Wednesday, March 23, 2011

ಕ್ಷಮಿಸು ನಾ ರಾಧೆಯಲ್ಲ ಭಾಗ ೨

ಅಂದು ಮತ್ತೆ ಕಿರಣ್ ಬಂದ ."ಪ್ರಿಯಾ" ಮೊತ್ತ ಮೊದಲ ಬಾರಿಗೆ ನನ್ನ ಹೆಸರನ್ನು ಕರೆದಾಗ ಮೈಯಲ್ಲಿ ಎನೋ ಅರಿಯದ ಪುಳಕ. ಅಭಿ ಮೊದಲ ರಾತ್ರಿ ಹತ್ತಿರ ಬಂದಾಗಲೂ ಹೀಗಾಗಿರಲಿಲ್ಲವೇನೋ "ಸಾರಿ ನಾನು ತುಂಬಾ ದಿನ ಹೀಗೆ ನಿರೀಕ್ಷೆ ಇಟ್ಟುಕೊಂಡು ಇರೋಕೆ ಆಗ್ತಾ ಇಲ್ಲ, ನಾನು ಹೇಳುತ್ತಿರೋದು ಮಾಡುತ್ತಿರೋದು ತಪ್ಪು ಅಂತ ನನಗೂ ಗೊತ್ತು . ಆದರೂ ಒಂದು ಮಾತನ್ನು ನಿಮ್ಮ ಹತ್ತಿರ ಕೇಳಲೇಬೇಕು ಅಂತ ನಿರ್ಧಾರ ಮಾಡಿದ್ದೇನೆ"
ನನಗೆ ಗೊತ್ತಿತ್ತು ಅವನು ಏನು ಕೇಳುತ್ತಾನೆಂದು ಆದರೆ ನಾನು ಅದಕ್ಕೆ ಮಾನಸಿಕವಾಗಿ ಸಿದ್ದಳಿರಲಿಲ್ಲ . ಹೇಗಾದರೂ ತಪ್ಪಿಸಿಕೊಳ್ಳಬೇಕಿತ್ತು. "ಕಿರಣ್ ನನಗೆ ಇವತ್ತು ಮನಸು ಸರಿ ಇಲ್ಲ . ಮಾತಿಗಿಂತ ಏಕಾಂತವೇ ಲೇಸಾಗಿದೆ . ಇಂದು ನಾನು ಯಾವ ಮಾತಿಗೂ ಬರೋದಿಲ್ಲ. ಲೀವ್ ಮಿ ಅಲೋನ್ ಪ್ಲೀಸ್"
ಕಿರಣ್ ಸಪ್ಪೆ ಮುಖ ಮಾಡಿಕೊಂಡು ಹೊರಟು ಹೋದ .
ಮನದಲ್ಲಿ ಏನೋ ನೋವು.ತನಗೂ ಅವನಿಗೂ ಯಾವರೀತಿಯಲ್ಲಿ ಸಮ?ವಯಸ್ಸಿನಲ್ಲಿ ಹುದ್ದೆಯಲ್ಲಿ ಎಲ್ಲಾ ರೀತಿಯಿಂದಲೂ ಆತ ಇನೂ ಚಿಗುರು ನಾನೋ ಬಲಿತ ಮರ.
ಚಿಗುರಿಗೆ ಮರ ಆಸರೆಯಾಗಬಲ್ಲುದೆ ಹೊರತು ಮರಕ್ಕೆ ಚಿಗುರು ಎಲ್ಲಿಯ ಆಸರೆ.ಆದರೇನು ಮನಸ್ಸು ಮರ್ಕಟ , ವಿವೇಕದ ಮಾತನ್ನು ಆಲಿಸಲು ಒಪ್ಪುತ್ತಿಲ್ಲ.
ವಿವೇಕ ಹಾಗು ಆಸೆಯ ಮಧ್ಯೆ ಯಾವತ್ತಿಗೂ ಆಸೆಗೆ ಜಯ ಹಾಗೆಯೇ ನನಗೂ ಆಗುತ್ತೇನೋ . ?
ಮುಂದೊಂದೆರೆಡು ದಿನ ಅವನನ್ನು ಭೇಟಿಯಾಗುವ ಅವಕಾಶ ತಪ್ಪಿಸಿಕೊಂಡೆ
ಆದರೂ ಅವನನ್ನು ನೋಡಬೇಕೆಂಬ ಆಸೆ ಬಲವಾಗಿಯೇ ಇತ್ತು.ಅದರಿಂದ ತಪ್ಪಿಸಿಕೊಳ್ಳಲಾಗಲಿಲ್ಲ
ರಾತ್ರಿಗಳಲ್ಲಿ ಅಭಿಯಿಂದ ದೂರ ಉಳಿಯಲಾರಂಭಿಸಿದೆ.
ಅಭಿಗೂ ಅಂತಹ ಅನುಮಾನ ಬರಲಿಲ್ಲ.
ಇಂತಹ ಇಕ್ಕಟ್ಟಿನ ಸಂಧರ್ಭದಲ್ಲೆ ಜರ್ಮನಿಯ ಪ್ರಾಜೆಕ್ಟ್ ಒಂದಕ್ಕೆ ನನ್ನ ಮೂರು ತಿಂಗಳ ಸಮಯ ಬೇಕಿತ್ತು.
ಇಂತಹದೊಂದು ಅವಕಾಶಕ್ಕೆ ನಾನು ಕಾಯುತ್ತಿದ್ದೆ. ನಾನು ನಿರ್ಧರಿಸಬೇಕಿತ್ತು. ಅದಕ್ಕೆ ಎಲ್ಲರಿಂಡ ದೂರವಾಗಿ ಇರುವುದು ಬಹು ಮುಖ್ಯವಾಗಿತ್ತು.
ಚಿದುವನ್ನು ನೋಡಿಕೊಳ್ಳಲು ತಾಯಿಯನ್ನು ಬರಹೇಳಿದೆ.
ಅಭಿ ಖುಶಿಯಾಗಿಯೇ ಕಳಿಸಲು ಒಪ್ಪಿದ.
ಬೇಸರವಾಗಿದ್ದು ಮಾತ್ರ ಕಿರಣ್‌ಗೆ
"ಪ್ರಿಯಾ ನಾನು ನನ್ನಮನಸಿನ ಮಾತು ಹೇಳೋಕೆ ನೀವು ಸಮಯವನ್ನೇ ಕೊಡಲಿಲ್ಲ ಈಗ ಮೂರು ತಿಂಗಳು ನೀವಿಲ್ಲದೆ ನಾನು ಹೇಗಿರಲಿ?"
ನಾನು ಮೌನವಾಗಿದ್ದೆ. ನನಗೆ ಗೊತ್ತು ನನ್ನ ಪ್ರತಿಯೊಂದು ಮಾತು ಬಹಳ ಎಚ್ಚರಿಕೆಯಿಂದ ಆಡಬೇಕಿದೆ. ನನ್ನ ಮಾತು ಅವನಲ್ಲಿ ಯಾವ ಆಸೆಯನ್ನೂ ಉಂಟು ಮಾಡಬಾರದು .
ಈಗ ನಾನು ಎಲ್ಲರಿಂದ ದೂರದಲ್ಲಿ ಬಹುದೂರದಲ್ಲಿದ್ದೇನೆ
ನನ್ನ ಭವಿಷ್ಯದ ಹೆದ್ದಾರಿಯನ್ನು ಹುಡುಕುತ್ತಿದ್ದೇನೆ
ಬಂದು ಎರೆಡು ದಿನಗಳಾಗಿದ್ದವು
ಕಿರಣ್ ಎರೆಡು ಸಲ್ ಫೋನ್ ಮಾಡಿದ್ದ. ಜೀವನದಲ್ಲಿ ಏನೋ ಕಳೆದುಕೊಂಡಿದ್ದೇನೆ ಅನ್ನಿಸುತ್ತಿದೆ ಎಂದು ಮರುಗಿದ್ದ
ಅಭಿಯ ಮೈಲ್ ಮಾತ್ರ ಬಂದಿತ್ತು. ಮನೆಯ ವಾರ್ತೆಗಳ ಬಗ್ಗೆ ಕೊರೆದಿದ್ದ. ತನ್ನ ಕೆಲಸ ಹಾಗು ಮನೆಯ ಮಧ್ಯೆ ಸಮಯವೇ ಇಲ್ಲದಂತಾಗಿದೆ ಎಂದಿದ್ದ.
ನನ್ನ ಕೆಲಸವೂ ಸಾಗುತ್ತಿತ್ತು
ಕಿರಣನ ಇಲ್ಲದಿರುವಿಕೆ ಮೊದಮೊದಲು ಕಾಡತೊಡಗಿತು .
ಅವನ ನೆನಪು ಹಿಂಸಿಸಿತು. ನಂತರ ಮೂರು ದಿನಕ್ಕೆ ಮರೆಯಲಾರಂಭಿಸಿದೆ.
ಚಿದು ಬಳಿಯಲ್ಲಿ ಇಲ್ಲದಿರುವುದು ಹೃದಯಕ್ಕೆ ನೋವುಂಟಾಗತೊಡಗಿತು
ಅವನ ಅಮ್ಮ ಎಂಬ ಮಾತು ತಂಟೆ, ಚೇಷ್ಟೇ ನೆನಪಾಗತೊಡಗಿದವು
