ಆ ಹುಡುಗ 21ರ ಆಸುಪಾಸಿನವನಿರಬೇಕು . ಪ್ರತಿಷ್ಟಿತ ಕಾಲೇಜಿನಲ್ಲಿ ಉತ್ತಮ ವಿದ್ಯಾರ್ಥಿ ಎನಿಸಿಕೊಂಡಿದ್ದ. ಓದಿನಲ್ಲಿ ನಡತೆಯಲ್ಲಿ ನಂಬರ್ 1 . ಯಾವ ಹುಡುಗಿಯರ ಹಿಂದೆ ಬಿದ್ದ ಉದಾಹರಣೆ ಇರಲಿಲ್ಲ
ಹೀಗಿದ್ದ ಹುಡುಗ ಒಮ್ಮೆ ಚಾಟ್ ಮಾಡುವಾಗ ಕಾಣಿಸಿತು ಆ ಹೆಸರು "ಐಶ್ವರ್ಯ" ಹೆಸರಿನ ಮಹಾತ್ಮೆ ಯಿಂದಲೋ ಅಥವ ಕುತೂಹಲದಿಂದಲೋ ಆ ಹೆಸರಿನ ಜೊತೆ ಚಾಟ್ ಮಾಡಿದ. ಆ ಕಡೆಯವಳು ಮಂಗಳೂರಿನವಳು ಎಂದು ತಿಳಿಯಿತು. ಅವಳ ಹೆಸರೇ ಐಶ್ವರ್ಯ ಎಂದೂ ಅರಿವಾಯಿತು ಚಾಟ್ ಮಾಡುತ್ತಾ ಮಾಡುತ್ತಾ ಅವರಿಬ್ಬರ ಆಸಕ್ತಿ, ಗುರಿ , ಓದು ಎಲ್ಲಾ ಒಂದೇ ಅಗಿದ್ದು ಕೂಡ ತಿಳಿಯಿತು. ಮತ್ತೆ ಇನ್ನೇನು ಬೇಕು ಸ್ನೇಹಕ್ಕೆ . ನೆಟ್‌ನಲ್ಲಿ ಸ್ನೇಹ ಬೆಳೆಯಿತು. ನಂತರ ಕೆಲದಿನಗಳಲ್ಲಿ ಸ್ನೇಹ ಪ್ರೀತಿಯಾಗಿ ಬದಲಾಗುವಾಗ ಆತನ ಸ್ನೇಹಿತರು ಎಚ್ಚರಿಸಿದರು" ಆ ಕಡೆ ಇರುವವರು ಹುಡುಗಿ ಎಂದು ಹೇಗೆ ಹೇಳುವೆ? ಮೊದಲು ಫೋನ್ ನಂಬರ್ ಕೇಳು" ಎಂದರು. ಈತ ಕೇಳಿದ ಆಕೆ ತಾನು ಚಾಟ್ ಮಾಡುವ ಸೆಂಟರ್‌ನ ನಂಬರ್ ಕೊಟ್ಟಳು . ಈ ಹುಡುಗ ಅಲ್ಲಿಗೆ ಫೋನ್ ಮಾಡಿದ . ಅಲ್ಲಿ ಫೋನ್ ಎತ್ತಿದ್ದು ಆಕೆಯೆ . ಆಕೆಯ ಮಧುರ ವಾಣಿ ಕೇಳುತ್ತಲೇ ಈ ಹುಡುಗ ಕುಣಿದಾಡಿದ . ಫೋನ್‌ನಲ್ಲಿ ಕೆಲ ವಿಚಾರಗಳನ್ನು ಹಂಚಿಕೊಂಡರು. ಕೆಲದಿನಗಳಾದ ಮೇಲೆ ಅವಳ ಫೋಟೊ ಕೇಳಿದ ಆಕೆ ಕಳಿಸಿದಳು . ಫೋಟೊ ನೋಡಿ ದಂಗಾದ. ಅಷ್ಟು ಸುಂದರಿಯಾಗಿದ್ದಳು. ಸಾಕ್ಷಾತ್ ಐಶ್ ಸಹ ಅವಳ ಮುಂದೆ ಏನೂ ಇಲ್ಲ ಅನಿಸಿತು. ಅಂತಹ ಸುಂದರಿ ತನಗೆ ಸಿಕ್ಕಿದ್ದು ತನ್ನ ಲಕ್ ಎಂದೆ ಭಾವಿಸಿದ.
ನಂತರ ಪ್ರೇಮವನ್ನು ನಿವೇದಿಸಿದ . ಅವಳಿಂದ ಒಪ್ಪಿಗೆ ಸಿಕ್ಕಿದ ಮೇಲೆ ಶುರುವಾಯಿತು ಇವರ ಮೈಲ್ ಲವ್.
