Tuesday, January 27, 2009

ಪ್ರೇಮಕ್ಕೂ ಪರೀಕ್ಷೆಯೆ?

ರಾಜೀವ್

"ಇವತ್ತು ಸಾಯಂಕಾಲ ಏಳು ಘಂಟೇಗೆ ಕಲಾ ಸಂಗಮದಲ್ಲಿ ಕತೆಗಾರ ಸೋಮಣ್ಣನವರ ಹೊಸ ಕತೆ ಬಿಡುಗಡೆಯಾಗ್ತಿದೆ . ನೀವು ಬರಲೇಬೇಕು . ಇಲ್ಲಾಂದರೆ ಮಾತಾಡೋಲ್ಲ "
ಅಂತ ಸಿರಿ ಏನೋ ಹೇಳಿದಾಳೆ. ಆಗಲೇ ಸಾಯಂಕಾಲ ಆರು ಘಂಟೆ ಆಗಿದೆ.
ಆಫೀಸಿನಿಂದ ಡೈರೆಕ್ಟ್ ಆಗಿ ಹೋಗೋಣ ಅನ್ಕೊಂಡು ಸ್ಕೂಟಿ ಸ್ಟಾರ್ಟ್ ಮಾಡಿದೆ.ಯಾರೋ ಸೋಮಣ್ಣ. ಯಾಕಪ್ಪ ನಿನ್ನ ಕಥೇನ ಬಿಡುಗಡೆ ಮಾಡಿ ಗೋಳ್ಹಾಕ್ಕೋತೀಯಾ.

ಏನ್ ಕತೇನೋ ಕವನಾನೋ, ಸಿನಿಮಾನೋ ಒಂದು ಅರ್ಥ ಆಗಲ್ಲ. ಹಾಗೆ ನೋಡಿದರೆ ನಂಗೆ ಈ ಕತೆ ಕವನ, ಸಿನಿಮಾ ಅಂತ ಭ್ರಾಮಕ ಜಗತ್ತಿನ್ನಲ್ಲಿ ಬದುಕೋದು ಒಂಚೂರು ಇಷ್ಟ ಇಲ್ಲ. ನನಗೆ ಈ ಕಲ್ಪನಾ ವಿಲಾಸಿ ಸಿರಿ ಜೋಡಿಯಾಗ್ತಿರೋದು ಒಂದು ತಮಾಷೇನೆ .ಅವಳು ಬಂದ್ರೆ ಇವತ್ತು ಉಪ್ಪಿ ಹುಟ್ಟಿದ ಹಬ್ಬ, ರಮ್ಯಾಗೆ ಅವಾರ್ಡ್ ಸಿಕ್ತು. ಪೇಪರ್‌ನಲ್ಲಿ ವಿಶ್ವೇಶ್ವರ್ ಭಟ್ ಹೀಗೆ ಬರೆದಿದ್ದಾರೆ, ಭೈರಪ್ಪನವರ ಕಾದಂಬರಿ ಓದಿದ್ಯಾ. ಅಂತ ತಲೆ ತಿನ್ನುತ್ತಾ ಇರುತ್ತಾಳೆ.

ಯಾರಿಗೋ ಏನೋ ಆದರೆ ನಂಗೇನು, ಇರೋ ಕೆಲಸದಲ್ಲಿ ನಿಷ್ಟೆಯಾಗಿ ದುಡಿದೋ ಮುಂದಿನ ಜೀವನ ಸುಖವಾಗಿ ಇರೋದನ್ನ ನೋಡ್ಕೊಳ್ಳೋದು ನನ್ನ ಆಸೆ, ಬೋರ್‌ಗಿರಾಕಿ ಇದು ಅವಳ ಬಿರುದು ನನಗೆ . ನಾನು ವಾಸ್ತವವಾದಿ ಅವಳು ಮಿಥ್ಯಾ ಲೋಕ ಸಂಚಾರಿಣಿ. ಆದರೂ ನನಗೆ ಅವಳಂದ್ರೆ ತುಂಬಾ ಇಷ್ಟ.

ಅವಳ ಪರಿಚಯ ಆಗಿದ್ದೂ ಆಕಸ್ಮಿಕಾನೆ. ಗೆಳೆಯ ತುಂಬಾ ಫೋರ್ಸ್ ಮಾಡಿ ಯಾವುದೋ ಸಂಗೀತ ಗೋಷ್ಟಿಗೆ ಕರೆದುಕೊಂಡು ಹೋಗಿದ್ದ. ಬರ್ತಾ ಇದ್ದಾಗ ಪಂಚರ್ ಆಗಿದ್ದ ಸ್ಕೂಟಿ ತಳ್ಳಲಾಗದೆ ಏಳು ಮಲ್ಲಿಗೆ ತೂಕದ ಈ ರಾಜಕುಮಾರಿ ಸಿರಿ ಒದ್ದಾಡುತ್ತಿದ್ದಳು.ಅವಳಲ್ಲದೆ ಬೇರೆ ಯಾರೆ ಇದ್ದರೂ ಸಹಾಯ ಕೇಳುತ್ತಿದ್ದರೇನೋ. ಅಷ್ಟಿದ್ದರೂ ಯಾರ ಸಹಾಯ ಪಡೆಯದೆ ತಳ್ಳಿಕೊಂಡು ಹೋಗುತ್ತಿದ್ದ ಅವಳ ಪರಿಪಾಟಲು ನೋಡಲಾಗದೆ ನನ್ನ ಸ್ಕೂಟಿಯಲಿದ್ದ ಸ್ಟೆಪ್ನಿ ಜೋಡಿಸಿಕೊಟ್ಟೆ. ನಂಗೇನು ಅದು ದೊಡ್ಡ ವಿಷಯ ಅನ್ನಿಸಲಿಲ್ಲ. ಆದರೆ ಸಿರಿಗೆ ಮಾತ್ರ ನಾನು ಅವಳ ಜೋಡಿಯಾಗಲೆಂದೆ ಆ ಸನ್ನಿವೇಶ ಸೃಷ್ಟಿಯಾಯಿತಂತೆ. ಅದನ್ನು ಹೇಳೋಕೂ ಸೇವಂತಿಗೆ ಹೂವಿನ ಎಸಳುಗಳನ್ನು ಕಿತ್ತು ಅದನ್ನು ಜೋಡಿಸಿ ಪತ್ರ ಬರೆದು ಕೊಟ್ಟಿದ್ದು ನೆನೆಸಿಕೊಂಡ್ರೆ ನಗು ಬರುತ್ತೆ.

ನಾನು ಕೇಳಿದ ಪ್ರಶ್ನೆ ಅವಳಿಗೆ ಕೋಪ ಬೇರೆ ತರಿಸಿತು. "ಅಲ್ಲಾ ಮೂರೇ ಶಬ್ದದಲ್ಲಿ ಹೇಳೋದನ್ನ ಸುಮ್ನೆ ಟೈಮ್ ವೇಸ್ಟ್ ಮಾಡಿಕೊಂಡು ಹೂವಿನಲ್ಲಿ ಜೋಡಿಸ್ತೀರಲ್ಲ ನಿಜವಾಗಲೂ ತಲೆ ಕೆಟ್ಟಿದೆ." ಅವಳು ಕೋಪ ಮಾಡಿಕೊಂಡು ಹೊರಟೆ ಹೋಗಿದ್ದಳು.
ಆಮೇಲೆ ನನಗೂ ಗೊತ್ತಾಯ್ತು.

"ಐ ಆಮ್ ಆಲ್ಸೊ ಇನ್ ಲವ್ ವಿತ್ ಹರ್"

ಕೊನೆಗೆ ಅವಳನ್ನು ಕಾಡಿಬೇಡಿ ಸಾರಿ ಕೇಳಿದ್ದಾಯ್ತು.

ಹೀಗೆ ಶುರುವಾಗಿ ಕೊನೆಗೆ ರಾಜಿಯಾಯಿತು

ಕಿರ್ರ್ ಕಿರ್ರ್ ಎನ್ನುತ್ತಾ ಸ್ಕೂಟಿ ನಿಂತಿತು ನಾನು ಬ್ರೇಕ್ ಹಾಕಿದ್ದೆ. ಮನದಲ್ಲಿ ಎಲ್ಲಾ ಯೋಚನೆ ಮಾಡುತ್ತಿದ್ದರೂ ವಿವೇಕಾ ಮಾತ್ರ ಕೈಕೊಡಲ್ಲ ನನಗೆ

ಮಿನಿ ತೊಟ್ಟ ಸುಂದರಿಯೊಬ್ಬಳು ಸ್ಕೂಟಿಯನ್ನು ತಳ್ಳುತ್ತಿದ್ದಳು, ಯಾಕೆ ನಂಗೆ ಸ್ಕೂಟಿ ಸುಂದರಿಯರೆ ಗಂಟು ಬೀಳ್ತಾರೆ ಎಂಬ ತುಂಟ ಯೋಚನೆಯೊಂದಿಗೆ

"ಕ್ಯಾನ್ ಐ ಹೆಲ್ಪ್ ಯು "ಎಂದು ವಿಚಾರಿಸಿದೆ

"ಹೌದು ಪೆಟ್ರೋಲ್ ಆಗಿ ಹೋಗಿದೆ " ಎಂದು ಅಳು ಮೋರೆ ಮಾಡಿ ಹೇಳಿದಳು

ನನ್ನ ಸ್ಕೂಟಿಯಲ್ಲಿ ಪೆಟ್ರೋಲ್ ಇದ್ದರೂ ತೆಗೆಯಲು ಯಾವುದೇ ಸಲಕರಣೆ ಇಲ್ಲ"

"ಸರಿ ನೀವು ಸ್ಕೂಟಿಯಲ್ಲಿ ಕೂತು ಡ್ರೈವ್ ಮಾಡಿ "ಎಂದು ಹೇಳಿದೆ . ಅವಳು ಅನುಮಾನದಿಂದ ನೋಡುತ್ತಲೇ ಕೂತಳು

ನನ್ನ ಸ್ಕೂಟಿಯಲ್ಲಿ ಕೂತು ಒಂದು ಕಾಲನ್ನು ಅವಳ ಸ್ಕೂಟಿಯ ಹಿಂಬದಿಯ ಚಕ್ರದ ಮೇಲೆ ಇಟ್ಟು ನನ್ನ ಸ್ಕೂಟಿ ಸ್ಟಾರ್ಟ್ ಮಾಡಿದೆ ಅವಳ ಸ್ಕೂಟಿ ಮುಂದೆ ಹೋಗಲಾರಂಭಿಸಿತು. ಅಲ್ಲ ನನ್ನ ಕಾಲು ಅದನ್ನ ತಳ್ಳುತ್ತಿತ್ತು

ಪೆಟ್ರೋಲ್ ಬಂಕ್ ಹತ್ತಿರ ಬರುತ್ತಿದ್ದಂತೆ ಅವಳಿಗೆ ಮುಂದೆ ಹೋಗಲು ಹೇಳಿದೆ.

ಸ್ವಲ್ಪ ಹೊತ್ತು ತಡೆಯಲು ಹೇಳಿದಳು .ಟೈಮ್ ಆಗುತ್ತಿದೆ ಎಂದರೂ ಒತ್ತಾಯಿಸಿದಳು

ಪೆಟ್ರೋಲ್ ಹಾಕಿಸಿಕೊಂಡು ಬರುತ್ತಿದ್ದಂತೆ

"ನಿಮ್ಮ ಜೊತೆ ಮಾತಾಡಬೇಕು " ಎಂದಳು

"ಸಾರಿ ನಂಗೆ ಟೈಮ ಆಗಿದೆ ಹೋಗಬೇಕು " ಎಂದೆ.

"ಪ್ಲೀಸ್ ಕೇವಲ ಐದೇ ನಿಮಿಷ" ಬೇಡಿಕೊಂಡಳು

ಸರಿ ಅಲ್ಲೇ ಮರದಡಿಯಲ್ಲಿ ನಿಲ್ಲುತ್ತಿದ್ದಂತೆ
"ರಾಜೀವ್ ಅಲ್ವಾ ನಿಮ್ಮಹೆಸರು" ನಾನು ಬೆಕ್ಕಸ ಬೆರಗು
"ನಿಮಗೆ ಹೇಗೆ ಗೊತ್ತಾಯ್ತು?" ಬಾಯಲ್ಲಿದ್ದ ಪ್ರಶ್ನೆ ಹೊರಗೆ ಬರುವುದರಲ್ಲಿ ಅವಳೇ ಹೇಳಿದಳು
"ನಾನು ನಿಮ್ಮನ್ನ ದಿನಾ ನಿಮ್ಮ ಆಫೀಸ್ ಹತ್ರ ನೋಡ್ತೀನಿ. " ನಾನು ಅವಳನ್ನ ಯಾವತ್ತೂ ನೋಡೇ ಇಲ್ಲ
"ರಿಯಲ್ಲಿ ಯು ಆರ್ ಸ್ಮಾರ್ಟ್ ಅಂಡ್ ಹ್ಯಾಂಡ್ಸಮ್ . ನಂಗಂತೂ ನಿಮ್ಮನ್ನ ನೋಡದೆ ಇರೋಕಾಗಲ್ಲ ಅನ್ನೋ ಲೆವೆಲಿಗೆ ಪ್ರೀತಿ ಬಂದುಬಿಟ್ಟಿದೆ. "
ನನಗೆ ತಲೆ ಚಿಟ್ಟು ಹಿಡೀತು
"ಅಲ್ಲಾರಿ ನೀವ್ಯಾರು ಏನೂ ಒಂದು ಗೊತ್ತಿಲ್ಲದೆ ಇರೋವರ ಹತ್ರ ನಿಮ್ಮನ್ನ ಪ್ರೀತಿಸ್ತೀನಿ ಅಂತೀರಲ್ಲ? ಬುದ್ದಿಇದೆಯಾ? ಇದೆಲ್ಲಾ ಆಗೋ ಕೆಲ್ಸ ಅಲ್ಲ ಇನ್ನ್ಯಾರಾದಾರೂ ಇದ್ರೆ ನೋಡ್ಕೊಳ್ಳಿ" ರೇಗಿದೆ
"ರಾಜೀವ್ ನಾನು ಐಬಿಎಮ್ ನಲ್ಲಿ ಕೆಲಸ ಕೈಗೆ ತಿಂಗಳಿಗೆ ಲಕ್ಷ ಬರುತ್ತೆ. " ನಾನು ದಂಗು ನನ್ನ ಸಂಬಳದ ಐದರಷ್ಟು ಇರಲಿ ಬಿಡು ಸಾಫ್ಟ್‌ವೇರ್ ಅಲ್ಲವಾ.
ಅವಳು ಹೇಳುತ್ತಲೇ ಇದ್ದಳು
"ನಿಮ್ಮ ಪ್ರೀತಿಗೋಸ್ಕರ ನಾನು ಯಾವುದಕ್ಕೂ ರೆಡಿ. ಪ್ಲೀಸ್ ಇಲ್ಲಾಂತ ಹೇಳ್ಬೇಡಿ" ಮಳೆ ಹನಿಯಲಾರಂಭಿಸಿತು. ವಾತಾವರಣ ತಣ್ಣಗಾಯ್ತು.
ಏನು ಹೇಳೋದು
"ನೋಡಿ ನಾನಾಗಲೆ ಒಬ್ಬಳ ಬಂಧಿ. ಅವಳಿಗೆ ಮೀಸಲು. ನೀವು ಬೇರೆ ಯಾರಿಗಾದರೂ ಈ ಆಫರ್ ಕೊಟ್ಟರೆ ಖಂಡಿತಾ ವರ್ಕ್ ಔಟ್ ಆಗುತ್ತೆ."
"ಅವಳು ನನಗಿಂತ ಚೆನ್ನಾಗಿದ್ದಾಳಾ?" ನನ್ನ ಕಣ್ಣಲ್ಲಿ ಕಣ್ಣನ್ನಿಟ್ಟು ಪ್ರಶ್ನಿಸಿದಳು

ನೆಟ್ಟ ಕಣ್ಣಿನಿಂದ ಇನ್ನೇನು ಕೊಂದೇಬಿಡುತ್ತಾಳೇನೋ ಎಂಬಂತೆ ನೋಡತೊಡಗಿದಳು.

