ಸ್ಮಶಾನಕ್ಕೆ ಕಾಲಿಟ್ಟಂತಹ ಅನುಭವ.ಒಬ್ಬಂಟಿಯಾಗಿ ನಡೆಯುತ್ತಿದ್ದೆ.
ಎಲ್ಲಿ ನೋಡಿದರೂ ಮುರಿದ ರಥಗಳು, ರಕ್ತದ ಮಡುವು, ಕರುಳು ಆಚೆ ಕಿತ್ತು ಬಂದಿರುವ ಸೈನಿಕರು. ನಿಟ್ಟುಸಿರು ತಂತಾನೆ ಹೊರಹೊಮ್ಮಿತು .
ದೀರ್ಘವಾಗಿ ಉಸಿರೆಳೆದೆ. ನನ್ನ ಸ್ವಾರ್ಥಕ್ಕೆ, ಹಣದಾಹಕ್ಕೆ, ಭೂಮಿಯಾಸೆಗೆ, ಅಭಿಮಾನಕ್ಕೆ ಬಲಿಯಾದ ಮುಗ್ಧರು. ತಾವು ಏತಕ್ಕಾಗಿ ಯಾರಿಗಾಗಿ ಯುದ್ದ್ದ ಮಾಡುತ್ತಿದ್ದೆವೆಂಬ ಅರಿವೂ ಇಲ್ಲದವರು
ಅದೂ ನನ್ನದೇ ಅಪ್ಪಣೆಯಾಗಿತ್ತಲ್ಲವೇ. ಪ್ರತಿಯೊಂದು ಗಂಡಸೂ ಯುದ್ದರಂಗದಲ್ಲಿ ಹೋರಾಡಬೇಕೆಂಬ ನಿಯಮ ತಂದು ಮನೆ ಮನೆಗೆ ನುಗ್ಗಿ ೧೪ ರಿಂದ ೭೦ ರವರೆಗಿನ ಪುರುಷರನ್ನು ಎಳೆತಂದು ಯುದ್ದ ತರಬೇತಿ ಕೊಟ್ಟು..........
ಆಗ ತಾನೆ ಮದುವೆಯಾಗಿತ್ತಲ್ಲವೇ ಲಕ್ಷ್ಮಣನಿಗೆ. ಹಾ ಕಂದ ಲಕ್ಷ್ಮಣನನ್ನು ನೆನೆದು ಕರುಳು ಹರಿದಂತಾಯಿತು. ತನ್ನ ಮುಂದೆಯೇ ಕೊಂದನಲ್ಲಾ ಆ ಎನ್ನ ಅರಿ ಅರ್ಜುನನ ಮಗ ಅಭಿಮನ್ಯು. ತಾನೇನೂ ಮಾಡಲಾಗಲಿಲ್ಲವಲ್ಲಾ . ಇಲ್ಲ ಇಲ್ಲ ಅವನನ್ನೂಕೊಂದು ಬಿಟ್ಟೆವಲ್ಲ್ಲಾ ಅವನೂ ಹೊಸದಾಗಿ ಮದುವೆಯಾದವನೇ ತಾನೆ. ದ್ವೇಷಕ್ಕೆ ದ್ವೇಷ . ಸೇಡಿಗೆ ಸೇಡು . ಅವನನ್ನು ಕೊಂದ ತಪ್ಪಿಗೆ ಸೈಂಧವನ ಬಲಿ. ಪ್ರೀತಿಯ ಸಹೋದರಿ ವಿಧವೆಯಾದಳು.
ಲಕ್ಷ್ಮಣನಾದರೂ ದಾಂಪತ್ಯದ ಸುಖವನ್ನ ನೋಡಿದ್ದ. ಆದರೆ ಮೊದಲರಾತ್ರಿಗೂ ಅವಕಾಶ ನೀಡದೆ ಎಳೆತಂದ ಅದೆಷ್ಟೋ ಅಮಾಯಕ ಹುಡುಗರು. ಊಟ ಮಾಡುತ್ತಿದ್ದವರು , ನಿದ್ರಿಸಿದವರು ಕಂದಮ್ಮನನ್ನ ಆಡಿಸುತ್ತಿದ್ದವರು ಪ್ರತಿಯೊಬ್ಬರೂ ನಿಂತನೆಲೆಯಲ್ಲಿಯೇ ಬರಲು ಆಜ್ನಾಪಿಸಿದ್ದೆ . ತುತ್ತು ಊಟಕ್ಕೂ ತತ್ವಾರ ಬಂದರೂ ಕೊನೆವರೆಗೂ ಹೋರಾಡಿ ಸತ್ತರು ಸೈನಿಕರು.
