Sunday, September 23, 2012

ನೆನಪೆಂಬ ಹಾಯಿ ದೋಣಿಯಲ್ಲಿ ಹಾಗೆ

ನೆನಪೆಂಬ ಹಾಯಿ ದೋಣಿಯಲ್ಲಿ ಹಾಗೆ 
ಒಮ್ಮೆ ಅಡ್ಡಾಡುವ ಅಂತ ದೋಣಿ ಹತ್ತಿದೆ, 
ದೋಣಿ ನಡೆಸುವ ಅಂಬಿಗ ನೀ ನೆಂದು ಅರಿಯದೆ

ಮನಸನೆಲ್ಲಾ ಒಮ್ಮೆ ಚೆಲ್ಲಿ ಖಾಲಿ ಮಾಡುವ 
ಅಂತ ಮನಸನ್ನೆ ತಿರುಗಿಸಿ ಬಗ್ಗಿಸಿದೆ,
ಬೀಳದಂತೆ ಭದ್ರವಾಗಿ ನೀ ಕೂತಿರುವೆ ಎಂದು ಮರೆತೆ

ಮರಳಿ ಬಾರದ ಕನಸಿನ ಊರಿಗೆ ಒಬ್ಬಳೇ 
ಹೋಗುವೆ ಎಂದು ಪಯಣಕೆ ಸಿದ್ದಳಾದೆ
ಆ ಊರ ತುಂಬ ನಿನ್ನದೇ ನಗೆ ಗುರುತ ಗುರುತಿಸದೆ

ಏಳು ಹೆಜ್ಜೆಗಳು ಯಾರದ್ದಾದರೇನು ಅಂದುಕೊಂಡು
ಮಂಟಪದಿ ಕೂತೆ ತಲೆ ತಗ್ಗಿಸಿ
ಪ್ರತಿ ಹೆಜ್ಜೆಗೂ ಘಲ್ಲೆನುವ ಗೆಜ್ಜೆ ನೀನೆಂಬುದ ಮರೆತೆ

ತಾಳಿ ತಾಳಿ ತಾಳಿಗೂ ಬೇಸರ ಬಂದಿತೇನೋ
ನೆನ್ನೆ ಹೀಗೆ ತಾಳಿ ಕಳೆಯಿತು
ಕಳೆದ ಮಾತ್ರಕ್ಕೆ ಬಿಡುಗಡೆಯಲ್ಲ ಎಂಬುದ ಅರಿಯದೆ

