Thursday, May 28, 2009

ಹೆಸರಿನ ಹಂಗಿಲ್ಲದ ಸಂಬಂಧ

ಆಕೆ ಹಾಗೆ ಜೀವನದ ಪ್ರತಿಯೊಂದು ಘಳಿಗೆಯನ್ನ ಇಂಚಿಂಚಾಗಿ ಅನುಭವಿಸಬೇಕೆನ್ನುವಳು. ಪ್ರತಿಯೊಂದು ಘಳಿಗೆಯೂ ಅವಳಿಗೆ ಸ್ಮರಣೀಯವಾಗಬೇಕೆಂಬ ಬಯಕೆ. ಪ್ರತಿ ಕ್ಷಣದಲ್ಲೂ ಯಾವುದಾದರೂ ಘಟನೆ ನಡೆಯುತ್ತದೆ ಎನ್ನುವ ನಿರೀಕ್ಷೆ ಇಟ್ಟವಳು.
ಹಾಗೆ ಆ ಹುಡುಗನೂ ಸುಂದರ ಕನಸುಗಳ ಸುತ್ತಾ ಚಲಿಸುವವ. ಮಾತಿನಲ್ಲಿ ಪ್ರಪಂಚದ ಅಷ್ಟೂ ಸೊಗಸನ್ನು ಕಟ್ಟಿಕೊಡಬಲ್ಲವನು. ವಾಸ್ತವಕ್ಕಿಂತ ಕಲ್ಪ್ನನಾ ಲೋಕದ ಸಂಚಾರಿ
ಇಬ್ಬರೂ ಅಕಾಶ ಇಷ್ಟಿರಬೇಕಿತ್ತು ಭೂಮಿ ಚಪ್ಪಟೆಯಾಗಿರಬೇಕಿತ್ತು ಎಂಬೆಲ್ಲ್ಲಾ ಅಸಾಧ್ಯ ವಿಷಯಗಳನ್ನು ಮಾತನಾಡುತ್ತಾ ಕಾಲ ಕಳೆಯುತ್ತಿದ್ದರು. ಪುಸ್ತಕಗಳ ಮುಖ ಪುಟದ ಶೈಲಿಯಿಂದ ಹಿಡಿದು ಅವುಗಳಕೊನೆಯ ಪುಟದ ವರೆಗೆ ಪ್ರತಿಯೊಂದು ಪುಟವನ್ನೂ ಬಿಡದೆ ಚರ್ಚಿಸುತ್ತಿದ್ದರು.

ಅವಳು ಕಾಲೇಜಿನ ಉಪನ್ಯಾಸಕಿ ಈತನೋ ಅದೇ ಕಾಲೇಜಿನ ವಿದ್ಯಾರ್ಥಿ ಇಬ್ಬರ ನಡುವೆಯೂ ಮಾತಿಗೆ ಕೊರತೆ ಇರಲಿಲ್ಲ
ಮಾತು ಮಾತಿಗೆ ನಗು ನಲಿವು . ಪ್ರಪಂಚದ ಸುಂದರ ಕ್ಷಣಗಳನ್ನು ನಿಷ್ಕಪಟ ಮನದಿಂದ ಆಸ್ವಾದಿಸುತ್ತಿದ್ದರು.ಇಬ್ಬರ ಮನದಲ್ಲೂ ಯಾವುದೇ ಅಪನಂಬಿಕೆ ಇರಲಿಲ್ಲ.
ಕಾಲೇಜು ಬಿಡುತ್ತಲೇ ಈತ ಲೈಬ್ರರಿಯಲ್ಲಿ ಹಾಜಾರು .ಈಕೆಯೂ ಹಿಂದೆಯೇ . ಜೊತೆ ಜೊತೆಗೆ ಕೂತು ಪುಸ್ತಕಗಳನ್ನೆಲ್ಲಾ ಶೋಧಿಸಿ ತಮಗೆ ಹಿಡಿಸಿದ ಪುಸ್ತಕಗಳನ್ನು ಓದುತ್ತಿದ್ದರು. ಅವಳು ಓದಿದ್ದನ್ನು ಅವನಿಗೆ ಅವನು ತನಗನಿಸಿದ್ದನ್ನು ಅವಳಿಗೆ ಹೇಳಿ ಖುಷಿ ಪಡುತ್ತಿದ್ದರು.
