Sunday, May 31, 2009

ಪ್ರೇಮವೊಂದು ಹುಚ್ಚು ಹೊಳೆ- ಭಾಗ ೨

ಬೆಳಗಾಯ್ತು. ಎದ್ದಾಗಲೂ ಅವಳದೇ ಯೋಚನೆ, ಪಾಪ ಅನ್ನಿಸುತ್ತಿತ್ತು . ಎಂದೋ ನೋಡಿದ್ದ ದೌಡ್ ಸಿನಿಮಾ ನೆನಪಾಯ್ತು. ಊರ್ಮಿಳಾಗೆ ಬಂದಂತಹ ಗತಿ ಸ್ಮಿತಾಗೆ ಬಂದಿದೆ. ಒಂದೊಮ್ಮೆ ಎಲ್ಲಾದರೂ ಓಡಿಸಿಕೊಂಡು ಹೋಗಿಬಿಟ್ಟರೆ?
" ಅಯ್ಯೋ ಮಂಕೆ ನಿಂಗೇ ತಿನ್ನಕ್ಕೆ ಗತಿ ಇಲ್ಲ್ಲ. ಇನ್ನು ಆ ಬಿಳೀ ಆನೇಗೆ ಖರ್ಚಿಗೆ ಎಲ್ಲಿಂದ ತರ್ತೀಯಾ? ಮನಸ್ಸು ವ್ಯಂಗ್ಯವಾಡಿತು. ತೆಪ್ಪಗಾದ ಅದು ಸ್ವಲ್ಪ ಹೊತ್ತು ಮಾತ್ರ
ಸ್ನಾನ ಮಾಡುತ್ತಿದ್ದಂತೆ ಸ್ಮಿತಾಳ ನೆನಪು ಮತ್ತೆ ಬಂತು ಎಂತೆಂತಾ ಹೀರೋಗಳನ್ನೆಲ್ಲಾ ಬಿಟ್ಟು ತನ್ನನ್ನೇ ಆರಿಸಿಕೊಂಡಿದ್ದೇಕೆ ಮನಸನ್ನು ಬಿಚ್ಚಲು? ಮತ್ತೆ ಪ್ರಶ್ನೆ ಮಾಡಿಕೊಂಡ
ಎದುರಿಗಿದ್ದ ಕನ್ನಡಿ ಉತ್ತರಿಸಿತು
ನೋಡಲು ಬೆಳ್ಲಗೆ ದುಂಡು ದುಂಡುಗೆ ಇದ್ದ ದೇಹ ಒಂದೆರೆಡು ವರ್ಷ ಜಿಮ್ ಗೆ ಹೋಗಿದ್ದರಿಂದಲೋ ಏನೋ ಹೃತಿಕ್ ರೋಷನ್ ನಂತಹ ಮಸಲ್ಸ್ ಇರಲಿಲ್ಲವಾದರೂ ಸ್ವಲ್ಪ ಮಟ್ಟಿಗೆ ಆಕರ್ಷಕವಾಗಿತ್ತು. ಅದಕ್ಕೆ ಇರಬೇಕು ಅವಳು ತನ್ನನ್ನೇ ಆರಿಸಿಕೊಂಡಿದ್ದು. ಹೆಮ್ಮೆ ಎನಿಸಿತು. " ಲೋ ಅವಳು ಏನೋ ಹೇಳ್ಕೋಬೇಕಿತ್ತು ಅದಕ್ಕೆ ನಿನ್ನ ಹತ್ರ ಹೇಳಿಕೊಂಡಿದ್ದಾಳೆ. ಅವಳೇನು ನಿನ್ನ ಲವ್ ಮಾಡ್ತ್ಗಿದಾಳಾ" ಎಂದು ಕನ್ನಡಿ ಕೇಳಿದಾಗ ಕಣ್ಣಲ್ಲಿದ್ದ ಹೆಮ್ಮೆ ಕರಗಿಹೋಗಿ ಆಫ್ ಆದ

ಎಂದಿನಂತೆ ಚೆನ್ನಾಗಿ ಡ್ರೆಸ್ ಮಾಡಿಕೊಂಡು ಬಂದ. ಅಲ್ಲಿದ್ದ ಆಳುಕಾಳಿಗೆಲ್ಲಾ ಅವನೇ ಸೂಪರ್ ಮಾಡೆಲ್. ಸ್ಮಿತಾಮನೆಯಲ್ಲಿ ಬೆಳಗ್ಗೆಯೇ ಜನ. ಅಮರ್ ಪಾಲ್ ಆಗಲೆ ಎದ್ದು ಅವರೆಲ್ಲರ ಜತೆ ಚರ್ಚಿಸುತ್ತಿದ್ದ . ಹಿಂದಿಯಲ್ಲಿ ಮಾತಾಡುತ್ತಿದನಾದ್ದರಿಂದ ಇವನಿಗೆ ಅರ್ಥವಾಗಲಿಲ್ಲ. ಅಮರ್ ಪಾಲ್ ನನ್ನೆ ದುರುಗುಟ್ಟಿ ನೋಡಿಕೊಂಡು ಮಹಡಿಯ ಕಡೆ ತಲೆ ಎತ್ತಿ ನೋಡಿದ ಸ್ಮಿತಾ ಆಗಲೆ ರೆಡಿಯಾಗಿ ನಿಂತಿದ್ದಳು. ಇವನನ್ನು ನೋಡಿ ಮಂದಹಾಸ ಬೀರಿದಳು .ಅದು ಪರಿಚಯದ ನಗೆ. ಇವನು ಅತ್ತಿತ್ತ ನೋಡಿ ಒಮ್ಮೆ ಪೆಕರು ನಗೆ ನಕ್ಕು ತಲೆ ಕೆಳಗೆ ಹಾಕಿದ.
ಎದೆ ಬಡಿತ ಹೆಚ್ಚಾಗಿತ್ತು. ಬೇರಾರೂ ತಮ್ಮಿಬ್ಬರ ನಗುವಿನ ಎಕ್ಸ್ಚೇಂಜ್ ಅನ್ನು ಗಮನಿಸಲಿಲ್ಲವಲ್ಲ ಎಂದು ಒಮ್ಮೆ ಕನ್ಫರ್ಮ್ ಮಾಡಿಕೊಂಡು ಅಡಿಗೆಮನೆಯ ಕಡೆ ಹೊರಟ
ಅದನ್ನು ಗಮನಿಸಿದವನು ರಾಜೀವ್ . ಅವನ ಮುಖದಲ್ಲಿ ಒಂದು ಕಿರುನಗೆ ಮೂಡಿತು . ಅದು ಹರೀಶ್‌ಗೆ ತಿಳಿಯಲಿಲ್ಲ.
ಅಂದು ಕೊಂಚ ಜನ ಜಾಸ್ತಿಯೇ ಇದ್ದರು. ಕೆಲಸದಲ್ಲಿ ಮತ್ತೆ ಸ್ಮಿತಾ ನೆನಪಾಗುತ್ತಲೇ ಇದ್ದಳು ಅವಳಾಗಲೇ ಅಮರ್ ಪಾಲ್ ಜೊತೆ ಶೂಟಿಂಗ್‌ ಸ್ಪಾಟ್‌ಗೆ ಹೊರಟಿದ್ದಾಗಿತ್ತು.
ಮದ್ಯಾಹ್ನ ಮಲಗಿದ್ದಾಗ ಮತ್ತೆ ಕಾಲ್ ಬಂತು ಮೊಬೈಲ್‌ಗೆ ನೆನ್ನೆಯೇ ಹಾಡು ಚೇಂಜ್ ಮಾಡಿದ್ದ . ನಿನ್ನಿಂದಲೇ ನಿನ್ನಿಂದಲೇ ಹೊಸ ಕನಸು ಶುರುವಾಗಿದೆ ಎಂದು ಹಾಡಿತು ಮೊಬೈಲ್
ಅದು ಅವಳದೇ ಕಾಲ್ ಎಂದು ಗೊತ್ತಿತ್ತು. ನೆನ್ನೆಯೇ ಆ ನಂಬರ್‌ಗೆ ಈ ಹಾಡು ಸೆಟ್ ಮಾಡಿದ್ದ.
ಅದೇ ಹಾಡನ್ನು ಹೇಳಿಕೊಂಡು ಆನ್ ಮಾಡಿದ
"ಹ ......................... ಲೋ.................." ಅಲ್ಲಿಂದ ಬಂತು ದನಿ . ಕನಸಿನ ಸ್ವರ್ಗದಿಂದ ಅಪ್ಸರೆಯೊಬ್ಬಳ ದನಿಯನ್ನು ಕೇಳುತ್ತಿರುವವನಂತೆ ಅದನ್ನು ಕೇಳಿದ.