ಆ ಕಣ್ಣಲ್ಲಿ ಏತಕೋ ಆಹ್ವಾನ. ತುಟಿಯಲ್ಲಿ ಮಿಂಚಿನ ನಗೆ, ಐಶ್ ಅಲ್ಲ ಯಾರೂ ಇವಳ ಮುಂದೆ ನಿಲ್ಲಲಾಗುವುದಿಲ್ಲ ಎನ್ನಿಸಿತು ಅವರ್ಯಾರು ಇರಲಿ ನಂಗೆಇವಳ ಮುಂದೆ ನಿಲ್ಲಕಾಗ್ತಿರಲಿಲ್ಲ. ಅಂತಹ ಮಾದಕ ಸೌಂದರ್ಯ ಅವಳದು . ಸಿರಿ ಇವಳ ಮುಂದೆ ಏನೂ ಅಲ್ಲ . ಗೋದಿ ಬಣ್ಣದ ಸಿರಿ ಇವಳ ಹಾಲು ಮೈಬಣ್ಣದ ಮುಂದೆ ಮಂಕಾಗಿ ಕಾಣುತ್ತಾಳೆ. ಯೋಚಿಸುತ್ತಲೇ ಇದ್ದೆ

ಸ್ವಲ್ಪ ಹೊತ್ತು ಆ ಕಂಗಳ ಮೋಡಿಗೆ ಸಿಲುಕಿದೆ. ಮೆಲ್ಲಗೆ ಬೀಳುತಿದ್ದ ತುಂತುರು ಹನಿಯಿಂದ ವಾತವರಣ ಹಿತಕರವಾಗಿತ್ತು. ಮೆಲ್ಲನೆ ಬಾ ಎನ್ನುವಂತೆ ನನ್ನತ್ತ ಕೈ ಚಾಚಿದಳು . ನಾನು ಇನ್ನೇನು ಕೈ ಚಾಚಿಬಿಡಬೇಕು. ಅಷ್ಟರಲ್ಲಿ ಸಿರಿಯ ಮುಖ ಕಣ್ಣೆದುರು ಬಂದಿತು. ನನ್ನ ಕೈ ಇದ್ದಕಿದ್ದಂತೆ ಹಿಂದೆ ಬಂದಿತು

"ಸಾರಿ ನನ್ನವಳು ಎಲ್ಲರಿಗಿಂತ ಸುಂದರಿ "ಎಂದಷ್ಟೇ ಹೇಳಿ ನನ್ನ ಸ್ಕೂಟಿಯ ಬಳಿ ಬಂದೆ

"ಪ್ಲೀಸ್" ಕೈ ಹಿಡಿದೆಳೆದಳು. ಅದೆಲ್ಲಿತ್ತೋ ಕೋಪ

"ಒಬ್ಬ ಹೆಣ್ಣಾಗಿ ಹೀಗೆ ಮಾಡಬೇಡಿ. ಬಿಹೇವ್ ಯುವರ್ಸೆಲ್ಫ್"

ಎಂದು ಹೇಳಿ ಸ್ಕೂಟಿ ಹತ್ತಿದೆ ಅವಳೇನು ಮಾಡ್ತಿದಾಳೋ ಅದನ್ನೂ ನೋಡಲಿಲ್ಲ

ಸೀದಾ ಬಂದೆ. ಸ್ವಲ್ಪ ದೂರ ಬಂದಮೇಲೆ ಮನಸ್ಸು ಸ್ಥಿಮಿತಕ್ಕೆ ಬಂದಿತು

ಅಲ್ಲೇ ಕಾಮತ್ ಹೋಟೆಲ್‌ನಲ್ಲಿ ಕಾಫಿ ಕುಡಿದೆ ಸಿಗರೇಟ್ ಸೇದಲೇ ಬೇಕೆನಿಸಿತು. ಸಿಗರೇಟು ತೆಗೆದು ಬಾಯಿಗಿಡುತ್ತಿದ್ದಂತೆ

"ನೀವೋ ನಿಮ್ಮಹಾಳು ಸಿಗರೇಟೋ, ನನಗೆ ಇಷ್ತಾನೆ ಇಲ್ಲ " ಎನ್ನುವ ಸಿರಿಯ ಮಾತು ನೆನಪಿಗೆ ಬಂದಿತು. ಸಿಗರೇಟ್ ಬಿಸಾಡಿದೆ

ಏಳುಘಂಟೆಗೆ ಹತ್ತು ನಿಮಿಷ ಇದೆ. ಆಮೇಲೆ ಸಿರಿ ಕೋಪಿಸಿಕೊಂಡರೆ

ಕೂಡಲೆ ಫಾಸ್ಟ್ ಆಗಿ ಡ್ರೈವ್ ಮಾಡಿಕೊಂಡು ಬಂದೆ

ಸಿರಿ ಗೇಟ್ ಬಳಿಯಲ್ಲೇ ನಿಂತಿದ್ದಳು

ರಾಜೀವ್ ಬಂದ್ರಾ ಆಗಲೆ ಪ್ರೋಗ್ರಾಮ್ ಶುರು ಆಗಿದೆ." ಸಂಭ್ರಮದಿಂದ ಒಳಗೆ ಕರೆದುಕೊಂಡು ಹೋದಳು

ಏನೋ ಪ್ರೋಗ್ರಾಮ್. ಒಂದುಪುಸ್ತಕ ಬಿಡುಗಡೆಗೆ ಇಷ್ಟೊಂದು ಪ್ರಚಾರ ಬೇಕಾ.

ಇಷ್ಟೊಂದು ಮಾತಾಡ್ತಾರಲ್ಲ ಭಾಷಣ ಅಂದ್ರೆ ತಲೆ ಕೊರಿಯುವರಿಗೊಂದು ವರ ಇದ್ದ ಹಾಗೆ. ಅದ್ಯಾರೋ ಬಂದ್ರು ಸನ್ಮಾನ ಅದೂ ಇದೂ ನಡೀತಿತ್ತು. ಒಳ್ಲೇ ಚೈನೀಸ್ ಫಿಲ್ಮ್ ನೋಡಿದ ಅನುಭವ ಆಗ್ತಿತು." ಮಾತನ್ನೂ ಸಾಹಿತ್ಯ ಭಾಷೇಲೆ ಮಾತಾಡಬೇಕಾ?" ಏನೂ ಅರ್ಥವಾಗ್ರ್ತಿರಲಿಲ್ಲ. ಯಾರು ಏನು ಅನ್ನೋದು ತಿಳೀತಿರಲಿಲ್ಲ

ಇವಳು ಮಾತ್ರ ಹಲ್ಲು ಕಿರಿದುಕೊಂಡು ಪ್ರತಿಸಲಾನು ಚಪ್ಪಾಳೆ ತಟ್ಟೋದು ಅವಳನ್ನ ನೋಡಿ ನಾನು ಚಪ್ಪಾಳೆ ತಟ್ತಾ ಇದ್ದೆ.ಏನು ಮಾಡೋದು ಎಲ್ಲಾ ಹೆಂಗಸರಿಗಾಗಿ . ಮದುವೆಗೆ ಮುಂಚೇನೆ ಹೀಗೆ, ಇನ್ನು ಮದುವೆಯಾದ ಮೇಲೆ ದೇವರೆ ಕಾಪಾಡಪ್ಪ, ಕಾಣದ ದೇವರನ್ನು ಕರೆದಿದ್ದಕ್ಕೆ ಮನಸಲ್ಲೇ ನಗು ಬಂತು
ಕೊನೆಗೆ ಆ ಪ್ರುಸ್ತಕ ಒಂದು ಘಂಟೆಯವರೆಗೆ ಅವರಿವರ ಕೈನಲ್ಲಿ ಮುಟ್ಟಿಸಿಕೊಂಡು ಬಿಡುಗಡೆಯಾಯ್ತು. ನನಗೂ ಆ ಸಮಾರಂಭದ ಸೆರೆಯಿಂದ ಬಿಡುಗಡೆ ಆಯ್ತು.

ಬರ್ತಾ ಸಿರಿಗೆ ಎಲ್ಲಾ ವಿವರಿಸಿದೆ. ಸ್ವಲ್ಪ ಹೆಮ್ಮೆಯಿಂದಲೇ.

ಅವಳು ನಗುತ್ತಾ ಹಿಂದೆ ನೋಡಿದಳು. ನಂಗೆ ದಿಗ್ಭ್ರಮೆ
ಆ ಮಿನಿ ಸುಂದರಿ ನಿಂತಿದ್ದಳು. ಅವಳು ಸಿರಿಯ ಸ್ನೇಹಿತೆ. " ರಿಯಲ್ಲಿ ಯು ಆರ್ ಲಕ್ಕಿ " ಅಂತ ಸಿರಿಗೆ ಹೇಳುತಿದ್ದಳು
ನನ್ನನ್ನ ಪರೀಕ್ಷೆ ಮಾಡೋಕಂತ ಹೀಗೆ ಮಾಡಿದ್ದಳಂತೆ
ಕೋಪ ಬಂತು. ಹೀಗಾ ಮಾಡೋದು.
ಕೋಪಿಸಿಕೊಂಡೇ ಬಂದು ಸ್ಕೂಟಿ ಶುರು ಮಾಡಿದೆ.
"ರಾಜೀವ್ ಪ್ಲೀಸ್ . ಅವಳ ಕೂಗು ಕೇಳಿ ನಿಂತೆ. ಕೋಪಏನೂ ಇರಲಿಲ್ಲ ಸುಮ್ನೆ ಹಾಗೆ ನಟಿಸುತ್ತಿದ್ದೆ. ಮನದಲ್ಲಿ ಹೆಮ್ಮೆ ನಾನು ನಿನ್ನ ಪರೀಕ್ಷೇಲಿ ಗೆದ್ದೆ.
"ಸಾರಿ ರೀ. ಅದೂ ನಾನು ನಿಮ್ಮನ್ನ ತುಂಭಾ ಹೊಗಳುತಿದ್ದೆ . ಅದಕ್ಕೆ ಒಂದು ಟೆಸ್ಟ್ ಮಾಡೋಣ ಅಂತ ನನ್ನ ಫ್ರೆಂಡ್ ಹೇಳಿದಳು. ಕೊನೆಗೂ ನಾನೆ ಗೆದ್ದೆ"
ಆ ಮಿನಿ ಸುಂದರಿ ಬಂದು "ಸಾರಿ ಮಿ ರಾಜೀವ್, ನಿಮಗೆ ಬೇಸರ ಆಗಿದ್ದರೆ. ಆದರೆ ಈ ಪರೀಕ್ಷೇಲಿ ನಿವು ಗೆದ್ದಿರಿ.ಕಂಗ್ರಾಟ್ಸ್" ಎಂದಳು
(ಮುಂದುವರೆಯುವುದು)

Wednesday, January 21, 2009

ಬಾಳೆಂಬ ಸುಳಿ-೨

ಕಾರು ಮುಂದೆ ಚಲಿಸುತ್ತಿದ್ದರೂ ಮನಸ್ಸು ಮಾತ್ರ ಸ್ಠಿಮಿತದಲ್ಲಿರಲಿಲ್ಲ
ಕಣ್ಣಿನ ಮುಂದೆ ಏನೂ ಅಪರಾಧ ಮಾಡದೆ ಶಿಕ್ಷೆ ಅನುಭವಿಸುತ್ತಿರುವ ಅಪ್ಸರಾಳ ಮೊಗವೇ ಕಾಣ್ಣುತಿತ್ತು.
ಮನಸ್ಸು ಗೊಂದಲದ ಗೂಡಿನಲ್ಲಿ ಸಿಲುಕಿ ಹೊರಬರಲಾಗದೆ ಒದ್ದಾಡುತ್ತಿತ್ತು.
ಹೌದು ಅಪ್ಸರಾಳ ಆ ಮೊಗ ಮಂಗಳಾ ಎನ್ನುವ ಹದಿನೆಂಟರ ಹರೆಯದ ಆ ಮುಗ್ದ ಹೆಣ್ಣಿನ ಮೊಗವನ್ನೇ ಹೋಲುತ್ತಿತ್ತು.
ಅದಕ್ಕೆ ಸಾಕ್ಷಿಯೂ ಆ ಹಾಸ್ಪಿಟಲ್‌ನಲ್ಲಿ ಹುಡುಕಿದರೆ ಸಿಗುತ್ತಿತ್ತು.
ಆದರೆ ಆ ಧೈರ್ಯ ಬರಲಿಲ್ಲ ಯಾವುದಕ್ಕೂ ಇವರನ್ನು ಕೇಳಿ ಮುಂದುವರಿಯುವ ಎನ್ನುವ ಆಲೋಚನೆ ಬಂದಿತು
ಕೂಡಲೆ ಮೊಬೈಲ್‌ಗೆ ಕಾಲ್ ಮಾಡಿದೆ
"ಆ ನನಗೂತ್ತಿತ್ತು ನೀನೊಪ್ಕೋತೀಯಾ ಅಂತ , ಹೇಳು ಲಕ್ಷ್ಮಿ ಯಾವಾಗ ಇಟ್ಟುಕೊಳ್ಳೋಣ ಮೀಟಿಂಗ್" ಚಂದ್ರು ಸಂತೋಷವಾಗಿದ್ದರು.
"ರೀ ಅದಲ್ಲ ಅದೂ ..... ಇವತ್ತು ಒಂದು ವಿಷ್ಯ ಮಾತಾಡೋದಿದೆ"
" ಯಾವ ವಿಷ್ಯ?" ಗಡುಸಾಯ್ತು ದ್ವನಿ
ಮುಂದೆ ಮಾತಾಡೂವ ಧೈರ್ಯ ಬರಲಿಲ್ಲ
ಫೋನ್ ಆಫ್ ಮಾಡಿದೆ.
ರಾಜು ಗಮನಿಸುತ್ತಲೇ ಇದ್ದ
"ಮೇಡಮ್ ಯಾಕೆ ಏನಾಯ್ತು? ಡಾಕ್ಟರ್‍ನ್ ಕರೀಲಾ"
"ಬೇಡ ರಾಜು" ಸಂಕಟದಿಂದಲೇ ನುಡಿದೆ
ಕೈನಲ್ಲಿದ್ದ ಫೋನ್ ನನ್ನದೇ ಹಾಡ ಹಾಡಿತು
ಅದು ನನ್ನ ಪಿ.ಎ ಕಾಲ್. ಹೆಸರಿಗೆ ನನ್ನ ಪಿ.ಎ ಆದರೆ ಮಾಡುವುದೆಲ್ಲಾ ಇವರ ಕೆಲಸ
ಫೋನ್ ಎತ್ತಲಿಲ್ಲ ನನಗೆ ಗೊತ್ತು, ಇಂದು ಮೂರು ಹಾಡಿನ ರೆಕಾರ್ಡಿಂಗ್ ಇತ್ತು . ನಾನು ಹೋಗಬೇಕಾಗಿದೆ. ಮೆಸೇಜ್ ಮಾಡಿದೆ . "ಡೋಂಟ್ ಡಿಸ್ಟರ್ಬ್ ಮಿ ಟುಡೇ . ಐ ಡೋಟ್ ವಾಂಟ್ ಟು ಅಟೆಂಡ್ ಅನಿ ರೆಕಾರ್ಡಿಂಗ್ ".
ಅದ್ಯಾವ ಸಮಯ್ದಲ್ಲಿ ಮನೆ ಬಂತೋ, ತಿಳಿಯಲೇ ಇಲ್ಲ .
ಹಾಗೆ ಹಾಸಿಗೆಗೊರಗಿ ಕಣ್ಮುಚ್ಚಿದರೆ ಮಂಗಳಾಳ ದೀನ ಮುಖವೇ ಕಾಣಿಸುತ್ತಿದೆ, ಕಣ್ತೆರೆದರೆ, ಮುಗ್ಧ ಹೆಣ್ಣು ಅಪ್ಸರಾಳ ನೆನಪು,
ಆಗಲೆ ಅಪ್ಸರಾ ಇಲ್ಲವಾಗಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಅಲ್ಲವೇ? ಅವಳ ಈ ಬದುಕಿಗೆ ನೀನೆ ಕಾರಣ ಮಂಗಳಾ ಮಾಡಿ ನನ್ನತ್ತ ತೋರುತ್ತಿದ್ದಂತೆ ಭಾಸವಾಗಿ ಬೆಚ್ಚಿ ಬಿದ್ದೆ.

