Friday, February 27, 2009

ವಿದಾಯ-೨

ಮಗಳನ್ನು ಮೊದಲ ರಾತ್ರಿಯ ಕೋಣೆಗೆ ಕಳಿಸಿ ಮಂಚದ ಮೇಲೆ ಉರುಳಿದಳು ಪ್ರಮೀಳಾ. ನಾಳೆಯ ವಿದಾಯಕ್ಕೆ ಸಿದ್ದತೆಗಳನ್ನುಮಾಡುತ್ತಿದ್ದಂತೆ ಹಳೆಯ ನೆನಪುಗಳ ಮರ ಚಿಗುರತೊಡಗಿತು.

ಪ್ರಮೀಳಾ ಹಾಗು ಶ್ರೀನಿವಾಸ್‌ ಒಬ್ಬರನೊಬ್ಬರು ಪ್ರೀತಿಸಿ ಮದುವೆಯಾದರು ಮನೆಯಲ್ಲಿಯೂ ಅಂತಹ ವಿರೋಧವೇನು ಇರಲಿಲ್ಲ . ಏಕೆಂದರೆ ಪ್ರಮೀಳಾಗೆ ಹದಿನೆಂಟರ ಹರೆಯದಲ್ಲಿಯೇ p w d ಯಲ್ಲಿ ಕೆಲಸ ಸಿಕ್ಕಿತ್ತು. ಅವಳ ಸಂಬಳವೂ ಆಗ ಜೋರಾಗಿಯೇ ಇತ್ತು . ಹಾಗೆ ಶ್ರೀನಿವಾಸ್ ಸಹಾ ಕೆ.ಇ.ಬಿ ನಲ್ಲಿ ಕೆಲಸ ಮಾಡುತ್ತಿದ್ದ. ಕಾಲೇಜುದಿನಗಳಿಂದಲೆ ಒಬ್ಬರೊನೊಬರು ಪ್ರೀತಿಸುತ್ತಿದ್ದರು.

ಮೆಚ್ಚಿದ ಮಡದಿ, ನೆಚ್ಚಿನ ಸ್ವಂತ ಮನೆ , ಕಿರಿಯ ಮಗನಾದ್ದರಿಂದ ಶ್ರೀನಿವಾಸ್‌ಗೆ ಯಾವ ಜವಾಬ್ದಾರಿಯೂ ಇರಲಿಲ್ಲ , ಅಕ್ಕನ ಮದುವೆ ಆಗಿ ಹೋಗಿತ್ತು. ಅವನ ಅಪ್ಪ ಅಮ್ಮ ಹಳ್ಳಿಯಲ್ಲೇ ವಾಸವಾಗಿದ್ದರು. ಹಾಗಾಗಿ ಪ್ರಮೀಳಾಗೆ ಯಾವ ತೊಂದರೆಯೂ ಇರಲಿಲ್ಲ

ಸಂತಸ ಪುಟಿದೇಳುತ್ತಿತ್ತು ಮನೆಯಲ್ಲಿ, ಜೊತೆಗೆ ಪ್ರೀತಿ ಹುಟ್ಟಿದಾಗಂತೂ ಇನ್ನೂ ಆನಂದ. ಪ್ರಮೀಳಾ ತಾಯಿ ಮನೆಯಲ್ಲಿಯೇ ಇದ್ದು ಪ್ರೀತಿಯನ್ನು ನೋಡಿಕೊಳ್ಳುತ್ತಿದ್ದರು


ಒಟ್ಟಿನಲ್ಲಿ ಸುಖೀ ದಾಂಪತ್ಯಕ್ಕೆ ಇನ್ನೊಂದು ಹೆಸರೇ ಪ್ರಮೀಳಾ ಹಾಗು ಶ್ರೀನಿವಾಸ್ ಎನ್ನುವಂತೆ ನಡೆದಿತ್ತು . ಈ ನಡುವೆ ಪ್ರಮೀಳಾಳ ತಾಯಿ ಅಪಘಾತಕ್ಕೆ ಈಡಾದರು

ವರ್ಷದಲ್ಲಿ ಮಗುವಾದರೂ ಅದರ ಲಾಲನೆ ಪಾಲನೆ ಅವಳ ತಾಯಿ ನೋಡಿಕೊಳ್ಳುತ್ತಿದ್ದುದರಿಂದ ಪ್ರಮೀಳಾಗೆ ಆ ಕಷ್ಟ ಗೊತ್ತಿರಲಿಲ್ಲ. ಕೆಲಸ ಬಿಡಲು ಪ್ರಮೀಳಾ ಸಿದ್ದಳಿರಲಿಲ್ಲ .ಮನೆ ಕೆಲಸ , ಮಗು, ಸರ್ಕಾರಿ ನೌಕರಿ ಇವುಗಳ ನಡುವಿನಲ್ಲಿ ಹಣ್ಣಾಗುತ್ತಿದ್ದಳು.

ತಾನೂ ದುಡಿಯುತ್ತೇನೆ ಎಂಬ ಅಹಂ ಪ್ರಮೀಳಾಳ ಮನದಲ್ಲಿ ಮನೆ ಮಾಡಿದ್ದರಿಂದ ಸಂಸಾರ ಹೋರಾಟವಾಯ್ತು. ಆ ಕಾಲದಲ್ಲಿ ಹೆಚ್ಚಿರದಿದ್ದ ಪ್ಲೇ ಹೋಮ್‌ಗಳನ್ನು ಹುಡುಕಿದ್ದಕ್ಕೆ ಸಿಕ್ಕಿದ್ದು ದೂರದಲ್ಲೆಲ್ಲೋ ಇದ್ದ ಒಂದು ಶಿಶುವಿಹಾರ. ಬೆಳಗ್ಗೆ ಎದ್ದು ಅಡಿಗೆ ಮಾಡಿ ಮಗುವನ್ನು ರೆಡಿ ಮಾಡಿ ಶ್ರೀನಿವಾಸನಿಗೂ ಮಾಡಿ ಕೊಟ್ಟಿ ಕಳಿಸಿ, ಪ್ರೀತಿಯನ್ನು ಶಿಶುವಿಹಾರಕ್ಕೆ ಬಿಟ್ಟು ಬರುವುದರಲ್ಲಿ ಸುಸ್ತಾಗಿರುತ್ತಿದ್ದಳು

ನಂತರ ಸಣ್ಣಗೆ ಕಿರಿ ಕಿರಿ ಶುರುವಾಯಿತು. ಮಗುವನ್ನು ನೋಡಿಕೊಳ್ಳಲು ಶ್ರೀನಿವಾಸ್ ಸಿದ್ದನಿರಲಿಲ್ಲ . . ಕೆಲಸದವರು ಬಂದರೂ ಮೂರು ದಿನ ನಿಲ್ಲುತ್ತಿರಲಿಲ್ಲ. ಎಲ್ಲಕ್ಕೂ ಪ್ರಮೀಳಾ ಹೆಣಗಲಾರಂಭಿಸಿದಳು. ಶ್ರೀನಿವಾಸ್ ಸ್ವಭಾವತ: ಒಳ್ಳೆಯವನಾದರೂ ಅದೇನೋ ಗಂಡೆಂಬ ಅಹಂ ಜೊತೆಗೆ ನೌಕರಿಯಲ್ಲಿ ಪ್ರಮೋಶನ್ ಸಹಾ ಸಿಕ್ಕು ಅದರ ಮದವೂ ಏರಿದ್ದರಿಂದ ಪ್ರಮೀಳಾಗೆ ಸಹಾಯ ಮಾಡುವ ಮನಸ್ಸು ಬರಲಿಲ್ಲ

ಸಣ್ಣ ಸಣ್ಣದಕ್ಕೆಲ್ಲಾ ಸಿಡುಕಲು ಪ್ರಾರಂಭಿಸಿದಳು. ಶ್ರೀನಿವಾಸ್ ಸಹಾ ನೌಕರಿಯಲ್ಲಿ ಹೆಚ್ಚಿದ ಜವಾಬ್ದಾರಿಯಿಂದ ಅವಳಿಗೂ ಮೀರಿ ಕೋಪಗೊಳ್ಳುತ್ತಿದ್ದ, ಮನೆಯಲ್ಲಿ ಶಾಂತಿ ಎನ್ನುವ ಪದ ಮಾಯವಾಯ್ತು.

ಮನೆಗೆ ಬಂದರೆ ಹೆಂಡತಿಯ ಕದನ , ಮಗುವಿನ ರಗಳೆ , ಶ್ರೀನಿವಾಸ್‌ಗೆ ಬೇಜಾರಾಗಿ ಹೋಯ್ತು, ನಿಧಾನವಾಗಿ ಮನೆಯಲ್ಲಿ ಇರುವ ಸಮಯ ಕಡಿಮೆ ಮಾಡಲಾರಂಭಿಸಿದ. ಇದು ಪ್ರಮೀಳಾಗೂ ತಿಳಿಯಿತು. ಆಕೆ ಇನ್ನೂ ಚಂಡಿಯಾದಳು.

ತನಗಾಗಿ ಒಂದಷ್ಟೂ ಪರಿತಪಿಸದ ಶ್ರೀನಿವಾಸ್ ಅವಳ ಪಾಲಿಗೆ ಉಗುಳಲಾಗದ ಬಿಸಿ ತುಪ್ಪವಾಗಿದ್ದ.

ತಾನು ಮಾತ್ರ ದಿನವೆಲ್ಲಾ ದುಡಿದು ಬಂದು ಮನೆಗೆ ಬಂದು ಮಗುವನ್ನು ನೋಡಿಕೊಳ್ಳಬೇಕೇಕೆ ಎಂಬ ಅನಿಸಿಕೆ ಬಂತು.

ಇದಕ್ಕಾಗಿ ಪ್ರಮೀಳಾ ಮಾಡಿದ ಉಪಾಯ ಅಂದಿನ ಆ ಕರಾಳಾ ದಿನ ಪ್ರಮೀಳಾಗೆ ಇನ್ನೂ ನೆನಪಿದೆ.

"ರೀ ಇವತ್ತು ನಂಗೆ ಸ್ವಲ್ಪ ಕೆಲಸ ಜಾಸ್ತಿ ಇದೆ ಬರುವುದು ಲೇಟ್ ಆಗಬಹುದು , ಮಗುವನ್ನು ಕರ್ಕೊಂಡುಬಂದುಬಿಡಿ" ತಲೆ ಬಾಚಿಕೊಳ್ಳುತ್ತಾ ನುಡಿದಿದ್ದಳು

"ನೋಡೋಣ ಆಗಲ್ಲಾ ಅನ್ನಿಸುತ್ತೆ . ಮೀಟಿಂಗ್ ಇದೆ ರಾತ್ರಿಯವರೆಗೂ ಆಗಬಹುದುನೀನೆ ಕರ್ಕೊಂಡು ಬಾ ಮಗು ಹೆಚ್ಚಾ ಕೆಲಸ ಹೆಚ್ಚ ನಿಂಗೆ" ಕನ್ನಡಿಯಲ್ಲಿ ನೋಡಿಕೊಳ್ಳುತ್ತಾ ಪ್ರತಿನುಡಿದ್ದಿದ್ದ

ಪ್ರಮೀಳಾ ಕೆರಳಿದಳು

"ಯಾಕೆ ನಿಮಗೂ ಅದೇ ಪ್ರಶ್ನೆ ಕೇಳಬಹುದಲ್ವಾ . ಇಷ್ಟು ದಿನ ಆಯ್ತು ಒಮ್ಮೆಯಾದ್ರೂ ಮಗೂನ ಕರ್ಕೊಂಡು ಹೋಗೋದು , ಬರೋದು ಮಾಡಿದ್ದೀರಾ. ನೀವಿವತ್ತು ಕರ್ಕೊಂಡು ಬರ್ಲೇ ಬೇಕು"