"ಹೇಳಿ ಮೇಡಮ್" ನಿಮ್ಮ್ ಅಪ್ಪಣೆಯೇ ಪರಮ ಪಾದ ಎಂಬಂತೆ ಇತ್ತು ಅವನ ದನಿ
"ನೋಡಿ ಹರೀಶ್ ಹೀಗೆಲ್ಲಾ ಮೇಡಮ್ ಅಂತೇನು ಕರೀಬೇಡಿ. ನಾನು ನಿಮ್ಮನ್ನ ನಮ್ಮನೆ ಕೆಲಸದವರು ಅಂತ ಅಂದ್ಕೊಂಡು ಮಾತಾಡ್ತಿಲ್ಲ. ಆಸ್ ಎ ಫ್ರೆಂಡ್ ನಿಮ್ಮನ್ನ ನೋಡ್ತಿದ್ದೇನೆ ದಯವಿಟ್ಟು ನನ್ನನ್ನು ಸ್ಮಿತಾ ಅಂತಾನೆ ಕರೆಯಿರಿ"
ಅವಳ ಮಾತು ಕೇಳುತ್ತಿದ್ದಂತೆ ಗಂಟಲಲ್ಲಿದ್ದ ಪಸೆ ಆರಿ ಹೋಯ್ತು
"ಇಲ್ಲ ಮೇಡಮ್ ,............ ನೀವೆಲ್ಲಿ .....ನಾನೆಲ್ಲಿ ಸಾಧ್ಯಾನೆ ಇಲ್ಲ" ತಡವರಿಸಿ ಹೇಳುತ್ತಿದ್ದನಾದರೂ ಅವಳ ಆ ಮಾತು ಅವನ ಮನದಲ್ಲಿ ಆನಂದಹುಟ್ತಿಸಿದ್ದು ಸುಳ್ಳಲ್ಲ.
"ಇಲ್ಲ ಆಗುತ್ತೆ ನಾನೊಬ್ಬ ಸ್ಟಾರ್ ಅನ್ನೋದನ್ನ ಮರೆತು ಬಿಡಿ . ಆಗ ಆಗುತ್ತೆ ................. ಹೇಳಿ ಮರೆತ್ರಾ?" ಕೋಗಿಲೆಯಂತೆ ಕೊಂಕಾಗಿ ದನಿಯನ್ನು ಎಳೆದಳು. ಅವಳು ಅದನ್ನು ಹೇಳುವಾಗ ತನ್ನ ಮುಂಗುರಳನ್ನು ಹಿಂದೆ ಸರಿಸಿ ಅಪ್ಪಣೆ ಕೊಡುವಂತೆ ಬಟ್ಟಲು ಗಣ್ಣನ್ನು ಅರಳಿಸುವದನ್ನು ಕಲ್ಪಿಸಿಕೊಂಡೆ ರೋಮಾಂಚನವಾಯ್ತು ಹರೀಶ್‌ಗೆ
"ಹಾ ಮರೆತೆ ಮೇಡಮ್" ಮತ್ತೆ ಮರೆತು ಮೇಡಮ್ ಎಂದು ಹೇಳಿದ
"ನೋಡಿ ಮತ್ತೆ ಮೇಡಮ್ ಸ್ಮಿತಾ ಅನ್ನಿ" ಅವಳ ದನಿಯಲ್ಲಿದ್ದ ಕೋಪ ಹಾಗು ಬೇಸರವನ್ನು ಗಮನಿಸಿದ. ಹಾಗೆ ಆ ಕೋಪದಲ್ಲಿ ಕೆಂಪಾಗಾಗಿರಬಹುದಾದ ಅವಳ ಕೆನ್ನೆಯನ್ನೂ ಮನದಲ್ಲಿ ಕಲ್ಪಿಸಿಕೊಂಡ.
"ಸಾರಿ ................ಸ್ಮಿತಾ " ಮೊತ್ತಮೊದಲ ಬಾರಿಗೆ ಹೆಣ್ಣೊಬಳನ್ನು ತನ್ನ ಸ್ನೇಹಿತೆಯಂತೆ ಕರೆದದ್ದು. ಎರಡನೆಯ ಪದ ಅವಳಿಗೆ ಕೇಳಿತೋ ಇಲ್ಲವೋ.
"ಆಯ್ತು ಹರೀಶ್ ಈಗ ಶೂಟಿಂಗ್ ಇದೆ . ರಾತ್ರಿ ಮಾತಾಡ್ತೇನೆ"
ಫೋನ್ ಆಫ್ ಮಾಡಿದಳು.
ಇವನು ಫೋನ್ ಆಫ್ ಮಾಡಿದ. ಸುತ್ತಾ ಯಾರಾದರೂ ತನ್ನ ಮಾತನ್ನು ಕೇಳಿಸಿಕೊಂಡಿದ್ದಾರೆಯೇ ಎಂದು ಗಮನಿಸಿದ. ಯಾರೂ ಇರಲಿಲ್ಲ .ನಿರಾಳವಾಗಿ ಉಸಿರು ಬಿಟ್ಟು ಶಿಳ್ಳೇ ಹಾಕುತ್ತಾ ಹೊರಟ .
ಇನ್ನೆರೆಡು ದಿನ ಸ್ಮಿತಾ ಶೂಟಿಂಗ್‌ಗೆ ಮೈಸೂರಿಗೆ ಹೋಗುತ್ತಿದ್ದಾಳೆಂದು ಆಳು ಮುನಿಯ ಹೇಳಿದಾಗ ಬೇಸರವಾಯ್ತು. ಹೇಗಿದ್ದರೂ ಅವಳು ಕಾಲ್ ಮಾಡುತಾಳಲ್ಲ ರಾತ್ರಿ ವಿಚಾರಿಸೋಣ ಎಂದುಕೊಂಡ
ಸ್ಮಿತಾ ಮನೆಯಲ್ಲಿ ಇಲ್ಲವಾದರೆ ಮನೆಗೆ ಬರುವವರು ಯಾರೂ ಇಲ್ಲವಾದ್ದರಿಂದ ಯಾವುದೇ ಕೆಲಸ ಇರಲಿಲ್ಲ
ಬೇಗನೇ ಬಂದು ಟಿವಿ ಆನ್ ಮಾಡಿದ. ಸ್ಮಿತಾಳದೇ ಹಾಡು . ಹೀರೊ ಅರವಿಂದ್ ಜೊತೆಗೆ ಕುಣಿಯುತ್ತಿದ್ದಳು. ಅವನ ಜೊತೆಗಿನ ಅವಳ ಭಂಗಿ ಹಿಡಿಸಲಿಲ್ಲ ಚಾನೆಲ್ ಚೇಂಜ್ ಮಾಡಿದ.
ಉದಯ ಟಿವಿಯಲ್ಲಿ ಸ್ಮಿತಾಳ ಸಂದರ್ಶನ ನಡೆಯುತ್ತಿತ್ತು.
ಅದರಲ್ಲಿ ಮುಂದೆ ತಾನು ಮತ್ತು ಅಮರ್ ಪಾಲ್ ಮದುವೆಯಾಗಬಹುದಾದ ಸಾಧ್ಯತೆಗಳನ್ನು ತಳ್ಳಿಹಾಕಲಿಲ್ಲ ಅವಳು.ಆದರೆ ಅವಳಿಗೆ ಉಂಟಾಗಿರಬಹುದಾದ ಮುಜುಗರವನ್ನು ಹರೀಶ ಮಾತ್ರ ಊಹಿಸಬಲ್ಲವನಾಗಿದ್ದ
ಮತ್ತೆ ಕಾಲ್ ಬಂತು
ಈ ಸಲ ಧೈರ್ಯ ಮಾಡಿ
"ಹೇಳಿ ಸ್ಮಿತಾ "ಎಂದೇ ಬಿಟ್ಟ
"ಥ್ಯಾಂಕ್ ಯು ಹರೀಶ್ . ನಿಮ್ಮ ದನಿಯಲ್ಲಿ ನನ್ನಹೆಸರು ಕೇಳಿ ಏನೊ ತುಂಬಾ ಸಂತೋಷ ಆಗುತ್ತಿದೆ" ಸ್ಮಿತಾಳ ದನಿಯಲ್ಲಿ ಸಡಗರ ಸಂತಸ ಕೇಳುತ್ತಿದ್ದರೆ. ಅವಳ ಮೊಗದಲ್ಲಿನ ಸಂತೋಷ ಊಹಿಸುತ್ತಿದ್ದ.