ಮತ್ತೆ ಮೊಬೈಲ್ ಹಾಡ ಹಾಡಿತು . ಅದು ಚಂದ್ರು ಕಾಲ್
" ಲಕ್ಷ್ಮಿ , ಯಾಕೆ ಏನಾಗಿದೆ ನಿಂಗೆ ಇವತ್ತಿನ ಎಲ್ಲಾ ಪ್ರೊಗ್ರಾಮ್ ಕ್ಯಾನ್ಸೆಲ್ ಮಾಡಿದ್ರೆ ಹೇಗೆ. ನಿನ್ನ ನಂಬಿಕೊಂಡು ಅವರು ಎಲ್ಲಾ ಸಿದ್ದತೆ ಮಾಡಿದಾರೆ. ಇದ್ಯಾಕೋ ಬರ್ತಾ ಬರ್ತಾ ಅತಿಯಾಗ್ತಿದೆ. ನನ್ನ ಕೇಳದೆ ಇಂಥಾ ನಿರ್ಧಾರ ಹೇಗೆ ತಗೊಂಡೆ."
"ರೀ ಮನಸ್ಸು ಯಾಕೋ ಸರಿ ಇಲ್ಲಾ , ದಯವಿಟ್ಟು ಸ್ವಲ್ಪ ನಾನು ಹೇಳೋ ಕೇಳಿ, ಈಗಲೇ ಬನ್ನಿ , ನಾನೊಂದು ವಿಷಯ ಹೇಳಬೇಕು" ಅಷ್ಟು ಹೇಳುವಷ್ಟರಲ್ಲಿ ಜೀವ ಬಾಯಿಗೆ ಬಂದಿತ್ತು
"ಯು ಆರ್ ರಿಯಲ್ಲಿ ಸ್ಪಾಯ್ಲಿಂಗ್ ಮೈ ಮೂಡ್,ಹೇಳೋ ಹಾಗಿದ್ರೆ ಫೋನ್‌ನಲ್ಲೇ ಹೇಳು ಇಲ್ಲಾಂದರೆ ಸಾಯಂಕಾಲ ಬರ್ತೀನಿ . ಆಗ ಮಾತಾಡು." ಉತ್ತರಕ್ಕೂ ಕಾಯದೆ ಕಟ್ ಮಾಡಿದರು.
ಹೊರಗಡೆ ಗಲಾಟೆ ಕೇಳುತ್ತಿತ್ತು.
ಅದು ನವೀನನ ದನಿ
ನನ್ನನ್ನು ಕರೆದುಕೊಂಡು ಹೋಗಿದ್ದಕ್ಕಾಗಿ ರಾಜುವಿಗೆ ಛೀಮಾರಿ ಹಾಕುತ್ತಿದ್ದ. ಆಗಲೇ ಅಪ್ಸರಾಳ ಜೊತೆ ಮಾತಾಡಿದ್ದು ಇವನಿಗೆ ಗೊತ್ತಾಗಿ ಹೋಗಿದೆ, ಮಾಡಲು ಇನ್ನೇನು ಕೆಲಸವಿಲ್ಲ, ಊರಲ್ಲೆಲ್ಲಾ ಸ್ಪೈಸ್ ಇಟ್ಟಿದ್ದಾನೆ.
ಹೋಗಿ ತಡೆಯಬೇಕು ಅನ್ನಿಸಿತು. ಆದರೆ ಆಗಲಿಲ್ಲ. ಮಾತಾಡಿದರೆ ನನ್ನನ್ನ ಪ್ರಶ್ನೆ ಮಾಡುತ್ತಾನೆ. ಅವನಿಗೆ ಏನು ಹೇಳುವುದು?
ನಾನು ಸಾಯಂಕಾಲಕ್ಕೆ ಕಾಯುತ್ತಿದ್ದೆ . ಸಾಯಂಕಾಲವಾಯ್ತು, ರಾತ್ರಿಯಾಯ್ತು . ಕೊನೆಗೂ ಚಂದ್ರು ಬಂದರು.
ಎಂದಿನಂತೆ ಇಂದು ನಶಾ ಏರಿರಲಿಲ್ಲ.
ಬಹುಷ ನನ್ನೊಡನೆ ಮಾತಾಡಲು ಕುಡಿದು ಬರಲಿಲ್ಲವೆನಿಸುತ್ತದೆ. ಊಟ ಮುಗಿಸಿ ಬಂದಾಗ ತಲೆಸಿಡಿಯುತ್ತಿತ್ತು. ಆದರೂ ಅವರನ್ನು ಕೇಳಲೇಬೇಕಿತ್ತು. ಹುಡುಗಿಯೊಬ್ಬಳ ಬಾಳಿನ ಪ್ರಶ್ನೆ ಅದಾಗಿತ್ತು.
ಅವರಿಗೆ ವಿವರಿಸಿದೆ
ಅಪ್ಸರಾಳನ್ನುನೋಡಿದ್ದು , ಅವಳ ಮುಖದ ಹೋಲಿಕೆ, ಅವಳ ಹಿಂದಿನ ಬಾಳು, ನನ್ನ ಅನುಮಾನ ಸತ್ಯವಾಗಿದ್ದು.
ಮೊದಲಿಗೆ ಅವರಿಗೂ ನೆನಪಿಗೆ ಬರಲಿಲ್ಲ
ನಂತರ ನೆನಪಿನ ಮೂಟೆಯಲ್ಲಿ ಸಮಾಧಿ ಮಾಡಿ ಹಾಕಿದ್ದ ಘಟನೆಯೊಂದರ ಮೂಟೆಯಿಂದ ಆ ಸತ್ಯದ ಅಸ್ಥಿ ಪಂಜರದ ದರ್ಶನ ಮಾಡಿಸಿದೆ.
"ವಾಟ್ ದಿ ಹೆಲ್ ಯು ಆರ್ ಟಾಕಿಂಗ್. ? ಈಗಾಗಲೆ ಮುಗಿದು ಹೋಗಿರೋ ಕತೇನ ತೆಗೆದು ಮನೆ ಮರ್ಯಾದೆ ತೆಗೀಬೇಕಂತೀದೀಯಾ?" ಗುಡುಗಿದ ರಭಸಕ್ಕೆ ನನ್ನ ಮೈನಲ್ಲಿದ್ದ ಶಕಿಎಲ್ಲಾ ಉಡುಗಿದಂತಾಯ್ತು
"ರೀ ವಿಷ್ಯ ಯಾರಿಗೂ ಹೇಳೋದು ಬೇಡ, ಆದರೆ ಆ ಹುಡುಗಿಗೊಂದು ಬಾಳು ಕೊಟ್ಟು ನಮ್ಮಿಂದಾಗಿರೋ ಅನ್ಯಾಯಾನಾ ಸರಿಮಾಡೋಣ ಅಂತ, ನಮ್ಮ ಚಿರೂಗೆ ವಿಷಯ ಹೇಳೋಣ" ಹಿಂಜರಿಯುತ್ತಲೆ ಹೇಳಿದೆ
"ಸಾಧ್ಯಾನೆ ಇಲ್ಲ, ಏನಾಟ ಆಡ್ತೀದೀಯಾ ? ಈಗ ಚಿರು ನಿನ್ನ ಅಥವ ನನ್ನ ಚಿರು ಅಲ್ಲ ಎಮ್. ಎಲ್. ಎ ಚಿರಂಜೀವಿ ನಾಳೆ ಮಿನಿಸ್ಟರ್ ಆಗೋ ಲಿಸ್ಟ್ನ್‌ನಲ್ಲಿರೋನು. ಅವನ ಹಿಂದೆ ಈ ಬ್ಲಾಕ್ ಮಾರ್ಕ್ ಇದೆ ಅಂತ ಮೀಡಿಯಾಗೇನಾದ್ರೂ ಒಂಚೂರು ಗೊತ್ತಾದ್ರೆ ಅವನ ಕೆರಿಯರ್ ಏನಾಗಬೇಕು " ಕಡ್ದಿ ತುಂಡು ಮಾಡಿದಂತೆ ನುಡಿದರು.
" ಮತ್ತೆ ನೀನು ಆ ಹುಡುಗಿ ಜೊತೆ ಮಾತಾಡೋದು ಮೀಡಿಯಾ ಕಣ್ಣಿಗೆ ಬೀಳೋದು, ಇಲ್ಲ ಸಲ್ಲದ ಪ್ರಚಾರ ಹುಟ್ಟೋದು, ಅದರಿಂದ ನವ್ಯಾ ಮದುವೆಗೂ ತೊಂದರೆ ಆಗೋದು ನಂಗೆ ಇಷ್ಟ ಇಲ್ಲ . ಹಾಗೇನಾದರೂ ಆದರೆ ನಾಳೆ ನಾನು ಯಾವ ಮಟ್ಟಕ್ಕೂ ಬೇಕಾದರೂ ಹೋಗೋಕೆ ರೆಡಿ ಗೊತ್ತಲ್ಲಾ" ಕಣ್ಣಲ್ಲಿ ಕಣ್ನನಿಟ್ಟು ಪ್ರಶ್ನಿಸಿದರು. ಆ ತೀಕ್ಣ ನೋಟಕ್ಕೆ ಬೆದರಿ ಹಿಂದೆ ಸರಿದೆ.
ಮಾತು ಮತ್ತೆ ಬರಲಿಲ್ಲ. ಈ ನೋಟಕ್ಕೆ ನಾನು ಹೆದರಿ ಬೆಚ್ಚಿ ಬೀಳುವುದು . ಆ ನೋಟದಲ್ಲಿ ನನ್ನನ್ನು ಕೊಲ್ಲುವ ಅಥವ ಹಿಂಸಿಸುವ ಅದಾವ ಭಾವವಿತ್ತೋ ನನಗೆ ಗೊತ್ತಿಲ್ಲ. ಆದರೆ ಅವರ ಆ ಒಂದು ನೋಟದ ಸನ್ನೆಗೆ ಮುದುಡಿ ಕೂರುತ್ತಿದ್ದೆ.
ರಾತ್ರಿ ಮಲಗಿದರೂ ನಿದ್ರೆ ಬರಲಿಲ್ಲ
ಚಿರೂ ನನ್ನವರ ತಮ್ಮ ಎಂಬುದನ್ನು ಬಿಟ್ಟರೆ ರಾಜಕೀಯದಲ್ಲಿ ಅತೀ ವೇಗವಾಗಿ ಬೆಳದವನು . ಆಗಿನ್ನೂ ನೆನಪಿದೆ
ಕಾಲೇಜು ಮುಗಿಸಿದ್ದ ಚಿರು ಊರಿಗೆ ಬಂದಿದ್ದ. ನನ್ನನ್ನು ನೋಡಿದರೆ ಬಡವರ ಮನೆಯಿಂದ ಬಂದಳೆಂಬ ಅಲಕ್ಷ್ಯ, ಆದರೂ ಮಾವನ ಕಣ್ಗಾವಲಿನಿಂದ ಹದ್ದು ಮೀರಿ ಮಾತಾಡಿರಲಿಲ್ಲ. ದೊಡ್ದ ಮನೆಗೆ ಹತ್ತಾರು ಆಳು ಕಾಳುಗಳು. ಅವರಲ್ಲಿ ನೀಲಮ್ಮ ನನಗೆ ತುಂಬಾ ಹೊಂದಿಕೊಂಡಿದ್ದಳು. ಆಗಷ್ತೇ ನವೀನನ ಜನನವಾಗಿತ್ತು. ಆ ವೇಳೆಗಾಗಲೆ ತಾಯಿಯನ್ನು ಕಳೆದು ಕೊಂಡಿದ್ದ ನನಗೆ ನೀಲಮ್ಮನೇ ತಾಯಿಯಾಗಿದ್ದಳು. ನನ್ನ ಬಾಣಂತನವನ್ನ ಅಚ್ಚುಕಟ್ಟಾಗಿ ಮಾಡುತಿದ್ದಳು. ನೀಲಮ್ಮನಿಗಿದ್ದ ಒಬ್ಬಳೆ ಮಗಳು ಮಂಗಳಾ ಕೂಡ ನನ್ನ ಸ್ವಂತ ತಂಗಿಯಂತೆ ಆತ್ಮೀಯವಾಗಿದ್ದಳು.
ಅದ್ಯಾವ ಸಮಯದಲ್ಲಿ ಚಿರೂ ಮತ್ತು ಮಂಗಳಾ ಸ್ನೇಹವಾಯ್ತೋ, ಪ್ರೇಮವಾಯ್ತೋ ಗೊತ್ತಿಲ್ಲ. ಅವರಿಬ್ಬರ ನಡುವೆ ಪ್ರೀತಿ ಚಿಗುರಿ ಹಣ್ಣಾಗುವ ಸಮಯಕ್ಕೆ ಅವಳಿಗೆ ತಾನು ಮಾಡಿಕೊಂಡಿದ್ದ ಅನಾಹುತ ಅರಿವಿಗೆ ಬಂತು. ಆದರೆ ತಡವಾಗಿತ್ತು
"ಅಕ್ಕ ಹೇಗಾದರೂ ಮಾಡಿ ನನ್ನ ಮದುವೆ ಮಾಡಿಸಿ" ದುಂಬಾಲು ಬಿದ್ದಳು
ಚಿರೂ ಸುತಾರಾಂ ಒಪ್ಪಲಿಲ್ಲ "ಆಫ್ಟರ್ ಆಲ್ ಒಬ್ಬ ಕೆಲಸದ ಹೆಂಗಸನ್ನ ಮದುವೆ ಆಗೋದಾ ಸಾಧ್ಯಾನೆ ಇಲ್ಲ. ಇಬ್ಬರ ತಪ್ಪೂ ಇದೆ.
ಒಂದಷ್ಟು ದುಡ್ಡು ಕೊಟ್ಟು ಸಾಗು ಹಾಕೋಣ"
ಚಂದ್ರೂದೂ ಅದೇ ರಾಗ . ಮಾವ ಈ ವಿಷಯದಲ್ಲಿ ಮಾತ್ರ ನನ್ನ ಜೊತೆಯಾಗಲಿಲ್ಲ. ಎಲ್ಲರೂ ನನ್ನ ವಿರೋಧಿಸಿದಾಗ ನಾನು ಮೂಕ ಪ್ರೇಕ್ಷಕಳಾಗಿದ್ದೆ.
ಮಂಗಳಾಗೆ ಬೇರೆ ಯಾರೋಂದಿಗೋ ಸಂಬಂಧವಿರುವುದಾಗಿ ಸುದ್ದಿ ಹಬ್ಬಿಸಿದರು.
ನೀಲಮ್ಮನ ದ್ವನಿ ಅರಣ್ಯರೋಧನವಾಯ್ತು.
ಕೆಲಸದಿಂದ ತೆಗೆಯಲಾಯ್ತು.
ಮನೆ ಕೆಲಸಬಿಟ್ಟು ಮತ್ತೇನು ಗೊತ್ತಿರದ ನೀಲಮ್ಮನಿಗೆ ನಾನೆ ಹಣ ಕೊಟ್ಟು ಮಂಗಳಾ ಚಿಕಿತ್ಸೆ ಮಾಡಿಸಲು ಹೇಳಿದೆ. ಅದನ್ನು ಮಾಡಲೂ ನನಗೆ ಹೆದರಿಕೆ .
ಬೆಂಗಳೂರಿನಲ್ಲಿ ನನಗೆ ಗೊತ್ತಿದ್ದ ಹಾಸ್ಪಿಟಲ್‌ನಲ್ಲಿ ಇರಿಸಿದೆ, ಕೆಲವು ದಿನಗಳ ನಂತರ ಹೆಣ್ಣು ಮಗುವಾಯ್ತೆಂದು ವಿಷಯ ತಿಳಿಯಿತು. ನೋಡಲೂ ಹೋಗಲಿಲ್ಲ
ಎಷ್ಟೋ ದಿನಗಳಾದ ನಂತರ ಯಾರೋ ನೀಲಮ್ಮ ಹಾಗು ಮಂಗಳಾ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡರೆಂದು ಹೇಳಿದರು ಮಗುವಿನ ಬಗ್ಗೆ ಕೇಳಲೂ ಇಲ್ಲ ಮನಸ್ಸು ಕದಡಿತಾದರೂ ಮತ್ತೆ ವಿಷಯವನ್ನು ಕಲುಕಿದರೆ ಆಪತ್ತು ಎಂದರಿತು ಸುಮ್ಮನಾದೆ
ಅದಾದ ನಂತರ ಮಂಗಳಾಳ ಪತ್ರ ವೊಂದು ಕೈ ಸೇರಿತು. ಅದರಲ್ಲಿ ಮಗುವನ್ನು ಯಾರೋ ಒಬ್ಬರಿಗೆ ಕೊಟ್ಟಿರುವುದಾಗಿ ಹೇಗಾದರೂ ಮಾಡಿ ಮಗುವನ್ನು ಕರೆದುಕೊಂಡು ಬಂದು ಸಾಕಬೇಕಾಗಿ ಬೇಡಿಕೊಂಡಿದ್ದಳು. ಜೊತೆಗೆ ಆ ಹೆಂಗಸಿನ ವಿಳಾಸವನ್ನು ಬರೆದಿದ್ದಳು. ಸಾಯುವ ಮುನ್ನ ಬರೆದಿದ್ದಾಗಿತ್ತು ಆ ಪತ್ರ
ಆದರೆ ನನಗೆಲ್ಲಿದೆ ಅಷ್ತೊಂದು ಧೈರ್ಯ. ಬೇಡದ ಉಸಾಬರಿ ಏಕೆಂದು ಸುಮ್ಮನಾದೆ. ಆ ಮಗುವೇ ಅಪ್ಸರಾ .
ಅಪ್ಸರಾಳ ಈ ಸ್ಥಿತಿಗೆ ನಾನೇ ಕಾರಣ ಎಂದು ಮನಸ್ಸು ಒತ್ತಿ ಒತ್ತಿ ಹೇಳುತ್ತಿತ್ತು.
ಬೆಳಗ್ಗೆ ಎದ್ದಾಗ ತಲೆ ನೋವಿನಿಂದ ನರಳುತ್ತಿದ್ದೆ. ವೆಂಕಟಮ್ಮ ಕಾಫಿ ತಂದುಕೊಟ್ಟಳು. ಕಾಫಿ ಕುಡಿಯುತ್ತಿದ್ದೆ.
"ಅಮ್ಮಾ " ನವ್ಯಾ ಬಂದು ನನ್ನ ಪಕ್ಕ ಕುಳಿತಳು
" ನೀನು ಅ ಹುಡುಗಿ ಜೊತೆ ಅಡಿಗಾಸ್‌ನಲ್ಲಿ ಮಾತಾಡ್ತಿದ್ದಿದ್ದು ಅಜೇಯ್ ನೋಡಿ ಯಾರು ಅಂತ ಕೇಳಿದರು?" ಅಜೇಯ ಅವಳು ಮದುವೆಯಾಗಲಿರುವ ಹುಡುಗ ಈಗಾಗಲೆ ಸಿನಿನಾಯಕನಾಗಿ ಸ್ವಲ್ಪ ಹೆಸರು ಮಾಡಿದ್ದಾನೆ
"ನಾನ್ಯಾರ ಜೊತೆ ಮಾತ್ತಾಡಿದ್ರೆ ನಿಮಗೇನು" ಪ್ರಶ್ನಿಸಿಯೇ ಬಿಟ್ಟಿದ್ದೆ ಗೊತ್ತೇ ಇಲ್ಲ
"ಅಮ್ಮ ಅಪ್ಪ ಬೆಳಗ್ಗೆ ಎಲ್ಲ ವಿಷಯ ಹೇಳಿದರು. ನಮಗ್ಯಾಕೆ ಎಲ್ಲ ಸಲ್ಲದ ಪ್ರಾಬ್ಲಮ್ . ನಾಳೆ ಅಜೇಯ್‌ಗೆ ಈ ವಿಷಯ ಗೊತ್ತಾದ್ರೆ ಮದುವೆ ತುಂಬಾ ಕಾಂಪ್ಲಿಕೇಟೆಡ್ ಆಗುತ್ತೆ"
"ನವ್ಯ ಆ ಹುಡುಗಿ ಹೆಚ್ಚು ಕಡಿಮೆ ನಿನ್ನ ವಯಸ್ಸೇ , ಒಂದು ಹೆಣ್ಣಾಗಿ ಇನ್ನೊಂದು ಹೆಣ್ಣಿಗೆ ತೊಂದರೆ ಆಗ್ತಾ ಇದ್ದಾರೂ ಹೀಗೆ ಮಾತಾಡ್ತಿದೀಯಲ್ಲ"
"ನೀನೇನು ಮಾಡಿದ್ದು . ಆವಾಗಾ ನೀನೂ ಆ ಮಂಗಳಾ ಪರ ಮಾತಾಡ್ಬೇಕಿತ್ತು. ನಿಂಗೆ ಹ್ಯಾಗೆ ನಿನ್ನ ಬಾಳು ಇಂಪಾರ್ಟೆಂಟೋ ಆಗಿತ್ತೋ ಹಾಗೆ ನನ್ನ ಬಾಳು ನನಗೆ. ನನ್ನ ಮದುವೆ ಮುಗಿಯೋ ತನಕ ಯಾವ ತಲೆ ಬಿಸೀನೂ ಕೊಡ್ಬೇಡ ಅಮ್ಮ. ಪ್ಲೀಸ್ ಲೆಟ್ ಮಿ ಲೀವ್" ಕಾಲು ಕೊಡವಿಕೊಂಡು ಎದ್ದು ಹೋದಳು.
ಅವಳು ಹೇಳುತ್ತಿರುವುದೂ ಸರಿಯೇ
ನವ್ಯಾಗೆ ಮದುವೆಯಾಗುವ ಕನಸಿದೆ, ಚಂದ್ರೂಗೆ ಹಣ ಮಾಡುವ ಹಂಬಲವಿದೆ , ನವೀನ್‍ಗೆ ಡೈರೆಕ್ಟರ್ ಆಗೋ ಅನಿವಾರ್ಯತೆ ಇದೆ, ಚಿರೂಗೆ ಮಿನಿಸ್ಟರ್ ನಾಳೆ ಸಿ.ಎಮ್ ಇನ್ನೂ ಮುಂದೆ ಬೆಳೆಯುವ ಮಹತ್ವಾಕಾಂಕ್ಷ್ತೆ ಇದೆ.
ಆದರೆ ನನಗೆ ಯಾವ ಗುರಿ ಇದೆ. ಇಷ್ಟವಿಲ್ಲದಿದರೂ ಹಾಡು ಹಾಡಬೇಕಾಯ್ತು, ನನ್ನಿಷ್ಟದಂತೆ ಇರಲಾಗಲಿ, ತಿನ್ನಲಾಗಲಿ, ಕುಡಿಯಲಾಗಲಿ, ಅಥವ ತೊಡಲಾಗಲಿ ಆಗಲೇ ಇಲ್ಲ
ಮದುವೆಗೆ ಮೊದಲು ಅಪ್ಪನ ಕಣ್ಗದುರುವಿಕೆಯಿಂದಲೇ ನಡುಗುತಿದ್ದೆ. ನಂತರ ಮಾವ ಹೇಳಿದ್ದ ಚಾಚೂ ತಪ್ಪದೆ ನಡೆಸುತ್ತಿದ್ದೆ.ಮಾವ ಹೋದ ನಂತರ ಇಲ್ಲಿವರೆಗೆ ಚಂದ್ರುವಿನ ಆಣತಿಯಂತೆ ಬದುಕುತ್ತಿದ್ದೇನೆ . ಮುಂದೆ ಖಂಡಿತವಾಗಿ ನವೀನ ಅಥವ ನವ್ಯಾ ಹೇಳಿದ ಹಾಗೆ ಕೇಳುತ್ತಾ ಬದುಕಬೇಕಾಗುತ್ತದೆ.
ಆರ್ಥಿಕವಾಗಿ ಸಬಲತೆ ಇದ್ದರೂ ಮಾನಸಿಕವಾಗಿ ದುರ್ಬಲಳಾಗಿದ್ದೇನೆ. ಯಾವತ್ತು ಮಾನಸಿಕವಾಗಿ ಗಟ್ಟಿಯಾಗುವುದು ? ಈ ಪ್ರಶ್ನೆ ಅನಂತವಾಗಿ ಕಾಡುತ್ತಲೇ ಇತ್ತು.
ಸ್ವಲ್ಪ ಹೊತ್ತಿನ ನಂತರ ರಾಜುವನ್ನ ಕರೆದೆ. ಆತನನ್ನು ನವೀನ ತನ್ನ ಡ್ರೈವರ್ ಮಾಡಿಕೊಂಡಿದ್ದ , ನನಗೆ ಬೇರೆ ಡ್ರೈವರ್ ಗೊತ್ತು ಮಾಡಿದ್ದರು.
ಖಂಡಿತಾ ಆತ ನಾನು ಹೇಳಿದ ಕಡೆಗೆ ಬರಲಾರ ಎಂಬುದು ತಿಳಿಯಿತು . ಆಗಲೆ ನನ್ನ ಪಿ.ಎ ಇಂದ ಅಂದಿನ ನನ್ನ ಶೆಡ್ಯೂಲ್ ಬರೆದುಕೊಳ್ಳುತ್ತಿದ್ದ ಆತ.
ಗೊಂಬೆಯಂತೆ ಜೀವನ ಸಾಗಿತ್ತು. ಅದಾದ ನಂತರ ಅಪ್ಸರಾ ದಿನಾ ಕಾಣುತ್ತಿದ್ದಳು ಆದರೆ ನನ್ನ ಹೊಸ ಡ್ರೈವರ್ ನಿಲ್ಲಿಸುತ್ತಿರಲಿಲ್ಲ .
ಮೂರು ವಾರಗಳು ಕಳೆದವು.
ಆ ವಾರದಲ್ಲೇ
ಮನೆಯಲ್ಲಿ ಮಗಳ ತಯಾರಿ ಜೋರಾಗಿ ನಡೆಯುತ್ತಿತ್ತು
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿಯ ಮಿನಿಸ್ಟರ್ ಪಟ್ಟ ಚಿರಂಜೀವಿಗೆ ಸಿಗುತ್ತಿತ್ತು
ಅದೇ ವೇಳೆಗೆ ನವೀನನ ಹೊಸ ಚಿತ್ರ "ಹೆಣ್ಣೇ ನೀ ಅಬಲೆಯಲ್ಲ" ತೆರೆ ಕಾಣುತ್ತಿತ್ತು.
"ಬಾಲಿವುಡ್ ದಿಗ್ಗಜ ರಾಥೋಡ್‌ರ ಶತ ಕೋಟಿ ಚಿತ್ರಕ್ಕೆ ಕನ್ನಡದ ಕೋಗಿಲೆ ಖ್ಯಾತ ಗಾಯಕಿ ಲಕ್ಷ್ಮಿಯವರಿಂದ ಐಟಮ್ ಸಾಂಗ್ " ಎಂಬ ಬರಹಗಳು ಸಿನಿಪತ್ರಿಕೆಗಳಲ್ಲಿ ಕಾಣತೊಡಗಿದ್ದವು.