ಪ್ರೀತಿಯ ಕೈ ಹಿಡಿದುಕೊಂಡು ದಡ ದಡ ಹೊರಗಡೆ ನಡೆಯುತ್ತಾ ನುಡಿದಳು

ಪ್ರೀತಿಯನ್ನು ಪ್ಲೇ ಹೋಮ್‌ಗೆ ಬಿಟ್ಟು ಆಫೀಸಿಗೆ ಬಂದಳು . ಕೆಲಸ ಎಂದಿಗಿಂತ ಸ್ವಲ್ಪ ಬೇಗನೇ ಆಯಿತಾದರೂ ಶ್ರೀನಿವಾಸ ಇವತ್ತಾದರೂ ಮಗುವನ್ನು ಕರೆದುಕೊಂಡು ಬರಲಿ ಎಂದು ಗೆಳತಿ ಜ್ಯೋತಿಯ ಮಗಳ ಹುಟ್ಟಿದ ಹಬ್ಬಕ್ಕೆ ಹೊರಟು ನಿಂತಳು. ಫೋನ್ ಮಾಡೋಣ ಎಂದುಕೊಂಡರೂ ಮಾಡಿದರೆ ಪ್ರೀತಿಯನ್ನು ಕರೆದುಕೊಂಡು ಬರುವ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾನೆ ಎಂದೆನಿಸಿ ಮಾಡಲಿಲ್ಲ
ಸಮಾರಂಭ ಮುಗಿಸಿ ರಾತ್ರಿ ಎಂಟು ವರೆ ಘಂಟೆಗೆ ಮನೆಗೆ ಬಂದಳು ಪ್ರಮೀಳಾ
ಮನೆಗೆ ಬೀಗ ಹಾಕಿತ್ತು. ಇದೇನು ಎಲ್ಲಿಗೆ ಹೋದ ಜೊತೆಗೆ ಪ್ರೀತಿನ ಕರೆದುಕೊಂಡು ಬಂದರಾ ಇಲ್ಲವಾ? ಗೊತ್ತಾಗದೆ ಹೋಯ್ತು
ಪಕ್ಕದ ಮನೆಯಿಂದ ಗಂಡನ ಕಛೇರಿಗೆ ಫೋನ್ ಮಾಡಿದಳು.
"ಅವರು ಮೀಟಿಂಗ್‍ನಲ್ಲಿದ್ದಾರೆ ಮೇಡಮ್ ಈಗ ಕರೆಯೋಕೆ ಆಗಲ್ಲ" ಎಂದು ಟೆಲಿ ಆಪರೇಟರ್ ಹೇಳಿದ
ಅಂದರೆ ಮಗಳನ್ನು ಇನ್ನೂ ಕರೆತಂದಿಲ್ಲ
ಹೃದಯ ಮಗಳಿಗಾಗಿ ಡವಡವ ಎನ್ನಲಾರಂಭಿಸಿತು.
ಈ ರಾತ್ರಿಯಲ್ಲಿ ಮಗಳು ಅಲ್ಲಿ ಒಬ್ಬಳೇ ಏನು ಮಾಡುತ್ತಿರುತ್ತಳೋ ಎಂಬ ಆತಂಕದಿಂದಲೇ ಆ ಒಂಬತ್ತು ಘಂಟೆ ರಾತ್ರಿಯಲ್ಲೇ ಮಗುವನ್ನು ಕರೆತರಲು ಹೋದಳು.
ಶಿಶುವಿಹಾರ ಮುಚ್ಚಿದ್ದರು. ಹತ್ತಿರದಲ್ಲಿ ಯಾವ ಅಂಗಡಿಯೂ ಇರದೆ ಯಾರಿಗೂ ಫೋನ್ ಸಹಾ ಮಾಡಲಾಗಲಿಲ್ಲ. ಆ ಶಿಶು ವಿಹಾರದ ಪಕ್ಕದ ಮನೆಯೊಂದರಲ್ಲಿ ವಿಚಾರಿಸಿದಳು. ಒಬ್ಬವಯಸ್ಸಾದ ಹೆಂಗಸೊಬ್ಬಳು ಬಂದರು
"ಇಲ್ಲಿ ನನ್ನ ಮಗು ಬಿಟ್ಟಿದ್ದೆ . ಈಗ ಬಾಗಿಲು ಹಾಕಿದ್ದಾರೆ "ಎಂದು ತನ್ನ ಪರಿಚಯ ಮಾಡಿಕೊಂಡಳು
ಅವಳು ಒಮ್ಮೆ ಪ್ರಮೀಳಾಳನ್ನು ಮೇಲಿನಿಂದ ಕೆಳಗಿನವರೆಗೂ ನೋಡಿ
" ಬಹಳ ಹೊತ್ತಿನಿಂದ ಯಾರೂ ಬರದೆ ಇದ್ದುದ್ದರಿಂದ ಮಗುವನ್ನು ಮೇಡಮ್ ಮನೆಗೆ ಕರೆದುಕೊಂಡು ಹೋಗಿದ್ದಾರೆ ಅವರು ನಿಮ್ಮ ಆಫೀಸಿಗೆ ಫೋನ್ ಮಾಡಿದಾಗ ನೀವು ಆಗಲೆ ಆಫೀಸ್ ಬಿಟ್ಟಿದ್ದೀರಾ ಎಂದರು , ನಿಮ್ಮ ಯಜಮಾನರಿಗೆ ಫೋನ್ ಮಾಡಿದಾಗ ಅವರು ಸಿಗಲಿಲ್ಲವಂತೆ, ನಾಳೆ ಬಂದು ಮಗುವನ್ನು ಕರ್ಕೊಂಡು ಹೋಗಿ, ಮಗು ತುಂಬಾ ಅಳ್ತಾ ಇತ್ತು. ಅಲ್ಲಮ್ಮ ಮಗುವಿನ ಮೇಲೆ ಸ್ವಲ್ಪವಾದ್ರೂ ಕಾಳಜಿ ಬೇಡ್ವೇ, ದುಡ್ಡು ಇವತ್ತಲ್ಲ ನಾಳೆ ಬರುತ್ತೆ , ಮಗು ಹೋದ್ರೆ ಸಿಗುತ್ತಾ . ಏನಾಗಿದ್ಯೋ ಈಗಿನ ಕಾಲದ ಜನರಿಗೆ" ಆಕೆ ಬಡಬಡಿಸಿದಳು
ಅವರ ಮನೆಗೆ ಫೋನ್ ಮಾಡಬೇಕಿತ್ತು.ನಂಬರ್ ಇದೆ ಆದ್ರೆ ನಮ್ಮ ಮನೆಲಿ ಫೋನ್ ಇಲ್ಲ ಬೇರೆ ಕಡೆಯಿಂದ ಫೋನ್ ಮಾಡಿ " ನಂಬರ್ ತೆಗೆದುಕೊಂಡು ಮತ್ತದೇ ಆಟೋದಲ್ಲಿ ಮನೆಗೆ ಬಂದಳು

ಮನಸ್ಸು ಕುದ್ದು ಹೋಯಿತು. ಅಳುತ್ತಳುತ್ತಲೇ ಮನೆಗೆ ಬಂದಳು

ಅಷ್ತ್ರಲ್ಲಿ ಆಗಲೆ ಶ್ರೀನಿವಾಸ್ ಮನೆಗೆ ಬಂದಿದ್ದ

ಆಟೋದಿಂದ ಇಳಿದು ದುಡ್ಡು ಕೊಟ್ಟು ಬಂದಳು ಪ್ರಮೀಳಾ . ಬಾಗಿಲು ಬಡಿದಳು

"ಪ್ರೀತಿ ಎಲ್ಲಿ" ಬಾಗಿಲು ತೆರೆಯುತ್ತಲೇ ಕೇಳಿದ
’ನಾನು ಹೇಳಿರ್ಲಿಲ್ವಾ ಬರೋದು ಲೇಟ್ ಆಗುತ್ತೆ. ಪ್ರೀತಿನ ಕರೆದುಕೊಂಡು ಬನ್ನಿ ಅಂತ, ಮಗಳಿಗಿಂತ ಮೀಟಿಂಗ್ ಹೆಚ್ಚಾಯ್ತಲ್ಲ ನಿಮಗೆ" ಕಣ್ಣೀರ ನಡುವೆ ಆಕ್ರೋಶದಿಂದಲೇ ಹೇಳಿದಳು
"ನೀನು ಬರೋದು ಲೇಟ್ ಯಾಕೆ ಆಯ್ತು" ಪ್ರಶ್ನಿಸಿದ
"ಕೆಲಸ ಜಾಸ್ತಿ ಇತ್ತು" ಸುಳ್ಳು ಹೇಳಲು ಭಯವಾದರೂ ದಿಟ್ಟವಾಗಿಯೇ ನುಡಿದಳು
"ಸುಳ್ಳು ಹೇಳ್ಬೇಡ ನಾನು ಸಂಜೆ ಐದು ಘಂಟೆಗೆ ನಿಮ್ಮ ಆಫೀಸಿಗೆ ಫೋನ್ ಮಾಡಿದ್ದೆ, ನೀನು ನಾಲ್ಕು ಘಂಟೆಗೆ ಹೋಗಿದ್ದೀಯ ಎಂದು ಗೊತ್ತಾಯ್ತು,ಎಲ್ಲಿಗೆ ಹೋಗಿದ್ದೆ"
ಪ್ರಮಿಳಾ ಸಿಕ್ಕಿಹಾಕಿಕೊಂಡಿದ್ದಳು
ಮಾತಾಡಲಿಲ್ಲ.
"ನೋಡು ಪ್ರಮೀಳಾ , ನಿನ್ನ ನಡತೆ ಮೇಲೆ ಗೌರವ ಇದೆ ನನಗೆ ಅದನ್ನ ಹಾಳು ಮಾಡೋ ಅಂತ ಕೆಲಸಮಾಡ್ಬೇಡ"
"ಅಂದ್ರೆ ನನ್ನಮೇಲೆ ನಿಮಗೆ ಅನುಮಾನಾನ"
ಹೀಗೆ ಮಾತು ಜೋರಾಯ್ತು
ಎತ್ತೆತ್ತಲೋ ಹರಿದು ಬಂತು ಮಾತುಗಳು
ಇಬ್ಬರ ನಡತೆಗಳೂ ಮಾತಿಗೆ ಸಿಕ್ಕವು
ಹದಗೆಟ್ಟಿದ್ದ ಸಂಬಂಧವನ್ನು ಹಿಡಿದಿರಿಸುವುದರಲ್ಲಿ ಯಾವ ಆಸಕ್ತಿಯೂ ಉಳಿಯಲಿಲ್ಲ ಇಬ್ಬರಿಗೂ
ಮಾರನೆಯದಿನ ಮಗುವನ್ನು ಕರೆದುಕೊಂಡು ಬಂದಳು.
ದಾಂಪತ್ಯಕ್ಕೆ ಒಂದು ಕೊನೆ ಹಾಡಬೇಕಾಗಿದ್ದರಿಂದ ಇಬ್ಬರೂ ಮನೆಯಲ್ಲಿಯೇ ಉಳಿದಿದ್ದರು
ಆದರೆ ತಮ್ಮಿಬ್ಬರ ನಡುವಿನಲ್ಲಿ ಪ್ರೀತಿಯ ಬದುಕು ಹಾಳಾಗುವುದು ಇಬ್ಬರಿಗೂ ಇಷ್ಟವಿರಲಿಲ್ಲ.
ಇನ್ನೂ ಡೈವೋರ್ಸ್ ಎಂಬ ಪದ ಅಷ್ಟಾಗಿ ಬಳಕೆಯಲ್ಲಿಲ್ಲದ ಕಾಲ ಅದು.
ಇಷ್ತವಿದ್ದರೆ ಮದುವೆಯಾಗದೆ ಜೊತೆ ಇರಬಹುದಾದದ್ದು ಈ ಕಾಲ ಆದರೆ ಇಷ್ಟವಿಲ್ಲದಿದ್ದರೂ ಮದುವೆಯಾದ ಮೇಲೆ ಜೊತೆ ಬಾಳಲೇ ಬೇಕಿತ್ತು
ಪ್ರೀತಿಯ ಮದುವೆಯವರೆಗೂ ಜೊತೆಗೆ ಇರುವುದು. ಮದುವೆಯಾದ ನಂತರದ ದಿನದಲ್ಲಿ ಇಬ್ಬರೂ ಬೇರೆಯಾಗುವುದೆಂದು ನಿರ್ಧರಿಸಿದರು.
ಈ ಗುಟ್ಟು ಅಲ್ಲಿಯವರೆಗೂ ಗುಟ್ಟಾಗಿಯೇ ಇಡಬೇಕೆಂದೂ ನಿಶ್ಚಯವಾಯ್ತು
ಅಂದಿನಿಂದ ಅವರು ದಂಪತಿಗಳಂತೆ ಹೊರ ಜಗತ್ತಿಗೆ ಕಂಡರೂ ಒಳಗೆ ಅಪರಿಚಿತರಂತೆ ಇರಲಾರಂಭಿಸಿದರು
ಹಾಗಿರುವುದು ಬಹಳ ಕಷ್ಟವಾಗಿತ್ತು. ಅದರಲ್ಲೂ ಶ್ರೀನಿವಾಸ್ ಬಹು ಒದ್ದಾಡಿದ,
ಪ್ರಮೀಳಾಳ ಬಳಿ ಕ್ಷಮೆ ಕೇಳಿದ., ಆದರೂ ತನ್ನ ನಡತೆಯ ಬಗ್ಗೆ ಅನುಮಾನಿಸಿದ ಅವನ ತಪ್ಪನ್ನು ಒಪ್ಪಿಕೊಳ್ಲುವುದು ಸಾಧ್ಯವಿತ್ತಾದರೂ ಒಂದು ರೀತಿಯ ಅಹಮ್ ,ಅಥವ ಸ್ವಾಭಿಮಾನವೋ ಪ್ರಮೀಳಾಳನ್ನು ಕಠಿಣ ಮನದವಳಾಗಿಯೇ ಇರಲು ಉತ್ತೇಜಿಸಿತ್ತು
ರೂಮಿನ ಬಾಗಿಲು ಬಡಿದ ಸದ್ದಾಯಿತು . ಬಾಗಿಲು ತೆರೆದಳು
ಹೊರಗೆ ಶ್ರೀನಿವಾಸ
"ಪ್ರಮೀಳಾ ನೀನು ಹೋಗಲೇಬೇಕಾ? ಇಪ್ಪತ್ತು ವರ್ಷದ ಹಿಂದಿನ ದ್ವೇಷ ಇನ್ನೂ ಆರಿಲ್ಲವೇ? "
ದೀನನಾಗಿ ಕೇಳಿದ
ಪ್ರಮೀಳಾ ಮುಖ ತಿರುಗಿಸಿದಳು
(ಮುಂದುವರೆಯುವುದು)