ಅವನಿಗೆ ಓದು ಬೇಕಿರಲಿಲ್ಲ .ಅವಳ ಮೇಲ್ ಒಂದು ದಿನ ಬರಲಿಲ್ಲವೆಂದರೂ ಚಡಪಡಿಸುತಿದ್ದ.
ಹೀಗಿದ್ದಾಗ ಬಂತು ವ್ಯಾಲೆಂಟಿನೆ ಡೇ . ಏನು ಉಡುಗೊರೆ ಕೊಡುವೆ ಎಂದು ಕೇಳಿದಳು. ಕಾದು ನೋಡು ಎಂದು ಮೇಲ್ ಕಳಿಸಿದ . ಕೆಲ ದಿನಗಳಲ್ಲಿ ಅವನ ಎದೆಯ ಮೇಲೆ ತೋಳಿನ ಮೇಲೆ ಐಶ್ವರ್ಯ ಎಂಬ ಹೆಸರು ಹಚ್ಚೆ ಹಾಕಿಸಿಕೊಂಡಿದ್ದ . ನಿನಗಾಗಿ ಏನು ಮಾಡಲೂ ಸಿದ್ದ ಎಂದು ರಕ್ತದಲ್ಲಿ ಬರೆದ ಹಾಳೆ ಹಾಗು ತನ್ನ ಎದೆ ತೋಳಿನ ಮೇಲೆ ಬರೆದು ಕೊಂಡಿದ್ದ ಹಚ್ಚೆಯನ್ನು ಫೋಟೊ ತೆಗೆದು ಸ್ಕಾನ್ ಮಾಡಿ ಕಳಿಸಿದ
ಅಷ್ಟೇ ನಂತರದ ದಿನಗಳಲ್ಲಿ ಅವಳಿಂದ ಒಂದು ಮೈಲ್ ಅಥವ ಒಂದು ಫೋನ್ ಸಹ ಬರಲಿಲ್ಲ . ಕೆಲ ದಿನಗಳು ಕಾದು ಆ ಸೆಂಟರ್‌ಗೆ ಫೋನ್ ಮಾಡಿದ . ಅಲ್ಲಿ ಆ ಹೆಸರಿನವರು ಯಾರು ಇಲ್ಲವೆಂದರು. ನಂತರ ಅವಳು ಹೇಳಿದ್ದ ಕಾಲೇಜಿಗೆ ಫೋನ್ ಮಾಡಿ ವಿಚಾರಿಸಿದರೆ ಅಲ್ಲೂ ಅದೇ ಉತ್ತರ.
ಈ ಹುಡುಗ ಗೊಂದಲದಿಂದ ಹಣ್ಣಾಗಿದ್ದ . ಯಾರೋ ತನ್ನ ಐಶ್ ಅನ್ನು ಎಗರಿಸಿದ್ದಾರೆ. ಅವಳು ಆಪತ್ತಿನಲ್ಲಿದ್ದಾಳೆ ಎಂದುಕೊಂಡು ಅವಳನ್ನು ನೋಡಲು ಅವಳಿರುವ ಮಂಗಳೂರಿಗೆ ಹೋಗಬೇಕೆನ್ನುವಾಗ ಅವನ ಮೇಲ್‌ಗೆ ಬಂತೊಂದು ಪತ್ರ
ಅನಾಮಿಕ ಎಂದಿದ್ದ್ ಆ ಪತ್ರ ಹೀಗಿತ್ತು
ಹಾಯ್
ನಿಮಗೆ ವಿಷಯ ತಿಳಿಸುವ ಮೊದಲು ನಿಮ್ಮ ಕ್ಷಮೆಯನ್ನು ಕೇಳುವೆ.
