Thursday, June 25, 2009

ಮೊದಲ ಪ್ರೇಮಿಗೆ

ನನ್ನ ಮೊದಲ ಪ್ರೇಮಿಗೆ

ಆ ಅಂಗಡಿಗೆ ನಾನು ಬರುವುದಕ್ಕೂ ನೀನು ನನ್ನ ನೋಡುವುದಕ್ಕೂ ಸರಿ ಹೋಯಿತುನಾನು ನಿನ್ನನ್ನು ಗುರುತಿಸಿದೆ . ಆದರೆ ನೀನು ಇಲ್ಲ ಬಿಡು ನೀನೀಗ ನನ್ನನ್ನ ಗುರುತಿಸಲಾಗದಂತಹ ಪರಿಸ್ಥಿತಿಯಲ್ಲಿ ನಾನಿದ್ದೇನೆ .
ಯಾಕೊ ಒಮ್ಮೆ ಎಲ್ಲ ನೆನಪಾಗಿದೆ. ಹಾಗಾಗಿ ಈ ಪತ್ರ ಬರೆಯುತಿದ್ದೇನೆ
ಅವತ್ತು ನಾನಿನ್ನೂ ಆಗ ತಾನೆ ಅರಳಿದ ಹೂವಿನಂತೆ ಇದ್ದೆ. ಅಂದು ಆ ಅಂಗಡಿಯಲ್ಲಿ ನೀನು ನನ್ನನ್ನು ನಿನ್ನ ಹಸ್ತದಿಂದ ಬಂಧಿಸಿ ಮುತ್ತಿಟ್ಟು " ಇನ್ನು ಮೇಲೆ ನೀನೆ ನನ್ನ ಜೀವ ನನಗಿದು ಮೊದಲ ಅನುಭವ "ಎಂದುಸಿರಿದ್ದೆ. ನಾನು ಆಕಾಶವೇ ಕೈಗೆಟುಕಿದಷ್ಟು ಹಗುರಾಗಿದ್ದೆ.
ಅಬ್ಬ ಅಲ್ಲಿಂದ ಶುರುವಾಯಿತು ನಮ್ಮಿಬ್ಬರ ಪ್ರೀತಿ . ನೀನೆಲ್ಲೋ ನಾನಲ್ಲೆ. ನಾನಿಲ್ಲದೇ ನೀನಿಲ್ಲ ಎಂಬಂತೆ ಇದ್ದೆವಲ್ಲ. ದಿನವಿಡೀ ನೀ ನನ್ನ ನಾ ನಿನ್ನ ನೋಡುತ್ತ ಕಾಲ ಕಳೆಯುತ್ತಿದ್ದೆವಲ್ಲ. ನಾನಂತು ನಿನ್ನ ಎದೆಯ ಮೇಲೆ ಮಲಗಿರುತ್ತಿದ್ದೆ.
ನನ್ನನ್ನು ವಿಧವಿದ್ಜ ವಾಗಿ ಹಾಡಲು ಹೇಳುತಿದ್ದೆ . ವಿಧ ವಿಧ ಬಟ್ಟೆ ಗಳನ್ನು ಹಾಕುತ್ತಿದ್ದೆ . ಖುಶಿ ಪಡುತ್ತಿದ್ದೆ
ನಮ್ಮಿಬ್ಬರ ಪ್ರೀತಿ ಬ್ರಹ್ಮನಿಗೆ ಹಿಡಿಸಲಿಲ್ಲವೇನೊ ಅದೇನೊ ನನ್ನನ್ನು ಬಳಸಿ ನಿನಗೆ ಬೇಸರ ವಾಯಿತೇನೊ. ಬೇರೆ ಮಾಯಾಂಗನೆಯರು ನಿನ್ನನು ಸೆಳೆಯತೊಡಗಿದರು. ಹಾಗಾಗಿ ನಿನ್ನ ಗಮನ ಅಲ್ಲಿ ಹರಿಯತೊಡಗಿತು .
ಕೊನೆಗೆ ನಿನ್ನ ಪ್ರೀತಿಯನ್ನು ನೀನೆ ಮಾರಿಕೊಂಡೆ.
ನೀನೇನೊ ನನ್ನನ್ನು ಇತರರಿಗೆ ಬಿಟ್ಟು ಹಾಯಾಗಿದ್ದೆ. ಆದರೆ ನಾನು ಎಲ್ಲರಿಂದಲೂ ಮುಟ್ಟಿಸಿಕೊಂಡು. ಮುದ್ದಿಸಿಕೊಂಡೂ ಅವರಿಗೆ ಬೇಸರವಾದರೆ ಇನ್ನೊಬ್ಬರ ಹತ್ತಿರ ಹೋಗಿ ಕಾಲ ಕಳೆಯುತ್ತಿದ್ದೆ. ಇತ್ತೀಚಿಗೆ ಒಬ್ಬ ಬೀದಿ ಬದಿಯ ಹುಡುಗನಿಗೂ ನಾನು ಬೇಡವಾಗಿ ಇಲ್ಲಿ ಬಂದಿದ್ದೇನೆ ನಿಮ್ಮ ಮನೆಯ ಮುಂದೆ ಇರುವ ಗುಜರಿ ಅಂಗಡಿಗೆ

ಆದರೆ ಒಮ್ಮೆ ಬಂದು ನನ್ನನ್ನು ನೋಡು


ನಿನ್ನ ಮೊದಲ ಮೊಬೈl

Nokia 10101

Sunday, June 7, 2009

ಕಳಂಕಿತೆ- ಭಾಗ ೧

ಮನೆಯಲ್ಲಿ ಮೌನ ಹೆಪ್ಪುಗಟ್ತಿತ್ತು . ಸುಧಾಕರ ಇನ್ನೂ ಯೋಚನೆಗಳಿಂದ ಹೊರ ಬಂದಿರಲಿಲ್ಲ. ಬೆಳಗ್ಗೆವರೆಗೂ ಅವಳು ಕೇವಲ ಅವನವಳಾಗಿದ್ದವಳು ಈಗ ಮಲಿನವಾಗಿದ್ದಳು.


ತಲೆಯಲ್ಲಿ ಸಾವಿರಾರು ವಾಹನಗಳು ಒಮ್ಮೆಲೆ ಓಡಾಡಿದಂತೆ ಗೊಂದಲ ಗೋಜಲಾಗಿತ್ತು. ಒಳಗೆ ಅವಳು ಬಿಕ್ಕಳಿಸಿ ಬಿಕ್ಕಳಿಸಿ ಅಳುತ್ತಿದ್ದ ಸದ್ದು ಕೇಳುತ್ತಿತ್ತು.


ಏನು ಮಾಡುವುದು ಈಗ ? ನಾಯಿ ಮುಟ್ಟಿದ ಮಡಿಕೆಯಾದಳೇ ಪ್ರೀತಿ.


ಛೆ ಇದೇನು ಅವಳ ಬಗ್ಗೆ ಇಂತಹ ವಿಚಾರ ಸಲ್ಲದು . ತಲೆ ಕೊಡವಿದ . ನೆನ್ನೆವರೆಗೂ ತನ್ನದೆಲ್ಲಾವನ್ನೂ ಕೊಟ್ಟ ಸುಖದಲ್ಲಿ ತೇಲಿಸಿದವಳು ಅವಳದಲ್ಲದ ತಪ್ಪಿಗೆ ಶಿಕ್ಷೆ ಪಡೆಯಬೇಕೆ?


ಅವಳು ಮಾಡಿದ ತಪ್ಪಾದರೂ ಏನು?


ಅವಳು ಅವೇಳೆಯಲ್ಲಿ ಬಂದಿದ್ದೇ ತಪ್ಪಾಯ್ತೇ?


ಸುಂದರವಾಗಿದ್ದಾಳೆ ಎಂಬುದೇ ತಪ್ಪೇ


ಅಥವ ಹೆಣ್ಣಾಗಿ ಹುಟ್ಟಿದ್ದೇ ತಪ್ಪೇ?


ಅವಳ ಮೇಲೆ ಕನಿಕರ ಹುಟ್ಟುತ್ತ್ತಿತ್ತಾದರೂ ಮತ್ತೆ ಅವಳನ್ನು ಹೆಂಡತಿಯಾಗಿ ಕಾಣುವ ಕಲ್ಪನೆಯೆ ದೂರವಾಗುತ್ತಿದೆ. ಯಾರೋ ಮುಟ್ಟಿ ಸುಖಿಸಿದವಳ ಜೊತೆ ಮತ್ತೆ ದಾಂಪತ್ಯ ? ಅದು ಹೇಗೆ. ಆಗುತ್ತ್ತಾ ?. ಆಗೋಲ್ಲ. ಇಡೀ ಬೀದಿಗೆಲ್ಲಾ ಸುದ್ದಿ ತಿಳಿದಿದೆ . ಸಾಲದ್ದಕ್ಕೆ ಪೋಲಿಸಿನವರು ಬಂದು ವಿಚಾರಿಸಿದ್ದಾರೆ. ಮರ್ಯಾದೆ ಮೂರುಕಾಸಿಗೆ ಹೋಗಿದೆ.


