Sunday, April 20, 2008

" ಹೌದಾ ಅಹಲ್ಯಾ . ನಾನೆಷ್ಟು ಲಕ್ಕಿ ಗೊತ್ತಾ. actually this honour was expected a long back. ಹೋಗಲಿ ಬಿಡು ಈಗಾದರೂ ಪ್ರಶಸ್ತಿ ಬಂತಲ್ಲಾ" ಪ್ರಜೇಶ್ ಮಾತನಾಡುತ್ತಲೇ ಇದ್ದ ಫೋನ್ ನಲ್ಲಿಗೌರಿ ಅಚ್ಚರಿ ಇಂದ ಅವನನ್ನು ನೋಡಿದಳು ಬೇರೆಯವರೊಡನೆ ಹೀಗೆ ನಗು ನಗತ್ತಾ ಮಾತನಾಡುವ ಇವನಿಗೆ ಹೆಂಡತಿಯ ಜೊತೆ ಮಾತನಾಡುವಾಗ ಏನಾಗುತ್ತೋ . ಸದಾ ಸಿಡುಕು ಮುಖ ತನ್ನೊಡನೇ ಮಾತ್ರ. ಆದರೂ ಕೇಳಿದಳು " ಏನ್ರಿ ನಿಮಗೆ ಪ್ರಶಸ್ತಿ ಬಂತಾ. ? ಯಾವುದಕ್ಕೆ"
" ಏಯ್ ನೀನ್ಯಾಕೆ ಇಲ್ಲಿಗೆ ಬಂದೆ . ಚಂಪಾ ಇಸ್ಕೊ ಕ್ಯೋ ಬೇಜಾ ಇದರ್? ರೂಮ್ ಸೆ ಬಾಹರ ನಹಿ ಆನಾ ಚಾಹಿಯೆ ಯೆ" ಪ್ರಜೇಶ್ ಚಂಪಾಳನ್ನು ಕರೆದು ಬೈದ. ಚಂಪಾ ಅವರ ಮನೆಯ ಆಳು.
" ರೀ ಯಾಕ್ರಿ ನಂಗೆ ಹೀಗೆ ಗೃಹ ಬಂಧನ . ನಾನೇನು ತಪ್ಪು ಮಾಡಿತೀನಿ ಅಂತ ಈ ತರಹ ಶಿಕ್ಷೆ?" ಗೌರಿ ಗೋಗರೆದಳು" ಏಯ್ ಗೌರಿ ನಾನು ಫೇಮಸ್ ಇಂಗ್ಲೀಶ್ ಆಥರ್. ಹೊ!ಚೆ! ನಿಂಗೆಲ್ಲಿ ಅರ್ಥ ಆಗುತ್ತೆ . ನಾನು ಪ್ರಸಿದ್ದ ಇಂಗ್ಲೀಶ್ ಲೇಖಕ . ನೀನೊ ಹಳ್ಳಿ ಗುಗ್ಗು ಇಂಗ್ಲಿಷನಲ್ಲಿ ಎಷ್ಟು ಅಕ್ಷರಗಳಿವೆ ಅಂತಾನೂ ಗೊತ್ತಿರದವಳು .ನಿನ್ನಂತ ಗುಗ್ಗು ನನ್ನ ಹೆಂಡತಿ ಅಂದ್ರೆ ನನ್ನ ಪ್ರೆಸ್ಟೀಜ್ ಏನಾಗಬೇಕು? ಅಂದ್ರೆ ನನ್ನ ಅಂತಸ್ತು ಏನಾಗಬೇಕು? ನಂಗೆ ಬೆಸ್ಟ್ ಆಥರ್ ಅಂತ ಅವಾರ್ಡ್ ಬಂದಿದೆ ಅದಕ್ಕೆ ನೂರಾರು ಫೋನ್ ಬರುತ್ತೆ ಸಾವಿರಾರು ಜನ ನನ್ನ ಅಭಿನಂದಿಸಕ್ಕೆ ಬರ್ತಾರೆ ನಿನ್ನ ನೋಡಿದರೆ ಅಷ್ಟೆ . ಅದಕ್ಕೆ ನೀನು ನಿನ್ನ ರೂಮ್ ಬಿಟ್ಟು ಹೊರಗೆ ಬರಬಾರದು. ಚಂಪಾ ನಿಂಗೆ ಎಲ್ಲಾ ವ್ಯವಸ್ತೆ ಮಾಡಿಕೊಡ್ತಾಳೆ ಊಟ ತಿಂಡಿ ಎಲ್ಲಾ ಮೇಲೆನೆ ಕೆಳಗಡೆ ಬಂದ್ರೆ ಸರಿ ಇರೋದಿಲ್ಲ."