ಅಷ್ಟಕ್ಕೂ ನನಗೇನಾಗಿತ್ತು? ಈಗಲೂ ತೋಚುತ್ತಿಲ್ಲ. ದಾಯಾದಿ ದ್ವೇಷವೆಂಬುದು ಇಷ್ಟೊಂದು ಪರಿಮಿತಿ ದಾಟಬಲ್ಲುದೇ?
ಕೇವಲ ಈರ್ಷೆ ,ಈರ್ಷೆ , ಅಸೂಯೆ. ಹೊಟ್ಟೆಕಿಚ್ಚು. ಅವರು ಉದ್ದಾರವಾಗಬಾರದೆಂಬ ಮನಸ್ಸು. ಹೌದು ನಾನು ಹುಟ್ಟಿದ್ದು ಅಸೂಯೆಯ ಕಿಚ್ಚಲ್ಲಿ . ತನಗಿಂತ ಮೊದಲು ಧರ್ಮರಾಜ ಹುಟ್ಟಿದಾಗ ಅಪ್ಪ ಅಮ್ಮನ ಮನದಲ್ಲಿದ್ದ ಅಸೂಯೆಯ ಕಿಚ್ಚು ತನ್ನನ್ನೂ ಮೆಟ್ಟಿಕೊಂಡಿತೇ?
ಅಮ್ಮನೇ ಹೇಳಿದಳಲ್ಲ . ಪರಂಪರೆಯ ಪ್ರಕಾರ ಹಿರಿಯನಾಗಿದ್ದರೂ ರಾಜನಾಗದ ಕುರುಡ ಗಂಡ, ಅವನ ಕುರುಡುತನದಿಂದ ತಮ್ಮನಿಗೆ ಪಟ್ಟಾಭಿಶೇಕವಾಯ್ತು, ಕೊನೆಗೇನೋ ದಾನ ಕೊಡುವಂತೆ ಔದಾರ್ಯತೆ ತೋರುವಂತೆ ರಾಜ್ಯಭಾರ ಬಿಟ್ಟು ಹೋದ . ಒಬ್ಬನೇ ಹೋಗಿದ್ದಲ್ಲಿ ಸರಿ ಇತ್ತೇನೋ ಜೊತೆಗೆ ಹೆಂಡತಿಯರನ್ನು ಕರೆದುಕೊಂಡು ಹೋದ. ಆಗ ಅವಳಿಗೆ ತುಂಬಾ ಸಂತೋಷವಾಗಿತ್ತಂತೆ. ಇನ್ನು ತಾನೆ ಪಟ್ಟಮಹಿಷಿ. ಹೇಗಿದ್ದರೂ ಪಾಂಡುವಿಗೆ ಮಕ್ಕಳಾಗುವುದಿಲ್ಲ ಎಂಬ ಆನಂದ ಜೊತೆಗೆ. ತನ್ನ ಸಂತಾನವೇ ಮುಂದಿನ ರಾಜ ಎಂಬ ಕಲ್ಪನೆ. ಅದು ಒಡೆದಿದ್ದು ಅವಳಿಗಿಂತಮೊದಲು ವಾರಗಿತ್ತಿಗೆ ಮಗನಾದಾಗ . ಆಗ ತಾನು ಅವಳ ಹೊಟ್ಟೆಯಲ್ಲಿ ಇದ್ದೆ . ಆ ಕಿಚ್ಚು ತನ್ನನ್ನು ಮುಚ್ಚಿಕೊಂಡಿತೇ?
ತನ್ನಂತೆಯೇ ದುಶ್ಯಾಸನ ಇನ್ನಿತರ ತಮ್ಮಂದಿರು.ಕಿಚ್ಚಿಗೆ ಗಾಳಿಯಂತೆ ಕರ್ಣ ಸೇರಿದ ಅವನ ದ್ವೇಷ ಅರ್ಜುನನ ಮೇಲೆ. ಒಮ್ಮೆಯಾದರೂ ಗೆಳೆಯ ನಿನ್ನ ರೀತಿ ಸರಿ ಇಲ್ಲ ಎಂದು ಹೇಳಲ್ಲಿಲ್ಲ . ಹೇಗಾದರೂ ಹೇಳಿಯಾನು ನಾನವನ ಧಣಿಯಲ್ಲವೇ?
