ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ಇಲ್ಲಿ ಪ್ರತ್ಯಕ್ಷವಾಗುತ್ತವೆ
Saturday, October 22, 2011
ಪಾಂಚಾಲಿ ಪ್ರಲಾಪ
ಪಾಂಚಾಲಿ ಪ್ರಲಾಪ
ಈ ವಿಜಯಕ್ಕೆ ನಗಬೇಕೆ? ಇಲ್ಲ ಅಳಬೇಕೆ? ನನ್ನೈವರು ಪತಿ ಉಳಿದರು ಎಂದು ಸಂತಸ ಪಡಲೇ ಇವರಬಿಟ್ಟು ಇನ್ನೆಲ್ಲರನ್ನೂ ಕಳೆದುಕೊಂಡ ದುರದೃಷ್ಟತನಕ್ಕೆ ದು:ಖಿಸಲೇ.
ಭಗವಂತ ಎಂಬುವನು ನಿಜಕ್ಕೂ ಇದ್ದಾನೆಯೇ, ಕಣ್ಣಿಗೇ ಕಾಣೋ ದೇವರಂತೆ ಈ ಕೃಷ್ಣ ಅಣ್ಣ ಕೂಡ, ಇವನೊಬ್ಬನೇ ಈ ಬಾಳಿಗುಳಿದ ಸೌಭಾಗ್ಯವೇ?ಯುದ್ದ ಮುಗಿದ ನಂತರ ಆ ರಕ್ತದ ಹೊಳೆ ನೋಡಿ ಮತ್ತೆ ರಾಣಿಯಂತೆ ಬದುಕಬೇಕೆಂಬ ಆಸೆಯಿರಲಿ ಬದುಕುವಾಸೆಯೇ ಮುರುಟಿ ಹೋಗಿದೆ.....
ಆವತ್ತು ಹಾಳು ಅಶ್ವಥ್ತಾಮ ಒಬ್ಬರಲ್ಲಿ ಒಬ್ಬರನ್ನೂ ಉಳಿಸಬಾರದಿತ್ತೆ , ನನ್ನ ಕರುಳ ಕುಡಿ ಎಂದು. ಹೆಣ್ಣಿನ ಸೌಭಾಗ್ಯ ಪತಿ, ಅವರೆಲ್ಲಾ ಬದುಕಿದ್ದಾರೆ ಎಂದು ಸಂತೈಸುತ್ತಿರುವ ಅತ್ತೆಯ ನೋಡಿ ನಿನ್ನ ಮಕ್ಕಳಲ್ಲಿ ಯಾರದರೂಬ್ಬರನ್ನು ಕಳೆದುಕೊಂಡಿದ್ದರೂ ನಿರ್ಲಿಪ್ತಳಾಗುತ್ತಿದ್ದೆಯಾ ಎಂದು ಕೇಳಿದ್ದಕ್ಕೆ ಕೋಪಿಸಿಕೊಂಡು ದುರು ದುರುಗುಟ್ಟಿ ನೋಡಿ ಎದ್ದು ಹೋಗಿದ್ದಳು. ಸತ್ತ ಅಷ್ಟೂ ಮಕ್ಕಳ ನೋಡಿ ನಾನು ಅಳುತ್ತಿದ್ದರೇ ಆ ಸ್ವಾರ್ಥಿ ಗಂಡಂದಿರು , ಇವರಲ್ಲಿ ಯಾರು ಯಾರ ಮಕ್ಕಳಿದ್ದಿರಬಹುದು? ಅಳಬೇಕೆ ಬೇಡವೇ ಎಂದು ಯೋಚಿಸುತ್ತಿದ್ದಾಗ, ಕಣ್ಣೀರು ಕುದಿ ಕುದಿದು ಮರಗಟ್ಟಿ ಹೋಗಿತ್ತು
ಪಾಪಿಗಳು ಇವರು ಹೆಜ್ಜೆ ಇಟ್ಟಲ್ಲೆಲ್ಲಾ ಹೆಜ್ಜೆ ಇಟ್ಟೆ, ಒಬ್ಬ ಒಳ್ಳೆಯ ಗಂಡ ಸಿಗುವುದು ದುಸ್ತರವಾಗುತ್ತಿರುವ ಈಕಾಲದಲ್ಲಿ ಐವರು ಅತಿರಥ ಮಹಾರಥರೆಂದು ಹೆಸರು ಪಡೆದ ಈ ಐವರೂ ನನ್ನನ್ನ ಮಡದಿ ಎಂದು ಪಾಣಿಗ್ರಹಿಸಿದಾಗ , ನಗಬೇಕೆ, ಅಳಬೇಕೇ ತಿಳಿಯದೇ ಕಕ್ಕಾಬಿಕ್ಕಿಯಾಗಿ ನಿಂತಿದ್ದೆ, , ಇದೇ ಕುಂತಿ --ಯಾಕಾದರೂ ಐದು ಜನರನ್ನು ಹೆತ್ತಳೋ .
(ಐದು ಅದು ನೆನ್ನೆಯವರೆಗೆ, ಇಂದು ಆ ಸತ್ಯ ಕೂಡ ಗೊತ್ತಾಯಿತಲ್ಲ ಆ ಕರ್ಣನೂ ಇವಳ ಮಗನೇ ಅಂತೆ.)
ಆ ಐದೂ ಜನರನ್ನ ಮದುವೆಯಾಗು ನಿನ್ನನ್ನು ಸುಖವಾಗಿ ನೋಡಿಕೊಳ್ಳುತ್ತಾರೆ ಎಂದಾಗ ಹಿರಿ ಹಿರಿ ಹಿಗ್ಗಿದ್ದೆ, ಅಪ್ಪ ಕಣ್ಣನು ತುಂಬಿಕೊಂಡು ನಿನಗೆ ಒಪ್ಪಿಗೆಯೇ ಎಂದಾಗ ಸಮ್ಮತಿಸಿದ್ದು ಕೂಡ ಆ ಕುಂತಿ ಹೇಳಿದ ಮಾತಿಗಾಗಿ.
ಮದುವೆಯಾದ ಕೆಲವು ವರ್ಷದಲ್ಲೇ ಇವರೆಲ್ಲರ ಗೋಳುಗಳು ತಿಳಿದದ್ದು, ಇವರ ದಾಯಾದಿಗಳು ಇವರ ಮೇಲೆ ದ್ವೇಷ ತುಂಬಿಕೊಂಡು ಇವರ ಅವನತಿಗೆ ಹೊಂಚು ಹಾಕುತ್ತಿದ್ದಾರೆಂದು. ಆಗಲೇ ಮತ್ತೊಂದು ಸತ್ಯ ಎದುರಾಗಿತ್ತು . ಅಪ್ಪ ದ್ರೋಣನ ಮೇಲಿನ ಕೋಪಕ್ಕಾಗಿ ತನ್ನನ್ನು ಅರ್ಜುನನಿಗೆ ಕೊಟ್ಟು ಮದುವೆ ಮಾಡುವುದಾಗಿ ಶಪಥ ತೊಟ್ಟಿದ್ದನಂತೆ. ಒಟ್ಟಿನಲ್ಲಿ ಇವರೆಲ್ಲರ ಆಸೆಗೆ, ಶಪಥಕ್ಕೆ ನಾನು ಬಲಿಯಾಗಿದ್ದೆ
ಆವತ್ತು ವೈಭೋವಪೇತ ಅರಮನೆಯಲ್ಲಿ ನನಗೇನು ಕೊರತೆ ಎಂದು ಸ್ವಲ್ಪ ಅಹಂ ಬಂದಿದ್ದೇನೋ ನಿಜ, ಆಗಲೇ ಆ ದುರ್ಯೋದನ ಕಾಲು ಜಾರಿ ಬಿದ್ದದ್ದು ನಾನು ನಕ್ಕಿದ್ದು ,ಅದೇ ನನ್ನ ಕೊನೆಯ ನಗುವಾಗುತ್ತೆಂದು ತಿಳಿದಿತ್ತೇ
ಮತ್ತೆ ಹಸ್ತಿನಾಪುರಕ್ಕೆ ಹೋಗಬಾರದಿತ್ತು ಆದರೂ ಹೋಗಿದ್ದ ಈ ಧರ್ಮ ರಾಜ ಅವರುಗಳ ಹಿಂದೆ ನಡೆದಿದ್ದೆ ನಾನೂ , ಅಂದಿನಿಂದ ಅವರನ್ನ ಹಿಂಬಾಲಿಸುವುದೇ ತನ್ನ ಬಾಳ ಹಣೆಬರಹವಾಗಿತ್ತು
ಅಬ್ಬಾ ಏನೆಲ್ಲಾ ಆಗಿ ಹೋಯಿತು , ತುಂಬಿದ ಸಮಯದಲ್ಲಿ ನನ್ನ ವಸ್ತ್ರಾಪಹರಣವಾಗುತಲ್ಲಿತ್ತು ಈ ಗಂಡಂದಿರೆನಿಸಿಕೊಂಡ ಈ ಐವರೂ ವೀರರೂ ತಲೆ ತಗ್ಗಿಸಿ ಕೂತಿದ್ದರು, ಧರ್ಮನ ಧರ್ಮ ಅಧರ್ಮವ ವೀಕ್ಷಿಸುತ್ತಿತ್ತು ಕೇಕೆ ಹಾಕಿ ನಗುತ್ತಿತ್ತು
ಅಲ್ಲಿದ್ದ ಸಭಿಕರೆಲ್ಲಾ ನನ್ನ ಶರೀರದ ಭಾಗ ಎಲ್ಲಿ ಕಾಣುತ್ತದೆಯೋ ಎಂದು ಕುತೂಹಲಿಗಳಾಗಿ ನೋಡುತ್ತಿದ್ದರು ,
ಹೆಣ್ಣು ಎಷ್ಟರ ಮಟ್ಟಿಗೆ ಅಸಹಾಯಕಳಾಗಬಹುದೋ ಅದಕ್ಕಿಂತ ಅಸಹಾಯಕ ಸ್ಥಿತಿಯನ್ನು ತಲುಪಿದ್ದೆ, ಹಾಳು ದುಶ್ಯಾಸನ ದಾಸಿ ಎಂದು ಜರಿದು ಮೈಮೇಲಿನ್ ಬಟ್ಟೆಯನ್ನು ಎಳೆಯುತ್ತಿದ್ದಾಗ ಈ ಅಣ್ಣನ ಹೆಸರೊಂದೇ ಕಾಪಾಡಿದ್ದು
ಆ ಕೌರವರ ಮೇಲಿನ ಕೋಪಕ್ಕಿಂತ ನನ್ನನ್ನು ಅಸಹಾಯಕ ಸ್ಥಿತಿಯನ್ನು ತಲುಪಿಸಿದ ಆ ಧರ್ಮ ತನಗೆ ಕೊನೆಯವರೆಗೂ ಶತೃವಿನಂತೆಯೇ ಕಂಡಿದ್ದ
ಎಲ್ಲಾ ರೀತಿಯ ಕಷ್ಟ, ಇವರುಗಳ ಮೇಲಿನ ದ್ವೇಷಕ್ಕೆ ಕಾಣುತ್ತಿದ್ದುದು ನಾನೇ . ನನ್ನ ಸೌಂದರ್ಯವೇ ಆ ಮನೆಹಾಳು ಕಾಮುಕರ ಕಣ್ಣಿಗೆ ಕಂಡು ಮಾನ ಬಯಲಾಗುವ ಸಮಯವು ಎಷ್ಟೋ ಬಂದಿತ್ತು. ಆಗೆಲ್ಲಾ ವಿಧಿಯೇ ತನ್ನ ಕಾಪಾಡುತ್ತಿತ್ತೇನೋ
ವನವಾಸದಲ್ಲಿ ಆ ಜಯದೃಥ ಅಜ್ನಾತವಾಸದಲ್ಲಿ ಆ ಕೀಚಕ, ಅಬ್ಬಾ ಎಂತೆಂಥಾ ಕಾಮುಕರು, ಆಗೆಲ್ಲ ಅಲ್ಲಿಯವರೆಗೆ ಪೆದ್ದನಾಗಿ ಕಾಣುತ್ತಿದ್ದ ಭೀಮ ಕಾಪಾಡಿದ್ದ, ಅರ್ಜುನನಾಗಲೇ ಐದಾರು ಜನ ಹೆಂಡತಿಯರ ಸುಖ ಪಡೆದು ಈ ಹೃದಯದಿಂದ ಹೊರ ನಡೆದಿದ್ದ.
ಅಂತೂ ನನ್ನ ಮಾನಕ್ಕೆ ಕೈ ಹಾಕಿದ ದುಷ್ಟರ ಸಂಹಾರವಾಗಿದೆ,
.................
ಮನಸು ಆತ್ಮ ಸಂತೃಪ್ತಿಯಿಂದ ಬೀಗಿದೆ, ಇಷ್ಟಕ್ಕೆಲ್ಲಾ ಕಾರಣರಾದ ಪತಿಯಂದಿರನ್ನು ಅದರಲ್ಲೂ ಭೀಮ ಅರ್ಜುನರನ್ನು ಕಂಡು ಮನಸು ಹೆಮ್ಮೆ ಪಡುತಿದೆ, ಇಬ್ಬರು ಅಣ್ಣಂದಿರು ಹೋದರೇನು ಸಹಸ್ರ ಜನ್ಮದಲ್ಲೂ ಯಾರಿಗೂ ಸಿಗದಂತಹ ಅಣ್ಣ ಕೃಷ್ಣನನ್ನ್ಜು ನೋಡಿ ವಂದಿಸಬೇಕನಿಸುತ್ತದೆ ಅಡಿಗಡಿಗೂ
ಆದರೂ...................... ಎಲ್ಲೋ ಒಂದು ಕಡೆ ನೋವು, ಹೇಳಲಾರದ ನಡುಕ, ಬವಣೆ
ನನ್ನಂತೇ ಸುತರನ್ನು ಕಳೆದುಕೊಂಡ ಇಷ್ಟೊಂದು ತಾಯಿಯರು, ನನಗಿನ್ನೇನು ಶಾಪ ಹಾಕುತ್ತಿದ್ದಾರೋ
ಸೌಭಾಗ್ಯ ಕಳೆದುಕೊಂಡ ಅದೆಷ್ಟೋ ಪುಟ್ಟ ವಿಧವೆಯರು, ಮನೆ ಮಾರು ಕಳೆದುಕೊಂಡ ಜನ ಸಾಮಾನ್ಯರು, ಇವರಿಗೆಲ್ಲಾ ಈ ಯುದ್ದ ಬೇಕಿತ್ತೇ
ನಾನು ನಮ್ಮೈವರ ಸೇಡಿಗಾಗಿ ಇವರೆಲ್ಲರನ್ನೂ ಕೊಂದು ಅವರ ಕನಸುಗಳ ಸಮಾಧಿಯ ಮೇಲೆ ಮಹಾರಾಣಿಯಾಗಿ ಕೇಕೆ ಹಾಕಿ ಸಂತಸದಿಂದಿದ್ದರೆ, ಅಂದು ದುರ್ಯೋದನನ ಜೂಜಿನಲ್ಲಿ ಸೋಲಿಸಿ ನಕ್ಕನಗೆಗೆ ಸಮನಾಗುವುದಿಲ್ಲವೇ?
ಮುಂದೆ ಇತಿಹಾಸದಲ್ಲಿ ಈ ಘೋರಕ್ಕೆ ಕಾರಣ ಎಂದು ನನ್ನನ್ನೇ ದೂರುತ್ತಾರಲ್ಲವೇ?......