ನಾಲ್ಕನೆಯದಿನಕ್ಕೆ
ಅಭಿ ಫೋನ್ ಮಾಡಿದ್ದ
"ಪ್ರಿಯಾ ನೀನಿಲ್ಲ ಅಂದ್ರೆ ಎಷ್ಟು ಬೇಜಾರಾಗುತ್ತೆ ಅಂತ ನಂಗೆ ಈಗ ಗೊತ್ತಾಗ್ತಿದೆ. ನಿನ್ನ ಇಂಪಾರ್ಟೆನ್ಸ್ ನಂಗೆ ಈಗ ತುಂಬಾ ಗೊತ್ತಾಗ್ತಿದೆ. ಯಾವಾಗ ಮೂರು ತಿಂಗಳು ಕಳೆಯುತ್ತೋ ಅನ್ನಿಸ್ತಿದೆ"
ಚಿದೂ ಫೋನ್‍ನಲ್ಲೆ ಅಳಲಾರಂಭಿಸಿದ. ನನಗೂ ಅಳು ಉಕ್ಕಿತು.
ಚಿದು ಹುಟ್ಟಿದ ದಿನದ ನೆನಪಾಯ್ತು.
ಬೆನ್ನ ಹಿಂದೆಯೇ ನನ್ನ ಅಭಿಯ ದಾಂಪತ್ಯ ಜೀವನದ ಸುಖೀ ಕ್ಷಣಗಳು ಅರಿವಿಗೆ ಬರಲಾರಂಭಿಸಿದವು.
ಕಿರಣ್ ಮತ್ತೆ ಮೈಲ್ ಮಾಡಿದ
"ಪ್ರಿಯಾ ಐ ಅಮ್ ಬಿಕಮಿಂಗ್ ಮ್ಯಾಡ್. ಯಾವಾಗ ನೋಡ್ತೀನೋ ಅಂತ ಅಗಿದೆ, ನಾನು ನಿಮ್ಮ ಹತ್ತಿರ ತುಂಬಾ ಅಂದ್ರೆ ತುಂಬಾ ಮಾತಾಡಬೇಕಿದೆ. ಅದೆಲ್ಲಾ ಹೇಳದೆ ಎಲ್ಲಿ ಸತ್ತು ಹೋಗ್ತೀನೊ ಅಂತನ್ನಿಸ್ತಿದೆ"ಅವಲತ್ತುಕೊಂಡ
ರಿಪ್ಲೈ ಮಾಡಲಿಲ್ಲ ಈ ಸಲ.
ಹೀಗೆ ಮೂರು ಸಲವಾದ ನಂತರ ಕಿರಣ್ ಮತ್ತೆ ಮೈಲ್ ಮಾಡಲಿಲ್ಲ. ಮಾಡಿದರೂ ಕೆಲಸದ ವಿಷಯಕ್ಕೆ ಮಾತ್ರ ಮಾಡಿದ್ದಷ್ಟೆ.
ಎರೆಡು ತಿಂಗಳು ಕಳೆಯಿತು.
ಮನಸ್ಸು ಸದೃಡವಾಗಿತ್ತು
ರಾಧೆ ಏಕೆ ಕೃಷ್ಣನ ಮಡದಿಯಾಗಲಿಲ್ಲ ಎಂಬ ಪ್ರಶ್ನೆ ನನ್ನನ್ನು ಆಗಾಗ ಕಾಡಿತ್ತು .ಆದರೆ ಅದಕ್ಕೆ ಉತ್ತರ ಇತ್ತೀಚಿಗೆ ಹೊಳೆಯಲಾರಂಭಿಸಿತು.
ನನಗೆ ಬೇಕಿದ್ದುದ್ದು ನನಗಾಗಿ ಬೇಡುವ ಜೀವ ನಾನಿಲ್ಲದೆ ಬದುಕೇಇಲ್ಲ ಎನ್ನುವ ಮನಸ್ಸು ಅದು ನನ್ನ ಅಭಿಯದೇ ಆಗಿತ್ತು.
ಸಂಸಾರದ ಜವಾಬ್ದಾರಿಯ ಕಾರಣದಿಂದ ಒಬ್ಬರಿಗೊಬ್ಬರು ಅಪರಿಚಿತರಂತೆ ಇದ್ದರೂ ಜೀವನದಲ್ಲಿ ಇಬ್ಬರಿಗೂ ಇಬ್ಬರೂ ಬೇಕಿದ್ದರು
ಆದರೆ ಅದು ನನಗೆ ಕಾಣದೇ ಹೋಯ್ತು. ಕಿರಣನ ಆಕರ್ಷಣೆ ಆ ಅಗತ್ಯವನ್ನು ಮರೆಮಾಚಿತ್ತು.
ಅಭಿಯ ಸಾಂಗತ್ಯದ ಕೊರತೆ ಕಾಡಿದಷ್ಟು ಕಿರಣ್‍ನ ನೆನಪು ಕಾಡಲಿಲ್ಲ.
ಪ್ರಾಜೆಕ್ಟ್ ಯಶಸ್ವಿಯಾಗಿ ಮುಗಿಯಿತು.
ನನ್ನ ಭವಿಷ್ಯದ ಹೆದ್ದಾರಿಯೂ ಸ್ಪಷ್ಟವಾಯ್ತು.
ಮೂರುತಿಂಗಳ ಸುಧೀರ್ಘ ಅವಧಿಯ ನಂತರ ನಾನು ಮನೆಗೆ ಹೋಗಿದ್ದಕ್ಕೆ ಮನೆಯಲ್ಲಿ ಸಂತಸ , ಸಂಭ್ರಮ, ಅಭಿಯಂತೂ "ಇನ್ನೊಮ್ಮೆ ಈ ತರಹ ದೂರ ಕಳಿಸಿದರೆ ಕೆಲಸವೇ ಬೇಡ . ನಂಗೆ ನೀನಿರದೆ ಇರಕಾಗಲ್ಲ. " ಎಂದು ಬೈದ.
ಚಿದೂವಂತೂ ನನ್ನ ಸೆರಗನು ಕಟ್ಟಿಕೊಂಡೆ ಓಡಾಡುತ್ತಿದ್ದ .
ಮೊದಲಬಾರಿಗೆ ನನ್ನ ಅವಶ್ಯಕತೆ, ಜವಾಬ್ದಾರಿ, ಸ್ಥಾನ ಅರ್ಥವಾಯ್ತು. ಇದನ್ನು ಬಿಟ್ಟು ಪ್ರೇಮವೆಂಬ ಮಾಯಾಜಿಂಕೆಯ ಹಿಂದೆ ಓಡುತ್ತಿದ್ದೆನಲ್ಲ ನಾನೆಂಥಾ ಫೂಲ್ ಛೆ.
ಆಫೀಸಿಗೆ ಬಂದೆ .
ಕಿರಣ್‍ನ್ ಕಣ್ಣಲ್ಲಿ ಕಾತುರ, ಸಂತೋಷ ಎಲ್ಲವೂ ಇದ್ದವು.
"ಪ್ರಿಯಾ ಕೊನೆಗೂ ಬಂದಿರಲ್ಲ . ನಿಮ್ಮ್ಮ ಹತ್ತಿರ ತುಂಬಾ ಮಾತಾಡಬೇಕಿದೆ"
ನಾನು ಈ ಸಲ ತಲೆ ಕಣ್ಣನ್ನೇ ದಿಟ್ಟಿಸುತ್ತಾ ನುಡಿದೆ
"ನಿಮ್ಮನ್ನ ಇಲ್ಲಿಂದ ಜಯನಗರ ಬ್ರಾಂಚ್‌ಗೆ ಹಾಕಿದಾರೆ ಅಲ್ಲಿ ನಿಮ್ಮ ಅವಶ್ಯಕತೆ ಇದೆ."
"ಹಾಕಿದ್ದಾರೊ ಅಥವಾ ಹಾಕಿಸಿದ್ದಾರೋ ಪ್ರಿಯಾ "
"ಪ್ಲೀಸ್ ಕಾಲ್ ಮಿ ಮೇಡಮ್. ನಾನು ನಿಮಗಿಂತ ಹತ್ತು ವರ್ಷ ದೊಡ್ಡವಳು . ಮತ್ತೆ ನಿಮಗಿಂತ ಸೀನಿಯರ್. ನೆನಪಿರಲಿ"
"ಮೇಡಮ್ ನನ್ನ ಮನಸಿನ ಮಾತು ?"
"ಕಿರಣ್ ಇದು ಆಫೀಸ್ ನಾನು ನಿಮ್ಮ ಹೆಡ್, ನೀವು ನನ್ನ ಸಬ್ ಆರ್ಡಿನೇಟ್. ಆ ವಿಷ್ಯವಾಗಿ ಏನೊ ಬೇಕಾದರೂ ಮಾತಾಡಲೂ ನಾನು ರೆಡಿ. ಅದಿಲ್ಲವಾದರೆ ನಾನು ನಿಮ್ಮ ಮನಸಿನ ಮಾತಿಗೆ ಸಿಗಲು ಸರಿಯಾದ ವ್ಯಕ್ತಿ ಅಲ್ಲ."
ತಲೆ ತಗ್ಗಿಸಿಕೊಂಡು ಹೋಗುತ್ತಿದ್ದವನನ್ನೆ ನೋಡುತ್ತಾ ಮನಸ್ಸು ಹೇಳಿತು
"ಕ್ಷಮಿಸು ನಾ ರಾಧೆಯಲ್ಲ ಅಗುವುದೂ ಇಲ್ಲ"


