Sunday, March 8, 2009

ಜಾಣೆಯಾಗಿರು ನನ್ನ ಮಲ್ಲಿಗೆ-ಭಾಗ ೨ ಯಾವುದು ಸರಿ?

"ಶ್ವೇತಾ ನಂಗೆ ತಲೆ ನೋವ್ತಿದೆ ಸ್ವಲ್ಪ ಅಮೃತಾಂಜನ ಹಚ್ತೀಯಾ, ಏನಾದ್ರೂ ಮಾತ್ರ್ ಇದ್ದರೆ ಕೊಡು"ರಾತ್ರಿ ಮಲಗಿದ್ದಾಗ ರೂಮಿಗೆ ಬಂದುಅತ್ತೆ ಕೇಳಿದರುನಾನು ಎಚ್ಚರವಾಗಿಯೇ ಇದ್ದೆರಾತ್ರಿ ಎರೆಡಾಗಿತ್ತು ಇನ್ನೂ ಸ್ಮಿತ ಮನೆಗೆ ಬಂದಿರಲಿಲ್ಲಅವಳು ಬರುವುದಕ್ಕೆ ಇನ್ನೂ ಒಂದು ಘಂಟೆ ಬಾಕಿ ಇದೆಅತ್ತೆಗೆ ಅಮೃತಾಂಜನ ಹಚ್ಚಿ ಮಾತ್ರೆ ಕೊಟ್ಟು ಬಂದು ಮಂಚದ ಮೇಲೆ ಉರುಳಿದೆಸ್ಮಿತಾಗೆ ಕೊಟ್ಟ ಸದರ ನಿಜಕ್ಕೂ ಬಹಳ ಜಾಸ್ತಿಯಾಗಿತ್ತು.ಪಿಯುಸಿ ಮುಗಿಸಿದ ತಕ್ಷಣ ಕೆಲಸಕ್ಕೆ ಸೇರಿದಳಲ್ಲ .ಮಗಳನ್ನು ಇಂಜಿನಿಯರ್ , ಅಥವ ಡಾಕ್ಟರ್ ಮಾಡಬೇಕೆಂಬ ನನ್ನ ಬಯಕೆ ಬತ್ತಿ ಹೋಗಿತ್ತು.ಮನೆಯಲ್ಲಿ ಹಣದ ಕೊರತೆ ಇಲ್ಲ. ಕಡಿಮೆ ಅಂಕ ತೆಗೆದುಕೊಂಡರೂ ಪರವಾಗಿಲ್ಲ ಹೆಚ್ಚು ಹಣ ಕೊಟ್ಟು ಕಾಲೇಜಿಗೆ ಸೇರಿಸುತ್ತೇನೆ ಎಂಬ ಮಾತಿಗೆ ಎಗರಾಡಿದ್ದಳು"ಹೆಣ್ಣಿಗೆ ಮೊದಲು ಪೈನಾಂಶಿಯಲ್ ಫ್ರೀಡಂ ಬೇಕು ಅದಿದ್ದ್ರೆ ಅವಳನ್ನ ಯಾರೂ ಕೇಳಲ್ಲ. ನಾನು ನಿಮ್ಹತ್ರ ದುಡ್ಡು ತಗೊಂಡು ಓದಿದರೆ ನೀವು ಹೇಳೋ ಹಾಗೆ ಕೇಳ್ಬೇಕಾಗುತ್ತೆನಾನೇನು ಓದದೆ ಇರಲ್ಲ. ಮುಂದೆ ಕರೆಸ್ಪಾಂಡೆನ್ಸ್ ನಲ್ಲಿ ಓದ್ತೀನಿ.""ಈಗ ನಿಂಗೆ ಹಣ ಕೊಡಲ್ಲ ಅಂತ ಯಾರು ಹೇಳಿದ್ದು ಸ್ಮಿತ. ನಿಂಗೆ ಎಷ್ಟು ಬೇಕೋ ಅಷ್ಟು ತಗೋ ಆಸ್ತಿ ಎಲ್ಲಾ ನಿಂದೇ ಅಲ್ಲವೇ" ನನ್ನ ಮಾತಿಗೆ"ಊಹೂ ಯಾವದೂ ನನ್ನದಲ್ಲ ಎಲ್ಲಾ ಅಜ್ಜಿದು ಅವಳ ಗಂಡ ಮಾಡಿಟ್ಟಿರೋದು. ನಿನ್ನದೂ ಅಂತಾನೂ ಏನು ಇಲ್ಲ ಅಪ್ಪ ಏನೂ ಆಸ್ತಿ ಮಾಡಿಲ್ಲ . ಯಾವಾಗ್ಲೂ ಅಜ್ಜಿ ದುಡ್ಡಿನ ಮೇಲೆ ರಿಸ್ಟಿಕ್ಷನ್ ಮಾಡೋದು ನಂಗಿಷ್ಟ ಇಲ್ಲ"ಅವಳು ಹೇಳೋದು ಪೂರ್ಣ ಸುಳ್ಳೇನಾಗಿರಲಿಲ್ಲಅತ್ತೆಗೆ ದುಂದು ವೆಚ್ಚಮಾಡುವುದು ಹಿಡಿಸುತ್ತಿರುಲಿಲ್ಲನಂಗೇನು ಹಣದ ಅಗತ್ಯ ಅಷ್ಟಾಗಿ ಇರಲಿಲ್ಲ. ಆದರೆ ಸ್ಮಿತಾಗೆ ಬೇಕಿತ್ತು. ಓದಿಗೆಲ್ಲಾ ಹಿಂದೆಮುಂದೆ ನೋಡದೆ ಕೊಡುತ್ತಿದ್ದರುಅವಳ ಮೇಕ್ ಅಪ್ ಖರ್ಚು ಜೊತೆಗೆ ಬರ್ತ್ ಡೇ ಗಿಫ್ಟ್ ಇದಕ್ಕೆಲ್ಲಾ ಹಣ ಕೊಡಲು ಸ್ವಲ್ಪ ಬೈದೇ ಕೊಡುತ್ತಿದ್ದುದು. ಆಗೆಲ್ಲಾ ನನಗೂ ಕಸಿವಿಸಿಯಾದದ್ದುಂಟು.ಮಹಿ ಇದ್ದರೆ ಎಂಬ ಅನಿಸಿಕೆಯೂ ಬರದಿರುತ್ತಿರಲಿಲ್ಲ.ಕೊನೆಗೂ ಅತ್ತೆಯ ಹಾರಾಟ ಹಾಗು ನನ್ನ ತೊಳಲಾಟದ ನಡುವಲ್ಲಿಯೂ ಅವಳೇ ಗೆದ್ದಿದ್ದಳು.ಯಾವುದೋ ಕಾಲ ಸೆಂಟರ್‌ನಲ್ಲಿ ಕೆಲಸಕ್ಕೆ ಸೇರಿದಳುತಿಂಗಳಿಗೆ ಇಪ್ಪತ್ತು ಸಾವಿರ ಮೊತ್ತ ಕಡಿಮೆಯದ್ದೇನು ಇರಲಿಲ್ಲಆದರೆ ನಮಗೆ ಹಿಡಿಸದಿದ್ದು ಅವಳ ಸಮಯ ರಾತ್ರಿ ಶಿಫ್ಟನಲ್ಲಿ ಕೆಲಸ ಮಾಡುವುದೆಂದರೆ ನಮಗ್ಯಾರಿಗೂ ಹಿಡಿಸಲಿಲ್ಲ. ನನ್ನ ತಂಗಿ ತಮ್ಮ ಕೂಡ ಬಯ್ಯುತ್ತಿದ್ದರು.ಇವಳ ವಾರಿಗೆಯ ಹುಡುಗಿಯರು ಇನ್ನೂ ಓದುತ್ತಿದ್ದರೆ ಇವಳು ಮಾತ್ರ ದುಡಿಯುತ್ತಿದ್ದಳು.ಇನ್ನೂ ಹತ್ತೊಂಬತ್ತು ವರ್ಷ .ಅತ್ತೆಯ ಕೋಪವೆಲ್ಲಾ ನನ್ನ ಮೇಲೆ ಬೀಳುತ್ತಿತ್ತು"ನೀನು ಕೊಟ್ಟ ಸದರ

ಆವತ್ತು ಅವಳು ದೊಡ್ಡವಳಾದ ವಿಷಯ ಹೇಳದೆ ಇದ್ದಾಗಲೆ ಅವಳಿಗೆ ಬುದ್ದಿ ಹೇಳಿ ನಾಲ್ಕು ಬಿಟ್ಟಿದ್ದರೆ ಈ ಮಟ್ಟಕ್ಕ್ತೆ ಬರುತ್ತಿರಲಿಲ್ಲ"

ಅಜ್ಜಿ ಮೊಮ್ಮೊಗಳ ನಡುವಿನ ಕದನದಲ್ಲಿ ಹಣ್ಣಾಗಿದ್ದೆ.

