Friday, December 17, 2010

ಹೀಗೆರೆಡು ಪ(ಪಾ)ತ್ರಗಳು

ಪ್ರೀತಿಯ ಸಂಜನಾಗೆ
ಸಂಜೂ ಇದು ನನ್ನ ಹತ್ತನೇ ಪತ್ರ ಒಂದಕ್ಕೂ ನಿನ್ನಿಂದ ಉತ್ತರ ಬಂದಿಲ್ಲ. ಹಾಗಾಗಿ ಆ ಎಲ್ಲಾ ಒಂಬತ್ತೂ ಪತ್ರಗಳನ್ನೂ ಒಟ್ಟಾಗಿ ಸೇರಿಸಿ ನನ್ನ ಹತ್ತನೇ ಪತ್ರ ಬರೆಯುತ್ತಿದ್ದೇನೆ. ನಿನ್ನಿಂದ ಪಾಸಿಟೀವ್ ಉತ್ತರ ಬರಲಿಲ್ಲವಾದಲ್ಲಿ ಇದು ನನ್ನ ಜೀವಮಾನದ ಕಡೆಯ ಪತ್ರವಾಗಿರುತ್ತದೆ
ದಂಗಾದೆಯಾ? ಹೌದು ಸಂಜೂ ನೀನು ನನ್ನ ಹೃದಯಕ್ಕೆ ಅಂತಹದೊಂದು ನಂಟನ್ನು ಬೆಳೆಸಿದ್ದೀಯ .
ನಾನು ನಿನ್ನನ್ನು ನೋಡಿದ್ದಾದರೂ ಯಾವತ್ತು?
ಇಂದಿಗೆ ಸರಿಯಾಗಿ ತಿಂಗಳ ಮುಂಚೆ.
ಆವತು ಯಾವುದೋ ಸಿನಿಮಾದ ಶೂಟಿಂಗ್ ಅಂತ ನೀನು ಬಂದಿದ್ದೆ . ಅದೇಕೋ ಚಿತ್ರದ ಹೀರೋಯಿನ್ ಸಂಪ್ರೀತಾ ನಂಗೆ ಹಿಡಿಸಲಿಲ್ಲ ಅವಳ ಮನೆ ಕೆಲಸದವಳಾಗಿ ಅವಳಿಂದ ಕೆನ್ನೆಗೆ ಹೊಡೆಸಿಕೊಳ್ಳುತ್ತಿದ್ದ ನೀನು ನಂಗೆ ಹಿಡಿಸಿಯೇಬಿಟ್ಟೆ
ಆಗಲೇ ನನ್ ಮನಸು ಹೇಳಿತು ನಂಗೆ ನೀನೆ ತಕ್ಕ ಜೋಡಿ
ಅಂದಿನಿಂದ ಇಂದಿನವರೆಗೆ ನಾನು ಪತ್ರಗಳನ್ನು, ಮೆಸೇಜುಗಳನ್ನು ಕಳಿಸ್ತಾನೇ ಇದ್ದೇನೆ . ಅಟ್ ಲೀಸ್ಟ್ ನಿಂಗೆ ನಾನು ಇಷ್ಟಾನಾ ಇಲ್ಲವಾ ಎಂಬ ಮಾತೂ ಇಲ್ಲ .
ಅಂದ ಹಾಗೆ ನಾನು ಶೇಖರ್ . ಗಾರ್ಮೆಂಟ್ಸ್‌ನಲ್ಲಿ ಸೂಪರ್ ವೈಸರ್ ಆಗಿದ್ದೀನಿ. ತಿಂಗಳಿಗೆ ಇಪ್ಪತ್ತು ಸಾವಿರದ ತನಕ ಸಂಬಳ . ಹೆಂಡತಿಯನ್ನು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವ ಮಟ್ಟಿಗೆ ಸಂಪಾದನೆ ಇದೆ
ಇನ್ನೂ ನಿನ್ನ ಬಗ್ಗೆ ಏನು ಗೊತ್ತು ಎಂದು ಕೇಳಬೇಡ. ಎಲ್ಲವನ್ನೂ ಅರಿತಿದ್ದೇನೆ
ನೀನು ಮೂರು ವರ್ಷದಿಂದ ಸಿನಿಮಾ ಇಂಡಸ್ಟ್ರಿಯಲ್ಲಿಯೇ ಪಾತ್ರಕ್ಕಾಗಿ ಹೆಣಗಾಡುತ್ತಿದ್ದೀಯಾ
ಆಗೊಮ್ಮೆ ಈಗೊಮ್ಮೆ ನಾಯಕಿಯ ಮನೆ ಕೆಲಸದವಳೋ ಅಥವ ಸ್ನೇಹಿತೆಯೋ ಅಥವ ನಾಯಕಿ ನಾಯಕ ಮರ ಸುತ್ತುತ್ತಾ ಹಾಡುತ್ತಿದ್ದಾಗ ಲಾ ಲಾ ಲಾ ಎಂದು ಕುಣಿಯುವ ಹುಡುಗಿಯರ ಪೈಕಿ ಒಬ್ಬಳಾಗಿ ಪಾತ್ರ ಮಾಡುತ್ತಿದ್ದೀಯಾ
ಈ ಸಿನಿಮಾ ಇಂಡಸ್ಟ್ರಿಯಲ್ಲಿ ಏನೆಲ್ಲಾ ಕೊಳಕುಗಳಿವೆಯೋ ಅವುಗಳಲ್ಲೆಲ್ಲಾ ನೀನು ಮುಳುಗಿದ್ದೀಯಾ
ಆದರೆ ನೀನು ನನ್ನ ಪಾಲಿಗಂತೂ ಗಂಗೆಯ ಥರ . ಗಂಗೆ ಯಾವತ್ತಿದ್ದರೂ ಗಂಗೆಯೇ.
ನೀನು ಹೇಗೆ ಇದ್ದರೂ ನಾನು ನಿನ್ನಪ್ರೀತಿಸುವೆ.
ಇಷ್ಟೆಲ್ಲಾ ಆದಮೇಲೂ ನೀನು ನನ್ನನ್ನ ತಿರಸ್ಕರಿಸಿದರೆ ,
ನಾಳೆಯೇ ನನ್ನ ಹೆಣದ ದರ್ಶನ ಮಾಡಬೇಕಾಗುತ್ತದೆ. ನನ್ನ ಸಾವಿಗೆ ನೀನೆ ಕಾರಣಳಾಗುತ್ತೀಯಾ
ಯೋಚಿಸು.....

