ಜಗಕೆಲ್ಲಾ ಬೆಳಕನೀಯುವ ದೇವಾದಿದೇವ
ನಿನ್ನ ತಂದೆ ಸೂರ್ಯದೇವ
ಜಗ ಮೆಚ್ಚುವ ವೀರರೈವರು
ನಿನ್ನ ಸಹೋದರರು ಪಾಂಡವರು
ಲೋಕ ಮಾತೆಯಾಗಿ ಪೋಜಿತೆ
ನಿನ್ನ ತಾಯಿ ಕುಂತಿ ಮಾತೆ
ಹರಿಯಂಶದಿ ಜನಿಸಿದ ತ್ರಿಲೋಕ ಗುರು
ನಿನ್ನ ಗುರು ಪರಶುರಾಮ
ಆದರೂ ಲೋಕದಲ್ಲಿ ಅತೀ ಗೋಳು
ನಿನ್ನ ಬಾಳದು ಕರ್ಣ
ಬಾಲೆಯೊಬ್ಬಳ ಕುತೂಹಲದ ಆಟಕೆ
ಪುತ್ರನೊಬ್ಬನ ಜನನ ಬೇಕಿತ್ತೆ?
ಅಪವಾದಕಂಜಿ ಎಸೆದದ್ದು
ಗಂಗೆಯಲ್ಲಿ ಅಲ್ಲ ನಿನ್ನ ಅಪಮಾನದ ಮಡಿಲಲ್ಲಿ
ಸೂತಪುತ್ರನೆಂದು ಕರೆಸಿಕೊಂಡರೂ
ಬಿಡದ ಛಲದಿಂ ಕಲಿತೆ ಕ್ಷತ್ರಿಯ ವಿದ್ಯೆಯ
ಪೊಳ್ಳಾನಾದರೂ ನುಡಿದು
ಗುರು ಪರಶುರಾಮರ ಬಳಿ
ಅಲ್ಲೂ ಕಾಡಿತೇ ನಿನ್ನ ವಿಧಿ,
ಗುರುವಿನ ಶಾಪಕ್ಕೆ ಸಿಲುಕಿಸಿ
ಬಾಳಲ್ಲಿ ನಿನ್ನವರೇ ನಿನ್ನ ಅರಿಗಳು
ನಿನ್ನವರ ವೈರಿ ನಿನಗಾದ ಪರಮಮಿತ್ರ
ನ್ಯಾಯವೋ ಅನ್ಯಾಯವೋ ಉಪ್ಪಿನ ಋಣ
ತೀರಿಸುವುದೊಂದೇ ಸರಿಯೆನಿಸಿತೇ ನಿನಗೆ?
ರಾಜ್ಯದಾಸೆ, ತಾಯ ಮಮತೆ, ಸಹೋದರ ಪ್ರೇಮ
ಯಾವುದೊಂದೂ ಗೆಲ್ಲಲಿಲ್ಲ ನಿನ್ನ ಸ್ವಾಮಿನಿಷ್ಟೆಯಾ
ಬೇಡಿದ್ದ ಕೊಡುವ ನಿನ್ನ ಉದಾರತೆಯೇ
ನಿನಗೆ ಮುಳುವಾಯ್ತೇ
ಹೆತ್ತ ತಾಯಿ ಕೂಡ ಬಳಿಗೆ ಬಂದದ್ದು
ತನ್ನ ಐವರ ಮಕ್ಕಳ ಜೀವದಾನಕ್ಕಾಗಿಯೇ?
ತೊಟ್ಟಬಾಣವ ಮರಳಿ ತೊಡದ
ಇಟ್ಟ ಗುರಿಯ ಬದಲಿಸಲಾರದ ನಿನ್ನ
ಆ ನಿಲುವು ಬರುವುದಾರಿಗೆ
ಕಪಟಿ ಕೃಷ್ಣನ ವಿಕಟ ನಾಟಕಕ್ಕೆ
ಸಿಲುಕಿದ ಗೊಂಬೆಯಾದೆ
ತೊಟ್ಟ ಬಾಣವ ತೊಡದೆ ಮತ್ತೆ
ಬಲಿಯಾದೆ ಮೋಸಜಾಲಕೆ
ಸಾಯುವ ಕ್ಷಣದಲ್ಲೂ ನೀ ಅಳಲಿಲ್ಲ
ನೀ ನಿನಗಾಗಿ, ನಿನ್ನ ನಿರ್ಭಾಗ್ಯಬಾಳಿಗಾಗಿ
ಮರುಗಿದೆ ನೀ ಪರಮ ಮಿತ್ರನ
ಸೋಲಿಗಾಗಿ, ಅವನ ಸಾವಿಗಾಗಿ
ಜಗವೆಲ್ಲಾ ನಿನ್ನ ಮೆಚ್ಚಿದರೂ, ಮರುಗಿದರೂ
ಬಯಸುವೊದೊಂದೆ ಕರ್ಣ
ನಿನ್ನ ಹುಟ್ಟು, ಬದುಕು, ಸಾವು
ಬರದಿರಲಿ ಮತ್ತೆ ಯಾರಿಗೂ
[ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಅವನ ಅಂತ್ಯವನ್ನು ಓದುತ್ತಿದ್ದಂತೆ ಕಣ್ಣು ಅರಿವಿಲ್ಲದೇ ಒದ್ದೆಯಾಯ್ತು. ಅವನಿಗಾಗಿ ಒಂದು ನಮನ ]