ಒಮ್ಮೆ ಅತ್ತೆ ಕೋಪಿಸಿಕೊಂಡು ತನ್ನ ತಮ್ಮನ ಮನೆ ಸೇರಿದ್ದರು.

ಆಗ ಅವರೆಲ್ಲಾ ಬಂದು ದೊಡ್ಡ ಪಂಚಾಯತಿ ನಡೆದು .ಸ್ಮಿತಾ ಮನೆ ಬಿಟ್ಟು ಹೋಗುವುದಾಗಿ ಹೆದರಿಸಿದಾಗ ಎಲ್ಲಾ ಚುಪ್. ಇರುವಳೊಬ್ಬಳು ಅವಳೇನಾದರೂ ಮಾಡಿಕೊಂಡರೆ ಎಂಬ ಆತಂಕ.

ಇನ್ನೇನು ಅವಳು ಬರುವ ಹೊತ್ತು.

ಬಾಲ್ಕನಿಯ ಬಾಗಿಲು ತೆರೆದು ಹೊರಗೆ ನಿಂತೆ . ತಣ್ಣಗಿನ ಗಾಳಿ.

ಯಾವತ್ತಿನಂತೆ ಇವತ್ತು ಸುಮೋ ಬರಲಿಲ್ಲ ಬದಲಿಗೆ ಒಂದು ಕಾರು

ಕಾರಿನ ಗ್ಲಾಸ್ ಹಾಕಿದೆ ಮಂದವಾಗಿ ಒಳಗಿನ ದೃಶ್ಯ ಕಾಣುತ್ತಿದೆ. ಇದೇಕೆ ಇಳಿಯುತ್ತಿಲ್ಲ ಇವಳು

ಏಕೋ ಸಂಶಯವಾಯ್ತು
ಕಾರಿನಲ್ಲಿದ್ದ ಎರೆಡೂ ದೇಹಗಳೂ ತಬ್ಬಿದ್ದು ಅಸ್ಪಷ್ಟವಾಗಿ ಕಾಣುತ್ತಿದೆ
ಆತಂಕದಿಂದ ಹೃದಯ ಬಡಿದುಕೊಳ್ಳಲಾರಂಭಿಸಿತು. ಬೇಡವೆಂದರೂ ನನ್ನ ಹಾಗು ಮಹಿಯ ಕ್ಷಣಗಳು ನೆನಪಿಗೆ ಬಂದವು.
ಸ್ವಲ್ಪ ಹೊತ್ತಿನಲ್ಲಿ ಸ್ಮಿತಾ ಕಾರಿನಿಂದ ಇಳಿದಳು. ಕೊಂಚ ದಣಿದವಳಂತೆ ಕಾಣುತ್ತಿದ್ದಾಳೆ.
ಏಕೋ ಬಲಗಣ್ಣು ಅದಿರುತ್ತಿತ್ತು

ಕಾರಿನಲ್ಲಿದ್ದಾತನಿಗೆ ಬಾಯ್ ಹೇಳಿ
ಗೇಟ್ ತೆರೆದು ಒಳಗೆ ಬಂದಳು
ಬಾಗಿಲು ಬಡಿದ ಸದ್ದಾದಾಗ ಬಾಗಿಲು ತೆರೆದೆ
"ಸ್ಮಿತಾ ಯಾರೆ ಅದು?"
"ಯಾರಮ್ಮ? "ಏನೂ ಗೊತ್ತಿಲ್ಲದವಳಂತೆ ಕೇಳಿದಳು
"ನೀನು ಬಂದೆಯಲ್ಲ ಆ ಕಾರಲ್ಲಿದ್ದವನು ಯಾರು?"

"ಅದು ಕಂಪನಿ ಟ್ಯಾಕ್ಸಿ. ಇವತ್ತು ಸುಮೋ ಬರಲಿಲ್ಲ ಅದಕ್ಕೆ...."
" ಮುಚ್ಚು ಬಾಯಿ ................." ನನ್ನ ದ್ವನಿ ನನಗರಿವಿಲ್ಲದೇ ಏರಿತ್ತು. "ಸುಳ್ಳು ಹೇಳ್ಬೇಡಾ ನಾನು ಎಲ್ಲಾ ನೋಡಿದೆ" ಅತ್ತೆ ಕೇಳಿಸಿಕೊಂಡರೆ ಕಷ್ಟವಾಗಬಹುದು ಎನಿಸಿ ದ್ವನಿ ಅಡಗಿಸಿ ಕೇಳಿದೆ

ಸ್ಮಿತಾ ಮಾತಾಡಲಿಲ್ಲ.ಸಿಕ್ಕಿಹಾಕಿಕೊಂಡವಳಂತೆ ನೆಲ ನೋಡಿದಳು
"ಯಾರೆ ಅದು .ನಿಜ ಹೇಳು ನಿನ್ನ ತಾಳಕ್ಕೆ ಕುಣಿದೂ ಕುಣಿದೂ ಸಾಕಾಗಿ ಹೋಗಿದೆ. ನಿಜ ಹೇಳಲಿಲ್ಲಾಂದರೆ ನಾಳೆ ಇಂದ ಕೆಲಸಕ್ಕೆ ಕಳಿಸಲ್ಲ"

ಸ್ಮಿತಾ ನೆಲ ನೋಡುತ್ತಲೇ ಹೇಳಿದಳು

"ಅಮ್ಮ ಅವನು ನನ್ನ ಕಲೀಗ್. ರಾಕೇಶ್ ಅಂತ .ನಾವಿಬ್ಬರೂ ಒಂದೇ ಫ್ಲೊರಿನಲ್ಲಿ ಕೆಲಸ ಮಾಡೋದು. "
"ಅದಿರಲಿ . ನೀವಿಬ್ಬರೂ ಹೀಗೆ ರಾತ್ರಿಯಲ್ಲಿ ಬರೋದಂದ್ರೆ ಏನು ?
"ಅಮ್ಮ ನಂಗೆ ಅವನು ಇಷ್ಟ ಆದ ಅವನಿಗೆ ನಾನು ಇಷ್ಟಾ ಅದಕ್ಕೆ.................."
"ಇಷ್ಟ ಆದ್ರೆ ನಿಮ್ಮ ನಿಮ್ಮ ಮನೇಲಿಹೇಳಿ ಮದುವೆ ಮಾಡಿಕೊಳ್ಳಿ ಇದೇನು ರಸ್ತೇಲೆಲಾ ನಿಮ್ಮ ರೋಮಾನ್ಸ್" ಮುಂದಿನ ವಿಷಯಾನಹೇಳೋಕೆ ಬಾಯಿ ಬರಲಿಲ್ಲ
"ಇಲ್ಲಾ ಮ ನಾನು ಈಗಲೆ ಮದುವೆಯಾಗೋ ಯೋಚನೆ ಇಲ್ಲಾಮ ಇನ್ನೂ ಮದುವೆಗೆ ಸಮಯ ಬಂದಿಲ್ಲ"
"ಮತ್ತೆ ತಬ್ಕೋಳೋಕೆ ಸಮಯ ಬಂತೇನೆ" ಬಾಯಿಯನ್ನುಹಿಡಿತದಲ್ಲಿ ಇಟ್ಟುಕೊಳ್ಳಲಾರದೆ ಹೋದೆ.
ಆಕೆ ಮಾತಾಡಲಿಲ್ಲ
"ನಾಳೆ ಮೊದಲು ಆ ಹುಡುಗನ್ನ ಕರ್ಕೊಂಡು ಬಾ ಮಾತಾಡ್ತೀನಿ ಯೋಗ್ಯ ಅಂತನ್ನಿಸಿದರೆ ಮುಂದೆ ನೋಡೋಣ"
"ಸಾರಿ ಅಮ್ಮ ಅವನು ಬರಲ್ಲ . ನಾವಿಬ್ಬರೂ ಇನ್ನೂ ಮದುವೆ ಯೋಚನೆ ಮಾಡಿಲ್ಲ, ಅಷ್ಟಕ್ಕೂ ಒಬ್ಬ ಯೋಗ್ಯಾನಾ ಅನ್ನೋದು ನಿರ್ಧರಿಸಬೇಕಾದವಳು ನಾನು ನೀನಲ್ಲ. " ನಿರ್ಭಯವಾಗಿ ನುಡಿದಳು
"ಹಾಗಿದ್ದರೆ ನೀನು ಅವನ್ನ ಮೀಟ್ ಮಾಡೋದು ನಿಲ್ಲಸಬೇಕಾಗುತ್ತದೆ"
"ಆಗಲ್ಲಾಮ್ಮ ಏನಮ್ಮ ಫಿಲಮ್ಸ್‌ನಲ್ಲ್ ಬರೋ ವಿಲನ್ಸ್ ಥರಾ ಮಾತಾಡ್ತೀಯಲ್ಲ ನೀನು." ಒಂದು ಚೂರು ಕಾಂಪ್ರಮೈಸ್ ಆಗುವ ರೀತಿಯೇ ಕಾಣಲಿಲ್ಲ

