Sunday, May 31, 2009

ಪ್ರೇಮವೊಂದು ಹುಚ್ಚು ಹೊಳೆ- ಭಾಗ ೨

ಬೆಳಗಾಯ್ತು. ಎದ್ದಾಗಲೂ ಅವಳದೇ ಯೋಚನೆ, ಪಾಪ ಅನ್ನಿಸುತ್ತಿತ್ತು . ಎಂದೋ ನೋಡಿದ್ದ ದೌಡ್ ಸಿನಿಮಾ ನೆನಪಾಯ್ತು. ಊರ್ಮಿಳಾಗೆ ಬಂದಂತಹ ಗತಿ ಸ್ಮಿತಾಗೆ ಬಂದಿದೆ. ಒಂದೊಮ್ಮೆ ಎಲ್ಲಾದರೂ ಓಡಿಸಿಕೊಂಡು ಹೋಗಿಬಿಟ್ಟರೆ?
" ಅಯ್ಯೋ ಮಂಕೆ ನಿಂಗೇ ತಿನ್ನಕ್ಕೆ ಗತಿ ಇಲ್ಲ್ಲ. ಇನ್ನು ಆ ಬಿಳೀ ಆನೇಗೆ ಖರ್ಚಿಗೆ ಎಲ್ಲಿಂದ ತರ್ತೀಯಾ? ಮನಸ್ಸು ವ್ಯಂಗ್ಯವಾಡಿತು. ತೆಪ್ಪಗಾದ ಅದು ಸ್ವಲ್ಪ ಹೊತ್ತು ಮಾತ್ರ
ಸ್ನಾನ ಮಾಡುತ್ತಿದ್ದಂತೆ ಸ್ಮಿತಾಳ ನೆನಪು ಮತ್ತೆ ಬಂತು ಎಂತೆಂತಾ ಹೀರೋಗಳನ್ನೆಲ್ಲಾ ಬಿಟ್ಟು ತನ್ನನ್ನೇ ಆರಿಸಿಕೊಂಡಿದ್ದೇಕೆ ಮನಸನ್ನು ಬಿಚ್ಚಲು? ಮತ್ತೆ ಪ್ರಶ್ನೆ ಮಾಡಿಕೊಂಡ
ಎದುರಿಗಿದ್ದ ಕನ್ನಡಿ ಉತ್ತರಿಸಿತು
ನೋಡಲು ಬೆಳ್ಲಗೆ ದುಂಡು ದುಂಡುಗೆ ಇದ್ದ ದೇಹ ಒಂದೆರೆಡು ವರ್ಷ ಜಿಮ್ ಗೆ ಹೋಗಿದ್ದರಿಂದಲೋ ಏನೋ ಹೃತಿಕ್ ರೋಷನ್ ನಂತಹ ಮಸಲ್ಸ್ ಇರಲಿಲ್ಲವಾದರೂ ಸ್ವಲ್ಪ ಮಟ್ಟಿಗೆ ಆಕರ್ಷಕವಾಗಿತ್ತು. ಅದಕ್ಕೆ ಇರಬೇಕು ಅವಳು ತನ್ನನ್ನೇ ಆರಿಸಿಕೊಂಡಿದ್ದು. ಹೆಮ್ಮೆ ಎನಿಸಿತು. " ಲೋ ಅವಳು ಏನೋ ಹೇಳ್ಕೋಬೇಕಿತ್ತು ಅದಕ್ಕೆ ನಿನ್ನ ಹತ್ರ ಹೇಳಿಕೊಂಡಿದ್ದಾಳೆ. ಅವಳೇನು ನಿನ್ನ ಲವ್ ಮಾಡ್ತ್ಗಿದಾಳಾ" ಎಂದು ಕನ್ನಡಿ ಕೇಳಿದಾಗ ಕಣ್ಣಲ್ಲಿದ್ದ ಹೆಮ್ಮೆ ಕರಗಿಹೋಗಿ ಆಫ್ ಆದ

ಎಂದಿನಂತೆ ಚೆನ್ನಾಗಿ ಡ್ರೆಸ್ ಮಾಡಿಕೊಂಡು ಬಂದ. ಅಲ್ಲಿದ್ದ ಆಳುಕಾಳಿಗೆಲ್ಲಾ ಅವನೇ ಸೂಪರ್ ಮಾಡೆಲ್. ಸ್ಮಿತಾಮನೆಯಲ್ಲಿ ಬೆಳಗ್ಗೆಯೇ ಜನ. ಅಮರ್ ಪಾಲ್ ಆಗಲೆ ಎದ್ದು ಅವರೆಲ್ಲರ ಜತೆ ಚರ್ಚಿಸುತ್ತಿದ್ದ . ಹಿಂದಿಯಲ್ಲಿ ಮಾತಾಡುತ್ತಿದನಾದ್ದರಿಂದ ಇವನಿಗೆ ಅರ್ಥವಾಗಲಿಲ್ಲ. ಅಮರ್ ಪಾಲ್ ನನ್ನೆ ದುರುಗುಟ್ಟಿ ನೋಡಿಕೊಂಡು ಮಹಡಿಯ ಕಡೆ ತಲೆ ಎತ್ತಿ ನೋಡಿದ ಸ್ಮಿತಾ ಆಗಲೆ ರೆಡಿಯಾಗಿ ನಿಂತಿದ್ದಳು. ಇವನನ್ನು ನೋಡಿ ಮಂದಹಾಸ ಬೀರಿದಳು .ಅದು ಪರಿಚಯದ ನಗೆ. ಇವನು ಅತ್ತಿತ್ತ ನೋಡಿ ಒಮ್ಮೆ ಪೆಕರು ನಗೆ ನಕ್ಕು ತಲೆ ಕೆಳಗೆ ಹಾಕಿದ.
ಎದೆ ಬಡಿತ ಹೆಚ್ಚಾಗಿತ್ತು. ಬೇರಾರೂ ತಮ್ಮಿಬ್ಬರ ನಗುವಿನ ಎಕ್ಸ್ಚೇಂಜ್ ಅನ್ನು ಗಮನಿಸಲಿಲ್ಲವಲ್ಲ ಎಂದು ಒಮ್ಮೆ ಕನ್ಫರ್ಮ್ ಮಾಡಿಕೊಂಡು ಅಡಿಗೆಮನೆಯ ಕಡೆ ಹೊರಟ
ಅದನ್ನು ಗಮನಿಸಿದವನು ರಾಜೀವ್ . ಅವನ ಮುಖದಲ್ಲಿ ಒಂದು ಕಿರುನಗೆ ಮೂಡಿತು . ಅದು ಹರೀಶ್‌ಗೆ ತಿಳಿಯಲಿಲ್ಲ.
ಅಂದು ಕೊಂಚ ಜನ ಜಾಸ್ತಿಯೇ ಇದ್ದರು. ಕೆಲಸದಲ್ಲಿ ಮತ್ತೆ ಸ್ಮಿತಾ ನೆನಪಾಗುತ್ತಲೇ ಇದ್ದಳು ಅವಳಾಗಲೇ ಅಮರ್ ಪಾಲ್ ಜೊತೆ ಶೂಟಿಂಗ್‌ ಸ್ಪಾಟ್‌ಗೆ ಹೊರಟಿದ್ದಾಗಿತ್ತು.
ಮದ್ಯಾಹ್ನ ಮಲಗಿದ್ದಾಗ ಮತ್ತೆ ಕಾಲ್ ಬಂತು ಮೊಬೈಲ್‌ಗೆ ನೆನ್ನೆಯೇ ಹಾಡು ಚೇಂಜ್ ಮಾಡಿದ್ದ . ನಿನ್ನಿಂದಲೇ ನಿನ್ನಿಂದಲೇ ಹೊಸ ಕನಸು ಶುರುವಾಗಿದೆ ಎಂದು ಹಾಡಿತು ಮೊಬೈಲ್
ಅದು ಅವಳದೇ ಕಾಲ್ ಎಂದು ಗೊತ್ತಿತ್ತು. ನೆನ್ನೆಯೇ ಆ ನಂಬರ್‌ಗೆ ಈ ಹಾಡು ಸೆಟ್ ಮಾಡಿದ್ದ.
ಅದೇ ಹಾಡನ್ನು ಹೇಳಿಕೊಂಡು ಆನ್ ಮಾಡಿದ
"ಹ ......................... ಲೋ.................." ಅಲ್ಲಿಂದ ಬಂತು ದನಿ . ಕನಸಿನ ಸ್ವರ್ಗದಿಂದ ಅಪ್ಸರೆಯೊಬ್ಬಳ ದನಿಯನ್ನು ಕೇಳುತ್ತಿರುವವನಂತೆ ಅದನ್ನು ಕೇಳಿದ.
"ಹೇಳಿ ಮೇಡಮ್" ನಿಮ್ಮ್ ಅಪ್ಪಣೆಯೇ ಪರಮ ಪಾದ ಎಂಬಂತೆ ಇತ್ತು ಅವನ ದನಿ
"ನೋಡಿ ಹರೀಶ್ ಹೀಗೆಲ್ಲಾ ಮೇಡಮ್ ಅಂತೇನು ಕರೀಬೇಡಿ. ನಾನು ನಿಮ್ಮನ್ನ ನಮ್ಮನೆ ಕೆಲಸದವರು ಅಂತ ಅಂದ್ಕೊಂಡು ಮಾತಾಡ್ತಿಲ್ಲ. ಆಸ್ ಎ ಫ್ರೆಂಡ್ ನಿಮ್ಮನ್ನ ನೋಡ್ತಿದ್ದೇನೆ ದಯವಿಟ್ಟು ನನ್ನನ್ನು ಸ್ಮಿತಾ ಅಂತಾನೆ ಕರೆಯಿರಿ"
ಅವಳ ಮಾತು ಕೇಳುತ್ತಿದ್ದಂತೆ ಗಂಟಲಲ್ಲಿದ್ದ ಪಸೆ ಆರಿ ಹೋಯ್ತು
"ಇಲ್ಲ ಮೇಡಮ್ ,............ ನೀವೆಲ್ಲಿ .....ನಾನೆಲ್ಲಿ ಸಾಧ್ಯಾನೆ ಇಲ್ಲ" ತಡವರಿಸಿ ಹೇಳುತ್ತಿದ್ದನಾದರೂ ಅವಳ ಆ ಮಾತು ಅವನ ಮನದಲ್ಲಿ ಆನಂದಹುಟ್ತಿಸಿದ್ದು ಸುಳ್ಳಲ್ಲ.
"ಇಲ್ಲ ಆಗುತ್ತೆ ನಾನೊಬ್ಬ ಸ್ಟಾರ್ ಅನ್ನೋದನ್ನ ಮರೆತು ಬಿಡಿ . ಆಗ ಆಗುತ್ತೆ ................. ಹೇಳಿ ಮರೆತ್ರಾ?" ಕೋಗಿಲೆಯಂತೆ ಕೊಂಕಾಗಿ ದನಿಯನ್ನು ಎಳೆದಳು. ಅವಳು ಅದನ್ನು ಹೇಳುವಾಗ ತನ್ನ ಮುಂಗುರಳನ್ನು ಹಿಂದೆ ಸರಿಸಿ ಅಪ್ಪಣೆ ಕೊಡುವಂತೆ ಬಟ್ಟಲು ಗಣ್ಣನ್ನು ಅರಳಿಸುವದನ್ನು ಕಲ್ಪಿಸಿಕೊಂಡೆ ರೋಮಾಂಚನವಾಯ್ತು ಹರೀಶ್‌ಗೆ
"ಹಾ ಮರೆತೆ ಮೇಡಮ್" ಮತ್ತೆ ಮರೆತು ಮೇಡಮ್ ಎಂದು ಹೇಳಿದ
"ನೋಡಿ ಮತ್ತೆ ಮೇಡಮ್ ಸ್ಮಿತಾ ಅನ್ನಿ" ಅವಳ ದನಿಯಲ್ಲಿದ್ದ ಕೋಪ ಹಾಗು ಬೇಸರವನ್ನು ಗಮನಿಸಿದ. ಹಾಗೆ ಆ ಕೋಪದಲ್ಲಿ ಕೆಂಪಾಗಾಗಿರಬಹುದಾದ ಅವಳ ಕೆನ್ನೆಯನ್ನೂ ಮನದಲ್ಲಿ ಕಲ್ಪಿಸಿಕೊಂಡ.
"ಸಾರಿ ................ಸ್ಮಿತಾ " ಮೊತ್ತಮೊದಲ ಬಾರಿಗೆ ಹೆಣ್ಣೊಬಳನ್ನು ತನ್ನ ಸ್ನೇಹಿತೆಯಂತೆ ಕರೆದದ್ದು. ಎರಡನೆಯ ಪದ ಅವಳಿಗೆ ಕೇಳಿತೋ ಇಲ್ಲವೋ.
"ಆಯ್ತು ಹರೀಶ್ ಈಗ ಶೂಟಿಂಗ್ ಇದೆ . ರಾತ್ರಿ ಮಾತಾಡ್ತೇನೆ"
ಫೋನ್ ಆಫ್ ಮಾಡಿದಳು.
ಇವನು ಫೋನ್ ಆಫ್ ಮಾಡಿದ. ಸುತ್ತಾ ಯಾರಾದರೂ ತನ್ನ ಮಾತನ್ನು ಕೇಳಿಸಿಕೊಂಡಿದ್ದಾರೆಯೇ ಎಂದು ಗಮನಿಸಿದ. ಯಾರೂ ಇರಲಿಲ್ಲ .ನಿರಾಳವಾಗಿ ಉಸಿರು ಬಿಟ್ಟು ಶಿಳ್ಳೇ ಹಾಕುತ್ತಾ ಹೊರಟ .
ಇನ್ನೆರೆಡು ದಿನ ಸ್ಮಿತಾ ಶೂಟಿಂಗ್‌ಗೆ ಮೈಸೂರಿಗೆ ಹೋಗುತ್ತಿದ್ದಾಳೆಂದು ಆಳು ಮುನಿಯ ಹೇಳಿದಾಗ ಬೇಸರವಾಯ್ತು. ಹೇಗಿದ್ದರೂ ಅವಳು ಕಾಲ್ ಮಾಡುತಾಳಲ್ಲ ರಾತ್ರಿ ವಿಚಾರಿಸೋಣ ಎಂದುಕೊಂಡ
ಸ್ಮಿತಾ ಮನೆಯಲ್ಲಿ ಇಲ್ಲವಾದರೆ ಮನೆಗೆ ಬರುವವರು ಯಾರೂ ಇಲ್ಲವಾದ್ದರಿಂದ ಯಾವುದೇ ಕೆಲಸ ಇರಲಿಲ್ಲ
ಬೇಗನೇ ಬಂದು ಟಿವಿ ಆನ್ ಮಾಡಿದ. ಸ್ಮಿತಾಳದೇ ಹಾಡು . ಹೀರೊ ಅರವಿಂದ್ ಜೊತೆಗೆ ಕುಣಿಯುತ್ತಿದ್ದಳು. ಅವನ ಜೊತೆಗಿನ ಅವಳ ಭಂಗಿ ಹಿಡಿಸಲಿಲ್ಲ ಚಾನೆಲ್ ಚೇಂಜ್ ಮಾಡಿದ.
ಉದಯ ಟಿವಿಯಲ್ಲಿ ಸ್ಮಿತಾಳ ಸಂದರ್ಶನ ನಡೆಯುತ್ತಿತ್ತು.
ಅದರಲ್ಲಿ ಮುಂದೆ ತಾನು ಮತ್ತು ಅಮರ್ ಪಾಲ್ ಮದುವೆಯಾಗಬಹುದಾದ ಸಾಧ್ಯತೆಗಳನ್ನು ತಳ್ಳಿಹಾಕಲಿಲ್ಲ ಅವಳು.ಆದರೆ ಅವಳಿಗೆ ಉಂಟಾಗಿರಬಹುದಾದ ಮುಜುಗರವನ್ನು ಹರೀಶ ಮಾತ್ರ ಊಹಿಸಬಲ್ಲವನಾಗಿದ್ದ
ಮತ್ತೆ ಕಾಲ್ ಬಂತು
ಈ ಸಲ ಧೈರ್ಯ ಮಾಡಿ
"ಹೇಳಿ ಸ್ಮಿತಾ "ಎಂದೇ ಬಿಟ್ಟ
"ಥ್ಯಾಂಕ್ ಯು ಹರೀಶ್ . ನಿಮ್ಮ ದನಿಯಲ್ಲಿ ನನ್ನಹೆಸರು ಕೇಳಿ ಏನೊ ತುಂಬಾ ಸಂತೋಷ ಆಗುತ್ತಿದೆ" ಸ್ಮಿತಾಳ ದನಿಯಲ್ಲಿ ಸಡಗರ ಸಂತಸ ಕೇಳುತ್ತಿದ್ದರೆ. ಅವಳ ಮೊಗದಲ್ಲಿನ ಸಂತೋಷ ಊಹಿಸುತ್ತಿದ್ದ.
" ಹೇಳಿ ಸ್ಮಿತಾ ನಿಮ್ಮ ಮನಸಿನ ನೋವು ಹೇಳಿಕೊಳ್ಳಿ ನನ್ನ ಕೈನಲ್ಲಿ ಏನಾದರೂ ಸಹಾಯ ಆಗುತ್ತೋ ಹೇಳಿ . ಖಂಡಿತಾ ಮಾಡ್ತೀನಿ" ಮನಸಿನ ಮಾತು ಕೂಡಲೆ ಹೊರಗಡೆ ಹಾಕಿದ
"ಸಹಾಯಾನಾ ? ಯಾರು ಮಾಡ್ತಾರೆ . ಈ ಬದುಕಲ್ಲಿ ಹೆಣ್ಣು ಎಷ್ಟೇ ಹಣ ಇದ್ರೂ ಗಂಡಸಿನ ಎದುರು ಬಲ ಹೀನಳಾಗ್ತಾಳೆ. ಯಾರಾದ್ರೂ ಕೇಳಿದರೆ ನಗ್ತಾರೆ. ಅರಮನೆ ರಾಜಕುಮಾರಿಗೆ ಕಷ್ಟಾನ ಅಂತ. ನಿಜ ಹೇಳಕ್ಕಾಗದೆ ಒದ್ದಾಡ್ತಿದ್ದೀನಿ. ಸಹಾಯಾನ ನೀವಾದರೂ ಯಾಕೆ ಮಾಡ್ತೀರಾ. ನಿಮಗೆ ನಾನು ಏನಾಗಬೇಕಿದೆ ಹೇಳಿ" ಸ್ಮಿತಾಳ ದನಿಯಲ್ಲಿ ಅಳು ಕಾಣಿಸಿತು
"ಸ್ಮಿತಾ ನೀವು ನನ್ನ ಉಸಿರು. ನಿಜ ಹೇಳ್ಬೇಕೆಂದರೆ ನಾನು ಆ ಚಪ್ಪಲಿ ಅಂಗಡೀಗೆ ಕೆಲಸಕ್ಕೆ ಸೇರಿದ್ದೆ ನಿಮ್ಮನ್ನ ನೋಡಬೇಕಂತ . ನೀವು ನನ್ನಪಾಲಿಗಂತೂ ಭೂಮಿಗಿಳಿದ ದೇವತೆ. "ಬಡಬಡಿಸಿದ
"ಇದನ್ನ ನನ್ನ ಎಲ್ಲಾ ಅಭಿಮಾನಿಗಳೂ ಮಾಡ್ತಾರೆ. ನಾನು ಸ್ಟಾರ್ ನೀವು ಅಭಿಮಾನಿ ಅದು ಬಿಟ್ರೆ ಇನ್ನೇನಿದೆ ನಮ್ಮಿಬ್ಬರ ಸಂಬಂಧ? ನಾನು ಹೇಗಿದ್ದರೇನು ಅಭಿಮಾನಿಗಳಿಗೆ"
"ನಾನು ಬರೀ ಅಭಿಮಾನಿ ಅಲ್ಲ. ನಿಮ್ಮ ಸ್ನೇಹಿತ ಅಂತ ನೀವೇ ಹೇಳಿದ್ರಲ್ಲ ಸ್ಮಿತಾ . ಈ ನಿಮ್ಮ ಸ್ನೇಹಿತ ನಿಮಗಾಗಿ ಏನು ಬೇಕಾದರೂ ಮಾಡ್ತಾನೆ" ಅವನ ಕಣ್ಣಲ್ಲಿ ನೀರು ಬಂತು
"ನಾನೊಂದು ಮಾತು ಕೇಳಲಾ ?. ನಿಮ್ಮನ್ನ?"
"ಕೇಳಿ ಸ್ಮಿತಾ"
"ಕ್ಯಾನ್ ಯು ಗೀವ್ ಮಿ ಅ ಲೈಫ್?" ಅಲ್ಲಿಂದ ಬಂದ ಆ ಪದಗಳಿಗೆ ಅರ್ಥ ಹುಡುಕಿದ ಕೂಡಲೆ ಮೆದುಳು ಗ್ರಹಿಸಿ ಕೂಡಲೆ ಸ್ತಬ್ದವಾಯ್ತು
ಮಾತು ಹೊರಡಲಿಲ್ಲ. ಕಣ್ಣ ಮುಂದೆ ಅವಳದೇ ಚಿತ್ರ .
ಮೌನ ಮತ್ತು ಕೇವಲ ಉಸಿರು
ಅಲ್ಲಿಂದಲೂ ಮೌನ . ಇವನ ಉತ್ತರಕ್ಕಾಗಿ ಕಾಯುತ್ತಿದ್ದಳೇನೋ
ಸುಮಾರು ಕ್ಷಣಗಳು ಹಾಗೆಯೇ ಮೌನ.
ಕೊಂಚ ಹೊತ್ತಿನ ನಂತರ
ಫೋನ್ ಆಫ್ ಮಾಡಿದ್ದು ಕೇಳಿಸಿತು. ಆದರೂ ಫೋನ್ ಕಿವಿಗೆ ಹಿಡಿದೇಇದ್ದ
ಹರೀಶನಿಗೆ ಜಗದಲ್ಲೇನಾಗುತ್ತಿದ್ದೆ ಎಂದು ತಿಳಿಯಲಿಲ್ಲ. ಎಲ್ಲಾ ಗೋಜಲು ಗೋಜಲು
ಸ್ಮಿತಾ ನಗು ಮಾತ್ರ ಹೃದಯದಲ್ಲಿ ಕಣ್ಣಲ್ಲಿ
"ಕ್ಯಾನ್ ಯು ಗಿವ್ ಮಿ ಲೈಫ್ ? "ಎಂಬ ಪದಗಳೇ ಕಿವಿಯಲ್ಲಿ
ರಾತ್ರಿ ಊಟ ಕೂಡ ಬೇಕಿರಲಿಲ್ಲ.
ಮನಸ್ಸು ಏನನ್ನೂ ಯೋಚಿಸುವ ಸ್ಥಿತಿಯಲ್ಲಿರಲಿಲ್ಲ.
ಕೇವಲ ಸ್ಮಿತಾ ಸ್ಮಿತಾ ಸ್ಮಿತಾ ಎಂದು ಜಪಿಸುತ್ತಿತ್ತು