ನಿನ್ನವ ಶೇಖರ್

ಶೇಖರನೆಂಬ ಮುಟ್ಟಾಳನಿಗೆ
ಪ್ರೀತಿ ಪ್ರೇಮವೆಂಬ ಭಾವನೆಗಳ ಕಡಲಲ್ಲಿ ಈಜಾಡ್ತಾ ಇದ್ದೀಯಾ ಸರಿ. ಆದರೆ ಆ ಈಜಿಗೆ ಜೊತೆಯಾಗಿ ನನ್ನ ಯಾಕೆ ಕರೀತ್ತಿದ್ದೀಯ

ಸಿನಿಮಾಗಳಲ್ಲಿ ಪ್ರೀತಿ ಪ್ರೇಮವೆಂಬ ಭಾವನೆಗಳನ್ನು ಮಾರ್ತಾ ಮಾರ್ತಾ ನಾವೆಲ್ಲಾ ಆ ಭಾವನೆಗಳನ್ನು ಹತ್ತಿರಕ್ಕೂ ಸೇರಿಸಲ್ಲಾ ಯಾಕೆ ಗೊತ್ತಾ?
ನಾವು ಯಾವತ್ತಿದ್ದರೂ ಭಾವನೆಗಳನ್ನು ಮಾರಿ ಲಾಭಗಳಿಸೋರು ಅದರಿಂದ ಬರೋ ನೋವು ನಮಗೆ ಬೇಡ

ನಿನ್ನ ಒಂಬತ್ತೂ ಪತ್ರಗಳನ್ನ ನಾನು ಓದಿದ್ದೇನೆ . ಇಂತಹ ಸಾವಿರ ಪತ್ರಗಳು ನನ್ನ ಬಳಿ ಇವೆ

ಯಾಕೆಂದರೆ ನಾವು ಸಿನಿಮಾದವರು ಹತ್ತು ಜನಕ್ಕೆ ಗ್ಲಾಮರ್ ಹೆಸರಲ್ಲಿ ಮೈ ಕೈ ತೋರಿಸೋರು

ಸಿನಿಮಾದಲ್ಲಿ ಪ್ರೀತಿಗೋಸ್ಕರ ಸಾವನ್ನೇ ಎದುರಿಸುವವರು....................