" ಹೇಳಿ ಸ್ಮಿತಾ ನಿಮ್ಮ ಮನಸಿನ ನೋವು ಹೇಳಿಕೊಳ್ಳಿ ನನ್ನ ಕೈನಲ್ಲಿ ಏನಾದರೂ ಸಹಾಯ ಆಗುತ್ತೋ ಹೇಳಿ . ಖಂಡಿತಾ ಮಾಡ್ತೀನಿ" ಮನಸಿನ ಮಾತು ಕೂಡಲೆ ಹೊರಗಡೆ ಹಾಕಿದ
"ಸಹಾಯಾನಾ ? ಯಾರು ಮಾಡ್ತಾರೆ . ಈ ಬದುಕಲ್ಲಿ ಹೆಣ್ಣು ಎಷ್ಟೇ ಹಣ ಇದ್ರೂ ಗಂಡಸಿನ ಎದುರು ಬಲ ಹೀನಳಾಗ್ತಾಳೆ. ಯಾರಾದ್ರೂ ಕೇಳಿದರೆ ನಗ್ತಾರೆ. ಅರಮನೆ ರಾಜಕುಮಾರಿಗೆ ಕಷ್ಟಾನ ಅಂತ. ನಿಜ ಹೇಳಕ್ಕಾಗದೆ ಒದ್ದಾಡ್ತಿದ್ದೀನಿ. ಸಹಾಯಾನ ನೀವಾದರೂ ಯಾಕೆ ಮಾಡ್ತೀರಾ. ನಿಮಗೆ ನಾನು ಏನಾಗಬೇಕಿದೆ ಹೇಳಿ" ಸ್ಮಿತಾಳ ದನಿಯಲ್ಲಿ ಅಳು ಕಾಣಿಸಿತು
"ಸ್ಮಿತಾ ನೀವು ನನ್ನ ಉಸಿರು. ನಿಜ ಹೇಳ್ಬೇಕೆಂದರೆ ನಾನು ಆ ಚಪ್ಪಲಿ ಅಂಗಡೀಗೆ ಕೆಲಸಕ್ಕೆ ಸೇರಿದ್ದೆ ನಿಮ್ಮನ್ನ ನೋಡಬೇಕಂತ . ನೀವು ನನ್ನಪಾಲಿಗಂತೂ ಭೂಮಿಗಿಳಿದ ದೇವತೆ. "ಬಡಬಡಿಸಿದ
"ಇದನ್ನ ನನ್ನ ಎಲ್ಲಾ ಅಭಿಮಾನಿಗಳೂ ಮಾಡ್ತಾರೆ. ನಾನು ಸ್ಟಾರ್ ನೀವು ಅಭಿಮಾನಿ ಅದು ಬಿಟ್ರೆ ಇನ್ನೇನಿದೆ ನಮ್ಮಿಬ್ಬರ ಸಂಬಂಧ? ನಾನು ಹೇಗಿದ್ದರೇನು ಅಭಿಮಾನಿಗಳಿಗೆ"
"ನಾನು ಬರೀ ಅಭಿಮಾನಿ ಅಲ್ಲ. ನಿಮ್ಮ ಸ್ನೇಹಿತ ಅಂತ ನೀವೇ ಹೇಳಿದ್ರಲ್ಲ ಸ್ಮಿತಾ . ಈ ನಿಮ್ಮ ಸ್ನೇಹಿತ ನಿಮಗಾಗಿ ಏನು ಬೇಕಾದರೂ ಮಾಡ್ತಾನೆ" ಅವನ ಕಣ್ಣಲ್ಲಿ ನೀರು ಬಂತು
"ನಾನೊಂದು ಮಾತು ಕೇಳಲಾ ?. ನಿಮ್ಮನ್ನ?"
"ಕೇಳಿ ಸ್ಮಿತಾ"
"ಕ್ಯಾನ್ ಯು ಗೀವ್ ಮಿ ಅ ಲೈಫ್?" ಅಲ್ಲಿಂದ ಬಂದ ಆ ಪದಗಳಿಗೆ ಅರ್ಥ ಹುಡುಕಿದ ಕೂಡಲೆ ಮೆದುಳು ಗ್ರಹಿಸಿ ಕೂಡಲೆ ಸ್ತಬ್ದವಾಯ್ತು
ಮಾತು ಹೊರಡಲಿಲ್ಲ. ಕಣ್ಣ ಮುಂದೆ ಅವಳದೇ ಚಿತ್ರ .
ಮೌನ ಮತ್ತು ಕೇವಲ ಉಸಿರು
ಅಲ್ಲಿಂದಲೂ ಮೌನ . ಇವನ ಉತ್ತರಕ್ಕಾಗಿ ಕಾಯುತ್ತಿದ್ದಳೇನೋ
ಸುಮಾರು ಕ್ಷಣಗಳು ಹಾಗೆಯೇ ಮೌನ.
ಕೊಂಚ ಹೊತ್ತಿನ ನಂತರ
ಫೋನ್ ಆಫ್ ಮಾಡಿದ್ದು ಕೇಳಿಸಿತು. ಆದರೂ ಫೋನ್ ಕಿವಿಗೆ ಹಿಡಿದೇಇದ್ದ
ಹರೀಶನಿಗೆ ಜಗದಲ್ಲೇನಾಗುತ್ತಿದ್ದೆ ಎಂದು ತಿಳಿಯಲಿಲ್ಲ. ಎಲ್ಲಾ ಗೋಜಲು ಗೋಜಲು
ಸ್ಮಿತಾ ನಗು ಮಾತ್ರ ಹೃದಯದಲ್ಲಿ ಕಣ್ಣಲ್ಲಿ
"ಕ್ಯಾನ್ ಯು ಗಿವ್ ಮಿ ಲೈಫ್ ? "ಎಂಬ ಪದಗಳೇ ಕಿವಿಯಲ್ಲಿ
ರಾತ್ರಿ ಊಟ ಕೂಡ ಬೇಕಿರಲಿಲ್ಲ.
ಮನಸ್ಸು ಏನನ್ನೂ ಯೋಚಿಸುವ ಸ್ಥಿತಿಯಲ್ಲಿರಲಿಲ್ಲ.
ಕೇವಲ ಸ್ಮಿತಾ ಸ್ಮಿತಾ ಸ್ಮಿತಾ ಎಂದು ಜಪಿಸುತ್ತಿತ್ತು

ರಾತ್ರಿ ಹೊದ್ದುಮಲಗಿದ್ದಷ್ಟೆ ನೆನಪು
ಕನಸಿನಲ್ಲಿಯೋ ಅವಳೇ. ಆಗಲೇ ನೋಡಿದ ಹಾಡಿನಲ್ಲಿ ಅರವಿಂದನ ಬದಲು ತನ್ನನ್ನು ನೋಡಿದಂತೆ ಕನಸು
(ಮುಂದುವರೆಯುವುದು)

Friday, May 29, 2009

ಪ್ರೇಮವೊಂದು ಹುಚ್ಚು ಹೊಳೆ- ಭಾಗ ೧

"ಹರೀಶ್ ನೋಡೋ ಅಲ್ಲಿ" ಸೋಮು ಕೂಗಿದ ಚಪ್ಪಲಿ ರಾಕಿನಲ್ಲಿ ಎತ್ತಿಡುತ್ತಿದ್ದ ಹರೀಶ್‌ನ ದೃಷ್ಟಿ ಬಾಗಿಲ ಕಡೆಗೆ ಬಿತ್ತು \
ಕನಸೋ ನನಸೋ ತಿಳಿಯದಾಯಿತು ಅವನ ಆರಾಧ್ಯ ಮೂರ್ತಿ, ಪ್ರಖ್ಯಾತ ಸಿನಿ ನಾಯಕಿ ಸ್ಮಿತ ನಿಂತಿದ್ದಳು
ಎಲ್ಲರೂ ಅವಳೆಡೆ ಓಡಿದರು
ಸ್ಮಿತಾ ಹೆಸರಿನಂತೆಯೇ ತನ್ನ ನಗುವಿನಿಂದಲೇ ಕನ್ನಡ ಸಿನಿ ರಂಗದಲ್ಲಿ ಮೋಡಿ ಮಾಡಿದ್ದಳು ಮಾದಕ ಸುಂದರಿ, ಕಣ್ನಿನಲ್ಲೇ ಕೊಲ್ಲುವ ಹುಡುಗಿ ಕೇವಲ ಮೂರು ವರ್ಷದಲ್ಲಿ ಇಡೀ ಚಿತ್ರರಂಗವನ್ನೇ ಆಳಲಾರಂಬಿಸಿದ್ದ್ದಳು
ಅಂತಹ ನಾಯಕಿ ಇಂದು ತಾನಾಗೆ ಈ ಚಪ್ಪಲಿ ಅಂಗಡಿಗೆ ಬಂದಿದ್ದಳು
ಹರೀಶ್ ಕೆಲ್ಸ ಮಾಡಿತ್ತಿದ್ದ ಚಪ್ಪಲಿ ಅಂಗಡಿಯೂ ಯಾವ ಐಶಾರಾಮಿ ಬಂಗಲೆಗೂ ಕಡಿಮೆ ಇರಲಿಲ್ಲ. ಚಪ್ಪಲಿಯ ಬೆಲೆ ಕಡಿಮೆಯದ್ದು ಎಂದರೆ ಇಪ್ಪತ್ತೈದು ಸಾವಿರ. ಹೆಚ್ಚಿಗೆ ಎಲ್ಲೆಯೇ ಇರಲಿಲ್ಲ.
ಸ್ಮಿತಾ ಬರುತ್ತಿರುವುದು ಮೊದಲ ಬಾರಿ ಏನಲ್ಲ ಆದರೆ ಹರೀಶ್ ಇತ್ತೀಚಿಗೆ ಈ ಅಂಗಡಿಗೆ ಕೆಲ್ಸಕ್ಕೆ ಸೇರಿದ್ದ . ಹಿಂದೆ ಇದ್ದ ಕೆಲಸ ಬಿಟ್ಟು ಸೇರಿದ್ದು ಕೇವಲ ಸ್ಮಿತ ಇಲ್ಲಿಗೆ ಬರುತ್ತಾಳೆಂದು.
