ಬೆಳಗ್ಗೆಯೇ ಹೊರಡಬೇಕಿತ್ತು ಮನುವಿನ ಮನೆಗೆ . ಬೆಳಗ್ಗೆಯೇ ವಿಕಾಸ್ ಮನುವಿಗೆ ಫೋನ್ ಮಾಡಿದ್ದ . ಅಲ್ಲಿಂದ ಬಂದ ಪ್ರತಿಕ್ರಿಯೆ ಮುಖಕ್ಕೆ ಹೊಡೆಯುವಂತಿತ್ತು.ಬಂದು ಸಿರಿಯನ್ನು ಕರೆದುಕೊಂಡು ಹೋಗುವಂತೆ ಹೇಳಿದ್ದ ಮನು. ಆದರೂ ಇದನ್ನು ಶೈಲಾಗೆ ಹೇಳಿರಲಿಲ್ಲ.
ಅಸಲಿಗೆ ಶೈಲಾಗೆ ಸಿರಿಯನ್ನು ನೋಡುವ ಆಸೆ ಇತ್ತೇ ವಿನಹಾ ಅವಳನ್ನು ಮನೆಗೆ ಕರೆತರುವ ಯೋಚನೇ ಏನೂ ಇರಲಿಲ್ಲ. ಯಾವ ಮುಖ ಹೊತ್ತು ಹೋಗುವುದೆಂದು ಗಲಿಬಿಲಿಗೊಂಡಿದ್ದಳು. ಆದರೂ ಸಿರಿಯನ್ನು ನೋಡಲೇಬೇಕೆಂಬ ತುಡಿತದೊಂದಿಗೆ ಮನಸಲ್ಲಿ ಭಂಡ ಧೈರ್ಯ ಮಾಡಿಕೊಂಡಿದ್ದಳು. ವಿಕಾಸ್‌ನಿಗೆ ಮನುವಿನ ಬುದ್ದಿ ಗೊತ್ತಾಗಿದ್ದರಿಂದ ಅವನ ಆ ಮುಖ ಶೈಲಾಗೂ ತಿಳಿಯಲಿ ಎಂದೇ ಅವಳನ್ನು ಆ ಮನೆಗೆ ಕರೆದೊಯ್ಯುವ ಯೋಚನೆ ಮಾಡಿದ್ದ..
ಮನೆಗೆ ಬೀಗ ಜಡಿದು ಬೈಕ್ ಹತ್ತಿ ಸ್ಟಾರ್ಟ್ ಮಾಡಿದ, ಶೈಲಾ ಹಿಂದೆ ಅವಳ ಮನಸೆಲ್ಲಾ ಸಂಗೀತಾಳ ಪತ್ರವೇ ತುಂಬಿತ್ತು. ಅಲ್ಲಿಂದ ಮನುವಿನ ಮನೆ ದೂರವೇ . ಸುಮಾರು ಅರ್ದ್ಗಘಂಟೆಯ ಪ್ರಯಾಣ. ಇಬ್ಬರ ನಡುವೇಯೂ ಮಾತಿಗೆ ಸಾಮಾಗ್ರಿಗಳೇ ಇರಲಿಲ್ಲ. ಯೋಚನೆಗಳಲ್ಲಿ ಕಳೆದು ಹೋಗಿದ್ದೆ ಬಂತು.
ಮನೆ ಹತ್ತಿರ ಬರುತ್ತಿದ್ದಂತೆ ಶೈಲಾಗೆ ಹೃದಯ ಹೊಡೆದುಕೊಳ್ಳಲಾರಂಭಿಸಿತು. ಯಾವ ಮನೆ ತನ್ನದಾಗಿತ್ತೋ ಎಲ್ಲಿ ಆಟವಾಡಿ ಬೆಳೆದಳೋ ಅದೇ ಮನೆಗೆ ಈಗ ಅಪರಿಚಿತಳಾಗಿ ಹೋಗಿದ್ದಳು.
ಗೇಟ್ ಹೊರಗಡೇಯೇ ಬೈಕ್ ನಿಲ್ಲಿಸಿದ. ಶೈಲಾಳ ಕಾಲುಗಳು ಸೋತೇ ಹೋಗಿದ್ದವೇನೋ ಎಂಬಷ್ಟು ಸೋಮಾರಿಗಳಾಗಿದ್ದವು
ಭವ್ಯ ಬಂಗಲೆಯಂತಿದ್ದ ಮನೆ ಅದು.