ಇಂತಹವಳು ಸಿಕ್ಕರೆ ಯಾರಿಗೆ ಬೇಡ ಹೇಳು..............?

ನೀನು ಸತ್ತು ಹೋಗ್ತೀಯಾ ಅಂತ ನಾನು ನಿನಗೆ ಉತ್ತರ ಕೊಡ್ತಾ ಇಲ್ಲ

ಯಾಕೆಂದರೆ ನೀನು ಸತ್ತರೆ ನನಗೇನು ನಷ್ಟವೂ ಇಲ್ಲ ಬದುಕಿದ್ದರೆ ಲಾಭವೂ ಇಲ್ಲ

ಆದರೆ ನಿನ್ನನ್ನೇ ನಂಬಿಕೊಂಡಿರುವ ನಿನ್ನ ಕುಟುಂಬದ ಶಾಪ ನನ್ನನ್ನ ತಾಕದಿರಲಿ ಅಂತ ಪತ್ರ ಬರೆಯುತ್ತಿದ್ದೇನೆ

ನಿನಗೆ ನನ್ನ ಬಗ್ಗೆ ಗೊತ್ತಿರೋದು ಕೇವಲ ಸ್ವಲ್ಪವೇ ಕೇವಲ ಪುಸ್ತಕದ ಹೊರಕವಚ ನೋಡಿ ಪುಸ್ತಕದ ಕಥೆಯನ್ನೇ ಹೇಳುತ್ತೀನಿ ಎಂಬ ಹುಂಬಮನೋಭಾವದವನು ನೀನು

ಇನ್ನೂ ನನ್ನ ಬಗ್ಗೆ ತಿಳಿಯೋದು ತುಂಬಾ ಇದೆ

ಅದಕ್ಕೂಮೊದಲು ನೀನು ನನ್ನನ್ನೆ ಯಾಕೆ ಬಯಸಿದೆ ಅನ್ನೋದು

ತುಂಬಾ ಹುಡುಗರಿಗೆ ಸಿನಿಮಾದವರು ಎಂದರೆ ಏನೋ ಕುತೂಹಲ. ಸಿನಿಮಾದ ಹುಡುಗಿಯನ್ನು ಮದುವೆಯಾಗುತ್ತಿದ್ದೇವೆ ಎಂಬ ಸ್ವಯ್ಂ ತೃಪ್ತಿ . ನೀನು ನೀನು ಕೂಡ ಹಾಗೆಯೇ

ಆವತ್ತು ಶೂಟಿಂಗ್ ಇದ್ದ ದಿನ ನಿನಗೆ ಸಿನಿಮಾ ಹೀರೋಇನ್ ಸಂಪ್ರೀತಾ ಹಿಡಿಸಲಿಲ್ಲ ಅಂದೆ

ಯಾಕೆ ಹಿಡಿಸಲಿಲ್ಲ ? ಹಾಗಿಲ್ಲವಾದಲ್ಲಿ ಅವಳ ಹತ್ತಿರ ಆಟೋಗ್ರಾಫ್ ತೆಗೆದುಕೊಳ್ಳುವಾಗ ಮೇಡಮ್ ನಾನು ನಿಮ್ಮ ಅಭಿಮಾನಿ ಅನ್ನುತ್ತಿದ್ದಾಗ, ಅವಳ ಬಳಿಯೇ ಆಗಷ್ಟೇ ಅವಳಿಂದ ಕೆನ್ನೆಗೆ ಹೊಡೆಸಿಕೊಂಡ ಕೆಲಸದವಳ ಪಾತ್ರ ಮಾಡಿದ್ದ ನಾನು ಅಲ್ಲೇ ನಿಂತಿದ್ದಾಗ ನನ್ನತ್ತ ನಿನ್ನ ಕಣ್ಣೂ ಹಾಯಲಿಲ್ಲವೇಕೇ?

