Sunday, March 29, 2009

ಗುಣಕ್ಕೆ ಧರ್ಮವಾವುದಯ್ಯ?

"ಹೇಮಂತ್. ಇವತ್ತು ಬರ್ತಾ ಅನೂಪ್‌ನೂ ಕರೆದುಕೊಂಡು ಬಾ" ಓವನಿಂದ

ಪಾತ್ರೆ ತೆಗೆಯುತ್ತಾ ಹೇಳಿದರು ಸುಮಾ

"ಯಾಕಮ್ಮ?" ಹೇಮಂತ್‌ನ ಪ್ರಶ್ನೆ

ಹೇರ್ ಡ್ರೈಯರ್ ನಿಂದ ಒಣಗಿಸಿಕೊಳ್ಲುತ್ತಿದ್ದಂತೆ ನಿಲ್ಲಿಸಿದಳು ಶೈಲಾ.ಮುಖದ ಬಣ್ಣಬದಲಾಯಿತು

"ಎಲ್ಲಾ ಹೇಳಿಬಿಡೋಣ . ಅವನಿಂದ ಯಾವುದನ್ನೂ ಮುಚ್ಚಿಡೋದು ಬೇಡ" ಗಂಭೀರವಾಗಿ ಹೇಳಿದರು

"ಅಮ್ಮಾ ಹೇಳೋದೇನೂ ಬೇಡಮ್ಮಾ . ಆಮೇಲೆ ಅನೂಪ್ ಒಪ್ಪಲಿಲ್ಲಾ ಅಂದರೆ? " ಸಿರೀಶ್ ಆತಂಕ ಪಟ್ಟ್

"ಇಲ್ಲಾ ಹೇಮಂತ್. ಈ ವಿಚಾರಗಳಲ್ಲಿ ಸುಳ್ಳು ಹೇಳೋದು ಬೇಡ. ಮದುವೆಯ ನಂತರ ಗೊತ್ತಾದ್ರೆ ಕಷ್ಟ"

"ಅಮ್ಮಾ ಹೀಗೆ ಆಗ್ತಾ ಹೋದ್ರೆ ಶೈಲಾ ಮದುವೇನೆ ಆಗಲ್ಲ ಅನ್ನಿಸುತ್ತೆ . ನಾವು ಹೇಗಿದ್ರೂ ಆ ಊರಿನಿಂದ ಬಂದಿದೀವಿ. ಯಾರಿಗೆ ಹೇಗೆ ಗೊತ್ತಾಗುತ್ತೆ"

ಶೈಲಾ ಅಳಲಾರಂಭಿಸಿದಳು

ತನ್ನ ಗತಕಾಲ ನೆನಪಿಗೆ ಬಂತೇನೋ .

ಹೇಮಂತ್ ತಂಗಿಯನ್ನು ಎದೆಗೊರಗಿಸಿಕೊಂಡ.ಸೀರೀಶ್ ಅವಳ ತಲೆ ನೇವರಿಸಿದ

"ಶೈಲಾ . ಅಳಬೇಡ ಈ ಸಲ ನೋಡೋಣ ನಿನ್ನ ಮೆಚ್ಚಿರೋ ಹುಡುಗ ಅಲ್ವ್ ಆ ಅವನು ಒಪ್ಪಿಕೋತಾನೆ ಅಂತನ್ನಿಸ್ತಿದೆ" ಸಮಾಧಾನಿಸಿದ

"ಇಲ್ಲ ಅಣ್ಣ ನಂಗೆ ಮದುವೇನೆ ಬೇಡ. ಎಲ್ರೆದುರಿಗೂ ಸತ್ಯ ಹೇಳೋದು ಅವರು ಬೇಡ ಅನ್ನೋದು . ನಂಗೆ ಬೇಜಾರಾಗಿ ಹೋಗಿದೆ" ಮತ್ತಷ್ಟು ಜೋರಾಗಿ ಅಳುತ್ತ್ತಾ ಹೇಳಿದಳು

ಆದರೆ ಸುಮಾರ ನಿರ್ಧಾರ ಬಲವಾಗಿತ್ತು

"ಶೈಲಾ ಈ ವಿಷಯ ಬಹಳ ಸೂಕ್ಷ್ಮ .ಸತ್ಯ ಹೇಳೋದ್ರಲ್ಲಿ ತಪ್ಪೇನೂ ಇಲ್ಲ. "

"ಹೇಮಂತ್ ನೀನು ಸಂಜೆ ಕರ್ಕೊಂಡು ಬಾ"

"ಆಯ್ತಮ್ಮ"

ಶೈಲಾ ಕೆಲಸಕ್ಕೆ ಹೋಗಲಿಲ್ಲ.

ಮನದ ತುಂಬಾ ಹಿಂದಿನ ಅಸ್ಪಷ್ಟ ನೆನಪುಗಳು.

ಯಾವುದೂ ಸರಿಯಾಗಿ ಅರಿವಾಗುತ್ತಿರಲಿಲ್ಲ

ಆದರೆ ಅಮ್ಮ ಅವಳು ವಯಸಿಗೆ ಬಂದಾಗಲೇ ಎಲ್ಲವನ್ನೂ ವಿವರಿಸಿದ್ದರು
ಹಾಗಾಗಿಯೇ ಅವಳಿಗೆ ತಿಳಿಯಲು ಸಾಧ್ಯವಾಗಿದ್ದು

ಇತ್ತ ಸುಮಾ ಬಾಲ್ಕನಿಯಲ್ಲಿ ಕುಳಿತರು



ಹದಿನೇಳು ವರ್ಷದ ಹಿಂದಿನ ಆ ನೆನಪುಗಳು ಕಾಡತೊಡಗಿದವು



೧೯೯೨ ಜನವರಿ



ತಬಸ್ಸಮ್ ಮೂಲೆಯಲ್ಲಿ ಕುಳಿತು ಅಳುತ್ತಿದ್ದಳು. ಚಿಕ್ಕ ಮಗು ಇನ್ನೂ ಐದು ವರ್ಷವೂ ಪೂರ್ತಿಯಾಗಿಲ್ಲ. ಈಗಷ್ಟೆ ಹಾಕಿದ್ದ ಮಾಲೆಯಲ್ಲಿ ರವಿ ಫೋಟೋದಲ್ಲಿ ನಗುತ್ತಿದ್ದರು.ಇನ್ನೂ ದೀಪವೂ ಆರಿಲ್ಲ.

ಈ ಡಿಸೆಂಬರ್ ಆರು ಬಾಬ್ರಿ ಮಸೀದಿ ಉರುಳಿದ ದಿನ ಆದರೆ ಅದು ಕೇವಲ ಬಾಬ್ರಿ ಮಸೀದಿಯ ದ್ವಂಸವಾಗಿರಲಿಲ್ಲ . ಸುಮಾ ಹಾಗು ಅವಳಂತಹ ಎಷ್ಟೋ ಜನರ ಮಾಂಗಲ್ಯ, ತಬಸಮ್ ಹಾಗು ಅವಳಂತಹ ಎಷ್ಟೋ ಜನರ ತಂದೆ ತಾಯಿ, ಅಣ್ಣ ತಂಗಿ ತಮ್ಮ ,ಸುಖ ಶಾಂತಿ, ನೆಮ್ಮಧಿಗಳ ಸಮಾಧಿಯಾಗಿತ್ತು.

ಎಲ್ಲೋ ನಡೆದ ಪರಸ್ಪರ ಕಚ್ಚಾಟ ನೆಮ್ಮದಿಯಿಂದ ಬಾಳುತ್ತಿದ್ದ ಸುಮಾ ಹಾಗು ಅವಳ ಪಕ್ಕದ ಮನೆಯಲ್ಲಿಯೇ ಇದ್ದ ಪ್ರೀತಿ ಹಾಗುಇಸ್ಮಾಯಿಲ್ ರವರ ಬದುಕಿಗೆ ರಾಡಿ ಎಬ್ಬಿಸಿತು

ಸುಮಾ ಮನೆಯ ಪಕ್ಕದಲ್ಲಿಯೇ ಆ ಸಂಸಾರ ಬಂದಿತ್ತು ಒಂದು ಆರು ವರ್ಷಗಳಾಗಿದ್ದವೇನೋ .

ಅವರಿಬ್ಬರದು ಪ್ರೇಮ ವಿವಾಹ.

ಹಾಗಾಗಿ ಅವರ ಮನೆಗೆ ಎರೆಡೂ ಕಡೆಯಿಂದಲೂ ನೆಂಟರು ಬರುತ್ತಿರಲಿಲ್ಲ.

ಆದರು ಅವರಿಬ್ಬರದು ಆದರ್ಶ ದಾಂಪತ್ಯವೆನಿಸಿತ್ತು

ಸುಮಾಗೆ ಪ್ರೀತಿ ಬಹಳ ಮೆಚ್ಚಿನವಳಾಗಿದ್ದಳು.

ಪ್ರೀತಿಯ ಬಾಣಂತನವನ್ನು ಮಾಡಿದ್ದು ಸುಮಾಳೇ
ಸುಮಾಗೆ ಈಗಾಗಲೆ ಇಬ್ಬರು ಮಕ್ಕಳಿದ್ದರು. ರವಿಯ ಜೊತೆಯಲ್ಲಿ ನೆಮ್ಮದಿಯಿಂದ ಬದುಕುತ್ತಿದ್ದರು
ಬದುಕಿಗೆ ಬೆಂಕಿ ಬಿದ್ದುದ್ದು ಆ ಡಿಸೆಂಬರ್ ನಲ್ಲಿಯೇ.
ಅಂದು ಬಾಬ್ರಿ ಮಸೀದಿ ಉರುಳಿಸಿದರೆಂಬ ಸುದ್ದಿ ಹಬ್ಬಿದ ಹಿಂದೆಯೇ
ಹಲವಾರು ಕೊಲೆಗಳು ನಡೆದವು
ಅದರಲ್ಲಿಯೇ ರವಿಯ ಮರಣವೂ ಆಗಿತ್ತು
ತಬಸ್ಸಮ್ ಅನ್ನು ಮನೆಯಲ್ಲಿ ಸುಮಾಳ ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಿದ್ದ ಪ್ರೀತಿ ಹಾಗು ಇಸ್ಮಾಯಿಲ್ ಸಹಾ ದುರುಳರ ದಾಳಿಗೆ ಬಲಿಯಾದರು.
ಹೇಮಂತ್ ಹಾಗು ಸಿರೀಶ್‌ಗೆ ಸುಮಾ ಇದ್ದಳು. ಅವರ ಅಜ್ಜಿ ಇದ್ದರು ಆದರೆ ತಬಸ್ಸಮ್ ? ತಬಸ್ಸಮ್ ಅನಾಥಳಾಗಿದ್ದಳು/
ಎಲ್ಲಿ ಬಿಡುವುದು .
ಆ ಹದಿನೈದು ದಿನ ತಬಸ್ಸಮ್ ಸುಮಾ ಮನೆಯಲ್ಲಿಯೇ ಇದ್ದಳು. ತನ್ನ ಮಗನ ಮರಣ ಮುಸಲ್ಮಾನರಿಂದಲೇ ಆಯಿತೆಂಬ ದಳ್ಳುರಿಗೆ ಸುಮಾಳ ಅತ್ತೆ ಆ ಮಗುವನ್ನು ಪ್ರತಿ ದಿನ ಬೈಯ್ಯುತ್ತಿದ್ದರು. ಪುಟ್ಟ ಮಗು ಕಂಗಾಲಾಗಿ ಹೋಗಿತ್ತು
ಅಂದು ಮನೆಯಲ್ಲಿ ರಣರಂಗವೇ ಆಗಿತ್ತು
"ಸುಮಾ ಈ ಅನಿಷ್ಟಾನ ಎಲ್ಲಾದರೂ ಅನಾಥಾಶ್ರಮದಲ್ಲಿ ಬಿಟ್ಟು ಬಿಡು. ಸಾಕು ನೋಡಿಕೊಂಡಿದ್ದು"
ಸುಮಾಳ ಮನಸ್ಸು ವಿಹಲ್ವವಾಗಿತ್ತು
ಆ ಮಗುವನ್ನು ಹಾಗೆ ಬಿಟ್ಟು ಬಿಡಲು ಮನಸ್ಸು ಬರಲಿಲ್ಲ.ಸುಮಾ ಹೃದಯ ಗಟ್ಟಿ ಮಾಡಿಕೊಂಡು ನುಡಿದಳು
"ಅತ್ತೆ ತಬಸ್ಸಮ್ ‌ನ ನಾನು ದತ್ತು ತಗೋಳ್ನ ಅಂತಿದೀನಿ"

"ಅಯ್ಯೋ ! ನಿಂಗ್ಯಾಕೆ ಈ ಕೆಟ್ಟ ಬುದ್ದಿ ಬಂತು . ಮನೆ ಹಾಳು ಮಾಡಿದವರ ಮನೆ ಬೆಳಗೋಕೆ ಹೋಗ್ತೀದ್ದೀಯಲ್ಲಾ"
ಅತ್ತೆ ಕಿರುಚಿದರು
"ನಾನಿನ್ನು ಈ ಮನೆಲಿ ಒಂದರೆ ಘಳಿಗೇನೂ ಇರೋದಿಲ್ಲ . ನನ್ನ ಮಗನ ಜೊತೇನೆ ನಾನು ಹೋಗಿದ್ರೆ ಚೆನ್ನಾಗಿರ್ತಿತ್ತೇನೋ. "
ಅವರ ಗೊಣಗಾಟದ ನಡುವಲ್ಲಿಯೂ ಸುಮಾಳ ನಿರ್ಧಾರ ಅಚಲವಾಗಿತ್ತು.
"ಅತ್ತೆ ಹೋದವರು ಹೋದರು . ನನ್ನ ಮಕ್ಕಳಿಗೆ ತಾಯಿ ನಾನಿದ್ದೇನೆ. ಆದರೆ ಪಾಪ ಆ ತಬಸಮ್ಅಮ್ಮ ಅಪ್ಪ ಇಬ್ಬರನ್ನೂ ಕಳೆದುಕೊಂಡು ಅನಾಥವಾಗಿದೆಯಲ್ಲ ಅತ್ತೆ "
"ಹಾಗಂತ ಯಾವುದೋ ಧರ್ಮದೋಳನ್ನ ನಮ್ಮ ಮಗಳು ಅಂತ ಹೇಗೆ ಮಾಡಿಕೊಳ್ಳೋದಿಕ್ಕೆ ಆಗುತ್ತೆ? ಅದೂ ಮುಸ್ಲಿಂ.ನ?ಅವಳ ನೆಂಟರು ಬೇರೆ ಯಾರಾದರೂ ನೋಡಿಕೊಳ್ಳಲಿ ಬಿಡು. ನೀನೆ ನಿರ್ಧಾರ ಮಾಡು ನಾನಿರ್ಬೇಕು ಇಲ್ಲ ಅವಳಿರಬೇಕು."
ಅತ್ತೆ ಕಡೆ ನಿರ್ಧಾರ ಎನ್ನುವಂತೆ ಕಠಿಣವಾಗಿ ನುಡಿದು ಹೋಗಿದ್ದರು ಹೋಗಿದ್ದು ಮೈದುನನ ಮನೆಗೆ
ಅಂದೇ ಕಡೆ ಅವರು ಇತ್ತ ತಲೆ ಹಾಕಲಿಲ್ಲ
ಸುಮಾಳೂ ಅವರನ್ನು ಕರೆಯುವ ಗೋಜಿಗೆ ಹೋಗಲಿಲ್ಲ
ತಬಸ್ಸಮ್ ಶೈಲಾ ಆದಳು.
ಕಾನೂನಿನ ಪ್ರಕಾರ ಅವಳನ್ನು ದತ್ತು ಪಡೆದಳು
ಸುಮಾಳ ಮನೆಯವರಿಗೂ ಹಾಗು ಅತ್ತೆ ಮನೆಯವರಿಗೂ ಇರಿಸು ಮುರಿಸಾಯಿತು
ಎಲ್ಲರಿಂದಳೂ ಅಕ್ಶರಶ: ಬಹಿಷ್ಕ್ರುತಳಾದಳು. ಆದರೂ ಎದೆಗುಂದಲಿಲ್ಲ.
ಆದರೆ ಹೇಮಂತ್ ಹಾಗು ಸಿರೀಶ್ ಶೈಲಾಳನ್ನು ತಂಗಿಯಾಗಿ ಸ್ವೀಕರಿಸಿದ್ದು ಮಾತ್ರವಲ್ಲ ಅವಳ ಬಗ್ಗೆ ಅಪಾರ ಅಕ್ಕರೆಯನ್ನೂ ಹೊಂದಿದರು. ತಾವು ಹಿಂದೆ ಇದ್ದ ಊರಿನಿಂದ ಬೆಂಗಳೂರಿಗೆ ಬಂದು ನೆಲೆಸಿದ್ದರು. ಸುಮಾಳ ಡಿಗ್ರಿ ಅವಳಿಗೆ ಕೆಲಸವನ್ನೂ ಕೊಡಿಸಿತ್ತು. ಬದುಕು ಸರಾಗವಾಗಿಯೇ ಸಾಗುತ್ತಿತ್ತು
ಆದರೆ ನಿಜವಾದ ತೊಂದರೆ ಈಗ ಆಗುತ್ತಿತ್ತು
ಶೈಲಾಳ ಮದುವೆಗೆ ಇದ್ದ ತೊಡಕೆಂದರೆ ಅವಳು ಹುಟ್ಟಿನಿಂದ ಮುಸ್ಲಿಂ ಎಂಬುದು. ಆಚಾರ ವಿಚಾರಗಳೆಲ್ಲವೂ ಹಿಂದೂ ಬ್ರಾಹ್ಮಣ ಮನೆತನದ್ದೇ ಕಲಿತದ್ದರಿಂದ ಅವಳ ಮದುವೆ ಎಂಬುದು ಗೊಂದಲಮಯವಾಗಿತ್ತು
ಒಂದೆರೆಡು ಸಂಬಂಧ ಕುದುರಿತಾದರೂ ಸುಮಾಳ ಹಿತ ಶತೃಗಳಿಂದ ಅವು ನಿಂತು ಹೋಯಿತು
ಕೆಲವರು ಒಪ್ಪಲಿಲ್ಲ.
ಆದ್ದರಿಂದ ಬೇರಾರದೋ ಕಡೆಯಿಂದ ಈ ವಿಷಯ ತಿಳಿಯುವ ಬದಲು ತಾನೇ ಈ ವಿಷಯ ಮೊದಲೇ ಹೇಳಿಬಿಡುವುದು ಒಳ್ಳೆಯದೆಂದು ಸುಮ ನಿರ್ಧರಿಸಿದ್ದರಿಂದ ಹೆಣ್ಣು ನೋಡಲು ಬರುವ ಮುನ್ನವೇ ವಿಷಯ ತಿಳಿದವರು ಹಿಂದೇಟು ಹಾಕುತ್ತಿದ್ದರು
ಹಾಗಾಗಿ ಕಂಕಣ ಬಲ ಎಂಬುದು ಅವಳಿಗೆ ಇನ್ನೂ ಕನಸಾಗಿತ್ತು
ಆದರೆ ಅನೂಪ್ ಹೇಮಂತನ ಸ್ನೇಹಿತ. ಶೈಲಾಳನ್ನ ಮೆಚ್ಚಿದ್ದ
ಇಂದು ಅವನು ಬರುವವನಿದ್ದ
ಸಾಯಂಕಾಲವಾಯ್ತು
ಹೇಮಂತನ ಜೊತೆ ಅನೂಪ್ ಬಂದ.
ಔಪಚಾರಿಕ ಮಾತುಕತೆಯಾದ ಮೇಲೆ ಸುಮ ಇದ್ದ ವಿಷಯವನ್ನು ತಿಳಿಸಿದರು
ಅನೂಪ್ ದಿಗ್ಭ್ರಾಂತನಾದರೂ ಸಾವರಿಸಿಕೊಂಡ
"ಆಂಟಿ ನಾನು ಮದುವೆಯಾಗಬೇಕಿರೋದು ಶೈಲಾನ. ಅವಳ ಜಾತಿ ಮತ ನಂಗೇನು ಮುಖ್ಯ ಅಲ್ಲ . ಆದರೂ ನನ್ನ ತಂದೆ ತಾಯಿಗೆ ವಿಷಯ ತಿಳಿಸಿ ಮುಂದುವರೀತೇನೆ. ಅವರೂ ನನ್ನ ಆಸೆಗೆ ಯಾವತ್ತು ಬೇಡ ಅಂದಿಲ್ಲ. "ಎಂದು ಹೇಳಿ ಹೊರಟ
ಅನೂಪನ ತಂದೆ ತಾಯಿ ಮದುವೆಗೆ ವಿಶಾಲ ಹೃದಯದವರು. ಮದುವೆಗೆ ಒಪ್ಪಿದರು. ಆದರೆ ಈ ವಿಷಯ ಬೇರಾರಿಗೂ ತಿಳಿಸಬಾರದಾಗಿ ಹೇಳಿದರು.
ಮದುವೆಯನ್ನ ವಿಧಿವತ್ತಾಗಿ ಹಿಂದೂ ಸಂಪ್ರದಾಯದಂತೆಯೇ ಮಾಡಿಕೊಡಬೇಕೆಂಬುದು ಅವರ ಶರತ್ತಾಗಿತ್ತು.
ಸುಮಾ ಕಂಗಾಲಾದರು
ಮದುವೆಗೆ ಕನ್ಯಾದಾನಕ್ಕೆ ಹಸೆಮಣೆಯ ಮೇಲೆ ಕೂರುವವರ್ಯಾರು?.ಅದೂ ಸಂಬಂಧದಲ್ಲೇ ಆಗಬೇಕು.
ಎರೆಡೂ ಕಡೆಯ ವಿರೋಧ ಕಟ್ಟಿಕೊಂಡದ್ದರಿಂದ ಯಾರೂ ಕೂರುವ ಹಾಗಿರಲಿಲ್ಲ.
ಆದರೂ ಸುಮಾ ಸ್ವಾಭಿಮಾನ ಬಿಟ್ಟು ಎಲ್ಲರನ್ನೂ ಕೇಳಿಕೊಂಡರು.
ಒಬ್ಬ ಮುಸ್ಲಿಂ ಹುಡುಗಿಯ ಕನ್ಯಾದಾನಕ್ಕೆ ಯಾರೂ ಒಪ್ಪಲಿಲ್ಲ.
ಕೊನೆಗೆ ಇದ್ದ ದಾರಿಯೊಂದೇ ಹೇಮಂತನ ಮದುವೆ ಮಾಡಿದ ನಂತರ
ಹೇಮಂತ್ ಹಾಗು ಹೇಮಂತನ ಹೆಂಡತಿಯನ್ನೇ ಕನ್ಯಾದಾನಕ್ಕೆ ಕೂರಿಸುವುದು.
ಹೇಮಂತನ ಮದುವೆ ತರಾತುರಿಯಲ್ಲಿ ನಡೆಯಿತು.
ಅವನ ಮದುವೆಗೆ ಹಸೆಮಣೆಯಲ್ಲಿ ಕೂತವರು ಅವನ ಚಿಕ್ಕಪ್ಪ
ಹೇಮಂತನ ಕಾಲೇಜ್ ಸಹಪಾಠಿ ರಮ್ಯಾ ಅವನ ಮಡದಿಯಾದಳು.
ಕೊನೆಗೂ ಶೈಲಾಳ ಮದುವೆ ಅನೂಪನ ಜೊತೆಯಲ್ಲಿ ಹಿಂದೂ ಧರ್ಮದ ವಿಧಿ ವಿಧಾನದೊಂದಿಗೆ ನಡೆಯಿತು. ಅಣ್ಣ ಅತ್ತಿಗೆ ಅವಳ ಪಾಲಿಗೆ ತಾಯಿ ತಂದೆಯಾದರು.
ಸುಮಾರ ಮನಸ್ಸು ಆನಂದದಲ್ಲಿ ತೇಲಾಡಿತು. ಗೆದ್ದೆನೆಂಬ ನಲಿವು ಅವರ ಕಣ್ಣಲ್ಲಿ ಕಾಣುತ್ತಿತ್ತು.