Wednesday, February 25, 2009

ವಿದಾಯ-೧

ಮದುವೆಯ ಸಡಗರ ತೆರೆ ಸರಿಸುವ ಕಾರ್ಯಕ್ರಮ ನಡೆಯುತ್ತಿತ್ತು. ಅಲ್ಲಿದ್ದ ಎಲ್ಲಾ ಜನರಿಗೂ ಅದೊಂದು ರೀತಿಯ ತಮಾಷೆಯ ಕಾರ್ಯಕ್ರಮ. ಎಲ್ಲರ ಮುಖದಲ್ಲೂ ನಗು . ಯಾರು ಅಕ್ಕಿ ಮೊದಲು ಹಾಕುತ್ತಾರೆ ಎಂಬ ನಿರೀಕ್ಷೆಯಲ್ಲಿ ಜನರಿದ್ದರು. ಪ್ರಮೀಳಾಳೂ ವಧುವಿನ ಅಲಂಕಾರದಲ್ಲಿದ್ದ ಮಗಳ ಕೈ ಎತ್ತಿ ಹಿಡಿದು ನಿಂತಿದ್ದಳು. ಎಲ್ಲರೂ ಪ್ರೀತಿ ಮೊದಲು ನೀನೆ ಹಾಕು ನಿನ್ನ ಗಂಡ ನಿನ್ನ ಮಾತನ್ನೇ ಕೇಳುತ್ತಾನೆ ಎಂದು ಪ್ರೀತಿಯನ್ನು ಹುರಿದುಂಬಿಸುತ್ತಿದ್ದರು . ಅತ್ತ ಗಂಡಿನ ಮನೆಯವರೂ ಹಾಗೆಯೇ ವರನನ್ನು ಉಬ್ಬಿಸುತ್ತಿದ್ದರು. ವಧು ವರರಿಗೆ ಮಾತ್ರ ಅಸ್ಪಷ್ಟವಾಗಿ ಕಾಣುತ್ತಿದ್ದ ತೆರೆಯ ಆಚೆ ಬದಿಯ ತಮ್ಮ ಸಂಗಾತಿಯನ್ನು ನೋಡುವ ಕಾತುರ .
ತೆರೆ ಸರಿಯುತ್ತಿದ್ದಂತೆ ಮಗಳೇ ಮೊದಲು ಬಣ್ಣದಅಕ್ಕಿ ಹಾಕಿದಳು. ವಧುವಿನ ಮನೆಯವರಿಗೆಲ್ಲಾ ಸಡಗರ, ಮಾಂಗಲ್ಯ ಧಾರಣೆ ಹಾರ ಬದಲಾವಣೆ ಎಲ್ಲಾ ನಡೆದವು.

ಶ್ರೀನಿವಾಸ ಮಗಳ ಮದುವೆ ನೋಡಿ ಸಂತೋಷ ಪಡುತ್ತಿದ್ದ ಧಾರೆ ಎರೆದ ನಂತರದ ವಿದಾಯದ ಘಳಿಗೆಗಾಗಿ ಇನ್ನೂ ಮನಸ್ಸು ಸಿದ್ದವಾಗಿರಲಿಲ್ಲ.
ಅತ್ತ ಪ್ರಮೀಳಾ ಬಂದವರಿಗೆಲ್ಲಾ ಉಡುಗೊರೆಗಳನ್ನು ಕೊಡಲು ಅಣಿ ಮಾಡುತ್ತಿದ್ದಳು. ಆದರೂ ಮನಸಲ್ಲಿ ಏನೋ ಕಸಿವಿಸಿ . ಈ ರೀತಿಯ ವಿದಾಯಕ್ಕಾಗಿಯೇ ಅಲ್ಲವೇ ಇಷ್ಟು ದಿನದಿಂದ ಕಾದಿದ್ದು. ಈ ಸ್ವಾತಂತ್ರ್ಯಕ್ಕಾಗಿ ಅಲ್ಲವೇ ಮನಸ್ಸು ಬೇಡಿದ್ದು. ಇಂದೇಕೆ ಮನಸ್ಸು ಹೀಗೆ ತೊಳಲಾಡುತ್ತಿದೆ ಅರಿವೇ ಆಗುತ್ತಿಲ್ಲ
"ಪ್ರಮೀಳಾ ಬೇಗ ಬೇಗ ಕೊಡಮ್ಮ . ಕೆಲವರು ತಿಂಡಿ ತಿಂದು ಮನೆಗೆ ಹೋಗ್ತಿದಾರೆ ಊಟಕ್ಕೆ ಕಾಯಲ್ಲ ಅಂತಿದಾರೆ. . ಅವರಿಗೆ ಏನು ಕೊಡಬೇಕು ಅದನ್ನು ಕೊಡು" ಪ್ರಮೀಳಾಳ ಚಿಕ್ಕಮ್ಮನ ಕೂಗು ಮಾತು
"ಆಯ್ತು ಚಿಕ್ಕಮ್ಮ . ಒಂದ್ನಿಮಿಷ ಕೊಟ್ಟೆ"ಹೇಳಿ ಅರಿಷಿನ ಕುಂಕುಮ ತಟ್ಟೆ ಕೊಟ್ಟಳು. ಮುಂದೆ ಸೀರೆ , ಹಾಗು ಉಡುಗೊರೆಗಳ ಪ್ಯಾಕ್
"ಚಿಕ್ಕಮ್ಮ ಇದು ನಮ್ಮ ಕಡೆಯವರಿಗೆ ಪ್ರತಿ ಸೀರೆ ಪಂಚೆ ಪ್ಯಾಕ್ ಮೇಲೆ ಹೆಸರು ಬರೆದಿದ್ದೇನೆ , ಹಾಗೆ ಈ ಚಿಕ್ಕ ಬೆಳ್ಲಿ ಬಾಕ್ಸ್ ಎಲ್ಲಾ ಅಕ್ಕ ಪಕ್ಕದ ಮನೆಯವರಿಗೆ ಕೊಟ್ಬಿಡು"
"ಪ್ರಮೀಳಾ ಬರ್ತೀಯಾ ಇಲ್ಲಿ ನಿನಗೆ ಉಡುಗೊರೆ ಕೊಡ್ಬೇಕು ಅಂತ ಕರಿತಿದಾರೆ, ಏ ಸೀನು ನೀನೂ ಬಾರೋ ಅಲ್ಲಿ ಕೂತ್ಕೊಂಡು ಏನ್ಮಾಡ್ತಿದ್ದೀಯಾ" ಶ್ರೀನಿವಾಸನ ಅಕ್ಕನ ದನಿ
ಪ್ರಮೀಳಾಗೆ ಈಗ ವಿಧಿಯೇ ಇಲ್ಲ ಶ್ರೀನಿವಾಸ್‌ ಜೊತೆ ಕೂರಲೇ ಬೇಕಿತ್ತು, ಬಹುಷ ಇದೇ ಕೊನೆಯ ಜೊತೆಯಾಗಿ ಕೂರುವುದಿರಬಹುದು. ಉಡುಗೊರೆ ಸ್ವೀಕರಿಸಲು ಇಬ್ಬರೂ ಕೂತರು. ಪ್ರಮೀಳಾ ಸಾಮಿಪ್ಯ ಹಿತವೆನಿಸಿತು ಶ್ರೀನಿವಾಸನಿಗೆ
ಸ್ನೇಹ ಹಾಗು ಅವಳ ಗಂಡ ಇಬ್ಬರಿಗೂ ಚಿನ್ನದ ಉಂಗುರಗಳನ್ನು ತಂದುಕೊಟ್ಟರು .
"ಆಂಟಿ ಇಲ್ಲೇ ಹಾಕಿಕೊಳ್ಳಿ ಹಾ ಇಬ್ಬರೂ ಬದಲಾಯಿಸಿಕೊಳ್ಬೇಕು"
ಏಕೋ ಅವನ ಕೈಗೆ ಉಂಗುರ ತೊಡಿಸುವುದು . ಅವನು ತನ್ನ ಕೈ ಮುಟ್ಟುವುದು ಹಿಡಿಸಲೇ ಇಲ್ಲ ಪ್ರಮೀಳಾಗೆ. ಆದರೂ ಹಾಗೆ ಮಾಡುವಂತಿಲ್ಲ. ಶ್ರೀನಿವಾಸ ಮಾತ್ರ ತೊಡಿಸಲು ಸಿದ್ದನಾಗಿದ್ದ . ಸಂತೋಷ ಅವನ ಮುಖದಲಿ ಕಾಣುತ್ತಿತ್ತು

ಶ್ರೀನಿವಾಸ್ ಮೊದಲು ಉಂಗುರ ತೊಡಿಸಲು ಮುಂದಾದ. ಎಡಗೈಯಲ್ಲಿ ಅವಳ ಕೈ ಎತ್ತಿ ಹಿಡಿದು ಬಲಗೈ ಇಂದ ನಿಧಾನವಾಗಿ ಉಂಗುರವನ್ನು ನಡುಬೆರಳಿಗೆ ನಿಧಾನವಾಗಿ ನೂಕಿದ . ನೂಕುವಾಗ ಅವಳ ಬೆರಳನ್ನು ಮೃದುವಾಗಿ ಒತ್ತಿದ ಅವಳಿಗಷ್ಟೆ ತಿಳಿಯುವಂತಿತ್ತು. ಇದನ್ನ ಇಪ್ಪತ್ತೆಂಟು ವರ್ಷಗಳ ಹಿಂದೆ ಅವರಿಬ್ಬರ ನಿಶ್ಚಿತಾರ್ಥದಲ್ಲಿ ಮಾಡಿದ್ದಾಗ ಅವಳ ಮುಖದಲ್ಲಿ ಕಂಡೂ ಕಾಣದ ನಾಚಿಕೆ. ಆದರೆ ಇಂದು ಅವಳ ಮೊಗದಲ್ಲಿ ಅಸಹ್ಯವೆನಿಸುವ ಭಾವನೆ. ಇಂತಹ ಸ್ಪರ್ಷ ಇಪ್ಪತ್ತು ವರ್ಷಗಳ ಹಿಂದೆ ಮಾಡಿದ್ದರೆ ಅವಳ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ. ಆದರೆ ಈಗ ಎಲ್ಲಾ ಸುಮಧುರ ಭಾವನೆಗಳನ್ನು ಆಚೆ ನೂಕಿದ್ದಳು
ಯಾಂತ್ರಿಕವಾಗಿ ಅವನ ಬೆರಳಿಗೆ ಉಂಗುರ ತೊಡಿಸಿದಳು.
ಎಲ್ಲರೂ ಚಪ್ಪಾಳೆ ತಟ್ತಿದರು . ಆ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾಯಿತು
ಕೊನೆಗೂ ಮದುವೆ ಎಂಬ ಸಮಾರಂಭ ಮುಗಿಯಿತು.
ಇಂದು ರಾತ್ರಿ ಮಗಳ ಮೊದಲ ರಾತ್ರಿ
ಆದರೆ