ಚಂಪಾಳತ್ತ ತಿರುಗಿ "ಲೇ ಜಾವ್ ಇಸ್ಕೊ" ಎಂದಚಂಪಾ ಅವಳನ್ನು ಅಕ್ಷರಶ ಎಳೆದುಕೊಂಡೇ ರೂಮಿಗೆ ಕರೆದು ಕೊಂಡು ಬಂದಳು"ದೇಖೊ ತುಮ್ ಇದರ್ ಸೆ ಹಿಲ್ನಾ ಮತ್. ಅಗರ್ ತುಮ್ ಬಾಹರ ಆಯೆ ತೋ ಮೈ ಚುಪ್ ನಿ ರಹ್ನೆವಾಲಿ ಹೂ" " ನೋಡಮ್ಮ ನಂಘೆ ನೀನೇನು ಮಾತಾಡ್ತಿದ್ದೀಯ ಅಂತ ಗೊತ್ತಾಗಲ್ಲ . ಕನ್ನಡದಲ್ಲಿ ಮಾತಾಡು . ನಂಗೆ ಅದೊಂದು ಬಿಟ್ಟಾರೆ ಬೇರೇನು ತಿಳಿಯಲ್ಲ" ಗೌರಿಯ ಬೇಡಿಕೆಗೆ ಅಸಡ್ಡೆಯ ನೋಟ ಬೀರಿ ಹೊರಟು ಹೋದಳು ಚಂಪಾ. ಹೊರಗಡೆಯಿಂದ ಚಿಲಕ ಹಾಕಿದ್ದು ಕೇಳಿಸಿತು."ತಾನು ಗುಗ್ಗು?"ಪ್ರಶ್ನಿಸಿಕೊಂಡಳು ಗೌರಿ. ನೆನಪು ಹಿಂದೆ ಓಡಿತು
ನೋಡಿ ರಾಯರೇ ಗೌರಿ ಎಲ್ಲಾ ವಿಷ್ಯದಲ್ಲೂ ಚುರುಕು ಆದರೆ ಇಂಗ್ಲೀಶ್ ಮತ್ತೆ ಹಿಂದಿನಲ್ಲಿ ಮಾತ್ರ ಸ್ವಲ್ಪ ......... "ಸುಮ್ಮನಿರ್ರಿ ಮೇಷ್ಟ್ರೆ ಅವಳು ಸ್ವಲ್ಪ ಅಲ್ಲ ಪೂರ್ತಿ ಸೊನ್ನೆ. ಎಷ್ಟು ಸಲ ಅಂತ ಏಳನೆ ತರಗತಿ ಪರೀಕ್ಶೆಗೆ ಕೂರೋದು . ಇವಳ ಜೊತೆಗಾತಿಯರೆಲ್ಲಾ ಆಗಲೆ ಹತ್ತನೇ ತರಗತಿ ಮುಗಿಸಿ ಕಾಲೇಜ್ ಮೆಟ್ಟ್ಲ್ಯ್ ಹತ್ತಿದ್ದಾರೆ. ಅಬ್ಬಾ ನಮಮ್ ಕುಟುಂಬದಲ್ಲಿ ಯಾವಾಗಲೂ ದಡ್ಡ ಶಿಖಾಮಣಿ ಹುಟ್ಟಿರಲಿಲ್ಲ. ಮೊದಲು ಇವಳಿಗೊಂದು ಮದುವೆ ಮಾಡಿ ಕೈ ತೊಳೆದು ಕೊಂಡರೆ ಸಾಕು ಅಂತ ಅನ್ನಿಸುತ್ತಿದೆ"ರಾಯರೆ ನೀವು ತಪ್ಪು ತಿಳಿದುಕೊಂಡಿದ್ದೀರಾ ಗೌರಿ ದಡ್ಡ ಶಿಖಾಮಣಿ ಅಲ್ಲ ಹಾಗಿದ್ದರೆ ಗಣಿತದಲ್ಲಿ ಅವಳು ನೂರಕ್ಕೆ ನೂರು ಅಂಕ ಪಡೀತಾ ಇರಲಿಲ್ಲ.ಎಲ್ಲಾರಿಗೂ ಕಷ್ಟದ ವಿಜ್ನಾನದ ಸೂತ್ರಗಳನ್ನು ಅರಳು ಹುರಿದ ಹಾಗೆ ಹೇಳುತ್ತಾಳೆ. ಈ ವಯಸ್ಸಿನಲ್ಲೇ ಒಳ್ಳೊಳ್ಳೇ ಕತೆ ಕವನ ಬರೀತಾಳೆಏನಿದ್ರೇನು ಪ್ರಯೋಜನ . ನನ್ನ ತಂಗಿ ಮಗನಿಗೆ ಇವಳನ್ನು ಕೊಡೋಣ ಅಂತ ಆಸೆ ಇತ್ತು . ಅವನೋ ಇಂಗ್ಳಿಷ ನಲ್ಲಿ ಅದೇನೊ ಪಿ . ಎಚ್ ಡಿ ಮಾಡಿದಾನೆ. ಇವಳನ್ನು ಮದುವೆ ಆಗೋದಂತೂ ದೂರದ ಮಾತು." ನಿಟ್ಟುಸಿರಿಟ್ಟರು " ಇನ್ನು ಮೇಲೆ ಶಾಲೆಗೂ ಕಳಿಸೋದು ಬೇಡ ಅಂತ ಅನ್ಕೊಂಡಿದೀನಿ..........""ರಾಯರೆ . ಹೋಗಲಿ ಅವಳನ್ನು ಸ್ಕೂಲಿಗೆ ಕಳಿಸೋದಿಲ್ಲ ಅಂದ್ರೆ ಪರವಾಗಿಲ್ಲ . ಅವಳ ಸಾಹಿತ್ಯಾಭಿಲಾಷೆಗೆ ನೀರಾನ್ನಾದರೂ ಎರೆಯೋಣ. ಅವಳಿಗೆ ಒಳ್ಳೆ ಸೃಷ್ತಿ ಕಲೆ ಇದೆ. ಅದನ್ನ ಅವಳಲ್ಲಿ ಇನೂ ಬೆಳೆಸೋಣ ಅಂತ ಅನ್ಕೊಂಡಿದ್ದೀನಿ. "