ಏನು ಮಾಡಲಿ ಡೈವೋರ್ಸ್ ಕೊಡಲೇ? ಅಥವ ತವರಲ್ಲಿ ಬಿಟ್ಟು ಬಂದು ಬಿಡಲೇ? ಅಮ್ಮನಿಗೆ ಹೇಳಿ ಮುಂದುವರೆಯುವುದೇ. ಅವಳು ಒಪ್ಪುತ್ತಾಳೇಯೇ. ಇಲ್ಲವೇ?


ಅತ್ತಿತ್ತ ಶತಪಥ ಹಾಕುತ್ತಿದ್ದ.


"ಸುಧಾಕರ್. ಪ್ರೀತೀನ ಸಮಾಧಾನ ಮಾಡೋ ಹೋಗಿ . ತುಂಬಾ ಅಳ್ತಿದಾಳೆ ಒಬ್ಬಳೇ ಇದ್ದರೆ ಏನಾದರೂ ಮಾಡಿಕೋತಾಳೆ" ರಮಾ ಪ್ರೀತಿಯ ರೂಮಿನಿಂದ ಹೊರಗೆ ಬಂದು ಪಿಸು ದನಿಯಲ್ಲಿ ನುಡಿದರು.ಸೊಸೆಗಾಗಿರುವ ಸ್ಥಿತಿ ಅವರಿಗೂ ಗಾಭರಿ ತಂದಿತ್ತು.


ಸುಧಾಕರ್ ಏನೂ ಮಾತಾಡಲಿಲ್ಲ. ಹೆಜ್ಜೆಯನ್ನು ಹಿಂದಿಟ್ಟ


"ಯಾಕೋ ಹೋಗೋ ಒಳಗೆ" ಅಚ್ಚರಿಯಿಂದ ಕೇಳಿದರು


"ಇಲ್ಲಾಮ ಇದು ಇನ್ನು ಮುಂದುವರೆಯೋದಿಲ್ಲ ಅಂತನ್ನಿಸುತ್ತೆ"


"ಶ್ ಹೊರಗಡೆ ಬಾ . " ಹೊರಗಡೆ ಕರೆದೊಯ್ಚರು


"ಯಾವುದು? ಹೇಳು"


"ಅಮ್ಮ ಅವಳ ಜೊತೆ ಬಾಳಕ್ಕೆ ಆಗಲ್ಲಾಮ." ಅಳುಕುತ್ತಾ ನುಡಿದ


"ಏನೋ ಆಯ್ತು ನಿಂಗೆ"


"ಆಗಿದ್ದು ನಂಗಲ್ಲ ಅಮ್ಮ ಅವಳಿಗೆ. ಅವಳು ಈಗ ಈಗ ಕಳಂಕಿತೆ "


"ಏನೋ ಅದು ಕಳಂಕಿತೆ? ಅದು ಹೇಗೆ ಆಗ್ತಾಳೆ ಅವಳು. ತಪ್ಪ ಅವಳದಾ. ಅವಳಿಗೇನೋ ಗೊತ್ತಿತ್ತು . ಟ್ಯೂಶನ್ ಮುಗಿಸಿ ಬರೋ ದಾರೀಲಿ ಆ ಖದೀಮರು ಸಂಚು ಹಾಕಿ ಕಾದಿದ್ದರು ಅಂತ? ನೀನೆ ಹೀಗೆ ಹೇಳಿದ್ರೆ ಅವಳೇನ್ ಮಾಡ್ಕೋತಾಳೇ"


"ಅಮ್ಮ ತಪ್ಪ್ಯಾರದ್ದಾದರೂ ಆಗಲಿ . ಅವಳು ಈಗ ನಾಯಿ ಮುಟ್ಟಿದ ಮಡಿಕೆ .ನಾಯಿ ಮಡಕೆ ಮುಟ್ಟಿದ್ರೂ , ಮಡಕೇನ ನಾಯಿ ಮುಟ್ಟಿದ್ರೂ ಮಡಿಕೆಯನ್ನು ಹೊರಗಡೆ ಎಸೆಯೋದೆ ಒಳ್ಳೇಯದು. "


"ನಾಯಿ ಮುಟ್ಟಿದ ಮಡಿಕೆ" ರಮಾರ ಕಿವಿಯಲ್ಲಿ ಮತ್ತೆ ಪ್ರತಿಧ್ವನಿಸಿತು . ಮುವತ್ತು ವರ್ಷದ ಹಿಂದೆಯೂ ಇದೇ ಮಾತುಗಳು ಕೇಳಿಬಂದಿದ್ದವು. ನೆನಪುಗಳ ಗೂಡಲ್ಲಿ ಸೇರಿ ಹೋಗುವ ಸಮಯವಲ್ಲ ಇದು ಎಂದು ಮನಸು ಎಚ್ಚರಿಸಿತು.


"ಅದೇ ನಾಯಿ ನಿನ್ನ ಒಂದು ವಜ್ರಾನ ಇಲ್ಲ ಅಮೂಲ್ಯವಾದುದೇನಾದರೂ ಮುಟ್ತಿದ್ರೆ ಎಸೀತಿದ್ಯಾ, ಸುಧಾ ನಿನ್ನ ಹೆಂಡತಿ ಒಂದು ಮಡಿಕೆಗೆ ಸಮಾನವೇನೋ? ಒಂದು ಮಡಿಕೆಯ ಜೊತೆ ಸಂಸಾರ ಮಾಡಿದ್ಯಾ ನೀನು ಇಲ್ಲಿಯವರೆಗೂ ?. " ತೀಕ್ಷ್ಣವಾಗಿ ಬಂದ ಪ್ರಶ್ನೆಯ ಬಾಣಕ್ಕೆ ಉತ್ತರಿಸಲಾಗದೆ ನೆಲ ನೋಡಿದ





"ಅಮ್ಮ ಅದು ಅದು ಗಾದೆ. " ತಡವರಿಸಿದ


"ಗಾದೆ ಗಾದೆ ಸುಳ್ಲಾದರು ವೇದ ಸುಳ್ಲ್ಳಾಗಲ್ಲ ಅನ್ನೋ ಮಾತು ಇರ್ಬೋದು ಆದರೆ ಎಲ್ಲಾ ಸಮಯಕ್ಕೂ ಅವು ಅನ್ವಯ ಆಗೋದಿಲ್ಲ. ಅಕಸ್ಮಾತ್ ನಮ್ಮನೇಲಿ ಒಂದು ಕಾಗೆನೋ ಅಥವ ಗೂಬೇನೋ ಹೊಕ್ಕಿ ಬಿಡುತ್ತೆ. ಅವಾಗ ಮನೆನೆ ಬಿಟ್ಟು ಬಿಡ್ತೀಯಾ ನೀನು? "


"ಅಮ್ಮ ಅದು "


"ಮೊದಲು ನನ್ನ ಪ್ರಶ್ನೆಗೆ ಉತ್ತರ ಕೊಡು"


"ಇಲ್ಲ . "


"ಒಂದು ನಿರ್ಜೀವ ವಸ್ತುಗೆ ಕಳಂಕ ಹತ್ತಲ್ಲ ಅಂದರೆ ಜೀವ ಇರೋ ನಿನ್ನ ಮೇಲೆ ಪ್ರಾಣಾನೆ ಇಟ್ಟ್ಘಿರೋ ಆ ನಿನ್ನ ಅರ್ಧಾಂಗಿಗೆ ಹೇಗೋ ಕಳಂಕ ಹತ್ತುತ್ತೆ?"


"ಅಮ್ಮ ಅದು ಅದು.. ನಿನಗೆ ಗೊತ್ತಾಗಲ್ಲಾಮ್ಮ . ಅದು ಗಂಡಂಗೆ ತನ್ನ ಹೆಂಡತೀನ ಮತ್ತೊಬ್ಬರು ಮುಟ್ಟಿದ್ದ್ದಾರೆ ಅಂದಾಗ ತುಂಬಾ ಅಕ್ರೋಶ ಬರುತ್ತೆ" ಮತ್ತೆ ಬಾಯಿಬಿಟ್ಟ


ಇನ್ನೂ ಈತ ದಾರಿಗೆ ಬರೋದಿಲ್ಲವೆಂದೆನಿಸಿತು.