"ಆಗಲ್ಲಾಂದೆ ಈ ಮನೆಲಿ ನಿಂಗೆ ಜಾಗ ಇಲ್ಲ" ಇಲ್ಲಿಯವರೆಗೆ ಕಟ್ಟಿ ಹಿಡಿದಿದ್ದ ಆಕ್ರೋಶವೆಲ್ಲಾ ಒಂದೆ ಮಾತಲ್ಲಿ ಹೊರಗಡೆ ಬಂತು

"ಅಮ್ಮಾ ನನ್ನ ಮನೆ ಬಿಟ್ಟು ಕಳಿಸ್ತೀಯಾ?" ಕೂಡಲೆ ಕೇಳಿದಳು

"ಹೌದು ಸ್ಮಿತಾ ಇದು ಒಳ್ಳೆಯ ಹೆಸರಿರುವ ಮನೆ . ಇದನ್ನ ಹಾಳು ಮಾಡಿದರೆ ಸಹಿಸೋಕೆ ಆಗುವುದಿಲ್ಲ. ನಿಮ್ಮಜ್ಜಿಗೆ ನೀನು ಮಾತಾಡಿದ ವಿಶ್ಯ ಕೇಳಿದರೆ ಎಷ್ಟು ಬೇಜಾರು ಮಾಡಿಕೊಳ್ಳುತಾರೋ"

"ಅಮ್ಮ ಐ ಅಮ್ ರಿಯಲ್ಲಿ ನಾಟ್ ವರೀಡ್ ಅಬೌಟ್ ಹರ್ ಹಾಗೆಯೇ ಮನೆ ಬಿಟ್ಟು ಹೋಗುವ ಬಗ್ಗೆಯೂ ..ಆದರೆ ನಿನ್ನನ್ನು ಬಿಟ್ಟು ಹೋಗೋದು ಅಷ್ಟೊಂದು ಸುಲಭ ಅಲ್ಲಾಮಾ"

ದಂಗಾದೆ

"ಸ್ಮಿತಾ ನಿನ್ನ ಮಾತು ಕೇಳಿದರೆ ನೀನು ನನ್ನ ಮಾತು ಕೇಳೋಲ್ಲ ಅನ್ನೋ ಹಾಗೆ ಇದೆ. ನಿಂಗ್ಯಾಕೆ ಬಂತು ಈ ಥರಾ ದುರ್ಬುದ್ದಿ . ಏನಂಥಾ ಹುಟ್ಟಿದ್ಯೆ ನನ್ನ ಹೊಟ್ಟೇಲಿ. ನಿಮ್ಮಪ್ಪ ಹೋದ ಹಾಗೆ ನಾನೂ ಹೋಗಿದ್ರೆ ಚೆನ್ನಾಗಿರ್ತಿತ್ತು" ಬಿಕ್ಕಳಿಸಿ ಅಳತೊಡಗಿದೆ

"ಅಮ್ಮಾ ನೀನು ಇನ್ನೂ ಅದೇ ಹಳೇ ಕಾಲದಲ್ಲೇ ಇದ್ದೀಯಾ . ಈಗ ನೋಡಮ್ಮ ನಮ್ಮ ಬದುಕಿನ ಪ್ರಶ್ನೆ ನಮ್ಮದು. ನಾನು ಆರಿಸಿಕೊಂಡದ್ದು ಹಾದಿ ಸರಿ ಇಲ್ಲಾಂದರೆ ಅದರ ಫಲ ನನ್ನದೇ ಅಂತ ನೀನೆ ಹೇಳಿದ್ದೀಯಾ. ನಂಗೂ ಯಾಕೋ ಇಲ್ಲಿರಬೇಕು ಅಂತನ್ನಿಸ್ತಿಲ್ಲ. ಸ್ವಾತಂತ್ರ್ಯದ ಕಲ್ಪನೆ ಇಲ್ಲಿರೋ ಇಬ್ಬರೂ ಹೆಂಗಸರಿಗೂ ಇಲ್ಲ. ನಾನು ನಾಳೇನೆ ಹೋಗ್ತಾ ಇದ್ದೀನಿ."

"ಎಲ್ಲಿಗೆ ಹೋಗ್ತಾ ಇದ್ದೀಯಾ?" ಬಿಡಿ ಬಿಡಿಯಾಗಿ ನುಡಿದೆ

"ಗೊತ್ತಿಲ್ಲ, ಆದರೆ ಇದೇ ಊರಲ್ಲಿ ಇರ್ತೀನಿ. ನಂಗೆ ನಿನ್ನ ನೋಡದೆ ಇರೋಕಾಗಲ್ಲಾಮ್ಮ"ಅವಳ ದನಿಯೂ ಗದ್ಗದಿತವಾಗಿತ್ತೇನೋ.

ನಾನೇಕೆ ಇಷ್ಟೊಂದು ಕಠಿಣಳಾಗ್ತಾ ಇದ್ದೇನೆ ಅವಳ ಬಗ್ಗೆ. ನನ್ನ ಕರುಳು ದೂರವಾಗುವ ಹಾಗೆ ನಾನೇಕೆ ಮಾತಾಡ್ತಿದೀನಿ.

"ಸ್ಮಿತಾ ಮತ್ತೊಂದು ಸಲ ಯೋಚಿಸು. ನಂಗೆ ನೀನಿರೋಳೆ ಒಬ್ಬಳು . ಈಗಲಾದರೂ ಒಪ್ಪು. ಆ ರಾಕೇಶ್ ಜೊತೆ ಹೋಗಲ್ಲ ಅಂತ"

ಸುಳ್ಳಾದರೂ ಒಮ್ಮೆಯಾದರೂ ಒಪ್ಪಕೂಡದೆ? ಮನಸ್ಸು ಸುಳ್ಳನ್ನೂ ಒಪ್ಪಲು ಸಿದ್ದವಾಗಿತ್ತು

"ಅಮ್ಮಾ ನೀನೆ ನನ್ನ ನಿಲುವನ್ನು ಯಾಕೆ ಒಪ್ಪಕೂಡದು?ಹೆಣ್ಣಾಗಿ ಇನ್ನೊಬ್ಬ ಹೆಣ್ಣಿನ ಸ್ವಾತಂತ್ರ್ಯದ ಬಗ್ಗೆ ಯಾಕೆ ಯೋಚಿಸ್ತಿಲ್ಲ ನೀನು" ಪ್ರತಿ ಪ್ರಶ್ನೆ

"ಸ್ಮಿತಾ ನಿನ್ನದು ಸ್ವಾತಂತ್ರ್ಯ ಅಲ್ಲ. ಸ್ವೇಛ್ಚೆ . ಹೆಣ್ಣು ತನ್ನ ಪರಿಮಿತಿ ತಾನು ಅರಿತುಕೊಂಡರೆ ಅವಳ ಬಾಳು ಸುಂದರ ಆಗಿರುತ್ತೆ. ಇಲ್ಲಾಂದರೆ ಬಾಳು ಬರಡಾಗುತ್ತೆ"

"ಅಮ್ಮಾ ನಂಗೆ ಲಕ್ಷ್ಮಣ ರೇಖೆ ಇಷ್ಟ ಇಲ್ಲ. ನಮ್ಮ ಇಷ್ಟಕೆ ನಾವಿರೊ ಕಲ್ಪನೇನ ನೀನು ಸ್ವೇಚ್ಚೇ ಅಂತೀಯಾ ನಾನು ಸ್ವಾತಂತ್ರ್ಯ ಅಂತೀನಿ. ಸರಿ ಸುಮ್ಮನೆ ಮಾತು ಬೇಡ ಅಮ್ಮ . "

ಇನ್ನು ಮಾತು ಸಾಕೆನ್ನುವಂತೆ ರೂಮಿಗೆ ಹೋದಳು.

ನೆಲದ ಮೇಲೆ ಕುಸಿದೆ. ಹೆಗಲಮೇಲೆ ಯಾರೋ ಕೈಇಟ್ಟಂತಾಯ್ತು. ತಲೆ ಎತ್ತಿದೆ. ಅತ್ತೆ ಅವರ ಕಣ್ಣಲ್ಲಿ ನೀರು, ನಿರಾಸೆ, ನೋವು ಹೆಪ್ಪುಗಟ್ಟಿತ್ತು. ನನ್ನ ಜೊತೆ ಕೆಳಗೆ ಕುಳಿತರು

ಅತ್ತೆಯ ಹೆಗಲಿಗೊರಗಿ ಅಳಲಾರಂಭಿಸಿದೆ. ಅಳುತ್ತಲೇ ಇದ್ದೆ ಯಾವಾಗ ನಿದ್ದೆ ಬಂದಿತೋ ತಿಳಿಯಲೇ ಇಲ್ಲ. ಅತ್ತೆಯ ಕೈ ನನ್ನನ್ನು ನೇವರಿಸುತ್ತಲೇ ಇತ್ತು.