Tuesday, March 24, 2009

ಪ್ರತಿ ಮನದೊಳಗೊಂದು ಬೆಳಕು

"ಸಾರ್ ಇದೊಂದು ತಿಂಗಳು ಅಡ್ಜಸ್ಟ್ ಮಾಡಿಕೊಳ್ಳಿ ಹೇಗಾದರೂ ಮಾಡಿ ಬಾಡಿಗೆ ತಂದು ಹೊಂದಿಸ್ತೀನಿ. " ಆ ಹುಡುಗ ಗೋಗರೆಯುತ್ತಿದ್ದ.
ಆದ್ರೆ ಮನೆ ಮಾಲೀಕನದು ಕಲ್ಲೆದೆಯಾಗಿತ್ತು. ಆತ ಕ್ರೂರ ತನಕ್ಕೆ, ಕಟುಕತೆಗೆ ಉದಾಹರಣೆಯಾಗಿದ್ದ. ಆತನೆಂದರೆ ಜನ ದೂರ ಸರಿಯುತ್ತಿದ್ದರು.ಇಲ್ಲಿಯವರೆಗೆ ಒಂದಾದರೂ ಒಳ್ಳೆಯ ಕೆಲಸಮಾಡಿರಲಿಲ್ಲ. ಹಾಗಾಗಿಯೇ ಏನೋ ಇದ್ದೊಬ್ಬ ಮಗ ಹಾಳು ದುರಭ್ಯಾಸ ಕಲಿತು ಹಾಳಾಗಿದ್ದ. ಮಗಳು ಸಿರಿವಂತರ ಸೊಸೆಯಾಗಿದ್ದರೂ ನೆಮ್ಮದಿ ಇಲ್ಲದೆ ಆತ್ಮ ಹತ್ಯೆ ಮಾಡಿಕೊಂಡಿದ್ದಳು. ಆದರೂ ಆ ಮಾಲೀಕನಿಗೆ ಬುದ್ದಿ ಬಂದಿರಲಿಲ್ಲ

"ನೋಡಯ್ಯ ಈಗಾಗಲೇ ಎರೆಡು ತಿಂಗಳಾಗಿವೆ ಬಾಡಿಗೆ ಬೇಕೆ ಬೇಕು ಇಲ್ಲಾಂದ್ರೆ ಸಾಮಾನೆಲ್ಲಾ ಹೊರಗೆ ಹಾಕ್ತೀನಿ" ಆತನ ದರ್ಪದ ಮಾತಿಗೆ ಹುಡುಗ ಬೆದರಿದ
ಆತ ಇಂಜಿನಿಯರಿಂಗ್ ಮಾಡಿದ್ದ . ಹೋದವರ್ಷ ತಾನೆ ಓದು ಮುಗಿಸಿ ಕೆಲಸಕ್ಕೆ ಬೆಂಗಳೂರಿಗೆ ಬಂದಿದ್ದ. ಚೆಂದದ ಮಾರ್ಕ್ಸ್‌ ಪಡೆದಿದ್ದರಿಂದ ಕೆಲ್ಸ ಸಿಗುವುದೇನೂ ಕಷ್ಟವಾಗಲಿಲ್ಲ. ಒಂದೆರೆಡು ತಿಂಗಳಾಗಿತ್ತೇನೋ ಎಲ್ಲೆಲ್ಲೂ ನಡೆಯುತ್ತಿರುವಂತೆ ಅವನ ಕಂಪೆನಿಯೂ ಬಾಗಿಲು ಜಡೆದು ಮನೆಗೆ ಕಳಿಸಿತು.
ಇನ್ನೊಂದೆರೆಡು ತಿಂಗಳಲ್ಲಿ ಮತ್ತೆ ಕರೆಸಿಕೊಳ್ಳುವುದಾಗಿ ವಾಗ್ವಾದವನ್ನು ನೀಡಿತ್ತು
ಆರ್ಥಿಕ ಸಂಕಷ್ರದಿನಗಳಲ್ಲಿ ಫ್ರೆಶರ್ ಎಂದು ಬಿರುದು ಹೊತ್ತ ಆತನಿಗೆ ಕೆಲಸ ಕೊಡಲು ಯಾವ ಕಂಪೆನಿಯೂ ಮುಂದೆ ಬರಲಿಲ್ಲ. apply apply o reply ಆಗಿ ಹೋಗಿತ್ತು. ಎರೆಡು ತಿಂಗಳಿಂದ ಬಾಡಿಗೆ ಬೇರೆ ಕೊಟ್ಟಿರಲಿಲ್ಲ . ಊರಿನಿಂದ ಬಡ ಅಮ್ಮ ಹಣ ಕಳುಹಿಸುವುದಕ್ಕೆ ಹರ ಸಾಹಸ ಪಡುತ್ತಿದ್ದಳು. ಊಟಕ್ಕೆ ತಿಂಡಿಗೆ ಪ್ರತಿಯೊಂದಕ್ಕೂ ಹಣ ಹೊಂದಿಸಲು ಕಷ್ಟ ಪಡುತ್ತಿದ್ದ.
"ಸಾರ್ ಹೇಗಾದರೂ ಮಾಡಿ ನಾಳೆ ಸಮಯ ಕೊಡಿ . ದುಡ್ಡು ಅರೇಂಜ್ ಮಾಡ್ತೀನಿ. "ಬೀಸುವ ದೊಣ್ಣೆ ತಪ್ಪಿದರೆ ಸಾವಿರ ವರ್ಷಆಯಸ್ಸು ಎಂದು ಬೇಡಿಕೊಂಡ.
"ಹಾ ಆಗಲಿ. ನಾಳೆ ಸಂಜೆಯೊಳಗೆ ದುಡ್ಡು ಬೇಕು ನೋಡು" ಮಾಲೀಕ ಮೀಸೆ ತಿರುವಿಕೊಂಡು ಕಾರ್ ತೆಗೆದುಕೊಂಡು ಹೋದ
ಬದುಕಿದೆ ಎನ್ನುವಷ್ಟ್ರರಲ್ಲಿ ಹಾಲಿನ ಹೆಂಗಸು ಬಂದು ಜಗಳ ಮಾಡಿದಳು. ದಿನಸಿ ಅಂಗಡಿಯವನ ಗಲಾಟೆಯಂತೂ ಬೀದಿಗೆ ಬೀದಿಯೇ ನಿಂತು ನೋಡುತ್ತಿತ್ತು. ಎಲ್ಲರೂ ಒಂದೊಂದು ಗಡುವು ನೀಡಿ ಹೋದರು
ಆ ಹುಡುಗ ಬಹಳ ಧೈವ ಭಕ್ತಿಯುಳ್ಳವನು. ಮನೆಗ ಬಂದು ಬಾಗಿಲು ಹಾಕಿಕೊಂಡು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ.ದೇವರ ಮುಂದೆ ಮಂಡಿಯೂರಿ ಪ್ರಾರ್ಥಿಸಿದ. ತನ್ನಾಳವನ್ನೆಲ್ಲಾ ದೇವರಲ್ಲಿ ನಿವೇದಿಸಿಕೊಂಡ. ತನ್ನ ಗುರಿಯನ್ನು ಹೇಳಿಕೊಂಡ. ಊರಿನಲ್ಲಿ ಕಷ್ಟ ಪಟ್ಟು ಅಮ್ಮ ನನ್ನನ್ನು ಓದಿಸಿದ್ದಾಳೆ.ಅವಳನ್ನು ಈ ಇಳಿವಯಸಿನಲ್ಲಾದರೂ ಸಂತಸವಿಡುವಂತೆ ಮಾಡಲಾಗಲಿಲ್ಲವಲ್ಲ ಎಂದು ಒದ್ದಾಡಿದ

ಫೋಟೋ ದಲ್ಲಿನ ದೇವರು ನಗುತ್ತಲೇ ಇದೆ ಅನ್ನಿಸಿತು. "ನೀನೂ ನನ್ನನ್ನು ಅವಹೇಳನ ಮಾಡುತ್ತೀಯಾ " ದೂರಿದ
"ಯಾವುದಾದರೂ ಪವಾಡ ಮಾಡು "ಎಂದು ಬೇಡಿಕೊಂಡ.
ಎಲ್ಲಾ ಸರಿ ಹೋದರೆ ಮುಂದಿನವಾರದ ಕಂಪನಿಯಲ್ಲಿ ಕೆಲಸ ಖಂಡಿತಾ ಸಿಗುತ್ತದೆ . ಅದಕ್ಕಾದರೂ ಓದಬೇಕು ಎಂದುಕೊಂಡು ಓದತೊಡಗಿದ
ಎಲ್ಲಕ್ಕೂ ದೇವರ ನಗುವೊಂದೇ ಉತ್ತರವಾಗಿತ್ತು .
ಇತ್ತ ಮನೆ ಮಾಲೀಕನ ಮನೆಯಲ್ಲಿ ಪವಾಡವೊಂದು ನಡೆಯಿತು.
ಬಾಡಿಗೆ ಮನೆಗಳನ್ನೆಲ್ಲಾ ಸುತ್ತುವ ಅಭ್ಯಾಸ ಆ ಮಾಲೀಕನಿಗೆ ಆ ಹುಡುಗನ ಮನೆಯನ್ನೂ ನೋಡಿಕೊಂಡು ಮನೆ ಮಾಲೀಕ ತನ್ನ ಮನೆಗೆ ಕಾಲಿಡುತ್ತಿದ್ದಂತೆ ಅದಾವುದೋ ಆತ್ಮವೋ ಅಂತಹ ಯಾವುದೋ ಶಕ್ತಿಯೋ ಉಜ್ವಲ ಬೆಳಕಿನಿಂದ ಹೊರಗೆ ಹೊರಟಿತು. ಮಾಲೀಕ ಕಣ್ಣುಜ್ಜಿಕೊಂಡು ನೋಡಿದ ಮತ್ತೇನು ಕಾಣಲಿಲ್ಲ. ಯಾವುದೋ ಭ್ರಮೆ ಏನೋ ಎಂದುಕೊಂಡು ಸುಮ್ಮನಾದ.
ಆ ಬೆಳಕಿನ ಗಮನ ಆ ಹುಡುಗನ ಮನೆಯತ್ತ ಹೊರಳಿತು
ಅವನ ಮನೆಗೆ ಕರೆಂಟ್ ಇರಲಿಲ್ಲ ನೆನ್ನೆ ತಾನೆ ವಿದ್ಯುತ್ ಕಂಪೆನಿಯವರು ಅವನ ಮನೆಯ ಕರೆಂಟ್ ಕನೆಕ್ಶನ್ ಕಿತ್ತಿದ್ದರು.
ಹುಣ್ನಿಮೆಯ ಚಂದ್ರನ ಬೆಳಕು ಧಾರಾಳವಾಗಿ ಹರಡಿತ್ತು ಪುಟ್ಟಮನೆಯ ತೆರೆದಿದ್ದ ಪುಟ್ಟ ಕಿಟಕಿಯ ಒಳಗೆ ಬೆಳಕು ಹರಡಿತ್ತು. ಆ ಬೆಳಕಿನಲ್ಲಿಯೇ ಆ ಹುಡುಗನ ಓದು ಸಾಗಿತ್ತು
ಅವನ ಕಷ್ಟ ಬೆಳಕಿಗೆ ನೋಡಲಾಗಲಿಲ್ಲ. ತನ್ನ ಬೆಳಕಾದರೂ ಅವನಿಗೆ ಬಳಕೆಯಾಗಬಾರದೇ ಅನ್ನಿಸಿತು. ಆದರದು ಸಾಧ್ಯವಾಗಲಿಲ್ಲ.
ಬೆಳಕು ಆ ಹುಡುಗನಿಗಾಗಿ ಮಿಡಿಯುತ್ತಿತ್ತು ತನ್ನಿಂದ ಆ ಹುಡುಗನಿಗೆ ಹೇಗೆ ಸಹಾಯಮಾಡಬಹುದು ಎಂದು ಯೋಚಿಸುತ್ತಿತ್ತು.
ಕೊಂಚ ಹೊತ್ತು ಅವನನ್ನೇ ದಿಟ್ಟಿಸುತ್ತಾ ಕುಳಿತ ಬೆಳಕು ಮತ್ತೆ ತನ್ನ ಮೂಲಕ್ಕೆ ಹಿಂದಿರುಗಿತು.
ರಾತ್ರಿಯಲ್ಲಿ ಮರಳಿದ ಬೆಳಕ ಕಂಡು ಮಾಲೀಕ ಬೆಪ್ಪಾದ . ನೋಡು ನೋಡುತ್ತಿದ್ದಂತೆ ಅದು ಮರೆಯಾಯ್ತು. ಏನಿದು ಎಂದು ಯೋಚಿಸುತ್ತಲೇ ಮಲಗಿದ

ಬೆಳಗಾಯಿತು.
ಕಿಟಕಿಯ ಬಳಿ ಓದುತ್ತಾ ಕುಳಿತಿದ್ದಂತೆ ನಿದ್ರಿಸಿದ್ದ ಹುಡುಗ ಕಣ್ಣ ಮೇಲೆ ಬಿದ್ದ ಸೂರ್ಯ ರಶ್ಮಿಯಿಂದ ಎಚ್ಚರವಾದ.ಆಗಲೆ ನಾಳೆ ಬಂದುಬಿಟ್ಟಿತೇ. ಮುಂದಿನದನ್ನು ನೆನದು ಭಯ ಪಟ್ತ
ಹುಡುಗ ಬ್ರಶ್ ಮಾಡಿಕೊಂಡು ಖುರ್ಚಿಯ ಮೇಲೆ ಕೂತಂತೆಯೇ ದೊಪ್ಪೆಂದು ಕಿಟಕಿಯಿಂದ ಏನೋ ಬಿದ್ದಂತಾಯ್ತು .
ಕಾಗದದ ಮುದ್ದೆ ಅದು
ಬೆದರುತ್ತಲೇ ಕಾಗದವನ್ನು ನಡುಗುವ ಕೈಗಳಿಂದ ಬಿಡಿಸಿದ.
ನಂಬಲಾಗಲಿಲ್ಲ
ಅದರಲ್ಲಿ ಹಣ
ಮಾಲೀಕನಿಗೆ , ಹಾಲಿನವನಿಗೆ, ದಿನಸಿಯವನಿಗೆ ಕೊಡಬೇಕಾದಷ್ಟು ಹಣ.
ಜೊತೆಯಲ್ಲೇ
"ಹೆದರಬೇಡ ಈ ಹಣ ನಿನಗಾಗಿಯೇ. ಬಳಸಿಕೋ" ಎಂಬ ಉಲ್ಲೇಖವಿರುವ ಪತ್ರ
ಹುಡುಗ ಕಕ್ಕಾಬಿಕ್ಕಿಯಾದ. ಸುತ್ತಾಮುತ್ತ ನೋಡಿದ ಬಾಗಿಲು ತೆಗೆದು ಹೊರಗೆ ನೋಡಿದ ಯಾರೂ ಕಾಣಲಿಲ್ಲ
ಈ ಕಾಣದ ಊರಿನಲ್ಲಿ ತನಗೆ ಯಾರು ಸಹಾಯ ಮಾಡುತ್ತಾರೆ?. ಇದು ಖಂಡಿತಾ ದೇವರ ವರವೆಂದೇ ಭಾವಿಸಿದ.
ಎಲ್ಲರಿಗೂ ಹಣದ ಬಾಕಿ ಕೊಟ್ಟ.
ನಿಷ್ಟೆ ಇಂದ ಸಂದರ್ಶನಕ್ಕಾಗಿ ಓದತೊಡಗಿದ. ಬೆಳಕು ಅವನಿಗೆ ಸಹಾಯ ಮಾಡಿ ಸಂತೋಷಗೊಂಡಿತ್ತು. ಮಾಲೀಕ ಹಾಗು ಅವನ ಮನೆಯವರೆಲ್ಲಾ ಹಣ ಎಲ್ಲಿ ಹೋಯಿತೆಂದು ತಲೆ ಕೆಡಿಸಿಕೊಳ್ಳಲಾರಂಭಿಸಿದರು.

