Sunday, August 30, 2009

ಎರೆಡು ದಡಗಳ ನಡುವೆ-೩

ಶೈಲಾ ಸಂತೃಪ್ತ ಗೃಹಿಣಿಯಾಗಿದ್ದಳು. ಭವ್ಯ ಬಂಗಲೆ, ನೆಮ್ಮದಿಯ ತಾಣ . ವಾತ್ಸಲ್ಯದ ಮೂರ್ತಿ ತಾಯಿಯ ಪ್ರತಿರೂಪ ಅತ್ತೆ, ಆಳು ಕಾಳುಗಳು, ಅವಳ ಮನದ ಪ್ರತಿ ಆಸೆಗಳನ್ನು ಈಡೇರಿಸುವ ಗಂಡ . ಈಗಷ್ಟೆ ಹುಟ್ಟಿದ ಮುದ್ದುಮಗು ಸಿರಿ . ಆ ಮಗುವಿನ ಪ್ರತಿಯೊಂದು ಸೇವೆಯನ್ನೂ ಅತ್ತೆಯೇ ಮಾಡುತ್ತಿದ್ದರು. ಸಿರಿಗೀಗ ಒಂದು ವರ್ಷ. ತಾಯಾಗಿ ಶೈಲಾ ಅಂಥಾ ವಾತ್ಸಲ್ಯವನ್ನೇನು ಕೊಟ್ಟಿರಲಿಲ್ಲ . ಅದು ಹೆಚ್ಚಾಗಿ ಅಜ್ಜಿಯ ಬಳಿಯಲ್ಲೇ ಬೆಳೆಯುತ್ತಿತ್ತು.
ಶೈಲಾ ಮಾಡಿದ್ದು BSc Computer science
ಆದ್ದರಿಂದ ಪ್ರೋಗ್ರಾಮಿಂಗ್ ಮೇಲೆ ಅವಳಿಗೆ ಸಹಜವಾಗಿಯೇ ಆಸಕ್ತಿ. ಕಂಪ್ಯೂಟರ್ ಮುಂದೆ ಕುಳಿತು ಅವಳಿಗಿಷ್ಟವಾದ ಪ್ರೋಗ್ರಾಮ್‌ಗಳನ್ನು ಬರೆಯುತ್ತಾ ಕುಳಿತಿರುತ್ತಿದ್ದಳು. ಅದು ಬಿಟ್ಟರೆ ಮತ್ತೆಂಥಾ ಹವ್ಯಾಸಗಳೂ ಇರಲಿಲ್ಲ. ಬೇಕಾಗಿಯೂ ಇರಲಿಲ್ಲ.
ಹೀಗಿದ್ದಾಗ ಒಮ್ಮೆ ಹೊಸದೊಂದು ಪ್ರೋಗ್ರಾಮಿಂಗ್ ಲಾಂಗ್ವೇಜ್ ಕಲಿಯಬೇಕೆಂಬ ಆಸೆ ಬಲಿಯಿತು.
ಮನು ಅವಳಿಗೆ ಬೇಕಾದ ಪುಸ್ತಕಗಳನ್ನೆಲ್ಲಾ ತಂದುಕೊಟ್ಟನು. ಅದನ್ನೆಲ್ಲಾ ಓದಿದರೂ ತಲೆಗೆ ಹತ್ತಲಿಲ್ಲ. ಅದೇ ದೊಡ್ಡ ಕೊರಗಾಗಿ ಹೋಯ್ತು.
ರಾತ್ರಿ ಎಲ್ಲಾ ಮಂಕಾಗಿರುತ್ತಿದ್ದಳು. ಯಾರೊಡನೆಯೂ ಮಾತನ್ನಾಡುತ್ತಿರಲಿಲ್ಲ. ಹೇಗಾದರೂ ಅದನ್ನು ಕಲಿಯಬೇಕೆಂಬ ತೀವ್ರ ಹಂಬಲ ಅವಳಿಗೆ. ಮನುವಿನ ಆತಂಕ ಹೆಚ್ಚಾಯ್ತು.
ಅವಳಿಗೇನು ಬೇಕು ಎಂದು ರಮಿಸಿ ಕೇಳಿದ. ಅವಳ ಆಸೆ ಕೇಳಿ ಮನಸಾರೆ ನಕ್ಕು ಅವಳಿಗೊಬ್ಬ ಟ್ಯೂಟರ್ ನೇಮಿಸಲು ಜಾಹೀರಾತು ನೀಡಿದ . ಸಂಬಳ ಹದಿನೈದು ಸಾವಿರ ತಿಂಗಳಿಗೆ .
ಬಂದ ಸಾವಿರಾರು ಅಪ್ಪ್ಲಿಕೇಷನ್ಸ್‌ನಲ್ಲಿ ಕೊನೆಗೆ ಆಯ್ಕೆಯಾಗಿದ್ದು ಕೇವಲ ನಾಲ್ಕು ಅದರಲ್ಲಿ ಮೂರು ಲೇಡಿ ಟ್ಯೂಟರ್. ಒಂದು ಮೇಲ್ ಟ್ಯೂಟರ್,
ಮನುವಿಗೆ ವಿದ್ಯಾಭ್ಯಾಸ ಹೆಚ್ಚು ಆಗಿರದಿದ್ದರೂ ನಿರ್ಣಯ ತೆಗೆದುಕೊಳ್ಳುವುದರಲ್ಲಿ ಎತ್ತಿದ ಕೈ.ಅವರೆಲ್ಲರಲ್ಲಿ ಚಾರ್ಮಿಂಗ್ ಹಾಗು ಹೆಚ್ಚು ತಿಳಿದಿದ್ದಾನೆಂದೆನಿಸಿದ ಹುಡುಗನನ್ನೇ ಆಯ್ಕೆ ಮಾಡಿದ. ವಿಕಾಸ್ ಬಹಳ ಬುದ್ದಿವಂತ ಬಿ. ಇ ಮಾಡಿ ಕೆಲಸಕ್ಕಾಗಿ ಹುಡುಕಾಡುತ್ತಿದ್ದ.
ಮನುವಿನ ತಾಯಿ ಒಮ್ಮೆ " ವಯಸಿನ ಹುಡುಗ ಬಿಟ್ಟು ಬೇರೆಯವರು ಸಿಗಲಿಲ್ಲವಾ? ನಿಂಗೆ" ಎಂದು ಆಕ್ಷೇಪಿಸಿದರು.
ಮನು ನಕ್ಕು ಬಿಟ್ಟ
" ಅಮ್ಮಾ ನಂಗೆ ಶೈಲಾ ಮೇಲೆ ನಂಬಿಕೆ ಇದೆ ಹಾಗೇನಾದರೂ ಆದರೆ ಆಗ ಶೈಲಾಗೆ ನನ್ನಲ್ಲೇನೋ ಕೊರತೆ ಇದೆ ಅಂತ ಕಂಡಿದೆ ಅಂದ್ಕೋತೀನಿ. ಅಷ್ಟಕ್ಕೂ ಹಾಗೇನೂ ಆಗಲ್ಲ ನೀನು ಸುಮ್ಮನಿರು ಅಮ್ಮ"
ಶೈಲಾ ಮರೆಯಲ್ಲಿದ್ದು ಕೇಳಿಸಿಕೊಂಡಿದ್ದಳು ಆ ಕ್ಷಣಕ್ಕೆ ಅವಳಿಗೆ ನಗು ಬಂತು. ಮನುವನ್ನು ಬಿಟ್ಟು ತಾನು ಛೇ ಎಲ್ಲಾದರೂ ಉಂಟೇ?. ಅತ್ತೆಯ ಸಂಕುಚಿತ ಬುದ್ದಿಗೆ ಬೈದುಕೊಂಡಳು
******************************************************************
ದಡಕ್ಕನೆ ಎದ್ದಳು ಶೈಲಾ ಆಗಲೇ ಐದು ವರೆಯಾಗಿತ್ತು. ಮುಖದಲ್ಲಿದ್ದ ಬೆವರನ್ನ ಒರೆಸಿಕೊಂಡಳು . ಅತ್ತೆಯ ಅನುಮಾನವೇ ನಿಜವಾಯ್ತಲ್ಲವೇ ? ಮತ್ತೆ ಯೋಚಿಸಲು ಧೈರ್ಯ ಬರಲಿಲ್ಲ
ಹಾಲು ತರಬೇಕು.ಪಕ್ಕದಲ್ಲಿದ್ದ ವಿಕಾಸ್ ಇನ್ನು ಮಲಗಿಯೇ ಇದ್ದ. ಎಬ್ಬಿಸಿದರೂ ಆತ ಏಳುವವನಲ್ಲ. ಬೆಳಗ್ಗೆ ಏಳುಘಂಟೆಗೆ ಎದ್ದೇ ಅವನಿಗೆ ಅಭ್ಯಾಸ .ಎದ್ದು ಮುಖ ತೊಳೆದುಕೊಂಡು ಹಾಲಿನಂಗಡಿಯ ಕಡೆ ಹೆಜ್ಜೆ ಹಾಕಿದಳು.
****************************************
ಶೈಲಾ ಕೂಡ ಎಂಟು ಘಂಟೆ ಕಡಿಮೆ ಏಳುತ್ತಿರಲಿಲ್ಲ. ಎದ್ದ ಕೂಡಲೆ ಆಗಲೇ ರೆಡಿಯಾಗಿರುತ್ತಿದ್ದ ಮನುವಿನಿಂದ ಹೂಮುತ್ತನೊಂದು ಪಡೆದು , ಸಿರಿಯನ್ನು ಮುದ್ದಿಸಿಯೇ ಅವಳ ಮುಂದಿನ ದಿನಚರಿ.
ಮುಖ ತೊಳೆದುಕೊಂಡು ಕೂತೊಡನೆ ಆಳು ಜಯ ಕಾಫಿ ಕೊಡುತ್ತಿದ್ದಳು . ಪೇಪರ್ ಓದುತ್ತಾ ಕಾಫಿ ಕುಡಿಯುತ್ತಿದ್ದಂತೆ ಮನು ಕಂಪೆನಿಗೆ ಹೊರಡಲು ಸಿದ್ದನಾಗುತ್ತಿದ್ದ. ಅವನಿಗೆ ಬಡಿಸುವುದು ಮಾತ್ರ ಶೈಲಾ ಕೆಲಸವೇ. ಅಷ್ಟೊತ್ತಿಗಾಗಲೇ ಸಿರಿಯ ಸ್ಜ್ನಾನ ಮುಗಿಸಿ ರಂಗಮ್ಮ ಅವಳನ್ನು ಕರೆತರುತ್ತಿದ್ದರು. ಅತ್ತೆ ಸಿರಿಗೆ ತಿಂಡಿ ತಿನ್ನಿಸುತ್ತಿದ್ದರು. ಆ ವೇಳೆಗೆ ಮನು ಕಂಪನಿಗೆ ಹೊರಡುತ್ತಿದ್ದ