ಮೊಬೈಲ್‌ನಲ್ಲಿ ಮಾತಾಡುತ್ತಾ ಒಳಗೆ ಬಂದ ಸ್ಮಿತಾಗೆ ಸನ್ನೆಯಲ್ಲೇ ಕೂರಲು ಹೇಳಿದ. ಆ ಮೆತ್ತನೆಯ ಸೋಫ ಕೇವಲ ಅಂತಹ ಗಣ್ಯರಿಗಾಗಿ ಮೀಸಲು. ಹರೀಶನಂತಹವರು ತಮಾಷೆಗಾಗಿಯೂ ಅಲ್ಲಿ ಕೂರುವಂತಿಲ್ಲ
ಫೋನಿನಲ್ಲೇ ಮಾತಾಡುತ್ತಾ ಕುಳಿತವಳನ್ನೇ ಎವೆ ಇಕ್ಕದೆ ನೋಡಲಾರಂಭಿಸಿದ. ಬದುಕಿನ ಸೌಭಾಗ್ಯವೆಲ್ಲಾ ಅಲ್ಲೇ ಇದೆ ಏನೋ ಎಂಬಂತೆ ಭಾಸವಾಗತೊಡಗಿತು ಬೇಡೆಂದರೂ ಮುಂದೆ ಬರುತ್ತಿದ್ದ ಮುಂಗುರಳನ್ನು ತನ್ನ ನೀಳ ಬೆರಳುಗಳಿಂದ ಹಿಂದೆ ಸರಿಸುತ್ತಾ ಅವಳ ತುಟಿಗಳೆರೆಡು ಒಂದರ ಮೋಡಿಗೆ ಇನ್ನೊಂದು ಒಳಗಾಗಿವೆ ಎಂಬಂತೆ ಪದೆ ಪದೆ ಮುತ್ತಿಡುತ್ತಿದ್ದಂತೆ ಇವನ ಮನದಲ್ಲಿ ಕಂಪನ ಕಣ್ಣ ಎವೆಗಳು ಅವಳ ಕಂಗಳನ್ನು ಚುಂಬಿಸಲೆಂದೆ ಬಾಗುತ್ತಿದ್ದವು. ನೀಳ ಮೂಗಿನ ಸುಂದರಿ ಅವಳು ಬೆಳ್ಳನೆ ಮೈ . ಹಾಲಿನ ಕೊಳದಲ್ಲೇ ಇದ್ದಾಳೇನೋ ಎಂಬಂಥಾ ರೂಪ ನೀಳ ಮೈ ಮಾಟ.
ಹರೀಶನ ಭಾಗ್ಯಕ್ಕೆ ಎಣೆಯೇ ಇಲ್ಲವಾಗಿತ್ತು.
"ಏಯ್ ಏಳೋ ಮೇಲೆ " ಗುಡುಗಿನ ಕೂಗಿಗೆ ಎಚ್ಚರವಾಗಿ ವಾಸ್ತವಕ್ಕೆ ಬಂದನು
ಅವಳನ್ನೇ ನೋಡುತ್ತಾ ಗೊತ್ತಿಲ್ಲದೆ ಅವಳ ಎದುರಿಗಿದ್ದ ಸೋಫಾ ಮೇಲೆ ಕೂತು ಬಿಟ್ಟಿದ್ದ. ಸ್ಮಿತಾಳ ಸೆಕ್ರೆಟರಿ ಬೊಬ್ಬೆ ಹೊಡೆಯುತ್ತಿದ್ದ.
"ಏನೋ ಮೇಡಮ್ ಸಮಕ್ಕೂ ಕೂತ್ಕೋತೀಯ ಈಡಿಯಟ್ ಏಳೋ ಮೇಲೆ " ಹರೀಶ್ ನಡುಗತೊಡಗಿದ. ಏನು ಹೇಳಲೂ ತೋಚಲಿಲ್ಲ
ಸ್ಮಿತಾ ಕೂಡ ಫೋನ್ ಆಫ್ ಮಾಡಿ ಸೆಕ್ರೆಟರಿಯತ್ತ ಏನು ಎಂಬಂತೆ ನೋಡಿದಳು
"ಮೇಡಮ್ ನೀವು ಮಾತಾಡ್ತಾ ಇದ್ದರೆ ನಿಮ್ಮನ್ನೇ ಒಳ್ಳೆ ತಿಂದುಬಿಡೋ ಹಾಗೆ ಇಷ್ಟು ಹತ್ರದಲ್ಲಿ ಕೂತ್ಕೊಂಡು ನೋಡ್ತಿದ್ದ ಇವನು" ಸೆಕ್ರೆಟರಿ ಆರೋಪಿಸಿ ಹರೀಶನನ್ನು ಕಡಿದುಬಿಡುವಂತೆ ನೋಡಿದ.
ಸ್ಮಿತಾ ಒಮ್ಮೆ ಹರೀಶನನ್ನು ನೋಡಿದಳು ಆ ನಡುಕದಲ್ಲಿಯೂ ಅವಳ ದೃಷ್ಟಿ ತನ್ನ ಮೇಲೆ ಹರಿದಿದ್ದಕ್ಕೆ ಜನ್ಮ ಪಾವನವಾಯ್ತು ಎಂದು ಕೊಂಡ.
ಮತ್ತೆ ಮಂದ ಸ್ಮಿತಳಾಗಿ "ರಾಜೀವ್ ಹೋಗಲಿ ಬಿಡಿ ಅವನಿಗೇ ಗೊತ್ತಿಲ್ಲದೆ ಹಾಗೆ ಮಾಡಿದ್ದಾನೆ. ಲೆಟ್ ಅಸ್ ನಾಟ್ ಮೇಕ್ ಇಟ್ ಬಿಗ್ ಇಶ್ಯೂ " ನುಡಿದಳು
ಒಮ್ಮೆ ಹರೀಶನತ್ತ ನೋಡಿ ನಕ್ಕಳು
ಇಂಗ್ಲೀಶ್ ಮಾತಾಡಲು ಬರದಿದ್ದರೂ ಅರ್ಥವಾಗುತಿತ್ತು
ಕೊನೆಗೆ ಕಸ್ಟಮರ್ ಕೇರ್ ಇಂದ ಒಬ್ಬರು ಬಂದು ಅವಳಿಗೆ ಸ್ಲಿಪ್ಪರ್ ತೋರಿಸಲು ಕರೆದು ಕೊಂಡು ಹೋದರು.
ರಾಶಿ ಬಿದ್ದಿದ್ದ ಚಪ್ಪಲಿಗಳನ್ನೆಲ್ಲ ಎತ್ತಿಡಲು ಬಗ್ಗುತ್ತಿದ್ದಂತೆ
"ಏನೋ ಹರಿ ಸ್ಮಿತಾ ನಿಂಗೆ ಸಪ್ಪೋರ್ಟ್ ಮಾಡಿದ್ರು. ಏನ್ ವಿಷಯ" ಗುರು ಕೀಟಲೆ ಮಾಡಿದ
"ಏನೋ ಒಂಥರಾ ಏನೋ ಒಂಥರಾ " ಸೋಮ ಹಾಡತೊಡಗಿದ .
ಇವನಿಗೋ ಮನದಲ್ಲಿ ಯಾವುದೋ ವೀಣೆ ಮಿಡಿದ ಹಾಗೆ ರಕ್ತವೆಲ್ಲಾ ಮುಖಕ್ಕೆ ಚಿಮ್ಮಿತು ಮೊದಲೇ ಬಿಳಿ ಮುಖ . ಈಗ ಕೆಂಪಗಾಗಿತ್ತು
ಸ್ಮಿತಾ ಕಾಲಿಗೆ ಹಾಕಿದ್ದ ಚಪ್ಪಲಿ ಬಿಟ್ಟು ಹೊಸ ಚಪ್ಪಲಿ ಹಾಕಿಕೊಂಡಳು. ಆ ಹಳೇ ಚಪ್ಪಲಿ ಯಾರು ಬೇಕಾದರೂ ತೆಗೆದುಕೊಳ್ಳಬಹುದಿತ್ತು. ಅವಳ ಕಾಲಿನ ಸ್ಪರ್ಶವಾಗಿದ್ದ ಆ ಚಪ್ಪಲಿಯನ್ನು ಪ್ರೀತಿಯಿಂದ ತೆಗೆದು ಒಂದು ಬಾಕ್ಸಿನಲ್ಲಿ ಹಾಕಿಟ್ಟ . ಅದನ್ನು ಅವಳೂ ನೋಡಿದಳು ಮತ್ತೊಮ್ಮೆ ಅವಳ ನೋಟ ಇವನ ನೋಟಕ್ಕೆ ಬೆರೆಯಿತು.
ಹರೀಶನ ಆನಂದ ಮೇರೆ ಮೀರಿತು ಹೋಗುವಾಗ ಬಾಯ್ ಹೇಳಿ ಹೊರಟಳು. ಸೆಕ್ರೆಟರಿ ಮಾತ್ರ ಸಿಡಿಮಿಡಿಗುಟ್ಟುತ್ತಿದ್ದ. ಅದಾದ ಎರಡೆ ದಿನಕ್ಕೆ ಹರೀಶ ಕೆಲಸ ಹೋಯಿತು.
