Monday, January 5, 2009

ಹೂ ತೋಟ

"ಅಬ್ಬಾ ಏನೋ ಇದು ಇಷ್ಟು ಚೆನ್ನಾಗಿದೆ ಗಾರ್ಡನ್" ರವಿ ಉದ್ಗರಿಸಿದ , ಕಣ್ಣನ್ನು ಅಲ್ಲಿಂದ ಕೀಳಲಾಗಲಿಲ್ಲ.
ಅದೊಂದು ಸುಂದರ ತೋಟ , ಎಂಥ ತೋಟವೆಂದರೆ ನೋಡಿದ ಕಣ್ಣು ಕಾಲಿಗೆ ಮುಂದೆ ಹೋಗದಂತೆ ಆದೇಶ ನೀಡುತ್ತಿತ್ತು.. ತೋಟದ ತುಂಬೆಲ್ಲಾ ಹೂವಿನ ಘಮಘಮ , ಚೆಲುವಾದ ಗುಲಾಬಿಯಿಂದ ಹಿಡಿದು ಎಲ್ಲಾ ರೀತಿಯ ಹೂಗಳು ಅರಳಿದ್ದವು.
"ಒಂದ್ಸಲ ತೋಟದಲ್ಲಿ ಅಡ್ಡಾಡಿ ಬರೋಣ ಬಾರೋ " ಸುರೇಶನ ಕೈ ಹಿಡಿದು ಜಗ್ಗಿದ
" ಬೇಡ ಕಣೋ. ಹಾಗೆಲ್ಲಾ ಬೇರೆಯವರ ಪರ್ಮೀಶನ್ ಇಲ್ಲದೆ ಹೋಗಬಾರದು" ಸುರೇಶ ಬುದ್ದಿವಾದ ಹೇಳಿದ
"ಸರಿ ಅವರ ಪರ್ಮೀಶನ್ ತಗೊಂಡೇ ಹೋಗೋಣ ಬಾ"
ರವಿ ತೋಟದಲ್ಲಿದ್ದ ಮನೆ ಬಾಗಿಲು ತಟ್ಟಿದ
ಒಂದು ಹೆಂಗಸು ಬಾಗಿಲು ತೆರೆದಳು ಹಿಂದೆಯೇ ಚೆಲುವಾದ ಈಗಷ್ಟೆ ಅರಳಿದ ಹೂವಿನ ತಾಜಾತನದ ಹುಡುಗಿಯೂಬ್ಬಳುರವಿ "ಅದೂ ತೋಟ ತುಂಬಾ ಚೆನ್ನಾಗಿದೆ . ಒಂದಷ್ಟು ಹೊತ್ತು ನೋಡಿ ಹೋಗೋಣಾ ಅಂತ""ಅಯ್ಯೋ ಅದಕ್ಕೇನಪ್ಪ ನೋಡಿ ."
ಸ್ವಲ್ಪ ಹೊತ್ತಿನಲ್ಲಿ ರವಿ ತನ್ನ ಮಾತಿನಿಂದ ಆಪ್ತನಾದ, ರವಿಯ ಕಣ್ಣು ಚೆಲುವಾದ ಹೂವಂಥ ಹುಡುಗಿಯ ಮೇಲೆ ಹರಿಯುತ್ತಿತ್ತು. ನೋಟಕ್ಕೆ ಹುಡುಗಿ ಕರಗಿ ನೆಲ ನೋಡುತ್ತಿದ್ದಳು
ರವಿ ಲವಲವಿಕೆಯ ಹುಡುಗ, ಸುರೇಶ ಸ್ನೇಹಿತ, ಇಬ್ಬರೂ ಒಂದೇ ಕಾಲೇಜಿನಲ್ಲಿ ಓದಿ ಬೇರೆ ಬೇರೆ ಕಡೆಗಳಲ್ಲಿ ಕೆಲಸ ಮಾಡುತಿದ್ದರು. ಪಿಕ್ನಿಕ್ಗೆಂದು ಬಂದಾಗ ತೋಟ ಕಂಡಿತ್ತು.
ಹಾಗೆ ತೋಟದ ಒಡತಿಯ ಬಗ್ಗೆಯೂ ಮಾಹಿತಿ ಸಿಕ್ಕಿತು
ತೋಟದ ಒಡತಿ ಸರೋಜಾ ಒಬ್ಬ ವಿಧವೆ. ಗಂಡ ಗತಿಸಿ ಮೂರ್ನಾಲ್ಕು ತಿಂಗಳಷ್ಟೆ ಉರುಳಿದ್ದವೇನೋ. ಪ್ರಾಯಕ್ಕೆ ಬಂದ ಮುದ್ದು ಮುದ್ದು ಮಗಳು ಕಮಲ ಜೊತೆಗೆ , ಇಬ್ಬರೇ ತೋಟದಲ್ಲೊಂದು ಮನೆ ಮಾಡಿಕೊಂಡು ವಾಸವಾಗಿದರು.ಆದರೂ ತುಂಬಾ ದಿನ ತೋಟದಲ್ಲಿ ವಾಸವಿರುವುದು ಅಪಾಯ ಎಂದು ಅನ್ನಿಸಿದ್ದರಿಂದ ಸರೋಜಾ ತೋಟವನ್ನು ಮಾರಿ ಅದರಿಂದ ಬಂದ ಹಣದಲ್ಲಿ ಬೇರೆ ಎಲ್ಲಾದರೂ ಜನರಿರುವ ಕಡೆ ಬದುಕುವ ಆಸೆ ಹೊಂದಿದ್ದಳು.
ಕೊಂಚ ಹೊತ್ತು ತೋಟ ಹಾಗು ಅದಕ್ಕಿಂತಲೂ ಸುಂದರಿ ಕಮಲಾಳ ಚೆಲುವನ್ನೆಲ್ಲಾ ಕಣ್ನಲ್ಲೇ ಹೀರಿಕೊಂಡು ರೂಮಿಗೆ ಬಂದ ರವಿ."ಸುರೇಶ ನಾನು ಇನ್ನೊಂದೆರೆಡು ದಿನ ಇಲ್ಲೇ ಇರೋಣ ಅಂದ್ಕೊಂಡೀದೀನಿ"
"ಯಾಕೋ? ರಜಾ ಬೇರೆ ಮುಗೀತಲ್ಲ" "ಇಲ್ಲ ಕಣೋ ತೋಟ ತುಂಬಾ ಚೆನ್ನಾಗಿದೆ , ನಾಳೇನೂ ಹೋಗೋಣ ಅನ್ನಿಸ್ತಿದೆ"
" ತೋಟ ಮಾತ್ರಾನಾ ಹುಡುಗೀನೂನಾ?" "ಛೆ ಛೇ ಅಂಥಾ ಚೀಪೇನೋ ನಾನು?"
ಮರುದಿನವೂ ರವಿ ಸುರೇಶನ ಜೊತೆ ಸರೋಜಾರ ಮನೆಗೆ ಬಂದ . " ಆಂಟಿ , ನಮ್ತಂದೆ ಹತ್ರ ಮಾತಾಡಿದ್ದೇನೆ , ತೋಟಾನ ನೀವು ಕೊಟ್ರೆ ನಾನೆ ಕೊಂಡ್ಕೊಳೋದು ಅಂತ ಅಂದ್ಕೊಂಡೀದೀನಿ"

