Monday, December 17, 2012

ಪ್ರೇಮ ಕಾವ್ಯ

ಗೆಲ್ಲುವೆನೆಂದರೂ ಗೆಲ್ಲಲಾಗದ 
ಸೋಲುವೆನೆಂದರೂ ಸೋಲಲಾಗದ
ನಿಲ್ಲಿಸುವೆನೆಂದರೂ ನಿಲ್ಲಿಸಲಾಗದ
ಸುಂದರ ಪಂದ್ಯ
ನನ್ನ ನಿನ್ನ ಪ್ರೇಮ ಕಾವ್ಯ

ನಂಬೆನೆಂದರೂ ನಂಬುವ
ನೆಚ್ಚೆನೆಂದರೂ ನೆಚ್ಚುವ
ಮೆಚ್ಚೆನೆಂದರೂ ಮೆಚ್ಚುವ
ಚಿತ್ತಾಪಹಾರಿ ಬಾಣಗಳು
ನಿನ್ನ ಚೇತೋಹಾರಿ ಕಂಗಳು

ಸುಳ್ಳೆಂದರೂ ಸುಳ್ಳೆನಿಸದ
ಹುಚ್ಚೆಂದರೂ ಹುಚ್ಚೆನಿಸದ
ಕೇಳೆನೆಂದರೂ ಕೇಳಬೇಕೆನಿಸುವ
ಸುಂದರ ಶ್ರಾವ್ಯ ಕಾವ್ಯಗಳು
ನಿನ್ನ ಕಿವಿಗಿಂಪಾದ ಮಾತುಗಳು

ಹೋಗೆಂದರೂ ಹೋಗಲಾಗದ
ಬಿಡು ಎಂದರೂ ಬಿಡಲಾಗದ
ಸುಡು ಎಂದರೂ ಸುಡಲಾಗದ
ಅಮೃತಧಾರೆಯ ಸ್ವಪ್ನಗಳು
ನನ್ನ ಅನುಪಮ ಭಾವಗಳು

ಹಿತ-ವಚನಗಳು


ನುಡಿಗಳಿಗಂಜಿ ನಡೆದೊಡೆ
ಮೂಕನ ಮಾಡಿ ನಡು ಹಿಡಿದು
ಬಗ್ಗಿಸುವರಯ್ಯ , ನುಡಿಯಬೇಕು
ನುಡಿಗಳಿಗೆ ಬೆದರದೆ
ಮತ್ತೊರ್ವರ  ಮನ ನೋಯಿಸದೆ

ಕತ್ತಲೆಂದು ಕಣ್ಮುಚ್ಚಿ ಕೂತಿರೆ
ಸುತ್ತ ಬೆಳಕ ಸುರಿಮಳೆಯಾದರೂ
ನೀ ಬೆಳಕಿಗೆಂದೂ ಕುರುಡೇ

ಅರಿಯಲಾರೆನೆಂದು ಹಟ ಹಿಡಿದರೆ
ಹರಿ ಕೂಡ ಉರಿಸಲಾರೆನು
ನಿನ್ನೆದೆಯ ಜ್ನಾನದ ದೀಪವ

ಸುರಿವ ಸಿರಿಯ ಮದದಿ
ಹಳಿಯೇ ಉಳಿದವರ ನೋಡಿ.
ಅಳಿದೀತು ಸಂಬಂಧ.
ಮುಂದೆ
ಸಿರಿ ಕರಗೀತು
ನಂಟಲ್ಲ

Thursday, December 13, 2012

ಬೀಟಾ ಮಹಿಳೆ :-ಪರಿಪೂರ್ಣ ಮಹಿಳೆ


ಬೀಟಾ ಮಹಿಳೆ :-ಪರಿಪೂರ್ಣ ಮಹಿಳೆ
ಈಕೆ ನೀವು ಕಾದು ಕುಳಿತಂತಹ ಅಥವ ಪ್ರತಿ ಗಂಡೂ ಬಯಸುವಂತಹ ಹೆಣ್ಣು..
ಈಕೆ ಮಧುರತೆ ಮೈವೆತ್ತವಳು, ಕೇರಿಂಗ್ ನೇಚರ್, ತಾಯೀ ಪ್ರೀತಿ ತೋರುವಂತಹವಳು, ಅವಳು ನಿಜವಾದ ಹೆಣ್ತನದ ಗುಣ ಹೊತ್ತಿರುವವಳು
ಅಡುಗೆ, ಹಾಡು,ಮನೆ ಅಲಂಕಾರ, ಕ್ಲೀನಿಂಗ್, ಮತ್ತು ಇಂಟಿರೀಯರ್ಸ್ ಅವಳಿಗೆ ಆಸಕ್ತಿಯ ವಿಷಯಗಳು.
ಅವಳಿಗೆ ಯಾವಾಗ ಮೌನವಾಗಿರಬೇಕು ಮತ್ತು ಯಾವಾಗ ತನ್ನ ಅಭಿಪ್ರಾಯ ಹೇಳಬೇಕೆಂಬ ಪರಿಜ್ನಾನವರುತ್ತೆ. ಮಹತ್ವಾಕಾಂಕ್ಷೆ ಅವಳಿಂದ ದೂರ.
ಈ ವರ್ಗದ ಮಹಿಳೆಯವರು ಆದ್ಯಾತ್ಮಿಕ,ಧಾರ್ಮಿಕರು ಮತ್ತು ಭಾವುಕರು,
ಮತ್ತೊಬ್ಬರನ್ನು ಹಿಂಬಾಲಿಸುವುದರಲ್ಲಿ ಅವಳಿಗೆ ಬೇಸರವಿಲ್ಲ.ಮತ್ತು ಹೊಸದರ ಬಗ್ಗೆ ಸಂಶೋದನೆ ಮಾಡುವ ಗೋಜಲಿಗೆ ಹೋಗೋದಿಲ್ಲ
ಹೆಣ್ಣು ಆಳಬೇಕೆಂಬ ನಿಯಮವೇನೂ ಅವಳಿಗೆ ಬೇಕಿರೋದಿಲ್ಲ ಸಾಂಪ್ರದಾಯಿಕವಾಗಿ ಹೆಣ್ಣು ಹೇಗಿರಬೇಕೋ ಹಾಗೆ ಇರುವುದರಲ್ಲಿ ನೆಮ್ಮದಿ ಕಾಣುವವರು
ಗಂಡನನ್ನ , ಮಕ್ಕಲನ್ನ ಅಚ್ಚುಕಟ್ಟಾಗಿ ನೋಡಿಕೊಳ್ಳುವ ಸ್ವಭಾವದಳು,
ನಾನು ಆಲ್ಫಾ ಮಹಿಳೆಯಾಗಬೇಕೆಂಬ ಕನಸನ್ನೂ ಸಹಾ ಕಾಣದವಳು,
ಅವಳಿಗೆ ಸ್ತ್ರೀ ವಾದಿಗಳನ್ನ ಕಂಡರೆ ಒಳಗೊಳಗೆ ಕೋಪ
ಆಕೆ ಅತ್ಯುತ್ತಮ ಗೃಹಿಣಿಯಾಗಬಲ್ಲಳು
ತನ್ನ ಗಂಡನಿಗೆ ಇಷ್ಟವಾಗುವ ಹಾಗೆ ಅಲಂಕರಿಸಿಕೊಳ್ಳುವುದರಲ್ಲಿ ಅವಳಿಗೆ ಸಂತೋಷ. ಅವಳಿಗೆ ಗಂಡ/ಗೆಳೆಯ ನೇ ರಾಜ
ಗಂಡನ ಆಳ್ವಿಕೆಗೆ ಒಳಪಡಿಸಿಕೊಳ್ಳೋದರಲ್ಲಿ ಅವಳಿಗೆ ಆಸಕ್ತಿ ಹೆಚ್ಚು.
ಕಣ್ಣೀರು ಅವಳಿಗೆ ತನ್ನೆಲ್ಲಾ ಆಸೆಗಳನ್ನು ಈಡೇರಿಸಿಕೊಳ್ಳುವ ಸಾಧನ.

ಬೀಟಾ  ಹುಡುಗಿಯರ ತೊಂದರೆಗಳು
ಇವರು ಬುದ್ದಿಶಾಲಿಗಳ ವರ್ಗಕ್ಕೆ ಸೇರೋದಿಲ್ಲ
ಏನಾದರೂ ಹೊಸವಿಷಯಗಳು ಬಂದಾಗ ಮಾತಾಡುವುದಿರಲಿ ಅದನ್ನು ಅರ್ಥ ಮಾಡಿಕೊಳ್ಳುವ ಗೋಜಿಗೂ ಹೋಗುವುದಿಲ್ಲ
ಏನನ್ನೇ ಆಗಲಿ ಪ್ರಶ್ನಿಸದೆ ಒಪ್ಪಿಕೊಳ್ಳುವ ಮನೋಭಾವ ಹೊಂದಿರುವುದರಿಂದ ಸ್ವಾತಂತ್ರಕ್ಕೆ  ಅರ್ಥವೇ ಇರೋದಿಲ್ಲ.
ಆಲ್ಫಾ ಪುರುಷ ಅಥವ ಮಹಿಳೆ ಇವಳ ಮೇಲೆ ಸುಲಭವಾಗಿ ಸವಾರಿ ಮಾಡಬಹುದು

Wednesday, December 12, 2012

ಆಲ್ಫಾ ಮಹಿಳೆ : ಹೀಗೊಂದು ವಿಶಿಷ್ಟ ಬಗೆಯ ಹೆಣ್ಣು


ನೀವು ಆಲ್ಫಾ ಮಹಿಳೆಯೇ ಅಥವ ಆಲ್ಫಾ ಮಹಿಳೆಯ ಜೊತೆಗಾರರೇ?
ಹೀಗೆ ಮೊನ್ನೆ ಜಾಲತಾಣಗಳಲ್ಲಿ ಈಜಾಡುತ್ತಿದ್ದಾಗ ಕಣ್ಣಿಗೆ ಕಂಡದ್ದು ಒಂದು ಪದ ಆಲ್ಫಾ ಫೀಮೆಲ್ ಅಥವ ಆಲ್ಫಾ ವುಮನ್.... ನನಗಂತೂ ಈ ಪದ ಹೊಸದಾಗಿತ್ತು. ಪದಾರ್ಥ ಚಿಂತಾಮಣಿಯಲ್ಲಿ ಇದಕ್ಕೆ ಸರಿ ಸಮಾನವಾದ ಪದ ಯಾವುದಾದರೂ ಇದೆಯೇ ಅಂತ ಕೇಳಿದೆ. ಮುಂಚೂಣಿಯ ನಾಯಕತ್ವದ ಅಥವ ನಾಯಕಿ ಅನ್ನೋ ಅಭಿಪ್ರಾಯಗಳು ಬಂದವು
ನಂಗೆ ಯಾವುದೂ ಈ ಪದಕ್ಕೆ ಸರಿ ಸಮಾನ ಅನ್ನಿಸಲಿಲ್ಲ ಅದಕ್ಕೆ ಆಲ್ಫಾ ಮಹಿಳೆ ಅಂತಾನೆ ಉಪಯೋಗಿಸುತ್ತೇನೆ

ಅಷ್ಟಕ್ಕೂ  ಯಾರೀ ಮಾಯಾಂಗನೆ ಆಲ್ಫಾ ಮಹಿಳೆ?
೧. ಈಕೆ ಚೆಲುವೆ, ಸುಂದರಿ, ನೋಡಿದೊಡನೆ ಗಮನ ಸೆಳೆಯಬಲ್ಲ ಚಾಲಾಕಿ, ಅದರೆ ಚೆಲುವೊಂದೆ ಬಂಡವಾಳವಲ್ಲ. ಚೆಲುವೆಯಾಗಿಲ್ಲದಿದ್ದರೂ ಇತರರನ್ನೊ ಹಿಡಿದಿಡಬಲ್ಲಂತಹವಳು
೨. ಇತರ ಹೆಂಗಸರ ಮೆಚ್ಚುಗೆಯೊಡನೆ ಹೊಟ್ಟೆಕಿಚ್ಚಿಗೆ ಬೀಳುವಾಕೆ
೩. ಗಂಡಸರಿಗಂತೂ ನೆಚ್ಚಿನಾಕೆ
೪ ಈಕೆ ಪವರ್ ಫುಲ್ ಹೆಣ್ಣು, ಎಂತಹುದೇ ಕಷ್ಟ ಬಂದರೂ ಅಂಜದೆ ನಡೆಯುವಾಕೆ
೫.ಹೋದಲ್ಲೆಲ್ಲ ಈಕೆ ನಾಯಕಿಯಾಗುವ ಮನೋಭಾವದವಳು,
೬ ಅತೀ ಎನ್ನಬಹುದಾದ ಆತ್ಮ ವಿಶ್ವಾಸ. ಇದು ಅವಳ ಹುಟ್ಟು ಸ್ವಭಾವ
೭ ಈಕೆಯ ಮತ್ತೊಂದು ವಿಶಿಷ್ಟ ಗುಣವೇನೆಂದರೆ ಈಕೆ ಆಳುವ ಮನೋಭಾವದಳು, ಇದು ಆಕೆಗೆ ಪಾಸಿಟೀವ್ ಮತ್ತು ನೆಗೆಟೀವ್ ಗುಣವನ್ನ ಸೂಚಿಸುತ್ತೆ
೮ ಈಕೆ ಬಲಶಾಲಿ, ಅಂದರೆ ದೈಹಿಕವಾಗಿ ಅಲ್ಲ ಮಾನಸಿಕವಾಗಿ .. ಎಂತಹುದೇ ಯುದ್ದಕ್ಕೂ ರೆಡಿ
೯. ಈಕೆ ಸದಾ ಬ್ಯುಸಿಯಾಗಿರಬೇಕೆಂದು ಬಯಸುತ್ತಾಳೆ.
೧೦ಸುಮ್ಮನೆ ಕೂರಲು ಆಕೆ ಇಷ್ಟವಿರೋದಿಲ್ಲ. ಸದಾ ಏನಾದರೊಂದು ಕೆಲಸ ಮಾಡ್ತಾ ಇರುವ ಸ್ವಭಾವ
೧೧. ಆಲ್ಫಾ ಮಹಿಳೆಯ ಪ್ರಬಲ ವಿರೋಧಿ ಎಂದರೆ ಬೀಟಾ ಅಥವ ಅದಕ್ಕಿಂತ ಕೆಳಗಿನ ಪುರುಷವರ್ಗದವರು(ಬೀಟಾ ಪುರುಷರು : ಇವರು ಯಾವುದೇ ರಿಸ್ಕ್ ತೆಗೆದುಕೊಳ್ಳಲು ರೆಡಿ ಇರೋದಿಲ್ಲ. ಇದ್ದುದರಲ್ಲೇ ತೃಪ್ತಿ ಪಡುವವರು. ಮತ್ತು ಮುನ್ನುಗ್ಗುವ ಗುಣವಿಲ್ಲದಿರುವವರು) ಇಂತಹವರಿಗೆ ಆಲ್ಫಾ ಮಹಿಳೆ ಇಷ್ಟವಾಗೋದಿಲ್ಲ
೧೨ಈಕೆ ಸಹಜ ನಾಯಕತ್ವ ಗುಣ ಹೊಂದಿರುವವರಾದ್ದರಿಂದ ಬೀಟಾ ಕ್ಯಾಟೆಗರಿಯ ಪುರುಷ ಮತ್ತು ಮಹಿಳೆಯರು ಇವರನ್ನು ಹಿಂಬಾಲಿಸಲೇಬೇಕಾಗಿರುತ್ತೆ
೧೩ಈಕೆಗೆ ತನ್ನ ಸೌಂದರ್ಯದ ಬಗ್ಗೆ ಸಹಜ ಹೆಮ್ಮೆ ಇರುವುದರಿಂದ , ಅದನ್ನು ತನ್ನ ಏಳಿಗೆಗೆ ಉಪಯೋಗಿಸಿಕೊಳ್ಳಲು ಹಿಂಜರಿಯುವುದಿಲ್ಲ(ಪುರುಷರನ್ನ ಆಕರ್ಷಿಸಿಯೂ ಗೊತ್ತಾಗದಂತೆ ತನ್ನ ಕೆಲಸವನ್ನು ಮಾಡಿಸಿಕೊಳ್ಳುತ್ತಾಳೆ . ಮತ್ತು ಅವರನ್ನು ಆಕರ್ಷಿಸಿದ್ದು ಗೊತ್ತೇ ಆಗದ ಹಾಗೆ ನಟಿಸಿ ಅವರನ್ನ ದೂರವಿಡುತ್ತಾಳೆ)
೧೫ ಇಷ್ಟೆಲ್ಲಾ ಪ್ರಭಾವಶಾಲಿಯಾಗಿರುವ ಈ ಆಲ್ಫಾ ತನಗಿಂತ ಪ್ರಭಾವಶಾಲಿ(ಆಲ್ಫಾ ಪುರುಷ) ಪುರುಷನಿಗೆ ಸೋತು ಶರಣಾಗುತ್ತಾಳೆ.