ಅವನ್ನನ್ನು ಬಿಳ್ಕೊಟ್ಟು ಸ್ನಾನ ಮುಗಿಸಿ ಅತ್ತೆಯೊಡನೆ ಒಂದಷ್ಟು ಮಾತಾಡಿ ತಿಂಡಿ ಮುಗಿಸಿ ಸಿರಿಯನ್ನು ಅವರ ಬಳಿ ಕೊಟ್ಟು ಕಂಪ್ಯೂಟರ್ ಬಳಿ ಬಂದು ಕೂರುತ್ತಿದ್ದಳು.ಅಷ್ಟೇ ಅವಳ ಕೆಲಸ ನಡುನಡುವಲ್ಲಿ ಟಿವಿ ನೋಡುತ್ತಿದ್ದಳು. ಬೋರಾದಾಗ ಶಾಪಿಂಗ್‌ ಹೊರಡುತ್ತಿದ್ದಳು . ಆಗಾಗ ಗೆಳೆಯ ಗೆಳತಿಯರ ಜೊತೆ ಚಾಟಿಂಗ್ ಇಷ್ಟು ಅವಳ ಪ್ರಪಂಚವಾಗುತ್ತಿದ್ದವು. ಅದೇ ಸ್ವರ್ಗ ಅವಳಿಗೆ.
********************************************************************
ಹಾಲು ತಂದು ಕಾಯಿಸಲು ಗ್ಯಾಸ್ ಆನ್ ಮಾಡಿದಳು.
ವಿಕಾಸ್ ಹಿಂದಿನಿಂದ ಬಂದು ಅಪ್ಪಿಕೊಂಡ . ಹಾಗೆಯೇ ಅವನ ಎದೆಗೊರಗಿದಳು. "ಹೌ ಆರ್ ಯು ಫೀಲಿಂಗ್? ಶೈಲೂ"
ಅವಳನ್ನು ತನ್ನೆಡೆಗೆ ತಿರುಗಿಸಿಕೊಂಡು ಗಲ್ಲವನ್ನು ಎತ್ತಿದ.
"ಪರವಾಗಿಲ್ಲ ಈಗ"
"ಶೈಲೂ ಸಿರೀನ ಬಿಟ್ಟಿರೋದು ಕಷ್ಟ ಅಂತಾದರೆ ಲೆಟ್ ಅಸ್ ಬ್ರಿಂಗ್ ಹರ್ ಹಿಯರ್ . ಒಬ್ಬ ತಾಯಿಗೆ ಮಗೂನ ಬಿಡೋದು ಎಷ್ಟು ಕಷ್ಟ ಅಂತ ಗೊತ್ತಿದೆ ನಂಗೆ. ನಾನೆ ಅವಳನ್ನ ತುಂಬಾ ಹಚ್ಚಿಕೊಂಡು ಬಿಟ್ಟಿದ್ದೇನೆ"
ಇದು ಅವನು ಕೇಳುತ್ತಿರುವುದು ಅದೆಷ್ಟನೇ ಸಲವೋ ಲೆಕ್ಕವಿಲ್ಲ
ಶೈಲಾ ಬೇಡವೆನ್ನುವಂತೆ ತಲೆ ಆಡಿಸಿದಳು.
"ವಿಕಿ ಅವಳ ಬಾಲ್ಯ ನನ್ನ ಹಾಗೆ ಸುಂದರವಾಗಿರಲಿ ಮನು ಅಪ್ಪ ಅಮ್ಮ ಎರೆಡೂ ಆಗಿ ನೋಡ್ಕೋತಾರೆ ನಂಗೆ ಗೊತ್ತು . ಅವಳಿಗೆ ನನ್ನ ನೆನಪೇ ಬರದ ಹಾಗೆ ಕೇರ್ ತಗೋತಾರೆ . ಸಿರಿ ಅಲ್ಲಿನ ಸಿರಿತನದೊಂದಿಗೇ ಬೆಳೆಯಲಿ."
ಅವಳನ್ನು ಅಪ್ಪಿ ಹಿಡಿದಿದ್ದ ವಿಕಾಸನ ಕೈ ಸಡಿಲಾವದವು.ಅವನ ಎದುರಿಗೆ ಮನುವನ್ನು ಹೊಗಳಬಾರದಿತ್ತೇನೋ ಎಂದನಿಸಿತು.
ಅವನ ಕೈಗಳನ್ನು ತನ್ನ ಸೊಂಟದ ಸುತ್ತ ಬಿಗಿ ಮಾಡುತ್ತಾ "ಸಾರಿ ವಿಕಿ" ಅವನ ಕಣ್ಣನ್ನೇ ನೋಡಿದಳು.
"ಶೈಲಾ ಸಾರಿ ಏಕೆ? ನಾನೆ ನೋಡಿದೀನಿ ಅವರು ನಿನ್ನನ್ನ ಎಷ್ಟು ಪ್ರೀತಿ ಮಾಡ್ತಾ ಇದ್ದರಂತ. ನೆನ್ನೆ ಮನು ನಮ್ಮ ಕಂಪೆನಿ ಮುಂದೇನೆ ಕಾರ್‌ನಲ್ಲಿ ಹೋದರು. ಜೊತೆಗೆ ಸಿರಿ ಸಹಾ. ನಂಗೆ ಯಾಕೋ ಗಿಲ್ಟ್ ಫೀಲಿಂಗ್ ತುಂಬಾ ಬರ್ತಾ ಇದೆ. ಪ್ರೇಮ ಅನ್ಕೊಂಡು ನಾವು ದಾರಿ ತಪ್ಪಿದ್ವಾ ಅಂತ"
ಶೈಲಾಳನ್ನು ಬಿಟ್ಟು ಸೊಫಾಕೊರಗಿದ.
ಶೈಲಾ ಕಣ್ಣಲ್ಲಿ ನೀರು ಚಳಕ್ ಎಂದು ಚಿಮ್ಮಿತು. ಕಣ್ಣಿನ ಹನಿಗಳು ಕಾಣದಂತೆ ಗೋಡೆಯ ಕಡೆ ತಿರುಗಿದಳು
ಮೌನವೇ ರಾಜನಾಗಿತ್ತು. ಕೆಲ ಹೊತ್ತು
*****************************************
ತಾನಂದುಕೊಂಡಿದ್ದ ಸ್ವರ್ಗಕ್ಕಿಂತ ಸುಂದರವಾದುದು ಶೈಲಾಗೆ ವಿಕಾಸ್‌ನ ಮಾತಿನಲ್ಲಿ ಕಾಣಿಸಿತು.ಚುರುಕು ಮಾತಿನ ಸೊಗಸುಗಾರ ವಿಕಾಸ್. ಚಟ ಪಟ ಮಾತು ಪ್ರತಿ ಘಳಿಗೆಗೂ ಹಾಸ್ಯ ತಮಾಷೆ. ಅಂತಹ ಪರಿಸರಕ್ಕೆ ಶೈಲಾ ಒಗ್ಗಿರಲಿಲ್ಲ. ಮನು ಅವಳನ್ನು ಮಗುವಿನಂತೆ ಪ್ರೀತಿಸುತ್ತಿದ್ದ. ಅತ್ತೆ ವಾತ್ಸ್ವಲ್ಯನೀಡುತ್ತಿದ್ದರು. ಆಳು ಕಾಳುಗಳು ಅವಳಿಗೆ ಅಮ್ಮಾವ್ರ ಸ್ಥಾನ ನೀಡಿದ್ದರು. ಆದರೆ ಅವಳೊಬ್ಬ ಮೆಚೂರ್ಡ್ ಹೆಣ್ಣು ಎಂದು ತಿಳಿದು ವರ್ತಿಸುತ್ತಿದ್ದ ವಿಕಾಸ್
ತಾನೊಬ್ಬ ಹೆಣ್ಣು ಎಂಬುದು ವಿಕಾಸನ ಜೊತೆಯಲ್ಲಿ ಪಳಗಿದ ಮೇಲೆ ತಿಳಿಯಿತು. ಕ್ಲಾಸಿನಲ್ಲಿ ತಪ್ಪು ಮಾಡಿದರೆ ದಂಡಿಸುತ್ತಿದ್ದ. ಒಮ್ಮೊಮ್ಮೆ ಜಗಳವನ್ನೂ ಆಡುತ್ತಿದ್ದ. ಆಗಾಗ ಅವಳನ್ನು ಹೊಗಳುತ್ತಿದ್ದ.
ಸರಿಯಾಗಿ ಕಾಣದಿದ್ದರೆ ನೀವು ಚೆನ್ನಾಗಿ ಕಾಣುತ್ತಿಲ್ಲ ಎಂದು ನೇರವಾಗಿ ಹೇಳುತಿದ್ದ. ಇಂಥ ರೀತಿ ಶೈಲಾಗೆ ಹೊಸದು. ಕಾಲೇಜಿನಲ್ಲಿಯೂ ಶೈಲಾಗೆ ಇಂಥ ಅನುಭವಗಳಾಗಿರಲಿಲ್ಲ. ಆಗಾಗ ಸಿನಿಮಾಗಳ ಬಗ್ಗೆ ಚರ್ಚಿಸುತ್ತಿದ್ದ. ಶೈಲಾ ವಿಕಾಸ್‌ಗೆ ಬಹು ಬೇಗ ಮರುಳಾಗಿದ್ದಳು. ತಾನೇನು ಬಯಸುತ್ತಿದ್ದೇನೆ ಎಂಬುದು ಅವಳಿಗೆ ಅರ್ಥವಾಗುತ್ತಿರಲಿಲ್ಲ. ವಿಕಾಸನ ಯೌವ್ವನವನ್ನೇ? ರೂಪವನ್ನೇ? ಮಾತನ್ನೇ? ಎಂಥದೋ ಆಕರ್ಷಣೆ ಅವನಲ್ಲಿ ಕಾಣತೊಡಗಿತು.
ವಯೋ ಸಹಜ ಗಂಭೀರತೆಯನ್ನು ಮೈಗೂಡಿಸಿಕೊಂಡಿದ್ದ ಮನು ಸಪ್ಪೆ ಎನಿಸಲಾರಂಭಿಸಿದ. ವಿಕಾಸನ ತುಂಟತನ ಸಹಜವಾಗಿಯೇ ಸೆಳೆಯಿತು. ಹೊಸ ಲೋಕವನ್ನೇ ಸೃಷ್ಟಿಸುತ್ತಿದ್ದಾನೆ ಎಂದೆನಿಸಿದಾಗಲೆಲ್ಲಾ ಅವನತ್ತ ಕೊಂಚ ಕೊಂಚ ವಾಲತೊಡಗಿದಳು. ಮನುವಿನಿಂದ ದೈಹಿಕವಾಗಿ ಮಾನಸಿಕವಾಗಿ ದೂರವಾಗುತ್ತಿದ್ದಳು.
ವಿಕಾಸ್‍ಗೆ ಇದು ಅರಿವಾಗಲು ಹೆಚ್ಚು ಹೊತ್ತು ಹಿಡಿಯಲಿಲ್ಲ. . ಅವರ ಸುಮಧುರ ದಾಂಪತ್ಯಕ್ಕೆ ತಾನೇ ಗೋರಿ ಕಟ್ಟುತ್ತಿದ್ದೇನೆಂದೆನಿಸಿ ಮನುವಿಗೆ ಯಾವುದೋ ಕಾರಣ ಹೇಳಿ ಊರಿಗೆ ಹೊರಟು ಹೋದ. ಅವಳಿಂದ ತಪ್ಪಿಸಿಕೊಂಡೆ ಎಂದುಕೊಂಡ ಆದರೆ ಹಾಗಾಗಲಿಲ್ಲ
*****************************ಇನ್ನೂ ಇದೆ**********************