ಕಾರಣ ಕೇಳಿದ್ದ್ದಕ್ಕೆ ಸ್ಮಿತಾ ಮೇಡಮ್ ತೆಗೆಯಲು ಹೇಳಿದ್ದಾರೆ ಎಂಬ ಉತ್ತರ ಬಂತು.
ಹರೀಶ ಗೋಗರೆದ ಬೇಡಿಕೊಂಡ. ಮನೆಯಲ್ಲಿ ತಂಗಿಯ ಮದುವೆಗೆ ಹಣ ಜೋಡಿಸಬೇಕು ಎಂದು ಅತ್ತ
ಮಾಲೀಕ ಮಾತ್ರ ಕಲ್ಲು ಹೃದಯಿಯಾಗಿದ್ದ
ಅಂದು ಅಷ್ಟೆಲ್ಲಾ ಬೆಂಬಲಿಸಿದ ಸ್ಮಿತಾ ಹೀಗೇಕೆ ಮಾಡಿದ್ದಾಳೆಂದು ಯೋಚಿಸುತ್ತಲೇ ಇದ್ದ.
ಸ್ವಲ್ಪ ಹೊತ್ತಿಗೆ ಅವನ ಮೊಬೈಲ್‌ಗೆ ಕಾಲ್ ಬಂತು ಇದ್ಯಾರಪ್ಪ ಎಂದು ಯೋಚಿಸುತ್ತಲೇ ಫೋನ್ ಆನ್ ಮಾಡಿದ
ಸ್ಮಿತಾ ಮೇಡಮ್ ಮನೆಯಿಂದ ಅದು "ಮೇಡಮ್ ಕೂಡಲೆ ಬರುವಂತೆ ಹೇಳಿದ್ದಾರೆ" ಎಂದು ಹೇಳಿದರು ಅಲ್ಲಿಂದ .
ಅನಿರೀಕ್ಷಿತ ಘಟನೆ . ಅದೇನೋ ನಿಜವೋ ಭ್ರಮೆಯೋ . ಏಕಿರಬಹುದು ಅವತ್ತು ಹಾಗೆ ನೋಡಿದ್ದಕ್ಕೆ ಸ್ಮಿತಾ ಕೋಪ ಮಾಡಿಕೊಂಡು ತನ್ನನ್ನು ಹೊಡೆಸಲು ಕರೆಸಿರಬಹುದೇ ಎಂಬ ಯೋಚನೆಯೂ ಬಂತು.
ಮೊಬೈಲ್ನಲ್ಲು ಸ್ಮಿತಾ ಚಿತ್ರವೇ. ಅದನ್ನು ನೋಡುತ್ತಾ ಇಲ್ಲ ಅದಿರಲಿಕ್ಕಿಲ್ಲ ಎಂದುಕೊಂಡು ಧೈರ್ಯ ಮಾಡಿಕೊಂಡು ಮನೆಗೆ ಹೋದ ವಾಚಮನ್ ಪರಿಚಯ ಕೇಲಿ ಅವನನ್ನು ಒಳಗೆ ಬಿಟ್ಟ.
ಮೇಲೆ ಬಾಲ್ಕನಿಯಲ್ಲಿ ಸ್ಮಿತಾ ನಿಂತಿದ್ದಳು ಜೊತೆಗೆ ಅವಳ ಗಾಡಫಾದರ್ ಅಮರ್ ಪಾಲ್ ಕೂಡ. ಇಬ್ಬರ ನಡುವೆ ಏನೋ ಮಾತು ಕಥೆ ನಡೆಯುತ್ತಿತ್ತು.
ಆ ಬಂಗಲೆ ನೋಡಿ ದಂಗಾಗಿ ಹೋದ ಅಬ್ಬಾ ಏನೋ ವೈಭವ ಅಂತಹ ಮನೆಗಳನ್ನು ಕೇವಲ ಸಿನಿಮಾದಲ್ಲಿ ಮಾತ್ರ ನೋಡಿದ್ದ. ಸ್ಮಿತಾಳನ್ನು ಕಾಣಲು ಜನವೋ ಜನ . ನಿರ್ಮಾಪಕರು, ನಿರ್ಧೇಶಕರು, ನಟರು, ನಾಯಕರು . ಸುಮಾರು ಜನ ಆಳುಕಾಳುಗಳು. ತಾನೆಲ್ಲಿ ನಿಲ್ಲುವುದು ಎಂದು ತಿಳಿಯದೆ ಹೊರಗಡೆಯೇ ನಿಂತಿದ್ದ ಅಷ್ಟರಲ್ಲಿ ಮನೆಯ ಆಳೊಬ್ಬ ಬಂದು ಮನೆಯ ಹಿಂದಿನ ಪಾರ್ಕ್ ಬಳಿ ಹೋಗಲು ಹೇಳಿದ.
ತಡಕಾಡಿಕೊಂಡು ಅಲ್ಲಿ ಹೋದ ಸ್ಮಿತಾ ಸೆಕ್ರೆಟರಿ ರಾಜೀವ್ ಇದ್ದ ಅಲ್ಲಿಯೇ
"ನೋಡಪ್ಪ ಮೇಡಮ್ ನಿನ್ನನ್ನ ಅವರ ಮನೆಗೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಅಂತ ಇಷ್ಟ ಪಟ್ಟಿದ್ದಾರೆ ಇದೇ ಮನೆಲಿ ಕೆಲಸ ಬಂದೋರಿಗೆ ಕೂರಿಸಿ ಅವರನ್ನ ನೋಡಿಕೊಳ್ಳೋದು ಉಪಚಾರ ಮಾಡೋದು ಅಷ್ಟೆ . ಸಂಬಳ ಚಪ್ಪಲಿ ಅಂಗಡೀಗಿಂತ ಜಾಸ್ತಿ ಸರೀನಾ ಇವತ್ತಿಂದಾನೆ ಜಾಯಿನ್ ಆಗು ಆಯ್ತಾ. ಅಂದ ಹಾಗೆ ನಿಂಗೊಂದು ರೂಮ್ ಕೂಡ ಇದೆ ನೀನುಇಲ್ಲೇ ಇರಬೇಕು ಗೊತ್ತಾಯ್ತಾ" ಅವನು ಹರೀಶನ ಯಾವ ಉತರಕ್ಕೂ ಕಾಯಲಿಲ್ಲ. ಇದು ಅಪ್ಪಣೆ ಎಂಬಂತೆ ಇತ್ತು ಅವನ ಮಾತಿನ ಧಾಟಿ
ಹರೀಶನ ಮನಸ್ಸು ಆಗಸದಲ್ಲಿ ಓಲಾಡಿತು. ಎಂಥ ಭಾಗ್ಯ. ಸ್ಮಿತ ದ ಗ್ರೇಟ್ ಮೇಡಮ್ ನನ್ನನ್ನು ಅವರ ಮನೆಯ ಕೆಲಸಕ್ಕೆ ಕರೆದು ಸೇರಿಸಿಕೊಂಡಿದ್ದಾರೆ ಎಂಬುದನ್ನು ನೆನೆಸಿ ನೆನೆಸಿ ಸಂತಸ ಪಡಲಾರಂಭಿಸಿದ .
ಅಂದೇ ಅವನ ಮನೆಯಿಂದ ಅವನ ವಸ್ತುಗಳೆಲ್ಲಾ ಅವನ ಹೊಸ ರೂಮಿಗೆ ರವಾನೆಯಾದವು. ಹರೀಶನ ಅಮ್ಮ ಹಾಗು ತಂಗಿಗೂ ಖುಶಿ .
ದೊಡ್ಡ ಹೀರೋಯಿನ್ ಮನೇಲಿ ಮಗ ಕೆಲ್ಸ ಮಾಡುತ್ತಾನೆ ಎಂಬುದೇ ಅವರಿಗೆ ಹಿಗ್ಗಿನ ವಿಷ್ಯ.
ಆದರೆ ಕೆಲಸಕ್ಕೆ ಬಂದ ದಿನ ಅವನಿಗೆ ನಿರಾಸೆ. ಒಟ್ಟು ಹದಿನೈದು ಜನ ಕೆಲಸದವರು.
ಅವರಲ್ಲಿ ಐದು ಜನ ಇದೇ ಕೆಲಸಮಾಡುತ್ತಿದ್ದವರು. ಅದರಲ್ಲಿ ಅವನಿಗೆ ಕೆಲಸವೇ ಇಲ್ಲ.
ಸ್ಮಿತಾ ಬೆಳಗ್ಗೆ ಹೋಗುವಾಗ ಇವನತ್ತ ಕೈ ಬೀಸಿದಳು. ಅಷ್ಟು ಸಾಕಾಗಿತ್ತು. ಅಂದೆಲ್ಲಾ ಕೆಲಸವಿಲ್ಲದೆ ಕೂತಿದ್ದ. ಹೊತ್ತು ಹೊತ್ತಿಗೆ ಊಟ ಸಿಕ್ಕಿತು.