ಸರೋಜಾಗೆ ಪರಮಾನಂದವಾಯಿತು"ಅಲ್ಲ ನಿಮಗ್ಯಾಕೆ ತೋಟ ಇದನ್ನ ನೋಡಿಕೊಳ್ಲೋಕೆ ಆಗತ್ತಾ"

" ಅಯ್ಯೋ ನಮ್ತಂದೆ ಜನಾನ ಇಡ್ತಾರೆ , ನಮ್ತಂದೆಗೂ ತೋಟ ಬೆಳೆಸುವುದರಲ್ಲಿ ಆಸಕ್ತಿ ಜಾಸ್ತಿ , ಇದರ ಬೆಲೆ ಏನು ಹೇಳಿದರೆ ನಂಗೆ ಹಣ ಹೊಂದಿಸೋಕೆ ಸುಲಭ ಆಗುತ್ತೆ"

ಸರೋಜಾ ಹೇಳಿದರು
"ಸರಿ ಒಂದ್ಸಲ ತೋಟ ಸುತ್ತಾಡಿಕೊಂಡು ಬರ್ತೀನಿ, ನಂತರ ಬೆಲೆ ನೋಡೋಣ"

"ಆಯ್ತಪ್ಪ "ರವಿ ತೋಟ ಪೂರ್ತಿ ಸುತ್ತಾಡಿದ

ಹುಡುಗಿಯ ಕಣ್ಣು ಇವನನ್ನೇ ಗಮನಿಸುತ್ತಿತ್ತು. ರವಿಯೂ ಅವಳನ್ನು ನಿಟ್ಟಿಸಿ ನೋಡಿದ,

ಎರೆಡು ದಿನ ಬಿಟ್ಟು ಬರುವುದಾಗಿ ಹೇಳಿ ರೂಮಿಗೆ ವಾಪಸಾದ.

ಮರು ದಿನ ಎಂದಿನಂತೆ ಬೆಳಗ್ಗೆ ಹೋಗದೆ ಮದ್ಯಾಹ್ನ ರವಿ ಹೊರಟ
"ಏ ಇದೇನೋ ಇಷ್ಟು ಹೊತ್ತಿಗೆ ಎಲ್ಲೋ ಹೋಗ್ತೀದೀಯಾ" ಸುರೇಶ್ ಕೇಳಿದ
" ಯಾಕೋ ಬೋರ್ ಆಗಿದೆ ಹೊರಗಡೆ ಸುತ್ತಾಡಿಕೊಂಡು ಬರೋಣ , ನಾಳೆ ಊರಿಗೆ ಹೋಗೋಣ"
ಸ್ವಲ್ಪ ಹೊತ್ತಾದ ಮೇಲೆ ರವಿ ಬಂದ
"ಈಗಲೆ ಊರಿಗೆ ಹೋಗೋದು ಅನ್ಕೊಂಡಿದೀನಿ"
"ಯಾಕಪ್ಪ , ನಾಳೆ ಹೋಗೋಣ ಅಂದಿದ್ದೆ"
"ಊರಿನಿಂದ ಫೋನ್ ಬಂದಿತ್ತು , ಅಪ್ಪನಿಗೆ ಹುಶಾರಿಲ್ಲವಂತೆ"
"ಸರಿ ಕಣೋ "
ವ್ಯಾನ್ ಹೊರಡುತ್ತ್ದಿದ್ದಂತೆ
" ಏ ರವಿ ನೀನು ಆ ತೋಟ ಕೊಂಡ್ಕೊಳ್ತೀನಿ ಅಂತಿದ್ದ್ಯಲ್ಲ ಏನಾಯ್ತೋ?"
" ಏ ಸುಮ್ನೆ ಹೇಳ್ದೆ, ತೋಟ ಎಲ್ಲಾ ನೋಡೋಕೆ , ಎಂಜಾಯ್ ಮಾಡೋಕೆ, ಸುತ್ತಾಡೋಕೆ, ಅದನ್ನ ಮೈಂಟೇನ್ ಮಾಡಕ್ಕಾಗಲ್ಲ, ಕೊಂಡ್ಕೊಳೋಕೂ ಆಗಲ್ಲ, ಹಾಗ್ ಹೇಳಿಲ್ಲಾಂದ್ರೆ ಒಳಗಡೆ ಬಿಡ್ತಿದ್ದಳೇನೋ ಆ ಮುದ್ಕಿ "
"ಥೂ ಹಾಗೆಲ್ಲಾ ಮಾತಾಡಬಾರದು ಕಣೋ, ಆಸೆ ಹುಟ್ತಿಸಿ ಮೋಸ ಮಾಡಬಾರದು"
" ಹೋಗೋ ಹೋಗೋ, ಹಾಗಂದುಕೊಂಡ್ರೆ ಲಾಲಭಾಗ್, ಕಬ್ಬನ್ ಪಾರ್ಕ್, ನಾನು ಎಲ್ಲೆಲ್ಲಿ ಸುತ್ತಾಡಿದೀನೋ ಎಲ್ಲಾ ತಗೋಬೇಕಾಗುತ್ತೆ"
ವ್ಯಾನ್ ಸರೋಜಾರವರ ತೋಟದ ಬಳಿ ಬರುತ್ತಿದ್ದಂತೆ , ಸುರೇಶನಿಗೆ ದಂಗಾದಂತಾಯ್ತು
" ರವಿ ನೋಡೋ , ಏನಾಗಿದೆ ಅಲ್ಲಿ "
ತೋಟದ ಹೂಗಳೆಲ್ಲಾ ನೆಲಕ್ಕ ಬಿದ್ದಿದ್ದವು, ಗಿಡಗಳೆಲ್ಲಾ ನಜ್ಜು ಗುಜ್ಜಾಗಿದ್ದವು.
ಸುಂದರ ತೋಟ ಪಾಳು ಬಯಲಂತಾಗಿತ್ತು
"ಯಾವುದೋ ಪುಂಡು ದನ ನುಗ್ಗಿದ್ದಿರಬೇಕು , ಬೇಗ ಬೇಗ ಡ್ರೈವ್ ಮಾಡು ಹೋಗೋಣ" ರವಿ ಅವಸರಿಸಿದ
ವ್ಯಾನ್ ಮುಂದೆ ಹೋಯಿತು.
ಆದರೆ
ಆ ಪಾಳು ತೋಟದ ಮಧ್ಯದಿಂದ ಸೋತು ಬಸವಳಿದು ಬಿದ್ದಿದ್ದ ಆ ಹುಡುಗಿ ಬಿಕ್ಕಳಿಸುತ್ತಾ ಮೇಲೆದ್ದುದ್ದನ್ನು ಸುರೇಶ್ ಗಮನಿಸಲಿಲ್ಲ.