ಇಂದಿನ ತನಕ ಕಾಲದಡಿಯಲ್ಲಿ ದಣಿದು ಮತ್ತೆ ಬರುವುದಿಲ್ಲ ಎಂದು ಸೋತು ಹೋಗಿದ್ದ ಆ ಕಹಿ ಸತ್ಯ ಇಂದು ಹೆಣ್ಣೊಬ್ಬಳ ಜೀವನದ ಸುಗಮಕ್ಕೆ ಬೇಕಾಗಿತ್ತು. ಆ ರಹಸ್ಯ ರಹಸ್ಯವಾಗಿಯೆ ಇರಬೇಕೆಂದು ಭಾಷೆ ತೆಗೆದುಕೊಂಡಿದ್ದ ರಾಯರು ಇಂದು ಇಲ್ಲ. ಆದರೆ ಬಾಳ ದಾರಿಯಲ್ಲಿ ಮುಳ್ಳುಗಳ ಹಾದಿಯಲ್ಲಿ ನಡೆಯಬೇಕಿದ್ದ ಹೂವೊಂದನ್ನು ತಮ್ಮ ಎದೆಯ ಎಂದೆಂದಿಗೂ ಬಾಡದ ಹೂವಾಗಿ ಪರಿವರ್ತಿಸಿದ್ದ ರಾಯರು ಇಂದು ತಮ್ಮದೇ ಕುಟುಂಬದ ಹೂವು ಬಾಡದಿರಲು ಭಾಷೆಯನ್ನು ಮುರಿದರೆ ಬೇಸರಿಸಿಕೊಳ್ಳುವುದಿಲ್ಲ ಎಂದು ರಮಾಗೆ ಗೊತ್ತಿತ್ತು. ಮಗನ ದೃಷ್ಟಿಯಲ್ಲಿ ತನ್ನ ಸ್ಥಾನ ಏನಾಗಬಹುದು ಎಂಬುದನ್ನೂ ಯೋಚಿಸಲಿಲ್ಲ. ಅದಕ್ಕೆ ಸಿದ್ದರಾಗಿದ್ದರು


"ಸುಧಾಕರ್ . ನನ್ನ ಜೊತೆ ಬಾ . " ಸುಧಾಕರ್ ಅವರನ್ನು ಹಿಂಬಾಲಿಸಿದ


ತಂದೆಯ ಫೋಟೋ ಬಳಿ ನಿಂತ ಅಮ್ಮನನ್ನ ನೋಡಿ ಹುಬ್ಬೇರಿಸಿದ .

ನೆನಪುಗಳ ಜಾತ್ರೆ ಮೆರವಣಿಗೆ ಹೊರಡಲಾರಂಭಿಸಿತು.
(ಮುಂದುವರೆಯುವುದು)