ಜೊತೆಗೆ ಕೆಲ್ಸದಾಳು ಮುನಿಯನ ಜೊತೆ ಕೂತಾಗ ಸ್ಮಿತಾಳ ಹಿಂದಿನ ವಿಷ್ಯಗಳು ತಿಳಿದವು "ಸ್ಮಿತಾ ಹುಟ್ಟಿದ್ದು ಯಾವುದೋ ಸ್ಲಮ್ಮಿನಲ್ಲಿ ಆದರೆ ಅವಳ ರೂಪು ಲಾವಣ್ಯಗಳಿಂದ ನಿರ್ಮಾಪಕ ಅಮರ್ ಪಾಲ ಕಣ್ಣಿಗೆ ಬಿದ್ದಳು. ಅಮರ್ ಪಾಲ್‌ರ ಅಪ್ಪಣೆಯಿಲ್ಲದೆ ಅವಳು ಯಾವ ಪ್ರಾಜೆಕ್ಟ್ ಅನ್ನೂ ಕೈಗೆತ್ತಿಕೊಳ್ಳುವುದಿಲ್ಲ. ಅವಳ ಸಂಭಾವನೆಯನ್ನೂ ಅವನೆ ಗೊತ್ತು ಮಾಡುವುದು. ಮುಂದೆ ಅವರಿಬ್ಬರೂ ಮದುವೆಯಾಗಬಹುದು ಎಂದಾಗ ಮಾತ್ರ ಹರೀಶನ ಮನದಲ್ಲಿ ಕಸಿವಿಸಿಯಾಯ್ತು.
ಅವಳ ವಯಸ್ಸು ಇಪ್ಪತ್ತಿರಬಹುದು . ಅಮರಪಾಲ್ ತನ್ನಪ್ಪನ ಕಾಲದಿಂದಲೂ ಚಲನ ಚಿತ್ರ ನಿರ್ಮಿಸುತ್ತಿದ್ದಾನೆ. ಏನಿಲ್ಲ ಎಂದರೂ ಐವತ್ತಕ್ಕಿಂತ ಹೆಚ್ಚು ಇರಬಹುದುಅವನ ವಯಸ್ಸು . ಅವನಂತ ಮುದಿಗೂಬೆಗೆ ಇಂತಹ ದಂತದ ಗೊಂಬೆಯೇ? ಭಗವಂತಾ ಯಾವ್ಯಾವ ಹೂವಿನ ಮೇಲೆ ಯಾರ್ಯಾರ ಹೆಸರನ್ನು ಬರೆದಿಟ್ಟಿದ್ದೀಯೋ ಎಂದುಕೊಂಡಾಗ- ಭಗವಂತ ಈ ಹೂವಲ್ಲಿ ನಿನ್ನ ಹೆಸರಿದೆ ಎಂದಂತೆ ಭಾಸವಾಗಿ ಪುಳಕೊಗೊಂಡ.
ಅಂದು ರಾತ್ರಿ ಹನ್ನೆರೆಡಾಗಿತ್ತು ಚೆನ್ನಾಗಿ ತಿಂದು ಗಡದ್ದಾಗಿ ನಿದ್ರಿಸುತ್ತಿದ್ದ .ಅವನ ಮೊಬೈಲ್ ಕೂಗಿತು . " ಬಂದಿದೆ ಬದುಕಿನ ಬಂಗಾರದಾ ದಿನ" ಎಂಬ ಹಾಡದು ಅವನ ತಂಗಿ ಸೆಟ್ ಮಾಡಿಟ್ಟಿದ್ದಳು. ನಿದ್ದೆಗಣ್ಣು ಆ ನಂಬರ್ ಯಾರದು ಅಂತಲೂ ತಿಳಿಯಲಿಲ್ಲ ಯಾರಪ್ಪ ಇಷ್ಟು ಹೊತ್ತಲ್ಲಿ ಎಂದುಕೊಂಡು "ಹಲೋ" ಎಂದ "ಹ...ಲೋ" ಎಂಬ ಇಂಪಾದ ದನಿ ಎಲ್ಲೋ ಕೇಳಿರುವಂತಿದೆಯಲ್ಲಾ ಕೂಡಲೆ ನೆನಪಿಗೆ ಬಂತು ಸ್ಮಿತಾ ತನ್ನ ಚಿತ್ರಗಳಿಗೆ ತಾನೆ ಡಬ್ ಮಾಡುತ್ತಿದ್ದುದರಿಂದ ಅವಳ ದನಿ ಅವನಿಗೆ ಪರಿಚಿತವಾಗಿತ್ತು "ಮೇ..................................ಡ..............................ಮ್?" ನಡುಗುವ ದನಿಯಲ್ಲಿ ಕೇಳಿದ ಅವಳು ತನ್ನೊಂದಿಗೆ ಮಾತನಾಡಬಹುದು ಎಂಬ ಕಲ್ಪನೆಯೂ ಇರಲಿಲ್ಲ
"ನಾನು ಜೋರಾಗಿ ಮಾತಾಡೋಹಾಗಿಲ್ಲ್ಲ ದಯವಿಟ್ಟು ನೀವೂ ಜೋರಾಗಿ ಮಾತಾಡಬೇಡಿ ನಾನು ಹೇಳೋದು ಕೇಳಿಸಿಕೊಳ್ಳಿ" ಎಂದಳು
ಇಂತಹ ಮಹಾರಾಣಿಗೆ ಮಾತನಾಡಲೂ ಕಷ್ಟವೇ . ಅಯ್ಯೋ ಎನಿಸಿತು ಅವಳು ಮಾತಾಡತೊಡಗಿದಳು ಎಲ್ಲವನ್ನು ಕೇಳಿಸಿಕೊಂಡ
ಅವಳು ನಾಳೆ ಮತ್ತೆ ಮಾಡುವುದಾಗಿ ಹೇಳಿ ಫೋನಿಟ್ಟಳು ದಂಗಾಗಿ ಕುಳಿತ .
ಮತ್ತೊಮೆ ಅವಳ ಮಾತುಗಳು ಮಾರ್ದನಿಸತೊಡಗಿದವು
"ಸಾರಿ ನನ್ನ ಮನಸಲ್ಲಿ ಇರೊದೆಲ್ಲಾ ಎಲ್ಲಾದ್ರೂ ಹೇಳಿಕೊಳ್ಬೇಕು ಅಂತ ಅನ್ನಿಸ್ತಿತ್ತು ಆದರೆ ಹೇಳಿಕೊಳ್ಳೋಕೆ ಕೇಳ್ಸಿಕೊಂಡು ಸಮಾಧಾನ ಮಾಡೋ ಅಂತಹ ಯಾವುದೂ ಹೃದಯಾನೂ ಸಿಗಲಿಲ್ಲ. ಆದರೆ ನಿಮ್ಮನ್ನ ಆವತ್ತು ಚಪ್ಪಲಿ ಅಂಗಡೀಲಿ ನೋಡಿದಾಗಿನಿಂದ ನೀವೆ ನನ್ನ ದನಿಗೆ ಕಿವಿಯಾಗಬಲ್ಲವರು ಅಂತ ಅನ್ನಿಸಿತು. ನಾನು ಎಲ್ಲರ ಹೃದಯಕ್ಕೂ ರಾಣಿ ಆದರೆ ನನ್ನ ರಾಜನನ್ನ ಆರಿಸೋ ಸ್ವಾತಂತ್ರ್ಯ ನಂಗೆ ಇಲ್ಲ. ನಂಗೆ ಬೀದೀಲಿ ಸುತ್ತಬೇಕು. ಸಾಮಾನ್ಯನೊಬ್ಬನ ಹೆಂಡತಿಯಾಗಬೇಕು.ಅವ್ನು ಬೀದಿಲಿ ಕೊಡಿಸೋ ಪಾನಿಪೂರಿ ಮಸಾಲೆ ಪೂರಿ ತಿನ್ನುತ್ತಾ ಥಿಯೇಟ್‌ರ್ ಗೆ ಹೋಗಿ ಸಿನಿಮಾ ನೋಡಬೇಕು ಅಂತೆಲ್ಲಾ ಆಸೆ ಇದೆ. ಆದರೆ ನಾನು ನನ್ನಿಷ್ಟ ಬಂದ ಹಾಗೆ ಇರೋ ಹಾಗಿಲ್ಲ . ಅಮರಪಾಲ್ ನಂಗೆ ಸಿನಿಮಾರಂಗಕ್ಕೆ ಕರೆದುಕೊಂಡು ಬಂದರು ನಿಜಾ ಆದರೆ ನಂಗೆ ಅವರು ತಂದೆ ಇದ್ದ ಹಾಗೆ ಅವರನ್ನು ಯಾವತ್ತೂ ಮದುವೆಯಾಗೋ ದು ಮನಸಲ್ಲಿ ಇಲ್ಲ . ಆದರೆ ನಾನು ಅವರನ್ನೇ ಮದುವೆಯಾಗಬೇಕು ಅಂತ ಅವರ ಒತ್ತಾಯ. ಇಲ್ಲವಾದರೆ ಬಲವಂತವಾಗಿಯಾದರೂ ನನ್ನನ್ನ ಮದುವೆಯಾಗ್ತೀನಿ ಅಂತ ಹೇಳಿದಾರೆ. ನಂಗೆ ನಿಜಕ್ಕೂ ಇಷ್ಟ ಇಲ್ಲ. ಆದರೆ ಅವರನ್ನು ಎದುರು ಹಾಕಿಕೊಳ್ಳೋದಿಕ್ಕೂ ಭಯ . ನಾನೇನ್ಮಾಡಲಿ ಅನ್ನೋದೆ ಪ್ರಶ್ನೆಯಾಗಿ ಹೋಗಿದೆ."