Saturday, August 29, 2009

ಎರೆಡು ದಡಗಳ ನಡುವೆ -2

ಘ್ಹಂಟೆ ಏಳಾಗಿತ್ತು
ಶೈಲಾ ಮನೆಗೆ ಬಂದು ಒಂದು ಘಂಟೆ ಯಾಗಿತ್ತು ವಿಕಾಸನ ಸುಳಿವಿರಲಿಲ್ಲ . ಕೋಪವಿದ್ದುದರಿಂದ ಅವನಿಗೆ ಕಾಲ್ ಮಾಡಲು ಹೋಗಲಿಲ್ಲ. ನೋಡೋಣ ಅವನೇ ಕಾಲ್ ಮಾಡಲಿ ಎಂದು ಸುಮ್ಮನಾದಳು
ಫ್ರಿಡ್ಜ್‌ನಲ್ಲಿದ್ದ ಬ್ರೆಡ್ ತಿಂದರಾಯ್ತು ಎಂದುಕೊಂಡು ಯಾವ ಅಡುಗೆಯ ತಂಟೆಗೇ ಹೋಗಲಿಲ್ಲ ಅವಳಿಗೆ ಯಾವ ಅಡುಗೆಯನ್ನೂ ಮಾಡಲು ಬರುವುದಿಲ್ಲ. ಅವಳಾದರೂ ಎಂದು ಅಡುಗೆ ಮಾಡಿದ್ದಾಳೆ?
ಮನುವಿನ ಮನೆಯಲ್ಲಿ ಅತ್ತೆ ಪ್ರೀತಿಯಿಂದ ಮಾಡಿ ಬಡಿಸುತ್ತಿದ್ದರು. ಎಷ್ಟೊಂದು ದಿನಗಳಾಗಿವೆ ಅಂತಹ ರುಚಿ ರುಚಿ ಅಡುಗೆ ತಿಂದು.
ಈ ಒಣಗಿರುವ ಬ್ರೆಡ್ ತಿನ್ನುವಾಗಲೆಲ್ಲಾ ಅತ್ತೆಯ ನೆನಪು ನುಗ್ಗಿ ನುಗ್ಗಿ ಬರುತ್ತಿತ್ತು. ಮತ್ತೆ ಹನಿಗಳು ಕಣ್ಣಂಚಿಗೆ ಬಂದು ನಿಂತವು.
ವಿಕಾಸ್ ನೋಡಿದರೆ ನೊಂದುಕೊಂಡು ಸೀದಾ ಹೋಟೆಲ್‌ಗೆ ಕರೆದೊಯ್ಯುತ್ತಾನೆ ಆದರೆ ತನಗೆ ಹೋಟೆಲ್ ತಿಂಡಿ ಮೊದಲೇ ಇಷ್ಟವಿಲ್ಲ.
ಟಿವಿ ಆನ್ ಮಾಡಿದಳು.

"ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೆ ಅಮ್ಮನು ತಾನೆ"
ಎಂದು ಪುನೀತ್ ಚಿಕ್ಕ ಹುಡುಗನಾಗಿದ್ದ ಹಾಡೊಂದು ಬರುತ್ತಿತ್ತು.ಯಾರಿವನು ಚಿತ್ರದ್ದಿರಬೇಕು.
ಟಿವಿ ಆಫ್ ಮಾಡಿದಳು.
ಅಮ್ಮ ಎನ್ನುವವಳು ದೇವತೆಯೇ? ತನ್ನಮ್ಮ ಭೂಮಿ ಮೇಲೆ ಇರಲಿಲ್ಲ ಹಾಗಾಗಿ ಅವಳು ತನಗೆ ದೇವತೆಯಾಗಿದ್ದಳೆ ಇಲ್ಲವೇ ಎಂಬುದು ಗೊತ್ತಾಗಲಿಲ್ಲ . ಆದರೆ ಮುಂದೆ ತಾನೆ ಅಮ್ಮ ಆದಾಗ ನನ್ನ ಕರ್ತವ್ಯ ನಿರ್ವಹಿಸಿದೆನೇ? ಪ್ರಶ್ನೆಗಳು ಧಾಳಿ ಇಡಲಾರಂಭಿಸಿದವು. ತನ್ನನ್ನು ಸಮರ್ಥಿಸಿಕೊಳ್ಲುವ ಉತ್ತರಕ್ಕಾಗಿ ತಡಕಾಡಿ ಸೋತಳು
**********************************
ವಯಸು ಜಾಸ್ತಿ ಎನ್ನುವುದನ್ನು ಬಿಟ್ಟರೆ
ಮನು ಅಪ್ಪಟ ಚಿನ್ನ . ಚಿನ್ಮಯಿ ಗ್ರೂಪ್ ಅಫ ಕಂಪೆನಿಯ ಸಮಸ್ತ ಆಸ್ತಿಗೂ ಆತನೇ ಒಡೆಯ. ಮನಸು ಬಂಗಾರ. ಅವನ ತಾಯಿಯಂತೂ ಧರೆಗಿಳಿದ ದೇವರೇ ಇರಬೇಕು ಅಂತಹವರು. ಮೊದಲೇ ಮೆತ್ತಗಿದ್ದ ಅವರು ಗಂಡ ಆತನ ತಂಗಿ ಚಿನ್ಮಯಿ ಅಂದರೆ ಶೈಲಾರ ಅಮ್ಮ ಹಾಗು ಶೈಲಾ ಅಪ್ಪ ಕಾರೊಂದರ ಅಪಘಾತದಲ್ಲಿ ಸಿಲುಕಿ ಸತ್ತಾಗ ಜಗತ್ತನ್ನೇ ಕಳೆದುಕೊಂಡವರಂತಾಗಿದ್ದರು. ಆಗಿನ್ನು ಮನುವಿಗೆ ಕೇವಲ ಹದಿನೆಂಟರ ಹರೆಯ . ಈ ಚಿಕ್ಕ ವಯಸಿನಲ್ಲಿಯೇ ಸಂಸಾರದ ಜವಾಬ್ದಾರಿ ಹೆಗಲ ಮೇಲೆರಿತು .ಅವನ ಕಂಪೆನಿಗಳ ಜೊತೆಗೆ ಆರರ ಹರೆಯದ ಶೈಲಾಳ ಜವಾಬ್ದಾರಿ ಹಾಗು ಅವಳ ತಂದೆಯ ಕಂಪನಿಯನ್ನು ನೋಡಿಕೊಳ್ಳಬೇಕಾಯ್ತು. ಮನು ಕಾಲೇಜು ಬಿಟ್ಟ
ತನಗಿದ್ದ ಚಾಕಚಕ್ಯತೆಯನ್ನು ಉಪಯೋಗಿಸಿಕೊಂಡು ಎಲ್ಲವನ್ನೂ ಸರಿ ದೂಗಿಸಿದ. ಬುದ್ದಿವಂತನಾದ್ದರಿಂದ ಎಲ್ಲವನ್ನು ನಿಭಾಯಿಸಿದ . ವಯಸಿನ , ಹಣದ ಅಮಲು ಅವನ ತಲೆಗೇರಲಿಲ್ಲ.
ಶೈಲಗೆ ತಂದೆ ತಾಯಿ ಕೊರತೆಯೇ ತಿಳಿಯಲಿಲ್ಲ. ಅವರಿಗಿಂತ ಹೆಚ್ಚು ಪ್ರೀತಿ, ಕಾಳಜಿ ಈ ಮನೆಯಲ್ಲಿ ಸಿಕ್ಕಿತು. ಅತಿ ಮುದ್ದಿನಿಂದ ಬೆಳೆದಳು. ಅವಳಿಗೇನು ಬೇಕೋ ಅದು ಅವಳು ಕೇಳುವ ಮುಂಚೆಯೇ ಅವಳ ಮುಂದೆ ಹಾಜಾರಾಗುತ್ತಿತ್ತು. ಮಹಾರಾಣಿಗಿಂತ ಒಂದು ಕೈ ಮೇಲೆ ಅವಳ ವೈಭೋಗವಾಗಿತ್ತು. ನೆಮ್ಮದಿ ಮನ ತುಂಬಿತ್ತು.
ಅವಳು ವಯಸಿಗೆ ಬಂದಾಗ ಹದಿನಾಲ್ಕು ವರ್ಷ . ಆಗಲೇ ಮನುವಿನ ಮೇಲೆ ಪ್ರೀತಿ ಮೊಳೆಯಲಾರಂಭಿಸಿತು. ಮನುವಿಗೂ ಅಷ್ಟೇ. ಇಲ್ಲಿಯವರೆಗೆ ಮಗುವಿನಂತಿದ್ದ ಪುಟ್ಟಿ ಮೊಗ್ಗಾಗಿ ಹೂವಾಗಿದ್ದಳು. ಸೌಂದರ್ಯದ ಖನಿ ಅಷ್ಟೆ ಅಲ್ಲಾ ಅವಳ ಮುದ್ದು ಮಾತು, ಹಠ ಎಲ್ಲವೂ ಅವನನ್ನು ಮೋಡಿ ಮಾಡಿತ್ತು. ಇವಳನ್ನು ಬಿಟ್ಟು ಬೇರೆಯವರನ್ನು ಮದುವೆಯಾದರೆ ಎಲ್ಲಿ ಅವುಗಳನ್ನು ಕಳೆದುಕೊಳ್ಳಬೇಕೋ ಎಂದು ಹೆದರಿದ್ದ. ಆದರೆ ವಯಸಿನಲ್ಲಿ ಜಾಸ್ತಿ ಅಂತರವಿದ್ದುದರಿಂದ ಅದನ್ನು ವ್ಯಕ್ತ ಪಡಿಸಲಿಲ್ಲ.
ಆದರೆ ಮನುವಿನ ತಾಯಿ ಇದನ್ನು ಗಮನಿಸಿದರು. ಅವರಾಗಲೇ ನಿರ್ಧರಿಸಿದರು ಶೈಲಾ ತಮ್ಮ ಸೊಸೆಯಾಗಬೇಕೆಂದು.
ಶೈಲಾ ಕಾಲೇಜು ಪದವಿ ಮುಗಿಸಿದಳು. ಅತ್ತೆ ಮದುವೆಯ ಮಾತು ತೆಗೆದಾಗ ಯಾವುದೇ ಮುಚ್ಚು ಮರೆಯಿಲ್ಲದೆ ಮನುವನ್ನು ಮದುವೆಯಾಗುವ ಇಂಗಿತ ವ್ಯಕ್ತ ಪಡಿಸಿದಳು.
ಮನು ಮೊದಲು ತಮ್ಮ ವಯಸಿನ ಅಂತರದ ಬಗ್ಗೆ ಹೇಳಿದ. ಶೈಲಾ ಅದೊಂದು ವಿಷ್ಯವೇ ಅಲ್ಲ ಎಂದಾಗ ಇಬ್ಬರ ಮದುವೆಗೆ ಯಾವ ಆತಂಕವೂ ಇರಲಿಲ್ಲ.
ಮದುವೆ ವಿಜ್ರಂಭಣೆಯಿಂದ ಆಯ್ತು. ಸಡಗರ ಸಂಭ್ರಮ ತುಂಬಿತು
***************************************************************************
ವಿಕಾಸ್ ಮನೆಗೆ ಬಂದಾಗ ರಾತ್ರಿ ಎಂಟು ಘಂಟೆಯ ಮೇಲಾಗಿತ್ತು. ತನ್ನ ಬಳಿ ಇದ್ದ ಕೀ ಉಪಯೋಗಿಸಿ ಬಾಗಿಲು ತೆರೆದ
ಸೋಫಾ ಮೇಲೆ ಹಾಗೆಯೇ ಬಿದ್ದುಕೊಂಡಿದ್ದ ಶೈಲಾಳ ಮೇಲೆ ಕರುಣೆ ಉಕ್ಕಿತು
ರಾಣಿಯಂತೆ ಇದ್ದವಳು. ತಾನೇ ಅವಳ ನೆಮ್ಮದಿಗೆ ಮುಳ್ಳಾದೆನೇ ಎಂದನಿಸಿತು.
ಹತ್ತಿರ ಹೋಗಿ ಅವಳ ಹಣೆಯ ಮೇಲೆ ಕೈ ಇಟ್ಟ.
ಶೈಲಾ ಎಚ್ಚರವಾದಳು.
ಮಾತಾನಾಡಲಿಲ್ಲ ಮುಖವನ್ನು ಸೋಫಾ ಕಡೆ ತಿರುಗಿಸಿ ಮುಖ ಮರೆಸಿದಳು
"ಸಾರಿ ಶೈಲಾ ನಾನು ಹಾಗೆ ಮಾತಾಡಬಾರದಿತ್ತು. ಏನ್ಮಾಡೋದು ಕೆಲಸದ ಒತ್ತಡ. ದಿನಕ್ಕೊಬ್ಬರನ್ನ ಮನೆಗೆ ಕಳಿಸ್ತಾ ಇದ್ದಾರೆ . ಅದೆಲ್ಲಾ ಸೇರಿ ಹೀಗಾಯ್ತು ತಪ್ಪಾಯ್ತು ಚಿನ್ನ " ಅವಳ ಮುಖವನ್ನು ತನ್ನೆಡೆಗೆ ತಿರುಗಿಸಿಕೊಂಡು ಹಣೆಗೆ ಚುಂಬಿಸಿದ.
ಶೈಲಾಳ ಕಣ್ಣಲ್ಲಿ ನೀರು ಕಂಡು ಗಾಭರಿಯಾದ
"ಚಿನ್ನು ಸಾರಿ ಕೇಳಿದೆನಲ್ಲಾ . ಇನ್ಯಾಕೆ ಅಳು?" ಅವಳ ಕಣ್ಣೊರೆಸಿದ
"ವಿಕಿ ನಂಗ್ಯಾಕೋ ಹೋಮ್ ಸಿಕ್‌ನೆಸ್ ಕಾಡ್ತಾ ಇದೆ. ರಿಯಲಿ ಐ ಫೀಲ್ ಆ ಯಾಮ್ ಮಿಸ್ಸಿಂಗ್ ದೆಮ್"
ಬಿಕ್ಕಳಿಸಿದಳು
ವಿಕಾಸನಿಗೆ ಅರ್ಥವಾಯ್ತು.
ಅವನೂ ಅವಳನ್ನು ಆ ನೆನಪುಗಳಿಂದ ಹೊರತರಲು ತನ್ನೆಲ್ಲಾ ಪ್ರಯತ್ನವನ್ನೂ ಮಾಡುತ್ತಿದ್ದ.
"ಚಿನ್ನೂ ಈಗ ನಾವು ಹೊಸ ಬಾಳು ನಡೆಸ್ತಾ ಇದ್ದೀವಿ ದಯವಿಟ್ಟು ಹಳೆಯ ನೆನಪುಗಳ ಹಿಂದೆ ಹೋಗಬೇಡ . ಅದರ ಹಿಂದೆ ನಡೆದರೆ ಬಾಳು ನರಕ ಆಗುತ್ತೆ. ನನ್ನ ಜೊತೆ ಹೆಜ್ಜೆ ಹಾಕು . ಪ್ರತಿ ಹೆಜ್ಜೆಯಲ್ಲೂ ನಾ ನಿನ್ನ ಜೊತೆಗಿರ್ತೇನೆ ಐ ಲವ್ ಯು ಶೈಲೂ ನೀನು ಹೀಗೆ ಮಂಕಾದರೆ ನಂಗೆ ನೋಡಕಾಗಲ್ಲ"
ಶೈಲಾಳನ್ನು ತನ್ನ ಎದೆಗೆ ಒರಗಿಸಿಕೊಂಡ. ಅಷ್ಟು ಬೇಗ ಅವಳಿಗೆ ಸಮಾಧಾನವಾಗುವುದಿಲ್ಲ ಅದು ಅವನಿಗೆ ಗೊತ್ತು ಶೈಲಾಳನ್ನು ತಾನು ಪ್ರೇಯಸಿಯಂತೆ ಕಂಡರೆ ಮನು ಅವಳನ್ನು ಮಗುವಿನಂತೆ ರಮಿಸುತ್ತಿದ್ದ ಅದು ವಿಕಾಸನಿಂದ ಆಗದ ಕೆಲಸ.
ರಾತ್ರಿ ಹೋಟೆಲಿನಿಂದ ಊಟಕ್ಕೆಂದು ತಂದ ತಿಂಡಿ ಹಾಗೆ ಉಳಿಯಿತು.
ಶೈಲಾ ತನ್ನ ಗುಂಗಿನಿಂದ ಹೊರ ಬರಲಿಲ್ಲ.
ವಿಕಾಸ್ ತನ್ನ ನೆನಪುಗಳಲಿ ಮುಳುಗಿದ.
ಅಂದಿನ ರಾತ್ರಿ ಅವರಿಬ್ಬರ ಮನಗಳಲ್ಲಿನ ಯೋಚನೆ ಮಾತ್ರ ಒಂದೇ ಆಗಿತ್ತು
*************************ಇನ್ನೂ ಇದೆ*********************************************************

