Tuesday, April 29, 2008

ಪ್ರೀತಿಗೆ ಸ್ನೇಹಾನ ಮರೆಸೋ ಶಕ್ತಿ ಇರುತ್ತಾ?

ಬಸ್ ಸ್ಟಾಪ್‌ನಲ್ಲಿ ನೆಪ ಮಾತ್ರಕ್ಕೆ ಕುಳಿತಿದ್ದರು ಆ ಇಬ್ಬರು ಸ್ನೇಹಿತೆಯರು ಬರೀ ಸ್ನೇಹಿತೆಯರೆಂದರೆ ಸಾಲದು ದೇಹ ಪ್ರಾಣ ಎಂಬತಿದ್ದರು. ಕಾಲೇಜ್ ಬಿಟ್ಟೊಡನೆ ಸೀದ ಮನೆಗೆ ಹೋಗುವ ಮಾತೆ ಅವರಲ್ಲಿರಲಿಲ್ಲ. ಬಸ್ ಸ್ಟಾಪ್‍ನಲ್ಲಿ ಕೂರುವುದು ಪಾರ್ಕ್ಗೆ ಹೋಗುವುದು . ದುಡ್ಡಿದ್ದರೆ ಬೇಕರಿಗೆ ಹೋಗಿ ತಿಂದುಕೊಂಡು ಮಾತಾಡುವುದು. ಮಾತಿಗೆ ಬರವೇ ಇರಲಿಲ್ಲ
ಮೂರು ಜನ್ಮಕ್ಕೆ ಸಾಲುವಷ್ಟು ಮಾತಿತ್ತೇನೊ ಅವರಲ್ಲಿ. ಇಂದೂ ಹಾಗೆ ಮಾತು ನಡೆಯುತ್ತಿತ್ತು
"ಏ ಪ್ರಿಯ ಯಾಕೆ ಸ್ವಲ್ಪ ದಿನದಿಂದ ಏನೊ ಒಂಥರ ಇದೀಯ ಏನೊ ಕಳ್ಕೊಂಡವಳ ಹಾಗೆ . ಸುಮ್ಮ್ನೆ ಕೂತ್ಕೊಂಡೀರ್ತೀಯ . ಏನು ವಿಷಯ ? ಲವ್ವಾ?"
ಪ್ರಿಯ ನಾಚಿಕೆಯಿಂದ ತಲೆಯಾಡಿಸಿದಳು
" ಏ ಕಳ್ಳಿ ಯಾರೆ ಅದು .ದಿನದಲ್ಲಿ ಮುಕ್ಕಾಲು ಪಾಲು ನಂಜತೆನೇ ಇರ್ತೀಯ . ಇದು ಹ್ಯಾಗೆ ಸಾಧ್ಯ.
ಹೋಗಲಿ ಯಾರೆ ಅವನು ನನ್ನ ಗೆಳತೀ ಮನಸನ್ನ ಹಾರಿಸಿಕೊಂಡವನು?" ಸ್ನೇಹಾಳ ಪ್ರಶ್ನೆಗೆ ಉತ್ತರಿಸಲಾರೆ ಎಂಬಂತೆ ತಲೆ ಆಡಿಸಿದಳು ಪ್ರಿಯ.
"ನನ್ನ ಹತ್ತಿರ ಮುಚ್ಚಿಡಬೇಡ . ನಂಗೆ ಹೇಳೆ ಪ್ಲೀಸ್"
ಪ್ರಿಯ ತನ್ನಲ್ಲಿದ್ದ ರೆಕಾರ್ಡ್ ಬುಕ್ ತೆಗೆದು ಅದರಲ್ಲಿದ್ದ ಲೇಬಲ್‍ನ ಮೇಲಿದ್ದ ಹೆಸರನ್ನು ತೋರಿದಳು.
ಹೆಸರು ನೋಡುತಿದ್ದಂತೆ ನಂಬಲಾಗದವಳಂತೆ ಅಚ್ಚರಿಯಿಂದ ಪ್ರಿಯಳನ್ನು ನೋಡಿದಳು.