(ಮಹಾ ಭಾರತದಲ್ಲಿ ಅಗ್ನಿ ಸುತೆ ಎಂದೇ ಹೆಸರಾಗಿರುವ ಪಾಂಚಾಲಿಯ ಮನದ ದುಗುಡ ಹೇಗಿದ್ದಿರಬಹುದೆಂದು ಚಿಂತಿಸಲು ಯತ್ನಿಸಿದ್ದೇನೆ . ಭೈರಪ್ಪನವರ ಪರ್ವವನ್ನು ಸುಮಾರು ಸಲ ಓದಿದ್ದುದರಿಂದ ಕೆಲವು ಸಾಲುಗಳು ಅದರಿಂದ ಪ್ರಭಾವಿತಗೊಂಡಿದೆ ಎಂಬುದನ್ನು ಒಪ್ಪುತ್ತೇನೆ. :) )
Monday, October 3, 2011
ದಡವಿರದ ಸಾಗರ ಮೂರನೆಯ ಭಾಗ
"ಈಗ ಹೇಳು ಕಿರಣ್ ನಿಮ್ ಮೇಡಮ್ ಸೈಕೋನಾ ಅಲ್ವಾ?"ಆಗಿಂದ ಕಾಫಿ ಡೇನಲ್ಲಿ ಕುಳಿತು ಕಿರಣನ ತಲೆಯನ್ನ ಬಿಸಿ ಮಾಡಿದ್ದಳು ಸುಪ್ರೀತಾ
"ಸುಪ್ಪಿ ಹಾಗೆಲ್ಲಾ ಮಾತಾಡಬೇಡ , ಪಾಪ ಜೀವನದಲ್ಲಿ ತುಂಬಾ ನೊಂದಿದಾರೆ, ಅಪ್ಪ ಅಮ್ಮ ಇಲ್ಲ ಇಷ್ಟು ದೊಡ್ಡ ಆಸ್ತೀ, ಮೂರು ಕಂಪೆನಿಗೆ ಏಕೈಕ ವಾರಸುದಾರರು, ಹೇಗೆ ನಡೆಸ್ತಿದಾರೆ ಅಂತ ಗೊತ್ತಾ ಎಷ್ಟು ಕಷ್ಟ , ಮತ್ತೆ ಅವರು ಎಲ್ಲಾರ ಜೊತೆನೂ ಕ್ಲೋಸ್ ಆಗಿರ್ತಾರೆ ಅಷ್ಟೆ. ಮತ್ತೆ ಭಾವುಕರು, ಯಾರನ್ನಾದರೂ ಹಚ್ಚಿಕೊಂಡರೆ ತುಂಬಾ ಪ್ರೀತಿ ಮಾಡ್ತಾರೆ"
ಮಾತು ನಿಲ್ಲಿಸಿ ಅವಳನ್ನೇ ನೋಡಿದ
ಆದರೆ ಅವಳು ಮೌನವಾಗಿದ್ದಳು,
"ಓಯೆ ಏನೇ ಅದು?"
ಅವಳ ಮೊಗದ ಮುಂದೆ ಕೈ ಆಡಿಸಿದ
ಬೆಚ್ಚಿ ಬಿದ್ದಳು
"ಕೇಳಿಸ್ಕೊಂಡ್ಯಾ ನಾ ಹೇಳಿದ್ದೆಲ್ಲಾ ಇಲ್ಲಾ ಸ್ವಪ್ನ ಲೋಕದಲ್ಲಿ ವಿಹರಿಸ್ತಾ ಇದೀಯಾ?"
ಇಲ್ಲವೆಂಬಂತೆ ತಲೆ ಆಡಿಸಿ
ಕಿರಣನ ಮೊಗವನ್ನೊಮ್ಮೆ ನೋಡಿ ಮತ್ತೆ ಕಾಫಿ ಹೀರುತ್ತ ನುಡಿದಳು
"ಅದೆಲ್ಲಾ ಸರಿ ಕಿರಣ್ ಆದ್ರೆ ಆ ಔಟ್ ಹೌಸಲ್ಲಿ ಒಬ್ಬಳೇ ಇರೋಕೆ ಭಯ ಆಗುತ್ತೆ ಮೊದಲೇ ನಿಮ್ ಮೇಡಮ್ ಸೈಕೋ ಬೇರೆ............."
"ಹಾಕ್ತೀನಿ ನೋಡು" ಕೈ ಎತ್ತಿ ತಲೆ ಮೇಲೆ ಮೊಟಕಿದ
"ಮತ್ತೆ ಆಫರ್ ಒಪ್ಕೋತಿಯ ಹೇಗೆ?"
" ಮೈಸೂರಿಂದ ಬೆಂಗಳೂರಿಗೆ ಬಂದು ಮೂರು ತಿಂಗಳಾಯ್ತು ಈಗಲೂ ಮೂರ್ತಿ ಹತ್ರಾನೆ ದುಡ್ಡು ತಗೋತಿದ್ದೀನಿ, ಅವನೂ ತಂಗಿ ಅಂತ ಏನೂ ಅನ್ಕೋದಲೆ ಕೊಡ್ತಾನೆ, ಮತ್ತೆ ಮತ್ತೆ ಅವನ ಹತ್ತಿರ ಕೇಳಿದ್ರೆ ಸರಿ ಹೋಗಲ್ಲ ಅಲ್ವಾ? ನನ್ನ್ ಕಾಲ್ ಮೇಲೆ ನಾನು ನಿಂತ್ಕೋತಿನಿ ಅಂತ ಹೇಳಿ ಬಂದೆ, ಹಾಗಾಗಿ ಈ ಆಫರ್ ಬಿಡಲ್ಲ . ಆದರೆ ಒಬ್ಬಳೆ ಇದ್ದು ಅಭ್ಯಾಸ ಇಲ್ಲ, ಒಂದು ಕೆಲಸ ಮಾಡ್ತೀನಿ ಮೂರ್ತಿಗೆ ಜೊತೆಲಿ ಬಂದಿರು ಅಂತ ಹೇಳ್ತೀನಿ, ಅವನೂ ರೂಮ್ ಚೇಂಜ್ ಮಾಡಬೇಕು ಅಂತಿದ್ದ\"
" ಸರಿ ನಾನು ಮೇಡಮ್ ಹತ್ರ ಮಾತಾಡಿ ಮೂರ್ತೀನೂ ಬಂದಿರೋಕೆ ಒಪ್ಪಿಸ್ತೀನಿ,ಒಪ್ಪಿಕೋ ಮಾರಾಯ್ತಿ ನಾಳೆ ಬಂದು ಆಫರ್ ಲೆಟರ್ ಸೈನ್ ಮಾಡು"
"ಮತ್ತೆ ಅಪ್ಪಿ ತಪ್ಪಿನೂ ನೀನು ನಂಗೆ ಗೊತ್ತು ಅಂತ ಮೇಡಮ್ ಹತ್ತಿರ ಹೇಳ್ಬೇಡ .ಆಮೇಲೆ ನಿನ್ ಜೊತೆ ನನ್ ಕೆಲಸಾನೂ ಹೋಗುತ್ತೆ"
"ಯಾಕೆ ಹಾಗೆ ? ನಿಮ್ ಮೇಡಮ್‍ಗೆ ಏನು ತೊಂದರೆ? ರೆಫರೆನ್ಸ್ ಇದ್ರೆ?"
ಹುಬ್ಬೇರಿಸಿ ಕೇಳಿದಳು
"ಗೊತ್ತಿಲ್ಲ ಕಣೆ ಹುಡುಗೀರೆ ವಿಚಿತ್ರ, ಅವರ್ಯಾಕೆ ಹಾಗಾಡ್ತಾರೆ ಅನ್ನೋದೆ ಗೊತ್ತಾಗಲ್ಲ, ಅದರಲ್ಲೂ ಈ ಬೆಂಗಳೂರು ಹುಡುಗೀರು ವಿಚಿತ್ರದಲ್ಲಿ ವಿಚಿತ್ರ , ಅಬ್ಬಾ ಜೊತೆಗೆ ಭಯಂಕರ ಕೂಡ " ಏನನ್ನೋ ನೆನೆಸಿಕೊಂಡವನಂತೆ ಭುಜ ಕುಣಿಸಿದ.
"ಏನೋ ಯಾವುದೋ ಹುಡುಗಿ ಸಕ್ಕ್ತ ತ್ ಕೈ ಕೊಟ್ತಿರೋಹಾಗಿದೆ ಏನೋ ವಿಷ್ಯ?"ಛೇಡಿಕೆಯಲ್ಲಿ ಕೇಳಿದಳು
" ಅಬ್ಬಾ ಅದೊಂದು ದೊಡ್ಡ ಅವಮಾನ .ಯಾವತ್ತ್ತಾದರೂ ಟೈಮ್ ಸಿಕ್ಕಾಗ ಹೇಳ್ತೀನಿ ಏಳು ಹೊತ್ತಾಯ್ತು ಹೋಗೋಣ"
ಹೇಳಿ ಮುನ್ನಡೆದವನನ್ನೇ ಹಿಂಬಾಲಿಸಿದಳು
**********************************************************************
"ವೀಣ ನೋಡಮ್ಮ ನಿನ್ ಮಗಳು ಇನ್ನೂ ಬಂದಿಲ್ಲ ಇಷ್ಟು ಹೊತ್ತಾಯ್ತು ದಿನಾ ಹನ್ನೆರೆಡು ಘಂಟೆ ಆಗುತ್ತೆ ಮನೆಗೆ ಬರೋಕೆ ಅವಳು. ನೀನಾಗಲಿ ಶ್ರೀ ಆಗಲಿ ತಲೆ ಕೆಡಿಸಿಕೊಳ್ತಿಲ್ಲ "ಸದಾ ಶಿವರವರು ಫೋನ್ ಮಾಡಿದರು ರೂಮಿನಲ್ಲಿದ್ದ ಸೊಸೆಗೆ
"ಸರಿ ಇರಿ ಮಾವ ನಾನೆ ಬರ್ತೀನಿ " ಮೊಬೈಲ್ ಆಫ್ ಮಾಡಿ ಮಾವನಿದ್ದ ರೂಮಿನತ್ತ ನಡೆದಳು
"ಬಾ ವೀಣ , ನೋಡು ತೇಜು ಇನ್ನೂ ಬಂದಿಲ್ಲ ಹನ್ನೆರೆಡು ಘಂಟೆ ಆಗ್ತಾ ಇದೆ, ಫೋನ್ ಮಾಡಿದ್ದ್ರೆಪಾರ್ಟಿಲಿ ಇದೀನಿ ಅಂತಾಳೆ ,ತೇಜು ಇಷ್ತು ಹೊತ್ತಾಯ್ತು ಅಂದ್ರೆ ಅಭೀ ಬಂದಿದಾನಾ ಅಂತ ಕೇಳ್ತಾಳೆ ಇಲ್ಲ ಅಂದ್ರೆ ಅವನಿಗೆ ಇಲ್ಲದ ಕಂಟ್ರೋಲ್ ನಂಗೆ ಯಾಕೆ ಅಂತಾಳೆ, ಶ್ರೀಗೆ ಕಾಲ್ ಮಾಡಿದ್ರೆ ಅಪ್ಪಾ ಅವಳೇನು ಚಿಕ್ಕ ಮಗೂ ಅಲ್ಲ ಎಮ್ ಬಿ ಎ ಮಾಡಿರೋ ಮೆಚೂರ್ಡ್ ಹುಡುಗಿ ನೀನು ತಲೆ ಕೆಡಿಸ್ಕೊಳ್ದೆ ಟಿವಿ ನೋಡಿ ಅಂತಾನೆ, ನೀನು ನೋಡಿದ್ರೆ ಕೇರೇ ಮಾಡಲ್ಲ ಕಂಪೆನಿ ಕೆಲಸಾ ಅಂತಾ ಅದರಲ್ಲೆ ಇರ್ತೀಯ . ಹೀಗಾದ್ರೆ ಹೇಗಮ್ಮ"
ಒಂದೇ ಉಸಿರಿಗೆ ಮಾತಾಡಿದ್ದಕ್ಕೋ ಏನೋ ದಣಿವಾರಿಸಿಕೊಳ್ಳಲೆಂಬಂತೆ ಮಂಚಕ್ಕೆ ಒರಗಿದರು
"ಮಾವ ಸುಮ್ಮನೆ ನೀವು ಯಾಕೆ ಮನಸಿಗೆ ಹಚ್ಚಿಕೋತೀರಿ? ಅಪ್ಪ ಅಮ್ಮ ಆಗಿ ನಾವೇ ಯೋಚನೆ ಮಾಡ್ತಾ ಇಲ್ಲ, ತೇಜು ಈಗಿನ ಕಾಲದ ಹುಡುಗಿ ಮಾವ ಅವಳಿಗೆ ಯಾವುದು ಸರಿ ಯಾವುದು ತಪ್ಪು ಅನ್ನೋ ಯೋಚನೆ ಇದೆ , ಲಾಸ್ ಆಲ್ಲಿ ಹೋಗ್ತಿದ್ದ ನಮ್ಮ ವಾಚ್ ಕಂಪೆನೀನಾ ೨ ಇಯರ್ಸ್ನಲ್ಲಿ ಪ್ರಾಫಿಟ್ ಬರೋ ಹಾಗೆ ಮಾಡಿದಾಳೆ, ನಮ್ಮ ಮಕ್ಕಳಿಬ್ಬರೂ ವ್ಯವಹಾರದಲ್ಲಿ ಬಲು ಚುರುಕು , ಆದರೆ ಸ್ವಲ್ಪ ಹುಡುಗು ಬುದ್ದಿ ಇನ್ನೂ ೨೪ ವರ್ಷ ಅಲ್ವಾ ಸರಿ ಹೋಗ್ತಾಳೆ..."
ಸಮಾಧಾನವಾಗದಂತೆ ತಲೆ ಆಡಿಸಿದರು
"ಇಲ್ಲ ವೀಣಾ ನಾನು ಒಪ್ಪಲ್ಲ , ಹೆಣ್ಣು ಯಾವತ್ತಿದ್ದರೂ ಹೆಣ್ನೇ , ಒಮ್ಮೆ ಕೆಳಗೆ ಬಿದ್ದರೆ...................."
"ಮಾವಾ ಸ್ಟಾಪ್ ಮಾಡಿ................ಕೆಳಗೆ ಬೀಳೋದು ಮೇಲೆ ಏಳೋದು ಎಲ್ಲಾ ನಿಮ್ಮ ಕಾಲಕ್ಕೆ ಮುಗಿದು ಹೋಯ್ತು...ನಿಮಗೆ ಗೊತ್ತಿದೆಯಾ ಇಲ್ವೋ ಅತ್ತೆ ನನ್ನ ಹತ್ರಒಂದು ವಿಷಯ ಹೇಳೋರು ಅವರು ಹನ್ನೆರೆಡು ವರ್ಷ ಇದ್ರಂತೆ ಆಗ ಅವರನ್ನ ಯಾರೋ ಒಬ್ಬ ಬಂದು ಎಲ್ಲಿಗೋ ದಾರಿ ಕೇಳಿದನಂತೆ ಅವನಿಗೆ ಉತ್ತರಿಸಿದ್ದನ್ನೆ ದೊಡ್ಡದಾಗಿ ತಗೊಂಡು ಅತ್ತೆ ಅಪ್ಪ ಬಾರು ಕೋಲಿನಿಂದ ಬೆನ್ನು ಮೇಲೆ ಬಾರಿಸಿ ,ಬಾಸುಂಡೆ ಬರೋ ಹಾಗೆ ಹೊಡೆದಿದ್ದರಂತೆ"
"ಹೂ ಹೇಳಿದ್ಳು ನನ್ನ ಹತ್ರಾನೂ"
, ಫೋಟೋದಲ್ಲಿ ಹಾರ ಧರಿಸಿ ನಗುತ್ತಿದ್ದ ಹೆಂಡತಿಯನ್ನೆ ನೋಡುತಾ ನುಡಿದರು,ಭಾವುಕರಾಗಿದ್ದರು
ಅವರ ಮಾತಿನತ್ತ ಗಮನ ಕೊಡದೆ ಮುಂದುವರೆಸಿದಳು ವೀಣಾ
"ಮೊದಲು ಗಂಡಸರ ಜೊತೆ ಮಾತಾಡಿದರೆ ತಪ್ಪು , ಆಮೇಲೆ ಗಂಡಸರ ಜೊತೆ ಓಡಾಡಿದರೆ ತಪ್ಪು, ನಂತರ ಗಂಡಸರ ಜೊತೆ ಮಾತಾಡಲ್ಲಿ ಓಡಾಡಲಿ ಆದರೆ ಕಾಲು ಜಾರದಿದ್ದರೆ ಸಾಕು ಅನ್ನೋ ಮಟ್ಟಕ್ಕೆ ಬಂದಿತ್ತು ನಮ್ಮ ಕಾಲದಲ್ಲಿ , , ಈಗಾ ಏನಾದರಾಗಲಿ ಒಳ್ಳೆಯ ಹುಡುಗಿ ಇದ್ದರೆ ಸಾಕು ಅನ್ನೋ ಲೆವೆಲ್ಗೆ ಬಂದಿದೆ ಸಮಾಜದ ಯೋಚನೆಯ ಹರಿವು,ಇಂತ ಕಾಲದಲ್ಲಿ ಇರೋ ತೇಜುನ ಕಂಟ್ರೋಲ್ ಮಾಡೋದು ಸರಿ ಅಲ್ಲ ಅನ್ಸುತ್ತೆ ಮಾವ."
