Thursday, April 14, 2011

ಪ್ರೀತಿ ತ್ಯಾಗ ಗೆಳೆತನ

ಬೆಳಗ್ಗೆ ಬಂದಾಗಿನಿಂದ ಪ್ರಸನ್ನ ಕಾಣಿಸಿರಲಿಲ್ಲ .

ಆಫೀಸಿನ ಎಲ್ಲಾ ಕಡೆಯಲ್ಲೂ ಹುಡುಕಿದಾಗ ಆಫೀಸಿನ ಹಿಂದಿನ ಪಾರ್ಕನಲ್ಲಿ ನಿಂತಿದ್ದು ಕಾಣಿಸಿತು. ಮಾತಾಡಿಸೋಣ ಎಂದುಕೊಂಡು ಹೊರಟೇ ಬಿಟ್ಟೆ

ಎಲ್ಲೋ ನೋಡುತ್ತಿದ್ದರು . ನಾನು ಬಂದು ನಿಂತದ್ದೂ ಕಂಡಿರಲಿಲ್ಲ

"ಏನ್ರಿ ಪ್ರಸನ್ನ ಏನೋ ಬಹಳ ಗಹನವಾಗಿ ಯೋಚಿಸ್ತಾ ಇದ್ದೀರಲ್ಲಾ ಏನು ವಿಷ್ಯ?" ಮೆಲ್ಲಗೆ ಕೇಳಿದೆ

ಬೆಚ್ಚಿದರೆನಿಸುತ್ತದೆ. ಒಮ್ಮೆ ದಂಗಾಗಿ ಮತ್ತೆ ಉಸ್ಸೆಂದು ಉಸಿರೆಳೆದುಕೊಂಡರು.

"ಏನಿಲ್ಲಾ ಹೀಗೆ ಕತೆಗೆ ಮುಕ್ತಾಯ ಹೇಗೆ ಮಾಡೋಣ ಅಂತ ಯೋಚನೆ ಮಾಡ್ತಾಇದ್ದೇನೆ"

ಪ್ರಸನ್ನ ನಿಮ್ಮ ಕತೆಯ ನಾಯಕನಿಗೆ ನಾಯಕಿಯನ್ನೇನೋ ತೋರಿಸಿದಿರಿ . ಆದರೆ ಆ ನಾಯಕಿ ಈಗಾಗಲೇ ಮತ್ತೊಬ್ಬನ ಮಡದಿಯಾಗಿದ್ದಾಳೆ . ಆದರೆ ಆಕೆಯೇ ಈ ಕಥಾನಾಯಕ ಕಾಲೇಜಿನಲ್ಲಿದ್ದಾಗಿನಿಂದ ಪ್ರೀತಿಸುತ್ತಿದ್ದ ಹುಡುಗಿ. ಆದರೆ ಹುಡುಗ ಸಿರಿವಂತನಲ್ಲ ಅನ್ನುವ ಕಾರಣಕ್ಕೆ ಆತನನ್ನ ತಿರಸ್ಕರಿಸಿದ್ದಳು. ಈಗ ಆ ಕಥಾನಾಯಕ ಸಮಾಜದ ಗಣ್ಯ ವ್ಯಕ್ತಿ ಯಾಗಿದ್ದಾನೆ ಜೊತೆಗೆ ಹುಡುಗಿಯೂ ಇವನ ಜೊತೆ ಬರಲು ಒಪ್ಪಿದ್ದಾಳೆ . ಮತ್ತೇಕೆ ತಡ ಪ್ರೀತಿಯನ್ನು ಒಂದು ಮಾಡಿ.

"ಅಲ್ಲೇ ತೊಡಕಾಗಿರೋದು ಸುಂದರ್ .ನಾಯಕಿಯ ಗಂಡ ನಾಯಕನಿಗೆ ಗೆಳೆಯ . ಗೆಳೆಯನಿಗೆ ಮೋಸಮಾಡುವುದು ತಪ್ಪು ತಾನೇ?"

