Tuesday, April 30, 2013

ದಾರೀಲಿ ಒಬ್ಬಳೇ ಹೋಗ್ತಿದೀನಿ ಕೊಂಚ ದೂರ ಕಂಪೆನಿ ಕೊಡ್ತೀರಾ?


"ದಾರೀಲಿ ಒಬ್ಬಳೇ ಹೋಗ್ತಿದೀನಿ ಕೊಂಚ ದೂರ ಕಂಪೆನಿ ಕೊಡ್ತೀರಾ?"
ಅವಳ ಮಾತಿಗೆ ಬೆಕ್ಕಸ ಬೆರಗಾಗಿದ್ದೆ
ಹೀಗೂ ಉಂಟೆ.
"ನಾನಾಆಆಆಅ?"
"ಹೌದು ನೀವೆ .ತುಂಬಾ ದೂರ ಒಬ್ಬಳೆ ನಡೆದೂ ನಡೆದೂ ಬೇಸರ ಬಂದಿದೆ.. ಆದರೆ ಸೇರಬೇಕಿರೋ ಕಡೆ ಒಬ್ಬಳೇ ಹೋಗೋದು ಅಂತ ನಿರ್ಧರಿಸಿದ್ದೇನೆ.. ಆದ್ದರಿಂದ ನೀವು ಜೊತೆಗೆ ನಡೀಬೇಕು.. ಅದೋ ಅಲ್ಲಿ ಕಾಣುತ್ತಲ್ಲ ಆ ಪರ್ವತದ ತುದಿಯಾಚೆ ಇರೋ ಒಂದು ಸಣ್ಣ ಹೂವು ನನ್ನ ಗಮ್ಯ"
"ರೀ ನೀವ್ಯಾರು ಅಂತ ಗೊತ್ತಿಲ್ಲ ಹೇಗೆ ಬರೋದು.. ನಾನ್ಯಾರು ಅಂತ ಗೊತ್ತಿಲ್ಲ ಹೇಗೆ ನಂಬ್ತೀರಾ?"
"ಪರಿಚಯವಾಗೋ ಮೊದಲು ಯಾರೂ ಪರಿಚಿತರಾಗಿರಲ್ಲ, ನಿಮ್ಮನ್ನ ನೋಡಿ ನೀವು ನನ್ ಜೊತೆ ಬರಬಹುದು ಅನ್ನಿಸ್ತು. ಕೇಳಿದೆ. ಆಗತ್ತಾ ಇಲ್ವಾ ಹೇಳಿ"..
ಅಬ್ಬಾ ಎಂಥಾ ಖಡಕ್ ಮಾತು ನೋಡಿದರೆ ಒಳ್ಳೆಯವಳ ಹಾಗೆ ಕಾಣ್ತಾಳೆ, ಜೊತೆಗೆ ಚೆನ್ನಾಗೂ ಇದ್ದಾಳೆ. ಒಂದು ಕೈ ನೋಡೆ ಬಿಡೋಣ ಅಂತ ನನ್ನೆಲ್ಲಾ ಕೆಲಸಗಳನ್ನ ಬದಿಗಿಟ್ಟು ಅವಳೊಂದಿಗೆ ಹೊರಡಲನುವಾದೆ
"ಆಯ್ತು ಬರ್ತೀನೆ. ನಡೀರಿ"
"ಸೋ ನೈಸ್ ಆಫ್ ಯು... "
"ಎಲ್ಲಿಂದ ಬರ್ತೀದೀರಿ ಏನ್ ಕತೆ... ಹಿಂಗೆ ಚೆಂದ ಇರೋ ಹುಡುಗೀರು ಒಬ್ಬೊಬ್ಬರೇ  ಓಡಾಡ್ಬೇಡಿ,,ಕಾಲ ಕೆಟ್ಟು ಹೋಗಿದೆ."
ಮಾತಿಗೇಳೀಲೇಬೇಕಿತ್ತು
