Wednesday, September 18, 2013

ನಿದಿರೆಗೆ ರಜವನೀ

********************************
ನಿದಿರೆಗೆ ರಜವನೀ ಎಂದನಾತ ಕೇಳೇ
ಮದಿರೆಯ ನಿಶೆಯ ಸುರಿದನಾತ ಕಣೆ
[ಕುದಿವ ಕಡಲ ಕಲುಕಿದವನಾತ  ಗೆಳತಿ
 
ಆಧರವ ತೋರ್ಬೆರಳಲಿ ಮೀಟಿದನೇ
ನಾಸಿಕದ  ನಾಚಿಕೆಯಾ ತೊಲಗಿಸಿದನೇ
ಕಂಗಳಂಚಿಗೆ ತುಟಿಯ ಸಂಗವನೀಯ್ದ ಕಣೇ  

ಕರಕೆ ಸಲ್ಲದ ಸಲುಗೆಯನಿತ್ತನವ
ನೆಲಕೆ ಮೆಲ್ಲಗೆ  ಸೆರಗ ದೂಡಿದನವ
ಬಾಹುವಿಗೆ ನನ್ನ ಒಡ್ಡಿಕೊಂಡವ

ಆ  ಕರಗದ ಆಸೆಗೆ ಸೋತೆನೇ ನಾ ಗೆಳತಿ
 ಈ ಇಂಗದ ದಾಹಕೆ ನೀರಾದನೇ ಆವ ಗೆಳತಿ


Friday, September 6, 2013

ಭಾನುಮತಿ

"ಅರಮನೆ  ಇನ್ನು ನಮ್ಮದಲ್ಲ ತಾಯಿ ಹೊರಡಬೇಕು  ಎಂದ ಸೋಮಿಕನ ಮೊಗ ನೋಡಿದೆ . ಕರುಣೆಯೋ ಆತಂಕವೋ ದುಗುಡವೋ ,ಅಥವಾ ನೆಲೆ ಇಲ್ಲದ ನನ್ನನ್ನೂ ನೋಡಿಕೊಳ್ಳಬೇಕೆ ಎಂಬ  ಪ್ರಶ್ನೆಯೋ ಕಾಣುತಿತ್ತು . "
"ಮಹಾರಾಜರು  ಕೊನೆಯ ಘಳಿಗೆಯವರೆಗೂ ಹೋರಾಡಿದರು ಮಹಾರಾಣಿ . ಆದರೆ ಯುದ್ದಕ್ಕೆ ವಿರುದ್ದ  ನೀತಿಯನ್ನ  ಬಳಸಿ  ಅವರನ್ನ ಮೋಸದಿಂದ ಕೊಂದರಂತೆ " ಹೇಳುವಾಗ, ದನಿ ಮೆತ್ತಗಾಗಿತ್ತು .
"ಮಹಾಭಾರತದ  ಈ ಹದಿನೆಂಟು ದಿನಗಳಲ್ಲಿ ಮೋಸವಿಲ್ಲದೆ ನಡೆದ ಯುದ್ದದ ದಿನ ನೆನಪಿದೆಯೇ ಸೋಮಿಕ?" ಅವನನ್ನ ಪ್ರಶ್ನಿಸಿದೆ . ಆತ  ಉತ್ತರಿಸಲಿಲ್ಲ .
ಮೋಸದಿಂದ ಶುರುವಾದ ದಳ್ಳುರಿ ಮೋಸದೊಡನೆಯೇ ಅಂತ್ಯವಾಗಿತ್ತು . ಪತಿ ಸತ್ತನೆಂಬ ನೋವು ನನ್ನನ್ನು ಸುಡುತ್ತಿರಲಿಲ್ಲ . ಮಗನನ್ನು ಕಳೆದುಕೊಂಡೆ ನೋವೆ ಆಗುತ್ತಿಲ್ಲ  . ಮೈದುನ , ಅಳಿಯ  ಎಲ್ಲರೂ  ಇಡೀ ಕುರುವಂಶವೇ ನಾಮಾವಷೇಶವಾಗಿತ್ತು . ಆದರೂ ಕಣ್ಣಲ್ಲಿ ನೀರು ಬರುತ್ತಿಲ್ಲ . ಬರುವುದಾದರೂ ಹೇಗೆ . ಇಡೀ ನಾಟಕದ ಉದ್ದಕ್ಕೂ ಬೇಡವೆಂದು ಎಷ್ಟು ಹೇಳಿದರೂ  ಸ್ವಪ್ರತಿಷ್ಠೆಗಳೇ ಪ್ರಾಮುಖ್ಯತೆ ಪಡೆದು. ಹೆಂಗಳೆಯರ ಕಣ್ಣೀರಿಗೆ ಬೆಲೆಯೇ ಇಲ್ಲದಂತಾಗಿ .....................  ಅಷ್ಟಕ್ಕೂ ಹೆಣ್ಣಿನ ಮಾತಿಗೆ ಬೆಲೆ ಎಲ್ಲಿದೆ ಮದುವೆಯಿಂದ ಹಿಡಿದು ಆವಳ  ಸಾವಿನವರೆಗೂ ಅವಳ ನಿರ್ಧಾರ  ಆವಳದೆಲ್ಲಿ  ಆಗಿರುತ್ತದೆ?
