Saturday, October 30, 2010

ಅಕ್ವಿಶಿಸನ್- ಭಾವನೆಗಳ ಒತ್ತುವರಿ

"ರಿಯಲ್ಲಿ ಈ ನೈಸ್ ರೋಡ್ ಮಾಡಿರೋ ಖೇಣಿಗೆ ನೂರು ವಂದನೆ ಹೇಳಿದರೂ ಸಾಲದು ಏನಂತೀಯಾ?" ಶುಭಾಂಕ್ ಗುನಗಿದ.
ಅವನ ಪ್ರಶ್ನೆಗೆ ಉತ್ತರಿಸುವ ಸ್ಥಿತಿಯಲ್ಲಿ ನಾನಿರಲಿಲ್ಲ . ಅವನಿಗೆ ಅದು ಬೇಕೂ ಇರಲಿಲ್ಲ
ಮತ್ತೆ ಮಾತಾಡಿದ
"ಇಂತಹ ಒಂದುಪ್ರಾಜೆಕ್ಟ್‌ಗೆ ಅಡ್ಡವಾಗಿ ನಿಂತ್ರಿದಲ್ಲ ಇವರೆಲ್ಲಾ . ಈಗ ನೋಡು ಮೈಸೂರು ಒಂದು ದೂರದ ಊರೇ ಅಲ್ಲ ಅನ್ನೋ ಹಾಗಿದೆ. ಸುಮ್ಮನೆ ಪ್ರಚಾರಕ್ಕೆ , ಎಲೆಕ್ಷನ್‌ಗೆ , ದುಡ್ಡಿಗೆ ನೂರಾರು ವೇಷಗಳು....." ಇನ್ನೂ ಮಾತಾಡುತ್ತಾನೆ ಇದ್ದ
ಹೌದಾ ಅಷ್ಟೇನಾ ಕಾರಣಗಳು. ಕಣ್ಣ ಮುಂದಿನ ದೃಶ್ಯಗಳು ಎಲ್ಲೋ ಹಾರಿತು. ಅವುಗಳಿಂದ ಬೋಳು ಹಣೆಯ ಅಮ್ಮನ ಮೋರೆ. ಕಣ್ಣಿಂದ ನೀರು ಜಿನುಗಿತು. ಸುಮ್ಮನಾದೆ . ಮನದಲ್ಲಿರುವ ಭಾವ ಪೂರ್ಣ ಮಾತುಗಳು ಶುಭಾಂಕ್‌ಗೆ ಹಿಡಿಸುವುದಿಲ್ಲ ಅಂತ ಗೊತ್ತಿತ್ತು.
"ಬಿ ಪ್ರಾಕ್ಟಿಕಲ್ ಯಾರ್ " ಎಂದನುವುದೇ ಅವನ ಸ್ವಭಾವ
ಹೌದು ವಾಸ್ತವವಾದಿಯಾಗಿರುವುದೇ ಎಷ್ಟೋ ಮೇಲು . ಭಾವನೆಗಳಿಗೆ ಈ ಪ್ರಪಂಚದಲ್ಲಿ ಬೆಲೆ ಎಲ್ಲಿರುತ್ತದೆ?

ಕಾರ್ ಮುಂದೆ ಹೋಗುತ್ತಾನೆ ಇತ್ತು ಹಾಗೆ ಶುಭಾಂಕನ ಮಾತುಗಳು ಚಟ ಪಟ ಎನ್ನುತ್ತಾ ಸಿಡಿಯುತ್ತಿದ್ದವು. ನನ್ನ ಆಲೋಚನೆಗಳು ಮಾತ್ರ ನಿಂತಲ್ಲಿಂದ ಮುಂದೆ ಬರುತ್ತಿರಲಿಲ್ಲ.

"ಮಮ್ಮಾ ಆ ಮನೆ ನೋಡು ಹೇಗೆ ಪಾಳು ಬಿದ್ದಿದೆ." ನಿಶು ತೋರಿಸಿದ . ಹೌದು ನನ್ನ ಕಣ್ನುಗಳೂ ಅದನ್ನೇ ಹುಡುಕುತ್ತಿದ್ದವು ಕಾತುರ ಎಲ್ಲಿ ಶುಭಾಂಕನ ಕೈ ಸ್ಟಿಯರಿಂಗ್ ಅನ್ನು ತಿರುಗಿಸುತ್ತದೋ ಎಂಬ ಆತಂಕ .
"ಶುಭಾಂಕ್ ನಾನ್ಹೇಳ್ತಾ ಇದ್ದನಲ್ಲ ಈ ನೈಸ್ ರೋಡಿನಲ್ಲಿ ನಮ್ಮದೂ ಒಂದುಮನೆ ಇತ್ತು ಅಂತ ಅದೇ ಸ್ವಲ್ಪ ನಿಲ್ಲಿಸು"
"ಓಹ್ ಹೌದಲ್ವಾ ಹೇಳಿದ್ದೆ ಯಾವಾಗ ಅಕ್ವೈರ್ ಮಾಡಿಕೊಂಡರು ಚೆನ್ನಾಗಿಯೇ ಕಟ್ಟಿದ್ದರು ಅನ್ಸುತ್ತೆ" . ಶುಭಾಂಕ್ ಕಾರ್ ನಿಲ್ಲಿಸಿದ .

