Wednesday, March 19, 2008

ಆತ

ಆಟೊನಲ್ಲಿ ಬಸ್ ಸ್ಟಾಂಡ್‌ಗೆ ಬಂದಿಳಿದ ಕವಿತಾ ಮಣಭಾರದ ಲಗೇಜ್‌ ಹೊತ್ತುಕೊಂಡು ನಡೆಯುತಿದ್ದಳು. " ಬೆಂಗಳೂರಿಗೆ ಯಾವಾಗ ಹೋಗುತ್ತೇನೋ ಎಂಬಂತೆ ಆಗಿತ್ತು.ಈ ಹಾಳಾದ ಎಕ್ಸಾಮ್ ಇದ್ದಾಗಲೇ ಅಕ್ಕನ ಮದುವೆ ಆದಾಗ ಬಹಳ ಬೇಸರವಾಗಿತ್ತು.ಮದುವೆಗೂ ಹೋಗಲಾಗಿರಲಿಲ್ಲ . ಅಕ್ಕನದು ಲೌ ಮ್ಯಾರೇಜ್ .ಕಳ್ಳಿ ನನಗೆ ಒಂದಿಷ್ಟೂ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ. ಮನದಲ್ಲೇ ಬೈದುಕೊಂಡಳು.ಅಲ್ಲಿದ್ದ ಸಾವಿರಾರು ಕಂಗಳು ಇವಳನ್ನೇ ದಿಟ್ಟಿಸುತ್ತಿದ್ದವು . ಒಬ್ಬನಂತೂ ಇನ್ನೇನು ನುಂಗಿಯೇ ಬಿಡುವೆನು ಎಂಬಂತೆ ಬಾಯಿ ತೆಗೆದಿದ್ದ. ಅದೆಲ್ಲಾ ಸಾಮಾನ್ಯ ವಾಗಿದ್ದರಿಂದ ಗಮನ ಕೊಡದೇ ಬಸ್‌ಗೆಂದು ಇತ್ತ ತಿರುಗಿದವಳಿಗೆ ಶಾಕ್‌ ಆದಂತೆ ಒಬ್ಬ ನಕ್ಕ . ಅಥವ ನಕ್ಕನೇನೊ. ಎಂಥ ಆಕರ್ಷಕ ವ್ಯಕ್ತಿತ್ವ . ಕಣ್ಣನ್ನು ಬೇರೆಡೆಗೆ ತಿರುಗಿಸಲು ಯತ್ನಿಸಿದಳು ಆಗಲಿಲ್ಲ . ಹೃದಯದ ಬಡಿತ ಅವಳಿಗರಿವಿಲ್ಲದಂತೆ ಜೋರಾಗಿತ್ತು.ಆಷ್ಟರಲ್ಲಿ ಬೆಂಗಳೂರಿನ ಬಸ್ ಅಡ್ಡ ಬಂದು ಅವನನ್ನು ಮರೆ ಮಾಡಿತು.
ಯಾವದೋ ಮಾಯೆಗೆ ಒಳಗಾದಂತೆ ಬಸ್ ಹತ್ತಿದವಳಿಗೆ ಮತ್ತೆ ಕಾಣಿಸಿದ್ದು ಅದೇ ಚೆಲುವ. ಸೀಟ್‌ಗಾಗಿ ಹುಡುಕುತಿದ್ದ ಇವಳನ್ನು ಕರೆದು ತನ್ನ ಪಕ್ಕದ ಸೀಟ್ ಕೊಟ್ಟ. ಮಾತಾಡದೇ ಕುಳಿತಳು . ಅವನೇ ಇವಳ ಲಗೇಜ್ ತಂದು ಬಸ್‌ನಲ್ಲಿ ಇಟ್ಟ." ಹೆಲ್ಲೊ ನೀವು ತಪ್ಪು ತಿಳಿಯದೇ ಇದ್ರೆ ನಾನು ನಿಮ್ಮ ಜೊತೆ ಮಾತಾಡ್ತಿರಬಹುದಲ್ಲವಾ? ಯಾಕೆಂದರೆ ಈ ಪ್ರಯಾಣದ ಸಮಯದಲ್ಲಿ ಪಕ್ಕದಲ್ಲಿ ಕುಳಿತೋರೇ ಸ್ನೇಹಿತರು. ಈ 4 ಅವರ್ಸ್ ಬೋರಿಲ್ಲದೇ ಕಳಿಬಹುದು"ಕವಿತ ತಲೆಯಾಡಿಸಿದಳು.