ಇಂದು ಈ ಮನೆಯಲ್ಲಿ ಅವಳ ತಂದೆ ಹಾಗು ತಾಯಿಯ ಕೊನೆಯ ರಾತ್ರಿಯಾಗಿತ್ತು
(ಮುಂದುವರೆಯುವುದು)

Tuesday, February 17, 2009

ಅಮ್ಮ ಉರುಳಿಸಿ ಬಿಡುವ ಗೋಡೆಯ

ಅಮ್ಮಾ ನೆನಪಿದೆ ನಾ ನೋವೆಂದು
ಕೂಗಿದಾಗಲೆಲ್ಲಾ ಅತ್ತದ್ದು
ನಿನ್ನ್ ಕಣ್ಣು, ನರಳಿದ್ದು ನಿನ್ನ
ಹೃದಯ
ಅಮ್ಮಾ ನೆನಪಿದೆ ದೀವಳಿಗೆಯ
ದೀಪಗಳ ಸಾಲಿನಲ್ಲೂ
ನಿನಗೆ ನಾ ದೀಪವಾಗಿ ಕಂಡು
ಬಿಗಿದಪ್ಪಿ ಸುರಿಸಿದ ಕಣ್ಣೀರು
ಅಮ್ಮ ನೆನಪಿದೆ , ನಿನ್ನ ಬಾಳ
ಇರುಳಿನಲ್ಲೂ ,ನನ್ನ ಜೀವಕೆ
ಜ್ಯೋತಿಯಾಗಿ ತೋರಿದ ಮಮತೆ
ಅಮ್ಮ ನೆನಪಿದೆ ವೈಫಲ್ಯಗಳ
ಸರಮಾಲೆಯಲ್ಲಿಯೂ ನಾ ನಿನಗೆ
ಸಾಧಕಿಯಾಗಿಯೇ ಕಂಡಿದ್ದು
ಅಮ್ಮ ನೆನಪಿದೆ ಹೆಜ್ಜೆ ಇಡುವ
ಮೊದಲ ದಿನಗಳಲ್ಲಿ
ನಿನ್ನ ಕಣ್ಣಲ್ಲಿ ಕಂಡ ಸಂತಸ
ಅಮ್ಮ ನೆನಪಿದೆ ನಿದ್ದೆ
ಬರದ ರಾತ್ರಿಗಲಲ್ಲಿ ನೀ
ಹೇಳುತ್ತಿದ್ದ ಕತೆಗಳ
ಅಮ್ಮ ನೆನಪಿದೆ ಕಷ್ಟಗಳ
ಬೆಂಕಿ ಮಳೆಯಲೂ ನೀ ಎರೆದ
ತಂಪು ಗಾಳಿಯ ಮಮತೆ
ಅಮ್ಮಾ
ನಿನ್ನ ಮನದಾಳವ ನಾ ಬಲ್ಲೆ
ನನಗಿಂತ ಎನ್ನ ನೀ ಬಲ್ಲೆ
ಏಕೆ ಕಟ್ಟುತ್ತಿರುವೆ ಇಂದು
ಮೌನ ಗೋಡೆಯ ನಮ್ಮಿಬ್ಬರನಡುವಲ್ಲಿ,
ಉರುಳಿಸಿ ಬಿಡುವ ಗೋಡೆಯ
ಮತ್ತೇಕೆ ತಡ
ನೀನಿತ್ತ ಅನಂತ ವಾತ್ಸಲ್ಯಕ್ಕೆ
ನಾ ನೀಯುತ್ತಿರುವ ಪ್ರೀತಿ
ಆದಾವ ರೀತಿಯಲ್ಲೂ
ಅಲ್ಲ ಸರಿ ಸಾಟಿ
ಏನಮ್ಮ ಮಾಡಲಿ
ಹರಿದು ಹಂಚಿ ಹೋಗಿದೆ
ಪ್ರೀತಿ
ಕರುಳ ಬಳ್ಳಿ, ಕಟ್ಟಿಕೊಂಡ ಒಲವು
ಹಿಡಿ ಹಿಡಿದು ಕೇಳಲು ,ಕೊಡೆನೆಂದು
ಹೇಗೆ ಹೇಳಲಿ
ಮನದಾಳದಿ ಹೇಳಲಾರದ
ನೋವದನೇಂದು ನಾ ಬಲ್ಲೆ
ಕೊಟ್ಟ ಹೆಣ್ಣು ಕುಲಕ್ಕೆಹೊರಗು
ಎಂಬ ಮಾತಿನ ಜಪವೇಕೆ
ಮಗನಾದರೂ ಮಗಳಾದರೂ
ನಾ ,ನೀ ಎನ್ನ ತಾಯಿಯೇ
ಸಾಕುವಾಗ ಇಲ್ಲದಿದ್ದ
ಭೇದ ಈಗೇಕೆ
ಸಾಕು ಮಾಡು ಅಮ್ಮಯೋಚನೆಗಳ
ನಾ ನಿನ್ನ ಮಗಳಲ್ಲ ಮಗನೆಂದೇ ತಿಳಿ
ಇನ್ನಾದರೂ ಮೌನ ಹಂದರದಿಂದ
ಆಚೆ ಬಂದೆನ್ನ ನೋಡಮ್ಮ
ಕಾಯುತ್ತಿದ್ದೆ ನಿನ್ನ ಕರುಳಕುಡಿ

Monday, February 9, 2009

ಪ್ರೇಮಕ್ಕೂ ಪರೀಕ್ಷೆಯೆ? ಭಾಗ ಎರಡು

ಸಿರಿ

ರಾಜೀವ್ ಹೆಸರೇ ನಂಗೆ ಮನಮೋಹಕ ಆವತ್ತು ಕೋಪ ಮಾಡಿಕೊಂಡ ಆಸಾಮಿ ಇನ್ನೂ ಫೋನ್ ಕೂಡ ಮಾಡಿಲ್ಲ

ನಾನಾದರೂ ಯಾಕೆ ಫೋನ್ ಮಾಡಲಿ ಅಂತ ಅನ್ನಿಸ್ತಿದ್ರೂ "ಐ ಲವ್ ಹಿಮ್ " ಅದಕ್ಕೋಸ್ಕರ ನಾನೆ ಸೋತೆ

ಕಡೆಗೂ ಫೋನ್ ಮಾಡಿ ಸಾರಿ ಕೇಳಿದ ಮೇಲೆ ಒಪ್ಕೊಂಡ ಮಾರಾಯ

ಹೌದು ನಂಗೆ ರಾಜೀವ ಯಾಕೆ ಇಷ್ಟ

ಅವನು ಚೆಲುವ ಅನ್ನೋ ಹಾಗೇನೂ ಇಲ್ಲ, ಅಥವ ತಿಂಗಳಿಗೆ ಲಕ್ಷಾಂತರ ರೂ ಸಂಬಳದ ಕೆಲಸವೂ ಇಲ್ಲ. ಆದರೂ ಅವನ ಒಳ್ಳೆ ಗುಣ ನನಗೆ ಇಷ್ಟವಾಯ್ತು.

ಆದರೂ ನನ್ನ ಅಭಿರುಚಿಗೆ ಅವನು ಹೊಂದೋದಿಲ್ಲ ಯಾವಾಗಲೂ ಇನ್ವೆಸ್ಟ್ಮೆಂಟ್, ಪ್ಲಾನ್, ಸಂಸಾರ, ಬರೀ ಹೀಗೆ ಬೋರು ಹೊಡೆಯೋ ವಿಷಯಗಳು.

ನನ್ನ ಕಲ್ಪನೇನೆ ಬೇರೆ

ನನ್ನ ನಲ್ಲ ಮರ್ಸಿಡೀಸ್ ಬೆಂಜ್ ನಲ್ಲಿ ಬಿಳೀ ಬಣ್ಣದ ಸೂಟ್ ಹಾಕಿಕೊಂಡು ಇಳಿಯುತ್ತಲೆ ಕೈನಲ್ಲಿರೋ ಹೂಗೊಂಚಲನ್ನು ಕೊಟ್ಟು ನನ್ನತ್ತ ಮಂಡಿಯೂರಿ ಪ್ರೇಮ ನಿವೇದಿಸಬೇಕು(ಹೌದು ದಿನಾ ಮಾಡಬೇಕು) ಎದ್ದು ಆ ಗೊಂಚಲಿಂದಲೇ ಒಂದು ಹೂವನ್ನು ತಲೆಗೆ ಇರಿಸಿ, ನನ್ನತ್ತ ಪ್ರೇಮದ ನೋಟ ಬೀರಿ ಕಣ್ಣಲ್ಲೇ ಕರೆಯಬೇಕು, ನನ್ನನ್ನು ಎದೆಗೊತ್ತಿಕೊಂಡು ಪ್ರೇಮದಿಂದ ನನ್ನನ್ನ ಚುಂಬಿಸಬೇಕು.

ಅವನ ತೋಳಿನಲ್ಲಿ ಬಂಧಿಯಾಗಿ ನಾ ಬರೆಯೋ ಹೊಸ ಕಾದಂಬರಿಯ ವಸ್ತುವನ್ನು ಕೇಳುತ್ತಾ ಅದನ್ನು ತಿದ್ದುತ್ತಾ ಪ್ರೇಮದ ಹುಸಿ ಜಗಳ ಇದ್ದರೆ ಎಷ್ಟು ಚೆನ್ನಾಗಿರುತ್ತದೆ

ಅರೆ ಈಗ ಇದೆಲ್ಲಾ ಸಾಧ್ಯ ಇಲ್ಲ, ಎಷ್ಟೋ ಬಾರಿ ಇದನ್ನ ರಾಜೀವ್‌ಗೆ ಹೇಳಿದ್ದಕ್ಕೆ ಅವನು ಹಾಸ್ಯ ಮಾಡಿದ್ದನಲ್ಲ

ರಾಜೀವ್‌ಗೆ ಇವೆಲ್ಲಾ ಇಷ್ಟಾ ಇಲ್ಲ

ಹಾಗಾಗಿ ಇದೆಲ್ಲಾ ಕಲ್ಪನೇಗೆ ಸರಿ


ನಿಟ್ಟುಸಿರು ಬಿಟ್ಟೆ.

