Tuesday, April 7, 2009

ಹೆಣ್ಣೇ ನೀನೇಕೆ ಹೀಗಾದೆ?

" ಕುಮಾರಿ ಪ್ರಭಾವತಿಗೆ ಜೈ ಕುಮಾರಿ ಪ್ರಭಾವತಿಗೆ ಜೈ" ಜೈಕಾರಗಳು ಮುಗಿಲು ಮುಟ್ಟಿದವು.
ಪ್ರಭಾವತಿ ರಾಜ ಗಾಂಭೀರ್ಯದಿಂದ ಕಾರಿನಿಂದ ಇಳಿದರು ೪೫ರ ವಯಸಿನಲ್ಲೂ ಗಂಡಸರ ಆಸೆಗಳನ್ನು ಕೆರಳಿಸುವಂತಹ ಮೈಕಟ್ಟು. ಸೌಂದರ್ಯ . ಮದುವೆ ಆಗಿಲ್ಲ ಅಲ್ಲವೇ ಅದಕ್ಕೆ ಅಂತಾ ಸೌಂದರ್ಯ ಹಾಗೆ ಇದೆ ಎಂದು ಅವರ ವಾರಿಗೆಯ ಹೆಂಗಸರು ಅಸೂಯೆ ಪಟ್ಟು ನುಡಿಯುತ್ತಿದ್ದರು. ಯಾರೇನೆ ಅಂದರೂ ಗಜ ಗಾಮಿನಿಯಾದ ಪ್ರಭಾವತಿ ಕೇರ್ ಮಾಡುತ್ತಿರಲಿಲ್ಲ
ಭಾರತದ ಮುಂದಿನ ಪ್ರಧಾನಿ ಇವರಾಗಬಹುದು ಎಂಬ ಲೆಕ್ಕಾಚಾರ ನಡೆಯುತ್ತಿತ್ತು. ಅವರ ಒಂದು ಮಾತಿಗೆ ಇಡೀ ಡೆಲ್ಲಿಯನ್ನೇ ನಡುಗಿಸೋ ಅಂತಹ ಶಕ್ತಿ ಇತ್ತು. ಎಂತೆಂತಹ ರಾಜಕೀಯ ಹೇಮಾ ಹೇಮಿಗಳೆಲ್ಲಾ ಇವರೆದುರಿಗೆ ನಿಂತು ಚುನಾವಣೆಯಲ್ಲಿ ಸೋತಿದ್ದರು
ತಿಂಗಳು ಗಳಾದ ನಂತರ ಬೆಂಗಳೂರಿಗೆ ಬಂದಿದ್ದರು. ನೋಡಲು ಜನಸಾಗರವೇ ನಿಂತಿತ್ತು
ಹೂವಿನ ಹಾರಗಳ ಭಾರಕ್ಕೆ ನಲುಗಿದವರಂತೆ ಕಂಡರೂ ಕಣ್ಣಲ್ಲಿ ಗೆಲುವು . ಸುತ್ತಾ ನಿಂತಿದ್ದ ಜನರನ್ನು ನೋಡಿ ಹೆಮ್ಮೆಯಾಯಿತು. ಇದಕ್ಕೆ ಅಲ್ಲವೇ ತಾನು ಇಷ್ಟೊಂದು ಕಷ್ಟ ಪಟ್ಟಿದ್ದು. ಎಷ್ಟೋ ಜನರಿಗೆ ಸೆರಗು ಹಾಸಿ ಸೆರಗನ್ನೇ ನೇಣಾಗಿ ಮಾಡಲಿಲ್ಲವೇ? ತನ್ನ ಬುದ್ದಿವಂತಿಕೆಗೆ ಮೆಚ್ಚುಗೆಯಾಯಿತು. ಮನದಲ್ಲಿ ಏನೇ ಮಂಥನ ನಡೆಯುತ್ತಿದ್ದರೂ ತುಟಿಯಲ್ಲಿ ಮಾತ್ರ ಅದೇ ಜನರನ್ನು ಮೋಡಿ ಮಾಡುವ ನಗೆ ಹೊದ್ದು ಕೈ ಮುಗಿದುಕೊಂಡು ಬರುತ್ತಿದ್ದರು. ಹಿಂದೆ ಶಾಸಕರ ದಂಡು ಅವರ ಹಿಂದೆ ಕಾರ್ಯಕರ್ತರು.