ಅದು ಅವರಿಬ್ಬರ ಕ್ಲೋಸ್ ಫ್ರೆಂಡ್ ರವಿಯ ಬುಕ್ .
ಈ ಮೂವರು ಭೂಮಿಯ ಮೇಲೆ ಹುಟ್ಟಿದ್ದೇ ಈ ಸ್ನೇಹಕ್ಕಾಗಿ ಎಂಬಂತಿದ್ದರು.
ಕಾಲೇಜಿನ ಯಾವ ಮೂಲೆಯಲ್ಲಾದರೂ ಒಬ್ಬರಿದ್ದರೆ ಇನ್ನಿಬ್ಬರು ಇರುತ್ತಾರೆ ಎನ್ನುವಂತಿತ್ತು.
ಯಾರಾದರೂ ಒಬ್ಬರಿಗೆ ಯಾರಿಂದಲೋ ನೋವಾಗಿದೆ ಎಂದರೆ ಮೂರು ಜನ ಜಗಳಕ್ಕೆ ರೆಡಿ.
ಯಾರೋ ಒಬ್ಬರು ರಜಾ ಹಾಕಿದರೆ ಇನ್ನಿಬ್ಬರಿಗೆ ಕ್ಲಾಸ್ ಬೋರು ಕೂಡಲೆ ಕ್ಲಾಸ್‌ನಿಂದ ಮಾಯವಾಗುತ್ತಿದ್ದರು.
ಎಲ್ಲರೂ ರವಿಗೆ ರೇಗಿಸುತ್ತಿದ್ದರು. ಇಬ್ಬರು ಹುಡುಗಿಯರನ್ನು ಪಟಾಯಿಸಿಬಿಟ್ಟಿದ್ದೀಯಾ ಅಂತ.
ಆದರೆ ರವಿ ಇವರಿಬ್ಬರ ಬಗ್ಗೆ ಎಂದೂ ಅಂತಹ ಭಾವನೆಯನ್ನ ವ್ಯಕ್ತ ಪಡಿಸಿರಲಿಲ್ಲ.
" ಹೆಯ್ ಪ್ರಿಯ ಆರ್ ಯು ಶ್ಯೂರ್ ? ಇದು ರವಿಗೆ ಗೊತ್ತಾ?"
"ಇಲ್ಲಾ ಕಣೆ ಅವನಿಗೆ ಹೇಗೆ ಹೇಳಲಿ ಅಂತ ತಿಳೀತಿಲ್ಲ. ಅವನು ಯಾವತ್ತು ನನ್ನ ಜೊತೆ ಆ ಥರ ಬಿಹೇವ್ ಮಾಡಿಲ್ಲ . ಅವನಿಗೆ ಈ ವಿಷಯ ಹೇಳೊ ಕೆಲಸಾನ್ ನೀನೆ ಮಾಡಬೇಕು. ಪ್ಲೀಸ್ ಕಣೇ"
"ಸರಿ ಕಣೆ ಲೆಟ್ ಮಿ ಟ್ರೈ."
" ಪ್ಲೀಸ ಸ್ನೇಹ ನಂಗೆ ಅವನಲ್ಲದೆ ಬೇರೆ ಯಾರು ಹಿಡಿಸ್ತಾ ಇಲ್ಲ. ಊಟ ತಿಂಡಿ ಸಹಾ ಬೇಡ ಅನ್ನಿಸ್ತಿದೆ. ನೀನವನ್ನ ಒಪ್ಪಿಸಲೇ ಬೇಕು"
"ಆಯ್ತು " ಜೋರಾಗಿಯೆ ಕಿರುಚಿದಳು
ಅಷ್ಟ್ರಲ್ಲಿ ಗಾಡಿ ಬಂದು ನಿಂತ ಶಬ್ಧವಾಯಿತು . ರವಿ ಬಂದು ನಿಂತಿದ್ದ.