ಶಕುನಿ ಮಾವನಾದರೂ ಬುದ್ದಿ ಹೇಳಬಹುದಿತ್ತು. ಆದರೆ ಅವನದೂ ಒಂದು ಕಥೆ , ಗೊತ್ತಾಗಿದ್ದು ನೆನ್ನೆ, ಯಾವುದೋಕಾಲದ ದ್ವೇಷವನ್ನು ಮನದಲ್ಲಡಗಿಸಿಕೊಂಡು ಕೌರವರ ಸರ್ವ ನಾಶಕ್ಕೆ ಕಾರಣನಾದ.
ಸೆರಗಿನಲ್ಲಿದ್ದ ಕೆಂಡ ಎಂದು ಗೊತ್ತಾಗಿದ್ದಾದರೂ ಯಾವತ್ತು? ಅಮ್ಮನಿಗೂ ಗೊತ್ತಿತ್ತೋ ಇಲ್ಲವೋ?
ಕಾಲಿಗೇನೋ ತಾಕಿದಂತಾಯ್ತು
ಭೀಷ್ನರ ಕಿರೀಟ ಅದು ತಾನೆ ತೊಡಿಸಿದ್ದ ಸೇನಾಧಿಪತ್ಯದ ಕಿರೀಟ. ಅನಾಥವಾಗಿಬಿದ್ದಿತ್ತು ನನ್ನಂತೆಯೇ
ಬಾಣಗಳ ಹಾಸಿಗೆಯನ್ನು ಮಾಡಿಕೊಂದು ಚಿರನಿದ್ರೆಗೆ ಹೋದರಲ್ಲ
ತಾತನಾದರೂ ........... ಏನು ? ಮನಸೆಲ್ಲಾ ಅವರೆಡೆ, ದೇಹ ಮಾತ್ರ ಇಲ್ಲಿ
ತಾತನಿಗೆ ಮಾತ್ರ ಸಾಧ್ಯವಿತ್ತು ಇದನ್ನೆಲ್ಲಾ ತಡೆಯಲು . ಆದರೆ ಅವರೂ......
ನನ್ನನ್ನುಬೇಡಿಕೊಂಡರೇ ವಿನ: , ಅಪ್ಪಣೆ ಮಾಡಲಿಲ್ಲ
ಒಂದೊಮ್ಮೆ ತಾತ ತನ್ನದೆಂದು ಹೇಳಿಕೊಳ್ಳುವಪ್ರಳಯಾಂತಕ ರೂಪವನ್ನು ತೋರಿಸಿದ್ದಲ್ಲಿ ನಾನಾಗಲಿ ಅಪ್ಪನಾಗಲಿ ಏನು ಮಾಡಲು ಸಾಧ್ಯವಿತ್ತು
ಅವರ ಕೋಪವನ್ನು ತಡೆಯುವ ಸಾಮರ್ಥ್ಯ ನಮ್ಮಲ್ಲಾದರೂ ಯಾರಿಗಿತ್ತು
ತಾತ ಬುದ್ದಿಯನ್ನೂ ಆದೇಶಿಸಲಿಲ್ಲ ಇತ್ತ ಜಯವನ್ನೂ ತಂದುಕೊಡಲಿಲ್ಲ. ಇಬ್ಬಂದಿಯ ಪರಿಸ್ಥಿತಿಯಲ್ಲಿ ............. ಯುದ್ದಕ್ಕೆ ಬಂದ ಮೇಲೆ ಶಿಖಂಡಿ ಏನು ಅರ್ಜುನೇನು ..................... ಮನಸು ಮಾಡಿದ್ದಲ್ಲಿ ಶಿಖಂಡಿಯ ಅಡ್ಡಿಯನ್ನು ಉಪಶಮನ ಮಾಡಬಹುದಿತ್ತು ಆದರ್ರೆ ಅವರು ಒಲಿದದ್ದು ಅರ್ಜುನನಿಗೆ ...........ಅದೂ ತನ್ನ ಸಾವನ್ನು ಆಹ್ವಾನಿಸುತ್ತಾ ಅಲ್ಲಲ್ಲ್ ನನ್ನ ಸರ್ವನಾಶವನ್ನ ಕರೆಯುತ್ತಾ.................. ತಾತನಿಗೆ ತಾನು ಮಾಡಿದ್ದ ಪ್ರತಿಜ್ನೆಯೇ ದೊಡ್ಡದಿತ್ತು, ತನ್ನ ಸಿದ್ದಾಂತದ ಮುಂದೆ ಹಸ್ತಿನಾಪುರದ ಅವಸಾನ ಅವರಿಗೆ ದೊಡ್ಡದೆನಿಸಲಿಲ್ಲವೇ?