"ನಾನು ಬರ್ತಿರೋದು ಎಲ್ಲಿಂದ ಅನ್ನೋದು ನಂಗೇ ಗೊತ್ತಿರದ ವಿಷಯ. ಯಾಕೆಂದರೆ ನನಗೆ ನೆನಪಿದ್ದಾಗಿಂದಾನೂ ಜೀವನ ಅಲೆದಾಟದಲ್ಲೆ ಸಾಗಿದೆ.. ಅಪ್ಪ ಅಮ್ಮ ಊಹೂ ನೆನಪಿಲ್ಲ... ಕತೆ ಇನ್ನೂ ಶುರೂನೆ ಆಗಿಲ್ಲ... "
ತಲೆ ಕೆಡ್ತಿತ್ತು. ಇವಳ ಜೊತೆ ಬಂದು ತಪ್ಪು ಮಾಡಿದೆ ಅನ್ನಿಸ್ತಿತ್ತು
"ಅಲ್ಲ ಹುಚ್ಚರ ಥರ ಮಾತಾಡ್ತಿದೀರ ಅಂತ ಅನ್ನಿಸ್ತಿಲ್ವಾ?"
"ಹೌದು ಕೆಲವರಿಗೆ ನಾನು ಹುಚ್ಚಿ ಅಂತಾನೆ ಅನ್ನಿಸುತ್ತೆ..ಆದರೆ ನಾನು ಹುಚ್ಚಿ ಅಲ್ಲ "
"ಮತ್ತೆ ಯಾಕೆ ಈ ಥರ ಒಗಟಿನ ಜೀವನ?ಮಾತು"
"ನಿಮಗೆ ಒಗಟು ಅನ್ಸುತ್ತೆ. ಆದರೆ ನನಗೆ ಅದು ನನ್ನ ಮಾತು...  ನನ್ನ ಜೀವನದಲ್ಲಿ ಏನು ನಡೆದಿದೆ ಅಂತ ನಿಮಗೆ ಹೇಗೆ ಗೊತ್ತಾಗುತ್ತೆ?"
"ಬಟ್ ನಂಗೆ ಅರ್ಥಾ ಆಗ್ತಿಲ್ಲ ನಿಮ್ಮ ಮಾತು ಎಲ್ಲ"
"ಬೇಡ ಅರ್ಥ ಆಗೋ ಅಷ್ಟು ಸುಲಭವಾಗಿ ನಾನು ಯಾರಿಗೂ ದಕ್ಕೋಳಲ್ಲ. ಹಾಗಾಗಿ ಅರ್ಥ ಮಾಡಿಕೊಂಡರೂ ಉಪಯೋಗ ಇಲ್ಲ"
"ಯಾಕೋ ನಿಮ್ಮ ಜೊತೆ ಬಂದು ತಪ್ಪು ಮಾಡಿದೆ ಅನ್ಸುತ್ತೆ"ಸೋಲೊಪ್ಪಿಕೊಂಡೆ
"ಹಾಗಿದ್ದರೆ ನಿಮ್ಮ ತಪ್ಪನ್ನ ಇಲ್ಲೇ ನಿಲ್ಲಿಸಿ. ನೀವು ವಾಪಾಸ್ ಹೋಗಬಹುದು"
"ಅದೇ ಬೆಟರ್ ಅನ್ಸುತ್ತೆ. ಮತ್ತೆ ಎಂದಾದರೂ ಸಿಗೋಣ ಬರ್ತೀನಿ" ಹಿಂದೆ ತಿರುಗಿ ಹೋಗುತ್ತಿದ್ದಂತೆ ಕೇಳಿಸಿತು ಅದೇ ದನಿ ಮತ್ತಾರದೋ ಬಳಿಯಲ್ಲಿ
"ದಾರೀಲಿ ಒಬ್ಬಳೇ ಹೋಗ್ತಿದೀನಿ ಕೊಂಚ ದೊರ ಕಂಪೆನಿ ಕೊಡ್ತೀರಾ?"