( ಈ ಕತೆ ಈಗಾಗಲೆ ಪಬ್ಲಿಶ್ ಮಾಡಿದ್ದರೂ ಏಕೋ ಮತ್ತೊಮ್ಮೆ ಹಾಕಬೇಕೆಂದಿನಿಸ್ತಿತು. ಹಾಗಾಗಿ ಮತ್ತೆ ಬ್ಲಾಗಲ್ಲಿ ಹಾಕಿದ್ದೇನೆ)

ಕ್ಷಮಿಸು ನಾ ರಾಧೆಯಲ್ಲ ಭಾಗ ೧

"ಪ್ರಿಯಾ ಇವತ್ತಿನಿಂದ ನಿಮ್ಮ ಡಿವಿಸನ್‌ಗೆ ಹೊಸ ಮೆಂಬರ್ . " ಶ್ರೀನಾಥ್ ಪರಿಚಯಿಸಿದಾಗ ಕಂಪ್ಯೂಟರ್ ಪರದೆಯಿಂದ ತಲೆ ಎತ್ತಿದವಳಿಗೆ ಹಸನ್ಮುಖಿಯಾದ ಆ ಯುವಕ ಕಾಣಿಸಿದ. ಎಲ್ಲೋ ನೋಡಿದಂತಿದೆ ಎನಿಸಿತಾದರೂ as a Division head ಏನನ್ನೂ ತೋರದೆ ಹಲೊ ಎಂದು ಕೈ ನೀಡಿದೆ ಆತನೂ ತನ್ನ ಹೆಸರನ್ನೂ ಕಿರಣ್ ಎಂದು ಪರಿಚಯಿಸಿಕೊಂಡ ಕ್ಯಾಂಪಸ್ ಇಂಟರ್ವ್ಯೂ ನಲ್ಲಿ ಸೆಲೆಕ್ಟ್ ಆಗಿದ್ದ ಪ್ರತಿಭಾನ್ವಿತ ಯುವಕ ಆತ ಎಂದೂ ತಿಳಿಯಿತು . ಹೆಡ್ ಆಫೀಸ್‍ನಲ್ಲಿ ಟ್ರೈನಿಂಗ್ ಯಶಸ್ವಿಯಾಗಿ ಮುಗಿಸಿ ಇಂದಿನಿಂದ ಡ್ಯೂಟಿಗೆ ರಿಪೋರ್ಟ್ ಮಾಡಿಕೊಳ್ಳಬೇಕಿತ್ತು.
ಆತನ ಮುಖದಲ್ಲಿ ಗಲಿಬಿಲಿ ಗಾಬರಿ ಎದ್ದು ಕಾಣುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ನೆನೆಪಿಗೆ ಬಂದಿತು . ಇಂದು ಬೆಳಗ್ಗೆ ಕಾರ್ ಡ್ರೈವ್ ಮಾಡುವಾಗ ಬೈಕ್‌ನಲ್ಲಿ ಸಿಕ್ಕ ಯುವಕ ಈತನೇ ಅಲ್ಲವೇ? ಒಮ್ಮೆ ಕಣ್ಣು ಹೊಡೆದು ಸಿಳ್ಳೆ ಹಾಕಿ , ಬ್ಯೂಟಿಫುಲ್ ಎಂದು ಉಸುರಿ ಮಿಂಚಿನಂತೆ ಮಾಯವಾಗಿದ್ದ.
ಮನಸಿನಲ್ಲೇ ಈಡಿಯಟ್ ಎಂದು ಬೈದುಕೊಂಡೆ
ಮದುವೆಯಾಗಿ ಒಂದು ಮಗುವಿನ ತಾಯಿ ತಾನು ತನಗೆ ಇನ್ನೂ ಇಪ್ಪತ್ತು ಮೂರರ ಈ ಫೋರ ಲೈನ್ ಹಾಕುವುದೇ. ಬೆಳಗ್ಗೆ ಸಿಡಿಮಿಡಿಗೊಂಡಿದ್ದ ಮನಸಿಗೆ ಈಗ ಅವನನ್ನು ನೋಡಿ ಇನ್ನಷ್ಟು ಕೋಪ ಬಂದಿತು.
ಅವನಿಗೊಬ್ಬ ಮೆಂಟಾರ್‍ ಅನ್ನು ನೇಮಿಸಿದೆ. ಕಲಾ ಹೋದ ವರ್ಷ ತಾನೆ ಸೇರಿದ್ದಳು ಬಲು ಚುರುಕು ಅವಳು ಮಾಡಬೇಕಾದ ಕೆಲಸವನ್ನೆಲ್ಲಾ ಹೇಳಿ ಕ್ಯಾಬಿನ್‌ಗೆ ಆಗಮಿಸಿದೆ. ಕೆಲಸದಲ್ಲಿ ತನ್ಮಯಳಾದೆ
"ಮೇಡಮ್ " ಕೆಲಸಕ್ಕೆ ಭಂಗ ಬಂದಿತು ತಲೆ ಎತ್ತಿದೆ ಕಿರಣ್ ಬಂದು ನಿಂತಿದ್ದ
ಮೇಡಮ್ ಐಯಾಮ್ ಸಾರಿ ಫಾರ್ ವಾಟ್ ಹ್ಯಾಪೆನ್ಡ್ ಇನ್ ದ ಮಾರ್ನಿಂಗ್" ತಲೆ ಕೆಳಗೆ ಹಾಕಿ ಜೋಲು ಮೋರೆ ಮಾಡಿಕೊಂಡು ಉತ್ತರಿಸಿದ.
ಬೈಯ್ಯಬೇಕೆಂದವಳಿಗೆ ಏಕೊ ಮಾತುಗಳೇ ಬರಲಿಲ್ಲ . ಆತನ ಮುಖ ಲಕ್ಷಣವೇ ಹಾಗಿತ್ತೇನೂ ತಿಳಿಯಲಿಲ್ಲ.
" ಪರವಾಗಿಲ್ಲ ಬಿಡಿ . ನಿಮ್ಮ ವಯಸಿನಲ್ಲಿ ಇದೆಲ್ಲಾ ಕಾಮನ್. ಇನ್ನು ಚಿಕ್ಕ ವಯಸ್ಸು ಹಾಗೆ ಆಡಬೇಕನ್ನಿಸುತ್ತೆ . ಆದರೆ ನನ್ನ ಜಾಗದಲ್ಲಿ ಬೇರಾರಾದರೂ ಇದ್ದರೆ ಖಂಡಿತಾ ಪ್ರಾಬ್ಲಮ್ ಆಗ್ತಿತ್ತು."
"ಇಲ್ಲ ಮೇಡಮ್ ನೀವು ದೊಡ್ಡ ವೇದಾಂತಿ ಥರ ಮಾತಾಡ್ತಾ ಇದೀರಲ್ಲ ನಿಮಗೇನು ತುಂಬಾ ವಯಸ್ಸಾಗಿದೆಯಲ್ಲ. ಇಷ್ಟು ಚಿಕ್ಕ ವಯಸಿನಲ್ಲಿ ಇಡೀ ಡಿವಿಸನ್ ಹೆಡ್ ಆಗಿದೀರಾ ಅಂದ್ರೆ ರಿಯಲ್ಲಿ ಗ್ರೇಟ್ "
"ನಿಮಗ್ಯಾರು ಹೇಳಿದ್ರು ನಂಗೆ ಚಿಕ್ಕ ವಯಸ್ಸು ಅಂತ. ಅಲ್ರೆಡಿ ಐಯಮ್ 32 ಇಯರ್ಸ್ ಒಲ್ಡ್ ಯು ನೊ?" ಮಾತು ಹಳಿ ತಪ್ಪಿತು ಅನ್ನಿಸಿತು. ಆದರೆ ಜಾರಿಯಾಗಿತ್ತು ಮಾತು.
" 32 ಮತ್ತೆ ನೀವು . ಮೇಡಮ್ ಐ ಕಾಂಟ್ ಬಿಲೀವ್ ಇಟ್, ನೀವು ಸುಳ್ಳು ಹೇಳಿ ನನ್ನ ಅವಾಯ್ಡ್ ಮಾಡ್ತಾ ಇದೀರಾ" ಆತ ಉದ್ಗರಿಸಿದವನ ಮುಖದಲ್ಲಿ ಏನೂ ಒಂಥರಾ ಆಕರ್ಷಣೆ ಎನಿಸಿತು.
"ನಾನು ನಿಮಗ್ಯಾಕೆ ಸುಳ್ಳು ಹೇಳಲಿ. ಅಂಡ್ ವೈ ಶುಡ್ ಐ ಅವಾಯ್ಡ್ ಯು?"
ಕಾಫೀ ಟೈಮ್ ಆದದ್ದರಿಂದ ನಗುತ್ತಾ ಹೊರಗೆ ಬಂದೆ.
ಹೀಗೆ ಶುರುವಾದ ನಮ್ಮ ಸ್ನೇಹ ನಮ್ಮನ್ನು ಹತ್ತಿರ ತಂತು
ಕಿರಣ್‌ನ ನಗು ಆತನ ಮಾತು ಮಿಂಚಿನಂತಹ ನಡೆ ನನ್ನನ್ನು ಮೋಡಿ ಮಾಡಿತ್ತು
ದಿನೇ ದಿನೇ ಆತ ನನ್ನನ್ನು ಹೊಗಳುವುದು ಹೆಚ್ಚಾಗುತಿತ್ತು. ಮದುವೆಯಾಗಿ ಇಷ್ಟು ದಿನವಾದರೊ ಅಭಿ ಒಮ್ಮೆಯೂ ನನ್ನ ಬಗ್ಗೆ ಇಂತಹ ಮೆಚ್ಚುಗೆಯ ಮಾತಾಡಿರಲಿಲ್ಲ.
ಪ್ರಾಜೆಕ್ಟ್ ಅದೂ ಇದೂ ಅಂತ ಟೂರ್‌ನಲ್ಲೇ ಇರುತ್ತಿದ್ದ ಆತ ಬಸವಳಿದಿರುತ್ತಿದ್ದ . ನಾನು ಮನೆಗೆ ರಾತ್ರಿ ೧೦ಕ್ಕೆ ಹೋದರೆ ಆತ ನಿದ್ರಿಸಿರುತ್ತಿದ್ದ . ಬೆಳಗ್ಗೆ ನಾನು ಏಳುವ ವೇಳೆಗೆ ಕೆಲಸಕ್ಕೆ ಹೊರಟಿರುತಿದ್ದ. ನಮ್ಮಿಬ್ಬರ ಮಾತುಗಳು, ಭೇಟಿಗಳು , ಮಿಲನಎಲ್ಲವೂ ಕೇವಲ ಶನಿವಾರ ಅಥವ ಭಾನುವಾರ ಅದೂ ನಮ್ಮಿಬ್ಬರಿಗೂ ಕೆಲಸದ ಒತ್ತಡ ಇಲ್ಲದಾಗ. ಬೇರೆ ದಿನ ಮೈಲ್ನಲ್ಲಿ ತಪ್ಪಿದರೆ ಮೊಬೈಲ್ ನಲ್ಲಿ ಮಾತಾಡಿಕೊಂಡು ತೃಪ್ತಿಯಾಗುತ್ತಿದ್ದೆವು
ಚಿದೂ ನಾನು ಹೋಗುವ ವೇಳೆಗಾಗಲೆ ಕೆಲಸದಾಳು ಸರಸ್ವತಿಯ ಬಳಿಯಲ್ಲೇ ಜೋಗುಳ ಹಾಡಿಸಿಕೊಂಡು ಮಲಗಿರುತ್ತಿದ್ದ.
ಅಮ್ಮನ ನೆನಪೂ ಅವನಿಗಾಗುತಿರಲಿಲ್ಲವೇನೂ.
ಇಂತಹ ಸಂಧರ್ಭದಲ್ಲಿ ನನಗೆ ಕಿರಣ್ ಹೆಚ್ಚು ಆಪ್ತನಾಗುತ್ತಿದ್ದ.
ಆತ ನನಗಷ್ಟೆ ಅಲ್ಲ ಆಫೀಸಿನ ಎಲ್ಲರಿಗೂ ಅಚ್ಚು ಮೆಚ್ಚಿನವನಾಗುತ್ತಿದ್ದ .ಆದರೆ ನನ್ನೊಡನೆ ಮಾತಾಡುವಾಗ ಅವನ ಕಣ್ಣಲ್ಲಿ ಕಾಣುತಿದ್ದ ಒಲವನ್ನು ಗ್ರಹಿಸಲಾರದಷ್ಟು ಅಪ್ರಬುದ್ದಳೇನಾಗಿರಲಿಲ್ಲ ನಾನು.
ನಾನು ಅವನಿಗೆ ಅಪ್ರೈಸಲ್ ವಿಷಯದಲ್ಲಾಗಲಿ ಕೆಲಸದ ವಿಚಾರದಲ್ಲಾಗಲಿ ಹೆಚ್ಚಿನ ಸಹಾಯ ಮಾಡಲಾರಂಭಿಸಿದೆ.
ಜೊತೆ ಜೊತೆಗೆ ನನಗೇನೂ ಭಯವಾಗತೊಡಗಿತು . ನಾನು ತಪ್ಪು ಮಾಡುತ್ತಿಲ್ಲವಷ್ಟೆ? ನನ್ನ ಅವನ ಸ್ನೇಹ ಬರೀ ಸ್ನೇಹ ವಾಗದೆ ಇನ್ನೇನೋ ಆಗಬಹುದೆಂಬ ಅಂಜಿಕೆ ಅದು.
ತಿಂಗಳಾರು ಕಳೆಯಿತು.
ಕಿರಣ್ ನನ್ನನ್ನು ನೋಡದಿದ್ದರೆ ಚಡಪಡಿಸುತ್ತಿದ್ದ ಅದನ್ನು ಮಾತಿನಲ್ಲೂ ವ್ಯಕ್ತ ಮಾಡುತ್ತಿದ್ದ
ಒಮ್ಮೆ ಜ್ವರ ಬಂದು ಮಲಗಿದಾಗ ದಿನಕ್ಕೊಮ್ಮೆಯಾದರೂ ಮನೆಗೆ ಬಂದು ಹೋಗುತ್ತಿದ್ದ. ಚಿದುವನ್ನು ಸ್ನೇಹ ಪೂರ್ವಕವಾಗಿ ಮಾತಾಡಿಸುತ್ತಿದ್ದ.
ಅಭಿಗೆ ನಾನು ಅನ್ಯಾಯ ಮಾಡ್ತಾ ಇದೀನಾ ? ಇದು ತಪ್ಪಲ್ಲವಾ. ಮನಸಿನ ಕೂಗು
ಮನಸ್ಸು ಆತ್ಮೀಯರನ್ನು ಬಯಸುತ್ತಿದೆ ಅಷ್ಟೆ . ಇನ್ನೇನೂ ಅಲ್ಲ ನಾನೆ ಸಮಾಧಾನ ಮಾಡಿಕೊಂಡೆ.
ಕಿರಣ್ ಅಂದು ಅವನ ಮನಸ್ಸನ್ನು ಬಿಚ್ಚಿದ "ಮೇಡಮ್ ನಾನು ತುಂಬಾ ಹುಡುಗೀರ್‍ಅನ್ನು ನೋಡಿದೀನಿ . ಆದರೆ ನಿಮ್ಮಂತಹ ವಿಶೇಷವಾದವರನ್ನು ಕಂಡಿರಲಿಲ್ಲ. ನಿಮಗೇನಾದರೂ ಸೆಕಂಡ್ ಆಪ್ಷನ್ ಇದ್ದರೆ ಅದು ನಾನೆ ಆಗಿರಬೇಕಂತ ನನ್ನ ಆಸೆ"
ನಾನು ಏನೂ ಹೇಳಿರಲಿಲ್ಲ ಸುಮ್ಮನೆ ನೆಲ ನೋಡಿದೆ
ಆತ ಉತ್ತೇಜಿತನಾದನೋ ಏನೋ ಅವನ ನನ್ನ ಒಡನಾಟ ಹೆಚ್ಚಾಗತೊಡಗಿತು.

