋ ಗೊತ್ತಿಲ್ಲ
ಜನರೆಲ್ಲಾ ನನ್ನನ್ನು ಅಗಸ್ತ್ಯನ ಕಮಂಡಲದಲ್ಲಿ ಬಂಧಿಯಾದವಳೆಂದು ತಮಾಷೆ ಮಾಡುತ್ತಾರೆ. ಹಾಗೆಯೇ ನೀರಾಗಿಯೇ ಬಿಡುತ್ತೆನೋ ಏನೋ. ನನ್ನದೆಂಬ ಆಸೆ ಇಲ್ಲ. ಆತ ಕೂರೆಂದರೆ ಕೂರುವುದು, ನಿಲ್ಲೆಂದ ಕಡೆ ನಿಲ್ಲುವುದು. ಒಟ್ಟಿನಲ್ಲಿ ಸೇರಿದ ಪಾತ್ರೆಯ ರೂಪಕ್ಕೆ ತಕ್ಕಂತೆ ಬದಲಾಗುವ ನೀರಿಗೂ ನನಗೂ ವ್ಯತ್ಯಾಸವಿಲ್ಲದಂತಾಗಿದೆ ...

ಈ ದಕ್ಷಿಣ ಭಾಗಕ್ಕೆ ನಾನು ಬಂದು ಸೇರಿದುದು ಒಂದು ನಿಗೂಢ ರಹಸ್ಯವೇ ಸರಿ

ಸ್ವಯಂ ಈಶ್ವರ ಮತ್ತ್ ಗಂಗಾಮಾತೆ ನನ್ನ ತಂದೆ ತಾಯಿ . ಅವರಿಂದ ನನ್ನ ದತ್ತು ಪಡೆದು ಬಂದವ ಈ ಅಗಸ್ತ್ಯ. ಈ ದಕ್ಷಿಣ ಭಾಗದಲ್ಲಿ ನೀರು ಇಲ್ಲದೆ ನದಿಯೂ ಇಲ್ಲದೆ ವ್ಯವಸಾಯವಿಲ್ಲದೆ ದನಕರುಗಳು, ಜನರು ಸಾಯುತ್ತಿದ್ದರಂತೆ . ಉತ್ತರದಲ್ಲಿ ಯಥೇಚ್ಚವಾಗಿ ನೀರಿದ್ದುದರಿಂದ ಅಲ್ಲಿಂದ ಬಂದ ಹೆಣ್ಣೊಬ್ಬಳು ಇಲ್ಲಿನ ನೀರಿಗೆ ಹಾರವಾದರೆ ನದಿ ನೀರು ಉಕ್ಕಿ ಹರಿಯುತ್ತದೆ ಎಂಬ ಕಾರಣಕ್ಕಾಗಿ ಈ ಅಗಸ್ಯ್ತ ತನ್ನನ್ನು ಅಲ್ಲಿಂದ ದತ್ತು ಪಡೆದದ್ದು. ಆಗಿನ್ನೂ ಪುಟ್ಟ ಕಂದಮ್ಮಳಾಗಿದ್ದ ನನ್ನನ್ನು ತಂದೆಯಂತೆ ಬೆಳೆಸುತ್ತಿದ್ದವನು ಯಾವಾಗ ಯೌವ್ವನ ಕಾಲಿಟ್ಟಿತೋ ಅಂದಿನಿಂದ ಪ್ರೇಮಿಸತೊಡಗಿದ. ಅದೂ ಹುಚ್ಚು ಪ್ರೀತಿ. ನನ್ನನ್ನ ಇಲ್ಲಿ ಕರೆತಂದ ಕಾರಣವನ್ನೆ ಮರೆತುಬಿಟ್ಟ.  ಸದಾ ನನ್ನನ್ನ ಜೊತೆಯೇ ಕರೆದುಕೊಂಡು ಹೋಗುತ್ತಿದ್ದ.. ಕೆಲವೊಮ್ಮೆ ಅವನ ಉತ್ತರೀಯಕ್ಕೆ ನನ್ನ ಸೆರಗನ್ನ ಗಂಟು ಹಾಕಿ ಕಾಯುತ್ತಿದ್ದ. ಮದುವೆಯ ದಿನವಿನ್ನೂ  ಕೂಡಿ ಬಂದಿರಲಿಲ್ಲವಂತೆ. ಆದ್ದರಿಂದ ನನ್ನ ಕೌಮಾರ್ಯ ಹಾಗೆಯೇ ಇತ್ತು. ಅದು ಈ ಮುಪ್ಪಡರಿದ ಮುನಿವರ್ಯನಿಗೇ ಮುಡಿಪು ಎಂದಾಗಿತ್ತು

"ಮುದ್ರಾ  ವನವಿಹಾರಕ್ಕೆ ಹೋಗೋಣಾ ಬಾ" ಕಟ್ಟಿದ ಹಸುವಂತೆ ಅವನ ಹಿಂದೆ ಹೊರಟೆ.. ಗಮಿಸುತಿದ್ದಂತೆ ಮತ್ತೆ ಯೋಚನೆಗಳು ಧಾಳಿ ಇಡಲಾರಂಭಿಸುತ್ತಿದ್ದವು

ನಿಜ ಊಟ ತಿಂಡಿಗೆ ಅಥವ ವಿಹಾರಕ್ಕೆ ಕೊರತೆ ಏನಿಲ್ಲ ಇವನೊಡನೆ . ಆದರೂ ಮನುಷ್ಯನಾದವನಿಗೆ ಬೇಕಾದ ಯಶ್ಚಿಕತ್ ಸ್ವಾತಂತ್ರ್ಯ ಸಿಗದ ಬಾಳೂ ಒಂದು ಬಾಳೇ?