"ಏನ್ರೇ ಇನ್ನೂ ಮೀಟಿಂಗ್ ಮುಗ್ದಿಲ್ಲವಾ, ನಡೀರಿ ಟಿಕೆಟ್ ತಂದಿದೀನಿ ಹೋಗೋಣಾ"
"ರವಿ ಇವತ್ತು ರಾಗಿಗುಡ್ಡ ದೇವಸ್ಥಾನಕ್ಕೆ ಹೋಗೋಣ. ಫಿಲ್ಮ್ ಬೇಡ " ಸ್ನೇಹ ನುಡಿದಳು.
" ಯಾಕೆ ನೆನ್ನೆ ತಾನೆ ಹೇಳ್ತಿದ್ರಿ . ಹೋಗೋಣ ಅಂತ ಇದೇನು ಹೊಸಾ ಆಟ?"
"ಪ್ಲೀಸ್ ಕಣೋ . ಟಿಕೆಟ್ನ ಮಹೇಶಗೆ ಕೊಟ್ಬಿಡು ಅವನು ಅವನ ಫ್ರೆಂಡ್ ನೋಡ್ಕೋತಾರೆ."
"ಆಯ್ತು ಅದಿರ್ಲಿ ಯಾಕೆ ಪ್ರಿಯಂಗೆ ಏನಾಯಿತು ಒಂಚೂರು ಬಾಯೆ ಬಿಡ್ತಿಲ್ಲ"
"ಅದನ್ನೆ ಮಾತಾಡ್ಬೇಕು . ನೀನು ಹಿಂದೆ ಬಾ ನಾವು ಆಟೋನಲ್ಲಿ ಹೋಗ್ತೀವಿ"
"ಸರಿ"
ದೇವಸ್ಥಾನದ ಹತ್ತಿರ
ಪ್ರಿಯ ಒಂದೆಡೆ ಕುಳಿತಿದ್ದಳು. ಸ್ವಲ್ಪ ದೂರದಲ್ಲಿ ಸ್ನೇಹ ಹಾಗು ರವಿಯ ಮಾತು ಕತೆ ನಡೆಯುತ್ತಿತು
ರವಿ " ಸ್ನೇಹ ಇದೇನಿದು ಹೊಸ ನಾಟಕ ನಿಮ್ಮಿಬ್ಬರದು. ನಾನು ಯಾವತ್ತು ಪ್ರಿಯನ್ನಾಗಲಿ ನಿನ್ನಾಗಲಿ ಆ ದೃಷ್ಟಿನಲ್ಲಿ ನೋಡಿಲ್ಲ. ತಮಾಷೆ ಮಾಡಬೇಡ"
"ಇಲ್ಲ ನಾನು ತಮಾಷೆ ಮಾಡ್ತಿಲ್ಲ . ನೋಡು ಈ ಮಾತನ್ನು ಅವಳ ಮುಂದೆ ಆಡಬೇಡ. ಏನಾಗಿದೆಯೋ ಪ್ರಿಯಾಗೆ ಒಳ್ಳೆ ಗೊಂಬೆ ಥರಾ ಇದ್ದಾಳೆ . ಬೇರೆ ಹುಡುಗರೆಲ್ಲಾ ಅವಳ ಹಿಂದೆ ಬೀಳ್ತಾರೆ . ಅಂತಹದ್ರಲ್ಲಿ ನೀನು. ಹ್ಯಾಗೂ ನಾವೆಲ್ಲಾ ಒಂದೆ ಕ್ಯಾಸ್ಟ್. ಇನ್ನೇನಪ್ಪ ಯೋಚನೆ."
" ಸ್ನೇಹಾ ಅದು................"