"ಆಯ್ತು ಮೇಷ್ಟೆ ನಿಮ್ಮಿಷ್ಟ ನಿಮ್ಮ ಶಿಷ್ಯೆ . ನೀವೆ ತಿದ್ದಿ ತೀಡಿ ಅವಳಿಗೊಂದು ರೂಪು ಕೊಡಿ" ಮಾತು ಮುಗಿದಿತ್ತು . ಗೌರಿ ಶಾಲೆಗೆ ತಿಲಾಂಜಲಿ ಇಟ್ಟು ಮೇಷ್ಟ್ರಲ್ಲಿ ಕನ್ನಡವನ್ನು ಇನ್ನೂ ಹೆಚ್ಚಾಗಿ ಅಧ್ಯಯನ ಮಾಡತೊಡಗಿದಳು. ಚಿನ್ನಕ್ಕೆ ಪುಟವಿಟ್ಟಂತೆ ಅವಳ ಕನ್ನಡ ಜ್ನಾನ ಇನ್ನೂ ಬೆಳೆಯತೊಡಗಿತು.


ಅದೇ ವೇಳೆಗೆ ಪ್ರಜೇಶ್ ಗೌರಿಯ ಸೋದರತ್ತೆಯ ಮಗ ಊರಿಗೆ ಬಂದಿದ್ದ . ಮದುವೆಯ ಪ್ರಸ್ತಾಪನೆಗೆ ಮೊದಲು ಒಪ್ಪಲಿಲ್ಲ ನಂತರ ಅದೇನಾಯ್ತೋ ಒಪ್ಪಿಕೊಂಡ.


ಮದುವೆ ಆಯಿತು. ಮೊದಲ ರಾತ್ರಿಯೆ ಗೌರಿ ಕೇಳಿದಳು ." ರೀ ನಂಗೆ ಇಂಗ್ಲೀಶ್ ಹೇಳಿಕೊಡಿ"


" ಗೌರಿ ಕೆಲವರಿಗೆ ಏನೂ ಮಾಡಿದರೂ ಕೆಲವೊಂದು ವಿಷ್ಯಗಳು ತಲೆಗೆ ಹೋಗುವುದಿಲ್ಲ . ಅಷ್ಟಕ್ಕೂ ನಿಂಗ್ಯಾಕೆ ಇಂಗ್ಲೀಷ್ . ನಾನೆ ಇದ್ದೀನಲ್ಲ. ಇಂಗ್ಲೀಶ್ ಪ್ರೊಫೆಸ್ಸರ್. ನೀನೇನೊ ಕತೆ ಕಾದಂಬರಿ ಬರೀತಿಯಲ್ಲ . ಬರೀ ಯಾರಿಗೆ ಗೊತ್ತು ಈಗ ನಗೋ ಹಾಗಿದ್ರೂ ಮುಂದೆ ಚೆನಾಗಿ ಬರೆದ್ರೂ ಬರೀಬಹುದು"


ಹೀಗೆ ಸಾಗಿದ ಅವರ ಸಂಸಾರ ಮುಂದೆ ಡೆಲ್ಲಿಗೆ ಬಂದಿತು .