ಚಂಚಲ ಬಂದಳು

"ಏನು ಕನಸಿನ ರಾಣಿ ಕಲ್ಪನೆ ಆಫೀಸಲ್ಲಿ ಸಾಕು, ಹೊಸ ಬಾಸ್ ಬಂದಿದಾರೆ, ಎಲ್ಲರ ಇಂಟ್ರಡಕ್ಶ್ಗನ್ ನಡೀತಾ ಇದೆ.
ನೀನೂ ಬಾ ತಾಯಿ"
ಅವಳು ಹಾಗೆಯೇ ಕನಸಿನ ರಾಣಿ ಅಂತಾನೆ ನನ್ನನ್ನು ಕರೆಯೋದು
ಎಲ್ಲರೂ ಕಾನ್ಪ್ಬರೆನ್ಸ್ ರೂಮಲ್ಲಿ ಹೋಗಿ ಕುಳಿತೆವು
ಹಿಂದಿದ್ದ ಪ್ರಾಜೆಕ್ಟ್ ಮ್ಯಾನೇಜರ್ ರಾಜೀನಾಮೆ ಕೊಟ್ಟಿದ್ದುದ್ದರಿಂದ ಈಗ ಹೊಸದಾಗಿ ಬೇರೊಬ್ಬ ಮ್ಯಾನೇಜರ್ ಬಂದಿದ್ದರು
ಕೊಂಚ ಹೊತ್ತು ಮೌನ ನಂತರ ಪ್ರಾಜೆಕ್ಟ್ ಮ್ಯಾನೇಜರ್‌ ಜೊತೆ ಎಚ್ ಆರ್ ಎಕ್ಸ್ದಿಕ್ಯುಟೀವ್ ಶಿಲ್ಪ ಬಂದಳು
ಅವಳು ಮ್ಯಾನೇಜರ್ ನರೇನ್‌ನ ಪರಿಚಯ ಮಾಡಿಕೊಟ್ಟ ಮೇಲೆ ನರೇನರೆ ಮಾತು ಶುರು ಮಾಡಿದರು
ವಯಸ್ಸು ೨೮ ಇರಬಹುದೇನೋ ರಾಜೀವನ ವಯಸ್ಸೇ
"ಸ್ನೇಹಿತರೆ ನನ್ನ ಬಗ್ಗೆ ಆಗಲೇ ಶಿಲ್ಪಾ ಹೇಳಿದಾರೆ . ಅವುಗಳನ್ನು ಬಿಟ್ಟು ನಾನು ನನ್ನ ಪರಿಚಯ ಮಾಡ್ಕೋತೀನಿ
ನಾನು ಒಬ್ಬೊಂಟಿ ಅಂದ್ರೆ ನೋ ಬ್ರದರ್ಸ್ ಮತ್ತೆ ನೋ ಸಿಸ್ಟರ್ಸ್ . ಹಾಗಾಗಿ ನಾನು ತುಸು ಸ್ನೇಹಕ್ಕಾಗಿ ಪ್ರೇಮಕ್ಕಾಗಿ ಒದ್ದಾಡೋನು ಇನ್ ಅದರ್ ವರ್ಡ್ಸ್ ನಾನು ಒಬ್ಬ ಭಾವ ಜೀವಿ.ನಿಮ್ಮೆಲ್ಲರನ್ನ ಕೇಳೋದೇನೆಂದರೆ ದಯವಿಟ್ಟು ನನಗೆ ಮಾತಿನಲ್ಲಿ ಸಾರ್, ಬಾಸ್,ಎಂದು ಕರೆಯದೆ ನರೇನ್ ಎಂದು ಪ್ರೀತಿಯಿಂದ ಕರೆಯಿರಿ. ಬರೀ ಎರೆಡು ಕೈ ಸೇರಿದರೆ ಚಪ್ಪಾಳೆ ಹೊಡೆಯದೆ ಇಲ್ಲಿರುವ ಅಷ್ಟೂ ಕೈಗಳೂ ನನ್ನ್ನ ಜೊತೆಗೂಡಲಿ .ನಿಮ್ಮ ಸಹಕಾರವೇ ಇಲ್ಲಿ ಅಗತ್ಯ . ನೊ ಸಬ್ ಆರ್ಡಿನೇಟ್ಸ್, ನೊ ಬಾಸ್, ನನ್ನ ಹಾಬೀಸ್ ಆಫೀಸ್ ಕೆಲಸ ಬಿಟ್ಟರೆ ಕತೆ, ನಾಟಕ, ಸಿನಿಮಾ, ಮ್ಯಾಚ್ ಇಷ್ಟೆ, ನಂಗೂ ನಿಮ್ಮಗಳ ಬಗ್ಗೆ ತಿಳಿಯಬೇಕೆಂಬ ಆಸೆ ಇದೆ ದಯವಿಟ್ಟುನಿಮ್ಮ ಪರಿಚಯ ಹೇಳಿ"
ಮುಗುಳು ನಗೆಯ ಮಿಂಚಿನಿಂದ ಎಲ್ಲರ ವಿಶ್ವಾಸ ಗಳಿಸಿದ ನರ್ರೇನ್
ಎಲ್ಲರಿಗೂ ತಮ್ಮ ತಮ್ಮ ಪರಿಚಯ ಹೇಳಿಕೊಂಡರು
ನಾನು ನನ್ನ ಹೆಸರನ್ನು ಹೇಳಿ ನನ್ನ ಆಸಕ್ತಿಗಳನ್ನು ವಿವರಿಸಿದೆ
"ವಾವ್ ಗ್ರೇಟ್ ಕೋಇನ್ಸಿಡೆನ್ಸ್ ಮೈ ಇಂಟರೆಸ್ಟ್ ಮ್ಯಾಚ ವಿತ್ ಯು" ನಗುತ್ತಾ ಕೈ ಕುಲುಕಿ ಹೊರಟ
ತುಂಬಾ ಸುಂದರ ಜೊತೆಗೆ ಸ್ವಲ್ಪ ಸ್ಟೈಲಿಷ್ ಎನಿಸಿತು
ಅಂದೆಲ್ಲಾ ನರೇನ್‌ನ ಜೊತೆ ರಾಜೀವನ ಹೋಲಿಕೆಯಲ್ಲೇ ಕಳೆಯಿತು. ಆಫೀಸ್ನಲ್ಲೂ ಅವನ ಗುಣಗಾನ ನಡೆಯುತ್ತಿತ್ತು
ಸಂಜೆಯಾಯಿತು ಹೊಸ ಚಿತ್ರ ಪ್ರೇಮಕಾಗಿ ಬಿಡುಗಡೆಯಾಗಿತ್ತು. ರಾಜೀವಗೆ ಚಿತ್ರಕ್ಕೆ ಹೋಗೋಣ ಎಂದು ಹೇಳಿದ್ದೆ ಇನ್ನೇನು ಬರಬಹುದು.
ಆಫೀಸಿನ ಎಲ್ಲರೂ ಹೊರಡುತ್ತಿದ್ದರು . ನಾನೂ ಬ್ಯಾಗ್ ತೆಗೆದುಕೊಂಡು ಲಿಫ್ಟ್ ಗೆ ಪ್ರವೇಶಿಸಿ ಗ್ರೌಂಡ್ ಫ್ಲೋರ್ ಬಟನ್ ಒತ್ತಿದೆ
"ತೇರೆ ಬಿನಾ ಜಿಂದಗಿ ಹೈನ್ ಲೇಕಿನ್" ಮೊಬೈಲ್ ಹಾಡಲು ಶುರುವಾಯ್ತು. ರಾಜೀವನ ಕಾಲ್ ಅದು ಫೋನ್ ಆನ್ ಮಾಡಿದೆ
"ಸಿರಿ ಸಾರಿ ಸಿರಿ ಇವತ್ತು ಬರಕ್ಕಾಗ್ತಿಲ್ಲ, ನಾಳೇನೂ ಆಡಿಟಿಂಗ್ ಇದೆ ಹಾಗಾಗಿ ಮುಂದಿನವಾರ ಪ್ರೋಗ್ರಾಮ್ ಹಾಕಿಕೊಳ್ಲೋಣ"
ಸಿಟ್ಟು ಒತ್ತರಿಸಿಕೊಂಡು ಬಂತು. ಯಾವ ಮಾತನ್ನೂ ಆಡದೆ ಫೋನ್ ಕಟ್ ಮಾಡಿದೆ.
ಎಷ್ಟೆಲ್ಲಾ ಆಸೆ ಇಟ್ಟುಕೊಂಡು ಟಿಕೆಟ್ ಬುಕ್ ಮಾಡಿಸಿ ಜಸ್ಟ್ ಫಿಲಮ್ಗೆ ಬಂದು ಕೂತ್ಕೊ ಅಂದ್ರೂ ಬರಕ್ಕಾಗಲ್ಲ ಅಂದ್ರೆ ......
ಮತ್ತೆ ಫೋನ್ ಬಾರಿಸಿತು , ರಾಜೀವನದೆ ಸಾರಿ ಕೇಳ್ತಾನೆ , ಬೇಡ ಇನ್ನೊಂದೆರೆಡು ದಿನಾ ಆಟ ಆಡಿಸೋಣ . ಅಲ್ಲೀವರೆಗೆ ಮಾತಾಡೋದು ಬೇಡ.ಸಿನಿಮಾಗೆ ಸುಮನಾಳಿಗೆ ಬರಲು ಹೇಳಿದರೆ ಅವಳ ಜೊತೆ ಹೋಗಬಹುದು
ಲಿಫ್ಟ್ ಗ್ರೌಂಡ್ ಫ್ಲೋರ್ ಗೆ ಬಂದು ನಿಂತಿತು
ಮೊಬೈಲ್ ಆಫ್ ಮಾಡಿ ಸ್ಕೂಟಿಯ ಬಳಿ ಬಂದು ಸ್ಟಾರ್ಟ್ ಮಾಡಿದೆ ಸ್ಕೂಟಿ ಮುಂದೆ ಹೋಗುತ್ತಿದ್ದಂತೆ ಸಿಗ್ನಲ್ ಬಂತು ಸ್ಕೂಟಿ ನಿಲ್ಲಿಸುತ್ತಿದ್ದಂತೆ ಪಕ್ಕದಲ್ಲಿ ಕಾರೊಂದು ಬಂದು ನಿಂತಿತು.
"ನರೇನ್ "
ಹಾಯ್ ಎಂದು ಕೈಯಾಡಿಸಿದ
ಅವನ ನಗು ಒಂಥರಾ ಮೋಡಿ.
ನಾನು ಕೈ ಆಡಿಸಿ ಸುಮ್ಮನಾದೆ.
ಇನ್ನೂ ರೆಡ್ ಸಿಗ್ನಲ್ ಕಳೆಯಲು ಒಂದು ನಿಮಿಷ ಬೇಕು
ಸುಮನಾಗೆ ಫೋನ್ ಮಾಡಿದೆ
"ಸಾರಿ ಸಿರಿ ಇವತ್ತು ಮನೇಗೆ ಹೋಗ್ಬೇಕು ಗಂಡಿನ ಕಡೆಯವರು ಬರ್ತಾರೆ. ಅದಕ್ಕೆ ಅಕ್ಕನ್ನ ರೆಡಿ ಮಾಡ್ಬೇಕು" ಸುಮನಾಳ ದನಿ ಕೇಳಿತು
ಛೆ
ಒಂಥರಾ ಡಿಸ್ ಅಪಾಯಿಂಟ್ ಆಯ್ತಾದರೂ
ಸರಿ ಯಾರೂ ಬೇಡ ಒಬ್ಬಳೇ ಹೋಗೋಣ ಎಂದುಕೊಂಡು ಸಿಗ್ನಲ್ ಬಿಟ್ಟ ತಕ್ಷಣ ಪಿ.ವಿ.ಆರ್ ಕಡೆ ಸ್ಕೂಟಿ ತಿರುಗಿಸಿದೆ.
ಪಿ.ವಿಆರ್‌ನಲ್ಲಿ ಸ್ಕೂಟಿ ಪಾರ್ಕ್ ಮಾಡಿ ಬಂದು ಎಸ್ಕಲೇಟರ್ ಮೇಲ್ ಕಾಲಿಡುತ್ತಿದ್ದಂತೆ ಪಕ್ಕದಲ್ಲಿಯೇ ನರೇನ್ ನಿಂತಿದ್ದ
ಅವ್ನು ನನ್ನನ್ನು ನೋಡಬಾರದೆಂದು ಇತ್ತ ತಿರುಗಿದೆ. ನಂತರ ಜನ ಜಂಗುಳಿಯಲ್ಲಿ ಎಲ್ಲಿ ಕರಗಿದ್ದನೋ ಗೊತ್ತಾಗಲಿಲ್ಲ
ಪಕ್ಕದ ಸೀಟು ನಾನೆ ಬುಕ್ ಮಾಡಿದ್ದುದರಿಂದ ಖಾಲಿ ಇತ್ತು
ಆಗಾಗ ಮುಂದಿದ್ದ ಹುಡುಗರು ಹಿಂದೆ ತಿರುಗಿ ನೋಡುವುದು ಬಿಟ್ಟರೆ ಏನೂ ತೊಂದರೆಯಾಗಲಿಲ್ಲ
ಸಿನಿಮಾ ಚೆನ್ನಾಗಿತ್ತು
ಪ್ರೇಮಕ್ಕಾಗಿ ಪಡಬಾರದ ಪಾಡು ಪಡುವ ಹುಡುಗ ಹುಡುಗಿ . ಮಧ್ಯೆ ಮಧ್ಯೆ ರೋಮಾನ್ಸ್, ಎಲ್ಲಾ ನನಗೆ ಇಷ್ಟ.
ಸಿನಿಮಾ ಮುಗಿದು ಹೊರ ಬರುತ್ತಿದ್ದಂತೆ ನನ್ನ ಹಿಂದೆಯೇ ನರೇನ್ ಅರೆ ಇದೇನು ಇವನೂ ಇದೇ ಸಿನಿಮಾಗೆ ಬಂದಿದ್ದನಾ?
ಈಗ ಮಾತಾಡಿಸಲೇಬೇಕೆನಿಸಿತು
ಹಿಂದೆ ತಿರುಗಿ ಮಾತಾಡಿಸಿದೆ
"ಹಾಯ್ ಎಂದೆ"
"ಅರೆ ನೀವು . ಹೇಗಿತ್ತು ಫಿಲ್ಮ್" ನನ್ನನ್ನು ಗಮನಿಸಿಯೇ ಇಲ್ಲ
"ಚೆನ್ನಾಗಿತ್ತು" ಬೇರೆ ಪ್ರಶ್ನೆ ನಿರೀಕ್ಷಿಸಿದ್ದೆ ಎಷ್ಟು ಕ್ಯಾಸುಯಲ್ ಆಗಿ ಕೇಳ್ತಾ ಇದಾನೆ ಅನ್ನಿಸಿತು
"ನಂಗೆ ಇಷ್ಟವಾಗಿರೋ ಫಿಲಮ್ ಫಸ್ಟ್ ಡೇ ಫಸ್ಟ್ ಶೋ ಫಸ್ಟ್ ಸೀಟ್ , ಇವತ್ತು ರಿಪೋರ್ಟ್ ಮಾಡ್ಕೋಬೇಕಿತ್ತಲ್ಲ ಅದಕ್ಕೆ ಸಂಜೆ ಬಂದಿದ್ದೆ"
"ಓ ನನಗೂ ಅಷ್ಟೆ ಆದರೆ ಕೆಲಸ ಇದ್ಯಲ್ಲ ಹ್ಯಾಗೆ ಬರೋಕಾಗುತ್ತೆ"
ಹಾಗೆ ಮಾತಾಡುತ್ತಾ ಕಾಫಿ ಡೇ ಕಡೆ ಹೆಜ್ಜೆ ಹಾಕಿದೆವು ಕಾಫಿ ಕುಡಿಯುತ್ತಾ ಮಾತು ಆರಂಭಿಸಿದೆವು
ಅವನಿಗೂ ನನ್ನ ಹಾಗೆಯೆ ಕತೆ ಕವನ ,ಕಾದಂಬರಿ, ನಾಟಕ ತುಂಬಾ ಪ್ರಿಯವಾದವುಗಳು ಎಂದು ತಿಳಿಯಿತು
ಆಗಾಗ ಅವನೇ ಅಶುಕವಿಯಂತೆ ಒಂದೆರೆಡು ಕವಿತೆಗಳನ್ನು ಕಟ್ಟಿದ.
ಅವನ ಜೊತೆಗಿದ್ದಂತೆ ಹತ್ತು ನಿಮಿಷಗಳು ಆಗಿದ್ದು ತಿಳಿಯಲೇ ಇಲ್ಲ.
ಸರಿ ಲೇಟ್ ಆಯ್ತು ಎಂದುಅವನೇ ಹೊರಟ
ಕೋರಮಂಗಲದ ಬಳಿಯಲ್ಲೇ ನಮ್ಮ ಪಿಜಿ ಇರೋದು
ರಾತಿ ಎಂಟುವರೆಯ ಮೇಲೆ ಹೋದರೆ ಮನೆಯಾಕೆಯ ಕಣ್ಣು ಕೆಂಪಾಗುತ್ತದೆ.
ಮೈಯ್ಯನ್ನೆಲ್ಲಾ ಕಣ್ಣಲ್ಲೇ ಸ್ಕಾನ್ ಮಾಡಿ ಒಳಗೆ ಕಳಿಸುತ್ತಾಳೆ
ಇವತ್ತೂ ಅದೇ ಗತಿ
ಸ್ಕೂಟಿ ಸ್ಟಾರ್ಟ್ ಮಾಡಿ ನರೇನ್ ಹೋದ ವಿರುದ್ದ ದಿಕ್ಕಿಗೆ ಹೊರಟೆ
ಮನದಲ್ಲಿ ಮಂಥನ ಶುರುವಾಯ್ತು. ಏಕೋ ರಾಜೀವನ ಬದಲು ಮನಸ್ಸು ನರೇನನ ಬಗ್ಗೆ ಯೋಚಿಸಲಾರಂಭಿಸಿತು.