ಸಹಜವಾಗಿಯೇ ಕೆಲಸಕ್ಕಾಗಿ ನಡೆದ ಟೆಸ್ಟ್ನಲ್ಲಿ ಆತ ಪಾಸಾದ. ಜೊತೆಗೆ ಎಲ್ಲಾ ರೌಂಡ್ಸ್‌ನಲ್ಲೂ ಗೆದ್ದ.
ನಾಳೆ ನಿಮ್ಮ ಒರಿಜಿನಲ್ಸ್ ಎಲ್ಲಾ ತನ್ನಿ ವೆರಿಫಿಕೇಶನ್ಸ್ ಇರುತ್ತದೆ " ಎಂದು ಕಂಪೆನಿಯ ಎಚ್ ಆರ್ ಹೇಳಿದ .
ಇತ್ತ ಆ ಹುಡುಗನ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.ನೀಳ ಜ್ವಾಲೆಯನ್ನುಗಳುತ್ತಾ ಮನೆಯ ವಸ್ತುಗಳನ್ನೆಲ್ಲಾ ಆಹುತಿ ತೆಗೆದುಕೊಳ್ಳಲಾರಂಭಿಸಿತು.
ಅಗ್ನಿಶಾಮಕ ದಳದವರಿಗೆ ಫೋನ್ ಮಾಡಿದರು
ಎಲ್ಲರೂ ಬೊಬ್ಬೆ ಹೊಡೆಯಲಾರಂಭಿಸಿದರು. ತನ್ನ ಮನೆ ಸುಟ್ಟು ಹೋಗುತ್ತಿದೆಯೇ ಎಂದು ಮನೆ ಮಾಲೀಕ ಎದೆ ಎದೆ ಬಡಿದುಕೊಂಡು ಅಳಲಾರಂಭಿಸಿದ.
ಅಷ್ಟರಲ್ಲಿ ಆ ಹುಡುಗನೂ ಅಲ್ಲಿಗೆ ಬಂದವನೇ ಮನೆಗೆ ಹತ್ತಿದ್ದ ಬೆಂಕಿ ನೋಡಿದವನಿಗೆ ಎದೆಯೇ ಒಡೆದುಹೋದಂತಾಯ್ತು
ಮಾಲೀಕ ಆ ಹುಡುಗನಿಗೆ ಹಿಗ್ಗಾಮುಗ್ಗ ಬೈದ . ತನ್ನ ಮನೆ ಉರಿದುಹೋಗುತ್ತಿದೆ ಅದಕ್ಕೆ ನೀನೆ ಕಾರಣ ಎಂದು ಹೀಗಳೆದ
ಹುಡುಗನಿಗೋ ಅದಾವುದರ ಬಗ್ಗೆಯೂ ಅರಿವಿರಲಿಲ್ಲ
ತನ್ನ್ ಒರಿಜಿನಲ್ಸ್ ಅಲ್ಲಿ ಸಿಕ್ಕಿ ಹಾಕಿಕೊಂಡಿದೆ ಅದು ಸುಟ್ಟು ಹೋದರೆ ನಾಳೆಯ ತನ್ನ ಬದುಕಿನ ಮೇಲೆ ಗಮನ.
ಜೋರಾಗಿ ಚೀರುತ್ತಾ ಒಳ ನುಗ್ಗಿದ ಆದರೆ ಬೆಂಕಿಯ ಜ್ವಾಲೆಯ ಇವನನ್ನೂಮುತ್ತಿತು.
ಅಡುಗೆ ಮನೆಯ ಮೇಲಿನ ಅಟ್ಟದಲ್ಲಿ ಇಟ್ಟಿದ್ದ ಪೆಟ್ಟಿಗೆಯನ್ನ.
ಹೇಗೋ ಮಾಡಿ ಅಲ್ಲಿಗೆ ನುಗ್ಗಿದವನಿಗೆ ಬೆಂಕಿಯೊಂದು ಮುಖಕ್ಕೆ ತಾಗಿ ಪ್ರಜ್ನೆ ತಪ್ಪಿತು. ಅಲ್ಲೇ ನೆಲದ ಮೇಲೆ ಬಿದ್ದ.
ಬೀಳುವಾಗ ಅರಿವಿಲ್ಲದೆ ಅವನ ಕೈಗಳು ದೇವರಿಗೆ ಮುಗಿದಿದ್ದವು.
ಅಲ್ಲಿ ಮನೆ ಮಾಲೀಕನ ಪಕ್ಕದಲ್ಲಿ ಮತ್ತೊಮ್ಮೆ ಬೆಳಕುಕಾಣಿಸಿತು.
ಮಾಲೀಕ ಬೆರಗಾದ . ಬೆಂಕಿಯ ತೀಕ್ಷ್ಣತೆಗಿಂತಲೂ ಪ್ರಕಾಶವುಳ್ಳದ್ದು
ಬೆಳಕು ಅಡುಗೆ ಮನೆ ಕಿಟಕಿಯ ಬಳಿ ಧಾವಿಸಿತು. ಅರಿವಿಲ್ಲದೆ ಮಾಲೀಕ ಅದನ್ನು ಹಿಂಬಾಲಿಸಿದ.
ಬೆಳಕು ಹುಡುಗನ ದುಸ್ಥಿತಿಯನ್ನು ನೋಡಿ ಬೇಸರಗೊಂಡಿತು. ಮರುಕ ಪಟ್ಟಿತು
ಹುಡುಗನನ್ನು ಹೇಗಾದರೂ ಮಾಡಿ ಕಾಪಾಡಬೇಕೆಂದುಕೊಂಡಿತು.
ಮಾಲೀಕನೆಡೆಗೆ ನೋಡಿತು
ಮಾಲೀಕನೂ ಏನೂ ತಿಳಿಯದವನಂತೆ ಬೆಳಕನ್ನೇ ನೋಡುತ್ತಿದ್ದ
ಇದ್ದಕಿದ್ದಂತೆಯೇ ಬೆಳಕು ಮರೆಯಾಯಿತು
ಎಲ್ಲರೂ ಆಶ್ಚರ್ಯಗೊಂಡರು
ಮಾಲೀಕ ಅಡುಗೆ ಮನೆಯ ಕಿಟಕಿಯನ್ನು ಮುರಿದು ಹಾಕಿದ. ಆ ಬೆಂಕಿಯ ಜ್ವಾಲೆಯನ್ನೂ ಲೆಕ್ಕಿಸದೆ ಒಳಗೆ ನುಗ್ಗಿದ
ಒಳಗೆ ಬಿದ್ದಿದ್ದ ಹುಡುಗನನ್ನು ಕಿಟಕಿಯಿಂದಲೇ ಹೊರಗೆ ಹಾಕಿದ . ಹುಡುಗನಿಗೆ ಪ್ರಜ್ನೆ ಬಂತು
ತನ್ನನ್ನು ಬದುಕಿಸಿದ್ದು ದೇವರು ಎಂದುಕೊಂಡು ದೇವರಿಗೆ ನಮಸ್ಕರಿಸಿದ. ಆದರೆ ಅವನಿಗೆ ಒಡೆದು ಹೋದ ಕಿಟಕಿಯ ಮೂಲಕ ಅಡುಗೆ ಮನೆಯಲ್ಲಿ ಕಂಡಿದ್ದು ದೇವರಲ್ಲ ಆದರ್ ತನ್ನ ಪಾಲಿಗೆ ದೆವ್ವವಾಗಿದ್ದ ಮಾಲೀಕ .
"ಸಾರ್ ನನ್ನ ಮಾರ್ಕ್ಸ್ ಕಾರ್ಡ್ ಎಲ್ಲಾ " ಅಟ್ಟದ ಮ್ಮೇಲೆ ಕೈ ತೋರಿದ
ಮಾಲೀಕ ಸರ ಸರ ಹತ್ತಿ ಪೆಟ್ಟಿಗೆಯನ್ನು ತೆಗೆದು ಅದನ್ನೂ ಹೊರಗೆ ಹಾಕಿದ.
ನಂತರ ಅದೇ ಕಿಟಕಿಯ ಮೂಲಕ ಹೊರಗಡೆ ಬಂದ.
ಹುಡುಗನಿಗೆ ಅತ್ಯಾನಂದವಾಗಿತ್ತು.
ಮಾಲೀಕನನ್ನು ತಬ್ಬಿಕೊಂಡ
ಜೋರಾಗಿ ಅಳಲಾರಂಭಿಸಿದ
ಅವನು ಮನದಣಿಯೇ ಅತ್ತ ನಂತರ
"ಸಾರ್ ನೀವು ?" ಆ ಎರೆಡು ಪದಗಳಲ್ಲಿ ಸಾವಿರ ಪ್ರಶ್ನೆಗಳಿದ್ದವು.
ಮಾಲೀಕನ ಮೌನವೇ ಉತ್ತರವಾಯ್ತು. ಎಲ್ಲರ ನೋಟಗಳಲ್ಲಿಯೂ ಅಚ್ಚರಿ ಮೆಚ್ಚುಗೆಗಳಿದ್ದವು
ಹುಡುಗ ಬೇರೆ ಮನೆಗೆ ಹೋದ
ತನ್ನ ಮನೆಗೆ ಬಂದ ಮಾಲೀಕ ಬೆಳಕಿಗಾಗಿ ಹುಡುಕಿದ ಬೆಳಕು ಕಾಣಲಿಲ್ಲ. ಇಷ್ಟು ದಿನ ಆ ಬೆಳಕೇ ಅವನನ್ನು ಆ ಹುಡುಗನಿಗೆ ಸಹಾಯ ಮಾಡಲು ಪ್ರೇರೇಪಿಸಿದ್ದು. ಈಗೆಲ್ಲಿ ಹೋಯಿತು?
ಉಯ್ಯಾಲೆಯಲ್ಲಿ ಕುಳಿತು ಒಮ್ಮೆ ಕಣ್ಣು ಮುಚ್ಚಿದವನಿಗೆ ಬೆಳಕು ತನ್ನೊಳಗೇ ಇದ್ದುದ್ದು ಅರಿವಾಯ್ತು. ಎಲ್ಲಾ ಅರಿವಾದಂತೆ ಮೆಲು ಮಂದಹಾಸ ಮೂಡಿತು ಅವನ ತುಟಿಯಲ್ಲಿ ಅದು ಅವನದಲ್ಲ ಅವನ ಮನದಾಳದ ಬೆಳಕಿನಿಂದ.

ಪ್ರತಿ ಕಪ್ಪು ಮೋಡದಲ್ಲೂ ಒಂದು ಬೆಳ್ಳಿ ರೇಖೆ ಇರುತ್ತದೆ ಅಲ್ಲವೇ?

Sunday, March 15, 2009

ಕರ್ಣ ನಿನ್ನ ಹುಟ್ಟು, ಬದುಕು, ಸಾವು ಬರದಿರಲಿ ಮತ್ತೆ ಯಾರಿಗೂ

ಜಗಕೆಲ್ಲಾ ಬೆಳಕನೀಯುವ ದೇವಾದಿದೇವ
ನಿನ್ನ ತಂದೆ ಸೂರ್ಯದೇವ
ಜಗ ಮೆಚ್ಚುವ ವೀರರೈವರು
ನಿನ್ನ ಸಹೋದರರು ಪಾಂಡವರು
ಲೋಕ ಮಾತೆಯಾಗಿ ಪೋಜಿತೆ
ನಿನ್ನ ತಾಯಿ ಕುಂತಿ ಮಾತೆ
ಹರಿಯಂಶದಿ ಜನಿಸಿದ ತ್ರಿಲೋಕ ಗುರು
ನಿನ್ನ ಗುರು ಪರಶುರಾಮ
ಆದರೂ ಲೋಕದಲ್ಲಿ ಅತೀ ಗೋಳು
ನಿನ್ನ ಬಾಳದು ಕರ್ಣ

ಬಾಲೆಯೊಬ್ಬಳ ಕುತೂಹಲದ ಆಟಕೆ
ಪುತ್ರನೊಬ್ಬನ ಜನನ ಬೇಕಿತ್ತೆ?
ಅಪವಾದಕಂಜಿ ಎಸೆದದ್ದು
ಗಂಗೆಯಲ್ಲಿ ಅಲ್ಲ ನಿನ್ನ ಅಪಮಾನದ ಮಡಿಲಲ್ಲಿ

ಸೂತಪುತ್ರನೆಂದು ಕರೆಸಿಕೊಂಡರೂ
ಬಿಡದ ಛಲದಿಂ ಕಲಿತೆ ಕ್ಷತ್ರಿಯ ವಿದ್ಯೆಯ
ಪೊಳ್ಳಾನಾದರೂ ನುಡಿದು
ಗುರು ಪರಶುರಾಮರ ಬಳಿ
ಅಲ್ಲೂ ಕಾಡಿತೇ ನಿನ್ನ ವಿಧಿ,
ಗುರುವಿನ ಶಾಪಕ್ಕೆ ಸಿಲುಕಿಸಿ

ಬಾಳಲ್ಲಿ ನಿನ್ನವರೇ ನಿನ್ನ ಅರಿಗಳು
ನಿನ್ನವರ ವೈರಿ ನಿನಗಾದ ಪರಮಮಿತ್ರ
ನ್ಯಾಯವೋ ಅನ್ಯಾಯವೋ ಉಪ್ಪಿನ ಋಣ
ತೀರಿಸುವುದೊಂದೇ ಸರಿಯೆನಿಸಿತೇ ನಿನಗೆ?

ರಾಜ್ಯದಾಸೆ, ತಾಯ ಮಮತೆ, ಸಹೋದರ ಪ್ರೇಮ
ಯಾವುದೊಂದೂ ಗೆಲ್ಲಲಿಲ್ಲ ನಿನ್ನ ಸ್ವಾಮಿನಿಷ್ಟೆಯಾ

ಬೇಡಿದ್ದ ಕೊಡುವ ನಿನ್ನ ಉದಾರತೆಯೇ
ನಿನಗೆ ಮುಳುವಾಯ್ತೇ
ಹೆತ್ತ ತಾಯಿ ಕೂಡ ಬಳಿಗೆ ಬಂದದ್ದು
ತನ್ನ ಐವರ ಮಕ್ಕಳ ಜೀವದಾನಕ್ಕಾಗಿಯೇ?

ತೊಟ್ಟಬಾಣವ ಮರಳಿ ತೊಡದ
ಇಟ್ಟ ಗುರಿಯ ಬದಲಿಸಲಾರದ ನಿನ್ನ
ಆ ನಿಲುವು ಬರುವುದಾರಿಗೆ

ಕಪಟಿ ಕೃಷ್ಣನ ವಿಕಟ ನಾಟಕಕ್ಕೆ
ಸಿಲುಕಿದ ಗೊಂಬೆಯಾದೆ
ತೊಟ್ಟ ಬಾಣವ ತೊಡದೆ ಮತ್ತೆ
ಬಲಿಯಾದೆ ಮೋಸಜಾಲಕೆ

ಸಾಯುವ ಕ್ಷಣದಲ್ಲೂ ನೀ ಅಳಲಿಲ್ಲ
ನೀ ನಿನಗಾಗಿ, ನಿನ್ನ ನಿರ್ಭಾಗ್ಯಬಾಳಿಗಾಗಿ
ಮರುಗಿದೆ ನೀ ಪರಮ ಮಿತ್ರನ
ಸೋಲಿಗಾಗಿ, ಅವನ ಸಾವಿಗಾಗಿ

ಜಗವೆಲ್ಲಾ ನಿನ್ನ ಮೆಚ್ಚಿದರೂ, ಮರುಗಿದರೂ
ಬಯಸುವೊದೊಂದೆ ಕರ್ಣ
ನಿನ್ನ ಹುಟ್ಟು, ಬದುಕು, ಸಾವು
ಬರದಿರಲಿ ಮತ್ತೆ ಯಾರಿಗೂ

[ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಅವನ ಅಂತ್ಯವನ್ನು ಓದುತ್ತಿದ್ದಂತೆ ಕಣ್ಣು ಅರಿವಿಲ್ಲದೇ ಒದ್ದೆಯಾಯ್ತು. ಅವನಿಗಾಗಿ ಒಂದು ನಮನ ]

Sunday, March 8, 2009

ಜಾಣೆಯಾಗಿರು ನನ್ನ ಮಲ್ಲಿಗೆ-ಭಾಗ ೨ ಯಾವುದು ಸರಿ?