ಕಾಣದ ಊರು. ಕೇಳದ ಭಾಷೆ . ಕಂಗಾಲಾದಳು ಗೌರಿ. ಕನ್ನಡ ಬಿಟ್ಟರೆ ಬೇರೆ ಭಾಷೆ ಬಾರದ ಆಕೆಗೆ ಬರಹವೊಂದೇ ಜೀವ ವಾಯಿತು. ಪ್ರಜೆಶ್ಗೆ ತೋರಿಸುವುದು ಅವನು ಚೆನ್ನಾಗಿಲ್ಲ ಎನ್ನುವುದು ನಿರಂತರವಾಗರತೊಡಗಿದವು. ಏನೆ ಆದರೂ ಬರೆಯುವದನ್ನು ನಿಲ್ಲಿಸದಿರುವಂತೆ ಹೇಳಿದ


ನಂತರದ ದಿನಗಳಲ್ಲಿ ಪ್ರಜೇಶ್ ಬೆಳೆಯತೊಡಗಿದ ಪ್ರಖ್ಯಾತ ಬರಹಗಾರನಾಗಿ ಹೆಸರು ಪಡೆದ. ಅವನನ್ನು ಸಂದರ್ಶಿಸಲು ನೂರಾರು ಜನ ಬರತೊಡಗಿದರು.


ಹಾಗಾಗಿ ಗೌರಿಯನ್ನು ಮೇಲೆ ಇರಲು ಆಜ್ನೆ ಮಾಡಿದ್ದ . ಅವಳು ಹಾಗೆ ಮಾಡದಾಗ ಚಂಪಾ ಎಂಬ ಹೆಂಗಸಿನ ಕಣ್ಗಾವಲಿನಲ್ಲಿ ಇರಿಸಿದ. ಅವನು ಇವಳೊಡನೆ ಪ್ರೀತಿಯಿಂದ ಇರುತ್ತಿದ್ದುದ್ದು ಎರೆಡೇ ಸಂಧರ್ಭದಲ್ಲಿ . ಒಂದು ಅವಳೊಡನೆ ಸರಸದಿಂದ ಇರುವಾಗ . ಹಾಗು ಅವಳ ಬರಹ ಕತೆ ಓದುವಾಗ. ಅವರ ಸಂಭಂಧ ಬಿರುಕು ಬಿಡತೊಡಗಿದ್ದವು. ಸರಸಕ್ಕೂ ಸಮಯ ಸಿಗುತ್ತಿರಲಿಲ್ಲ ಅವನಿಗೆ. ಕೆಲವೊಮ್ಮೆ ರಾತ್ರಿ ಮನೆಗೆ ಬರುತ್ತಿರಲಿಲ್ಲ


ಬಾಗಿಲು ತೆಗೆದ ಸದ್ದಾದಾಗ ನೆನಪಿನ ರೈಲಿನಿಂದ ಕೆಳಗಿಳಿದಳು.


ಹೊರಗಡೆ ಗದ್ದಲ ಬಹಳ ಜನ ಬಂದಿರುವಂತಿತ್ತು. ಚಂಪಾ ಊಟ ತಂದಿದ್ದಳು. ಅವಳು ಮತ್ತೇನೋ ತರುವುದುಕ್ಕೆ ಹೋದಾಗ ರೂಮಿನ ಹೊರಗಡೆ ಬಂದು ನಿಂತಳು ಅಬ್ಬ ದೊಡ್ಡ ಪಾರ್ಟಿ ಅಂತನ್ನಿಸುತ್ತಿತ್ತು.


ಎಲ್ಲರೂ ಪ್ರಜೇಶನ ಸುತ್ತಾ ಸೇರಿ ಏನೂ ಕೇಳುತ್ತಿದ್ದರು . ಸಂದರ್ಶನ ವೇನೊ ಎಂದು ಕೊಳ್ಳುತ್ತಿದ್ದಂತೆ. ಯಾರೊ ಒಬ್ಬ ಅವಳತ್ತ ಕೈ ತೋರಿ ಏನೂ ಕೇಳುತ್ತಿದ್ದ . ಪ್ರಜೇಶ್ ಅವರಿಗೆಲ್ಲ ತನ್ನ ಬಗ್ಗೆ ಏನೊ ಹೇಳುತ್ತಿದ್ದಂತೆ ಅನ್ನಿಸಿತು. ಎಲ್ಲರೂ ಅವಳತ್ತ ತಿರುಗಿ ನೋಡಿ ಏನೊ ಹೇಳಿದರು . ಆ ಜನ್ರ ನಡುವಲ್ಲಿ ಒಬ್ಬ ಮಾತ್ರ ತನ್ನನ್ನೆ ನೋಡುತ್ತಿದ್ದಂತೆ ಅಲ್ಲಿ ನಿಲ್ಲಲಾಗದೆ ಮತ್ತೆ ರೂಮಿಗೆ ಬಂದು ಕುಳಿತಳು.