Wednesday, June 3, 2009

ಪ್ರೇಮವೊಂದು ಹುಚ್ಚು ಹೊಳೆ- ಕೊನೆಯ ಕಂತು

ಮರು ದಿನ ರಾಜೀವನ ಕರೆ ಬಂತು . ರಾಜೀವನ ಮನೆಗೆ ಹೋದ.
ರಾಜೀವ ಆಗಲೇ ಪ್ಲಾನ್ ಮಾಡಿದ್ದ . ಅವನ ಪ್ಲಾನ್ ಕೇಳುತ್ತಿದ್ದಂತೆ ಹರೀಶ್ ದಂಗಾಗಿ ಹೋದ .
. ಆವನ ಪ್ಲಾನ್ ಪ್ರಕಾರ ಮೇ ಹದಿನಾಲ್ಕು ಸ್ಮಿತಾ ಹಾಗು ಅಮರ್ ತಮಿಳುನಾಡಿನ ಏಲಗಿರಿ ಹಿಲ್ಸ್‌ನಲ್ಲಿ ಯಾವುದೋ ಪಾರ್ಟಿ ಅಟೆಂಡ್ ಮಾಡಲು ಹೋಗುತ್ತಿದ್ದಾರೆ . ಆಗ ಅಮರ್ ಪಾಲನನ್ನು ಕಣಿವೆಯಿಂದ ಕೆಳಗೆ ನೂಕಿಬಿಡುವುದು.ನಂತರ ಕಾರ್ ಅಪಘಾತವಾದಂತೆ ನಟಿಸುವುದು .
ಅಬ್ಬಾ ಈ ಪೆಕರನಿಗೆ ಇಂತಹ ತಲೆ ಇದೆಯೇ? ಯಾಕೋ ಮನಸ್ಸು ಹಿಂಜರಿಯಿತು ಆದರೆ ಮತ್ತೆ ಸ್ಮಿತಾಳ ನೆನಪಾಯ್ತು. ಅವಳಿಗಾಗಿ ಯಾವ ರಿಸ್ಕ್ ತೆಗೆದುಕೊಳ್ಳೋದಕ್ಕೂ ಅವನು ಸಿದ್ದನಾಗಿದ್ದ.
ಎಂದೋ ಬೇಕಾಗುತ್ತದೆ ಎಂದು ಕಲಿತಿದ್ದ ಕಾರ್ ಡ್ರೈವಿಂಗ್ ಈಗ ಉಪಯೋಗವಾಯ್ತು ಸ್ಮಿತಾಳ ಹೊಸ ಕಾರ್‌ಗೆ ಅವನೇ ಡ್ರೈವರ್ . ಪ್ಲಾನ್ ಸ್ಮಿತಾಗೂ ಗೊತ್ತಿತ್ತು.
ಎಲ್ಲವೂ ಪ್ಲಾನ್ ಪ್ರಕಾರವೇ ನಡೆಯುತ್ತಿತ್ತು
ಅಮರ್ ಪಾಲ್ ಸ್ವಲ್ಪ ಸ್ವಲ್ಪ ಕನ್ನಡ ಕಲಿತಿದ್ದ ಆಗೀಗ ಇವನ ಬಳಿ ಪ್ರೀತಿಯಿಂದ ಮಾತಾಡುತ್ತಿದ್ದ . ಅವನ ವಿಶ್ವಾಸ ಗಳಿಸಿಕೊಂಡಿದ್ದ. .ಅದು ಅವರ ಪ್ಲಾನ್‌ನ ಒಂದು ಅಂಗವೇ ಆಗಿತ್ತು ಮಧ್ಯ ಮಧ್ಯ ದಲ್ಲಿ ಸ್ಮಿತಾಳ ಪ್ರೀತಿ ಪೂರ್ವಕ ಮಾತುಗಳು. ರಾಜೀವ ಹುರಿದುಂಬಿಸುವಿಕೆ. ಜೊತೆಯಲ್ಲೇ ಅಮ್ಮ್ಮ ಹಾಗು ತಂಗಿಗೆ ಹಣದ ಹೊಳೆ ಹರಿಯುತ್ತಿದ್ದುದರಿಂದ ಹರೀಶ್‌ನ ಪೂರ್ತಿ ಗಮನ ಗುರಿಯ ಮೇಲಿತ್ತು.
ಅವನು ಮೇ ಹದಿನಾಲ್ಕನೇ ತಾರೀಖಿಗಾಗಿ ಕಾಯುತ್ತಿದ್ದ.
ಅಂದಿನ ದಿನವೇ ಅಮರ್ ಪಾಲ್‍ನ ಅಂತ್ಯ ಹಾಗು ತಮ್ಮಿಬ್ಬರ ಹೊಸ ಜೀವನದ ಆರಂಭವಾಗಬೇಕಿತ್ತು.
ಸ್ಮಿತಾ ಮತ್ತು ರಾಜೀವರ ಮನಸಲ್ಲೂ ಆತಂಕ . ತಮ್ಮ ಪ್ಲಾನ್ ಪ್ರಕಾರವೇ ನಡೆದರೆ ಸಾಕು ಎಂದು ಇಬ್ಬರೂ ಬೇಡಿಕೊಳ್ಳುತ್ತಿದ್ದರು .
ಕೊನೆಗೂ ಮೇ ಹದಿನಾಲ್ಕು ಬಂತು ಬೆಳಗ್ಗೆ ಎಲ್ಲಾ ಕೆಲಸಗಳನ್ನು ಮುಗಿಸಿ ಸಾಯಂಕಾಲದ ಹೊತ್ತಿಗೆ ಮೂರುಜನ ಹೊರಟರು. ರಾಜೀವ ಮತ್ತೊಂದು ಕಾರ್‌ನಲ್ಲಿ ಹಿಂಬಾಲಿಸುವುದಾಗಿ ಹೇಳಿದ.
ಹೊಸೂರು ದಾಟುವಷ್ಟರಲ್ಲಿ ಕತ್ತಲೆಯಾಗಿತ್ತು. ಅಲ್ಲಿಂದ ಕಾವೇರಿ ಪಟ್ಟಣಮ್ ದಾಟ ಕ್ರಿಷ್ಣ ಗಿರಿಯ ಕಡೆಯಿಂದ ಏಲಗಿರಿ ಹಿಲ್ಸ್ ಕಡೆ ತಿರುಗಿಸಿದ .ಹರೀಶ್ ಅದು ಕಡಿದಾದ ಬೆಟ್ಟ . ಹಗಲಲ್ಲೆ ಜನ ಸಂಚಾರ ಕಡಿಮೆ ಕೇವಲ ವಾಹನಗಳಷ್ಟೆ ಬಂದು ಹೋಗುತ್ತಿದ್ದವು. ಅದೂ ರಾತ್ರಿಯಾದ್ದರಿಂದ ಅವುಗಳೂ ಇರಲಿಲ್ಲ. ಕೊಂಚ ಎಚ್ಚರ ತಪ್ಪಿದರೂ ಮರಣ ಖಂಡಿತಾ.
ಎಷ್ಟೋ ತಿರುವುಗಳು .
ಹಿಂದೆ ನಸು ಕತ್ತಲಲ್ಲಿ ಅಮರ್ ಪಾಲ್ ಮತ್ತು ಸ್ಮಿತಾರ ಆಟ ಸಾಗುತ್ತಿತ್ತು.
ಒಮ್ಮೆ ಕನ್ನಡಿಯಲ್ಲಿ ಸ್ಮಿತಾಳ ಮುಖ ನೋಡಿದ . ಅದು ಅವರ ಪ್ಲಾನ್ ಪ್ರಕಾರವೇ ಆಗಿತ್ತು
ಸ್ಮಿತಾ ಅಮರ್ ಪಾಲ್ ಕಿವಿಯಲ್ಲಿ ಹರೀಶನ ಕಡೆ ಕೈ ತೋರುತ್ತಾ ಏನೋ ಹೇಳಿದಳು. ಅಮರ್ ಪಾಲ್‌ನ್ ಮುಖ ಕೋಪದಿಂದ ಕಪ್ಪ್ಪಾಯಿತು. "ಸುವ್ವರ್ ಕಾರ್ ಸ್ಟಾಪ್ ಕರ್ " ಗುಡುಗಿನ ಧ್ವನಿಯಲ್ಲಿ ನುಡಿದ.
ಕಾರನ್ನು ಕೂಡಲೆ ನಿಲ್ಲಿಸಿ ಸ್ಮಿತಾ ಮುಖ ನೋಡಿದ ಹರೀಶ. ಅವಳು ಕಿರು ನಗೆ ನಕ್ಕು ಮತ್ತೆ ಆತಂಕದಿಂದ ಎಂಬಂತೆ ಅಮರ್ ಪಾಲನೆಡೆ ನೋಡಿದಳು.
ಅಮರ್ ಪಾಲ್ ಕೆಳಗಿಳಿದು ಹರೀಶ್‌ನ ಕುತ್ತಿಗೆಪಟ್ಟಿ ಹಿಡಿದು ಕಾರಿನಿಂದೆಳೆದ
"ಕ್ಯೂರೆ ತುಮ್ ಕೋ ಕೋಯಿ ಔರ್ ನೈ ಮಿಲಾ ಕ್ಯಾ . ಸ್ಮಿತಾ ಮೇರಿ ಹೈಅಗರ್ ತುಮ್ ಉಸ್ಕೆ ತರಫ್ ಮುಡ್ಕೆ ಭೀ ದೇಖೆ ತೋ ತುಮ್ ಜಿಂದಾ ನೈ ಬಚೋಗೆ. ಮರ್ ಜಾವೋಗೆ ತುಮ್"
ಹಿಂದಿಯಲ್ಲಿ ಬೈಯ್ಯುತ್ತಾ ಕೆನ್ನೆಗೆರೆಡು ಬಿಗಿಯುತ್ತಿದ್ದಂತೆ ಹರೀಶ್ ಆ ಮುದಿಯನನ್ನು ಒಂದೇ ಏಟಿಗೆ ಕೆಳಗೆ ನೂಕಿದ.