ಮಾತಾಡುತ್ತಾ ಮಾವನ ಗಮನ ಎಲ್ಲಿದೆ ಎಂಬುದನ್ನ ಗಮನಿಸಿರಲಿಲ್ಲ
" ಸಾರಿ ಮಾವ ಸ್ವಲ್ಪ ಜಾಸ್ತಿ ಮಾತಾಡಿಬಿಟ್ಟೆ....... ಬರ್ತೀನಿ " ತನ್ನ ರೂಮಿನತ್ತ ಸಾಗಿದಳು
ಹೇಳಿ ಹೋದವಳತ್ತ ಆಗಲಿ ಅವಳಾಡಿದ ಮಾತುಗಳತ್ತ ಆಗಲಿ ಅವರ ಗಮನವಿರಲಿಲ್ಲ . ಅಪ್ಪನ ಮನೆಯಲ್ಲಿಯೂ ನೋವು ತಮ್ಮಜೊತೆಯಲ್ಲಿಯೂ ಕಷ್ಟಗಳನ್ನೇ ಅನುಭವಿಸುತ್ತಲೇ ಹೋದ ಮಡದಿಯತ್ತ ಅವರ ಯೋಚನೆ ಸಾಗಿತ್ತು
*******************************************************************************
ರಾತ್ರಿ ಹತ್ತು ಘಂಟೆ ಎಂದಿನಂತೆ ರೇಖಾಗೆ ಮೆಸೇಜ್ ಮಾಡಿದ ರವಿ
"ಊಟ?"
"ಆಯ್ತು ರವಿ, ನಿಂದು?" ಅತ್ತಲಿಂದ ಉತ್ತರಿಸಿದಳು
"ಮತ್ತೆ ಹೇಗಿತ್ತು ದಿನ?"
"ಅದೇ ದಿನ ಅದೇ ಮನ, ಅದೇ ಜನ , ಬದಲಾಗಿದ್ದು ಮಾತ್ರ ನಿರೀಕ್ಷೆ" ರೇಖಾ ಉತ್ತರಿಸಿದಳು
"ಇವತ್ತಿನ ನಿರೀಕ್ಷೆ?" ರವಿಗಿದು ಹೊಸದೇನಲ್ಲ ರೇಖಾ ದಿನಕ್ಕೊಂದು ಕವನದ ಸಾಲನ್ನು ಉದುರಿಸುತ್ತಿದ್ದಳು
"ಇವತ್ತು ಅವರು ಬಂದು ಹಣೆಗೆ ಸಿಹಿ ಮುತ್ತು ಕೊಟ್ತು ರೇಖಾ ನೆನ್ನೆಯವರೆಗಿನದೆಲ್ಲಾ ಕೆಟ್ಟಕನಸುಗಳು, ನಾವಿಂದಿನಿಂದ ಮದುವೆಯಾದವರು ಎಂದೆಂದು ಕೊಳ್ಳೋಣ ಅಂತಾರೆ ಅಂತ"
ಅವಳ ಮನದ ದುಗುಡ ಅವನಿಗೆ ಅರ್ಥವಾಯಿತು
"ಮತ್ತೆ ನಿರೀಕ್ಷೆಯ ಪರೀಕ್ಷೆಯ ಫಲಿತಾಂಶ?"
"ಅದೇ ಮತ್ತೆ ಅನುತ್ತೀರ್ಣ "ಅವಳ ಮೆಸೇಜನಲ್ಲಿದ್ದ ಹತಾಶೆ ಅವನಿಗಷ್ಟೆ ತಿಳಿಯುವಂತದ್ದಾಗಿತ್ತು
"ಆಯ್ತ್ತು ರವಿ ಈಗ ಗುಡ್ ನೈಟ್"
"ಗುಡ್ನೈಟ್" ಮೆಸೇಜ್ ಮಾಡಿದ
ಅವಳು ಹೀಗೆಯೇ , ವಿಚಿತ್ರದ ಹೆಣ್ಣು, ಇದ್ದಕ್ಕಿದ್ದಂತೆ ತೆರೆದುಕೊಳ್ಳುತ್ತಾಳೆ, ಇದ್ದಕ್ಕಿಂದಂತೆ ಚಿಪ್ಪಿನಲ್ಲಿ ಹುದುಗುತ್ತಾಳೆ
ಅವಳ ಪರಿಚಯವಾಗಿದ್ದು ಆಕಸ್ಮಿಕವೇ
ವಾರದ ಹಿಂದೆ
ಟಿವಿಯ ಪ್ರೋಗ್ರಾಮ್ ಒಂದಕ್ಕೆ ಆಕೆ ಜಡ್ಜ್ ಆಗಿ ಕಾಣಿಸಿಕೊಂಡಿದ್ದಳು. ಅದೇ ಪ್ರೋಗ್ರಾಮ್ ನಲ್ಲಿ ವೀಕ್ಷಕನಾಗಿ ರವಿ ಹೋಗಿದ್ದ
ಮಾತು ಪರಿಚಯಕ್ಕೆ ತಿರುಗಿ, ಪರಿಚಯ ಸ್ನೇಹವಾಗಿತ್ತು
ಮೆಸೇಜ್ ವಿನಿಮಯದಿಂದ ಆತ್ಮೀಯತೆ ಇನ್ನೂ ಹೆಚ್ಚಾಗಿತ್ತು
ಆಕೆ ರೇಖಾ ಶರ್ಮ, ಕಾದಂಬರಿಗಾರ್ತಿ
ನೋಡಿದೊಡನೆ ಮನ ಸೆಳೆಯುವ ಅಂದ, ಗಾಂಭೀರ್ಯ, ಜ್ನಾನತೇಜಸಿನಿಂದ ಹೊಳೆಯುವ ಮೊಗ ಹಾಗು ಅದಕ್ಕೆ ಕಳಸವಿಟ್ಟಂತೆ ಆ ಕಣ್ಣುಗಳು
ರವಿಗೆ ಏಕೋ ಮೊದಲ ನೋಟದಲ್ಲಿ ಆತ್ಮೀಯಳೆನಿಸಿದ್ದಳು
ಆದರೆ ಅಂತರಾಳದಲ್ಲಿ ಸಿಡಿಯುವ ಜ್ವಾಲಾಮುಖಿ ಹೊತ್ತವಳೆಂದು ತಿಳಿಯಲು ಹೆಚ್ಚು ದಿನಗಳು ಬೇಕಾಗಲಿಲ್ಲ
ರೇಖಾ ಪತಿ ಶ್ರೀಧರ್ ಶರ್ಮ ಇಂಡಸ್ಟ್ರಿಯಲಿಸ್ಟ್, ಹಣಕೆ ತೊಂದರೆ ಇಲ್ಲದ ಜೀವನ
ಅವರದು ಲವ್ ಮ್ಯಾರೇಜ್
ಆದರೆ ಮದುವೆಯಾದ ವರ್ಷದಲ್ಲಿಯೇ ಒಡಕು ಎಷ್ಟೊ ತೊಡಕು ಗಳು, ಆದರೂ ತಾವಿರುವ ಸಮಾಜದ ಕಣ್ಣಿಗೆ ತಮ್ಮ ಸ್ಟೇಟಸ್
ಕೆಳಗಿಳಿಯಬಾರದೆಂದ ಸಾಮಾಜಿಕ ಪ್ರಜ್ನೆ ಇಂದ ಒಟ್ಟಿಗಿದ್ದರು
ರೇಖಾ ಮೂಲತ: ಭಾವುಕಳು ,ಬಹು ಮುಖ ಪ್ರತಿಭೆಯುಳ್ಳವಳು, ಸೌಂದರ್ಯ ವತಿ, ಸ್ನೇಹಮುಖಿ
ಆದರೆ ಶರ್ಮ ಅವಳ ತದ್ವಿರುದ್ದ ಸ್ವಭಾವದವ
ಇವಳ ಹವ್ಯಾಸ ಅವನಿಗೆ ಮೂರು ಕಾಸಿಗೂ ಬೆಲೆ ಇಲ್ಲದ ತೆವಲುಗಳು
ಅವನ ಹಣ ಆಸ್ತಿ ಇವಳಿಗೆ ಮೂರು ಕಾಸಿಗೂ ಸಮ ವಿರದ ಸವಕಲು ಗಳು
ಹೀಗೆ ಪರಸ್ಪರ ಭಿನ್ನಾಭಿಪ್ರಾಯಗಳೇ ಸಂಸಾರದಲ್ಲಿ ಇವರಿಬ್ಬರ ಜೊತೆ ವಾಸವಾಗಿದ್ದವು , ಜೊತೆಗೆ ಪುಟ್ಟ ಶ್ರೀ
ಅವರಿಬ್ಬರೂ ಒಮ್ಮೆ ಪ್ರೀತಿಸಿದ್ದರು ಎನ್ನುವುದಕ್ಕೆ ಸಾಕ್ಷಿಯಾಗಿದ್ದಳು .
ತನ್ನ ಮನದ ದುಗುಡಗಳನ್ನು ತೋಡಿಕೊಳ್ಳಲು ಕತೆ ಕವನಗಳ ಮೊರೆ ಹೋಗುತ್ತಿದ್ದ ರೇಖಾಗೆ ರವಿ ಆಪ್ತನೆನಿಸಲು ಕಾರಣ ಅವನು ತೋರುತ್ತಿದ್ದ ಕಾಳಜಿ.
ಹಾಗಾಗಿ ಅತಿಯಲ್ಲದ ಹತ್ತಿರ, ದೂರವಿದ್ದರೂ ದೂರವೆನಿಸದಷ್ಟು ಅಂತರ ಕಾಯ್ದುಕೊಂಡು ಬರುತ್ತಿದ್ದಳು.
ಅವಳನ್ನು ನೆನೆಯುತ್ತಲೇ ರವಿಗೆ ಒಂದು ಬಗೆಯ ಪುಳಕ, ಅವಳನ್ನು ನೆನೆಯುತ್ತಲೇ ಮಲಗಿದ.ಕಂಗಳ ತುಂಬ ಅವಳದೇ ಬಿಂಬ
********************************* **************** ***********************
Tuesday, September 6, 2011
ದಡವಿರದ ಸಾಗರ ಭಾಗ ೨
ಅಭಿಯ ಫೇಸ್ ಬುಕ್ ಗೆ ಮೆಸೇಜ್ ಬಂದಿತ್ತು
"ಹಾಯ್"
ಅವನಿಗೆ ಹಾಯ್ ಮೆಸೇಜ್‍ಗಳಿಗೆ ಕೊರತೆ ಇದ್ದಿಲ್ಲವಾದರೂ ಹಾಯ್ ಹೇಳಿದ್ದ ಹುಡುಗಿಯ ಫೋಟೋ ಕಣ್ಸೆಳೆಯಿತು , ಭುಜದ ಒಂದು ಕಡೆ ಕೂದಲನ್ನೆಲ್ಲಾ ಒಗ್ಗೂಡಿಸಿ ಹರಡಿಕೊಂಡಿದ್ದಳು, ಎಳೆ ಎಳೆಯಾಗಿ ಹರಡಿದ್ದ ಕೇಶರಾಶಿಗೆ ಒತ್ತಿದಂತಿದ್ದ ದಂತದ ಬಣ್ಣದ ಮುಖ, ಅದಕ್ಕೊಪ್ಪುವ ನಗೆ, ಅರಳು ಕಂಗಳು,
ಒಂದೇ ನೋಟಕ್ಕೆ ನಿರ್ಧರಿಸಿದ , ಇವಳು ಬೇಕು ನನಗೆ
ಅಂದ ಹಾಗೆ ಆ ಹುಡುಗಿಯ ಹೆಸರು ಚಂದನಾ.............................
ಮೆಸೇಜ್ ಗೆ ರಿಪ್ಲೈ ಮಾಡಿದ
"ಹಾಯ್ ಹೌ ಆರ್ ಯು?"
********************************************************************************
ಸುಪ್ರೀತಾ ಎರೆಡನೇ ಬಾರಿಗೆ ಆ ಆಫೀಸಿಗೆ ಕಾಲಿಡುತ್ತಿದ್ದಳು
ಅಂದು ನಿರಾಕರಿಸಲ್ಪಟ್ಟಿದ್ದ ಅವಮಾನದೊಂದಿಗೆ ಹೊರಗೆ ಹೊರಟಿದ್ದಳು
ಇಂದು ಮತ್ತೆ ಒಳಗೆ ಆಹ್ವಾನಿಸಲ್ಪಟ್ಟಿದ್ದಳು
"ಸುಪ್ರೀತಾ ಎಷ್ಟು ಒಳ್ಳೆಯ ಹೆಸರು ...."ಅಮಿತಾ ತನ್ನ ಮುಂದೆ ಕೂತಿದ್ದವಳನ್ನೇ ದಿಟ್ಟಿಸುತ್ತಾ ನುಡಿದಳು
"ನಿಮ್ ನೇಮೂ ಚೆನ್ನಾಗಿದೆ ಮೇಡಮ್" ಸುಪ್ರೀತಾ ತಡವರಿಸದೇ ನುಡಿದಳು
"ಥ್ಯಾಂಕ್ಸ್. ಆದರೆ ನಾನು ನಿನ್ನಷ್ಟು ಕ್ಯೂಟ್ ಇಲ್ಲ...." ಅಮಿತಾ ಅವಳ ಮುಖವನ್ನೇ ದಿಟ್ಟಿಸುತ್ತಿದ್ದರೇ
ಸುಪ್ರೀತಾಗೆ ಮುಜುಗರ
ಏನು ಹೇಳುವುದು...
"ಮೇಡ ಮ್ ಹಾಗೇನಿಲ್ಲ......................."ನುಡಿದು ಕುತ್ತಿಗೆ ಬಗ್ಗಿಸಿದಳು .
:"ಯು ನೋ ? ನಾನು ನಿನ್ನನ್ನ ಕರೆಸಿದ್ದೇ ನಿನ್ನ ಈ ರೂಪಕ್ಕೋಸ್ಕರ, ಮುಗ್ಧತೆಗೋಸ್ಕರ ......................." ಅಮಿತಾ ನುಡಿದು ಎದ್ದುನಿಂತು ಮೇಜಿಗೆ ಒರಗಿ ಕೂತಳು
ಸುಪ್ರೀತಾ ಕಾಲುಗಳಲ್ಲಿ ನಡುಕ ಶುರುವಾಯ್ತು . ಇದೇ ಮಾತನ್ನು ಯಾವುದಾದರೂ ಗಂಡಸು ನುಡಿದಿದ್ದರೆ ಸಂತೋಷ ಪಡುತ್ತಿದ್ದಳೇನೋ
ಆದರೆ ಇಲ್ಲಿ
".........ಹೆ ಹೆ ಹೆ " ಎಂದು ಬೆಪ್ಪು ನಗೆ ತೋರಿದಳು
"ಸುಪ್ರೀತಾ ನೀನು ನಂಗೆ ಎಲ್ಲಾ ಆಗಬೇಕು ನನ್ನ ಗೆಳತಿ ನನ್ನ ಅಮ್ಮ, ನನ್ನ ಅಕ್ಕ ಜೊತೆಗೆ ನನ್ನ ಪಿ ಎ. ..........................ಆಗ್ತೀಯಾ?"