Tuesday, August 25, 2009

ಎರೆಡು ದಡಗಳ ನಡುವೆ

ಮೊಬೈಲ್ ಟ್ರಿಣ್ ಟ್ರಿಣ್ ಎಂದನ್ನುತ್ತಿದ್ದಂತೆಯೇ ವಿಕಾಸನ ಕಣ್ಣುಗಳು ಆ ಹೆಸರನ್ನು ಓದಿತು .ಶೈಲಾ .... ಇದು ಬೆಳಗಿನಿಂದ ಹತ್ತನೇ ಸಾರಿ.
"ಯಾಕೆ ಮತ್ತೆ ಮತ್ತೆ ಕಾಲ್ ಮಾಡುತ್ತಿದ್ದಾಳೆ . ಇವಳು?"ಪ್ರಶ್ನೆಸಿಕೊಂಡವನಿಗೆ ಉತ್ತರ ಸಿಗಲಿಲ್ಲ
ಕಾಲ್ ರಿಸೀವ್ ಮಾಡಿದ
"ಏನು ಶೈಲಾ?" ಅವನಿಗರಿವಿಲ್ಲ್ದದಂತೆಯೇ ಅವನ ದನಿಯಲ್ಲಿ ಬೇಸರ ಕಾಣಿಸಿತು
"ವಿಕಿ . ಊಟ ಆಯ್ತಾ"ಅಲ್ಲಿಂದ ಅವಳ ದನಿ ಏನೋ ಕೇಳಲೇ ಬೇಕೆ ಎಂಬುದಕ್ಕೆ ಕೇಳಿದ್ದು ವಿಕಾಸನಿಗೆ ರೇಗಿತು.
"ಹ್ಯಾವ್ ಯು ಗಾನ್ ಮ್ಯಾಡ್?. ಇದು ನಾಲ್ಕ್ಕು ಘಂಟೆ ಊಟದ ಸಮಯಾನಾ? ಸುಮ್ ಸುಮ್ನೆ ಕಾಲ್ ಮಾಡಿ ನನ್ನ ಡಿಸ್ಟರ್ಬ್ ಮಾಡಬೇಡ ಏನ್ ಬೇಕು ಅಂತ ಹೇಳು " ವಿಕಾಸ ದನಿಯನ್ನು ಏರಿಸಿದ್ದ ಪಕ್ಕದ ಕ್ಯಾಬಿನ್‌ನಿಂದ ಸಿಮಿ ಎದ್ದು ನಿಂತು ನೋಡಿದ್ದು ಕಾಣಿಸಿತು. ಮುಜುಗರವಾಯ್ತು.
"ಸಾರಿ ವಿಕಿ."
ಫೋನ್ ಆಫ್ ಮಾಡಿದ ಸದ್ದು ಕೇಳಿತು.
ಸಿಮಿ ನೋಡುತ್ತಲೇ ನಿಂತಿದ್ದಳು ಮೊದಲೇ ತನ್ನ ಜೀವನ ನಗೆ ಪಾಟಲಾಗಿದೆ. ಇನ್ನು ಇದು ಬೇರೆ.
ವಿಕಾಸ ತಲೆ ತಗ್ಗಿಸಿದ
ಇತ್ತ
ಶೈಲಾಳ ಕಣ್ಣಲ್ಲಿ ನೀರು ಮುತ್ತುಗಳಂತೆ ಉದುರುತ್ತಿತ್ತು. ಕಂಪ್ಯೂಟರ್ ಕೀ ಬೋರ್ಡ್ ಮೇಲೆ ಬೀಳುತ್ತಿದ್ದುದು ಅವಳ ಗಮನಕ್ಕೆ ಬರಲಿಲ್ಲ.
ಯಾಕೆ ಏನಾಗಿದೆ ತನಗೆ . ಇದು ಸರೀನಾ ? ಮತ್ತೆ ಮತ್ತೆ ಏಕೆ ಅವ ನೆನಪಾಗುತ್ತಿದ್ದಾನೆ . ಮರೆತೆ ಹೋಗುತ್ತೇನೆಂದು ಎದ್ದು ಬಂದಿದ್ದಲ್ಲವೇ ತಾನು ?. ಆ ಬಂಧ ಬೇಡವೆಂದು ತಾಳಿಯ ಸಮೇತ ಕಳಚಿಟ್ಟವಳಲ್ಲವೇ ತಾನು?
ವಿಕಾಸನ ಜೊತೆಯಲ್ಲಿ ಜೀವನವೇ ಸ್ವರ್ಗವಾಗಿದೆ . ಮತ್ತೇಕೆ ಅವನ ನೆನಪು ಬೇಡವೆಂದರೂ ಒದ್ದೊದ್ದು ಬರುತಿದೆ?.
"ಪ್ಲೀಸ್ ಕಮ್ ಆನ್‌ಲೈನ್ " ಅದು ರಾಬರ್ಟನ ಮೇಲ್ ಟೊರೋಂಟೋದ ಕ್ಲೈಂಟ್ ಅವನು.
ಕೂಡಲೇ ಚಾಟಿಂಗ್‌ಗೆ ಸ್ವಿಚ್ ಮಾಡಿದಳು. ಕಣ್ಣಲ್ಲಿನ ನೀರಿನ್ನೂ ಆರಿರಲಿಲ್ಲ.
******************************
ಮೀಟಿಂಗ್ ಮುಗಿಸಿ ಬಂದು ಉಸ್ಸೆಂದು ಕುಳಿತ ವಿಕಾಸನ ದೃಷ್ಟಿ ಆಯಾಚಿತವಾಗಿ ಮೊಬೈಲ್ ಮೇಲೆ ಬಿತ್ತು.
ಆಗಿನಿಂದ ಯಾವುದೇ ಕಾಲ್ ಮಾಡಿಲ್ಲ. ಪಾಪ ಎನಿಸಿತು ಶೈಲಾ.ಛೆ ತಾನೇಕೆ ಇಷ್ಟೊಂದು ಗಡುಸಾಗಿ ವರ್ತಿಸಿದೆ. ಎಷ್ಟು ನೋವಾಯಿತೋ ಏನೋ
ಪಾಪ ಏನ್ ಹೇಳಬೇಕಿತ್ತೋ. ನನಗಾಗಿ ಎಲ್ಲವನ್ನೂ ಎಲ್ಲರನ್ನೂ ತೊರೆದು ಬಂದವಳು . ತನ್ನ ಪ್ರಾಣವ ನ್ನೇ ನನ್ನ ಪ್ರೀತಿಗೆ ಒತ್ತೆ ಇಟ್ಟವಳು. ನನಗಲ್ಲದೆ ಇನ್ನಾರಿಗೆ ಫೋನ್ ಮಾಡಬೇಕು ಅವಳು.
ಶೈಲಾಳಿಗೆ ಕಾಲ್ ಮಾಡಿದ.
ಫೋನ್ ರಿಸೀವ್ ಮಾಡಿದರೂ ಅತ್ತ ಕಡೆಯಿಂದ ಹಲೋ ಬರಲಿಲ್ಲ
"ಹಲೋ ಏಕೆ ಚಿನ್ನ? ಕೋಪಾನಾ. ಸಾರಿ ಕಣೋ ತುಂಬಾ ಬ್ಯುಸಿ ಇದ್ದೆ." ವಿಕಾಸನ ಮಾತಿಗೆ ಪ್ರತಿ ಉತ್ತರ ಬರಲಿಲ್ಲ.
ಬರೀ ನಿಟ್ಟುಸಿರು
ಆವನಿಗೆ ಗೊತ್ತು
ಅವಳು ಹಾಗೆಲ್ಲಾ ಸುಲಭಕ್ಕೆ ಕರಗುವಳಲ್ಲ ಎಂದು. ಆದರೂ ಅದು ಸ್ವಲ್ಪ ಹೊತ್ತು ಎಂಬುದೂ ಗೊತ್ತಿತ್ತು
ಫೋನ್ ಕಟ್ ಮಾಡಿದಳು.
ನಗುತ್ತಾ ಮತ್ತೆ ಫೋನ್ ಮಾಡಿದ.
ಈ ಸಲ ಶೈಲಾ ರಿಸೀವ್ ಮಾಡಲಿಲ್ಲ.