****************************************------------------------------***********************

ಇದೆಲ್ಲಾ ಆಗಿ ಈಗಾಗಲೆ ಎರೆಡು ವರ್ಷಗಳಾಗಿವೆ

ನನ್ನ ಸ್ಮಿತ ಮನೆಯ ಮುಂದಿನ ಬೀದಿಯಲ್ಲೇ ಇರುವ ಮನೆಯೊಂದನ್ನು ಬಾಡಿಗೆಗೆ ಪಡೇದಿದ್ದಾಳೆ. ರಾಕೇಶನ ಜೊತೆ ವಾಸಿಸುತ್ತಿದ್ದಾಳೆ. . ನನ್ನ ಹುಟ್ಟಿದ ಹಬ್ಬಕ್ಕೆ ವಿಷಸ್ ಹೇಳಲು ಬರ್ತಾಳೆ. ನಾನು ಮಾತಾಡುವುದಿಲ್ಲ. ಅತ್ತೆ ಬದಲಾಗಿದ್ದಾರೆ ಎನಿಸುತ್ತದೆ. ಅಥವ ವಯಸಾದ ಮೇಲೆ ಮನಸ್ಸು ಮಾಗಿದೆ ಎನಿಸುತ್ತದೆ.ಅತ್ತೆಯೇ ಅವಳೊಂದಿಗೆ ಮಾತಾಡುತ್ತಾರೆ. ಕೆಲವು ಬಾರಿ ಅವಳನ್ನು ಒಪ್ಪಿಕೋ ಎಂದೂ ಹೇಳಿದ್ದಾರೆ. ನಾನೆ ಒಪ್ಪುತ್ತಿಲ್ಲ.ಈಗಾಗಲೆ ನೆರೆ ಹೊರೆಯವರೆಲ್ಲಾ ನಮ್ಮ ಬಗ್ಗೆ ಮಾತಾಡಿ ಸಾಕಾಗಿದ್ದಾರೆ. ತಮ್ಮ ಸ್ಮಿತಾ ಮನೆಗೆ ಹೋಗಿ ಹೊಡೆದೂ ಬಂದಿದ್ದ್ದಾನೆ. ತಂಗಿ ಬುದ್ದಿಯೂ ಹೇಳಿದ್ದಾಳೆ

ಸ್ಮಿತಾಳ ನಿಲುವಾಗಲಿ ನನ್ನ ಮನಸ್ಸಾಗಲಿ ಬದಲಾಗಲೆ ಇಲ್ಲ.

ಅವಳ ನಡತೆ ಸರಿ ಎಂದು ಒಪ್ಪಿಕೊಳ್ಲಲು ನಾನು ಸಿದ್ದಳಿಲ್ಲ. ನಾನು ಹೇಳಿದ್ದು ಸರಿ ಎಂಬ ಮಾತಿಗೆ ನಿಲುಕಲು ಅವಳು ಬದ್ದಳಿಲ್ಲ. ಅವಳ ನೆನಪುಗಳನ್ನು ಅವಳ ಕೊಠಡಿಯಲ್ಲಿ ಕೂಡಿ ಹಾಕಿದ್ದೇನೆ. ನೆನಪುಗಳು ಹೊರ ಬಂದರೆಲ್ಲಿ ಮನಸ್ಸು ಕರಗ್ಗುತದೆಯೋ ಎಂಬ ಆತಂಕಕ್ಕೆ.

ಹೀಗಿರುವಾಗಲೆ ತಂಗಿಯ ಗೀತಾಳ ಫೋನ್ ಬಂತು. ಮೊಬೈಲ್ ಎತ್ತಿದೆ

"ಅಕ್ಕ ಗಾಯಿ ಮನೆಗೆ ವಾಪಸ್ ಬಂದಿದಾಳೆ" ದ್ವನಿಯಲ್ಲಿ ಆತಂಕ

ಗಾಯತ್ರಿ ಗೀತಾಳ ಮಗಳು . ಆರು ತಿಂಗಳ ಹಿಂದೆ ಅವಳ ಮದುವೆ ಅಮೇರಿಕಾದ ಗಂಡಿನ ಜೊತೆ ನಡೆದಿತ್ತು. ಅವನ ಜೊತೆಯೇ ಹೋದವಳು ಈಗ ಮತ್ತೇಕೆ ಬಂದಿದ್ದಾಳೆ . ಗೀತಾಳ ಮಾತು ಮುಂದುವರೆಯಿತು

"ಏನು ವಿಷಯ ಅಂದರೆ ಏನೂ ಹೇಳ್ತಾ ಇಲ್ಲ. ನೀವೆಲ್ಲಾ ಸೇರಿ ನನ್ನ ಬಾಳು ಹಾಳ್ಮಾಡಿದ್ರಿ. ಈಗ ಸಾವೇ ನಂಗೆ ಗತಿ ಅಂತಿದಾಳೆ"

"ಏನು ವರದಕ್ಷಿಣೆ ವಿಷಯಾನಾ?"

"ವರದಕ್ಷಿಣೇ ಅಂತೂ ಅಲ್ಲಾಕ್ಕ . ಅವರೇ ಮುಂದೆ ನಿಂತು ಖರ್ಚೆಲ್ಲಾ ನೋಡಿಕೊಂಡು ಮದುವೆ ಮಾಡಿಕೊಂಡ್ರು. ರಾಮಕೃಷ್ಣಾನು ಒಳ್ಳೆಯವನೇ ಒಂದೂ ದುರಭ್ಯಾಸ ಇಲ್ಲ . ಆದರೂ ಇವಳ್ಯಾಕೆ ಬಂದಳು . ಅಂತ ತಿಳೀತಿಲ್ಲ. ನೀನಾದ್ರೂ ಬಾ ಆಕ್ಕ"

ರಾಮಕೃಷ್ಣಾ ಗಾಯಿಯ ಗಂಡ.

"ಆಯ್ತು ಕಣೇ ಈಗಲೆ ಬರ್ತೀನಿ"

ಅತ್ತೆಗೆ ವಿಷಯ ಹೇಳಿದೆ ತಾವು ಬರುತ್ತೇವೆಂದರು. ನಮ್ಮಿಬ್ಬರನ್ನೂ ಹೊತ್ತ ಕಾರ್ ಮುಂದೆ ಚಲಿಸಿತು.

ಹೊರಗಡೆಯೇ ಗೀತಾ ನಿಂತಿದ್ದಳು. ತಮ್ಮ ಸುಧೀರನೂ ಬಂದಿದ್ದ

"ಏನಾಯ್ತೇ . "

"ಗೊತ್ತಿಲ್ಲಾಕ್ಕ ತುಂಬಾ ಬೇಜಾರಾಗಿ ಹೋಗಿದೆ. ಮನೆಯಲ್ಲಿ ಇವರು ಬೇರೆ ಎಲ್ಲಾದಿಕ್ಕೂ ನಾನೆ ಕಾರಣ ಅನ್ನೊಹಾಗೆ ಬಿಹೇವ್ ಮಾಡ್ತಾ ಇದಾರೆ. "

ಗೀತ ಗಂಡ ಹಾಗೆ ಸ್ವಲ್ಪ ಹೆಚ್ಚು ಸಿಡುಕು. ದುಡುಕು. ಹೆಣ್ಣೆಂದರೆ ಅಷ್ಟಕ್ಕಷ್ಟೆ. ಗೀತಾ ಮದುವೆಯಾದಂದಿನಿಂದ ಅಂಥ ನೆಮ್ಮದಿಯನ್ನೇನು ಕಂಡಿಲ್ಲ.

ನನ್ನ ಬಾಳಂತೂ ಹೀಗಾಯ್ತು ಎಂದರೆ ಗಂಡನಿದ್ದೂ ಇವಳೂ ಸುಖವಾಗೇನು ಇಲ್ಲ. ಇವಳ ಮಗಳು ಆರು ತಿಂಗಳಲ್ಲೇ ಹೀಗೇಕೆ ಆಡುತ್ತಿದ್ದಾಳೆ

ರೂಮ್‌ನಲ್ಲೇ ಗಾಯಿತ್ರಿ ಮಲಗಿದ್ದಳು

ನನ್ನನ್ನು ನೋಡುತ್ತಲೇ ಅಳಲಾರಂಭಿಸಿದಳು. ಅವಳು ನನ್ನ ಕೈನಲ್ಲಿ ಆಡಿದ ಮಗು. ಸ್ಮಿತಾಳ ನಡವಳಿಕೆಯಿಂದ ಗಾಯತ್ರಿ ನನಗೆ ಹತ್ತಿರವಾಗಿದ್ದಳು. ನಾನು ಹೇಳಿದಂತೆ ಕೇಳುತ್ತಿದ್ದಳು. ಅವರಮ್ಮ ನಿಗಿಂತ ನನ್ನನ್ನೆ ಹೆಚ್ಚು ಹಚ್ಚಿಕೊಂಡಿದ್ದಳು

ಇಂದು ಅಳುತ್ತಿದ್ದ ಆ ಮಗುವನ್ನು ಕಂಡ್ ಕೂಡಲೆ ಕರುಳು ಕಿವುಚಿದಂತಾಯ್ತು.