ಆಲ್ಫಾ ಮಹಿಳೆಯ ತೊಂದರೆಗಳು
೧  ಈಕೆ ನಾಟಕೀಯ ಸನ್ನಿವೇಶಗಳನ್ನು ಸೃಷ್ಟಿಸಿ ಇತರರ ಕನಿಕರ ಗಿಟ್ಟಿಸುವಲ್ಲಿ ಯಶಸ್ವಿಯಾದರೂ, ಅದು ಬಹಳ ಕಾಲ ನಿಲ್ಲೋದಿಲ್ಲ
೨ಈಕೆಗೆ ಹೊಟ್ಟೆಕಿಚ್ಚು ಮತ್ತು ಪೊಸೆಸೀವ್ ನೆಸ್ ಜಾಸ್ತಿ
೩ಈಕೆಯೊಡನೆ ಜಗಳ ಶುರು ಹಚ್ಚಿದರೆ ದೇವರೇ ಕಾಪಾಡಬೇಕು ನಿಮ್ಮನ್ನ ಅಷ್ಟು ಸುಲಭವಾಗಿ ಸೋಲುವವಳಲ್ಲ
೪.ತುಂಬಾ ಮುಖ್ಯವಾದುದೆಂದರೆ ಅವಳನ್ನು ಅಡುಗೆ ಮನೇಲಿ ಕೂಡಿ ಹಾಕಬೇಡಿ. ಆಕೆ ಅದಕ್ಕೆ ಒಗ್ಗುವಾಕೆ ಅಲ್ಲ

ನೀವು ಆಲ್ಫಾ ಮಹಿಳೆಯಾಗಿದ್ದಲ್ಲಿ...
೧. ನೀವು ಕಾಲೇಜು/ಸ್ಕೂಲು ಎಲ್ಲಾ ಕಡೆಯಲ್ಲಿಯೂ ಒಂದಕ್ಕಿಂತ ಹೆಚ್ಚು ಚಟುವಟಿಕೆಯಲ್ಲಿ ತೊಡಗಿದ್ದಿರಿ(ಗಿರುತ್ತೀರಿ).ಎಲ್ಲ ರಂಗಗಳಲ್ಲೂ ಮುನ್ನುಗ್ಗುವ ಗುಣ ಹೊಂದಿರುತ್ತೀರಾ. ಕ್ಲಾಸ್ ಲೀಡರ್/ ಕಾಲೇಜ್/ಸ್ಕೂಲ್ ರೆಪ್ರೆಸೆಂಟೇಟಿವ್/ ಆಗಿರುತ್ತೀರ.
೨. ಆಫೀಸಿನಲ್ಲಿ ಎಲ್ಲರ ಕೇಂದ್ರ ಬಿಂದುವಾಗಲೂ ಸಾಧ್ಯವಿದ್ದಷ್ಟೂ ಪ್ರಯತ್ನಿಸುತ್ತೀರಿ . ಮತ್ತು ಹೆಚ್ಚು ಜವಾಬ್ದಾರಿಯನ್ನ ಹೊತ್ತುಕೊಳ್ಳುತ್ತೀರಿ. ಬಹುಬೇಗ ಮೇಲ್ದರ್ಜೆಗೆ ಏರಲು ಹವಣಿಸುತ್ತೀರ.(ಸುಮ್ಮನೆ ಕತ್ತೆಯ ಹಾಗೆ ಕೆಲಸ ಮಾಡುವುದಿಲ್ಲ . ಆ ಕೆಲಸಕ್ಕೆ ನೀವೇ ಬೇಕು ಎನ್ನುವ ಅಗತ್ಯವನ್ನು ಸೃಷ್ಟಿಸುತ್ತೀರ)
೩. ನೀವು ಸೋಲನ್ನು ಒಪ್ಪುವುದಿಲ್ಲ/ಸೋಲುವುದಿಲ್ಲ. ಸೋತರೂ ಮತ್ತೆ ಗೆಲುವಿನ ಹಾದಿ ಸಿಗುವ ತನಕ ಕೈ ಚೆಲ್ಲುವುದಿಲ್ಲ
೪.ಒಂದು ಯಶಸಿಗೆ ತೃಪ್ತಿ ಹೊಂದುವುದಿಲ್ಲ . ಉದಾ: ಒಂದು ಸೈಟ್ ಮಾಡಿ ಸುಮ್ಮನಿರುವ ಜಾಯಮಾನ ನಿಮ್ಮದಲ್ಲ. ಅಥವ ಈಗಿರುವ ಕೆಲಸದಲ್ಲಿ ಕೈ ತುಂಬ ಹಣ ಬರುತ್ತಿದ್ದರೂ ಅದಕ್ಕಿಂತ ಉತ್ತಮವಾದ ಕೆಲಸಕ್ಕೆ ಕೈ ಚಾಚುತ್ತಲೇ ಇರುತ್ತೀರ, ನಿಮ್ಮದು ನಿಲ್ಲದ ಓಟ,
೪.ಒಂದು ದಿನ ಕೂಡ ಮನೆಯಲ್ಲಿ ಸುಮ್ಮನೆ ಕೂರಲಾಗೋದಿಲ್ಲ. ಏನೋ ಕಳೆದುಕೊಂಡಂತೆ ಆಗುತ್ತಿರುತ್ತೆ.
೫.ನಿಮ್ಮ ಬಾಯ್ ಫ್ರೆಂಡ್/ಜೊತೆಗಾರರು/ ನಿಮ್ಮ ಪುರುಷ ಸಹೋದ್ಯೋಗಿಗಳ ಬಳಿ ಯಾವ ಚಿಕ್ಕ ಸಹಾಯವನ್ನೂ ಬಯಸುವುದಿಲ್ಲ ಮತ್ತು ಕೇಳುವುದಿಲ್ಲ. ಅವರಾಗಿಯೇ ನಿಮ್ಮ ಸಹಾಯಕ್ಕೆ ಬಂದರೆ ಬೇಡ ಎಂದರೂ ನಿಮ್ಮ ಕೆಲಸಕ್ಕೆ ಅವರು ಸಹಾಯಮಾಡಿದರೆ ಒಂದು ಹೆಮ್ಮೆ ನಿಮ್ಮಲ್ಲಿ ಮೂಡುತ್ತದೆ
೬ ಇತರ ಹೆಂಗಸರು ಇಷ್ಟ ಪಡುವ ಕರುಳು ಹಿಂಡುವ ಸೆಂಟಿಮೆಂಟಲ್ ಸಿನಿಮಾಗಳಿಗೆ ಮೂಗು ಮುರಿದು ತಿರಸ್ಕರಿಸುತ್ತೀರಾ. ಪ್ರೀತಿ ಪ್ರೇಮದ ಅತೀ ಉತ್ಫ್ರೇಕ್ಷೆ ನಿಮ್ಮಲ್ಲಿ  ನಿಕೃಷ್ಟತೆ ಉಂಟು ಮಾಡುತ್ತೆ
೮. ಸಿನಿಮಾಟಿಕ್ ಆಗಿರೋ ಸನ್ನಿವೇಷಗಳು, ಇತರರಿಗೆ ಅಯ್ಯೋ ಎಂದನಿಸುವ ಘಟನೆಗಳಿಗೆ ನೀವು ನಿರ್ಲಿಪ್ತರಾಗಿರುತ್ತೀರ.ನಿಮ್ಮ ಮಟ್ಟಿಗೆ ಅದೊಂದು ಅಂಥಾ ದೊಡ್ಡ ಬಿಲ್ಡ್ ಅಪ್ ಕೊಡುವಂತಹದುಲ್ಲ
೯ಒಮ್ಮೆ ಕೆಲಸದಲ್ಲಿ ಯಶಸ್ವಿಯಾಗುತ್ತಿದ್ದಂತೆ ಇದ್ದಕಿದ್ದಂತೆ ಮತ್ತೆ ಹೆಚ್ಚು ಓದುವ ಮನಸಾಗುತ್ತೆ. ಓದು ಒಂದು ಹಂತಕ್ಕೆ ಬಂದೊಡನೆ ಹೆಸರು ಮಾಡಬೇಕೆಂಬ ಹಂಬಲ ಬರುತ್ತೆ.
೧೦ಇಷ್ಟೆಲ್ಲಾ ಆದರೂ ಯಾವಾಗಲೋ ಒಮ್ಮೆ ನಾನೂ ಕೂಡ ಎಲ್ಲ ಅಮಹಿಳೆಯರಂತೆ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂಬ ಭಾವನೆ ಮೂಡುತ್ತೆ.

ಇನ್ನು ನೀವು ಆಲ್ಫಾ ಮಹಿಳೆಯೇ ಅಲ್ಲ್ವ ಅನ್ನೋದು ನಿಮ್ಮ ಅನಿಸಿಕೆ :)

Sunday, December 9, 2012

ಸ್ವಪ್ನದಾರಿಯಲ್ಲಿ

ಅರೆ ನಿಮಿಲೀತ ಕಂಗಳಲ್ಲಿ ಚಿತ್ತಾರದ ಸುಳಿವು
ನಿದ್ದೆ ಇದ್ದರೂ ಇರದಂತಹ ಚೆಂದದ ಅರಿವು
ಸ್ವಪ್ನದಾರಿಯಲ್ಲಿ ನೀನಿತ್ತ ಮುತ್ತುಗಳ ಹರಿವು
ಸುಪ್ತಮನಸಿನಲ್ಲೂ ನಿನ್ನದೆ ನೆನಪಿನ ಕಸುವು

ಸೊಗಸೆನ್ನಲೇ ಮನದಕ್ಯಾನ್ವಾಸಿನ ನಿನ್ನ ಚಿತ್ರವಾ?
ಬೊಗಸೆಯೊಳೆತ್ತಿ ಕೊಡಲೇ ನಿನಗೆ ನನ್ನೀ ಮನವಾ?
ರಭಸದಿಂ ಸದ್ದಿಲ್ಲದೆ ಹರಿವ ಈ ಪರಿಯೇ ನೀರವ
ಸುಮನಸು ಬಿರಿದಂತೆ ನಗುವ ನಗೆ ಎನಗೆ ಅಮೃತ

Wednesday, December 5, 2012


(ಪುಟ್ಟ ಪುಟ್ಟ ಹನಿಗಳು)

ನೆನಪು
ನಿನ್ನಿಂದ ನಾ ದೂರವಿದ್ದರೂ
ನೀ ದೂರವಿಲ್ಲ
ತುಟಿ ನಸು ಬಿರಿಯಲು
ನಿನ್ನ ನೆನಪಿದೆಯಲ್ಲ
**************************************
ಚಲನೆ -ಲಲನೆಯರು

ಕಣ್ಣ ಚಲಿಸದಿರು ಅತ್ತ ಇತ್ತ ಓ    ಇನಿಯ
ಲಲನೆಯರು ಸುತ್ತಮುತ್ತ
,ಬೆದರುವುದು ಹೃದಯ ..................
**************************************
ಕಣ್ -ಕಣ್ ಸರಸ

ನೀ ಎದುರು ಕೂತಾಗೆಲ್ಲ
ನಾ ಮಾತನಾಡುವುದಿಲ್ಲ
ಎಂದೆಲ್ಲ ದೂರುವೆಯಲ್ಲ
ಕಣ್ ಕಣ್ ಜೊತೆಯಲಿ
ಸರಸವಾಡಲಿ
ಬಿಟ್ಟು ಬಿಡು ನಲ್ಲ

**************************************
ರಂಗೋಲಿ

ನೂರು ಚುಕ್ಕಿ ಇಟ್ಟರೂ ರಂಗೋಲಿ
ಪೂರ್ತಿಯಾಗಲು ಎಳೆ ಇರಲೇ ಬೇಕು
ನಾನು ಏನೇ ನುಡಿದರೂ ಮಾತಲಿ
ರಂಗು ಬರಲು ತುಂಟ ನಿನ್ನ ನವಿರಿರಬೇಕು
**************************************

Saturday, November 24, 2012

ಮೀರಾ


ಮದುವೆ ಮೆರವಣಿಗೆ ಜೋರಾಗಿ ನಡೆಯುತ್ತಿತ್ತು.
ಅರಮನೆಯ ಪುಟ್ಟ ಬಾಲೆ ಮೀರಾ ಅಂತ: ಪುರದ ಸಖಿ ವೀಣಾಳನ್ನ ಕೇಳಿದಳು . "ಇದು ಏನು?" " ಅದು ಮದುವೆ"
"ಮದುವೆ ಅಂದ್ರೆ ಏನು?"
"ಒಬ್ಬ ವರನಿಗೆ ಒಬ್ಬ ವಧು ಜೊತೆಯಾಗಿ ಜೀವನ ಪೂರ್ತಿ ಇರೋದು. "
"ಅದು ಎಲ್ಲರೂ ಮಾಡಿಕೊಳ್ಳೋದು. ನೀನು ಸಹಾ" ಅವಳ ಪುಟ್ಟ ಕೆನ್ನೆ ಹಿಂಡಿ ನುಡಿದಳು
" ನನ್ನ ವರ ಯಾರು" ಮುದ್ದು ಮೊಗವನ್ನು ಇನ್ನೂ ಮುದ್ದಾಗಿ ಮಾಡಿಕೊಳ್ಳುತ್ತಾ ಕೇಳಿದಳು
ವೀಣಾಗೆ ಪೇಚಾಟಕಿಟ್ಟುಕೊಂಡಿತು
ತಾನೆ ಉಡುಗೊರೆಯಾಗಿ ನೀಡಿದ್ದ ಕೃಷ್ಣನ ವಿಗ್ರಹವೊಂದನ್ನು  ತೋರಿಸಿ "ಇವನೇ ನಿನ್ನ ಗಂಡ" ಎಂದು ನುಡಿದಳು
ಆ ವಿಗ್ರಹ ಮೀರಾ ಮನಸಲ್ಲಿ ನಿಂತು ಬಿಟ್ಟಿತು. ಯಾವುದೋ ಜನ್ಮ ಜನ್ಮಾಂತರದ ನಂಟಿನಂತೆ ಭಾಸವಾಗಿ. ಆಕೆ ಅವನನ್ನ ಆರಾಧಿಸಲು ಶುರು ಮಾಡಿದಳು
ಮುಂದೆ  ಮೀರಾಳ ತಾಯಿ ಮೃತ್ಯು ಹೊಂದಿದಳು ಮೀರಾಗೆ ಐದಾರು ವರ್ಷವಿರಬೇಕು. ಇತ್ತ ಮೀರಾ ತಂದೆ ರತನ್ ಸಿಂಗ್ ರಾಜಾಸ್ಥಾನದ ಮೇರತ್‍ನ ದೊರೆ , ರಾಜಕಾರ್ಯಗಳಲ್ಲಿ ತೊಡಗಿದ, ಆದರೆ ಕೃಷ್ಣನ ಆರಾದನೆಯಲ್ಲಿ ತೊಡಗಿದ ಮೀರಾಗೆ ತಾನೆಂದೂ ಒಂಟಿ ಎಂದನಿಸಲಿಲ್ಲ.
ಅಲ್ಲಿಂದ  ತಾತನ ಮನೆಯಲ್ಲಿ ಬೆಳೆಯಲಾರಂಭಿಸಿದಳು ಮೀರ, ಕೃಷ್ಣನ ವಿಗ್ರಹಕ್ಕೆ ಸ್ನಾನ , ಅಲಂಕಾರ, ಅದರ ಜೊತೆಯಲ್ಲಿಯೇ ನಿದಿರೆ ಹೀಗೆ ಅವಳ ದಿನಚರಿ ಸಾಗುತ್ತಿತ್ತು.
ಹೀಗೆ ಬೆಳೆದು ವಯಸ್ಕಳಾದ ಮೇಲೆ ಒಮ್ಮೆ ಒಂದು ರಾತ್ರಿ ಕೃಷ್ಣನ ಜೊತೆಯಲ್ಲಿ ಮದುವೆಯಾದಂತೆ ಕನಸು ಕಂಡಳು
(ಇನ್ನೂ ಇದೆ...)