ತಮ್ಮ ಬೇಳೆ ಏನಾದರೂ ಬೇಯಬಹುದೇ ಎಂದು ಕಾಯುತ್ತಿರುವ ಉದ್ಯಮಿಗಳು ತಾನೆ ಪ್ರಭಾವತಿ ಏನೋ ಎಂಬಂತೆ ಅವರನ್ನು ಗದರಿಸುತ್ತಾ ತಡೆಯುತ್ತಿದ್ದ ಕಾರ್ಯದರ್ಶಿ ಕುಮಾರ್ .ಇವರೆಲ್ಲರ ನಡುವೆ ಹೋಗುತ್ತಿದ್ದಂತೆ ಪ್ರಭಾ ನಿಂತು ಬಿಟ್ಟರು.
ಆ ಹುಡುಗಿ ಹಾಗು ಆ ಹುಡುಗಿಯ ಹಿಂದೆ ಸೋಮೇಶ ಇಬ್ಬರೂ ಬಿಂದಿಗೆಯಲ್ಲಿ ನೀರನ್ನು ಹೊತ್ತುಕೊಂಡು ಹೋಗುತ್ತಿದ್ದರು.
ಕಾಲನ್ನು ಕೀಳಲಾಗಲಿಲ್ಲ ಪ್ರಭಾವತಿಗೆ.ಹೆಗಲ ಮೇಲೆ ಬಿಂದಿಗೆ ಹೊತ್ತು ನಡೆಯುತ್ತಿದ್ದ ಸೋಮೇಶ್ ಒಂದರೆ ಕ್ಷಣ ನಿಂತ.
ಕಣ್ಣಲ್ಲಿ ಕಣ್ಣು ನೆಟ್ಟಿತು.
ಆ ಹುಡುಗಿಯತ್ತ ನೋಡಿದ ಪ್ರಭಾಳ ಕಣ್ಣು ಅವನನ್ನು ಏನೋ ಕೇಳಿತು. ಅದಕ್ಕೆ ಅವನ ಉತ್ತರ ಕಣ್ಣಲ್ಲಿ ಹೂ ಎಂಬ ಉತ್ತರ ಬಂದಿತು
ಸಮಾರಂಭದ ಸ್ಥಳಕ್ಕೆ ಎಲ್ಲರೂ ನಡೆದರು ಪ್ರಭಾವತಿಯ ಕಾಲು ವೇದಿಯಮೇಲೆ ನಡೆಯಿತು.
ಒಬ್ಬೊಬ್ಬರಾಗಿ ಮಾತಾಡತೊಡಗಿದರು

ಮುಂದೆ ಜನ ಸ್ಥೋಮ ವೇ ಇದ್ದರೂ ಪ್ರಭಾವತಿಯವರ ಗಮನ ಮಾತ್ರ ಬಿಂದಿಗೆಯನ್ನು ಕಾಲಬಳಿ ಇಟ್ಟುಕೊಂಡು ತನ್ನನ್ನೇ ನೋಡುತ್ತಿದ್ದ ಆ ಹುಡುಗಿಯ ಮೇಲೆ . ಓಡಿ ಹೋಗಿ ಅವಳನ್ನು ಅಪ್ಪಲೇ ಎನಿಸುತ್ತಿತ್ತು.