ಎಲ್ಲರನ್ನೂ ಹೊರಗೆ ಕಳಿಸಿ ಬಾಗಿಲು ಹಾಕಿದೆ

ಗಾಯಿತ್ರಿ ನನ್ನನ್ನು ತಬ್ಬಿಕೊಂಡು ಅಳಲಾರಂಭ್ಸಿದಳು

ಅವಳು ಅಳುವಷ್ಟೂ ಹೊತ್ತು ಅಳಲಿ ಎಂದು ಬಿಟ್ಟು ಬಿಟ್ಟೆ

ಕೊಂಚ ಹೊತ್ತಾದ ಮೇಲೆ ಅವಳ ಅಳು ನಿಂತಿತು

ಹೇಳಲಾರಂಭ್ಸಿದರು

"ದೊಡ್ಡಮ್ಮ ನೀವೆಲ್ಲಾ ಹೇಳಿದವರನ್ನ ನಾನು ಮದುವೆಯಾದೆ. ಅವರಿಗೆ ಸುಖ ಪಡೆಯಲು ಹೆಂಗಸೇ ಬೇಕಿಲ್ಲ. ಕೇವಲ ಮನೆಯಲ್ಲಿ ಹೇಳಿದರಂತ ನನ್ನನ್ನು ಮದುವೆ ಆದರಂತೆ. ಮನೆಯಲ್ಲಿ ಇದ್ದೇನಲ್ಲ ಎಂದು ನನ್ನನ್ನು ಮುಟ್ಟುತ್ತಿದ್ದರಷ್ಟೆ.ಅವರಿಗೆ ಸುಂದರವಾದ ಹುಡುಗರಲ್ಲೇ ಆಸಕ್ತಿ ಜಾಸ್ತಿ. ಇಂಥಾ ವಿಕೃತ ಕಾಮಿಯ ಜೊತೆ ವಾಸಿಸೋಕೆ ನಂಗೆ ಆಗ್ತಾ ಇಲ್ಲ. ಆಗಲೇ ಹೇಳೋಣ ಅಂದ್ಕೊಂಡ್ರೂ ನೀವೆಲ್ಲಾ ನೋಡಿ ಮಾಡಿದ ಮದುವೆ. ಹೇಳಿದರೆ ನಿಮಗೆಲ್ಲಾ ಬೇಸರ ಆಗುತ್ತೇಂತ ಸುಮ್ಮನೆ ಇದ್ದೆ. ಆದ್ರೂ ನಂಗೆ ತಡೆಯೋಕೆ ಆಗ್ಲಿಲ್ಲಾ . ಇದೆಲ್ಲಾ ಅಸಹ್ಯ ನನ್ನ ಕೈಲಿ ನೋಡ್ಕೊಂಡು ಇರೋಕೆ ಆಗಿಲ್ಲ. ಹೇಗೋ ಸುಮ್ಮನೆ ಇದ್ರೆ ಈಗ ಅವರು ಯಾವದೋ ಹುಡುಗನ್ನ ಬಯಸಿದ್ದಾರೆ. ಅವನೋ ಅವರ ಜೊತೇಲಿ ಇದ್ದುಕೊಂಡು ನಂಗೂ ಹಿಂಸೆ ಕೊಡ್ತಿದಾನೆ. ಅವನು ಅವರ ಜೊತೆ ಮಲಗಬೇಕೆಂದರೆ ನಾನು ಅವನ ಜೊತೆ ಮಲಗಬೇಕಂತೆ. ಇದೆಲ್ಲಾ ನಂಗೆ ಹಿಡಿಸಲಿಲ್ಲ ದೊಡ್ಡಮ್ಮಾ ಅದಕ್ಕೆ ನಾನು ಹೇಗೋ ತಪ್ಪಿಸಿಕೊಂಡು ಬಂದ್ಬಿಟ್ಟೆ."

ಅವಳ ಕಣ್ಣಲ್ಲಿ ಧಾರಾಕಾರ ನೀರು. ನನಗೋ ಬೆಟ್ಟ ತಲೆ ಮೇಲೆ ಬಿದ್ದ ಹಾಗೆ ಅನುಭವವಾಯ್ತು.

ಅವಳನ್ನು ಸಮಾಧಾನಿಸಿದೆ.

ಹೊರಗಡೆ ಬಂದು ಗೀತಾಗೆ ವಿಷಯ ತಿಳಿಸಿದೆ.

"ಈಗೇನು ಮಾಡೋದೆ. "

"ಡೈವೋರ್ಸ್‌ಗೆ ಅಪ್ಪ್ಲೈ ಮಾಡೋದಷ್ಟೆ ಮತ್ತಿನ್ನೇನು? "

"ಈಗ ಗಾಯಿತ್ರಿ ಐದು ತಿಂಗಳ ಗರ್ಭಿಣಿಯಾಗಿದ್ದಾಳೆ .ಅದೂ ಹೇಗೆ ಸಾಧ್ಯ "ಗೀತಾಳ ಆತಂಕ ಅರ್ಥವಾಯ್ತು

"ಇರಲಿ ಬಿಡೆ ಅಂಥಾ ಗಂಡನ ಜೊತೆ ಬಾಳೋದಿಕ್ಕಿಂತ ಒಬ್ಬಳೇ ಬಾಳೋದೆ ಬೆಟರ್. ಬೇಕಿದ್ರೆ ಮುಂದೆ ಬೇರೆ ಮದುವೆ ಮಾಡೋಣ"

ಮನೆಯವರೆಲ್ಲಾ ಒಪ್ಪಿದರು.

ಆದರೆ ಈ ಡೈವೋರ್ಸ್‌ಗೆ ರಾಮಕೃಷ್ಣ ಒಪ್ಪಲಿಲ್ಲ. ಅವನ ಉದ್ದೇಶ ಈಡೇರಲಿಲ್ಲವೆಂಬ ಸಿಟ್ಟು ಅವನನ್ನು ಹೀಗೆ ಮಾಡಿಸಿತೇನೋ

ಅವನ ತಂದೆಗೂ ಮಗನ ಮೇಲಿನ ಈ ನಿಂದನೆಗಳನ್ನೂ ಸಹಿಸಲಾಗಲಿಲ್ಲವೇನೋ . ಅವರು ಪ್ರಖ್ಯಾತ ಲಾಯರ್. ಸೇಡಿನ ಬೆನ್ನಹಿಂದೆ ಬಿದ್ದ ಅವರ ಕುಟುಂಬದವರಿಗೆ ಗಾಯತ್ರಿಯ ನೋವು ಅರ್ಥವಾಗಲಿಲ್ಲ.

ಅವರ ವಾದದ ಮುಂದೆ ನಮ್ಮ ದೂರುಗಳೆಲ್ಲಾ ಕುಸಿದು ಬಿದ್ದವು.

ಡೈವೋರ್ಸ್ ಪಡೆಯುವುದು ಎಷ್ಟು ಕಷ್ಟ ಎನ್ನುವುದು ನನಗೆ ಈಗ ತಿಳಿಯಿತು

ಗಾಯಿತ್ರಿಯ ಯಾವ ಅರೋಪಕ್ಕೂ ಸಾಕ್ಷಿಗಳಿರಲಿಲ್ಲ

ಗಂಡ ಹೆಂಡತಿ ಇಬ್ಬರೂ ಒಪ್ಪಿದರೆ ಡೈವೋರ್ಸ್ ಕೊಡುವುದು ಎಂಬ ಕಾನೂನಿನ ಒಡಕು.

ನಮ್ಮೆಲ್ಲಾರಿಗೂ ಸಾಕು ಸಾಕೆನಿಸಿತು.

ಕೋರ್ಟ್ಸನಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಲಾಗದೆ ಗಾಯತ್ರಿ ಅಳುತ್ತಿದ್ದಳು. ಎಂಟು ತಿಂಗಳ ಗರ್ಭಿಣಿ ಉಬ್ಬಿದ ಹೊಟ್ಟೆ ಹೊತ್ತು ಕೋರ್ಟ್ ಹಾಗು ಮನೆಗೂ ಅಲೆದಲೆದು ಸಾಕಾದಳು

ಈ ಮಧ್ಯೆ ಸ್ಮಿತಾಳ ಬಗ್ಗೆ ನೆನಪೂ ಬರುತ್ತಿತ್ತಾದರೂ ಹಾಗೆ ನೋಡಿದರೆ ಮದುವೆಯಾದ ನಮ್ಮ ಎಲ್ಲರಿಗಿಂತ ಅವಳೇ ಖುಷಿಯಾಗಿದ್ದಾಳೆ ಎಂದೆನಿಸುತ್ತಿತ್ತು. ಅವಳೂ ಈಗ ಕಾಣುತ್ತಿರಲಿಲ್ಲ
ಮೂರುತಿಂಗಳ ಕಾಲ ನಡೆದ ವಾದ ವಿವಾದಗಳೆಲ್ಲಾ ಮುಗಿದು ಕೊನೆಗೂ ಎಲ್ಲಾ ಖರ್ಚು ಮಾಡಿ ಡೈವೊರ್ಸ್ ಸಿಕ್ಕಿತು.