ಮನೆಗೆ ಹೋಗಿ ಮಾತಾಡೋಣ ಎನಿಸಿತು ವಿಕಾಸ್‌ಗೆ
ಮತ್ತೆ ಡಯಲ್ ಮಾಡುವ ಗೋಜಿಗೆ ಹೋಗಲಿಲ್ಲ.
**********************
ಶೈಲಾಗೆ ನಿಜಕ್ಕೂ ವಿಕಾಸನ ಮೇಲೆ ಕೋಪವಿರಲಿಲ್ಲ ಇದ್ದುದೆಲ್ಲಾ ತನ್ನ ಮೇಲೇಯೇ. ತನ್ನ ಬದಲಾಗುತ್ತಿರುವ ಮನಸಿನ ಮೇಲೆ. ತನ್ನ ಭಾವನೆಗಳ ಮೇಲೆ. ತನ್ನ ವರ್ತನೆಯ ಮೇಲೆಯೇ.
ಇದನ್ನು ಯಾರಿಗಾದರೂ ಹೇಳಿದರೆ ಒಂದೋ ಹುಚ್ಚಿ ಎನ್ನುತ್ತಾರೆ ಅಥವ ಬೇರಿನ್ನಾದರೂ ರೋಗದ ಹೆಸರು ಹೇಳಬಹುದು .
ತಲೆಯಮೇಲೆ ಹೊಡೆದುಕೊಂಡು ಮತ್ತೆ ಕೆಲಸದಲ್ಲೀ ತಲ್ಲೀನಳಾದಳು . ಆದರೂ ಆಗಾಗ ಅವನು ಮನು ಮತ್ತೆ ಮತ್ತೆ ನೆನಪಿಗೆ ಬರುತ್ತಿದ್ದಾನೆ.
************************************
ಕಂಪನಿ ಬಿಟ್ಟೊಡನೆ ಓಡೋಡಿ ಶೈಲಾಳನ್ನು ನೋಡುವ ಆಸೆ ಅಧಿಕವಾಗಿತ್ತು. ವಿಕಾಸ್ ಬೈಕ್ ಸ್ಟಾರ್ಟ್ ಮಾಡುತ್ತಿದ್ದಂತೆ ಪಕ್ಕದಲ್ಲಿದ್ದ ಕಾರ್ನಲ್ಲಿ ಮನು ಕಾಣಿಸಿದ . ಅವನು ವಿಕಾಸನೆಡೆಗೆ ನೋಡುತ್ತಲೇ ಇದ್ದಂತೆ ಕಾರ್ ಮುಂದೆ ಹೋಗಿ ಮರೆಯಾಯಿತು. ತಲೆ ಎತ್ತುವ ಧೈರ್ಯವಾಗಲಿಲ್ಲ ವಿಕಾಸ್‌ಗೆ. ಒಂದು ರೀತಿಯ ಅಪರಾಧಿ ಪ್ರಜ್ನೆ ಕಾಡತೊಡಗಿತು. ಮನುವಿನ ನೋಟ ಇವನನ್ನು ಇರಿದಂತೆ ನೋವಾಗತೊಡಗಿತು. ಹೃದಯ ಗೊತ್ತಿಲ್ಲದಂತೆ ಅಧೀರವಾಗತೊಡಗಿತು. ಹಾಗೆಯೇ ಬೈಕ್ ಓಡಿಸುತ್ತಾ ಬಂದಂತೆ ಮನೆಗೆ ಹೋಗುವ ಮನಸು ದೂರ ಹೋಯಿತು. ಪಕ್ಕದಲ್ಲಿ ಕಂಡ ಕಾಫಿ ಡೇಗೆ ನುಗ್ಗಿ ನಿಟ್ಟುಸಿರು ಬಿಡುತ್ತಾ ಕೂತ. ತಲೆ ಧಿಮ್ಮೆಂದಿತು. ಹಾಗೆ ತಲೆ ಒತ್ತಿ ಹಿಡಿದು ಕಣ್ಣು ಮುಚ್ಚಿ ಕುಳಿತ . ಕಣ್ಣ ಮುಂದೆ ನೂರೆಂಟು ಚಿತ್ರಗಳು ತಲೆಯಲ್ಲಿ ನೂರಾರು ಭಾವಗಳು ಕುಣಿಯತೊಡಗಿದವು.

******************************
ಕಾರ್ ಮುಂದೆ ಹೋಗುತ್ತಿದ್ದರೂ ಮನುವಿನ ನೋಟ ಹಿಂದೇಯೇ ಇತ್ತು .
ಎಲ್ಲಾದರೂ ಶೈಲಾ ಕಾಣಬಹುದೆನ್ನುವ ಕಾತುರತೆ ಅದು. ಆದರೆ ಗೊತ್ತು ಅವಳು ಈಗಾಗಲೇ ಈ ಕಂಪನಿ ಬಿಟ್ಟು ಬೇರೊಂದು ಕಡೆ ಸೇರಿದ್ದಾಳೆಂದು. ಅವಳು ಮಾಡಿದ ಅಪಮಾನ ಅವನಿಗೆಂದೂ ಅಪಮಾನವೆನಿಸಲೇ ಇಲ್ಲ. ಸಣ್ಣ ಮಗುವು ಚಂಡಿ ಹಿಡಿದಂತೆ ಬಾಲಿಷ ವರ್ತನೆ ಅದು.
ಬಳಿಯಲ್ಲಿದ್ದ ಸಿರಿಯನ್ನು ಅಪ್ಪಿ ಹಿಡಿದ . ಪುಟ್ಟ ಮಗು ಅಮ್ಮನ ಬಳಿಯಲ್ಲಿ ಇರಬೇಕಾದ್ದು. ಆದರೆ ಮಗುವಿನಂತಹ ಅಮ್ಮ ರಚ್ಚೆ ಹಿಡಿದು ಗೊಂಬೆ ಬದಲಾಯಿಸಿದಂತೆ ಸಂಗಾತಿಯನ್ನು ಬದಲಿಸಿಕೊಂಡಾಗ ಸಿರಿ ತಾನೆ ಏನು ಮಾಡುತ್ತಾಳೆ? ಅರಿವಿಲ್ಲದಂತೆ ಕಣ್ಣು ಒದ್ದೆಯಾಯ್ತು
ಸಿರಿ ತನ್ನ ಪುಟ್ಟಬೆರಳಿನಿಂದ ಅಪ್ಪನ ಕೆನ್ನೆಯ ಮೇಲೆ ಜಿನುಗಿದ್ದ ಹನಿಯನ್ನು ಒರೆಸಿತು.
ಅವಳ ಹಣೆಗೊಂದು ಹೂಮುತು ಕೊಟ್ಟು ಎದೆಗೊರಗಿಸಿಕೊಂಡ.
ಕನ್ನಡಿಯಲ್ಲಿ ಈ ದೃಶ್ಯ ನೋಡಿ ಡ್ರೈವರ್ ರಾಮುವಿನ ಕಂಗಳು ತುಂಬಿದವು.