ಗೇಟ್ ಕೀಪರ್ ಬದಲಾಗಿದ್ದ. ಯಾರೋ ಹೊಸಬ ಇವರನ್ನು ಗೇಟ್ ಒಳಗೆ ಬಿಡಲಿಲ್ಲ. ಕೇಳಿಕೊಂಡು ಬರುವುದಾಗಿ ಮೇಲೆ ಹೋದ
ಮನುವಿನ ನೆಚ್ಚಿನ ಕಾರ್ ಇನ್ನೂ ಅಲ್ಲೇ ಇತ್ತು ಮನು ಎಲ್ಲಿಗೂ ಹೋಗಿಲ್ಲ ಎಂಬುದನ್ನು ಸೂಚಿಸುತ್ತಾ. ಸುಮಾರು ಹತ್ತು ನಿಮಿಷ ಕಾದರೂ ಗೇಟ್ ಕೀಪರ್ ಬರಲೇ ಇಲ್ಲ . ಮುಚ್ಚಿದ ಗೇಟ್ ಹಾಗೆ ಇತ್ತು
ವಿಕಾಸ್‌ಗೆ ಗೊತ್ತಾಯ್ತು ತಮ್ಮನ್ನು ಅವಮಾನ ಗೊಳಿಸಲೆಂದೇ ಮನು ಹೀಗೆ ಮಾಡುತ್ತಿದ್ದಾನೆ.
"ರಾಸ್ಕೆಲ್" ಮನಸಲ್ಲಿ ಹೇಳಿಕೊಳ್ಳಬೇಕಾದ ಪದ ಬಾಯಿಗೆ ಬಂದು ಶೈಲಾ ಕಿವಿಯನ್ನು ಹೊಕ್ಕಿತು
"ಯಾರು?" ತೀಕ್ಷ್ಣವಾಗಿ ಪ್ರಶ್ನಿಸಿದಳು
"ಇನ್ಯಾರು . ಮನ್ವಂತರ್" ವಿಕಾಸ್ ಹಲ್ಲು ಕಚ್ಚಿ ನುಡಿದ
"ವಿಕಾಸ್ . ನಿನ್ನಾಲಿಗೆ ನಾಲಿಗೆ ಹಿಡಿತದಲ್ಲಿರಲಿ. ಅಂತೋರ ಬಗ್ಗೆ ಹೀಗೆಲ್ಲಾ ಮಾತಾಡಬೇಡ." ಎಚ್ಚರಿಕೆ ನೀಡಿದಳು
"ಅವನೆಂತೋನು ಅಂತ ನಿಂಗೆ ಗೊತ್ತಿಲ್ಲ ಶೈಲಾ . ಅವನು ಗೋಮುಖ ವ್ಯಾಘ್ರ. ಸಂಗೀತ ಹೇಳಿದ್ದೆಲ್ಲಾ ನಿಜ"
"ನಿಂಗೆ ಹೇಗೆ ಗೊತ್ತಾಯ್ತು?"
ವಿಕಾಸ್ ನೆನ್ನೆ ತಾನು ಮನುವನ್ನು ಭೇಟಿ ಮಾಡಿದ್ದ ಸಂಗತಿಯನ್ನು ಹೇಳಿದ .