ಮುಂದಿನ ವಾರ ಮಗಳ ಮದುವೆಯ ನಂತರ ಹಾಡುವುದಾಗಿ ಒಪ್ಪಿಗೆ ಕೊಟ್ಟಿದ್ದೆ. ಡೇಟ್ಸ್ ಫಿಕ್ಸ್ ಆಗಿತ್ತು.
ಒಂದೆರೆಡು ದಿನದಿಂದ ಅಪ್ಸರ ಕಾಣಿಸಲಿಲ್ಲ.ಏಕೋ ಆ ಮೊದಲಿನ ಆತಂಕ ಕಾಡುತ್ತಿರಲಿಲ್ಲ
ಮನಸ್ಸು ನಿರ್ಲಿಪ್ತವಾಗಿತ್ತು.
ನಾನೇಕೆ ಹೀಗಾದೆ ಎಂದು ಯೋಚಿಸಲೂ ಪುರುಸೊತ್ತು ಇಲ್ಲದಂತಾಗಿತ್ತು.
ಕೊನೆಗೂ ಮಗಳ ಮದುವೆ ಮುಗಿಯಿತು . ಅವಳ ಧಾರೆ ಎರೆದ ನಂತರದ ದಿನದಲ್ಲಿ
----
-----
--
-
-
ಮತ್ತೊಂದು ಮದುವೆ ದೂರದ ದೇವಸ್ಥಾನದಲ್ಲಿ ನಡೆಯುತ್ತಿತು ಅದು ರಾಜು ಮತ್ತು ಅಪ್ಸರಾ ಮದುವೆ. ಅಪ್ಸರಾಳ ಧಾರೆ ಎರೆಯಲು ಅಪ್ಪ ಅಮ್ಮ ನಾನೆ ಆಗಿದ್ದೆ.
ಹೌದು ನಾನು ಮಗಳ ಮದುವೆ ನಡೆದ ನಂತರ ಎಲ್ಲವನ್ನೂ ಎಲ್ಲರನ್ನೂ ತೊರೆದು ನನ್ನಂತೆಯೇ ಬದುಕಬೇಕೆಂದು ಬಂದಿದ್ದೆ ಅದರ ಮೊದಲ ಹೆಜ್ಜೆಯೇ ನನ್ನಿಂದ ತಡೆಯಲಾಗದ ಅನ್ಯಾಯದ ಫಲ ಅನುಭವಿಸುತ್ತಿರುವ ಅಪ್ಸರಾಳ ಬಾಳನ್ನು ಹಸನು ಮಾಡುವುದು.
ಅವರಿಬ್ಬರನ್ನು ಹರಸಿ ಅಪ್ಸರಾಳ ಹೆಸರಿನ ಅಕೌಂಟಿನ ವಿವರವನ್ನು ಕೊಟ್ಟ್ತೆ. ನಾನು ದುಡಿದ ಹಣದಲ್ಲಿ ಕೊಂಚ ಭಾಗವನ್ನು ಅವಳಿಗೂ ಹಾಗು ನನ್ನ ಖರ್ಚಿಗೂ ತೆಗೆದುಕೊಂಡಿದ್ದೆ.
ಅವರಿಬ್ಬರಿಗೂ ವಿದಾಯ ಹೇಳಿ ನನ್ನ ಮುಂದಿನ ಬದುಕಿಗೆ ತೆರಳಲು ಸಿದ್ದವಾದೆ
ಅದು ನನ್ನದೇ ಬದುಕು,. ನಾ ಬಯಸಿದ ಬದುಕು
---------------------------------------------

Monday, January 19, 2009

ಬಾಳೆಂಬ ಸುಳಿ-೧

ಲಕ್ಷ್ಮಿ
"ಲಕ್ಷ್ಮಿಏನು ಯೋಚನೆ ಮಾಡಿದೀಯಾ ?" ತಿಂಡಿ ತಿನ್ನುತ್ತಾ ಕೇಳಿದರು ಚಂದ್ರು. " ಯಾವುದರ ಬಗ್ಗೆ ?" ತಣ್ಣಗೆ ಪ್ರಶ್ನಿಸಿದೆ ಗೊತ್ತಿತ್ತು ಆದರೂ .

