Wednesday, August 1, 2012

ಅಂತಿಮ ಚರಣ


ಅವಳ ತೊಡೆಯಲ್ಲಿ ಮಲಗಿ ಮಗುವಿನಂತೆ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಆತ. ಆಕೆ ಏನೂ ಮಾತನಾಡಲಾಗದೆ ನೋಟವನ್ನು ಮತ್ತೆಲ್ಲೋ ತಿರುಗಿಸಿ ಉಕ್ಕಿ ಬರುತ್ತಿದ್ದ ಕಣ್ಣೀರನ್ನು ತಡೆಯುತ್ತಿದ್ದಳು.
............. ." ನೀ ಯಾಕೆ ಹೀಗೆ ಮಗು ಥರಾ ಅಡ್ತೀಯಾ ಕಣೋ ?ನೋಡು ನಿನ್ನ ಹೀಗೆ ನೋಡಿದಾಗೆಲ್ಲಾ ನನ್ನಲ್ಲಿ ತಾಯಿ ಅಲ್ಲದೆ ಮತ್ತಾರು ಎಚ್ಚರ ಆಗಲ್ಲ. ಎದ್ದೇಳು ಸಾಕು ಇನ್ನೇನು ಮದುವೆ ಮಂಟಪಕ್ಕೆ ಹೋಗೋ ಟೈಮ್ ಆಯ್ತು. ಇನ್ನೆಲ್ಲಾ ಬರ್ತಾರೆ ಹುಡುಕ್ಕೊಂಡು. "
ಅವನ ತಲೆಯನ್ನ ಬಲವಂತವಾಗಿ ಮೇಲೆತ್ತಿದಳು. ಆರಡಿ ಎತ್ತರದ ಆಳು ಆತ. ಹಿಡಿಯಷ್ಟಾಗಿ ಹೋಗಿದ್ದ.
"ನಾಳೆ ಇಂದ ನಾನು ಯಾರೋ ನೀನು ಯಾರೋ. ಒಬ್ಬರನೊಬ್ಬರೂ ನೋಡಲೂ ಬಾರದು ಅಂತೆಲ್ಲಾ  ಹೇಳ್ತೀಯಲ್ಲ. ಈ ಶಿಕ್ಷೆ ನಂಗೆ ಮಾತ್ರ ಅಲ್ಲ ನಿಂಗೂ ಕೂಡ ಯಾಕೆ ಯಾಕೆ ಇವೆಲ್ಲಾ? ಎಲ್ಲಾ ಬಿಟ್ಟು ಎಲ್ಲಾದರೂ ದೂರ ಹೊರಟು ಹೋಗೋಣ . ಈ ಸಮಾಜ  ಈ ಅಪ್ಪ ನಿನ್ ಗಂಡ ಈ ಆಫೀಸು ,ಈ ಇಡೀ ಬೆಂಗಳೂರನ್ನೇ ಬಿಟ್ಟು ಬಿಡೋಣ ಅಂತೆಲ್ಲಾ ಕೇಳ್ಕೊಂಡೆ ನೀನು ಯಾಕೆ ಒಪ್ತಿಲ್ಲ ಅಂತ ಕೇಳಲ್ಲ ನಂಗೂ ಗೊತ್ತು ನೀನು ನಿನ್ ಗಂಡನ್ನ ಈ ಸಮಾಜಾನ, ಈ ಆಫೀಸನ್ನ, ಈ ಬೆಂಗಳೂರನ್ನ ನನಗಿಂತ ಹೆಚ್ಚಾಗಿ ಪ್ರೀತಿಸ್ತೀಯಾ ಅಂತ. ಆದರೆ ನಾನು ಎಲ್ಲಾರಿಗಿಂತ ಎಲ್ಲಾವುದಕ್ಕಿಂತ , ನಿನ್ನ ಪ್ರೀತಿಸ್ತಿದೀನಿ  . ಇನ್ನೂ ಟೈಮ್ ಇದೆ. ಒಂದು ಸಲ ಆಯ್ತು ಅನ್ನು..............." ಅವಳತ್ತ ನೋಡಿದ  ಒಂದು ಒಪ್ಪಿಗೆಗಾಗಿ .
