Monday, November 9, 2009

ಗಮ್ಯ ಹುಡುಕುತ್ತಾ ಭಾಗ ೧

"ಸ್ವಾತಿ ತುಂಬಾ ಮುದ್ದಾಗಿದ್ದೀಯಾ ಅದು ಹೇಗೆ ಇಂತಾ ಅಪ್ಪ ಅಮ್ಮನಿಗೆ ನೀನು ಹುಟ್ಟಿಬಿಟ್ಟೆ ?" ಈ ಪ್ರಶ್ನೆ ತುಂಬಾ ಕಾಮನ್ ಆಗಿದ್ದರಿಂದ ಅದು ಸ್ವಾತಿಗೆ ಹೊಸದೆನಿಸಲಿಲ್ಲ . ಸುಮ್ಮನೆ ನಕ್ಕಳು. ಅವರ ಸ್ಟಾಪ್ ಬಂತು ಇಳಿದು ಹೋದರು. ಯಾರು ಎಂದು ಅವಳಿಗೇನು ಗೊತ್ತು. ಅಪ್ಪನಿಗೆ ತಿಳಿದವರಿರಬೇಕು ಅಥವಾ ಅಮ್ಮನಿಗೂ . ಇದ್ದರೂ ಇರಬಹುದು ಊರಿಗೆ ಗೊತ್ತಿರುವವರು ಅಪ್ಪ ಅಮ್ಮ .ಎಂದುಕೊಂಡು ಸುಮ್ಮನಾದಳು
ಹೌದು ಸ್ವಾತಿಯ ಅಪ್ಪ ಕಪ್ಪು ಬಣ್ಣಕ್ಕೆ ಸಡ್ಡು ಹೊಡೆಯುವ ಬಣ್ಣ . ಅಮಾವಾಸ್ಯೆ ದಿನ ಅಪ್ಪ ಎಲ್ಲಿ ಕತ್ತಲೆಲ್ಲಿ ಎಂದು ಹುಡುಕಬೇಕಾದ ಪರಿಸ್ಥಿತಿ ಉಂಟಾಗುತ್ತದೆ
ಅವಳ ಅಮ್ಮನೇ ವಾಸಿ ಕೊಂಚ ಬೆಳ್ಳಗೆ ಇದ್ದಾರೆ. ಆದರೋ ಮೂಗೋ ಬಿ ಎಮ್ ಟಿ ಸಿ ಬಸ್ ಸೀದಾ ಬಂದು ಅಮ್ಮನ ಮೂಗಿನ ಮೇಲೆ ಹತ್ತಿ ಪಯಣಿಸಿತ್ತೇನೋ ಎಂಬಷ್ಟು ಸಪಾಟವಾಗಿದೆ. ತಕ್ಕಂತೆ ಪುಟ್ಟ ಪುಟ್ಟ ಕಣ್ಣುಗಳು. ನಾನೇ ಮುಂದೆ ಎಂದು ಬಾಗಿರುವ ಹಲ್ಲುಗಳು.
ಸ್ವಾತಿ ಸೌಂದರ್ಯಕ್ಕೆ ಮತ್ತೊಂದು ಪರ್ಯಾಯ ಹೆಸರು. ಹಾಗಾಗೇ ಮನೆಯಲ್ಲಿ ಅವಳು ತುಂಬಾ ಮುದ್ದು ಒಬ್ಬಳೇ ಮಗಳೆಂದು ಬಲು ಮುದ್ದಾಗಿ ಸಾಕಿದ್ದರು. ಶ್ರೀಮಂತ ಕುಟುಂಬಕ್ಕೆ ಸೇರಿದ ರೆಡ್ಡಿಗಳ ಮಗಳು . ಅಪ್ಪನ ದರ್ಪ ಅಮ್ಮನ ಜಂಭ ಧಾರಾಳವಾಗಿತ್ತು ಜೊತೆಗೆ ತುಂಟತನ ಸಾಕು ಸಾಕೆನ್ನುವಷ್ಟು.ಕಾಲೇಜಿನಲ್ಲಿ ತುಂಟಿ ಎಂಬ ಹೆಸರಿನ ಜೊತೆಯೇ ಜಾಣೆ ಎಂಬ ಬಿರುದು ಇತ್ತು ಇನ್ನೂ puc ರಿಸಲ್ಟ್ ಬಂದಿರಲಿಲ್ಲ.