ನಗಬೇಕೋ ಅಳಬೇಕೋ ತಿಳಿಯದಾಯ್ತು ಸುಪ್ರೀತಾಗೆ
"ಸುಪ್ರೀತಾ, ನಿಂಗೊತ್ತಾ ನಾನು ಚಿಕ್ಕೋಳಿದ್ದಾಗ ಅಮ್ಮ ಸತ್ತು ಹೋದಳು , ಆಗಿಂದ ಅಪ್ಪಾನೆ ನೋಡ್ಕೋತಿದ್ದರು . ಈಗ ಒನ್ ಇಯರ್ ಬ್ಯಾಕ್ ಅವರೂ ಹೊರಟುಹೋದರು . ಅಪ್ಪ ಹಾರ್ಟ್ ಪೇಷೆಂಟ್" ಅಮಿತಾ ನಿರ್ಭಾವುಕಳಾಗಿ ಹೇಳುತ್ತಿದ್ದರೆ ಸುಪ್ರೀತಾಗೆ ಕಣ್ಣು ತುಂಬಿ ಬಂತು
"ಈಗ ನಾನು ಒಬ್ಬಂಟಿ ಒಬ್ಬಂಟಿ. ,ಮನೆ ತುಂಬಾ ಆಳುಗಳಿದ್ದಾರೆ ಆದರೆ ಅವರೆಲ್ಲಾ ಆಳಿನ ಗೆರೆಯಿಂದ ಮೇಲಕ್ಕೇರಲಾರರು. ಈಗ ನಂಗೆ ಒಬ್ಬ ಗೆಳತಿ ಬೇಕಿದೆ ನನ್ನ ನೋವನ್ನೆಲ್ಲಾ ತೋಡಿಕೊಳ್ಳೋಕೆ . ಅದೂ ಒಬ್ಬ ಮುಗ್ಧ ಗೆಳತಿ ಥೇಟ್ ನಿನ್ನ ಹಾಗೆ, "
ಸುಪ್ರೀತಾ ತಲೆ ಆಡಿಸಿದಳಷ್ಟೇ.....................
****************************************
ಆ ಚೆಲುವೆ ಕಾರಿನಿಂದ ಇಳಿಯುತ್ತಿದ್ದಂತೆ ಸುತ್ತಾ ಮುತ್ತಲ್ಲಿದ್ದ ಗಂಡಸರ ನೋಟವೆಲ್ಲಾ ಅವಳ ಮೇಲೆ,ಆ ಮೊಗದ ಮೇಲಿದ್ದ ಗತ್ತಿಗೆ ಸುತ್ತಲಿದ್ದವರೆಲ್ಲಾ ಬೆರಗಾಗಿ ನೋಡುತ್ತಿದ್ದರು
ಅವಳು ತೇಜಸ್ವಿನಿ.
ಪಿ ವಿ ಆರ್ ಗೆ ಎಂಟ್ರಿ ಕೊಟ್ಟದ್ದಳು , ಇಡೀ ಕ್ಲಾಸಿಕ್ ಸಿನಿಮಾದ ಶೋನಲ್ಲಿ ಕೇವಲ ಅವಳು ಮತ್ತವಳ ಗೆಳತಿಯರು.
ಪೂರ್ತಿ ಶೋ ಅನ್ನು ಬುಕ್ ಮಾಡಿದ್ದಳು,
ಅವಳು ಖರ್ಚಿಗೆ ಐಶಾರಾಮಿ ಜೀವನಕ್ಕೆ ಮತ್ತೊಂದು ಹೆಸರು
ಅವಳು ಕಾರಿನಿಂದ ಇಳಿದಾಗಿನಿಂದ ಪಿ ವಿ ಆರ್ ಒಳಗೆ ಹೋಗುವವರೆಗೂ ಕಣ್ಣೆರೆಡು ಹಿಂಬಾಲಿಸುತ್ತಿದ್ದವು. ಅದನ್ನು ತೇಜಾ ಸಹ ಗಮನಿಸಿದ್ದಳು...............
ನೆನ್ನೆ ಸಾಯಂಕಾಲ ಸಹ ಮನೆಯ ಮುಂದೆ ಆ ಬೈಕ್ ನಿಂತಿದ್ದನ್ನೂ ನೆನಪು ಮಾಡಿಕೊಳ್ಳುತ್ತಿದ್ದಂತೆ ಮಿಕವೊಂದು ಸಿಕ್ಕ ಸಂತೋಷ ಅವಳ ತುಟಿಯಲ್ಲಿ ಕಾಣಿಸಿತು,
****************************************************
"ಐ ಅಮ್ ಫ಼ೈನ್ ,ಕ್ಯಾನ್ ಯು ಅಕ್ಸೆಪ್ಟ್ ಮೈ ಫ್ರೆಂಡ್ ರಿಕ್ವೆಸ್ಟ್?"ಅತ್ತಲಿಂದ ಚಂದನ ಮತ್ತೆ ಕಳಿಸಿದಳು
"ಶ್ಯೂರ್" ಮೆಸೇಜ್ ಟೈಪ್ ಮಾಡಿ ಅವಳ ಫ್ರೆಂಡ್ ರಿಕ್ವೆಸ್ಟ್ ಅನ್ನು ಅಕ್ಸೆಪ್ಟ್ ಮಾಡಿದ
" ಥ್ಯಾಂಕ್ಸ್ ಫಾರ್ ಅಕ್ಸೆಪ್ಟಿಂಗ್ ... ನೀವು ಕನ್ನಡದವರಾ?" ಅತ್ತಲಿಂದ .....
"ಯೆಸ್"ಮತ್ತೆ ಟೈಪ್ ಮಾಡಿದ
"ಮತ್ಯಾಕೆ ಕನ್ನಡದಲ್ಲಿ ಉತ್ತರಿಸಲ್ಲ"
ಇದ್ಯಾವುದೋ ವಾಟಾಳ್ ನಾಗರಾಜ್ ಮೊಮ್ಮಗಳಿರಬೇಕೆಂದು ಕೊಂಡ
ಹಾಗೆ ನೋಡಿದರೆ ಅವನ ಕನ್ನಡಪೂರ್ತಿ ಇಂಗ್ಲೀಷ್ ಮಯ
ಥತ್ ಇವಳಿಗಾಗಿ ಕನ್ನಡ ಯೂಸ್ ಮಾಡ್ಬೇಕಾ ಎಂದುಕೊಂಡನಾದರೂ ಮತ್ತೆ ಸ್ವಲ್ಪ ದಿನ ಮಾತ್ರ ತಾನೆ ಪರ್ವಾಗಿಲ್ಲ ಅಡ್ಜಸ್ಟ್ ಮಾಡಿಕೊಳ್ಳೋದು ಅಷ್ಟೆ
"ಕ್ಷಮಿಸು ಸುಂದರಿ, ನಿನಗಾಗಿ ಕನ್ನಡವನ್ನೇ ಬಳಸುತ್ತೇನೆ ಸರಿಯೇ?"
"ಧನ್ಯವಾದಗಳು, ನಾನ್ಯಾರು ಅಂತ ನಿಮಗೆ ಗೊತ್ತಾ?" ಅತ್ತಲಿಂದ ಮತ್ತೆ
"ಹ್ಮ್ಮ್ ಗೊತ್ತಿಲ್ಲ .ನೀವು ಹಾಯ್ ಅಂದ್ರಿ ನಾನು ಹಾಯ್ ಅಂದೆ . ಗೊತ್ತಿಲ್ಲದವರ ಹತ್ರ ಮಾತಾಡಬಾರದಾ?"
"ಹಾಗಲ್ಲ ನಾನ್ಯಾರು ಅಂತ ಗೊತ್ತಿಲ್ಲ . ಆದರೆ ನೀವ್ಯಾರು ಅಂತ ಗೊತ್ತಿದೆ ನನಗೆ"ಅಲ್ಲಿಂದ ಬಂದ ಉತ್ತರ ಕ್ಷಣಕಾರ ವಿಚಲಿತನನ್ನಾಗಿಸಿತು
ತನಗೆ ಗೊತ್ತಿದ್ದ ಹುಡುಗಿಯರ ಮುಖಗಳನ್ನೆಲ್ಲಾ ನೆನಪಿಸಿಕೊಳ್ಳಲಾರಂಭಿಸಿದ...
"ಅಯ್ಯೊ ಸ್ವಲ್ಪ ಇರಿ, ಆಗಲೆ ನಿಮ್ಮ ಹುಡುಗಿಯರನ್ನೆಲ್ಲಾ ನೆನೆಸಿಕೊಂಡು ನನ್ನನ್ನ ಆ ಲಿಸ್ಟಿಗೆ ಹಾಕಬೇಡಿ . ನಾನು ಆ ಲಿಸ್ಟಲ್ಲಿ ಇಲ್ಲ, ಬರೋದು ಇಲ್ಲ...." ಅಲ್ಲಿ ಮೂಡುತ್ತಿದ್ದ ಅಕ್ಷರಗಳನ್ನೇ ಓದುತ್ತಿದ್ದಂತೆ ಮತ್ತೆ ಆಶ್ಚರ್ಯದಿಂದ ಕಣ್ಣರಳಿದವು
"ಹಾಗಿದ್ರೆ ನೀವು ಯಾರು ಮತ್ತೆ ಯಾಕೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದಿರಿ?" ಸ್ವಲ್ಪ ಖಾರವಾಗಿಯೇ ಕೇಳಿದ
"ಅದು ಮುಂದೆ ಗೊತ್ತಾಗುತ್ತೆ. ಅಲ್ಲಿವರೆಗೆ ಬಾಯ್" ಅವಳ ಸ್ಟೇಟಸ್ ಆಫ್ ಲೈನ್ ಆಯಿತು
ತಲೆಯಲ್ಲಿ ಹುಳ ಬಿಟ್ಟಂತಾಗಿತ್ತು ..............
ಯಾರು ಆ ಹುಡುಗಿ? ಅಥವ ಹುಡುಗಿಯ ಹೆಸರಿನ ಹುಡುಗನೇ?
***********************************************************************************
"ಅಮ್ಮಿ , ಆ ಹುಡುಗೀನ ಯಾಕೆ ಕೆಲಸಕ್ಕೆ ತಗೊಂಡೆ, ಅವಳನ್ನ ಬಾಣವಾಗಿ ಬಿಡ್ತೀಯಾ ಅಭಿ ಮೇಲೆ?" ಅತ್ತ ಸುಪ್ರೀತಾ ಮೆಟ್ಟಿಲಳಿಯುತ್ತಿದ್ದಂತೆ ಇತ್ತ ರವಿ ಫೋನ್ ಮಾಡಿದ್ದ
"ರವಿ ...............ಅಭಿ ಎಲ್ಲಿ? ಪಾಪದ ಈ ಹುಡುಗಿ ಎಲ್ಲಿ?, ಅಷ್ಟಕ್ಕೂ ನಾನು ನೆನ್ನೆ ಕೋಪದಲ್ಲಿ ಹೇಳಿದ್ದು , ಅಭಿ ನಾನು ಪ್ರೀತಿಸಿರೋ ಹುಡುಗ ಅವನ ಮೇಲೆ ನಾನು ರಿವೇಂಜ್ ತಗೋಳೋದೆಲ್ಲಾ ಇಲ್ಲ ಕಣೋ, ಜಸ್ಟ್ ಆವೇಶದಲ್ಲಿ ಹೇಳಿದ್ದು, ನನಗೆ ಈ ಹುಡುಗಿ ತುಂಬಾ ಇಷ್ಟ ಆದಳು ಒಳ್ಳೆ ಹೋಮ್ ಲಿ ಗರ್ಲ್, ಮನೇನ ಮೈಂಟೇನ್ ಮಾಡೋಕೆ ಅಂತ ಅವಳನ್ನ ಸೆಕ್ರೆಟರಿ ಪೋಸ್ಟಿಗೆ ರಿಜೆಕ್ಟ್ ಮಾಡಿದಾಗಲೇ ಅನ್ಕೊಂಡಿದ್ದೆ. ಸೋ ಐ ಕಾಲ್ಡ್ ಹರ್, ಅಷ್ಟೇ"ಅವಳ ತಣ್ಣಗಿನ ಮಾತುಗಳು ರವಿಯನ್ನ ಆಶ್ಚರ್ಯಕ್ಕೀಡು ಮಾಡಿದವು
"ಮತ್ತೆ ನೆನ್ನೆ ಎಲ್ಲಾ ಹಾಗೆ ಮಾಡ್ತೀನಿ ಹೀಗೆ ಮಾಡ್ತೀನಿ ಅಂತ ಕಿರುಚಾಡಿದೆ. ಈಗ ಇದೇನು ಸಡನ್ ಚೇಂಜ್?"
"ರವಿ ಸ್ಟಾಪ್ ಇಟ್ . ಅದು ಕೋಪದಲ್ಲಿ ಹೇಳಿದ್ದು, ಹೆಣ್ಣಿಗೆ ಮನಸಲ್ಲಿ ಇರೋದನ್ನ ಜೋರಾಗಿ ಕೂಗಿ ಹೊರಗಡೆ ಹಾಕಿದ್ರೆ ಅವಳ ಮನಸಲ್ಲಿ ಏನೂ ಇರಲ್ಲ , ಹಾಗಾಗೇ ನಾನೂ ಕೋಪದಲ್ಲಿ ಎಲ್ಲಾ ಕಕ್ಕಿಬಿಟ್ಟೆ, ಮನಸಲ್ಲಿ ಏನೂ ಇಲ್ಲ ಈಗ ನಾನು ಮತ್ತದೇ ತಿಳಿಕೊಳ...................................ಅಭಿನ ಕ್ಷಮಿಸಿಬಿಟ್ಟಿದ್ದೀನಿ.............."ಕರುಣಾಮಯಿಯ ದ್ವನಿ ಕೇಳಿ ರವಿಗೆ ಒಮ್ಮೆಗೇ ಗೊಂದಲವಾಯ್ತು
ನೆನ್ನೆ ಚಂಡಿಯ ಅವತಾರ ಇಂದು ಭುವಿಯ ಅವತಾರ....
ಹೆಣ್ಣಿನ ಮನಸನ್ನು ತಿಳಿಯೋಕೆ ಸಾಧ್ಯಾನೆ ಇಲ್ಲ ಎಂದನಿಸಿತು
"ಓಕೆ ಅಮ್ಮಿ ಬಾಯ್"
"ಬಾಯ್"
ಎಂದು ಮೊಬೈಲ್ ಆರಿಸಿದವಳ ಮೊಗದಲ್ಲಿ ನಗೆಯೊಂದು ಮೂಡಿತು
"ನಾನು ಯಾರನ್ನೂ ನಂಬಲ್ಲ ರವಿ ಸಾರಿ, ಎಷ್ಟೇ ಕ್ಲೋಸ್ ಆಗಿದ್ದರೂ" ಮನಸಲ್ಲಿ ಹೇಳಿಕೊಂಡಳು
ಅವಳ ಬಾಣ ಯಾರು ?
ಗುರಿ ಯಾರತ್ತ?
ಬಾಣವನ್ನಾಗಲೇ ಆರಿಸಿದ್ದಾಗಿತ್ತು
ಗುರಿಯೂ ಸ್ಪಷ್ಟವಾಗಿತ್ತು............