ಕಿರಣನ ನನ್ನ ಮೇಲಿನ ಪ್ರೀತಿ ಕೇವಲ ದೈಹಿಕ ಆಕರ್ಷಣೆಯಾಗಿದ್ದರೆ ಏನು ಗತಿ?
ಅದಕ್ಕೆ ಯಾವ ಆಧಾರವೂ ಸಿಗಲಿಲ್ಲ ಇಂದಿನವರೆಗೆ ಕಿರಣ ತನ್ನ ಬಳಿ ಒಮ್ಮೆಯೂ ಕೆಟ್ಟದಾಗಿ ನಡೆದಿರಲಿಲ್ಲ .
ಅಭಿಯ ಜೋತು ಬಿದ್ದ, ಕಳೆಯಾಗಲಿ ಒಲವಾಗಲಿ ಇರದ ಆ ಮೊಗವೆಲ್ಲಿ? ಸ್ನೇಹ ತುಂಬಿದ ನಡೆ, ಒಲವು ತುಂಬಿದ ಕಂಗಳು, ಎಂಥಹವರನ್ನೂ ಅರಳಿಸಬಲ್ಲಂಥ ಆ ನಗೆ ತುಂಬಿರುವ ಕಿರಣನೆಲ್ಲಿ?
ಅಭಿ ನನ್ನ ಸಾಮೀಪ್ಯವನ್ನೂ ಗ್ರಹಿಸದವನ ಹಾಗೆ ನಿರ್ಜೀವ ಮನುಷ್ಯ, ಆದರೆ ಕಿರಣ ನನ್ನಿರುವಿಕೆಯಿಂದಲೇ ಇಡಿ ಪ್ರಪಂಚವನ್ನು ಗೆಲ್ಲುತ್ತೇನೆಂಬ ಹುಮ್ಮಸ್ಸು ತುಂಬಿರುವ ವ್ಯಕ್ತಿ. ನಿರ್ಜೀವ ವ್ಯಕ್ತಿಯಲ್ಲೂ ಚೈತನ್ಯ ತುಂಬುವಂತಹ ವ್ಯಕಿತ್ವ

ನಾನು ನಿರ್ಧಾರ ಮಾಡಬೇಕಿತ್ತು, ಒಲವೋ ಅಥವ ಸಂಸಾರವೋ
(ಮುಂದುವರೆಯುವುದು)

Friday, March 11, 2011

ಹೀಗೆರೆಡು ಪ(ಪಾ)ತ್ರಗಳು

ಪ್ರೀತಿಯ ಸಂಜನಾಗೆ
ಸಂಜೂ ಇದು ನನ್ನ ಹತ್ತನೇ ಪತ್ರ ಒಂದಕ್ಕೂ ನಿನ್ನಿಂದ ಉತ್ತರ ಬಂದಿಲ್ಲ. ಹಾಗಾಗಿ ಆ ಎಲ್ಲಾ ಒಂಬತ್ತೂ ಪತ್ರಗಳನ್ನೂ ಒಟ್ಟಾಗಿ ಸೇರಿಸಿ ನನ್ನ ಹತ್ತನೇ ಪತ್ರ ಬರೆಯುತ್ತಿದ್ದೇನೆ. ನಿನ್ನಿಂದ ಪಾಸಿಟೀವ್ ಉತ್ತರ ಬರಲಿಲ್ಲವಾದಲ್ಲಿ ಇದು ನನ್ನ ಜೀವಮಾನದ ಕಡೆಯ ಪತ್ರವಾಗಿರುತ್ತದೆ
ದಂಗಾದೆಯಾ? ಹೌದು ಸಂಜೂ ನೀನು ನನ್ನ ಹೃದಯಕ್ಕೆ ಅಂತಹದೊಂದು ನಂಟನ್ನು ಬೆಳೆಸಿದ್ದೀಯ .
ನಾನು ನಿನ್ನನ್ನು ನೋಡಿದ್ದಾದರೂ ಯಾವತ್ತು?
ಇಂದಿಗೆ ಸರಿಯಾಗಿ ತಿಂಗಳ ಮುಂಚೆ.
ಆವತು ಯಾವುದೋ ಸಿನಿಮಾದ ಶೂಟಿಂಗ್ ಅಂತ ನೀನು ಬಂದಿದ್ದೆ . ಅದೇಕೋ ಚಿತ್ರದ ಹೀರೋಯಿನ್ ಸಂಪ್ರೀತಾ ನಂಗೆ ಹಿಡಿಸಲಿಲ್ಲ ಅವಳ ಮನೆ ಕೆಲಸದವಳಾಗಿ ಅವಳಿಂದ ಕೆನ್ನೆಗೆ ಹೊಡೆಸಿಕೊಳ್ಳುತ್ತಿದ್ದ ನೀನು ನಂಗೆ ಹಿಡಿಸಿಯೇಬಿಟ್ಟೆ
ಆಗಲೇ ನನ್ ಮನಸು ಹೇಳಿತು ನಂಗೆ ನೀನೆ ತಕ್ಕ ಜೋಡಿ
ಅಂದಿನಿಂದ ಇಂದಿನವರೆಗೆ ನಾನು ಪತ್ರಗಳನ್ನು, ಮೆಸೇಜುಗಳನ್ನು ಕಳಿಸ್ತಾನೇ ಇದ್ದೇನೆ . ಅಟ್ ಲೀಸ್ಟ್ ನಿಂಗೆ ನಾನು ಇಷ್ಟಾನಾ ಇಲ್ಲವಾ ಎಂಬ ಮಾತೂ ಇಲ್ಲ .
ಅಂದ ಹಾಗೆ ನಾನು ಶೇಖರ್ . ಗಾರ್ಮೆಂಟ್ಸ್‌ನಲ್ಲಿ ಸೂಪರ್ ವೈಸರ್ ಆಗಿದ್ದೀನಿ. ತಿಂಗಳಿಗೆ ಇಪ್ಪತ್ತು ಸಾವಿರದ ತನಕ ಸಂಬಳ . ಹೆಂಡತಿಯನ್ನು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವ ಮಟ್ಟಿಗೆ ಸಂಪಾದನೆ ಇದೆ
ಇನ್ನೂ ನಿನ್ನ ಬಗ್ಗೆ ಏನು ಗೊತ್ತು ಎಂದು ಕೇಳಬೇಡ. ಎಲ್ಲವನ್ನೂ ಅರಿತಿದ್ದೇನೆ
ನೀನು ಮೂರು ವರ್ಷದಿಂದ ಸಿನಿಮಾ ಇಂಡಸ್ಟ್ರಿಯಲ್ಲಿಯೇ ಪಾತ್ರಕ್ಕಾಗಿ ಹೆಣಗಾಡುತ್ತಿದ್ದೀಯಾ
ಆಗೊಮ್ಮೆ ಈಗೊಮ್ಮೆ ನಾಯಕಿಯ ಮನೆ ಕೆಲಸದವಳೋ ಅಥವ ಸ್ನೇಹಿತೆಯೋ ಅಥವ ನಾಯಕಿ ನಾಯಕ ಮರ ಸುತ್ತುತ್ತಾ ಹಾಡುತ್ತಿದ್ದಾಗ ಲಾ ಲಾ ಲಾ ಎಂದು ಕುಣಿಯುವ ಹುಡುಗಿಯರ ಪೈಕಿ ಒಬ್ಬಳಾಗಿ ಪಾತ್ರ ಮಾಡುತ್ತಿದ್ದೀಯಾ
ಈ ಸಿನಿಮಾ ಇಂಡಸ್ಟ್ರಿಯಲ್ಲಿ ಏನೆಲ್ಲಾ ಕೊಳಕುಗಳಿವೆಯೋ ಅವುಗಳಲ್ಲೆಲ್ಲಾ ನೀನು ಮುಳುಗಿದ್ದೀಯಾ
ಆದರೆ ನೀನು ನನ್ನ ಪಾಲಿಗಂತೂ ಗಂಗೆಯ ಥರ . ಗಂಗೆ ಯಾವತ್ತಿದ್ದರೂ ಗಂಗೆಯೇ.
ನೀನು ಹೇಗೆ ಇದ್ದರೂ ನಾನು ನಿನ್ನಪ್ರೀತಿಸುವೆ.
ಇಷ್ಟೆಲ್ಲಾ ಆದಮೇಲೂ ನೀನು ನನ್ನನ್ನ ತಿರಸ್ಕರಿಸಿದರೆ ,
ನಾಳೆಯೇ ನನ್ನ ಹೆಣದ ದರ್ಶನ ಮಾಡಬೇಕಾಗುತ್ತದೆ. ನನ್ನ ಸಾವಿಗೆ ನೀನೆ ಕಾರಣಳಾಗುತ್ತೀಯಾ
ಯೋಚಿಸು.....

ನಿನ್ನವ ಶೇಖರ್

ಶೇಖರನೆಂಬ ಮುಟ್ಟಾಳನಿಗೆ
ಪ್ರೀತಿ ಪ್ರೇಮವೆಂಬ ಭಾವನೆಗಳ ಕಡಲಲ್ಲಿ ಈಜಾಡ್ತಾ ಇದ್ದೀಯಾ ಸರಿ. ಆದರೆ ಆ ಈಜಿಗೆ ಜೊತೆಯಾಗಿ ನನ್ನ ಯಾಕೆ ಕರೀತ್ತಿದ್ದೀಯ

ಸಿನಿಮಾಗಳಲ್ಲಿ ಪ್ರೀತಿ ಪ್ರೇಮವೆಂಬ ಭಾವನೆಗಳನ್ನು ಮಾರ್ತಾ ಮಾರ್ತಾ ನಾವೆಲ್ಲಾ ಆ ಭಾವನೆಗಳನ್ನು ಹತ್ತಿರಕ್ಕೂ ಸೇರಿಸಲ್ಲಾ ಯಾಕೆ ಗೊತ್ತಾ?
ನಾವು ಯಾವತ್ತಿದ್ದರೂ ಭಾವನೆಗಳನ್ನು ಮಾರಿ ಲಾಭಗಳಿಸೋರು ಅದರಿಂದ ಬರೋ ನೋವು ನಮಗೆ ಬೇಡ

ನಿನ್ನ ಒಂಬತ್ತೂ ಪತ್ರಗಳನ್ನ ನಾನು ಓದಿದ್ದೇನೆ . ಇಂತಹ ಸಾವಿರ ಪತ್ರಗಳು ನನ್ನ ಬಳಿ ಇವೆ

ಯಾಕೆಂದರೆ ನಾವು ಸಿನಿಮಾದವರು ಹತ್ತು ಜನಕ್ಕೆ ಗ್ಲಾಮರ್ ಹೆಸರಲ್ಲಿ ಮೈ ಕೈ ತೋರಿಸೋರು

ಸಿನಿಮಾದಲ್ಲಿ ಪ್ರೀತಿಗೋಸ್ಕರ ಸಾವನ್ನೇ ಎದುರಿಸುವವರು....................

