Monday, March 24, 2008

ಇದನ್ನು ನಾನು 8ನೇ ತರಗತಿಯಲ್ಲಿ ಇದ್ದಾಗ ಬರೆದದ್ದು. ಹಾಗೆ ಯಥಾವತ್ತಾಗಿ ಟೈಪಿಸಿದ್ದೇನೆ. ಬಾಲಿಶ ಮನಸು. ಏನು ತೋಚಿತ್ತೋ ಅದನ್ನೆ ಬರೆದಿದ್ದೆ. ಯಾವುದೇ ವ್ಯಾಕರಣವಾಗಲಿ ಅಥವ ರೂಢಿಯನ್ನಾಗಲಿ ಬಳಸಿಕೊಂಡಿರಲಿಲ್ಲ
ಇದನ್ನು ಸಿದ್ದಲಿಂಗ ಪಟ್ಟಣಾ ಶೆಟ್ಟಿಯವರಿಗೆ ಒಮ್ಮೆ ತೋರಿಸಿದ್ದೆ.
ಒಬ್ಬಳನ್ನ ನಿಭಾಯಿಸೋದೇ ಕಷ್ಟ . ಇನ್ನೂ ನೂರು ಜನ್ರನ್ನು ಗಂಡು ಹೇಗೆ ನಿಭಾಯಿಸುತ್ತಾನೆ ಎಂದು ನಕ್ಕಿದ್ದರು.
ಆದರೆ ಆಗಿನ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ನಾವು (ಹೆಂಗಳೆಯರು) ಬಹು ಮುಂದುವರೆದಿದ್ದೇವೆ . ಆದರೂ ಒರೆ ಕೊರೆಗಳು ಇದ್ದೆ ಇವೆ

ಹೆಣ್ಣು
ಹೆಣ್ಣಲ್ಲ ಅಬಲೆ
ಆಕೆ ಈಗ ಸಬಲೆ
ನೋಡಲ್ಲ ಗುಡುಗು ಮಿಂಚು ಮಳೆ
ದುಡಿಯುವಳು ಒಂದೆ ಸಮನೆ
ಆದರೂ ಹಲವರದು ಈ ಪ್ರಶ್ನೆ
ಹೆಣ್ಣು ಗಂಡಿಗೆ ಸಮಳೆ?

ಹೆಣ್ಣಾದರೆ ವಿಧವೆ
ಮತ್ತಿಲ್ಲ ಆಕೆಗೆ ಮದುವೆ
ಗಂಡಾದರೆ ವಿಧುರ
ಆಗುವನು ನೂರೆಂಟು ಮದುವೆಗೆ ವರ

ಹೆಂಗಸಿಗೆಲ್ಲಿದೆ ಸ್ವತಂತ್ರ
ಜೀವನವಿಡೀ ಅತಂತ್ರ

ಬಾಲ್ಯದಲ್ಲಿ ತಂದೆಯಾಸರೆ
ಯವ್ವನದಲ್ಲಿ ಗಂಡನಾದರೆ
ಮುಪ್ಪಿನಲ್ಲಿ ಮಗನಾಸರೆ
ಎಂದು ಎಲ್ಲರೂ ಹಳಿಯುವವರೇ
ಪ್ರಕೃತಿಗಿಲ್ಲ ಗಂಡು ಹೆಣ್ಣೆಂಬ ಬೇಧ
ಹಾಗಂತ ಹೇಳಿಲ್ಲ ವೇದ
ಆದರೂ ಹೆಣ್ಣೆಂದರೆ ಹಲವರಿಗೆ ವಿನೋದ

ಬಾಲ್ಯದಲ್ಲಿ ಸಲಹುವ ತಾಯಿ ಹೆಣ್ಣು
ಯವನದಲ್ಲಿ ಪ್ರೀತಿಸುವ ಹೆಂಡತಿ ಹೆಣ್ಣು
ಮುಪ್ಪಿನಲ್ಲಿ ಸಾಕುವ ಮಗಳೂ ಹೆಣ್ಣು
ಎಂಬ ಅರಿವನ್ನು
ಇನ್ನಾದರೂ ಮೂಡಿಸಿಕೊಳ್ಳುವಿರೇನು?