ಲಲಿತಾ-ಮೀರಾ


ಆ ಬಾಲೆ ಚಿಕ್ಕ ವಯಸಿಗೇ ಮದುವೆಯಾಗಿ ಬೃಂದಾವನಕ್ಕೆ ಬಂದಿದ್ದಳು, ಗೆಳತಿಯರೆಲ್ಲಾ ಹೇಳಿದ್ದರು. "
"ಹೇ ಲಲಿತಾ ಅಲ್ಲಿ ಒಬ್ಬ ಮುದ್ದು ಮುದ್ದು ನೀಲಿ ಹುಡುಗ ಇದ್ದಾನೆ. ಅವನಿಗೆ ಮನ ಸೋಲಬಹುದು ಹುಶಾರು"
ಲಲಿತಾ ನಕ್ಕಿದ್ದಳು
’ ಹೇ ಹೋಗ್ರೇ. ನಾನು ಎಲ್ಲರಹಾಗಲ್ಲ"
ಹಾಗೂ ಹೀಗೂ ಆ ದಿನ ಬಂದೇ ಬಿಟ್ಟಿತು. ಗಾಡಿಯಲ್ಲಿ ಹತ್ತಿ ಗಂಡನ ಮನೆಯತ್ತ ಬರುತ್ತಿದ್ದಾಕೆಗೆ ಕಂಡದ್ದು ಬಿದ್ದು ಹೋದ ಮನೆಗಳು. ಜನರಿರದ ಬೀದಿಗಳು.
ಬಿರುಗಾಳಿಯಂತೆ ದೋ ಎಂದು ಸುರಿಯುತ್ತಿದ್ದ ಮಳೆ. ಒಂದು ಸಣ್ಣ ಜೀವಿಯೂ ಕಾಣಲಿಲ್ಲ, ಗಾಡಿ ಬಿಟ್ಟು ಗಾಡಿ ಹೊಡೆಯುವಾತ ಓಡಿ ಹೋದ. ಮಳೆಯಲ್ಲಿಯೇ ನೆನೆದುಕೊಂಡು ಗೊತ್ತಿರದ ಆ ಸ್ಥಳದಲ್ಲಿ ಅಲೆದಾಡುತಿದ್ದ ಆ ಕಿಶೋರಿಯ ಕಂಗಳಿಗೆ ಆ ದೃಶ್ಯ ಬಿತ್ತು.
ಕಡು ನೀಲಿ ಬಣ್ಣದ ಹುಡುಗ, ಕಪ್ಪುಕಂಗಳು, ತಲೆಯಲ್ಲಿ ನವಿಲುಗರಿ, ಹಳದಿ ಬಣ್ಣದ ಉಡುಗೆ ತೊಟ್ಟ, ಚಂದದ ಬಾಲಕ ಒಂದಿಡೀ ಪರ್ವತವನ್ನೇ ತನ್ನ ಕಿರುಬೆರಳಲ್ಲಿ  ಅನಾಯಾಸವಾಗಿ ಎತ್ತಿ  ಹಿಡಿದಿದ್ದಾನೆ.
ಅಷ್ಟೇ ಲಲಿತೆ ಸೋತು ಹೋದಳು..................... ಆ ಹುಡುಗನಿಗೆ, ಪ್ರೀತಿ ಉಕ್ಕಿಹರಿಯಿತು . ಆಗಲೆ ಅವಳ ಅರಿವಿಗೆ ಬಂದಿದ್ದು ಆ ಪರ್ವತದ ಕೆಳಗೆ  ಬೃಂದಾವನದ ಅಷ್ಟೂ ಜನ  ತಂಗಿದ್ದಾರೆ. ಆ ಪರ್ವತದ ಹೆಸರು ಗೋವರ್ಧನ ಗಿರಿ
ಆ ಹುಡುಗ ಗೋವರ್ಧನ ಗಿರಿಧಾರಿ ಎಂದಷ್ಟೇ ಅವಳ ಮನಸಿಗೆ ಬಂತು. ಅವನು ಜನ್ಮ ಜನ್ಮಾಂತರದ ಪ್ರೇಮಿ ಎಂದನಿಸಿಬಿಟ್ಟಿತು ಆಕೆಗೆ
 ಮೂಕಳಾಗಿ ಹೋದ ಲಲಿತೆಯನ್ನ   ಆ ನೀಲಿ ಹುಡುಗ ನೋಡಿ ಒಮ್ಮೆ ನಕ್ಕ, ಕಂಗಳಲ್ಲೇ ಬಾ ಎಂದು ಕರೆದ. ಆ ಕರೆಗೆ ಸ್ಪಂದಿಸುವ ಮುನ್ನವೇ ವಿಧಿ ಅವಳನ್ನ ತನ್ನ ಬಳಿ ಸಿಡಿಲಿನ ರೂಪದಲ್ಲಿ ಬಲಿಯಾಗಿ ಕರೆದುಕೊಂಡಿತು.
ಆದರೆ ಆ ಗೋವರ್ಧನ ಗಿರಿಧಾರಿಯನ್ನ ಮಾತ್ರ ಆಕೆ ಮರೆಯಲಿಲ್ಲ
ಆಕೆಯೇ ಮೀರಾ................... ಮೀರಾ ಬಾಯಿ

Thursday, November 15, 2012

ಮಿಲನ-


ಉಸಿರಿಗೆ ಉಸಿರು ಸೇರಿ
ಉಸಿರಿಗೂ ಉಸಿರು ಬಂತು
ದೇಹಕೆ ದೇಹ ನೇಹವೇ
ಪ್ರೇಮದಾತ್ಮಕೂ ಜೀವ ತಂತು

ತನುವಿನಣು ಅಣುವಿಗೂ ಕಾತುರ
ಅಣು ಅಣುವಿನ ಆಲಿಂಗನಕೆ
ಕಣಕಣದಲಿ ರೋಮಾಂಚನ
ರೋಮ ರೋಮದಾ ಸ್ಪರ್ಷಕೆ

ಅಧರಾಧರದ ಸಮರದಲಿ
ಗೆದ್ದವರಾರೋ ಸೋತವರಾರೋ
ನಯನಾಯನಗಳ ಬಂಧನದಿ
ಸೋಲು ಗೆಲುವುಗಳೇ ಬದಲಾದವೋ

ತೋಳುಗಳ ಬೆಸೆತದಿ ಆದವೆರೆಡೂ
ಎದೆಬಡಿತಗಳು  ಒಂದು
ಭೂ ಮಂಚದಿ ಒರಗಿದ ದೇಹಕೆ
ಬಲಿಷ್ಟ ತೋಳೇ ದಿಂಬು

 ಇಳೆಗೆ ಮಳೆಯಾದಂತಹ ಅನುಭವ
ಪುರುಷ  ಪ್ರಮಿಳಾ ಮಿಲನದಾ ಸಂಭ್ರಮ
ತನು ತನುವಿನ ಬೆಸೆತದಲ್ಲೂ ಅನುರಣ
ಜೀವವೊಂದಾಗುವ ಕ್ಷಣ ಅನುಪಮ

ಸೃಷ್ಟಿಗೋ, ಸುಖಕೋ , ಸವಿಗೋ
ಅನುಭವಕೋ ಇರಲಿ ಏನೆ ಕಾರಣ
ಸೃಷ್ಟಿ, ಸ್ಥಿತಿ ಲಯಗಳ ಕರ್ತರಿಗೊ
ಅನಿವಾರ್ಯದಾನಂದ ಈ ಮಿಲನ
 

ಸ್ವಗತ (ರಾಣಿ ಅಮೃತ ಮತಿ)


ಸಖಿ ಯಾರವನೆ ಈ ಗಂಧರ್ವಗಾನದೊಡೆಯ
ಮೊಗ ನೋಡದೇನೆ  ಮೆಚ್ಚಿದೆ ನಾ ದನಿಯ
ಹೇಗಿದ್ದರೇನು ಕದ್ದವನಾದ ಈ ಮನದಿನಿಯ

ಹೆಸರಿನಂತೆ ಅವನಿದ್ದರೂ ಅಷ್ಟಾವಕ್ರ
ಮಾರನ ಮೀರಿಸುವಾತ ನನಗೆ ಮಾತ್ರ
ಏನಾದರಾಗಲಿ ಈ ರೂಪು ಅವನಿಗೆ ಸ್ವಂತ

ಇದ್ದರೂ  ಸುರಸುಂದರ ಪತಿ ಚಂದ್ರಹಾಸ
ಮೊಗದ ಮೇಲೆ ಮಾಸದ   ಮಂದಹಾಸ
ನನಗೀ ವಕ್ರನೇ ಇಷ್ಟ ನೋಡಿದುವೇ ಪರಿಹಾಸ

ತಡವಾಗುತಿದೆ, ತಾರೆನ್ನ ಪರದೆಯ
ಹೊದ್ದು ಸೇರುವೆ ಬೆಚ್ಚಗೆ ಅವನೆದೆಯ
ಇಲ್ಲವಾದಲ್ಲಿ ಕೇಳಬೇಕಾದೀತು ಬೈಗುಳವ

ಏನು ಮಾಡಲೇ ಸಖಿ ಹೊಡೆದರೂ
ಅವನೆನಗೆ ಬಡಿದು ಬೈದು ಒದ್ದರೂ
ಇರಲಾರೆ ಕಣೆ ನಾ ಅವನ ಬಿಟ್ಟು
 
ಹೆಣ್ಣು ಮನಸಿದು ,  ಬರಿಯ ನದಿಯಿದು
ಮನಸಾದೆಡೆ ದಿಕ್ಕು ನೋಡದೆ ಹರಿವುದು
ಕೊಳಕು ಶುಭ್ರ ಬೇಧ ತೋರದು

Sunday, September 23, 2012

ನೆನಪೆಂಬ ಹಾಯಿ ದೋಣಿಯಲ್ಲಿ ಹಾಗೆ

ನೆನಪೆಂಬ ಹಾಯಿ ದೋಣಿಯಲ್ಲಿ ಹಾಗೆ 
ಒಮ್ಮೆ ಅಡ್ಡಾಡುವ ಅಂತ ದೋಣಿ ಹತ್ತಿದೆ, 
ದೋಣಿ ನಡೆಸುವ ಅಂಬಿಗ ನೀ ನೆಂದು ಅರಿಯದೆ

ಮನಸನೆಲ್ಲಾ ಒಮ್ಮೆ ಚೆಲ್ಲಿ ಖಾಲಿ ಮಾಡುವ 
ಅಂತ ಮನಸನ್ನೆ ತಿರುಗಿಸಿ ಬಗ್ಗಿಸಿದೆ,
ಬೀಳದಂತೆ ಭದ್ರವಾಗಿ ನೀ ಕೂತಿರುವೆ ಎಂದು ಮರೆತೆ

ಮರಳಿ ಬಾರದ ಕನಸಿನ ಊರಿಗೆ ಒಬ್ಬಳೇ 
ಹೋಗುವೆ ಎಂದು ಪಯಣಕೆ ಸಿದ್ದಳಾದೆ
ಆ ಊರ ತುಂಬ ನಿನ್ನದೇ ನಗೆ ಗುರುತ ಗುರುತಿಸದೆ

ಏಳು ಹೆಜ್ಜೆಗಳು ಯಾರದ್ದಾದರೇನು ಅಂದುಕೊಂಡು
ಮಂಟಪದಿ ಕೂತೆ ತಲೆ ತಗ್ಗಿಸಿ
ಪ್ರತಿ ಹೆಜ್ಜೆಗೂ ಘಲ್ಲೆನುವ ಗೆಜ್ಜೆ ನೀನೆಂಬುದ ಮರೆತೆ

ತಾಳಿ ತಾಳಿ ತಾಳಿಗೂ ಬೇಸರ ಬಂದಿತೇನೋ
ನೆನ್ನೆ ಹೀಗೆ ತಾಳಿ ಕಳೆಯಿತು
ಕಳೆದ ಮಾತ್ರಕ್ಕೆ ಬಿಡುಗಡೆಯಲ್ಲ ಎಂಬುದ ಅರಿಯದೆ