"ಪ್ರಸನ್ನ . ಎಲ್ಲಾ ಕತೆಗಳಲ್ಲೂ ಸಿನಿಮಾಗಳಲ್ಲೂ ನಾಯಕ ಗೆಳೆಯನಿಗೋಸ್ಕರ ಪ್ರೀತಿನ ತ್ಯಾಗ ಮಾಡ್ತಾನೆ . ಆದರೆ ಇಲ್ಲಿ ಕತೆಗೆ ಅದೇ ಟ್ವಿಸ್ಟ್ ಆಗಿರಲಿ. ಸಾಧ್ಯವಾದಲ್ಲಿ ಈ ನಾಯಕ ಗೆಳಯನಿಗೆ ಹೀಗೆ ಪತ್ರ ಬರೆದಿಟ್ಟು ಹೋಗಲಿ. "ಡಿಯರ್ ಗೆಳೆಯ

ಪ್ರೀತಿ ತ್ಯಾಗದ ಸ್ವರೂಪ ಅಂತಾರೆ ಹಾಗೆಯೇ ನನ್ನ ಪ್ರೀತಿಯಿಂದಲೂ ಒಂದು ತ್ಯಾಗವಾಯಿತು. ಅದು ನಿನ್ನ ಮಡದಿಯ ತ್ಯಾಗ ಆಕೆ ನನಗಾಗಿ ತನ್ನ ಗಂಡನನ್ನು ತ್ಯಾಗ ಮಾಡಿದ್ದಾಳೆ. ಗೆಳೆತನ ಪ್ರೀತಿ ಇವೆರೆಡರ ನಡುವಲ್ಲಿ ಯಾವುದನ್ನು ತ್ಯಾಗ ಮಾಡಲಿ ಎಂದು ಯೋಚಿಸಿದೆ ಬಹಳವೇ ಯೋಚಿಸಿದೆ ಕೊನೆಗೆ ಗೆಳೆತನವನ್ನ ತ್ಯಾಗ ಮಾಡಬಹುದು ಎಂದೆನಿಸಿತು. ಹಾಗಾಗಿ ಇನ್ನು ನನ್ನ ನಿನ್ನ ಭೇಟಿ ಸಾಧ್ಯವಿಲ್ಲ. ಹಾಗೆಯೇ ನಿನ್ನ ಮಡದಿಯ ಭೇಟಿಯೂ . ಬಹುಷ: ಕೋರ್ಟ್ನಲ್ಲಿ ಮಾತ್ರ ಅನ್ನಿಸುತ್ತದೆ ಬಾಯ್ ಬಾಯ್ ಗೆಳೆಯ"

"ಆದರೆ ಜನ ಒಪ್ತಾರ? . ಆ ಗೆಳೆಯನಿಗೆ ಆಘಾತವಾಗಲ್ವಾ? ಗೆಳೆತನಕ್ಕೆ ಯಾವ ಬೆಲೆಯೂ ಇಲ್ವಾ"

"ಪ್ರೀತಿ ಕುರುಡು . ಅದು ಯಾವುದನ್ನೂ ನೋಡೋದಿಲ್ಲ . ನೋಡಿದರೂ ಬೆಲೆ ಕೊಡೋದಿಲ್ಲ." ನಕ್ಕೆ

"ಆಯ್ತು ಸುಂದರ್ ಕತೆಗೆ ಒಂದು ವಿಭಿನ್ನ ಅಂತ್ಯ ಹೇಳಿದ್ದಕ್ಕಾಗಿ ಧನ್ಯವಾದ" ಪ್ರಸನ್ನ ನಕ್ಕರು. ಅವರ ಕಣ್ಣಲ್ಲಿ ಮಿಂಚು ಕಾಣಿಸುತ್ತಿದೆಯೇ?