ತಾನು ಈ ಸಮುದ್ರದಲ್ಲಿ ಬದುಕಲು ಆಗುತ್ತದೆಯೇ? ಹೇಳಿಕೊಳ್ಳುವುದಕ್ಕೆ , ಮನದ ದುಗುಡ ತೋಡಿಕೊಳ್ಳುವುದಕ್ಕೆ ತನ್ನದೇ ಆದ ಒಂದು ಜೀವವೂ ಇಲ್ಲ. ದೂರದ ಅಪ್ಪ ಹಾಗು ಅಮ್ಮನನ್ನು ನೆನೆಸಿಕೊಂಡು ಅಳತೊಡಗಿದಳು. ಪ್ರಜೇಶ್ ಕೆಲಸಕ್ಕೆ ಹೋದರೆ ಜೊತೆಗೆ ಎಂದೂ ಯಾರೂ ಇಲ್ಲ . ಆ ಚಂಪಾ ಮಾಡಿ ಹಾಕುವ ಆಡಿಗೆ ಅವಳಿಗೆ ಕೊಂಚವೂ ಹಿಡಿಸುತ್ತಿರಲಿಲ್ಲ. ಆಡಿಗೆ ಮಾಡಿಟ್ಟು ಬೀಗ ಹಾಕಿಕೊಂಡು ಮನೆಗೆ ಹೋದರೆ ಚಂಪಾ ಬರುತ್ತಿದ್ದುದ್ದೇ ರಾತ್ರಿಗೆ . ಅಲ್ಲಿಯವರೆಗೆ ಮತ್ತೆ ಒಂಟಿ. ಹೊರಗಡೆಯ ಬೆಳಕನ್ನು ಕಂಡೇ ಬಹಳ ದಿನಗಳಾಗಿದ್ದವು.


ಕೆಳಗಿನ ಗದ್ದಲ ನಿಂತು ಹೋಗಿತ್ತು . ಅದೇನೊ ಚಂಪ ರೂಮ್ ಬೀಗ ಹಾಕಿರಲಿಲ್ಲ . ಹೊರಗಡೆ ಬಂದು ನೋಡಿದರೆ ಯಾರೂ ಕಾಣಲಿಲ್ಲ. ಹೋ ಎಲ್ಲಾ ಮುಗಿದಿರಬೇಕನ್ನಿಸಿತು.


ಕೆಳಗೆ ಬಂದು ಪ್ರಜೇಶನ ರೂಮಿಗೆ ಬಂದಳು . ಕಾಪಾಟಿನಲ್ಲಿ ಮನೆಯ ಇನ್ನೊಂದು ಕೀ ಇದ್ದಿದು ಅವಳಿಗೆ ತಿಳಿದಿತ್ತು. ಕೀ ತೆಗೆದುಕೊಂಡು ಮನೆಯ ಬಾಗಿಲು ತೆಗೆದಳು .


ಅವಳ ಸಂತಸಕ್ಕೆ ಪಾರವೇ ಇರಲಿಲ್ಲ. ಮುಂದಿನ ಹೂದೋಟದಲ್ಲಿ ಬಣ್ಣದ ಬಣ್ಣಾದ ಹೂಗಳು. ಅಗಾಧ ಬೆಳಕಿನ ರಾಶಿ. ಹುಲ್ಲಿ ಹಾಸು. ತೋಟದಲ್ಲಿ ಒಮ್ಮೆ ಸುತ್ತಾಡಿ ಬಂದಳು. ಅವಳೇ ಇಂದು ರಾಣಿಯಾಗಿದ್ದಳು. ಪುಟ್ಟ ಹುಡುಗಿಯಂತೆ ಕುಣಿದಳು. ಕುಣಿಯುತ್ತಿದ್ದಾಗಲೆ ಅವಳ ಮನದಲ್ಲಿ ಒಂದು ಕವನ ಮೂಡಿತು


ಸೀದ ಹೋಗಿ ಪುಸ್ತಕ ಹಾಗು ಪೆನ್ ತಂದು ತನ್ನ ಮನದ ಭಾವನೆಗಳನ್ನು ಕಾಗದದಲ್ಲಿ ಮೂಡಿಸತೊಡಗಿದಳು.