"ಶ್ವೇತಾ ನಂಗೆ ತಲೆ ನೋವ್ತಿದೆ ಸ್ವಲ್ಪ ಅಮೃತಾಂಜನ ಹಚ್ತೀಯಾ, ಏನಾದ್ರೂ ಮಾತ್ರ್ ಇದ್ದರೆ ಕೊಡು"ರಾತ್ರಿ ಮಲಗಿದ್ದಾಗ ರೂಮಿಗೆ ಬಂದುಅತ್ತೆ ಕೇಳಿದರುನಾನು ಎಚ್ಚರವಾಗಿಯೇ ಇದ್ದೆರಾತ್ರಿ ಎರೆಡಾಗಿತ್ತು ಇನ್ನೂ ಸ್ಮಿತ ಮನೆಗೆ ಬಂದಿರಲಿಲ್ಲಅವಳು ಬರುವುದಕ್ಕೆ ಇನ್ನೂ ಒಂದು ಘಂಟೆ ಬಾಕಿ ಇದೆಅತ್ತೆಗೆ ಅಮೃತಾಂಜನ ಹಚ್ಚಿ ಮಾತ್ರೆ ಕೊಟ್ಟು ಬಂದು ಮಂಚದ ಮೇಲೆ ಉರುಳಿದೆಸ್ಮಿತಾಗೆ ಕೊಟ್ಟ ಸದರ ನಿಜಕ್ಕೂ ಬಹಳ ಜಾಸ್ತಿಯಾಗಿತ್ತು.ಪಿಯುಸಿ ಮುಗಿಸಿದ ತಕ್ಷಣ ಕೆಲಸಕ್ಕೆ ಸೇರಿದಳಲ್ಲ .ಮಗಳನ್ನು ಇಂಜಿನಿಯರ್ , ಅಥವ ಡಾಕ್ಟರ್ ಮಾಡಬೇಕೆಂಬ ನನ್ನ ಬಯಕೆ ಬತ್ತಿ ಹೋಗಿತ್ತು.ಮನೆಯಲ್ಲಿ ಹಣದ ಕೊರತೆ ಇಲ್ಲ. ಕಡಿಮೆ ಅಂಕ ತೆಗೆದುಕೊಂಡರೂ ಪರವಾಗಿಲ್ಲ ಹೆಚ್ಚು ಹಣ ಕೊಟ್ಟು ಕಾಲೇಜಿಗೆ ಸೇರಿಸುತ್ತೇನೆ ಎಂಬ ಮಾತಿಗೆ ಎಗರಾಡಿದ್ದಳು"ಹೆಣ್ಣಿಗೆ ಮೊದಲು ಪೈನಾಂಶಿಯಲ್ ಫ್ರೀಡಂ ಬೇಕು ಅದಿದ್ದ್ರೆ ಅವಳನ್ನ ಯಾರೂ ಕೇಳಲ್ಲ. ನಾನು ನಿಮ್ಹತ್ರ ದುಡ್ಡು ತಗೊಂಡು ಓದಿದರೆ ನೀವು ಹೇಳೋ ಹಾಗೆ ಕೇಳ್ಬೇಕಾಗುತ್ತೆನಾನೇನು ಓದದೆ ಇರಲ್ಲ. ಮುಂದೆ ಕರೆಸ್ಪಾಂಡೆನ್ಸ್ ನಲ್ಲಿ ಓದ್ತೀನಿ.""ಈಗ ನಿಂಗೆ ಹಣ ಕೊಡಲ್ಲ ಅಂತ ಯಾರು ಹೇಳಿದ್ದು ಸ್ಮಿತ. ನಿಂಗೆ ಎಷ್ಟು ಬೇಕೋ ಅಷ್ಟು ತಗೋ ಆಸ್ತಿ ಎಲ್ಲಾ ನಿಂದೇ ಅಲ್ಲವೇ" ನನ್ನ ಮಾತಿಗೆ"ಊಹೂ ಯಾವದೂ ನನ್ನದಲ್ಲ ಎಲ್ಲಾ ಅಜ್ಜಿದು ಅವಳ ಗಂಡ ಮಾಡಿಟ್ಟಿರೋದು. ನಿನ್ನದೂ ಅಂತಾನೂ ಏನು ಇಲ್ಲ ಅಪ್ಪ ಏನೂ ಆಸ್ತಿ ಮಾಡಿಲ್ಲ . ಯಾವಾಗ್ಲೂ ಅಜ್ಜಿ ದುಡ್ಡಿನ ಮೇಲೆ ರಿಸ್ಟಿಕ್ಷನ್ ಮಾಡೋದು ನಂಗಿಷ್ಟ ಇಲ್ಲ"ಅವಳು ಹೇಳೋದು ಪೂರ್ಣ ಸುಳ್ಳೇನಾಗಿರಲಿಲ್ಲಅತ್ತೆಗೆ ದುಂದು ವೆಚ್ಚಮಾಡುವುದು ಹಿಡಿಸುತ್ತಿರುಲಿಲ್ಲನಂಗೇನು ಹಣದ ಅಗತ್ಯ ಅಷ್ಟಾಗಿ ಇರಲಿಲ್ಲ. ಆದರೆ ಸ್ಮಿತಾಗೆ ಬೇಕಿತ್ತು. ಓದಿಗೆಲ್ಲಾ ಹಿಂದೆಮುಂದೆ ನೋಡದೆ ಕೊಡುತ್ತಿದ್ದರುಅವಳ ಮೇಕ್ ಅಪ್ ಖರ್ಚು ಜೊತೆಗೆ ಬರ್ತ್ ಡೇ ಗಿಫ್ಟ್ ಇದಕ್ಕೆಲ್ಲಾ ಹಣ ಕೊಡಲು ಸ್ವಲ್ಪ ಬೈದೇ ಕೊಡುತ್ತಿದ್ದುದು. ಆಗೆಲ್ಲಾ ನನಗೂ ಕಸಿವಿಸಿಯಾದದ್ದುಂಟು.ಮಹಿ ಇದ್ದರೆ ಎಂಬ ಅನಿಸಿಕೆಯೂ ಬರದಿರುತ್ತಿರಲಿಲ್ಲ.ಕೊನೆಗೂ ಅತ್ತೆಯ ಹಾರಾಟ ಹಾಗು ನನ್ನ ತೊಳಲಾಟದ ನಡುವಲ್ಲಿಯೂ ಅವಳೇ ಗೆದ್ದಿದ್ದಳು.ಯಾವುದೋ ಕಾಲ ಸೆಂಟರ್‌ನಲ್ಲಿ ಕೆಲಸಕ್ಕೆ ಸೇರಿದಳುತಿಂಗಳಿಗೆ ಇಪ್ಪತ್ತು ಸಾವಿರ ಮೊತ್ತ ಕಡಿಮೆಯದ್ದೇನು ಇರಲಿಲ್ಲಆದರೆ ನಮಗೆ ಹಿಡಿಸದಿದ್ದು ಅವಳ ಸಮಯ ರಾತ್ರಿ ಶಿಫ್ಟನಲ್ಲಿ ಕೆಲಸ ಮಾಡುವುದೆಂದರೆ ನಮಗ್ಯಾರಿಗೂ ಹಿಡಿಸಲಿಲ್ಲ. ನನ್ನ ತಂಗಿ ತಮ್ಮ ಕೂಡ ಬಯ್ಯುತ್ತಿದ್ದರು.ಇವಳ ವಾರಿಗೆಯ ಹುಡುಗಿಯರು ಇನ್ನೂ ಓದುತ್ತಿದ್ದರೆ ಇವಳು ಮಾತ್ರ ದುಡಿಯುತ್ತಿದ್ದಳು.ಇನ್ನೂ ಹತ್ತೊಂಬತ್ತು ವರ್ಷ .



ಅತ್ತೆಯ ಕೋಪವೆಲ್ಲಾ ನನ್ನ ಮೇಲೆ ಬೀಳುತ್ತಿತ್ತು



"ನೀನು ಕೊಟ್ಟ ಸದರ

ಆವತ್ತು ಅವಳು ದೊಡ್ಡವಳಾದ ವಿಷಯ ಹೇಳದೆ ಇದ್ದಾಗಲೆ ಅವಳಿಗೆ ಬುದ್ದಿ ಹೇಳಿ ನಾಲ್ಕು ಬಿಟ್ಟಿದ್ದರೆ ಈ ಮಟ್ಟಕ್ಕ್ತೆ ಬರುತ್ತಿರಲಿಲ್ಲ"

ಅಜ್ಜಿ ಮೊಮ್ಮೊಗಳ ನಡುವಿನ ಕದನದಲ್ಲಿ ಹಣ್ಣಾಗಿದ್ದೆ.

ಒಮ್ಮೆ ಅತ್ತೆ ಕೋಪಿಸಿಕೊಂಡು ತನ್ನ ತಮ್ಮನ ಮನೆ ಸೇರಿದ್ದರು.

ಆಗ ಅವರೆಲ್ಲಾ ಬಂದು ದೊಡ್ಡ ಪಂಚಾಯತಿ ನಡೆದು .ಸ್ಮಿತಾ ಮನೆ ಬಿಟ್ಟು ಹೋಗುವುದಾಗಿ ಹೆದರಿಸಿದಾಗ ಎಲ್ಲಾ ಚುಪ್. ಇರುವಳೊಬ್ಬಳು ಅವಳೇನಾದರೂ ಮಾಡಿಕೊಂಡರೆ ಎಂಬ ಆತಂಕ.

ಇನ್ನೇನು ಅವಳು ಬರುವ ಹೊತ್ತು.

ಬಾಲ್ಕನಿಯ ಬಾಗಿಲು ತೆರೆದು ಹೊರಗೆ ನಿಂತೆ . ತಣ್ಣಗಿನ ಗಾಳಿ.

ಯಾವತ್ತಿನಂತೆ ಇವತ್ತು ಸುಮೋ ಬರಲಿಲ್ಲ ಬದಲಿಗೆ ಒಂದು ಕಾರು

ಕಾರಿನ ಗ್ಲಾಸ್ ಹಾಕಿದೆ ಮಂದವಾಗಿ ಒಳಗಿನ ದೃಶ್ಯ ಕಾಣುತ್ತಿದೆ. ಇದೇಕೆ ಇಳಿಯುತ್ತಿಲ್ಲ ಇವಳು

ಏಕೋ ಸಂಶಯವಾಯ್ತು
ಕಾರಿನಲ್ಲಿದ್ದ ಎರೆಡೂ ದೇಹಗಳೂ ತಬ್ಬಿದ್ದು ಅಸ್ಪಷ್ಟವಾಗಿ ಕಾಣುತ್ತಿದೆ
ಆತಂಕದಿಂದ ಹೃದಯ ಬಡಿದುಕೊಳ್ಳಲಾರಂಭಿಸಿತು. ಬೇಡವೆಂದರೂ ನನ್ನ ಹಾಗು ಮಹಿಯ ಕ್ಷಣಗಳು ನೆನಪಿಗೆ ಬಂದವು.
ಸ್ವಲ್ಪ ಹೊತ್ತಿನಲ್ಲಿ ಸ್ಮಿತಾ ಕಾರಿನಿಂದ ಇಳಿದಳು. ಕೊಂಚ ದಣಿದವಳಂತೆ ಕಾಣುತ್ತಿದ್ದಾಳೆ.
ಏಕೋ ಬಲಗಣ್ಣು ಅದಿರುತ್ತಿತ್ತು

ಕಾರಿನಲ್ಲಿದ್ದಾತನಿಗೆ ಬಾಯ್ ಹೇಳಿ
ಗೇಟ್ ತೆರೆದು ಒಳಗೆ ಬಂದಳು
ಬಾಗಿಲು ಬಡಿದ ಸದ್ದಾದಾಗ ಬಾಗಿಲು ತೆರೆದೆ
"ಸ್ಮಿತಾ ಯಾರೆ ಅದು?"
"ಯಾರಮ್ಮ? "ಏನೂ ಗೊತ್ತಿಲ್ಲದವಳಂತೆ ಕೇಳಿದಳು
"ನೀನು ಬಂದೆಯಲ್ಲ ಆ ಕಾರಲ್ಲಿದ್ದವನು ಯಾರು?"

"ಅದು ಕಂಪನಿ ಟ್ಯಾಕ್ಸಿ. ಇವತ್ತು ಸುಮೋ ಬರಲಿಲ್ಲ ಅದಕ್ಕೆ...."
" ಮುಚ್ಚು ಬಾಯಿ ................." ನನ್ನ ದ್ವನಿ ನನಗರಿವಿಲ್ಲದೇ ಏರಿತ್ತು. "ಸುಳ್ಳು ಹೇಳ್ಬೇಡಾ ನಾನು ಎಲ್ಲಾ ನೋಡಿದೆ" ಅತ್ತೆ ಕೇಳಿಸಿಕೊಂಡರೆ ಕಷ್ಟವಾಗಬಹುದು ಎನಿಸಿ ದ್ವನಿ ಅಡಗಿಸಿ ಕೇಳಿದೆ

ಸ್ಮಿತಾ ಮಾತಾಡಲಿಲ್ಲ.ಸಿಕ್ಕಿಹಾಕಿಕೊಂಡವಳಂತೆ ನೆಲ ನೋಡಿದಳು
"ಯಾರೆ ಅದು .ನಿಜ ಹೇಳು ನಿನ್ನ ತಾಳಕ್ಕೆ ಕುಣಿದೂ ಕುಣಿದೂ ಸಾಕಾಗಿ ಹೋಗಿದೆ. ನಿಜ ಹೇಳಲಿಲ್ಲಾಂದರೆ ನಾಳೆ ಇಂದ ಕೆಲಸಕ್ಕೆ ಕಳಿಸಲ್ಲ"

ಸ್ಮಿತಾ ನೆಲ ನೋಡುತ್ತಲೇ ಹೇಳಿದಳು

"ಅಮ್ಮ ಅವನು ನನ್ನ ಕಲೀಗ್. ರಾಕೇಶ್ ಅಂತ .ನಾವಿಬ್ಬರೂ ಒಂದೇ ಫ್ಲೊರಿನಲ್ಲಿ ಕೆಲಸ ಮಾಡೋದು. "
"ಅದಿರಲಿ . ನೀವಿಬ್ಬರೂ ಹೀಗೆ ರಾತ್ರಿಯಲ್ಲಿ ಬರೋದಂದ್ರೆ ಏನು ?
"ಅಮ್ಮ ನಂಗೆ ಅವನು ಇಷ್ಟ ಆದ ಅವನಿಗೆ ನಾನು ಇಷ್ಟಾ ಅದಕ್ಕೆ.................."
"ಇಷ್ಟ ಆದ್ರೆ ನಿಮ್ಮ ನಿಮ್ಮ ಮನೇಲಿಹೇಳಿ ಮದುವೆ ಮಾಡಿಕೊಳ್ಳಿ ಇದೇನು ರಸ್ತೇಲೆಲಾ ನಿಮ್ಮ ರೋಮಾನ್ಸ್" ಮುಂದಿನ ವಿಷಯಾನಹೇಳೋಕೆ ಬಾಯಿ ಬರಲಿಲ್ಲ
"ಇಲ್ಲಾ ಮ ನಾನು ಈಗಲೆ ಮದುವೆಯಾಗೋ ಯೋಚನೆ ಇಲ್ಲಾಮ ಇನ್ನೂ ಮದುವೆಗೆ ಸಮಯ ಬಂದಿಲ್ಲ"
"ಮತ್ತೆ ತಬ್ಕೋಳೋಕೆ ಸಮಯ ಬಂತೇನೆ" ಬಾಯಿಯನ್ನುಹಿಡಿತದಲ್ಲಿ ಇಟ್ಟುಕೊಳ್ಳಲಾರದೆ ಹೋದೆ.
ಆಕೆ ಮಾತಾಡಲಿಲ್ಲ
"ನಾಳೆ ಮೊದಲು ಆ ಹುಡುಗನ್ನ ಕರ್ಕೊಂಡು ಬಾ ಮಾತಾಡ್ತೀನಿ ಯೋಗ್ಯ ಅಂತನ್ನಿಸಿದರೆ ಮುಂದೆ ನೋಡೋಣ"
"ಸಾರಿ ಅಮ್ಮ ಅವನು ಬರಲ್ಲ . ನಾವಿಬ್ಬರೂ ಇನ್ನೂ ಮದುವೆ ಯೋಚನೆ ಮಾಡಿಲ್ಲ, ಅಷ್ಟಕ್ಕೂ ಒಬ್ಬ ಯೋಗ್ಯಾನಾ ಅನ್ನೋದು ನಿರ್ಧರಿಸಬೇಕಾದವಳು ನಾನು ನೀನಲ್ಲ. " ನಿರ್ಭಯವಾಗಿ ನುಡಿದಳು
"ಹಾಗಿದ್ದರೆ ನೀನು ಅವನ್ನ ಮೀಟ್ ಮಾಡೋದು ನಿಲ್ಲಸಬೇಕಾಗುತ್ತದೆ"
"ಆಗಲ್ಲಾಮ್ಮ ಏನಮ್ಮ ಫಿಲಮ್ಸ್‌ನಲ್ಲ್ ಬರೋ ವಿಲನ್ಸ್ ಥರಾ ಮಾತಾಡ್ತೀಯಲ್ಲ ನೀನು." ಒಂದು ಚೂರು ಕಾಂಪ್ರಮೈಸ್ ಆಗುವ ರೀತಿಯೇ ಕಾಣಲಿಲ್ಲ

"ಆಗಲ್ಲಾಂದೆ ಈ ಮನೆಲಿ ನಿಂಗೆ ಜಾಗ ಇಲ್ಲ" ಇಲ್ಲಿಯವರೆಗೆ ಕಟ್ಟಿ ಹಿಡಿದಿದ್ದ ಆಕ್ರೋಶವೆಲ್ಲಾ ಒಂದೆ ಮಾತಲ್ಲಿ ಹೊರಗಡೆ ಬಂತು

"ಅಮ್ಮಾ ನನ್ನ ಮನೆ ಬಿಟ್ಟು ಕಳಿಸ್ತೀಯಾ?" ಕೂಡಲೆ ಕೇಳಿದಳು

"ಹೌದು ಸ್ಮಿತಾ ಇದು ಒಳ್ಳೆಯ ಹೆಸರಿರುವ ಮನೆ . ಇದನ್ನ ಹಾಳು ಮಾಡಿದರೆ ಸಹಿಸೋಕೆ ಆಗುವುದಿಲ್ಲ. ನಿಮ್ಮಜ್ಜಿಗೆ ನೀನು ಮಾತಾಡಿದ ವಿಶ್ಯ ಕೇಳಿದರೆ ಎಷ್ಟು ಬೇಜಾರು ಮಾಡಿಕೊಳ್ಳುತಾರೋ"

"ಅಮ್ಮ ಐ ಅಮ್ ರಿಯಲ್ಲಿ ನಾಟ್ ವರೀಡ್ ಅಬೌಟ್ ಹರ್ ಹಾಗೆಯೇ ಮನೆ ಬಿಟ್ಟು ಹೋಗುವ ಬಗ್ಗೆಯೂ ..ಆದರೆ ನಿನ್ನನ್ನು ಬಿಟ್ಟು ಹೋಗೋದು ಅಷ್ಟೊಂದು ಸುಲಭ ಅಲ್ಲಾಮಾ"

ದಂಗಾದೆ

"ಸ್ಮಿತಾ ನಿನ್ನ ಮಾತು ಕೇಳಿದರೆ ನೀನು ನನ್ನ ಮಾತು ಕೇಳೋಲ್ಲ ಅನ್ನೋ ಹಾಗೆ ಇದೆ. ನಿಂಗ್ಯಾಕೆ ಬಂತು ಈ ಥರಾ ದುರ್ಬುದ್ದಿ . ಏನಂಥಾ ಹುಟ್ಟಿದ್ಯೆ ನನ್ನ ಹೊಟ್ಟೇಲಿ. ನಿಮ್ಮಪ್ಪ ಹೋದ ಹಾಗೆ ನಾನೂ ಹೋಗಿದ್ರೆ ಚೆನ್ನಾಗಿರ್ತಿತ್ತು" ಬಿಕ್ಕಳಿಸಿ ಅಳತೊಡಗಿದೆ

"ಅಮ್ಮಾ ನೀನು ಇನ್ನೂ ಅದೇ ಹಳೇ ಕಾಲದಲ್ಲೇ ಇದ್ದೀಯಾ . ಈಗ ನೋಡಮ್ಮ ನಮ್ಮ ಬದುಕಿನ ಪ್ರಶ್ನೆ ನಮ್ಮದು. ನಾನು ಆರಿಸಿಕೊಂಡದ್ದು ಹಾದಿ ಸರಿ ಇಲ್ಲಾಂದರೆ ಅದರ ಫಲ ನನ್ನದೇ ಅಂತ ನೀನೆ ಹೇಳಿದ್ದೀಯಾ. ನಂಗೂ ಯಾಕೋ ಇಲ್ಲಿರಬೇಕು ಅಂತನ್ನಿಸ್ತಿಲ್ಲ. ಸ್ವಾತಂತ್ರ್ಯದ ಕಲ್ಪನೆ ಇಲ್ಲಿರೋ ಇಬ್ಬರೂ ಹೆಂಗಸರಿಗೂ ಇಲ್ಲ. ನಾನು ನಾಳೇನೆ ಹೋಗ್ತಾ ಇದ್ದೀನಿ."

"ಎಲ್ಲಿಗೆ ಹೋಗ್ತಾ ಇದ್ದೀಯಾ?" ಬಿಡಿ ಬಿಡಿಯಾಗಿ ನುಡಿದೆ

"ಗೊತ್ತಿಲ್ಲ, ಆದರೆ ಇದೇ ಊರಲ್ಲಿ ಇರ್ತೀನಿ. ನಂಗೆ ನಿನ್ನ ನೋಡದೆ ಇರೋಕಾಗಲ್ಲಾಮ್ಮ"ಅವಳ ದನಿಯೂ ಗದ್ಗದಿತವಾಗಿತ್ತೇನೋ.