ಎಲ್ಲೋ ಕತೆ ನಿಜವಾಗುತ್ತಿದೆಯೇ ಎಂದನಿಸುತ್ತಿತ್ತು. ಪ್ರಸನ್ನ ಅವರ ಕತೆಯ ಮುಂದಿನ ಭಾಗ ಪ್ರಿಂಟ್‌ಗೆ ಹೋಗಿತ್ತು.

ಮರುದಿನ


ಎಲ್ಲವನ್ನೂ ಜೊತೆಗೆ ಗಂಡನನ್ನೂ ತೊರೆದು ಬರಲು ಸಿದ್ದವಾಗಿದ್ದ ಮಂದಾಕಿನಿ ನನ್ನ ಪ್ರೇಯಸಿ ಪ್ರಸನ್ನರವರ ಮಡದಿಯಾಗಿದ್ದಾಕೆ ಏರ್ ಪೋರ್ಟಿನಲ್ಲಿ ನನಗಾಗಿ ಕಾದು ನಿಂತಿದ್ದಳು . ಅವಳನ್ನು ನೋಡಿದ ಕೂಡಲೆ ಪ್ರಸನ್ನರಿಗೆ ಆಗಲೇ ಸಿದ್ದ ಪಡಿಸಿಕೊಂಡಿದ್ದ ಮೆಸೇಜ್ ಕಳಿಸಿದೆ

"

ಡಿಯರ್ ಗೆಳೆಯ

ಪ್ರೀತಿ ತ್ಯಾಗದ ಸ್ವರೂಪ ಅಂತಾರೆ ಹಾಗೆಯೇ ನನ್ನ ಪ್ರೀತಿಯಿಂದಲೂ ಒಂದು ತ್ಯಾಗವಾಯಿತು. ಅದು ನಿನ್ನ ಮಡದಿಯ ತ್ಯಾಗ ಆಕೆ ನನಗಾಗಿ ತನ್ನ ಗಂಡನನ್ನು ತ್ಯಾಗ ಮಾಡಿದ್ದಾಳೆ. ಗೆಳೆತನ ಪ್ರೀತಿ ಇವೆರೆಡರ ನಡುವಲ್ಲಿ ಯಾವುದನ್ನು ತ್ಯಾಗ ಮಾಡಲಿ ಎಂದು ಯೋಚಿಸಿದೆ ಬಹಳವೇ ಯೋಚಿಸಿದೆ ಕೊನೆಗೆ ಗೆಳೆತನವನ್ನ ತ್ಯಾಗ ಮಾಡಬಹುದು ಎಂದೆನಿಸಿತು. ಹಾಗಾಗಿ ಇನ್ನು ನನ್ನ ನಿನ್ನ ಭೇಟಿ ಸಾಧ್ಯವಿಲ್ಲ. ಹಾಗೆಯೇ ನಿನ್ನ ಮಡದಿಯ ಭೇಟಿಯೂ . ಬಹುಷ: ಕೋರ್ಟ್ನಲ್ಲಿ ಮಾತ್ರ ಅನ್ನಿಸುತ್ತದೆ ಬಾಯ್ ಬಾಯ್ ಗೆಳೆಯ"

ಪ್ರಸನ್ನರಿಗಾಗಿರಬಹುದಾದ ಆಘಾತವನ್ನ ಊಹಿಸಿಕೊಳ್ಳಲಿಲ್ಲ . ಊಹಿಸಿಕೊಂಡರೂ ಪ್ರೀತಿ ಕುರುಡಲ್ಲವೇ? ಬೆಲೆಕೊಡಲಿಲ್ಲ. ಮಂದಾಕಿನಿಯ ಹೆಗಲಮೇಲೆ ಕೈಹಾಕಿ ಕರೆದೊಯ್ದೆ.


No comments:

Post a Comment

ರವರು ನುಡಿಯುತ್ತಾರೆ