Sunday, February 8, 2009

ಪ್ರೇಮವೊಂದು ಹುಚ್ಚು ಹೊಳೆ ಭಾಗ -೧

"ಹರೀಶ್ ನೋಡೋ ಅಲ್ಲಿ" ಸೋಮು ಕೂಗಿದ

ಚಪ್ಪಲಿ ರಾಕಿನಲ್ಲಿ ಎತ್ತಿಡುತ್ತಿದ್ದ ಹರೀಶ್‌ನ ದೃಷ್ಟಿ ಬಾಗಿಲ ಕಡೆಗೆ ಬಿತ್ತು

ಕನಸೋ ನನಸೋ ತಿಳಿಯದಾಯಿತು
ಅವನ ಆರಾಧ್ಯ ಮೂರ್ತಿ, ಪ್ರಖ್ಯಾತ ಸಿನಿ ನಾಯಕಿ ಸ್ಮಿತ ನಿಂತಿದ್ದಳು
ಎಲ್ಲರೂ ಅವಳೆಡೆ ಓಡಿದರು
ಸ್ಮಿತಾ ಹೆಸರಿನಂತೆಯೇ ತನ್ನ ನಗುವಿನಿಂದಲೇ ಕನ್ನಡ ಸಿನಿ ರಂಗದಲ್ಲಿ ಮೋಡಿ ಮಾಡಿದ್ದಳು
ಮಾದಕ ಸುಂದರಿ, ಕಣ್ನಿನಲ್ಲೇ ಕೊಲ್ಲುವ ಹುಡುಗಿ ಕೇವಲ ಮೂರು ವರ್ಷದಲ್ಲಿ ಇಡೀ ಚಿತ್ರರಂಗವನ್ನೇ ಆಳಲಾರಂಬಿಸಿದ್ದ್ದಳು
ಅಂತಹ ನಾಯಕಿ ಇಂದು ತಾನಾಗೆ ಈ ಚಪ್ಪಲಿ ಅಂಗಡಿಗೆ ಬಂದಿದ್ದಳು

ಹರೀಶ್ ಕೆಲ್ಸ ಮಾಡಿತ್ತಿದ್ದ ಚಪ್ಪಲಿ ಅಂಗಡಿಯೂ ಯಾವ ಐಶಾರಾಮಿ ಬಂಗಲೆಗೂ ಕಡಿಮೆ ಇರಲಿಲ್ಲ. ಚಪ್ಪಲಿಯ ಬೆಲೆ ಕಡಿಮೆಯದ್ದು ಎಂದರೆ ಇಪ್ಪತ್ತೈದು ಸಾವಿರ. ಹೆಚ್ಚಿಗೆ ಎಲ್ಲೆಯೇ ಇರಲಿಲ್ಲ.

ಸ್ಮಿತಾ ಬರುತ್ತಿರುವುದು ಮೊದಲ ಬಾರಿ ಏನಲ್ಲ

ಆದರೆ ಹರೀಶ್ ಇತ್ತೀಚಿಗೆ ಈ ಅಂಗಡಿಗೆ ಕೆಲ್ಸಕ್ಕೆ ಸೇರಿದ್ದ . ಹಿಂದೆ ಇದ್ದ ಕೆಲಸ ಬಿಟ್ಟು ಸೇರಿದ್ದು ಕೇವಲ ಸ್ಮಿತ ಇಲ್ಲಿಗೆ ಬರುತ್ತಾಳೆಂದು.

ಮೊಬೈಲ್‌ನಲ್ಲಿ ಮಾತಾಡುತ್ತಾ ಒಳಗೆ ಬಂದ ಸ್ಮಿತಾಗೆ ಸನ್ನೆಯಲ್ಲೇ ಕೂರಲು ಹೇಳಿದ. ಆ ಮೆತ್ತನೆಯ ಸೋಫ ಕೇವಲ ಅಂತಹ ಗಣ್ಯರಿಗಾಗಿ ಮೀಸಲು. ಹರೀಶನಂತಹವರು ತಮಾಷೆಗಾಗಿಯೂ ಅಲ್ಲಿ ಕೂರುವಂತಿಲ್ಲ
ಫೋನಿನಲ್ಲೇ ಮಾತಾಡುತ್ತಾ ಕುಳಿತವಳನ್ನೇ ಎವೆ ಇಕ್ಕದೆ ನೋಡಲಾರಂಭಿಸಿದ.
ಬದುಕಿನ ಸೌಭಾಗ್ಯವೆಲ್ಲಾ ಅಲ್ಲೇ ಇದೆ ಏನೋ ಎಂಬಂತೆ ಭಾಸವಾಗತೊಡಗಿತು
ಬೇಡೆಂದರೂ ಮುಂದೆ ಬರುತ್ತಿದ್ದ ಮುಂಗುರಳನ್ನು ತನ್ನ ನೀಳ ಬೆರಳುಗಳಿಂದ ಹಿಂದೆ ಸರಿಸುತ್ತಾ ಅವಳ ತುಟಿಗಳೆರೆಡು ಒಂದರ ಮೋಡಿಗೆ ಇನ್ನೊಂದು ಒಳಗಾಗಿವೆ ಎಂಬಂತೆ ಪದೆ ಪದೆ ಮುತ್ತಿಡುತ್ತಿದ್ದಂತೆ ಇವನ ಮನದಲ್ಲಿ ಕಂಪನ ಕಣ್ಣ ಎವೆಗಳು ಅವಳ ಕಂಗಳನ್ನು ಚುಂಬಿಸಲೆಂದೆ ಬಾಗುತ್ತಿದ್ದವು. ನೀಳ ಮೂಗಿನ ಸುಂದರಿ ಅವಳು ಬೆಳ್ಳನೆ ಮೈ . ಹಾಲಿನ ಕೊಳದಲ್ಲೇ ಇದ್ದಾಳೇನೋ ಎಂಬಂಥಾ ರೂಪ ನೀಳ ಮೈ ಮಾಟ. ಹರೀಶನ ಭಾಗ್ಯಕ್ಕೆ ಎಣೆಯೇ ಇಲ್ಲವಾಗಿತ್ತು.