ಆದರೂ ಸ್ವಾತಿಗೆ ಯಾವ ಆತಂಕವೂ ಇರಲಿಲ್ಲ ಅವಳು ಪರೀಕ್ಶೆಯಲ್ಲಿ ಮೊದಲ ಸ್ಥಾನ ಬಿಟ್ಟು ಕೆಳಗಿಳಿದ್ದಿಲ್ಲ ಅಥವ ಹಾಗೇನಾದರೂ ಆದರೂ ಅವಳಿಗೇನೂ ನಷ್ಟವಿಲ್ಲ. ಅವಳು ಓದಿ ಸಂಪಾದಿಸಬೇಕಾದ್ದು ಏನು ಇರಲಿಲ್ಲ
ಬಸ್ ಸ್ಟಾಪ್ ಬಂತು.ಬಸ್ ಇಂದ ಇಳಿಯುತ್ತಿದ್ದಂತೆ ಸುತ್ತಾ ಮುತ್ತಾ ಇದ್ದ ಕಣ್ಣುಗಳೆಲ್ಲಾ ಅವಳ ಮೇಲೆ ಹಾದವು . ಅವಳಿಗೂ ಗೊತ್ತು ಎಲ್ಲರೂ ಕಂಡಕ್ಟರ್ ಹಾಗು ಡ್ರೈವರ್ ಸೇರಿದಂತೆ ತನ್ನನ್ನೇ ನೋಡ್ತಾ ಇದ್ದಾರೆ ಅಂತ . ಅದೂ ಒಂಥರಾ ಪುಳಕವೇ
ಅವಳಿಗೆ ಅಮ್ಮ ಎಷ್ಟೋ ಸಲ ಹೇಳಿದ್ದಾರೆ "ಸ್ವಾತಿ ಸ್ಕೂಟಿ ಕಲಿತ್ಕೋ ಸುಮ್ನೆ ಬಸಲ್ಲಿ ಎಲ್ಲಾ ಜನರ ಕಣ್ಣು ಬೀಳುತ್ತೆ. " ಅಂತಾ ಅಪ್ಪಾ ಅಂತೂ ಒಂದು ಹೆಜ್ಜೆ ಮುಂದೆ "ಸ್ವಾತಿ ನೀನು ಕಾರಲ್ಲೇ ಹೋಗಿ ಬಾ "ಅಂತಾರೆ
ಆದರೂ ಅವಳಿಗೆ ಬಸ್ಸಲ್ಲೇ ಓಡಾಡೋ ಆಸೆ. ಸುತ್ತಾ ಇರೋ ಜನರನ್ನ ನೋಡೋ ಆಸೆ. ಅವರ ಕಣ್ಣಲ್ಲಿ ಏನಿದೆ ಅಂತ ತಿಳಿಯೋ ಆಸೆ. ಹಿಂದೆ ಬೀಳೋ ಪುಂಡರನ್ನ ಸಾಕು ಎನಿಸುವಷ್ಟು ಗೋಳು ಹಾಕಿಕೊಳ್ಳೋ ಆಸೆ. ಹಾಗೆ ಹಿಂದೆ ಬಿದ್ದ ಹುಡುಗರು ಅಪ್ಪನ ಕೋಪಕ್ಕೆ ಸಿಕ್ಕಿ ಕೈ ಕಾಲು ಮುರಿಸಿಕೊಂಡು ಇವಳನ್ನು ನೋಡಿದರೆ ಸಾಕು ದೂರದಿಂದಲೇ ಕೈ ಮುಗಿದು ಓಡಿ ಹೋಗುವುದನ್ನು ನೋಡಿ ನಗುವ ಆಸೆ
ಬಸ್ ಸ್ಟಾಪ್ ಪೂರ್ತಿ ಜನಗಳು ಇನ್ನೇನು ಯಾವ ಬಸ್ಸೂ ಬರೋದಿಲ್ವೇನೋ ಅನ್ನೊ ಹಾಗೆ ಜನ ಕುರಿ ಮಂದೆ ಥರಾ ನುಗ್ತಾ ಇದ್ದಾರೆ. ಆ ಬಸ್ ಡ್ರೈವರ್ರೋ ಇಡಿ ಜನರನ್ನೇ ತಾನೆ ಹೊತ್ತುಕೊಂಡು ಹೋಗ್ತೀನೇನೋ ಅನ್ನೋಹಾಗೆ ಬೈತಾ ಇದ್ದಾನೆ.
ಎಷ್ಟೆ ಮುಂದುವರೆದ್ರೂ ಈ ಕಂಡಕ್ಟರ್ಸ್‌ಗೆ ಮತ್ತೆ ಡ್ರೈವರ್ಸ್‌ಗೆ ಸಾಫ್ಟ್ ಸ್ಕಿಲ್ಸ್ ಹೇಳಿಕೊಡದಿದ್ದರೆ ಬಿ ಎಮ್ ಟಿಸಿ ಬಸ್ಸಾ ಅನ್ನೋ ರಾಗ ತಪ್ಪಲ್ಲ.
ನಗುತ್ತಾ ಮನೆಯತ್ತ ನಡೆದಳು ಭವ್ಯ ಬಂಗಲೆ ಅದು . ಗೇಟ್ ತೆರೆದು ಒಳಗೆ ಹೋಗುತ್ತಿದ್ದಂತೆ
"ಸ್ವಾತಿ ಇಲ್ಲಿ ಬಾ " ಅಪ್ಪ್ಪ ಸ್ವಿಮ್ಮಿಂಗ್ ಪೂಲ್ ಬಳಿಯಲ್ಲೇ ಕೂತಿದ್ದರು . ಹೋಗಿ ಕೂತಳು . ಇಲ್ಲಿ ಕೂತು ಮಾಡುವುದೇನು ? ಅತ್ತಿತ್ತ ನೋಡತೊಡಗಿದಳು. ಅಪ್ಪ ಅವಳನ್ನ ಕರೆದದ್ದನ್ನೇ ಮರೆತವರಂತೆ ಕಿವಿಗೆ ಮೊಬೈಲ್ ಅಂಟಿಸಿಕೊಂಡಿದ್ದರು.
ಜೋರು ದ್ವನಿಯಲ್ಲಿ ಮಾತು ನಡೆಯುತ್ತಿತ್ತು
"ಲೋ ಲೋಫರ್ ಏನೋ ಮಾಡ್ತಾ ಇದ್ಯಾ ಮೊದಲು ಅವನ್ ಮನೆ ಹೊಡುಕೋ . ಎಲ್ಲಿ ಸತ್ ಬಿದ್ದಿದಾನೆ . ಹಂಗೆ ಅವನ್ ಮನೇಲಿ ಯಾರ್ಯಾರಿದ್ದಾರೆ ಅಂತ ಡೀಟೇಲ್ಸ್ ತಗೋ. ಕಕ್ಕ್ಸಿಬಿಡ್ತೀನಿ. ಈ ಕ್ರಿಷ್ಣಾರೆಡ್ಡಿ ಅಂದ್ರೆ ಉಚ್ಚೊಯ್ಕೋಬೇಕು ಹಂಗ್ ಮಾಡ್ತೀನಿ" ಇದು ಸಾಮಾನ್ಯ ಮಾತುಕತೆ
ಸ್ವಾತಿಯ ಅಪ್ಪ ಫೈನಾಂಶಿಯರ್. ಜೊತೆಗೆ ಪೇಪರ್ ಏಜೆಂಟ್, ಕೇಬಲ್ ಲಾಬಿ. ರಿಯಲ್ ಎಸ್ಟೇಟ್ ಏಜೆಂಟ್. ರಿಂಗ್ ರಸ್ತೆಯಲ್ಲಿರೋ ಚೌಲ್ಟ್ರಿಯಲ್ಲಿ ನಾಲ್ಕು ಇವರದೇ. ಇವರಿರೋ ಊರಲ್ಲಿ ಅರ್ಧ ಭಾಗ ಇವರದ್ದೇ , ಆಸಾಮಿ ಕೈಗೆ ಕಾಲಿಗೆ ಕುತ್ತಿಗೆಗೆ ಅಂತ ಸುಮಾರು ಎರೆಡು ಕೇಜಿ ಚಿನ್ನ ಹಾಕಿಕೊಳ್ಳುತ್ತಿದ್ದ.