ಮೇನ್ ರೋಡಿನಿಂದ ಸುಮಾರು ನೂರು ಮೀಟರ್ ದೂರದಲ್ಲಿತ್ತು
ಕಾಂಪೌಂಡ್ ಒಡೆದು ಹೋಗಿತ್ತು
ಮೊದಲನೇ ಪ್ಲ್ಹೋರ್‍ ಅರ್ಧ ಬಿದ್ದು ಹೋಗಿದೆ.
ಅದೇ ಮನೆಯಲ್ಲಿ ತಾನು ಆಟವಾಡಿದ್ದು. ಇಲ್ಲೇ ತನ್ನ ಓಡಾಟ .ಮೊದಲಿದ್ದ ಬಾಡಿಗೆ ಮನೆಯಲ್ಲಿ ನೀರಿಗೆ ಪರದಾಟ ಓನರ್ ನ ಕಾಟ ಸಹಿಸಿ ಸಹಿಸಿ ಅಪ್ಪ ಹಣ್ಣಾಗಿ ಹೋಗಿದ್ದರು. ತಾಳಲಾರದೆ ವಿ ಆರ್ ಎಸ್ ತೆಗೆದುಕೊಂಡು ಬೇಗೂರಿನ ಹೊರವಲಯದಲ್ಲಿ ಯಾವಾಗಲೋ ಕೊಂಡಿದ್ದ ಸೈಟನಲ್ಲಿ ಮನೆ ಕಟ್ಟಲಾರಂಭಿಸಿದರು.
ಅಂದು ಅಮ್ಮ ತನ್ನ ಕೊರಳಲ್ಲಿದ್ದ ಮಾಂಗಲ್ಯದ ಸರ ತೆಗೆದುಕೊಟ್ಟಿದ್ದರು." "ರೀ ನಮ್ಮದೇ ಒಂದು ಮನೆ ಆದರೆ ಎಷ್ಟು ಚೆನ್ನಾಗಿರುತ್ತೆ. ಆಮೇಲೆ ಚಿನ್ನ ಗಿನ್ನ ಎಲ್ಲಾ" ಮತ್ತೆ ಚಿನ್ನದ ಮಾಂಗಲ್ಯ ಅಮ್ಮನ ಕೊರಳಲ್ಲಿ ಕಾಣುವ ದಿನ ಬರಲೇ ಇಲ್ಲ