ಅಪ್ಪ ರಾಜ್ಯದ ರಾಜಕೀಯದಲ್ಲಿ ಪ್ರಕಾಶಿಸುತ್ತಿದ್ದರು. ಹಳ್ಳಿಯಲ್ಲಿ ಇದ್ದ ಸೋಮ ಮತ್ತು ಅವಳು ಪರಸ್ಪರ ಆಕರ್ಷಿತರಾದದ್ದು. ಒಮ್ಮೆ ಹೊಲದಮನೆಯಲ್ಲಿ ಇಬ್ಬರ ಮೈ ಒಂದಾಗಿದ್ದು. ಅಚಾತುರ್ಯದ ಫಲವಾಗಿ ಬಸುರಿಯಾದದ್ದು. ಅಮ್ಮ ಅದಕ್ಕೋಸ್ಕರ ಪ್ರಭಾಳನ್ನು ಬೇರೆ ಊರಿಗೆ ಕಳಿಸಿದ್ದರು ಹೆರಿಗೆಯಾಗಿ ಹೆಣ್ಣು ಮಗುವಿಗೆ ತಾಯಿಯಾಗಿದ್ದಳು. ಇನ್ನೇನು ಸೋಮೆಶ್ನೊಡನೆ ಮದುವೆಯಾಗಬೇಕೆಂದುಕೊಳ್ಳುತ್ತಿರುವಾಗಲೇ ರಾಜಕೀಯ ದಳ್ಳುರಿಗೆ ಅಪ್ಪ ಹಾಗು ಅಮ್ಮ ಇಬ್ಬರೂ ಬಲಿಯಾಗಿದ್ದರು . ಊರವರೆಲ್ಲಾ ತಂದೆಯ ಪ್ರತಿನಿಧಿಯಾಗಬೇಕೆಂದು ಕೇಳಿದಾಗ ಮೊದಲಿನಿಂದಲೇ ಮಹತ್ವಾಕಾಂಕ್ಷೆಯುಳ್ಳ ಪ್ರಭಾ ಚುನಾವಣೆಗೆ ನಿಲ್ಲಬೇಕೆಂಬ ನಿರ್ಧಾರಕ್ಕೆ ಬಂದಳು. ಆದರೆ ಸೋಮೇಶ ಇದಕ್ಕೆ ವಿರೋಧಿಸಿದ. ವಿವಾಹ ಎಂದರೆ ಸ್ವಾತಂತ್ರ್ಯದ ಹರಣ ಎಂದು ಅಂದೇ ಅನಿಸಿತು .ಮದುವೆ ಎಂಬ ಬಂಧ ಬೇಡ ಅನಿಸಿತು ಮಗುವನ್ನು ಯಾವುದಾದರೂ ಆಶ್ರಮಕ್ಕೆ ಬಿಡಬೇಕೆಂಬ ನಿರ್ಧಾರಕ್ಕೆ ಬಂದಿದ್ದಳು. ಸೋಮೇಶ್ ತನ್ನ ಮಗುವನ್ನು ತಾನೇ ಸಾಕುವುದಾಗಿ ಹೇಳಿದ. ತಾಯ್ತನವನ್ನು ಅಧಿಕಾರದ ವ್ಯಾಮೋಹ ಗೆದ್ದಿತ್ತು. ಅದಾದನಂತರ ಇಂದೇ ಅವರಿಬ್ಬರ ಭೇಟಿ.
ಕುಮಾರ್ ಪ್ರಭರವರ ಮುಖವನ್ನೇ ನೋಡುತ್ತಿದ್ದ. ಇನ್ನೇನಾಗಬಹುದು ಎಂದು ತಿಳಿದಿತ್ತು.ಅವನಿಗೆ ಪ್ರಭಾರವರ ಪ್ರತಿಯೊಂದು ವಿಷಯವೂ ಗೊತ್ತಿತ್ತು.