ಮುಂದಿನ ಹೆಜ್ಜೆ
ಬಾಣಕ್ಕೆ ತಕ್ಕ ಬಿಲ್ಲನ್ನು ಹುಡುಕುವುದು
ಬಿಲ್ಲೆಂದರೆ ಎಳೆದಷ್ಟೂ ಬಗ್ಗುವ ಆದರೆ ಎಲ್ಲೂ ಮುರಿಯದಂತಹುದು
******************************************* ***************************** *******************************
Saturday, September 3, 2011
ದಡವಿರದ ಸಾಗರ
"ಹುಡುಗಿಯರು ಸಿಗರೇಟ್ ಥರಾ ಜೋಕೆಯಿಂದ ಇದ್ರೆ ನಾವು ಎಂಜಾಯ್ ಮಾಡಬಹುದು.ಸ್ವಲ್ಪ ಹುಶಾರು ತಪ್ಪಿದ್ರೆ ನಮ್ಮನ್ನೇ ಸುಟ್ಟು ಬಿಡ್ತಾರೆ , ಅದಕ್ಕೆ ಈ ಹುಡುಗಿಯರ ವಿಷಯದಲ್ಲಿ ನಾನು ತುಂಬಾ ಶಿಸ್ತು," ಬೆರಳುಗಳ ಸಂದಿಯಲ್ಲಿ ಒದ್ದಾಡುತ್ತಿದ್ದ ಸಿಗರೇಟ್ ನತ್ತಲೇ ಅಭಿಯ ದೃಷ್ಟಿ ನೆಟ್ಟಿತ್ತು.
ರವಿ ನಿಂತಲ್ಲೇ ಸಿಡಿಮಿಡಿಗುಟ್ಟಿದ
"ಅದಕ್ಕೇನೀಗ ? ಅಮ್ಮಿ ನಿನ್ನ ಬಂದು ಕೇಳಿಕೊಂಡ್ಳಾ ಪ್ರೀತಿ ಮಾಡು ಅಂತ?: ನೀನು ಹೀಗೆ ಮಾಡ್ತೀಯ ಅಂತ ನಾನಂದುಕೊಂಡಿರಲಿಲ್ಲ ಕಣೋ"
"ನಾನೇನು ಅವಳನ್ನ ಪ್ರೀತಿ ಮಾಡ್ತೀನಿ ಅಂದಿದ್ನಾ? ನಾನು ಹುಡುಗೀರ್ ವಿಷಯದಲ್ಲಿ ಶಿಸ್ತು ಅಂದನಲ್ಲ ಅದರ ಅರ್ಥಾನೆ ಇಲ್ಲಿಂದ ಒಳಗೆ ಯಾರಿಗೂ ಪ್ರವೇಶ ಇಲ್ಲ ಕಣೋ ." ಕೈನಲ್ಲಿದ್ದ ಸಿಗರೇಟ್ ಅನ್ನ ಬೂಟಲ್ಲಿ ಹೊಸೆದು ಬಲಗೈ ಅನ್ನು ಎದೆಯ ಮೇಲಿಟ್ಟು ಕೊಂಡ..".... ಯಾರನ್ನೂ ಹಚ್ಚಿಕೊಳ್ಳೋದು ಅದರಿಂದ ನೋವು ಪಡೆಯೋದು....... ನೆವರ್ ! ಲೈಫ್ಆಲ್ಲಿ ಅಂತ ತಪ್ಪು ಯಾವತ್ತೂ ಮಾಡಲ್ಲ "ಕಾರ್ ಡೋರ್ ಓಪೆನ್ ಮಾಡುತ್ತಾ ಮತ್ತೆ ನುಡಿದ ......
"ಅಮ್ಮಿನ ಕೇಳು ನಾನು ಲವ್ ಮಾಡ್ತಿದೀನಿ ಅವಳ ಹತ್ರ ಹೇಳಿದ್ನಾ ಯಾವತ್ತಾದರೂ ಅಂತ ?ಐ ಲವ್ ಯು ಗೂ ಐ ಲೈಕ್ ಯುಗೂ ತುಂಬಾ ವ್ಯತ್ಯಾಸ ಇದೆ"
"ಏ ಕತ್ತೆ ರಾಸ್ಕೆಲ್ ಅವಳನ್ನ ಮತ್ತೆ .....ಯಾಕೋ ಹಾಳು ಮಾಡಿದೆ?"ರವಿಯ ಕಂಠ ಗದ್ಗದಿತವಾಗಿತ್ತು
"ನಾನು ಅವಳನ್ನ ರೇಪ್ ಮಾಡಿದ್ನಾ ಕೇಳು?ಅವಳೂ ಒಪ್ಪಲಿಲ್ವಾ ಕೇಳು,ಅವಳು ಹಾಳಾದಳು ಅಂದ್ರೆ ನಾನೂ ಹಾಳಾದೆ ಅಂತ ಅನ್ಕೋ ,....................... ಮತ್ತೆ ಅವಳಿಗೆ ಬೇಸರ ಆಗಿದ್ರೆ ಸಾರಿ .... ನಿಂಗೂ ಅಷ್ಟೆ ಸಾರಿ................ ಈಗ ನಾನು ಹೋಗ್ಬೇಕು," ಕೈನಲ್ಲಿದ್ದ ಮೊಬೈಲ್ ನತ್ತ ನೋಡುತ್ತಾ ನುಡಿದ
"ಆದರೂ ಐ ಹ್ಯಾವ್ ಸಮ್ ಸಾಫ್ಟ್ ಕಾರ್ನರ್ ಆನ್ ದಿಸ್ ಅಮ್ಮಿ ಉರುಫ್ ಅಮಿತಾ, ಬಟ್ ನನ್ನ ಸ್ವಭಾವ ಹೀಗೆ ಅದು ಅವಳಿಗೂ ಗೊತ್ತು. ಆಸ್ಕ್ ಹರ್ ಟು ಫರ‍್ಗೆಟ್ ಮಿ, ಪ್ರೀತಿ ಅನ್ನೋದು ದೇಹಕ್ಕೆ ಸಂಬಂಧ ಪಟ್ಟಿದ್ದಲ್ಲ ಅಂತ ಹೇಳು,ಅವಳು ಬೋಲ್ಡ್ ಇದಾಳೆ , ಶಿ ನೋಸ್ ಹೌ ಟು ಮ್ಯಾನೇಜ್ ದ ಸಿಚ್ಯುಯೇಶನ್"
"ಓಕೆ ರವಿ ನಾನು ಹೊರಡ್ತಿದ್ದೀನಿ ಬಾಯ್" ಅಭಿಜಿತ್ ಮಾತು ಮುಗಿಯಿತೆಂಬಂತೆ ಕಾರ್ ಹತ್ತಿದ
ಕಣ್ಣ ಮುಂದೆಯೇ ಹೊರಡುತ್ತಿದ್ದ ಕಾರ್ ಆನ್ನು ಅಸಹಾಯಕನಂತೆ ನೋಡುತ್ತಿದ್ದ ರವಿ
__________________________
"ಡ್ಯಾಡಿ ನನ್ನ ಮದುವೆಯಾಗೋನು ಹೇಗಿರಬೇಕು ಅಂತ ನನ್ನದೇ ಆದ ಕಲ್ಪನೆ ಇದೆ. ನೀವು ಸುಮ್ಮನೆ ರೆಕ್ಕೆ ಪುಕ್ಕ ಕಟ್ಟಿಕೊಂಡು ಆಕಾಶದಲ್ಲಿ ಹಾರಾಡಬೇಡಿ, ಅವನು ಕುಡುಕ ಆಗಿರ್ಬಾರದು, ಸಿಗರೇಟ್ ಸೇದಬಾರದು , ಶ್ರೀಮಂತ ಆಗಿರ್ಬೇಕು, ಅಪ್ಪಟ್ಟ ಬ್ಯಾಚಲರ್ ಆಗಿರ್ಬೇಕು , ಇವೆಲ್ಲಾ ನಂಗೆ ಬೇಕಿಲ್ಲ, ಏನಾದರೂ ಆಗಿರಲಿ ಮೊದಲು ನನ್ನ ಅರ್ಥ ಮಾಡಿಕೊಂಡು ಹೋಗೋನಿರಬೇಕು, ನನ್ನ ಫ್ರೀ ಲೈಫ್‍ಗೆ ಅಡ್ಡ ಬರಬಾರದು, ಈ ಟ್ರೆಡಿಶನಲ್ಸ್ ಸೀರೆ ಚೂಡಿದಾರ್ ಅದೂ ಇದೂ ತಲೆ ತಿನ್ಬಾರದು, ಮುಖ್ಯವಾಗಿ ನಂಗೆ ಅಡ್ಜಸ್ಟ್ ಆಗಬೇಕು, ಹಿಂಗಿದ್ರೆ ಅವನು ಕುಂಟ ಆಗಿರಲಿ ಕುರುಡ ಆಗಿರಲಿ ಅವನನ್ನ ನಾನೇ ಜೀವನ ಪರ್ಯಂತ ಸಾಕ್ತೀನಿ..............." ಮೊಬೈಲ್ ನಲ್ಲಿ ತೇಜ ಕಳಿಸಿದ್ದ ಮೆಸೇಜ್ ನೋಡಿ ಆಶ್ಚರ್ಯವೇನು ಆಗಲಿಲ್ಲ ಶ್ರೀಕಾಂತನಿಗೆ...... ಮೊದಲೇ ನಿರೀಕ್ಷಿಸಿದ್ದ ಉತ್ತರವದು....
ಮಕ್ಕಳಿಬ್ಬರಿಗೂ ಯಥೇಚ್ಚ ಸ್ವಾತಂತ್ರ್ಯ ಕೊಟ್ಟ ಪರಿಣಾಮವಿದು
, ಆದರೆ ಅದಕ್ಕೆ ಶಾಕ್ ಆಗುವಂತಹ ವ್ಯಕ್ತಿ ಅಲ್ಲ ಶ್ರೀಕಾಂತ್ , ಅವನೂ ಇದನ್ನೇ ಬಯಸಿದ್ದ, ಮಕ್ಕಳು ಹೀಗೆ ಬೆಳೆಯಲ್ಲಿ ಎಂಬುದು ಅವನ ಇಷ್ಟವಾಗಿತ್ತು..."ತೇಜು ಜೀವನ ಪರ್ಯಂತ ಸಾಕ್ತೀನಿ ಅನ್ನೋದಕ್ಕೆ ನಿನ್ನ ಹತ್ರ ಏನಿದೆ?" ತುಂಟ ಪ್ರಶ್ನೆ ಕಳಿಸಿದ ಮತ್ತೆ.....
ರೆಡಿಮೇಡ್ ಉತ್ತರ ಬಂತು
"ನಿನ್ನ್ ಆಸ್ತಿ ಅಂದರೆ ನಮ್ಮ ತಾತನ ಆಸ್ತಿ ಮೂರು ಜನ್ಮ ಕ್ಕೆ ಆಗೋ ಅಷ್ಟು ಇದೆ, ಅದರಲ್ಲಿ ನಂಗೂ ಸಮಪಾಲು ಬರಬೇಕು ...... ಒಂದುವರೆ ಜನ್ಮಕ್ಕಂತೂ ಗ್ಯಾರೆಂಟಿ ಆಗುತ್ತೆ , ನೀನೇನು ಯೋಚನೆ ,ಮಾಡ್ಬೇಡ ನಿನ್ನನ್ನೂ ನೋಡ್ಕೋತೀನಿ............"
ಶ್ರೀಕಾಂತನ ಮೊಗದಲ್ಲಿ ಕಿರು ನಗೆ ಮತ್ತೆ ಆಫೀಸಿನ ಚೇರ್‌ಗೆ ಒರಗಿದ
ಅಂದ ಹಾಗೆ ತೇಜ ಆಲಿಯಾಸ್ ತೇಜಸ್ವಿನಿ ಅಭಿಜಿತ್‌ನ ತಂಗಿ
---------------------------------------------------------------------------------------------------------
"ರವಿ . ಇಟ್ ಈಸ್ ಟೂ ಮಚ್ ...................ನೀನ್ಯಾಕೆ ಆ ಅಭಿ ಹತ್ರ ಕೇಳ್ಕೊಳ್ಳೋದಿಕ್ಕೆ ಹೋಗಿದ್ದೆ? ನಾನು ನಿನ್ಹತ್ರ ಹೇಳ್ಕೊಂಡಿದ್ದೇ ತಪ್ಪಾಗಿ ಹೋಯ್ತು. " ತನ್ನ ಐಶಾರಾಮಿ ಚೇರಿನಲ್ಲಿ ಕುಳಿತು ಹಲುಬುತ್ತಿದ್ದಳು ಅಮಿತಾ..............
ಕಣ್ಣಲ್ಲಿ ನೀರಿನ ಪಸೆಗಿಂತ ಕೋಪದ ಕಿಡಿ ಕಾಣುತ್ತಿತ್ತು
"ಸಾರಿ ಅಮ್ಮಿ ನೆನ್ನೆ ನೀನು ಅತ್ತಿದ್ದು ತುಂಬಾ ಬೇಜಾರಾಗಿ ಹೋಯ್ತು , ನಾನು ನಿನ್ನ್ ಕ್ಲೋಸ್ ಫ್ರೆಂಡ್ . ನನ್ ಫ್ರೆಂಡ್‌ಗೆ ಅನ್ಯಾಯ ಆದ್ರೆ ಹೋಗಿ ಕೇಳೋ ಅಧಿಕಾರ ನಂಗಿಲ್ವಾ?" ರವಿ ಆ ಕೋಪದ ಕಿಡಿಯನ್ನೇ ದೃಷ್ಟಿಸಿ ನೋಡುತ್ತಿದ್ದ
"ಅನ್ಯಾಯ ಆಗಲಿಲ್ಲ ಕಣೋ , ಹಿ ನೆವರ್ ಟೋಲ್ಡ್ ಮಿ ಹಿ ಲವ್ಸ್ ಮಿ ಅಂತ ಗೊತ್ತಾ ?, ಮತ್ತೆ ಹೆಚ್ಚಾಗಿ ನಂಗೆ ಗೊತ್ತಿತ್ತು ನಮ್ಮಿಬ್ಬರ ರಿಲೇಶನ್ ಕೇವಲ ಫನ್‌ಗಾಗಿ ಮಾತ್ರ ಅಂತ..............................ಬಟ್ ಸ್ಟಿಲ್ ಐ ಲವ್ಡ್ ಹಿಮ್"
"ಆದರೆ ಅವನ ಜೊತೆ ಯಾಕೆ ......................?" ಮುಂದುವರೆಸಲಾಗದೆ ನೆಲ ನೋಡಿದ
"ಕೇಳು ಪೂರ್ತಿ.... ಯಾಕೆ ಹೋಗಿದ್ದೆ ಅಂತ ಅಲ್ವಾ?"ಕೆರಳಿದವಳಂತೆ ತಲೆ ಆಡಿಸಿದಳು
ನಿಂಗೆ ಗೊತ್ತಾ ರವಿ .. ? ........ಹೆಣ್ಣು ಪ್ರೀತಿಗೋಸ್ಕರ ಸೆಕ್ಸ್ ಕೊಡ್ತಾಳೆ ಆದರೆ ಗಂಡು ಸೆಕ್ಸ್ ಗಾಗಿ ಪ್ರೀತಿ ತೋರಿಸ್ತಾನೆ, ...........ನಾನು ಪ್ರೀತಿಗೋಸ್ಕರ ಅವನ ಜೊತೆ ಫಿಸಿಕಲ್ ಕಾಂಟ್ಯಾಕ್ಟ್ ಇಟ್ಕೊಂಡೆ ಇವತ್ತಲ್ಲ ನಾಳೆ ಅವನು ನನ್ನ ಲವ್ ಮಾಡಬಹುದು ಅಂತ , ಆದರೆ ಅದು ಆಗಲಿಲ್ಲ, ಇಲ್ಲ ಅವನು ಮಾಡಲಿಲ್ಲ ಅವನಿಗೆ ನನ್ನ ಪ್ರೀತಿ ಅರ್ಥ ಆಗಲಿಲ್ಲ"
ಆವೇಶದಲ್ಲಿ ಶುರುವಾದ ಮಾತುಗಳು ಕೊನೆಯ ವಾಕ್ಯಕ್ಕೆ ಬರುತ್ತಿದ್ದಂತೆ ಅಳುವಾಗಿ ಬದಲಾಯ್ತು
.ಕಿಟಕಿಯತ್ತ ತಿರುಗಿದ್ದ ಅಮಿತ ಮತ್ತೆ ರವಿಯತ್ತ ನೋಡಿದಳು
,"
ಆದರೆ ಆ ಅಭಿಗೆ ಪ್ರೀತಿಯ ಅರ್ಥ ಗೊತ್ತಾಗಬೇಕು ಕಣೋ . ಪ್ರೀತಿ ಕಳೆದುಕೊಳ್ಳುವ ನೋವು ಅವನಿಗೆ ಅರ್ಥ ಆಗಬೇಕು ಆಗಲೆ ಈ ಮನಸಿಗೆ ನೆಮ್ಮದಿ , ಕೂತರೆ ಪ್ರೀತಿ ನಿಂತರೆ ಪ್ರೀತಿ ಅಂತ ಒದ್ದಾಡಬೇಕು ಆಗ ನೋಡು ನಾನು ಗಹ ಗಹಿಸಿ ನಗಬೇಕು,................... ಹಾಗೆ ಮಾಡ್ತೀನಿ ನಾನು..... ಹುಡುಗಿಯರು ಸಿಗರೇಟ್ ಇದ್ದ ಹಾಗಲ್ಲ ಕಣೋ ಬೆಂಕಿ ,ಬೆಂಕಿ ಇದ್ದಹಾಗೆ , ಬದುಕು ಕೊಟ್ಟರೆ ಬೆಳಕು ನೀಡುವವರು, ಬದುಕನ್ನು ಕಿತ್ತುಕೊಂಡರೆ ಇಡೀ ದೇಹವನ್ನಲ್ಲ ಬದುಕನ್ನೇ ಸುಟ್ಟು ಬಿಡುವಂತಹವರು ಅಂತ ನಾನು ಅವನ ಮುಂದೇ ಕಿರುಚಿ ಕುಣಿಯಬೇಕು"
ಅವಳ ಮಾತು ಅರ್ಥವಾಗದವನಂತೆ ಅವಳನ್ನೇ ನೋಡಿದ ರವಿ
.ಕೈನಲ್ಲಿದ್ದ ಮೊಬೈಲ್ ಎತ್ತಿ ನಂಬರ್ ಒಂದಕ್ಕೆ ಕಾಲ್ ಮಾಡಿದಳು
"
ಹಲೋ ಕಿರಣ್ , ಲಾಸ್ಟ್ ವೀಕ್ ನನ್ನ ಪಿ ಎ ಪೋಸ್ಟ್ ಗೆ ಫೈನಲ್ ರೌಂಡ್‍ನಲ್ಲಿ ರಿಜೆಕ್ಟ್ ಮಾಡಿದೆನಲ್ಲ ಒಬ್ಬ ಹುಡುಗಿ ಏನವಳ ಹೆಸರು ಸುಪ್ರೀತ ಅಂತ ಅಲ್ವಾ?"