ನಗು ಬರುತ್ತಿತ್ತು, ವಿಷಾಧವಾಗುತ್ತಿತ್ತು. ಗೊಳೋ ಎಂದು ಬೋರ್ಗರೆದು ಅಳುವ ಮನಸಾಗುತ್ತಿತ್ತು, ಅಹ್ಂ ಎಂಬುದು ಎಂಥಾ ಸ್ಥಿತಿಗೆ ದೂಡಿತ್ತು
ಪುತ್ರರನ್ನ , ಅಳಿಯಂದಿರನ್ನ, ತಮ್ಮಂದಿರನ್ನ ಜೊತೆಗಾರರನ್ನ ಎಲ್ಲರನ್ನೂ ಕಳೆದುಕೊಂಡು ಬಿಟ್ತಿದ್ದೆ .ಈಗಲೂ ಅಹಂಗೆ ವಿಷಾಧವೆಂಬುದಿಲ್ಲವಲ್ಲ
ಇತ್ತ ದ್ರೋಣಾಚಾರ್ಯರಾದರೂ ಏನು.... ಪ್ರೀತಿ ಪಾತ್ರರೆಡೆಗೆ ಮನಸು ಎಳೆಯುತ್ತಿದ್ದರೂ ಇಲ್ಲಿ ಯುದ್ದ ಮಾಡುತ್ತಿದ್ದರು . ಅವರೂ ಕಾಯುತ್ತಿದ್ದರೆಂದೆನಿಸುತ್ತದೆ
ಅಶ್ವತ್ತಾಮ ಸತ್ತ ಎಂದ ಕ್ಷಣ ಮುನ್ನುಗ್ಗಿ ಸೇಡು ತೀರಿಸಿಕೊಳ್ಳುವುದನ್ನು ಬಿಟ್ಟು ಶಸ್ತ್ರ ಸನ್ಯಾಸಿಗಳಾದ ಕಾರಣವೇನು.? ಪುತ್ರ ವ್ಯಾಮೋಹದ ಮುಂದೆ ತಿಂದ ರಾಜ್ಯದ ಉಪ್ಪು ಗೌಣವೆನಿಸಿತೇ?
ಆಗಿನಿಂದ ಹುಡುಕುತ್ತಿದ್ದ ಆಪ್ತ ಮಿತ್ರ ಕರ್ಣನ ಕಳೆಬರ ಕಂಡಿತು
ಕರ್ಣನ ಕಳೇಬರವನ್ನು ನೋಡುತ್ತಿದ್ದಂತೆ ಮೂಡಿದ ಹಲವುಭಾವನೆಗಳು ಜೊತೆಗೇ ಹಲವು ಪ್ರಶ್ನೆಗಳು
ಆದರೆ ನೀನೇಕೆ ಸಲ್ಲದ ಮಾತುಗಳಿಗೆ ಕಟ್ಟಿಬಿದ್ದು ದಾನ ಮಾಡಿದೆ?
ಕೊನೆಯ ಕಾಲದಲ್ಲಿ ನೀನೊಬ್ಬನೇ ನನಗೆ ಆಶಾದೀಪಾವಾಗಿದ್ದೆ. ಆದರೆ ಕೊನೆಗೂ ಮಹಾವೀರ ದಾನಿ ಕರ್ಣ ಕೊಡುಗೈ ಕರ್ಣ ಎಂದೆನಿಸಿಕೊಳ್ಳ್ವ ಹಂಬಲದ ಮುಂದೆ ನಿನ್ನೀ ಮಿತ್ರನ ನೆನಪಾಗಲಿಲ್ಲವೇ?
ಅವನ ತೇಜಸಿನ ಮೋರೆ ಕಳೆ ಕಳೆದುಕೊಂಡು ವಿಕಾರವಾಗಿತ್ತು.