ಒಂದು  ಹೆಜ್ಜೆ ನಡೆಯಬೇಕಾದರೂ ಇವನಾಣತಿ ಬೇಕು, ಇಲ್ಲವಾದಲ್ಲಿ ಮುನಿ ಶಾಪದ ಬೀತಿ

"ಸುತ್ತಲೂ ಅರಳಿದ ಹೂಗಳು, ಹಸಿರು ಕಾಡು, ವನದೇವತೆಯಂತೆ ಜೊತೆಯಲ್ಲಿ ನೀನು.ನನ್ನ ಭಾಗ್ಯವೇ ಭಾಗ್ಯ"

ಮುನಿವರ್ಯ ಗುನುಗುತ್ತಿದ್ದ. ಅದು ಕೇಳಿದರೂ ಕೇಳದಂತೆ ನಡೆಯುತ್ತಿದ್ದೆ..

ನದಿಯೊಂದು ಹರಿಯುತ್ತಿತ್ತು.. ಶಾಂತವಾಗಿ ತನಗಿಷ್ಟ ಬಂದೆಡೆ .. ಯಾರನ್ನೂ ಕೇಳದೆ , ಯಾರನ್ನೂ ಲೆಕ್ಕಿಸದೇ ತನ್ನಷ್ಟಕ್ಕೆ ತಾನು ಹರಿಯುತಿದೆ..

"ಇಲ್ಲೇ ಇರು ಮುದ್ರಾ ಇಲ್ಲಿಂದ ಕದಲಬೇಡ. ನಾನು  ಒಂದಷ್ಟು ಹೂವನ್ನು ಆರಿಸಿ ತರುತ್ತೇನೆ ನಿನ್ನ ಈ ನೀಳ ಕೇಶರಾಶಿಗಾಗಿ, ಈ ಕಮಂಡಲ ನಿನ್ನಬಳಿಯೇ ಇರಲಿ"

ಅಗಸ್ತ್ಯ ಅಲ್ಲಿಂದ ಹೊರಟ.. ಅವನ ಬೆನ್ನನ್ನೆ ದಿಟ್ಟಿಸುತ್ತಾ  ಹಾಗೆ  ನದಿಯದಂಡೆಯಲ್ಲಿ ಕೂತೆ

ಚಿಟ್ಟೆಯೊಂದು ಹಾರುತ್ತಿತ್ತು.. ಹೂವಿಂದ ಹೂವಿಗೆ. ತನಗೆ ಬೇಕಾದಂತೆ ಅತ್ತಿತ್ತ ಆಟವಾಡುತ್ತಾ..

ಜಿಂಕೆ ಮರಿಯೊಂದು ಚಂಗನೆಗರಿ ಓಡಿತ್ತು ತನ್ನವರ ಕೂಡಿಕೊಳ್ಳುವ ಹಂಬಲದಲ್ಲಿ

ನಾ ಮಾತ್ರ ಹೀಗೆಯೇ  ಕಲ್ಲಾಗಿ............

ಮುನಿವರ್ಯನ ಕಮಂಡಲ ಕೈ ತಾಗಿ ಯಾವ ಮಾಯದಲ್ಲೋ ಕೆಳಗೆ ಬಿತ್ತು...

ದುಡದುಡನೆಂದು ಸದ್ದು ಮಾಡುತ್ತಾ ಹೋಗುತ್ತಿದ್ದುದ್ದನ್ನು ಹಿಡಿಯಬೇಕು . ಇಲ್ಲವಾದಲ್ಲಿ ಮುನಿಗೆ ಕೋಪ ಬಂದು ಬೈದಾನು ಎಂದುಕೊಳ್ಳುತ್ತಲೇ ಓಡಿದೆ. ಅದೂ ಓಡುತ್ತಿತ್ತು ನನ್ನೊಡನೆ ಹಮ್ಮಿಗೆ ಬೀಳುವಂತೆ. ಥೇಟ್ ಮುನಿವರ್ಯನಂತೆಯೇ ಜಂಭದಿಂದ.

ಹಾಗೆ ಓಡುತ್ತಿದ್ದವಳ ತಡೆದು ನಿಲ್ಲಿಸಿದ್ದು ಆಜಾನುಬಾಹು ಆ ತರುಣನ ನೆರಳು.