ಅಷ್ಟಕ್ಕೂ  ಅಂದು ಸ್ವಯಂವರಕ್ಕೆ ಬಂದವರಲ್ಲಿ ಮನಸನ್ನ ಗೆದ್ದಿದ್ದು ಅವನು.. ಕರ್ಣ . ಸ್ವಾಮಿನಿಷ್ಟೆಗೆ ಮತ್ತೊಂದು ಹೆಸರು  ಕರ್ಣ ...  ಅವನಿಗೂ ನನ್ನ ಮೇಲೆ ಮನಸಿದ್ದಿದ್ದು ಸ್ಪಷ್ಟವಾಗಿತ್ತು. ಆದರೂ  ಪ್ರಾಣ ಮಿತ್ರ ಅದಾಗಲೇ  ದ್ರೌಪದಿಯನ್ನು ಗೆಲ್ಲಲಾಗದ ಅಪಮಾನದಿಂದ ಕುದಿಯುತ್ತಿದ್ದನಾದ್ದರಿಂದ  ನನ್ನನ್ನು ಗೆದ್ದು  ಸ್ವಾಮಿಗೆ ಅರ್ಪಿಸಿದ. ಅಂದೆ ನನ್ನ ಮಿತಿ ಅರ್ಥವಾಗಿತ್ತು
ದುರ್ಯೋದನ ನ ಪಟ್ಟ ಮಹಿಷಿ ಯಾಗಿ ಕಾಲಿಟ್ಟ ದಿನವೇ ನೂರಾರು ವಿಷಯಗಳು . ಕುರುಡು ಮಾವ , ಕಣ್ಣಿದ್ದೂ ಗಂಡನಿಗೆ ಕಣ್ಣಾಗದೇ ಬಟ್ಟೆ ಕಟ್ಟಿಕೊಂಡ ಗಾಂಧಾರಿ.
ಮೊದಲಿನಿಂದಲೂ ದ್ವೇಷದ ಭಾವನೇಯೇ ..ಎಷ್ಟು ಸಲ  ಹೇಳಿದ್ದೆ . ಬೇಡ ಅಸೂಯೆ, ದ್ವೇಷ ಸ್ವ ಪ್ರತಿಷ್ಟೆ ಇವುಗಳ ಅಂತ್ಯ ಅವಸಾನದಲ್ಲೇ ಎಂದು
ಕೇಳಲಿಲ್ಲ
ಕರ್ಣನಿಗೂ ಸೆರಗೊಡ್ಡಿ ಬೇಡಿದ್ದೆ. ನಿನ್ನ ಮಿತ್ರನಿಗೆ ಬುದ್ದಿ ಹೇಳೆಂದು
ಆತನೊಬ್ಬ ಕೆಲಸಕ್ಕೆ ಬಾರದ ಒಳ್ಳೇತನದ ಮಿತ್ರ.
ಒಂದೊಳ್ಳೇ ಕೆಲಸಕ್ಕೆ ಒಬ್ಬರೂ  ಕೈ ಚಾಚುವುದಿಲ್ಲ. ಆದರೆ ಕೆಟ್ಟ ಕೆಲಸಕ್ಕೆ ಹಲವಾರು ಮನಸುಗಳು ಜೊತೆಗೂಡುತ್ತವೆ
ಹಾಗೆಯೇ ಆಯ್ತು. ಕೋತಿ ಹೆಂಡ ಕುಡಿದಂತೆ ಆಡತೊಡಗಿದರು ಇವರು.
ಇವರ ತಾಳಕ್ಕೆ ತಕ್ಕಂತೆ ಜೊತೆಗಾರರು
ಅಂದು ದ್ಯೂತದ ದಿನ ಬೇಡಿದ್ದೆ. "ಬೇಡ ದಯವಿಟ್ಟು ನಿಲ್ಲಿಸಿ
ನಿಮ್ಮ ಕಿಚ್ಚು ಪಾಂಡವರ ಮೇಲಿರಲಿ . ಆ ಸಾಧ್ವಿ ದ್ರೌಪದಿಯ  ಮೇಲೇಕೆ" ಎಂದು .  ಕೇಳಲಿಲ್ಲ. ಸೀರೆ ಕಿತ್ತೆಸೆದರು... ಕಿತ್ತೆಸೆದದ್ದು ಬರೀ ಸೀರೆಯನ್ನಲ್ಲ ಹೆಣ್ತನದ  ತಾಳ್ಮೆಯ ಸೆರಗನ್ನು.