"ಆದರೂ ನಾನಿದನ್ನ ನಂಬಲ್ಲಾ "ಶೈಲಾ ಆಕಾಶ ನೋಡುತ್ತಾ ನುಡಿದಳು
"ಅಂದ್ರೆ ನಾನು ಸುಳ್ಳು ಹೇಳ್ತೀನಿ ಅಂತಾನಾ?" ವಿಕಾಸ್ ಆಕ್ರೋಶಿತನಾದ
"ಅದು ನಂಗೆ ಗೊತ್ತಿಲ್ಲ.ಆದರೆ ಮನು ಮಾತ್ರ ಅಂತಹವರಲ್ಲ" ದೃಷ್ಟಿ ಆಕಾಶದತ್ತಲೇ ನೆಟ್ಟಿತ್ತು
ಅಷ್ಬ್ಟರಲ್ಲಿ ಅತ್ತೆಯೇ ಗೇಟಿನ ಬಳಿ ಬಂದರು
"ಅತ್ತೆ ". ಸಂಭ್ರಮದಿಂದ ನುಡಿದಳು
ಆದರೆ ಆ ಸಂಭ್ರಮ ಅವರ ಮೊಗದಲ್ಲಿ ಇರಲಿಲ್ಲ
"ಯಾವ ಬಾಯಿಂದ ಅತ್ತೆ ಅಂತ ಕರೀತೀಯಾ ನೀನು ನನ್ನನ್ನ . ಅಷ್ಟು ಚೆನ್ನಾಗಿ ನೋಡಿಕೊಂಡ ನಮ್ಮನ್ನ ಗಂಡನ್ನ ಮಗಳನ್ನು ಬಿಟ್ಟು ಈ ಮೂರು ಕಾಸಿನವನ ಜೊತೆ ಓಡಿ ಹೋದ್ಯಲ್ಲಾ ನಾಚಿಕೆ ಆಗಲ್ಲ್ವಾ ನಿಂಗೆ. ಮತ್ಯಾಕೆ ಇಲ್ಲಿಗೆ ಬಂದಿದ್ದಿಯಾ? "
ಅತ್ತೆಯ ಅಂತಹ ರೂಪವನ್ನು ಇಲ್ಲಿಯವರೆಗೆ ಕಂಡಿದ್ದಿಲ್ಲಾ ಶೈಲಾ. ಅದೂ ವಿಕಾಸನ ಬಗ್ಗೆ ಅವರ ಕಾಮೆಂಟ್ ಹಿಡಿಸಲಿಲ್ಲ.
ವಿಕಾಸ್ ತಗ್ಗಿಸಿದ ತಲೆ ಮೇಲೆತ್ತಲಿಲ್ಲ.
"ಅತ್ತೆ ........ಅದು.... ಸಿರಿ...ಯನ್ನು ನೋಡಬೇಕಿತ್ತು"
"ಮೊದಲು ಕರ್ಕೊಂಡು ಹೋಗು ಆ ಅನಿಷ್ಟಾನಾ. ನಂಗೂ ಸಾಕಾಗಿ ಹೋಗಿದೆ . ಇಲ್ಲಾಂದರೆ ಅನಾಥಾಶ್ರಮದಲ್ಲಿ ಬಿಟ್ಟು ಬರೋಣ ಅಂತ ಅಂದ್ಕೊಂಡಿದ್ವಿ"
ಶೈಲಾ ನಂಬಲಾರದವಳಂತೆ ಅತ್ತೆಯ ಮುಖವನ್ನು ನೋಡಿದಳು ಅವರ ಕಣ್ಣಲ್ಲಿ ದ್ವೇಷದ ಕಿಡಿ ಕಾಣುತ್ತಿತ್ತು.
ಅವಳು ಬೆಳೆದದ್ದು ಅವರ ಮಡಿಲಲ್ಲಿಯೇ ತಾಯಿಯನ್ನೇ ಅವರಲ್ಲಿ ಕಂಡವಳು . ಅಂಥವರು ಹೀಗೆ ಮಾಡುತ್ತಿದ್ದಾರಲ್ಲ.
ಅಷ್ಟರಲ್ಲಿ ಮನು ಮಗುವನ್ನು ಕರೆದುಕೊಂಡು ಬಂದ
"ತಗೊಳ್ಳಿ ನಿಮ್ಮಾಸ್ತೀನಾ . ಇನ್ಮೇಲೆ ನಮ್ಮ ಮನೆ ಹತ್ರಾ ಕಾಲಿಡಬೇಡಿ. ಶೈಲಾ ನಂಗೆ ಡೈವೋರ್ಸ್ ಬೇಕು ಮೊದಲು. ನಾನು ರಮ್ಯಾ ಅನ್ನೋ ಹುಡುಗೀನ ಮದುವೆ ಆಗ್ತಾ ಇದ್ದೇನೆ. "
ಶೈಲಾಳ ತಲೆಯಲ್ಲಿ ಸಾವಿರಾರು ಪರ್ವತಗಳು ಕುಸಿದು ಬಿದ್ದ ಅನುಭವವಾಯ್ತು.