ಇಂತಹವಳು ಸಿಕ್ಕರೆ ಯಾರಿಗೆ ಬೇಡ ಹೇಳು..............?

ನೀನು ಸತ್ತು ಹೋಗ್ತೀಯಾ ಅಂತ ನಾನು ನಿನಗೆ ಉತ್ತರ ಕೊಡ್ತಾ ಇಲ್ಲ

ಯಾಕೆಂದರೆ ನೀನು ಸತ್ತರೆ ನನಗೇನು ನಷ್ಟವೂ ಇಲ್ಲ ಬದುಕಿದ್ದರೆ ಲಾಭವೂ ಇಲ್ಲ

ಆದರೆ ನಿನ್ನನ್ನೇ ನಂಬಿಕೊಂಡಿರುವ ನಿನ್ನ ಕುಟುಂಬದ ಶಾಪ ನನ್ನನ್ನ ತಾಕದಿರಲಿ ಅಂತ ಪತ್ರ ಬರೆಯುತ್ತಿದ್ದೇನೆ

ನಿನಗೆ ನನ್ನ ಬಗ್ಗೆ ಗೊತ್ತಿರೋದು ಕೇವಲ ಸ್ವಲ್ಪವೇ ಕೇವಲ ಪುಸ್ತಕದ ಹೊರಕವಚ ನೋಡಿ ಪುಸ್ತಕದ ಕಥೆಯನ್ನೇ ಹೇಳುತ್ತೀನಿ ಎಂಬ ಹುಂಬಮನೋಭಾವದವನು ನೀನು

ಇನ್ನೂ ನನ್ನ ಬಗ್ಗೆ ತಿಳಿಯೋದು ತುಂಬಾ ಇದೆ

ಅದಕ್ಕೂಮೊದಲು ನೀನು ನನ್ನನ್ನೆ ಯಾಕೆ ಬಯಸಿದೆ ಅನ್ನೋದು

ತುಂಬಾ ಹುಡುಗರಿಗೆ ಸಿನಿಮಾದವರು ಎಂದರೆ ಏನೋ ಕುತೂಹಲ. ಸಿನಿಮಾದ ಹುಡುಗಿಯನ್ನು ಮದುವೆಯಾಗುತ್ತಿದ್ದೇವೆ ಎಂಬ ಸ್ವಯ್ಂ ತೃಪ್ತಿ . ನೀನು ನೀನು ಕೂಡ ಹಾಗೆಯೇ

ಆವತ್ತು ಶೂಟಿಂಗ್ ಇದ್ದ ದಿನ ನಿನಗೆ ಸಿನಿಮಾ ಹೀರೋಇನ್ ಸಂಪ್ರೀತಾ ಹಿಡಿಸಲಿಲ್ಲ ಅಂದೆ

ಯಾಕೆ ಹಿಡಿಸಲಿಲ್ಲ ? ಹಾಗಿಲ್ಲವಾದಲ್ಲಿ ಅವಳ ಹತ್ತಿರ ಆಟೋಗ್ರಾಫ್ ತೆಗೆದುಕೊಳ್ಳುವಾಗ ಮೇಡಮ್ ನಾನು ನಿಮ್ಮ ಅಭಿಮಾನಿ ಅನ್ನುತ್ತಿದ್ದಾಗ, ಅವಳ ಬಳಿಯೇ ಆಗಷ್ಟೇ ಅವಳಿಂದ ಕೆನ್ನೆಗೆ ಹೊಡೆಸಿಕೊಂಡ ಕೆಲಸದವಳ ಪಾತ್ರ ಮಾಡಿದ್ದ ನಾನು ಅಲ್ಲೇ ನಿಂತಿದ್ದಾಗ ನನ್ನತ್ತ ನಿನ್ನ ಕಣ್ಣೂ ಹಾಯಲಿಲ್ಲವೇಕೇ?

ನಿನ್ನ ಮಟ್ಟಕ್ಕೆ ಅವಳು ನಿಲುಕದ ನಕ್ಷತ್ರ. ಸಿನಿಮಾದವಳನ್ನೇ ಮದುವೆಯಾಗುತ್ತೇನೆ ಎಂಬ ನಿನ್ನ ಹಟಕ್ಕೆ ಕಂಡಿದ್ದು
ನಾನು, ಅಷ್ಟೇ .
ಅದನ್ನೇ ಪ್ರೀತಿ ಎಂದುಕೊಂಡಿದ್ದೀಯ ಸುಳ್ಳು ಕಣೋ ಬೆಪ್ಪ.
ನಾಳೇ ನಾನೇನಾದರೂ ದೊಡ್ಡ ಹೀರೋಯಿನ್ ಆದಲ್ಲಿ ...................................?
ಇದಕ್ಕೆ ಉತ್ತರ ಹೇಳು.
ಅಂದ ಹಾಗೆ ನನ್ನ ಬಗ್ಗೆ ಏನೇನೋ ಗೊತ್ತಿದೆ ಎಂದೆ
ಮಲಿನವಾಗದ ಗಂಗೆ ಎಂದೆ
ಇಲ್ಲ ಕಣೋ ನಾವುಗಳು ಸೈಡ್ ಆಕ್ಟ್ರೆಸ್ಗಳು ಗಂಗೆಯೂ ಅಲ್ಲ ಗೌರಿಯೂ ಅಲ್ಲ . ಆ ಪದಗಳೆಲ್ಲಾ ಏನಿದ್ದರೂ ಸಿನಿಮಾಪರದೆಯ ಮೇಲೆ
ಹಿಂದೆ ನಾವುಗಳು ಬ್ರಾಂದಿ ವಿಸ್ಕಿಗಳು.
ಮತ್ತೇರುವ ತನಕ ಕುಡಿಯುತ್ತಾರೆ
ನಂತರ ಕುಸಿಯುತ್ತಾರೆ ಮತ್ತೆ ಹೊಸ ವಿಸ್ಕಿಗಳಿಗೆ ಕಣ್ಣ್ ಹಾಕ್ತಾರೆ ಅಷ್ಟೇ
ನಾನು ಸಿನಿಮಾರಂಗಕ್ಕೆ ಬಂದಿದ್ದು ದೊಡ್ಡ ಹೀರೋಯಿನ್ ಆಗೋಕೇನೆ
ಆದರೆ ಆಗಿದ್ದು ಮಾತ್ರ ಸೈಡ್ ಆಕ್ಟ್ರೆಸ್
ನಿಂಗೆ ಗೊತ್ತಾ?
ನಾನು ಮೊನ್ನೆ ಮಾಡಿದ್ದ " ಅಮರ್" ಫಿಲಂ ನಲ್ಲಿ ಹೀರೋ ಜೊತೆ ಮರ ಸುತ್ತಿದಂತೆ ಅವನ ಮೇಲೆ ಬೀಳುವ ಕನಸು ಕಾಣುವ ಒಂದು ಪಾತ್ರದಲ್ಲಿ ನಟಿಸಿದ್ದೆನಲ್ಲಾ. ಆ ಫಿಲ್ಂ ಹೀರೋ ರಜತ್ ಕೇವಲ ಹತ್ತು ವರ್ಷದ ಹಿಂದೆ ನನ್ನ ತಂದೆಯ ಪಾತ್ರ ಮಾಡಿದ್ದ ನಾನು ಬೇಬಿ ಸಂಜನಾ ಆಗಿದ್ದೆ
ಈಗ ಅದೇ ಅವನ ಜೊತೆ ಮರ ಸುತ್ತುವ ಪಾತ್ರ.
ನಾಳೆ ಅವನಿಗೇನೇ ಅಕ್ಕನೋ, ಇಲ್ಲ ಅತ್ತಿಗೆಯೋ ನಾಡಿದ್ದು ಅಮ್ಮನಾಗಿ ಪಾತ್ರ ನಿರ್ವಹಿಸಬೇಕಾಗುತ್ತದೆ .
ಏಕೆಂದರೆ ನಮಗೆ ವಯಸಾಗಿರುತ್ತದಲ್ಲಾ?
ಅದಕ್ಕೆ ಹೇಳಿದ್ದು ನಾವು ಬ್ರಾಂದಿಗಳು ವಿಸ್ಕಿಗಳು ಅಂತ.
ನಾನು ಮಲಿನವಾಗಿದ್ದೇನೆ ಅಂತ ನಂಗೆ ಯಾವತ್ತೂ ಅನ್ನಿಸಿಯೇ ಇಲ್ಲ
ಯಾಕೆ ಹೇಳು?
ನೀರಲ್ಲಿಯೇ ಇರುವ ಮೀನಿಗೆ ನೀರು ಯಾವತ್ತೂ ಬೋರೆನಿಸೋದಿಲ್ಲ . ಆದರೆ ಒಂದು ನಿಮಿಷ ನೀರಿಲ್ಲದೇ ಇದ್ದಲ್ಲಿ ಉಸಿರಾಡಲಾಗುವುದಿಲ್ಲ.


ಮತ್ತೆ ಇದನ್ನೆಲ್ಲಾ ಬಿಟ್ಟು ನಾನು ನಿನ್ನ ಜೊತೆ ಬಂದುಬಿಟ್ಟೆ ಅಂತಂದುಕೋ

ಸ್ವಲ್ಪ ದಿನ ಚೆನ್ನಾಗಿರುತ್ತೆ ನಂತರ?
ನಂಗೆ ನೀನು ಬೋರಾಗಲಾರಂಭಿಸುತ್ತೀಯಾ. ಏಕೆಂದರೆ ನಿನ್ನ ಸಂಪಾದನೆ ನನಗೆ ಏನನ್ನೂ ಕೊಡಿಸುವುದಿಲ್ಲ.
ನೀನೋ ನನ್ನ ಹಿಂದಿನ ಕಥೆಗಳನ್ನೆಲ್ಲಾ ಎಳೆದುಕೊಂಡ ಬೈಯ್ಯಲಾರಂಭಿಸುತ್ತೀಯ, ಅನುಮಾನ ಪಡ್ತೀಯಾ
ನನಗೂ ನಿನ್ನ ಬಗ್ಗೆ ಅಸಹನೇ ನಿನಗೂ ನನ್ನ ಬಗ್ಗೆ ಬೇಜಾರು
ಕೊನೆಗೆ ಎರೆಡೇ ವರ್ಷದಲ್ಲಿ ನನ್ನ ದಾರಿ ನನದು ಅಂತ ಇಲ್ಲಿಗೆ ಮತ್ತೆ ಹಾರಿ ಬರುತ್ತೇನೆ
ಇಲ್ಲಿ ಪರಿಸ್ಥಿತಿ ಟೋಟಲಾಗಿ ಬದಲಾಗಿರುತ್ತದೆ
ಹೊಸ ಹೊಸ ಹುಡುಗಿಯರು ಬಂದು
ನನ್ನ ಫ್ರೆಶ್‌ನೆಸ್ ಹೋಗಿರುತ್ತದೆ ನನ್ನ ತಾಯಿ ಪಾತ್ರಕ್ಕೋ ಇಲ್ಲ ಅತ್ತೆಯ ಪಾತ್ರಕ್ಕೋ ಹಾಕುತ್ತಾರೆ
ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ ಇಷ್ತೇಲ್ಲಾ ಯಾಕೆ.
ಇನ್ನೂ ಯೌವ್ವನ ಇದೆ . ಅದರಿಂದಲೇ ಕೈ ತುಂಬಾಹಣವೂ ಬರ್ತಿದೆ. ಇದನ್ನೆಲ್ಲಾ ಬಿಟ್ಟು ನನಗಂತೂ ಬರಲು ಮನಸಿಲ್ಲ.