Saturday, September 8, 2012

ಜೋಡಿ ಮಂಚ


ಜೋಡಿ ಮಂಚ
ರಾತ್ರಿ ಹತ್ತು ಘಂಟೆಯಾಗಿತ್ತು. ಜೋಡಿ ಮಂಚದ ಮೇಲಿನ  ಒಂಟಿತನಕ್ಕಿಂತ ತಿರಸ್ಕೃತನಾದೆ ಎಂಬ ನೋವು  ನನ್ನ ಒಂಟಿಯಾಗಿ ಇರಲು ಬಿಟ್ಟಿಲ್ಲ .ಈಗಲೂ ಅವಳದೇ ನೆನಪು. ನೆನ್ನೆ ಮೊನ್ನೆ ಮದುವೆಯಾದಂತಿದೆ ಆಗಲೇ ಅವಳು ಡೈವೋರ್ಸ್‍ಗೆ ಅರ್ಜಿ ಸಲ್ಲಿಸುತ್ತೇನೆ ಅಂತ ಅಂದು ಮನೆ ಬಿಟ್ಟಳು. . ಈ ಸಂಪತ್ತಿಗೆ ಪ್ರೀತಿಸಿ ಮದುವೆಯಾಗಬೇಕಿತ್ತಾ?ಅಪ್ಪ ಅಮ್ಮನ್ನ ಬಿಟ್ಟು ನನ್ನ ಸ್ಕೂಟರ್ ನಲ್ಲಿ ಕೂತು ಬಂದವಳಿಗೆ ವರ್ಷ ಕಳೆಯುತ್ತಿದ್ದಂತೆಯೇ ಸ್ಕೂಟರ್ ಬೇಡವಾಯ್ತೇ ಥೇಟ್ ನನ್ನ ಬಯಸಿಬಂದವಳಿಗೆ ನನ್ನ ಸಾದಾತನ ಇಷ್ಟವಾಗದ ರೀತಿಯೇ ಅಚ್ಚರಿ. ಪ್ರೀತಿಯನ್ನ ಅರೆದು ತಿಂದು,ಬದುಕುತ್ತೇವೆ ಅಂದಿದ್ದವಳಿಗೆ  ಮನೆಯಲ್ಲಿನ ಊಟ ಹಿಡಿಸದೇ ಹೋಯ್ತೇ. ಕೊನೆಗೆ ನನ್ನ ಬಡತನವೇ ನನಗೆ ನನ್ನ ಪ್ರೀತಿಗೆ ಮುಳಿವಾಯ್ತಾ? ಅಪ್ಪ ಹೇಳಿದ ಮಾತು ಕೇಳದೆ ಈ ಸಿನಿಮಾ ಫೀಲ್ಡ್‍ಗೆ ಬಂದು ಜುನಿಯರ್ ಅರ್ಟಿಸ್ಟ್ ಆಗಿ. ಈಗೀಗ ಹೀರೋ ಫ್ರೆಂಡ್ ಗ್ರೂಪ್ ನಲ್ಲಿ ಒಬ್ಬನಾಗಿ ಬರೋ ಸಾವಿರ ಎರೆಡುಸಾವಿರಕ್ಕೆ  ನೂರೆಂಟು ಮಾತು ಕೇಳಿ........... ಅಬ್ಬಾ........... ಛೇ ಮತ್ತೇನಿದು ಮತ್ತೆ ಅದೇ ಹಳೇ ಕತೆ. ಆದರೂ ಅವಳು ಒಮ್ಮೆಯಾದರೂ ನೆನೆಸಿಕೊಳ್ಳಬಾರದೇ? ಒಂದು ಸಲ ಅಜೇಯ್ ಸಾರಿ ಕಣೋ ಅಂದರೆ ಸಾಕು ............ ಮತ್ತೆ ನನ್ನ ಬೆಚ್ಚನೆಯ ಪುಟ್ಟ ಗೂಡಲ್ಲಿ ಕರೆದುಕೊಳ್ಳಬಲ್ಲೆ ಆದರೆ ಅವಳಿಗೆ ಬೇಕಿರೋದು ಬಂಗಲೆ........ ಪ್ರೀತಿ ಗೂಡಲ್ಲ. ಬರೀ ಪ್ರೀತಿಲಿ ಸಂಸಾರ ಮಾಡಕಾಗಲ್ಲ , ಪ್ರೀತಿ ದುಡ್ದು ಕೊಡಲ್ಲ, ನಂಗೆ ಊಟ ಕೊಡಲ್ಲ ಅಂದು ಹೋದಳು..........ಯಾಕೋ ನಡುಗೋಡೆ ಮೇಲೆ ನಡೀತಿದ್ದೀನಿ. ಅವಳದೇ ತಪ್ಪು ಅಂತ ಹೇಳೋಕಾಗಲ್ಲ ಅನ್ಸುತ್ತೆ. ಅವಳ ಪ್ರತಿಭೆಗೆ ಮನ್ನಣೆ ಕೊಡಲಿಲ್ಲ . ಕೇವಲ ನನ್ ಹೆಂಡತಿ  ಮಾತ್ರ ಅಂದುಕೊಂಡೆ. ಆದರೂ ಅವಳಲ್ಲಿ ಹೆಣ್ಣೊಬ್ಬಳು ಇದಾಳೆ ಅವಳಿಗೂ ಅವಳದೇ ಆಸೆ, ಆಕಾಂಕ್ಷೆ ಇರುತ್ತೆ ಅನ್ನೋದನ್ನ ಏಕೆ ಮರೆತೆ. ಅವಳಲ್ಲ್ಲಿ ಓದು ಇದೆ ಕೆಲಸಕ್ಕೆ ಹೋಗ್ತೇನೆ ಎಂದಳು ಅದಕ್ಕೆ  ಒಪ್ಪಲಿಲ್ಲ. ಬಹುಷ; ಅವಳು ನನಗಿಂತ ಹೆಚ್ಚು ಓದಿದಾಳೆ ಅನ್ನೋದು ನನ್ನ ಗಂಡೆಂಬ ಅಹಂ ಒಪ್ಪಲಿಲ್ಲವೋ ಏನೋ. ಕೆಲಸಕ್ಕೆ ಹೋಗಬೇಡ ಎಂದ್ದಿದ್ದು ತಪ್ಪಾಯಿತು ಅಥವ ಹಾಗೆಂದೂ ಅವಳ ಪುಟ್ಟ ಪುಟ್ಟ ಶಾಪಿಂಗ್ ಆಸೆ ಈಡೇರಿಸಲಾಗದ್ದು ನನ್ನ ಅಸಹಾಯಕತೆಯೋ . ಒಟ್ಟಿನಲ್ಲಿ ಈಗ ನನ್ನ ಜೊತೆ ಬಿಟ್ಟಾಯ್ತು. ಆದರೂ ಒಂದು ಸಲ ಕಾಲ್ ಮಾಡಲಾ ? ನಾನೆ ಕಾಂಪ್ರಮೈಸ್ ಆಗಿಬಿಡಲಾ ಮೆಸೇಜ್ ಮಾಡಿಬಿಡಲಾ? ನೋಡಿದರೆ ಮತ್ತೆ ಬರ್ತಾಳಾ? ನಡುಗುವ ಕೈಗಳಿಂದ ಮೊಬೈಲ್ ಕೈಗೆತ್ತಿಕೊಂಡೆ.  ಟಣ್ ಟಣ್ ..... ಮೊಬೈಲ್ ಮೆಸೇಜ್ ಬಂದಿತ್ತು. ಅದು ಚಿನ್ನುದೇ " ಸಾರಿ  ಅಜ್ಜು, ನಾ ಮನೆ ಮುಂದೆ ಬಂದಿದೀನಿ . ಬಾಗಿಲು ತೆಗೆಯೋ . ನಂಗೆ ನಿನ್ನ ಬಿಟ್ಟಿರಕೆ ಆಗಲ್ಲ . ಇನ್ಯಾವತ್ತು ಹೊರಗಡೆ ಹೋಗಲ್ಲ . ಪ್ಲೀಸ್"
ಅಚ್ಚರಿಯಲಿ ಸಂಭ್ರಮ ಎನ್ನುತ್ತಾರಲ್ಲ ದು ಇದೇ ಇರಬಹುದೆನಿಸಿತು ಬಾಗಿಲ ಬಳಿ ಓಡಿ ತೆಗೆದೆ. ಚಿನ್ನು ನಿಂತಿದ್ದಳು....... "ಚಿನ್ನು ಸಾರಿ ಕಣೇ ನಾನೂನು..... ತಪ್ಪು ಮಾಡಿಬಿಟ್ಟೆ"  ತಬ್ಬಿಕೊಂಡ ದೇಹಗಳಲ್ಲಿ  ಗಾಢ ಗಂಭೀರತೆ ಮಾತ್ರ ಕಾಣುತ್ತಿತ್ತು.

ದುಡುಮ್ .......ಮಂಚದಿಂದ ಕೆಳಗೆ ಬಿದ್ದಿದ್ದೆ. ಚಿನ್ನು ಬಂದಿದ್ದು ಕನಸಿನಲ್ಲಿ ನಿಜವಾಗಿ ಅಲ್ಲ................ ಎದ್ದು ಮತ್ತೆ ಮಲಗಿದೆ ಅದೆ ಜೋಡಿ ಮಂಚದಲ್ಲಿ ಒಂಟಿಯಾಗಿ....................

Tuesday, September 4, 2012

ಶಕುಂತಲಾ


ಏನೆಲ್ಲಾ ಆಸೆ ಹುಟ್ಟಿಸಿದೆ
ರಾಜನಾಗಿಯೂ ಪೋರನಾಗಿ
 ಮನಸ ಕದ್ದ್ದು ನಕ್ಕಿದ್ದೆ

ದುಂಬಿ ಮೊಗವ ಕಾಡಿತು
ದುಂಬಿಯ ಸರಿಸಿದೆಯೋ
ಮನದ ತೆರೆ ಎಳೆದೆಯೋ
ನೀ ಮನಸ ಕಾಡಿದೆ

ನೆಪ ಮಾತ್ರಕೆ ನೆಲದತ್ತ
ನಾ ನೋಟ ಹರಿಸಿದ್ದೆ ,
ಹೃದಯವದು ಆಗಲೇ
 ವಾಲಿತ್ತು ನಿನ್ನೆಡೆಗೆ

ಒಪ್ಪಿಗೆಯೇ? ಎಂದೂ ಕೇಳಲಿಲ್ಲ
ಅಪ್ಪುಗೆಗೆ ಪಕ್ಕಾಗಿದ್ದೆ
ಕೈ ಹಿಡಿದೆಳೆದವನ ಕೈ
ಕೊಸರಲೂ ಮನಸಿದು
ಒಪ್ಪಲಿಲ್ಲ

ಮೈ ಮನ ಸೂರೆಗೊಂಡು
ಮನಸಾದವಳ ಬಳಿಗೆಳೆದು
ನೀನಾಡಿದ ಮಾತುಗಳ
ನಂಬಿದ್ದೆ ಮಗುವಿನಂತೆ


ಕೆನ್ನೆಗೆ ತುಟಿಯ ಉಂಗುರ
-ವನಿಟ್ಟು ,ಚಿನ್ನದ ಉಂಗುರ
 ಕೊಟ್ಟೆ ನೀ, ನಿನ್ನ
ನೆನಪಾಗಲಿಕ್ಕೆ, ಅದು ಬೇಕಿತ್ತೇ?

ಮುನಿ ಶಾಪವೋ  ನಾ ಮಾಡಿದ ಪಾಪವೋ
ನೀ ಕೊಟ್ಟ ಉಂಗುರವೇ ಹಾವಾಗಿ ಕಳೆದಿತ್ತು
 ಎಷ್ಟು ಕಠೋರ ನಿನ್ನೀ ಗಂಡು ಮನ
ಮರೆತಿದ್ದೆ ಅಯ್ಯೋ ನೀ ನನ್ನ

ಮರೆಯುವುದು, ತೊರೆಯುವುದು
ಹೊಳೆ ದಾಟಿದ ಮೇಲೆ ಅಂಬಿಗನ
ಮರೆತಷ್ಟೆ ಸುಲಭವೇ ನಿಮಗೆ
ನಿನ್ನಂಥ ಕಪಟಿಗಳಿಗೆ?

ಬಾಳಬಲ್ಲೇ ನಾನೂ ,ವಿಧಿಯದು ಕ್ರೂರ
ಇರಬಹುದು, ನಿನ್ನಂತೆ ಕಲ್ಲು  ನಾನಲ್ಲ
ಕಂದ  ನನಗೆ ಮಾತ್ರ
ಈತ ಇನ್ನು ನಿನ್ನವನಲ್ಲ

Monday, September 3, 2012

ಕನಸುಗಳ ಹಾವಳಿ


ಆತ ನೆನಪಾಗುತ್ತಿರುತ್ತಾನೆ ಹೋದಲ್ಲಿ ಬಂದಲ್ಲಿ ಕೂತಲ್ಲಿ . ತಿಂಗಳಾಯ್ತಷ್ಟೆ ಅವನಿಂದ ದೂರವಾಗಿ, ಬಂದಷ್ಟೆ ವೇಗವಾಗಿ ಹೊರಟವನ ತಡೆಹಿಡಿದು ನಿಲ್ಲಿಸಲು ಅವಳ  ಗತಿ ಸಹಾಯಿಸಲಿಲ್ಲ . ಅವನಿಲ್ಲವಾದರೇನು ಬದುಕಿದೆ.  ಸಾವಿರಾರು ಅಡಿಗಳಿರುವ  ದಾರಿಯಲ್ಲಿ ಅವನು ಬಂದ ಸಾಗಿದ ಅಳತೆ ಸೆಂ ಮೀಗಳಲ್ಲಿ.. ಅದಕ್ಕೇಕೆ ದುಗುಡ ದುಮ್ಮಾನ  ಎಂದುಕೊಂಡು  ಲ್ಯಾಪ್‍ಟಾಪ್ ನತ್ತ ಕಣ್ಣು ಹಾಯಿಸಿದಳು.
 ಮತ್ತಿವ ಹಾಯ್ ಎನ್ನುತಿದ್ದಾನೆ . ಪರಿಚಿತನಾಗಿ ವರ್ಷವಾಯ್ತು ಕೇವಲ .  ಅವ ಪ್ರಿಯನಾಗಿದ್ದ ಈಗ ಸ್ನೇಹಿತನೂ ಅಲ್ಲ. ಈತ ಸ್ನೇಹಿತನಾಗಿರುವಾತ ಪ್ರಿಯನಾಗಲೇ ಎಂದು ಕೇಳುತ್ತಿದ್ದಾನೆ. " ನೆನ್ನೆ ನನ್ನ ಕನಸಲ್ಲಿ ನೀವು  ಬಂದಿದ್ದಿರಿ .ನಿಮ್ಮ ಕನಸಲ್ಲಿ ನಾನು ಬರೋ ದಿನ ಯಾವತ್ತು?" ಸ್ಮೈಲ್ ಹಾಕಿ ಕೇಳುತ್ತಿರುವಾತನಿಗೆ ಉತ್ತರಿಸಲೇ ಬೇಕಿತ್ತು.
"ಮೊನ್ನಿನ ಕನಸಲ್ಲಿ ಅವನಿದ್ದ . ಇಂದು ನೀವು ,ನಾಳೆ ಮತ್ತೊಬ್ಬನಿರಬಹುದು . ಬದಲಾವಣೆ ಕೇವಲ ಪಾತ್ರಗಳದ್ದು. ಮತ್ತೇನು ವಿಶೇಷವಿಲ್ಲ . ಹೀಗಾಗಿ ಕನಸುಗಳ ಹಾವಳಿಯೇ ಬೇಡ ಅಂತ ಅವಕ್ಕೆಲ್ಲಾ ಗುಡ್ ಬೈ ಹೇಳಿದ್ದೇನೆ. ನನ್ನ ನನ್ನ ಪಾಡಿಗೆ ಬದುಕಲು ಬಿಟ್ಟು ಬಿಡಿ." ಹೀಗಂತ ಬರೆದು ಕೂತವಳಿಗೆ ಬದುಕು ಎಳೆದತ್ತ ಸಾಗುವುದರಲ್ಲಿ ಅರ್ಥ ಕಂಡುಕೊಳ್ಳಬೇಕಿದೆ  ಎಂದನಿಸಿ ಮನಸನ್ನ ಸಿದ್ದಗೊಳಿಸಲಾರಂಭಿಸಿದಳು..

Sunday, September 2, 2012

ಋಣಮುಕ್ತಳಾಗುವೆಡೆ

ಹೊರಟೆ ನಾ ಬಂಧಗಳ ಮೀರಿ.
ಕಟ್ಟುಪಾಡುಗಳ ಗಾಳಿಗೆ ತೂರಿ

ನನ್ನ ಸರಿ ನಿನಗೆ ತಪ್ಪು
ನಿನ ಸರಿ ಎನಗೆ ಆಪತ್ತು
ಎಂಬೆಲ್ಲಾ ಗೋಳುಗಳ ಮಾಡಿ
ಸವಾರಿ

ಅಂಕೆ ಜಾಲಗಳಲಿ ಬೀಳದೆ
ಅನುಬಂಧಗಳ ನೆಲೆಗೆ ನಿಲ್ಲದೆ
ಶಂಕೆಗೆಡೆ ಮಾಡಡ ಎಡೆಗೆ
ನಾ ಪರಾರಿ

ಎಲ್ಲಿ ಹೋದರೂ ಜಗವೇ
ಎಲ್ಲಿ ಹೋದರೂ ಜನರೇ
ಶೂನ್ಯ ತಾಣವ ಕಂಡು ಹಿಡಿದು
ನಾನಾಗಲೇ  ಕೋಲಂಬಸ್?