ಅವಳ ಆದರ್ಶ ಮನು ಅವಳ ಮುಂದೆಯೇ ಕುಸಿದು ಬಿತ್ತು
"ಅಂದಹಾಗೆ ನಿನ್ನ ಆಸ್ತಿ ಅಂತ ಏನೂ ಇಲ್ಲ ಶೈಲಾ ನಿನ್ನ ಸಾಕಿದ್ದು ನಿನ್ನ ಬೇಕು ಬೇಡಗಳನ್ನೆಲ್ಲಾ ಗಮನಿಸಿದ್ದು. ಓದಿಸಿದ್ದು ಎಲ್ಲಾಕ್ಕೂ ಖರ್ಚಾಗಿದೆ. ಆಸ್ತಿ ,ಜೀವನಾಂಶ ಅಂತ ಏನು ಸಿಗಲ್ಲಾ"
"ಮನು ನಂಗೆ ಆಸ್ತಿ ಹೋಯ್ತಲ್ಲಾ ಅಂತ ಬೇಜಾರಿಲ್ಲ ಆದರೆ . ನಿಮ್ಮಲ್ಲಿದ್ದ ಒಳ್ಲೇ ಗುಣ ಮಾಯವಾಯ್ತಲ್ಲಾ ಅನ್ನೋ ಆಘಾತಾ ಮನಸನ್ನ ಘಾಸಿ ಮಾಡ್ತಿದೆ"
"ಒಳ್ಳೇಯವನಾ . ಯಾರು? ನಾನು . ಅದೆಲ್ಲಾ ನಾನು ಆಡಿದ ನಾಟಕ . ನೀನು ವಿಕಾಸನ್ನ ಹಿಂದೆ ಓಡಿ ಹೋಗಿರಲಿಲ್ಲಾ ಅಂದಿದ್ದ್ರೆ ನಾನೇ ನಿನ್ನನ್ನ ದೂರ ಮಾಡ್ತಿದ್ದೆ . ಅಲ್ಲಾ ಹೆಣ್ಣಾದ ನಿಂಗೆ ಹಳೇ ಗಂಡ ಬೋರಾಗಿದ್ದ್ರೆ ನಾನು ಗಂಡ್ಸು ನಂಗೆ ಇನ್ನೆಷ್ಟು ಬೋರಾಗಿರ್ಬೇಕು ಹೇಳು? ಅದಕ್ಕೆ ನಯವಾಗಿ ಉಪಾಯವಾಗಿ ನಿನ್ನನ್ನ ವಿಕಾಸ್‌ನ ಬಳಿ ಕಳಿಸಿದೆ. ಎಲ್ಲಾ ನನ್ನದೇ ನಾಟಕ " ಮೀಸೆ ತಿರುವಿದ
ಶೈಲಾಳ ಹೃದಯದಲ್ಲಿ ನೂರಾರು ಅಲೆಗಳು ಎದ್ದವು. ಜಿಗುಪ್ಸೆ ತಾನಾಗೆ ಹರಿದು ಬಂತು. ವಿಕಾಸ್ ಮನುವಿನ ಕೈನಲ್ಲಿದ್ದ ಸಿರಿಯನ್ನು ಕರೆದುಕೊಂಡು ಹೆಗಲಿಗೇರಿಸಿಕೊಂಡ.
"ಅಬ್ಬಾ ಕೊನೆಗೂ ಪೀಡೆ ಕಳೀತು" ಅತ್ತೆ ಸಂತೋಷದಿಂದ ಉದ್ಗರಿಸಿದರು.
ಶೈಲಾಳ ಮನ ನೊಂದಿತು. ತನ್ನ ಕುಡಿಯನ್ನು ಪೀಡೆ ಅನಿಷ್ಟ ಎನ್ನುತ್ತಿದ್ದಾರಲ್ಲ . ಆದರೂ ಏನೂ ಹೇಳಲೂ ಬಾಯಿ ಬರಲಿಲ್ಲ. ತಪ್ಪು ತನ್ನದೂ ಅಲ್ಲವೇ. ತನ್ನ ಮಗಳನ್ನು ತಾನು ನೋಡ್ಕೋಬೇಕು
"ಸರಿ ಶೈಲಾ ಡೈವೋರ್ಸ್ ಪೇಪರ್ ಇದೆ ಸೈನ್ ಮಾಡು ನಿಂಗೂ ಬಿಡುಗಡೆ ನಂಗೂ ಬಿಡುಗಡೆ. ಇದೊಂದೇ ಅಡೆತಡೆ ನನ್ನ ರಮ್ಯ ಮದುವೆಗೆ ಇರೋದು. ನಿಂಗೆ ಗೊತ್ತಾ ನಾನು ಇನ್ನಷ್ಟು ಕೋಟ್ಯಾಧೀಶ ಆಗಬಲ್ಲೆ" ಗೆಲುವಿನ ನಗೆ ಬೀರುತ್ತಾ ಅವಳತ್ತ ಡೈವೋರ್ಸ್ ಪೇಪರ್ ಚಾಚಿದ.