ನೋಡಲಾರದೇ ಅವನನ್ನು ಅತ್ತ ಮಲಗಿಸಿ ಎದ್ದೆ
ಬಲವಂತದಿಂದ ಕರೆದುಕೊಂಡು ಬಂದ ಶಲ್ಯರು ಅತ್ತ ಕಡೆಯೇ ಎಂಬುದು ಗೊತ್ತಿದ್ದರೂ ಅವನನ್ನು ತನ್ನ ಕಡೆಗೆ ಕರೆದುಕೊಂಡದ್ದು ತನ್ನದೇ ತಪ್ಪು.
ಸುಲಭವಾಗಿ ಸಾವನ್ನು ಕರೆದುಕೊಂಡರು
ಹಾಗೆ ನೋಡಿದಲ್ಲಿ ತನ್ನದು ಜಯಿಸುವ ಪಕ್ಷವಲ್ಲ ಎಂಬುದು ಎಲ್ಲರಿಗೂ ಗೊತ್ತಿತ್ತೇ? ಎಲ್ಲರಿಗೇನು ತನಗೇ ಗೊತ್ತಿತ್ತಲ್ಲಾ. ಯಾವಾಗ ಕಪಟಿ ಕ್ರಿಷ್ಣ ಅವರ ಜೊತೆ ಸೇರಿದನೋ ಅಂದೇ ತನಗೆ ಗೊತ್ತಾಗಿತ್ತಲ್ಲವೇ?
ಹಾಗೆ ನೋಡಿದರೆ
ಈ ದುರ್ಯೋದನನ ಕಡೆಗೆ ದುರ್ಯೋದನಿಗಾಗಿಯೇ ದುರ್ಯೋಧನಿಗೋಸ್ಕರ ಹೋರಾಡುವವರು ಯಾರೂ ಇದ್ದಿಲ್ಲ
.
ಎಲ್ಲರಿಗೂ ಅವರವರ ಕೀರ್ತಿ , ಸಂಭಂಧ, ಮಾತು , ನೆಂಟಸ್ತಿಕೆ, ದ್ವೇಷ ಹೀಗೆ ಇವುಗಳೇ ಹೆಚ್ಚಾಗಿದ್ದವು . ಈ ಅತಿರಥ ಮಹಾರಥರಲ್ಲಿ ಕೇವಲ ಒಬ್ಬರಾದರೂ ನನಗೋಸ್ಕರ , ಹೋರಾಡಿದ್ದಲ್ಲಿ ಇಂದು ಜಯಲಕ್ಷ್ಮಿ ನನ್ನವಳಾಗಿರುತ್ತಿದ್ದಳು
ಈ ಮಹಾಭಾರತ ಸಂಗ್ರಾಮದಲ್ಲಿ ದುರಂತ ನಾಯಕನಾದವ ನಾನೊಬ್ಬನೇ
ನಾನೂ ಹೋರಾಡುತ್ತೇನೆ, ಅದು ನನಗೋಸ್ಕರ .
ಅಥವ ಹೋರಾಡಬಲ್ಲೇನೇ? ಅದು ಆಗುವ ಸಾಧ್ಯತೆ ಇದೆಯೇ?
ಯಾರಿಗಾಗಿ ಬದುಕಲಿ? ಅಥವ ಜಯಿಸಲಿ?
ಕಣ್ಣು ಹಾಯಿಸಿದಷ್ಟುದೂರ ಅಥವ ಅದರಿಂದಾಚೆಯೂ ಕಾಣುವ ರಕ್ತದೋಕುಳಿಗೆ ಕಾರಣ ತಾನೇ.
ಹೋರಾಡುವ ನಟನೆ ಮಾಡಿ ಜೀವ ಬಿಡಲೇ?
ಜಯಾಪಜಯಗಳ ಗಡಿ ದಾಟಿ ಎಲ್ಲಾದರೂ ಓಡಿಬಿಡಲೇ
ಓಡಿ ಹೋಗಿ ಸಾಧಿಸುವುದಾದರೂ ಏನು
ಭೀಮಾ ಎಲ್ಲಿದ್ದೀಯಾ ಬೇಗ ಬಾ
ನನ್ನವರೊಡನೆ ನನ್ನನ್ನೂ ಸೇರಿಸು ಬಾ
ಆ ಪುಣ್ಯ ನಿನಗೇ ದಕ್ಕಲಿ..