"ಮತ್ತೆ ರೇಗಿಸ್ಬೇಡ .ನೋಡು ಆ ಪ್ರೊಡ್ಯೂಸರ್ ತುಂಬಾ ಗ್ರೇಟ್ . ಯಾರ ಮನೆಗೂ ಹೋಗಿ ಏನೂ ಬೇಡಿಲ್ಲ . ಅಂತಹದರಲ್ಲಿ ನೀನು ಈ ಆಫರ್ ಮಿಸ್ ಮಾಡ್ಕೋಬೇಡ" ಇವರಿಗೆ ಎಲ್ಲರೂ ಗ್ರೇಟ್ ನನ್ನ ಬಿಟ್ಟು, ಎಂದಿಗೂ ನನ್ನ ಮನಸ್ಸನ್ನ ಅರ್ಥ ಮಾಡಿಕೊಳ್ಳಲೇ ಇಲ್ಲ

"ರೀ ನಿಮಗೆ ಗೊತ್ತು ನಾನು ಯಾವ ಥರ ಅಂತ . ಐಟಮ್ ಸಾಂಗ್ ಹಾಡಕ್ಕೆ ಯಾರು ಬೇಕಾದ್ರೂ ಸಿಕ್ತಾರೆ , ನಾನೆ ಯಾಕೆ ಬೇಕು . ಪಾಪ ಎಷ್ಟೋ ಚಿಕ್ಕ ಹುಡುಗ /ಹುಡುಗಿಯರು ಚಾನ್ಸ್ ಕೊಟ್ಟರೆ ಸಾಕು ಅಂತ ಕಾಯ್ತಿದಾರೆ, ಅದರಲ್ಲಿ ನಾನೆ ಬೇಕು ಅನ್ನೋದು ಅವರ ಹಠ ತೋರಿಸುತ್ತೆ ಹೊರತು ನನ್ನ ಮೇಲಿನ ಗೌರವ ಅಲ್ಲ. ನಂಗೆ ಐಟಮ್ ಸಾಂಗ್ ಹಾಡಕ್ಕೆ ಇಷ್ಟ ಇಲ್ಲ"

"ಮಮ್ಮಿ ಇದೇನು ನಿನ್ನ ಹಠ, ಅಮರ್ ರಾಥೋಡ್ ಅಂದ್ರೇನು ಅವರ ಸಿನಿಮಾ ಶೈಲಿ ಏನು ? ಅವರು ಮಾಡಿದ ಎಲ್ಲಾ ಸಿನಿಮಾಗಳು ನೂರು ಕೋಟಿಯ ಮೇಲಿನ ಬಡ್ಜೆಟ್. ಅಂಥವರು ನಿನ್ನನ್ನೇ ಹಾಡಬೇಕು ಅಂತ ಬೇಡ್ಕೊಳ್ತಿದಾರೆ. "

ಮದುವೆಗೆ ಸಿದ್ದಳಾಗಿರುವ ನವ್ಯಾಳ ಮಾತು. ಅವಳಿಗೆ ರಾಥೋಡ್‌ರ ದೊಡ್ಡತನ ಕಾಣುತ್ತದೆ ಹೊರತು ಈ ಅಮ್ಮನ ಮನಸ್ಸು ಅರ್ಥವಾಗುವುದಿಲ್ಲ

"ಅದೂ ಅಲ್ಲದೆ ಅವರ ಆಫರ್ ಏನು ಕಡಿಮೇನಾ, ವನ್ ಕ್ರೋರ್ ಆಫರ್, ಮಮ್ಮಿ ಒಪ್ಕೋ , ಮುಂದೆ ನಾನು ಡೈರೆಕ್ಟ್ ಮಾಡ್ಬೇಕಂತಿರೋ ಫಿಲಮ್‌ಗೆ ನೀನೆ ಪ್ರೊಡ್ಯೂಸರ್ ಆಗು ಈ ದುಡ್ಡೇನು ಕಡಿಮೆ ಅಲ್ಲ" ಈಗ ತಾನೆ ಸಿನಿಮಾ ನಿರ್ದೇಶನದ ತರಬೇತಿ ಪಡೆದು ಬಂದಿರೋ ನವೀನ್ ಬುದ್ದಿ ಹೇಳಿದ. ಅವನಿಗೆ ಹಣದ ಮುಂದೆ ಎಲ್ಲಾ ಗೌಣ

" ನೋಡು ಲಕ್ಷ್ಮಿ ಈಗ ನಿನ್ನ ಒಪ್ಪಿಗೆಗಿಂತ ನಿನ್ನ ಡೇಟ್ಸ್ ಬೇಕು, ಯಾವಾಗ ರೆಕಾರ್ಡಿಂಗ್ ರಿಹರ್ಸಲ್ ಶುರು ಮಾಡೋಣ ಹೇಳು, ರಾಥೋಡ್‌ಗೆ ಕಾಲ್ ಮಾಡ್ತೀನಿ, ಹಾಡೋರಿಗೆ ಲಿಮಿಟ್ಸ್ ಇರಬಾರದು ಇಂಥ ಹಾಡ ಹಾಡಬಾರದು ಅಂತ ನಿಯಮ ಹಾಕ್ಕೋಬಾರದು ಗೊತ್ತಾಯಿತಾ?"

ಹಾಡೋರಿಗಲ್ಲ ನಿಮ್ಮ ಹೆಂಡತಿಗೆ ಎನ್ನಿ ಎನ್ನುವ ಮಾತು ನಾಲಿಗೆಗೆ ಬಂದರೂ ಅದರ ಪರಿಣಾಮ ಗೊತ್ತಿದ್ದುದ್ದರಿಂದ ಮನಸಲ್ಲೇ ಅಡಗಿಸಿದೆ

ಇವರೆಲ್ಲರ ಮುಂದೆ ನನ್ನ ಪ್ರಲಾಪ ವ್ಯರ್ಥವೆನಿಸಿತು.

"ರೀ ನಾನೆ ಹೇಳ್ತೀನಿ . ನಂಗೆ ಒಂದಾರು ದಿನ ಸಮಯ ಕೊಡಿ" ಕಣ್ಣಾಲಿಗಳಲ್ಲಿ ತುಂಬಿದ್ದ ನೀರನ್ನು ಅಡಗಿಸುವ ಪ್ರಯತ್ನ ಮಾಡಿದೆ.

"ಮಮ್ಮಿ ನಿನ್ನನ್ನ ಏನು ಐಟಮ್ ಸಾಂಗ್‌ಗೆ ಕುಣಿ ಅಂದ್ವಾ ಸಮಯ ತಗೋಳೋಕೆ, ಹಾಗೆ ಐಟೆಮ್ ಡ್ಯಾನ್ಸ್ ಮಾಡೋಕೆಜ ನ ತಾ ಮುಂದು ನಾ ಮುಂದು ಅಂತ ಬರ್ತಿದಾರೆ, ನೀನೊಳ್ಳೆ ..." ಮೊನ್ನೆವರೆಗೆ ಅಮ್ಮ ಯಾವ ಬಟ್ಟೆ ಹಾಕಿಕೊಳ್ಳಲಿ ಎಂದು ಕೇಳುತ್ತಿದ್ದ ನವೀನ್‌ಗೆ ನಾನು ಪೆದ್ದಳಂತೆ ಕಂಡೆನೇನೋ

ತಲೆಗೊಬ್ಬರಿಗಂತೆ ಮಾತನಾಡಿ ಎಲ್ಲರೂ ಖಾಲಿಯಾದರೂ ಜೊತೆಗ್ ಮನಸ್ಸೂ ಖಾಲಿ ಖಾಲಿ.

ಇದೇ ನನ್ನ ಬಲಹೀನತೆ, ಯಾರಿಗೂ ಎದುರು ವಾದಿಸಿ ಅನುಭವವಿಲ್ಲ. ಜೊತೆಗೆ ಅಷ್ಟೊಂದು ಧ್ರೈರ್ಯವೂ ಇಲ್ಲ.

ತನ್ನನ್ನು ಮೆಚ್ಚಿದರೆಂದು ಊರಿನ ಅತೀ ಶ್ರೀಮಂತ ಶ್ರೀಪತಿರಾಯರ ಏಕೈಕ ಪುತ್ರ ಚಂದ್ರಶೇಖರ್ ಹೇಳಿಕಳಿಸಿದಾಗ ಮನೆಯಲ್ಲಿ ಸಂತಸದ ಬುಗ್ಗೆ, ಕೂಡಲೆ ಮದುವೆಗೆ ತಯಾರಿ, ನನ್ನ ಇಷ್ಟ ಕಷ್ಟ ಯಾರಿಗೂ ಬೇಕಿರಲಿಲ್ಲ. ತನಗೇನು ಚಂದ್ರು ಬಗ್ಗೆ ಅಂತಹ ಒಲವಿರಲ್ಲಿಲ್ಲ ನನ್ನ ಅಭಿಪ್ರಾಯಕ್ಕೆ ಅಲ್ಲಿಯೂ ಬೆಲೆ ಇರಲಿಲ್ಲ. ಹನ್ನೆರೆಡನೆ ತರಗತಿಯ ನಂತರ ಮುಂದೆ ಓದಬೇಕೆಂಬ ಹಂಬಲವೂ ಈಡೇರಲಿಲ್ಲ

ಮದುವೆಯಾಗಿ ಬಂದ ನಂತರ ಶ್ರೀಮಂತ ಮನೆತನದವರ ಜೊತೆ ಬಾಳುವುದು ಬಹಳ ಕಷ್ಟವಾಗಿತ್ತು, ಇನ್ನು ಚೆಲ್ಲು ಚೆಲ್ಲಾಗಿ ಆಡುತ್ತಿದ್ದ ನಾದಿನಿ, ನಿರ್ಲಕ್ಶ್ಯ ಮಾಡಿ ನೋಡುತ್ತಿದ್ದ ಮೈದುನ , ಇವರೆಲ್ಲರ ನಡುವೆ ಮಾವನ ಶ್ರೀರಕ್ಷೆ ಸಿಕ್ಕಿತ್ತು, ಚಂದ್ರುಗೆ ಸಿನಿ ನಿರ್ದೇಶಕನಾಗುವ ಅದಮ್ಯ ಬಯಕೆ ಹಾಗಾಗಿ . ಒಂದೆರೆಡು ಚಿತ್ರಗಳಿಗೆ ಹಣ ಹಾಕಿ ಮಾಡಿದರೂ ಅವು ಮೂರು ದಿನ ನಿಲ್ಲಲಿಲ್ಲ.ಆದರೂ ಅವರ ಕನಸು ಸತ್ತಿರಲಿಲ್ಲ.

ದೇವರು ನನಗೊಂದು ಅಧ್ಬುತ ಕಂಠ ಕೊಟ್ಟಿದ್ದ, ಮನೆಯಲ್ಲಿ ಕೊಂಚ ಸಂಗೀತ ವಾತಾವರಣವಿದ್ದುದರಿಂದ ನನಗೂ ಹಾಡುವ ಹುಚ್ಚು, ಆಗಾಗ ದೇವರ ನಾಮ ಹಾಡಿಕೊಳ್ಳುತ್ತಿದ್ದೆ, ಇದನ್ನು ಎನ್ಕ್ಯಾಶ್ ಮಾಡಿಕೊಳ್ಳೋದಿಕ್ಕೆ ಮಾವ ಇರುವವರೆಗೂ ಆಗಿರಲಿಲ್ಲ, ಮಾವ ಹೋದ ಬಳಿಕ ಚಂದ್ರುವಿನ ನಿಜರೂಪ ಬಿಚ್ಚಿಕೊಳ್ಳತೊಡಗಿತು. ಸಿನಿಮಾದಲ್ಲಿ ಹಾಡಲು ಒತ್ತಾಯ ಪಡಿಸಿದ, ನಾನೋ ನನ್ನ ಚಿಪ್ಪಿನಲ್ಲೇ ಸಂತೋಷವಾಗಿರುವುದಕ್ಕೆ ಬಯಸುವವಳು . ಕೊನೆಗೆ ನವೀನ್ ಹಾಗು ನವ್ಯ ಸಮೇತ ನನ್ನನ್ನು ಮನೆ ಬಿಟ್ಟುಕಳಿಸುವುದಾಗಿ ಹೆದರಿಸಿದಾಗ ಒಪ್ಪಲೇ ಬೇಕಾಯ್ತು.

ನನ್ನ ಕಂಠ ಸಿನಿ ಪ್ರೇಮಿಗಳಿಗೆ ಹಿಡಿಸಿತು. ನೋಡು ನೋಡುತ್ತಿದ್ದಂತೆ ನಂಗೆ ಗೊತ್ತಿಲ್ಲದೆ ನಾನು ಎತರೆತ್ತರ ಬೆಳೆದಿದ್ದೆ. ನನ್ನ ನೆರಳಿನಿಂದಲೇ ಚಂದ್ರೂಗೆ ಸಿನಿಮಾ ಅವಕಾಶಗಳು ಸಿಕ್ಕಿದವು, ಆತನೂ ಪ್ರಸಿದ್ದಿ ಪಡೆದ. ನಾನುಹಾಡಿದ ಹಾಡುಗಳು ಯಾವತ್ತೂ ಸಭ್ಯತೆಯ ಗಡಿ ದಾಟಿರಲಿಲ್ಲ. ಕನ್ನಡ ಹಿಂದಿ ಎರೆಡರಲ್ಲೂ ಸಮಾನ ಅವಕಾಶಗಳು ದಕ್ಕಿದ್ದವು. ಹಾಡುವುದರಲ್ಲೇನೂ ಸಂತಸವಿಲ್ಲ ನನಗೆ ಆದರೆ ಯಾವುದೂ ನನ್ನ ಇಷ್ಟದಂತೆ ಆಗಿರಲಿಲ್ಲ.ಹೇಗೋ ಕಾಲ ಕಳೆಯುತ್ತಿದ್ದೆ