ಅಮರ್ ಪಾಲ್ ಬಿದ್ದವನೇ ಬೈಯ್ಯುತಾ ತನ್ನ ಬೆಲ್ಟಿನ ಸಂದಿಯಲ್ಲಿದ್ದ ಗನ್ ತೆಗೆದು ಹರೀಶ್‍ನನ್ನು ಹೆದರಿಸಿದ.
ಇದು ಹರೀಶ್‌ನಿಗೆ ಗೊತ್ತಿದ್ದ ನಡೆಯೇ. ಹೇಗಿದ್ದರೂ ಗನ್‌ನಲ್ಲಿ ಇದ್ದ ಬುಲೆಟ್‌ಗಳನ್ನೆಲ್ಲಾ ತೆಗೆದುಬಿಡುತ್ತೇನೆಂದು ಸ್ಮಿತಾ ಹೇಳಿದ್ದಳು. ಆದ್ದರಿಂದ ಧೈರ್ಯವಾಗಿ ಅವನ ಮೇಲ್ ಹಾರಿ ಗನ್ ಕಿತ್ತುಕೊಂಡ ಅವನೆಡೆ ಗುರಿ ಇಟ್ಟ.
ಅದು ಅವನನ್ನು ಹೆದರಿಸುವುದಕ್ಕಾಗಿ ಅಮರ್ ಪಾಲ್‌ಗೆ ಇದು ಊಹಿಸದಂತಹ ಘಟನೆ.
ಆತ ಕಕ್ಕಾಬಿಕ್ಕಿಯಾದ. ಸ್ಮಿತಾಳ ಕಡೆಗೆ ಸಹಾಯಕ್ಕಾಗಿ ನೋಡಿದ ಸ್ಮಿತಾ ಗೆಲುವಿನ ನಗೆ ಬೀರಿದ್ದಳು. ಅಮರ್ ಪಾಲ್ ಈಗ ಅಕ್ಷರಶ: ಅಸಹಾಯಕನಾಗಿದ್ದ. ಅವನ ಸ್ಮಿತಾಳ ಮೇಲಿನ ಅತೀ ಪ್ರೀತಿಯೇ ಅವನ ಈ ಸ್ಥಿತಿಗೆ ಕಾರಣವಾಗಿತ್ತು. ಯಾರಿಗಾಗಿ ಹೆಂಡತಿ ,ಮಕ್ಕಳನ್ನು ಬಿಟ್ಟು , ತನ್ನ ನಂತರದ ಸಮಸ್ತ ಆಸ್ತಿಯನ್ನೆಲ್ಲಾ ಬರೆದಿದ್ದನೋ ಇಂದು ಅವಳು ತನ್ನ ಸಾವಿಗೆ ಮುನ್ನುಡಿ ಬರೆದಿದ್ದಾಳೆ. ರೋಷ ಬಂದರೂ ಏನೂಮಾಡುವಂತಿರಲಿಲ್ಲ
ಹರೀಶ್ ಕೈನಲ್ಲಿದ್ದ ಗನ್ ಕೆಳಗೆ ಹಾಕಿದ ಅಮರ್ ಪಾಲ್‌ಗೆ ಅಚ್ಚರಿಯ ಜೊತೆಗೆ ಧೈರ್ಯವೂ ಬಂತು
ದೇಖೋ ತುಂ ದೋನೋಂಕೋ ನೈ ಚೋಡೂಂಗ .ಸ್ಮಿತಾ ಕ್ಯೋ ಕೀ ತುಮ್ನೆ ಐಸೆ
ಎಂದನ್ನುತಿದ್ದಂತೆ ಹರೀಶ ಅವನ ಬಳಿ ಹೋಗಿ ಅವನನ್ನು ದರ ದರ ಎಳೆದುಕೊಂಡು ಆ ಕಣಿವೆಯ ಕೆಳಗೆ ಹಾಕಬೇಕಿತ್ತು ಆ ಕಣಿವೆ ಸುಮಾರು ನೂರು ಅಡಿಗಳಿಗಿಂತ ಜಾಸ್ತಿ . ಅಲ್ಲಿ ಬಿದ್ದವನ ಕಳೇಬರವೂ ಸಿಗುವುದಿಲ್ಲ. ಅಲ್ಲಿಂದ ಅವನನ್ನು ನೂಕಬೇಕೆನ್ನುವಷ್ಟರಲ್ಲೇ
ಅಮರ್ ಪಾಲ್ ಕುಸಿದು ಬಿದ್ದ ಅವನ ಹಣೆ ಇಂದ ರಕ್ತ ಸುರಿಯತೊಡಗಿತು .
ಎದುರಿನಿಂದ ಬಂದ ಬುಲೆಟ್ ಅವನ ಹಣೆಯನ್ನು ಸೀಳಿತ್ತು. ಆದರೆ ಬುಲೆಟ್ ಎಲ್ಲೀಂದ ಬಂತು?
ಹರೀಶ್ ಅಚ್ಚರಿಯಿಂದ ಹಿಂದೆ ತಿರುಗಿದ. ಅಲ್ಲಿ ರಾಜೀವ್ ಗನ್ ಗುರಿ ಮಾಡಿ ನಿಂತಿದ್ದ.
ಅಮರ್ ಪಾಲ್‍ನ ಜೀವ ಒಂದೇ ಏಟಿಗೆ ಹಾರಿ ಹೋಗಿತ್ತು. ಅವನ ಕಳೆಬರ ಅಲ್ಲೇ ಬಿಟ್ಟು ರಾಜೀವನ ಹತ್ತಿರ ಓಡಿದ "ರಾಜೀವ್ ಇದೇನು ಮಾಡಿದ್ರಿ . ಇನ್ನೇನು ನಾನೆ ನೂಕುತ್ತಾಇದ್ದೆ" ಎಂದನ್ನುತಿದ್ದಂತೆ ರಾಜೀವನ ಕೈನಿಂದ ಗನ್ ಕಿತ್ತುಕೊಂಡ ಸ್ಮಿತಾ ರಾಜೀವನ ಕಾಲಿಗೆ ಗುಂಡು ಹಾರಿಸಿದಳು
ಹರೀಶನಿಗೆ ಅಯೋಮಯ. ಮಾತುಗಳೇ ಬರಲಿಲ್ಲ "ಸ್ಮಿತಾ ?ಏನಿದು"?ಅವಳತ್ತ ಕೇಳುತ್ತಿದ್ದಂತೆ ಗನ್ ಅವನ ಮೇಲೆ ಎಸೆದಳು .
ಹರೀಶ್ ಗನ್ ಕೈಲಿ ಕ್ಯಾಚ್ ಹಿಡಿದ
ಇದರಲ್ಲಿ ಬುಲೆಟ್ ಇಲ್ಲ ಎಂದು ಹೇಳಿದ್ದಳಲ್ಲ
ರಾಜೀವ ಆ ನೋವಿನಲ್ಲೂ ನಗುತ್ತಿದ್ದ . ಸ್ಮಿತಾಳ ಮೊಗದಲ್ಲ್ಕಿ ಪೈಶಾಚಿಕ ನಗೆ ಕಾಣಿಸಿತು ತನ್ನ ಹಾಗು ರಾಜೀವನ ಕೈನಲ್ಲಿದ್ದ ಗ್ಲೌಸ್ ಕಿತ್ತು ಆ ಕಣಿವೆಯಿಂದ ದೂರ ಎಸೆದಳು. ಬಟ್ಟೆಯನ್ನು ಹರಿದುಕೊಂಡಳು, ತನ್ನ ಕೂದಲನ್ನೆಲ್ಲಾ ಕಿತ್ತುಕೊಂಡಳು .
"ಸ್ಮಿತಾ ಏನಿದು . ಯಾಕೆ ಹೀಗೆ ಮಾಡ್ತಾ ಇದ್ದೀರಾ " ಎಂದು ಅವಳನ್ನು ಗಟ್ಟಿಯಾಗಿ ಹಿಡಿದು ಆಡಿಸಿದ . ಆಕೆ ಬಲವಂತವಾಗಿ ಅವನನ್ನು ನೂಕುತ್ತಿದ್ದಂತೆ
ಪೋಲೀಸ್ ಜೀಪ್ ಬಂತು. ದಡ ದಡ ಪೋಲಿಸರು ಇಳಿದರು . ಅವರ ಜೊತೆ ಎಸ್ ಐ ಪ್ರೀತಮ್ ಸಹಾ ಅವನನ್ನು ಸ್ಮಿತಾಳ ಮನೆಯಲ್ಲಿ ನೋಡಿದ್ದ.ನೆನಪಿಗೆ ಬಂತು. ತಾನ್ಯಾವುದೋ ಸುಳಿಯಲಿ ಸಿಕ್ಕಿರುವೆನೆಂಬ ಅರಿವು ಆಗತೊಡಗಿತು. ಗನ್ ಹಿಡಿದಿದ್ದವನನ್ನು ಪೋಲಿಸರು ಸುತ್ತುವರೆದರು. ಸ್ಮಿತಾ ಎಸ್ ಐ ಪಕ್ಕ ಓಡಿ ಹೋಗಿ ನಿಂತಳು ಆಗಲೇ ಸ್ಮಿತಾ ಅಳಲಾರಂಭಿಸಿದಳು ಅರೆ ಇದ್ದಕಿದ್ದ ಹಾಗೆ ಕಣ್ಣೆಲ್ಲಾ ಕೆಂಪಗಾಗಿತ್ತು. ಕಣ್ಣಿಗೇನು ಹಚ್ಚಿಕೊಂಡಳೋ. ಇತ್ತ ರಾಜೀವ ಸಹಾ ನೋವಿನಿಂದ ನರಳುತ್ತಾ ಕೆಳಗೆ ಬಿದ್ದಿದ್ದ " ಪ್ಲೀಸ್ ಅರೆಸ್ಟ್ ಹಿಮ್" ಸ್ಮಿತಾ ಆತಂಕದಿಂದ ಹರೀಶನ ಕಡೆ ಕೈ ತೋರುತ್ತಾ ಕೂಗಿದಳು ಹರೀಶ್ ಕಕ್ಕಾಬಿಕ್ಕಿಯಾದ . ಮಾತುಗಳೇ ಹೊರಬರಲಿಲ್ಲ.