"
ಯೆಸ್ ಮೇಡಮ್"
"
ಅವಳನ್ನ ಕರೆಯಿರಿ, ನಂಗೆ ಮನೆಗೆ ಒಬ್ಬ ಪಿಎ ಬೇಕು .ಈ ಹೌಸ್ ಕೀಪಿಂಗ್ ಗಾರ್ಡನಿಂಗ್ ನನ್ನ ಡೈಲಿ ಹೌಸ್ ರೊಟೀನ್ಸ್ ಮೆಂಟೇನ್ ಮಾಡೋಕೆ. ಇಫ್ ಶಿ ಹ್ಯಾಸ್ ಇಂಟರೆಸ್ಟ್ ಲೆಟ್ ಅಸ್ ಟೇಕ್ ಹರ್"
"
ಓಕೆ ಮೇಡಮ್"ಅತ್ತಲಿಂದ ಅಗತ್ಯಕ್ಕಿಂತ ಹೆಚ್ಚು ಉತ್ಸಾಹವಿದ್ದಂತೆ ತೋರಿತು ,ಆದರೆ ಅದನ್ನು ಗಮನಿಸದವಳಂತೆ ಫೋನ್ ಆಫ್ ಮಾಡಿದಳು
ರವಿ ಅವಳನ್ನೆ ನೋಡುತ್ತಾ ಬೆಪ್ಪಾದ
,ಹೆಂಗಸರ ಭಾವನೆಗಳು ಕ್ಷಣಕ್ಕೊಂದು ರೀತಿ ಬದಲಾಗುತ್ತದೆ ಎಂಬುದನ್ನು ಓದಿದ್ದ ಆದರೆ ಇಲ್ಲಿ ಪ್ರತ್ಯಕ್ಷ ನೋಡಿದ್ದ
ಕೋಪ
, ದೈನ್ಯತೆ, ದ್ವೇಷ, ಅಳು, ಸೇಡು ಬುದ್ದಿವಂತಿಕೆ , ಇನ್ನೂ ಏನೇನೋ ಅರ್ಥವಾಗಲಿಲ್ಲ--------------------------------------------------------------------------
ಇತ್ತ ಕಿರಣ ಸುಪ್ರೀತಾಗೆ ಕಾಲ್ ಮಾಡುತ್ತಿದ್ದ
"
ಸುಪ್ಪಿ, ಮೇಡಮ್ ಮನೆಗೆ ಒಬ್ಬ ಅಸಿಸ್ಟೆಂಟ್ ಬೇಕಂತೆ , ನಿನ್ನನ್ನೆ ಸೆಲೆಕ್ಟ್ ಮಾಡಿದಾರೆ ಒಪ್ಪಿಕೊಂಡುಬಿಡು.. ,,ಬೆಂಗಳೂರಲ್ಲಿ ಕೆಲಸ ಇಲ್ಲದೆ ಬದುಕೋದು ತುಂಬಾ ಕಷ್ಟ ಆಗುತ್ತೆ, ಎಷ್ಟು ದಿನಾಂತ ಅಲ್ಲಿ ಇಲ್ಲಿ ಇಂಟರ್ ವ್ಯೂಗೆ ಓಡಾಡ್ತಾ ಇರ್ತೀಯಾ"
"
ಕಿರಣ್ ಆಫೀಸ್ ಆದರೆ ಪರ್ವಾಗಿಲ್ಲ ಆದರೆ ಮನೆಲಿ ಹೇಗೆ ಕೆಲಸಮಾಡೋದು? ನಾನು ಮಾಡಿರೋ ಬಿ ಎಗೆ ಏನೂ ವ್ಯಾಲ್ಯೂ ಇಲ್ವಾ?"ಸುಪ್ರೀತಾ ನುಗ್ಗಿ ಬರುತ್ತಿದ್ದ ಅಳುವನ್ನು ತಡೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಳು
"ಸುಪ್ರೀತಾ ಸ್ವಲ್ಪ ದಿನ...........ಅಷ್ಟೆ ............... ನಿನ್ ಇಂಗ್ಲೀಷ್ ಇಂಪ್ರೂವ್ ಮಾಡ್ಕೋ . ನಮ್ ಮೇಡಮ್ ತುಂಬಾ ಒಳ್ಳೆಯವರು . ಇಷ್ಟ ಆದರೆ ತುಂಬಾ ಸಹಾಯ ಮಾಡ್ತಾರೆ..............ಅದೂ ಇಷ್ಟು ದೊಡ್ಡ ಕಂಪೆನಿ ಬಾಸ್ ಪರ್ಸನಲ್ ಅಸಿಸ್ಟೆಂಟ್ ಅಂದ್ರೆ ಅದೂ ದೊಡ್ಡ ಗೌರವಾನೆ....................." ಕಿರಣ್ ಅವಳನ್ನು ಒಪ್ಪಿಸುತ್ತಿದ್ದ
""ಆಯ್ತು ನಾಳೆ ಎಷ್ಟು ಹೊತ್ತಿಗೆ ಬರಬೇಕು?" ನಿರ್ಧಾರಕ್ಕೆ ಬಂದವಳಂತೆ ಕೇಳಿದಳು
"ನಾಳೆ ಅರೌಂಡ್ ೧೦ಗೆ ಆಫೀಸ್‌ಗೆ ಬಾ. ಅಪ್ಪಿ ತಪ್ಪಿನೂ ನಾನು ನಿಂಗೆ ಗೊತ್ತಿರೋನು ಅಂತ ಹೇಳ್ಬೇಡ . ಮೇಡಮ್ ರೆಫರೆನ್ಸ್ ಇಷ್ಟ ಪಡಲ್ಲ..............ಸರೀನಾ?"
"ಆಯ್ತು ಕಿರಣ್ ಬಾಯ್"
"ಬಾಯ್ ಬಾಯ್"
ಮೊಬೈಲ್ ಆಫ್ ಮಾಡುತ್ತಿದ್ದಂತೆ ಸುಪ್ರೀತಾಳ ಮನಸು ಹಾರಾಡತೊಡಗಿತು
ತಾನೆಂತಹ ಬಲೆಗೆ ಸಿಲುಕುತ್ತಿದ್ದೇನೆಂಬ ಅರಿವು ಅವಳಿಗೆ ಒಂದಿನಿತಾದರೂ ಇದ್ದಿದ್ದಲ್ಲಿ...............................
ಈ ಕಥೆ ಮುಂದುವರೆಯುತ್ತಿರಲಿಲ್ಲ..................................................................................
Saturday, August 13, 2011
ಚೊಚ್ಚಿಲ ಪುಸ್ತಕದ ಲೋಕಾರ್ಪಣೆಯ ಸಂಭ್ರಮ ನಿಮಗೆಲ್ಲರಿಗೂ ಆತ್ಮೀಯ ಆಹ್ವಾನ
ಪ್ರಿಯ ಸ್ನೇಹಿತರೇ/ಸ್ನೇಹಿತೆಯರೇ
ತುಂಬಾ ದಿನದ ಕನಸೊಂದು ನನಸಾಗುವ ದಿನ ಹತ್ತಿರವಾಗುತ್ತಿದೆ. ಮನದಾಳದಲ್ಲಿ ಎಲ್ಲೋ ಅವ್ಯಕ್ತ ವಾಗಿದ್ದ ಆಸೆ ಒಂದು ಇದೀಗ ಆಕಾರವನ್ನು ತಳೆದಿದೆ,
ತುಂಬಾ ದಿನದಿಂದ ಕೇಳುತ್ತಿದ್ದರು ನನ್ನ ಮಿತ್ರರು ನೀವೇಕೆ ನಿಮ್ಮ ಪುಸ್ತಕ ಬಿಡುಗಡೆ ಮಾಡಬಾರದು ? ಆಗೆಲ್ಲಾ ಆ ಮಟ್ಟಕ್ಕ್ಕೆ ಏರಬಲ್ಲೆನಾ ಅಂದುಕೊಂಡು ಸುಮ್ಮನಾಗುತ್ತಿದ್ದೆ . ಬ್ಲಾಗ್ ಸ್ನೇಹಿತರು , ಆನ್ಲೈನ್ ಸ್ನೇಹಿತರು ಆಗಾಗ ಅ ಆಸೆಯನ್ನು ಕೆದಕುತ್ತಿದ್ದರು . ಹೋದ ತಿಂಗಳಲ್ಲಿ ಮತ್ತೇಕೋ ಆ ಆಸೆ ಮತ್ತೆ ಧುತ್ತೆಂದು ಮುಂದೆ ನಿಂತಿತು . ಇಂತಹ ಒಂದು ಯೋಚನೆ ಬಂತೆಂದು ಜಲನಯನ ಬ್ಲಾಗಿನ ಆಜಾದ್ ಅವರ ಬಳಿ ಹೇಳಿದ್ದೇ ತಡ ಮತ್ತೆಲ್ಲಾ ಮಿಂಚಿನಂತೆ ನಡೆದವು.
ನನ್ನ ಊಹೆಗೂ ಮೀರಿದ ವೇಗದಲ್ಲಿ ಪುಸ್ತಕದ ಲೋಕಾರ್ಪಣೆಯ ಹೊಣೆ ಹೊತ್ತ ಛಾಯಕನ್ನಡಿಯ ಬ್ಲಾಗಿನ ಶಿವುರವರು ಆಗಬೇಕಾದ ಕೆಲಸಗಳನ್ನು ಮುಂದೆ ನಡೆಸಿದರು.
ನನ್ನ ಯೂನಿಕೋಡ್ ಬರಹಗಳನ್ನು ಬರಹಕ್ಕೆ ಇಳಿಸಿ ಅದನ್ನು ಅಂದವಾಗಿ ಪುಸ್ತಕ ವಿನ್ಯಾಸಕ್ಕೆ ಇಳಿಸಿದರು ಬಿ ಆರ್ ಸತ್ಯನಾರಾಯಣ್ ರವರು. ಸುಂದರ ಮುಖ ಪುಟ ವಿನ್ಯಾಸ ಮಾಡಿಕೊಟ್ಟ ಸುಗುಣಾರವರು, ಪುಸ್ತಕ ಪ್ರಕಾಶನದ ಹೊಣೆ ಹೊತ್ತ ಸೃಷ್ಟಿ ನಾಗೇಶ್ ರವರು ಎಲ್ಲರಿಗೂ ನನ್ನ ಮನದಾಳದ ಕೃತಜ್ನತೆಗಳು.
ನನ್ನ ಪುಸ್ತಕಕ್ಕೆ ನಲ್ಮೆಯಿಂದ ಮುನ್ನುಡಿ ಬರೆದು ಕೊಟ್ಟ ಸುನಾಥ್ ಕಾಕಗೂ, ಅಂದವಾದ ಬೆನ್ನುಡಿ ಬರೆದ ಆಜಾದರವರಿಗೆ ,ಪುಸ್ತಕದ ಬಗ್ಗೆ ತಮ್ಮ ಮಾತನ್ನು ಹೇಳಿದ್ದಲ್ಲದೇ ಪುಸ್ತಕ ಬಿಡುಗಡೆ ಮಾಡಲು ಒಪ್ಪಿಕೊಂಡ ಡಾ ರಮೇಶ್ ಕಾಮತ್ ರವರಿಗೂ ನನ್ನ ಅನಂತ ಧನ್ಯವಾದಗಳು
ಸುಧೇಶ್ ಶೆಟ್ಟಿ ರವರ ಹೆಜ್ಜೆ ಮೂಡದ ಹಾದಿ, ದೊಡ್ಮನಿ ಮಂಜು ಅವರ ಮಂಜು ಕರಗುವ ಮುನ್ನ ಇವುಗಳ ಜೊತೆಯಲ್ಲಿ ನನ್ನದೂ ಒಂದು ಪುಸ್ತಕ
ಪುಸ್ತಕದ ಹೆಸರು : ಪ್ರೀತಿ ಏನೆನ್ನಲಿ ನಿನ್ನ
ಲೋಕಾರ್ಪಣೆಯಾಗುತ್ತಿದ್ದೆ ಎಂದು ಹೇಳಿಕೊಳ್ಳಲು ಸಂತಸವಾಗುತ್ತಿದೆ, ದಯವಿಟ್ಟು ಎಲ್ಲರೂ ತಪ್ಪದೇ ಬರಬೇಕು, ಹೆಚ್ಚಿನ ಸಂಖ್ಯೆಯಲ್ಲಿ ಬಂದು ನಮಗೆಲ್ಲರಿಗೂ ಶುಭ ಹಾರೈಸಬೇಕೆಂದು ಕೋರಿಕೊಳ್ಳುತ್ತೇನೆ.
Thursday, July 7, 2011
ನಿವೇದನೆ
ಈ ಬಾಳಲಿ ಪ್ರೇಮಿ ನೀನೆ ಕಡೆದ
ಶಿಲ್ಬವೂ ನಾನೆ , ರಾಗವೂ ನೀನೆ
ರಾಗ ಶಿಲ್ಪ ಬೆರೆತ
ಹೊಸ ಸೃಷ್ಟಿ ನಮ್ಮೀ ಜೀವನ,
ಭಾವ ಜೀವದ ಮಿಡಿತ
ನವ ದೃಷ್ಟಿ ನಮ್ಮೀ ಕವನ
ಬಾಳಿನ ತುಸು ದೂರಕೆ ಯಾತ್ರಿಕ ನೀ ಜೊತೆಗೆ
ಕನಸಿನ ಅಂಬರದ ಮಲ್ಲಿಗೆ ನೀ ಎನ್ನ ಮುಡಿಗೆ
ಕ್ಷಣ ಹುಟ್ಟಿ ಕರಗೋ ಆಸೆಗಳ ಮಾಲೆಗೆ
ಅನುಕ್ಷಣವೂ ನೆನೆಯೋ ಮೆರುಗ ತಂದೆ ಹಾಗೆ
ದೂರ ತೀರ ಯಾನಕೆ ಕರೆದೊಯ್ಯುವೆಯಾ ಎನ್ನ?