Saturday, September 8, 2012

ಜೋಡಿ ಮಂಚ


ಜೋಡಿ ಮಂಚ
ರಾತ್ರಿ ಹತ್ತು ಘಂಟೆಯಾಗಿತ್ತು. ಜೋಡಿ ಮಂಚದ ಮೇಲಿನ  ಒಂಟಿತನಕ್ಕಿಂತ ತಿರಸ್ಕೃತನಾದೆ ಎಂಬ ನೋವು  ನನ್ನ ಒಂಟಿಯಾಗಿ ಇರಲು ಬಿಟ್ಟಿಲ್ಲ .ಈಗಲೂ ಅವಳದೇ ನೆನಪು. ನೆನ್ನೆ ಮೊನ್ನೆ ಮದುವೆಯಾದಂತಿದೆ ಆಗಲೇ ಅವಳು ಡೈವೋರ್ಸ್‍ಗೆ ಅರ್ಜಿ ಸಲ್ಲಿಸುತ್ತೇನೆ ಅಂತ ಅಂದು ಮನೆ ಬಿಟ್ಟಳು. . ಈ ಸಂಪತ್ತಿಗೆ ಪ್ರೀತಿಸಿ ಮದುವೆಯಾಗಬೇಕಿತ್ತಾ?ಅಪ್ಪ ಅಮ್ಮನ್ನ ಬಿಟ್ಟು ನನ್ನ ಸ್ಕೂಟರ್ ನಲ್ಲಿ ಕೂತು ಬಂದವಳಿಗೆ ವರ್ಷ ಕಳೆಯುತ್ತಿದ್ದಂತೆಯೇ ಸ್ಕೂಟರ್ ಬೇಡವಾಯ್ತೇ ಥೇಟ್ ನನ್ನ ಬಯಸಿಬಂದವಳಿಗೆ ನನ್ನ ಸಾದಾತನ ಇಷ್ಟವಾಗದ ರೀತಿಯೇ ಅಚ್ಚರಿ. ಪ್ರೀತಿಯನ್ನ ಅರೆದು ತಿಂದು,ಬದುಕುತ್ತೇವೆ ಅಂದಿದ್ದವಳಿಗೆ  ಮನೆಯಲ್ಲಿನ ಊಟ ಹಿಡಿಸದೇ ಹೋಯ್ತೇ. ಕೊನೆಗೆ ನನ್ನ ಬಡತನವೇ ನನಗೆ ನನ್ನ ಪ್ರೀತಿಗೆ ಮುಳಿವಾಯ್ತಾ? ಅಪ್ಪ ಹೇಳಿದ ಮಾತು ಕೇಳದೆ ಈ ಸಿನಿಮಾ ಫೀಲ್ಡ್‍ಗೆ ಬಂದು ಜುನಿಯರ್ ಅರ್ಟಿಸ್ಟ್ ಆಗಿ. ಈಗೀಗ ಹೀರೋ ಫ್ರೆಂಡ್ ಗ್ರೂಪ್ ನಲ್ಲಿ ಒಬ್ಬನಾಗಿ ಬರೋ ಸಾವಿರ ಎರೆಡುಸಾವಿರಕ್ಕೆ  ನೂರೆಂಟು ಮಾತು ಕೇಳಿ........... ಅಬ್ಬಾ........... ಛೇ ಮತ್ತೇನಿದು ಮತ್ತೆ ಅದೇ ಹಳೇ ಕತೆ. ಆದರೂ ಅವಳು ಒಮ್ಮೆಯಾದರೂ ನೆನೆಸಿಕೊಳ್ಳಬಾರದೇ? ಒಂದು ಸಲ ಅಜೇಯ್ ಸಾರಿ ಕಣೋ ಅಂದರೆ ಸಾಕು ............ ಮತ್ತೆ ನನ್ನ ಬೆಚ್ಚನೆಯ ಪುಟ್ಟ ಗೂಡಲ್ಲಿ ಕರೆದುಕೊಳ್ಳಬಲ್ಲೆ ಆದರೆ ಅವಳಿಗೆ ಬೇಕಿರೋದು ಬಂಗಲೆ........ ಪ್ರೀತಿ ಗೂಡಲ್ಲ. ಬರೀ ಪ್ರೀತಿಲಿ ಸಂಸಾರ ಮಾಡಕಾಗಲ್ಲ , ಪ್ರೀತಿ ದುಡ್ದು ಕೊಡಲ್ಲ, ನಂಗೆ ಊಟ ಕೊಡಲ್ಲ ಅಂದು ಹೋದಳು..........ಯಾಕೋ ನಡುಗೋಡೆ ಮೇಲೆ ನಡೀತಿದ್ದೀನಿ. ಅವಳದೇ ತಪ್ಪು ಅಂತ ಹೇಳೋಕಾಗಲ್ಲ ಅನ್ಸುತ್ತೆ. ಅವಳ ಪ್ರತಿಭೆಗೆ ಮನ್ನಣೆ ಕೊಡಲಿಲ್ಲ . ಕೇವಲ ನನ್ ಹೆಂಡತಿ  ಮಾತ್ರ ಅಂದುಕೊಂಡೆ. ಆದರೂ ಅವಳಲ್ಲಿ ಹೆಣ್ಣೊಬ್ಬಳು ಇದಾಳೆ ಅವಳಿಗೂ ಅವಳದೇ ಆಸೆ, ಆಕಾಂಕ್ಷೆ ಇರುತ್ತೆ ಅನ್ನೋದನ್ನ ಏಕೆ ಮರೆತೆ. ಅವಳಲ್ಲ್ಲಿ ಓದು ಇದೆ ಕೆಲಸಕ್ಕೆ ಹೋಗ್ತೇನೆ ಎಂದಳು ಅದಕ್ಕೆ  ಒಪ್ಪಲಿಲ್ಲ. ಬಹುಷ; ಅವಳು ನನಗಿಂತ ಹೆಚ್ಚು ಓದಿದಾಳೆ ಅನ್ನೋದು ನನ್ನ ಗಂಡೆಂಬ ಅಹಂ ಒಪ್ಪಲಿಲ್ಲವೋ ಏನೋ. ಕೆಲಸಕ್ಕೆ ಹೋಗಬೇಡ ಎಂದ್ದಿದ್ದು ತಪ್ಪಾಯಿತು ಅಥವ ಹಾಗೆಂದೂ ಅವಳ ಪುಟ್ಟ ಪುಟ್ಟ ಶಾಪಿಂಗ್ ಆಸೆ ಈಡೇರಿಸಲಾಗದ್ದು ನನ್ನ ಅಸಹಾಯಕತೆಯೋ . ಒಟ್ಟಿನಲ್ಲಿ ಈಗ ನನ್ನ ಜೊತೆ ಬಿಟ್ಟಾಯ್ತು. ಆದರೂ ಒಂದು ಸಲ ಕಾಲ್ ಮಾಡಲಾ ? ನಾನೆ ಕಾಂಪ್ರಮೈಸ್ ಆಗಿಬಿಡಲಾ ಮೆಸೇಜ್ ಮಾಡಿಬಿಡಲಾ? ನೋಡಿದರೆ ಮತ್ತೆ ಬರ್ತಾಳಾ? ನಡುಗುವ ಕೈಗಳಿಂದ ಮೊಬೈಲ್ ಕೈಗೆತ್ತಿಕೊಂಡೆ.  ಟಣ್ ಟಣ್ ..... ಮೊಬೈಲ್ ಮೆಸೇಜ್ ಬಂದಿತ್ತು. ಅದು ಚಿನ್ನುದೇ " ಸಾರಿ  ಅಜ್ಜು, ನಾ ಮನೆ ಮುಂದೆ ಬಂದಿದೀನಿ . ಬಾಗಿಲು ತೆಗೆಯೋ . ನಂಗೆ ನಿನ್ನ ಬಿಟ್ಟಿರಕೆ ಆಗಲ್ಲ . ಇನ್ಯಾವತ್ತು ಹೊರಗಡೆ ಹೋಗಲ್ಲ . ಪ್ಲೀಸ್"
ಅಚ್ಚರಿಯಲಿ ಸಂಭ್ರಮ ಎನ್ನುತ್ತಾರಲ್ಲ ದು ಇದೇ ಇರಬಹುದೆನಿಸಿತು ಬಾಗಿಲ ಬಳಿ ಓಡಿ ತೆಗೆದೆ. ಚಿನ್ನು ನಿಂತಿದ್ದಳು....... "ಚಿನ್ನು ಸಾರಿ ಕಣೇ ನಾನೂನು..... ತಪ್ಪು ಮಾಡಿಬಿಟ್ಟೆ"  ತಬ್ಬಿಕೊಂಡ ದೇಹಗಳಲ್ಲಿ  ಗಾಢ ಗಂಭೀರತೆ ಮಾತ್ರ ಕಾಣುತ್ತಿತ್ತು.