Thursday, March 20, 2008

ಆ ಹುಡುಗ 21ರ ಆಸುಪಾಸಿನವನಿರಬೇಕು . ಪ್ರತಿಷ್ಟಿತ ಕಾಲೇಜಿನಲ್ಲಿ ಉತ್ತಮ ವಿದ್ಯಾರ್ಥಿ ಎನಿಸಿಕೊಂಡಿದ್ದ. ಓದಿನಲ್ಲಿ ನಡತೆಯಲ್ಲಿ ನಂಬರ್ 1 . ಯಾವ ಹುಡುಗಿಯರ ಹಿಂದೆ ಬಿದ್ದ ಉದಾಹರಣೆ ಇರಲಿಲ್ಲ

ಹೀಗಿದ್ದ ಹುಡುಗ ಒಮ್ಮೆ ಚಾಟ್ ಮಾಡುವಾಗ ಕಾಣಿಸಿತು ಆ ಹೆಸರು "ಐಶ್ವರ್ಯ" ಹೆಸರಿನ ಮಹಾತ್ಮೆ ಯಿಂದಲೋ ಅಥವ ಕುತೂಹಲದಿಂದಲೋ ಆ ಹೆಸರಿನ ಜೊತೆ ಚಾಟ್ ಮಾಡಿದ. ಆ ಕಡೆಯವಳು ಮಂಗಳೂರಿನವಳು ಎಂದು ತಿಳಿಯಿತು. ಅವಳ ಹೆಸರೇ ಐಶ್ವರ್ಯ ಎಂದೂ ಅರಿವಾಯಿತು ಚಾಟ್ ಮಾಡುತ್ತಾ ಮಾಡುತ್ತಾ ಅವರಿಬ್ಬರ ಆಸಕ್ತಿ, ಗುರಿ , ಓದು ಎಲ್ಲಾ ಒಂದೇ ಅಗಿದ್ದು ಕೂಡ ತಿಳಿಯಿತು. ಮತ್ತೆ ಇನ್ನೇನು ಬೇಕು ಸ್ನೇಹಕ್ಕೆ . ನೆಟ್‌ನಲ್ಲಿ ಸ್ನೇಹ ಬೆಳೆಯಿತು. ನಂತರ ಕೆಲದಿನಗಳಲ್ಲಿ ಸ್ನೇಹ ಪ್ರೀತಿಯಾಗಿ ಬದಲಾಗುವಾಗ ಆತನ ಸ್ನೇಹಿತರು ಎಚ್ಚರಿಸಿದರು" ಆ ಕಡೆ ಇರುವವರು ಹುಡುಗಿ ಎಂದು ಹೇಗೆ ಹೇಳುವೆ? ಮೊದಲು ಫೋನ್ ನಂಬರ್ ಕೇಳು" ಎಂದರು. ಈತ ಕೇಳಿದ ಆಕೆ ತಾನು ಚಾಟ್ ಮಾಡುವ ಸೆಂಟರ್‌ನ ನಂಬರ್ ಕೊಟ್ಟಳು . ಈ ಹುಡುಗ ಅಲ್ಲಿಗೆ ಫೋನ್ ಮಾಡಿದ . ಅಲ್ಲಿ ಫೋನ್ ಎತ್ತಿದ್ದು ಆಕೆಯೆ . ಆಕೆಯ ಮಧುರ ವಾಣಿ ಕೇಳುತ್ತಲೇ ಈ ಹುಡುಗ ಕುಣಿದಾಡಿದ . ಫೋನ್‌ನಲ್ಲಿ ಕೆಲ ವಿಚಾರಗಳನ್ನು ಹಂಚಿಕೊಂಡರು. ಕೆಲದಿನಗಳಾದ ಮೇಲೆ ಅವಳ ಫೋಟೊ ಕೇಳಿದ ಆಕೆ ಕಳಿಸಿದಳು . ಫೋಟೊ ನೋಡಿ ದಂಗಾದ. ಅಷ್ಟು ಸುಂದರಿಯಾಗಿದ್ದಳು. ಸಾಕ್ಷಾತ್ ಐಶ್ ಸಹ ಅವಳ ಮುಂದೆ ಏನೂ ಇಲ್ಲ ಅನಿಸಿತು. ಅಂತಹ ಸುಂದರಿ ತನಗೆ ಸಿಕ್ಕಿದ್ದು ತನ್ನ ಲಕ್ ಎಂದೆ ಭಾವಿಸಿದ.