ತುಂಬಿದ ಸಭೆಯಲ್ಲಿ  ಆದ ಅವಮಾನವನ್ನು ಹೇಗೆ ತಾನೇ ಮರೆತಾಳು . ಮೊದಲೇ ಅಗ್ನಿ ಶಿಖೆ ...  ಬಂದವಳು ಇಡೀ ಕುರುವಂಶವನ್ನೇ ನಿರ್ನಾಮ ಮಾಡಿದಳು . ಮೊತ್ತ ಮೊದಲಿಗೆ ಹೆಣ್ಣೊಬ್ಬಳು ಸೊಲ್ಲೆತ್ತಬಹುದೆಂದು  ಲೋಕಕ್ಕ್ಕೆ  ತಿಳಿಸಿಕೊಟ್ಟವಳು .

ಎಲ್ಲಾ ಮುಗಿಯಿತು ಅವಳ ಐವರೂ ಪತಿಯಂದಿರು ಉಳಿದರು ಆದರೆ ಮಕ್ಕಳನ್ನೂ ಕಳೆದುಕೊಂಡಳು ನನ್ನಂತೆಯೇ . ಕೊನೆಗೆ ಏನು ಸಾಧಿಸಿದಂತಾಯ್ತು . ರಕ್ತದ ಹೊಳೆಯಲ್ಲಿ ಮತ್ತೆ  ಇರಬೇಕೇ?
ಕುಂತಿ ಹೇಳಿದಳು " ಭಾನುಮತಿ ನೀನು ನನ್ನ ಸೊಸೆಯೇ ಇಲ್ಲೇ ಇರು " ಎಂದು.  ಹಂಗಿನರಮನೆ ಬೇಕೆ ?
ಲಕ್ಷ್ಮಣ ನ ಮಡದಿ ಇನ್ನೂ ಚಿಕ್ಕ ವಯಸ್ಸು ಪಾಪ " ಅತ್ತೆ ನಮ್ಮ ಊರಿಗೆ ಬಂದು ಬಿಡಿ " ಎಂದಳು.
ಅದೂ ಹಂಗಿನರಮನೆಯೇ . ಇನ್ನೂ ತವರು ಯಾರಿದ್ದಾರೆ ಅಲ್ಲಿ ತನ್ನವರೆನ್ನುವವವರು.  ಯಾರೂ ಇಲ್ಲದೆಡೆ ಹೋಗಿಬಿಡೋಣವೆನಿಸುತ್ತಿದೆ . ವಾನ ಪ್ರಸ್ತ್ಯ ವೇ ಪ್ರಾಶಸ್ತ್ಯ .
ಎದ್ದೆ . ಸೋಮಿಕನಿಗೆ ಕೊರಳಲಿ ಉದ್ದ ಹಾರವೊಂದನ್ನು ಕೊಟ್ಟು ನಡೆದೆ .. ಕಾಡಿನತ್ತ  ....
(ಭಾನುಮತಿ ಆಗಾಗ ಕಾಡುತ್ತಾಳೆ ನನ್ನ್ನ ಅವಳ ಅಂತರಂಗ ನಿರೂಪಿಸುವ  ಸಣ್ಣ ಪ್ರಯತ್ನ