ದುಡುಮ್ .......ಮಂಚದಿಂದ ಕೆಳಗೆ ಬಿದ್ದಿದ್ದೆ. ಚಿನ್ನು ಬಂದಿದ್ದು ಕನಸಿನಲ್ಲಿ ನಿಜವಾಗಿ ಅಲ್ಲ................ ಎದ್ದು ಮತ್ತೆ ಮಲಗಿದೆ ಅದೆ ಜೋಡಿ ಮಂಚದಲ್ಲಿ ಒಂಟಿಯಾಗಿ....................

Tuesday, September 4, 2012

ಶಕುಂತಲಾ


ಏನೆಲ್ಲಾ ಆಸೆ ಹುಟ್ಟಿಸಿದೆ
ರಾಜನಾಗಿಯೂ ಪೋರನಾಗಿ
 ಮನಸ ಕದ್ದ್ದು ನಕ್ಕಿದ್ದೆ

ದುಂಬಿ ಮೊಗವ ಕಾಡಿತು
ದುಂಬಿಯ ಸರಿಸಿದೆಯೋ
ಮನದ ತೆರೆ ಎಳೆದೆಯೋ
ನೀ ಮನಸ ಕಾಡಿದೆ

ನೆಪ ಮಾತ್ರಕೆ ನೆಲದತ್ತ
ನಾ ನೋಟ ಹರಿಸಿದ್ದೆ ,
ಹೃದಯವದು ಆಗಲೇ
 ವಾಲಿತ್ತು ನಿನ್ನೆಡೆಗೆ

ಒಪ್ಪಿಗೆಯೇ? ಎಂದೂ ಕೇಳಲಿಲ್ಲ
ಅಪ್ಪುಗೆಗೆ ಪಕ್ಕಾಗಿದ್ದೆ
ಕೈ ಹಿಡಿದೆಳೆದವನ ಕೈ
ಕೊಸರಲೂ ಮನಸಿದು
ಒಪ್ಪಲಿಲ್ಲ