ನಂತರ ಪ್ರೇಮವನ್ನು ನಿವೇದಿಸಿದ . ಅವಳಿಂದ ಒಪ್ಪಿಗೆ ಸಿಕ್ಕಿದ ಮೇಲೆ ಶುರುವಾಯಿತು ಇವರ ಮೈಲ್ ಲವ್.
ಅವನಿಗೆ ಓದು ಬೇಕಿರಲಿಲ್ಲ .ಅವಳ ಮೇಲ್ ಒಂದು ದಿನ ಬರಲಿಲ್ಲವೆಂದರೂ ಚಡಪಡಿಸುತಿದ್ದ.
ಹೀಗಿದ್ದಾಗ ಬಂತು ವ್ಯಾಲೆಂಟಿನೆ ಡೇ . ಏನು ಉಡುಗೊರೆ ಕೊಡುವೆ ಎಂದು ಕೇಳಿದಳು. ಕಾದು ನೋಡು ಎಂದು ಮೇಲ್ ಕಳಿಸಿದ . ಕೆಲ ದಿನಗಳಲ್ಲಿ ಅವನ ಎದೆಯ ಮೇಲೆ ತೋಳಿನ ಮೇಲೆ ಐಶ್ವರ್ಯ ಎಂಬ ಹೆಸರು ಹಚ್ಚೆ ಹಾಕಿಸಿಕೊಂಡಿದ್ದ . ನಿನಗಾಗಿ ಏನು ಮಾಡಲೂ ಸಿದ್ದ ಎಂದು ರಕ್ತದಲ್ಲಿ ಬರೆದ ಹಾಳೆ ಹಾಗು ತನ್ನ ಎದೆ ತೋಳಿನ ಮೇಲೆ ಬರೆದು ಕೊಂಡಿದ್ದ ಹಚ್ಚೆಯನ್ನು ಫೋಟೊ ತೆಗೆದು ಸ್ಕಾನ್ ಮಾಡಿ ಕಳಿಸಿದ
ಅಷ್ಟೇ ನಂತರದ ದಿನಗಳಲ್ಲಿ ಅವಳಿಂದ ಒಂದು ಮೈಲ್ ಅಥವ ಒಂದು ಫೋನ್ ಸಹ ಬರಲಿಲ್ಲ . ಕೆಲ ದಿನಗಳು ಕಾದು ಆ ಸೆಂಟರ್‌ಗೆ ಫೋನ್ ಮಾಡಿದ . ಅಲ್ಲಿ ಆ ಹೆಸರಿನವರು ಯಾರು ಇಲ್ಲವೆಂದರು. ನಂತರ ಅವಳು ಹೇಳಿದ್ದ ಕಾಲೇಜಿಗೆ ಫೋನ್ ಮಾಡಿ ವಿಚಾರಿಸಿದರೆ ಅಲ್ಲೂ ಅದೇ ಉತ್ತರ.
ಈ ಹುಡುಗ ಗೊಂದಲದಿಂದ ಹಣ್ಣಾಗಿದ್ದ . ಯಾರೋ ತನ್ನ ಐಶ್ ಅನ್ನು ಎಗರಿಸಿದ್ದಾರೆ. ಅವಳು ಆಪತ್ತಿನಲ್ಲಿದ್ದಾಳೆ ಎಂದುಕೊಂಡು ಅವಳನ್ನು ನೋಡಲು ಅವಳಿರುವ ಮಂಗಳೂರಿಗೆ ಹೋಗಬೇಕೆನ್ನುವಾಗ ಅವನ ಮೇಲ್‌ಗೆ ಬಂತೊಂದು ಪತ್ರ
ಅನಾಮಿಕ ಎಂದಿದ್ದ್ ಆ ಪತ್ರ ಹೀಗಿತ್ತು
ಹಾಯ್
ನಿಮಗೆ ವಿಷಯ ತಿಳಿಸುವ ಮೊದಲು ನಿಮ್ಮ ಕ್ಷಮೆಯನ್ನು ಕೇಳುವೆ.