ನಾನೇಕೆ ಇಷ್ಟೊಂದು ಕಠಿಣಳಾಗ್ತಾ ಇದ್ದೇನೆ ಅವಳ ಬಗ್ಗೆ. ನನ್ನ ಕರುಳು ದೂರವಾಗುವ ಹಾಗೆ ನಾನೇಕೆ ಮಾತಾಡ್ತಿದೀನಿ.

"ಸ್ಮಿತಾ ಮತ್ತೊಂದು ಸಲ ಯೋಚಿಸು. ನಂಗೆ ನೀನಿರೋಳೆ ಒಬ್ಬಳು . ಈಗಲಾದರೂ ಒಪ್ಪು. ಆ ರಾಕೇಶ್ ಜೊತೆ ಹೋಗಲ್ಲ ಅಂತ"

ಸುಳ್ಳಾದರೂ ಒಮ್ಮೆಯಾದರೂ ಒಪ್ಪಕೂಡದೆ? ಮನಸ್ಸು ಸುಳ್ಳನ್ನೂ ಒಪ್ಪಲು ಸಿದ್ದವಾಗಿತ್ತು

"ಅಮ್ಮಾ ನೀನೆ ನನ್ನ ನಿಲುವನ್ನು ಯಾಕೆ ಒಪ್ಪಕೂಡದು?ಹೆಣ್ಣಾಗಿ ಇನ್ನೊಬ್ಬ ಹೆಣ್ಣಿನ ಸ್ವಾತಂತ್ರ್ಯದ ಬಗ್ಗೆ ಯಾಕೆ ಯೋಚಿಸ್ತಿಲ್ಲ ನೀನು" ಪ್ರತಿ ಪ್ರಶ್ನೆ

"ಸ್ಮಿತಾ ನಿನ್ನದು ಸ್ವಾತಂತ್ರ್ಯ ಅಲ್ಲ. ಸ್ವೇಛ್ಚೆ . ಹೆಣ್ಣು ತನ್ನ ಪರಿಮಿತಿ ತಾನು ಅರಿತುಕೊಂಡರೆ ಅವಳ ಬಾಳು ಸುಂದರ ಆಗಿರುತ್ತೆ. ಇಲ್ಲಾಂದರೆ ಬಾಳು ಬರಡಾಗುತ್ತೆ"

"ಅಮ್ಮಾ ನಂಗೆ ಲಕ್ಷ್ಮಣ ರೇಖೆ ಇಷ್ಟ ಇಲ್ಲ. ನಮ್ಮ ಇಷ್ಟಕೆ ನಾವಿರೊ ಕಲ್ಪನೇನ ನೀನು ಸ್ವೇಚ್ಚೇ ಅಂತೀಯಾ ನಾನು ಸ್ವಾತಂತ್ರ್ಯ ಅಂತೀನಿ. ಸರಿ ಸುಮ್ಮನೆ ಮಾತು ಬೇಡ ಅಮ್ಮ . "

ಇನ್ನು ಮಾತು ಸಾಕೆನ್ನುವಂತೆ ರೂಮಿಗೆ ಹೋದಳು.

ನೆಲದ ಮೇಲೆ ಕುಸಿದೆ. ಹೆಗಲಮೇಲೆ ಯಾರೋ ಕೈಇಟ್ಟಂತಾಯ್ತು. ತಲೆ ಎತ್ತಿದೆ. ಅತ್ತೆ ಅವರ ಕಣ್ಣಲ್ಲಿ ನೀರು, ನಿರಾಸೆ, ನೋವು ಹೆಪ್ಪುಗಟ್ಟಿತ್ತು. ನನ್ನ ಜೊತೆ ಕೆಳಗೆ ಕುಳಿತರು

ಅತ್ತೆಯ ಹೆಗಲಿಗೊರಗಿ ಅಳಲಾರಂಭಿಸಿದೆ. ಅಳುತ್ತಲೇ ಇದ್ದೆ ಯಾವಾಗ ನಿದ್ದೆ ಬಂದಿತೋ ತಿಳಿಯಲೇ ಇಲ್ಲ. ಅತ್ತೆಯ ಕೈ ನನ್ನನ್ನು ನೇವರಿಸುತ್ತಲೇ ಇತ್ತು.

****************************************------------------------------***********************

ಇದೆಲ್ಲಾ ಆಗಿ ಈಗಾಗಲೆ ಎರೆಡು ವರ್ಷಗಳಾಗಿವೆ

ನನ್ನ ಸ್ಮಿತ ಮನೆಯ ಮುಂದಿನ ಬೀದಿಯಲ್ಲೇ ಇರುವ ಮನೆಯೊಂದನ್ನು ಬಾಡಿಗೆಗೆ ಪಡೇದಿದ್ದಾಳೆ. ರಾಕೇಶನ ಜೊತೆ ವಾಸಿಸುತ್ತಿದ್ದಾಳೆ. . ನನ್ನ ಹುಟ್ಟಿದ ಹಬ್ಬಕ್ಕೆ ವಿಷಸ್ ಹೇಳಲು ಬರ್ತಾಳೆ. ನಾನು ಮಾತಾಡುವುದಿಲ್ಲ. ಅತ್ತೆ ಬದಲಾಗಿದ್ದಾರೆ ಎನಿಸುತ್ತದೆ. ಅಥವ ವಯಸಾದ ಮೇಲೆ ಮನಸ್ಸು ಮಾಗಿದೆ ಎನಿಸುತ್ತದೆ.ಅತ್ತೆಯೇ ಅವಳೊಂದಿಗೆ ಮಾತಾಡುತ್ತಾರೆ. ಕೆಲವು ಬಾರಿ ಅವಳನ್ನು ಒಪ್ಪಿಕೋ ಎಂದೂ ಹೇಳಿದ್ದಾರೆ. ನಾನೆ ಒಪ್ಪುತ್ತಿಲ್ಲ.ಈಗಾಗಲೆ ನೆರೆ ಹೊರೆಯವರೆಲ್ಲಾ ನಮ್ಮ ಬಗ್ಗೆ ಮಾತಾಡಿ ಸಾಕಾಗಿದ್ದಾರೆ. ತಮ್ಮ ಸ್ಮಿತಾ ಮನೆಗೆ ಹೋಗಿ ಹೊಡೆದೂ ಬಂದಿದ್ದ್ದಾನೆ. ತಂಗಿ ಬುದ್ದಿಯೂ ಹೇಳಿದ್ದಾಳೆ

ಸ್ಮಿತಾಳ ನಿಲುವಾಗಲಿ ನನ್ನ ಮನಸ್ಸಾಗಲಿ ಬದಲಾಗಲೆ ಇಲ್ಲ.

ಅವಳ ನಡತೆ ಸರಿ ಎಂದು ಒಪ್ಪಿಕೊಳ್ಲಲು ನಾನು ಸಿದ್ದಳಿಲ್ಲ. ನಾನು ಹೇಳಿದ್ದು ಸರಿ ಎಂಬ ಮಾತಿಗೆ ನಿಲುಕಲು ಅವಳು ಬದ್ದಳಿಲ್ಲ. ಅವಳ ನೆನಪುಗಳನ್ನು ಅವಳ ಕೊಠಡಿಯಲ್ಲಿ ಕೂಡಿ ಹಾಕಿದ್ದೇನೆ. ನೆನಪುಗಳು ಹೊರ ಬಂದರೆಲ್ಲಿ ಮನಸ್ಸು ಕರಗ್ಗುತದೆಯೋ ಎಂಬ ಆತಂಕಕ್ಕೆ.

ಹೀಗಿರುವಾಗಲೆ ತಂಗಿಯ ಗೀತಾಳ ಫೋನ್ ಬಂತು. ಮೊಬೈಲ್ ಎತ್ತಿದೆ

"ಅಕ್ಕ ಗಾಯಿ ಮನೆಗೆ ವಾಪಸ್ ಬಂದಿದಾಳೆ" ದ್ವನಿಯಲ್ಲಿ ಆತಂಕ

ಗಾಯತ್ರಿ ಗೀತಾಳ ಮಗಳು . ಆರು ತಿಂಗಳ ಹಿಂದೆ ಅವಳ ಮದುವೆ ಅಮೇರಿಕಾದ ಗಂಡಿನ ಜೊತೆ ನಡೆದಿತ್ತು. ಅವನ ಜೊತೆಯೇ ಹೋದವಳು ಈಗ ಮತ್ತೇಕೆ ಬಂದಿದ್ದಾಳೆ . ಗೀತಾಳ ಮಾತು ಮುಂದುವರೆಯಿತು

"ಏನು ವಿಷಯ ಅಂದರೆ ಏನೂ ಹೇಳ್ತಾ ಇಲ್ಲ. ನೀವೆಲ್ಲಾ ಸೇರಿ ನನ್ನ ಬಾಳು ಹಾಳ್ಮಾಡಿದ್ರಿ. ಈಗ ಸಾವೇ ನಂಗೆ ಗತಿ ಅಂತಿದಾಳೆ"

"ಏನು ವರದಕ್ಷಿಣೆ ವಿಷಯಾನಾ?"

"ವರದಕ್ಷಿಣೇ ಅಂತೂ ಅಲ್ಲಾಕ್ಕ . ಅವರೇ ಮುಂದೆ ನಿಂತು ಖರ್ಚೆಲ್ಲಾ ನೋಡಿಕೊಂಡು ಮದುವೆ ಮಾಡಿಕೊಂಡ್ರು. ರಾಮಕೃಷ್ಣಾನು ಒಳ್ಳೆಯವನೇ ಒಂದೂ ದುರಭ್ಯಾಸ ಇಲ್ಲ . ಆದರೂ ಇವಳ್ಯಾಕೆ ಬಂದಳು . ಅಂತ ತಿಳೀತಿಲ್ಲ. ನೀನಾದ್ರೂ ಬಾ ಆಕ್ಕ"

ರಾಮಕೃಷ್ಣಾ ಗಾಯಿಯ ಗಂಡ.

"ಆಯ್ತು ಕಣೇ ಈಗಲೆ ಬರ್ತೀನಿ"

ಅತ್ತೆಗೆ ವಿಷಯ ಹೇಳಿದೆ ತಾವು ಬರುತ್ತೇವೆಂದರು. ನಮ್ಮಿಬ್ಬರನ್ನೂ ಹೊತ್ತ ಕಾರ್ ಮುಂದೆ ಚಲಿಸಿತು.

ಹೊರಗಡೆಯೇ ಗೀತಾ ನಿಂತಿದ್ದಳು. ತಮ್ಮ ಸುಧೀರನೂ ಬಂದಿದ್ದ

"ಏನಾಯ್ತೇ . "

"ಗೊತ್ತಿಲ್ಲಾಕ್ಕ ತುಂಬಾ ಬೇಜಾರಾಗಿ ಹೋಗಿದೆ. ಮನೆಯಲ್ಲಿ ಇವರು ಬೇರೆ ಎಲ್ಲಾದಿಕ್ಕೂ ನಾನೆ ಕಾರಣ ಅನ್ನೊಹಾಗೆ ಬಿಹೇವ್ ಮಾಡ್ತಾ ಇದಾರೆ. "

ಗೀತ ಗಂಡ ಹಾಗೆ ಸ್ವಲ್ಪ ಹೆಚ್ಚು ಸಿಡುಕು. ದುಡುಕು. ಹೆಣ್ಣೆಂದರೆ ಅಷ್ಟಕ್ಕಷ್ಟೆ. ಗೀತಾ ಮದುವೆಯಾದಂದಿನಿಂದ ಅಂಥ ನೆಮ್ಮದಿಯನ್ನೇನು ಕಂಡಿಲ್ಲ.

ನನ್ನ ಬಾಳಂತೂ ಹೀಗಾಯ್ತು ಎಂದರೆ ಗಂಡನಿದ್ದೂ ಇವಳೂ ಸುಖವಾಗೇನು ಇಲ್ಲ. ಇವಳ ಮಗಳು ಆರು ತಿಂಗಳಲ್ಲೇ ಹೀಗೇಕೆ ಆಡುತ್ತಿದ್ದಾಳೆ

ರೂಮ್‌ನಲ್ಲೇ ಗಾಯಿತ್ರಿ ಮಲಗಿದ್ದಳು

ನನ್ನನ್ನು ನೋಡುತ್ತಲೇ ಅಳಲಾರಂಭಿಸಿದಳು. ಅವಳು ನನ್ನ ಕೈನಲ್ಲಿ ಆಡಿದ ಮಗು. ಸ್ಮಿತಾಳ ನಡವಳಿಕೆಯಿಂದ ಗಾಯತ್ರಿ ನನಗೆ ಹತ್ತಿರವಾಗಿದ್ದಳು. ನಾನು ಹೇಳಿದಂತೆ ಕೇಳುತ್ತಿದ್ದಳು. ಅವರಮ್ಮ ನಿಗಿಂತ ನನ್ನನ್ನೆ ಹೆಚ್ಚು ಹಚ್ಚಿಕೊಂಡಿದ್ದಳು

ಇಂದು ಅಳುತ್ತಿದ್ದ ಆ ಮಗುವನ್ನು ಕಂಡ್ ಕೂಡಲೆ ಕರುಳು ಕಿವುಚಿದಂತಾಯ್ತು.

ಎಲ್ಲರನ್ನೂ ಹೊರಗೆ ಕಳಿಸಿ ಬಾಗಿಲು ಹಾಕಿದೆ

ಗಾಯಿತ್ರಿ ನನ್ನನ್ನು ತಬ್ಬಿಕೊಂಡು ಅಳಲಾರಂಭ್ಸಿದಳು

ಅವಳು ಅಳುವಷ್ಟೂ ಹೊತ್ತು ಅಳಲಿ ಎಂದು ಬಿಟ್ಟು ಬಿಟ್ಟೆ

ಕೊಂಚ ಹೊತ್ತಾದ ಮೇಲೆ ಅವಳ ಅಳು ನಿಂತಿತು

ಹೇಳಲಾರಂಭ್ಸಿದರು

"ದೊಡ್ಡಮ್ಮ ನೀವೆಲ್ಲಾ ಹೇಳಿದವರನ್ನ ನಾನು ಮದುವೆಯಾದೆ. ಅವರಿಗೆ ಸುಖ ಪಡೆಯಲು ಹೆಂಗಸೇ ಬೇಕಿಲ್ಲ. ಕೇವಲ ಮನೆಯಲ್ಲಿ ಹೇಳಿದರಂತ ನನ್ನನ್ನು ಮದುವೆ ಆದರಂತೆ. ಮನೆಯಲ್ಲಿ ಇದ್ದೇನಲ್ಲ ಎಂದು ನನ್ನನ್ನು ಮುಟ್ಟುತ್ತಿದ್ದರಷ್ಟೆ.ಅವರಿಗೆ ಸುಂದರವಾದ ಹುಡುಗರಲ್ಲೇ ಆಸಕ್ತಿ ಜಾಸ್ತಿ. ಇಂಥಾ ವಿಕೃತ ಕಾಮಿಯ ಜೊತೆ ವಾಸಿಸೋಕೆ ನಂಗೆ ಆಗ್ತಾ ಇಲ್ಲ. ಆಗಲೇ ಹೇಳೋಣ ಅಂದ್ಕೊಂಡ್ರೂ ನೀವೆಲ್ಲಾ ನೋಡಿ ಮಾಡಿದ ಮದುವೆ. ಹೇಳಿದರೆ ನಿಮಗೆಲ್ಲಾ ಬೇಸರ ಆಗುತ್ತೇಂತ ಸುಮ್ಮನೆ ಇದ್ದೆ. ಆದ್ರೂ ನಂಗೆ ತಡೆಯೋಕೆ ಆಗ್ಲಿಲ್ಲಾ . ಇದೆಲ್ಲಾ ಅಸಹ್ಯ ನನ್ನ ಕೈಲಿ ನೋಡ್ಕೊಂಡು ಇರೋಕೆ ಆಗಿಲ್ಲ. ಹೇಗೋ ಸುಮ್ಮನೆ ಇದ್ರೆ ಈಗ ಅವರು ಯಾವದೋ ಹುಡುಗನ್ನ ಬಯಸಿದ್ದಾರೆ. ಅವನೋ ಅವರ ಜೊತೇಲಿ ಇದ್ದುಕೊಂಡು ನಂಗೂ ಹಿಂಸೆ ಕೊಡ್ತಿದಾನೆ. ಅವನು ಅವರ ಜೊತೆ ಮಲಗಬೇಕೆಂದರೆ ನಾನು ಅವನ ಜೊತೆ ಮಲಗಬೇಕಂತೆ. ಇದೆಲ್ಲಾ ನಂಗೆ ಹಿಡಿಸಲಿಲ್ಲ ದೊಡ್ಡಮ್ಮಾ ಅದಕ್ಕೆ ನಾನು ಹೇಗೋ ತಪ್ಪಿಸಿಕೊಂಡು ಬಂದ್ಬಿಟ್ಟೆ."

ಅವಳ ಕಣ್ಣಲ್ಲಿ ಧಾರಾಕಾರ ನೀರು. ನನಗೋ ಬೆಟ್ಟ ತಲೆ ಮೇಲೆ ಬಿದ್ದ ಹಾಗೆ ಅನುಭವವಾಯ್ತು.

ಅವಳನ್ನು ಸಮಾಧಾನಿಸಿದೆ.

ಹೊರಗಡೆ ಬಂದು ಗೀತಾಗೆ ವಿಷಯ ತಿಳಿಸಿದೆ.

"ಈಗೇನು ಮಾಡೋದೆ. "

"ಡೈವೋರ್ಸ್‌ಗೆ ಅಪ್ಪ್ಲೈ ಮಾಡೋದಷ್ಟೆ ಮತ್ತಿನ್ನೇನು? "

"ಈಗ ಗಾಯಿತ್ರಿ ಐದು ತಿಂಗಳ ಗರ್ಭಿಣಿಯಾಗಿದ್ದಾಳೆ .ಅದೂ ಹೇಗೆ ಸಾಧ್ಯ "ಗೀತಾಳ ಆತಂಕ ಅರ್ಥವಾಯ್ತು

"ಇರಲಿ ಬಿಡೆ ಅಂಥಾ ಗಂಡನ ಜೊತೆ ಬಾಳೋದಿಕ್ಕಿಂತ ಒಬ್ಬಳೇ ಬಾಳೋದೆ ಬೆಟರ್. ಬೇಕಿದ್ರೆ ಮುಂದೆ ಬೇರೆ ಮದುವೆ ಮಾಡೋಣ"

ಮನೆಯವರೆಲ್ಲಾ ಒಪ್ಪಿದರು.

ಆದರೆ ಈ ಡೈವೋರ್ಸ್‌ಗೆ ರಾಮಕೃಷ್ಣ ಒಪ್ಪಲಿಲ್ಲ. ಅವನ ಉದ್ದೇಶ ಈಡೇರಲಿಲ್ಲವೆಂಬ ಸಿಟ್ಟು ಅವನನ್ನು ಹೀಗೆ ಮಾಡಿಸಿತೇನೋ

ಅವನ ತಂದೆಗೂ ಮಗನ ಮೇಲಿನ ಈ ನಿಂದನೆಗಳನ್ನೂ ಸಹಿಸಲಾಗಲಿಲ್ಲವೇನೋ . ಅವರು ಪ್ರಖ್ಯಾತ ಲಾಯರ್. ಸೇಡಿನ ಬೆನ್ನಹಿಂದೆ ಬಿದ್ದ ಅವರ ಕುಟುಂಬದವರಿಗೆ ಗಾಯತ್ರಿಯ ನೋವು ಅರ್ಥವಾಗಲಿಲ್ಲ.

ಅವರ ವಾದದ ಮುಂದೆ ನಮ್ಮ ದೂರುಗಳೆಲ್ಲಾ ಕುಸಿದು ಬಿದ್ದವು.