ಆದರೆ ಈ ರಾಥೋಡ್ ಒಂದು ರೀತಿಯ ವಿಚಿತ್ರ ವ್ಯಕ್ತಿ ಅವನಿಗೆ ಹಣಕಿಂತ ಅವನ ಹಠ ಗೆಲ್ಲುವುದು ಮುಖ್ಯ ಹಿಂದೆ ಒಂದು ಬಾರಿ ಯಾವುದೋ ಐಟಮ್ ಸಾಂಗ್ ಹಾಡಲು ಕರೆದಿದ್ದಾಗ ನಾನು ಒಪ್ಪಿರಲಿಲ್ಲ . ಈ ಬಾರಿ ಎಲ್ಲಾ ತಯಾರಿ ಮಾಡಿಕೊಂಡೆ
ಚಂದ್ರುವನ್ನೇ ನೇರವಾಗಿ ಸಂಪರ್ಕಿಸಿದ್ದ. ಅಪಾರ ಹಣದ ಆಸೆ ತೋರಿದ್ದ.
ಹೇಗಾದರೂ ಆಗಲಿ ಈ ಬಾರಿ ನನ್ನ ಮನಸಿನಂತೆ ಮಾಡಬೇಕು ಎಂದುಕೊಂಡರೂ ನನಗೆ ಅಷ್ಟೊಂದು ಧೈರ್ಯವಿಲ್ಲ ಎಂಬುದು ನನಗೇ ಗೊತ್ತಿತು
ದೇವಸ್ಥಾನಕ್ಕೆ ಹೋಗಬೇಕಿನಿಸಿತು ರಾಜುವನ್ನು ಕರೆದೆ
ರಾಜು ವಿಧೇಯ ವ್ಯಕ್ತಿ. ನಮ್ಮ ಮನೆಯ ಡ್ರೈವರ್ ಆದರೂ ನನ್ನ ಮಕ್ಕಳು ತೋರಿಸದ ಕಾಳಜಿ, ಗೌರವ ತೋರಿಸುತ್ತಾನೆ.
ಕಾರಿನಲ್ಲಿ ಹೋಗುತ್ತಿದ್ದಂತೆ ಕಣ್ಣಿಗೆ ಮತ್ತೆ ಆ ಹುಡುಗಿ ಬಿದ್ದಳು. ಸುಮಾರು ೧೮ ವರ್ಷದ ಹುಡುಗಿ ಇರಬೇಕು.
ಅದೇ ಬಸ್‌ಸ್ಟಾಂಡ್‌ನಲ್ಲಿ ಮತ್ತೆ ಕಂಡಳು.
ಅದೇನೋ ನನಗೆ ಆ ಹುಡುಗಿಯ ಮೇಲೆ ಒಂಥರಾ ಕುತೂಹಲ ಅದಕ್ಕೆ ಕಾರಣವೂ ಇತ್ತು. ಆ ಹುಡುಗಿಯ ಮುಖ
ಚಿರಪರಿಚಿತ ಅನ್ನಿಸುತ್ತಿತ್ತು ಜೊತೆಗೆ ಮಾತಾಡಲು ಅಳುಕು ಸಹಾ.ಮುಖವನ್ನು ಸಿಂಡರಿಸಿಕೊಂಡೆ ಎಲ್ಲರನ್ನೂ ಮಾತಾಡಿಸುತಿದ್ದಳು. ಹುಬ್ಬು ಗಂಟಿಕ್ಕಿಕೊಂಡಿದ್ದರಿಂದ ನೋಡಿದ ಕೂಡಲೆ ದೂರವಾಗುವ ಯೋಚನೆಯೂ ತುಂಬಾ ಜನಕ್ಕೆ ಬಂದಿದ್ದರೂ ಸಾಕು
ಇಂದು ಏನೇ ಆಗಲಿ ಅವಳೊಡನೆ ಮಾತನಾಡಲೇಬೇಕೆಂದು ನಿರ್ಧರಿಸಿದೆ
ಕಾರಿನಿಂದ ಹೊರಗೆ ಬಂದರೆ ಸಾಕು ಜನ ನನ್ನನ್ನು ಮುತ್ತಿಬಿಡುತ್ತಾರೆ ಎಂದು ತಿಳಿದಿತ್ತಾದ್ದರಿಂದ ಡ್ರೈವರ್ ರಾಜುವನ್ನು ಅವಳನ್ನು ಕರೆಯಲು ಕಳಿಸಿದೆ
ರಾಜು ಅವಳತ್ತ ಹೋಗಿ ಮಾತನಾಡಿಸಲು ಹೋದ ತಕ್ಷಣ ಆ ಹುಡುಗಿ ಸಿಡಿಮಿಡಿಗೊಂಡು ಅತ್ತ ಜರುಗಿದಳು.ಅವನು ಇನ್ನೇನೋ ಹೇಳಲು ಹೋದ. ಆ ಹುಡುಗಿ ಚಾಮುಂಡಿಯ ಅವತಾರದಲ್ಲಿ ಅವನನ್ನು ಏನೋ ಬೈಯ್ಯಲು ಆರಂಭಿಸಿದಳು.
ರಾಜು ಪೆಚ್ಚು ಮುಖ ಹೊತ್ತು ಕಾರಿನ ಬಳಿಗೆ ಬಂದ. "ಮೇಡಂ ಅವಳು ಹೆಣ್ಣಲ್ಲ ರಾಕ್ಷಸಿ. ಬಾಯಿಗೆ ಬಂದ ಹಾಗೆ ಹೊಲಸಾಗಿ ಮಾತಾಡ್ತಾಳೆ ಅವಳ ಸಹವಾಸ ನಮಗೆ ಯಾಕೆ ಬೇಕು ಬನ್ನಿ ಮೇಡಮ್"
ಬೇಸರವಾಯಿತಾದರೂ ನನ್ನ ಕುತೂಹಲ ತಣಿಯಲಿಲ್ಲ. ಹೋದರೆ ಹೋಗಲಿ ಎಂದು ಕಾರನ್ನು ಅವಳ ಸಮೀಪ ನಿಲ್ಲಿಸಲು ಹೇಳಿದೆ
ಕಾರ್ ಮುಂದೆ ಹೋಗುತ್ತಿದ್ದಂತೆ ಅವಳು ಎರೆಡು ಹೆಜ್ಜೆ ಹಿಂದಿಟ್ಟು, ಸಿಡುಕು ಮೋರೆ ಮಾಡಿಕೊಂಡು ಕಾರನ್ನೇ ದಿಟ್ಟಿಸುತ್ತಿದ್ದಳು
ಕಾರಿನ ಗ್ಲಾಸ್ ಇಳಿಯುತ್ತಲೆ ಹೊರಗೆ ತಲೆ ಹಾಕಿದೆ. ನನ್ನನ್ನ್ನ ಗುರುತಿಸಬಹುದೆಂಬ ಯೋಚನೆ
"ಏನ್ರಿ ಯಾಕೆ ಹಾಗ್ನೋಡ್ತೀದೀರಾ ನೀವು ಅವನಿಗೆ ನನ್ನ ತಲೆ ಹಿಡಿಯೋಕೆ ಬಂದ್ರಾ?" ಸಿಡಿದಳು , ಅವಳ ಮಾತಿಗೆ ಒಮ್ಮೆಗೆ ಶಾಕ್ ಆಯ್ತು. ಇದೆಂಥಾ ಯೋಚನೆ ಅವಳದು .
"ಏಯ್ ಮೇಡಮ್ ಯಾರು ಅಂತ ಗೊತ್ತಿಲ್ಲದೆ ಬಾಯಿಗೆ ಬಂದ ಹಾಗೆ ಮಾತಾಡಬೇಡ " ರಾಜು ಅವಡುಗಚ್ಚಿ ನುಡಿದ
"ಯಾರಾದರೆ ನಂಗೇನು ಯಾರೂ ನನ್ನನ್ನಮಾತಾಡಿಸೋದು ಬೇಕಿಲ್ಲ ಸುಮ್ಮನೆ ತೊಂದರೆ ಕೊಡಬೇಡಿ" ಎಲ್ಲರಿಗೊ ಕೇಳುವಂತೆ ಜೋರಾಗಿಯೇ ಮಾತಾಡಿದಳು
ಎಲ್ಲರ ಗಮನ ಇತ್ತ ಸರಿಯಿತು .
"ಸಿಂಗರ್ ಲಕ್ಷ್ಮಿ ನೋಡೋ" ಕಾಲೇಜು ಹುಡುಗನೊಬ್ಬ ಅಚ್ಚರಿಯಿಂದ ಉದ್ಗರಿಸಿದ ತಕ್ಷಣವೇ ಎಲ್ಲರೂ ನನ್ನ ಕಾರಿನತ್ತ ಬರತೊಡಗಿದರು ಇಲ್ಲಿದ್ದರೆ ಕಷ್ಟ ಎಂದನಿಸಿದ ತಕ್ಷಣ ರಾಜುಗೆ ಕಾರ್ ಚಲಿಸಲು ಹೇಳಿದೆ
ಕಾರ್ ಚಲಿಸುತ್ತಿತ್ತು
ಏಕೋ ಅವಮಾನವೆನಿಸಲಿಲ್ಲ
ಅವಳ ಆ ನಡೆಗೆ ಯಾವುದೋ ಬಲವಾದ ಕಾರಣವಿರಬೇಕೆಂದು ಅನ್ನಿಸಿತು.
ಆದರೂ ಅವಳು ನನ್ನನ್ನು ಸೆಳೆಯುತ್ತಿದ್ದಳು

ಮತ್ತೊಂದು ದಿನ ಕಳೆಯಿತು, ಅದೇ ರಾಥೋಡ್ ಅದೇ ಸಾಂಗ್, ಇವುಗಳ ನಡುವೆ ನೆನ್ನೆಯ ಘಟನೆ ಬೇರೆ ನವೀನನ ಕಿವಿಗೆ ಬಿದ್ದು
"ಏನಮ್ಮ ಒಂದು ಸ್ಟೇಟಸ್ ಇಲ್ವಾ ನಿನಗೆ . ಆಫ್ಟರ್ ಆಲ್ ಒಂದು ಬೀದಿ ಹುಡುಗಿಯ ಕೈನಲ್ಲಿ ಬೈಸಿಕೊಂಡೆಯಲ್ಲಾ " ಎಂದು ಉಗಿದಿದ್ದ
ಆದರೂ ಆ ಹುಡುಗಿಯ ಚಿತ್ರವೇ ಮನಸ್ಸನ್ನು ಕದಡಿತು.
ಮತ್ತೆ ಇಂದು ರಾಜುಗೆ ಅದೇ ಬಸ್ ಸ್ಟಾಂಡ್‌ಗೆ ಕರೆದುಕೊಂಡು ಹೋಗಲು ಹೇಳಿದೆ. ರಾಜು ಪ್ರಶ್ನಾರ್ಥಕವಾಗಿ ನೋಡಿದರೂ ಮಾತಾಡಲಿಲ್ಲ.
ಮತ್ತದೇ ಜಾಗದಲ್ಲಿ ಆ ಹುಡುಗಿ ಕಂಡಳು. ಕಾರ್ ನೋಡಿದ ತಕ್ಷಣ ಅವಳೇ ಬಂದಳು.
"ತಪ್ಪಾಯ್ತು ಮೇಡಮ್ ನೀವು ಯಾರು ಅಂತ ತಿಳಿದಿರಲಿಲ್ಲ" ಕಾರ್ ಗ್ಲಾಸ್ ಇಳಿದ ತಕ್ಷಣ ಬಗ್ಗಿ ನುಡಿದಳು
ಅರೆ ನೆನ್ನೆ ನೋಡಿದ ಆ ದುರ್ಗಿ ಎಲ್ಲಿ ಇಂದಿನ ಈ ನಮ್ರ ಹುಡುಗಿ ಎಲ್ಲಿ
"ಹೋಗಲಿ ಬಿಡಮ್ಮ , ನಿನ್ನ ನೋಡಿದಾಗಿನಿಂದ ನನಗೆ ಯಾರದೋ ನೆನಪು, ಮುಖ ತುಂಬಾ ಚೆನ್ನಾಗಿ ಗೊತ್ತು ಅನ್ನಿಸ್ತಿದೆ ಅದಕ್ಕೆ ಮಾತಾಡಿಸಿದೆ, ನಿನ್ನ ಜೊತೆ ಮಾತಾಡಬಹುದಾ ಸ್ವಲ್ಪ ಹೊತ್ತು?"
" ಆಯ್ತು ಮೇಡಮ್" ಒಪ್ಪಿದ್ದೇ ಸಂತಸ
" ಸರಿ ಬಾ" ಎಂದು ಕಾರಿನಲ್ಲಿ ಕೂರಲು ಕರೆದೆ
"ಇಲ್ಲ ಮೇಡಮ್ ನೀವೆಲ್ಲಿರ್ತೀರಾ ಅಂತ ಹೇಳಿ ನಾನೆ ಬರ್ತೀನಿ" ಎಂದಳು, ಬಹುಶ ಮನುಷ್ಯರಲ್ಲಿ ನಂಬಿಕೆ ಇಲ್ಲವೇನೋ
"ಸರಿ ಮುಂದಿನ ಅಡಿಗಾಸ್‍ಗೆ ಬಾಮ" ಕರೆದು ಕಾರ್‌ನ್ನು ಅಡಿಗಾಸ್ ಬಳಿ ನಿಲ್ಲಿಸಲು ಹೇಳಿದೆ
"ಮೇಡಮ್ ಇದ್ಯಾಕೋ ಸರಿ ಇಲ್ಲ . ನೀವ್ಯಾಕೆ ಅವಳ ಮೇಲೆ ಇಷ್ತೊಂದು ಆಸಕ್ತಿ ತಗೋತಿದ್ದೀರೋ ಗೊತ್ತಿಲ್ಲ. ಆದರೆ ಅವಳ್ ಬ್ಯಾಕ್‌ಗ್ರೌಂಡ್ ಸರಿ ಇಲ್ಲ ಮೇಡಮ್." ರಾಜು ಅಳುಕುತ್ತಾ ನುಡಿದ
"ಯಾಕೆ ರಾಜು ಏನಾಗಿದೆ ಅವಳ ಬ್ಯಾಕಗ್ರೌಂಡಿಗೆ"
"ಮೇಡಮ್ ನೆನ್ನೆ ನಮ್ಮ ಡ್ರೈವರ್ ಹುಡುಗರು ಹೇಳ್ರಿದ್ದರು . ಅವಳಿ ಮುಂಬೈನಿಂದ ಬಂದಿರೋ ಕಾಲ್‌ಗರ್ಲ್ ಥರ..........."
"ಮುಚ್ಚು ಬಾಯಿ ರಾಜು ನಾಲಿಗೆ ಉದ್ದ ಆಗ್ತಿದೆ. "ಅವನಿಗೊಬ್ಬನಿಗೆ ನಾನು ಬೈಯ್ಯೋದು
ರಾಜು ಸುಮ್ಮನಾದ
ಅಡಿಗಾಸ್‌ನ ಬಳಿ ಕಾರ್ ನಿಲ್ಲಿಸಿದ.
ಅವನನ್ನು ಅಲ್ಲೇ ನಿಲ್ಲಲುಹೇಳಿ ಒಳಗೆ ಹೋದೆ
ಹೋಟೆಲ್‌ನಲ್ಲಿ ಅಷ್ಟೊಂದು ರಷ್ ಇರಲಿಲ್ಲ. ಅದೇನೋ ಜನ ನನ್ನನ್ನು ಗಮನಿಸಲಿಲ್ಲ . ಹೋಟೆಲ್ ಕ್ಯಾಷಿಯರ್‌ಗೆ ನಾನು ದಿನಾ ಇಲ್ಲೇ ಬರುವುದು ಗೊತ್ತಿದ್ದುದರಿಂದ ಅಂಥ ಅಚ್ಚರಿಯೇನು ತೋರಿಸಲಿಲ್ಲ
ಸ್ವಲ್ಪ ಹೊತ್ತ್ತಾದ ನಂತರ ಆ ಹುಡುಗಿ ಬಂದಳು

ಆ ಹುಡುಗಿಯ ಹೆಸರು ಅಪ್ಸರಾ ಎಂದು ತಿಳಿಯಿತು.
ಹೆಸರು ಚೆನ್ನಾಗಿದೆ ಎಂದೆ
ಅವರ ತಾಯಿಯ ಬಗ್ಗೆ ವಿಚಾರಿಸಿದೆ
ಮ್ಲಾನವದನಳಾದಳು
"ಮೇಡಮ್ ನನ್ನ ತಾಯಿ ಯಾರಂತ ನಂಗೆ ತಿಳಿದೇ ಇಲ್ಲ, ಹೆತ್ತ ಮೇಲೆ ಬೇಡ ಅಂತ ಯಾರಿಗೋ ಕೊಟ್ಟರಂತೆ . ಅವರು ನನ್ನನ್ನ ಒಂದು ಹೆಂಗಸಿಗೆ ಮಾರಿದರಂತೆ . ಆ ಹೆಂಗಸೇ ತಾಯಿ ಅನ್ಕೊಂಡು ಇದ್ದೆ . ಆದರೆ ಅವಳು ಮಾಡುತಿದ್ದದ್ದು ವೇಶ್ಯಾವೃತ್ತಿ, ಆದರೂ ನನ್ನನ್ನ ಆ ಕೊಂಪೆಗೆ ಬೀಳದಂತೆ ಜೋಪಾನ ಮಾಡುತಿದ್ದಳು. ಆದರೆ ವರ್‍ಶ್ದ ಹಿಂಡೆ ಆಕೆ ಸತ್ತಮೇಲೆ ನನಗೆ ನನ್ನ ನಿಜವಾದ ಕಷ್ಟ ಗೊತ್ತಾಯ್ತು. ಹುರಿದು ಮುಕ್ಕಲು ಕಾಯುತ್ತಿದ್ದ ಗಂಡಸರು, ತಲೆ ಹಿಡಿಯಲು ಕಾಯುತ್ತಿರುವ ಹೆಂಗಸರು . ನನ್ನನ್ನ ಆ ಶಾಪ ಬಿಡಲೇ ಇಲ್ಲ , ಒಂದು ತಿಂಗಳು ಹೇಗೋ ಸಹಿಸಿಕೊಂಡೆ ಬದುಕಿದೆ. ಆದರೆ ನನ್ನ ಮೈ ನರಿ ನಾಯಿಗಳ ಪಾಲಾಗಿ ಹಾಳಾಗುವುದು ಬೇಕಿರಲಿಲ್ಲ. ಹೇಗೋ ಅಂಟಿರುವ ಮಲಿನವನ್ನಂತೂ ಸ್ವಛ್ಛಗೊಳಿಸಲೂ ಆಗುವುದಿಲ್ಲ . ಇನ್ನೂ ಆಗುವುದು ಬೇಡ ಅಂತ ಬೆಂಗಳೂರಿಗೆ ಬಂದೆ . ಈಗ ಒಬ್ಬಳೇ ಇದ್ದೇನೆ ಆ ಹೆಂಗಸು ನನನ್ನ ಸ್ವಲ್ಪ ಓದಿಸಿದಳು . ಆ ಓದಿನ ಮೇಲೆ ಈಗ ಕೆಲಸಮಾಡುತ್ತಿದ್ದೇನೆ. ಆದರೂ ಈಗಲೂ ಮನುಷ್ಯರನ್ನು ನಂಬಲು ಬಹಳ ಭಯ, ಅದಕ್ಕೆ ನಾನು ಯಾರ ಜೊತೆಯಲ್ಲೂ ಮಾತಾಡಲ್ಲ , ನನ್ನ ಒಳಗಡೆ ಜ್ವಾಲಾಮುಖೀನೆ ಉರಿತಾ ಇರ್ವಾಗ ತಣ್ಣಗೆ ಮಾತಾಡೋದು ಹೇಗೆ. ಜೀವನದ ಹದಿನೆಂಟು ವರ್ಷ ಹೊಲಸು ಪ್ರಪಂಚದಲ್ಲಿ ಕಳೆದು ಒಳ್ಳೆಯವರಾರು , ಕೆಟ್ಟವರಾರು ಅನ್ನೋದು ತಿಳಿಯೋದಿಲ್ಲ"

