Sunday, September 23, 2012

ನೆನಪೆಂಬ ಹಾಯಿ ದೋಣಿಯಲ್ಲಿ ಹಾಗೆ

ನೆನಪೆಂಬ ಹಾಯಿ ದೋಣಿಯಲ್ಲಿ ಹಾಗೆ 
ಒಮ್ಮೆ ಅಡ್ಡಾಡುವ ಅಂತ ದೋಣಿ ಹತ್ತಿದೆ, 
ದೋಣಿ ನಡೆಸುವ ಅಂಬಿಗ ನೀ ನೆಂದು ಅರಿಯದೆ

ಮನಸನೆಲ್ಲಾ ಒಮ್ಮೆ ಚೆಲ್ಲಿ ಖಾಲಿ ಮಾಡುವ 
ಅಂತ ಮನಸನ್ನೆ ತಿರುಗಿಸಿ ಬಗ್ಗಿಸಿದೆ,
ಬೀಳದಂತೆ ಭದ್ರವಾಗಿ ನೀ ಕೂತಿರುವೆ ಎಂದು ಮರೆತೆ

ಮರಳಿ ಬಾರದ ಕನಸಿನ ಊರಿಗೆ ಒಬ್ಬಳೇ 
ಹೋಗುವೆ ಎಂದು ಪಯಣಕೆ ಸಿದ್ದಳಾದೆ
ಆ ಊರ ತುಂಬ ನಿನ್ನದೇ ನಗೆ ಗುರುತ ಗುರುತಿಸದೆ

ಏಳು ಹೆಜ್ಜೆಗಳು ಯಾರದ್ದಾದರೇನು ಅಂದುಕೊಂಡು
ಮಂಟಪದಿ ಕೂತೆ ತಲೆ ತಗ್ಗಿಸಿ
ಪ್ರತಿ ಹೆಜ್ಜೆಗೂ ಘಲ್ಲೆನುವ ಗೆಜ್ಜೆ ನೀನೆಂಬುದ ಮರೆತೆ

ತಾಳಿ ತಾಳಿ ತಾಳಿಗೂ ಬೇಸರ ಬಂದಿತೇನೋ
ನೆನ್ನೆ ಹೀಗೆ ತಾಳಿ ಕಳೆಯಿತು
ಕಳೆದ ಮಾತ್ರಕ್ಕೆ ಬಿಡುಗಡೆಯಲ್ಲ ಎಂಬುದ ಅರಿಯದೆ