ಮದುವೆಯಾಗುವ ಕನಸಿದ್ದರೂ ಆ ಕನಸಿನಲ್ಲಿ ಬರುತ್ತಿರುವ ಮುಖವೇ ಬೇರೆ ಅದು ನೀನಲ್ಲ

ನಿನಗೆ ಸಂಪ್ರೀತಾ ಹೇಗೆ ನಿಲುಕದ ನಕ್ಷತ್ರವೋ ಹಾಗೆಯೇ ನನಗೆ ಮತ್ತೊಬ್ಬ ಹೀರೋ

ಈ ಹುಚ್ಚಾಟವನ್ನೆಲ್ಲಾ ಬಿಟ್ಟುಬಿಡು ಅಂತ ನಾನು ಕೇಳೋದಿಲ್ಲ ಯಾಕೆಂದರೆ ಯು ಆರ್ ನಥಿಂಗ್ ಟು ಮಿ

ಮತ್ತೆ ನನಗೆ ಲೆಟರ್ ಬರೆಯಬೇಡ . ನಾನು ಓದೋದಿಲ್ಲ
ಇದೇ ನನ್ನ ಮೊದಲ ಮತ್ತು ಕಡೆಯ ಪತ್ರ

ನಿನಗೆ ಯಾರೂ ಅಲ್ಲದ
ಸಂಜನಾMonday, March 7, 2011

ಹೆಣ್ಣು ಮಹಿಳೆಯಾಗುತ್ತ್ದಿದ್ದಾಳೇಯೇ

ಇವತ್ತು ಮಹಿಳಾ ದಿನಾಚರಣೆ, ಎಷ್ಟೊ ಶುಭಾಶಯಗಳು, ಆಕಾಂಕ್ಷೆಗಳು. ಹಾರೈಕೆಗಳು. ಒಮ್ಮೆಗೆ ಕೂತು ಯೋಚಿಸುತ್ತಿದ್ದಾಗ, ಮೂಡಿದ ಯೋಚನೆಗಳು ಹಲವಾರು

ಅದರಲ್ಲಿ ಮೂಡಿದ ಒಂದು ಪ್ರಶ್ನೆ, ಮಹಿಳೆ ಎನಿಸಿಕೊಳ್ಳುವ ಹಂಬಲದಲ್ಲಿ ಹೆಣ್ಣಿನ ಸಹಜ ಸಂವೇದನೆಗಳನ್ನು ಕಳೆದುಕೊಳ್ಳುತ್ತಿದ್ದೇವೆಯೇ ನಾವುಗಳು?
ಅಷ್ಟಕ್ಕೂ ಹೆಣ್ಣಿಗೂ ಮಹಿಳೆಗೂ ಏನು ವ್ಯತ್ಯಾಸ?
ಹೌದ್ದು ಅರ್ಥದ ಪ್ರಕಾರ ಯಾವುದೂ ಇಲ್ಲ
ಆದರೆ ಮನಸಿಗೆ ಹೆಣ್ಣು ಆಪ್ತಳಾಗುತ್ತಾಳೆ, ಆದರೆ ಮಹಿಳೆ ದೂರದಲ್ಲಿಯೇ ನಿಲ್ಲುತ್ತಾಳೆ .
ಇದರ ಬಗ್ಗೆ ನನ್ನದೊಂದಿಷ್ಟು ಸಂವೇದನೆಗಳು

ಹೆಣ್ಣಿನ ಮೊದಲ ಹಂತವೇ ಹೆಣ್ಣಾಗುವುದು.
ಬಾಲಕಿ ಹೆಣ್ಣಾಗುವ ಆ ಹಂತದಲ್ಲಿ ಎಷ್ಟೋ ಕಾತುರತೆ , ನಿರೀಕ್ಷೆಗಳು, ನಾಚಿಕೆ , ಲಜ್ಜೆ, ಕನಸುಕಂಗಳು, ಕೆನ್ನೆಯ ಚುಂಬಿಸುತ್ತಲೆ ಇರುವ ರೆಪ್ಪೆಗಳು........... ಹೀಗೆ ಏನೇನೋ ಲಕ್ಷಣಗಳು ................ ಹೌದು ಇವೆಲ್ಲಾವನ್ನು ಓದಿರುತ್ತೇವೆ, ನೋಡಿರುತ್ತೇವೆ ಎಲ್ಲಿ ಕಥೆಗಳಲ್ಲಿ ಕಾವ್ಯಗಳಲ್ಲಿ , ನಮ್ಮ ತಾಯಿ ಅಥವ ಅವರ ತಾಯಿಯ ಕಾಲಕ್ಕಿರಬಹುದೇನೋ................
ಈಗ ಬಾಲಕಿ ಹೆಣ್ಣಾಗುವುದಿಲ್ಲ ಸೀದಾ ಮಹಿಳೆಯಾಗುವ ಹಂತಕ್ಕೆ ತಲುಪಿರುತ್ತಾಳೆ, ಅದೇನು ಗಾಂಭೀರ್ಯ , ಎಲ್ಲವನ್ನೂ ತಿಳಿದಿರುವವರ ಲಕ್ಷಣ, ಹುಡುಗರೆಂಬ ಕುತೂಹಲವಿರಲಿ ಅವರನು ಹೇಗೆ ಆಟ ಆಡಿಸುವುದೆಂಬ ಯೋಚನೆಯಲ್ಲಿ ತೊಡಗುತ್ತಾಳೆ..
ಯಾವುದೇ ವಿಚಾರಕ್ಕಿರಲಿ ದೊಡ್ಡವರನ್ನು ಕೇಳಬೇಕಾದ ಅನಿವಾರ್ಯತೆ ಈಗ ಇಲ್ಲ . ಎಲ್ಲಕ್ಕೂ ಅಂತರ್ಜಾಲವಿದೆ. ಯಾವುದೇ ಕುತೂಹಲ,ಪ್ರಶ್ನೆಗೆ ಉತ್ತರ ಅಗತ್ಯಕ್ಕಿಂತ ಹೆಚ್ಚಾಗಿಯೇ ಸಿಗುತ್ತದೆ. ಹಾಗಾಗಿ ಲೈಂಗಿಕತೆ ಎಂಬುದು ಅವಳಿಗೆ ದೊಡ್ಡ ವಿಷಯವೇ ಅನ್ನಿಸುವುದಿಲ್ಲ.
ಈಗೀಗ ಕಾಲೇಜಿನಲ್ಲಿ ಹುಡುಗ ಕೈ ಕೊಟ್ಟ ಎಂಬ ಮಾತುಗಳಿಗಿಂತ ಹುಡುಗಿ ಬಿಟ್ಟು ಹೋದಳು ಎಂಬ ದೂರುಗಳೇ ಹಚ್ಚು,
ಅಪ್ಪ ಅಮ್ಮನ ನಂತರ ಹುಡುಗಿ ಹುಡುಕುವುದೇ ಸೂಕ್ತ ಗೆಳೆಯನಿಗಾಗಿ, ಹುಡುಗನಲ್ಲಿ ಗೆಳೆಯನನ್ನು ಹುಡುಕುತ್ತಾಳ್ಖೆ, ಆಪ್ತವಾದ ಭಾವನೆ ಹುಟ್ಟು ಹಾಕುವ ಹುಡುಗ ಅವಳಿಗೆ ಹಿಡಿಸುತ್ತಾನೆ. ಆದರೆ ಯಾವುದೋ ಒಂದು ಘಳಿಗೆ ಯಲ್ಲಿ ತಾನು ಬಂದಿರುವುದು ಓದಲು ಪ್ರೀತಿಸಲು ಅಲ್ಲ ಎಂಬ ದಿವ್ಯ ತಿಳುವಳಿಕೆ ಬರುತ್ತದೆ. ಇದ್ದಕ್ಕಿದ್ದಂತೆಯೇ ಬಾಳಿನ ಗುರಿಗಳು ನೆನಪಾಗುತ್ತವೆ. ತನ್ನ ಮೊದಲ ಆದ್ಯತೆ ತಂದೆ ತಾಯಿ ಹಾಗು ಗುರಿ ಈ ಹುಡುಗ ಅಲ್ಲ ಎಂಬ ಆಲೋಚನೆಗಳು ಮುತ್ತಿಡಲಾರಂಭಿಸಿದೊಡನೆಯೇ ಹುಡುಗನ ಚಿತ್ರ ಮನದಿಂದ ದೂರವಾಗಲಾರಂಭಿಸುತ್ತದೆ. ಅದು ತಾತ್ಕಾಲಿಕ, ಮತ್ತೊಬ್ಬ ಹುಡುಗ ಬಂದು ಮನದಲ್ಲಿ ಕೂರುವವರೆಗೆ..
ಇರುವ ಹುಡುಗನಿಗೆ ನನ್ನ ನಿನ್ನ ಸಂಬಂಧ ಗೆಳೆತನವಾಗಿಯೇ ಇರಲಿ ಎಂದು ಸಂದೇಶವನ್ನು ಕಳಿಸಿ ನಿರಾಳವಾಗುತ್ತಾಳೆ . ಇದು ಕಾಲೇಜಿನಲ್ಲಿ ಇರುವವರೆಗೂ ನಡೆಯುವ ಪ್ರಕ್ರಿಯೆ.
ಇದನ್ನು ಹುಡುಗರು ಫ್ಲರ್ಟಿಂಗ್ ಎಂದು ಕರೆಯುತ್ತಾರೆ. ಹುಡುಗಿ ಅಪ್ಪ ಅಮ್ಮನಿಗಾಗಿ ಮಾಡಿದ ತ್ಯಾಗ ಎಂದು ನೆಮ್ಮಧಿಸಿಕೊಳ್ಳುತ್ತಾಳೆ