Tuesday, April 2, 2013

ರಾಧೆ ನನ್ನ ಕಣ್ಣಲ್ಲಿ...........


ನೆನ್ನೆ ಒಬ್ಬರು ಕಳಿಸಿದ ರಾಧಾಕೃಷ್ಣರ ಚಿತ್ರವನ್ನ ನೋಡಿ ಅನಿಸಿದ್ದು
ಇಲ್ಲಿಯವರೆಗೂ ನನಗೆ ಕಗ್ಗಂಟಾಗಿರುವುದೇ ಈ ರಾಧಾ ಕೃಷ್ಣರ ಕಲ್ಪನೆ
ಕೇವಲ  ಕ್ರಿಷ್ಣನ ಗೋಕುಲ  ನಿರ್ಗಮನದವರೆಗೆ ಮಾತ್ರ ರಾಧೆ ಇರುತಾಳೆ . ನಂತರ ಆಕೆ ಏನಾದಳು . ಎಲ್ಲಿ ಹೋದಳು?
ಮದುವೆಯಾದ ಹೆಣ್ಣೊಬ್ಬಳು ತನಗಿಂತ ಕಿರಿಯನೊಬ್ಬನನ್ನು ಪ್ರೀತಿಸುತ್ತಾಳೆ ಅವರಿಬ್ಬರ  ನಡುವೆ ಇದ್ದಿದ್ದು ನಿಷ್ಕಾಮ ಪ್ರೀತಿಯೇ ಸ್ನೇಹವೇ? ರಾಧಾಕೃಷ್ಣರ ಪ್ರೇಮವನ್ನ ಅನುಪಮವೆಂದು ಕೊಂಡಾಡುವ ಲೋಕ ಅದೇ ಬಗೆಯ ಸಂಬಂಧಕ್ಕೆ ಅನೈತಿಕತೆ ಎಂಬ ಹೆಸರನ್ನು ಇಡುತ್ತೆ.
ಆತನನ್ನು ನೋಡಲು ಮಗುವನ್ನು ಪತಿಯನ್ನು ಬಿಟ್ಟು ಯಮುನೆಯ ತೀರಕ್ಕೆ ಬರುತ್ತಾಳೆ ಅದು ಕೃಷ್ಣನ ಮೇಲಿರುವ ಭಕ್ತಿ ಎನ್ನುತ್ತದೆ ಪುರಾಣ. ಅದೇ ಬಗೆಯಲ್ಲಿ ಮದುವೆಯಾದ ಹೆಣ್ಣೊಬ್ಬಳು  ತನಗಿಷ್ಟವಾದವರನ್ನ ಹುಡುಕುತ್ತಾ ಹೊರಟರೆ ಲೋಕ ಕಳಂಕಿನಿ ಎಂಬ ಪಟ್ಟ ಕಟ್ಟುತ್ತದೆ
ಒಂದು ಕಡೆ ವೈವಾಹಿಕ ಬಂಧಕ್ಕೆ  ಕಟ್ಟು ಪಾಡು ಎಸೆಯುವ  ಈ ಲೋಕ, ಅದೇ ವಿವಾಹಕ್ಕೆ ಹೊರತಾದ ಕಲ್ಪನೆಗಳಿಗೆ ಮಣೆ ಹಾಕುತ್ತದೆ.
ಆದರೂ ರಾಧೆ ನನಗೆ ಅಂತಲ್ಲ ಎಲ್ಲಾ ಹೆಂಗಸರಿಗೂ ಒಂದು ಬಗೆಯ ಕುತೂಹಲಭರಿತ ರಸಕಾವ್ಯ
ಆಕೆ ಏಕೆ ಮತ್ತು ಹೇಗೆ ಕೃಷ್ಣನಲ್ಲಿ ಅನುರಕ್ತೆಯಾದಳು
ಎಲ್ಲೂ ಆಕೆ ಪತಿಯಿಂದ ಬೇಸತ್ತ ಅಥವ ನೊಂದ ಸನ್ನಿವೇಶಗಳು ಉಲ್ಲೇಖವಾಗಿಲ್ಲ. ಆದರೂ ಆಕೆ ಅನುರಕ್ತೆಯಾದದ್ದು ಕೃಷ್ಣನ ಚೆಲುವಿಗೆ ಆತನ ತುಂಟಾಟಕ್ಕೆ ಮತ್ತು ಮುರಳಿಗಾನಕ್ಕೆ
ಇಂದಿಗೂ ರಾಧೆ ಕೃಷ್ಣರ ಸಂಬಂಧ ಅನುಪಮ  ಪ್ರೇಮಕ್ಕೆ ಸಾಕ್ಷಿಯಾಗಿದೆ ಅಂತಾರೆ
ಹಾಗಾದರೆ ಪರಿಶುದ್ದ ಪ್ರೇಮದ ಪರಿಕಲ್ಪನೆ ಏನು? ಸಂಬಂಧಗಳನ್ನು ಮೀರಿದ ಮೋಹವೇ, ಭಕ್ತಿಯೇ, ಅನುಬಂಧವೇ?
ಗೊತ್ತಿಲ್ಲ
ಆದರೂ ರಾಧೆ ನನ್ನನ್ನ ಸೆಳೆಯುತ್ತಾಳೆ ಕೃಷ್ಣನನ್ನ ಮೀರಿಸಿ
ಎಲ್ಲೋ ರಾಧೆ ಪ್ರತಿ ಮಹಿಳೆಯರ ಪ್ರತಿರೂಪವೇನೋ ಅನ್ನುವಂತೆ