ಭಾವಗಳ ಲೋಕದಿ ಸೆಳೆದೊಯ್ಯುವೆಯಾ ಎನ್ನ?
ಹಾಡಾಗದೆ ಉಳಿದ ಎಷ್ಟೋ ಪದಗಳನ
ರಾಗವಾಗಿ ನುಡಿಸುವೆಯಾ ಮನವನ್ನ?
ನಮ್ಮ ಪ್ರೀತಿಯ ಜ್ಯೋತಿ ಅಗಲಿ ಮನ ಬೆಳಗೋ ಕಾಂತಿ
ಜ್ವಾಲೆಯಾಗದಿರಲಿ ನಮ್ಮೀ ಮನದ ಅನಭೂತಿ
ಜಗ ಸುಟ್ಟು ಬದುಕೋ ರೀತಿ ನಮಗೆ ಬೇಡ ಇರಲಿ ನೀತಿ
ಸಂತಸದ ಸಾಗರದ ಅಲೆಗಳ ಶಕ್ತಿ ತರಲಿ ಮನಕೆ ಸಂಪ್ರೀತಿ
Wednesday, June 15, 2011
ಪ್ರೀತಿಯ ಪರಿ
Tuesday, May 31, 2011
ಸೂರ್ಯನ ಸುತ್ತಾ ಸುತ್ತುವುದು ಭೂಮಿ
"ಸೂರ್ಯನ ಸುತ್ತಾ ಭೂಮಿ ಸುತ್ತುವುದು .ಚಂದ್ರ ಭೂಮಿಯ ಸುತ್ತಾ ತಿರುಗುತ್ತದೆ" ಪಕ್ಕದ ಮನೆ ಸುಮಿ ಓದುತ್ತಿದ್ದರೆ ನನ್ನ ಮನದಲ್ಲಿ ಸಿಟ್ಟು . ಹೇಳಲಾಗದ ನೋವು. ಇಲ್ಲಾ ಭೂಮಿ ನನ್ನ ಸುತ್ತಾನೆ ಸುತ್ತೋದು .
ಇವತ್ತು ಒಂದರಲ್ಲಿ ಎರೆಡು ನಿರ್ಧಾರವಾಗಲೇ ಬೇಕು ನಾನೋ ಇಲ್ಲಾ ಭಾಸೀನೋ ಅಂತ ಇವತ್ತು ಹೇಳಲಾಗದಿದ್ದರೆ ಮುಂದೆಂದೂ ಧರಿತ್ರಿ ಸಿಗೋದಿಲ್ಲ. ಇವತ್ತು ಕತ್ತೇ ಬಡವ ಅದು ಹೇಗೆ ಅವಳನ್ನ ಹಾರಿಸಿಕೊಳ್ತಾನೋ ನೋಡೇ ಬಿಡೋಣ. ಎಂದಿಗಿಂತ ಮುಂಚೇಯೇ ಹೊರಟಿದ್ದೆ ನನ್ನ ಹೊಸ ಕಾರಲ್ಲಿ . ನೆನ್ನೆ ತಾನೆ ತಗೊಂಡಿದ್ದೆ.
ಹೌದು ನಾನಾಗ ಹೈಸ್ಕೂಲಿನಲ್ಲಿದ್ದೆ ಆಗಲೇ ಬಂದವಳು ಈ ಧರಿತ್ರಿ . ನೋಡಿದಾಗಲೇ ಏನೋ ಆಕರ್ಷಣೆ . ಅವಳ ಬಂಗಲೆಯೂ ನನ್ನ ಪುಟ್ಟ ಇಟ್ಟಿಗೆ ಮನೆಯೂ ಎದುರು ಬದುರಾಗಿದ್ದುದು ವಿಪರ್ಯಾಸ. ನಮ್ಮಿಬ್ಬರ ಅಂತರಕ್ಕೆ ಮತ್ತಷ್ಟು ದೂರ ಸೇರಿದ್ದು ಅವಳ ಮನೆಯ ಪಕ್ಕಕ್ಕೆ ಇದ್ದ ಭಾಸಿಯ ಮನೆ. ಅವಳೊಂದಿಗೆ ಹೋಗಬೇಕೆಂದುಕೊಂಡಾಗಲೆಲ್ಲಾ ಅವಳು ಭಾಸಿಯೊಟ್ಟಿಗೆ ಹೋಗುತ್ತಿದ್ದಳು. ಹೌದು ನನ್ನಂತಹ ಬಡವನ ಜೊತೆ ಏಕಾದರೂ ಬರುತ್ತಾಳೆ ಎಂದುಕೊಂಡು ನಿಟ್ಟುಸಿರು ಬಿಡುತ್ತಿದ್ದೆ. ಆದರೂ ಹೇಗೋ ನಮ್ಮ ಮೂವರ ಸ್ನೇಹದ ಗಿಡ ಚಿಗುರಿತ್ತು. ಆ ಗಿಡ ನನ್ನ ನಿರಾಸೆಯ ಕಾವಿಗೆ ಆಗಾಗ ಬಾಡುತ್ತಿದ್ದರೂ ಮತ್ತೆ ಧರಿತ್ರಿಯ ನಗು ನೀರೆರೆಯುತ್ತಿತ್ತು. ಮತ್ತೆ ಬೆಳೆಯುತ್ತಿತ್ತು.
ಅಪ್ಪ ಆಗಷ್ಟೇ ಒಂದು ಹೊಸ ಮನೆ ತೆಗೆದುಕೊಂಡಿದ್ದರು. ಎರೆಡು ರೂಮಿರುವ ಮನೆ ಅದು ಏನೋ ಹೊಸ ಆತ್ಮ ವಿಶ್ವಾಸ ನನ್ನಲ್ಲಿ . ನಮ್ಮಿಬ್ಬರ ಅಂತರ ಕಡಿಮೆಯಾಗಿತ್ತು. ಇಂದಿನಿಂದಾದರೂ ಅವಳ ಜೊತೆ ಹೋಗುವ ಕನಸು ನಿಜವಾಗಬಹುದು. ಹಾಗೆಂದುಕೊಂಡೇ ಸ್ಕೂಲಿಗೆ ಹೋಗಿದ್ದು ಆದರೆ ಭಾಸಿ ಅಂದು ಹೊಸ ಸೈಕಲ್ ತಂದಿದ್ದ. ಅಂದು ಧರಿತ್ರಿ ಅವನ ಜೊತೆಯೇ ಹೊರಟು ಹೋಗಿದ್ದಳು. ಕನಸು ಕನಸಾಗಿಯೇ ಉಳಿದಿತ್ತು.
ಹತ್ತನೇ ತರಗತಿಯಲ್ಲಿ ಕ್ಲಾಸಿಗೆ ಮೊದಲಿಗನಾಗಿ ಬಂದಿದ್ದೆ . ಆ ಸಂತೋಷಕ್ಕೆ ಅಪ್ಪ ನನಗೊಂದು ಸೈಕಲ್ ಕೊಡಿಸಿದ್ದರು.
ಸೈಕಲ್ ಕೊಂಡ ಸಂತೋಷದಲ್ಲಿ ಅವಳ ಮನೆಯತ್ತ ಹೋಗುತ್ತಿದ್ದಂತೆ ಶಾಕ್ ಆಗಿತ್ತು ಭಾಸಿ ಹೊಸದೊಂದು ಬೈಕ್ ಕೊಂಡಿದ್ದ . ಅವನು ಪಾಸ್ ಆಗಿದ್ದಕ್ಕೆ ಕೊಡಿಸಿದ್ದಂತೆ.
ನನ್ನ ಅದೃಷ್ಟಕ್ಕೆ ಧರಿತ್ರಿ ನಾನು ಒಂದೇ ಕಾಲೇಜಿನಲ್ಲಿ ಓದಲಾರಂಭಿಸಿದೆವು. ಆದರೆ ದುರಾದೃಷ್ಟವೂ ಬೆಂಬತ್ತಿ ಬಂತು. ಭಾಸಿಯೂ ಅದೇ ಕಾಲೇಜಿಗೆ ಸೇರಿದ್ದ. ಎಂದಿನಂತೆ ನಾನು ಸೈಕಲ್ , ಅವನು ಬೈಕ್‌ನಲ್ಲಿ ಅವಳು ಅವನ ಹಿಂದೆ. ಜೋಲು ಮೋರೆ ಹೊತ್ತು ಹೋಗುತ್ತಿದ್ದೆ.
ಸೆಕಂಡ್ ಇಯರ್ ಪಾಸ್ ಆಯ್ತು ನಂತರ ಇಂಜಿನಿಯರಿಂಗ್ ಸೀಟ್ ಸಿಕ್ಕಿತು ನನಗೆ . ಅವರಿಬ್ಬರೂ ಹಿಂದೆಯೇ ಉಳಿದಿದ್ದರುಹಳ್ಳಿ ಬಿಟ್ಟು ಬೆಂಗಳೂರಿಗೆ ಬಂದು ಸೇರಿದ್ದು ಆಯ್ತು. ಮುಂದಿನದೆಲ್ಲಾ ಇತಿಹಾಸ ಕ್ಯಾಂಪಸ್ ಇಂಟರ್‌ವ್ಯೂನಲ್ಲಿ ಸೆಲೆಕ್ಟ್ ಆಗಿ ಹೆಸರಾಂತ ಐಟಿ ಕಂಪೆನಿಯಲ್ಲಿ ಕೆಲಸವೂ ಸಿಕ್ಕಿತ್ತು. ಆಗಾಗ ಅವರಿಬ್ಬರ ನೆನಪು ಬರುತ್ತಿತ್ತು.ಧರಿತ್ರಿ ಬೆಂಗಳೂರಿನಲ್ಲೇ ಇದ್ದಾಳೆ ಎಂದು ತಿಳಿದು ಅವಳ ವಿಳಾಸ ಪಡೆದುಕೊಂಡೆ . ಆಗಷ್ಟೇ ಹೊಸದಾಗಿ ಕೊಂಡಿದ್ದ ಬೈಕ್ ಸವಾರಿ ಮಾಡಿಕೊಂಡು ಅವಳ ಮನೆಯತ್ತ ಹೋಗಿದ್ದೆ .
ಧರಿತ್ರಿ ಸಿಕ್ಕಳು ಮೊದಲಿಗಿಂತ ಚೆಂದವಾಗಿದ್ದಳು. "ಹೇ ಶಶಿ ಹೇಗಿದ್ದೀಯಾ? " ಎಂದೆಲ್ಲಾ ವಿಚಾರಿಸಿದಳು.
"ತುಂಬಾ ಸಂತೋಷವಾಯ್ತು ನೀನು ಸೆಟಲ್ ಆಗಿದ್ದು ನಮ್ಮ ಹಳ್ಳಿಯೇ ಹೆಮ್ಮೆ ಪಡಬೇಕಾದ ಹುಡುಗ" ನೀನು ಎಂದಳು. ಬೈಕ್ ಮುಟ್ಟಿ ಸಂಭ್ರಮಿಸಿದಳು.
" ಶಶಿ ಬೈಕ್ ಚೆನ್ನಾಗಿದೆ. ನೆನ್ನೆ ತಾನೆ ಭಾಸಿ ಬಂದಿದ್ದ ಅವನೂ ಕಾರ್ ತಗೊಂಡಿದ್ದಾನೆ. ನೆನ್ನೆ ಎಲ್ಲಾ ಲಾಂಗ್ ಡ್ರೈವ್ ಹೋಗಿದ್ದೆವು."
ನನ್ನ ಸಂಭ್ರಮದ ಬಲೂನ್ ಒಡೆದು ಹೋಯ್ತು. ಇಲ್ಲಿಯೂ ಭಾಸಿ ನನಗಿಂತ ಮುಂದಿದ್ದ. ಕಸಿವಿಸಿಗೊಂಡು ಬಂದಿದ್ದೆ
ದಿನಾ ನಾನು ಹೋಗುತ್ತಿದ್ದೆ ಅಟ್ಲೀಸ್ಟ್ ಇಲ್ಲಾದರೂ ಅವಳಿಗೆ ಡ್ರಾಪ್ ಮಾಡೋಣ ಎಂದುಕೊಂಡು ಅವಳು ನಿಲ್ಲುತ್ತಿದ್ದ ಬಸ್ ಸ್ಟಾಪಿಗೆ. ಆದರೆ ಅವಳಾಗಲೇ ಭಾಸ್ಕರನ ಕಾರ್ ಹತ್ತಿ ಹೋಗುತ್ತಿದ್ದಳು.ಒಂದು ವರ್ಷವಾಗಿದೆ.
ಈಗ ನಾನು ತೆಗೆದುಕೊಂಡಿರೋದು ಮರ್ಸಿಡೀಸ್ ಬೆಂಜ್. ಸಾಲ ಮಾಡಿಯೇ ಕೊಂಡಿದ್ದು. ಇವತ್ತು ನಾನೇ ಮುಂದೆ. ಇವತ್ತು ಗೆಲ್ಲಲೇ ಬೇಕು.
ಬಸ್ ಸ್ಟಾಪ್ ಬಂದೇ ಬಿಟ್ಟಿತು. ಕಾರ್ ನಿಲ್ಲಿಸಿ ,ಕೆಲಸಕ್ಕೆ ಹೋಗಲು ಬಸ್ಸಿಗೆ ಕಾಯುತ್ತಿದ್ದ ಧರಿತ್ರಿಯತ್ತ ವೇವ್ ಮಾಡಿದೆ.
"ವಾವ್ ಶಶಿ . ನ್ಯೂ ಕಾರಾ? ಸೂಪರ್."
"ಇವತ್ತಾದರೂ ನನ್ನ ಜೊತೆ ಬರ್ತೀಯಾ ಧರಿ?"
"ಖಂಡಿತಾ .ಬರೋದಷ್ಟೇ ಅಲ್ಲ ಲಾಂಗ್ ಡ್ರೈವ್‌ಗೆ ಹೋಗೋಣ" ಅವಳ ಕಣ್ಣುಗಳು ಸಂತಸದಿಂದ ಅರಳಿದವು.
ಕಾರ್ ಚಿಕ್ಕಬಳ್ಳಾಪುರದ ಕಡೆಗೆ ಹೋಗುತ್ತಿತ್ತು.
"ಶಶಿ ಒಂದು ಸ್ವಲ್ಪ ಹೊತ್ತು ನಿಲ್ಲಿಸ್ತೀಯಾ ನಾನು ನಿಂಜೊತೆ ಮಾತಾಡಬೇಕು." ನನ್ನ ಕಡೆಗೆ ನೋಡುತ್ತಾ ನುಡಿದಳು
ಹುಡುಗಿ ಇಷ್ಟೊಂದು ಫಾಸ್ಟ್ ಇದ್ದಾಳೆ ಪರವಾಗಿಲ್ಲ ಎಂದನಿಸಿತು ನಾನಂದುಕೊಂಡದ್ದನ್ನ ಅವಳೇ ಹೇಳಿಬಿಡಲಿ
ಎಂದುಕೊಂಡೆ ಕಾರ್ ನಿಲ್ಲಿಸಿದೆ
ಸ್ವಲ್ಪ ಹೊತ್ತು ಅಂಗೈಯನ್ನೇ ನೋಡುತ್ತಿದ್ದವಳು ಮತ್ತೆ ನನ್ನ ತ್ತ ನೋಡಿದಳು.