"ಹಿ ಟ್ರೈಡ್ ಟು ರೇಪ್ ಮಿ. ಅಡ್ಡ ಬಂದ ಅಮರ್‌ನ ಸಹ ಕೊಂದುಬಿಟ್ಟ. ನೋಡಿ ರಾಜೀವ್ಗೂ ಗುಂಡು ಹಾರಿಸಿದ್ದಾನೆ" ಸ್ಮಿತಾಳಾ ಆರೋಪದಿಂದ ದಂಗಾಗಿ ನಿಂತಿದ್ದ ಹರೀಶ್.
ಪ್ರೀತಮ್ ಅವನಕೈಗೆ ಬೇಡಿ ತೊಡಿಸಿದ.
"ಪ್ರೀತಮ್ ....".. ರಾಜೀವನ ಬಳಿ ಓಡಿದರು
ತೀವ್ರ ನೋವಾದವನಂತೆ ಮುಖವನ್ನು ಹಿಂಡಿದ "ಮೇಡಮ್ ಮೇಲೆ ಇವನಿಗೆ ಕಣ್ಣಿದೆ ಅಂತ ಇವತ್ತು ಅವನ ರೂಮಿಗೆ ಗೊತ್ತಾಯ್ತು. ಮೇಡಮ್ ಮುಖದ ಫೋಟೋಗೆ ಯಾವ್ಯಾವುದೋ ಬೆತ್ತಲೆ ದೇಹಾನ ಅಂಟಿಸಿದ್ದ. ಜೊತೆಗೆ ಅವನ ರೂಮಲ್ಲಿ ಈ ಏಲಗಿರಿ ಹಿಲ್ಸ್‌ನ ಮ್ಯಾಪ್ ಇತ್ತು ಈ ಸ್ಪಾಟ್ ಗುರಿಯಾಗಿಸಿದ್ದ. ಅದನ್ನ ಗಮನಿಸಿ ನಾನುನಿಮಗೆ ಕಾಲ್ ಮಾಡಿ ಕೂಡಲೆ ಇವರನ್ನ ಫಾಲೋ ಮಾಡಿಕೊಂಡು ಬಂದೆ ಆದರೆ ಬರೋ ಅಷ್ಟರಲ್ಲಿ ಸಾರ್‌ನ ಕೊಂದುಬಿಟ್ಟಿದ್ದಾ.
ಜೊತೆಗೆ ಮೇಡಮ್ ಮೇಲೆ ಬೀಳುತ್ತಿದ್ದ ಇವನನ್ನ ತಡೆಯಲು ಹೋಗಿದ್ದಕ್ಕೆ ನನ್ನ ಮೇಲೂ ಗುಂಡು ಹಾರಿಸಿದ ಆದರೆ ನಾನುಹೇಗೋ ತಪ್ಪಿಸಿಕೊಂಡೆ.ಅದು ಕಾಲಿಗೆ ಬಿತ್ತು. ದಯವಿಟ್ಟು ಇಂತಹವರನ್ನ ಬಿಡಬೇಡಿ"
ಹರೀಶನ ಗುಂಡಿಗೆ ಒಡೆಯಿತು "ಸಾರ್ ಇದೆಲ್ಲಾ ಇವರದೇ ಕುತಂತ್ರ ಬೇಕಾದರೆ ನೋಡಿ ನನ್ನ ಮೊಬೈಲ್ನಲ್ಲಿ ಈ ಮೇಡಮ್ ಕಾಲ್ಸ್ ಇದೆ ಅವರದೇ ನಂಬರ್ ಇದು"
ತನ್ನ ಮೊಬೈಲ್ ತೆಗೆದುಕೊಂಡು ತೋರಿಸಿದ ಯಾರೂ ಯಾವುದನ್ನೂ ನೋಡಲಿಲ್ಲ.
" ನನ್ನ ತಪ್ಪಿಲ್ಲ ತಪ್ಪಿಲ್ಲ " ಎಂಬ ಅವನ ಕೂಗಿಗೆ ಬೆಲೆಯೇ ಇರಲಿಲ್ಲ.
ಅವನ ಮೊಬೈಲ್‌ ಅನ್ನು ತನ್ನ ವಶಕ್ಕೆ ತೆಗೆದುಕೊಂಡ ಪ್ರೀತಮ್ ಅವನಿಗೊಂದು ಗನ್ನಿನ್ನಲ್ಲೆ ಹೊಡೆದು ಜೀಪ್ನಲ್ಲಿ ಕೂರಿಸಿದ. ಹಾಸ್ಪಿಟಲ್‌ಗೆ ಫೋನ್ ಮಾಡಿದ ಪ್ರೀತಮ್ ಹೆಣದ ಬಗ್ಗೆ ಮಾಹಿತಿ ನೀಡಿದ ಹರೀಶ್ ಜೀಪಿಂದ ಸ್ಮಿತಾ ಮುಖವನ್ನೇ ನೋಡುತ್ತಿದ್ದ ಸ್ಮಿತಾ ರಾಜೀವನಿಗೆ ಹೆಗಲು ನೀಡಿದಳು. "ಮೇಡಮ್ ನೀವು ಹೋಗಿ ಮೇಡಮ್ . ಆಮೇಲೆ ಸ್ಟೇಷನಗೆ ಒಂದು ಕಂಪ್ಲೆಂಟ್ ಬರೆದುಕೊಡಿ ಸಾಕು. ಈ ಮಗನ್ನ ಜೀವಮಾನ ಪೂರ್ತಿ ಒಳಗೆ ಕೊಳೆಯೋ ಹಾಗೆ ಮಾಡ್ತೀನಿ" ಪ್ರೀತಮ್ ಹೇಳಿದ ಹರೀಶ್‌ನತ್ತ ನೋಡಿದ ಸ್ಮಿತಾ ರಾಜೀವನನ್ನ ಕಾರಿನಲ್ಲಿ ಕೂರಿಸಿಕೊಂಡಳು.
ಕಾರ್ ಅನ್ನು ಡ್ರೈವಮಾಡುತ್ತಲೆ ಕಣ್ಣೀರನ್ನು ಒರೆಸಿಕೊಂಡಳು. ರಾಜೀವನತ್ತ ನೋಡಿ ನಕ್ಕಳು
ರಾಜೀವ ಆ ನೋವಿನಲ್ಲೂ ನಕ್ಕ
"ಕೊನೆಗೂ ಗೆದ್ದು ಬಿಟ್ಟೆವಲ್ಲ ಸ್ಮಿತಾ" ಅವಳ ಕೆನ್ನೆ ಸವರಿ ನುಡಿದ
"ಹೇಗಿತ್ತು ನನ್ನ ನಟನೆ?"
"ನಿನ್ನ ನಟನೆ ಬಗ್ಗೆ ಕೇಳೋದೇ ಬೇಡ. ಇಲ್ದಿದ್ದರೆ ಆ ಬಕರ ಹಂಗೆ ನಂಬ್ತಿದ್ನಾ ನಿನ್ನ? ಅದೇನು ಮೋಡಿ ಮಾಡ್ತೀಯ ಸ್ಮಿತಾ ಬರೀ ಫೋನಲ್ಲೇ ಮಾತಾಡಿ ಕೆಲ್ಸಸಾಧಿಸಿಕೊಂಡೆಯಲ್ಲಾ ಗ್ರೇಟ್"
"ಮತ್ತೆ ಇನ್ನೇನು ಆ ಮುದುಕ ಬದುಕಿರೋ ವರೆಗೂ ಅವನ ಆಸ್ತಿ ನಂದಾಗ್ತಿರಲಿಲ್ಲ .ನಿಮ್ಮನ್ನ ಬಿಟ್ಟು ಅವನ ಜೊತೆ ಬದುಕೋಕೆ ಆಗ್ಲಿಲ್ಲ. ನಾವಂದುಕೊಂಡ ಹಾಗೆಒಬ್ಬ ಬಕರ ಸಿಕ್ಕ್ದ ಆದರೆ ಇಷ್ಟು ಬೇಗ ಕೆಲಸ ಆಗುತ್ತೆ ಅಂತ ಅಂದುಕೊಳ್ಳಲಿಲ್ಲ."
"ಮೊಬೈಲ್ ಪ್ಲಾನ್ ಹೇಗಿತ್ತು . ಅದು ನಂದೇ ಐಡಿಯಾ ಅಲ್ಲವಾ? ಅವನು ಕೆಲ್ಸಕ್ಕೆ ಸೇರಿಕೊಂಡಾಗ ಅವನ ಹತ್ರಾನೆ ಸೈನ್ ಮಾಡಿಸಿಕೊಂಡು ಅವನ ಹೆಸರಲ್ಲೇ ಮೊಬೈಲ್ ತೆಗೆದುಕೊಂಡಿದ್ದು. ಅದೀಗ ಅವನ್ ರೂಮಲ್ಲೇ ಇದೆ ಮತ್ತೆ ಅವನಿಗೆ ತೊಂದರೆ " ರಾಜೀವ ಕಾಲರ್ ಏರಿಸಿಕೊಂಡ.
ಸ್ಮಿತಾ ನಕ್ಕು ಅವನ ಕೈನಲ್ಲಿ ತನ್ನ ಕೈ ಇಟ್ಟಳು.
"ನಾಳಿನ ನಾಟಕಕ್ಕೆ ಶುರು ಮಾಡಬೇಕು ಅಳ್ಬೇಕು ಆಮೇಲೆ ಜನ ಮರೀತಾರೆ ನಂತರ ಒಂದಾರು ತಿಂಗಳು ಇಲ್ಲ ವರ್ಷ ಕಳೆದ ಮೇಲೆ ನಮ್ಮಿಬ್ಬರ ಮದುವೆ " ಹಿಗ್ಗಿನಿಂದ ನುಡಿದಳು
ಇತ್ತ ಪ್ರೇಮದ ಹುಚ್ಚು ಹೊಳೆಯಲ್ಲಿ ಬೀಳಲು ಹೋಗಿ ಅವರಿಬ್ಬರ ಆಟಕ್ಕೆ ದಾಳವಾಗಿದ್ದ ಹರೀಶ ಸರಪಳಿಯ ಹಿಂದಿನ ವಾಸಿಯಾಗುವತ್ತ ನಡೆದಿದ್ದ. (ಮುಗಿಯಿತು)