ಪ್ರೀತಿಗೆ ಒಮ್ಮೊಮ್ಮೆಒಂದೊಂದು ರೂಪ
ಒಮ್ಮೆ ಕಾಮ , ಒಮ್ಮೆ ನೆಲೆ ಒಮ್ಮೆ ಅಗತ್ಯ
ಒಮ್ಮೆ ಸಂಬಂಧ. ಪ್ರೀತಿಯೇ ಕಾಮರೂಪಿ
ಅದಕೇಕೇ ಇಂತಹ ಹಪಾಹಪಿ

ಪ್ರೀತಿ ಬಿಟ್ಟು ,,ಬಂಧವ ಸುಟ್ಟು
ಹೊರಡಲೇಬೇಕಿದೆ ಋಣಮುಕ್ತಳಾಗುವೆಡೆ
ಯಾರೂ ಇಲ್ಲದೆಡೆ, ಜಗವೆ ಕಾಣದ ಕಡೆ
ಮನದ  ಶಾಂತಿಗೆ


Friday, August 24, 2012

ಕಾಲದ ಮಹಿಮೆ


ಬದಲಾಗಿ ಹೋಯ್ತೇ ಕಾಲ ,
ಬದಲಾಗಿ ಹೋದೆನೇ ನಾನು
ಅಂದಿನ ಮುಗ್ಧತನ ಕಳೆದುಹೋಯ್ತೇ
ಅರಳು ಕಂಗಳ , ಅಚ್ಚರಿಯ ನೋಟವದು ಎಲ್ಲಿ ಹೋಯಿತು
ವರ್ಷಗಳುರುಳಿದಂತೆ ಮಾಯವಾಯಿತು
ಅದು ನಾನೇನಾ ಅಥವ ಇದು ನಿಜಾವೇ ನಾ?
ಅರಿಯದಾಗದ ಗೊಂದಲ

ಆಧುನಿಕತೆಯಡಿಯಲ್ಲಿ ಸಿಲುಕಿ ಕದಲಿರುವೆನೇ
ಇಲ್ಲ ಸಂಪ್ರದಾಯಕ್ಕೆ ಕನಲಿರುವೆನೇ?
ಹಳೆಯದೆಲ್ಲವೂ ಚಿನ್ನವೆಂದು ಹೇಳಿದರೂ
ಹಳೆಯದ ಹೊಸದಕ್ಕೆ ಬದಲಾಯಿಸಿಕೊಳ್ಳುವ
ಕೊಳ್ಳುವ ದ್ವಂದ್ವ ಮನಸ್ಥಿತಿಯೇ


ದೇವರಿದ್ದಾನೆಂದು ಶರಣಾಗುವ ಕಾಲದಲ್ಲಿ
ದೇವ ನೀನಿರುವೆಯಾ ನಿಜದಲ್ಲಿ?
ಎಂಬ ಭಾವ ಮನದಲ್ಲಿ
ಇದ್ದಾನೋ ಇಲ್ಲವೋ ಆ ದ್ವಂದ್ವದಲ್ಲಿ
ಮನಸದು ಬೀಳುತಿದೆ ಗೋಜಲಲ್ಲಿ

ಪತಿ ಪರದೈವ ಎಂದು ಭೀಮನಮಾವಾಸ್ಯೆಗೆ
ಪೂಜೆ ಗೈಯುವ ಹೊತ್ತಿನಲ್ಲಿಯೇ
ಹೊತ್ತಿಗಾತ ಬಾರದ ಸಿಟ್ಟಿನಲ್ಲಿ ಬೈಯ್ಯುವ ಸತಿಗೆ
ಪರ ಯೋಚನೆ ಕಾಡುದಿರುವುದೇ?

ರಾಮನನ್ನು ಪೂಜಿಸುವ ಪತಿಗೆ ಎದುರಲ್ಲಿ
ಸುಂದರಿಯ ನೋಡಲು
ರಾಧಾಲೋಲ ಮುರಳಿ ನೆನಪಾದಲ್ಲಿ
ಅಚ್ಚರಿಯೇನು

ಅಂದು ತಪ್ಪೆಂದು  ನುಡಿದದ್ದು
ಇಂದು ಸರಿಯಾಗಿ ಕಂಡರೆ
ಕಾಲದ ಮಹಿಮೆಯೆಂದು
ಸುಮ್ಮನಾಗುವುದೇ?Thursday, August 9, 2012

ದಡವಿರದ ಸಾಗರ ಭಾಗ ಐದು"ಅಮಿತಾ " ಹೆಸರನ್ನು ನೋಡಿಯೇ ಒಮ್ಮೆ ಗಾಭರಿಯಾದ ಶ್ರೀಕಾಂತ್, ................. ಅಭಿಯ ಮೊಬೈಲ್ ಕೈಗೆ ಸಿಕ್ಕಿತ್ತು . ಕಾರಿನಲ್ಲಿ ಅಪ್ಪನ ಜೊತೆ ಬರುತ್ತಿದ್ದ ಅಭಿ ಫೋನ್ ಮರೆತು ಕೆಳಗೆ ಇಳಿದಿದ್ದ.
ನ್ಯೂ ಮೆಸೇಜ್  ಅಂತಿತ್ತು
ಅ....................ಮಿ..........................ತಾ" ಇಷ್ಟೆ ಇದ್ದ ಆ ಮೆಸೇಜ್. ಆ ಹೆಸರು ಅವನಿಗೆ ಹೊಸದೇನಲ್ಲ.  ಪ್ರಿಂಟರ್ಸ್ ನಿಂದ ಹಿಡಿದು  ರಿಯಲ್ ಎಸ್ಟೇಟ್‍ವರೆಗೂ ಶ್ರೀಕಾಂತನ  ಎಲ್ಲಾ ವ್ಯವಹಾರಗಳಿಗೂ ಏಕೈಕ ಪೈಪೋಟಿ ಅಮಿತಾ ವಯಸು ಇನ್ನೂ ೨೮ ಮೀರಿಲ್ಲ ಆಗಲೇ ಪರ್ವತದಷ್ಟು ಜವಾಬ್ದಾರಿಗಳನ್ನ ನಿರ್ವಹಿಸುತ್ತಿದ್ದಾಳೆ.  ಎಲ್ಲಾ ಟೆಂಡರ್‌ಗಳಲ್ಲೂ ಏಕೈಕ ಎದುರಾಳಿ ಅವಳೇ............ ಅವಳ ಅಪ್ಪ ಅಮ್ಮ ............................. ಯೋಚಿಸುತ್ತಿದ್ದಂತೆ ತಲೆ ಸಿಡಿಯಲಾರಂಭಿಸಿತು . ಮತ್ತೆ ಆ ಯೋಚನೆಯೂ ಬೇಡವೆಂದೆನಿಸಿ.... ತಲೆ ಕೊಡವಿದ. ಅಭಿಗೂ  ಅಮಿತಾಗೂ ಹೇಗೆ ಪರಿಚಯ?
ಯಾವಾಗಿನಿಂದ? ಅಭಿಯ ಸ್ವಭಾವ ಗೊತ್ತಿಲ್ಲದ್ದೇನಲ್ಲ.............  ಆದರೆ ಅವಳ ಬಲೆಗೆ ಇವನು ಬಿದ್ದಿದ್ದರೆ ? ಬಹಳ ಚಾಣಾಕ್ಷ ಹೆಣ್ಣು ಆಕೆ.............ಅಭಿಯನ್ನೇ ಕೇಳಿಬಿಡೋದು ಉತ್ತಮ ಎಂದೆನಿಸಿತಾದರೊ  ಅವನಿಗೆ ತಾನವನ ಪರ್ಸನಲ್ ಮೊಬೈಲ್ ನೋಡಿದ್ದೇನೆ ಎಂದು ಗೊತ್ತಾದರೆ ಇಷ್ಟವಾಗಲ್ಲ ಎಂಬುದು ಗೊತ್ತಿದ್ದರಿಂದ ಸುಮ್ಮನಾದ......... ಅಭಿಯ ಆತ್ಮೀಯ ಗೆಳೆಯ ರವಿಯ ಬಳಿ ಕೇಳುವುದು ಉತ್ತಮ ಎಂದನಿಸಿತು.ಮೊಬೈಲ್ ಮತ್ತೆ ಅದೇ ಸ್ಥಾನದಲ್ಲಿ ಇರಿಸಿದ.
ಅಭಿ ಕಾರ್ ಹತ್ತಿರ ದಾಫುಗಾಲು ಇಡುತ್ತಾ ಬಂದ. "ಶ್ರೀ ನನ್ ಮೊಬೈಲ್ ಕೊಡು" ಇವನು ತನ್ನನ್ನ ಡ್ಯಾಡ್ ಅನ್ನೋದೆ ಇಲ್ಲ . ನಾನು ನಿನ್ ಫ಼್ರೆಂಡ್ ಥರಾ ಅಂದಿದ್ದೇ ತಡ ಡ್ಯಾಡ್ ಹೋಗಿ ಶ್ರೀ ಎನ್ನಲಾರಂಭಿಸಿದ. ಕಿರು ನಗೆ ನಗುತ್ತಾ ಅಭಿಗೆ ಫೋನ್ ಕೊಟ್ಟ ಶ್ರೀ. ಕೇಳಬೇಕೆನಿಸಿದ್ದನೆಲ್ಲಾ ರವಿಯ ಬಳಿ ರಾಶಿ ಹಾಕಲು ಸಿದ್ದ ಮಾಡಿಕೊಳ್ಳುತ್ತಿದ್ದ
"ಥ್ಯಾಂಕ್ ಯು ಶ್ರೀ"
ಅಭಿ ಫೋನ್  ತೆಗೆದುಕೊಂಡು ಬಂದಷ್ಟೆ ವೇಗದಲ್ಲಿ ನಡೆದ  ಆಫೀಸಿನೆಡೆಗೆ.
ಶ್ರೀಗೆ ಮತ್ತೆ ಮತ್ತೆ ಅವಳ ನೆನಪಾಗುತ್ತಿತ್ತು. ಅಮಿತಾಆಆಆಆಅ"
...........................
ಅಭಿ ಮೊಬೈಲ್ ನೋಡಿದ . ಇವಳು  ಮತ್ತೆ ಮತ್ತೆ ಮೆಸೆಜ್ ಕಳಿಸ್ತಾನೆ ಇರ್ತಾಳೆ...... ಇನ್ನೂ ಮರೆತಿಲ್ಲ ಅನ್ಸುತ್ತೆ... ಸಾಕಪ್ಪ ಸಾಕು ಎಂದೆನಿಸಿದಳಲ್ಲ . ಆ ಆರು ತಿಂಗಳು. ಮೋಜಿಗೆಂದು ಶುರು ಮಾಡಿದ್ದು ದೊಡ್ಡ ದೊಡ್ಡ ಮಾತಿನಲ್ಲಿ ಕೊನೆಯಾಯ್ತು. ಕೊನೆಗೂ ಅವಳ ಚಾಪ್ಟರ್ ಮುಗಿಯಿತು ಎಂದುಕೊಂಡರೂ ಅವಳು ಮಾತ್ರ ಆಗಾಗ ತನ್ನ ಹೆಸರನ್ನೇ ಮೆಸೇಜ್ ಮಾಡ್ತಿರ್ತಾಳೆ. ಅವಳು.............. ಅಮಿತಾ.....  ಎಂದಿನಂತೆ ಡಿಲೀಟ್ ಮಾಡಿದ
................ ................ ............. ...............
ಕಿರಣ ಮೇಡ್ಂ ಬಳಿ ಮಾತಾಡಿ ಮೂರ್ತಿಯನ್ನ ಸುಪ್ರೀತಾಳ ಜೊತೆಯಲ್ಲಿಯೇ ಇರಿಸಿಕೊಳ್ಳಲು ಒಪ್ಪಿಸಿದ್ದ. ಮೂರ್ತಿ ಕೆಂಡದ ಕಂಗಳವ....... ಸ್ಮಾರ್ಟ್ ಆದರೂ ಸಿಡುಕು ಸ್ವಭಾವ ಒರಟು  ಮಾತಿನಲ್ಲಿ ಗಡಸು...  .... ಅಮಿತಾ ಮೊದಲ ಬಾರಿ ನೋಡಿದಾಗಲೇ ನಿರ್ಧರಿಸಿಬಿಟ್ಟಿದ್ದಳು.
ಇವನೇ ತನ್ನ ಬಾಣ. ............................... ಅವಳ ಗುರಿ ತೇಜಸ್ವಿನಿ................. ಹಾಗಾಗಿಯೇ ಮೂರ್ತಿ ತೇಜಸ್ವಿನಿಯನ್ನ ಭೇಟಿಯಾಗುವಂತೆ ಮಾಡಿದ್ದಳು. ಅಂದಿನ ಪಿವಿಆರ್ ನಲ್ಲಿ ನಡೆದ ಇಡೀ ನಾಟಕದ ಸೂತ್ರಧಾರಿ ಅಮಿತಾ.......
ಆದರೆ ಅದಕ್ಕಾಗಿ ಅವಳು ಕೊಟ್ಟ ಬೆಲೆ ಮಾತ್ರ ಮೂರ್ತಿಯನ್ನು ಜನ್ಮಜನ್ಮಾಂತರಕ್ಕೂ ಅವಳ ದಾಸನಾಗಿರಿಸುವಂತೆ ಮಾಡಿತು.
ಕಿರಣ ಮತ್ತು ಸುಪ್ರೀತ ಮಾತ್ರ ಮೇಡ್ಂಗೆ ಪಾಲಿಗೆ ಮೂರ್ತಿ ಅಮಿತಾಗೆ ತಮ್ಮಿಂದಲೇ ಪರಿಚಯವಾದವನು ........ಹೀಗಿರಬೇಡ ಹಾಗಿರಬೇಡ ಮೇಡ್ಂಗೆ ಕೋಪ ಬರುತ್ತೆ ಎಂದೆಲ್ಲಾ ಊದುತ್ತಿದ್ದ ಕಿರಣ್ .......... ಮೂರ್ತಿ ನಗುತ್ತಿದ್ದನಷ್ಟೇ
..................................................................
ಹಾಗೆ ನೋಡಿದರೆ ಅಮಿತಾ ಆಗಲಿ  ತೇಜಸ್ವಿನಿ ಯಾಗಲಿ ಎಂದೂ ಮುಖಾ ಮುಖಿಯಾದದ್ದಿಲ್ಲ.. ಅಮಿತಾ ತನ್ನ ಎದುರಾಳಿ ಎಂದು ಅಭಿಗೂ ಗೊತ್ತಿದ್ದಿಲ್ಲ.  ಈ ಆರು ತಿರುವಿನ ರಸ್ತೆಯಲ್ಲಿ ತಾನೊಂದು  ಏಳನೇ  ತಿರುವಾಗಬಹುದೆಂದೂ ಹಾಗೂ ಆ ಆರೂ ಜನರ ಬದುಕಿನ ಅಂತ್ಯದ ದಾರಿ ತನ್ನಿಂದಲೇ   ಎಂಬ  ಅರಿವು ಸುಪ್ರೀತಾಗೆ ಇದ್ದಿದ್ದಲ್ಲಿ ಅವಳು ಮೈಸೂರಿನಿಂದ  ಬೆಂಗಳೂರಿಗೆ ಬರುತ್ತಲೇ ಇರುತ್ತಿರಲಿಲ್ಲ

Friday, August 3, 2012

ಕೈ ಆಡಿಸಿ ಕಣ್ ಮಿಟುಕಿಸಿ

ಹೈದರಾಬಾದ್ ಏರ್ ಪೋರ್ಟ್ನಲ್ಲಿ ಹೊಳೆದ ಸಾಲುಗಳು

ಕೈ ಆಡಿಸಿ ಕಣ್ ಮಿಟುಕಿಸಿ ಹೋದೆ ನೀನೆಲ್ಲಿ
ನನ್ನಾಡಿಸಿ, ಮನಕಾಡಿಸಿ ನಿಂತೆ ಮನದಲ್ಲಿ
ಮೆಲ್ನಗೆಯ ಜಾರಿಸಿ ನೆಲೆಯಾದೆ ನನ್ನಲ್ಲಿ
ಸುಳ್ನುಡಿಯ ಹೇಳೆ, ನಾನಿಲ್ಲ ನನ್ನಲ್ಲಿ 