ತೀರ ಸನಿಹದಲ್ಲಿ ನಿಂತವನ ಬಿಸಿಯುಸಿರು ನನ್ನ ತಾಗುತ್ತಿದ್ದಂತೆಯೇ ಮೈ ಮರೆಯುವಂತಾಯ್ತು.
ಮೊಗ ಬಿಸಿಯಾಯ್ತು ಹಾಗೆ ಒಮ್ಮೆ ಉಸಿರೆಳೆದುಕೊಂಡೆ. ಆತನ ಕಂಗಳನ್ನು ಎದುರಿಸದಾದೆ. ಸುಮ್ಮನೆ ತಲೆ ತಗ್ಗಿಸಿನಿಂತವಳ ಕೈ ಹಿಡಿದಾಗ ಮೈ ಜುಮ್ಮೆಂದು ಮತ್ತೂ ಭೂ ಮುಖಿಯಾದೆ. ಕೊಂಚ ಕಾಲವಾಯ್ತೇನೋ
ಅಷ್ಗ್ತೆ

"ಜಾರಿಣಿ" ಅಬ್ಬರದ ದನಿಗೆ ಬೆಚ್ಚಿಬಿದ್ದೆ

ಆ ಯುವಕನೂ ಬೆದರಿದನೆಂದೆನಿಸುತ್ತದೆ. ಮುನಿವರ್ಯರೆಂದರೆ ಸಾಮಾನ್ಯವೇ?

ಶಾಪಕ್ಕೆ ಬೆದರಿ ಆತ ಅಲ್ಲಿಂದ ಕಾಲು ಕಿತ್ತ.

ಉಳಿದವಳು ನಾನು ಮತ್ತು ಅಗಸ್ತ್ಯ

"ಚಂಚಲತೆಗೆ ಮತ್ತೊಂದು ಹೆಸರೇ ಹೆಣ್ಣೆಂದು ನೀನು ಇಂದು ನಿರೂಪಿಸಿದೆ. ಮೊದಲೇ  ನಿರ್ಧರಿಸಿದಂತೆ ನಿನ್ನನ್ನ ಕೆರೆಗೆ ಹಾರವಾಗಿ ಮಾಡಿರಬೇಕಿತ್ತು.. ಇನ್ನೊಬ್ಬನಲ್ಲಿ ಅನುರಕ್ತೆಯಾದ ನೀನು ನನಗೆ ಬೇಡ ಈಗಲೇ ಇದೇ ನದಿಗೆ ಬಿದ್ದು ಸಾಯಿ"

ನನಗೂ ಅದೇ ಬೇಕಿತ್ತು
ಬೇಸತ್ತಿದ್ದೆ.
ಸಾಯುವುದಕ್ಕೂ ಸ್ವಾತಂತ್ರ್ಯವಿಲ್ಲ
ಬದುಕಿಗೂ
ಈ ಬದುಕಿಗೆ ವಿದಾಯ

ಮತ್ತುಚ್ಚರಿಸಲಿಲ್ಲ
ಸುಮ್ಮನೇ ನೀರಿನತ್ತ ನಡೆದೆ... ನೀರಲಿ ಲೀನವಾಗಲಾರಂಭಿಸಿದೆ

ಅಗಸ್ತ್ಯ ಅಬ್ಬರಿಸಿ ನುಡಿಯುತ್ತಿದ್ದ
"ಈ ನದಿ ಕಾವೇರಿ ಎಂದು ಹೆಸರು ಪಡೆಯಲಿ, ನಿನ್ನ ಹೆಸರೂ ಕೂಡ ಇದಕ್ಕೆ ಬೇಡ ... ಕಾವೇರಿ....................................."

ಕಾವೇರಿ ಎಂದುಚ್ಚರಿಸುತ್ತಾ  ನಾ ಮುಂದೆ ನಡೆಯತೊಡಗಿದೆ

ಆಬ್ಬರಿಸಿ ಬರುತ್ತಿತ್ತು ನದಿಯ ನೀರು ಮುಂದೆ ಮುಂದೆ

ಕಾಲು, ಹೊಟ್ಟೆ, ಎದೆಯನ್ನೆಲ್ಲಾ ತಡವಿ ಮುದ್ದಿಸುತ್ತಾ ನನ್ನ ಸೆಳೆದುಕೊಳ್ಳಲಾರಂಭಿಸಿತು

ಕಾವೇರಿಯಾಗತೊಡಗಿದೆ ನಾನೂ
ಅದೇ ನೀರಿನಂತೆ ನಾನೂ
 ಹರಿಯಬೇಕು... ಹರಿಯುತ್ತಲೇ ಇರಬೇಕು

ಶ್ವಾಸ ಕಟ್ಟತೊಡಗಿತು ಕಣ್ ಮುಚ್ಚಲಾರಂಭಿಸಿದೆ
ಲೋಪಮುದ್ರೆ ಕಾವೇರಿಯಾಗಿ ಪರಿವರ್ತಿತಳಾಗತೊಡಗಿದಳು ...ಬಯಸಿದ ಸ್ವಾತಂತ್ರದೊಂದಿಗೆ
ನೀರಿನಲ್ಲಿ ವಿಲೀನವಾದಳು