ರಾತ್ರಿ ಹೊದ್ದುಮಲಗಿದ್ದಷ್ಟೆ ನೆನಪು
ಕನಸಿನಲ್ಲಿಯೋ ಅವಳೇ. ಆಗಲೇ ನೋಡಿದ ಹಾಡಿನಲ್ಲಿ ಅರವಿಂದನ ಬದಲು ತನ್ನನ್ನು ನೋಡಿದಂತೆ ಕನಸು
(ಮುಂದುವರೆಯುವುದು)

Friday, May 29, 2009

ಪ್ರೇಮವೊಂದು ಹುಚ್ಚು ಹೊಳೆ- ಭಾಗ ೧

"ಹರೀಶ್ ನೋಡೋ ಅಲ್ಲಿ" ಸೋಮು ಕೂಗಿದ ಚಪ್ಪಲಿ ರಾಕಿನಲ್ಲಿ ಎತ್ತಿಡುತ್ತಿದ್ದ ಹರೀಶ್‌ನ ದೃಷ್ಟಿ ಬಾಗಿಲ ಕಡೆಗೆ ಬಿತ್ತು \
ಕನಸೋ ನನಸೋ ತಿಳಿಯದಾಯಿತು ಅವನ ಆರಾಧ್ಯ ಮೂರ್ತಿ, ಪ್ರಖ್ಯಾತ ಸಿನಿ ನಾಯಕಿ ಸ್ಮಿತ ನಿಂತಿದ್ದಳು
ಎಲ್ಲರೂ ಅವಳೆಡೆ ಓಡಿದರು
ಸ್ಮಿತಾ ಹೆಸರಿನಂತೆಯೇ ತನ್ನ ನಗುವಿನಿಂದಲೇ ಕನ್ನಡ ಸಿನಿ ರಂಗದಲ್ಲಿ ಮೋಡಿ ಮಾಡಿದ್ದಳು ಮಾದಕ ಸುಂದರಿ, ಕಣ್ನಿನಲ್ಲೇ ಕೊಲ್ಲುವ ಹುಡುಗಿ ಕೇವಲ ಮೂರು ವರ್ಷದಲ್ಲಿ ಇಡೀ ಚಿತ್ರರಂಗವನ್ನೇ ಆಳಲಾರಂಬಿಸಿದ್ದ್ದಳು
ಅಂತಹ ನಾಯಕಿ ಇಂದು ತಾನಾಗೆ ಈ ಚಪ್ಪಲಿ ಅಂಗಡಿಗೆ ಬಂದಿದ್ದಳು
ಹರೀಶ್ ಕೆಲ್ಸ ಮಾಡಿತ್ತಿದ್ದ ಚಪ್ಪಲಿ ಅಂಗಡಿಯೂ ಯಾವ ಐಶಾರಾಮಿ ಬಂಗಲೆಗೂ ಕಡಿಮೆ ಇರಲಿಲ್ಲ. ಚಪ್ಪಲಿಯ ಬೆಲೆ ಕಡಿಮೆಯದ್ದು ಎಂದರೆ ಇಪ್ಪತ್ತೈದು ಸಾವಿರ. ಹೆಚ್ಚಿಗೆ ಎಲ್ಲೆಯೇ ಇರಲಿಲ್ಲ.
ಸ್ಮಿತಾ ಬರುತ್ತಿರುವುದು ಮೊದಲ ಬಾರಿ ಏನಲ್ಲ ಆದರೆ ಹರೀಶ್ ಇತ್ತೀಚಿಗೆ ಈ ಅಂಗಡಿಗೆ ಕೆಲ್ಸಕ್ಕೆ ಸೇರಿದ್ದ . ಹಿಂದೆ ಇದ್ದ ಕೆಲಸ ಬಿಟ್ಟು ಸೇರಿದ್ದು ಕೇವಲ ಸ್ಮಿತ ಇಲ್ಲಿಗೆ ಬರುತ್ತಾಳೆಂದು.
ಮೊಬೈಲ್‌ನಲ್ಲಿ ಮಾತಾಡುತ್ತಾ ಒಳಗೆ ಬಂದ ಸ್ಮಿತಾಗೆ ಸನ್ನೆಯಲ್ಲೇ ಕೂರಲು ಹೇಳಿದ. ಆ ಮೆತ್ತನೆಯ ಸೋಫ ಕೇವಲ ಅಂತಹ ಗಣ್ಯರಿಗಾಗಿ ಮೀಸಲು. ಹರೀಶನಂತಹವರು ತಮಾಷೆಗಾಗಿಯೂ ಅಲ್ಲಿ ಕೂರುವಂತಿಲ್ಲ
ಫೋನಿನಲ್ಲೇ ಮಾತಾಡುತ್ತಾ ಕುಳಿತವಳನ್ನೇ ಎವೆ ಇಕ್ಕದೆ ನೋಡಲಾರಂಭಿಸಿದ. ಬದುಕಿನ ಸೌಭಾಗ್ಯವೆಲ್ಲಾ ಅಲ್ಲೇ ಇದೆ ಏನೋ ಎಂಬಂತೆ ಭಾಸವಾಗತೊಡಗಿತು ಬೇಡೆಂದರೂ ಮುಂದೆ ಬರುತ್ತಿದ್ದ ಮುಂಗುರಳನ್ನು ತನ್ನ ನೀಳ ಬೆರಳುಗಳಿಂದ ಹಿಂದೆ ಸರಿಸುತ್ತಾ ಅವಳ ತುಟಿಗಳೆರೆಡು ಒಂದರ ಮೋಡಿಗೆ ಇನ್ನೊಂದು ಒಳಗಾಗಿವೆ ಎಂಬಂತೆ ಪದೆ ಪದೆ ಮುತ್ತಿಡುತ್ತಿದ್ದಂತೆ ಇವನ ಮನದಲ್ಲಿ ಕಂಪನ ಕಣ್ಣ ಎವೆಗಳು ಅವಳ ಕಂಗಳನ್ನು ಚುಂಬಿಸಲೆಂದೆ ಬಾಗುತ್ತಿದ್ದವು. ನೀಳ ಮೂಗಿನ ಸುಂದರಿ ಅವಳು ಬೆಳ್ಳನೆ ಮೈ . ಹಾಲಿನ ಕೊಳದಲ್ಲೇ ಇದ್ದಾಳೇನೋ ಎಂಬಂಥಾ ರೂಪ ನೀಳ ಮೈ ಮಾಟ.
ಹರೀಶನ ಭಾಗ್ಯಕ್ಕೆ ಎಣೆಯೇ ಇಲ್ಲವಾಗಿತ್ತು.
"ಏಯ್ ಏಳೋ ಮೇಲೆ " ಗುಡುಗಿನ ಕೂಗಿಗೆ ಎಚ್ಚರವಾಗಿ ವಾಸ್ತವಕ್ಕೆ ಬಂದನು
ಅವಳನ್ನೇ ನೋಡುತ್ತಾ ಗೊತ್ತಿಲ್ಲದೆ ಅವಳ ಎದುರಿಗಿದ್ದ ಸೋಫಾ ಮೇಲೆ ಕೂತು ಬಿಟ್ಟಿದ್ದ. ಸ್ಮಿತಾಳ ಸೆಕ್ರೆಟರಿ ಬೊಬ್ಬೆ ಹೊಡೆಯುತ್ತಿದ್ದ.
"ಏನೋ ಮೇಡಮ್ ಸಮಕ್ಕೂ ಕೂತ್ಕೋತೀಯ ಈಡಿಯಟ್ ಏಳೋ ಮೇಲೆ " ಹರೀಶ್ ನಡುಗತೊಡಗಿದ. ಏನು ಹೇಳಲೂ ತೋಚಲಿಲ್ಲ
ಸ್ಮಿತಾ ಕೂಡ ಫೋನ್ ಆಫ್ ಮಾಡಿ ಸೆಕ್ರೆಟರಿಯತ್ತ ಏನು ಎಂಬಂತೆ ನೋಡಿದಳು
"ಮೇಡಮ್ ನೀವು ಮಾತಾಡ್ತಾ ಇದ್ದರೆ ನಿಮ್ಮನ್ನೇ ಒಳ್ಳೆ ತಿಂದುಬಿಡೋ ಹಾಗೆ ಇಷ್ಟು ಹತ್ರದಲ್ಲಿ ಕೂತ್ಕೊಂಡು ನೋಡ್ತಿದ್ದ ಇವನು" ಸೆಕ್ರೆಟರಿ ಆರೋಪಿಸಿ ಹರೀಶನನ್ನು ಕಡಿದುಬಿಡುವಂತೆ ನೋಡಿದ.
ಸ್ಮಿತಾ ಒಮ್ಮೆ ಹರೀಶನನ್ನು ನೋಡಿದಳು ಆ ನಡುಕದಲ್ಲಿಯೂ ಅವಳ ದೃಷ್ಟಿ ತನ್ನ ಮೇಲೆ ಹರಿದಿದ್ದಕ್ಕೆ ಜನ್ಮ ಪಾವನವಾಯ್ತು ಎಂದು ಕೊಂಡ.
ಮತ್ತೆ ಮಂದ ಸ್ಮಿತಳಾಗಿ "ರಾಜೀವ್ ಹೋಗಲಿ ಬಿಡಿ ಅವನಿಗೇ ಗೊತ್ತಿಲ್ಲದೆ ಹಾಗೆ ಮಾಡಿದ್ದಾನೆ. ಲೆಟ್ ಅಸ್ ನಾಟ್ ಮೇಕ್ ಇಟ್ ಬಿಗ್ ಇಶ್ಯೂ " ನುಡಿದಳು
ಒಮ್ಮೆ ಹರೀಶನತ್ತ ನೋಡಿ ನಕ್ಕಳು
ಇಂಗ್ಲೀಶ್ ಮಾತಾಡಲು ಬರದಿದ್ದರೂ ಅರ್ಥವಾಗುತಿತ್ತು
ಕೊನೆಗೆ ಕಸ್ಟಮರ್ ಕೇರ್ ಇಂದ ಒಬ್ಬರು ಬಂದು ಅವಳಿಗೆ ಸ್ಲಿಪ್ಪರ್ ತೋರಿಸಲು ಕರೆದು ಕೊಂಡು ಹೋದರು.
ರಾಶಿ ಬಿದ್ದಿದ್ದ ಚಪ್ಪಲಿಗಳನ್ನೆಲ್ಲ ಎತ್ತಿಡಲು ಬಗ್ಗುತ್ತಿದ್ದಂತೆ
"ಏನೋ ಹರಿ ಸ್ಮಿತಾ ನಿಂಗೆ ಸಪ್ಪೋರ್ಟ್ ಮಾಡಿದ್ರು. ಏನ್ ವಿಷಯ" ಗುರು ಕೀಟಲೆ ಮಾಡಿದ
"ಏನೋ ಒಂಥರಾ ಏನೋ ಒಂಥರಾ " ಸೋಮ ಹಾಡತೊಡಗಿದ .
ಇವನಿಗೋ ಮನದಲ್ಲಿ ಯಾವುದೋ ವೀಣೆ ಮಿಡಿದ ಹಾಗೆ ರಕ್ತವೆಲ್ಲಾ ಮುಖಕ್ಕೆ ಚಿಮ್ಮಿತು ಮೊದಲೇ ಬಿಳಿ ಮುಖ . ಈಗ ಕೆಂಪಗಾಗಿತ್ತು
ಸ್ಮಿತಾ ಕಾಲಿಗೆ ಹಾಕಿದ್ದ ಚಪ್ಪಲಿ ಬಿಟ್ಟು ಹೊಸ ಚಪ್ಪಲಿ ಹಾಕಿಕೊಂಡಳು. ಆ ಹಳೇ ಚಪ್ಪಲಿ ಯಾರು ಬೇಕಾದರೂ ತೆಗೆದುಕೊಳ್ಳಬಹುದಿತ್ತು. ಅವಳ ಕಾಲಿನ ಸ್ಪರ್ಶವಾಗಿದ್ದ ಆ ಚಪ್ಪಲಿಯನ್ನು ಪ್ರೀತಿಯಿಂದ ತೆಗೆದು ಒಂದು ಬಾಕ್ಸಿನಲ್ಲಿ ಹಾಕಿಟ್ಟ . ಅದನ್ನು ಅವಳೂ ನೋಡಿದಳು ಮತ್ತೊಮ್ಮೆ ಅವಳ ನೋಟ ಇವನ ನೋಟಕ್ಕೆ ಬೆರೆಯಿತು.
ಹರೀಶನ ಆನಂದ ಮೇರೆ ಮೀರಿತು ಹೋಗುವಾಗ ಬಾಯ್ ಹೇಳಿ ಹೊರಟಳು. ಸೆಕ್ರೆಟರಿ ಮಾತ್ರ ಸಿಡಿಮಿಡಿಗುಟ್ಟುತ್ತಿದ್ದ. ಅದಾದ ಎರಡೆ ದಿನಕ್ಕೆ ಹರೀಶ ಕೆಲಸ ಹೋಯಿತು.
ಕಾರಣ ಕೇಳಿದ್ದ್ದಕ್ಕೆ ಸ್ಮಿತಾ ಮೇಡಮ್ ತೆಗೆಯಲು ಹೇಳಿದ್ದಾರೆ ಎಂಬ ಉತ್ತರ ಬಂತು.
ಹರೀಶ ಗೋಗರೆದ ಬೇಡಿಕೊಂಡ. ಮನೆಯಲ್ಲಿ ತಂಗಿಯ ಮದುವೆಗೆ ಹಣ ಜೋಡಿಸಬೇಕು ಎಂದು ಅತ್ತ
ಮಾಲೀಕ ಮಾತ್ರ ಕಲ್ಲು ಹೃದಯಿಯಾಗಿದ್ದ
ಅಂದು ಅಷ್ಟೆಲ್ಲಾ ಬೆಂಬಲಿಸಿದ ಸ್ಮಿತಾ ಹೀಗೇಕೆ ಮಾಡಿದ್ದಾಳೆಂದು ಯೋಚಿಸುತ್ತಲೇ ಇದ್ದ.
ಸ್ವಲ್ಪ ಹೊತ್ತಿಗೆ ಅವನ ಮೊಬೈಲ್‌ಗೆ ಕಾಲ್ ಬಂತು ಇದ್ಯಾರಪ್ಪ ಎಂದು ಯೋಚಿಸುತ್ತಲೇ ಫೋನ್ ಆನ್ ಮಾಡಿದ
ಸ್ಮಿತಾ ಮೇಡಮ್ ಮನೆಯಿಂದ ಅದು "ಮೇಡಮ್ ಕೂಡಲೆ ಬರುವಂತೆ ಹೇಳಿದ್ದಾರೆ" ಎಂದು ಹೇಳಿದರು ಅಲ್ಲಿಂದ .
ಅನಿರೀಕ್ಷಿತ ಘಟನೆ . ಅದೇನೋ ನಿಜವೋ ಭ್ರಮೆಯೋ . ಏಕಿರಬಹುದು ಅವತ್ತು ಹಾಗೆ ನೋಡಿದ್ದಕ್ಕೆ ಸ್ಮಿತಾ ಕೋಪ ಮಾಡಿಕೊಂಡು ತನ್ನನ್ನು ಹೊಡೆಸಲು ಕರೆಸಿರಬಹುದೇ ಎಂಬ ಯೋಚನೆಯೂ ಬಂತು.
ಮೊಬೈಲ್ನಲ್ಲು ಸ್ಮಿತಾ ಚಿತ್ರವೇ. ಅದನ್ನು ನೋಡುತ್ತಾ ಇಲ್ಲ ಅದಿರಲಿಕ್ಕಿಲ್ಲ ಎಂದುಕೊಂಡು ಧೈರ್ಯ ಮಾಡಿಕೊಂಡು ಮನೆಗೆ ಹೋದ ವಾಚಮನ್ ಪರಿಚಯ ಕೇಲಿ ಅವನನ್ನು ಒಳಗೆ ಬಿಟ್ಟ.
ಮೇಲೆ ಬಾಲ್ಕನಿಯಲ್ಲಿ ಸ್ಮಿತಾ ನಿಂತಿದ್ದಳು ಜೊತೆಗೆ ಅವಳ ಗಾಡಫಾದರ್ ಅಮರ್ ಪಾಲ್ ಕೂಡ. ಇಬ್ಬರ ನಡುವೆ ಏನೋ ಮಾತು ಕಥೆ ನಡೆಯುತ್ತಿತ್ತು.