****************************************************

ಶೈಲಾ ಮನುವಿಗೆ ಸೋದರತ್ತೆಯ ಮಗಳು ಇಬ್ಬರ ವಯಸಿನ ಅಂತರ ಹನ್ನೆರೆಡು ವರ್ಷಗಳು . ಶೈಲಾ ಮನುವಿನ ಮಡಿಲಲ್ಲಿಯೇ ಬೆಳೆದವಳು. ತಾಯಿ ಇಲ್ಲದ ಮಗುವೆಂದು ಸೋದರತ್ತೆ ಬಹಳ ಪ್ರೀತಿಯಿಂದ ನೋಡಿಕೊಂಡಿದ್ದರು. ಅದಕ್ಕಿಂತ ಹೆಚ್ಚಾಗಿ ಮನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ.
ರೆಪ್ಪೆಯಂತೆ ಕಣ್ಣಿನಂತೆ ಜೋಪಾನ ಮಾಡಿದ್ದ. ಅವಳೂ ಅಷ್ಟೇ ಮನುವಿನ ಸಾಂಗತ್ಯದಲ್ಲಿ ತನ್ನ ತಾಯಿ ಇಲ್ಲದ ನೋವನ್ನು ಮರೆಯುತ್ತಿದ್ದಳು
*********************************** ಇನ್ನೂ ಇದೆ .*********************

ಕಳಂಕಿತೆಯ ಮುಂದುವರೆದ ಭಾಗ ತಮ್ಮ ವಿನಯನಿಂದ

[ನಾನು ಕಥೆ ಮುಂದುವರೆಸಲಾಗದೇ ಒದ್ದಾಡುತ್ತಿದ್ದಾಗಲೇ ತಮ್ಮ ವಿನಯ ಈ ಕತೆಯನ್ನು ಹೀಗೆ ಮುಗಿಸಿದ್ದಾನೆ over to vinay]
ಕೆಲಸ ವಿಲ್ಲದ ಆಚಾರಿ ಏನೋ ಮಾಡಿದನಂತೆ ಹಾಗೆ ಸ್ವಲ್ಪ ಫ್ರೀ ಇದ್ದೆ ಅದಕ್ಕೆ ಏನೇನೋ ಗಿಚಿದ್ದೇನೆ , ಫ್ರೀ ಇದ್ದಾಗ ಓದಿ . ನಿಮ್ಮ ಕಥೆಗೆ ನಾ ಬರೆದ ಕ್ಲೈಮ್ಯಾಕ್ಸ್. ವ್ಯಾಕರಣ ತಪ್ಪಿದೆ , ಬರೆಯೋವಷ್ಟು ವ್ಯವಧಾನ ವಿರಲಿಲ್ಲ , ಹಾಗೆ ಸುಮ್ಮನೆ ಬಿಡಲು ಕೂಡ ]