ಯಾವುದೋ ಕ್ಯಾಂಪಸ್ ಇಂಟರ್ವ್ಯೂನಲ್ಲಿ ಸೆಲೆಕ್ಟ ಆಗಿ ವಯಸಿಗೆ ಮೀರಿದ ಸಂಬಳ, ವಯಸಿಗೆ ಮೀರಿದ ಹುದ್ದೆಗಳಲ್ಲಿ ಕೈತುಂಬ ಹಣ ಸಂಪಾದಿಸುತ್ತಿದ್ದಂತೆಯೇ ಮದುವೆಯಾಗು ಎನ್ನುವ ಹಿರಿಯರ ಒತ್ತಾಯಕ್ಕೋ ವಯೋಸಹಜ ಬಯಕೆಗೋ ಗಂಡಿನ ಶೋಧಕ್ಕೆ ತೊಡಗುತ್ತಾಳೇ
ಈಗ ಅಪ್ಪ ಅಮ್ಮನೇ ಹುಡುಕಿ ಮದುವೆ ಮಾಡಬೇಕೆನ್ನುವ ನಿಯಮವೇ ಇಲ್ಲ
ತನಗೆ ಬೇಕಾದವರನ್ನು ಫೇಸ್ ಬುಕನಲ್ಲೋ ಮತ್ತ್ಯಾವುದೋ ಸೋಶಿಯಲ್ ನೆಟವರ್ಕ್ ಸೈಟಿನಲ್ಲಿಯೇ ಹುಡುಕಿ, ಅಲ್ಲಿಯೇ ಅವನ ವಿಚಾರಗಳನ್ನೆಲ್ಲಾ ತಾಳೆ ಮಾಡಿ, ಅಂತಸ್ತು, ಜಾತಿಗಳನ್ನು ಗುರುತಿಸಿ ಆತ ತನಗೆ ಸೆಟ್ ಆಗಬಹುದೇ ಎಂದು ಯೋಚಿಸಿ, ಕೆಲವೊಂದೆಡೆ ಅವನ ಜೊತೆ ಓಡಾಡಿ ಅವನ ಒಳಿತು ಕೆಡಕುಗಳನ್ನು ಅರಿತುಕೊಂಡು ಎಲ್ಲಾ ಸರಿ ಹೋದಲ್ಲಿ ಮದುವೆ ಅಥವ ಮುಂದಿನ ಅರಸುವಿಕೆಯತ್ತ ಹೆಜ್ಜೆ
ಹಾಗೂ ಹೀಗೂ
ಮದುವೆಯ ಹಂತ ದಾಟಿ ಹೆಂಡತಿಯ ಪಟ್ಟ ವಹಿಸಿಕೊಳ್ಳುವ ಹೆಣ್ಣು, ಎರೆಡೆರೆಡು ಪಾತ್ರ ನಿರ್ವಹಿಸಬೇಕಾಗುತ್ತದೆ,
ಒಂದು ವೃತ್ತಿ, ಮತ್ತೊಂದು ಸಂಸಾರ, ಎರೆಡೆರೆಡನ್ನೂ ನಿಭಾಯಿಸಿಕೊಂಡು ಹೋಗುವಾಗ ’ಈಗೋ’ ಎನ್ನುವುದು ಹೆಡೆಯಾಡತೊಡಗುತ್ತದೆ. ಗಂಡ ಸರಿ ಇಲ್ಲದಿದ್ದರೂ ಅವನನ್ನು ಸರಿ ದಾರಿಗೆ ತರುವಂತ ಮಲ್ಲಮ್ಮನಂಥವರ ಪವಾಡ ಈಗ ನಡೆಯುತ್ತಿಲ್ಲ. ಅಂತಹ ಮಲ್ಲಮ್ಮಂದಿರೂ ಈಗ ಇಲ್ಲ
ಏನಿದ್ದರೂ ತನಗೆ ಹೊಂದಿಕೆ ಆಗದಂತಹ ಗಂಡನಿದ್ದಲ್ಲಿ ನೀನಿಲ್ಲದಿದ್ದರೂ ಬದುಕಬಲ್ಲೇ ಎಂದು ಬೆನ್ನು ತೋರಿಸಿ ನಡೆಯುವ ಛಲವಾದಿಗಳು, ಭೈರಪ್ಪನವರ ಮಂಗಳೆಯಂತಹವರು ಎಲ್ಲೆಲ್ಲೂ ಹೆಚ್ಚುತ್ತಿದ್ದಾರೆ.
ಹಾಗೂ ಹೀಗೂ ಮಗುವೊಂದಾಯಿತೆಂದರೂ, ಅಮ್ಮನ ಪಾತ್ರಕ್ಕಿಂತ ಮಾಮ್‍ನ ಪಾತ್ರವೇ ಈಗ ಹೆಚ್ಚು ನಡೆಯುತ್ತಿದೆ. ಮಗುವನ್ನು ಹೇಗೆ ಬೆಳೆಸಬೇಕೆಂಬ ನಿರ್ಧಾರವಿರಲಿ, ಹೇಗೆ ಯಾವಾಗ ಹುಟ್ಟಬೇಕೆಂಬ ನಿರ್ಧಾರವನ್ನು ತೆಗೆದುಕೊಳ್ಳುವಷ್ಟರ ಮಟ್ಟಿಗೆ ಹೆಣ್ಣಿನ ಪಾತ್ರ ಬೆಳೆದಿದೆ.
ಆದರೆ ಈ ಮಾಮ್ ಟೀಮ್ ಲೀಡರ್, ಪ್ರಾಜೆಕ್ಟ ಮ್ಯಾನೇಜರ್‌ನ್ ಪಾತ್ರಗಳಲ್ಲಿ ಹರಿದು ಹಂಚಿ ಹೋಗಿದ್ದಾಳೇ ಅರ್ಧ ಮಾಮ್. ಅರ್ಧ ತಾಯಿ, ಅರ್ಧ ಅಮ್ಮ .
ಮಗುವನ್ನು ಹೊತ್ತಿರಬೇಕಾದ ತೊಡೆ ಈಗ ಲ್ಯಾಪ್‌ಟಾಪ್‌ಗೆ ಮೀಸಲಾಗಿದೆ, ಮಗುವಿಗೆ ಜೋಗುಳ ಹೇಳಬೇಕಾದ ಅಮ್ಮನ ದನಿ ಮೊಬೈಲ್‌ನಲ್ಲಿ ಹೂತು ಹೋಗಿದೆ. ಮಗುವೂ ಈಗ ಲ್ಯಾಪ್‌ಟಾಪ್‌ ಒಳಗೆ ತೂರಿಕೊಳ್ಳುತ್ತಿದೆ. ಜೀನಿಯಸ್ ಕಿಡ್‌ನ ಮಾಮ್ ಅನ್ನಿಸಿಕೊಳ್ಳುವ ಬಯಕೆಯನ್ನೂ ತುಂಬಿಕೊಂಡಿದ್ದಾಳೆ

ಹೀಗೆ ಹೆಣ್ಣು ಮಹಿಳೆಯಾಗಿ ರೂಪುಗೊಳ್ಳುತ್ತಿರುವ ಈ ಪರ್ವ ಕಾಲದಲ್ಲಿ

ಕಾಳಿದಾಸನ ಶಾಕುಂತಲೆ, ವಾಲ್ಮೀಕಿಯ ಸೀತೆ, ವ್ಯಾಸರ ದ್ರೌಪದಿ, ಅಂಬೆ, ಕುಂತಿ ಯಾರಲ್ಲೂ ಕಾಣುತ್ತಿಲ್ಲ.
ಅವರುಗಳ ಕಥೆಯ ಅಗತ್ಯವೂ ಇಲ್ಲ

ಕಷ್ಟವಿದ್ದಲ್ಲಿ ಗೊಳೋ ಎಂದು ಅಳುವ ಅಳು ಮುಂಜಿ ಪಾತ್ರ ಹೆಣ್ಣಿಗೆ ಈಗ ಸರಿ ಹೊಂದುತ್ತಿಲ್ಲ
ದಿಟ್ಟೆಯಾಗಿ ಜೀವನದ ಪ್ರತಿಯೊಂದು ಸಮಸ್ಯೆಯನ್ನೂ ಪರಿಹರಿಸಿಕೊಳ್ಳುವ ಸಮಾಧಾನದ ವ್ಯಕ್ತಿತ್ವದ ಜೊತೆಗೇ ,
ತಾನು ಯಾರಿಗೂಕಡಿಮೆಯಿಲ್ಲಾ, ಗಂಡಿಗೆ ತಾನೂ ಸಮಳೂ ಎಂಬ ಅಹಂ ಕೂಡಿಕೊಳ್ಳುತ್ತದೆ.
ಸೆಕ್ಸ್ ಎಂಬ ಪದಕ್ಕೇ ಅಂಜುತ್ತಿದ್ದ ಹೆಣ್ಣು, ಇಂದಿಗೆ ಲೈಂಗಿಕತೆಯನ್ನುಮುಕ್ತವಾಗಿ ಭಿನ್ನವಾಗಿ ಚಿತ್ರಿಸುತ್ತಾಳೆ, ಲೇಖನ ಬರೆಯುತ್ತಾಳೇ, ಸಿನಿಮಾ ನಿರ್ದೇಶಕಿಯಾಗಿ ಲೈಂಗಿಕತೆಯ ಪದರವನ್ನು ಬಿಚ್ಚಿಡುತ್ತಾಳೆ, ನಿರ್ಮಾಪಕ ನಿರ್ದೇಶಕ, ನಾಯಕ ಆಗುತ್ತಿದ್ದ ಗಂಡಿಗೆ ಸೆಡ್ಡು ಹೊಡೆಯುವಂತೆ, ನಿರ್ಮಾಪಕಿ, ನಿರ್ದೇಶಕಿ, ನಾಯಕಿ ಆಗಿ ಬೆಚ್ಚಿ ಬೀಳಿಸುತ್ತಾಳೇ
ಅರವತ್ತರ ಹರೆಯದ ಲೈಂಗಿಕ ಆಕಾಂಕ್ಷೆಗಳನ್ನು ತೆರೆದಿಡುತ್ತಾಳೆ.

ಒಟ್ಟಿನಲ್ಲಿ ಹೆಣ್ಣು , ಅಬಲೆಯಿಂದ ಸಬಲೆಯಾಗುವ ನಿಟ್ಟಿನಲ್ಲಿ ಎಷ್ಟನ್ನು ಗಳಿಸಿಕೊಳ್ಳುತ್ತಿದ್ದಾಳೋ ಅಷ್ಟೇ ಸ್ತ್ರೀ ಸಂವೇದನೆಯನ್ನು ಕಳೆದುಕೊಳ್ಳುತ್ತಿದ್ದಾಳೆ
ಆದರೆ ಈ ಕಳೆದುಕೊಳ್ಳುವ ಗಳಿಸಿಕೊಳ್ಳುವ ಆಟದಲ್ಲಿ ಮಾತ್ರ ನಷ್ಟವಾಗುವುದು ಯಾರಿಗೆ ಲಾಭವಾಗುವುದು ಯಾರಿಗೆ ಎಂಬ ಕ್ಲೀಷೆ ಮನಸನ್ನು ಕಾಡುತ್ತದೆ.
ಆದರೆ ಮತ್ತೊಂದೆಡೆ, ಮದುವೆಯಾಗಿ ಮೂರನೇ ದಿನಕ್ಕೆ ಪಕ್ಕದ ಮನೆಯವಳೊಡನೆ ಓಡಿಹೋದವನ ಹೆಂಡತಿ , ಹೆಣ್ಣುಮಗುವಿನ ತಾಯಿಯಾದೆ ಎಂದು ಮನೆಯಿಂದ ಹೊರದೂಡಿಸಿಕೊಂಡವಳು, ಅವನ ಜೊತೆ ಯಾಕೆ ಮಾತಾಡಿದೆ ಎಂದು ಮುಖ ಮೂತಿ ನೋಡದೆ ಗಂಡನಿಂದ ಹೊಡೆಸಿಕೊಂಡವಳು, ಇವತ್ತು ರಾತ್ರಿ ನನ್ನ ಜೊತೆ ಬರ್ತೀಯಾ ಎಂದು ಕೇಳಿದ ಸೂಪರ್‌ವೈಸರ್ ‌ಬಗ್ಗೆ ಬೆದರುವ ಗಾರ್ಮೆಂಟ್ಸ್ ಹುಡುಗಿ ಇವರೆಲ್ಲಾ ಹೆಣ್ಣಾಗಿಯೇ ಇದ್ದಾರೆ. ಜೊತೆಗೆ ಹೆಣ್ಣಾಗಿಯೇ ಇರುವುದರ ತೊಂದರೆಗಳ ಉದಾಹರಣೆಗಳಾಗಿದ್ದಾರೆ.
ಹಾಗಾಗಿ ಹೆಣ್ಣು ಹೆಣ್ಣಾಗಿಯೇ ಇರಬೇಕೆ ಅಥವ ಮಹಿಳೆಯಾಗಿಯೇ ಬದಲಾಗಬೇಕೆ ಎನ್ನುವ ಪ್ರಶ್ನೆ ಮಾತ್ರ ಮನಸನ್ನು ಮತ್ತಷ್ಟು ಕೊರೆಯುತ್ತದೆ
ಎಲ್ಲರಿಗೂ ಮಹಿಳಾ(ಹೆಣ್ಣಿನ) ದಿನಾಚರಣೆಯ ಶುಭಾಶಯಗಳು

ಅರುಣಾ ಶಾನಬಾಗ್:.