ಬಳಿ ಬಂದು ಪಿಸುಗುಟ್ಟಿದ "
",ಮೇಡಂ ಕಂಟ್ರೋಲ್ ಯುವರ್ ಸೆಲ್ಪ್"
"ಕುಮಾರ್ ಅವಳು ನನ್ನ ಮಗಳು". ಪಿಸುದನಿಯಲ್ಲಿ ಗದ್ಗದಿತರಾಗಿ ನುಡಿದರು
"ಮೇಡಂ ಮೀಡಿಯಾ ಎಲ್ಲಾ ನಿಮ್ಮನ್ನೇ ಫೋಕಸ್ ಮಾಡ್ತಿದೆ. ಏನಾದರೂಕೊಂಚ ಸುಳಿವು ಸಿಕ್ರೂ ಆಪ್ಪೋಜಿಶನ್ ಅದನ್ನೇ ದೊಡ್ಡ ವಿಷಯ ಮಾಡ್ತಾರೆ . ಜನರ ಸೆಂಟಿಮೆಂಟ್‌ಗೆ ಪೆಟ್ಟು ಬೀಳುತ್ತೆ. ಯು ಮೇ ನಾಟ್ ಅಚೀವ್ ಯುವರ್ ಟಾರ್ಗೆಟ್ .ಪ್ಲೀಸ್ ಮೇಡಂ ಇಷ್ಟು ದಿನದ ನಿಮ್ಮ ಸ್ಥಾನ ಮಾನ ಎಲ್ಲಾ ಕೆಳಗಾಗುತ್ತೆ"
ಕುಮಾರನ ಪಿಸುದ್ವನಿಯಲ್ಲಿಯೇ ಎಲ್ಲವನ್ನೂ ಹೇಳಿದ್ದ.
"ಮತ್ತೆ ಅವರಿಬ್ಬರನ್ನೂ ಅಲ್ಲಿ ನೋಡೋಕಾಗ್ತಿಲ್ಲ. ಪ್ಲೀಸ್ ಸೆಂಡ್ ದೆಮ್ ಫ್ರಮ್ ಹಿಯರ್"" ಸಾವರಿಸಿಕೊಂಡಿದ್ದರು.
ಸ್ವಲ್ಪ ಹೊತ್ತಿನ ನಂತರ ಪೋಲೀಸರಿಬ್ಬರು
"ಏ ಬಿಂದಿಗೆ ಹೊತ್ಕೊಂಡು ಇಲ್ಲೇನ್ ಮಾಡ್ತಾಇದ್ದೀರ. ಹೋಗಿ ಆಕಡೆ " ಎಂದು ಆ ಬಟ್ಟಲು ಕಂಗಳ ಹುಡುಗಿಯನ್ನು ಹಾಗು ಸೋಮೇಶನನ್ನು ಬೈದು ಕಳಿಸಿದರು. ಸೋಮೇಶನ ಕಣ್ಣು ಒಮ್ಮೆ ವೇದಿಕೆಯ ಮೇಲೆ ಭಾಷಣ ಮಾಡುತ್ತಿದ್ದ ಪ್ರಭಾವತಿಯವರ ಕಡೆಗೆ ತಿರಸ್ಕಾರದಿಂದ ನೋಡಿತು.
"ಅಪ್ಪ ಯಾಕೆ ನಮ್ಮನ್ನ ಬೈದು ಕಳಿಸಿದರು ಅವರು ನಾವೇನು ಮಾಡಿದ್ವಿ? " ಆ ಹುಡುಗಿ ಕೇಳಿದಳು
"ಇಲ್ಲಮ್ಮ ನಮ್ಮಿಂದ ಅವರಿಗೆ ಯಾವ ಹಾನೀನೂ ಇಲ್ಲ. ಆದರೂ ಅವರಿಗೆ ಭಯ " ಎಂದು ಮಗಳ ಕೈನಲ್ಲಿದ್ದ ಬಿಂದಿಗೆಯನ್ನೂ ತಾನೆ ಎತ್ತಿಕೊಂಡ. ಮಗಳು ಹಿಂಬಾಲಿಸಿದಳು
ಇತ್ತ
ಪ್ರಭಾವತಿಯವರ ಭಾಷಣ ಸಾಗಿತ್ತು
"ನಮ್ಮ ದೇಶದಲ್ಲಿ ಮಹಿಳೆಯರಿಗೆ ಪ್ರಾಮುಖ್ಯತೆ ಕೊಡಬೇಕು ಅನೋದೇ ನನ್ನ ಗುರಿ. ಇದನ್ನ ಸಾಧಿಸೋಕೆ ಹೆಣ್ಣು ಅಧಿಕಾರದಲ್ಲಿರಬೇಕು....................................."