ಹೀಗೆ ಪ್ರಾರಂಭವಾದ ಮಾತು ಇಬ್ಬರ ಬಗ್ಗೆ ಇಬ್ಬರ ಇಷ್ಟದ ಬಗ್ಗೆ , ಇಬ್ಬರ ಕನಸಿನ ಬಗ್ಗೆ , ಗುರಿ ಗಳನ್ನೆಲ್ಲಾ ಸುತ್ತಾಡಿ ಬಂತು. ಆ ಸಮಯದಲ್ಲಿ ಅವನ ಹೆಸರು ಹೇಮಂತ್ ಹಾಗು ಎಂ‌ಬಿಎ ಮಾಡಿ ಒಂದು ದೊಡ್ಡ ಕಂಪೆನಿಯಲ್ಲಿ ಇದ್ದಾನೆಂಬುದು ತಿಳಿಯಿತು.ಹೀಗೆ ಮಾತುಕತೆಯಾಗುವ ಸಂದರ್ಭ್ಹದಲ್ಲಿ ಕವಿತ ಒಂದು ಅಂಶವನ್ನು ಗಮನಿಸಿದಳು. ಬೇರೆ ಯಾರಾದರೂ ಆಗಿದ್ದರೆ ಕೈ ತಾಕಿಸುವುದು, ಕಾಲು ತಾಕಿಸುವುದನ್ನಾದರೂ ಮಾಡುತಿದ್ದರು . ಆದರೆ ಹೇಮಂತ್‌ ಹಾಗೆ ಒಮ್ಮೆಯೂ ಮಾಡಲಿಲ್ಲ . ಒಬ್ಬ ಪರ್ಫೆಕ್ಟ್ ಜೆಂಟಲ್ ಮ್ಯಾನ್ ಇರಬೇಕು.ಆತ ಎನೇನೋ ಮಾತನಾಡುತಿದ್ದ. ಕಿವಿ ಕೇಳುತಿದ್ದರೂ ಮನಸ್ಸು ಆಗಲೇ ಒಂದು ಸಣ್ಣ ಕನಸನ್ನು ಸೃಷ್ಟಿಸಿತ್ತು. ಹೇಮಂತ್ ತನ್ನನ್ನು "ಐ ಲೌ ಯು " ಎಂದು ಹೇಳಿದಂತೆ ತಾನು ಒಪ್ಪಿದಂತೆ ಇಬ್ಬರ ಮನೆಯಲ್ಲೂ ಇದಕ್ಕೆ ಒಪ್ಪಿಗೆ ಸಿಕ್ಕಿ ಮದುವೆಯೂ ಆದ ಹಾಗೆ ಏನೆನೋ ಕನಸು .ಹೀಗೆ ಕನಸು ಕಾಣುವುದು ಇದೇ ಮೊದಲ ಸಲವಲ್ಲ ಹಿಂದೆಯೂ ಕಾಲೇಜಿನಲ್ಲಿ ರಿಶಿಯನ್ನು ಕಂಡಾಗ ಹೀಗೆ ಆಗಿತ್ತು ಆದರೆ ರಿಶಿ ರಶ್ಮಿಯ ಹಿಂದೆ ಬಿದ್ದಾಗ ಆ ಕನಸು ಮಾಯವಾಗಿತ್ತು. ಅಷ್ಟೇಕೆ ಮ್ಯಾತೆಮೆಟಿಕ್ ಲೆಕ್ಚ್‌ರ್ರ್ ಸಂದೀಪ್‌ರನ್ನು ಕಂಡಾಗಲೂ ಹೀಗೆ. ಆದರೆ ಅವರ ಮದುವೆ ಆಗಲೇ ಆಗಿತ್ತು .ಹಾಗೆಂದು ಅವಳನ್ನು ಯಾರೂ ಇಷ್ಟ ಪಡಲಿಲ್ಲವೆಂದಲ್ಲ .ಆದರೆ ಅವಳಿಗಿಷ್ಟವಾದವರಿಗೆ ಅವಳು ಇಷ್ಟಾ ವಾಗಿರಲಿಲ್ಲ. ಅವಳನ್ನು ಬಯಸಿದವರು ಅವಳಿಗೆ ಹಿಡಿಯಲಿಲ್ಲಮಧ್ಯದಲ್ಲಿ ಬಸ್ ನಿಂತಾಗ ಹೇಮಂತ್ ಊಟ ಕೊಡಿಸಿದ .