ಕೊನೆಗೂ ಅರುಣಾಗೆ ಅರುಣೋದಯ ಕಾಣಲೇ ಇಲ್ಲ . ಕೊನೆಗೆ ಈ ಜೀವನದಿಂದ ಬಿಡುಗಡೆ ಸಿಕ್ಕೀತೆ ಎಂಬ ನಿರೀಕ್ಷೆಯೂ ಇಲ್ಲವಾಗಿ ಹೋಗಿದೆ. ಜೀವ ಹೋಗುವ ತನಕ ದಿನದಿನವೂ ಸಾಯುತ್ತಲೇ ಜೀವಿಸಿರಲೇಬೇಕಾಗಿದೆ.
ಅಷ್ಟಕ್ಕೂ ಈ ಅರುಣಾ ಶಾನಭಾಗ್ ಎಂಬ ನಮ್ಮ ಕರ್ನಾಟಕದ ಹುಡುಗಿ ಮಾಡಿದ ತಪ್ಪಾದರೂ ಏನು?
ಶಿವಮೊಗ್ಗದ ಹಳದಿಪುರದಲ್ಲಿ ಹುಟ್ಟಿದಾಕೆಗೆ, ಬಾಂಬೆಯ ಕೆಮ್ಸ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಸಿಕ್ಕಾಗ ರೋಗಿಗಳ ಸೇವೆಯಲ್ಲಿ ಬದುಕುವಾಸೆ ಕಂಡಿದ್ದಳೇನೋ
ಆದರೆ ಅವಳನ್ನು ಜೀವನವಿಡೀ ಜೀವಚ್ಛವವನ್ನಾಗಿ ಮಾಡುವ ಭೀಭತ್ಸ ಘಟನೆಯೊಂದು ಕಾದಿತ್ತು ಎಂದು ಅವಳಿಗಾದರೂ ಎಲ್ಲಿ ಗೊತಿತ್ತು?.
ಅರುಣಾ ಮಹತ್ವಾಕಾಂಕ್ಶೆಯ ಹುಡುಗಿ.ವಿದೇಶದಲ್ಲಿ ತನ್ನ ಓದನ್ನು ಮುಂದುವರೆಸುವ ಆಸಕ್ತಿ ಹೊಂದಿದ್ದಳು . ಇದನ್ನು ತನ್ನ ಕಸಿನ್ ಜೊತೆ ಹೇಳಿಕೊಂಡಿದ್ದಳು
ನೋಡಲೂ ಚೆಂದವಿದ್ದಳು. ನಾಲಿಗೆ ಮಾತ್ರ ಸ್ವಲ್ಪ ಚುರುಕು ಎಂದು ಅವಳ ಸಹೋದ್ಯೋಗಿಗಳು ಹೇಳಿದ್ದಾರೆ.
ಅದೇ ಆಸ್ಪತ್ರೆಯಲ್ಲಿಯೇ ಕೆಲಸ ಮಾಡುತ್ತಿದ್ದ ಡಾಕ್ಟರ್ ಒಬ್ಬರ ಜೊತೆ ಮದುವೆಯೂ ನಿಶ್ಚಯವಾಗಿ ಸುಂದರ ಜೀವನದ ಕನಸು ಕಾಣುತ್ತಿದ್ದವಳನ್ನು ಸೋಹನ್ ಲಾಲ್ ಭರ್ತ ವಾಲ್ಮೀಕಿ ಎಂಬ ಹೆಸರಿನ ವಾರ್ಡ್‌ ಬಾಯ್ ಮುಂದೆಂದೂ ಕನಸು ಕಾಣುವುದಿರಲಿ ಯೋಚಿಸಲೂ ಸಾಧ್ಯವಾಗದಂತಹ ಸ್ಥಿತಿಗೆ ದೂಡಿದ್ದ

ಅರುಣಾ ಅವನ ಅವ್ಯವಹಾರವನ್ನು ಕಂಡು ಬೈದಿದ್ದನ್ನೇ ನೆಪ ಮಾಡಿಕೊಂಡು ಅವಳ ಮೇಲೆ ಅತ್ಯಾಚಾರವವೆಸಗುವ ಸಂದರ್ಭದಲ್ಲಿ ಅವಳ ಕುತ್ತಿಗೆಗೆ ನಾಯಿಯ ಚೈನ್ ಕಟ್ಟಿ ಪಶುವಿಗಿಂತ ಕೀಳು ಮತ್ತು ಅಸ್ವಾಭಾವಿಕ ರೀತಿಯಲ್ಲಿ ತನ್ನ ತೃಷೆ ತೀರಿಸಿಕೊಂಡ .
ಇತ್ತ ಅರುಣಾಳ ಬಾಳಲ್ಲಿ ಮತ್ತೆ ಅರುಣೋದಯ ನೋಡುವ ಅವಕಾಶ ಬರಲೇ ಇಲ್ಲ . ಕಟ್ಟಿದ್ದ ಚೈನಿನ ಬಿಗಿತದಿಂದ ಮೆದುಳಿಗೆ ಆಮ್ಲಜನಕದ ಕೊರತೆಯುಂಟಾಗಿ , ಮೆದುಳು ನಿಷ್ಕ್ರಿಯವಾಗಿ ಜೀವಂತ ಹೆಣವಾಗಿ ಹೋದಳು ಅರುಣಾ.
ಮನೆಯವರು ನೋಡಿಕೊಳ್ಳಲಾಗದೆ ದೂರ ಹೋದರು
ಮದುವಯಾಗುವ ಹುಡುಗ ಕೆಲವಾರು ವರ್ಷಗಳವರೆಗೆ ಅವಳ ಜೊತೆಗೆ ಇದ್ದು ಕೊನೆಗೆ ಬೇರೊಂದು ಮದುವೆಯಾದರು.
ಇತ್ತ ಅವಳನ್ನು ಇಂತಹ ಸ್ಥಿತಿಗೆ ದೂಡಿದ ಸೋಹನ್ ಲಾಲ್‍ಗೆ ಶಿಕ್ಷೆಯಾಗಿದ್ದು ಕೇವಲ ಏಳೇ ವರ್ಷಗಳು. ಆತನ ಅತ್ಯಾಚಾರದ ಆರೋಪ ಬಯಲಿಗೆ ಬಾರದೆ ಅಸ್ವಾಭಾವಿಕ ಕ್ರಿಯೆ ಎಂದು ಅವನಿಗೆ ಕಡಿಮೆ ಶಿಕ್ಷೆ. ಬಿಡುಗಡೆಯಾಗಿಡೆಲ್ಲಿಯ ಬೇರೊಂದು ಆಸ್ಪತ್ರೆಯಲ್ಲಿ ಆರಾಮಾವಾಗಿದ್ದಾನೆ. ನಮ್ಮ ದೇಶದ ನ್ಯಾಯಾಲಯದ ಸ್ಠಿತಿಗೆ ಇದೊಂದು ಉದಾಹರಣೆಯಷ್ಟೆ.
ಇತ್ತ ತನ್ನ ತಪ್ಪೇ ಇಲ್ಲದೆ ಜೀವನ ಪರ್ಯಂತ ಶಿಕ್ಷೆಗೆ ಒಳಗಾಗಿದ್ದಾಳೆ ನಮ್ಮ ಅರುಣ. ಬೆಳಗಿನ ಸುಂದರ ಕನಸುಗಳು ಕಮರಿ ಅತ್ತ ಅಸ್ತಂಗತಳೂ ಆಗದೇ ಇತ್ತ ಬದುಕಲೂ ಆಗದೇ ಬದುಕಿದ್ದಾಳೇ. ಕೆಮ್ಸ್ ಆಸ್ಪತ್ರೆಯವರೇ ಅರುಣಾಳನ್ನು ನೋಡಿಕೊಳ್ಳುತ್ತಿದ್ದಾರೆ
ಸತತ 37 ವರ್ಷಗಳಿಂದ ಹಾಸಿಗೆಯ ಮೇಲೆ ಮಲಗಿರುವ ಅರುಣಾ ಆಗೀಗ ಚೀರುತ್ತಾಳೆ, ಆದರೆ ಮಾತನಾಡಳು, ಕಣ್ಣುಗಳಿವೆ ಆದರೆ ನೋಡಲಾರಳು. ಹೀಗೆ ಎಲ್ಲಾ ಅಂಗಗಳಿದ್ದೂ ಅವುಗಳನ್ನು ನಿಯಂತ್ರಿಸುವ ಮೆದುಳು ನಿಷ್ಕ್ರಿಯವಾಗಿದೆ. ನೆನಪಿನ ಶಕ್ತಿಯನ್ನೂ ಕಳೆದುಕೊಂಡಿದ್ದಾಳೆ.
ಅರುಣಾಳ ಪರಿಸ್ಥಿತಿ ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಪಿಂಕಿ ವಿರಾನಿಯನ್ನು ಬಡಿದೆಬ್ಬಿಸಿತು .
ಅರುಣಾಗೆ ದಯಮರಣ ಕೋರಿ ಕೋರ್ಟಿಗೆ ಅರ್ಜಿ ಸಲ್ಲಿಸಿದಳು.
ಸುಪ್ರೀಮ್ ಕೋರ್ಟ್ ಇಂದು ದಯಾಮರಣದ ಅರ್ಜಿಯನ್ನು ತಿರಸ್ಕರಿಸಿತು. ತಾನ ಸಾಯಬೇಕೆ ಬೇಡವೇ ಎಂಬ ತೀರ್‍ಮಾನವನ್ನು ಅರುಣಾಗೆ ಕೈಗೊಳ್ಳಲು ಸಾಧ್ಯವಿಲ್ಲದಿದ್ದಾಗ, ಅವಳಿಗೆ ಸಾವನ್ನು ನೀಡುವ ಹಕ್ಕು ಬೇರೆಯವರಿಗಿಲ್ಲ ಎಂಬ ನಿರ್ಧಾರವನ್ನು ಹೇಳಿತು.
ಆದರೆ.................
ಇನ್ನೆಷ್ಟು ದಿನ ಅರುಣಾ ಹೀಗೆ ಇರಬೇಕು?
ಅವಳಿಗೆ ದಯಾಮರಣದ ಅವಶ್ಯಕತೆ ಇದೆಯೇ ಇಲ್ಲವೇ?
ಕನಿಷ್ಟ ಅವಳಿಗೆ ಬದುಕುವ ಆಸೆ ಇದೆಯೇ?
ಇದಕ್ಕೆ ಉತ್ತರಿಸಲು ಅವಳಿಂದ ಮಾತ್ರ ಸಾಧ್ಯ .
ಆದರೆ ...................
ಇಂಥ ಸ್ತಿತಿಯಲ್ಲಿರುವ ಆಕೆಗೆ ಜೀವಿಸುವ ಹಕ್ಕು ಬೇಕೆ ಬೇಡವೇ ...............
ಅಷ್ಟಕ್ಕೂ ದಯಮರಣ ನಮ್ಮ ದೇಶದಲ್ಲಿ ಎಷ್ಟು ಪ್ರಸ್ತುತ?

ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕು