Wednesday, May 6, 2009

ಸ್ನೇಹಕೇಕೆ ಸಂಬಂಧದ ಹಂಗು?

ಗೋಪಿ
ಸ್ಮಿತಾ ನನ್ನೊಳಗಿನ ನಗೂನಾ? ಹಾಗಂತ ನನಗೆ ನಾನೇ ಎಷ್ಟೋ ಸಲ ಕೇಳಿಕೊಂಡಿದ್ದೇನೆ ಅವಳಿಲ್ಲದೇ ಬಾಳೇ ಇಲ್ಲ ಅನ್ನೋ ಹಾಗೇಕೆ ನಾನಾದೆ ಅಂತಾನೂ ತಿಳಿದಿಲ್ಲ ನಂಗೆ ಊಟ, ನಿದ್ದೆ, ಉಸಿರು ಎಲ್ಲಾ ಅವಳ ನೆನಪು ಅನ್ನೋ ಮಟ್ಟಿಗೆ ನನ್ನನ್ನ ಅವಳು ಆವರಿಸಿಕೊಂಡಿದ್ದಾಳೆ . ಆದರೆ ಅವಳ ಮನಸಲ್ಲಿ ಅಂತಾ ಭಾವನೆ ಖಂಡಿತಾ ಇಲ್ಲ ಅಂತ ಗೊತ್ತಿದೆ ಅವಳು ಸ್ನೇಹಕ್ಕೆ ಬೆಲೆ ಕೊಡೋಳು ನನ್ನ ಮನಸಲ್ಲಿ ಈಥರ ಭಾವನೆ ಇದೆ ಅಂದ್ರೆ ನಾಳೆ ನನ್ನನ್ನೇ ದೂರ ಮಾಡಿಬಿಡ್ತಾಳೆ. ಹಾಗೆ ಆಗಬಾರದು ನಂಗೆ ಸ್ನೇಹಾನೆ ಮುಖ್ಯ. ಆದರೂ ಮನಸು ಅವಳ ಹತ್ರಾನೇ ಸೆಳೀತಾ ಇದೆ . ನನ್ನುಸಿರು ಉಸಿರಾಡೋಕು ಅವಳ ನೆರವು ಬೇಕು ಅಂತಾ ಇದೆಯಲ್ಲ .
ಹೌದು ಕಾಲೇಜಲ್ಲಿ ಎಷ್ಟು ಜನ ನೀವಿಬ್ರೂ ಮದುವೆ ಆಗ್ತಾ ಇದೀರಾ ಅಂತ ಕೇಳಿದಾರಲ್ಲ. ಅದಕ್ಕೆ ನಾನೇನಾದರೂ ಹೇಳಿಬಿಡೋಣ ಅಂದುಕೊಂಡಾಗಲೆಲ್ಲಾ ಸ್ಮಿತಾಳ ಮಾತೇ ನೆನಪಿಗೆ ಬರುತ್ತೆ. " " ಗೋಪಿ ಹುಡುಗ ಹುಡುಗೀ ಸ್ನೇಹ ಅಂದ್ರೆ ಮದುವೇಲಿ ಕೊನೆಯಾಗೋದು ಅನ್ನೋ ಮಾತು ನಮ್ಕೇಸ್‌ನಲ್ಲಿ ಸುಳ್ಳಾಗ್ತಿದೆಯಲ್ಲ. " ಹೌದು ನಾನು ಹಾಗೆ ಇರಬೇಕು.
ಓ ಸ್ಮಿತಾ ಫೋನ್ ಆನ್ ಮಾಡಿದೆ
"ಹಾಯ್ ಗೋಪಿ ಕೂಡಲೆ ಬಾರೋ ನಿಂಗೊಂದು ವಿಷಯ ಹೇಳಬೇಕು. "
"ಏನೆ ಅದು?" ಅವಳೂ ನನ್ ಹಾಗೆ ಯೋಚನೆ ಮಾಡ್ತಾ ಇದಾಳಾ? ಅಥವ ಅಮೇರಿಕಾ ಅಮೇರಿಕಾ ಪಿಚ್ಚರ್ ಥರ ಅವಳ ಮದುವೆ ಅಂತ ಹೇಳ್ತಾಳ ಅಥವ ಇನ್ನ್ಯಾವುದೋ ಪಿಚ್ಚರ ಥರ ಲವರ್‌ನ ತೋರಿಸ್ತಾಳ ? ನನ್ನ ಮನದಲ್ಲಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಯಸಿದೆ.
""ಮೊದಲು ಬಾರೋ ಇಲ್ಲಿ " ಅವಳ ಅಪ್ಪ್ಪಣೆ ಮೀರುವುದುಂಟೆ
"ಆಯ್ತು ಕಣೆ . ಇನ್ನೈದು ನಿಮಿಷದಲ್ಲಿ ಬರ್ತೀನಿ" ಕೈಗೆ ಸಿಕ್ಕಿದ ಶರ್ಟ್ ಹಾಕಿಕೊಂಡು ಬೈಕ್ ಸ್ಟಾರ್ಟ್ ಮಾಡಿದೆ. ಬೈಕ್ ಮುಂದೆ ಓಡುತ್ತಿದ್ದರೂ ಅದಕ್ಕಿಂತ ವೇಗವಾಗಿ ನನ್ನ ಮನದ ಆಲೋಚನೆಗಳು ಓಡುತ್ತಿದ್ದವು.
ಸ್ಮಿತ
ಗೋಪಿ ಅಗೋ ಬಂದೇ ಬಿಟ್ಟ. ನಿಜಕ್ಕೂ ಒಳ್ಳೇ ಹ್ಯಾಂಡ್ ಸಮ್ ಹುಡ್ಗ. ತುಂಬಾ ಚೆನ್ನಾಗಿ ಕಾಣ್ತಾನೆ . ಅರೆ ನಂಗೇನಾಗಿದೆ ಯಾಕೆ ಹೀಗೆ ಯೋಚನೆ ಮಾಡ್ತಾ ಇದ್ದೀನಿ. ಯಾಕೆ ಗೆಳೆಯ ಚೆನ್ನಾಗಿದ್ದಾನೆ ಅನ್ನೋದು ತಪ್ಪಾ. ನನ್ನ ಮನಸಿಗೆ ನಾನೆ ಕೇಳ್ಕೊಂಡೆ. ತಪ್ಪಲ್ಲ . ಆದರೆ ಯೋಚನೆ ಮಾಡುತ್ತಿರುವ ಲಹರಿ ಸರಿಯಲ್ಲ ಮನಸು ಚುಚ್ಚಿತು. ನಾನು ಕಳ್ಲೀನ ಮತ್ತೆ ಕೇಳಿಕೊಂಡೆ. ಹೌದು ಮೇಲೆ ಸ್ನೇಹಿತೆಯಂತೆ ನಟನೆ ಒಳಗೆ ಪ್ರಿಯತಮೆಯ ಆಲೋಚನೆ ಸರಿಯಾ?
"ಏ ಸ್ಮಿತಾ ಯಾಕೆ ಹೀಗೆ ನಿಂತುಕೊಂಡಿದ್ದೀಯಾ ಏನ್ ಯೋಚನೆ " ಗೋಪಿ ಹೆಗಲನ್ನು ತಟ್ಟಿದಾಗ ಮತ್ತೆ ಲೋಕಕ್ಕೆ ಬಂದೆ
"ಏನಿಲ್ಲ ಕಣೋ ಗೋಪಿ ಬಾ ಒಳಗೆ "
"ಮೊನ್ನೆ ಮುಂಗಾರು ಮಳೆ ಮಿಸ್ ಮಾಡಿಕೊಂಡೆ ಅಂದ್ಯಲ್ಲ ಆ ಸಿನಿಮಾ ಡಿವಿಡಿ ತಂದಿದೀನಿ ಅದೇ ಸರ್ಪೈಸ್" ಅವನ ಮುಖದಲ್ಲಿ ಏನೋ ನಿರಾಳ ಭಾವನೆ
"ಅಷ್ಟೇನಾ ನಾನೇನೋ ಅಂದುಕೊಂಡೆ" ಗೋಪಿ ಸೋಫಾ ಮೇಲೆ ಕಾಲು ಚಾಚುತಾ ನುಡಿದ
"ಏನೋ ಅಂದುಕೊಂಡೆ" ಅವನ ಉತ್ತರದಲ್ಲಿ ನನ್ನ ಉತ್ತರ ಕಾಣುವ ಕಾತುರವಿತ್ತು
"ನಿನ್ ಲವರ್ ‍ನ ತೋರಿಸ್ತೀಯೇನೋ . ಒಂದ್ಸ್ವಲ್ಪ ಗೋಳು ಹಾಕೊಳೋಣ ಅನ್ಕೊಂಡೆ. ಇಲ್ನೋಡಿದ್ರೆ ಬೋರ್ ಬರೀ ಬೋರ್ "
"ನಾನು ಲವ್ ಮಾಡಿ ಮದುವೆ ಮಾಡಿಕೊಳ್ಳಲ್ಲಪ್ಪ .ಏನಿದ್ರೂ ಅಪ್ಪ ಅಮ್ಮ ಯಾರನ್ನ ಹೇಳ್ತಾರೋ ಅವರನ್ನೇ ಮಾಡ್ಕೊಳ್ಳೋದು." ಮನದೊಳಗಿನ ಮಾತು ಬೇರೇನೋ ಆಗಿತ್ತು.
"ಅಮ್ಮಾತಾಯಿ ನೀನೇನಾದ್ರೂ ಮಾಡಿಕೋ ನಂಗೇನು. ಒಂದ್ಲೋಟ ಜ್ಯೂಸ್ ಏನಾದ್ರೂ ಕೊಡು . ಅಲ್ಲಿಂದ ಇಲ್ಲಿಗೆ ಏನೋ ದೊಡ್ಡ ಸಹಾಯ ಮಾಡೋಹಾಗೆ ಕರೆದುಬಿಟ್ಳು. ನಾನಾಗಲೆ ಮುಂಗಾರು ಮಳೆ ನೋಡಿ ಆಯ್ತು"
"ಯೂ ಈಡಿಯಟ್. ಮತ್ಯಾಕೋ ನಂಗೆ ಹೇಳಲಿಲ್ಲ ನಿಂಗೆ ಜ್ಯೂಸ ಅಲ್ಲಾ ಏನ್ಮಾಡ್ತೀನಿ ನೋಡು"
ಕೈಗೆ ಸಿಕ್ಕಿದ ವಾಟರ್ ಬಾಟಲ್ ಎತ್ತೆಸೆದೆ . ಅವನೂ ಕಡಿಮೆ ಏನಲ್ಲ. ಅವನೂ ನನ್ನ ಮೇಲೆಸೆದ ತಪ್ಪಿಸಿಕೊಳ್ಳಲು ರೂಮಿಗೆ ಓಡಿದೆ.

ಲವರ್ ವಿಷಯ ಬಂದಾಗಲೆ ಹೇಳಿಬಿಡಬೇಕಿತ್ತು. ಆದರೆ ಯಾಕೋ ಅವನ ಮನಸಲ್ಲಿ ನನ್ಬಗ್ಗೆ ಆ ಥರ ಭಾವನೆ ಇಲ್ಲಾ ಅಂತಾನೆ ಅನ್ನಿಸ್ತಿದೆಯಲ್ಲ. ನಿಜಕ್ಕೂ ನನ್ನ ಲವ್ ಮಾಡೋ ಹಾಗಿದ್ರೆ ಅವನೇ ಮೊದಲು ಪ್ರಪೋಸ್ ಮಾಡ್ತಾನೆ. ಅವನೊಂಥರಾ ಬೋಲ್ಡ್ ನಂಗೊತ್ತು. ಅವನಿಗೆ ನನ್ಮೇಲೆ ನನ್ನ ಸ್ನೇಹದ ಮೇಲೆ ಗೌರವ ಇದೆ. ಅದನ್ನ ಕಡಿಮೆ ಮಾಡಿಕೊಳ್ಳೋದಿಲ್ಲ ನಾನು.

ಗೋಪಿ
ಡಿಗ್ರೀ ಮುಗೀತು ಕೆಲಸ ಸಿಕ್ತು . ಇನ್ನು ಮನೇಲಿ ಮದುವೆ ವಿಷಯ್ ಮಾತಾಡ್ತಾ ಇದಾರೆ. ಇದೇ ಒಳ್ಳೇ ಚಾನ್ಸ್ ಹೇಳಿಬಿಡಲಾ
ಹೇಗಿದ್ರೂ ಮನೆಲಿ ಎಲ್ಲಾರು ಸೇರಿದಾರೆ. ಸ್ಮಿತಾ ತಂದೆ ತಾಯಿ ನಮ್ತಂದೆ ತಾಯಿ ಎಲ್ಲಾ ಮಾತಾಡ್ತಾ ಇದಾರೆ. ಆಕಡೆ ಸ್ಮಿತಾ ಕೂತಿದಾಳೆ .
"ಲೋ ಗೋಪಿ ಒಂದ್ವಿಷಯ . ನೆನ್ನೆ ನಾವೆಲ್ಲಾ ಸೇರಿ ಮಾತಾಡ್ಕೊಂಡಿದೀವಿ. ನಿಮ್ಮಿಬ್ಬರ ಮದುವೆ ಮಾಡೋಣ ಅಂತ ಅಂದುಕೊಂಡಿದೀವಿ. ಹೇಗಿದ್ರೂ ಇಬ್ಬರಿಗೂ ತುಂಬಾ ಚೆನ್ನಾಗಿ ಅಂಡರ್ ಸ್ಟಾಂಡಿಂಗ್ ಆಗಿದೆ. ಒಬ್ಬರನೊಬ್ಬರ್ನೂ ಕಂಡ್ರೆ ಪ್ರಾಣ.ಏನ್ಹೇಳ್ತೀಯಾ?" ಅಪ್ಪ ಪ್ರಶ್ನಿಸಿದರು. ಅಪ್ಪ ಹಾಗೇನೆ ಒಂಥರಾ ಓಪನ್ ಟೈಪ್ . ಎಲ್ಲಾನೂ ಎದುರೆದುರೇ ಕೇಳ್ತಾರೆ
ನಾನು ಅಂದುಕೊಳ್ಳುತಿದ್ದ ಘಳಿಗೆ ಬಂದೇ ಬಿಟ್ಟಿತು.
ಮಾತಾಡಲು ತಲೆ ಎತ್ತಿದೆ . ಅತ್ತ ಕಡೆ ಸ್ಮಿತಾ. ಅವಳ ಕಣ್ಣಲ್ಲಿ ಏನು ಕಾಣ್ತಾ ಇದೆ? ಅದೇನು ಆತಂಕಾನ ? . ಸ್ನೇಹಾನ ಪ್ರೀತಿ ಮದುವೆಗೆ ಬದಲಾಯಿಸಿಕೊಳ್ಳೋದಿಕ್ಕೆ ಅವಳಿಗೆ ಇಷ್ಟ ಇಲ್ಲಾ ಅಂತ ನಂಗೆ ಗೊತ್ತು . ನಾನೇನಾದರೂ ಹೂ ಅಂದ್ರೆ ಅವಳ ಕಣ್ಣಲ್ಲಿ ಅಪರಾಧಿ ಆಗಿ ಹೋಗ್ತೀನಿ. ಏನ್ಮಾಡಲಿ? ಇದು ಒಂಥರಾ ಸತ್ವ ಪರೀಕ್ಷೆ ಇದ್ದ ಹಾಗೆ . ಈಗ ನಾನೇನಾದರೂ ಹೂ ಅಂದರೆ ಅವಳು ತುಂಬಾ ಬೇಜಾರು ಮಾಡಿಕೊಳ್ಳಬಹುದು. ಬೇಡ ಅಂದರೆ ನನ್ನ ಮನಸಿಗೆ ಮೋಸಮಾಡಿಕೊಳ್ಳೋ ಹಾಗಲ್ಲ್ವಾ?