"ನಾನು ನಿಂಗೆ ತುಂಬಾ ದಿನದಿಂದ ಹೇಳಬೇಕಂತ ಇದ್ದೆ. ಆದರೆ ಸಮಯಾನೆ ಬಂದಿರಲಿಲ್ಲ. " ರೋಮಾಂಚನಗೊಂಡೆ. ಎದೆಯ ಬಡಿತ ನನಗೇ ಕೇಳಿಸುವಷ್ಟು ಜೋರಾಗಿತ್ತು. ಮೌನಕ್ಕೆ ಶರಣಾಗಿದ್ದೆ
"ನಂಗೆ ನೀನಂದ್ರೆ ತುಂಬಾ ಇಷ್ಟ. ಇಷ್ಟ ಅಂದ್ರೆ ಒಂಥರಾ ಅದಕ್ಕೆ ವಿವರಣೆ ಕೊಡೋಕಾಗಲ್ಲ. ನೀನು ಬುದ್ದಿವಂತ. ಹಿಡಿದ ಛಲ ಬಿಡುವ ಹುಡುಗ ಅಲ್ಲ . ಬಹಳ ಚಟುವಟಿಕೆ ಇರೋ ಅಂತೋನು. ನಿನ್ನ ಬಾಯಿ ಏನೋ ಹೇಳದಿದ್ದರೂ ನಿನ್ನ ಈ ಅರಳು ಕಂಗಳು ಎಲ್ಲಾ ಹೇಳಿಬಿಡುತ್ತೆ. ಅದರಲ್ಲಿ ಪ್ರಾಮಾಣಿಕತೆ ಇದೆ"
ನಾನು ಅವಳತ್ತ ನೋಡುವ ಸಾಹಸಕ್ಕೆ ಕೈ ಹಾಕಲಿಲ್ಲ ಆದರೆ ಎದುರಿದ್ದ ಕನ್ನಡಿಯಲ್ಲಿ ಅವಳ ಮುಖ ಕಾಣಿಸಿತು.
ಅವಳೂ ನೋಡಿದಳು
"ನಂಗೆ ಎಲ್ಲಾ ಅರ್ಥವಾಗುತ್ತೆ. "
ಮತ್ತೆ ಅವಳತ್ತ ನೋಡಿ ಬೇರೆ ಕಡೆ ಮುಖ ತಿರುಗಿಸಿದೆ ಮುಂದಿನ ವಾಕ್ಯಕ್ಕಾಗಿ ಕಾಯುತ್ತಾ
"ಆದರೆ ನಾನು ಅಸಹಾಯಕಳು. ಐ ಆಮ್ ಹೆಲ್ಪ್ ಲೆಸ್"
ಸಿಡಿಲು ಬಡಿದಂತಾಯ್ತು
ಕಣ್ಣು ಮುಚ್ಚಿದೆ
"ನಾನು ಈಗಾಗಲೆ ಭಾಸಿಗೆ ಮನಸು ಕೊಟ್ಟುಬಿಟ್ಟಿದ್ದೀನಿ. ಜೀವನ ಪೂರ್ತಿ ಅವನೊಟ್ಟಿಗೆ ಪ್ರಯಾಣ ಮಾಡೋದು ಅಂತ ನಿರ್ಧಾರ ಮಾಡಿದೀನಿ. ಹಾಗಾಗಿ ಇದು ನನ್ನ ನಿನ್ನ ಕಡೆಯ ಪ್ರಯಾಣ ಇರಬಹುದು. ದಯವಿಟ್ಟು ನನ್ನ ಬಗ್ಗೆ ಇಲ್ಲದ ಆಸೆ ಇಟ್ಟುಕೋಬೇಡ . ಇದನ್ನ ನಿನಗೆ ಬಿಡಿಸಿ ಹೇಳೋದಿಕ್ಕೆ ನಂಗೆ ಸಮಯ ಸಿಗಲಿಲ್ಲ. ನನ್ನ ಆತ್ಮೀಯ ಗೆಳೆಯ ನಮ್ಮ ಕುಟುಂಬಕ್ಕೆ ಆತ್ಮೀಯನಾಗಿರ್ತಾನೆ ಅಂತ ಬಯಸಲೇ?" ಮುಂದೆ ಕೈ ಚಾಚಿದಳು
ನನ್ನತ್ತ ಬಂದ ಕೈಗೆ ಭಾಷೆ ಕೊಡುವಂತೆ ಕೈ ಇಟ್ಟೆ.
**************************************---------
"ಸೂರ್ಯನ ಸುತ್ತಾ ಸುತ್ತುವುದು ಭೂಮಿ." ಮಗಳು ಹಾಡುತ್ತಿದ್ದಳು. ಯಾವುದೋ ಜಾಹಿರಾತಿನ ಹಾಡದು.
ಎಲ್ಲಾ ನೆನಪಾಗಿ ಒಮ್ಮೆ ಮನಸು ಭಾರವಾಯ್ತು. "ರೀ ಕಾಫಿ ತಗೊಳ್ಳಿ " ಪೂರ್ಣಿಮಾ ಕಾಫಿ ಕಪ್ ಹಿಡಿದು ನಿಂತಿದ್ದಳು. ಅವಳ ನಗೆ ನೋಡಿ ಮನಸು ಹಗುರಾಯ್ತು. ಒಮ್ಮೆ ನಕ್ಕೆ
"ರೀ ನಿಮ್ಮಫ್ರೆಂಡ್ ಭಾಸ್ಕರ ಮ್ಯಾರೇಜ್ ಆನಿವರ್ಸರಿ ಇದೆ ಸಂಜೆ ಬೇಗ ಬನ್ನಿ ಹಾಗೆ ನಮ್ಮದೂ ಸಹಾ ನಮ್ಮ ಫಂಕ್ಷನ್ ಮುಗಿಸಿಕೊಂಡು ಅವರ ಪಾರ್ಟಿಗೆ ಹೋಗೋಣ "
ಚಂದ್ರನ ಬೆಂಬಲಕ್ಕೆ ಪೂರ್ಣಿಮಾ ಇದ್ದಳು.
ಮಾತನಾಡದೆ ಅವಳನ್ನು ಬಳಿಗೆಳೆದುಕೊಂಡೆ
Tuesday, May 24, 2011
ಸವಿ ಪ್ರೀತಿಯೊಂದೆ ಮರು ಕಾಣಿಕೆ
Wednesday, May 18, 2011
ನೀನಿಲ್ಲದಿದ್ದಲ್ಲಿ
Sunday, May 8, 2011
ಶಾಪ ವಿಮೋಚನೆಯಾಗದ ಅಹಲ್ಯೆಯರು
Saturday, April 30, 2011
ಕನಸು- ನೆನಕೆಗಳು -------ನನಸುಗಳು- ವಾಸ್ತವ
Thursday, April 14, 2011
ಪ್ರೀತಿ ತ್ಯಾಗ ಗೆಳೆತನ
ಬೆಳಗ್ಗೆ ಬಂದಾಗಿನಿಂದ ಪ್ರಸನ್ನ ಕಾಣಿಸಿರಲಿಲ್ಲ .
ಆಫೀಸಿನ ಎಲ್ಲಾ ಕಡೆಯಲ್ಲೂ ಹುಡುಕಿದಾಗ ಆಫೀಸಿನ ಹಿಂದಿನ ಪಾರ್ಕನಲ್ಲಿ ನಿಂತಿದ್ದು ಕಾಣಿಸಿತು. ಮಾತಾಡಿಸೋಣ ಎಂದುಕೊಂಡು ಹೊರಟೇ ಬಿಟ್ಟೆ
ಎಲ್ಲೋ ನೋಡುತ್ತಿದ್ದರು . ನಾನು ಬಂದು ನಿಂತದ್ದೂ ಕಂಡಿರಲಿಲ್ಲ
"ಏನ್ರಿ ಪ್ರಸನ್ನ ಏನೋ ಬಹಳ ಗಹನವಾಗಿ ಯೋಚಿಸ್ತಾ ಇದ್ದೀರಲ್ಲಾ ಏನು ವಿಷ್ಯ?" ಮೆಲ್ಲಗೆ ಕೇಳಿದೆ
ಬೆಚ್ಚಿದರೆನಿಸುತ್ತದೆ. ಒಮ್ಮೆ ದಂಗಾಗಿ ಮತ್ತೆ ಉಸ್ಸೆಂದು ಉಸಿರೆಳೆದುಕೊಂಡರು.
"ಏನಿಲ್ಲಾ ಹೀಗೆ ಕತೆಗೆ ಮುಕ್ತಾಯ ಹೇಗೆ ಮಾಡೋಣ ಅಂತ ಯೋಚನೆ ಮಾಡ್ತಾಇದ್ದೇನೆ"
"ಅಲ್ಲೇ ತೊಡಕಾಗಿರೋದು ಸುಂದರ್ .ನಾಯಕಿಯ ಗಂಡ ನಾಯಕನಿಗೆ ಗೆಳೆಯ . ಗೆಳೆಯನಿಗೆ ಮೋಸಮಾಡುವುದು ತಪ್ಪು ತಾನೇ?"
"ಪ್ರಸನ್ನ . ಎಲ್ಲಾ ಕತೆಗಳಲ್ಲೂ ಸಿನಿಮಾಗಳಲ್ಲೂ ನಾಯಕ ಗೆಳೆಯನಿಗೋಸ್ಕರ ಪ್ರೀತಿನ ತ್ಯಾಗ ಮಾಡ್ತಾನೆ . ಆದರೆ ಇಲ್ಲಿ ಕತೆಗೆ ಅದೇ ಟ್ವಿಸ್ಟ್ ಆಗಿರಲಿ. ಸಾಧ್ಯವಾದಲ್ಲಿ ಈ ನಾಯಕ ಗೆಳಯನಿಗೆ ಹೀಗೆ ಪತ್ರ ಬರೆದಿಟ್ಟು ಹೋಗಲಿ. "ಡಿಯರ್ ಗೆಳೆಯ
ಪ್ರೀತಿ ತ್ಯಾಗದ ಸ್ವರೂಪ ಅಂತಾರೆ ಹಾಗೆಯೇ ನನ್ನ ಪ್ರೀತಿಯಿಂದಲೂ ಒಂದು ತ್ಯಾಗವಾಯಿತು. ಅದು ನಿನ್ನ ಮಡದಿಯ ತ್ಯಾಗ ಆಕೆ ನನಗಾಗಿ ತನ್ನ ಗಂಡನನ್ನು ತ್ಯಾಗ ಮಾಡಿದ್ದಾಳೆ. ಗೆಳೆತನ ಪ್ರೀತಿ ಇವೆರೆಡರ ನಡುವಲ್ಲಿ ಯಾವುದನ್ನು ತ್ಯಾಗ ಮಾಡಲಿ ಎಂದು ಯೋಚಿಸಿದೆ ಬಹಳವೇ ಯೋಚಿಸಿದೆ ಕೊನೆಗೆ ಗೆಳೆತನವನ್ನ ತ್ಯಾಗ ಮಾಡಬಹುದು ಎಂದೆನಿಸಿತು. ಹಾಗಾಗಿ ಇನ್ನು ನನ್ನ ನಿನ್ನ ಭೇಟಿ ಸಾಧ್ಯವಿಲ್ಲ. ಹಾಗೆಯೇ ನಿನ್ನ ಮಡದಿಯ ಭೇಟಿಯೂ . ಬಹುಷ: ಕೋರ್ಟ್ನಲ್ಲಿ ಮಾತ್ರ ಅನ್ನಿಸುತ್ತದೆ ಬಾಯ್ ಬಾಯ್ ಗೆಳೆಯ"
"ಆದರೆ ಜನ ಒಪ್ತಾರ? . ಆ ಗೆಳೆಯನಿಗೆ ಆಘಾತವಾಗಲ್ವಾ? ಗೆಳೆತನಕ್ಕೆ ಯಾವ ಬೆಲೆಯೂ ಇಲ್ವಾ"
"ಪ್ರೀತಿ ಕುರುಡು . ಅದು ಯಾವುದನ್ನೂ ನೋಡೋದಿಲ್ಲ . ನೋಡಿದರೂ ಬೆಲೆ ಕೊಡೋದಿಲ್ಲ." ನಕ್ಕೆ
"ಆಯ್ತು ಸುಂದರ್ ಕತೆಗೆ ಒಂದು ವಿಭಿನ್ನ ಅಂತ್ಯ ಹೇಳಿದ್ದಕ್ಕಾಗಿ ಧನ್ಯವಾದ" ಪ್ರಸನ್ನ ನಕ್ಕರು. ಅವರ ಕಣ್ಣಲ್ಲಿ ಮಿಂಚು ಕಾಣಿಸುತ್ತಿದೆಯೇ?
ಎಲ್ಲೋ ಕತೆ ನಿಜವಾಗುತ್ತಿದೆಯೇ ಎಂದನಿಸುತ್ತಿತ್ತು. ಪ್ರಸನ್ನ ಅವರ ಕತೆಯ ಮುಂದಿನ ಭಾಗ ಪ್ರಿಂಟ್‌ಗೆ ಹೋಗಿತ್ತು.
ಮರುದಿನ
ಎಲ್ಲವನ್ನೂ ಜೊತೆಗೆ ಗಂಡನನ್ನೂ ತೊರೆದು ಬರಲು ಸಿದ್ದವಾಗಿದ್ದ ಮಂದಾಕಿನಿ ನನ್ನ ಪ್ರೇಯಸಿ ಪ್ರಸನ್ನರವರ ಮಡದಿಯಾಗಿದ್ದಾಕೆ ಏರ್ ಪೋರ್ಟಿನಲ್ಲಿ ನನಗಾಗಿ ಕಾದು ನಿಂತಿದ್ದಳು . ಅವಳನ್ನು ನೋಡಿದ ಕೂಡಲೆ ಪ್ರಸನ್ನರಿಗೆ ಆಗಲೇ ಸಿದ್ದ ಪಡಿಸಿಕೊಂಡಿದ್ದ ಮೆಸೇಜ್ ಕಳಿಸಿದೆ
"
ಡಿಯರ್ ಗೆಳೆಯ
ಪ್ರೀತಿ ತ್ಯಾಗದ ಸ್ವರೂಪ ಅಂತಾರೆ ಹಾಗೆಯೇ ನನ್ನ ಪ್ರೀತಿಯಿಂದಲೂ ಒಂದು ತ್ಯಾಗವಾಯಿತು. ಅದು ನಿನ್ನ ಮಡದಿಯ ತ್ಯಾಗ ಆಕೆ ನನಗಾಗಿ ತನ್ನ ಗಂಡನನ್ನು ತ್ಯಾಗ ಮಾಡಿದ್ದಾಳೆ. ಗೆಳೆತನ ಪ್ರೀತಿ ಇವೆರೆಡರ ನಡುವಲ್ಲಿ ಯಾವುದನ್ನು ತ್ಯಾಗ ಮಾಡಲಿ ಎಂದು ಯೋಚಿಸಿದೆ ಬಹಳವೇ ಯೋಚಿಸಿದೆ ಕೊನೆಗೆ ಗೆಳೆತನವನ್ನ ತ್ಯಾಗ ಮಾಡಬಹುದು ಎಂದೆನಿಸಿತು. ಹಾಗಾಗಿ ಇನ್ನು ನನ್ನ ನಿನ್ನ ಭೇಟಿ ಸಾಧ್ಯವಿಲ್ಲ. ಹಾಗೆಯೇ ನಿನ್ನ ಮಡದಿಯ ಭೇಟಿಯೂ . ಬಹುಷ: ಕೋರ್ಟ್ನಲ್ಲಿ ಮಾತ್ರ ಅನ್ನಿಸುತ್ತದೆ ಬಾಯ್ ಬಾಯ್ ಗೆಳೆಯ"
ಪ್ರಸನ್ನರಿಗಾಗಿರಬಹುದಾದ ಆಘಾತವನ್ನ ಊಹಿಸಿಕೊಳ್ಳಲಿಲ್ಲ . ಊಹಿಸಿಕೊಂಡರೂ ಪ್ರೀತಿ ಕುರುಡಲ್ಲವೇ? ಬೆಲೆಕೊಡಲಿಲ್ಲ. ಮಂದಾಕಿನಿಯ ಹೆಗಲಮೇಲೆ ಕೈಹಾಕಿ ಕರೆದೊಯ್ದೆ.