"ಅದೂ ಇಲ್ಲ ಇದೂ ಇಲ್ಲಾ. ನೀನೀಗ ಪ್ರಿಯ ಹತ್ರ ಹೋಗಿ ಐ.ಲೌ. ಯು ಅಂತ ಹೇಳ್ತೀಯ ಸರೀನಾ . ಹೋಗೊ"
ಸ್ನೇಹ ಅಲ್ಲಿಯೇ ನಿಂತಳು. ರವಿ ಪ್ರಿಯಾಳ ಬಳಿ ಹೋಗಿ ಹೇಳಿದ . ಪ್ರಿಯಾಳ ಮುಖ ಅರಳಿತು.
ಸ್ನೇಹಾಳ ಮನಸಲ್ಲಿ ಏನೂ ಒಂಥರ ಹೇಳಲಾರದ ನೋವು. ಯಾಕೆ ಅಂತ ತಿಳಿಯಲಿಲ್ಲ.
----------------------------------------------------
ಮಾರನೆಯ ದಿನ

" ಅಯ್ಯೊ ಪಾಪ ಜೀವ ಹೊರಟು ಹೋಗಿದೆ ನೋಡಪ್ಪ ಪಾಪ ಬರಿ ದೇಹ ಮಾತ್ರ ಕ್ಲಾಸ್‌ನ್ನಲ್ಲಿ ಕೂತಿದೆ." ಕವಿತಾ ರೇಗಿಸುತ್ತಿದ್ದಳು .
ಅವತ್ತು ಕಾಲೇಜಿಗೆ ಬಂದಾಗಿನಿಂದ ಮೊದಲ ದಿನ ಸ್ನೇಹ ಒಂಟಿಯಾಗಿ ಕುಳಿತಿದ್ದಳು. ರವಿ ಪ್ರಿಯ ಅಂದು ಕ್ಲಾಸ್‌ಗೆ ಚಕ್ಕರ್ ಹಾಕಿ ಎಲ್ಲೊ ಹೋಗಿದ್ದರು.
"ಏನೆ ಸ್ನೇಹ ನೀನೇನೊ ಬ್ರೋಕರ್ ಕೆಲಸ ಬೇರೆ ಮಾಡಿದಿಯಂತೆ. ಇವಾಗ ಎಲ್ಲಿ ನಿನ್ನ ಪ್ರಾಣ ಸ್ನೇಹಿತರುಗಳು ಪ್ರಾಣ ತೆಕ್ಕೊಂಡು ಹೋಗಿಬಿಟ್ಟರಾ."ಕವಿತಾಳ ವ್ಯಂಗ್ಯ ಮುಂದುವರಿಯುತಿತ್ತು
" ಕವಿತಾ ಪ್ಲೀಸ್ ಶಟ್ ಅಪ್ "
ಕ್ಲಾಸ್ ನಲ್ಲಿ ಕೂರಲಾರದೆ ಹೊರಗೆ ಬಂದಳು ಜೀವನದಲ್ಲಿ ಮೊದಲಬಾರಿಗೆ ಒಂಟಿ ಎಂಬ ಭಾವನೆ ಬಂದಿತು.

ಅಂದಿನಿಂದ ರವಿ ಪ್ರಿಯ ಹೊರಗಡೆ ಹೋಗುವುದು . ಸ್ನೇಹಳನ್ನು ಅವಾಯ್ಡ್ ಮಾಡುವುದು ನಡೆಯಿತು.

ಸ್ನೇಹಾ ಈಗ ಇದಕ್ಕೆ ಅಭ್ಯಾಸವಾಗಿ ಹೋದಳು.
ಆದರೆ ಅವಳ ಮನಸಲ್ಲಿ ಮೂಡಿದ ಪ್ರಶ್ನೆಯೊಂದಕ್ಕೆ ಉತ್ತರ ಸಿಗಲ್ಲಿಲ್ಲ.
ಪ್ರೀತಿಗೆ ಸ್ನೇಹಾನ ಮರೆಸೋ ಶಕ್ತಿ ಇರುತ್ತಾ?
ಆ ಪ್ರಶ್ನೆಗೆ ಉತ್ತರ ಹೇಳಲಾಗುವುದಾ