ಆ ಬಂಗಲೆ ನೋಡಿ ದಂಗಾಗಿ ಹೋದ ಅಬ್ಬಾ ಏನೋ ವೈಭವ ಅಂತಹ ಮನೆಗಳನ್ನು ಕೇವಲ ಸಿನಿಮಾದಲ್ಲಿ ಮಾತ್ರ ನೋಡಿದ್ದ. ಸ್ಮಿತಾಳನ್ನು ಕಾಣಲು ಜನವೋ ಜನ . ನಿರ್ಮಾಪಕರು, ನಿರ್ಧೇಶಕರು, ನಟರು, ನಾಯಕರು . ಸುಮಾರು ಜನ ಆಳುಕಾಳುಗಳು. ತಾನೆಲ್ಲಿ ನಿಲ್ಲುವುದು ಎಂದು ತಿಳಿಯದೆ ಹೊರಗಡೆಯೇ ನಿಂತಿದ್ದ ಅಷ್ಟರಲ್ಲಿ ಮನೆಯ ಆಳೊಬ್ಬ ಬಂದು ಮನೆಯ ಹಿಂದಿನ ಪಾರ್ಕ್ ಬಳಿ ಹೋಗಲು ಹೇಳಿದ.
ತಡಕಾಡಿಕೊಂಡು ಅಲ್ಲಿ ಹೋದ ಸ್ಮಿತಾ ಸೆಕ್ರೆಟರಿ ರಾಜೀವ್ ಇದ್ದ ಅಲ್ಲಿಯೇ
"ನೋಡಪ್ಪ ಮೇಡಮ್ ನಿನ್ನನ್ನ ಅವರ ಮನೆಗೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಅಂತ ಇಷ್ಟ ಪಟ್ಟಿದ್ದಾರೆ ಇದೇ ಮನೆಲಿ ಕೆಲಸ ಬಂದೋರಿಗೆ ಕೂರಿಸಿ ಅವರನ್ನ ನೋಡಿಕೊಳ್ಳೋದು ಉಪಚಾರ ಮಾಡೋದು ಅಷ್ಟೆ . ಸಂಬಳ ಚಪ್ಪಲಿ ಅಂಗಡೀಗಿಂತ ಜಾಸ್ತಿ ಸರೀನಾ ಇವತ್ತಿಂದಾನೆ ಜಾಯಿನ್ ಆಗು ಆಯ್ತಾ. ಅಂದ ಹಾಗೆ ನಿಂಗೊಂದು ರೂಮ್ ಕೂಡ ಇದೆ ನೀನುಇಲ್ಲೇ ಇರಬೇಕು ಗೊತ್ತಾಯ್ತಾ" ಅವನು ಹರೀಶನ ಯಾವ ಉತರಕ್ಕೂ ಕಾಯಲಿಲ್ಲ. ಇದು ಅಪ್ಪಣೆ ಎಂಬಂತೆ ಇತ್ತು ಅವನ ಮಾತಿನ ಧಾಟಿ
ಹರೀಶನ ಮನಸ್ಸು ಆಗಸದಲ್ಲಿ ಓಲಾಡಿತು. ಎಂಥ ಭಾಗ್ಯ. ಸ್ಮಿತ ದ ಗ್ರೇಟ್ ಮೇಡಮ್ ನನ್ನನ್ನು ಅವರ ಮನೆಯ ಕೆಲಸಕ್ಕೆ ಕರೆದು ಸೇರಿಸಿಕೊಂಡಿದ್ದಾರೆ ಎಂಬುದನ್ನು ನೆನೆಸಿ ನೆನೆಸಿ ಸಂತಸ ಪಡಲಾರಂಭಿಸಿದ .
ಅಂದೇ ಅವನ ಮನೆಯಿಂದ ಅವನ ವಸ್ತುಗಳೆಲ್ಲಾ ಅವನ ಹೊಸ ರೂಮಿಗೆ ರವಾನೆಯಾದವು. ಹರೀಶನ ಅಮ್ಮ ಹಾಗು ತಂಗಿಗೂ ಖುಶಿ .
ದೊಡ್ಡ ಹೀರೋಯಿನ್ ಮನೇಲಿ ಮಗ ಕೆಲ್ಸ ಮಾಡುತ್ತಾನೆ ಎಂಬುದೇ ಅವರಿಗೆ ಹಿಗ್ಗಿನ ವಿಷ್ಯ.
ಆದರೆ ಕೆಲಸಕ್ಕೆ ಬಂದ ದಿನ ಅವನಿಗೆ ನಿರಾಸೆ. ಒಟ್ಟು ಹದಿನೈದು ಜನ ಕೆಲಸದವರು.
ಅವರಲ್ಲಿ ಐದು ಜನ ಇದೇ ಕೆಲಸಮಾಡುತ್ತಿದ್ದವರು. ಅದರಲ್ಲಿ ಅವನಿಗೆ ಕೆಲಸವೇ ಇಲ್ಲ.
ಸ್ಮಿತಾ ಬೆಳಗ್ಗೆ ಹೋಗುವಾಗ ಇವನತ್ತ ಕೈ ಬೀಸಿದಳು. ಅಷ್ಟು ಸಾಕಾಗಿತ್ತು. ಅಂದೆಲ್ಲಾ ಕೆಲಸವಿಲ್ಲದೆ ಕೂತಿದ್ದ. ಹೊತ್ತು ಹೊತ್ತಿಗೆ ಊಟ ಸಿಕ್ಕಿತು.
ಜೊತೆಗೆ ಕೆಲ್ಸದಾಳು ಮುನಿಯನ ಜೊತೆ ಕೂತಾಗ ಸ್ಮಿತಾಳ ಹಿಂದಿನ ವಿಷ್ಯಗಳು ತಿಳಿದವು "ಸ್ಮಿತಾ ಹುಟ್ಟಿದ್ದು ಯಾವುದೋ ಸ್ಲಮ್ಮಿನಲ್ಲಿ ಆದರೆ ಅವಳ ರೂಪು ಲಾವಣ್ಯಗಳಿಂದ ನಿರ್ಮಾಪಕ ಅಮರ್ ಪಾಲ ಕಣ್ಣಿಗೆ ಬಿದ್ದಳು. ಅಮರ್ ಪಾಲ್‌ರ ಅಪ್ಪಣೆಯಿಲ್ಲದೆ ಅವಳು ಯಾವ ಪ್ರಾಜೆಕ್ಟ್ ಅನ್ನೂ ಕೈಗೆತ್ತಿಕೊಳ್ಳುವುದಿಲ್ಲ. ಅವಳ ಸಂಭಾವನೆಯನ್ನೂ ಅವನೆ ಗೊತ್ತು ಮಾಡುವುದು. ಮುಂದೆ ಅವರಿಬ್ಬರೂ ಮದುವೆಯಾಗಬಹುದು ಎಂದಾಗ ಮಾತ್ರ ಹರೀಶನ ಮನದಲ್ಲಿ ಕಸಿವಿಸಿಯಾಯ್ತು.
ಅವಳ ವಯಸ್ಸು ಇಪ್ಪತ್ತಿರಬಹುದು . ಅಮರಪಾಲ್ ತನ್ನಪ್ಪನ ಕಾಲದಿಂದಲೂ ಚಲನ ಚಿತ್ರ ನಿರ್ಮಿಸುತ್ತಿದ್ದಾನೆ. ಏನಿಲ್ಲ ಎಂದರೂ ಐವತ್ತಕ್ಕಿಂತ ಹೆಚ್ಚು ಇರಬಹುದುಅವನ ವಯಸ್ಸು . ಅವನಂತ ಮುದಿಗೂಬೆಗೆ ಇಂತಹ ದಂತದ ಗೊಂಬೆಯೇ? ಭಗವಂತಾ ಯಾವ್ಯಾವ ಹೂವಿನ ಮೇಲೆ ಯಾರ್ಯಾರ ಹೆಸರನ್ನು ಬರೆದಿಟ್ಟಿದ್ದೀಯೋ ಎಂದುಕೊಂಡಾಗ- ಭಗವಂತ ಈ ಹೂವಲ್ಲಿ ನಿನ್ನ ಹೆಸರಿದೆ ಎಂದಂತೆ ಭಾಸವಾಗಿ ಪುಳಕೊಗೊಂಡ.
ಅಂದು ರಾತ್ರಿ ಹನ್ನೆರೆಡಾಗಿತ್ತು ಚೆನ್ನಾಗಿ ತಿಂದು ಗಡದ್ದಾಗಿ ನಿದ್ರಿಸುತ್ತಿದ್ದ .ಅವನ ಮೊಬೈಲ್ ಕೂಗಿತು . " ಬಂದಿದೆ ಬದುಕಿನ ಬಂಗಾರದಾ ದಿನ" ಎಂಬ ಹಾಡದು ಅವನ ತಂಗಿ ಸೆಟ್ ಮಾಡಿಟ್ಟಿದ್ದಳು. ನಿದ್ದೆಗಣ್ಣು ಆ ನಂಬರ್ ಯಾರದು ಅಂತಲೂ ತಿಳಿಯಲಿಲ್ಲ ಯಾರಪ್ಪ ಇಷ್ಟು ಹೊತ್ತಲ್ಲಿ ಎಂದುಕೊಂಡು "ಹಲೋ" ಎಂದ "ಹ...ಲೋ" ಎಂಬ ಇಂಪಾದ ದನಿ ಎಲ್ಲೋ ಕೇಳಿರುವಂತಿದೆಯಲ್ಲಾ ಕೂಡಲೆ ನೆನಪಿಗೆ ಬಂತು ಸ್ಮಿತಾ ತನ್ನ ಚಿತ್ರಗಳಿಗೆ ತಾನೆ ಡಬ್ ಮಾಡುತ್ತಿದ್ದುದರಿಂದ ಅವಳ ದನಿ ಅವನಿಗೆ ಪರಿಚಿತವಾಗಿತ್ತು "ಮೇ..................................ಡ..............................ಮ್?" ನಡುಗುವ ದನಿಯಲ್ಲಿ ಕೇಳಿದ ಅವಳು ತನ್ನೊಂದಿಗೆ ಮಾತನಾಡಬಹುದು ಎಂಬ ಕಲ್ಪನೆಯೂ ಇರಲಿಲ್ಲ
"ನಾನು ಜೋರಾಗಿ ಮಾತಾಡೋಹಾಗಿಲ್ಲ್ಲ ದಯವಿಟ್ಟು ನೀವೂ ಜೋರಾಗಿ ಮಾತಾಡಬೇಡಿ ನಾನು ಹೇಳೋದು ಕೇಳಿಸಿಕೊಳ್ಳಿ" ಎಂದಳು
ಇಂತಹ ಮಹಾರಾಣಿಗೆ ಮಾತನಾಡಲೂ ಕಷ್ಟವೇ . ಅಯ್ಯೋ ಎನಿಸಿತು ಅವಳು ಮಾತಾಡತೊಡಗಿದಳು ಎಲ್ಲವನ್ನು ಕೇಳಿಸಿಕೊಂಡ
ಅವಳು ನಾಳೆ ಮತ್ತೆ ಮಾಡುವುದಾಗಿ ಹೇಳಿ ಫೋನಿಟ್ಟಳು ದಂಗಾಗಿ ಕುಳಿತ .
ಮತ್ತೊಮೆ ಅವಳ ಮಾತುಗಳು ಮಾರ್ದನಿಸತೊಡಗಿದವು
"ಸಾರಿ ನನ್ನ ಮನಸಲ್ಲಿ ಇರೊದೆಲ್ಲಾ ಎಲ್ಲಾದ್ರೂ ಹೇಳಿಕೊಳ್ಬೇಕು ಅಂತ ಅನ್ನಿಸ್ತಿತ್ತು ಆದರೆ ಹೇಳಿಕೊಳ್ಳೋಕೆ ಕೇಳ್ಸಿಕೊಂಡು ಸಮಾಧಾನ ಮಾಡೋ ಅಂತಹ ಯಾವುದೂ ಹೃದಯಾನೂ ಸಿಗಲಿಲ್ಲ. ಆದರೆ ನಿಮ್ಮನ್ನ ಆವತ್ತು ಚಪ್ಪಲಿ ಅಂಗಡೀಲಿ ನೋಡಿದಾಗಿನಿಂದ ನೀವೆ ನನ್ನ ದನಿಗೆ ಕಿವಿಯಾಗಬಲ್ಲವರು ಅಂತ ಅನ್ನಿಸಿತು. ನಾನು ಎಲ್ಲರ ಹೃದಯಕ್ಕೂ ರಾಣಿ ಆದರೆ ನನ್ನ ರಾಜನನ್ನ ಆರಿಸೋ ಸ್ವಾತಂತ್ರ್ಯ ನಂಗೆ ಇಲ್ಲ. ನಂಗೆ ಬೀದೀಲಿ ಸುತ್ತಬೇಕು. ಸಾಮಾನ್ಯನೊಬ್ಬನ ಹೆಂಡತಿಯಾಗಬೇಕು.ಅವ್ನು ಬೀದಿಲಿ ಕೊಡಿಸೋ ಪಾನಿಪೂರಿ ಮಸಾಲೆ ಪೂರಿ ತಿನ್ನುತ್ತಾ ಥಿಯೇಟ್‌ರ್ ಗೆ ಹೋಗಿ ಸಿನಿಮಾ ನೋಡಬೇಕು ಅಂತೆಲ್ಲಾ ಆಸೆ ಇದೆ. ಆದರೆ ನಾನು ನನ್ನಿಷ್ಟ ಬಂದ ಹಾಗೆ ಇರೋ ಹಾಗಿಲ್ಲ . ಅಮರಪಾಲ್ ನಂಗೆ ಸಿನಿಮಾರಂಗಕ್ಕೆ ಕರೆದುಕೊಂಡು ಬಂದರು ನಿಜಾ ಆದರೆ ನಂಗೆ ಅವರು ತಂದೆ ಇದ್ದ ಹಾಗೆ ಅವರನ್ನು ಯಾವತ್ತೂ ಮದುವೆಯಾಗೋ ದು ಮನಸಲ್ಲಿ ಇಲ್ಲ . ಆದರೆ ನಾನು ಅವರನ್ನೇ ಮದುವೆಯಾಗಬೇಕು ಅಂತ ಅವರ ಒತ್ತಾಯ. ಇಲ್ಲವಾದರೆ ಬಲವಂತವಾಗಿಯಾದರೂ ನನ್ನನ್ನ ಮದುವೆಯಾಗ್ತೀನಿ ಅಂತ ಹೇಳಿದಾರೆ. ನಂಗೆ ನಿಜಕ್ಕೂ ಇಷ್ಟ ಇಲ್ಲ. ಆದರೆ ಅವರನ್ನು ಎದುರು ಹಾಕಿಕೊಳ್ಳೋದಿಕ್ಕೂ ಭಯ . ನಾನೇನ್ಮಾಡಲಿ ಅನ್ನೋದೆ ಪ್ರಶ್ನೆಯಾಗಿ ಹೋಗಿದೆ."
ಆ ಮಾತುಗಳೇ ಮತ್ತೆ ಮತ್ತೆ ಅವನ ತಲೆಯಲ್ಲಿ ಸುತ್ತತೊಡಗಿದವು ಹರೀಶನ ಕಣ್ಣಲ್ಲಿ ನೀರು ಬಂತು ಪಾಪ ದೊಡ್ಡವರ ಬಾಳೇ ಹೀಗೆಯೇ ಹೇಗಾದರೂ ಮಾಡಿ ಸ್ಮಿತಾಗೆ ಸಹಾಯ ಮಾಡಬೇಕು ಆದರೆ ಹೇಗೆ? ಬಡವ ನೀ ಮಡಗಿದಂಗಿರು ಅಂತ ಸುಮ್ಮನೆ ಇರೋಣ . ನಮಗ್ಯಾಕೆ ಇವರ ವಿಷಯ ಬೆಡ್ ಶೀಟ್ ಎಳೆದುಕೊಂಡು ಮಲಗಿದ.
ಆದರೂ ಅವಳ ಬಗ್ಗೆ ಮರುಕ ಮೂಡದಿರಲಿಲ್ಲ (ಮುಂದುವರೆಯುವುದು)