ಡೈವೋರ್ಸ್ ಪಡೆಯುವುದು ಎಷ್ಟು ಕಷ್ಟ ಎನ್ನುವುದು ನನಗೆ ಈಗ ತಿಳಿಯಿತು

ಗಾಯಿತ್ರಿಯ ಯಾವ ಅರೋಪಕ್ಕೂ ಸಾಕ್ಷಿಗಳಿರಲಿಲ್ಲ

ಗಂಡ ಹೆಂಡತಿ ಇಬ್ಬರೂ ಒಪ್ಪಿದರೆ ಡೈವೋರ್ಸ್ ಕೊಡುವುದು ಎಂಬ ಕಾನೂನಿನ ಒಡಕು.

ನಮ್ಮೆಲ್ಲಾರಿಗೂ ಸಾಕು ಸಾಕೆನಿಸಿತು.

ಕೋರ್ಟ್ಸನಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಲಾಗದೆ ಗಾಯತ್ರಿ ಅಳುತ್ತಿದ್ದಳು. ಎಂಟು ತಿಂಗಳ ಗರ್ಭಿಣಿ ಉಬ್ಬಿದ ಹೊಟ್ಟೆ ಹೊತ್ತು ಕೋರ್ಟ್ ಹಾಗು ಮನೆಗೂ ಅಲೆದಲೆದು ಸಾಕಾದಳು

ಈ ಮಧ್ಯೆ ಸ್ಮಿತಾಳ ಬಗ್ಗೆ ನೆನಪೂ ಬರುತ್ತಿತ್ತಾದರೂ ಹಾಗೆ ನೋಡಿದರೆ ಮದುವೆಯಾದ ನಮ್ಮ ಎಲ್ಲರಿಗಿಂತ ಅವಳೇ ಖುಷಿಯಾಗಿದ್ದಾಳೆ ಎಂದೆನಿಸುತ್ತಿತ್ತು. ಅವಳೂ ಈಗ ಕಾಣುತ್ತಿರಲಿಲ್ಲ
ಮೂರುತಿಂಗಳ ಕಾಲ ನಡೆದ ವಾದ ವಿವಾದಗಳೆಲ್ಲಾ ಮುಗಿದು ಕೊನೆಗೂ ಎಲ್ಲಾ ಖರ್ಚು ಮಾಡಿ ಡೈವೊರ್ಸ್ ಸಿಕ್ಕಿತು.

ಆದರೆ ಗಾಯಿ ಜರ್ಝರಿತಳಾಗಿದ್ದಳು. ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಳು.

ಡೈವೋರ್ಸ್ ಸಿಕ್ಕಿತೆಂಬ ಖುಷಿ ಬಹಳದಿನ ಉಳಿಯಲಿಲ್ಲ. ಹೆರಿಗೆಯಲ್ಲಿ ತೀರ ರಕ್ತಸ್ತ್ರಾವ ಹಾಗು ಮಾನಸಿಕವಾಗಿ ಕುಗ್ಗಿ ಹೋಗಿದ್ದ ಗಾಯಿತ್ರಿ ಇಹವನ್ನು ತ್ಯಜಿಸಿದ್ದಳು. ಜೊತೆಗೆ ಅವಳ ಹೊಟ್ಟೆಯಲ್ಲಿದ್ದ ಮಗುವೂ ಸಹಾ

ಮನಸಿಗೆ ಬಹಳ ಬೇಸರವಾಗಿ ಹೋಗಿತ್ತು.

ನಾನಂದುಕೊಂಡ ರೀತಿಯಲ್ಲೇ ಗಾಯಿತ್ರಿ ಬೆಳೆದಿದ್ದಳು. ಆದರೂ ಅವಳ ಬಾಳು ಹೀಗೇಕಾಯ್ತು? ಜೊತೆಗೆ ಗೀತಾಳ ಸಂಸಾರವೂ ನೆಮ್ಮದಿಯಿಂದೇನು ಇಲ್ಲ. ತಾನು ಮದುವೆಯ ಚೌಕಟ್ಟಿನಲ್ಲಿ ಇದ್ದರೂ ಸಾಂಸಾರಿಕ ಸಂತೋಷ ಸಿಗಲೇ ಇಲ್ಲ

ನನ್ನ ನಿಲುವೇ ತಪ್ಪೇನೋ . ಮದುವೆ ಎಂಬ ಈ ಸಂಬಂಧದ ಗತಿಯೇ ಇಷ್ಟೆ?

ನನ್ನ ಚಿಂತನೆ ಕ್ಷಣದಿಂದ ಕ್ಷಣಕ್ಕೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇತ್ತು

ಹೀಗೆ ವರ್ಷ್ಗವೊಂದು ಉರುಳಿತು. ಈ ನಡುವೆ ಸ್ಮಿತಾ ಡೆಲ್ಲಿಯಲ್ಲಿ ಯಾವುದೋ ಕೆಲಸ ಸಿಕ್ಕಿತೆಂದು ಹೋಗಿದ್ದು ತಿಳಿಯಿತು.

ಅತ್ತೆ ಹೇಳಿದ ಮಾತು ನೆನಪಿಗೆ ಬರುತ್ತಿತ್ತು.

"ಶ್ವೇತಾ. ಬದಲಾವಣೆ ಅನ್ನೋದು ತುಂಬಾ ಮುಖ್ಯ. ಮನುಷ್ಯ ಬೆಳಿತಾ ಇದ್ದ ಹಾಗೆಲ್ಲಾ ಅವನ ಆಲೋಚನೆಗಳು ಬದಲಾಗ್ತಾ ಇದೆ. ನೀನೆ ನೋಡು ಮದುವೆ ಎನ್ನೋದರಿಂದ ಬಿಡುಗಡೆ ಬಯಸಿದ ಜೀವಕ್ಕೆ ಅದು ಸಿಗೋದು ಎಷ್ಟು ಕಷ್ಟ ಆಯ್ತು. ಕೊನೆಗೆ ಆಮಗುನೇ ಪ್ರಾಣಕಳ್ಕೊಂಡಿತು. ನೀನು ಸ್ಮಿತಾನ ಮನೆಗೆ ಕರ್ಕೊಂಡು ಬಾ ಹೇಗೋ ಮೂರು ವರ್ಷ ಜೊತೆಗೆ ಇದ್ದಾರೆ . ಮದುವೆ ಮನಸ್ಸು ಬಂದಿರ್ಬೋದು. ಇಬ್ಬರನ್ನು ಕರೆಸು ಇನ್ನೂ ಮದುವೆ ಆಗಲ್ಲಾ ಅಂದ್ರೂ ಸುಮ್ನೆ ಇದ್ದು ಬಿಡು. ನಾವು ಉದುರಿ ಹೋಗೋ ಎಲೆಗಳು. ಅವಳೋ ಚಿಗುರುತ್ತಿರುವ ಎಲೆ ಅವಳಿಗೆ ಅವಕಾಶ ಕೊಡೋಣ"

ಅತ್ತೆಯ ಮಾತುಗಳು ಆಶ್ಚರ್ಯವೇನೋ ತಂದಿರಲಿಲ್ಲ ಏಕೆಂದರೆ ಅವರು ಇತ್ತೀಚಿಗೆ ಹಾಗೆ ಮಾತಾಡುತ್ತಿದ್ದುದು

ಈ ಸಲ ಸ್ಮಿತಾ ಫೋನ್ ಮಾಡಿದರೆ ಮನೆಗೆ ಬಾ ಎಂದು ಹೇಳೋಣ ಎಂದುಕೊಂಡೆ. ಹೊಸ ನೀರಲ್ಲಿ ಬೆರೆಯೋ ಮನಸ್ಸು ಮಾಡಿದೆ.

ತುಂಬಾ ದಿನವಾದರೂ ಫೋನ್ ಬರಲಿಲ್ಲ

ಅವಳ ಮೊಬೈಲ್‌ಗೆ ಕಾಲ್ ಮಾಡಿದರೆ ಸ್ವಿಚ್ ಆಫ್ ಆಗಿದ್ದು ಗೊತ್ತಾಯಿತು.

ಕೊನೆಗೆ ಸ್ಮಿತಾಳ ಗೆಳೆಯನೊಬ್ಬನಿಂದ ಅವಳ ಹಳೇ ಕಂಪೆನಿಯ ಅಡ್ರೆಸ್ ತೆಗೆದುಕೊಂಡು ನಂತರ ಅವಳು ಮತ್ತೆ ಬೆಂಗಳೂರಿಗೆ ವಾಪಾಸಾಗಿದ್ದುದನ್ನು ತಿಳಿದೆ.

ಕೊನೆಗೂ ಯಾರ್ಯಾರಿಂದಲೋ ಸ್ಮಿತಾಳ ವಿಳಾಸವನ್ನು ತೆಗೆದುಕೊಂಡು ಅವಳ ಮನೆಗೆ ಅತ್ತೆಯನ್ನು ಕರೆದುಕೊಂಡೆ ನಡೆದೆ.
ಕಾರ್ ಅವಳು ಹೇಳಿದ ವಿಳಾಸದಲ್ಲಿ ನಿಂತಾಗ ಆ ಸುತ್ತಲಿನ ಪರಿಸರ ಕಂಡು ಕಕ್ಕಾಬಿಕ್ಕಿಯಾಯ್ತು

ಅವಳು ವಾಸವಾಗಿದ್ದು ವಠಾರವೊಂದರಲ್ಲಿ . ಕಿಶ್ಕಿಂದೆಗಿಂತ ಚಿಕ್ಕ್ದಾದಾದ ಜಾಗ ಉಸಿರಾಡಲೂ ತೊಂದರೆ. ಇದೇನಾಯ್ತು ಇವಳ್ಯಾಕೆ ಇಲ್ಲಿದಾಳೆ . ಅತ್ತೆಗೆ ನಡೆಯಲು ಕಷ್ಟವಾಗುತ್ತಿತ್ತಾದ್ದರಿಂದ ಕೈ ಹಿಡಿದು ಒಳಗೆ ಕರೆದುಕೊಂಡು ಹೋದೆ. ಅವಳ ಮನೆ ಎಲ್ಲಿ ಎಂದುಕೇಳಿದ್ದಕ್ಕೆಕಿಸಕ್ ಎಂದು ನಕ್ಕ ಹುಡುಗನೊರ್ವ ಒಂದು ಮನೆಯತ್ತ ಕೈ ತೋರಿದ


ಬಾಗಿಲು ಬಡಿದೆ . ಬಾಗಿಲು ತೆರೆಯಿತು

ಮೂಳೆ ಚಕ್ಕಳಗಳೇ ಮೈತುಂಬಿದಂತ ಹೆಣ್ಣೊಬ್ಬಳು ಅಲ್ಲಿ ನಿಂತಿದ್ದಳು. ಅವಳ ಗುರುತು ಹಿಡಿಯಲು ಸುಮಾರು ಕ್ಷಣಗಳೇ ಬೇಕಾದವು.

ಅತ್ತೆ "ಸ್ಮಿತಾ ಎಂದು ಚೀರಿದರು. ಬವಳಿ ಬಂದಂತಾಯ್ತು
ಸ್ಮಿತಾ ನನ್ನ ಮುದ್ದು ಕಣ್ಮಣಿಯ ಕಣ್ಣೆಲ್ಲಾ ಒಳಗೆ ಹೋಗಿದೆ, ನೋಡಲು ಸಾಧ್ಯವಾಗದಷ್ಟು ಸಣ್ನಗೆ ಹೋಗಿದ್ದಾಳೆ

ಇಪ್ಪತ್ತು ನಾಲ್ಕರ ತರುಣಿ ಈಗ ಐವತ್ತರ ಗಡಿ ದಾಟಿದವಳಂತೆ ಕಾಣುತ್ತಿದ್ದಾಳೆ.

ಕರುಳೆಲಾ ಕಿವುಚಿ ನೋವಾದಂತಾಯ್ತು

ನನ್ನನ್ನುನೋಡಿ ನಕ್ಕಳು

"ಬಾ ಅಮ್ಮ. ನಾನು ಚೆನ್ನಾಗಿರ್ವಾಗ ನೀನು ಬರಲಿಲ್ಲ ಈಗ ಬಂದ್ಯಾಮ ನಿನ್ನ ಮಗಳನ್ನ ನೋಡಿ ಏನಂತ ಅನ್ನಿಸ್ತಿದೆ"

ನಕ್ಕರೆ ಗುಳಿ ಬೀಳುತ್ತಿದ್ದ ಕೆನ್ನೆಗಳೆರೆಡು ಈಗ ಅವು ಇದ್ದಾವೆಯೇ ಎಂದು ಹುಡುಕುವಷ್ಟು ಒಳಗೆ ಹೋಗಿದ್ದವು

ಆ ನಗು ನೋಡಲಾಗಲಿಲ್ಲ

"ಏನೆ ಇದು ಸ್ಮಿತಾ ಈ ಅವಸ್ಥೆ"

ಶುಷ್ಕ ನಗೆ ನಕ್ಕಳು ಮತ್ತೆ

"ಇದೆಲ್ಲಾ ನಾನು ಇಟ್ಟ ಹೆಜ್ಜೆ . ಹೂವಿನ ಮೇಲೆ ಹೆಜ್ಜೆ ಇಡ್ತಾ ಇದೀನಿ ಅಂದುಕೊಂಡೆ . ಆದರೆ ನಾನಿಡ್ತಾ ಇದ್ದುದ್ದು ಹೂವಿನ ರೂಪದಲ್ಲಿದ್ದ ಮುಳ್ಳಿನ ಮೇಲೆ"

" ಕೂತ್ಕೋಮ", ಚಾಪೆ ಹಾಸಿ ಕೈ ತೋರಿದಳು

ಕೂತುಕೊಂಡೆ

ಮಗಳನ್ನ್ಜು ಈ ರೂಪದಲ್ಲಿ ನೋಡುವುದಕ್ಕಾ ನಾನಿಲ್ಲಿಗೆ ಬಂದದ್ದು.

"ಸ್ಮಿತಾ ಏನಾಗಿದೆ .ಏನಿದೆಲ್ಲಾ" ಅತ್ತೆ ನಡುಗುವ ದ್ವನಿಯಲ್ಲಿ ಕೇಳಿದರು

"ಅಮ್ಮಾ . ನನ್ನ ಜೀವನ ತುಂಬಾ ಚೆನ್ನಾಗಿ ಇತ್ತು. ಯಾವ್ದೇ ರೀತಿ ಒತ್ತಡ ಆಗಲಿ ಅಥವಾ ಗೊಂ’ದಲವಾಗಲಿ ಇರಲಿಲ್ಲ. ರಾಕೇಶ್ ಒಳ್ಳೆಯವನೇ ಆದರೆ ತುಂಬಾ ಪೊಸೆಸ್ಸೀವ್ ಅನ್ನಿಸ್ತಿತ್ತು. ಆದರೂ ನಮ್ಮ ಸಂಬಂಧಕ್ಕೆ ಯಾವುದೇ ಧಕ್ಕೆ ಬಂದಿರಲಿಲ್ಲ. ಇಬ್ವರೂ ಮೋಜು ಉಡಾಯ್ಸಿತ್ತಿದ್ವಿ ಕೈ ತುಂಬಾ ಹಣ ,ಪ್ರಾಯ. ನಾಳೇ ಏನು ಎಂಬ ಭಯ ಇರಲಿಲ್ಲ ಹೇಗಿದ್ದರೂ ಕೈನಲ್ಲಿ ಕೆಲಸ ಇತ್ತಲ್ಲ ವೀಕೆಂಡ್ ಬಂದರೆ ಹೊರಗಡೆ ಹೋಗ್ತಿದ್ವಿ . ಚೆನ್ನಾಗಿ ಖರ್ಚು ಮಾಡ್ತಾ ಇದ್ದೆ. ಆದರೂ ದುಡ್ಡು ಕೂಡಿಡ್ತಾ ಇದ್ದೆ

ಈಗ ಸುಮಾರು ಆರು ತಿಂಗಳ ಹಿಂದೆ , ರಾಕೇಶ್ ಬಂದು ನನ್ನನು ಮದುವೆಯಾಗು ಅಂದ . ಆದರೆ ನಂಗೆ ರಾಕೇಶ್‍‌ನ ಮದುವೆಯಾಗೋದು ಇಷ್ಟ ಇರಲಿಲ್ಲ. ಯಾಕೆಂದರೆ ಅವನು ತುಂಬಾ ಅಗ್ರೆಸ್ಸೀವ್, ಜೊತೆಗೆ ಸಿಡುಕು ಎಲಾ ನೋಡ್ತಾ ನೋಡ್ತಾ ನಂಗೆ ಅವನು ನಂಗೆ ಸರಿಯಾದ ಜೋಡಿ ಅಲ್ಲ ಅಂತನ್ನಿಸಿತು. ಆಗಲ್ಲ ಅಂದೆ . ತುಂಬಾ ಪೊಸೆಸ್ಸೀವ್ ಆಗಿ ಮಾತಾಡಿದ. ಈವನ್ ಲೋ ಲೆವೆಲ್‌ನಲ್ಲಿ ಮಾತಾಡೋಕೆ ಶುರು ಮಾಡಿದ. ಅವನಿಗೆ ಗುಡ್ ಬಾಯ್ ಹೇಳೋ ಸಮಯ ಅಂತನ್ನಿಸಿತು. ಆಗಲೇ ನಂಗೆ ಡೆಲ್ಲಿನಲ್ಲಿ ಇನ್ನೂ ಹೆಚ್ಚು ಸಂಬಳ ಬರೋ ಕೆಲಸ ಸಿಕ್ತು. ರಾಕೇಶ್‌ಗೆ ಬಾಯ್ ಹೇಳಿ ಡೆಲ್ಲಿಗೆ ಧಾವಿಸಿದೆ. ಅಲ್ಲಿ ನಂಗೆ ಪರಿಚಯ ಆಗಿದ್ದು ಅನುಭವ್ ಅಂತ ಒಬ್ಬ ನಾರ್ತ್ ಹುಡುಗ. ಕಾಣದ ಊರಿನಲ್ಲಿ ನನ್ನ ಚೆನ್ನಾಗಿ ಗೈಡ್ ಮಾಡಿದ . ಅವನೂ ಯಾವುದೋ ಒಂದು ಕಡೆ ಕೆಲಸ ಮಾಡ್ತಿದ್ದ ಅಂತ ಹೇಳಿದ. ನಾವಿಬ್ಬರೂ ಪರಸ್ಪರ ಆಕರ್ಷಿತರಾದ್ವಿ. ಇಬ್ಬರೂ ಒಟ್ಟಿಗೆ ವಾಸ ಮಾಡಲಾರಂಭಿಸಿದೆವು. ಅನುಭವ್‌ನ ಮಾತು ನಡೆ ನಂಗೆ ತುಂಬಾ ಹಿಡಿಸಿತು. ಕೊನೆಗೆ ಇಬ್ಬರೂ ಮದುವೆ ಆಗೋಣ ಅಂದುಕೊಂಡೆ. ಊರಿಗೆ ವಾಪಸ್ ಬಂದು ಈ ವಿಷ್ಯ ನಿಂಗೆ ಹೇಳೋಣ ಅನ್ಕೊಂಡೆ ಆ ಸಮಯಕ್ಕೆ ಅನುಭವ್ ಕೆಲಸ ಕಳೆದುಕೊಂಡ. ಅವನಿಗೆ ಬಿಸಿನೆಸ್ ಮಾಡಲು ಹಣ ಬೇಕಿತ್ತು. ನಾನು ದುಡಿದು ಕೂಡಿಟ್ಟ ಹಣಾನೆಲ್ಲಾ ಅವನಿಗೆ ಕೊಟ್ಘೆ ಹೇಗಿದ್ದರೂ ನಾನು ಮದುವೆಯಾಗೋನು ತಾನೆ ಅಂತ.