ಪಂಜರದ ಗಿಣಿ ಹಾರಬಯಸಿ


ಹಾಕಿದೆ ಏಣಿ ಸ್ವತಂತ್ರವರಸಿ


ಪ್ರೀತಿ ಮನದ ನೆಲೆಯ ಹುಡುಕಿ


ಮೂಲ ಮರೆತು ವಲಸೆ ಹೊರಟು


ಪಂಜರದಿ ಬಂಧಿಯಾಯಿತು

ಕತೆಯಾಗಿ

ಭಾವನೆಗಳ ಭರಪೂರದಲ್ಲಿ ಕಳೆದು ಹೋಗಿದ್ದವಳಿಗೆ ಗೇಟ್ ತೆಗೆದು ಯಾರೋ ತನ್ನೆದುರಲ್ಲಿ ನಿಂತಿದ್ದು ತಿಳಿಯಲ್ಲಿಲ್ಲ

ತನ್ನ ಮೇಲೆ ಬಿದ್ದ ನೆರಳನ್ನು ನೋಡಿ ತಲೆ ಎತ್ತಿದಳು ಆಗಲೆ ಕೆಳಗಡೆ ತನ್ನತ್ತಲೇ ನೋಡುತ್ತಿದ್ದವನು ಎಂದು ತಿಳಿಯಿತು. ಗಾಬರಿಯಿಂದ ಪುಸ್ತಕ ಹಾಗು ಪೆನ್ ಕೆಳಗಡೆ ಬೀಳಿಸಿ ಒಳಗಡೆ ಓಡುತ್ತಿದ್ದ್ದಂತೆ

" ನಿಮ್ಮ ಪುಸ್ತಕ ಕೆಳಗೆ ಬಿದ್ದಿದೆ "

ದ್ವನಿ ಬಂದತ್ತ ತಿರುಗಿದಳು. ಕನ್ನಡ ತನ್ನ ಕನ್ನಡವನ್ನು ಉಲಿಯಬಲ್ಲ ಮತ್ತೊಂದು ದನಿ ಇಂದು ಅವಳಿಗೆ ಸಿಕ್ಕಿತು.

ಅವಳಿಗರಿವಿಲ್ಲದೆ ಕಾಲುಗಳು ಆ ದನಿಯತ್ತ ಓಡಿದವು.

" ನೀವು .............ಕರ್ನಾಟಕದವರಾ?" ಸಂತಸಭರಿತ ದನಿಯಲ್ಲಿ ಕೇಳಿದಳು

" ಹೌದು ನಾನು ಅನಂತ್ ಅಂತ ಅರುಣದಯ ಪತ್ರಿಕೆಯ ವರದಿಗಾರ. ಯಾಕೆ ಇಷ್ಟೊಂದು ಆಶ್ಚರ್ಯವಾಗಿ ಕೇಳ್ತಿದೀರಾ?"

" ಇಲ್ಲಿ ಕನ್ನಡದವರು ಸಿಗೋದೇ ಇಲ್ಲ ಅದಕ್ಕೆ"

" ಅರೆ ನೀವಿರೋದೇ ಕನ್ನಡಿಗರ ಕಾಲೋನಿಯಲ್ಲಿ . ನಿಮಗೆ ಹೇಗೆ ಗೊತ್ತಿಲ್ಲ, ಹೋಗ್ಲಿ ಬಿಡಿ ಈ ಕವಿತೆ ಬರೆದಿರೋದು ನೀವೇನಾ. ತುಂಬಾ ಚೆನ್ನಾಗಿದೆ" ಮೆಚ್ಚುಗೆಯಿಂದ ನುಡಿದ

ಗೌರಿಯ ಕಣ್ಣಾಲಿ ತುಂಬಿ ಬಂದವು ಇಂತಹ ಮೆಚ್ಚುಗೆಯ ನುಡಿ ಕೇಳಿ ಬಹಳ ವರ್ಷಗಳಾಗಿದ್ದವು.

" ಹೌದು ಇದನ್ನು ನಾನೆ ಬರೆದಿರೋದು. ನಾನು ತುಂಬಾ ಕವನ ಕತೆ ಬರೀತೀನಿ ಆದರೆ ಯಾವದೂ ಸರಿ ಇಲ್ಲ ಅಂತ ನಮ್ಮ ಯಜಮಾನರು ಹೇಳಿ ಎಲ್ಲಾ ಮೇಲಕ್ಕೆ ಹಾಕ್ಬಿಡ್ತಾರೆ."

"ನಿಮ್ಮೆಜಮಾನರಾ? ಯಾರು?" ಅಚ್ಚರಿಯಿಂದ ಪ್ರಶ್ನಿಸಿದ

" ಪ್ರಜೇಶ ರವರು "

"ಪ್ರಜೇಶಾ?"

" ಹೌದು ಯಾಕೆ"

" ಸರಿ ಏನಿಲ್ಲ ಬಿಡಿ. ಏನೇನ್ ಕತೆ ಬರ್ದಿದೀರ ತೋರಿಸಿ"

ಗೌರಿ ಚಿಕ್ಕ ಹುಡುಗಿಯಂತೆ ತನ್ನ ಕತೆಗಳ ಕಡತವನ್ನೆಲ್ಲಾ ತಂದು ತೋರಿಸಿದಳು

ಅವಳ ಉತ್ಸಾಹವನ್ನು ಕಂಡು ಮೂಕನಾದ.