Thursday, May 28, 2009

ಹೆಸರಿನ ಹಂಗಿಲ್ಲದ ಸಂಬಂಧ

ಆಕೆ ಹಾಗೆ ಜೀವನದ ಪ್ರತಿಯೊಂದು ಘಳಿಗೆಯನ್ನ ಇಂಚಿಂಚಾಗಿ ಅನುಭವಿಸಬೇಕೆನ್ನುವಳು. ಪ್ರತಿಯೊಂದು ಘಳಿಗೆಯೂ ಅವಳಿಗೆ ಸ್ಮರಣೀಯವಾಗಬೇಕೆಂಬ ಬಯಕೆ. ಪ್ರತಿ ಕ್ಷಣದಲ್ಲೂ ಯಾವುದಾದರೂ ಘಟನೆ ನಡೆಯುತ್ತದೆ ಎನ್ನುವ ನಿರೀಕ್ಷೆ ಇಟ್ಟವಳು.
ಹಾಗೆ ಆ ಹುಡುಗನೂ ಸುಂದರ ಕನಸುಗಳ ಸುತ್ತಾ ಚಲಿಸುವವ. ಮಾತಿನಲ್ಲಿ ಪ್ರಪಂಚದ ಅಷ್ಟೂ ಸೊಗಸನ್ನು ಕಟ್ಟಿಕೊಡಬಲ್ಲವನು. ವಾಸ್ತವಕ್ಕಿಂತ ಕಲ್ಪ್ನನಾ ಲೋಕದ ಸಂಚಾರಿ
ಇಬ್ಬರೂ ಅಕಾಶ ಇಷ್ಟಿರಬೇಕಿತ್ತು ಭೂಮಿ ಚಪ್ಪಟೆಯಾಗಿರಬೇಕಿತ್ತು ಎಂಬೆಲ್ಲ್ಲಾ ಅಸಾಧ್ಯ ವಿಷಯಗಳನ್ನು ಮಾತನಾಡುತ್ತಾ ಕಾಲ ಕಳೆಯುತ್ತಿದ್ದರು. ಪುಸ್ತಕಗಳ ಮುಖ ಪುಟದ ಶೈಲಿಯಿಂದ ಹಿಡಿದು ಅವುಗಳಕೊನೆಯ ಪುಟದ ವರೆಗೆ ಪ್ರತಿಯೊಂದು ಪುಟವನ್ನೂ ಬಿಡದೆ ಚರ್ಚಿಸುತ್ತಿದ್ದರು.

ಅವಳು ಕಾಲೇಜಿನ ಉಪನ್ಯಾಸಕಿ ಈತನೋ ಅದೇ ಕಾಲೇಜಿನ ವಿದ್ಯಾರ್ಥಿ ಇಬ್ಬರ ನಡುವೆಯೂ ಮಾತಿಗೆ ಕೊರತೆ ಇರಲಿಲ್ಲ
ಮಾತು ಮಾತಿಗೆ ನಗು ನಲಿವು . ಪ್ರಪಂಚದ ಸುಂದರ ಕ್ಷಣಗಳನ್ನು ನಿಷ್ಕಪಟ ಮನದಿಂದ ಆಸ್ವಾದಿಸುತ್ತಿದ್ದರು.ಇಬ್ಬರ ಮನದಲ್ಲೂ ಯಾವುದೇ ಅಪನಂಬಿಕೆ ಇರಲಿಲ್ಲ.
ಕಾಲೇಜು ಬಿಡುತ್ತಲೇ ಈತ ಲೈಬ್ರರಿಯಲ್ಲಿ ಹಾಜಾರು .ಈಕೆಯೂ ಹಿಂದೆಯೇ . ಜೊತೆ ಜೊತೆಗೆ ಕೂತು ಪುಸ್ತಕಗಳನ್ನೆಲ್ಲಾ ಶೋಧಿಸಿ ತಮಗೆ ಹಿಡಿಸಿದ ಪುಸ್ತಕಗಳನ್ನು ಓದುತ್ತಿದ್ದರು. ಅವಳು ಓದಿದ್ದನ್ನು ಅವನಿಗೆ ಅವನು ತನಗನಿಸಿದ್ದನ್ನು ಅವಳಿಗೆ ಹೇಳಿ ಖುಷಿ ಪಡುತ್ತಿದ್ದರು.
ಹಿಡಿಸಿದ ನಾಟಕ , ಸಿನಿಮಾ, ಸ್ಥಳಗಳಿಗೆಲ್ಲಾ ಸುತ್ತಾಡತೊಡಗಿದ್ದರು. ಅವರ ಸಂಬಂಧ ಗುರು ಶಿಷ್ಯರನ್ನು ಮೀರಿದ್ದಾಗಿತ್ತು. ಆದರೆ ಅದೇನು ಸ್ನೇಹವೇ ಅಥವ ಪ್ರೀತಿಯೇ ಎಂಬುದು ಕಾಲೇಜಿನ ಎಲ್ಲರಿಗೂ ಎಲೆ ಅಡಿಕೆಯಾಗಿತ್ತು. ಕಾಲೇಜಿನವರ ಗುಸುಗುಸು ಪಿಸುಮಾತು ಅವರನ್ನು ತೊಂದರೆಗೊಳಿಸಲಿಲ್ಲ
ಅವರಿಬ್ಬರಿಗೂ ಗೊತ್ತಿತ್ತು ತಾವು ಪ್ರೇಮಿಗಳಲ್ಲ ಸ್ನೇಹಿತರಲ್ಲ. ಸ್ನೇಹಕ್ಕೂ , ಪ್ರೇಮಕ್ಕೂ ಮೀರಿದ , ಪದಗಳಲ್ಲಿ ಹೇಳಲಾಗದ ಮಾತಿನಲ್ಲಿ ವರ್ಣಿಸಲಾಗದಂತಹ ನಂಟಿದು ಎಂದು.
ಒಮ್ಮೊಮ್ಮೆ ಅವಳೂ ಯೋಚಿಸುತ್ತಿದ್ದಳು .ತಾನೇಕೆ ಅವನ ಬಳಿ ಇಂತಹ ಆತ್ಮೀಯತೆ ಹೊಂದಿದ್ದೇನೆ. ಗಂಡನನ್ನೂ ಅವನನ್ನೂ ಪ್ರೀತಿಯ ತಕ್ಕಡಿಯಲ್ಲಿ ನಿಲ್ಲಿಸಿದರೆ ಆ ಹುಡುಗನೇ ಹೆಚ್ಚು ತೂಕ . ಗಂಡನೂ ಒಳ್ಳೆಯವನೇ ಆದರೆ ಭಾವನೆಗಳ ಮಹಾಪೂರದಲ್ಲಿ ಕೊಚ್ಚುವ ವ್ಯಕ್ತಿಯಲ್ಲ. ಅವಳ ಕಲ್ಪನೆಗೆ ರೆಕ್ಕೆ ಆಗಲೊಲ್ಲ. ಕನಸಿಗೆ ಸಾಗರವಾಗುವಂತಹವನಲ್ಲ. ಎಷ್ಟೋ ಬಾರಿ ಅವಳ ಕಾಲ್ಪನಿಕ ಜಗತ್ತನ್ನು ಕೀಟಲೆ ಮಾಡಿದ್ದಾನೆ ಅವಳ ಓದಿನ ಹುಚ್ಚಿಗೆ ಹಣ ವ್ಯರ್ಥವಾಗುತ್ತಿರುವುದಕ್ಕೆ ಬೈದಿದ್ದಾನೆ, ಅವಳ ಮನದಾಳ ಭಾವನೆಗಳಿಗೆ ಸ್ಪಂದಿಸಿ ಅದಕ್ಕೆ ಪ್ರತ್ಜಿ ಭಾವನೆ ಕೊಡುವ ಹೃದಯಕ್ಕಾಗಿ ಹಾತೊರೆಯುತ್ತಿದ್ದಳು. ಆ ಹೃದಯ ಅವಳದೇ ಪ್ರತಿ
ಮನೆಯಲ್ಲಿ ಗಂಡನಿಗೆ ಈಬಗ್ಗೆ ಬೇಸರ. ಎಷ್ಟೇ ಎಜುಕೇಟೆಡ್ ಆದರೂ ಅವನೂ ಗಂಡನಲ್ಲವೇ.
ಆಗಾಗ ಮನೆಯಲ್ಲಿ ಈಬಗ್ಗೆ ಮಾತಾಗುತ್ತಿತ್ತು. ಆದರೆ ತನ್ನ ಮನದಲ್ಲಿದ್ದ ಭಾವನೆಯನ್ನು ಮಾತಿನಲ್ಲಿ ಹೇಳಲು ಗಂಡನಿಗೆ ಕಷ್ಟ . ತಾನೇನಾದರೂ ಚೀಪ್ ಎಂದುಕೊಂಡರೆ ಎಂದು ಹಾಗಾಗಿಯೇ ಯಾವುದೇ ಅಪಮಾತು ಮನೆಯಲ್ಲಿ ಬರುತ್ತಿರಲಿಲ್ಲ
ಆದರೆ ಇದೊಂದು ಥರ ಶೀತಲ ಸಮರವಾಗಿತ್ತು. ಸಂಸಾರದ ಹಡುಗಿನಲ್ಲಿ ಅಪನಂಬಿಕೆ ಪ್ರಯಾಣಿಕನಾದರೆ ಹಡಗು ಸರಾಗವಾಗಿ ಸಾಗುವುದೆಂತು? ಅವರಿಬ್ಬರ ನಡುವೆ ಮೌನ ತಾಂಡವವಾಡತೊಡಗಿತು. ಇಬ್ಬರಿಗೂ ಅರಿವಿಲ್ಲದೇ ಕಂದರವೊಂದು ಬೆಳೆಯುತ್ತಾ ಬೆಳೆಯುತ್ತಾ ಬೃಹದಾಕಾರವಾಯ್ತು.
ಆದರೆ ಅವಳು ಕೇರ್ ಮಾಡಲಿಲ್ಲ. ಅವಳಿಗೆ ಆ ಹುಡುಗನ ಬಗ್ಗೆ ಎಲ್ಲಿಲ್ಲದ ಮಮತೆ. ಅವನನ್ನು ಒಮ್ಮೆಯಾದರೂ ದಿನದಲ್ಲಿ ನೋಡಲಿಲ್ಲವಾದರೂ ಅವಳಿಗೆ ಏನೋ ಸಂಕಟ. ಅದು ಪ್ರೇಮಿ ತನ್ನ ಪ್ರೇಮಿಯನ್ನು ಕಾಣದೆ ಪಡುವ ಪರಿತಾಪವಲ್ಲ, ಕಾಮಕ್ಕಾಗಿ ಕಾಯುವ ಕಾಮಿನಿಯ ಹಾತೊರೆತವಲ್ಲ. ಅಮ್ಮ ಕಂದನಿಗಾಗಿ ಹಾಡುವ ಹಂಬಲವಲ್ಲ. ಏನೋ ಒಂದು ರೀತಿಯ ಬಂಧ ಅದು ಯಾವುದೆಂದು ಅವಳಿಗೂ ತಿಳಿಯಲಿಲ್ಲ
ಅತ್ತ ಇನ್ನೂ ಡಿಗ್ರೀ ಮಾಡುತ್ತಿದ್ದ ಹುಡುಗ ತನಗಿಂತ ಹಿರಿಯವಳಾದ ಅದೂ ಮದುವೆಯಾದ ಹೆಣ್ಣಿನ ಜೊತೆ ಸುತ್ತಾಡುತ್ತಿದ್ದಾನೆ ಎಂಬ ಮಾತು ಹೆತ್ತವರನ್ನು ಚಿಂತೆಗೀಡು ಮಾಡಿತು. ಮನೆಯಲ್ಲಿ ಈ ಬಗ್ಗೆ ಪ್ರಶ್ನಾವಳಿ ಸುತ್ತತೊಡಗಿತು . ಅವನು ನಕ್ಕು ಕೇಳಿದ
ನಮ್ಮಿಬ್ಬರ ನಡುವಳಿಕೆಯಲ್ಲಿ ಯಾವ ಕಪ್ಪು ಕಲೆ ಕಾಣಿಸಿತು ನಿಮಗೆ . ಹುಡುಗನ ಮನೆಯವರಿಗೆ ಉತ್ತರಿಸಲಾಗಲಿಲ್ಲ
"ನೀವು ಎಲ್ಲೆಂದರಲ್ಲಿ ಸುತ್ತಾಡುತ್ತಿದ್ದೀರಾ .ಅವಳೂ ಮದುವೆಯಾದವಳು ಅವಳ ಬಾಳನ್ನು ಹಾಳು ಮಾಡಬೇಡ" ಎಂದೆಲ್ಲಾ ನುಡಿದರು
ಅವರ ಯಾವ ಮಾತಿಗೂ ಸೊಪ್ಪುಹಾಕಲಿಲ್ಲ
ಕೊನೆಗೆ ಅವಳನ್ನು ಕಾಲೇಜಿನಿಂದ ಕಿತ್ತೆಸೆದರು. ಅವಳು ಬೇರೆಡೆ ಕೆಲಸಕ್ಕೆ ಹೋಗಲಾರಂಭಿಸಿದಳು
ಆದರೂ ಅವಳ ಅವನ ಒಡನಾಟ ಮುಂದುವರೆಯುತ್ತಲೇ ಇತ್ತು
ಕಾಲೇಜಿನ ಲೈಬ್ರರಿ ಇಲ್ಲದಿದ್ದರೇನಂತೆ ಸಿಟಿ ಲೈಬ್ರರಿ ಇದೆಯಲ್ಲಾ . ಅಲ್ಲಿ ಕಾಲ ಕಳೆಯಲಾರಂಭಿಸಿದರು.
ಇತ್ತ ಗಂಡನಿಗೆ ತಲೆ ಕೆಟ್ತಿತು
ಅವನ ಒಡನಾಟ ಬಿಡಲು ಹೇಳಿದೆ . ಅವಳು ಕೇಳಲಿಲ್ಲ. ಗಂಡ ಬಿಟ್ಟು ಹೋದ ಎಂಬುದಕ್ಕಿಂತ ಇವಳೇ ಬಿಟ್ಟು ಬಂದಳು. ಇತ್ತ ಹುಡುಗನ ಮನೆಯಲ್ಲೂ ಗಲಾಟೆಯಾಯ್ತು. ಹುಡುಗ ಮನೆ ಬಿಟ್ಟು ಬಂದ
ಯಾರೋ ಹೇಳಿದರು . " ಸುಮ್ಮನೆ ಹೀಗೇಕೆ ಇಬ್ಬರೂ ಮದುವೆಯಾಗಿ ಬಿಡಿ "
ಇಬ್ಬರೂ ನಕ್ಕರು.
ಮದುವೆಯಾಗಲಿಲ್ಲ.
ಅವಳೊಂದು ಮನೆಯಲ್ಲಿ ನೆಲೆಸಿದಳು ಅವನು ಇನ್ನೊಂದು ಮನೆಯಲ್ಲಿ ನೆಲೆಸಿದನು
ಇಬ್ಬರ ನಂಟೂ ಮುಂದುವರೆಯುತ್ತಲೇ ಇದೆ ತಮ್ಮ ತಮ್ಮ ಮಾತಿನಲ್ಲಿ ಓದಿನಲ್ಲಿ . ಪುಸ್ತಕ ವಿಮರ್ಶೆಯಲ್ಲಿ , ಪರಸ್ಪರರ ಗೌರವದಲ್ಲಿ ಆತ್ಮೀಯತೆ ಹೆಚ್ಚಾಗುತ್ತಲೇ ಇದೆ
ಯಾವುದೆ ಹೆಸರಿನ ಹಂಗಿಲ್ಲದ ಸಂಬಂಧ, ಸಮಾಜದ ಕಟ್ಟು ಪಾಡುಗಳನ್ನು ಮೀರಿ ಗಂಡು ಹೆಣ್ಣಿನ ಹೊಸ ನಂಟಿಗೆ ಭಾಷ್ಯ ಬರೆಯುತ್ತಾ , ಹೀಗೂ ಇರಬಹುದೆಂಬ ನೂತನ ಸಂದೇಶದೊಂದಿಗೆ ಅವರ ಜೊತೆಯೇ ಇದೆ.