ಫೋನ್ ಕಿವಿಯಿಂದ ಕೆಳಗೆ ಬಂತು
ಅವರ ಮಾತು ನಿಲ್ಲುವುದೇ ಕಾಯುತ್ತಿದ್ದಳು "ಏನಪ್ಪ ?"
"ಸ್ವಾತಿ ಯಾವಾಗ ರಿಸಲ್ಟ್?" ಮತ್ತದೇ ಪ್ರಶ್ನೆ ಇದೇ ಪ್ರಶ್ನೆ ಪರೀಕ್ಷೆ ಆದಾಗಿನಿಂದ ಕೇಳಿ ಕೇಳಿ ಸ್ವಾತಿಗೂ ಬೇಸರವಾಗಿತ್ತು
"ಒಂದು ಸಾವಿರ ಸಲ ಕೇಳ್ತಾ ಇದ್ದೀಯಾಪ್ಪ ಬೇರೆ ಏನಾದರೂ ಕೇಳಪ್ಪ"
ಬೇಸರ ಮಾಡಿಕೊಂಡೇ ಉತ್ತರಿಸಿದಳು
"ಸಾರಿ ಸ್ವಾತಿ ಮುಂದಿನ ತಿಂಗಳಲ್ವೇ. ಸರಿಯಾಗಿ ಇಪ್ಪತ್ತು ದಿನಗಳಾದ ಮೇಲಲ್ಲವೇ?"
"ಹೂ ಹೌದು . ಏನ್ಮಾಡಬೇಕಂತ ಇದ್ದೀಯಾ" ಪೇಪರ್ ಓದ್ತಾನೇ ಕೇಳಿದರು . ಅವರಿಗೆ ಮಗಳನ್ನು ಓದಿಸಿ ಡಾಕ್ಟರ್ ಮಾಡಬೇಕಂತಿತ್ತು. ಆದರೆ ಅವಳೋ ಆರ್ಟ್ಸ್ ಬ್ರಾಂಚ್ ತೆಗೆದುಕೊಂಡಿದ್ದಳು. ಸ್ವಾತಿ ಏನು ಹೇಳಿಯಾಳು.
ಅತ್ತಿತ್ತ ನೋಡಿ "ಒಳಗೆ ಹೋಗಿ ಕಾಫಿ ಕುಡೀಬೇಕಂತ ಅನ್ಕೊಂಡಿದ್ದೇನೆ " ಹೇಳಿ ಒಳಗೋಡಿದಳು ಕ್ರಿಷ್ಣಾ ರೆಡ್ಡಿ ಬೆಪ್ಪಾಗಿ ನಗುತ್ತಾ ಸುಮ್ಮನಾದರು
ಅವಳು ರೂಮೊಳೊಗೆ ಹೋದ ತಕ್ಷಣ ಅಮ್ಮ " ಎಲ್ಲಾದರೂ ಹೊರಗಡೆ ಹೋಗಿ ಬಂದ ಮೇಲೆ ಕಾಲು ತೊಳ್ಕೋ ಅಂದ್ರೂ ಕೇಳಲ್ಲ ಯಾವ್ಯಾವ ಜನರು ಏನೇನು ಮಾಡ್ರಿರ್ತಾರೋ ." ಗೊಣಗುತ್ತಿದ್ದರು
ಪಾರ್ವತಮ್ಮ ಜನ ತಮಗೆ ಮಾಟ ಮಂತ್ರ ಮಾಡಿಸಿರುತ್ತಾರೆ ಎಂಬ ಭಯ ಅವಳ ಅಪ್ಪನಿಗೆ ಎಲ್ಲಿ ಯಾರ್ ಯಾವತ್ತು ಮಚ್ಚು ಲಾಂಗ್ ಹಿಡ್ಕೊಂಡು ಬರ್ತಾರೋ ಅಂತ ಭಯ. ಇಲ್ಲದೇ ಏನು ಅಂಥಾ ಪಾಪಗಳನ್ನು ಮಾಡಿರೋರು ಅವರು ಮನುಷ್ಯರನ್ನು ಕೊಚ್ಚುವುದು ಅವರಿಗೊಂದು ಥರಾ ಆಟವಾಗಿತ್ತು. ಇಡೀ ಊರಿಗೆ ರೌಡಿಯ ರೀತಿ ಅವರು .