ಆ ಮಾತುಗಳೇ ಮತ್ತೆ ಮತ್ತೆ ಅವನ ತಲೆಯಲ್ಲಿ ಸುತ್ತತೊಡಗಿದವು ಹರೀಶನ ಕಣ್ಣಲ್ಲಿ ನೀರು ಬಂತು ಪಾಪ ದೊಡ್ಡವರ ಬಾಳೇ ಹೀಗೆಯೇ ಹೇಗಾದರೂ ಮಾಡಿ ಸ್ಮಿತಾಗೆ ಸಹಾಯ ಮಾಡಬೇಕು ಆದರೆ ಹೇಗೆ? ಬಡವ ನೀ ಮಡಗಿದಂಗಿರು ಅಂತ ಸುಮ್ಮನೆ ಇರೋಣ . ನಮಗ್ಯಾಕೆ ಇವರ ವಿಷಯ ಬೆಡ್ ಶೀಟ್ ಎಳೆದುಕೊಂಡು ಮಲಗಿದ.
ಆದರೂ ಅವಳ ಬಗ್ಗೆ ಮರುಕ ಮೂಡದಿರಲಿಲ್ಲ (ಮುಂದುವರೆಯುವುದು)

Thursday, May 28, 2009

ಹೆಸರಿನ ಹಂಗಿಲ್ಲದ ಸಂಬಂಧ

ಆಕೆ ಹಾಗೆ ಜೀವನದ ಪ್ರತಿಯೊಂದು ಘಳಿಗೆಯನ್ನ ಇಂಚಿಂಚಾಗಿ ಅನುಭವಿಸಬೇಕೆನ್ನುವಳು. ಪ್ರತಿಯೊಂದು ಘಳಿಗೆಯೂ ಅವಳಿಗೆ ಸ್ಮರಣೀಯವಾಗಬೇಕೆಂಬ ಬಯಕೆ. ಪ್ರತಿ ಕ್ಷಣದಲ್ಲೂ ಯಾವುದಾದರೂ ಘಟನೆ ನಡೆಯುತ್ತದೆ ಎನ್ನುವ ನಿರೀಕ್ಷೆ ಇಟ್ಟವಳು.
ಹಾಗೆ ಆ ಹುಡುಗನೂ ಸುಂದರ ಕನಸುಗಳ ಸುತ್ತಾ ಚಲಿಸುವವ. ಮಾತಿನಲ್ಲಿ ಪ್ರಪಂಚದ ಅಷ್ಟೂ ಸೊಗಸನ್ನು ಕಟ್ಟಿಕೊಡಬಲ್ಲವನು. ವಾಸ್ತವಕ್ಕಿಂತ ಕಲ್ಪ್ನನಾ ಲೋಕದ ಸಂಚಾರಿ
ಇಬ್ಬರೂ ಅಕಾಶ ಇಷ್ಟಿರಬೇಕಿತ್ತು ಭೂಮಿ ಚಪ್ಪಟೆಯಾಗಿರಬೇಕಿತ್ತು ಎಂಬೆಲ್ಲ್ಲಾ ಅಸಾಧ್ಯ ವಿಷಯಗಳನ್ನು ಮಾತನಾಡುತ್ತಾ ಕಾಲ ಕಳೆಯುತ್ತಿದ್ದರು. ಪುಸ್ತಕಗಳ ಮುಖ ಪುಟದ ಶೈಲಿಯಿಂದ ಹಿಡಿದು ಅವುಗಳಕೊನೆಯ ಪುಟದ ವರೆಗೆ ಪ್ರತಿಯೊಂದು ಪುಟವನ್ನೂ ಬಿಡದೆ ಚರ್ಚಿಸುತ್ತಿದ್ದರು.

ಅವಳು ಕಾಲೇಜಿನ ಉಪನ್ಯಾಸಕಿ ಈತನೋ ಅದೇ ಕಾಲೇಜಿನ ವಿದ್ಯಾರ್ಥಿ ಇಬ್ಬರ ನಡುವೆಯೂ ಮಾತಿಗೆ ಕೊರತೆ ಇರಲಿಲ್ಲ
ಮಾತು ಮಾತಿಗೆ ನಗು ನಲಿವು . ಪ್ರಪಂಚದ ಸುಂದರ ಕ್ಷಣಗಳನ್ನು ನಿಷ್ಕಪಟ ಮನದಿಂದ ಆಸ್ವಾದಿಸುತ್ತಿದ್ದರು.ಇಬ್ಬರ ಮನದಲ್ಲೂ ಯಾವುದೇ ಅಪನಂಬಿಕೆ ಇರಲಿಲ್ಲ.
ಕಾಲೇಜು ಬಿಡುತ್ತಲೇ ಈತ ಲೈಬ್ರರಿಯಲ್ಲಿ ಹಾಜಾರು .ಈಕೆಯೂ ಹಿಂದೆಯೇ . ಜೊತೆ ಜೊತೆಗೆ ಕೂತು ಪುಸ್ತಕಗಳನ್ನೆಲ್ಲಾ ಶೋಧಿಸಿ ತಮಗೆ ಹಿಡಿಸಿದ ಪುಸ್ತಕಗಳನ್ನು ಓದುತ್ತಿದ್ದರು. ಅವಳು ಓದಿದ್ದನ್ನು ಅವನಿಗೆ ಅವನು ತನಗನಿಸಿದ್ದನ್ನು ಅವಳಿಗೆ ಹೇಳಿ ಖುಷಿ ಪಡುತ್ತಿದ್ದರು.
ಹಿಡಿಸಿದ ನಾಟಕ , ಸಿನಿಮಾ, ಸ್ಥಳಗಳಿಗೆಲ್ಲಾ ಸುತ್ತಾಡತೊಡಗಿದ್ದರು. ಅವರ ಸಂಬಂಧ ಗುರು ಶಿಷ್ಯರನ್ನು ಮೀರಿದ್ದಾಗಿತ್ತು. ಆದರೆ ಅದೇನು ಸ್ನೇಹವೇ ಅಥವ ಪ್ರೀತಿಯೇ ಎಂಬುದು ಕಾಲೇಜಿನ ಎಲ್ಲರಿಗೂ ಎಲೆ ಅಡಿಕೆಯಾಗಿತ್ತು. ಕಾಲೇಜಿನವರ ಗುಸುಗುಸು ಪಿಸುಮಾತು ಅವರನ್ನು ತೊಂದರೆಗೊಳಿಸಲಿಲ್ಲ
ಅವರಿಬ್ಬರಿಗೂ ಗೊತ್ತಿತ್ತು ತಾವು ಪ್ರೇಮಿಗಳಲ್ಲ ಸ್ನೇಹಿತರಲ್ಲ. ಸ್ನೇಹಕ್ಕೂ , ಪ್ರೇಮಕ್ಕೂ ಮೀರಿದ , ಪದಗಳಲ್ಲಿ ಹೇಳಲಾಗದ ಮಾತಿನಲ್ಲಿ ವರ್ಣಿಸಲಾಗದಂತಹ ನಂಟಿದು ಎಂದು.
ಒಮ್ಮೊಮ್ಮೆ ಅವಳೂ ಯೋಚಿಸುತ್ತಿದ್ದಳು .ತಾನೇಕೆ ಅವನ ಬಳಿ ಇಂತಹ ಆತ್ಮೀಯತೆ ಹೊಂದಿದ್ದೇನೆ. ಗಂಡನನ್ನೂ ಅವನನ್ನೂ ಪ್ರೀತಿಯ ತಕ್ಕಡಿಯಲ್ಲಿ ನಿಲ್ಲಿಸಿದರೆ ಆ ಹುಡುಗನೇ ಹೆಚ್ಚು ತೂಕ . ಗಂಡನೂ ಒಳ್ಳೆಯವನೇ ಆದರೆ ಭಾವನೆಗಳ ಮಹಾಪೂರದಲ್ಲಿ ಕೊಚ್ಚುವ ವ್ಯಕ್ತಿಯಲ್ಲ. ಅವಳ ಕಲ್ಪನೆಗೆ ರೆಕ್ಕೆ ಆಗಲೊಲ್ಲ. ಕನಸಿಗೆ ಸಾಗರವಾಗುವಂತಹವನಲ್ಲ. ಎಷ್ಟೋ ಬಾರಿ ಅವಳ ಕಾಲ್ಪನಿಕ ಜಗತ್ತನ್ನು ಕೀಟಲೆ ಮಾಡಿದ್ದಾನೆ ಅವಳ ಓದಿನ ಹುಚ್ಚಿಗೆ ಹಣ ವ್ಯರ್ಥವಾಗುತ್ತಿರುವುದಕ್ಕೆ ಬೈದಿದ್ದಾನೆ, ಅವಳ ಮನದಾಳ ಭಾವನೆಗಳಿಗೆ ಸ್ಪಂದಿಸಿ ಅದಕ್ಕೆ ಪ್ರತ್ಜಿ ಭಾವನೆ ಕೊಡುವ ಹೃದಯಕ್ಕಾಗಿ ಹಾತೊರೆಯುತ್ತಿದ್ದಳು. ಆ ಹೃದಯ ಅವಳದೇ ಪ್ರತಿ
ಮನೆಯಲ್ಲಿ ಗಂಡನಿಗೆ ಈಬಗ್ಗೆ ಬೇಸರ. ಎಷ್ಟೇ ಎಜುಕೇಟೆಡ್ ಆದರೂ ಅವನೂ ಗಂಡನಲ್ಲವೇ.