Tuesday, June 2, 2009

ಪ್ರೇಮವೊಂದು ಹುಚ್ಚು ಹೊಳೆಯಲಿ ಭಾಗ ಮೂರು

ಬೆಳಗ್ಗೆ ಏಳುತ್ತಿದ್ದಂತೆ ಅಮರ್ ಪಾಲ್ ನೆನಪು ಬಂದಿತು.ಸ್ಮಿತಾಳ ಕನಸು ಜರ್ರನೆ ಇಳಿಯಿತು. ಅವನಿಗೇನಾದರೂ ಗೊತ್ತಾದರೆ ತನ್ನನ್ನ ಜೀವ ಸಹಿತ ಉಳಿಸುತ್ತಾನೆಯೇ ಭಯವಾಗತೊಡಗಿತು.. ಇಲ್ಲಿಂದ ಓಡಿ ಹೋಗಿ ಬಿಡುವ ಮನಸ್ಸಾಯ್ತು. ಕೂಡಲೆ ಬಟ್ಟೆ ಬರೆ ಎಲ್ಲವನ್ನೂ ಪ್ಯಾಕ್ ಮಾಡಿಕೊಂಡು ಯಾರಿಗೂ ಕಾಣದಂತೆ ಹೊರಟು ಬಿಡುವ ಎಂದುಕೊಂಡು ಬಾಗಿಲ ಬಳಿ ಬರುತ್ತಿದ್ದಂತೆ ರಾಜೀವ ಕಾಣಿಸಿದ.
"ಎಲ್ಲಿಗೆ ಹೋಗ್ತಿದೀರಾ ?ಹರೀಶ್" ಅವನ ದನಿಯಲ್ಲಿ ತನ್ನ ಮೇಲಿದ್ದ ಗೌರವ ವ್ಯಕ್ತ ವಾಯ್ತು. ಒಮ್ಮೆಲೇ ಬೆರಗಾದ ಹರೀಶ್ ಅಂದು ಲೋ ಎಂದು ಮಾತಾಡಿಸಿದವನಲ್ಲವೇ?
"ಅದೂ................ ನಾನಿಲ್ಲಿ ಕೆಲಸ ಮಾಡೊಲ್ಲ . ಮನೆಗೆ ಹೊರಟು ಹೋಗ್ತಾ ಇದ್ದೀನಿ" ತಡವರಿಸುತ್ತಾ ನುಡಿದ.
"ಹರೀಶ್ ನಿಮ್ಮನ್ನೇ ನಂಬಿರೋ ಹುಡುಗಿ ಕೈ ಬಿಡೋದು ಸರೀನಾ?" ತಣ್ಣಗೆ ಪ್ರಶ್ನಿಸಿದ ರಾಜೀವ್
ಅಚ್ಚರಿಯಾಯ್ತು. ಇವನಿಗೆ ಹೇಗೆ ಗೊತ್ತಾಯ್ತು
ಅವನತ್ತ ಪ್ರಶ್ನಾರ್ಥಕವಾಗಿ ನೋಡಿದ.
"ಹರೀಶ್ ಮೇಡಮ್ ನಿಮ್ಮನ್ನ ತುಂಬಾ ಹಚ್ಚಿಕೊಂಡಿದಾರೆ. ಅವರು ನಿಮ್ಮನ್ನ ತುಂಬಾ ಇಷ್ಟ ಪಟ್ಟಿದಾರಂತೆ. ದಯವಿಟ್ಟು ಅವರಿಗೊಂದು ನೆಮ್ಮದಿಯ ಬಾಳು ಕೊಡಿ."ಕೈಮುಗಿದು ಬೇಡಿಕೊಂಡ
ಹರೀಶ್‌ಗೆ ಬಿಕ್ಷುಕನಿಗೆ ಬಿಕ್ಶೆ ಹಾಕುವುದಲ್ಲದೆ ತಿಂದು ಪಾವನ ಮಾಡಿ ಎಂದು ಬೇಡಿಕೊಂಡಂತಾಯ್ತು.
ರಾಜೀವ್ ಮುಂದುವರೆಸಿದ
"ಅಮರ್ ಪಾಲ್ ತುಂಬಾ ದೊಡ್ಡ ಮನುಶ್ಯ ಅವನಿಗೆ ಎಲ್ಲಾ ಕಡೆ ಕೈಗಳಿವೆ ಅಂತಹುದರಲ್ಲಿ ಅವರಿಂದ ತಪ್ಪಿಸ್ಕೊಳ್ಳೋಕೆ ಸ್ಮಿತಾಗೆ ಬಲ ಶಾಲಿಯಾಗಿರೋ ಗಂಡಿನ ಗಂಡನ ಅವಶ್ಯಕತೆ ಇದೆ. ನಾನು ಇಷ್ಟೆಲ್ಲಾ ಮಾತಾಡಿದರೂ ನಾನು ಮೂಲತ: ತುಂಬಾ ಹೆದರಿಕೆಯ ಮನುಷ್ಯ ಆದರೂ ನಾನು ಕೇವಲ ಸೆಕ್ರೆಟರಿ ನಾನೇನೂ ಮಾಡೋಕೆ ಆಗೋದಿಲ್ಲ . ನೀವೆ ಅವರನ್ನ ಕಾಪಾಡಬೇಕು" ರಾಜೀವನ ಕಣ್ಣಲ್ಲಿ ನೀರು.
ಹರೀಶನಿಗೆ ತನ್ನನ್ನು ಬಲಶಾಲಿ ಎಂದದ್ದಕ್ಕೆ ಸಂತೋಷವಾಯ್ತು. ರಾಜೀವನೆ ಇಷ್ಟೊಂದೆಲ್ಲಾ ಹೇಳಿದರೂ ತಾನು ಕೇಳಲಿಲ್ಲವಾದರೆ ತಾನು ಗಂಡಾಗಿ ಹುಟ್ಟಿದ್ದಕ್ಕೆ ಏನು ಸಾರ್ಥಕತೆ ಎನಿಸಿತು. ಆದರೂ ಅಮರ್ ಪಾಲ್‍೬ನ ಬಗ್ಗೆ ಹೆದರಿಕೆ ಇದ್ದೇ ಇತ್ತು
"ಸಾರ್ ಆದರೆ ಅಮರ್ ಪಾಲ್ ನನ್ನನ್ನ ಜೀವಂತ ಬಿಡ್ತಾನಾ?"
"ನಿಜಕ್ಕೂ ಬಿಡಲ್ಲ. ಆದರೆ ನೀವು ಪ್ರೀತಿಗೆ ಸೋಲ್ತೀರಾ ಇಲ್ಲ ಭೀತಿಗೆ ಹಿಂಜರಿತೀರಾ ನೀವೆ ನಿರ್ಧಾರ ಮಾಡಿ" ರಾಜೀವ ಗಂಭೀರನಾಗಿ ನುಡಿದು ಬಂಗಲೆಯ ಒಳಗೆ ನಡೆದ.
ಕೈನಲ್ಲಿದ್ದ ಸೂಟ್ ಕೇಸ್ ಮಂಚದ ಮೇಲೆಸೆದು ದೊಪ್ಪೆಂದು ಬಿದ್ದ ಹರೀಶ್. ದ್ವಂದ್ವದಲ್ಲಿ ಸಿಲುಕಿದ
ತಾನೇಕೆ ಇಲ್ಲಿ ಬಂದೆ ಇವಳ ಬಲೆಗೇಕೆ ಸಿಲುಕಿದೆ. ಹೊರಟು ಹೋದರೆ ಅಸಹಾಯಕ ಹೆಣ್ಣಿಗೆ ಅಪಚಾರ ಮಾಡಿದಂತಾಗುತ್ತದೆ. ಅದು ಅವಳು ತನ್ನನ್ನು ಅಷ್ಟೊಂದು ಬಯಸುವಾಗ. ಇಲ್ಲೇ ಇದ್ದರೆ ಅಮರ್ ಪಾಲ್ ಖಂಡಿತಾ ಉಳಿಸುವುದಿಲ್ಲ .
ಏನು ಮಾಡುವುದು? ಗೋಜಲು ಗೋಜಲು ಯೋಚನೆಗಳು ಮುತ್ತುತ್ತಿದ್ದಂತೆ ಅಮ್ಮ ತಂಗಿ ಮನದಿಂದ ದೂರವಾದರು .ಸ್ಮಿತಾ ಹಾಗು ಅವಳ ದೈನ್ಯ ಮುಖವೊಂದೇ ಕಣ್ಣ ಮುಂದೆ ಕಾಣ ತೊಡಗಿತು.
ಅಷ್ಟರಲ್ಲಿ ಮತ್ತೆ ಅವಳದೇ ಫೋನ್ ಮತ್ತೆ ಬಂತು.
"ಹ...... ಲೋ.............." ಅಲ್ಲಿಂದ ಮತ್ತದೆ ಕೋಗಿಲೆಯ ದ್ವನಿ ಬಂತು
ಇವನು ಮಾತಾಡಲಿಲ್ಲ
"ಯಾಕೆ ನನ್ನ ಜೊತೆ ಮಾತಾಡುವುದಿಲ್ಲ ನೀವು? ಬೇಜಾರಾ" ಅಲ್ಲಿಂದ ಅತೀವ ಬೇಸರಗೊಂಡ ದನಿ ಕೇಳಿ ಬಂತು
"ಛೆ ಛೆ ಇಲ್ಲ ಇಲ್ಲ ಬೇಸರ ಯಾಕೆ?" ಮಾತಾಡಿದ
"ನಾನು ನೆನ್ನೆ ಕೇಳಿದ್ದಕ್ಕೆ ಬೇಸರವಾಯ್ತೇ . ರಾಜೀವ್ ಫೋನ್ ಮಾಡಿದ್ದರು. ನಾನು ಮೈಸೂರಲ್ಲಿದ್ದರೂ ನಿಮ್ಮ ಬಗ್ಗೆ ತಿಳ್ಕೊಳೋಕೆ ರಾಜೀವ್‌ಗೆ ಅಲ್ಲೇ ಇರೋದಿಕ್ಕೆ ಹೇಳಿದ್ದೇನೆ. ನೀವ್ಯಾಕೆ ಬಿಟ್ಟು ಹೋಗೋ ನಿರ್ಧಾರ ಮಾಡಿದ್ದು?" ಮುದ್ದಾದ ಆರೋಪಿಸುವ ದನಿಯಲ್ಲಿ ಕೇಳಿದಳು.
"ಸಾರಿ ಸ್ಮಿತಾ ನಂಗ್ಯಾಕೋ ಭಯವಾಗ್ತಿದೆ. ನೀವು ನನ್ನಲ್ಲಿ ಏನು ನೋಡಿ ಈ ನಿರ್ಧಾರ ತಗೊಂಡ್ರಿ?"ಅವನ ಮನದಲ್ಲಿದ್ದ ಅನುಮಾನವನ್ನು ಹೊರಹಾಕಿದ
"ಆವತ್ತು ಆ ಅಂಗಡಿಯಲ್ಲಿ ನೀವು ನನ್ನಮೇಲಿಟ್ಟಿದ್ದುದು ಬರೀ ಅಭಿಮಾನ ಅಲ್ಲ ಅದರ ಜೊತೆಗೆ ಜಗತ್ತನ್ನೆ ಮರೆಯೋ ಪ್ರೀತಿ ಅಂತ ನಂಗೆ ಗೊತ್ತಾಯ್ತು. ನನ್ನ ಚಪ್ಪಲಿಗೂ ನೀವು ತೋರಿದ ಪ್ರೀತಿ ಇದುವರೆಗೂ ಎಲ್ಲೂ ಕೇಳಿಲ್ಲ ನೋಡಿಲ್ಲ . ಒಂದು ಹೆಣ್ಣು ಬಯಸೋದು ಅದನ್ನೇ ಅಲ್ಲವೇ. ಸಿನಿಮಾದಲ್ಲಿ ನಾವು ಪ್ರೀತಿಗೋಸ್ಕರ ಹುಚ್ಚ ಆಗೋರು. ರೌಡಿ ಆಗೋರು ಸಾಯೋರು ಎಲ್ಲಾ ತೋರಿಸ್ತೀವಿ, ಕನಸನ್ನ ಮಾರ್ತೀವಿ ಆದರೆ ನಿಜ ಹೇಳ್ಬೇಕೆಂದರೆ ನಮಗೆ ಕನಸು ಕಾಣೋ ಹಕ್ಕಾಗಲಿ ಮನಸಾಗಲಿ ಇರೋಲ್ಲ ಆದರೆ