ಅವನೇನು ಓಡಿ ಹೋಗಲಿಲ್ಲಾಮ್ಮ ಆದರೆ ಇದ್ದಕಿದ್ದ ಹಾಗೆ ಅವನ ರೀತೀನೆ ಚೇಂಜ್ ಆಯ್ತು . ರಾತ್ರಿಯ ಇಂಟಿಮೇಟ್ ಕ್ಷಣದಲ್ಲೂ ರಾಕೇಶ್ ಏನ್ಮಾಡ್ತಿದ್ದ ಅಂತ ಕೇಳುತ್ತಿದ್ದ .ನಾನು ಎಂಜಲು ಎಂದು ಹೇಳುವ ಯಾವುದೇ ಘಳಿಗೆಯನ್ನ ಅವನು ತಪ್ಪಿಸಿಕೊಳ್ಳುತ್ತಿರಲಿಲ್ಲ. ನಾನು ಮೋಸ ಹೋಗಿದ್ದೆ ಅಮ್ಮ. " ಬಿಕ್ಕಳಿಸಿ ಅಳಲಾರಂಭಿಸಿದಳು.

ನಾನು ಮಾತಾಡಲಿಲ್ಲ . ಅವಳ ತಲೆ ನೇವರಿಸುತ್ತಿದ್ದೇ: ತಗ್ಗಿಸಿದ ತಲೆ ಎತ್ತಿದಳು

"ಅಮ್ಮ ನಂಗೆ ಮೋಸ ಮಾಡಿದ್ದು ಯಾರೂ ಅಲ್ಲ ನಂಗೆ ನಾನೆ ಮೋಸ ಮಾಡಿಕೊಂಡೆ. ಹೊಸದೇನೋ ಸಾಧಿಸ್ತೀನಿ ಅನ್ನೋ ಹುಚ್ಚಲ್ಲಿ ನಾನು ನನ್ನ ಜೀವನಾನೆ ಪ್ರಯೋಗಕ್ಕೆ ಒಡ್ಡಿಕೊಂಡೆ"

"ಎರೆಡು ತಿಂಗಳ ಹಿಂದೆ ಅವನ ಕಾಟ ತಡೀಲಾರದೆ ಅವನಜೊತೆ ಜಗಳವಾಡಿ ಅವನ್ನ ಬಿಟ್ಟು ಬೇರೆಡೆ ಹೋದೆ. ಆದರೆ ಅಲ್ಲೂ ಮತ್ತದೇ ಕಾಟ . ಈ ಲೀವ್ ಇನ್ ಟುಗೆದರ್ ಅನ್ನೋ ಕಾನ್ಸೆಪ್ಟ್ ಎಲ್ಲಾ ಕಡೆ ಹರಡಿದೆ. ಆದರೆ ಈ ಸಲ ನಾನು ಯಾರ ಜೊತೆನು ವಾಸ ಮಾಡಲಿಲ್ಲ. ನನ್ನ ಬದುಕು ನನ್ನದು ಅಂತ ಅಂದ್ಕೊಂಡಿರ್ಬೇಕಾದಾಗಲೇ ಈಗ ಹೋದ ತಿಂಗಳು ನನ್ನನ್ನ ಕೆಲಸದಿಂದ ಮನೆಗೆ ಅಟ್ಟಿದರು. "

ಮತ್ತೇನು ಮಾಡಲಾದೀತು ನಾನು ಆ ಡೆಲ್ಲೀನಲ್ಲಿ . ಮೂರುವಾರಕ್ಕೆ ಮುಂಚೆ ಬೆಂಗಳೂರಿಗೆ ಬಂದೆ. ಕೆಟ್ಟು ನಿನಗೆ ಮುಖ ತೋರಿಸಬಾರದು ಅಂತ ನಿರ್ಧಾರ ಮಾಡಿದೆ. ಕೈನಲ್ಲಿದ್ದ ಕಾಸನ್ನು ಮನಸಲ್ಲಿದ್ದ ಭಾವನೇನ, ಮೈನಲ್ಲಿದ್ದ ರೋಚಕತೆಯನ್ನೆಲ್ಲಾ ಅನುಭವ್ ದೋಚಿದ್ದ .

ಮಾಡಲು ಏನೂ ಉಳಿಯಲಿಲ್ಲ. ಇಲ್ಲೂ ಕೆಲಸ ಸಿಗುವುದು ತುಂಬಾ ಕಷ್ಟ ಆಗಿದೆ. ಕೊನೆಗೆ ಯಾವುದಾದರೂ ಆಫೀಸಲ್ಲಿ ಕೆಲಸ ಮಾಡಲು ಹೋದರೂ ಈಗೀಗ ಡಿಗ್ರಿ ಕೇಳ್ತುತಾ ಇದ್ದಾರೆ. ಕೊನೆಗೆ ಇಲ್ಲೇ ಒಂದು ಸ್ಕೂಲಲ್ಲಿ ಟೀಚರ್ಆಗಿದೀನಿ.ಮುಂದೆ ಏನಾಗುತ್ತೋ ಗೊತ್ತಿಲ್ಲ"

ಅವಳ ಮಾತು ಮುಗಿಯಿತೆಂಬಂತೆ ಮತ್ತೆ ನನ್ನ ಮಡಿಲಿನಲ್ಲಿ ಮುಖವಿಟ್ಟು ಮಲಗಿದಳು

ಅತ್ತೆಯ ಮುಖ ನೋಡಿದೆ . ಅವರು ಸುಸ್ತಾಗಿದ್ದರು. ಈ ಇಳಿ ವಯಸ್ಸಿನಲ್ಲಿ ಅವರಿಗೆ ಇಂತಹದನ್ನೆಲ್ಲಾ ತಾಳುವ ಶಕ್ತಿ ಇದೆಯೇ?

"ಸ್ಮಿತಾ ಮನೆಗೆ ಹೋಗೋಣ ಬಾ" ದೃಡ ನಿರ್ಧಾರದಲ್ಲಿ ಹೇಳಿದೆ

"ಇಲ್ಲಾಮಾ ನಾನು ಬರಲ್ಲ,ಹಣ, ವಯಸ್ಸು ಇವುಗಳ ಮದದಲ್ಲಿ ನಾನು ಆಡಿದ ಮಾತುಗಳು ಆಮನೇಲಿ ಪ್ರತಿಧ್ವನಿಸ್ತಾ ಇದೆ. ಬದುಕ್ತೀನಿ ನಾನು. ನನ್ನನೋಡೋಕೆ ನೀನು ಬಂದೆಯಲ್ಲ ಸಾಕು"

"ಹೌದು ಶ್ವೇತಾ ಸ್ಮಿತಾ ಹೇಳೋದು ನಿಜಾ ಆ ಮನೆಗೆ ಅವಳು ಬರೋದು ಬೇಡ" ಅತ್ತೆಯ ದ್ವನಿ ಕೇಳುತ್ತಲೇ ಚಕಿತಳಾದೆ

"ಅತ್ತೆ "

"ಈಗಲೆ ಆ ಏರಿಯಾದಿಂದ ದೂರವಾಗಿ ಮತ್ತೊಂದು ಮನೆ ಮಾಡು. ನಾವೆಲ್ಲಾ ಬೇರೆ ಮನೆಯಲ್ಲಿ ವಾಸಿಸೋಣ. ಮುಂದಿನ ಬದುಕು ಹೇಗಿರುತ್ತೇ ಅಂತ ಗೊತ್ತಿಲ್ಲ. ಆದರ್ ಈಗ ನಾವೆಲ್ಲರೂ ಒಟ್ಟಿಗೆ ಇರೋಣ .ಸ್ಮಿತಾ ಏನಂತೀಯಾ?"

ಅತ್ತೆಯ ಮಾತಿಗೆ ಮೂಕಳಾಗಿದ್ದೆ. ಅವರ ಔದಾರ್ಯತೆಗೆ ತಲೆ ಬಾಗಿದ್ದೆ. ಸ್ಮಿತಾ ಅವಳ ಅಜ್ಜಿಯನ್ನು ತಬ್ಬಿಕೊಂಡಳು

ಹಾಗಾಗುತ್ತಿದ್ದಂತೆ ಒಂದೆಡೇ ಗಾಯತ್ರಿಯ ಮುಖ ಹಾಗು ಮತ್ತೊಂದೆಡೇ ಸ್ಮಿತಾಳ ಮುಖ ಕಣ್ಣೆದುರಿಗೆ ಬಂತು