ನಾನು ಮಂಗಳೂರಿನ ಒಬ್ಬ ಹುಡುಗ. ಹುಡುಗಿಯರ ಹಿಂದೆ ಬೀಳುವ ಹುಡುಗರನ್ನು ಗೋಳು ಹೊಯ್ದುಕೊಳ್ಳುವುದೇ ನನ್ನ ಕೆಲಸ. ನಾನು ಮಿಮಿಕ್ರಿಯಲ್ಲಿ ಪರಿಣಿತ.ನೀವು ಐಶ್ ಎಂದು ಭಾವಿಸಿ ಮಾತನಾಡಿದ್ದು ಚಾಟ್ ಮಾಡಿದ್ದು ನನ್ನೊಡನೆಯೇ. ನಾನು ಕಳಿಸಿದ ಫೋಟೊ ನಮ್ಮ ಅಜ್ಜಿಯ ಚಿಕ್ಕ ವಯಸ್ಸಿನದು . ಅವರು ಈಗ ಭೂಮಿಯ ಮೇಲೆ ಇಲ್ಲ ಹಾಗಾಗಿ ಅವರ ಫೋಟೊವನ್ನು ಬಣ್ಣ ಹಚ್ಚಿ ಅದಕ್ಕೆ ಮಾಡ್ ಉಡುಪು ಆಂಟಿಸಿ ಕಳಿಸಿದೆ. ನಾನು ಈ ರೀತಿ ಎಲ್ಲರಿಗೂ ಮಾಡುತ್ತಿದ್ದೆ. ಆದರೆ ನಿಮ್ಮ ಪ್ರೇಮದ ತೀವ್ರತೆ ಅದಕ್ಕೆ ನೀವು ಕೊಡುತಿದ್ದ ಗೌರವ ನನ್ನನ್ನು ಮೂಕನನ್ನಾಗಿ ಮಾಡಿದೆ. ಇನ್ನೂ ನಿಮ್ಮನ್ನ ಆ ಪ್ರೇಮದ ಹುಚ್ಚಿನಲ್ಲಿ ಇಡುವುದು ಸರಿಯಲ್ಲ ಅನಿಸಿತು . ಆ ಐಶ್ವರ್ಯ ಎನ್ನುವುದು ಒಂದು ಕಲ್ಪನೆ . ಅದನ್ನು ಮರೆತು ಬಿಡಿ
ಯಾರೋ ಗೊತ್ತಿಲ್ಲದವಳಿಗಾಗಿ ನಿಮ್ಮ ರಕ್ತ , ದೇಹವನ್ನು ಹಾನಿ ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ
ಮತ್ತೊಮ್ಮೆ
ನಿಮ್ಮ ಭಾವನೆಗಳೊಂದಿಗೆ ಚೆಲ್ಲಾಟ ವಾಡಿದ್ದಾಕ್ಕಾಗಿ ಕ್ಷಮಿಸಿ
ಅನಾಮಿಕ
ಮೇಲ್ ನೋಡಿ ಏನು ಮಾಡಬೇಕೊ ಎಂದು ತಿಳಿಯಲಿಲ್ಲ . ಅವಳು ಕಲ್ಪನೆ ಎಂದು ಮನಸ್ಸು ಒಪ್ಪಲು ಸಾಧ್ಯವಿರಲಿಲ್ಲ . ರೂಮಿಗೆ ಹೋಗಿ ಬಿಕ್ಕಳಿಸಿ ಅಳಲಾರಂಭಿಸಿದ.
8 ವರ್ಷಗಳ ನಂತರ
ಆ ಹುಡುಗ ಈಗ ಗೃಹಸ್ತನಾಗಿ ಬದಲಾಗಿದ್ದ. ಹೆಂಡತಿಯ ಬಲವಂತ ತಾಳಲಾರದೆ ಅವಳನ್ನು ಮಲ್ಪೆ ಬೀಚ್‌ಗೆ ಕರೆದು ತಂದಿದ್ದ . ಹೆಂಡತಿ ಮಗನೊಡನೆ ಆಟವಾಡುತ್ತಿದ್ದಾಗ ,
ಆ ಜೋಡಿ ಕಣ್ಣಿಗೆ ಬಿತ್ತು ಆಕೆಯ ಮುಖ ಬಹಳ ಪರಿಚಿತ ಅನ್ನಿಸಿತು. ಮಿಂಚು ಹೊಡೆದಂತಾಯಿತು. ಹೌದು ಅವಳೇ ತನ್ನ ಐಶ್ವರ್ಯ . ಫೋಟೋದಲ್ಲಿ ನೋಡಿದ್ದ ಮುಖ ಅವಳದೇ... ಹಾಗಿದ್ದರೇ ಅವಳು ಕಲ್ಪನೆಯಲ್ಲವಾ?
ಆಕೆ ಇವನನ್ನು ಒಮ್ಮೆ ನೋಡಿ ತನ್ನ ಸಂಗಾತಿಯ ಕೈ ಹಿಡಿದುಕೊಂಡು ದೂರ ಕರೆದುಕೊಂಡು ಹೋದಳು.
ಹೋಗುವಾಗ ಇವನನ್ನು ಮತ್ತೊಮ್ಮೆ ನೋಡಿದಳು . ಕಣ್ಣಲ್ಲಿ ನೀರಿತ್ತಾ ? ಅವನಿಗೆ ತಿಳಿಯಲಿಲ್ಲ . ಆದರೆ ಅವಳೆ ಐಶ್ ಎಂದು ಖಾತರಿಯಾಯಿತು. ಹಾಗೆ ನೋಡುತ್ತಲೇ ಇದ್ದ . ಅವಳು ಮರೆಯಾಗುವ ವರೆಗೆ.......
[ಓದುಗರಿಗೆ. ಇಲ್ಲಿ ಐಶ್ ಯಾಕೆ ಹಾಗೆ ಮಾಡಿದಳು ಅಥವ ಅವಳು ಅವಳೇನಾ ಅಥವ ಅಲ್ಲವ ಎಂಬುದನ್ನು ನೀವೆ ಊಹಿಸಿ . ಹಾಗು ನಮ್ಮೊಡನೆ ಹಂಚಿಕೊಳ್ಳಿ]