ಹೀಗೆ ಮಾತನಾಡುತ್ತಲೇ ಬೆಂಗಳೂರು ಬಂದೇ ಬಿಟ್ಟಿತು. ಒಂದೇ ಕ್ಷಣದಲ್ಲಿ ಹೇಮಂತ್ ಇವಳ ಬ್ಯಾಗ್ , ಲಗೇಜ್ ಎಲ್ಲಾ ಹೊತ್ತುಕೊಂಡು ಇಳಿದೇ ಬಿಟ್ಟ, "ಹೆಲ್ಲೊ ನಿಲ್ಲಿ ನಿಲ್ಲಿ" ಎಂದು ಎಷ್ಟು ಹೇಳಿದರೂ ಕೇಳದೇ ಕೆಲ ಕ್ಶಣದಲ್ಲಿ ಜನರಲ್ಲಿ ಮರೆಯಾಗಿ ಹೋದ . ನಯ ವಂಚಕ. ಬರೀ ಮಾತಿನಲ್ಲಿ ಮರುಳು ಮಾಡಿ ಎಲ್ಲವನ್ನು ಹಾರಿಸಿಕೊಂಡು ಹೋದ.ಕವಿತಾಗೆ ಸಂದರ್ಭದ ಅರಿವಾಗುತ್ತಲ್ಲೇ ಅಳು ಬಂದು ಬಿಟ್ಟಿತು . ತನ್ನ ಪುಸ್ತಕ, ದುಡ್ಡು , ಮೊಬೈಲ್ , ಬಟ್ಟೆ , ಎಲ್ಲವನ್ನೂ ಕಳೆದುಕೊಂಡಿದ್ದಳು.ಮನೆಯಲ್ಲಿ ಏನು ಹೇಳುವುದು . ಯಾವನೋ ತನ್ನ ಲಗೇಜ್ ಹೊಡೆದುಕೊಂಡು ಹೋದ ಎಂದರೆ ಹೇಗೆ ಅಂತ ಕೇಳುತ್ತಾರೆ. ಈ ವಿಷಯವನ್ನು ಹೇಗೆ ಹೇಳುವುದು . ದಿಕ್ಕೆಟ್ಟ್ವಳಂತೆ ನಿಂತಿದ್ದಳು. ಅಷ್ಟರಲ್ಲೆ ಕಾಣಿಸಿದಳು ಅಕ್ಕಅರೇ ಅಕ್ಕನ ಬಳಿಯಲ್ಲೇ ತನ್ನೆಲ್ಲ ಲಗೇಜ್ ಇದೆ. ಹಾಗಿದ್ದರೇ ಆ ಈಡಿಯಟ್ ....................ಆತ ಅಕ್ಕನ ಬಳಿಯಲ್ಲೇ ನಿಂತಿದ್ದ . ಇಬ್ಬರೂ ಮುಸಿ ಮುಸಿ ನಗುತ್ತಿದ್ದರು."ಹೋದೆಯಾ ಮೋಸ ಕವಿತಾ . ಹೇಗಿತ್ತು ನಿಮ್ಮ ಭಾವನ ನಾಟಕ . ಯಾವಾಗಲೂ ನನ್ನ ಗೋಳು ಹಾಕ್ಕೊಳಿತಿದ್ದೆಯಲ್ಲಾ. ಇವತ್ತು ಹೇಗಿತ್ತು, ನಿಮ್ಮ ಭಾವ ನಿನ್ನ ಕರ್ಕೊಂಡು ಬರ್ತೀನಿ ಅಂತ ಹೇಳಿದ್ದರು. ಹಾಗೆ ಅವಳಿಗೆ ನೀವು ಯಾರು ಅಂತ ಹೇಳ್ಬೇಡಿ ಅಂತ ನಾನೆ ಹೇಳಿದ್ದೆ "ಕೆಲ ಕ್ಶಣ ದಲ್ಲಿ ಎಲ್ಲಾ ಅರಿವಾಗಿತ್ತು. ಕವಿತ ಅವಳ ಭಾವನನ್ನು ನೋಡಿರಲಿಲ್ಲವಾದ್ದರಿಂದ ಹೇಮಂತ್ ಯಾರು ಎಂದು ಅವಳಿಗೆ ತಿಳಿಯಲಿಲ್ಲ ." ಸಾರಿ ಕವಿತ . ನಿಮ್ಮಕ್ಕನ ಆಜ್ನೆ ಮೀರಬಾರದು ಅಂತ ನಾನು ನಿಂಗೆ ವಿಷಯ ಹೇಳಲಿಲ್ಲ" ಹೇಮಂತ್ ಮತ್ತೊಮ್ಮೆ ನಕ್ಕ.ಕೆಲ ನಿಮಿಷ ಮನಸ್ಸು ಮುದುಡಿತು. ಆದರೂ ಇಂತಹ ಗಂಡು ಅಕ್ಕನಿಗೆ ಸಿಕ್ಕಿದ್ದಕ್ಕಾಗಿ ಮನಸ್ಸು ಖುಷಿ ಪಟ್ಟಿತು . ರಿಶಿ, ಸಂದೀಪ್ ರಂತೆ ಇದೂ ಒಂದು ಘಟನೆ ಎಂದುಕೊಂಡು ಸುಮ್ಮನಾದರೆ ಆಯಿತು ಎಂದುಕೊಂಡು ಕಾರನ್ನೇರಿದಳು.