ಅವನಂದಂತೆ ಸೈನ್ ಮಾಡಿ ಕೊಟ್ಟಳು.
"ಮನು ಇಷ್ಟು ದಿನಾ ನಿಮಗೇನೋ ಅಪರಾಧ ಮಾಡಿದ್ದೀನಿ ಅಂತಾ ಒದ್ದಾಡ್ತಿದ್ದೆ. ವಿಕಾಸ್‌ಗೂ ನೋವನ್ನು ಕೊಟ್ಟೆ ಆದರೆ ಇವತ್ತಿಂದ ನನ್ನ ಮನಸು ತಿಳಿಯಾಗಿದೆ. ನಾನು ತಪ್ಪೇನು ಮಾಡಿಲ್ಲ. ನಿಮಗೆ ಮೋಸ ಮಾಡಿಲ್ಲ. ಮೋಸ ಹೋಗಿದ್ದು ನಾನು . ನಿಮ್ಮನ್ನ ದೇವರಂತೆ ಭಾವಿಸಿದ್ದೆ. ಆದರೆ ನನ್ನ ನಂಬಿಕೇನೆಲ್ಲಾ ಬುಡಮೇಲು ಗೊಳಿಸಿದ್ರಿ ನೀವು.ನಿಮಗೂ ನಿಮ್ಮ ತಾಯಿಗೂ ಈ ಮನೆಗೂ ದೊಡ್ಡ ನಮಸ್ಕಾರ. ಇನ್ಮೇಲೆ ನೀವು ಕನಸಲ್ಲೂ ಕೂಡ ಬರೋದಿಲ್ಲ . "
ಆವೇಶ ಭರಿತಳಾಗಿ ಮಾತಾಡಿ ಬೈಕನ್ನೇರಿದಳು ಅದನ್ನೇ ಕಾಯುತ್ತಿದ್ದಂತೆ ವಿಕಾಸ್ ಗಾಡಿ ಶುರು ಮಾಡಿದ .ಮುಂದೆ ಕುಳಿತಿದ್ದ ಸಿರಿ ಕೈ ಬೀಸಿದಳು ಮನುವಿಗೆ ಹಾಗು ಅಜ್ಜಿಗೆ. ಬೈಕ್ ರೋಯ್ ಅಂದು ಮುಂದೆ ಹೋಯ್ತು. ವಿಕಾಸನನ್ನು ಹಿತವಾಗಿ ಅಪ್ಪಿದ ಶೈಲಾ. ತನ್ನ ಮುಂದಿನ ಭವಿಷ್ಯಕ್ಕಾಗಿ ಕನಸು ಕಾಣಲೆಂದು ವಿಕಾಸನ್ ಬೆನ್ನಿಗೊರಗಿದಳು. ಡೈವೋರ್ಸ್ ಸಿಕ್ಕ ಮೇಲೆ ವಿಕಾಸನನ್ನು ಮದುವೆಯಾಗುವ ಸುಂದರ ಕನಸು .
ಬೈಕ್ ಮರೆಯಾಗುತ್ತಿದ್ದಂತೆ ಮನುವಿನ ತಾಯಿಯ ದುಖ: ಕಟ್ಟೆಯೊಡೆದಿತ್ತು. ಹಾಗೆ ಕೆಳಗೆ ಕುಸಿದರು.
"ಮನು ಅವಳು ಹೊರಟು ಹೋದಳಲ್ಲಾ . ಮನೆಗೆ ಬಂದವಳನ್ನ ಬಾಯಿಗೆ ಬಂದ ಹಾಗೆ ಅಂದು ಬಿಟ್ಟೆ. ನಾನು ಆ ಮಗೂಗೆ ಅನಿಷ್ಟ ಪೀಡೆ ಅಂತೆಲ್ಲಾ ಅಂದನಲ್ಲ " ರೋಧಿಸಿದರು.