ಇಲ್ಲಿಯವರೆಗೆ ಕಾಡಿದ್ದ, ಕೆಣಕಿದ್ದ, ಹಣ್ಣಾಗಿದ್ದ, ಕೆರಳಿಸಿದ್ದ. ಹುಚ್ಚಾಗಿದ್ದ. ಸಾಯಲೂ ಸಿದ್ದವಿದ್ದ ಆತನನ್ನ ಉಳಿಸಲೆಂದೆ ಅವನ ಜೀವನಕ್ಕೆ ಕಾಲಿಟ್ಟಿದ್ದಳು ಆದರೆ ಪ್ರೇಯಸಿಯಾಗಿಯಲ್ಲ. ಒಂದು ಅನಾಥ ಮಗುವನ್ನ ದತ್ತು ತೆಗೆದುಕೊಳ್ಳುವ ತಾಯಿಯಂತೆ  . ಅಲ್ಲಿಂದ ಅವನನ್ನ ಮದುವೆಯವರೆಗೆ ಕರೆತಂದಿದ್ದಳು. ತೀರ ಪ್ರೀತಿ ಎನ್ನಲಾಗದಿದ್ದರೂ ಆತನ ಮೇಲಿನ ಒಂದು ಮಮತೆ ಮಮಕಾರ ಅವಳಿಗರಿವಿಲ್ಲದಂತೆ  ಎದ್ದಿತ್ತು. ಇನ್ನು ಇವನು ತನಗೆ ಸೇರಿದವನಲ್ಲ. ನಾಳೆ ಇಂದ ಈ ಜೀವದ ಕಾಳಜಿಗೆಂದೇ ಹೊಸ ಜೀವ ಕಾದಿರುತ್ತೆ. ಇನ್ನು ತನಗೇನೂ ಕೆಲಸವಿಲ್ಲ. ಇನ್ನಾಯಿತು. ಇನ್ನು ಹೊರಟು ಬಿಡಬೇಕು ಸಾಗರ‍್ ತೆಕ್ಕೆಗೆ. ಕಾದಿದ್ದಾನೆ ಏಳು ಸಾಗರದಾಚೆ, ತನಗಾಗಿಯೇ ಮುಡಿಪಾದ ಆ ಜೀವದ ಬಳಿಗೆ.
" ಚಿರಂತ್ . ಜೀವನ ನಿಂಗೆ ಇನ್ನೂ ಏನೂ ಅಲ್ಲ ಅದು ಕೇವಲ ನಿನ್ನ್ನದು ಮಾತ್ರ. ಆದರೆ ನಂಗೆ ಎರೆಡು ಜೀವನ ಇದೆ. ಒಂದು ನಂದು ಮತ್ತೊಂದು ಸಾಗರ‍್ದು. ನನ್ನ ನಂಬಿದಾನೆ. ಅವನಿಂದ ದೂರ ಹೋಗುವ ಯೋಚನೇನೂ ಸಹ ನಾನು ಮಾಡಲ್ಲ.ನಡೀ ಎದ್ದೇಳು ನಿಮ್ ಅಮ್ಮ ಬರ್ತಾ ಇದಾರೆ ಅವರಿಗೆ ನಿನ್ನ ಒಪ್ಪಿಸಿ ನಾನು ಹೊರಡ್ತೇನೆ. "
ಕಣ್ಣೀರಲ್ಲಿ ತೊಯ್ದಿದ್ದ ಅವನ ಕೂದಲನ್ನು ನೇವರಿಸಿ ಎಬ್ಬಿಸಿದಳು.
ನಿಧಾನಕ್ಕೆ ಎದ್ದ
"ಚಿರಂತ್ ನಾಳೆ ಇಂದ ನಾನು ನಿನ್ನ ಬದುಕಿನ ಕ್ಲೋಸ್ಡ್ ಚಾಪ್ಟರ್. ನನ್ನ ಮರೆತು ಹಾಯಾಗಿ ಚಂದನಾ ಜೊತೆ ಇರು. ಚಂದನಾ ಒಳ್ಳೇ ಹುಡುಗಿ . ಅವಳಿಗೆ ನಿನ್ನ ಬಗ್ಗೆ ಎಲ್ಲಾ ಹೇಳಿದ್ದೇನೆ. ಅವಳು ನಿನ್ನ ನನಗಿಂತ ಚೆನ್ನಾಗಿ ನೋಡ್ಕೋತಾಳೆ. "
"ಬಾಯ್ ಚಿರಂತ್."  ಅವಳತ್ತ ನೋಡಲಿಲ್ಲ. ಚಿರಂತ್
"ಬಾಯ್ "ಎಂದಷ್ಟೆ ನುಡಿದ.