ರೂಮಿನ ಕಿಟಕಿ ಇಂದ ಅಪ್ಪಾ ಫೋನಲ್ಲಿ ಮಾತಾಡ್ತ್ತಿದ್ದುದು ಕೇಳಿಸ್ತಿತ್ತು "ಏಯ್ ಆ ** ಮಗನಿಗೆ ಏನ್ ರೋಗಾಂತೆ ಇವತ್ತು ಸಂಜೆ ಒಳಗೆ ಅಸಲು ಬಡ್ದಿ ಸಮೇತ ದುಡ್ಡುಕೊಡ್ಲಿಲ್ಲಾಂದ್ರೆ ಅವನ ಹೆಂಡ್ತೀನ ಬಾಂಬೆಗೆ ಮಾರ್ಬಿಡ್ತೀನಂತ ಹೇಳು . ಏನ್ಕಂದ್ಕೊಂಡಿದಾನೆ ************" ಅಪ್ಪನ ಬಾಯಿಂದ ಕೆಟ್ಟ ಮಾತುಗಳೇ . ಕೇಳೋಕಾಗಲ್ಲಾ ಒಂದೆರೆಡು ಸಲಾ ಅಪ್ಪನ್ನ ಬೈದಿದ್ದಳು
ಅದಕ್ಕೆ ಅವರು "ನೋಡು ಸ್ವಾತಿ ಹಿಂಗೆಲ್ಲಾ ಬೈದೆ ಹೋದ್ರೆ ನನ್ನ ದುಡ್ಡು ವಾಪಾಸ್ ಬರೋಲ್ಲಾ. ಹೀಗೆಲ್ಲಾ ಇಲ್ದೆ ಹೋದ್ರೆ ನಮ್ಮ ಹಣಾ ಸ್ಮಶಾನಕ್ಕೋದ ಹೆಣ ಅಂತನ್ಕೊಂಡು ಸುಮ್ನಾಗಬೇಕಷ್ಟೆ"
"ಸ್ವಾತಿ ಬೋಂಡ ತಿಂತೀಯಂತೆ ಬಾರೆ" ಅಮ್ಮಾ ಒಳಗಿಂದ ಕೂಗಿದರು ಮುಖ ತೊಳೆದುಕೊಂಡು ಅಡಿಗೆ ಮನೆಗೆ ಹೋದಳು. ಬೋಂಡಾ ಸಿದ್ದವಾಗಿತ್ತು. ಮೆಲ್ಲತೊಡಗಿದಳು "ಸ್ವಾತಿ ಮುಂದಿನ ತಿಂಗಳಿಗೆ ನಿಂಗೆ ಹದಿನೆಂಟು ತುಂಬುತ್ತೆ" ಅಮ್ಮಾ ಬೋಂಡಾ ಕರಿಯುತ್ತಾ ಹೇಳಿದರು
"ಮುಂದಿನವರ್ಷ ಅದೇ ತಿಂಗಳಿಗೆ ಹತ್ತೊಂಬತ್ತೂ ತುಂಬುತ್ತೆ . ಮತ್ತೆ ಅದರ ಮುಂದಿನ ವರ್ಷ್ಗ ಇಪ್ಪತ್ತೂ ತುಂಬುತ್ತೆ." ಮಾತು ಮುಂದುವರಿಸಿದಳು ಕೀಟಲೆಯಿಂದ
"ಲೇ ತರ್ಲೇ ನಾನ್ ಹೇಳ್ತಾ ಇರೋದು ಕೇಳಿಸಿಕೋ. ಶೀಲತ್ತೆ ಫೋನ್ ಮಾಡಿದ್ರು ಯಾವಾಗ ನಮ್ಹುಡುಗೀನ ಮನೆಗೆ ಕಳ್ಸ್ತೀರಾ ಅಂತಾ ."
"ಕಳಿಸಿಬಿಡು ಯಾಕೆ ಅವರ ಹುಡುಗೀನ ಇಟ್ಕೊಂಡಿದೀಯಾ" ಗೊತ್ತು ಅವಳೇನು ಹೇಳ್ತಾ ಇದಾಳಂತ ಆದರೂ ಬಾಯೊಳಗಿದ್ದ ಬೋಂಡಾ ಜೊತೆಗೆ ಮಾತಾಡಿದಳು
"ಸ್ವಾತಿ ತುಂಬಾ ತರಲೆ ಆಗ್ತಾ ಇದೀಯಾ. ಮದುವೆ ಯಾವಾಗ ಇಟ್ಕೊಳೋಣ ಅಂತಾ ಕೇಳ್ತಾ ಇದ್ದಾರೆ" "ಅಯ್ಯೋ ಶೀಲತ್ತೆಗೆ ಮತ್ತೆ ಮದುವೇನಾ ಮತ್ತೆ ಶ್ರೀದ್ಜರ ಮಾವನ ಗತಿ" ಸ್ವಾತಿ ಉದ್ಗರಿಸಿದಳು
"ಸ್ವಾತಿ ನಿನ್ನನ್ನ ಏನ್ಮಾಡ್ತೀನಿ ಅಂತ ನೋಡು" ಅಮ್ಮ ಅಟ್ಟಿಸಿಕೊಂಡು ಬಂದರು ರೂಮಿಗೆ ಓಡಿ ಬಂದು ಬಾಗಿಲು ಹಾಕಿಕೊಂಡಳು . ಕೆನ್ನೆ ಕೆಂಪಗಾಗಿತ್ತು ಮದುವೆಯ ಮಾತಲ್ಲವೇ
ಅವಳು ಇನ್ನೇನು ಕೊಂಚ ದಿನಗಳಲ್ಲೇ ಮದುವೆ ಅಂತ ಅವಳಿಗೂ ಗೊತ್ತು. ಶಿವು ಅವಳಿಗೂ ಇಷ್ಟಾನೆ ಆದರೆ ಇಷ್ಟು ಬೇಗ ಮದುವೆ ಆಗೋಕೆ ಅವಳಿಗೂ ಇಷ್ಟ ಇಲ್ಲ ಆದರೆ ರೆಡ್ದಿ ಹೆಣ್ಣು ಮಕ್ಕಳಿಗೆ ಹದಿನೆಂಟು ಹತ್ತೊಂಬತ್ತು ತುಂಬ್ತಾ ಇದ್ದ ಹಾಗೆ ಮದುವೆ ಮಾಡಿಬಿಡುವ ಕಾರ್ಯಗಳೇ ಜಾಸ್ತಿ ಜೊತೆಗೆ ಅವರ ಬಿಸಿನೆಸ್ ಸಹಾ ಒಂದು ಥರಾ ಅಪಾಯಕಾರಿಯಾದ್ದರಿಂದ ವಯಸಿಗೆ ಬಂದ ಮಗಳು ಸೆರಗಲಿಟ್ಟ ಕೆಂಡ ಎಂಬ ಆತಂಕ.
ಸ್ವಾತಿ ಮುದ್ದು ಮುದ್ದು ಹುಡುಗಿ ಶಿವು ಸಹಾ ಸಾಫ್ಟವೇರ್ ಇಂಜಿನಿಯರ್. ಒಳ್ಳೆ ಕಂಪೆನಿಯಲ್ಲಿ ಕೆಲ್ಸಕ್ಕೆ ಇದ್ದ. ಇವಳನ್ನು ಕಂಡರೆ ಪ್ರಾಣ ಇವಳಿಗೂ ಅಷ್ಟೇ. ಮೊದಲಿಂದಲೂ ಅವನೇ ತನ್ನ ಜೋಡಿ ಎಂಬ ಅಭಿಮಾನ.