Friday, May 22, 2009

ಅವಳು -------------------------------?

ಇತ್ತೀಚಿಗೆ ಸೌದಾಮಿನಿ ಅಪಾರ್ಟ್ಮೆಂಟ್ ಲಾನ್‍ನಲ್ಲಿ ಅಪಾರ್ಟ್ಮೆಂಟ್ನ ಹಳೆಯ ನಿವಾಸಿಗಳೆಲ್ಲಾ ಗುಂಪು ಗುಂಪಾಗಿ ಗುಸುಗುಸು ಮಾತುಗಳನಾಡುತ್ತಿದ್ದರೆ ಲಾನ್ ಅಯ್ಯೋ ನನ್ನ ಸೌಂದರ್ಯವೆಲ್ಲಾ ಹಾಳಾಗಿ ಹೋಯ್ತೇ ಎಂದು ಹಲುಬುತಿತ್ತು.

ಸಂಜೆಯಾದರೆ ಅವಳದೇ ಮಾತು. ಅವಳದೇ ಧ್ಯಾನವಾಗಿತ್ತು

ಹಾಗಂತ ಅಲ್ಲಿದ್ದವರಲ್ಲ ಯಾವುದೋ ಥರ್ಡ್ ಕ್ಲಾಸ್ ಜನರಲ್ಲ.

ಒಳ್ಳೊಳ್ಳೆ ಕಂಪೆನಿಯಲ್ಲಿ ಸೀನಿಯರ್ ಹುದ್ದೆ, ಕೆಲವರು ಎಮ್ ಡಿ ಹೀಗೆ ಅನೇಕಾನೇಕ ಹೇಮಾಹೇಮಿಗಳು. ಆದರೂ ನಂ ೧೦೩ ಫ್ಲಾಟ್ ಅನ್ನು ಕೊಂಡುಕೊಂಡಿರುವ ಆ ಹೆಣ್ಣಿನ ಬಗ್ಗೆ.

ಹಿಂದಿದ್ದ ಕಾಮತ್ ತಮ್ಮ ಫ್ಲಾಟ್ ಮಾರುತ್ತಿದ್ದೆವೆಂದಾಗ ಸೌದಾಮಿನಿಯ ನಿವಾಸಿಗಳೆಲ್ಲ್ಲರಿಗೂ ಬೇಸರವಾಗಿತ್ತು. ಸ್ವತ: ಕಾಮತರವರಿಗೇ ಇಷ್ಟವಿರಲಿಲ್ಲ . ಆದರೇನು ಮಾಡುವುದು ಬಾಂಬೆಯಲ್ಲಿಯೇ ಸೆಟಲ್ ಆಗಿದ್ದ ಮಗ ಕರೆದಾಗ ಹೋಗಲೇ ಬೇಕಿತ್ತು.

ಯಾರೋ ಒಬ್ಬ ಹೆಂಗಸಿಗೆ ಮಾರುತ್ತಿದ್ದೆವೆಂದು ಹೇಳಿದ್ದರಷ್ಟೆ.. ಅವರಿಗ

ಆಕೆ ಬಂದು ಮೂರು ತಿಂಗಳಾಯ್ತು

ಅವಳು ಯಾರು ಏನು ಎಂದು ತಿಳಿದಿರಲಿಲ್ಲ. ಒಬ್ಬಳೇ ಇದ್ದಾಳೆ ಎಂಬುದು ಮಾತ್ರ ತಿಳಿದಿತ್ತು ಎಲ್ಲರಿಗೂ

ಯಾವಾಗಲೂ ಬಾಲ್ಕನಿಯಲ್ಲಿ ನಿಂತು ಮೊಬೈಲ್ ಹ್ಯಾಂಡ್ಸ್ ಫ್ರೀ ಕಿವಿಗೆ ಸಿಗಿಸಿಕೊಂಡು ನಗು ನಗುತ್ತಾ ಮಾತಾಡುತ್ತಿದ್ದಳು.

ಇನ್ನಾರೊಂದಿಗೂ ಅವಳು ಮಾತಾಡಿದ್ದೇ ಇಲ್ಲ.

ರಾತ್ರಿ ಕಾರ್ ಸ್ಟಾರ್ಟ್ ಮಾಡಿಕೊಂಡು ಒಬ್ಬಳೇ ಹೋಗುತ್ತಿದ್ದಳು ನಂತರ ಬೆಳಗ್ಗೆ ಬರುತ್ತಿದ್ದಳು . ನೋಡಲೂ ಸುಂದರವಾಗಿದ್ದಳು

ಮನುಷ್ಯನ ಜಿಹ್ವಾಚಾಪಲ್ಯಕ್ಕೆ ಅಡೆತಡೆಯುಂಟೆ

ನಾಲಿಗೆಗಳು ಬಾಯಿಗೆ ಬಂದದ್ದನ್ನು ಹೇಳಲಾರಂಭಿಸಿದವು

"ರೀ ಅವಳು ಬಾಂಬೆಯವಳಂತೆ." ೧೦೪ನೇ ಮನೆಯ ಪ್ರೇಮಶಿವರಾಂ ಹೇಳಿದ್ದೇ ತಡ

"ಹೌದಾರೀ ಈಗ ಬಾಂಬೆಯವರನ್ನ ನಂಬಬಾರದಂತೆ . ಅವರು ಟೆರರಿಸ್ಟ್ಸ್ ಆಗಿರಬಹುದು" ಚಂದ್ರಿಕಾ ಹಿರೇಮಠ್ ನುಡಿದರೆ

"ಇಲ್ಲಾರಿ ಆಕೇನಾ ನೋಡಿದ್ರೆ ಮದುವೆಯಾಗಿರೋ ಹಾಗಿದೆ. ಕೊರಳಲ್ಲಿ ತಾಳಿ ಬೇರೆ ಇದೆ ಟೆರರಿಸ್ಟ್ ಆದ್ರೆ ಹಾಗೆಲ್ಲಾ ಇರಲ್ಲ"ಶ್ವೇತ ತಿವಾರಿ ಮೊಬೈಲ್ನಲ್ಲಿ ಮೆಸ್ಸೇಜ್ ಮಾಡುತ್ತಾ ಉಲಿದರು

"ಇರ್ಬೋದು ಅವಳು ಟೆರರಿಸ್ಟ್ ಅಲ್ಲ ಆದರೆ ಬೇರಾವುದೋ ಕೆಲಸ ಮಾಡ್ತಾಳೆ"

"ಏನಿರಬಹುದು?"

ಎಲ್ಲರ ತಲೆಗೂ ಒಂದೆ ಯೋಚನೆ ಬಂದು ಅಷ್ಟರಲ್ಲಾಗಲೇ ಮಕ್ಕಳು ಕರೆದದ್ದರಿಂದ ಮನೆಯೊಳಗೆ ಓಡಿದರು.

ಇದೇ ಥರಹದ ಮಾತುಗಳು ಗಂಡಸರ ಗುಂಪಿನಲ್ಲೂ ಸಂಚರಿಸುತಿತ್ತು
ಆದರೆ ಅದೊಂದು ಭಾನುವಾರ ಸಾಯಂಕಾಲ ಮಕ್ಕಳ ಜೊತೆ ಚಿಲ್ಡ್ರನ್ ಪಾರ್ಕ್‍ನಲ್ಲಿ ನಿಂತಿದ್ದ ನಿವಾಸಿಗಳಿಗೆ ಶಾಕ್ ಕಾದಿತ್ತು.
ಪೋಲಿಸ್ ಜೀಪ್ ಬಂದು ನಿಂತಿತು . ಅದರೊಳಗಿನಿಂದ ಇನ್ಸ್‌ಪೆಕ್ಟರ್ ಒಬ್ಬ ಇಳಿದ
ವಾಚಮನ್ ಬಳಿ ೧೦೩ ನೇ ಫ್ಲ್ಲಾಟ್‌ಗೆ ಹೋಗುವುದಾಗಿ ಹೇಳಿ ರುಜು ಮಾಡಿ ಆತ ಹೊರಟ
ಎಲ್ಲರ ಕಣ್ಣೂ ಆ ಫ್ಲಾಟ್ ಮೇಲೆಯೇ
ಗುಸು ಗುಸು ನಡೆಯಿತು
"ನಾನು ಹೇಳಿಲ್ವಾ ಅವಳು ಬೇರೇನೋ ಮಾಡ್ತಾಳೆ ಅಂತ" ಶ್ವೇತಾ ತಿವಾರಿ ಎಲ್ಲರತ್ತ ನೋಡಿದರು
ಅವಳು ಅಪರಾಧಿಯಂತೆ ಹೊರಬರುವುದನ್ನು ತಮ್ಮ ಕಂಗಳಲ್ಲಿ ತುಂಬಿಕೊಳ್ಳಲು ಕಾದೇ ಕಾದರು ಆದರೂ
ಆತ ಎಷ್ಟು ಹೊತ್ತಾದರೂ ಬರಲೇ ಇಲ್ಲ.
ಕೊನೆಗೊಮ್ಮೆ ದೇಶಪಾಂಡೆಯವರ ಮಾತು ಹೊರ ಬಂತು
"ಅವನೂ ಅವಳ ಗಿರಾಕಿ ಏನೋ" ಎಲ್ಲೋ ನೋಡುತ್ತಾ ನುಡಿದರು
ಯಾವುದೋ ಸತ್ಯ ತಿಳಿದವರಂತೆ ನಿವಾಸಿಗಳ ಬಾಯಿಂದ
"ಏ--------------ನು? " ಎಂಬ ಉದ್ಗಾರ ಹೊರಟಿತು
ಕಾದಿದ್ದು ವ್ಯರ್ಥವಾಯ್ತು ಎಂಬಂತೆ ಆಕಾಶ ದಿಟ್ಟಿಸಿದರು.
"ಆಲ್ಲಾರಿ ನಮ್ಮ ಅಪಾರ್ಟ್ಮೆಂಟ್‍೬ನಲ್ಲಿ ಹೀಗೊಂದು ಕೆಲಸ ನಡಿತಾ ಇದೆ ಅಂದ್ರೆ ಅವಮಾನ ಅವಮಾನ " ಪೂಜಾರಿ ತಲೆ ಕೊಡವಿದರು.
"ಮೊದಲು ಅವಳನ್ನ ಇಲ್ಲಿಂದ ಓಡಿಸಬೇಕು. ಸಂಸಾರಸ್ತರಿರೋ ಜಾಗ ಇದು" ಪ್ರೇಮ ಶಿವರಾಂ ಏದುಸಿರು ಬಿಡುತ್ತಾ ನುಡಿದರು.
"ನಡೀರಿ ನಮ್ಮ ಅಪಾರ್ಟ್ಮೆಂಟ್ ಅಸ್ಸೋಸಿಯೇಶನ್ ನಿರ್ಧಾರ ಇದು ಅಂತ ಹೇಳಿ ವಾರ್ನ್ ಮಾಡೋಣ" ಅಸ್ಸೋಸಿಯೇಶನ್ ಅಧ್ಯಕ್ಷ ಪ್ರೇಂ ಕುಮಾರ್ ನುಡಿದು ೧೦೩ನೇ ಫ್ಲಾಟ್‍ನತ್ತ ನಡೆದರು. ಎಲ್ಲರೂ ಅವರನ್ನು ಹಿಂಬಾಲಿಸತೊಡಗಿದರು.
---------------------*******------
ತಟ ಪಟ ಬಾಗಿಲ ಬಡಿತದ ಸದ್ದು ಜೊತೆಗೆ ಸತತ ಕಾಲಿಂಗ್ ಬೆಲ್ ಸದ್ದಾದಾಗ ಮಂಚದಲ್ಲಿ ಪವಡಿಸಿದ್ದ್ದ ಆ ಜೋಡಿ ಹಕ್ಕಿಗಳೆರೆಡಕ್ಕೂ ರಸಭಂಗವಾಗಿರಬೇಕು.
ಜೋರಾಗಿ ಬಾಗಿಲು ತೆರೆದ ಸದ್ದಾಯಿತು.
ಬಾಗಿಲು ತೆರೆದವನ ಅವತಾರ ನೋಡಿ ನಿವಾಸಿಗಳೆಲ್ಲರಿಗೆ ಕೋಪ ಉಕ್ಕೇರಿ ಬಂತು
ಕೈಗೆ ಸಿಕ್ಕಿದ್ದ ಯಾವುದೋ ಟವೆಲ್ ಸುತ್ತಿ ನಿಂತಿದ್ದ
ಒಳಗೇನಾಯ್ತು ಎಂಬುದು ಅವನ ಮೊಗದಲ್ಲಾಗಿದ್ದ ಆಯಾಸ ವಿವರಿಸುತ್ತಿತ್ತು. ಅಲ್ಲಿದ್ದ ಗಂಡಸರಿಗೋ ಅವನ ಮೇಲೆ ಅಸೂಯೆಯಾಗತೊಡಗಿತು
ಅವನಿಗೂ ಹೀಗೆ ಗುಂಪು ಗುಂಪಾಗಿ ಬಂದ ಜನರನ್ನು ನೋಡಿ ಗಾಭರಿಯಾಯಿತೆನಿಸುತ್ತದೆ
ಅವರೆಲ್ಲರತ್ತ ಪ್ರಶ್ನಾರ್ಥಕವಾಗಿ ನೋಡಿದ
"ನೋಡಿ ಸಾರ್ ಇದೆಲ್ಲಾ ಇಲ್ಲಿ ಸರಿ ಬರೋಲ್ಲ. ಇದು ಮರ್ಯಾದಸ್ತರಿರೊ ಜಾಗ . ಇಂತಾ ಜನ ಇಲ್ಲಿರೋದು ಸರಿ ಅಲ್ಲ" ಪ್ರೇಂ ಕುಮಾರ್ ದನಿಯಲ್ಲಿದ್ದ ಶಕ್ತಿಯನ್ನೆಲ್ಲಾ ಬಿಟ್ಟು ಗುಡುಗಿದ
"ಯಾವ ಜನ ಏನು?" ಆತ ಕೇಳಿದ
"ಅದೇನು ಅಂತ ಬಾಯ್ಬಿಟ್ತು ಹೇಳ್ಬೇಕಾ? ಒಳಗೇನ್ರಿ ನಡೀತಿತ್ತು" ದೇಶಪಾಂಡೆ ಜೋರು ಮಾಡಿದ
ಆತನ ಮುಖದಲ್ಲಿ ಅಸಹನೆ ಕಂಡಿತು
"ನಿಮ್ಮನೇಲಿ ಏನ್ ನಡೆಯುತ್ತೋ ಅದೇ ನಡೀತಾ ಇದೆ" ತೀರಾ ಅಸಭ್ಯವಾಗಿ ಮಾತಾಡಿದ ಅನ್ನಿಸಿತು . ಹೆಂಗಸರೆಲ್ಲಾ ಛೆ ಛೆ ಎಂದರು
"ಏನ್ರಿ ಅದು ಛೆ ಛೆ ........ ಹೀಗೆ ಮತ್ತೊಬ್ಬರ ಮನೆ ಮುಂದೆ ನಿಂತು ಗಂಡ ಹೆಂಡತಿ ಏನ್ಮಾಡ್ತಾ ಇದೀರಾ ಅಂತ ಕೇಳ್ತಿರೋದು ಸಭ್ಯರ ಲಕ್ಷಣಾನ?"
ಕೊನೆಯ ಮಾತು ಕೇಳುತ್ತಿದ್ದಂತೆ ಅವಕ್ಕಾದರು ನಿವಾಸಿಗಳು
"ನೀವು ಅವರ ಗಂಡಾನಾ?" ಪೂಜಾರಿ ಪ್ರಶ್ನಿಸಿದರು
"ಹೌದು ಯಾಕೆ ಅನುಮಾನಾನ ? " ತೀಕ್ಶ್ಣವಾಗಿ ಪ್ರಶ್ನಿಸಿದ.ಮೊದಲೇ ಪೋಲಿಸು
ಪೂಜಾರಿಯ ಎದೆ ನಡುಗಿ ಹೋಯ್ತು
ಅದು ನಂಗಲ್ಲ ಇವರಿಗೆಲ್ಲಾ ಅನುಮಾನ ಇದೆಯಂತೆ ಉಳಿದವರತ್ತ ಕೈ ತೋರಿ ಹಿಂದೆ ನಡೆದುಬಿಟ್ಟ