ಮೈ ಮನ ಸೂರೆಗೊಂಡು
ಮನಸಾದವಳ ಬಳಿಗೆಳೆದು
ನೀನಾಡಿದ ಮಾತುಗಳ
ನಂಬಿದ್ದೆ ಮಗುವಿನಂತೆ


ಕೆನ್ನೆಗೆ ತುಟಿಯ ಉಂಗುರ
-ವನಿಟ್ಟು ,ಚಿನ್ನದ ಉಂಗುರ
 ಕೊಟ್ಟೆ ನೀ, ನಿನ್ನ
ನೆನಪಾಗಲಿಕ್ಕೆ, ಅದು ಬೇಕಿತ್ತೇ?

ಮುನಿ ಶಾಪವೋ  ನಾ ಮಾಡಿದ ಪಾಪವೋ
ನೀ ಕೊಟ್ಟ ಉಂಗುರವೇ ಹಾವಾಗಿ ಕಳೆದಿತ್ತು
 ಎಷ್ಟು ಕಠೋರ ನಿನ್ನೀ ಗಂಡು ಮನ
ಮರೆತಿದ್ದೆ ಅಯ್ಯೋ ನೀ ನನ್ನ

ಮರೆಯುವುದು, ತೊರೆಯುವುದು
ಹೊಳೆ ದಾಟಿದ ಮೇಲೆ ಅಂಬಿಗನ
ಮರೆತಷ್ಟೆ ಸುಲಭವೇ ನಿಮಗೆ
ನಿನ್ನಂಥ ಕಪಟಿಗಳಿಗೆ?

ಬಾಳಬಲ್ಲೇ ನಾನೂ ,ವಿಧಿಯದು ಕ್ರೂರ
ಇರಬಹುದು, ನಿನ್ನಂತೆ ಕಲ್ಲು  ನಾನಲ್ಲ
ಕಂದ  ನನಗೆ ಮಾತ್ರ
ಈತ ಇನ್ನು ನಿನ್ನವನಲ್ಲ