ಎಷ್ಟು ಸುತ್ತಿದರೂ ಗಾಣದ ಎತ್ತಿಗೆ ಚಾಟಿಯ ಏಟು ತಪ್ಪಿದ್ದಲ್ಲ ಅನ್ನೋ ಹಾಗೆ ಒಂದು ಮುಗೀತು ಅನ್ನೋವಷ್ಟರಲ್ಲಿ ಇನ್ನೊಂದು ಬಂದು ಅಪ್ಪಳಿಸಿ ಸುಧಾಕರನನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಜರ್ಜರಿತ ಗೊಲಿಸತೊಡಗಿತು. ಮೊದಲು ಹೆಂಡತಿಯ ಮೇಲೆ ಆತ್ಯಾಚಾರ , ಅನಂತರ ಅಮ್ಮನ ಮೇಲು ಇಂತದ್ದೆ ಒಂದು ಕಳಂಕ ಬಂದಿತ್ತೆಂಬ ಸತ್ಯದ ಅರಿವು, ಈಗ ನಾನು ಯಾರನ್ನು ೩೦ ವರ್ಷದಿಂದ ಅಮ್ಮ ಎಂದು ಪ್ರಿತಿಸುತಿದ್ದೇನೋ ಆ ಅಮ್ಮ ನನ್ನಮ್ಮ ಅಲ್ಲ ಎಂಬ ಕಟ್ಹೊರ ಸತ್ಯ , ಒಂದು ರೀತಿಯಲ್ಲಿ ಗುಡುಗು ಸಿಡಿಲು ಗಳೊಂದಿಗೆ ಬಂದೆರಗಿದ ಕುಂಭದ್ರೋಣ ಮಳೆಯನಾಗಿತ್ತು ಇವೆಲ್ಲವೂ ಅವನಿಗೆ. ಮನಸಿನಲ್ಲಿ ಎಲ್ಲವೂ ತಿಳಿಯಿತಲ್ಲ ಅನ್ನೋ ಯೋಚನೆ ಬಂದರೂ ಮುಂದೆ ಇನ್ನು ಏನು ಕಾದಿದೆಯೋ ಅಂತ ಅಮ್ಮನ ಮುಖವನ್ನೇ ನೋಡುತ್ತಾ ಕುಳಿತ.ಅವನ ನಿರೀಕ್ಷೆ ಹುಸಿ ಮಾಡದಂತೆ ರಮಾ ಮುಂದುವರೆಸಿದರು. ನಿನ್ನ ತಾಯಿನೇ ಅದು ಅಂತ ಹೇಳಿದೆ ಹೊರತು ಅದು ನಾನಲ್ಲ ಅಂತ ಶುರು ಮಾಡಿಕೊಂಡರು ರಮಾ. ಅವರ ಬದುಕು ಎಂಬ ಇತಿಹಾಸದ ಒಂದೊಂದೇ ಪುಟಗಳನ್ನ ತಿರುವಿ ಹಾಕ ತೊಡಗಿದರು ರಮಾ. ಇವನ ಅಮ್ಮನ ಮೇಲೆ ಅತ್ಯಾಚಾರ ವೆಸಗಿದ ವ್ಯಕ್ತಿ ಬೇರಾರು ಅಲ್ಲ ತನ್ನ ಗಂಡ ಶಿವಾನಂದನೆ ಅನ್ನೋ ಮಾತು ಹೇಳೋವಾಗಲಂತೂ ತಾನು ಇನ್ನು ಬದುಕಿರಬೇಕಿತ್ತ ಅನ್ನೋ ಹಾಗೆ ಆಗಿ ಹೋಗಿತ್ತು ರಮಾ ಅವರಿಗೆ. ಕಲಾ ( ಸುಧಾಕರನ ಹೆತ್ತ ತಾಯಿ) ಚಂದ್ರುವಿನೊಡನೆ ಸುಖವಾಗಿ ಇದ್ದಂತೆ ಕಾಣುತ್ತಿದ್ದಲಾದಳು ಅದು ತೋರಿಕೆ ಅಷ್ಟೇ ಆಗಿತ್ತು.ಚಂದು ಮೊದ ಮೊದಲು ಚೆನ್ನಾಗೆ ಇದ್ದರೂ ಬರುಬರುತ್ತಾ ಇವಳ ಹೊಟ್ಟೆಯಲ್ಲಿ ಬೆಳೆಯುತಿದ್ದ ಮಗುವನ್ನು ನೋಡಿ ಹುಚ್ಹನಂತೆ ವರ್ತಿಸ ತೊಡಗಿದ್ದ, ಜೊತೆಗೆ ಕುಡಿತ ಬೇರೆ ಸೇರಿಹೋಯಿತು.ಇನ್ನೇನು ಹೆರಿಗೆಯ ದಿನಗಳು ಹತ್ತಿರ ಬರುತ್ತಿವೆ ಅನ್ನೋವಷ್ಟರಲ್ಲಿ ಅವನ ಈ ಪೈಶಾಚಿಕ ವರ್ತನೆ ಮಿತಿ ಮಿರಿ ಹೋಯಿತು. ನಡು ರಾತ್ರಿ ಹೊರಗಡೆ ಬಾರಿ ಮಳೆ ಆ ವೇಳೆಯಲ್ಲೇ ಮನೆಗೆ ಬೇರೊಬ್ಬ ಹೆಂಗಸಿನೊಂದಿಗೆ ಬಂದ ಚಂದ್ರು ಯಾವ ಸೂಚನೆಯನ್ನು ಕೊಡದೆ ಆ ಗರ್ಭಿಣಿಯನ್ನು ಹೊರ ಎಸೆದಿದ್ದ. ಮೊದಲೇ ತುಂಬು ಗರ್ಭಿಣಿ ಹೇಗೋ ಸುಧಾರಿಸಿಕೊಂಡು ಅಲ್ಲೇ ಸ್ವಲ್ಪ ದೂರ ಇರುವ ಸರ್ಕಾರಿ ದವಾಕಾನೆಗೆ ಬಂದಿದ್ದಳು, ಅವಳ ಅದೃಷ್ಟವೋ ಏನೋ ಸ್ವಲ್ಪ ಎದೆ ನೋವು ಎಂದು ಅದೇ ಅಪರಿಚಿತ (ಶಿವಾನಂದ) ಅಲ್ಲಿ ಸೇರಿಕೊಂಡಿದ್ದ.ಅವನನ್ನು ನೋಡಿಕೊಳ್ಳಲು ಬಂದ ರಮಾ ಕೂಡ ಅಲ್ಲೇ ಇದ್ದಳು. ಸವತಿಯಾಗಿ ಸ್ವಿಕರಿಸಲು ಇಷ್ಟವಿಲ್ಲದಿದ್ದರೂ ಕಲಾ ಮೇಲೆ ಅವಳಿಗೆ ಯಾವುದೇ ವೈಯಕ್ತಿಕ ದ್ವೇಷ ಇರಲಿಲ್ಲ , ತನ್ನ ಗಂಡನಿಂದಾಗಿ ಹೀಗಾಯಿತಲ್ಲ ಅನ್ನೋ ನೋವು ಮಾತ್ರ ಇತ್ತು. ಸಾವು ಮತ್ತು ಬದುಕಿನ ನಡುವೆ ಹೋರಾಟ ಮಾಡುತ್ತಾ ಅಲ್ಲಿಗೆ ಬಂದ ಕಲಾಳನ್ನು ತಾನೇ ಅಲ್ಲಿ ಸೇರಿಸಿ ಹೇಗಾದರು ಮಾಡಿ ಅವಳನ್ನು ಉಳಿಸಿಕೊಳ್ಳಬೇಕು ಅನ್ನೋ ಪಣ ತೊಟ್ಟಿದ್ದಳು ರಮಾ. ಅವಳು ಎಣಿಸಿದ್ದೆ ಒಂದು ವಿಧಿ ಬರೆದಿದ್ದೆ ಒಂದು ಆಗಿತ್ತು , ತೀವ್ರ ಎದೆ ನೋವಿನಿಂದ ಒಂದು ಕಡೆ ಶಿವಾನಂದ ಕೊನೆ ಉಸಿರೆಳೆದರೆ , ಬದುಕೇ ಬೇಡ ಎಂದುಕೊಂಡಿದ್ದ ಕಲಾ ಮತ್ತೊಂದು ಕಡೆ ಇಹ ವನ್ನು ತ್ಯಜಿಸಿಆಗಿತ್ತು. ಇವರಿಬ್ಬರ ಕುರುಹು ಅಂತ ಉಳಿದಿದ್ದು ಒಂದೇ ಅದೇ ಈಗ ಸುಧಾಕರ ಅನ್ನಿಸಿಕೊಂಡಿರೋ ಆ ಹಸುಳೆ ಅನ್ನೋ ಮಾತು ಹೇಳಿ ಮುಗಿಸುವಷ್ಟರಲ್ಲಿ ರಮಾಗೆ ಸಾಕು ಸಾಕಾಗಿ ಹೋಗಿತ್ತು. ಬಲೆಯಲ್ಲಿ ಸಿಕ್ಕ ಮೀನಿನಂತೆ ಎಷ್ಟು ಹಾರಿದರು ಮತ್ತೆ ಅದೇ ಬಲೆಯೊಳಗೆ ಬಿಳುವಾನ್ತಾಗಿತ್ತು ಸುಧಾಕರನ ಪರಿಸ್ಥಿತಿ ,ಇನ್ನು ಅಲ್ಲಿ ಮಾತಿಗೆ ಬೆಲೆ ಇಲ್ಲ ಎಂದು ಅರಿತ ರಮಾ ಹೊರ ಹೋಗಿ ಆಗಿತ್ತು. ಪಿಸು ಪಿಸು ದ್ವನಿ ಕೇಳಿ ಹೊರ ಬಂದಿದ್ದ ಪ್ರೀತಿಗೆ ಎಲ್ಲ ಅರಿವಾಗಿತ್ತು. ಮರುದಿನ ಬೆಳಿಗ್ಗೆ ೫ ಕ್ಕೆ ಎದ್ದು ಜಾಗಿಂಗ್ ಗೆ ಅಂತ horaಟ ಸುಧಾಕರ ತನ್ನ ಓಟ ವನ್ನ ನಿಲ್ಲಿಸುವುದಿಲ್ಲ ಅನ್ನೋ ಅರಿವು ಮುಗ್ಧ ಅತ್ತೆ ಸೊಸೆಗೆ ತಿಳಿದಿರಲಿಲ್ಲ.ಅವನ್ ಹಿಂದೆಯೇ ಪ್ರೀತಿ ಎಂಬ ಹುಡುಗಿಯ ಭವಿಷ್ಯದಲ್ಲಿ ಮತ್ತೆ ಏಳಬಹುದಾದ ಇತಿಹಾಸ ಗಳೆಂಬ ಈ ಕತೆಗಳು ಮಾರೆಯಾಗುತಿದ್ದುದ್ದು ಸ್ಪಷ್ಟವಾಗಿ ಗೋಚರವಾಗುತಿತ್ತು.
ಇಂತಿ ವಿನಯ

Wednesday, August 5, 2009

ಕಳಂಕಿತೆಯನ್ನು ಮುಂದುವರೆಸಲು ಮನಸು ಬರುತ್ತಿಲ್ಲ ಕ್ಷಮಿಸಿ

ಆತ್ಮೀಯ ಸ್ನೇಹಿತರೆ
ಇಲ್ಲಿಯವರೆಗೂ ಕಳಂಕಿತೆಗೆ ಒಂದು ಅಂತ್ಯ ಬರೆಯಲಾಗುತ್ತಿಲ್ಲ. ಇದು ನನ್ನ ಆತ್ಮೀಯ ಸ್ನೇಹಿತೆಯೊಬ್ಬಳ ಬಾಳಿನ ಭಾಗಶ: ಚರಿತ್ರೆ. ಅವಳನ್ನು ನೆನಪಿಟ್ಟುಕೊಂಡು ಇದನ್ನ ಬರೆದೆ ಆದರೆ ಅವಳಾಗಲೇ ಗಂಡನಿಂದ ಕಳಂಕಿತೆ ಎಂದು ಪರಿತ್ಯಕ್ತಳಾಗಿದ್ದಾಳೆಂದು ತಿಳಿದ ಮೇಲೂ ನನ್ನ ಕಥೆಯನ್ನು ಸುಖಾಂತ್ಯ ಗೊಳಿಸಲು ಮನಸಾಗಲಿಲ್ಲ. ಹಾಗೆಂದು ವಿಪರ್ಯಾಸದ ಅಂತ್ಯ ತೋರಿಸುವುದು ಉತ್ತಮವಲ್ಲ ಅನ್ನಿಸಿತು. ಹಾಗಾಗಿ ಮನಸು ಗೊಂದಲದ ಗೂಡಾಗಿತ್ತು .
ಕೊನೆಗೂ ನಿರ್ಧರಿಸಿದೆ ಇದರ ಅಂತ್ಯ ಮಾಡಲೇಬಾರದೆಂದು
ಮುಂದೆಂದಾದರೂ ಬಾಳಿನಲ್ಲಿ ಇಂತಹ ಸಂದರ್ಭದಲ್ಲೂ ಹೆಂಡತಿಯನ್ನುಹೆಂಡತಿಯನ್ನಾಗಿಯೇ ಸ್ವೀಕರಿಸುವವರನ್ನು ಕಂಡರೆ ಇದನ್ನು ಸುಖಾಂತ್ಯಗೊಳಿಸುತ್ತೇನೆ . ಈ ನಡುವೆ ನಿಮಗಾರಿಗಾದರೂ ಇದರ ಅಂತ್ಯ ಭಿನ್ನವಾಗಿ ಹೇಳುವ ಕಲ್ಪನೆ ಇದ್ದರೆ ಅದಕ್ಕೆ ಸ್ವಾಗತ
ನನ್ನ ಮೇಲ್ ಐಡಿ roopablrao@nobleeducation.org