ಸ್ವಾತಿ ಕಾಲಲ್ಲಿ ಅದೃಷ್ಟವನ್ನೇ ಹೊತ್ತು ತಂದವಳು ಅವಳು ಹುಟ್ಟಿದ ಮೇಲೆಯೇ ಅವಳ ಅಪ್ಪನ ಹೊಲ ಗದ್ದೆಗಳು ಬಂಗಾರಕ್ಕಿಂತಲೂ ಹೆಚ್ಚು ಬೆಲೆಬಾಳ ತೊಡಗಿ ಹಣದ ಹೊಳೆಯನ್ನೇ ಹರಿಸಿದವು. ಹಾಗಾಗಿ ಸ್ವಾತಿ ಅವರ ಪಾಲಿಗೆ ಕೇವಲ ಮಗಳಾಗಿರಲಿಲ್ಲ ಅದೃಷ್ಟ ದೇವತೆ ಆಗಿದ್ದಳು.
ಕಂಪ್ಯೂಟರ್ ಆನ್ ಮಾಡಿ ಶಿವು ಜೊತೆ ಚಾಟ್ ಮಾಡುತ್ತಿದ್ದ ಸ್ವಾತಿ ಅವನ ಸಾಲುಗಳನ್ನು ನೋಡಿ ಕೆಂಪುಕೆಂಪಾಗಿ ನಾಚುತ್ತಿದ್ದಳು.
ಹಾಗೆ ಕಿಟಕಿಯಿಂದ ನೋಡಿದವಳಿಗೆ ಶಾಕ್ ಪೋಲಿಸ್ ಕಾನ್‌ಸ್ಟೇಬಲ್ ಜೊತೆ ಅಪ್ಪ ಹೋಗುತ್ತಿದ್ದಾರೆ ಎಲ್ಲಿ ಏನಾಯ್ತೋ ಎಂಭ ಭಯದಿಂದ ಹೊರಗೆ ಓಡಿದಳು
ಅಪ್ಪ ಮಾತ್ರ ನಗುತ್ತಾ ಹೊರಟಿದ್ದರು ಜೊತೆಗೆ ಅಮ್ಮನೂ ಹೊರಟಿದ್ದಳು "ಅಪ್ಪಾ ? ?"ಕೂಗಿದಳು. ಕೂಗಿನಲ್ಲಿ ಪ್ರಶ್ನೆ ಇತ್ತು "ಏನಿಲ್ಲಾ ಸ್ವಾತಿ ಸ್ಟೇಷನ್‌ನಲ್ಲಿ ಅದ್ಯಾರೋ ನಿಮ್ಮ ತಾಯಿಯ ಹೆಸರು ಹೇಳಿದಾಳಂತೆ ಅದ್ಯಾರು ಅಂತ ನೋಡಿಕೊಂಡು ಬರೋಣ ಅಂತ"
"ಅಪ್ಪಾ ನಾನೂ ಬರ್ತೀನಿ ಪ್ಲೀಸ್" ಒಮ್ಮೆ ಹೊರಗೆ ಹೋದ
"ಸರಿ ಬರಲಿ ಬಿಡಿಸಾರ್ ಫ್ಯಾಮಿಲಿ ಟ್ರಿಪ್ ಆದಂಗೆ ಆಗುತ್ತೆ" ಪೇದೆ ಕಿಸಿದ "ಹೌದೌದು ನಿಮ್ಮ ಸ್ಟೇಷನ್ ದೊಡ್ಡ ತಾಜ್ ಮಹಲ್ ನಡ್ಯೋ ಮುಂದೆ ನೋಡ್ಕೊಂಡು"ಸ್ವಾತಿಯ ಅಪ್ಪ ಗದರಿದರು ಅವರ ದರ್ಪವೇ ಅಂತಹದ್ದು. ಎಲ್ಲರೂ ಕಾರನ್ನೇರಿದರು ಕಾರ್ ಪೋಲಿಸ್ ಸ್ಟೇಷನ್‌ನ ಮುಂದೆ ನಿಂತಿತು ಹೊರಗಡೆಯೇ ನಿಂತಿದ್ದ ಎಸ್ ಐ ಸ್ವಾಗತಿಸಿದ "ಬನ್ನಿ ಸಾರ್ . ಅದು ಈ ಹೆಂಗಸು ನಮಗೆ ಲೇಡಿ ಕರ್ಜನ್ ಹಾಸ್ಪಿಟಲ್ ಬಳಿ ಸಿಕ್ಕಳು. ಮಕ್ಕಳ ಕಳ್ಳಿ ಇವಳು" ಸ್ವಾತಿಯ ಅಪ್ಪ "ನಮ್ಮ ಮನೇಲಿ ಯಾವ ಮಕ್ಕಳೂ ಕಳೆದು ಹೋಗಿಲ್ಲ . ನಮ್ಮನ್ಯಾಕೆ ಕರೆಸಿದ್ರಿ?" ಅವರ ಧ್ವನಿಯಲ್ಲಿ ಬೇಸರ ಇತ್ತು "ಸಾರಿ ಸಾರ್ ನೀವೊಂದು ಸಲ ಆಕೆ ಹತ್ರ ಮಾತಾಡಿ ನಾನ್ಯಾಕೆ ಕರೆಸಿದೆ ಅಂತ ಗೊತ್ತಾಗುತ್ತೆ . ನಿಮ್ಮ ಮಗಳು ಇಲ್ಲೆ ಇರಲಿ" ಎಸ್ ಐ ಹೇಳಿದ ಸ್ವಾತಿ ಕೆರಳಿದಳು "ನಾನ್ಯಾಕೆ ಇಲ್ಲೆ ಇರಬೇಕು ನಾನೂ ಆ ಹೆಂಗಸನ್ನ ನೋಡಬೇಕು ನಾನ ನೂವ್ ಚೆಪ್ ನಾನಾ"ಒಮ್ಮೊಮೆ ತೆಲಗು ಬೇಡವೆಂದರೂ ನಾಲಿಗೆಗೂ ಬಂದುಬಿಡುತ್ತಿತ್ತು "ಬರಲಿ ಬಿಡ್ರಿ. ಅವಳೇನು ಬೇರೆಯವಳಾ?" ಸ್ವಾತಿಯ ಅಪ್ಪ "ಸಾರ್ ಆದರೆ ಇದು....." ಎಸ್ ಐ ತಡವರಿಸಿದ "ನೀನು ಬಾ ಸ್ವಾತಿ " ಅವನ ಮಾತನ್ನು ಗಮನಿಸದೆ ಅಪ್ಪ ಮುಂದುವರೆದರು ಸ್ವಾತಿ ಅವರನ್ನು ಹಿಂಬಾಲಿಸಿದಳು
ಶೆಲ್‌ನ ಒಳಗೆ ಆ ಹೆಣ್ಣು ಕೊತಿದ್ದಳು. ತಲೆ ತಗ್ಗಿಸಿದ್ದರಿಂದ ಮುಖ ಕಾಣಿಸಲಿಲ್ಲ. ಅವಳ ಕೈ ಮೇಲೆ ಬಾಸುಂಡಿಗಳು ಪೋಲಿಸರ ಆತಿಥ್ಯ ತಿಂದುದಕ್ಕೆ ಸಾಕ್ಷಿಯಾಗಿತ್ತು.