ನಾನು ಮಂಗಳೂರಿನ ಒಬ್ಬ ಹುಡುಗ. ಹುಡುಗಿಯರ ಹಿಂದೆ ಬೀಳುವ ಹುಡುಗರನ್ನು ಗೋಳು ಹೊಯ್ದುಕೊಳ್ಳುವುದೇ ನನ್ನ ಕೆಲಸ. ನಾನು ಮಿಮಿಕ್ರಿಯಲ್ಲಿ ಪರಿಣಿತ.ನೀವು ಐಶ್ ಎಂದು ಭಾವಿಸಿ ಮಾತನಾಡಿದ್ದು ಚಾಟ್ ಮಾಡಿದ್ದು ನನ್ನೊಡನೆಯೇ. ನಾನು ಕಳಿಸಿದ ಫೋಟೊ ನಮ್ಮ ಅಜ್ಜಿಯ ಚಿಕ್ಕ ವಯಸ್ಸಿನದು . ಅವರು ಈಗ ಭೂಮಿಯ ಮೇಲೆ ಇಲ್ಲ ಹಾಗಾಗಿ ಅವರ ಫೋಟೊವನ್ನು ಬಣ್ಣ ಹಚ್ಚಿ ಅದಕ್ಕೆ ಮಾಡ್ ಉಡುಪು ಆಂಟಿಸಿ ಕಳಿಸಿದೆ. ನಾನು ಈ ರೀತಿ ಎಲ್ಲರಿಗೂ ಮಾಡುತ್ತಿದ್ದೆ. ಆದರೆ ನಿಮ್ಮ ಪ್ರೇಮದ ತೀವ್ರತೆ ಅದಕ್ಕೆ ನೀವು ಕೊಡುತಿದ್ದ ಗೌರವ ನನ್ನನ್ನು ಮೂಕನನ್ನಾಗಿ ಮಾಡಿದೆ. ಇನ್ನೂ ನಿಮ್ಮನ್ನ ಆ ಪ್ರೇಮದ ಹುಚ್ಚಿನಲ್ಲಿ ಇಡುವುದು ಸರಿಯಲ್ಲ ಅನಿಸಿತು . ಆ ಐಶ್ವರ್ಯ ಎನ್ನುವುದು ಒಂದು ಕಲ್ಪನೆ . ಅದನ್ನು ಮರೆತು ಬಿಡಿ
ಯಾರೋ ಗೊತ್ತಿಲ್ಲದವಳಿಗಾಗಿ ನಿಮ್ಮ ರಕ್ತ , ದೇಹವನ್ನು ಹಾನಿ ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ
ಮತ್ತೊಮ್ಮೆ
ನಿಮ್ಮ ಭಾವನೆಗಳೊಂದಿಗೆ ಚೆಲ್ಲಾಟ ವಾಡಿದ್ದಾಕ್ಕಾಗಿ ಕ್ಷಮಿಸಿ
ಅನಾಮಿಕ
ಮೇಲ್ ನೋಡಿ ಏನು ಮಾಡಬೇಕೊ ಎಂದು ತಿಳಿಯಲಿಲ್ಲ . ಅವಳು ಕಲ್ಪನೆ ಎಂದು ಮನಸ್ಸು ಒಪ್ಪಲು ಸಾಧ್ಯವಿರಲಿಲ್ಲ . ರೂಮಿಗೆ ಹೋಗಿ ಬಿಕ್ಕಳಿಸಿ ಅಳಲಾರಂಭಿಸಿದ.