ಸುತ್ತ ಮುತ್ತ ಜನರ ಕಾಣಲಿಲ್ಲ ನಾ
ಅತ್ತ ಇತ್ತ ನಿಂತವರ ನೋಡಲಿಲ್ಲ ನಾ
ಚಿತ್ತವಂತೂ ಹಾಗೆ ಸೇರಿತೇಕೆ ನಿನ್ನಾ
ಒತ್ತಿ ಮನದಲ್ಲಿ ನಿನ್ನ ಛಾಯೆಯನ್ನ

ಮದನನ ಮಂದಹಾಸ ನಿನ್ನ
ನಗೆಯಲಿ ಕೂಡಿತೋ
ಹೊಸದಿದು ಇತಿಹಾಸ ನನ್ನ
ಮನದಲಿ ಮೂಡಿತೋ

ಕಳ್ಳಮುರಳಿಯ ಕಣ್ ನೋಟಕೆ
ಮರುಳಾಗಿ ಹೋದೆ ಮೀನಾಗಿ
ಎಲ್ಲತಿಳಿದೂ ನಿನ್ ಆಟಕೆ
ಸೋತು ಹೋದೆ ಗೆಲುವಾಗಿ

Thursday, August 2, 2012

ನೀ ಹಿಂಗ ನೋಡಬೇಡ mattu ರವಿ ಬೆಳಗೆರೆ


ನೆನ್ನೆ ರಾತ್ರಿ  ರವಿ ಬೆಳಗೆರೆಯವರ "ನೀ ಹಿಂಗ ನೋಡಬೇಡ " ಕಾದಂಬರಿ ಓದಿ ಮುಗಿಸಿದೆ.
ಕೈಗೆತ್ತುಕೊಂಡದ್ದು ಮೊನ್ನೆ ರಾತ್ರಿ. ಹೇಗೆ ಓದಿಸಿಕೊಂಡು ಹೋಯ್ತೆಂದರೆ ಎಲ್ಲಿ ನಾನು ಪೂರ್ತಿ ಓದಲಿಲ್ಲವಾದಲ್ಲಿ ಶಿಶಿರಚಂದ್ರ ಶ್ರಾವಣೀನ ಕಳ್ಕೊಳ್ತಾನೋ ಅಂತ.
ದೇವರೇ ಗಿರಿಬಾಬು ಕೆಟ್ಟವನಾಗದಿರಲಿ ಅಂತ ಬೇಡ್ಕೊಂಡೆ(ಆ ದೇವರೇ ಮೂಕನಾಗಿ ಹೋಗಿದ್ದ ರವಿ ಬೆಳಗೆರೆಯವರ ನಿರೂಪಣೆಗೆ ಅನ್ಸುತ್ತೆ)
ಪ್ರತಿ ಪುಟ ಪುಟಕೂ ನವಿರು ಭಾವದೊಡನೆಯೇ ಕುತೂಹಲ , ಕುತೂಹಲದ ಅಂತ್ಯದೊಡನೆಯೇ ಯಾರ್ಯಾರ ಮೇಲೋ ಅನುಮಾನ . ಜಗನ್ ಕೆಟ್ಟವನು ಅನ್ನುತ್ತಲೇ ಅವನ ಮೇಲೊಂದು ಅನುಕಂಪದ ಅಂತ:ಕರಣ ಮೂಡಿಸೋದರಲ್ಲಿ ಅವರು ಗೆದ್ದಿದಾರೆ........ ಇದ್ದಕಿದ್ದಂತೆ ಪ್ರತ್ಯಕ್ಷವಾದ ಚಂಗಳರಾಯುಡು ಸಾಯುತ್ತಿದ್ದಂತೆಯೇ ಆ ಚಂದ್ರ ಎಂಬ ಪ್ರೀತಿಸಿದ ಎಂಬ ಕಾರಣಕ್ಕೆ  ಕೊಲೆಯಾದ ಅಮಾಯಕ ಹುಡುಗನ ಮನಸು ಮಿಡಿಯುತ್ತದೆ.... ಅವನಿಗೆ ಅಯ್ಯೋ ಅನ್ನುವುದೇ ಅಥವ ಇಲ್ಲಿಯವರೆಗೆ ಅನುಕಂಪ ಗಿಟ್ಟಿಸಿದ್ದ ಮೃಣಾಲಿನಿಯ ಮೇಲೆ ಕೋಪಗೊಳ್ಳುವುದೇ, ಅಥವ ಕಾರಣವಿಲ್ಲದೆ ಬೆಟ್ ಕಟ್ಟಿ ಇಡೀ ಸಂಸಾರವೊಂದರೊಳಗೆ ತಾನೊಂದು ಪ್ರಮುಖ ಭಾಗವಾಗಿ ಹೋದ ಶಿಶಿರನ ಮೆಚ್ಚುವುದೇ?
ಇಲ್ಲಿ ಶರ್ಮಿಳಾ ಆಂಟಿ ತುಂಬಾ ಇಷ್ಟವಾಗಿಬಿಡುತ್ತಾಳೆ............. ಎಲ್ಲಿಯೋ ಓದುಗರು ಅವಳಲ್ಲಿ ಯಾರನ್ನೋ ಗುರುತಿಸಲು ಪ್ರಯತ್ನಿಸುತ್ತಿದ್ದಂತೆ ಅವಳಿಗಿಂತ ಮೇಲೆಂಬಂತೆ ಪ್ರಶಾಂತಿನಿ ತಲೆ ಎತ್ತುತ್ತಾಳೆ....... ಅವಳು ಯಾರನ್ನ  ಹೋಲುತ್ತಿರಬಹುದು ಎಂದು ಯೋಚಿಸುತ್ತಿರುವಂತೆಯೇ ಇದ್ದಕಿದ್ದಂತೆಯೇ ಚಿರಂತ್ ಮನಸಿಗೆ ಆಪ್ತವಾಗುತ್ತಾನೆ
ಶ್ರಾವಣಿ ನನ್ನಲ್ಲೂ ಇದಾಳಾ ? ಆ ಛಲ , ಆ ಭಾವುಕತೆ ನನ್ನಲ್ಲೂ ಎಲ್ಲೋ ಒಂದಿಷ್ಟಿರಬಹುದೇ ಎಂದು ಮನಸು ಇದ್ದಕಿದ್ದ ಹಾಗೆ ಶ್ರಾವಣಿಯ ಜಾಗದಲ್ಲಿ ತನ್ನನ್ನು ಇರಿಸಲು ಪ್ರಯತ್ನಿಸುತ್ತದೆ. ಪ್ರತಿ ಪಾತ್ರಕ್ಕೂ ಅದರದ್ದೇ ಔನ್ನತೆಯನ್ನ ಅದಕ್ಕೆ ಮೂಡಿಸುತ್ತಲೇ ಅದೇ ಪಾತ್ರದ ಮತ್ತೊಂದು ಮಗ್ಗಲನ್ನೂ ಪರಿಚಯಿಸುತ್ತಾರೆ. ಇದ್ದಕಿದ್ದ ಹಾಗೆ ನೆನ್ನೆ ಶಿಶಿರ್ ಚಂದ್ರ ಎಂಬ ಆ ಟ್ಯಾನರಿ ರೋಡಿನ ಹುಡುಗನ ರೋಷಾವೇಷ ಓದುತ್ತಿದ್ದಂತೆಯೇ ರವಿಬೆಳಗೆರೆಯವರೇ ನೆನಪಾದರು............
ಇದೇ ರೀತಿ "ಹೇಳು ಹೋಗು ಕಾರಣ" ಎಂಬ ಕಾದಂಬರಿ ಓದಿದಾಗಲೂ ಆಗಿತ್ತು
ನಾನು ರವಿಬೆಳಗೆರೆಯವರ ಅಭಿಮಾನಿ ಅಲ್ಲ ಆದರೆ ಅವರ ಪ್ರತಿಯೊಂದು ಕಾದಂಬರಿ ಬರಹಗಳ ವಾಕ್ಯಗಳ ಅಭಿಮಾನಿ. ಕೆಲವೊಂದು ವಾಕ್ಯಗಳನ್ನ ಅವರು ನಮ್ಮಲ್ಲಿ ಎಷ್ಟು ಚೆನ್ನಾಗಿ ಬೇರೂರಿಸುತ್ತಾರೆ ಎಂದರೆ ತುಂಬಾ ಹಿಂದೆ ಅವರು ವಿ ಕೆ ನಲ್ಲಿ ಸೂರ್ಯ ಶಿಕಾರಿ ಎಂಬ ಕಾಲಮ್ ನಲ್ಲಿ ಬರೆಯುತ್ತಿದ್ದ ಒಂದಷ್ಟು ಹೇಳಿಕೆಗಳು ಈಗಲೂ ಮನಸಿಗೆ ತಟ್ಟಿವೆ
೧. ಒಬ್ಬ ತಾನು ಕೆಟ್ಟವನು ನಂಗೆ ಈ ಥರ ಥರ ಬ್ಯಾಡ್ ಹ್ಯಾಬಿಟ್ಸ್ ಇವೆ ಅಂದರೆ ಹುಡುಗಿ ಕರಗಿಬಿಡುತ್ತಾಳೆ . ಅದೇ ಅವಳ ದೌರ್ಬಲ್ಯ
೨.ಹೆಣ್ಣಿಗೆ ಪ್ರೀತಿಗೂ ಮುನ್ನ ಹುಟ್ಟುವುದು ಅನುಕಂಪ...
೩. ಹೊಟ್ಟೆ ಸುತ್ತಾ ಟೈರ್ ಬೆಳೆಸಿಕೊಂಡು ಗೋಣಿ ಚೀಲದಂತ ನೈಟಿ ತೊಟ್ಟು ನಿಂತರೆ ಯಾವ ಗಂಡನಿಗೆ ತಾನೆ ಹೆಂಡತಿ ಇಷ್ಟಾ ಆಗುತ್ತಾಳೆ
೪. ಕೈನಲ್ಲಿ ಬೆಲೆಬಾಳುವ ಮೊಬೈಲ್ ಇಟ್ಟುಕೊಂಡು ಸಾರ್ ನಮಗೆ ಕಷ್ಟಾ ಅಂತ ಪೋಷಕರು ನನ್ನ ಎದುರಿಗೆ ಕೂತರೆ ಸಿಡಿಮಿಡಿಗೊಳ್ಳುತ್ತೇನೆ
ಹೀಗೆ ಇನ್ನೂ ತುಂಬಾ ತುಂಬಾ ವಾಕ್ಯಗಳು

ಆದ್ದರಿಂದಲೆ ರವಿ ಸಾರ್ ಬಗ್ಗೆ ಏನೆ ವದಂತಿಗಳಿರಲಿ ನನಗೆ  ಅವರ ಈ ವಾಕ್ಯಗಳನ್ನಾಗಲಿ, ಅಥವ ಅವರ ಕಾದಂಬರಿಗಳನಾಗಲಿ ಓದುತ್ತಿದ್ದಂತೆಯೇ ಅದೆಲ್ಲಾ ಮರೆತು ಹೋಗಿ ಅವರು ಇಷ್ಟಾವಾಗಿಬಿಡುತ್ತಾರೆ. ಒಬ್ಬ ಲೇಖಕನಾಗಿ ಒಬ್ಬ ಚಿಂತಕನಾಗಿ, ಒಬ್ಬ ಸ್ಪೂರ್ತಿ ಚಿಲುಮೆಯಾಗಿ  Ravi Belagere

Wednesday, August 1, 2012

ಅಂತಿಮ ಚರಣ


ಅವಳ ತೊಡೆಯಲ್ಲಿ ಮಲಗಿ ಮಗುವಿನಂತೆ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಆತ. ಆಕೆ ಏನೂ ಮಾತನಾಡಲಾಗದೆ ನೋಟವನ್ನು ಮತ್ತೆಲ್ಲೋ ತಿರುಗಿಸಿ ಉಕ್ಕಿ ಬರುತ್ತಿದ್ದ ಕಣ್ಣೀರನ್ನು ತಡೆಯುತ್ತಿದ್ದಳು.
............. ." ನೀ ಯಾಕೆ ಹೀಗೆ ಮಗು ಥರಾ ಅಡ್ತೀಯಾ ಕಣೋ ?ನೋಡು ನಿನ್ನ ಹೀಗೆ ನೋಡಿದಾಗೆಲ್ಲಾ ನನ್ನಲ್ಲಿ ತಾಯಿ ಅಲ್ಲದೆ ಮತ್ತಾರು ಎಚ್ಚರ ಆಗಲ್ಲ. ಎದ್ದೇಳು ಸಾಕು ಇನ್ನೇನು ಮದುವೆ ಮಂಟಪಕ್ಕೆ ಹೋಗೋ ಟೈಮ್ ಆಯ್ತು. ಇನ್ನೆಲ್ಲಾ ಬರ್ತಾರೆ ಹುಡುಕ್ಕೊಂಡು. "
ಅವನ ತಲೆಯನ್ನ ಬಲವಂತವಾಗಿ ಮೇಲೆತ್ತಿದಳು. ಆರಡಿ ಎತ್ತರದ ಆಳು ಆತ. ಹಿಡಿಯಷ್ಟಾಗಿ ಹೋಗಿದ್ದ.
"ನಾಳೆ ಇಂದ ನಾನು ಯಾರೋ ನೀನು ಯಾರೋ. ಒಬ್ಬರನೊಬ್ಬರೂ ನೋಡಲೂ ಬಾರದು ಅಂತೆಲ್ಲಾ  ಹೇಳ್ತೀಯಲ್ಲ. ಈ ಶಿಕ್ಷೆ ನಂಗೆ ಮಾತ್ರ ಅಲ್ಲ ನಿಂಗೂ ಕೂಡ ಯಾಕೆ ಯಾಕೆ ಇವೆಲ್ಲಾ? ಎಲ್ಲಾ ಬಿಟ್ಟು ಎಲ್ಲಾದರೂ ದೂರ ಹೊರಟು ಹೋಗೋಣ . ಈ ಸಮಾಜ  ಈ ಅಪ್ಪ ನಿನ್ ಗಂಡ ಈ ಆಫೀಸು ,ಈ ಇಡೀ ಬೆಂಗಳೂರನ್ನೇ ಬಿಟ್ಟು ಬಿಡೋಣ ಅಂತೆಲ್ಲಾ ಕೇಳ್ಕೊಂಡೆ ನೀನು ಯಾಕೆ ಒಪ್ತಿಲ್ಲ ಅಂತ ಕೇಳಲ್ಲ ನಂಗೂ ಗೊತ್ತು ನೀನು ನಿನ್ ಗಂಡನ್ನ ಈ ಸಮಾಜಾನ, ಈ ಆಫೀಸನ್ನ, ಈ ಬೆಂಗಳೂರನ್ನ ನನಗಿಂತ ಹೆಚ್ಚಾಗಿ ಪ್ರೀತಿಸ್ತೀಯಾ ಅಂತ. ಆದರೆ ನಾನು ಎಲ್ಲಾರಿಗಿಂತ ಎಲ್ಲಾವುದಕ್ಕಿಂತ , ನಿನ್ನ ಪ್ರೀತಿಸ್ತಿದೀನಿ  . ಇನ್ನೂ ಟೈಮ್ ಇದೆ. ಒಂದು ಸಲ ಆಯ್ತು ಅನ್ನು..............." ಅವಳತ್ತ ನೋಡಿದ  ಒಂದು ಒಪ್ಪಿಗೆಗಾಗಿ .
ಇಲ್ಲಿಯವರೆಗೆ ಕಾಡಿದ್ದ, ಕೆಣಕಿದ್ದ, ಹಣ್ಣಾಗಿದ್ದ, ಕೆರಳಿಸಿದ್ದ. ಹುಚ್ಚಾಗಿದ್ದ. ಸಾಯಲೂ ಸಿದ್ದವಿದ್ದ ಆತನನ್ನ ಉಳಿಸಲೆಂದೆ ಅವನ ಜೀವನಕ್ಕೆ ಕಾಲಿಟ್ಟಿದ್ದಳು ಆದರೆ ಪ್ರೇಯಸಿಯಾಗಿಯಲ್ಲ. ಒಂದು ಅನಾಥ ಮಗುವನ್ನ ದತ್ತು ತೆಗೆದುಕೊಳ್ಳುವ ತಾಯಿಯಂತೆ  . ಅಲ್ಲಿಂದ ಅವನನ್ನ ಮದುವೆಯವರೆಗೆ ಕರೆತಂದಿದ್ದಳು. ತೀರ ಪ್ರೀತಿ ಎನ್ನಲಾಗದಿದ್ದರೂ ಆತನ ಮೇಲಿನ ಒಂದು ಮಮತೆ ಮಮಕಾರ ಅವಳಿಗರಿವಿಲ್ಲದಂತೆ  ಎದ್ದಿತ್ತು. ಇನ್ನು ಇವನು ತನಗೆ ಸೇರಿದವನಲ್ಲ. ನಾಳೆ ಇಂದ ಈ ಜೀವದ ಕಾಳಜಿಗೆಂದೇ ಹೊಸ ಜೀವ ಕಾದಿರುತ್ತೆ. ಇನ್ನು ತನಗೇನೂ ಕೆಲಸವಿಲ್ಲ. ಇನ್ನಾಯಿತು. ಇನ್ನು ಹೊರಟು ಬಿಡಬೇಕು ಸಾಗರ‍್ ತೆಕ್ಕೆಗೆ. ಕಾದಿದ್ದಾನೆ ಏಳು ಸಾಗರದಾಚೆ, ತನಗಾಗಿಯೇ ಮುಡಿಪಾದ ಆ ಜೀವದ ಬಳಿಗೆ.
" ಚಿರಂತ್ . ಜೀವನ ನಿಂಗೆ ಇನ್ನೂ ಏನೂ ಅಲ್ಲ ಅದು ಕೇವಲ ನಿನ್ನ್ನದು ಮಾತ್ರ. ಆದರೆ ನಂಗೆ ಎರೆಡು ಜೀವನ ಇದೆ. ಒಂದು ನಂದು ಮತ್ತೊಂದು ಸಾಗರ‍್ದು. ನನ್ನ ನಂಬಿದಾನೆ. ಅವನಿಂದ ದೂರ ಹೋಗುವ ಯೋಚನೇನೂ ಸಹ ನಾನು ಮಾಡಲ್ಲ.ನಡೀ ಎದ್ದೇಳು ನಿಮ್ ಅಮ್ಮ ಬರ್ತಾ ಇದಾರೆ ಅವರಿಗೆ ನಿನ್ನ ಒಪ್ಪಿಸಿ ನಾನು ಹೊರಡ್ತೇನೆ. "
ಕಣ್ಣೀರಲ್ಲಿ ತೊಯ್ದಿದ್ದ ಅವನ ಕೂದಲನ್ನು ನೇವರಿಸಿ ಎಬ್ಬಿಸಿದಳು.
ನಿಧಾನಕ್ಕೆ ಎದ್ದ
"ಚಿರಂತ್ ನಾಳೆ ಇಂದ ನಾನು ನಿನ್ನ ಬದುಕಿನ ಕ್ಲೋಸ್ಡ್ ಚಾಪ್ಟರ್. ನನ್ನ ಮರೆತು ಹಾಯಾಗಿ ಚಂದನಾ ಜೊತೆ ಇರು. ಚಂದನಾ ಒಳ್ಳೇ ಹುಡುಗಿ . ಅವಳಿಗೆ ನಿನ್ನ ಬಗ್ಗೆ ಎಲ್ಲಾ ಹೇಳಿದ್ದೇನೆ. ಅವಳು ನಿನ್ನ ನನಗಿಂತ ಚೆನ್ನಾಗಿ ನೋಡ್ಕೋತಾಳೆ. "
"ಬಾಯ್ ಚಿರಂತ್."  ಅವಳತ್ತ ನೋಡಲಿಲ್ಲ. ಚಿರಂತ್
"ಬಾಯ್ "ಎಂದಷ್ಟೆ ನುಡಿದ.