ಯಾರ ಆಯ್ಕೆ, ಯಾವ ನಿಲುವು ಸರಿ ಈ ಪ್ರಶ್ನೆಗೆ ಉತ್ತರ ಸಿಗಲೇ ಇಲ್ಲ

Saturday, March 7, 2009

ಜಾಣೆಯಾಗಿರು ನನ್ನ ಮಲ್ಲಿಗೆ

ಅಮ್ಮಾ ಬಾಯ್ ಹೆಗಲ ಮೇಲೆ ಬ್ಯಾಗ್ ತಗುಲಿಸಿಕೊಂಡು ಸ್ಕೂಲಿಗೆ ಹೊರಟಳು ಮಗಳು. ನೋಡಿದರೆ ದೃಷ್ಟಿಯಾಗುವ ಹಾಗೆ ಇದ್ದಾಳೆ.ಇಷ್ಟೊಂದು ಅಲಂಕಾರ ಬೇಡ ಕಣೆ ಎಂದರೆ ಕೇಳೋದಿಲ್ಲ. ಇನ್ನೂ ಎಂಟನೆ ತರಗತಿಯ ಮೆಟ್ಟಿಲು ಹತ್ತುತ್ತಿರುವ ಮಗಳು ನನ್ನ ಎತ್ತರಕ್ಕೂ ಬೆಳೆದಿದ್ದಾಳೆ ಅವರಿದ್ದರೆ ಎಷ್ಟು ಸಂತೋಷ ಪಡುತ್ತಿದ್ದರೋ. ಮಹಿಯ ನೆನಪಾಗಿ ಕಣ್ಣಾಲಿಯಲ್ಲಿ ನೀರು ತುಂಬಿತು. ಸೆರಗಲ್ಲಿ ಕಣ್ಣೊರೆಸಿಕೊಂಡು ಮೆಟ್ಟಿಲು ಏರುತ್ತಿದ್ದಂತೆ"ಶ್ವೇತಾ ಇವತ್ತು ಏಕಾದಶಿ. ನಂಗೇಂತ ಏನೂ ಮಾಡಬೇಡ" ಎಂದರು ಅತ್ತೆ. ಆಯ್ತು ಅತ್ತೆ . ಹೆಸರಿಗೆ ಅತ್ತೆ ಎಂದು ಕರೆದರೂ ತಾಯಿಯ ವಾತ್ಸಲ್ಯದ ಧಾರೆ ಎರೆಯುತ್ತಿದ್ದಾರೆ. ಸ್ವಲ್ಪ ಹಳೇ ಕಾಲದವರಾದ್ದರಿಂದ ಮಡಿ ಮೈಲಿಗೆ ಅಂತ ನೋಡ್ತಾರೆ ಆಗಾಗ ಸಿಡುಕು ಇದ್ದುದ್ದೇ.ತವರಲ್ಲಿ ಅಮ್ಮ ಇಲ್ಲ ಕಣ್ಮುಚ್ಚಿಕೊಂಡು ಈಗಾಗಾಲೆ ಹತ್ತು ವರ್ಷಗಳಾಗಿವೆ. ಆಗಿನ್ನೂ ಸ್ಮಿತ ಕೇವಲ ಐದುವರ್ಷಗಳಾಗಿತ್ತು. ಅದಾಗಿ ಮೂರು ತಿಂಗಳೂ ಆಗಿರಲಿಲಲ್ಆಗಲೆ ಮಹಿ ರಸ್ತೆ ಅಪಘಾತದಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡಾಗ ದಿಕ್ಕು ತೋಚದಂತಾಗಿತ್ತುತನ್ನಂತೆ ಅತ್ತೆಯೂ ಚಿಕ್ಕ ವಯಸ್ಸಿನಲ್ಲಿ ವಿಧವೆಯಾಗಿದ್ದರೂ ಧೈರ್ಯ ತುಂಬಿದರು. ಎಂತಹ ಹಳೇ ಕಾಲದವರಾಗಿದ್ದರೂ ಮತ್ತೊಂದು ಮದುವೆಗೆ ಒತ್ತಾಯಿಸಿದರು. ಆದರೆ ಮಹಿಯ ನನಪು, ಸ್ಮಿತಾಳ ಬಾಳಿನ ಪ್ರಶ್ನೆಗೆ ಹೆದರಿ ಮರು ಮದುವೆಗೆ ಧೈರ್ಯ ತೋರಲಿಲ್ಲಅಂದಿನಿಂದ ಮನೆ ಮಹಿಳಾ ಸಾಮ್ರಾಜ್ಯವಾಗಿದೆ. ಬದುಕಲು ಮಹಿಯ ತಂದೆ ಮಾಡಿಟ್ಟ ಆಸ್ತಿ ಬಹಳವಿದೆಸ್ವಂತ ಮನೆ, ಜೊತೆಗೆ ಹತ್ತು ಮನೆಗಳನ್ನು ಬಾಡಿಗೆಗೆ ಕೊಟ್ಟಿದ್ದುದ್ದರಿಂದ ಬಾಳೊಂದು ಕಷ್ಟ ಅನ್ನಿಸಲಿಲ್ಲ. ಸ್ಮಿತಾಗೆ ತಂದೆಯ ಕೊರತೆ ಕಾಣಬಾರದು ಎಂದು ಅತಿಮುದ್ದಿನಿಂದಲೇ ಬೆಳೆಸಿದ್ದೆ. ಜನರೇಶನ್ ಗ್ಯಾಪ್ ಎನ್ನುವುದು ಇಲ್ಲಿ ಮನೆ ಮಾಡುತ್ತಿತ್ತು ಅವಳಿಗೂ ಅವಳ ಅಜ್ಜಿಗೂ ಎಲ್ಲಕ್ಕೂ ಜಗಳ
ಅತ್ತೆಗೆ ಒಂದಷ್ಟು ಹಣ್ಣು ಬಿಡಿಸಿಕೊಟ್ಟೆ. ಹಣ್ಣು ಮೆಲ್ಲುತ್ತಾ ಹೇಳಿದರು"ಶ್ವೇತಾ ಏನೆ ಹೇಳು ಸ್ಮಿತಾಗೆ ಸ್ವಲ್ಪ ಬುದ್ದಿ ಹೇಳು. ನಂಜೊತೆ ಜಗಳ ತುಂಬಾ ಆಡ್ತಾಳೆ. ಇಲ್ಲೀವರೆಗೆ ಚಿಕ್ಕೋಳು ಅನ್ಕೊಂಡು ಸುಮ್ಮನಿದ್ದೆ ಈಗಾ ಇನ್ನೇನುಒಂದೆರೆಡು ದಿನದಲ್ಲಿ ಮೈನೆರೀತಾಳೆ. ಕಾಲ ಬಹಳ ಕೆಟ್ಟದು . ತುಂಬಾ ಚೆಲ್ ಚೆಲ್ಲಾಗಿ ಆಡ್ಬೇಡಾ ಅನ್ನು. ಸ್ವಲ್ಪಾನೂ ಶಿಸ್ತಿಲ್ಲ ಮನೆಗೆ ಒಂದು ಗಂಡು ದಿಕ್ಕಿಲ್ಲ ಅಂದ್ರೆ ಹೀಗೆ ಆಗೋದು""ಹೋಗ್ಲಿ ಬಿಡಿ ಅತ್ತೆ ಇನ್ನೂ ಚಿಕ್ಕ ವಯಸ್ಸು" ಹಾಗಂತ ಹೇಳಿದರೂ ಮನಸ್ಸು ಅತ್ತೆ ಹೇಳಿದ್ದು ನಿಜ ಎನ್ನುವಂತಿತ್ತು"ಏನ್ ಚಿಕ್ಕವಯಸ್ಸು. ಈ ವಯಸ್ಸಿಗೆ ನಂಗೆ ಮದುವೆ ಆಗಿ ನಿನ್ನ ಗಂಡ ಹುಟ್ಟಿದ್ದ." ನಗು ಬಂದಿತು. ಸ್ಮಿತಾಗೆ ಮದುವೆ ಎನ್ನೋ ಕಲ್ಪನೆ ಮೂಡಿಯೇ
"ಸರಿ ಅತ್ತೆ ನಾನವಳಿಗೆ ಬುದ್ದಿ ಹೇಳ್ತೀನಿ . ನೀವು ಆರಾಮಾವಾಗಿ ಮಲಗಿ" ಅವರು ಚಾಪೆಯಮೇಲೆ ಮಲಗಿದರು. ಅವರು ಯಾವಾಗಲೂ ಹಾಗೆಯೇ ಹಾಸಿಗೆ, ಮಂಚದ ಮೇಲೆ ಮಲಗಿದವರೇ ಅಲ್ಲ . ಮೊದಲು ಹೇಗಿದ್ದರೋ ಗೊತ್ತಿಲ್ಲ. ನಾನು ಈ ಮನೆಗೆ ಬಂದ ಮೇಲೆ ಅವರು ಮಂಚ ಮುಟ್ಟಿದ್ದು ಕಂಡಿಲ್ಲ.
ಇವತ್ತು ಕೆಲಸದ ನಿಂಗಿ ಬಂದಿರಲಿಲ್ಲ. ನಾನೆ ಕಸ ಗುಡಿಸಿಕೊಂಡು ಸ್ಮಿತಾ ರೂಮಿಗೆ ಬಂದೆ. ಅಬ್ಬಾಬ್ಬ ಎಷ್ಟೊಂದು ಹರಡಿದ್ದಾಳೆ
ರೂಮಿನ ತುಂಬಾ ಹೀರೋಗಳ ಪೋಸ್ಟರ್‌ಗಳು ಕಂಪ್ಯೂಟರ್ ಆನಲ್ಲಿಯೇ ಇದೆ. ಆಫ ಸಹಾ ಮಾಡಿಲ್ಲ. ನೆಟ್ ಕನೆಕ್ಟ್ ಮಾಡಿಯೇ ಇದೆ. ಸುಮ್ನೆ ಬಿಲ್ ಜಾಸ್ತಿ ಆಗುತ್ತೆ.
ಸಿಸ್ಟಮ್ ಆಫ್ ಮಾಡಿದೆ, ಪೋಸ್ಟರ್ ಗಳನ್ನು ಎತ್ತಿಟ್ಟೆ . ನೆನ್ನೆ ಒಗೆದ ಬಟ್ಟೆಗಳನ್ನು ಮಡಚಿ ತಂದಿಟ್ಟಿದ್ದೆ. ಇನ್ನೂ ಅಲ್ಮಾರದಲ್ಲಿ ಇಟ್ಟುಕೊಂಡೂ ಇಲ್ಲ.
ಏನ್ ಹುಡ್ಗೀನೋ ಯಾವಾಗ ಜವಾಬ್ದಾರಿ ಕಲಿತುಕೊಳ್ಳುತ್ತೋ.
ಬೈದುಕೊಂಡು ಬಟ್ಟೇನ ಅವಳ ಅಲ್ಮಾರಾದಲ್ಲಿ ಇಡುತ್ತಿದ್ದಂತೆ
ಅದು ಕಣ್ನಿಗೆ ಕಂಡಿತು.
ದಿಗ್ಭ್ರಮೆಯಾಯ್ತು
ವಿಸ್ಪರ್ ಇಲ್ಲಿಗೆ ಹೇಗೆ ಬಂತು
ಅಂದರೆ ಇದನ್ನುಉಪಯೋಗಿಸ್ತಾ ಇದಾಳಾ .
ಅವಳು ಯಾವಾಗಿಂದ
ತಲೆ ಧಿಮ್ಮೆಂದಿತು
ತಾಯಿಯಾಗಿ ನನಗೆ ತಿಳಿಯಬೇಕಿದ್ದ ವಿಷಯ ಹೇಗೆ ಮುಚ್ಚಿಟ್ಟಿದ್ದಾಳೆ
ಅತ್ತೆಗೆ ಹೇಳಿದರೆ ಸುಮ್ಮ್ನನಿರ್ತಾರಾ? ಮಡಿ ಮಡಿ ಎಂದು ಅಡಿಗಡಿಗೆ ಹಾರಾಡುವ ಅತ್ತೆಗೆ ಆಘಾತವಾಗುವುದಿಲ್ಲವೇ
ನನ್ನ ಕಂದ ದೊಡ್ಡವಳಾಗಿದ್ದಾಳೆ ಅದು ನನಗೆ ಗೊತ್ತಿಲ್ಲ. ಅರಿವಿಲ್ಲದೆ ಕಣ್ಣಲ್ಲಿ ನೀರು ತುಂಬಿತು
ಹಾಗೆ ಮಂಚದ ಮೇಲೆ ಕುಕ್ಕರಿಸಿದೆ.
"ಆಂಟಿ ಶ್ವೇತಾಗೆ ಏನೋ ಆಯ್ತಂತೆ. " ಪಕ್ಕದ ಮನೆ ಪ್ರಗತಿ ತನ್ನ ತಾಯಿಯ ಬಳಿ ಹೇಳುತ್ತಿದ್ದಳು. ಅಮ್ಮನ ಬಳಿ ಹೇಳಲಾರದೆ ಪ್ರಗತಿಯ ಬಳಿ ಹೇಳಿದೆ.
ಬೆಳಗಿನಿಂದಲೇ ಏನೋ ಹೊಟ್ಟೆ ನೋವು ಕಸಿವಿಸಿ, ತಲೆ ಸುತ್ತಿದಂತಾಗುತ್ತಿತ್ತು.
ನಂತರ ತನಗೇನೋ ಆಗಿದೆ ಎಂಬ ಭಾವನೆ ಬಲಿಯತೊಡಗಿತು.
"ಏ ಶ್ವೇತಾ ನಿನ್ನ ಬಟ್ಟೆ ಮೇಲೆ ಏನೆ ಅದು ಕಲೆ" ಪ್ರಗತಿ ಹೇಳಿದಾಗಲೆ ಅದು ಗೊತ್ತಾದುದು
ಕೂಡಲೆ ಪ್ರಗತಿಯ ಕಿವಿಯಲ್ಲಿ ಹೇಳಿದೆ
ಅದನ್ನೇ ಪ್ರಗತಿ ಶ್ವೇತಾಳ ತಾಯಿಯ ಹತ್ತಿರ ಹೇಳಿದಳು
"ಹೌದೇನೆ? " ಸಂಭ್ರಮದಿಂದ ಕೇಳಿದರು ತಾಯಿ
ನಂಗೇನೋ ಆಗಿ ಹೋಗಿದೆ ಎಂಬ ಆತಂಕದಿಂದಲೆ ತಲೆ ಆಡಿಸಿದೆ
ಅಮ್ಮ ಸ್ನಾನ ಮಾಡಲು ಹೇಳಿದರು
ನಂತರ ಮೂರು ದಿನ ಅಮ್ಮನ ರೂಮಿನಲ್ಲಿ ಒಂದು ಕಡೆ ಕೂರಲು ಹೇಳಿದರು. ಅಪ್ಪನ ಕಣ್ಣಲ್ಲೂ ನನ್ನ ಬಗ್ಗೆ ಏನೋ ಒಲವು.
ತಿನ್ನಲು ಎಳ್ಲಿನ ಉಂಡೆ, ಕೊಬ್ಬರಿ , ತುಪ್ಪ ಹೀಗೆ ಚೆನ್ನಾಗಿ ತಿಂದಿದ್ದಾಯಿತು
ಅಮ್ಮ ನನಗೆ ಮೊದಲ ಬಾರಿ ಲಂಗ ದಾವಣಿ ಕೊಡಿಸಿದಳು. ಅಪ್ಪ ಹೊಸ ಬಟ್ಟೆ ಕೊಡಿಸಿದ. ಇದೆಲ್ಲಾ ತಿಳಿಯದ ತಮ್ಮ ತಂಗಿಯರಿಗೆ ಮಾತ್ರ ಕುತೂಹಲ
"ಏ ಯಾಕೆ ನಿಂಗೆ ಮಾತ ಎಲ್ಲಾ ಕೊಡಿಸ್ತಿದಾರೆ"
ಆವತ್ತು ಸಂಜೆ
ಅಮ್ಮ ನನ್ನನ್ನು ಲಂಗ ದಾವಣಿ ಉಡಲು ಹೇಳಿ, ಅಲಂಕಾರ ಮಾಡಿ ಕಣ್ತುಂಬಾ ನೋಡಿ ನಲಿದಳು ಆರತಿ ಎತ್ತಿದಳು
"ಶ್ವೇತಾ ಇವತ್ತಿನಿಂದ ನಿನ್ನಲ್ಲಿ ಹೆಣ್ತನ ಬಂದಿದೆ, ಮುಂದೆ ಜಾಗೃತಿಯಾಗಿರು. ಎಲೆ ಮುಳ್ಳಿನ ಮೇಲೆ ಬಿದ್ರೂ ಮುಳ್ಳು ಎಲೆ ಮೇಲೆ ಬಿದ್ರೂ ನಾಶ ಎಲೆಯದೇ ಆಗುತ್ತದೆ. ಅದನ್ನ ನೆನಪಿಟ್ಕೋ"
ಅಮ್ಮನ ಆ ಮಾತು ಮನಸಿಗೆ ಚೆನ್ನಾಗಿ ನಾಟಿತ್ತು
ಹಾಗೆ ಮಗಳನ್ನು ಅಲಂಕಾರ ಮಾಡಿ ಅವಳಿಗೆ ಬುದ್ದಿ ಮಾತನ್ನು ಹೇಳೋಣ ಎನ್ನುವ ಆಸೆಯೂ ಇತ್ತು.
ಆದರೆ ಇವಳು ?
ಹೀಗ್ಯಾಕೆ ಮಾಡಿದಳು
ಅತ್ತೆಗೆ ಹೇಳಿ ಮನಸನ್ನು ಕದಡಲು ಮನಸ್ಸು ಬರಲಿಲ್ಲ
ಸಂಜೆಯಾಯಿತು
ಸ್ಮಿತಾ ಎಂದಿನಂತೆ ಮನೆಗೆ ಬಂದಳು
ಅವಳ ಮುಖದಲ್ಲಿ ಹೆಣ್ತನವನ್ನು ಹುಡುಕತೊಡಗಿದೆ. ಕಾಣಲಿಲ್ಲ
"ಅಮ್ಮಾ ಏನು ಹಾಗೆ ನೋಡ್ತಿದೀಯಾ. ಕಾಫಿ ಕೊಡು, ಸಮೀರ್ ಬರ್ತ್ ಡೇ ಇದೆ ಗಿಫ್ಟ್ ತಗೋಬೇಕು, ದುಡ್ಡು ಕೊಡು" ಸ್ಮಿತಾ ಹೇಳುತ್ತಿದ್ದಳು
"ಯಾರೆ ಅದು ಸಮೀರ ನಿಂಗ್ಯಾಕೆ ಅವನ ಉಸಾಬರಿ ಈ ಸಂಜೇ ಮೇಲೆ ಎಲ್ಲಿಗೆ ಹೋಗ್ತೀಯಾ" ಅತ್ತೆ ಅವರ ರೂಮಿನಿಂದ ಕಿರುಚುತ್ತಿದ್ದರು
"ಅಜ್ಜಿ ನೀನು ಸುಮ್ನೆ ಇರು ನಾನೇನು ರಾತ್ರಿ ಅಲ್ಲೇ ಇರ್ತೇನೆ ಅಂದ್ನಾ ಫಂಕ್ಷನ್ ಅಟೆಂಡ್ ಮಾಡಿ ಬರ್ತೀನಿ ಅದ್ಯಾಕೆ ಅಷ್ಟೊಂದು ಕಿರುಚ್ತೀಯಾ" ಅಜ್ಜಿಗಿಂತ ಜಾಸ್ತಿ ಬಾಯಿ ಮಾಡಿದಳು
"ಏ ಸ್ಮಿತಾ ಒಳಗೆ ಬಾರೆ" ಅವಳ ರೂಮಿಗೆ ಕರೆದುಕೊಂಡು ಹೋದೆ
"ಏನೆ ಇದು" ವಿಸ್ಪರ್ ಪ್ಯಾಕೆಟ್ ಅವಳ ಮುಂದೆ ಹಿಡಿದೆ
"ಅಮ್ಮ ಅಷ್ಟೂ ಗೊತ್ತಿಲ್ವಾ. ನಿಂಗೆ ಅದು ವಿಸ್ಪರ್"
"ಅದು ಸರಿ ಯಾವಾಗಿಂದ . ನಂಗ್ಯಾಕೆ ಹೇಳಿಲ್ಲಾ" ಪಿಸುದನಿಯಲ್ಲಿಯೇ ಮಾತಾಡಿದೆ
"ಯಾವಾಗಿಂದ ಮೋಸ್ಟ್ಲಿ ಎರೆಡು ತಿಂಗಳಿಂಗ ಇರ್ಬೇಕು. ನಿಂಗ್ಯಾಕೆ ಹೇಳ್ಬೇಕು? ಇದೇನು ಪಿ ಎಚ್ ಡಿ ಅವಾರ್ಡಾ ಹೇಳೋಕೆ. ಇದು ತೀರಾ ಪರ್ಸನಲ್ ಅಮ್ಮ"
" ನೋಡು ಸ್ಮಿತಾ ಇದರಲ್ಲಿ ನಿಂಗೆ ಗೊತ್ತಿಲ್ಲದೆ ಇರೋ ಕೆಲವೊಂದು ವಿಷಯ ಇರುತ್ತೆ . ಅದನ್ನೆಲ್ಲಾ ನಾನು ನಿಂಗೆ ಹೇಳಿಕೊಡ್ವೇಕು"
"ಅಯ್ಯೋ ಅಮ್ಮಾ ಯಾವ ಕಾಲದಲ್ಲಿ ಇದ್ದೀಯಾ. ಇದೆಲ್ಲಾ ಇಂಟರ್ನೆಟ್ ನಲ್ಲಿ ನೋಡಿದ್ರೆ ಸಿಗುತ್ತೆ. ಸಿನಿಮಾದಲ್ಲಿ ತಿಳಿಯುತ್ತೆ. ನಿಮಗೂ ಎಷ್ಟೊಂದು ವಿಷ್ಯ ಗೊತ್ತ್ತಿರಲ್ಲ ಅದೆಲ್ಲಾ ನಮಗೆ ಗೊತ್ತಿರುತ್ತೆ ಗೊತ್ತಾ" ಸರಳವಾಗಿ ನುಡಿದು ಕಂಪ್ಯೂಟರ್ ಆನ್ ಮಾಡಿದಳು.
ನಾನು ಮುದ್ದು ಮಾಡಿದ್ದರ ಪರಿಣಾಮವೋ ಅಥವ ಆಧುನಿಕ ತಂತ್ರಜ್ನಾನದ ಫಲವೋ ಅಂತೂ ನನಗೇನೂ ಗೊತ್ತಿಲ್ಲ ಎಂದು ಸರಾಗವಾಗಿ ಹೇಳುವಷ್ಟರ ಮಟ್ಟಿಗೆ ಬಂದಿದೆ
ಇನ್ನು ಸೋತೆ ಅನ್ನಿಸಿತು ಆದರು ತಾಯಿ ಎಂಬ ಕರ್ತವ್ಯಕ್ಕೆ ಅಮ್ಮ ಹೇಳಿದ ಮಾತುಗಳನ್ನು ಹೇಳಲಾರಂಭಿಸಿದೆ
"ಅಮ್ಮಾ ನಂಗೇನು ಹೇಳ್ಬೇಡಾ ಅಮ್ಮ ಬಿದ್ರೂ ಎಲೆಗೆ ಏನೂ ಆಗದೆ ಇರೋ ಹಾಗೆ ಸೇಫ್ ಗಾರ್ಡ್ ಮಾಡ್ಕೊಂಡ್ರಾಯ್ತು ,ಈಗ ದಯವಿಟ್ಟು ಬಿಟ್ಟು ಬಿಡು ನಂಗೆ ಅಸೈನ್ ಮೆಂಟ್ ಇದೆ" ಕೈ ಮುಗಿದಳು
ಅವಳ ಮಾತಿನ ಅರ್ಥ ತಿಳಿಯಲು ಕೆಲವು ನಿಮಿಷಗಳು ಬೇಕಾಯ್ತು, ದಂಗಾದೆ. ಕೈ ಮಾಡಬಹುದು ಆದರೆ ಮಾಡಲಿಲ್ಲ.
"ಸ್ಮಿತಾ ನೋಡು ಅಪ್ಪ ಇಲ್ಲ ಅಂತ ಮುದ್ದಾಗಿ ಸಾಕೀದೀನಿ ಅದನ್ನ ದುರುಪಯೋಗಿಸ್ಕೋಬೇಡ. ನಿನ್ನ ಹೆಜ್ಜೆ ನೀನೇ ಇಡು ಆದ್ರೆ ಬಿದ್ರೆ ನಾನು ಹೊಣೆ ಅಲ್ಲ, ಹೆಜ್ಜೆ ಇಡ್ವಾಗ ಹಳ್ಳ ಕೊಳ್ಳ ನೋಡಿಕೊಂಡು ಇಡು"
"ಆಯ್ತಮ್ಮ ಈಗ ದುಡ್ಡು ಕೊಡ್ತೀಯಾ ಇಲ್ವಾ ಸಮೀರ್‌ಗೆ ಗಿಫ್ಟ್ ತಗೋಬೇಕು" ಗೋಗರೆದಳು
ಇಲ್ಲ ಸ್ಮಿತಾ ಇನ್ನೊಂದೆರೆಡು ದಿನ ಎಲ್ಲಿಯೂ ಹೋಗ್ಬೇಡಾ ನೀನು
"ಅಮ್ಮ ಈಗ ನಾನು ಪಿರಿಯಡ್ಸ್‌ನಲ್ಲಿ ಇಲ್ಲ , ನಾನು ಮೆಚ್ಯೂರ್ ಆಗೇ ಎರೆಡು ತಿಂಗಳಾಗಿವೆ . ಇವಾಗ ರಿಸ್ಟಿಕ್ಷನ್ ಮಾಡಿದರೆ ಏನು ಉಪಯೋಗ. ಸುಮ್ನೆ ಸಂಪ್ರದಾಯಾಂತ ಮೂಲೇಲಿಕೂತ್ಕೊಳೋದು ಆರತಿ ಎತ್ತೋದು. ಸೀರೆ ಉಟ್ಕೋಳೋದು ಯಾಕೆ ಅಂತ ನಾನೆ ಹೇಳಲಿಲ್ಲ ಅಮ್ಮ ಅದು ಬಿಟ್ರೆ ನಿಂಗೆ ಹೇಳ್ಬಾರದು ಅನ್ನೋ ಉದ್ದೇಶ್ ಇರಲಿಲ್ಲಾಮ್ಮ"
ಬಂದು ನನ್ನ ತಬ್ಬಿಕೊಂಡಳು
ಅವಳ ಹಣೆಗೆ ಮುತ್ತಿಟ್ಟು ತಲೆ ನೇವರಿಸಿದೆ.
"ಆದ್ರೆ ಅಜ್ಜಿಗೆ ಹೇಗೆ ಹೇಳೋದು?"
"ಯಾಕೆ ಹೇಳ್ಬೇಕು. ಸುಮ್ನಿದ್ದುಬಿಡೋಣ"
"ಅದು ಸರಿ ಅಲ್ಲ ನಾನೆ ಸಮಯ ನೋಡಿ ಹೇಳಿಬಿಡ್ತೀನಿ"
"ನಾನಿಲ್ಲದಾಗ ಹೇಳಮ್ಮ . ಈಗ ನಂಗೆ ಹೊರಗಡೆ ಹೋಗೋಕೆ ಪರ್ಮಿಷನ್ ಮತ್ತೆ ಕಾಸು ಎರೆಡೂ ಕೊಡು" ಅವಳ ಗೋಗರೆತ ನೋಡಲಾರದೆ ಹಣ ಕೊಟ್ಟೆ
"ಬೇಗ ಬಾ ಸ್ಮಿತಾ"
"ಆಯ್ತಮ್ಮ" ಅಲಂಕರಿಸಿಕೊಂಡು ಹೊರಟಳು
ಅವಳು ಹೋದತ್ತಲೇ ನೋಡುತ್ತಿದ್ದೆ
"ಶ್ವೇತಾ " ದೇವರ ಮನೆಯ ಹತ್ತಿರದಿಂದ ಕೂಗಿದರು ಅತ್ತೆ
"ಹೇಳಿ ಅತ್ತೆ"
"ನಂಗೆಲ್ಲಾ ವಿಷಯ ಗೊತ್ತಾಯ್ತು, ಎಲ್ಲಾನೂ ಕೇಳಿಸ್ಕಿಕೊಂಡೆ"
ನಾನು ಅಪರಾಧಿಯಂತೆ ಕೆಳಗೆ ನೋಡಿದೆ
"ಅತ್ತೆ ಅದೂ ಅವಳಿಗೆ ತಿಳಿದಿಲ್ಲ" ಸಮರ್ಥಿಸಲು ನೋಡಿದೆ
"ಅವಳನ್ನು ವಹಿಸ್ಕೊಂಡು ಮಾತಾಡ್ವೇಡ ನೀನು" ಅವರ ಕಣ್ಣಲ್ಲಿ ಹೆಪ್ಪುಗಟ್ಟಿದ್ದ ನೋವನ್ನು ಗ್ರಹಿಸಬಲ್ಲೆನಾಗಿದ್ದೆ. ಅವರ ಆಚಾರ ವಿಚಾರಗಳನ್ನೆಲ್ಲ ಒಮ್ಮೆಗೆ ಗಾಳಿಗೆ ತೂರಿದ್ದಳು ಮೊಮ್ಮಗಳು
"ಸರಿ ಆಗಿದ್ದು ಆಗಿ ಹೋಯ್ತು ಮನೆಲಿ ಒಂದು ಪುಣ್ಯಾವರ್ತನೆ ಮಾಡೋಣ, ಅವಳಿಗೆ ಹೊಸ ಬಟ್ಟೆ ಹೊಲಿಸು, ಮುಂದಿನವಾರ ಆರತಿ ಎತ್ತೋಣ" ಅತ್ತೆ ಒಪ್ಪಿಕೊಂಡಿದ್ದರು ಆದರೂ ತಮ್ಮ ಆದರ್ಶಗಳನ್ನು ಬಿಡಲಾರದಾಗಿದ್ದರು
ಅವರ ಮಾತಿಗೆ ಒಪ್ಪಿದೆ
ಮಗಳ ಬಳಿಯಲ್ಲಿ ಈ ವಿಷಯ ಹೇಳುವ ಬಗೆಯನ್ನು ಲೆಕ್ಕಾಚಾರ ಹಾಕಲಾರಂಬಿಸಿದೆ
(ಮುಂದುವರಿಯುತ್ತದೆ)