ಆದರೆ ಗಾಯಿ ಜರ್ಝರಿತಳಾಗಿದ್ದಳು. ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಳು.

ಡೈವೋರ್ಸ್ ಸಿಕ್ಕಿತೆಂಬ ಖುಷಿ ಬಹಳದಿನ ಉಳಿಯಲಿಲ್ಲ. ಹೆರಿಗೆಯಲ್ಲಿ ತೀರ ರಕ್ತಸ್ತ್ರಾವ ಹಾಗು ಮಾನಸಿಕವಾಗಿ ಕುಗ್ಗಿ ಹೋಗಿದ್ದ ಗಾಯಿತ್ರಿ ಇಹವನ್ನು ತ್ಯಜಿಸಿದ್ದಳು. ಜೊತೆಗೆ ಅವಳ ಹೊಟ್ಟೆಯಲ್ಲಿದ್ದ ಮಗುವೂ ಸಹಾ

ಮನಸಿಗೆ ಬಹಳ ಬೇಸರವಾಗಿ ಹೋಗಿತ್ತು.

ನಾನಂದುಕೊಂಡ ರೀತಿಯಲ್ಲೇ ಗಾಯಿತ್ರಿ ಬೆಳೆದಿದ್ದಳು. ಆದರೂ ಅವಳ ಬಾಳು ಹೀಗೇಕಾಯ್ತು? ಜೊತೆಗೆ ಗೀತಾಳ ಸಂಸಾರವೂ ನೆಮ್ಮದಿಯಿಂದೇನು ಇಲ್ಲ. ತಾನು ಮದುವೆಯ ಚೌಕಟ್ಟಿನಲ್ಲಿ ಇದ್ದರೂ ಸಾಂಸಾರಿಕ ಸಂತೋಷ ಸಿಗಲೇ ಇಲ್ಲ

ನನ್ನ ನಿಲುವೇ ತಪ್ಪೇನೋ . ಮದುವೆ ಎಂಬ ಈ ಸಂಬಂಧದ ಗತಿಯೇ ಇಷ್ಟೆ?

ನನ್ನ ಚಿಂತನೆ ಕ್ಷಣದಿಂದ ಕ್ಷಣಕ್ಕೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇತ್ತು

ಹೀಗೆ ವರ್ಷ್ಗವೊಂದು ಉರುಳಿತು. ಈ ನಡುವೆ ಸ್ಮಿತಾ ಡೆಲ್ಲಿಯಲ್ಲಿ ಯಾವುದೋ ಕೆಲಸ ಸಿಕ್ಕಿತೆಂದು ಹೋಗಿದ್ದು ತಿಳಿಯಿತು.

ಅತ್ತೆ ಹೇಳಿದ ಮಾತು ನೆನಪಿಗೆ ಬರುತ್ತಿತ್ತು.

"ಶ್ವೇತಾ. ಬದಲಾವಣೆ ಅನ್ನೋದು ತುಂಬಾ ಮುಖ್ಯ. ಮನುಷ್ಯ ಬೆಳಿತಾ ಇದ್ದ ಹಾಗೆಲ್ಲಾ ಅವನ ಆಲೋಚನೆಗಳು ಬದಲಾಗ್ತಾ ಇದೆ. ನೀನೆ ನೋಡು ಮದುವೆ ಎನ್ನೋದರಿಂದ ಬಿಡುಗಡೆ ಬಯಸಿದ ಜೀವಕ್ಕೆ ಅದು ಸಿಗೋದು ಎಷ್ಟು ಕಷ್ಟ ಆಯ್ತು. ಕೊನೆಗೆ ಆಮಗುನೇ ಪ್ರಾಣಕಳ್ಕೊಂಡಿತು. ನೀನು ಸ್ಮಿತಾನ ಮನೆಗೆ ಕರ್ಕೊಂಡು ಬಾ ಹೇಗೋ ಮೂರು ವರ್ಷ ಜೊತೆಗೆ ಇದ್ದಾರೆ . ಮದುವೆ ಮನಸ್ಸು ಬಂದಿರ್ಬೋದು. ಇಬ್ಬರನ್ನು ಕರೆಸು ಇನ್ನೂ ಮದುವೆ ಆಗಲ್ಲಾ ಅಂದ್ರೂ ಸುಮ್ನೆ ಇದ್ದು ಬಿಡು. ನಾವು ಉದುರಿ ಹೋಗೋ ಎಲೆಗಳು. ಅವಳೋ ಚಿಗುರುತ್ತಿರುವ ಎಲೆ ಅವಳಿಗೆ ಅವಕಾಶ ಕೊಡೋಣ"

ಅತ್ತೆಯ ಮಾತುಗಳು ಆಶ್ಚರ್ಯವೇನೋ ತಂದಿರಲಿಲ್ಲ ಏಕೆಂದರೆ ಅವರು ಇತ್ತೀಚಿಗೆ ಹಾಗೆ ಮಾತಾಡುತ್ತಿದ್ದುದು

ಈ ಸಲ ಸ್ಮಿತಾ ಫೋನ್ ಮಾಡಿದರೆ ಮನೆಗೆ ಬಾ ಎಂದು ಹೇಳೋಣ ಎಂದುಕೊಂಡೆ. ಹೊಸ ನೀರಲ್ಲಿ ಬೆರೆಯೋ ಮನಸ್ಸು ಮಾಡಿದೆ.

ತುಂಬಾ ದಿನವಾದರೂ ಫೋನ್ ಬರಲಿಲ್ಲ

ಅವಳ ಮೊಬೈಲ್‌ಗೆ ಕಾಲ್ ಮಾಡಿದರೆ ಸ್ವಿಚ್ ಆಫ್ ಆಗಿದ್ದು ಗೊತ್ತಾಯಿತು.

ಕೊನೆಗೆ ಸ್ಮಿತಾಳ ಗೆಳೆಯನೊಬ್ಬನಿಂದ ಅವಳ ಹಳೇ ಕಂಪೆನಿಯ ಅಡ್ರೆಸ್ ತೆಗೆದುಕೊಂಡು ನಂತರ ಅವಳು ಮತ್ತೆ ಬೆಂಗಳೂರಿಗೆ ವಾಪಾಸಾಗಿದ್ದುದನ್ನು ತಿಳಿದೆ.

ಕೊನೆಗೂ ಯಾರ್ಯಾರಿಂದಲೋ ಸ್ಮಿತಾಳ ವಿಳಾಸವನ್ನು ತೆಗೆದುಕೊಂಡು ಅವಳ ಮನೆಗೆ ಅತ್ತೆಯನ್ನು ಕರೆದುಕೊಂಡೆ ನಡೆದೆ.
ಕಾರ್ ಅವಳು ಹೇಳಿದ ವಿಳಾಸದಲ್ಲಿ ನಿಂತಾಗ ಆ ಸುತ್ತಲಿನ ಪರಿಸರ ಕಂಡು ಕಕ್ಕಾಬಿಕ್ಕಿಯಾಯ್ತು

ಅವಳು ವಾಸವಾಗಿದ್ದು ವಠಾರವೊಂದರಲ್ಲಿ . ಕಿಶ್ಕಿಂದೆಗಿಂತ ಚಿಕ್ಕ್ದಾದಾದ ಜಾಗ ಉಸಿರಾಡಲೂ ತೊಂದರೆ. ಇದೇನಾಯ್ತು ಇವಳ್ಯಾಕೆ ಇಲ್ಲಿದಾಳೆ . ಅತ್ತೆಗೆ ನಡೆಯಲು ಕಷ್ಟವಾಗುತ್ತಿತ್ತಾದ್ದರಿಂದ ಕೈ ಹಿಡಿದು ಒಳಗೆ ಕರೆದುಕೊಂಡು ಹೋದೆ. ಅವಳ ಮನೆ ಎಲ್ಲಿ ಎಂದುಕೇಳಿದ್ದಕ್ಕೆಕಿಸಕ್ ಎಂದು ನಕ್ಕ ಹುಡುಗನೊರ್ವ ಒಂದು ಮನೆಯತ್ತ ಕೈ ತೋರಿದ


ಬಾಗಿಲು ಬಡಿದೆ . ಬಾಗಿಲು ತೆರೆಯಿತು

ಮೂಳೆ ಚಕ್ಕಳಗಳೇ ಮೈತುಂಬಿದಂತ ಹೆಣ್ಣೊಬ್ಬಳು ಅಲ್ಲಿ ನಿಂತಿದ್ದಳು. ಅವಳ ಗುರುತು ಹಿಡಿಯಲು ಸುಮಾರು ಕ್ಷಣಗಳೇ ಬೇಕಾದವು.