"ಏಯ್ ನೋಡು . ನೀನು ಹೇಳಿದ ಹಂಗೆ ಪಾರ್ವತಮ್ಮ ಬಂದಿದಾರೆ . ಬೊಗಳು. " ಪಕ್ಕದಲ್ಲೆ ನಿಂತಿದ್ದ ಲೇಡಿ ಕಾನ್‌ಸ್ಟೇಬಲ್ ಗದರಿದಳು.
ಆಕೆ ತಲೆ ಎತ್ತಿದಳು ಪಾರ್ವತಮ್ಮ ಅಂದರೆ ಸ್ವಾತಿಯ ಅಮ್ಮನಿಗೆ ಅವಳ ಗುರುತು ಹತ್ತಲಿಲ್ಲ.
ತುಂಬಾ ವಯಸಾಗಿತ್ತು. ಆ ಹೆಂಗಸಿಗೆ. ಕಣ್ಣುಗಳ ಸುತ್ತಾ ಕಪ್ಪು ವರ್ತುಲಗಳು.
"ಯಾರು? ನಾನು ನಿಂಗೆ ಗೊತ್ತಿದ್ದೀನಾ?" ಪಾರ್ವತಮ್ಮನ ದ್ವನಿಯಲ್ಲಿ ಅವರಿಗೆ ಗೊತ್ತಿಲ್ಲದ ಹಾಗೆ ನಡುಕ ಉಂಟಾಗಿತ್ತು ಆಕೆ ಎದ್ದು ನಿಂತಳು
" ನಾನ್ಯಾರು ಅಂತ ನಿಮಗೆ ನೆನಪಿರಬಹುದು. ನಾನು ನಿಮ್ಮ ಹೆರಿಗೆ ಮಾಡಿದವಳು" ಆಕೆ ಒಂದೊಂದಾಗಿ ಪದಗಳನ್ನು ಕಷ್ಟ ಪಟ್ಟು ಉರುಳಿಸಿದಳು. ಪಾರ್ವತಮ್ಮನಿಗೆ ಮಿಂಚು ಬಂದಂತಾಯ್ತು
ಆಗ ಹದಿನೆಂಟು ವರ್ಶ್ಹಗಳ ಮುಂಚೆ ಆಗಿನ್ನೂ ಅವರಿದ್ದ ಊರು ಕಾಡಿನಂತಿತ್ತು. ಸಿರಿವಂತಿಕೆಯೂ ಇರಲಿಲ್ಲ ತಾಯಿ ತಂದೆ ಇಬ್ಬರನ್ನೂ ಕಳೆದುಕೊಂಡಿದ್ದ ಪಾರ್ವತಿಗೆ ಗಂಡನ ಅಮ್ಮ ಅಂದರೆ ಅವಳ ಅಜ್ಜಿ ಮಾತ್ರ ಇದ್ದರು. ಅವರಿಗೂ ವಯಸಾಗಿತ್ತು. ಆಗ ಪಾರ್ವತಿಯ ಗಂಡ ಕ್ರಿಷ್ಣಾರೆಡ್ಡಿ ಮಹಾ ಕುಡುಕ. ಒಮ್ಮೆ ಹೊರಗೆ ಹೋದರೆ ಮತ್ತೆ ಬರುವುದು ಎಂದೋ. ಅಂತಹ ಒಂದು ದಿನದಲ್ಲೇ ತುಂಬು ಗರ್ಭಿಣಿಯಾಗಿದ್ದ ಪಾರ್ವತಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಅಲ್ಲಿಂದ ಸಿಟಿಗೆ ಬರಬೇಕಾಗಿತ್ತು. ಹೇಗೋ ಪಕ್ಕದ ಮನೆಯಲ್ಲಿದ್ದ ಆಟೋಗೆ ಹೇಳಿ ಅದರಲ್ಲಿ ಬರುತ್ತಿದ್ದಂತೆ ನೋವು ಹೆಚ್ಚಾಗತೊಡಗಿತು. ಅವಳ ಹೆರಿಗೆ ಈಗಲೆ ಆಗಬಹುದೆಂದು ಅನಿಸಿ ದಾರಿಯಲ್ಲಿ ಗೊತ್ತಿದ್ದ ಮನೆಯೊಂದರ ಬಾಗಿಲು ಬಡಿದರು.