ಮನು ತಾಯಿಯನ್ನು ಸಮಾಧಾನಿಸಿದ
"ಅಮ್ಮಾ ನಾವು ಹೀಗೆ ಮಾಡಿರಲಿಲ್ಲಾ ಅಂದಿದ್ರೆ ನಮ್ಮ ಶೈಲಾ ಯಾವತ್ತಿಗೂ ಸುಖವಾಗಿರ್ತಿರಲಿಲ್ಲ. ನಾನು ಅವಳ ಪಾಲಿಗೆ ದೇವರಾಗಿದ್ದೆ ದೇವರಿಗೆ ಮೋಸ ಮಾಡಿದೆ ಎಂಬ ಚಿಂತೆ ಅವಳನ್ನ ಎಡ ಬಿಡದೆ ಕಾಡ್ತಿತ್ತು. ಅದೇ ಥರಾ ವಿಕಾಸ್ ಕೂಡ ನನ್ನಂಥವನಿಗೆ ಮೋಸ ಮಾಡಿದೆ ಅನ್ನೋದು ಅವನಿಗೆ ಚುಚ್ಚುತ್ತಿತ್ತು. ಇಬ್ಬರೂ ಮಾನಸಿಕವಾಗಿ ತುಂಬಾ ಕೊರಗ್ತಿದ್ದರು. ವಿಕಾಸ್ ಇದೇ ಚಿಂತೇಲಿ ಆಫೀಸಲ್ಲಿ ಕೆಲಸ ಸರಿಯಾಗಿ ಮಾಡ್ತಾ ಇರಲಿಲ್ಲ ಅಂತ ಅವರ ಮ್ಯಾನೇಜರ್ ಹೇಳಿದ್ರು. ಹಾಗೆ ಶೈಲಾ ಸಹಾ ಪ್ರತಿ ತಿಂಗಳಿಗೂ ಹುಷಾರು ತಪ್ಪಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಳು. ಇದಕ್ಕೆಲ್ಲಾ ನಾನೆ ಒಂದು ಅಂತ್ಯ ಹಾಡಬೇಕಿತ್ತು. ಅವರಿಬ್ಬರ ದೃಷ್ಟಿಯಲ್ಲಿ ನಾನು ಕೆಟ್ಟವನಾಗಬೇಕಿತ್ತು. ಅದಕ್ಕೆ ಎಲ್ಲಾ ತಯಾರಿ ಮಾಡಿಕೊಂಡೆ ಈ ನಾಟಕ ಆಡಿದ್ದು ಅಮ್ಮ. ಮೊದಲು ಸಂಗೀತಾಗೆ ಈ ವಿಷ್ಯ ಹೇಳಿ ಅವಳಿಂದ ಶೈಲಾಗೆ ಒಂದು ಮೇಲ್ ಕಳಿಸೋಕೆ ಹೇಳಿದೆ. ಹಾಗೆ ವಿಕಾಸನನ್ನ ಭೇಟಿ ಮಾಡಿ ಅವನ ಬಳಿ ಕೆಟ್ಟದಾಗಿ ನಡೆದುಕೊಂಡೆ. ಈಗ ನೋಡು ಇಬ್ಬರೂ ನೆಮ್ಮದಿಯಿಂದಿರ್ತಾರೆ. ನಂಗೆ ಅಷ್ಟು ಸಾಕು"
"ಅವರು ನೆಮ್ಮದಿ ಇಂದ ಇರ್ತಾರೆ ಆದರೆ ನೀನು? ಸಿರೀನೂ ಕಳಿಸಿ ನೀನು ಹೇಗಿರ್ತೀಯಾ. ಬೇರೆ ಮದುವೆ ಮಾಡಿಕೊ ಮನು "ತಾಯಿಯ ಕರುಳು ನೊಂದು ಕೇಳಿತು
"ಅಮ್ಮಾ ನಾನಾಗ್ಲೇ ಹೇಳಿದ್ದೀನಿ . ನಾನು ಶೈಲಾನ ಬಿಟ್ಟು ಬೇರೆ ಯಾವ ಹೆಣ್ಣನ್ನೂ ಹೆಂಡತಿಯಾಗಿ ಕಾಣೋಕೆ ಸಾಧ್ಯ ಇಲ್ಲಾಂತ. ಅವಳ ನೆನಪುಗಳೇ ಸಾಕು ಬದುಕೋಕೆ" ನಿಟ್ಟುಸಿರಿಟ್ಟು ಒಳಗೆ ಹೋದ ಆ ಉದಾತ್ತ ವ್ಯಕ್ತಿ ತನ್ನ ಮಗ ಎಂಬುದನ್ನು ನೆನೆಸಿಕೊಂಡು ಹೆಮ್ಮೆ ಪಟ್ಟುಕೊಳ್ಳುವ ಸಂತಸವಷ್ಟೇ ಉಳಿಯಿತು ಮನುವಿನ ತಾಯಿಯ ಪಾಲಿಗೆ