ನಿನ್ನ ಮಟ್ಟಕ್ಕೆ ಅವಳು ನಿಲುಕದ ನಕ್ಷತ್ರ. ಸಿನಿಮಾದವಳನ್ನೇ ಮದುವೆಯಾಗುತ್ತೇನೆ ಎಂಬ ನಿನ್ನ ಹಟಕ್ಕೆ ಕಂಡಿದ್ದು
ನಾನು, ಅಷ್ಟೇ .
ಅದನ್ನೇ ಪ್ರೀತಿ ಎಂದುಕೊಂಡಿದ್ದೀಯ ಸುಳ್ಳು ಕಣೋ ಬೆಪ್ಪ.
ನಾಳೇ ನಾನೇನಾದರೂ ದೊಡ್ಡ ಹೀರೋಯಿನ್ ಆದಲ್ಲಿ ...................................?
ಇದಕ್ಕೆ ಉತ್ತರ ಹೇಳು.
ಅಂದ ಹಾಗೆ ನನ್ನ ಬಗ್ಗೆ ಏನೇನೋ ಗೊತ್ತಿದೆ ಎಂದೆ
ಮಲಿನವಾಗದ ಗಂಗೆ ಎಂದೆ
ಇಲ್ಲ ಕಣೋ ನಾವುಗಳು ಸೈಡ್ ಆಕ್ಟ್ರೆಸ್ಗಳು ಗಂಗೆಯೂ ಅಲ್ಲ ಗೌರಿಯೂ ಅಲ್ಲ . ಆ ಪದಗಳೆಲ್ಲಾ ಏನಿದ್ದರೂ ಸಿನಿಮಾಪರದೆಯ ಮೇಲೆ
ಹಿಂದೆ ನಾವುಗಳು ಬ್ರಾಂದಿ ವಿಸ್ಕಿಗಳು.
ಮತ್ತೇರುವ ತನಕ ಕುಡಿಯುತ್ತಾರೆ
ನಂತರ ಕುಸಿಯುತ್ತಾರೆ ಮತ್ತೆ ಹೊಸ ವಿಸ್ಕಿಗಳಿಗೆ ಕಣ್ಣ್ ಹಾಕ್ತಾರೆ ಅಷ್ಟೇ
ನಾನು ಸಿನಿಮಾರಂಗಕ್ಕೆ ಬಂದಿದ್ದು ದೊಡ್ಡ ಹೀರೋಯಿನ್ ಆಗೋಕೇನೆ
ಆದರೆ ಆಗಿದ್ದು ಮಾತ್ರ ಸೈಡ್ ಆಕ್ಟ್ರೆಸ್
ನಿಂಗೆ ಗೊತ್ತಾ?
ನಾನು ಮೊನ್ನೆ ಮಾಡಿದ್ದ " ಅಮರ್" ಫಿಲಂ ನಲ್ಲಿ ಹೀರೋ ಜೊತೆ ಮರ ಸುತ್ತಿದಂತೆ ಅವನ ಮೇಲೆ ಬೀಳುವ ಕನಸು ಕಾಣುವ ಒಂದು ಪಾತ್ರದಲ್ಲಿ ನಟಿಸಿದ್ದೆನಲ್ಲಾ. ಆ ಫಿಲ್ಂ ಹೀರೋ ರಜತ್ ಕೇವಲ ಹತ್ತು ವರ್ಷದ ಹಿಂದೆ ನನ್ನ ತಂದೆಯ ಪಾತ್ರ ಮಾಡಿದ್ದ ನಾನು ಬೇಬಿ ಸಂಜನಾ ಆಗಿದ್ದೆ
ಈಗ ಅದೇ ಅವನ ಜೊತೆ ಮರ ಸುತ್ತುವ ಪಾತ್ರ.
ನಾಳೆ ಅವನಿಗೇನೇ ಅಕ್ಕನೋ, ಇಲ್ಲ ಅತ್ತಿಗೆಯೋ ನಾಡಿದ್ದು ಅಮ್ಮನಾಗಿ ಪಾತ್ರ ನಿರ್ವಹಿಸಬೇಕಾಗುತ್ತದೆ .
ಏಕೆಂದರೆ ನಮಗೆ ವಯಸಾಗಿರುತ್ತದಲ್ಲಾ?
ಅದಕ್ಕೆ ಹೇಳಿದ್ದು ನಾವು ಬ್ರಾಂದಿಗಳು ವಿಸ್ಕಿಗಳು ಅಂತ.
ನಾನು ಮಲಿನವಾಗಿದ್ದೇನೆ ಅಂತ ನಂಗೆ ಯಾವತ್ತೂ ಅನ್ನಿಸಿಯೇ ಇಲ್ಲ
ಯಾಕೆ ಹೇಳು?
ನೀರಲ್ಲಿಯೇ ಇರುವ ಮೀನಿಗೆ ನೀರು ಯಾವತ್ತೂ ಬೋರೆನಿಸೋದಿಲ್ಲ . ಆದರೆ ಒಂದು ನಿಮಿಷ ನೀರಿಲ್ಲದೇ ಇದ್ದಲ್ಲಿ ಉಸಿರಾಡಲಾಗುವುದಿಲ್ಲ.