8 ವರ್ಷಗಳ ನಂತರ
ಆ ಹುಡುಗ ಈಗ ಗೃಹಸ್ತನಾಗಿ ಬದಲಾಗಿದ್ದ. ಹೆಂಡತಿಯ ಬಲವಂತ ತಾಳಲಾರದೆ ಅವಳನ್ನು ಮಲ್ಪೆ ಬೀಚ್‌ಗೆ ಕರೆದು ತಂದಿದ್ದ . ಹೆಂಡತಿ ಮಗನೊಡನೆ ಆಟವಾಡುತ್ತಿದ್ದಾಗ ,
ಆ ಜೋಡಿ ಕಣ್ಣಿಗೆ ಬಿತ್ತು ಆಕೆಯ ಮುಖ ಬಹಳ ಪರಿಚಿತ ಅನ್ನಿಸಿತು. ಮಿಂಚು ಹೊಡೆದಂತಾಯಿತು. ಹೌದು ಅವಳೇ ತನ್ನ ಐಶ್ವರ್ಯ . ಫೋಟೋದಲ್ಲಿ ನೋಡಿದ್ದ ಮುಖ ಅವಳದೇ... ಹಾಗಿದ್ದರೇ ಅವಳು ಕಲ್ಪನೆಯಲ್ಲವಾ?
ಆಕೆ ಇವನನ್ನು ಒಮ್ಮೆ ನೋಡಿ ತನ್ನ ಸಂಗಾತಿಯ ಕೈ ಹಿಡಿದುಕೊಂಡು ದೂರ ಕರೆದುಕೊಂಡು ಹೋದಳು.
ಹೋಗುವಾಗ ಇವನನ್ನು ಮತ್ತೊಮ್ಮೆ ನೋಡಿದಳು . ಕಣ್ಣಲ್ಲಿ ನೀರಿತ್ತಾ ? ಅವನಿಗೆ ತಿಳಿಯಲಿಲ್ಲ . ಆದರೆ ಅವಳೆ ಐಶ್ ಎಂದು ಖಾತರಿಯಾಯಿತು. ಹಾಗೆ ನೋಡುತ್ತಲೇ ಇದ್ದ . ಅವಳು ಮರೆಯಾಗುವ ವರೆಗೆ.......

[ಓದುಗರಿಗೆ. ಇಲ್ಲಿ ಐಶ್ ಯಾಕೆ ಹಾಗೆ ಮಾಡಿದಳು ಅಥವ ಅವಳು ಅವಳೇನಾ ಅಥವ ಅಲ್ಲವ ಎಂಬುದನ್ನು ನೀವೆ ಊಹಿಸಿ . ಹಾಗು ನಮ್ಮೊಡನೆ ಹಂಚಿಕೊಳ್ಳಿ]

Wednesday, March 19, 2008

ಆತ

ಆಟೊನಲ್ಲಿ ಬಸ್ ಸ್ಟಾಂಡ್‌ಗೆ ಬಂದಿಳಿದ ಕವಿತಾ ಮಣಭಾರದ ಲಗೇಜ್‌ ಹೊತ್ತುಕೊಂಡು ನಡೆಯುತಿದ್ದಳು. " ಬೆಂಗಳೂರಿಗೆ ಯಾವಾಗ ಹೋಗುತ್ತೇನೋ ಎಂಬಂತೆ ಆಗಿತ್ತು.ಈ ಹಾಳಾದ ಎಕ್ಸಾಮ್ ಇದ್ದಾಗಲೇ ಅಕ್ಕನ ಮದುವೆ ಆದಾಗ ಬಹಳ ಬೇಸರವಾಗಿತ್ತು.ಮದುವೆಗೂ ಹೋಗಲಾಗಿರಲಿಲ್ಲ . ಅಕ್ಕನದು ಲೌ ಮ್ಯಾರೇಜ್ .ಕಳ್ಳಿ ನನಗೆ ಒಂದಿಷ್ಟೂ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ. ಮನದಲ್ಲೇ ಬೈದುಕೊಂಡಳು.ಅಲ್ಲಿದ್ದ ಸಾವಿರಾರು ಕಂಗಳು ಇವಳನ್ನೇ ದಿಟ್ಟಿಸುತ್ತಿದ್ದವು . ಒಬ್ಬನಂತೂ ಇನ್ನೇನು ನುಂಗಿಯೇ ಬಿಡುವೆನು ಎಂಬಂತೆ ಬಾಯಿ ತೆಗೆದಿದ್ದ. ಅದೆಲ್ಲಾ ಸಾಮಾನ್ಯ ವಾಗಿದ್ದರಿಂದ ಗಮನ ಕೊಡದೇ ಬಸ್‌ಗೆಂದು ಇತ್ತ ತಿರುಗಿದವಳಿಗೆ ಶಾಕ್‌ ಆದಂತೆ ಒಬ್ಬ ನಕ್ಕ . ಅಥವ ನಕ್ಕನೇನೊ. ಎಂಥ ಆಕರ್ಷಕ ವ್ಯಕ್ತಿತ್ವ . ಕಣ್ಣನ್ನು ಬೇರೆಡೆಗೆ ತಿರುಗಿಸಲು ಯತ್ನಿಸಿದಳು ಆಗಲಿಲ್ಲ . ಹೃದಯದ ಬಡಿತ ಅವಳಿಗರಿವಿಲ್ಲದಂತೆ ಜೋರಾಗಿತ್ತು.ಆಷ್ಟರಲ್ಲಿ ಬೆಂಗಳೂರಿನ ಬಸ್ ಅಡ್ಡ ಬಂದು ಅವನನ್ನು ಮರೆ ಮಾಡಿತು.