ಆಗಾಗ ಮನೆಯಲ್ಲಿ ಈಬಗ್ಗೆ ಮಾತಾಗುತ್ತಿತ್ತು. ಆದರೆ ತನ್ನ ಮನದಲ್ಲಿದ್ದ ಭಾವನೆಯನ್ನು ಮಾತಿನಲ್ಲಿ ಹೇಳಲು ಗಂಡನಿಗೆ ಕಷ್ಟ . ತಾನೇನಾದರೂ ಚೀಪ್ ಎಂದುಕೊಂಡರೆ ಎಂದು ಹಾಗಾಗಿಯೇ ಯಾವುದೇ ಅಪಮಾತು ಮನೆಯಲ್ಲಿ ಬರುತ್ತಿರಲಿಲ್ಲ
ಆದರೆ ಇದೊಂದು ಥರ ಶೀತಲ ಸಮರವಾಗಿತ್ತು. ಸಂಸಾರದ ಹಡುಗಿನಲ್ಲಿ ಅಪನಂಬಿಕೆ ಪ್ರಯಾಣಿಕನಾದರೆ ಹಡಗು ಸರಾಗವಾಗಿ ಸಾಗುವುದೆಂತು? ಅವರಿಬ್ಬರ ನಡುವೆ ಮೌನ ತಾಂಡವವಾಡತೊಡಗಿತು. ಇಬ್ಬರಿಗೂ ಅರಿವಿಲ್ಲದೇ ಕಂದರವೊಂದು ಬೆಳೆಯುತ್ತಾ ಬೆಳೆಯುತ್ತಾ ಬೃಹದಾಕಾರವಾಯ್ತು.
ಆದರೆ ಅವಳು ಕೇರ್ ಮಾಡಲಿಲ್ಲ. ಅವಳಿಗೆ ಆ ಹುಡುಗನ ಬಗ್ಗೆ ಎಲ್ಲಿಲ್ಲದ ಮಮತೆ. ಅವನನ್ನು ಒಮ್ಮೆಯಾದರೂ ದಿನದಲ್ಲಿ ನೋಡಲಿಲ್ಲವಾದರೂ ಅವಳಿಗೆ ಏನೋ ಸಂಕಟ. ಅದು ಪ್ರೇಮಿ ತನ್ನ ಪ್ರೇಮಿಯನ್ನು ಕಾಣದೆ ಪಡುವ ಪರಿತಾಪವಲ್ಲ, ಕಾಮಕ್ಕಾಗಿ ಕಾಯುವ ಕಾಮಿನಿಯ ಹಾತೊರೆತವಲ್ಲ. ಅಮ್ಮ ಕಂದನಿಗಾಗಿ ಹಾಡುವ ಹಂಬಲವಲ್ಲ. ಏನೋ ಒಂದು ರೀತಿಯ ಬಂಧ ಅದು ಯಾವುದೆಂದು ಅವಳಿಗೂ ತಿಳಿಯಲಿಲ್ಲ
ಅತ್ತ ಇನ್ನೂ ಡಿಗ್ರೀ ಮಾಡುತ್ತಿದ್ದ ಹುಡುಗ ತನಗಿಂತ ಹಿರಿಯವಳಾದ ಅದೂ ಮದುವೆಯಾದ ಹೆಣ್ಣಿನ ಜೊತೆ ಸುತ್ತಾಡುತ್ತಿದ್ದಾನೆ ಎಂಬ ಮಾತು ಹೆತ್ತವರನ್ನು ಚಿಂತೆಗೀಡು ಮಾಡಿತು. ಮನೆಯಲ್ಲಿ ಈ ಬಗ್ಗೆ ಪ್ರಶ್ನಾವಳಿ ಸುತ್ತತೊಡಗಿತು . ಅವನು ನಕ್ಕು ಕೇಳಿದ
ನಮ್ಮಿಬ್ಬರ ನಡುವಳಿಕೆಯಲ್ಲಿ ಯಾವ ಕಪ್ಪು ಕಲೆ ಕಾಣಿಸಿತು ನಿಮಗೆ . ಹುಡುಗನ ಮನೆಯವರಿಗೆ ಉತ್ತರಿಸಲಾಗಲಿಲ್ಲ
"ನೀವು ಎಲ್ಲೆಂದರಲ್ಲಿ ಸುತ್ತಾಡುತ್ತಿದ್ದೀರಾ .ಅವಳೂ ಮದುವೆಯಾದವಳು ಅವಳ ಬಾಳನ್ನು ಹಾಳು ಮಾಡಬೇಡ" ಎಂದೆಲ್ಲಾ ನುಡಿದರು
ಅವರ ಯಾವ ಮಾತಿಗೂ ಸೊಪ್ಪುಹಾಕಲಿಲ್ಲ
ಕೊನೆಗೆ ಅವಳನ್ನು ಕಾಲೇಜಿನಿಂದ ಕಿತ್ತೆಸೆದರು. ಅವಳು ಬೇರೆಡೆ ಕೆಲಸಕ್ಕೆ ಹೋಗಲಾರಂಭಿಸಿದಳು
ಆದರೂ ಅವಳ ಅವನ ಒಡನಾಟ ಮುಂದುವರೆಯುತ್ತಲೇ ಇತ್ತು
ಕಾಲೇಜಿನ ಲೈಬ್ರರಿ ಇಲ್ಲದಿದ್ದರೇನಂತೆ ಸಿಟಿ ಲೈಬ್ರರಿ ಇದೆಯಲ್ಲಾ . ಅಲ್ಲಿ ಕಾಲ ಕಳೆಯಲಾರಂಭಿಸಿದರು.
ಇತ್ತ ಗಂಡನಿಗೆ ತಲೆ ಕೆಟ್ತಿತು
ಅವನ ಒಡನಾಟ ಬಿಡಲು ಹೇಳಿದೆ . ಅವಳು ಕೇಳಲಿಲ್ಲ. ಗಂಡ ಬಿಟ್ಟು ಹೋದ ಎಂಬುದಕ್ಕಿಂತ ಇವಳೇ ಬಿಟ್ಟು ಬಂದಳು. ಇತ್ತ ಹುಡುಗನ ಮನೆಯಲ್ಲೂ ಗಲಾಟೆಯಾಯ್ತು. ಹುಡುಗ ಮನೆ ಬಿಟ್ಟು ಬಂದ
ಯಾರೋ ಹೇಳಿದರು . " ಸುಮ್ಮನೆ ಹೀಗೇಕೆ ಇಬ್ಬರೂ ಮದುವೆಯಾಗಿ ಬಿಡಿ "
ಇಬ್ಬರೂ ನಕ್ಕರು.
ಮದುವೆಯಾಗಲಿಲ್ಲ.
ಅವಳೊಂದು ಮನೆಯಲ್ಲಿ ನೆಲೆಸಿದಳು ಅವನು ಇನ್ನೊಂದು ಮನೆಯಲ್ಲಿ ನೆಲೆಸಿದನು
ಇಬ್ಬರ ನಂಟೂ ಮುಂದುವರೆಯುತ್ತಲೇ ಇದೆ ತಮ್ಮ ತಮ್ಮ ಮಾತಿನಲ್ಲಿ ಓದಿನಲ್ಲಿ . ಪುಸ್ತಕ ವಿಮರ್ಶೆಯಲ್ಲಿ , ಪರಸ್ಪರರ ಗೌರವದಲ್ಲಿ ಆತ್ಮೀಯತೆ ಹೆಚ್ಚಾಗುತ್ತಲೇ ಇದೆ
ಯಾವುದೆ ಹೆಸರಿನ ಹಂಗಿಲ್ಲದ ಸಂಬಂಧ, ಸಮಾಜದ ಕಟ್ಟು ಪಾಡುಗಳನ್ನು ಮೀರಿ ಗಂಡು ಹೆಣ್ಣಿನ ಹೊಸ ನಂಟಿಗೆ ಭಾಷ್ಯ ಬರೆಯುತ್ತಾ , ಹೀಗೂ ಇರಬಹುದೆಂಬ ನೂತನ ಸಂದೇಶದೊಂದಿಗೆ ಅವರ ಜೊತೆಯೇ ಇದೆ.