ಕೊನೆಗೆ ಗೆಳತಿ ಸ್ಮಿತಾನೆ ಗೆದ್ದಳು.
"ಅಪ್ಪ ನಾನು ಸ್ಮಿತಾನ ನನ್ನ ಫ್ರೆಂಡ್ ಅನ್ನೋ ಭಾವನೇಲಿ ನೋಡಿದೀನಿ. ನಮ್ಮ ಫ್ರೆಂಡ್ ಶಿಪ್ ಫ್ರೆಂಡ್ ಶಿಪ್ ಆಗೇ ಇರಲಿ ದಯವಿಟ್ಟು ಅದನ್ನ ಬೇರೆ ಹೆಸರು ಹಿಡಿದು ಕೂಗಬೇಡಿ"
ಹೃದಯದ ಮಾತುಗಳು ಎತ್ತಲೋ ಹೋಗಿದ್ದವು. ಕೇವಲ ಗೆಳೆತನದ ಮೇಲೆ ನಾನಿಟ್ಟಿದ್ದ ಅಭಿಮಾನವೇ ಮಾತಾಡಿದ್ದು
ಸ್ಮ್ತಿತಾ ಮತ್ತೊಮ್ಮೆ ನನ್ನನ್ನು ನೋಡಿದಳು. ಅವಳ ಕಣ್ಣಲ್ಲಿದ್ದು ಮೆಚ್ಚುಗೆ ಎಂದನಿಸಿತು
"ಅಂಕಲ್ ಗೋಪಿ ಹೇಳಿದ್ದು ನಿಜ ನಂಗೆ ಗೋಪಿ ಗೆಳೆಯನ ಹೊರತಾಗಿ ಬೇರೆ ಯಾವ ಭಾವದಲ್ಲೂ ಕಾಡಿದ್ದಿಲ್ಲ" ಅವಳೂ ನುಡಿದಳು

ಮೂರು ವರ್ಷಗಳ ನಂತರ

ಸ್ಮಿತಾ
ಇವತ್ತು ಗೋಪಿಯ ಹಾಗು ನನ್ನ ಇಬ್ಬರ ಮದುವೆಯ ವಾರ್ಷಿಕೋತ್ಸವ ಒಂದೇ ದಿನ.
ಚಂದು ಜೊತೆಯಲ್ಲಿ ನಾನು ಅನು ಜೊತೆಯಲ್ಲಿ ಗೋಪಿ
ಚಂದುವನ್ನು ಗೋಪಿ ನನಗಾಗಿ ಹುಡುಕಿದ, ಚಂದು ಒಳ್ಳೆಯವನು . ನನ್ನನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾನೆ. ಬಹುಷ ಗೋಪಿಯನ್ನು ಮದುವೆಯಾಗಿದ್ದರೆ ಇಷ್ಟೊಂದು ಸಂತೋಷವಾಗಿರಲು ಸಾಧ್ಯ ಇರ್ತಿರಲಿಲ್ಲ.
ಹಾಗೆ ಅನು ನನ್ನ ಜೀವದ ಗೆಳತಿ ಅವಳನ್ನು ಗೋಪಿಗೆ ಸೂಚಿಸಿದ್ದು ನಾನೆ. ಅವರಿಬ್ಬರದೂ ಆದರ್ಶ ದಾಂಪತ್ಯ.