"ಏಯ್ ಏಳೋ ಮೇಲೆ "
ಗುಡುಗಿನ ಕೂಗಿಗೆ ಎಚ್ಚರವಾಗಿ ವಾಸ್ತವಕ್ಕೆ ಬಂದನು ಅವಳನ್ನೇ ನೋಡುತ್ತಾ ಗೊತ್ತಿಲ್ಲದೆ ಅವಳ ಎದುರಿಗಿದ್ದ ಸೋಫಾ ಮೇಲೆ ಕೂತು ಬಿಟ್ಟಿದ್ದ.
ಸ್ಮಿತಾಳ ಸೆಕ್ರೆಟರಿ ಬೊಬ್ಬೆ ಹೊಡೆಯುತ್ತಿದ್ದ.
"ಏನು ಮೇಡಮ್ ಸಮಕ್ಕೂ ಕೂತ್ಕೋತೀಯ ಈಡಿಯಟ್ ಏಳೋ ಮೇಲೆ "
ಹರೀಶ್ ನಡುಗತೊಡಗಿದ. ಏನು ಹೇಳಲು ತೋಚಲಿಲ್ಲ
ಸ್ಮಿತಾ ಕೂಡ ಫೋನ್ ಆಫ್ ಮಾಡಿ ಸೆಕ್ರೆಟರಿಯತ್ತ ಏನು ಎಂಬಂತೆ ನೋಡಿದಳು
"ಮೇಡಮ್ ನೀವು ಮಾತಾಡ್ತಾ ಇದ್ದರೆ ನಿಮ್ಮನ್ನೇ ಒಳ್ಳೆ ತಿಂದುಬಿಡೋ ಹಾಗೆ ಇಷ್ಟು ಹತ್ರದಲ್ಲಿ ಕೂತ್ಕೊಂಡು ನೋಡ್ತಿದ್ದ ಇವನು"
ಸೆಕ್ರೆಟರಿ ಆರೋಪಿಸಿ ಹರೀಶನನ್ನು ಕಡಿದುಬಿಡುವಂತೆ ನೋಡಿದ.
ಸ್ಮಿತಾ ಒಮ್ಮೆ ಹರೀಶನನ್ನು ನೋಡಿದಳು ಆ ನಡುಕದಲ್ಲಿಯೂ ಅವಳ ದೃಷ್ಟಿ ತನ್ನ ಮೇಲೆ ಹರಿದಿದ್ದಕ್ಕೆ ಜನ್ಮ ಪಾವನವಾಯ್ತು ಎಂದು ಕೊಂಡ.
ಮತ್ತೆ ಮಂದ ಸ್ಮಿತಳಾಗಿ "ರಾಜೀವ್ ಹೋಗಲಿ ಬಿಡಿ ಅವನಿಗೇ ಗೊತ್ತಿಲ್ಲದೆ ಹಾಗೆ ಮಾಡಿದ್ದಾನೆ. ಲೆಟ್ ಅಸ್ ನಾಟ್ ಮೇಕ್ ಇಟ್ ಬಿಗ್ ಇಶ್ಯೂ " ನುಡಿದಳು
ಒಮ್ಮೆ ಹರೀಶನತ್ತ ನೋಡಿ ನಕ್ಕಳು
ಇಂಗ್ಲೀಶ್ ಮಾತಾಡಲು ಬರದಿದ್ದರೂ ಅರ್ಥವಾಗುತಿತ್ತು
ಕೊನೆಗೆ ಕಸ್ಟಮರ್ ಕೇರ್ ಒಬ್ಬರು ಬಂದು ಅವಳಿಗೆ ಸ್ಲಿಪ್ಪರ್ ತೋರಿಸಲು ಕರೆದು ಕೊಂಡು ಹೋದರು.
ರಾಶಿ ಬಿದ್ದಿದ್ದ ಚಪ್ಪಲಿಗಳನ್ನೆಲ್ಲ ಎತ್ತಿಡಲು ಬಗ್ಗುತ್ತಿದ್ದಂತೆ
"ಏನೋ ಹರಿ ಸ್ಮಿತಾ ನಿಂಗೆ ಸಪ್ಪೋರ್ಟ್ ಮಾಡಿದ್ರು. ಏನ್ ವಿಷಯ" ಗುರು ಕೀಟಲೆ ಮಾಡಿದ
"ಏನೋ ಒಂಥರಾ ಏನೋ ಒಂಥರಾ " ಸೋಮ ಹಾಡತೊಡಗಿದ .