Monday, July 16, 2012

ಅವಳೇಕೆ ಅವಳೇಕೆ ಹೀಗೆ? ಅರಿಯಿರಿ ಅವಳಿರುವುದೇ ಹಾಗೆ ಹೀಗೆ? ಅರಿಯಿರಿ ಅವಳಿರುವುದೇ ಹಾಗೆಹೆಣ್ಣಿನ ಮನಸು ಒಂದು ಸಂಕೀರ್ಣ ಕಗ್ಗಂಟು. ಒಂದು ವೈಜ್ನಾನಿಕ ಅಧ್ಯಯನದ ಪ್ರಕಾರ ಗಂಡಸರ ಮೆದುಳು ಹೆಂಗಸರ ಮೆದುಳಿಗಿಂತ ಶೇ ಹತ್ತು  ದೊಡ್ಡದು ಮತ್ತು ಹೆಂಗಸರ ಮೆದುಳಿಗಿಂತ ಶೇ ನಾಲ್ಕಷ್ಟು ಹೆಚ್ಚು ನರಗಳನ್ನು ಹೊಂದಿವೆಯಾದರೂ ಹೆಣ್ಣಿನ ಮೆದುಳು ಗಂಡಿಗಿಂತ ಹೆಚ್ಚು ವಿಷಯಗಳನ್ನ ಹೊಂದುವಂತಹ ಸಾಮರ್ಥ್ಯವನ್ನ ಹೊಂದಿದೆ. ಹಾಗಾಗಿ ಅವಳುಒಮ್ಮೆಗೆ ಸಾವಿರ ವಿಷಯಗಳನ್ನು ಯೋಚಿಸಬಲ್ಲಳು, ಅವಳ ಪ್ರತಿಚಲನೆಗೂ ಮಾತಿಗೂ ಭಾವನೆಗೂ ವಿವಿಧ ಅರ್ಥವಿರುತ್ತದೆ
ಆದರೆ ಆಕೆಯ ಗಂಡ/ಪ್ರೇಮಿಗೆ ಮಾತ್ರ ಅವುಗಳು ಅರ್ಥಹೀನ ಅನ್ನಿಸುತ್ತದೆ. ಈ ನಡೆ ನುಡಿ ಚಲನೆ ಮತ್ತು ಅವಳ ಮನಸನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾದಲ್ಲಿ ಮುಕ್ಕಾಲ್ಲು ಪಾಲು ಅವಳನ್ನು ಗೆದ್ದಂತೆ. ಅಂತಹ ಕೆಲವು ಟಿಪ್ಸ್ ಇಲ್ಲಿವೆ

೧. ಗಂಡಿನ ಮೆದುಳು ಎಡಗಡೆಯ ಆದೇಶದಂತೆ ಮಾಡಲು ಮುಂದಾಗುತ್ತದೆ. ಎಡಬದಿಯ ಮೆದುಳು ತಾರ್ಕಿಕತೆಗೆ ಹೆಚ್ಚು ಒತ್ತು ನೀಡುತ್ತದೆ. ಆದರೆ ಹೆಣ್ಣಿನ ಮೆದುಳು ಎರೆಡೂ ಬದಿಯ ಆದೇಶವನ್ನೂ ಸ್ವೀಕರಿಸುವದಲ್ಲದೆ ಅವುಗಳ ನಡುವೆ ಸಂವಹನ ಕ್ರಿಯೆ ಬಹಳ ಬೇಗ ನಡೆಯುತ್ತದೆ. ಆದ್ದರಿಂದಲೇ ಆಕೆ ಬಲು ಬೇಗ ಯೋಚಿಸಬಲ್ಲಳು, ಮತ್ತು ಬೇಗ ನಿರ್ಧಾರ ಕೈಗೊಳ್ಳುತ್ತಾಳೆ. 
೨.ಮತ್ತೊಂದು ಹೆಣ್ಣು ಭಾವನಾ ಜೀವಿಯಾಗಿರೋದಿಕ್ಕೆ ಆಕೆಯ ನರಮಂಡಲ ರಚನೆಯೂ ಒಂದು ಕಾರಣ, ನರಮಂಡಲದ ಲಿಂಬಿಕ್ ಎಂಬ ವ್ಯವಸ್ಥೆ ಈ ಅನುಬಂಧ, ಮತ್ತು ಭಾವಗಳಿಗೆ ಕಾರಣ, ಸರಾಸರಿ ಮಹಿಳೆಯರು ಗಂಡಸರಿಗಿಂತ ಆಳವಾದ ಲಿಂಬಿಕ್ ವ್ಯವಸ್ಥೆಯನ್ನುಹೊಂದಿರುತ್ತಾಳ್ಳೆ . ಆದ್ದರಿಂದಲೇ ಆಕೆ ಬಹಳ ಬೇಗ ತನ್ನ ಭಾವನೆಯನ್ನ ವ್ಯಕ್ತ ಪಡಿಸುತ್ತಾಳೆ. ಮತ್ತು ಗಂಡಿಗಿಂತ ಹೆಚ್ಚು ಭಾಂಧವ್ಯಕ್ಕೆ ಒತ್ತು ನೀಡುತ್ತಾಳೆ
೩. ಹೆಣ್ಣು ಯಾವುದನ್ನೂ ನೇರವಾಗಿ ಬಾಯಿ ಬಿಟ್ಟು ಹೇಳಲಾರಳು ಅದರಲ್ಲೂ ಪ್ರೀತಿ ಪ್ರೇಮದ ವಿಷಯಗಳಲ್ಲಿ ಅವಳು ತುಂಬಾ ರಿಸರ್ವ್ಡ್.ಹೇಳಬೇಕಾದ್ದನ್ನು ನೇರವಾಗಿ ಹೇಳಿದರೆ ಎಲ್ಲಿ ತನ್ನ ಅರಿಕೆ ತಿರಸ್ಕೃತವಾಗುತ್ತದೋ ಎಂಬ ಸಂಕೋಚ, ಆದ್ದರಿಂದಲೇ ನಾಳೆ ಮೀಟ್ ಮಾಡೋಣ ಎಂದು ಹೇಳುವ ಬದಲು ನಾಳೆ ನಂಗೆ ಕ್ಲಾಸ್ ಇಲ್ಲ, ಅಥವ ವರ್ಕ್ ರಜಾ ಎನ್ನುತ್ತಾಳೆ, ನೀನು ನಾಳೆ ಎಷ್ಟು ಹೊತ್ತಿಗೆ ಕೆಲಸದಿಂದ ಮನೆಗೆ ಬರ್ತೀಯ ಎನ್ನುವಾಗ ಎಲ್ಲಿಯಾದರೂ ಕರೆದೊಯ್ಯಲು ಸಾಧ್ಯವೇ ಎನ್ನುವ ಇಂಗಿತವಿರುತ್ತೆ. ಅವಳ ಮಾತಿನ ನೇರ ಅರ್ಥಕ್ಕಿಂತ ಅದರ ಹಿಂದಿನ ಉದ್ದೇಶ ಅರಿತುಕೊಳ್ಳುವ ಪ್ರಯತ್ನ ಮಾಡಿ.
೪.ಹೆಣ್ಣು ಎಷ್ಟೇ ಬುದ್ದಿವಂತಳಾಗಿದ್ದರೂ ಪ್ರೀತಿ ಪ್ರೇಮ ಮತ್ತು ಕಾಳಜಿಗೆ ಸೋಲುತ್ತಾಳೆ, ಮುನಿದ  ಹೆಣ್ಣಿನ ಮನಸನ್ನು ಗೆಲ್ಲೋಕೆ ನಿಮ್ಮ ಒಂದೇ ಒಂದು ಪ್ರೀತಿಯ ನುಡಿ ಸಾಕು
೫.ನೀವು ಲಕ್ಷ ರೂ ಕೊಟ್ಟು ಕೊಡಿಸಿದ ವಜ್ರಕ್ಕಿಂತ, ಸಾವಿರ ರೂ ಕೊಟ್ಟು ಕೊಡಿಸಿದ ಸೀರೆ ಉಟ್ಟಾಗ ಈ ಸೀರೆ ನಿನಗಿಂತ ಬೇರೆಯಾರಿಗೂ ಚೆಂದ ಕಾಣಲು ಸಾಧ್ಯವಿಲ್ಲ .ಅಥವ ನಿನ್ನಿಂದ ಈ ಸೀರೆಗೆ ಮೆರಗು ಬಂದಿದೆ ಅನ್ನಿ, ಅವಳ ಮುಖ ವಜ್ರಕ್ಕಿಂತ ಹೊಳಪು ಪಡೆಯುತ್ತದೆ. 
೬ಪ್ರತಿ ಹೆಣ್ಣಿ ತನ್ನವ ಬೇರೆ ಯಾರನ್ನೂ ಹೊಗಳಬಾರದು , ನೋಡಬಾರದು ಎಂದು ಬಯಸುತ್ತಾಳೆ. ಅಪ್ಪಿ ತಪ್ಪಿಯೂ ಅವಳ ಮುಂದೆ ಮತ್ತೊಂದು ಹೆಣ್ಣನ್ನ ಹೊಗಳಬೇಡಿ. ಅಕಸ್ಮಾತ ಅಪ್ಪಿ ತಪ್ಪಿ ಎದುರಿಗೆ ಸಿಕ್ಕವಳನ್ನ ನೀವು ನೋಡಿದ್ದು ಅವಳ ಗಮನಕ್ಕೆ ಬಂದರೆ ಖಿನ್ನಗೊಂಡ ಮನಸನ್ನ ಹೀಗೆಂದು ಸಮಾಧಾನಿಸಿ,   ಅವಳುಟ್ಟ ಬಟ್ಟೆ ನಿನಗೆ ಹೇಗೆ ಕಾಣುತ್ತೆ ಅಂತ ಯೋಚಿಸುತ್ತಿದ್ದೆ. ಅಷ್ಟೆ ಮತ್ತೆ ಅರಳುತ್ತಾಳೆ
೭.ಅವಳೊಡನಿದ್ದಾಗ ಆದಷ್ಟೂ ಮೊಬೈಲ್ ಫೋನ್ ಅಟೆಂಡ್ ಮಾಡಬೇಡಿ ಪದೇ ಪದೆ ಎಸ್ ಎಮ್ ಎಸ್ ಕಳಿಸದಿರಿ,ಏನೂ ಇಲ್ಲದಿದ್ದರೇ  ಸುಮ್ಮನೆ ಮೊಬೈಲ್ ಕೀಲಿ ಪ್ರೆಸ್ ಮಾಡುತ್ತಾ ಕೂತಿರಬೇಡಿ. ತನ್ನ ಇರುವಿಕೆ ಅವನಿಗೆ ಪ್ರಮುಖವಲ್ಲ ಅಂತ ತಿಳಿದುಕೊಳ್ಳುತ್ತಾಳೆ
೮ನಿಮ್ಮಿಂದ ತಪ್ಪಾಗಿದೆ ಎಂದಲ್ಲಿ ತುಂಬು ಹೃದಯದಿಂದ ಕ್ಷಮೆ ಕೇಳಿ, ಎಂತಹುದೇ ತಪ್ಪಾದರೂ ನಿಮ್ಮದು ನೈಜ ತಪ್ಪೊಪ್ಪಿಗೆಯಾದಲ್ಲಿ  ಕ್ಷಮಿಸಿಬಿಡುತ್ತಾಳೆ, ಹಾಗೆಯೇ ಅವಳಿಂದ ತಪ್ಪಾದಲ್ಲಿ ಅವಳು ಕ್ಷಮೆ ಕೇಳಿದಲ್ಲಿ ಕ್ಷಮಿಸಿಬಿಡಿ. ಹೀಯಾಳಿಕೆಯ, ಮನ ನೋಯುವ ಮಾತುಗಳು ಬೇಡ
೯ಅವಳಿಗೆ ನೋವಾಗಿದ್ದಲಿ ಸಾಂತ್ವಾನಿಸಿ. ಕೋಪದಲ್ಲಿ ಹೇಳಿದ ಮಾತುಗಳನ್ನ ಕಿವಿಗೆ ಹಾಕಿಕೊಳ್ಳದಿರಿ, ಹೆಣ್ಣಿಗೆ ನೋವನ್ನು ಹೊರಹಾಕುವ ಏಕೈಕ ಸಾಧನ ಮಾತು, ಕೂಗು, ಅಳು, ಅವು ಪ್ರಕಟಗೊಳ್ಳಲಿ ಬಿಟುಬಿಡಿ,
೧೦ ನಿಮ್ಮಿಷ್ಟದಂತೆ ಅವಳನ್ನ ಬಗ್ಗಿಸದಿರಿ, ಅವಳಾಗಿಯೇ ಒಲಿದು ಬರುವುದನ್ನ ಕಾಯುತ್ತಿರಿ, ಬಲವಂತವಾಗಿಯೋ, ಎಮೋಷನಲ್ ಬ್ಲಾಕ್ ಮೇಲ್ ಮಾಡಿಯೋ, ಬೆಳೆಸಿದ ನಂಟಿಗೆ ಆಯಸ್ಸು ಕಡಿಮೆ
೧೧ಅವಳ ಮಾತಿಗೆ ಕಿವಿ ಕೊಡಿ, ನಿಮ್ಮದೆಂತಹ ಕೆಲಸವಿದ್ದರೂ ಅವಳಿಗಾಗಿ ಕೆಲ ಸಮಯ ಮೀಸಲಿಡಿ. ಅವಳಿಗಾಗಿಯೇ. ಕೇವಲ ಅವಳೊಡನೆಯೇ ಮೀಸಲಿಡಿ
೧೨. ಹೆಣ್ಣಿನ ಮಾತಿಗೆ ನೂರು ಅರ್ಥವಿದ್ದಲ್ಲಿ ಮೌನಕ್ಕೆ ಸಾವಿರ ಅರ್ಥವಿರುತ್ತದೆ. ಮುಕ್ಕಾಲು ಭಾಗ ಅರ್ಥಗಳು ಕಣ್ಣಿನಲ್ಲಿ ಗೋಚರವಾಗುತ್ತದೆ. ಆದ್ದರಿಂದ ಪ್ರಿಯೆಯೊಡನೆ ಮಾತನಾಡುವಾಗ ಕಣ್ಣಲ್ಲಿ ಕಣ್ಣನಿಟ್ಟು ಮಾತಾಡಿ. ಇದರಿಂದ ನಿಮ್ಮ ಸಂಪೂರ್ಣ ಗಮನ ಆಕೆಯಮೇಲಿದೆ ಎಂಬ ನಿರಾಳತೆ ಆಕೆಯಲ್ಲಿರುತ್ತೆ
೧೩.ನಿಮ್ಮ ಹಳೆಯ ಪ್ರೇಮಿಯ ಬಗ್ಗೆ ಪುರಾಣ ಹೇಳಬೇಡಿ . ಇದು ಆಕೆಗೆ ನೋವು ತರುತ್ತದೆ
೧೪. ಹೆಣ್ಣಿನ ಕಡೆಯವರನ್ನಾಗಲಿ ಅವಳ ಹವ್ಯಾಸವನ್ನಾಗಲಿ ಹಳಿಯದಿರಿ. 
೧೫. ಅವಳ ಸೌಂದರ್ಯದ ಬಗ್ಗೆ ಕೊಂಕು ತೆಗೆಯದಿರಿ
ಇಷ್ಟೆಲ್ಲಾ ತಿಳ್ಕೋಬೇಕಾ ಎಂಬ ಉದ್ಗಾರ ಬೇಡ, ಇದು ಕೇವಲ ಮುಖ್ಯವಾದವುಗಳು. ಇನ್ನೂ ತುಂಬಾ ಇವೆ..............