" ಇವಳಿಗೆ ಇಲ್ಲಿ ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ಡಾಟಾಬೇಸ್ ಅಡ್ಮಿನಿಸ್ಟ್ರೇಟರ್ ಕೆಲ್ಸ . ನಾನ್ಯಾರಂತೆ ನಿಮ್ಗೆ ಗೊತ್ತಾಗಿದೆ ಅನ್ಸುತ್ತೆ
ಟ್ರಾನ್ಸಫರ್ ಮಾಡಿಸಿಕೊಂಡು ಇವತ್ತು ಇಲ್ಲಿಗೆ ಬಂದೆ ಅಲ್ಲಾರಿ ಎಂಥಾ ಕಚಡಾ ಜನಾರಿ ನೀವುಗಳು ಒಬ್ಬೊಬ್ಬರನ್ನ ಎತ್ತಾಕೊಂಡು ಒಳಗೆ ಹಾಕಿದ್ರೆ ಇಂತಾ ಕಚಡಾ ಯೋಚನೆಗಳು ಓಡೋಗೊತ್ತೆ" ಆತ ತನ್ನ ಪೋಲಿಸ್ ಭಾಷೆ ಬಳಸತೊಡಗಿದ ಕೂಡಲೆ ಒಬ್ಬೊಬ್ಬರಾಗಿ ಜಾಗ ಖಾಲಿ ಮಾಡತೊಡಗಿದರು.
ಅಯ್ಯೋ ಇಷ್ಟೇನಾ ಎಂದೊಬ್ಬರಾದ ಮೇಲೆ ಮತ್ತೊಬ್ಬರು ಬೇಸರಿಸಿಕೊಳ್ಳುತಾ ಮನೆಯೊಳಗೆ ನುಸುಳಲಾರಂಭಿಸಿದರು

Thursday, May 14, 2009

ಹೆಗ್ಗಣಗಳು ಹಾವುಗಳು ಕುರಿಗಳು

ಆತ ಭಾರತದ ಪ್ರಖ್ಯಾತ ಹೆಗ್ಗಣ ಇಲಿ ನಿರ್ಮೂಲನ ಕಂಪನಿಯ ಮೇಲಾಧಿಕಾರಿಯಾಗಿ ನೇಮಕಗೊಂಡ.
ಅದು ಕೇಂದ್ರ ಸರಕಾರದ ಅಧೀನದ ಕಂಪನಿ
ಅವನಿಗೋ ಎಲ್ಲಾ ಹೆಗ್ಗಣ ಇಲಿಗಳನ್ನೂ ಹೇಳ ಹೆಸರಿಲ್ಲದಂತೆ ಮಾಡಿ ತಾನು ಹೆಸರುವಾಸಿಯಾಗುವ ಮಹದಾಸೆ.
ಸರಕಾರದಿಂದ ಸುತ್ತೋಲೆ ಬಂದಿತ್ತು"ಎಲ್ಲಾ ಹೆಗ್ಗಣಗಳನ್ನೂ ಈಗಿಂದೀಗಲೆ ನಿರ್ಮೂಲನ ಮಾಡುವ ಅಧಿಕಾರ ನಿಮಗೆ ವಹಿಸಲಾಗಿದೆ"
ಸರಿ ಆತನ ದಂಡಯಾತ್ರೆ ಶುರುವಾಯ್ತುಮೊದಲು ಚಿಕ್ಕ ಪುಟ್ಟ ಕಛೇರಿಗಳಲ್ಲಿ ಕಾಣಸಿಗುತ್ತಿದ್ದ ಎಲ್ಲಾ ಇಲಿಗಳನ್ನು ಹಿಡಿದು ಹಾಕಿದ.ನಂತರ ದೊಡ್ಡ ಕಚೇರಿಗಳಲ್ಲಿ ಶಿಳ್ಳೇ ಹೊಡೆಯುತ್ತಿದ್ದ ಇಲಿಗಳನ್ನುಬಲೆಗೆ ಹಾಕಿಕೊಂಡ.
ಪೇಪರ್‌ನಲ್ಲಿ ಈತನ ಬಗ್ಗೆ ಬಹು ಮೆಚ್ಚುಗೆಯ ಮಾತುಗಳು ಕಾಣಲಾರಂಭಿಸಿದವು. ಎಲ್ಲೆಲ್ಲೂ ಅವನದೇ ಮಾತು.ಬಹಳ ಬೇಗ ಪ್ರಸಿದ್ದಿಯಾದ ಆತ ಮತ್ತಷ್ಟು ಹುರುಪುಗೊಂಡ.
ಹೆಗ್ಗಣಗಳ ಬೇಟೆಗೆ ಸಂಚು ಹಾಕಲಾರಂಭಿಸಿದ.ಸಾಧ್ಯವಿದ್ದ ಕಡೆ ಎಲ್ಲಾ ಅಡಗು ಕ್ಯಾಮೆರಾ ಅಳವಡಿಸಿದ.ಒಮ್ಮೆ ಒಂದು ಕಛೇರಿಯಲ್ಲಿ ಹೆಗ್ಗಣವೊಂದನ್ನು ಸ್ವತ: ಅಲ್ಲಿನ ಮೇಲಾಧಿಕಾರಿಯೊಬ್ಬರೇ ತಮ್ಮ ಬ್ಯಾಗಿನಿಂದ ತೆಗೆದು ಟೇಬಲ್ ಕೆಳಗೆ ಹಾಕುತ್ತಿದ್ದುದು ಕಂಡು ದಂಗಾದ.
ಮೊದಲು ಆ ಹೆಗ್ಗಣವನ್ನು ಹಿಡಿಯಲು ಯಾತ್ರೆ ಶುರು ಮಾಡಿದ ಜೊತೆಗೆ ಮಾಧ್ಯಮದವರೆಲ್ಲಾ . ಮೇಲಾಧಿಕಾರಿ ಹೆಗ್ಗಣದ ಸಮೇತ ಸಿಕ್ಕಿಹಾಕಿಕೊಂಡ.ಹೀಗೆ ಹಲವರು ಹೆಗ್ಗಣಗಳ ಸಂಸಾರ ಬೆಳೆಯಲೆಂದೇ ತಮ್ಮ ಕಛೇರಿಯ ಎಲ್ಲಾ ಸಮಯವನ್ನು ಬಳಸಿಕೊಳ್ಳುತ್ತಿದ್ದುದ್ದನ್ನು ಗಮನಿಸಿದ
ನಂತರ ಒಂದೊಂದು ಕಛೇರಿಯನ್ನೂ ಜಾಲಾಡಿ ಹೆಗ್ಗಣಗಳನ್ನೂ ಅವುಗಳ ಜೊತೆ ನೌಕರರನ್ನೂ ಪತ್ತೆ ಹಚ್ಚಲಾರಂಭಿಸಿದ. ಇಲಿಗಳು ಹೆಗ್ಗಣಗಳು ಇವನಿಗೆ ಹೆದರತೊಡಗಿದವು ಬಿಲದಿಂದ ಹೊರಗೆ ಬರಲಿಲ್ಲ. ಇಲಿ ಹೆಗ್ಗಣಗಳಿಂದಲೇ ಬದುಕುತ್ತಿದ್ದ ಹಾವುಗಳು ಸೊರಗತೊಡಗಿದವು
ಇಂತಹ ಸಮಯದಲ್ಲೇ ಮಂತ್ರಿಯೊಬ್ಬರಿಂದ ಬುಲಾವ್ ಬಂತು.
"ಬರೀ ಇಲಿಗಳನ್ನು ಹಿಡಿಯಿರಿ ಸಾಕು ..ಹೆಗ್ಗಣಗಳ ತಂಟೆ ನಿಮಗೇಕೆ . "ಎಂದರು
"ತಾನು ಬಂದಿರುವುದೇ ಹೆಗ್ಗಣಗಳ ನಿರ್ಮೂಲನೆಗಾಗಿ " ಎಂದು ಸಮರ್ಥಿಸಿಕೊಂಡ"ಹೆಗ್ಗಣಗಳ ನಿರ್ಮೂಲನೆ ಸಾಧ್ಯಾನೆ ಇಲ್ಲಾರಿ. ಇಲಿಗಳಿರೋವರೆಗೆ ಹೆಗ್ಗಣಗಳಿರುತ್ತವೆ. ಹೆಗ್ಗಣಗಳಿದ್ದರೆ ತಾನೆ ಹಾವುಗಳಿಗೆ ಹಬ್ಬ?" ಮಂತ್ರಿ ತನ್ನ ಕನ್ನಡಕದಿಂದ ಕಣ್ಣರಳಿಸಿದ
"ಸಾರ್ ಆ ಜವಾಬ್ದಾರಿ ನಾನು ತಗೋತೀನಿ" ಆತ್ಮ ವಿಶ್ವಾಸದಿಂದ ನುಡಿದ"ಇಲ್ಲವಯ್ಯ ಆಗೊಲ್ಲ ನಿಂಗೆ ಜವಾಬುದಾರಿ ಕೊಡೋಕೆ ಇಲ್ಲಿ ಯಾರೂ ಕಾದು ನಿಂತಿಲ್ಲ . ಬೇಕಿದ್ದರೆ ನೀವು ಹೆಗ್ಗಣಗಳ ರಾಜನೆನಿಸಿಕೊಳ್ಳಿ. ಈಗಾಗಲೇ ಇಲಿಗಳನ್ನು ಹಿಡಿಗು ಬಹಳಪ್ರಸಿದ್ದರಾಗಿದ್ದೀರಾ" ಎಂದು ಅವನೆಡೆ ಸೂಟ್‌ಕೇಸ್ ಒಂದನ್ನು ಎಸೆದರು.
ಅದಕ್ಕಾಗಿಯೇ ಕಾದುನಿಂತಿದ್ದವನಂತೆ ಅವನು ಸೂಟ್‌ಕೇಸ್ ತೆಗೆದುಕೊಂಡ. ಮಂತ್ರಿಯ ಮನೆಯಲ್ಲಿ ತುಂಬಾ ಹೆಗ್ಗಣಗಳು ಓಡಾಡುತ್ತಿದ್ದವು ಜೊತೆಗೆ ಇಲಿಗಳು ಅವುಗಳನ್ನೆಲ್ಲಾನುಂಗುವ ಹಾವಾಗಿ ಮಂತ್ರಿ ಕಂಡ."
"ನಾನು ಯಾವಾಗ ಹೆಗ್ಗಣಗಳ ರಾಜ ಆಗೋದು ಸಾರ್?" ಸೂಟಕೇಸ್ ತೆಗೆಯುತ್ತಾ ಕೇಳಿದ
"ಈಗಲೇ ......... ಮುಂದಿನ ಹೆಗ್ಗಣಗಳ ಎಲೆಕ್ಷನ್‌ನಲ್ಲಿ ನೀವೂ ನಿಲ್ಲಿ. ಟಿಕೆಟ್ ನಮ್ಮ ಹಾವುಗಳ ಪಾರ್ಟಿಯಿಂದ ಕೊಡಿಸ್ತೇನೆ"
ವಾರವೊಂದು ಕಳೆದಿತ್ತು
ಆ ಹೆಗ್ಗಣ ನಿರ್ಮೂಲನಾಧಿಕಾರಿ ಹೆಗ್ಗಣಗಳ ಜೊತೆ ಮೆರವಣಿಗೆ ಹೊರಟಿದ್ದ ವೋಟು ಕೇಳಲು. ಎಲ್ಲೆಲ್ಲೂ ಹೆಗ್ಗಣಗಳು ಹಾವುಗಳು ಇಲಿಗಳು
ಇಕ್ಕೆಲಗಳಲ್ಲಿ ಆ ಹೆಗ್ಗಣಗಳ ಜಾತ್ರೆಯನ್ನು ಕುರಿಗಳು ಅಚ್ಚರಿಯ ಕಣ್ಣಿಂದ ನೋಡುತ್ತಿದ್ದವು

ಬದುಕು: ವಯೋಮಾನಕ್ಕೆ ತಕ್ಕ ಹಾಗೆ ಬದಲಾಗುವ ವಿವರಣೆಗಳು

ಹೀಗೆ ಅನ್ನಿಸುತ್ತಿತ್ತು
ಚಿಕ್ಕವಳಿದ್ದಾಗ ಕಣ್ಣಿಗೆ ಕಂಡದ್ದೆಲ್ಲಾ ಸಿಕ್ಕರೆ ಅದೇ ಜೀವನ
ಎಂಟನೇ ತರಗತಿಯಲ್ಲಿ ಮೊದಲು ಸ್ಕೂಲಿಗೆ ಹೋಗಿ ಎಸ್.ಎಸ್.ಎಲ್.ಸಿ ಮುಗಿಸಿದರೆ ಅದುವೇ ಜೀವನ
ಎಸ್.ಎಸ್.ಎಲ್.ಸಿ ಮುಗಿದ ಮೇಲೆ ಪಿಯುಸಿ ಮುಗಿಸಿದರೆ ಬದುಕು ನಡೆಯುತ್ತದೆ ಅಂದುಕೊಳ್ಳುತ್ತಿದ್ದೆ
ಪಿ.ಯು.ಸಿಯ ನಂತರ ಇಂಜಿನಿಯರಿಂಗೇ ಜೀವನ ಅದು ಮಾಡಿದರೆ ಸಾಕು ಎಲ್ಲಾ ಸಿಗುತ್ತೆ ಅಂತನ್ನಿಸುತ್ತಿತ್ತು
ವಿದ್ಯಾಭ್ಯಾಸದ ನಂತರ ಕೆಲಸ ಸಿಕ್ಕು ಹೊಟ್ಟೆ ಬಟ್ಟೆಗೆ ಆದರೆ ಸಾಕು ಬದುಕು ಹೇಗೋ ನಡೆಯುತ್ತೆ ಅಂತಂದುಕೊಳ್ಳುತ್ತಿದ್ದೆ
ಕೆಲಸ ಸಿಕ್ಕ ಮೇಲೆ ಸ್ವಂತ ಮನೆ, ಮದುವೆ, ಮಕ್ಕಳು,ಕಾರು ಸಾಕು ಜೀವನದಲ್ಲಿ ಗೆದ್ದ ಹಾಗೆ
ಮದುವೆ,ಮಕ್ಕಳು,ಕಾರು, ಮನೆ ಎಲ್ಲಾವು ಆದ ಮೇಲೆ ಬದುಕಿನಲ್ಲಿ ಮುಂದೇನು ?
ಹತ್ತು ಜನ ಸೈ ಎನ್ನುವಂತೆ ನಡೆಯುವುದಾದರೆ ಅದು ಜನ್ಮ ತಾಳಿದ್ದಕ್ಕೆ ಸಾರ್ಥಕವಾಗುತ್ತದೆ ಎಂದುಕೊಳ್ಳುತ್ತಿದ್ದೆ
ರೂಪ ಪರವಾಗಿಲ್ಲ ಎನಿಸಿಕೊಂಡ ಮೇಲೆ ಬದುಕಿನಲ್ಲಿ ಹತ್ತು ಜನಕ್ಕೆ ಮಾದರಿಯಾಗಿ ನಡೆಯುವುದಾದರೆ ಅದೇ ಜೀವನ
ಈಗ ಬದುಕಿನ ಅರ್ಥ ತಿಳಿಯುವುದೇ ಜೀವನ ಅನ್ನಿಸುತ್ತಾ ಇದೆ
ಅದಕ್ಕಾಗಿಯೇ ಅನ್ನೋದು ನಮ್ಮ ಜೀವನದ ಗುರಿ ಎಂದೂ ಒಂದೆಡೆ ನಿಲ್ಲುವುದೇ ಇಲ್ಲ . ನಾವದನ್ನು ಬೆನ್ನಟ್ಟುತ್ತಿದ್ದಂತೆ ಅದೂ ಮುಂದೆ ಮುಂದೆ ಓಡುತ್ತಿರುತ್ತದೆ.