ಇಂತಹ ಹೆಣ್ಣಿಗೆ ಹುಚ್ಚಿ ಹಾಗೂ ಅನಾಥ ಪಟ್ಟ ಕಟ್ಟಿದ ಪ್ರಜೇಶ್ ಮೇಲೆ ಕೋಪವೂ ಬಂದಿತು

ಅಯ್ದ ಕೆಲವನ್ನು ಓದುತ್ತಿದ್ದಂತೆ ಅನಂತಗೆ ಇದೆಲ್ಲವನ್ನೂ ಎಲ್ಲೋ ಓದಿದಂತೆ ಭಾಸವಾಗತೊಡಗಿತು.

ಆದರೂ ಕತೆ ನಿರೂಪಣೆ ಬಹಳ ಸುಂದರವಾಗಿದ್ದವು

"ಇದು ನೋಡಿ ನಾನು ಇತ್ತೀಚಿಗೆ ಬರೆದಿದ್ದು . ಅದಕ್ಕೆ ತುತ್ತ ತುದಿಯಲ್ಲಿ ಅಂತ ಹೆಸರನ್ನು ಕೊಟ್ಟೆ ಆದರೆ ಇವರು ಒಂಚೂರು ಚೆನ್ನಾಗಿಲ್ಲ ಅಂತ ಬೈದುಬಿಟ್ಟರು." ದೂರು ನೀಡುವ ರೀತಿಯಲ್ಲಿ ನುಡಿದಳು

ತುತ್ತ ತುದಿಯಲ್ಲಿ ಈ ಹೆಸರು "on the edge" ನ ರೀತಿಯೇ ಇದೆಯಲ್ಲ ಆ ಕತೆಗೆ ತಾನೆ ಶ್ರೇಷ್ಟ ಲೇಖಕ ಬಿರುದು ಬಂದಿದ್ದು ಪ್ರಜೇಷಗೆ. ಅನಂತನ ಮನಸ್ಸಿನಲ್ಲಿ ಏನೂ ಲೆಕ್ಕಾಚಾರ ನಡೆಯುತ್ತಿತು.

ಕತೆ ಓದುತಿದ್ದಂತೆ ಅದರ ಪ್ರತಿ ಪಾತ್ರ, ನುಡಿ , ಪ್ರಸಂಗ ಎಲ್ಲವೂ ಅದೇ ಕತೆಯದಂತೆ ಇತ್ತು ಎನಿಸಲಾರಂಭಿಸಿತು.

ಪ್ರಜೇಶ್ ಹೇಳಿದಂತೆ ಈಕೆ ಹುಚ್ಚಿ ಇರಬೇಕನಿಸಿತು.

"ಅಲ್ಲ ಮೇಡಮ ನಿಮ್ಮೆಜಮಾನರ ಇಂಗ್ಲೀಷ ಕತೇನ ಕನ್ನಡ್ದಲ್ಲಿ ಬರೆದರೆ ಅದು ನಿಮ್ಮದಾಗುತ್ತಾ?"

"ಆ ಏನಂದ್ರಿ. ಇದು ನಾನೆ ಬರೆದ್ದಿದ್ದು. ಹಾಗೆ ಓದಿ ಬರೆಯೋಕೆ ನಂಗೆ ಇಂಗ್ಲೀಶ್ ಬರೋದೇ ಇಲ್ಲ"

ಕ್ಶಣಮಾತ್ರದಲ್ಲಿ ಅನಂತನಿಗೆ ಎಲ್ಲಾ ಹೊಳೆಯಿತು. ಅರಿಯದ ಹೆಣ್ಣಿನ ಮುಗ್ದತೆಯನ್ನು ಬಹು ಕೆಳಮಟ್ಟದಲ್ಲಿ ಉಪಯೋಗಿಸಿಕೊಂಡಿದ್ದ ಪ್ರಜೇಶ್.

ಒಬ್ಬ ಲೇಖಕನಿಗಿರಬೇಕಾದ ಮೌಲ್ಯಗಳನ್ನೆಲ್ಲಾ ಗಾಳಿಗೆ ತೂರಿ ಮತ್ತೊಬ್ಬರ ಬರಹವನ್ನು ಪ್ರಸಿದ್ದಿಯ ಹುಚ್ಚಿಗೆ ತನ್ನದೆಂದು ಪ್ರಕಟಿಸಿದ್ದ.

ಇದನ್ನೆಲ್ಲಾ ಗೌರಿಯ ಮುಂದೆ ವಿವರಿಸಿದ . ತನ್ನ ಕತೆಗಳು ತನ್ನ ಮುಂದೆಯೇ ಲೂಟಿ ಹೋಗುತಿದ್ದರೂ ಕುರುಡಿಯಾಗಿ ಕುಳಿತಿದ್ದಳು.