ಆ ಮನೆಯ ಹೆಂಗಸು ಮರಿಯಮ್ಮ ಒಬ್ಬ ಸೂಲಗಿತ್ತಿಯಾದ ಕಾರಣ ಒಂದು ಘಂಟೆಯಲ್ಲಿ ಸುಸ್ಸೂತ್ರವಾಗಿ ಹೆರಿಗೆ ಮುಗಿಸಿದ್ದಳು. ಆದರೆ ಪಾರ್ವತಿಗೆ ಎಚ್ಚರವಾಗುವ ವೇಳೆಗೆ ಆ ಹೆಂಗಸು ಇರಲಿಲ್ಲ.ದೇವರೆ ಅವಳ ರೂಪದಲ್ಲಿ ಬಂದು ತನ್ನ ಹೆರಿಗೆ ಮಾಡಿಸಿದ್ದಾರೆಂದು ಧನ್ಯಳಾಗಿದ್ದಳು ಪಾರ್ವತಿ. ಆಗ ಹುಟ್ಟಿದವಳೇ ಸ್ವಾತಿ. ಆ ಹೆಂಗಸು ಇವಳೇ ಇರಬಹುದೆ ಎಂದನಿಸಿತು ಪಾರ್ವತಮ್ಮನಿಗೆ ನೆನಪು ಮಾಡಿಕೊಂಡು ಕೇಳಿದರು "ನೀನು ಮರಿಯಮ್ಮ ಅಲ್ವಾ?"
"ಹೌದೆನ್ನುವಂತೆ ತಲೆ ಆಡಿಸಿದಳು
"ಅಯ್ಯೋ ದೇವರಂಗ್ ಬಂದು ನನ್ನ ಪ್ರಾಣ ಉಳಿಸಿದೆ ತಾಯಿ ನೀನು . ಎಲ್ಲ್ ಹೊರಟೋದೆ ನೀನು ಆಮೇಲೆ?" ಪಾರ್ವತಮ್ಮ ನುಡಿಯುತ್ತಿದ್ದಂತೆ ಆ ಹೆಣ್ಣಿನ ಮುಖದಲ್ಲಿ ಒಂದು ನಗೆ ಹಾದು ಹೋಯ್ತು.
"ಮೇಡಮ್ ಇವಳು ಎಂಥಾ ಕೆಲ್ಸ ಮಾಡಿದಾಳೆ ಅಂತಾ ಗೊತ್ತಿಲ್ಲಾ ನಿಮಗೆ " ಎಸ್ ಐ ಹೇಳುತ್ತಿದ್ದಂತೆ
"ಶ್" ಎಂದು ತಡೆದರು ಕ್ರಿಷ್ನಾರೆಡ್ಡಿ "ಅವಳು ಹೇಳಲಿ ಬಿಡಿ"
ಸ್ವಾತಿಯ ಹೃದಯ ಹೊಡೆದುಕೊಳ್ಳಲಾರಂಭಿಸಿತು. ಆಕೆ ಯಾವುದೋ ಭೂಕಂಪವನ್ನು ಸೃಷ್ಟಿಸಬಹುದು ಎಂದೇ ಅನಿಸತೊಡಗಿತು.
ನಿಟ್ಟ ನೋಟದಿಂದ ಮರಿಯಮ್ಮನನ್ನೆ ನೋಡಲಾರಂಭಿಸಿದರು ಎಲ್ಲರೂ "ಆವತ್ತು ನಿಮಗೆ ಹುಟ್ಟಿದ್ದು ಗಂಡುಮಗು"
ಆಕೆ ಬಾಯಿ ಬಿಟ್ಟಳು ನೋಟ ಮತ್ತೆಲ್ಲೋ ಇತ್ತು
ದೊಡ್ಡದೊಂದು ಬಾಂಬ್ ಹಾಕಿದಂತೆ ಎಲ್ಲರೂ ಸ್ತಬ್ದರಾದರು. ಕ್ಷಣಕಾಲ ಮೌನವಾವರಿಸಿತು. ಮರಿಯಮ್ಮ ಆಗಬಹುದಾದ ಪರಿಣಾಮಗಳನ್ನು ಊಹಿಸುತ್ತಾ ಹಿಂದೆ ಸರಿಯುತ್ತಿದ್ದಂತೆ
ಕೂಡಲೇ ಚೇತರಿಸಿಕೊಂಡ ಕ್ರಿಷ್ಣಾರೆಡ್ಡಿ "ಏಯ್ ಏನೆ ಬೊಗಳ್ತಿದ್ದೀಯಾ . ಇವತ್ತು ನಿನ್ನ ಗತಿ ನೆಟ್ಟಗಿಲ್ಲ ಅನ್ಸುತ್ತೆ ಅದಕ್ಕೆ ನನ್ನಕೈನಲ್ಲಿ ಸಿಕ್ಕಿಹಾಕೊಂಡಿದ್ದೀಯಾ ಸುಳ್ಳು, ಸುಳ್ಳ್ಯ್ ಹೇಳ್ತೀಯಾ ಸೀರೆ ಬಿಚ್ಚಿ ಹೊಡೀತೀನಿ ನಿಂಗೆ ನೋಡು ನಾನು .ರಂಡೆ " ಮರಿಯಮ್ಮನ ಕೂದಲನ್ನು ಹಿಡಿದು ಜಗ್ಗಿದರು.
ಆಕೆ ನೋವಿನಿಂದ ಚೀರಿದಳು "ಸಾರ್ ಪ್ಲೀಸ್ ಸಾರ್ ಬಿಟ್ಟು ಬಿಡಿ ಇದು ಸ್ಟೇಶನ್" ಎಸ್ ಐ ಬೇಡಿಕೊಂಡ.
ಕ್ರಿಷ್ಣಾರೆಡ್ಡಿಯ ಕೈ ಸಡಿಲವಾಯ್ತು ಸ್ವಾತಿಯ ಎದೆಯ ಕಂಪನ ಜೋರಾಗಿತ್ತು.ಇದು ಯಾರ ವಿಷಯ ಹೇಳುತ್ತಾ ಇದ್ದಾಳೆ. ಅರ್ಥವಾಗಲಿಲ್ಲ
ಪಾರ್ವತಿ ತೀರ ತೆಳ್ಳಗಿದನ ಸ್ವರದಲ್ಲಿ " ನಂಗೆ ಹುಟ್ಟಿದ್ದು ಈ ಹೆಣ್ಣು ಮಗೂನೆ .ಸುಳ್ಳಾಡಬೇಡ. "ಸ್ವಾತಿಯನ್ನ ತೋರಿಸಿ ನುಡಿದರು ಪಾರ್ವತಮ್ಮ.