ಯಾವದೋ ಮಾಯೆಗೆ ಒಳಗಾದಂತೆ ಬಸ್ ಹತ್ತಿದವಳಿಗೆ ಮತ್ತೆ ಕಾಣಿಸಿದ್ದು ಅದೇ ಚೆಲುವ. ಸೀಟ್‌ಗಾಗಿ ಹುಡುಕುತಿದ್ದ ಇವಳನ್ನು ಕರೆದು ತನ್ನ ಪಕ್ಕದ ಸೀಟ್ ಕೊಟ್ಟ. ಮಾತಾಡದೇ ಕುಳಿತಳು . ಅವನೇ ಇವಳ ಲಗೇಜ್ ತಂದು ಬಸ್‌ನಲ್ಲಿ ಇಟ್ಟ." ಹೆಲ್ಲೊ ನೀವು ತಪ್ಪು ತಿಳಿಯದೇ ಇದ್ರೆ ನಾನು ನಿಮ್ಮ ಜೊತೆ ಮಾತಾಡ್ತಿರಬಹುದಲ್ಲವಾ? ಯಾಕೆಂದರೆ ಈ ಪ್ರಯಾಣದ ಸಮಯದಲ್ಲಿ ಪಕ್ಕದಲ್ಲಿ ಕುಳಿತೋರೇ ಸ್ನೇಹಿತರು. ಈ 4 ಅವರ್ಸ್ ಬೋರಿಲ್ಲದೇ ಕಳಿಬಹುದು"ಕವಿತ ತಲೆಯಾಡಿಸಿದಳು.ಹೀಗೆ ಪ್ರಾರಂಭವಾದ ಮಾತು ಇಬ್ಬರ ಬಗ್ಗೆ ಇಬ್ಬರ ಇಷ್ಟದ ಬಗ್ಗೆ , ಇಬ್ಬರ ಕನಸಿನ ಬಗ್ಗೆ , ಗುರಿ ಗಳನ್ನೆಲ್ಲಾ ಸುತ್ತಾಡಿ ಬಂತು. ಆ ಸಮಯದಲ್ಲಿ ಅವನ ಹೆಸರು ಹೇಮಂತ್ ಹಾಗು ಎಂ‌ಬಿಎ ಮಾಡಿ ಒಂದು ದೊಡ್ಡ ಕಂಪೆನಿಯಲ್ಲಿ ಇದ್ದಾನೆಂಬುದು ತಿಳಿಯಿತು.ಹೀಗೆ ಮಾತುಕತೆಯಾಗುವ ಸಂದರ್ಭ್ಹದಲ್ಲಿ ಕವಿತ ಒಂದು ಅಂಶವನ್ನು ಗಮನಿಸಿದಳು. ಬೇರೆ ಯಾರಾದರೂ ಆಗಿದ್ದರೆ ಕೈ ತಾಕಿಸುವುದು, ಕಾಲು ತಾಕಿಸುವುದನ್ನಾದರೂ ಮಾಡುತಿದ್ದರು . ಆದರೆ ಹೇಮಂತ್‌ ಹಾಗೆ ಒಮ್ಮೆಯೂ ಮಾಡಲಿಲ್ಲ . ಒಬ್ಬ ಪರ್ಫೆಕ್ಟ್ ಜೆಂಟಲ್ ಮ್ಯಾನ್ ಇರಬೇಕು.ಆತ ಎನೇನೋ ಮಾತನಾಡುತಿದ್ದ. ಕಿವಿ ಕೇಳುತಿದ್ದರೂ ಮನಸ್ಸು ಆಗಲೇ ಒಂದು ಸಣ್ಣ ಕನಸನ್ನು ಸೃಷ್ಟಿಸಿತ್ತು. ಹೇಮಂತ್ ತನ್ನನ್ನು "ಐ ಲೌ ಯು " ಎಂದು ಹೇಳಿದಂತೆ ತಾನು ಒಪ್ಪಿದಂತೆ ಇಬ್ಬರ ಮನೆಯಲ್ಲೂ ಇದಕ್ಕೆ ಒಪ್ಪಿಗೆ ಸಿಕ್ಕಿ ಮದುವೆಯೂ ಆದ ಹಾಗೆ ಏನೆನೋ ಕನಸು .