ಹಿಡಿಸಿದ ನಾಟಕ , ಸಿನಿಮಾ, ಸ್ಥಳಗಳಿಗೆಲ್ಲಾ ಸುತ್ತಾಡತೊಡಗಿದ್ದರು. ಅವರ ಸಂಬಂಧ ಗುರು ಶಿಷ್ಯರನ್ನು ಮೀರಿದ್ದಾಗಿತ್ತು. ಆದರೆ ಅದೇನು ಸ್ನೇಹವೇ ಅಥವ ಪ್ರೀತಿಯೇ ಎಂಬುದು ಕಾಲೇಜಿನ ಎಲ್ಲರಿಗೂ ಎಲೆ ಅಡಿಕೆಯಾಗಿತ್ತು. ಕಾಲೇಜಿನವರ ಗುಸುಗುಸು ಪಿಸುಮಾತು ಅವರನ್ನು ತೊಂದರೆಗೊಳಿಸಲಿಲ್ಲ
ಅವರಿಬ್ಬರಿಗೂ ಗೊತ್ತಿತ್ತು ತಾವು ಪ್ರೇಮಿಗಳಲ್ಲ ಸ್ನೇಹಿತರಲ್ಲ. ಸ್ನೇಹಕ್ಕೂ , ಪ್ರೇಮಕ್ಕೂ ಮೀರಿದ , ಪದಗಳಲ್ಲಿ ಹೇಳಲಾಗದ ಮಾತಿನಲ್ಲಿ ವರ್ಣಿಸಲಾಗದಂತಹ ನಂಟಿದು ಎಂದು.
ಒಮ್ಮೊಮ್ಮೆ ಅವಳೂ ಯೋಚಿಸುತ್ತಿದ್ದಳು .ತಾನೇಕೆ ಅವನ ಬಳಿ ಇಂತಹ ಆತ್ಮೀಯತೆ ಹೊಂದಿದ್ದೇನೆ. ಗಂಡನನ್ನೂ ಅವನನ್ನೂ ಪ್ರೀತಿಯ ತಕ್ಕಡಿಯಲ್ಲಿ ನಿಲ್ಲಿಸಿದರೆ ಆ ಹುಡುಗನೇ ಹೆಚ್ಚು ತೂಕ . ಗಂಡನೂ ಒಳ್ಳೆಯವನೇ ಆದರೆ ಭಾವನೆಗಳ ಮಹಾಪೂರದಲ್ಲಿ ಕೊಚ್ಚುವ ವ್ಯಕ್ತಿಯಲ್ಲ. ಅವಳ ಕಲ್ಪನೆಗೆ ರೆಕ್ಕೆ ಆಗಲೊಲ್ಲ. ಕನಸಿಗೆ ಸಾಗರವಾಗುವಂತಹವನಲ್ಲ. ಎಷ್ಟೋ ಬಾರಿ ಅವಳ ಕಾಲ್ಪನಿಕ ಜಗತ್ತನ್ನು ಕೀಟಲೆ ಮಾಡಿದ್ದಾನೆ ಅವಳ ಓದಿನ ಹುಚ್ಚಿಗೆ ಹಣ ವ್ಯರ್ಥವಾಗುತ್ತಿರುವುದಕ್ಕೆ ಬೈದಿದ್ದಾನೆ, ಅವಳ ಮನದಾಳ ಭಾವನೆಗಳಿಗೆ ಸ್ಪಂದಿಸಿ ಅದಕ್ಕೆ ಪ್ರತ್ಜಿ ಭಾವನೆ ಕೊಡುವ ಹೃದಯಕ್ಕಾಗಿ ಹಾತೊರೆಯುತ್ತಿದ್ದಳು. ಆ ಹೃದಯ ಅವಳದೇ ಪ್ರತಿ
ಮನೆಯಲ್ಲಿ ಗಂಡನಿಗೆ ಈಬಗ್ಗೆ ಬೇಸರ. ಎಷ್ಟೇ ಎಜುಕೇಟೆಡ್ ಆದರೂ ಅವನೂ ಗಂಡನಲ್ಲವೇ.