"ಮೇಡಮ್ ಅವಳು ಹೇಳ್ತಿರೋದು ನಿಜಾ ಮೇಡಮ್ ಈ ನಿಜಾನಾ ನಾವೆ ಹೊರಡಿಸಿದಿವಿ ಅವಳ ಬಾಯಿಂದಾ" ಎಸ್ ಐ ಹೇಳಿದಾಗ ಎಲ್ಲರೂ ಅವನತ್ತ ನೋಡಿದರು. "ಇವಳ ಕೆಲ್ಸಾನೆ ಆಗ ತಾನೆ ಹುಟ್ಟಿದ ಮಗೂನ ಕದ್ದುಕೊಂಡು ಹೋಗಿ ಮಾರೋದು . ಇಲ್ಲೀ ತನಕ ಸುಮಾರು ಗಂಡು ಮಕ್ಕಳನ್ನು ಮಾರಿದ್ದಾಳೆ . ಹಾಗೆ ಮಾರ್ತಿದ್ದ ಹಾಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಳು. ಸಕ್ಕತಾಗಿ ಚಚ್ಚಿದ ಮೇಲೆ ಒಬ್ಬೊಬ್ಬರ ಹೆಸರನ್ನೇ ಹೇಳ್ತಿದ್ದಳು ಹಂಗೆ ನಿಮ್ಮ ಹೆಸರೂ ಹೇಳಿದಳು. ಅದಕ್ಕೆ ನಿಮ್ಮನ್ನ ಕರೆಸಿದ್ದು. "

ಸ್ವಾತಿಯ ಉಸಿರು ನಿಂತಂತಾಯ್ತು ಮಾತಾಡಲು ಬಾಯಿ ಬರಲಿಲ್ಲ

ಮರಿಯಮ್ಮ ಮುಂದುವರೆಸಿದಳು "ನಾನ್ಹೇಳ್ತಾ ಇರೋದು ಏಸು ಆಣೆಗೂ ನಿಜಾ. ಈ ಮಗು ನಿಮ್ಮ ಮಗು ಅಲ್ಲಾ. ನಿಮ್ಮ ಮಗು ಒಂದು ಗಂಡು ಮಗು . ಆ ಮಗು ಮುಖ ನೋಡಿದ್ರೆ ಗೊತ್ತಾಗುವುದಿಲ್ಲವಾ ನಿಮ್ಮ ಮಗಳು ಆಗೋಕೆ ಸಾಧ್ಯಾನಾ?" ಎಲ್ಲರೂ ಸ್ವಾತಿಯತ್ತ ನೋಡಿದರು. ಸ್ವಾತಿಗೆ ಏನು ಮಾಡುವುದೆಂದು ತೋಚಲಿಲ್ಲ. ಪೆಚ್ಚು ಪೆಚ್ಚಾಗಿ ನೋಡಿದಳು.

"ನೀನೇಳ್ತಾ ಇರೋದ್ ನಿಜ ಅಂದ್ರೂ ಮತ್ತೆ ಆ ಗಂಡು ಮಗೂ ಎಲ್ಲಿ " ಕ್ರಿಷ್ಣಾರೆಡ್ಡಿ ಕರ್ಕಶವಾಗಿ ಕೇಳಿದರು
ಉತ್ತರಕ್ಕಾಗಿ ಎಲ್ಲರೂ ಮರಿಯಮ್ಮನನ್ನು ನೋಡಿದರು.
ಅವಳು ತಲೆ ತಗ್ಗಿಸಿದಳು
"ಬೊಗಳೇ ಬೇಗ ನನ್ನ ಮಗೂನ ಏನ್ ಮಾಡ್ದೆ" ಪಾರ್ವತಮ್ಮ ಕಿರುಚಿದರು
ಸ್ವಾತಿ ಪಕ್ಕನೆ ತಾಯಿಯನ್ನು ನೋಡಿದಳು. ಅಮ್ಮನ ಕಣ್ಣಲ್ಲಿ ಕಾತುರತೆ.
ಇಲ್ಲಿಯವರೆಗೆ ತನ್ನ ಮಗಳು ಅಂತಿದ್ದ ಅಮ್ಮನಿಗೆ ತನ್ನ ಮಗನ ಬಗ್ಗೆ ತಿಳಿಯಲು ಎಷ್ಟು ಕುತೂಹಲ ತವಕ. ಆಗಲೆ ಮಗನ ಬಗ್ಗೆ ವ್ಯಾಮೋಹ ಬಂದಿತೇ ? ಇನ್ನು ತನ್ನ ಮೇಲಿಟ್ಟ ಪ್ರೀತಿ ಕೇವಲ ಸಂಬಂಧ ಮಾತ್ರದಿಂದಲೇ ಬಂದಿತೇ
ಹಾಗಿದ್ದಲ್ಲಿ ತಾನು ಯಾರು? ತನ್ನ ಅಪ್ಪ ಅಮ್ಮ ಯಾರು? ಇಲ್ಲಿಯವರೆಗೆ ತನ್ನ ಮನೆಯಲ್ಲದ ಮನೆಯಲ್ಲಿ ಬದುಕಿದೆನೇ ನಾನು? ತನ್ನ ಗಮ್ಯ ಯಾವುದು . ಇಲ್ಲಿಯವರೆಗಿನ ಅಪ್ಪ ಅಮ್ಮ ತನ್ನವರಲ್ಲ
ಮುಂದೇನು ಮಾಡುವುದು? ಅವಳ ತಲೆಯಲ್ಲಿ ಪ್ರಶ್ನೆಗಳು ತಾಂಡವವಾಡತೊಡಗಿದವು
ಎಳೆಯ ಮನಸು ಕಮರತೊಡಗಿತು.
ಭಾವನೆಗಳ ತಾಕಲಾಟ ತಾಳದಂತೆ ಅವಳ ತಲೆ ಸಿಡಿದುಹೋಗುವಂತಾಯ್ತು ಅಮ್ಮಾ ಎಂದು ತಲೆ ಹಿಡಿದವಳೇ ಕೆಳಗೆ ಕುಸಿದಳು
ಸ್ವಾತಿ ಎನ್ನುತ್ತಾ ಎಲ್ಲರೂ ಅವಳತ್ತ ಓಡಿದರು.
(ಮುಂದುವರೆಯುವುದು)