ಹೀಗೆ ಕನಸು ಕಾಣುವುದು ಇದೇ ಮೊದಲ ಸಲವಲ್ಲ ಹಿಂದೆಯೂ ಕಾಲೇಜಿನಲ್ಲಿ ರಿಶಿಯನ್ನು ಕಂಡಾಗ ಹೀಗೆ ಆಗಿತ್ತು ಆದರೆ ರಿಶಿ ರಶ್ಮಿಯ ಹಿಂದೆ ಬಿದ್ದಾಗ ಆ ಕನಸು ಮಾಯವಾಗಿತ್ತು. ಅಷ್ಟೇಕೆ ಮ್ಯಾತೆಮೆಟಿಕ್ ಲೆಕ್ಚ್‌ರ್ರ್ ಸಂದೀಪ್‌ರನ್ನು ಕಂಡಾಗಲೂ ಹೀಗೆ. ಆದರೆ ಅವರ ಮದುವೆ ಆಗಲೇ ಆಗಿತ್ತು .ಹಾಗೆಂದು ಅವಳನ್ನು ಯಾರೂ ಇಷ್ಟ ಪಡಲಿಲ್ಲವೆಂದಲ್ಲ .ಆದರೆ ಅವಳಿಗಿಷ್ಟವಾದವರಿಗೆ ಅವಳು ಇಷ್ಟಾ ವಾಗಿರಲಿಲ್ಲ. ಅವಳನ್ನು ಬಯಸಿದವರು ಅವಳಿಗೆ ಹಿಡಿಯಲಿಲ್ಲಮಧ್ಯದಲ್ಲಿ ಬಸ್ ನಿಂತಾಗ ಹೇಮಂತ್ ಊಟ ಕೊಡಿಸಿದ .
ಹೀಗೆ ಮಾತನಾಡುತ್ತಲೇ ಬೆಂಗಳೂರು ಬಂದೇ ಬಿಟ್ಟಿತು. ಒಂದೇ ಕ್ಷಣದಲ್ಲಿ ಹೇಮಂತ್ ಇವಳ ಬ್ಯಾಗ್ , ಲಗೇಜ್ ಎಲ್ಲಾ ಹೊತ್ತುಕೊಂಡು ಇಳಿದೇ ಬಿಟ್ಟ, "ಹೆಲ್ಲೊ ನಿಲ್ಲಿ ನಿಲ್ಲಿ" ಎಂದು ಎಷ್ಟು ಹೇಳಿದರೂ ಕೇಳದೇ ಕೆಲ ಕ್ಶಣದಲ್ಲಿ ಜನರಲ್ಲಿ ಮರೆಯಾಗಿ ಹೋದ . ನಯ ವಂಚಕ. ಬರೀ ಮಾತಿನಲ್ಲಿ ಮರುಳು ಮಾಡಿ ಎಲ್ಲವನ್ನು ಹಾರಿಸಿಕೊಂಡು ಹೋದ.ಕವಿತಾಗೆ ಸಂದರ್ಭದ ಅರಿವಾಗುತ್ತಲ್ಲೇ ಅಳು ಬಂದು ಬಿಟ್ಟಿತು . ತನ್ನ ಪುಸ್ತಕ, ದುಡ್ಡು , ಮೊಬೈಲ್ , ಬಟ್ಟೆ , ಎಲ್ಲವನ್ನೂ ಕಳೆದುಕೊಂಡಿದ್ದಳು.