ಅತ್ತೆ "ಸ್ಮಿತಾ ಎಂದು ಚೀರಿದರು. ಬವಳಿ ಬಂದಂತಾಯ್ತು
ಸ್ಮಿತಾ ನನ್ನ ಮುದ್ದು ಕಣ್ಮಣಿಯ ಕಣ್ಣೆಲ್ಲಾ ಒಳಗೆ ಹೋಗಿದೆ, ನೋಡಲು ಸಾಧ್ಯವಾಗದಷ್ಟು ಸಣ್ನಗೆ ಹೋಗಿದ್ದಾಳೆ

ಇಪ್ಪತ್ತು ನಾಲ್ಕರ ತರುಣಿ ಈಗ ಐವತ್ತರ ಗಡಿ ದಾಟಿದವಳಂತೆ ಕಾಣುತ್ತಿದ್ದಾಳೆ.

ಕರುಳೆಲಾ ಕಿವುಚಿ ನೋವಾದಂತಾಯ್ತು

ನನ್ನನ್ನುನೋಡಿ ನಕ್ಕಳು

"ಬಾ ಅಮ್ಮ. ನಾನು ಚೆನ್ನಾಗಿರ್ವಾಗ ನೀನು ಬರಲಿಲ್ಲ ಈಗ ಬಂದ್ಯಾಮ ನಿನ್ನ ಮಗಳನ್ನ ನೋಡಿ ಏನಂತ ಅನ್ನಿಸ್ತಿದೆ"

ನಕ್ಕರೆ ಗುಳಿ ಬೀಳುತ್ತಿದ್ದ ಕೆನ್ನೆಗಳೆರೆಡು ಈಗ ಅವು ಇದ್ದಾವೆಯೇ ಎಂದು ಹುಡುಕುವಷ್ಟು ಒಳಗೆ ಹೋಗಿದ್ದವು

ಆ ನಗು ನೋಡಲಾಗಲಿಲ್ಲ

"ಏನೆ ಇದು ಸ್ಮಿತಾ ಈ ಅವಸ್ಥೆ"

ಶುಷ್ಕ ನಗೆ ನಕ್ಕಳು ಮತ್ತೆ

"ಇದೆಲ್ಲಾ ನಾನು ಇಟ್ಟ ಹೆಜ್ಜೆ . ಹೂವಿನ ಮೇಲೆ ಹೆಜ್ಜೆ ಇಡ್ತಾ ಇದೀನಿ ಅಂದುಕೊಂಡೆ . ಆದರೆ ನಾನಿಡ್ತಾ ಇದ್ದುದ್ದು ಹೂವಿನ ರೂಪದಲ್ಲಿದ್ದ ಮುಳ್ಳಿನ ಮೇಲೆ"

" ಕೂತ್ಕೋಮ", ಚಾಪೆ ಹಾಸಿ ಕೈ ತೋರಿದಳು

ಕೂತುಕೊಂಡೆ

ಮಗಳನ್ನ್ಜು ಈ ರೂಪದಲ್ಲಿ ನೋಡುವುದಕ್ಕಾ ನಾನಿಲ್ಲಿಗೆ ಬಂದದ್ದು.

"ಸ್ಮಿತಾ ಏನಾಗಿದೆ .ಏನಿದೆಲ್ಲಾ" ಅತ್ತೆ ನಡುಗುವ ದ್ವನಿಯಲ್ಲಿ ಕೇಳಿದರು

"ಅಮ್ಮಾ . ನನ್ನ ಜೀವನ ತುಂಬಾ ಚೆನ್ನಾಗಿ ಇತ್ತು. ಯಾವ್ದೇ ರೀತಿ ಒತ್ತಡ ಆಗಲಿ ಅಥವಾ ಗೊಂ’ದಲವಾಗಲಿ ಇರಲಿಲ್ಲ. ರಾಕೇಶ್ ಒಳ್ಳೆಯವನೇ ಆದರೆ ತುಂಬಾ ಪೊಸೆಸ್ಸೀವ್ ಅನ್ನಿಸ್ತಿತ್ತು. ಆದರೂ ನಮ್ಮ ಸಂಬಂಧಕ್ಕೆ ಯಾವುದೇ ಧಕ್ಕೆ ಬಂದಿರಲಿಲ್ಲ. ಇಬ್ವರೂ ಮೋಜು ಉಡಾಯ್ಸಿತ್ತಿದ್ವಿ ಕೈ ತುಂಬಾ ಹಣ ,ಪ್ರಾಯ. ನಾಳೇ ಏನು ಎಂಬ ಭಯ ಇರಲಿಲ್ಲ ಹೇಗಿದ್ದರೂ ಕೈನಲ್ಲಿ ಕೆಲಸ ಇತ್ತಲ್ಲ ವೀಕೆಂಡ್ ಬಂದರೆ ಹೊರಗಡೆ ಹೋಗ್ತಿದ್ವಿ . ಚೆನ್ನಾಗಿ ಖರ್ಚು ಮಾಡ್ತಾ ಇದ್ದೆ. ಆದರೂ ದುಡ್ಡು ಕೂಡಿಡ್ತಾ ಇದ್ದೆ

ಈಗ ಸುಮಾರು ಆರು ತಿಂಗಳ ಹಿಂದೆ , ರಾಕೇಶ್ ಬಂದು ನನ್ನನು ಮದುವೆಯಾಗು ಅಂದ . ಆದರೆ ನಂಗೆ ರಾಕೇಶ್‍‌ನ ಮದುವೆಯಾಗೋದು ಇಷ್ಟ ಇರಲಿಲ್ಲ. ಯಾಕೆಂದರೆ ಅವನು ತುಂಬಾ ಅಗ್ರೆಸ್ಸೀವ್, ಜೊತೆಗೆ ಸಿಡುಕು ಎಲಾ ನೋಡ್ತಾ ನೋಡ್ತಾ ನಂಗೆ ಅವನು ನಂಗೆ ಸರಿಯಾದ ಜೋಡಿ ಅಲ್ಲ ಅಂತನ್ನಿಸಿತು. ಆಗಲ್ಲ ಅಂದೆ . ತುಂಬಾ ಪೊಸೆಸ್ಸೀವ್ ಆಗಿ ಮಾತಾಡಿದ. ಈವನ್ ಲೋ ಲೆವೆಲ್‌ನಲ್ಲಿ ಮಾತಾಡೋಕೆ ಶುರು ಮಾಡಿದ. ಅವನಿಗೆ ಗುಡ್ ಬಾಯ್ ಹೇಳೋ ಸಮಯ ಅಂತನ್ನಿಸಿತು. ಆಗಲೇ ನಂಗೆ ಡೆಲ್ಲಿನಲ್ಲಿ ಇನ್ನೂ ಹೆಚ್ಚು ಸಂಬಳ ಬರೋ ಕೆಲಸ ಸಿಕ್ತು. ರಾಕೇಶ್‌ಗೆ ಬಾಯ್ ಹೇಳಿ ಡೆಲ್ಲಿಗೆ ಧಾವಿಸಿದೆ. ಅಲ್ಲಿ ನಂಗೆ ಪರಿಚಯ ಆಗಿದ್ದು ಅನುಭವ್ ಅಂತ ಒಬ್ಬ ನಾರ್ತ್ ಹುಡುಗ. ಕಾಣದ ಊರಿನಲ್ಲಿ ನನ್ನ ಚೆನ್ನಾಗಿ ಗೈಡ್ ಮಾಡಿದ . ಅವನೂ ಯಾವುದೋ ಒಂದು ಕಡೆ ಕೆಲಸ ಮಾಡ್ತಿದ್ದ ಅಂತ ಹೇಳಿದ. ನಾವಿಬ್ಬರೂ ಪರಸ್ಪರ ಆಕರ್ಷಿತರಾದ್ವಿ. ಇಬ್ಬರೂ ಒಟ್ಟಿಗೆ ವಾಸ ಮಾಡಲಾರಂಭಿಸಿದೆವು. ಅನುಭವ್‌ನ ಮಾತು ನಡೆ ನಂಗೆ ತುಂಬಾ ಹಿಡಿಸಿತು. ಕೊನೆಗೆ ಇಬ್ಬರೂ ಮದುವೆ ಆಗೋಣ ಅಂದುಕೊಂಡೆ. ಊರಿಗೆ ವಾಪಸ್ ಬಂದು ಈ ವಿಷ್ಯ ನಿಂಗೆ ಹೇಳೋಣ ಅನ್ಕೊಂಡೆ ಆ ಸಮಯಕ್ಕೆ ಅನುಭವ್ ಕೆಲಸ ಕಳೆದುಕೊಂಡ. ಅವನಿಗೆ ಬಿಸಿನೆಸ್ ಮಾಡಲು ಹಣ ಬೇಕಿತ್ತು. ನಾನು ದುಡಿದು ಕೂಡಿಟ್ಟ ಹಣಾನೆಲ್ಲಾ ಅವನಿಗೆ ಕೊಟ್ಘೆ ಹೇಗಿದ್ದರೂ ನಾನು ಮದುವೆಯಾಗೋನು ತಾನೆ ಅಂತ.