Friday, April 13, 2012

ದಡವಿರದ ಸಾಗರ ೪


ಅಂದು ರಾತ್ರಿ ತೇಜು ಮನೆಗೆ ಬಂದಾಗ ಒಂದು ಘಂಟೆಯಾಗಿತ್ತು . ಎಲ್ಲರೂ ಮಲಗಿದರು . ಕೆಲಸದಾಕೆ ಕದ ತೆರೆದಳು. ಗೊತ್ತು ಅಮ್ಮನಾಗಲಿ ಅಪ್ಪನಾಗಲಿ ತನ್ನನ್ನು ಕಾಯುತ್ತಾ ಕೂರುವುದಿಲ್ಲ. ಕೂರುವವರು ಒಬ್ಬರೇ ತಾತ, ಹೋದರೆ ಉಪದೇಶ, ಅಭಿ ಆಗಲೆ ಬಂದಿದ್ದಾನೆ ಎಂದು  ಅಂಗಳದಲ್ಲಿ ನಿಂತಿದ್ದ ಅವನ  ಕಾರ್ ಹೇಳಿತ್ತು.
ಮೊದಲೇ ಮನಸು ರೋಸಿತ್ತು ಬೆಳಗಿನ ಘಟನೆಯಿಂದ ... ರೂಮಿಗೆ ಬಂದವಳೇ  ಹಾಸಿಗೆಯ ಮೇಲುರುಳಿದಳು ತೇಜು.
ಕಣ್ಣ ಮುಂದೆ ಪಿವಿಆರ್ ನ ಬಳಿಯ ಘಟನೆಯೇ .
"ಹಲ್ಲೋ ವಾಟ್ ಡು ಯು ಥಿಂಕ್ ಆಫ್ ಯುವರ್ ಸೆಲ್ಫ್?ಪ್ರಪಂಚದಲ್ಲಿರೋ ಹುಡುಗರೆಲ್ಲಾ ನಿಮ್  ಹಿಂದೆ ಜೊಲ್ಲು ಬಿಟ್ಟುಕೊಂಡು ಬರ್ತಾರೆ ಅಂತ ಅನ್ಕೊಂಡಿದ್ದೀರಾ?ಹೇಗೆ,ನೀವೇನು ಮಿಸ್ ಯೂನಿವರ್ಸ್ ಆ ಅಥವ ಮಿಸ್ ವರ್ಡ್? ಏನು . ಲಾಲ್ ಭಾಗ್ ಚೆನ್ನಾಗಿದೆ ಅಂತ ನೋಡ್ತೀವಿ ಹಾಗಂತ .....ಲಾಲ್ ಬಾಗ್ ನೇ ಕೊಂಡ್ಕೊಳ್ಳೋದಿಲ್ಲಮ್ಮ .ಸಾಕು ಏನೂ ಮಾತಾಡ್ಬೇಡಿ . ಐ ಹೇಟ್ ಯು ಬ್ಲಡಿ  ಮಡ್ದಿ ಗರ್ಲ್ಸ್. "
ಆ ಹುಡುಗ ಬಡಬಡಿಸುತ್ತಲೇ ಇದ್ದ, ತೇಜುವಿನ ಮೊಗ ಕೆಂಪಗಾಗಿತ್ತು. ಮಾತನಾಡಲೂ ಆಗದಷ್ಟು ಶಾಕ್ ಆಗಿದ್ದಳು, ಈಗ ತಾನೆ ಹಾಯ್ ಹೇಳಿದ್ದ, ಎಲ್ಲಾ ಗಂಡು  ಮಿಕಗಳಂತೆ ಇವನೂ ಬಲೆಗೆ ಬಿದ್ದಂತೆಯೇ ಎಂದುಕೊಂಡು ಸ್ನೇಹಿತೆಯರ ಜೊತೆಯಲ್ಲಿ ಅವನೊಡನೆ ಕಾಫೀ ಡೇಗೆ ನುಗ್ಗಿದ್ದಳು.
ಎಂದಿನಂತೆ ಹುಡುಗರನ್ನು ರೇಗಿಸಿಮಜ ತೆಗೆದುಕೊಳ್ಳುವ ಶೈಲಿಯಲ್ಲಿಯೇ ಮಾತು ಶುರುಮಾಡಿದ್ದಳು.
"ನಿಮ್ಮನ್ನ ನೆನ್ನೆ ನಮ್ ಮನೆ ಹತ್ತಿರ ನೋಡಿದ್ದೆ" ಕಾಫಿ ಕಪ್ ಅನ್ನು ತುಟಿಗೆ ಸೋಕಿಸುತ್ತಾ ನುಡಿದಳು.
"ಹೌದಾ ಎಲ್ಲಿದೆ ನಿಮ್ ಮನೆ?"ಆತ ಕೇಳಿದಾಗ ಒಂದು ಕ್ಷಣ ತಬ್ಬಿಬ್ಬಾದಳು
"ನೆನ್ನೆ ಸಾಯಂಕಾಲ ಏಳು ಘಂಟೆಗೆ . ನಾನು ಹೊರಗಡೆ ಹೋಗ್ತಾ ಇದ್ದಾಗ ಯು ಸಾ ಮಿ" ಮೋಹಕ ನಗೆ ನಕ್ಕಳು
"ಮೇ ಬಿ, ದಾರೀಲಿ ಹೋಗ್ತಾ ಇದ್ದಾಗ ಎಷ್ಟೊಂದು ಜನರನ್ನ ನೋಡಿರ್ತೀನಿ ಹೌ ಕ್ಯಾನ್ ಐ ರಿಮೆಂಬರ್ " ಉಡಾಫೆ ಇಂದ ಹೇಳಿದ
ಅವನ ಉಡಾಫೆ ಕೆಣಕಿತು
"ಯಾಕೆ ಸುಳ್ಳು ಹೇಳ್ತಿದೀರಾ? ನೆನ್ನೆ ಮಾತ್ರ ಅಲ್ಲ ಮೂರು ದಿನದಿಂದ ನನ್ನನ್ನೆ ಫಾಲೋ ಮಾಡ್ತಿದೀರ.  ಡು ಯು ಥಿಂಕ್ ಯು ಆರ್ ಟೂ ಸ್ಮಾರ್ಟ್?"

ಆತನಿಗೇನನಿಸಿತು. ಇದಕ್ಕಾಗಿಯೇ ಕಾದವನಂತೆ ಎಲ್ಲರ ಮುಂದೆಯೂ  ಬಡಬಡಿಸಿದ್ದ. ಇದೆಲ್ಲಾ ತನ್ನದೇ  ಮಾತುಗಳು. ಹಿಂದೆ  ಇದೇ ಜಾಗದಲ್ಲಿ   ಹುಡುಗರಿಗೆ  ಬೈಯ್ಯುತಿದ್ದ ಮಾತುಗಳು ನೆನಪಾದವು.

"ಹಲ್ಲೋ ವಾಟ್ ಡು ಯು ಥಿಂಕ್ ಆಫ್ ಯುವರ‍್  ಸೆಲ್ಫ್? ನನ್ ಹಿಂದೆ ಇಡೀ ಪ್ರಪಂಚಾನೆ ಇದೆ, ಅವರನ್ನೆಲ್ಲಾ ಬಿಟ್ಟು ಹೌ ಕ್ಯಾನ್ ಯು ಥಿಂಕ್ ಐ ಕ್ಯಾನ್ ಈವನ್ ಲುಕ್ ಅಟ್ ಯು? ದಾರೀಲಿ ಹೋಗ್ತಾ ತಾಜ್ ಮಹಲ್ ನೋಡಿ ಅದು ನಂಗೆ ಬೇಕು ಅನ್ನೋಹಾಗೆ ಮಾತಾಡಬೇಡ. ನಿನ್ ಪೊಸಿಶನ್  ಏನು ತಿಳ್ಕೋ ಸಾಕು ಈಡಿಯಟ್"

ಅವಮಾನವಾಗಿತ್ತು , ಮೈ ಉರಿಯುತ್ತಿತ್ತು . ಯಾರ ಜೊತೆಯಲ್ಲಿಯೂ ಮಾತನಾಡದೆ ತನ್ನ ಆಫೀಸಿನ ಕ್ಯಾಬಿನ್ ಅಲ್ಲಿ ಕೂತಿದ್ದಳು ಎಷ್ಟು ಹೊತ್ತು ಕೂತಿದ್ದಳೋ. ಗೊತ್ತಿಲ್ಲ ತಾತನ ಕಾಲ್ ಬಂದಾಗ ಎಚ್ಚರವಾಗಿತ್ತು.  ಆಗ ಎದ್ದು ಬಂದದ್ದು.
ಸೇಡು ಅದೇ ಕಾಫಿ ಡೇ ಯಲ್ಲಿ ಅವನನ್ನು ತುಚ್ಚೀಕರಿಸದೆ ಇದ್ದಲ್ಲಿ ತಾನು ತೇಜಸ್ವಿನಿ ಅಲ್ಲ. ಹಲ್ಲು ಕಡಿದಳು. ಕಣ್ಣುಗಳು ನಿದ್ದೆ ಮಾಡದೆ ಮುಷ್ಕರ ಹೂಡಿದವು.

ಅದೇ ಸಮಯಕ್ಕೆ ಅವಳ ರೂಮಿನ ಪಕ್ಕದಲ್ಲಿಯೇ ಮತ್ತೊಂದು ಹೃದಯ  ಯೋಚಿಸುತ್ತಿತ್ತು  ನಿದ್ರಿಸದೆ.
ಅದು ಅಭಿಯದ್ದು
"ಯಾರಿರಬಹುದು ಆ ಅನಾರ್ಕಲಿ? ಚಕೋರಿನಾ ಅಥವ ಫ್ರೆಂಡ್ಸಾ? ಅಥವ ಬೆಳದಿಂಗಳ ಬಾಲೆಯೇ
ಒಟ್ಟಿನಲ್ಲಿ ಅಣ್ಣ ತಂಗಿಯರ ಮನದಲ್ಲಿ ಒಂದೊಂದು ರೀತಿಯ ಕೋಲಾಹಲ .
(ಮುಂದುವರೆಯುವುದು)

Thursday, April 5, 2012

ಬಾನಲ್ಲಿ ರಂಗು ಬಂದಾಗ

ಸುರ್ ಚಿತ್ರದ ಒಂದು ಹಾಡಿನ ಅನುಕರಣೆ

ಬಾನಲ್ಲಿ ರಂಗು ಬಂದಾಗ ನೀ ಬಾರ
ಬಾಳಲ್ಲಿ ಚಂದ್ರ ನೀನಾಗು ನೀ ಬಾರ

ಬಂದವ ನೀ ಮತ್ತೆ ನನ್ನ ಬಿಟ್ಟು ದೂರ ಹೋಗಬೇಡ

ಜೊತೆಯಲ್ಲಿ ಇರದಿರೂ ಜೊತೆಯಲೇ ಇರುವೆ ನೀ
ಆಡುವ ಮಾತದು ನಿನ್ನದೇ ಕಲಿಕೆಯೋ
ನೀನೇ ನನ್ನ ಒಳಗಿರುವೆ ನೀನೆ ನನ್ನ ಹೊರಗಿರುವೆ
ನಿನ್ನ ಕಂಡ ಕ್ಷಣದಿಂದ ನನ್ನ ನಾನೆ ಮರೆತಿರುವೆ

ಬಂದವ ನೀ ಮತ್ತೆ ನನ್ನ ಬಿಟ್ಟು ದೂರ ಸಾಗಬೇಡಾ

ದಿನವಿಡೀ ಹೃದಯದ ಬಡಿತವೂ ನಿನ್ನದೇ
ಜೀವದ ಆಣೆಗೂ ಜೀವವೂ ನಿನ್ನದೇ
ನೀನೆ ನನ್ನ ಕಣ್ಣಾಗಿರುವೆ ಒಂಟಿ ಬಾಳ ಪಯಣದಲಿ
ದೂರ ಏನೇ ಆಗಿರಲಿ ನಿನ್ನ ಜೊತೆಯೇ ನನಗಿರಲಿ

ಬಂದವ ನೀ ಮತ್ತೆ ನನ್ನ ಬಿಟ್ಟು ದೂರ ಸಾಗಬೇಡ