ಆಗಾಗ ಮನೆಯಲ್ಲಿ ಈಬಗ್ಗೆ ಮಾತಾಗುತ್ತಿತ್ತು. ಆದರೆ ತನ್ನ ಮನದಲ್ಲಿದ್ದ ಭಾವನೆಯನ್ನು ಮಾತಿನಲ್ಲಿ ಹೇಳಲು ಗಂಡನಿಗೆ ಕಷ್ಟ . ತಾನೇನಾದರೂ ಚೀಪ್ ಎಂದುಕೊಂಡರೆ ಎಂದು ಹಾಗಾಗಿಯೇ ಯಾವುದೇ ಅಪಮಾತು ಮನೆಯಲ್ಲಿ ಬರುತ್ತಿರಲಿಲ್ಲ
ಆದರೆ ಇದೊಂದು ಥರ ಶೀತಲ ಸಮರವಾಗಿತ್ತು. ಸಂಸಾರದ ಹಡುಗಿನಲ್ಲಿ ಅಪನಂಬಿಕೆ ಪ್ರಯಾಣಿಕನಾದರೆ ಹಡಗು ಸರಾಗವಾಗಿ ಸಾಗುವುದೆಂತು? ಅವರಿಬ್ಬರ ನಡುವೆ ಮೌನ ತಾಂಡವವಾಡತೊಡಗಿತು. ಇಬ್ಬರಿಗೂ ಅರಿವಿಲ್ಲದೇ ಕಂದರವೊಂದು ಬೆಳೆಯುತ್ತಾ ಬೆಳೆಯುತ್ತಾ ಬೃಹದಾಕಾರವಾಯ್ತು.
ಆದರೆ ಅವಳು ಕೇರ್ ಮಾಡಲಿಲ್ಲ. ಅವಳಿಗೆ ಆ ಹುಡುಗನ ಬಗ್ಗೆ ಎಲ್ಲಿಲ್ಲದ ಮಮತೆ. ಅವನನ್ನು ಒಮ್ಮೆಯಾದರೂ ದಿನದಲ್ಲಿ ನೋಡಲಿಲ್ಲವಾದರೂ ಅವಳಿಗೆ ಏನೋ ಸಂಕಟ. ಅದು ಪ್ರೇಮಿ ತನ್ನ ಪ್ರೇಮಿಯನ್ನು ಕಾಣದೆ ಪಡುವ ಪರಿತಾಪವಲ್ಲ, ಕಾಮಕ್ಕಾಗಿ ಕಾಯುವ ಕಾಮಿನಿಯ ಹಾತೊರೆತವಲ್ಲ. ಅಮ್ಮ ಕಂದನಿಗಾಗಿ ಹಾಡುವ ಹಂಬಲವಲ್ಲ. ಏನೋ ಒಂದು ರೀತಿಯ ಬಂಧ ಅದು ಯಾವುದೆಂದು ಅವಳಿಗೂ ತಿಳಿಯಲಿಲ್ಲ
ಅತ್ತ ಇನ್ನೂ ಡಿಗ್ರೀ ಮಾಡುತ್ತಿದ್ದ ಹುಡುಗ ತನಗಿಂತ ಹಿರಿಯವಳಾದ ಅದೂ ಮದುವೆಯಾದ ಹೆಣ್ಣಿನ ಜೊತೆ ಸುತ್ತಾಡುತ್ತಿದ್ದಾನೆ ಎಂಬ ಮಾತು ಹೆತ್ತವರನ್ನು ಚಿಂತೆಗೀಡು ಮಾಡಿತು. ಮನೆಯಲ್ಲಿ ಈ ಬಗ್ಗೆ ಪ್ರಶ್ನಾವಳಿ ಸುತ್ತತೊಡಗಿತು . ಅವನು ನಕ್ಕು ಕೇಳಿದ
ನಮ್ಮಿಬ್ಬರ ನಡುವಳಿಕೆಯಲ್ಲಿ ಯಾವ ಕಪ್ಪು ಕಲೆ ಕಾಣಿಸಿತು ನಿಮಗೆ . ಹುಡುಗನ ಮನೆಯವರಿಗೆ ಉತ್ತರಿಸಲಾಗಲಿಲ್ಲ