ಅಪ್ಪ ಮನೆ ಕಟ್ಟಿದ್ದರು . ಅದು ಬರೀ ಮನೆಯಾಗಿರಲಿಲ್ಲ.ತಮ್ಮ ಕುಟುಂಬದ ಭಾಗವೇ ಆಗಿ ಹೋಗಿತ್ತು . ಮನೆಯಲ್ಲಿ ಏನೋ ಸಂಭ್ರಮ . ಸ್ವಂತ ಮನೆಯ ಮೇಲೆ ಕೇವಲ ಹಕ್ಕೊಂದೇ ಅಲ್ಲ ಮಮತೆ ಪ್ರೀತಿ ,ವಾತ್ಸಲ್ಯ. ಅಮ್ಮನಂತೂ ಮನೆಗೆ ಎಷ್ಟೊಂದು ಅಲಂಕಾರ ಮಾಡುತ್ತಿದ್ದಳು.
ಮನೆಯ ಮುಂದೆ ತೋಟ. ತೋಟದ ಅಷ್ಟೂ ಗಿಡಕ್ಕೆಲ್ಲಾ ಭಾವಿಯಿಂದ ನೀರು ಸೇದಿ ಹಾಕುತ್ತಿದ್ದಳು. ದಣಿವೆಂಬುದೇ ಇರುತ್ತಿರಲಿಲ್ಲ ಅವಳಿಗೆ.
ಎರೆಡು ಫ್ಲೋರ್ ಮನೆಯಲ್ಲಿ ಆಟವೇ ಆಟ .ಕರೆಂಟ್ ಇರಲಿಲ್ಲ. ಆದರೂ ಆ ಚಿಮಣಿಯಲ್ಲಿಯೇ ಸಾಗಿದ ವಿದ್ಯಾಭ್ಯಾಸ . ಬಾವಿಯಲ್ಲಿ ಇಂಗದ ನೀರು. ನಿರ್ಜನ ಪ್ರದೇಶ. ಎಲ್ಲೋ ದೂರದಲ್ಲಿದ್ದ ಶಾಂತ ಆಂಟಿಯ ಮನೆ . ಅಪ್ಪನ ಲೂನಾದಲ್ಲಿ ತನ್ನ ಸ್ಕೂಲಿಗೆ ಪಯಣ.
ಹಾಗು ಹೀಗೂ ಆ ಏರಿಯಾಗೆ ಕರೆಂಟ್ ಲೈನ್ ಬಂದಿತ್ತು
ಮನೆಯಲ್ಲಿ ಕರೆಂಟ್ ಬಂದಿತ್ತು. ಎಸ್ ಎಸ್ ಎಲ್ ಸಿ ಓದುತ್ತಿದ್ದ ಮಗಳಿಗೆ ಅನುಕೂಲವಾಗಲೆಂದು ಅಪ್ಪ ಹಾಕಿಸಿದ್ದರು
ಆಗಲೇ ಸಿಡಿಲಿನಂತಹ ಸುದ್ದಿ
ಈ ಮನೆ ಸರಕಾರಿ ರಸ್ತೆಗೆ ಆಹುತಿಯಾಗುತ್ತಿತ್ತು.
ಅಪ್ಪ ಕುಸಿದಿದ್ದರು. ಅಮ್ಮನ ಅಳು ಕಣ್ಣಿಗೆ ಕಟ್ಟಿದಂತಿತ್ತು.
ಬೀದಿ ನಾಯಿಗಳನ್ನು ಅಟ್ಟುವಂತೆ ಅವರುಗಳು ಅಟ್ಟಿದ್ದರು ತಮ್ಮನ್ನು.
ಸ್ವಂತ ಮನೆ ಕಳೆದುಕೊಂಡ ದು:ಖದಲ್ಲಿ ಹಾಸಿಗೆ ಹಿಡಿದ ಅಪ್ಪ ಮತ್ತೆ ಮೇಲೇಳಲೇ ಇಲ್ಲ.
ಎಷ್ಟೋ ಜನ ದಿನಾ ಪ್ರತಿಭಟಿಸುತ್ತಿದ್ದರು.
ಅಮ್ಮ ಮಾತ್ರ ಕಲ್ಲಾಗಿಬಿಟ್ಟಳು
ಮಗಳನ್ನು ಓದಿಸಿ ಅವಳಿಗೆ ಮದುವೆ ಮಾಡುವವರೆಗೆ ಉಸಿರು ಬಿಗಿ ಹಿಡಿದ್ದಿದ್ದ ಜೀವ ಅಪ್ಪನನ್ನು ಅರಸಿ ಹೊರಟಿಯೇ ಬಿಟ್ಟಿತ್ತು.
"ಸ್ಮಿತಾ ನಾನು ಕೇಳಿದ್ದು ಯಾವಾಗ ಅಕ್ವಿಸಿಷನ್ ಆಗಿದ್ದು ಅಂತ ಯಾಕೆ ಮಾತಾಡ್ತಾ ಇಲ್ಲ?"ಶುಭಾಂಕ್ ಹಿಡಿದು ಆಡಿಸಿದ
ನೆನಪುಗಳ ಮೂಟೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಮನಸು ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲ.
ದಣಿವಾಗಿ ಹೋಗಿದ್ದೆ
ಮನೆ ., ಹೆತ್ತವರು ,ನೆಂಟರು ಯಾವುದೂ ಇರದೆ ಪರದೇಶಕ್ಕೆ ಹೋಗಿ ಪರದೇಶಿಯಾಗಿ ಹೋಗಿಬಿಟ್ಟಿದ್ದೆ.
" ಸ್ಮಿತಾ ಆರ್ ಯು ಆಲ್ ರೈಟ್?" ಶುಭಾಂಕ್ ಪ್ರಶ್ನಿಸಿದ
"ಮಮ್ಮ ಆ ಮನೇನ ನೋಡೋಣ ಬಾಮ್ಮ" ನಿಶು ಕರೆಯುತ್ತಿದ್ದ

ನನಗೆ ನೋಡುವುದು ಬೇಕಿರಲಿಲ್ಲ. ಶುಭಾಂಕನ ಮುಂದೆ ಕುಸಿಯುವುದು ಬೇಕಿರಲಿಲ್ಲ. ಮತ್ತೊಮ್ಮೆ ಎಮೋಷನಲ್ ಫೂಲ್ ಆನ್ನಿಸಿಕೊಳ್ಳುವುದು ಬೇಕಿರಲಿಲ್ಲ

"ಶುಭಾಂಕ್ ನಾವು ಹೋಗೋಣ ಮುಹೂರ್ತಕ್ಕೆ ಲೇಟ್ ಆಗುತ್ತೆ. ನಿಶು ಈಗ ಬೇಡ ಇನ್ನೊಂದು ಸಲ ನೋಡೋಣ ಆಯ್ತಾ?"
ಶುಭಾಂಕ್ ಕಾರ್ ಸ್ಟಾರ್ಟ ಮಾಡಿದ

ಕಾರ್ ಮುಂದೆ ಹೋಗುತ್ತಿದ್ದಂತೆ ಅಪ್ಪನ ಮನೆ ಹಿಂದೆ ಹೋಗಲಾರಂಭಿಸಿತು.
ಇತ್ತ ಭಾವನೆಗಳನ್ನು ವಾಸ್ತವತೆ ಒತ್ತುವರಿ ಮಾಡಿಕೊಳ್ಳುತ್ತಿತ್ತು.