ನಿಮ್ಮ ಜತೆ ನನಗೆ ಕನಸು ಕಾಣುವ ಅನುಭವವಾಯ್ತು. ಜೊತೆಗೆ ನೀವು ಬಲಶಾಲಿ ಅನ್ನಿಸ್ತು.ನನ್ನನ್ನ ಈ ಕೂಪದಿಂದ ಕಾಪಾಡಬಲ್ಲ್ಲವರು ನೀವೇ ಅಂತ ನನಗೆ ದೃಡವಾಯ್ತು. ಸೋ ಐ ....................ಲವ್ ....................ಯು" ಅವಳ ಮಾತುಗಳನ್ನೇ ಆಸಕ್ತಿಯಿಂದ ಕೇಳುತ್ತಿದ್ದವನಿಗೆ ಆ ಕೊನೆಯ ವಾಕ್ಯ ಕೇಳಿ ಎದೆ ಝಲ್ಲೆಂತು. ಹೃದಯದ ಆವೇಗ ಹೆಚ್ಚಿತು.ಗುಂಡಿಗೆಯ ರಕ್ತ ಕೆನ್ನೆಯನ್ನಾವರಿಸಿ ಕೆಂಪಾಯ್ತು.
" ಐ.......... ಟೂ ......ಲವ್ .....ಯು ಸ್ಮಿತಾ " ಮೆಲ್ಲನುಸುರಿದ . ಆ ಕ್ಷಣಕ್ಕೆ ಯಾವ ಯೋಚನೆಗಳೂ ಮುತ್ತಲಿಲ್ಲ . ಜಗತ್ತಿನ ಯಾವ ಕಷ್ಟಗಳು ಬಂದರೂ ಸ್ಮಿತಾಳ ಪ್ರೀತಿಯಲ್ಲಿ ಗೆಲ್ಲಬಲ್ಲೆ ಎಂದೆನಿಸಿತು
ಅಲ್ಲಿಂದ ಒಂದು ಹೂ ಮುತ್ತು ಕೇಳಿಬಂತು
ಇವನು ಪ್ರತಿಯಾಗಿ ನೀಡಿದ.
ಫೋನ್ ಇಟ್ಟ ಶಬ್ಧ ಕೇಳಿತು.
ಇದಾಗಿ ಸುಮಾರು ವಾರಗಳೇ ಕಳೆದವು
ಒಮ್ಮೆಯಾದರೂ ಅವಳನ್ನು ಮುಖತ್: ಭೇಟಿಯಾಗಿ ಮಾತನಾಡೋಣವೆಂದರೆ ಆಗಿರಲಿಲ್ಲ.
ಅಮರ್ ಪಾಲ್ ಅವಳನ್ನು ಬಿಟ್ತಿರುತ್ತಲೇ ಇರಲಿಲ್ಲ.
ಇವನನ್ನು ನೋಡಿದಾಗಲೆಲ್ಲಾ ಒಂದು ಹೂ ಮುತ್ತನ್ನು ಗಾಳಿಯಲ್ಲಿ ತೇಲಿ ಬಿಡುತ್ತಿದ್ದಳು . ಇವನು ಅದನ್ನು ಪೂಜ್ಯ ವಸ್ತು ಎಂಬಂತೆ ಹಿಡಿದು ಕಣ್ಣಿಗೊತ್ತಿಕೊಂಡು ಎದೆಗೊತ್ತಿಕೊಳ್ಳುತ್ತಿದ್ದನು.
ಪ್ರತಿ ದಿನ ಅವಳಿಂದ ಫೋನ್ ಬರುತ್ತಿತ್ತು ರಾತ್ರಿಯಲ್ಲಿ
ರಾತ್ರಿಯಾದರೆ ಅಮರ್ ಪಾಲ್‍೬ನ ಹಿಂಸೆ ಮೇರೆ ಮೀರುತ್ತದೆ ಎಂದೂ ಇಷ್ಟವಿಲ್ಲದಿದ್ದರೂ ಅವನ ಬಯಕೆಗೆ ಸಹಕರಿಸಲೇಬೇಕಾಗಿದೆಯೆಂದೂ ಹೇಳುತ್ತಿದ್ದಾಗ ಇವನ ರಕ್ತ ಕುದಿಯುತ್ತಿತ್ತು. ಅವನೊಂದಿಗೆ ದೇಹವನ್ನು ಇಷ್ಟವಿಲ್ಲದಿದ್ದರೂ ಹಂಚಿಕೊಳ್ಳುತ್ತಿದ್ದಾಳ್ಖೆ ಆದರೂ ಅವಳ ಮನಸ್ಸು ತನ್ನದು ಎಂದು ಸಮಾಧಾನಗೊಳ್ಳುತ್ತಿದ್ದ. ಆದರೂ ಇಲ್ಲಿಂದ ಅವಳನ್ನು ಪಾರು ಮಾಡುವುದು ಹೇಗೆಂದು ಯೋಚಿಸುತ್ತಲೇ ಇದ್ದ.
ಅದೊಂದು ದಿನ ಅವಳ ಕಾಲ್ ಬಂದಾಗ ಅವಳ ಬಳಿಯಲ್ಲೇ ಹೇಳಿದ
"ಸ್ಮಿತಾ ಇಲ್ಲಿಂದ ಹೊರಟು ಹೋಗೋಣ ನನ್ನ ಪ್ರಾಣ ಇನ್ನೊಬ್ಬರ ಬಳಿ ನಲುಗುವುದನ್ನು ನೋಡಾಲಾಗುತ್ತಿಲ್ಲ"
"ಆದರೆ ಹರೀಶ್ ಎಲ್ಲಿ ಹೋಗೋದು. ಇವನು ಇಡೀ ಪ್ರಪಂಚದಲ್ಲಿ ಎಲ್ಲಿದ್ದರೂ ನಮ್ಮನ್ನ ಬದುಕೋಕೆ ಬಿಡಲ್ಲ" ಅವಳು ಕಣ್ಣೀರು ಸುರಿಸಿದಳು
"ಹಾಗಿದ್ದರೆ ಏನು ಮಾಡೋದು? ಎಷ್ಟು ದಿನಾಂತ ಈ ನರಕ ಸ್ಮಿತಾ?" ಪ್ರಶ್ನಿಸಿದ
"ಅಮರ್ ಪಾಲ್ ಸಾಯೋ ತನಕ ಇದೇ ಗೋಳು" ಅವಳ ಬಾಯಿಂದ ತಟ್ಟನೆ ಆ ಮಾತು ಬಂತು
"ಸಾಯೋದಾ ?ಅವನು ಯಾವಾಗ ಸಾಯ್ತಾನೆ"ಹರೀಶ್ ಅವನಿಗೇನಾದರೂ ಕಾಯಿಲೆ ಇರಬಹುದೇನೋ ಎಂದುಕೊಂಡ
"ಹರೀಶ್ ಅವನೆಲ್ಲಿ ಸಾಯ್ತಾನೆ. ನಾನೆ ಸತ್ತು ಹೋಗ್ತೀನಿ . ನೀವು ನಂಜೊತೆ ಬಂದು ಬಿಡಿ ಅಟ್ಲೀಸ್ಶ್ಟ್ ಅಲ್ಲಾದರೂ ಸುಖವಾಗಿರೋಣ" ಅವಳ ದನಿ ಗದ್ಗದಿತವಾಗಿತ್ತು
ಅವಳನ್ನು ಸಮಾಧಾನಿಸಿದ. ಅವನಿಗೂ ತುಂಬಾ ಬೇಜಾರಾಗಿ ಹೋಗಿತ್ತು
ರಾತ್ರಿ ಮಲಗಿದಾಗ ಯೋಚನೆ ಮಾಡತೊಡಗಿದ.
ಸಾಯಲು ಧೈರ್ಯ ಬರಲಿಲ್ಲ. ಇರುವುದೊಂದೆ ಉಪಾಯ ಅಮರ್ ಪಾಲ್‍ನ ಮುಗಿಸಿಬಿಡುವುದು
ಆದರೆ ಹೇಗೆ ? . ಅವನನ್ನು ಸಾಯಿಸಿದರೆ ತನ್ನನ್ನ ಜಗತ್ತು ಬಿಡುತ್ತದೆಯೇ? ಸಿಕ್ಕಿ ಹಾಕಿಕೊಂಡರೆ ನೇಣು ಖಂಡಿತಾ.
ಮತ್ತೇನು ಮಾಡುವುದು ಅಂತಹ ಮಾಸ್ಟರ್ ಪ್ಲಾನ್ ಏನು ತನ್ನ ಬಳಿ ಇಲ್ಲವಲ್ಲ. ಸ್ಮಿತಾಗೆ ಮಿಸ್ ಕಾಲ್ ಕೊಟ್ಟ
ಅವಳಿಂದ ಕಾಲ್ ಬಂತು
"ಸ್ಮಿತಾ ನಾವು ಸಾಯೋದು ಬೇಡ. ಆ ಮುದಿಯನ್ನೆ ಕೊಲ್ಲೋಣ . ಏನಂತೀಯಾ?"
"ಹರೀಶ್ ಏನ್ ಹೇಳ್ತಾ ಇದ್ದೀರಾ. ಸಾಯ್ಸೋದು ಅಷ್ಟೊಂದು ಸುಲಭಾನಾ?"ಅವಳ ದನಿಯಲ್ಲಿ ಆತಂಕ
"ಸ್ಮಿತಾ ಅದಕ್ಕೆ ಪ್ಲಾನ್ ಮಾಡಬೇಕಿದೆ. ನಾವು ಬದುಕೋಕೆ ಅವನು ಸಾಯಲೇಬೇಕು "ಹರೀಶ್ ಉಸುರಿದ
"ರಾಜೀವ ಸಹಾಯ ತಗೊಳ್ಳೋಣ ? ತುಂಭಾ ನಂಬಿಕಸ್ತ ಮನುಷ್ಯ ಆತ ಅವನೂ ನಾನು ಚೆನ್ನಾಗಿರೋದನ್ನೆ ಬಯಸ್ತಾನೆ"ಸ್ಮಿತಾ ಕೇಳಿದಳು
"ರಾಜೀವ್ . ಹೂ ಸರಿ "ಸ್ವಲ್ಪ ಹೊತ್ತು ಯೋಚಿಸಿ ಉತ್ತರಿಸಿದ
"ಹರೀಶ್ ನಾನು ರಾಜೀವ್ ಹತ್ರ ಮಾತಾಡಿ ನಿಮಗೆ ಹೇಳ್ತೀನಿ"
ಅವಳು ಫೋನ್ ಆಫ್ ಮಾಡಿದಳು
ಇವನು ರಾತ್ರಿ ಎಲ್ಲಾ ಯೋಚಿಸುತ್ತಲೇ ಇದ್ದ.
(ಮುಂದಿನ ಕಂತಿಗೆ ಮುಕ್ತಾಯ)