ಮನೆಯಲ್ಲಿ ಏನು ಹೇಳುವುದು . ಯಾವನೋ ತನ್ನ ಲಗೇಜ್ ಹೊಡೆದುಕೊಂಡು ಹೋದ ಎಂದರೆ ಹೇಗೆ ಅಂತ ಕೇಳುತ್ತಾರೆ. ಈ ವಿಷಯವನ್ನು ಹೇಗೆ ಹೇಳುವುದು . ದಿಕ್ಕೆಟ್ಟ್ವಳಂತೆ ನಿಂತಿದ್ದಳು. ಅಷ್ಟರಲ್ಲೆ ಕಾಣಿಸಿದಳು ಅಕ್ಕಅರೇ ಅಕ್ಕನ ಬಳಿಯಲ್ಲೇ ತನ್ನೆಲ್ಲ ಲಗೇಜ್ ಇದೆ. ಹಾಗಿದ್ದರೇ ಆ ಈಡಿಯಟ್ ....................ಆತ ಅಕ್ಕನ ಬಳಿಯಲ್ಲೇ ನಿಂತಿದ್ದ . ಇಬ್ಬರೂ ಮುಸಿ ಮುಸಿ ನಗುತ್ತಿದ್ದರು."ಹೋದೆಯಾ ಮೋಸ ಕವಿತಾ . ಹೇಗಿತ್ತು ನಿಮ್ಮ ಭಾವನ ನಾಟಕ . ಯಾವಾಗಲೂ ನನ್ನ ಗೋಳು ಹಾಕ್ಕೊಳಿತಿದ್ದೆಯಲ್ಲಾ. ಇವತ್ತು ಹೇಗಿತ್ತು, ನಿಮ್ಮ ಭಾವ ನಿನ್ನ ಕರ್ಕೊಂಡು ಬರ್ತೀನಿ ಅಂತ ಹೇಳಿದ್ದರು. ಹಾಗೆ ಅವಳಿಗೆ ನೀವು ಯಾರು ಅಂತ ಹೇಳ್ಬೇಡಿ ಅಂತ ನಾನೆ ಹೇಳಿದ್ದೆ "ಕೆಲ ಕ್ಶಣ ದಲ್ಲಿ ಎಲ್ಲಾ ಅರಿವಾಗಿತ್ತು. ಕವಿತ ಅವಳ ಭಾವನನ್ನು ನೋಡಿರಲಿಲ್ಲವಾದ್ದರಿಂದ ಹೇಮಂತ್ ಯಾರು ಎಂದು ಅವಳಿಗೆ ತಿಳಿಯಲಿಲ್ಲ ." ಸಾರಿ ಕವಿತ . ನಿಮ್ಮಕ್ಕನ ಆಜ್ನೆ ಮೀರಬಾರದು ಅಂತ ನಾನು ನಿಂಗೆ ವಿಷಯ ಹೇಳಲಿಲ್ಲ" ಹೇಮಂತ್ ಮತ್ತೊಮ್ಮೆ ನಕ್ಕ.ಕೆಲ ನಿಮಿಷ ಮನಸ್ಸು ಮುದುಡಿತು. ಆದರೂ ಇಂತಹ ಗಂಡು ಅಕ್ಕನಿಗೆ ಸಿಕ್ಕಿದ್ದಕ್ಕಾಗಿ ಮನಸ್ಸು ಖುಷಿ ಪಟ್ಟಿತು . ರಿಶಿ, ಸಂದೀಪ್ ರಂತೆ ಇದೂ ಒಂದು ಘಟನೆ ಎಂದುಕೊಂಡು ಸುಮ್ಮನಾದರೆ ಆಯಿತು ಎಂದುಕೊಂಡು ಕಾರನ್ನೇರಿದಳು.