Monday, May 11, 2009

"ಆವರಣ " ಗೋ(ಘೋ)ರಿಗಳಲ್ಲಡಗಿದ ಸತ್ಯದ ಅನಾವರಣ

ಎಲ್ಲಿ ನೋಡಿದರೂ ಆವರಣ ಪುಸ್ತಕದ ಬಗ್ಗೆಯೇ ಚರ್ಚೆ . ಬಹಳ ದಿನದಿಂದ ಓದಬೇಕೆಂದು ಅನಿಸಿದ್ದರೂ ಸಮಯದ ಕೊರತೆಯಿಂದಲೋ ಅಥವ ಅದೊಂದು ಬಗೆಯ ಪೂರ್ವಗ್ರಹಪೀಡಿತ ಲೇಖನವಿರಬಹುದೆಂಬ ಭಾವನೆಯೋ ಅದನ್ನು ಅಲ್ಲಲ್ಲೇ ತಡೆಯುತ್ತಿತ್ತು.
ಭೈರಪ್ಪನವರ ಮಂದ್ರ ಓದಿದಾಗಿನಿಂದ ಅವರ ಲೇಖನದ ಬಗ್ಗೆ ಅಂತಹ ನಿರೀಕ್ಷೆ ಏನಿರಲಿಲ್ಲ.
ಹೀಗೆ ಶನಿವಾರ ಸಪ್ನ ಬುಕ್ ಸ್ಟಾಲ್‌ಗೆ ಹೋಗಿ ಬ್ರೌಸ್ ಮಾಡುತ್ತಿದ್ದಾಗ ಕಣ್ಣಿಗೆ ಬಿತ್ತು. ತೆಗೆದು ಮೊದಲೆರೆಡು ಪುಟಗಳನ್ನು ತೆರೆದು ಓದಿದೆ. ಅಮೀರನ ಮನಸ್ಥಿತಿಯಿಂದ ಶುರುವಾಗಿದ್ದು ರಜಿಯಾ ಮೂಲತ್: ಹಿಂದೂವಾಗಿದ್ದು ಕುತೂಹಲ ಹುಟ್ಟಿಸಿತು. ಕೊನೆಯ ಪುಟಗಳಲ್ಲಿ ಆಧಾರಿತ ಪುಸ್ತಕಗಳನ್ನು ಪಾತ್ರದ ಮೂಲಕವೇ ಹೇಳಿಸುವ ರೀತಿಯಂತೂ ಮನ ಸೆಳೆಯಿತು. ಆಗಲೆ ಕೊಂಡು ಕೊಂಡೆ
ಎರೆಡು ದಿನದಿಂದ ಎರೆಡೆರೆಡು ಸಲ ಓದಿದ್ದೇನೆ.
ಇನ್ನೂ ಅರ್ಥವಾಗದ ಸಂಗತಿಗಳಿವೆ.
ಮನಸಿಗ್ಗೆ ಆಘಾತಕಾರಿಯಾಗುವ ಸಂಗತಿಗಳನ್ನು ಭೈರಪ್ಪನವರು ತಮ್ಮ ಕಥಾನಾಯಕಿಯಿಂದ ಬರೆಸುವ ಕಾದಂಬರಿಯ ಕಥಾನಾಯಕನಿಂದ ಹೇಳಿಸುವ ರೀತಿಯಂತೂ ಅದ್ಭುತ
ಓದುತ್ತಿದ್ದಂತೆ ಕೆಲವೊಮ್ಮೆ ಕಣ್ಣಲ್ಲಿ ನೀರು ಬಂತು. ಜೊತೆಗೆ ಬುದ್ದಿ ಜೀವಿಗಳೆಂದು ಹೇಳಿಕೊಂಡು ಇತಿಹಾಸವನ್ನು ತಿರುಚಿ ವಿಕೃತ ವಾಗಿ ನಲಿಯುವ ಪ್ರೊಫೆಸರ್ ಶಾಸ್ತ್ರಿಗಳಂತಹವರು ಈಗ ಎಲ್ಲೆಡೆ ಕಾಣುತ್ತಿದ್ದಾರೆ ಎಂಬುದು ನೆನಪಿಗೆ ಬಂದರಂತೂ ಕೋಪ ಉಕ್ಕೇರುತ್ತದೆ.
ಮುಸ್ಲಿಂ ಮೂಲಭೂತವಾದಿಯಾದರೂ ಸತ್ಯದ ಬೆಳಕಿಗೆ ತಲೆಯೊಡ್ಡುವ ಅಮೀರ ಕೆಲವೊಮ್ಮೆ ಉತ್ತಮವಾಗಿ ಕಾಣುತ್ತಾನೆ.
ಎಲ್ಲಕ್ಕಿಂತಲೂ ರಜಿಯಾ ಆದ ಲಕ್ಷ್ಮಿಗೆ ತನ್ನ ಮೂಲ ಧರ್ಮದ ಅನ್ವೇಷಣೆಗೆ ತೊಡಗುವುದು ಅಚ್ಚರಿಯಾಗಿ ಕಾಣುತ್ತದೆ. ಕಾದಂಬರಿಯ ಉದ್ದಕ್ಕೂ ಆವರಿಸಿಕೊಂಡು ಲಕ್ಷ್ಮಿ ನನ್ನಲ್ಲಿ ಒಂದಾಗಿ ನಾನೇ ಈ ಎಲ್ಲ ಘಟನೆಗಳಿಗೆ ಸಾಕ್ಶಿಯಾದನೇನೋ ಅನ್ನಿಸುವಷ್ಟು ನೈಜವಾಗಿ ಭೈರಪ್ಪನವರು ಬರೆದಿದ್ದಾರೆ.
ಇತಿಹಾಸ ಕುರಿತ ಲೇಖನ ಎಂದರೆ ಅದು ಬೇಜಾರಿನ ಸರಕು ಎನ್ನುವ ನನ್ನನಿಸಿಕೆ ಆವರಣ ಓದಿ ಸುಳ್ಳಾಯಿತು. ಜೊತೆಗೆ ಇನ್ನಷ್ಟು ಈ ಬಗ್ಗೆ ಓದಬೇಕೆಂಬ ಹಂಬಲವೂ ತುಂಬಿಸಿತು
ಈ ಬಗ್ಗೆ ಇನ್ನೂ ಬರೆಯುವುದಿದೆ.
ಕಥಾವಸ್ತುವಿನ ಬಗ್ಗೆ. ಬಾದಶಾಹರ ಗುಲಾಮರ ಬಗ್ಗೆ.

ಶ್ರುತಿಯಾದಳೇ ಅಪಶೃತಿ

ಅವಳು ನನಗಿಂತ ಸುಮಾರು ವರ್ಷ ಹಿರಿಯವಳಾದಳೂ ಮೊದಲಿನಿಂದ ಅಂದರೆ ಅವಳ ಶೃತಿ ಚಿತ್ರದ ನಂತರದಿಂದ ಅವಳೊಂಥರ ಪಕ್ಕದ ಮನೆ ಹುಡುಗಿಯಾಗಿಯೇ ನಾನು ಕಲ್ಪಿಸಿಕೊಂಡಿದ್ದೆ
ನನಗೆ ಮಾತ್ರವಲ್ಲ ನಮ್ಮನೆಯಲ್ಲಿ ಎಲ್ಲರಿಗೂ . ಆಸೆಗೊಬ್ಬ ಮೀಸೆಗೊಬ್ಬ ಚಿತ್ರ ಬಂದಿತ್ತು .ಶಿವಣ್ಣನ ತಂಗಿಯ ಪಾತ್ರ ಮಾಡಿದ್ದಳು ಈಕೆ. ಅವಳ ನಟನೆ ನೋಡಿ ಅಮ್ಮ ನಮ್ಮೊಡನೆ ಹೇಳಿದ್ದರು . ಇವಳು ತುಂಬಾ ಬೇಗ ಬೆಳೆಯುತ್ತಾಳೆ. ನಮಗೇನೂ ಅರ್ಥ ಆಗಿರಲಿಲ್ಲ.
ಆಮೇಲೆ ಶೃತಿ ನೋಡಿ ಸ್ನೇಹಕ್ಕಾಗಿ ಮದುವೆಯನ್ನು ಧಿಕ್ಕರಿಸುವ ಅವಳ ಪಾತ್ರದಿಂದ ತುಂಬಾ ಪ್ರಭಾವಿತಳಾಗಿದ್ದೆ.
ನಂತರ ಅವಳ ಪ್ರತಿಯೊಂದು ಚಿತ್ರದಲ್ಲೂ ಅವಳ ನಟನೆ ಮೆಚ್ಚುತ್ತಿದ್ದೆ
ನಂತರ ಸ್ತ್ರೀ ಚಿತ್ರ ನೋಡಿದಾಗ ಅವಳೂ ಕೇವಲ ಆ ಚಿತ್ರದ ಪಾತ್ರವಾಗದೆ ನನ್ನೊಳಗಿನ ಮನದ ತುಡಿತವಾದಳೋ ಕೆಲವೊಮ್ಮೆ ನಾನು ಆ ಪಾತ್ರವಾಗಿ ಬದಲಾಗುತ್ತಿದ್ದೇನೇನೋ ಅನ್ನಿಸುತ್ತಿತ್ತು.
ಕರ್ಪೂರದ ಗೊಂಬೆ ನೋಡಿದಾಗಲಂತೂ ಕಣ್ಣೀರು ಕರಗಿ ಕೋಡಿಯಾಗಿ ಹರಿದು ಹೋಗಿತ್ತು.
ನಂತರದ ಚಿತ್ರಗಳಲ್ಲಿಯೂ ಅಕ್ಕನಾಗಿ, ಅಮ್ಮನಾಗಿ, ತಂಗಿಯಾಗಿ ಅಭಿನಯಿಸುತ್ತಿದ್ದ ಅವಳಿಂದ ಇಂತಹ ಒಂದು ನಡೆ ನಿರಿಕ್ಷಿಸಿರಲಿಲ್ಲ . ನಿಜ ಒಬ್ಬರ ಖಾಸಗಿ ಜೀವನದಲ್ಲಿ ಇಣುಕಿ ನೋಡುವ , ಕಸ ಹುಡುಕುವ ಅಧಿಕಾರ ಯಾರಿಗೂ ಇಲ್ಲ . ಆದರೂ ಆದರೆ ನಮ್ಮ ಮನೆಯ ಹುಡುಗಿಯಂತೆ ನಮ್ಮ ಮನದಲ್ಲಿ ನೆಟ್ಟು ನಿಂತಿದ್ದ ಶೃತಿ ಡೈವೋರ್ಸ್ ಪಡೆಯುತ್ತಿದ್ದಾರೆಂದಾಗ ಸಹಜವಾಗಿಯೇ ಕೋಪ ಮಹೇಂದರ್ ಮೇಲೆ ತಿರುಗಿತು. ಶೃತಿ ಒಳ್ಳೆಯವಳು ಈ ಮಹೇಂದರ್ ಏನೋ ಮಾಡಿದ್ದಾನೆಂಬ ಮಾತು ಮನೆಯಲ್ಲಿ ಹರಿಯಿತು. ಹಿಂದೆಯೇ ಶೃತಿ ನೀಡಿದ್ದ ಕಾರಣ ಡೈವೋರ್ಸ್‌ಗೆ ಅಂಥ ಬಲವಾದ ಕಾರಣವಾಗಿರಲಾರದೆಂಬ ನುಡಿಯೂ ಕೇಳಿಬಂತು.
ಆದರೆ ಅದರ ನಂತರ ಮರು ಮದುವೆಯಾಗಲು ಈ ವಿಚ್ಚೇದನ ಅದೂಈಗಾಗಲೇ ಸಂಸಾರ ಹೊಂದಿರುವವನೊಂದಿಗೆ ಎಂದು ಕೇಳಿ ಬಂದಾಗ ಶೃತಿ ಎಂಬ ಆದರ್ಶ ಕುಸಿದುಬಿತ್ತು.
ಕೇವಲ ಆರ್ಥಿಕ ಪರಿಸ್ಥಿತಿ ಸರಿ ಇರಲಿಲ್ಲ ಎಂಬ ಕಾರಣ ಕೊಟ್ಟು ಗಂಡನಿಂದ ಬೇರೆಯಾಗಿ ಮತ್ತೊಂದು ಸಂಸಾರ ಒಡೆದು
ಮದುವೆಯಾಗುತ್ತಿರುವ ಶೃತಿ ಬಗ್ಗೆ ಇನ್ನಾವ ನವಿರು ಭಾವನೆಯೂ ಹುಟ್ಟುತ್ತಾ ಇಲ್ಲ. ಇನ್ನೆಂದು ಶ್ರುತಿ ಮನೆ ಮಗಳಾಗಿ ನಮ್ಮ ಕಲ್ಪನೆಯಲ್ಲಿಯೂ ಬರುವುದಿಲ್ಲ ಎಂದನಿಸುತ್ತದೆ.
ಸಿನಿಮಾ ಮಠಧೀಶರು ರಾಜಕೀಯದಲ್ಲಿರುವವರು, ಸಾರ್ವಜನಿಕರೊಂದಿಗೆ ಸದಾ ಒಡನಾಟದಲ್ಲಿರುವವರು ಯಾವಾಗಲೂ ಬಹಳ ಹುಷಾರಾಗಿ ಹೆಜ್ಜೆ ಇಡಬೇಕು . ಏಕೆಂದರೆ .ಇವರ ಹೆಜ್ಜೆಯನ್ನು ಗಮನಿಸಿತ್ತಿರುವವರ ಜೊತೆ ಅವರ ಹೆಜ್ಜೆಯ ಮೇಲೆ ಹೆಜ್ಜೆ ಇಡುವ ಜನರೂ ಇದ್ದಾರೆ. ಇದು ತಿಳಿಯದ ಸತ್ಯವೇನಲ್ಲ ಆದರೂ ಇದೇಕೆ ಹೀಗೆ ಎಂಬುದೇ ಪ್ರಶ್ನೆಯಾಗಿದೆ

Wednesday, May 6, 2009

ಸ್ನೇಹಕೇಕೆ ಸಂಬಂಧದ ಹಂಗು?