ಇವನಿಗೋ ಮನದಲ್ಲಿ ಯಾವುದೋ ವೀಣೆ ಮಿಡಿದ ಹಾಗೆ ರಕ್ತವೆಲ್ಲಾ ಮುಖಕ್ಕೆ ಚಿಮ್ಮಿತು
ಮೊದಲೇ ಬಿಳಿ ಮುಖ . ಈಗ ಕೆಂಪಗಾಗಿತ್ತು
ಸ್ಮಿತಾ ಕಾಲಿಗೆ ಹಾಕಿದ್ದ ಚಪ್ಪಲಿ ಬಿಟ್ಟು ಹೊಸ ಚಪ್ಪಲಿ ಹಾಕಿಕೊಂಡಳು. ಆ ಹಳೇ ಚಪ್ಪಲಿ ಯಾರು ಬೇಕಾದರೂ ತೆಗೆದುಕೊಳ್ಳಬಹುದಿತ್ತು.
ಅವಳ ಕಾಲಿನ ಸ್ಪರ್ಶವಾಗಿದ್ದ ಆ ಚಪ್ಪಲಿಯನ್ನು ಪ್ರೀತಿಯಿಂದ ತೆಗೆದು ಒಂದು ಬಾಕ್ಸಿನಲ್ಲಿ ಹಾಕಿಟ್ಟ . ಅದನ್ನು ಅವಳೂ ನೋಡಿದಳು
ಮತ್ತೊಮ್ಮೆ ಅವಳ ನೋಟ ಇವನ ನೋಟಕ್ಕೆ ಬೆರೆಯಿತು. ಹರೀಶನ ಆನಂದ ಮೇರೆ ಮೀರಿತು
ಹೋಗುವಾಗ ಬಾಯ್ ಹೇಳಿ ಹೊರಟಳು. ಸೆಕ್ರೆಟರಿ ಮಾತ್ರ ಸಿಡಿಮಿಡಿಗುಟ್ಟುತ್ತಿದ್ದ.
ಅದಾದ ಎರಡೆ ದಿನಕ್ಕೆ ಹರೀಶ ಕೆಲಸ ಹೋಯಿತು. ಕಾರಣ ಸ್ಮಿತಾ ಮೇಡಮ್ ತೆಗೆಯಲು ಹೇಳಿದ್ದಾರೆ ಎಂಬ ಉತ್ತರ ಬಂತು.
ಹರೀಶ ಗೋಗರೆದ ಬೇಡಿಕೊಂಡ. ಮನೆಯಲ್ಲಿ ತಂಗಿಯ ಮದುವೆಗೆ ಹಣ ಜೋಡಿಸಬೇಕು ಎಂದು ಅತ್ತ
ಮಾಲೀಕ ಮಾತ್ರ ಕಲ್ಲು ಹೃದಯಿಯಾಗಿದ್ದ
ಅಷ್ಟೆಲ್ಲಾ ಬೆಂಬಲಿಸಿದ ಸ್ಮಿತಾ ಹೀಗೇಕೆ ಮಾಡಿದ್ದಾಳೆಂದು ಯೋಚಿಸುತ್ತಲೇ ಇದ್ದ. ಸ್ವಲ್ಪ ಹೊತ್ತಿಗೆ ಅವನ ಮೊಬೈಲ್‌ಗೆ ಕಾಲ್ ಬಂತು
ಸ್ಮಿತಾ ಮೇಡಮ್ ಮನೆಯಿಂದ ಅದು "ಮೇಡಮ್ ಕೂಡಲೆ ಬರುವಂತೆ ಹೇಳಿದ್ದಾರೆ" ಎಂದು ಹೇಳಿದರು ಅಲ್ಲಿಂದ
ಅನಿರೀಕ್ಷಿತ ಘಟನೆ . ಅದೇನೋ ನಿಜವೋ ಭ್ರಮೆಯೋ . ಏಕಿರಬಹುದು ಅವತ್ತು ಹಾಗೆ ನೋಡಿದ್ದಕ್ಕೆ ಸ್ಮಿತಾ ಕೋಪ ಮಾಡಿಕೊಂಡು ತನ್ನನ್ನು ಹೊಡೆಸಲು ಕರೆಸಿರಬಹುದೇ ಎಂಬ ಯೋಚನೆಯೂ ಬಂತು.
ಮೊಬೈಲ್ನಲ್ಲು ಸ್ಮಿತಾ ಚಿತ್ರವೇ. ನೋಡುತ್ತಾ ಇಲ್ಲ ಅದಿರಲಿಕ್ಕಿಲ್ಲ ಎಂದುಕೊಂಡು ಧೈರ್ಯ ಮಾಡಿಕೊಂಡು ಮನೆಗೆ ಹೋದ
ವಾಚಮನ್ ಕೂಡ ಅವನನ್ನು ಒಳಗೆ ಬಿಟ್ಟ. ಮೇಲೆ ಬಾಲ್ಕನಿಯಲ್ಲಿ ಸ್ಮಿತಾ ನಿಂತಿದ್ದಳು ಜೊತೆಗೆ ಅವಳ ಗಾಡಫಾದರ್ ಅಮರ್ ಪಾಲ್ ಕೂಡ. ಇಬ್ಬರ ನಡುವೆಯ ಏನೋ ಮಾತು ಕಥೆ ನಡೆಯುತ್ತಿತ್ತು.
ಆ ಬಂಗಲೆ ನೋಡಿ ದಂಗಾಗಿ ಹೋದ
ಅಬ್ಬಾ ಏನೋ ವೈಭವ ಅಂತಹ ಮನೆಗಳನ್ನು ಕೇವಲ ಸಿನಿಮಾದಲ್ಲೆ ಮಾತ್ರ ನೋಡಿದ್ದ. ಸ್ಮಿತಾಳನ್ನು ಕಾಣಲು ಜನವೋ ಜನ . ನಿರ್ಮಾಪಕರು, ನಿರ್ಧೇಶಕರು, ನಟರು, ನಾಯಕರು . ಸುಮಾರು ಜನ ಆಳುಕಾಳುಗಳು.
ತಾನೆಲ್ಲಿ ನಿಲ್ಲುವುದು ಎಂದು ತಿಳಿಯದೆ ಹೊರಗಡೆಯೇ ನಿಂತಿದ್ದ
ಅಷ್ಟರಲ್ಲಿ ಮನೆಯ ಆಳೊಬ್ಬ ಬಂದು ಮನೆಯ ಹಿಂದಿನ ಪಾರ್ಕ್ ಬಳಿ ಹೋಗಲು ಹೇಳಿದ.
ತಡಕಾಡಿಕೊಂಡು ಅಲ್ಲಿ ಹೋದ ಸ್ಮಿತಾ ಸೆಕ್ರೆಟರಿ ರಾಜೀವ್ ಇದ್ದ ಅಲ್ಲಿಯೇ
"ನೋಡಪ್ಪ ಮೇಡಮ್ ನಿನ್ನನ್ನ ಅವರ ಮನೆಗೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಅಂತ ಇಷ್ಟ ಪಟ್ಟಿದ್ದಾರೆ ಇದೇ ಮನೆಲಿ ಕೆಲಸ ಬಂದೋರಿಗೆ ಕೂರಿಸಿ ಅವರನ್ನ ನೋಡಿಕೊಳ್ಳೋದು ಉಪಚಾರ ಮಾಡೋದು ಅಷ್ಟೆ ಸಂಬಳ ಚಪ್ಪಲಿ ಅಂಗಡೀಗಿಂತ ಜಾಸ್ತಿ ಸರೀನಾ ಇವತ್ತಿಂದಾನೆ ಜಾಯಿನ್ ಆಗು ಆಯ್ತಾ. ಅಂದ ಹಾಗೆ ನಿಂಗೊಂದು ರೂಮ್ ಕೂಡ ಇದೆ ನೀನುಇಲ್ಲೇ ಇರಬೇಕು ಗೊತ್ತಾಯ್ತಾ" ಅವನು ಹರೀಶನ ಯಾವ ಉತರಕ್ಕೂ ಕಾಯಲಿಲ್ಲ. ಇದು ಅಪ್ಪಣೆ ಎಂಬಂತೆ ಇತ್ತು ಅವನ ಮಾತಿನ ಧಾಟಿ
ಹರೀಶನ ಮನಸ್ಸು ಆಗಸದಲ್ಲಿ ಓಲಾಡಿತು.
ಎಂಥ ಭಾಗ್ಯ. ಸ್ಮಿತ ದ ಗ್ರೇಟ್ ಮೇಡಮ್ ನನ್ನನ್ನು ಅವರ ಮನೆಯ ಕೆಲಸಕ್ಕೆ ಕರೆದು ಸೇರಿಸಿಕೊಂಡಿದ್ದಾರೆ ಎಂಬುದನ್ನು ನೆನೆಸಿ ನೆನೆಸಿ ಸಂತಸ ಪಡಲಾರಂಭಿಸಿದ .
ಅಂದೇ ಅವನ ಮನೆಯಿಂದ ಅವನ ವಸ್ತುಗಳೆಲ್ಲಾ ಅವನ ಹೊಸ ರೂಮಿಗೆ ರವಾನೆಯಾದವು. ಹರೀಶನ ಅಮ್ಮ ಹಾಗು ತಂಗಿಗೂ ಖುಶಿ . ದೊಡ್ಡ ಹೀರೋಯಿನ್ ಮನೇಲಿ ಮಗ ಕೆಲ್ಸ ಮಾಡುತ್ತಾನೆ ಎಂಬುದೇ ಅವರಿಗೆ ಹಿಗ್ಗಿನ ವಿಷ್ಯ.
ಆದರೆ ಕೆಲಸಕ್ಕೆ ಬಂದ ದಿನ ಅವನಿಗೆ ನಿರಾಸೆ. ಒಟ್ತು ಹದಿನೈದು ಜನ ಕೆಲಸದವರು. ಅವರಲ್ಲಿ ಐದು ಜನ ಇದೇ ಕೆಲಸಮಾಡುತ್ತಿದ್ದವರು. ಅದರಲ್ಲಿ ಅವನಿಗೆ ಕೆಲಸವೇ ಇಲ್ಲ. ಸ್ಮಿತಾ ಬೆಳಗ್ಗೆ ಹೋಗುವಾಗ ಇವನತ್ತ ಕೈ ಬೀಸಿದಳು. ಅಷ್ಟು ಸಾಕಾಗಿತ್ತು.
ಅಂದೆಲ್ಲಾ ಕೆಲಸವಿಲ್ಲದೆ ಕೂತಿದ್ದ.
ಹೊತ್ತು ಹೊತ್ತಿಗೆ ಊಟ ಸಿಕ್ಕಿತು.
ಜೊತೆಗೆ ಕೆಲ್ಸದಾಳು ಮುನಿಯನ ಜೊತೆ ಕೂತಾಗ ಸ್ಮಿತಾಳ ಹಿಂದಿನ ವಿಷ್ಯಗಳು ತಿಳಿದವು
"ಸ್ಮಿತಾ ಹುಟ್ಟಿದ್ದು ಯಾವುದೋ ಸ್ಲಮ್ಮಿನಲ್ಲಿ ಆದರೆ ಅವಳ ರೂಪು ಲಾವಣ್ಯಗಳಿಂದ ನಿರ್ಮಾಪಕ ಅಮರ್ ಪಾಲ ಕಣ್ಣಿಗೆ ಬಿದ್ದಳು. ಅಮರ್ ಪಾಲ್‌ರಾ ಅಪ್ಪಣೆಯಿಲ್ಲದೆ ಅವಳು ಯಾವ ಪ್ರಾಜೆಕ್ಟ್ ಅನ್ನೂ ಕೈಗೆತ್ತಿಕೊಳ್ಳುವುದಿಲ್ಲ. ಅವಳ ಸಂಭಾವನೆಯನ್ನೂ ಅವನೆ ಗೊತ್ತು ಮಾಡುವುದು. ಮುಂದೆ ಅವರಿಬ್ಬರೂ ಮದುವೆಯಾಗಬಹುದು ಎಂದಾಗ ಮಾತ್ರ ಹರೀಶನ ಮನದಲ್ಲಿ ಕಸಿವಿಸಿಯಾಯ್ತು. ಅವಳ ವಯಸ್ಸು ಇಪ್ಪತ್ತಿರಬಹುದು . ಅಮರಪಾಲ್ ತನ್ನಪ್ಪನ ಕಾಲದಿಂದಲೂ ಚಲನ ಚಿತ್ರ ನಿರ್ಮಿಸುತ್ತಿದ್ದಾನೆ. ಏನಿಲ್ಲ ಎಂದರೂ ಐವತ್ತಕ್ಕಿಂತ ಹೆಚ್ಚು ಇರಬಹುದುಅವನ ವಯಸ್ಸು . ಅವನಂತ ಮುದಿಗೂಬೆಗೆ ಇಂತಹ ದಂತದ ಗೊಂಬೆಯೇ?
ಭಗವಂತಾ ಯಾವ್ಯಾವ ಹೂವಿನ ಮೇಲೆ ಯಾರ್ಯಾರ ಹೆಸರನ್ನು ಬರೆದಿಟ್ಟಿದ್ದೀಯೋ ಎಂದುಕೊಂಡಾಗ ಭಗವಂತ ಈ ಹೂವಲ್ಲಿ ನಿನ್ನ ಹೆಸರಿದೆ ಎಂದಂತೆ ಭಾಸವಾಗಿ ಪುಳಕೊಗೊಂಡ.
ಅಂದು ರಾತ್ರಿ ಹನ್ನೆರೆಡಾಗಿತ್ತು ಚೆನ್ನಾಗಿ ತಿಂದು ಗಡದ್ದಾಗಿ ನಿದ್ರಿಸುತ್ತಿದ್ದ .ಅವನ ಮೊಬೈಲ್ ಕೂಗಿತು . " ಬಂದಿದೆ ಬದುಕಿನ ಬಂಗಾರದಾ ದಿನ" ಎಂಬ ಹಾಡದು ಅವನ ತಂಗಿ ಸೆಟ್ ಮಾಡಿಟ್ಟಿದ್ದಳು.
ನಿದ್ದೆಗಣ್ಣು
ಆ ನಂಬರ್ ಯಾರದು ಅಂತಲೂ ತಿಳಿಯಲಿಲ್ಲ
ಯಾರಪ್ಪ ಇಷ್ಟು ಹೊತ್ತಲ್ಲಿ ಎಂದುಕೊಂಡು
"ಹಲೋ" ಎಂದ
"ಹ...ಲೋ" ಎಂಬ ಇಂಪಾದ ದನಿ ಎಲ್ಲೋ ಕೇಳಿರುವಂತಿದೆಯಲ್ಲಾ ಕೂಡಲೆ ನೆನಪಿಗೆ ಬಂತು ಸ್ಮಿತಾ ತನ್ನ ಚಿತ್ರಗಳಿಗೆ ತಾನೆ ಡಬ್ ಮಾಡುತ್ತಿದ್ದುದರಿಂದ ಅವಳ ದನಿ ಅವನಿಗೆ ಪರಿಚಿತವಾಗಿತ್ತು
"ಮೇ..................................ಡ..............................ಮ್?"
ನಡುಗುವ ದನಿಯಲ್ಲಿ ಕೇಳಿದ ಅವಳು ತನ್ನೊಂದಿಗೆ ಮಾತನಾಡಬಹುದು ಎಂಬ ಕಲ್ಪನೆಯೂ ಇರಲಿಲ್ಲ
"ನಾನು ಜೋರಾಗಿ ಮಾತಾಡೋಹಾಗಿಲ್ಲ್ಲ ದಯವಿಟ್ಟು ನೀವೂ ಜೋರಾಗಿ ಮಾತಾಡಬೇಡಿ ನಾನು ಹೇಳೋದು ಕೇಳಿಸಿಕೊಳ್ಳಿ"
ಎಂದಳು
ಇಂತಹ ಮಹಾರಾಣಿಗೆ ಮಾತನಾಡಲೂ ಕಷ್ಟವೇ . ಅಯ್ಯೋ ಎನಿಸಿತು
ಅವಳು ಮಾತಾಡತೊಡಗಿದಳು
ಎಲ್ಲವನ್ನು ಕೇಳಿಸಿಕೊಂಡ
ಅವಳು ನಾಳೆ ಮತ್ತೆ ಮಾಡುವುದಾಗಿ ಹೇಳಿ ಫೋನಿಟ್ಟಳು
ದಂಗಾಗಿ ಕುಳಿತ
ಮತ್ತೂಮೆ ಅವಳ ಮಾತುಗಳು ಮಾರ್ದನಿಸತೊಡಗಿದವು
"ಸಾರಿ ನನ್ನ ಮನಸಲ್ಲಿ ಇರೊದೆಲ್ಲಾ ಎಲ್ಲಾದ್ರೂ ಹೇಳಿಕೊಳ್ಬೇಕು ಅಂತ ಅನ್ನಿಸ್ತಿತ್ತು ಆದರೆ ಹೇಳಿಕೊಳ್ಳೋಕೆ ಕೇಳ್ಸಿಕೊಂಡು ಸಮಾಧಾನ ಮಾಡೋ ಅಂತಹ ಯಾವುದೂ ಹೃದಯಾನೂ ಸಿಗಲಿಲ್ಲ. ಆದರೆ ನಿಮ್ಮನ್ನ ಆವತ್ತು ಚಪ್ಪಲಿ ಅಂಗಡೀಲಿ ನೋಡಿದಾಗಿನಿಂದ ನೀವೆ ನನ್ನ ದನಿಗೆ ಕಿವಿಯಾಗಬಲ್ಲವರು ಅಂತ ಅನ್ನಿಸಿತು. ನಾನು ಎಲ್ಲರ ಹೃದಯಕ್ಕೂ ರಾಣಿ ಆದರೆ ನನ್ನ ರಾಜನನ್ನ ಆರಿಸೋ ಸ್ವಾತಂತ್ರ್ಯ ನಂಗೆ ಇಲ್ಲ. ನಂಗೆ ಬೀದೀಲಿ ಸುತ್ತಬೇಕು. ಸಾಮಾನ್ಯನೊಬ್ಬನ ಹೆಂಡತಿಯಾಗಬೇಕು.ಅವ್ನು ಬೀದಿಲಿ ಕೊಡಿಸೋ ಪಾನಿಪೂರಿ ಮಸಾಲೆ ಪೂರಿ ತಿನ್ನುತ್ತಾ ಥಿಯೇಟ್‌ರ್ ಗೆ ಹೋಗಿ ಸಿನಿಮಾ ನೋಡಬೇಕು ಅಂತೆಲ್ಲಾ ಆಸೆ ಇದೆ. ಆದರೆ ನಾನು ನನ್ನಿಷ್ಟ ಬಂದ ಹಾಗೆ ಇರೋ ಹಾಗಿಲ್ಲ . ಅಮರಪಾಲ್ ನಂಗೆ ಸಿನಿಮಾರಂಗಕ್ಕೆ ಕರೆದುಕೊಂಡು ಬಂದರು ನಿಜಾ ಆದರೆ ನಂಗೆ ಅವರು ತಂದೆ ಇದ್ದ ಹಾಗೆ ಅವರನ್ನು ಯಾವತ್ತೂ ಮದುವೆಯಾಗೋ ದು ಮನಸಲ್ಲಿ ಇಲ್ಲ . ಆದರೆ ನಾನು ಅವರನ್ನೇ ಮದುವೆಯಾಗಬೇಕು ಅಂತ ಅವರ ಒತ್ತಾಯ. ಇಲ್ಲವಾದರೆ ಬಲವಂತವಾಗಿಯಾದರೂ ನನ್ನನ್ನ ಮದುವೆಯಾಗ್ತೀನಿ ಅಂತ ಹೇಳಿದಾರೆ. ನಂಗೆ ನಿಜಕ್ಕೂ ಇಷ್ಟ ಇಲ್ಲ. ಆದರೆ ಅವರನ್ನು ಎದುರು ಹಾಕಿಕೊಳ್ಳೋದಿಕ್ಕೂ ಭಯ . ನಾನೇನ್ಮಾಡಲಿ ಅನ್ನೋದೆ ಪ್ರಶ್ನೆಯಾಗಿ ಹೋಗಿದೆ."
ಆ ಮಾತುಗಳೇ ಮತ್ತೆ ಮತ್ತೆ ಅವನ ತಲೆಯಲ್ಲಿ ಸುತ್ತತೊಡಾಗಿದವು
ಹರೀಶನ ಕಣ್ಣಲ್ಲಿ ನೀರು ಬಂತು
ಪಾಪ ದೊಡ್ಡವರ ಬಾಳೇ ಹೀಗೆಯೇ
ಹೇಗಾದರೂ ಮಾಡಿ ಸ್ಮಿತಾಗೆ ಸಹಾಯ ಮಾಡಬೇಕು
ಆದರೆ ಹೇಗೆ?
ಬಡವ ನೀ ಮಡಗಿದಂಗಿರು ಅಂತ ಸುಮ್ಮನೆ ಇರೋಣ . ನಮಗ್ಯಾಕೆ ಇವರ ವಿಷಯ ಬೆಡ್ ಶೀಟ್ ಎಳೆದುಕೊಂಡು ಮಲಗಿದ.
ಆದರೂ ಅವಳ ಬಗ್ಗೆ ಮರುಕ ಮೂಡದಿರಲಿಲ್ಲ
(ಮುಂದುವರೆಯುವುದು)