ಅವನೇನು ಓಡಿ ಹೋಗಲಿಲ್ಲಾಮ್ಮ ಆದರೆ ಇದ್ದಕಿದ್ದ ಹಾಗೆ ಅವನ ರೀತೀನೆ ಚೇಂಜ್ ಆಯ್ತು . ರಾತ್ರಿಯ ಇಂಟಿಮೇಟ್ ಕ್ಷಣದಲ್ಲೂ ರಾಕೇಶ್ ಏನ್ಮಾಡ್ತಿದ್ದ ಅಂತ ಕೇಳುತ್ತಿದ್ದ .ನಾನು ಎಂಜಲು ಎಂದು ಹೇಳುವ ಯಾವುದೇ ಘಳಿಗೆಯನ್ನ ಅವನು ತಪ್ಪಿಸಿಕೊಳ್ಳುತ್ತಿರಲಿಲ್ಲ. ನಾನು ಮೋಸ ಹೋಗಿದ್ದೆ ಅಮ್ಮ. " ಬಿಕ್ಕಳಿಸಿ ಅಳಲಾರಂಭಿಸಿದಳು.

ನಾನು ಮಾತಾಡಲಿಲ್ಲ . ಅವಳ ತಲೆ ನೇವರಿಸುತ್ತಿದ್ದೇ: ತಗ್ಗಿಸಿದ ತಲೆ ಎತ್ತಿದಳು

"ಅಮ್ಮ ನಂಗೆ ಮೋಸ ಮಾಡಿದ್ದು ಯಾರೂ ಅಲ್ಲ ನಂಗೆ ನಾನೆ ಮೋಸ ಮಾಡಿಕೊಂಡೆ. ಹೊಸದೇನೋ ಸಾಧಿಸ್ತೀನಿ ಅನ್ನೋ ಹುಚ್ಚಲ್ಲಿ ನಾನು ನನ್ನ ಜೀವನಾನೆ ಪ್ರಯೋಗಕ್ಕೆ ಒಡ್ಡಿಕೊಂಡೆ"

"ಎರೆಡು ತಿಂಗಳ ಹಿಂದೆ ಅವನ ಕಾಟ ತಡೀಲಾರದೆ ಅವನಜೊತೆ ಜಗಳವಾಡಿ ಅವನ್ನ ಬಿಟ್ಟು ಬೇರೆಡೆ ಹೋದೆ. ಆದರೆ ಅಲ್ಲೂ ಮತ್ತದೇ ಕಾಟ . ಈ ಲೀವ್ ಇನ್ ಟುಗೆದರ್ ಅನ್ನೋ ಕಾನ್ಸೆಪ್ಟ್ ಎಲ್ಲಾ ಕಡೆ ಹರಡಿದೆ. ಆದರೆ ಈ ಸಲ ನಾನು ಯಾರ ಜೊತೆನು ವಾಸ ಮಾಡಲಿಲ್ಲ. ನನ್ನ ಬದುಕು ನನ್ನದು ಅಂತ ಅಂದ್ಕೊಂಡಿರ್ಬೇಕಾದಾಗಲೇ ಈಗ ಹೋದ ತಿಂಗಳು ನನ್ನನ್ನ ಕೆಲಸದಿಂದ ಮನೆಗೆ ಅಟ್ಟಿದರು. "

ಮತ್ತೇನು ಮಾಡಲಾದೀತು ನಾನು ಆ ಡೆಲ್ಲೀನಲ್ಲಿ . ಮೂರುವಾರಕ್ಕೆ ಮುಂಚೆ ಬೆಂಗಳೂರಿಗೆ ಬಂದೆ. ಕೆಟ್ಟು ನಿನಗೆ ಮುಖ ತೋರಿಸಬಾರದು ಅಂತ ನಿರ್ಧಾರ ಮಾಡಿದೆ. ಕೈನಲ್ಲಿದ್ದ ಕಾಸನ್ನು ಮನಸಲ್ಲಿದ್ದ ಭಾವನೇನ, ಮೈನಲ್ಲಿದ್ದ ರೋಚಕತೆಯನ್ನೆಲ್ಲಾ ಅನುಭವ್ ದೋಚಿದ್ದ .

ಮಾಡಲು ಏನೂ ಉಳಿಯಲಿಲ್ಲ. ಇಲ್ಲೂ ಕೆಲಸ ಸಿಗುವುದು ತುಂಬಾ ಕಷ್ಟ ಆಗಿದೆ. ಕೊನೆಗೆ ಯಾವುದಾದರೂ ಆಫೀಸಲ್ಲಿ ಕೆಲಸ ಮಾಡಲು ಹೋದರೂ ಈಗೀಗ ಡಿಗ್ರಿ ಕೇಳ್ತುತಾ ಇದ್ದಾರೆ. ಕೊನೆಗೆ ಇಲ್ಲೇ ಒಂದು ಸ್ಕೂಲಲ್ಲಿ ಟೀಚರ್ಆಗಿದೀನಿ.ಮುಂದೆ ಏನಾಗುತ್ತೋ ಗೊತ್ತಿಲ್ಲ"

ಅವಳ ಮಾತು ಮುಗಿಯಿತೆಂಬಂತೆ ಮತ್ತೆ ನನ್ನ ಮಡಿಲಿನಲ್ಲಿ ಮುಖವಿಟ್ಟು ಮಲಗಿದಳು

ಅತ್ತೆಯ ಮುಖ ನೋಡಿದೆ . ಅವರು ಸುಸ್ತಾಗಿದ್ದರು. ಈ ಇಳಿ ವಯಸ್ಸಿನಲ್ಲಿ ಅವರಿಗೆ ಇಂತಹದನ್ನೆಲ್ಲಾ ತಾಳುವ ಶಕ್ತಿ ಇದೆಯೇ?

"ಸ್ಮಿತಾ ಮನೆಗೆ ಹೋಗೋಣ ಬಾ" ದೃಡ ನಿರ್ಧಾರದಲ್ಲಿ ಹೇಳಿದೆ

"ಇಲ್ಲಾಮಾ ನಾನು ಬರಲ್ಲ,ಹಣ, ವಯಸ್ಸು ಇವುಗಳ ಮದದಲ್ಲಿ ನಾನು ಆಡಿದ ಮಾತುಗಳು ಆಮನೇಲಿ ಪ್ರತಿಧ್ವನಿಸ್ತಾ ಇದೆ. ಬದುಕ್ತೀನಿ ನಾನು. ನನ್ನನೋಡೋಕೆ ನೀನು ಬಂದೆಯಲ್ಲ ಸಾಕು"

"ಹೌದು ಶ್ವೇತಾ ಸ್ಮಿತಾ ಹೇಳೋದು ನಿಜಾ ಆ ಮನೆಗೆ ಅವಳು ಬರೋದು ಬೇಡ" ಅತ್ತೆಯ ದ್ವನಿ ಕೇಳುತ್ತಲೇ ಚಕಿತಳಾದೆ

"ಅತ್ತೆ "

"ಈಗಲೆ ಆ ಏರಿಯಾದಿಂದ ದೂರವಾಗಿ ಮತ್ತೊಂದು ಮನೆ ಮಾಡು. ನಾವೆಲ್ಲಾ ಬೇರೆ ಮನೆಯಲ್ಲಿ ವಾಸಿಸೋಣ. ಮುಂದಿನ ಬದುಕು ಹೇಗಿರುತ್ತೇ ಅಂತ ಗೊತ್ತಿಲ್ಲ. ಆದರ್ ಈಗ ನಾವೆಲ್ಲರೂ ಒಟ್ಟಿಗೆ ಇರೋಣ .ಸ್ಮಿತಾ ಏನಂತೀಯಾ?"

ಅತ್ತೆಯ ಮಾತಿಗೆ ಮೂಕಳಾಗಿದ್ದೆ. ಅವರ ಔದಾರ್ಯತೆಗೆ ತಲೆ ಬಾಗಿದ್ದೆ. ಸ್ಮಿತಾ ಅವಳ ಅಜ್ಜಿಯನ್ನು ತಬ್ಬಿಕೊಂಡಳು

ಹಾಗಾಗುತ್ತಿದ್ದಂತೆ ಒಂದೆಡೇ ಗಾಯತ್ರಿಯ ಮುಖ ಹಾಗು ಮತ್ತೊಂದೆಡೇ ಸ್ಮಿತಾಳ ಮುಖ ಕಣ್ಣೆದುರಿಗೆ ಬಂತು

ಯಾರ ಆಯ್ಕೆ, ಯಾವ ನಿಲುವು ಸರಿ ಈ ಪ್ರಶ್ನೆಗೆ ಉತ್ತರ ಸಿಗಲೇ ಇಲ್ಲ