ಏಕೋ ಅಪ್ಸರಾಳ ಮಾತು ಕೇಳುತ್ತಿದ್ದಂತೆ ನನ್ನೊಳಗಿನ ಪ್ರಜ್ಮೆ ಇದಕ್ಕೆಲ್ಲಾ ಕಾರಣ ನಾನೆ ಎಂದು ಹೇಳುತ್ತಿದ್ದಂತೆ ಅನ್ನಿಸಿತು
ಆ ಹುಡುಗಿಯ ಮುಖ ಪರಿಚಿತವಾಗಿದ್ದು ಅವಳು ಯಾರಿರಬಹುದೆಂಬ ಪ್ರಶ್ನೆಗೆ ಬಹುಪಾಲು ಉತ್ತರ ಹೇಳುತ್ತಿತ್ತು.
"ನಿನ್ನಮ್ಮ ಎಲ್ಲಿಂದ ಕರೆತಂದರು ಅಂತ ಗೊತ್ತಿದ್ಯಾ" ಸುಮ್ಮನೆ ಪ್ರಶ್ನಿಸಿದೆ
"ಬೆಂಗಳೂರಿನಿಂದ , ಹಾಸ್ಲ್ಪಿಟಲೂ ಗೊತ್ತಿದೆ . ಆದರೆ ಅಲ್ಲಿಗೆ ಹೋಗಿ ಪ್ರಶ್ನೆ ಮಾಡೋಕೆ ನಂಗೆ ಇಷ್ಟ ಇಲ್ಲ"
ಎದೆ ಡವಗುಟ್ಟಿತು
ನಾನಂದುಕೊಂಡಂತೆ ಆದರೆ
"ಸರಿ ಯಾವ ಹಾಸ್ಪಿಟಲ್ ಹೇಳಮ್ಮ ಸುಮ್ಮನೆ ನನ್ನ ಕುತ್ತೂಹಲಕ್ಕೆ"
ಆಕೆ ಹೇಳಿದಳು
ಅವಳ ವಯಸ್ಸು , ಆ ಘಟನೆ ನಡೆದ ಸಮಯ ಸ್ಥಳ ಒಂದೇ ಆಗಿತ್ತು
ಅಂದರೆ ಅವಳೇ ಅವಳಾ
ಮನಸಿನ ಮೂಲೆಯಲ್ಲಿದ್ದ ಅನುಮಾನ ನಿಜವಾಗಿತ್ತು

"ಹೇಗಿದ್ದರೂ ಬೆಂಗಳೂರಿಗೆ ಬಂದಿದೀಯಾ. ಇನ್ನು ಮುಂದೆ ಜೀವನ ಚೆನ್ನಾಗಿರುತ್ತೆ " ಎಂದು ಹರಸಿ ಬಂದದಷ್ಟೆ ಗೊತ್ತು
ಅದು ಹೇಗೆ ಕಾರಿನಲ್ಲಿ ಕೂತೆನೋ.
ರಾಜು ಕೂಡಲೆ ಕಾರನ್ನು ಮನೆಯತ್ತ ಚಲಿಸಿದ

(ಮುಂದುವರೆಯುವುದು)

Friday, January 9, 2009

ಹೀಗೊಂದು ಘಟನೆ

ನಂಗೆ ಆ ದಿನವೇ ಅನ್ನಿಸಿತ್ತು ಈ ಮುದುಕನ ನೋಟದಲ್ಲಿ ಅದೇನೋ ಇದೆ ಅಂತ.
ಇಲ್ಲವಾದರೆ ಅವತ್ತು ಇಂಟರ್‌ವ್ಯೂನಲ್ಲಿ ಯಾವ ಪ್ರಶ್ನೇನು ಕೇಳದೆ "ಯು ಆರ್ ಸೆಲೆಕ್ಟೆಡ್ " ಅಂತ ಕೈಕುಲಕಲು ಬರುತ್ತಿದ್ದನಾ?
ನಾನೇನು ತ್ರಿಪುರ ಸುಂದರಿ ಅಲ್ಲ . ಆದರೂ ನನ್ನನ್ನೇ ಅವನ ಸೆಕ್ರೆಟರಿ ಪೋಸ್ಟ್‌ಗೆ ತಗೊಂಡ, ಇವನ ವಯಸ್ಸಿಗೆ, ದೃಷ್ಟಿಗೆ ಹೇವರಿಕೆ ಅದರೂ ಯಾವುದೋ ಒಂದು ಕೆಲಸ ಸಿಕ್ಕರೆ ಸಾಕು ಅನ್ನೋ ಪರಿಸ್ಥಿತಿ ಇದ್ದಿದ್ದರಿಂದ ಒಪ್ಕೊಂಡೆ
ಏನೇ ತಪ್ಪು ಮಾಡಿದರೂ ಒಂದೂ ಮಾತು ಹೇಳುತ್ತಿರಲಿಲ್ಲ , ಬದಲಿಗೆ ನಗ್ತಾನೇ ಮಾತಾಡ್ತಿದ್ದ. ಅವನು ಹೇಳ್ಕೊಡ್ವೇಕು ಅಂದ್ರೂ ಅದೇನು ಅಷ್ಟೊಂದು ಹತ್ರ ಬರ್ತಾನೆ, ಥೂ ಒಮ್ಮೊಮ್ಮೆ ಈ ಬದುಕೇ ಬೇಡ ಅಂತನ್ನಿಸುತ್ತೆ, ಎಲ್ಲಾ ಹೋಗ್ಲಿ ಇವತ್ತು ಇವನ ಮನೆಗೆ ಬಾ ಅದೇನೋ ಫಂಕ್ಷನ್ ಇದೆ ಅಂತ ಹೇಳಿ ನನ್ನನ್ನ ಮನೆಗೆ ಕರೆದ, ನಾನೂ ಬಂದ್ರೆ ಇಲ್ಲಿ ಯಾರೂ ಇಲ್ಲ , ಇವನಿಗೇನು ಹೆಂಡತಿ ಮಕ್ಳು ಇದಾರ ಅಥವ ಇಲ್ಲವಾ ಅದೂ ಗೊತ್ತಿಲ್ಲ, ಆಫೀಸಿನವರೆಲ್ಲಾ ಅವನು ಹೆಂಡತಿ ಮಕ್ಕಳನ್ನು ಬಿಟ್ಟು ಬಂದಿದಾನೆ ಅಂತ ಆಡ್ಕೋತಾರೆ.
ನನ್ಕರ್ಮ ಏನು ಮಾಡೋದು
ಅವನ್ಯಾಕೆ ಹೀಗೆ ನೋಡ್ತಾ ಇದಾನೆ ಯಾವುದಕ್ಕೂ ಕೈನಲ್ಲಿ ಚಾಕು ತಗೋಳೋದು ಒಳ್ಲೆಯದು
ನೋಡೋಣ ಏನಾಗುತ್ತೆ ಅಂತ ಹೇಗಿದ್ದರೂ ಕರಾಟೆ ಕಲ್ತಿದೀನಲ್ಲ

ಓ ಇವನೇ ಊಟ ಬಡಿಸ್ತಾನಂತೆ , ಬಡಿಸಲಿ , ಮೋಸ್ಟ್ ಲಿ ಊಟದಲ್ಲಿ ಏನಾದರೂ ಬೆರೆಸೋ ಐಡಿಯ ಇರ್ಬೇಕು .
ಸುಮ್ಮನೆ ಏನು ಬೇಡ ಅಂತ ಹೇಳಿಬಿಡೋದೆ ವಾಸಿ.
ನೀನು ತಿನ್ನಲೇಬೇಕು ಅಟ್ಲೀಸ್ಟ್ ಈ ಸ್ವೀಟ್ಸ್ ಅಂತಿದಾನೆ
ಏನ್ಮಾಡೋದು ಹೋಗ್ಲಿ ತಿಂದ ಹಾಗೆ ನಟಿಸೋದು
ಅಬ್ಬಾ ಎಷ್ಟು ಚೆನ್ನಾಗಿರೋ ನೆಕ್ಲೇಸ್ ಕೊಡ್ತಿದಾನೆ, ನೆಕ್ಲೇಸ್ ಕೊಟ್ಟು ಬುಟ್ಟಿಗೆ ಹಾಕೊಳ್ಲೋ ಉಪಾಯ ಮಾಡಿದಾನೆ
ಇದನ್ನ ಬೇಡ ಅನ್ನೋಕೆ ಮನಸೇ ಬರ್ತಿಲ್ಲ
ಆದರೂ ಬೇಡ ಬೇಡ ಇದೆಲ್ಲಾ ನನ್ನ ಹೊಡ್ಕೊಳ್ಲೋದಿಕ್ಕೆ ಹೆಜ್ಜೆ ಹೆಜ್ಜೆಗೂ ಹೊನ್ನೇ ಸುರಿಯಲಿ ಗೆಜ್ಜೆ ಪೂಜೆಯ ಉರುಳಿಗೆ ಕೊರಳನೆಂದೂ ನೀಡೆನು ಅಂತ ಹಾಡು ಬೇರೆ ಬರ್ತಾ ಇದೆ ಬಾಯಿಗೆ.
ಇನ್ನೆಷ್ಟು ಕೊಬ್ಬು ಇದ್ರೆ ನನ್ನ ಆ ರೂಮಿಗೆ ಕರೀತಾ ಇದಾನೆ ಇವನು ನನಗೋಸ್ಕರ ಅಂತಾನೇ ಆ ರೂಂ ತುಂಬಾ ದಿನದಿಂದ ಕಾಯುತ್ತಿತ್ತಂತೆ. ಅದಕ್ಕೆ ಇಷ್ಟು ದಿನದಿಂದ ಬಾಗಿಲು ತೆಗೀದೆ ಹಾಕಿಬಿಟ್ಟಿದ್ದನಂತೆ
ಇರಲಿ ಇವನ ಹೆಣ ಉರುಳಿಸಿ ಇಲ್ಲಿಂದ ಹೋಗ್ತೀನಿ
ಹಾಗೂ ಹೀಗೂ ರೂಮಿಗೆ ಧೈರ್ಯ ಮಾಡಿ ಬಂದು ಬಿಟ್ಟಿದೀನಿ ಇವನ್ಯಾಕೆ ನನ್ನ ಹೀಗೆ ನೋಡ್ತಾ ಇದಾನೆ ? ಹೆಣ್ಣನ್ನ ಯಾವತ್ತೂ ನೋಡದ ಹಾಗೆ .
ಅಬ್ಬ ದಿವಾನ್ ಮೇಲೆ ಕೂತ್ಕೊಳೋದಿಕ್ಕೆ ಬೇರೆ ಹೇಳ್ತಿದ್ದಾನೆ, ವ್ಯಾನಿಟಿಬ್ಯಾಗ್ನಲ್ಲಿರೋ ಚಾಕು ಯಾವಾಗ ಮೇಲೆ ಬರುತ್ತೋ ಗೊತ್ತಿಲ್ಲ.
ಅಯ್ಯೋ ಕಿಟಕಿ ಬಾಗಿಲು ಹಾಕಿದ, ಟಿವಿ ಬೇರೆ ಆನ್ ಮಾಡ್ತಿದಾನೆ, ಡಿವಿಡಿ ಪ್ಲೇಯರ್ ಸಹಾ ಆನ್ ಮಾಡ್ತಾ ಇದಾನೆ, ಏನು ಪಾರ್ನ್ ಫಿಲಮ್ ಹಾಕ್ತಾನ ?
ಉಸಿರು ಬಿಗಿ ಹಿಡಿದು ಕುಳಿತಿದ್ದೆ, ಇನ್ನೇನು ನೋಡುವುದರಲ್ಲಿದೆಯೋ , ಡವಡವ ಎನ್ನುವ ಎದೆಯೊಂದಿಗೆ ಚಾಕುವನ್ನು ಭದ್ರವಾಗಿ ಹಿಡಿದು ಕುಳಿತಿದ್ದೆ,
ಟಿವಿಯಲ್ಲಿ ಬಟನ್ ಒತ್ತಿದ ತಕ್ಷಣ ಶುರುವಾಯಿತು
ಲೋಡಿಂಗ್
ನಂತರ
ಪ್ಲೇ