ಒಮ್ಮೊಮ್ಮೆ ಅನಿಸುತ್ತದೆ ನಾನು ಗೋಪಿಯನ್ನು ಪ್ರೀತಿಸುತ್ತಿದ್ದೆ ಎಂಬುದು ಕೇವಲ ಭ್ರಮೆಯಾಗಿತ್ತೇ . ಅದು ಮನದಾಸೆ ಆಗಿರಲಿಲ್ಲ ಎಂದೂ ಅನಿಸುತ್ತದೆ. ನನ್ನದೂ ಅಂತಹ ಪ್ರೀತಿಯಾಗಿದ್ದರೆ ಗೋಪಿಗೆ ನನ್ನ ಕಣ್ಣಲ್ಲಿ ಪ್ರೀತಿ ಕಾಣುತ್ತಿತ್ತು. ಗೋಪಿ ನನ್ನನ್ನ ಗೆಳತಿ ಎಂದೇ ಕಂಡಿದ್ದ ಹಾಗಾಗಿ ಅವನಿಗೆ ಅದು ಕಾಣಲಿಲ್ಲ . ಗೋಪಿ ಈಗಲೂ ಮೆಚ್ಚಿನ ನೆಚ್ಚಿನ ಗೆಳೆಯನೇ ಆಗಿದ್ದಾನೆ. ಪ್ರೀತಿ ಎಂಬುದು ಅಡ್ಡ ಬಂದಿದ್ದರೆ ಈ ಸ್ನೇಹ ಉಳಿತಾ ಇರಲಿಲ್ಲ.
ಅದೋ ಅಲ್ಲಿ ಗೋಪಿ ನಗ್ತಾ ಇದಾನೆ ಯಾವ್ದುದೋ ಮಾತಿಗೆ ಚಂದೂ ಕೂಡ ಸಂತೋಷವಾಗಿದಾನೆ.
ನಾನು ಅವರಲ್ಲಿ ಒಬ್ಬಳಾಗಿ ಹೋಗ್ತಿದ್ದೇನೆ.
ಗೋಪಿ
ಸ್ಮಿತಾ ನನ್ನ ಉಸಿರು ನಿಜ ಆದರೆ ಅದು ಕೇವಲ ಸಂಬಂಧದಿಂದ ಮಾತ್ರಾ ಹೆಸರಿಸುವಂತಹದಲ್ಲ ಎಂದು ನನಗನಿಸ್ತಾ ಇದೆ. ಮೆಚ್ಚಿನ ಮಡದಿ ಅನು . ಮುದ್ದಿನ ಮಗು ನಿಶಾ ಆತ್ಮೀಯ ಗೆಳೆಯ ಬಾಲು ಮತ್ತವನ ಮಡದಿ ಹಾಗು ನನ್ನ ನೆಚ್ಚಿನ ಗೆಳತಿ ಸ್ಮಿತಾ ನನ್ನ ಬದುಕನ್ನು ಸ್ವರ್ಗ ಮಾಡಿದ್ದಾರೆ. ಅಕಸ್ಮಾತ್ ನಾನು ಸ್ಮಿತಾಳನ್ನು ಮದುವೆಯಾಗಿದ್ದರೆ ಇಂತಾ ಆನಂದ ಸಿಗ್ತಾ ಇತ್ತೋ ಇಲ್ಲವೋ ಎಂಬ ಅನುಮಾನಾನೂ ಕಾಡುತ್ತದೆ
ಸಾಕು ಈ ಬಾಳು ಹೀಗೆ ಇರಲಿ.
ಸ್ಮಿತಾಳ ನಗುವಲ್ಲಿ ,ಅನುವಿನ ಪ್ರೀತಿಯಲ್ಲಿ ನನ್ನನ್ನು ತೊಡಗಿಸಿಕೊಂಡೆ