ಮತ್ತೆ ಇದನ್ನೆಲ್ಲಾ ಬಿಟ್ಟು ನಾನು ನಿನ್ನ ಜೊತೆ ಬಂದುಬಿಟ್ಟೆ ಅಂತಂದುಕೋ

ಸ್ವಲ್ಪ ದಿನ ಚೆನ್ನಾಗಿರುತ್ತೆ ನಂತರ?
ನಂಗೆ ನೀನು ಬೋರಾಗಲಾರಂಭಿಸುತ್ತೀಯಾ. ಏಕೆಂದರೆ ನಿನ್ನ ಸಂಪಾದನೆ ನನಗೆ ಏನನ್ನೂ ಕೊಡಿಸುವುದಿಲ್ಲ.
ನೀನೋ ನನ್ನ ಹಿಂದಿನ ಕಥೆಗಳನ್ನೆಲ್ಲಾ ಎಳೆದುಕೊಂಡ ಬೈಯ್ಯಲಾರಂಭಿಸುತ್ತೀಯ, ಅನುಮಾನ ಪಡ್ತೀಯಾ
ನನಗೂ ನಿನ್ನ ಬಗ್ಗೆ ಅಸಹನೇ ನಿನಗೂ ನನ್ನ ಬಗ್ಗೆ ಬೇಜಾರು
ಕೊನೆಗೆ ಎರೆಡೇ ವರ್ಷದಲ್ಲಿ ನನ್ನ ದಾರಿ ನನದು ಅಂತ ಇಲ್ಲಿಗೆ ಮತ್ತೆ ಹಾರಿ ಬರುತ್ತೇನೆ
ಇಲ್ಲಿ ಪರಿಸ್ಥಿತಿ ಟೋಟಲಾಗಿ ಬದಲಾಗಿರುತ್ತದೆ
ಹೊಸ ಹೊಸ ಹುಡುಗಿಯರು ಬಂದು
ನನ್ನ ಫ್ರೆಶ್‌ನೆಸ್ ಹೋಗಿರುತ್ತದೆ ನನ್ನ ತಾಯಿ ಪಾತ್ರಕ್ಕೋ ಇಲ್ಲ ಅತ್ತೆಯ ಪಾತ್ರಕ್ಕೋ ಹಾಕುತ್ತಾರೆ
ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ ಇಷ್ತೇಲ್ಲಾ ಯಾಕೆ.
ಇನ್ನೂ ಯೌವ್ವನ ಇದೆ . ಅದರಿಂದಲೇ ಕೈ ತುಂಬಾಹಣವೂ ಬರ್ತಿದೆ. ಇದನ್ನೆಲ್ಲಾ ಬಿಟ್ಟು ನನಗಂತೂ ಬರಲು ಮನಸಿಲ್ಲ.

ಮದುವೆಯಾಗುವ ಕನಸಿದ್ದರೂ ಆ ಕನಸಿನಲ್ಲಿ ಬರುತ್ತಿರುವ ಮುಖವೇ ಬೇರೆ ಅದು ನೀನಲ್ಲ

ನಿನಗೆ ಸಂಪ್ರೀತಾ ಹೇಗೆ ನಿಲುಕದ ನಕ್ಷತ್ರವೋ ಹಾಗೆಯೇ ನನಗೆ ಮತ್ತೊಬ್ಬ ಹೀರೋ

ಈ ಹುಚ್ಚಾಟವನ್ನೆಲ್ಲಾ ಬಿಟ್ಟುಬಿಡು ಅಂತ ನಾನು ಕೇಳೋದಿಲ್ಲ ಯಾಕೆಂದರೆ ಯು ಆರ್ ನಥಿಂಗ್ ಟು ಮಿ

ಮತ್ತೆ ನನಗೆ ಲೆಟರ್ ಬರೆಯಬೇಡ . ನಾನು ಓದೋದಿಲ್ಲ
ಇದೇ ನನ್ನ ಮೊದಲ ಮತ್ತು ಕಡೆಯ ಪತ್ರ

ನಿನಗೆ ಯಾರೂ ಅಲ್ಲದ
ಸಂಜನಾ