"ನೀವು ಎಲ್ಲೆಂದರಲ್ಲಿ ಸುತ್ತಾಡುತ್ತಿದ್ದೀರಾ .ಅವಳೂ ಮದುವೆಯಾದವಳು ಅವಳ ಬಾಳನ್ನು ಹಾಳು ಮಾಡಬೇಡ" ಎಂದೆಲ್ಲಾ ನುಡಿದರು
ಅವರ ಯಾವ ಮಾತಿಗೂ ಸೊಪ್ಪುಹಾಕಲಿಲ್ಲ
ಕೊನೆಗೆ ಅವಳನ್ನು ಕಾಲೇಜಿನಿಂದ ಕಿತ್ತೆಸೆದರು. ಅವಳು ಬೇರೆಡೆ ಕೆಲಸಕ್ಕೆ ಹೋಗಲಾರಂಭಿಸಿದಳು
ಆದರೂ ಅವಳ ಅವನ ಒಡನಾಟ ಮುಂದುವರೆಯುತ್ತಲೇ ಇತ್ತು
ಕಾಲೇಜಿನ ಲೈಬ್ರರಿ ಇಲ್ಲದಿದ್ದರೇನಂತೆ ಸಿಟಿ ಲೈಬ್ರರಿ ಇದೆಯಲ್ಲಾ . ಅಲ್ಲಿ ಕಾಲ ಕಳೆಯಲಾರಂಭಿಸಿದರು.
ಇತ್ತ ಗಂಡನಿಗೆ ತಲೆ ಕೆಟ್ತಿತು
ಅವನ ಒಡನಾಟ ಬಿಡಲು ಹೇಳಿದೆ . ಅವಳು ಕೇಳಲಿಲ್ಲ. ಗಂಡ ಬಿಟ್ಟು ಹೋದ ಎಂಬುದಕ್ಕಿಂತ ಇವಳೇ ಬಿಟ್ಟು ಬಂದಳು. ಇತ್ತ ಹುಡುಗನ ಮನೆಯಲ್ಲೂ ಗಲಾಟೆಯಾಯ್ತು. ಹುಡುಗ ಮನೆ ಬಿಟ್ಟು ಬಂದ
ಯಾರೋ ಹೇಳಿದರು . " ಸುಮ್ಮನೆ ಹೀಗೇಕೆ ಇಬ್ಬರೂ ಮದುವೆಯಾಗಿ ಬಿಡಿ "
ಇಬ್ಬರೂ ನಕ್ಕರು.
ಮದುವೆಯಾಗಲಿಲ್ಲ.
ಅವಳೊಂದು ಮನೆಯಲ್ಲಿ ನೆಲೆಸಿದಳು ಅವನು ಇನ್ನೊಂದು ಮನೆಯಲ್ಲಿ ನೆಲೆಸಿದನು
ಇಬ್ಬರ ನಂಟೂ ಮುಂದುವರೆಯುತ್ತಲೇ ಇದೆ ತಮ್ಮ ತಮ್ಮ ಮಾತಿನಲ್ಲಿ ಓದಿನಲ್ಲಿ . ಪುಸ್ತಕ ವಿಮರ್ಶೆಯಲ್ಲಿ , ಪರಸ್ಪರರ ಗೌರವದಲ್ಲಿ ಆತ್ಮೀಯತೆ ಹೆಚ್ಚಾಗುತ್ತಲೇ ಇದೆ
ಯಾವುದೆ ಹೆಸರಿನ ಹಂಗಿಲ್ಲದ ಸಂಬಂಧ, ಸಮಾಜದ ಕಟ್ಟು ಪಾಡುಗಳನ್ನು ಮೀರಿ ಗಂಡು ಹೆಣ್ಣಿನ ಹೊಸ ನಂಟಿಗೆ ಭಾಷ್ಯ ಬರೆಯುತ್ತಾ , ಹೀಗೂ ಇರಬಹುದೆಂಬ ನೂತನ ಸಂದೇಶದೊಂದಿಗೆ ಅವರ ಜೊತೆಯೇ ಇದೆ.