ಗೋಪಿ
ಸ್ಮಿತಾ ನನ್ನೊಳಗಿನ ನಗೂನಾ? ಹಾಗಂತ ನನಗೆ ನಾನೇ ಎಷ್ಟೋ ಸಲ ಕೇಳಿಕೊಂಡಿದ್ದೇನೆ ಅವಳಿಲ್ಲದೇ ಬಾಳೇ ಇಲ್ಲ ಅನ್ನೋ ಹಾಗೇಕೆ ನಾನಾದೆ ಅಂತಾನೂ ತಿಳಿದಿಲ್ಲ ನಂಗೆ ಊಟ, ನಿದ್ದೆ, ಉಸಿರು ಎಲ್ಲಾ ಅವಳ ನೆನಪು ಅನ್ನೋ ಮಟ್ಟಿಗೆ ನನ್ನನ್ನ ಅವಳು ಆವರಿಸಿಕೊಂಡಿದ್ದಾಳೆ . ಆದರೆ ಅವಳ ಮನಸಲ್ಲಿ ಅಂತಾ ಭಾವನೆ ಖಂಡಿತಾ ಇಲ್ಲ ಅಂತ ಗೊತ್ತಿದೆ ಅವಳು ಸ್ನೇಹಕ್ಕೆ ಬೆಲೆ ಕೊಡೋಳು ನನ್ನ ಮನಸಲ್ಲಿ ಈಥರ ಭಾವನೆ ಇದೆ ಅಂದ್ರೆ ನಾಳೆ ನನ್ನನ್ನೇ ದೂರ ಮಾಡಿಬಿಡ್ತಾಳೆ. ಹಾಗೆ ಆಗಬಾರದು ನಂಗೆ ಸ್ನೇಹಾನೆ ಮುಖ್ಯ. ಆದರೂ ಮನಸು ಅವಳ ಹತ್ರಾನೇ ಸೆಳೀತಾ ಇದೆ . ನನ್ನುಸಿರು ಉಸಿರಾಡೋಕು ಅವಳ ನೆರವು ಬೇಕು ಅಂತಾ ಇದೆಯಲ್ಲ .
ಹೌದು ಕಾಲೇಜಲ್ಲಿ ಎಷ್ಟು ಜನ ನೀವಿಬ್ರೂ ಮದುವೆ ಆಗ್ತಾ ಇದೀರಾ ಅಂತ ಕೇಳಿದಾರಲ್ಲ. ಅದಕ್ಕೆ ನಾನೇನಾದರೂ ಹೇಳಿಬಿಡೋಣ ಅಂದುಕೊಂಡಾಗಲೆಲ್ಲಾ ಸ್ಮಿತಾಳ ಮಾತೇ ನೆನಪಿಗೆ ಬರುತ್ತೆ. " " ಗೋಪಿ ಹುಡುಗ ಹುಡುಗೀ ಸ್ನೇಹ ಅಂದ್ರೆ ಮದುವೇಲಿ ಕೊನೆಯಾಗೋದು ಅನ್ನೋ ಮಾತು ನಮ್ಕೇಸ್‌ನಲ್ಲಿ ಸುಳ್ಳಾಗ್ತಿದೆಯಲ್ಲ. " ಹೌದು ನಾನು ಹಾಗೆ ಇರಬೇಕು.
ಓ ಸ್ಮಿತಾ ಫೋನ್ ಆನ್ ಮಾಡಿದೆ
"ಹಾಯ್ ಗೋಪಿ ಕೂಡಲೆ ಬಾರೋ ನಿಂಗೊಂದು ವಿಷಯ ಹೇಳಬೇಕು. "
"ಏನೆ ಅದು?" ಅವಳೂ ನನ್ ಹಾಗೆ ಯೋಚನೆ ಮಾಡ್ತಾ ಇದಾಳಾ? ಅಥವ ಅಮೇರಿಕಾ ಅಮೇರಿಕಾ ಪಿಚ್ಚರ್ ಥರ ಅವಳ ಮದುವೆ ಅಂತ ಹೇಳ್ತಾಳ ಅಥವ ಇನ್ನ್ಯಾವುದೋ ಪಿಚ್ಚರ ಥರ ಲವರ್‌ನ ತೋರಿಸ್ತಾಳ ? ನನ್ನ ಮನದಲ್ಲಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಯಸಿದೆ.
""ಮೊದಲು ಬಾರೋ ಇಲ್ಲಿ " ಅವಳ ಅಪ್ಪ್ಪಣೆ ಮೀರುವುದುಂಟೆ
"ಆಯ್ತು ಕಣೆ . ಇನ್ನೈದು ನಿಮಿಷದಲ್ಲಿ ಬರ್ತೀನಿ" ಕೈಗೆ ಸಿಕ್ಕಿದ ಶರ್ಟ್ ಹಾಕಿಕೊಂಡು ಬೈಕ್ ಸ್ಟಾರ್ಟ್ ಮಾಡಿದೆ. ಬೈಕ್ ಮುಂದೆ ಓಡುತ್ತಿದ್ದರೂ ಅದಕ್ಕಿಂತ ವೇಗವಾಗಿ ನನ್ನ ಮನದ ಆಲೋಚನೆಗಳು ಓಡುತ್ತಿದ್ದವು.
ಸ್ಮಿತ
ಗೋಪಿ ಅಗೋ ಬಂದೇ ಬಿಟ್ಟ. ನಿಜಕ್ಕೂ ಒಳ್ಳೇ ಹ್ಯಾಂಡ್ ಸಮ್ ಹುಡ್ಗ. ತುಂಬಾ ಚೆನ್ನಾಗಿ ಕಾಣ್ತಾನೆ . ಅರೆ ನಂಗೇನಾಗಿದೆ ಯಾಕೆ ಹೀಗೆ ಯೋಚನೆ ಮಾಡ್ತಾ ಇದ್ದೀನಿ. ಯಾಕೆ ಗೆಳೆಯ ಚೆನ್ನಾಗಿದ್ದಾನೆ ಅನ್ನೋದು ತಪ್ಪಾ. ನನ್ನ ಮನಸಿಗೆ ನಾನೆ ಕೇಳ್ಕೊಂಡೆ. ತಪ್ಪಲ್ಲ . ಆದರೆ ಯೋಚನೆ ಮಾಡುತ್ತಿರುವ ಲಹರಿ ಸರಿಯಲ್ಲ ಮನಸು ಚುಚ್ಚಿತು. ನಾನು ಕಳ್ಲೀನ ಮತ್ತೆ ಕೇಳಿಕೊಂಡೆ. ಹೌದು ಮೇಲೆ ಸ್ನೇಹಿತೆಯಂತೆ ನಟನೆ ಒಳಗೆ ಪ್ರಿಯತಮೆಯ ಆಲೋಚನೆ ಸರಿಯಾ?
"ಏ ಸ್ಮಿತಾ ಯಾಕೆ ಹೀಗೆ ನಿಂತುಕೊಂಡಿದ್ದೀಯಾ ಏನ್ ಯೋಚನೆ " ಗೋಪಿ ಹೆಗಲನ್ನು ತಟ್ಟಿದಾಗ ಮತ್ತೆ ಲೋಕಕ್ಕೆ ಬಂದೆ
"ಏನಿಲ್ಲ ಕಣೋ ಗೋಪಿ ಬಾ ಒಳಗೆ "
"ಮೊನ್ನೆ ಮುಂಗಾರು ಮಳೆ ಮಿಸ್ ಮಾಡಿಕೊಂಡೆ ಅಂದ್ಯಲ್ಲ ಆ ಸಿನಿಮಾ ಡಿವಿಡಿ ತಂದಿದೀನಿ ಅದೇ ಸರ್ಪೈಸ್" ಅವನ ಮುಖದಲ್ಲಿ ಏನೋ ನಿರಾಳ ಭಾವನೆ
"ಅಷ್ಟೇನಾ ನಾನೇನೋ ಅಂದುಕೊಂಡೆ" ಗೋಪಿ ಸೋಫಾ ಮೇಲೆ ಕಾಲು ಚಾಚುತಾ ನುಡಿದ
"ಏನೋ ಅಂದುಕೊಂಡೆ" ಅವನ ಉತ್ತರದಲ್ಲಿ ನನ್ನ ಉತ್ತರ ಕಾಣುವ ಕಾತುರವಿತ್ತು
"ನಿನ್ ಲವರ್ ‍ನ ತೋರಿಸ್ತೀಯೇನೋ . ಒಂದ್ಸ್ವಲ್ಪ ಗೋಳು ಹಾಕೊಳೋಣ ಅನ್ಕೊಂಡೆ. ಇಲ್ನೋಡಿದ್ರೆ ಬೋರ್ ಬರೀ ಬೋರ್ "
"ನಾನು ಲವ್ ಮಾಡಿ ಮದುವೆ ಮಾಡಿಕೊಳ್ಳಲ್ಲಪ್ಪ .ಏನಿದ್ರೂ ಅಪ್ಪ ಅಮ್ಮ ಯಾರನ್ನ ಹೇಳ್ತಾರೋ ಅವರನ್ನೇ ಮಾಡ್ಕೊಳ್ಳೋದು." ಮನದೊಳಗಿನ ಮಾತು ಬೇರೇನೋ ಆಗಿತ್ತು.
"ಅಮ್ಮಾತಾಯಿ ನೀನೇನಾದ್ರೂ ಮಾಡಿಕೋ ನಂಗೇನು. ಒಂದ್ಲೋಟ ಜ್ಯೂಸ್ ಏನಾದ್ರೂ ಕೊಡು . ಅಲ್ಲಿಂದ ಇಲ್ಲಿಗೆ ಏನೋ ದೊಡ್ಡ ಸಹಾಯ ಮಾಡೋಹಾಗೆ ಕರೆದುಬಿಟ್ಳು. ನಾನಾಗಲೆ ಮುಂಗಾರು ಮಳೆ ನೋಡಿ ಆಯ್ತು"
"ಯೂ ಈಡಿಯಟ್. ಮತ್ಯಾಕೋ ನಂಗೆ ಹೇಳಲಿಲ್ಲ ನಿಂಗೆ ಜ್ಯೂಸ ಅಲ್ಲಾ ಏನ್ಮಾಡ್ತೀನಿ ನೋಡು"
ಕೈಗೆ ಸಿಕ್ಕಿದ ವಾಟರ್ ಬಾಟಲ್ ಎತ್ತೆಸೆದೆ . ಅವನೂ ಕಡಿಮೆ ಏನಲ್ಲ. ಅವನೂ ನನ್ನ ಮೇಲೆಸೆದ ತಪ್ಪಿಸಿಕೊಳ್ಳಲು ರೂಮಿಗೆ ಓಡಿದೆ.

ಲವರ್ ವಿಷಯ ಬಂದಾಗಲೆ ಹೇಳಿಬಿಡಬೇಕಿತ್ತು. ಆದರೆ ಯಾಕೋ ಅವನ ಮನಸಲ್ಲಿ ನನ್ಬಗ್ಗೆ ಆ ಥರ ಭಾವನೆ ಇಲ್ಲಾ ಅಂತಾನೆ ಅನ್ನಿಸ್ತಿದೆಯಲ್ಲ. ನಿಜಕ್ಕೂ ನನ್ನ ಲವ್ ಮಾಡೋ ಹಾಗಿದ್ರೆ ಅವನೇ ಮೊದಲು ಪ್ರಪೋಸ್ ಮಾಡ್ತಾನೆ. ಅವನೊಂಥರಾ ಬೋಲ್ಡ್ ನಂಗೊತ್ತು. ಅವನಿಗೆ ನನ್ಮೇಲೆ ನನ್ನ ಸ್ನೇಹದ ಮೇಲೆ ಗೌರವ ಇದೆ. ಅದನ್ನ ಕಡಿಮೆ ಮಾಡಿಕೊಳ್ಳೋದಿಲ್ಲ ನಾನು.

ಗೋಪಿ
ಡಿಗ್ರೀ ಮುಗೀತು ಕೆಲಸ ಸಿಕ್ತು . ಇನ್ನು ಮನೇಲಿ ಮದುವೆ ವಿಷಯ್ ಮಾತಾಡ್ತಾ ಇದಾರೆ. ಇದೇ ಒಳ್ಳೇ ಚಾನ್ಸ್ ಹೇಳಿಬಿಡಲಾ
ಹೇಗಿದ್ರೂ ಮನೆಲಿ ಎಲ್ಲಾರು ಸೇರಿದಾರೆ. ಸ್ಮಿತಾ ತಂದೆ ತಾಯಿ ನಮ್ತಂದೆ ತಾಯಿ ಎಲ್ಲಾ ಮಾತಾಡ್ತಾ ಇದಾರೆ. ಆಕಡೆ ಸ್ಮಿತಾ ಕೂತಿದಾಳೆ .
"ಲೋ ಗೋಪಿ ಒಂದ್ವಿಷಯ . ನೆನ್ನೆ ನಾವೆಲ್ಲಾ ಸೇರಿ ಮಾತಾಡ್ಕೊಂಡಿದೀವಿ. ನಿಮ್ಮಿಬ್ಬರ ಮದುವೆ ಮಾಡೋಣ ಅಂತ ಅಂದುಕೊಂಡಿದೀವಿ. ಹೇಗಿದ್ರೂ ಇಬ್ಬರಿಗೂ ತುಂಬಾ ಚೆನ್ನಾಗಿ ಅಂಡರ್ ಸ್ಟಾಂಡಿಂಗ್ ಆಗಿದೆ. ಒಬ್ಬರನೊಬ್ಬರ್ನೂ ಕಂಡ್ರೆ ಪ್ರಾಣ.ಏನ್ಹೇಳ್ತೀಯಾ?" ಅಪ್ಪ ಪ್ರಶ್ನಿಸಿದರು. ಅಪ್ಪ ಹಾಗೇನೆ ಒಂಥರಾ ಓಪನ್ ಟೈಪ್ . ಎಲ್ಲಾನೂ ಎದುರೆದುರೇ ಕೇಳ್ತಾರೆ
ನಾನು ಅಂದುಕೊಳ್ಳುತಿದ್ದ ಘಳಿಗೆ ಬಂದೇ ಬಿಟ್ಟಿತು.
ಮಾತಾಡಲು ತಲೆ ಎತ್ತಿದೆ . ಅತ್ತ ಕಡೆ ಸ್ಮಿತಾ. ಅವಳ ಕಣ್ಣಲ್ಲಿ ಏನು ಕಾಣ್ತಾ ಇದೆ? ಅದೇನು ಆತಂಕಾನ ? . ಸ್ನೇಹಾನ ಪ್ರೀತಿ ಮದುವೆಗೆ ಬದಲಾಯಿಸಿಕೊಳ್ಳೋದಿಕ್ಕೆ ಅವಳಿಗೆ ಇಷ್ಟ ಇಲ್ಲಾ ಅಂತ ನಂಗೆ ಗೊತ್ತು . ನಾನೇನಾದರೂ ಹೂ ಅಂದ್ರೆ ಅವಳ ಕಣ್ಣಲ್ಲಿ ಅಪರಾಧಿ ಆಗಿ ಹೋಗ್ತೀನಿ. ಏನ್ಮಾಡಲಿ? ಇದು ಒಂಥರಾ ಸತ್ವ ಪರೀಕ್ಷೆ ಇದ್ದ ಹಾಗೆ . ಈಗ ನಾನೇನಾದರೂ ಹೂ ಅಂದರೆ ಅವಳು ತುಂಬಾ ಬೇಜಾರು ಮಾಡಿಕೊಳ್ಳಬಹುದು. ಬೇಡ ಅಂದರೆ ನನ್ನ ಮನಸಿಗೆ ಮೋಸಮಾಡಿಕೊಳ್ಳೋ ಹಾಗಲ್ಲ್ವಾ?
ಕೊನೆಗೆ ಗೆಳತಿ ಸ್ಮಿತಾನೆ ಗೆದ್ದಳು.
"ಅಪ್ಪ ನಾನು ಸ್ಮಿತಾನ ನನ್ನ ಫ್ರೆಂಡ್ ಅನ್ನೋ ಭಾವನೇಲಿ ನೋಡಿದೀನಿ. ನಮ್ಮ ಫ್ರೆಂಡ್ ಶಿಪ್ ಫ್ರೆಂಡ್ ಶಿಪ್ ಆಗೇ ಇರಲಿ ದಯವಿಟ್ಟು ಅದನ್ನ ಬೇರೆ ಹೆಸರು ಹಿಡಿದು ಕೂಗಬೇಡಿ"
ಹೃದಯದ ಮಾತುಗಳು ಎತ್ತಲೋ ಹೋಗಿದ್ದವು. ಕೇವಲ ಗೆಳೆತನದ ಮೇಲೆ ನಾನಿಟ್ಟಿದ್ದ ಅಭಿಮಾನವೇ ಮಾತಾಡಿದ್ದು
ಸ್ಮ್ತಿತಾ ಮತ್ತೊಮ್ಮೆ ನನ್ನನ್ನು ನೋಡಿದಳು. ಅವಳ ಕಣ್ಣಲ್ಲಿದ್ದು ಮೆಚ್ಚುಗೆ ಎಂದನಿಸಿತು
"ಅಂಕಲ್ ಗೋಪಿ ಹೇಳಿದ್ದು ನಿಜ ನಂಗೆ ಗೋಪಿ ಗೆಳೆಯನ ಹೊರತಾಗಿ ಬೇರೆ ಯಾವ ಭಾವದಲ್ಲೂ ಕಾಡಿದ್ದಿಲ್ಲ" ಅವಳೂ ನುಡಿದಳು

ಮೂರು ವರ್ಷಗಳ ನಂತರ

ಸ್ಮಿತಾ
ಇವತ್ತು ಗೋಪಿಯ ಹಾಗು ನನ್ನ ಇಬ್ಬರ ಮದುವೆಯ ವಾರ್ಷಿಕೋತ್ಸವ ಒಂದೇ ದಿನ.
ಚಂದು ಜೊತೆಯಲ್ಲಿ ನಾನು ಅನು ಜೊತೆಯಲ್ಲಿ ಗೋಪಿ
ಚಂದುವನ್ನು ಗೋಪಿ ನನಗಾಗಿ ಹುಡುಕಿದ, ಚಂದು ಒಳ್ಳೆಯವನು . ನನ್ನನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾನೆ. ಬಹುಷ ಗೋಪಿಯನ್ನು ಮದುವೆಯಾಗಿದ್ದರೆ ಇಷ್ಟೊಂದು ಸಂತೋಷವಾಗಿರಲು ಸಾಧ್ಯ ಇರ್ತಿರಲಿಲ್ಲ.
ಹಾಗೆ ಅನು ನನ್ನ ಜೀವದ ಗೆಳತಿ ಅವಳನ್ನು ಗೋಪಿಗೆ ಸೂಚಿಸಿದ್ದು ನಾನೆ. ಅವರಿಬ್ಬರದೂ ಆದರ್ಶ ದಾಂಪತ್ಯ.
ಒಮ್ಮೊಮ್ಮೆ ಅನಿಸುತ್ತದೆ ನಾನು ಗೋಪಿಯನ್ನು ಪ್ರೀತಿಸುತ್ತಿದ್ದೆ ಎಂಬುದು ಕೇವಲ ಭ್ರಮೆಯಾಗಿತ್ತೇ . ಅದು ಮನದಾಸೆ ಆಗಿರಲಿಲ್ಲ ಎಂದೂ ಅನಿಸುತ್ತದೆ. ನನ್ನದೂ ಅಂತಹ ಪ್ರೀತಿಯಾಗಿದ್ದರೆ ಗೋಪಿಗೆ ನನ್ನ ಕಣ್ಣಲ್ಲಿ ಪ್ರೀತಿ ಕಾಣುತ್ತಿತ್ತು. ಗೋಪಿ ನನ್ನನ್ನ ಗೆಳತಿ ಎಂದೇ ಕಂಡಿದ್ದ ಹಾಗಾಗಿ ಅವನಿಗೆ ಅದು ಕಾಣಲಿಲ್ಲ . ಗೋಪಿ ಈಗಲೂ ಮೆಚ್ಚಿನ ನೆಚ್ಚಿನ ಗೆಳೆಯನೇ ಆಗಿದ್ದಾನೆ. ಪ್ರೀತಿ ಎಂಬುದು ಅಡ್ಡ ಬಂದಿದ್ದರೆ ಈ ಸ್ನೇಹ ಉಳಿತಾ ಇರಲಿಲ್ಲ.
ಅದೋ ಅಲ್ಲಿ ಗೋಪಿ ನಗ್ತಾ ಇದಾನೆ ಯಾವ್ದುದೋ ಮಾತಿಗೆ ಚಂದೂ ಕೂಡ ಸಂತೋಷವಾಗಿದಾನೆ.
ನಾನು ಅವರಲ್ಲಿ ಒಬ್ಬಳಾಗಿ ಹೋಗ್ತಿದ್ದೇನೆ.
ಗೋಪಿ
ಸ್ಮಿತಾ ನನ್ನ ಉಸಿರು ನಿಜ ಆದರೆ ಅದು ಕೇವಲ ಸಂಬಂಧದಿಂದ ಮಾತ್ರಾ ಹೆಸರಿಸುವಂತಹದಲ್ಲ ಎಂದು ನನಗನಿಸ್ತಾ ಇದೆ. ಮೆಚ್ಚಿನ ಮಡದಿ ಅನು . ಮುದ್ದಿನ ಮಗು ನಿಶಾ ಆತ್ಮೀಯ ಗೆಳೆಯ ಬಾಲು ಮತ್ತವನ ಮಡದಿ ಹಾಗು ನನ್ನ ನೆಚ್ಚಿನ ಗೆಳತಿ ಸ್ಮಿತಾ ನನ್ನ ಬದುಕನ್ನು ಸ್ವರ್ಗ ಮಾಡಿದ್ದಾರೆ. ಅಕಸ್ಮಾತ್ ನಾನು ಸ್ಮಿತಾಳನ್ನು ಮದುವೆಯಾಗಿದ್ದರೆ ಇಂತಾ ಆನಂದ ಸಿಗ್ತಾ ಇತ್ತೋ ಇಲ್ಲವೋ ಎಂಬ ಅನುಮಾನಾನೂ ಕಾಡುತ್ತದೆ
ಸಾಕು ಈ ಬಾಳು ಹೀಗೆ ಇರಲಿ.
ಸ್ಮಿತಾಳ ನಗುವಲ್ಲಿ ,ಅನುವಿನ ಪ್ರೀತಿಯಲ್ಲಿ ನನ್ನನ್ನು ತೊಡಗಿಸಿಕೊಂಡೆ