Monday, September 3, 2012

ಕನಸುಗಳ ಹಾವಳಿ


ಆತ ನೆನಪಾಗುತ್ತಿರುತ್ತಾನೆ ಹೋದಲ್ಲಿ ಬಂದಲ್ಲಿ ಕೂತಲ್ಲಿ . ತಿಂಗಳಾಯ್ತಷ್ಟೆ ಅವನಿಂದ ದೂರವಾಗಿ, ಬಂದಷ್ಟೆ ವೇಗವಾಗಿ ಹೊರಟವನ ತಡೆಹಿಡಿದು ನಿಲ್ಲಿಸಲು ಅವಳ  ಗತಿ ಸಹಾಯಿಸಲಿಲ್ಲ . ಅವನಿಲ್ಲವಾದರೇನು ಬದುಕಿದೆ.  ಸಾವಿರಾರು ಅಡಿಗಳಿರುವ  ದಾರಿಯಲ್ಲಿ ಅವನು ಬಂದ ಸಾಗಿದ ಅಳತೆ ಸೆಂ ಮೀಗಳಲ್ಲಿ.. ಅದಕ್ಕೇಕೆ ದುಗುಡ ದುಮ್ಮಾನ  ಎಂದುಕೊಂಡು  ಲ್ಯಾಪ್‍ಟಾಪ್ ನತ್ತ ಕಣ್ಣು ಹಾಯಿಸಿದಳು.
 ಮತ್ತಿವ ಹಾಯ್ ಎನ್ನುತಿದ್ದಾನೆ . ಪರಿಚಿತನಾಗಿ ವರ್ಷವಾಯ್ತು ಕೇವಲ .  ಅವ ಪ್ರಿಯನಾಗಿದ್ದ ಈಗ ಸ್ನೇಹಿತನೂ ಅಲ್ಲ. ಈತ ಸ್ನೇಹಿತನಾಗಿರುವಾತ ಪ್ರಿಯನಾಗಲೇ ಎಂದು ಕೇಳುತ್ತಿದ್ದಾನೆ. " ನೆನ್ನೆ ನನ್ನ ಕನಸಲ್ಲಿ ನೀವು  ಬಂದಿದ್ದಿರಿ .ನಿಮ್ಮ ಕನಸಲ್ಲಿ ನಾನು ಬರೋ ದಿನ ಯಾವತ್ತು?" ಸ್ಮೈಲ್ ಹಾಕಿ ಕೇಳುತ್ತಿರುವಾತನಿಗೆ ಉತ್ತರಿಸಲೇ ಬೇಕಿತ್ತು.
"ಮೊನ್ನಿನ ಕನಸಲ್ಲಿ ಅವನಿದ್ದ . ಇಂದು ನೀವು ,ನಾಳೆ ಮತ್ತೊಬ್ಬನಿರಬಹುದು . ಬದಲಾವಣೆ ಕೇವಲ ಪಾತ್ರಗಳದ್ದು. ಮತ್ತೇನು ವಿಶೇಷವಿಲ್ಲ . ಹೀಗಾಗಿ ಕನಸುಗಳ ಹಾವಳಿಯೇ ಬೇಡ ಅಂತ ಅವಕ್ಕೆಲ್ಲಾ ಗುಡ್ ಬೈ ಹೇಳಿದ್ದೇನೆ. ನನ್ನ ನನ್ನ ಪಾಡಿಗೆ ಬದುಕಲು ಬಿಟ್ಟು ಬಿಡಿ." ಹೀಗಂತ ಬರೆದು ಕೂತವಳಿಗೆ ಬದುಕು ಎಳೆದತ್ತ ಸಾಗುವುದರಲ್ಲಿ ಅರ್ಥ ಕಂಡುಕೊಳ್ಳಬೇಕಿದೆ  ಎಂದನಿಸಿ ಮನಸನ್ನ ಸಿದ್ದಗೊಳಿಸಲಾರಂಭಿಸಿದಳು..

Sunday, September 2, 2012

ಋಣಮುಕ್ತಳಾಗುವೆಡೆ

ಹೊರಟೆ ನಾ ಬಂಧಗಳ ಮೀರಿ.
ಕಟ್ಟುಪಾಡುಗಳ ಗಾಳಿಗೆ ತೂರಿ

ನನ್ನ ಸರಿ ನಿನಗೆ ತಪ್ಪು
ನಿನ ಸರಿ ಎನಗೆ ಆಪತ್ತು
ಎಂಬೆಲ್ಲಾ ಗೋಳುಗಳ ಮಾಡಿ
ಸವಾರಿ

ಅಂಕೆ ಜಾಲಗಳಲಿ ಬೀಳದೆ
ಅನುಬಂಧಗಳ ನೆಲೆಗೆ ನಿಲ್ಲದೆ
ಶಂಕೆಗೆಡೆ ಮಾಡಡ ಎಡೆಗೆ
ನಾ ಪರಾರಿ

ಎಲ್ಲಿ ಹೋದರೂ ಜಗವೇ
ಎಲ್ಲಿ ಹೋದರೂ ಜನರೇ
ಶೂನ್ಯ ತಾಣವ ಕಂಡು ಹಿಡಿದು
ನಾನಾಗಲೇ  ಕೋಲಂಬಸ್?

ಪ್ರೀತಿಗೆ ಒಮ್ಮೊಮ್ಮೆಒಂದೊಂದು ರೂಪ
ಒಮ್ಮೆ ಕಾಮ , ಒಮ್ಮೆ ನೆಲೆ ಒಮ್ಮೆ ಅಗತ್ಯ
ಒಮ್ಮೆ ಸಂಬಂಧ. ಪ್ರೀತಿಯೇ ಕಾಮರೂಪಿ
ಅದಕೇಕೇ ಇಂತಹ ಹಪಾಹಪಿ

ಪ್ರೀತಿ ಬಿಟ್ಟು ,,ಬಂಧವ ಸುಟ್ಟು
ಹೊರಡಲೇಬೇಕಿದೆ ಋಣಮುಕ್ತಳಾಗುವೆಡೆ
ಯಾರೂ ಇಲ್ಲದೆಡೆ, ಜಗವೆ ಕಾಣದ ಕಡೆ
ಮನದ  ಶಾಂತಿಗೆ