" ಈಗ ಏನು ಮಾಡ್ತೀರಾ?"

" ಏನಿಲ್ಲಾ ಇಷ್ಟು ದಿನ ಗೊತ್ತಿಲ್ಲದೆ ಬರೆದು ಕೊಡಿತಿದ್ದೆ . ಇನ್ನುಮೇಲೆ ಗೊತ್ತಾಗಿ ಬರೆದು ಕೊಡ್ತೀನಿ. ಇನ್ನೂ ಚೆನ್ನ್ನಾಗಿ .........." ಅವಳ ಕಣ್ಣಿನಿಂದ ನೀರು ಧಾರಾಕಾರವಾಗಿ ಸುರಿಯುತಿತ್ತು. ಖ್ಯಾತ ಕತೆಗಾರ್ತಿಯಾಗಬೇಕೆಂಬ ಅವಳ ಕನಸು ಕನಸಾಗೇ ಉಳಿಯುವ ಅಪಾಯವಿತ್ತು ಅವಳ ನಿರ್ಧಾರದಿಂದ.

" ಹಾಗಿದ್ದರೆ ನಿಮ್ಮ ವ್ಯಕ್ತಿತ್ವವನ್ನು ಬಲಿ ಕೊಡ್ತೀರಾ?"

"ಹೌದು. ಯಾಕೆಂದರೆ ನಾನು ಭಾರತೀಯ ಹೆಣ್ಣು. ಒಬ್ಬ ಭಾರತೀಯ ಹೆಣ್ಣಿಗೆ ವ್ಯಕ್ತಿತ್ವಕ್ಕಿಂತ ಸಂಸಾರವೆ ಹೆಚ್ಚು.

"ಆದರೆ ನೀವು ಅವರ ಸಂಸಾರವಲ್ಲವಲ್ಲ"

"ಅಂದ್ರೆ?"

ಆನಂತ ಕನ್ನಡದ ಪತ್ರಿಕೆಯ ಹೇಳಿಕೆಯೊಂದನ್ನು ಅವಳ ಮುಂದೆ ಹಿಡಿದ

ಅದು ಪ್ರಜೇಶ್ ಹಾಗು ಖ್ಯಾತ ಸಿನಿ ನಟಿ ಅಹಲ್ಯಾರವರ ಮದುವೆಯ ವರದಿ.

"ನೀವು ಲೋಕ್ದ ಜನರ ಪ್ರಕಾರ ಒಬ್ಬ ಹುಚ್ಚಿ ಹಾಗು ಅನಾಥೆ . ನಿಮ್ಮನ್ನು ಪ್ರಜೇಶ್ ಸಾಕುತ್ತಿದ್ದಾರೆ. "

ದಿಗ್ಬ್ರಾಂತಳಾದಳು.

" ಈಗೇನು ಮಾಡಲಿ"

" ಮೇಡಮ್ ನೀವು ಹೀಗೆ ಕೂರಬೇಕಿಲ್ಲ ನಿಮ್ಮಲ್ಲಿ ಪ್ರತಿಭೆ ಇದೆ. ನಿಮ್ಮ ಕತೆಗಳು ನಮ್ಮ ಕನ್ನಡಕ್ಕೆ ಬಂದ್ರೆ ಕನ್ನಡಕ್ಕೆ ಹೆಸರು. ನೀವು ನಮ್ಮ ಬೆಂಗಳೂರಿಗೆ ಬನ್ನಿ . ಕೃತಿಚೌರ್ಯದ ಆರೋಪಾನ ಪ್ರಜೇಶ್ ಮೇಲೆ ಕೇಸ ಹಾಕೋಣ ನ್ಯಾಯ ನಮಗೆ. ಯಾಕೆಂದರೆ ಅವುಗಳ ತಾಯಿ ನೀವೆ ನನ್ನ ಮೇಲೆ ಭರವಸೆ ಇಟ್ಟು ಬನ್ನಿ ಅಂತ ಹೇಳ್ತಿಲ್ಲ . ನಿಮ್ಮ ಪ್ರತಿಭೆಯ ಮೇಲೆ ನಂಬಿಕೆ ಇಟ್ಟು ಬನ್ನಿ. ಲೋಕದಲ್ಲಿ ಕನ್ನಡದ ಮೇಲೆ ಆಗುತ್ತಿರುವ ದೌರ್ಜನ್ಯಕ್ಕೆ ಇದೊಂದು ಉದಾಹರಣೆ"

ಗೌರಿಯ ಹೆಜ್ಜೆಗಳು ಅನಂತನನ್ನು ಹಿಂಬಾಲಿಸತೊಡಗಿದವು

---------------------------------*******************------------------------------