ನನ್ನ ಬಾಯಿ ಹಾಗೆ ತೆರೆದು ಕೊಂಡಿತು
ಅಲ್ಲಿ ಒಬ್ಬ ಹದಿನೆಂಟರ ಬಾಲೆಯ ಹುಟ್ಟಿದ ಹಬ್ಬದ ಸಡಗರ
ಆ ಹುಡುಗಿಯ ಪಕ್ಕದಲ್ಲಿ ಈ ಬಾಸ್
ಆ ಹುಡುಗಿಯನ್ನು ಎಲ್ಲೋ ನೋಡಿದಂತಿದೆಯಲ್ಲ.
ಅರೆ ಆ ಹುಡುಗಿ ಥೇಟ್ ನನ್ನ ಪಡಿಯಚ್ಚು, ನನ್ನ ಹಾಗೆ ಇದ್ದಾಳಲ್ಲ
ಹುಟ್ಟಿದ ಹಬ್ಬದ ಸಡಗರದ ಮದ್ಯದಲ್ಲಿಯೇ ಇದೇನಿದುಆ ಬಾಲೆಯ ಲಂಗಕ್ಕೆ ಕ್ಯಾಂಡೆಲ್ ಬಿದ್ದು ಅರೆ ಒಂದರೆಕ್ಷಣದಲ್ಲಿ ಮೈಗೆಲ್ಲಾ ಬೆಂಕಿಹಚ್ಚಿಕೊಂಡಿತು.
ಅಷ್ಟೆ ಅದಾದ ನಂತರ ದೃಶ್ಯಗಳು ಇರಲಿಲ್ಲ
ಪ್ರಶ್ನಾರ್ಥಕವಾಗಿ ಬಾಸ್‍ನ ಮುಖ ನೋಡಿದೆ
ಕಣ್ಣುಗಳ್ಲಲಿ ನೀರು
"ಅವಳೇ ನನ್ನ ಮಗಳು ಆರು ವರ್ಷದ ಹಿಂದೆ ಬೆಂಕಿಗೆ ಸಿಲುಕಿ ಸುಟ್ಟು ಹೋದವಳು
ನಾನು ದಂಗಾದೆ
ಆತ ಹೇಳುತ್ತಾ ಹೋದರು
"ಜೀವನದಲ್ಲಿ ಗುರಿ, ಮೇಲೆ ಬರಬೇಕೆಂಬ ಹಟ, ಹಣದ ಹುಚ್ಚು ಇವುಗಳಿಂದ ನನ್ನ ಹಾಗು ನನ್ನ ಹೆಂಡತಿಯ ನಡುವೆ ಜಗಳ ಶುರುವಾಯಿತು, ನನ್ನ ಸಾಧನೆಗೆ ಅವಳು ಸಾಥ್ ನೀಡುತ್ತಾಳೆಂದು ಭಾವಿಸಿದ್ದೆ, ಆದರೆ ಅವಳು ಮುಳ್ಳ್ಳಾಗತೊಡಗಿದಳು, ನನ್ನಿಂದ ಬಯಸಿದ ಪ್ರೀತಿ ಸಿಗದ ಅವಳು ಬೇರೆ ಕಡೆ ಹುಡುಕತೊಡಗಿದಳು, ಅದರಿಂದ ಕೊನೆಗೆ ನನ್ನಿಂದ ಬೇರೆಯೂ ಆದಳು . ಜೊತೆಗೆ ನನ್ನಮಗಳೂ ನನಗೆ ಅವಳ ಮೇಲೆ ಅಪಾರ ಪ್ರೀತಿ, ಅವಳಿಗೂ ಅಷ್ಟೇ ನಾನೆಂದರೆ ಪ್ರಾಣ,
ಇಬ್ಬರೂ ಎಲ್ಲಿ ಹೋದರೋ ತಿಳಿಯಲಿಲ್ಲ. ನಾನು ನನ್ನ ಗುರಿಯ ಸಾಧನೆಯಲ್ಲಿ, ಹಸಿವು, ಪ್ರೇಮ, ಪ್ರೀತಿ, ಕಾಮ ಇವೆಲ್ಲವನ್ನೂ ಮೀರಿ ಬೆಳೆದೆ
ಸುಮಾರು ಹನ್ನೆರೆಡು ವರ್ಷಗಳಾದ ಮೇಲೆ ನನ್ನ ಮಗಳು ನನಗೆ ಸಿಕ್ಕಳು, ಆದರೆ ನನ್ನ ಹೆಂಡತಿ ಸಿಗಲಿಲ್ಲ, ಅವಳಾಗಲೇ ಬೇರೊಬ್ಬನ ಮಡದಿಯಾಗಿ ಹಾಗು ಮತ್ತೆರೆಡು ಮಕ್ಕಳ ತಾಯಾಗಿ ಹಾಯಾಗಿದ್ದಳು, ಅವಳ ಹೊಸ ಗಂಡನನ್ನು ಮೆಚ್ಚಿಸಲು ಅವಳ ಕುಡಿಯನ್ನು ಹಾಸ್ಟೆಲ್‍ನಲಿ ಬೆಳೆಸಿದ್ದಳು
ಕೊನೆಗೂ ನನ್ನ ಮಗಳು ನನ್ನನ್ನ ಹುಡುಕಿಕೊಂಡು ಬಂದಳು. ನನ್ನ ಮಗಳ ಜೊತೆ ಆರು ದಿನ ಕೇವಲ ಆರೇ ದಿನ ಖುಷಿಯಾಗಿದ್ದೆ
ಇದುವರೆಗೂ ಏನೇನು ಕಳೆದುಕೊಂಡಿದ್ದೆ ಎನ್ನುವುದು ಅರ್ಥವಾಗಿ ಅದನ್ನು ಮತ್ತೆ ಪಡೆಯುವದರ ಒಳಗಾಗಿ ನನ್ನ ಮಗಳ ಜನ್ಮದಿನಾಂಕ ಬಂತು , ಎಂದೂ ಇಲ್ಲದಷ್ಟು ಆದ್ಧೂರಿಯಾಗಿ ಸಮಾರಂಭ ಮಾಡಿದೆ
ನನ್ನ ಮಗಳ ಜನ್ಮ ದಿನವೇ ಅವಳ ಮರಣದಿನವಾಗುತ್ತದೆ ಎಂದು ತಿಳಿದಿದ್ದರೆ ಖಂಡಿತಾ ಅದನ್ನು ಸೆಲೆಬ್ರೇಟ್ ಮಾಡ್ತಿರಲಿಲ್ಲ.
ಅವಳ ಸಾವಿಗೆ ನಾನೆ ಕಾರಣ ಅಂತ ಅನ್ನಿಸಿದಾಗಲೆಲ್ಲಾ ಯಾರೊಂದಿಗೂ ಮಾತಾಗಲಿ ಕತೆಯಾಗಲಿ ಬೇಡ ಅನ್ನಿಸುತ್ತದೆ
ಈಗ ಯಾರಿಗಾಗಿ ಈ ಆಸ್ತಿ , ಹಣ
ಹೀಗೆ ಎಲ್ಲಾ ಕಳೆದುಕೊಂಡಿದ್ದ ನಾನು
ಎರೆಡು ತಿಂಗಳ ಹಿಂದೆ ಕೆಲಸಕ್ಕಾಗಿ ಹುಡುಕುತ್ತಿದ್ದ ನಿನ್ನನ್ನು ನೋಡಿದೆ, ನೀನು ಅವತ್ತು ನನ್ನ ಸ್ನೇಹಿತನೊಬ್ಬನ ಕಂಪೆನಿಯಲ್ಲಿ ಅಳುತ್ತಾ ಹೋಗುತ್ತಿದ್ದೆ, ನಿನ್ನನ್ನು ನೋಡಿದ ಕೂಡಲೆ ದಂಗಾದೆ ನಾನು ಏಕೆಂದರೆ ನೀನು ನನ್ನ ಮಗಳ ಪಡಿಯಚ್ಚು,
ಹಾಗಾಗಿಯೇ ನಿನ್ನ ಕರೆಸಿ ಕೆಲಸಕ್ಕೆ ಕರೆದದ್ದು
ಇವತ್ತು ಅವಳ ಹುಟ್ತಿದ ಹಬ್ಬ , ನನ್ನ ಮಗಳು ನನ್ನಿಂದ ದೂರವಾದ ದಿನ, ಇವತ್ತು ನಿನ್ನ ಹತ್ತಿರ ಒಂದು ಬೇಡಿಕೆ
ನನ್ನ ಮಗಳನ್ನು ನಿನ್ನಲ್ಲಿ ಕಾಣಲು ಅನುಮತಿ ನೀಡುತ್ತೀಯಾ"

ಆತನ ಮಾತು ಕೇಳುತ್ತಿದ್ದಂತೆ ಇಲ್ಲ ಸಲ್ಲದ್ದನ್ನು ಊಹಿಸಿಕೊಂಡ ನನ್ನ ಮೇಲೆ ಜಿಗುಪ್ಸೆ ಹುಟ್ಟಿತು, ಪ್ರಪಂಚದಲ್ಲಿ ಗಂಡಸರೆಂದರೆ ಎಲ್ಲರೂ ಮೋಸಗಾರರೇ ಎಂಬ ನನ್ನ ಅನುಭವವೇ ಇದಕ್ಕೆ ಕಾರಣವಾಗಿರಬಹುದು
ಅಪ್ಪ ಎಂಬ ವ್ಯಕ್ತಿ ಅಮ್ಮನಿಗೆ ನನ್ನ ಕೊಟ್ಟು ಕೈಕೊಟ್ಟ ಹಾಗಾಗಿ ಅಪ್ಪ ಎನ್ನುವ ಪದವೇ ನನಗೆ ಅಸಹ್ಯವಾಗಿತ್ತು, ಅಲ್ಲಿಂದ ಗಂಡಸರನ್ನು ದ್ವೇಷಿಸಿಕೊಂಡೇ ಬೆಳೆದೆ.
ಆದರೆ ಮಗಳ ಮೇಲೆ ಅಪಾರ ಪ್ರೀತಿ ಇಟ್ಟಿದ್ದ ಈ ವ್ಯಕ್ತಿ ಆ ಭಾವನೆಯನ್ನು ದೂರ ಮಾಡಿದ್ದ.
ಏನೂ ಹೇಳಲೂ ತೋಚಲಿಲ್ಲ
ಅಪ್ಪಾ ಎಂದು ಅಪ್ಪುವುದು, ಕಾಲಿಗೆ ಬೀಳುವುದು ಎಲ್ಲವೂ ಸಿನಿಮೀಯಾವಾಗುವುದು ಎನ್ನಿಸಿತು.
"ಸಾರ್ ನೀವು ನನಗೆಂದು ಬಾಸೇ, ಆದರೆ ನಾನು ನಿಮಗೆ ಮಗಳಂತೆ ಕಂಡು ನಿಮ್ಮ ಮನಸಿಗೆ ಕೊಂಚ ನೆಮ್ಮದಿಯಾಗುವುದಾದರೇ ನನ್ನ್ನ ಅಭ್ಯಂತರವೇನಿಲ್ಲ. ಆದರೂ ನಾನು ನಿಮ್ಮನ್ನ ಅಪ್ಪ ಎಂದು ಒಪ್ಪಲು ಸಾಧ್ಯವಿಲ್ಲ , ಏಕೆಂದರೆ ನಾನು ಅಂದುಕೊಂಡ ಅಪ್ಪ ಎನ್ನುವ ಪದಕ್ಕೂ ನಿಮ್ಮ ವ್ಯಕ್ತಿತ್ವಕ್ಕೂ ಬಹಳ ದೂರ, ನನ್ನ ಹೃದಯದಲ್ಲಿ ನಿಮಗಾಗಿ ವಾತ್ಸಲ್ಯ ಗೌರವ ಖಂಡಿತಾ ಇರುತ್ತದೆ ಆದರೆ ಅಪ್ಪನಿಗಾಗಿ ಅಲ್ಲ ನನ್ನ ಭಾವನೆಯನ್ನು ಬದಲಿಸಿದ ನಿಮ್ಮ ಮೇರು ವ್ಯಕ್ತಿತ್ವಕ್ಕಾಗಿ"
ಇನ್ನೇನು ಹೇಳಲು ಮನಸ್ಸು ಬರಲಿಲ್ಲ.
ಆತ ನೋಡುತ್ತಲೇ ನಿಂತರು
ಸುಮ್ಮನೆ ಬಾಗಿಲು ಹಾಕಿಕೊಂಡು ಹೊರಗಡೆ ಬಂದೆ

Thursday, January 8, 2009

ಆಸರೆ

"ಮದುವೆ? ಮತ್ತೆ ನಾನು? ಗಾಡ್ ಸೇವ್ ಮಿ "
"ಯಾಕಮ್ಮ ಹಾಗೆ ಮಾತಾಡ್ತೀಯಾ"
"ಆಂಟಿ ನಂಗೆ ಮದುವೆ ಈ ಬಸಿರು , ಬಾಣಂತನ , ಗಂಡನ ಚಾಕರಿ ಇವೆಲ್ಲಾ ಬೇಡ . ಮೊದಲಿಗೆ ನಿಮ್ಮ ಹೆಣ್ಣು ಮದುವೆಯಾಗಬೇಕು ಅನ್ನೋ ಸಂಪ್ರದಾಯಾನೆ ಹಿಡಿಸಿಲ್ಲ."
"ನೋಡು ದಿವ್ಯ ನಿನ್ನ ಕಾಲ ಮೇಲೆ ನಿಂತ್ಕೊಂಡ ಮೇಲಾದಾರೂ ಮದುವೆಯಾಗೊ ಮನಸು ಬರುತ್ತೆ ಅನ್ಕೊಂಡ್ರೆ ಏನಮ್ಮ ಹೀಗೆ ಮಾತಾಡ್ತೀತಿದೀಯಾ? ನಿನ್ನನ್ನ ನಿಮ್ಮ ಅಮ್ಮ ಸಾಯುವಾಗ ಜೋಪಾನ ಮಾಡು ಅಂತ ಹೇಳಿ ಹೋದಳು ನಾನು ಇನ್ನೆಷ್ಟು ದಿನಾ ಬದುಕಿರ್ತೀನೋ"
"ಆಂಟಿ ಅಮ್ಮ ಸತ್ತಿದ್ದು ಹೇಗೆ ಅಂತ ನಂಗೆ ಗೊತ್ತು. ಅಪ್ಪನ ಚಾಕರಿ ಮಾಡಿ, ಮಾಡಿ ಅವನ ಬೈಗುಳಕ್ಕೆ, ಏಟಿಗೆ ಗುರಿಯಾಗಿ ನರಳಿ ನರಳಿ ಸತ್ತಳಲ್ಲಾ ಅದು ನಿಮಗೂ ಗೊತ್ತು. ಅಮ್ಮ ಸತ್ತ ಮೇಲೆ ಹೆತ್ತಪ್ಪ್ಪ ನನ್ನನ್ನು ಮಗಳೇ ಅಂತ ಒಂದು ಬಾರಿ ಸಹಾ ಪ್ರೀತಿಸಲಿಲ್ಲ. ಅವನಿಗೆ ಅವನ ತೀಟೆ ಮುಖ್ಯವಾಯ್ತು. ಬೇರೊಬ್ಬಳನ್ನು ಮದುವೆಯಾದ. ಅಮ್ಮ ಮದುವೆಯಾಗಿ ಯಾವ ಸುಖ ಪಡೆದಳು?ಇನ್ನು ನಿಮ್ಮ ಜೀವನ ತರ್ತಿದ್ದ ಸಂಬಳಾನೆಲ್ಲಾ ಮೇಲೆ ಸುರಿಯುತ್ತಿದ್ದರೂ ಸಮಾಧಾನವಾಗದ ನಿಮ್ಮ ಗಂಡ ಕೊನೆಗೆ ಇನ್ನಷ್ಟಿ ದುಡ್ಡು ಬೇಕು ಅಂತ ನಿಮ್ಮನ್ನ ನೀವಿರೋ ಈ ನರಕ ಕೂಪಕ್ಕೆ ತಳ್ಳಿದನಲ್ಲಾ. ಸಾಲದು ಅಂತ ಅಮ್ಮ ಸತ್ತಾಗ ಇನ್ನೂ ಹದಿನಾಲ್ಕರ ಹರೆಯದ ಹುಡುಗಿ ನಾನು ನನ್ನನ್ನು ಮನೆಗೆ ಕರೆದುಕೊಂಡು ಬಂದಾಗ ನನ್ನ ಮೇಲೆ ಕಣ್ಣು ಹಾಕಿದನಲ್ಲ. ನೀವ್ಯಾವ ಸಂತೋಷ ಅನುಭವಿಸಿದೀರಾ ಹೇಳಿ ಆಂಟಿ?"
ಸರೋಜಾಗೆ ಹಿಂದಿನ ವಿಷಯಗಳನ್ನು ಕೇಳಿಸಿಕೊಂಡು ಅಳುವೇ ಬರತೊಡಗಿತು.
"ನಾನು ಇಲ್ಲಿಗೆ ಬಂದಿದ್ದು ಮದುವೆಯ ವಿಷಯಕ್ಕಾಗಲಿ ಅಥವ ಹಿಂದಿನದೆಲ್ಲಾ ಕೆದುಕಲಾಗಲಿ ಅಲ್ಲ . ನನ್ನ ಓದಿಗಾಗಿ ನೀವು ಮಾಡಿದ ತ್ಯಾಗ ಹೆತ್ತಮ್ಮನೂ ಮಾಡಲಾಗದಂತಹದು. ನನಗೆ ಈಗ ಒಳ್ಲೇ ಸಂಬಳ ಬರುವ ಕೆಲಸ ಸಿಕ್ಕಿದೆ. ಇನ್ನೂ ನೀವು ಈ ನರಕದಲ್ಲಿ ಇರಬೇಡಿ . ನನ್ನ ಜೊತೆ ಬೆಂಗಳೂರಿಗೆ ಬಂದು ಬಿಡಿ. ಹಿಂದಿನ ವಿಷಯಗಳೆಲ್ಲಾ ರಹಸ್ಯವಾಗೆ ಇರಲಿ. ಇನ್ನು ನಾನೆ ನಿಮ್ಮ ಮಗಳು, ನೀವೆ ನನ್ನ ತಾಯಿ"
" ನೋಡು ದಿವ್ಯ . ನಾನು ಈಗಲೋ ಆಗಲೋ ಉರುಳುವ ಮರ. ರೋಗಗಳು ನನ್ನನ್ನ ತಿಂದು ಹಾಕಿವೆ. ಇನ್ನು ಬದುಕಿದರೂ ಸತ್ತರೂ ಒಂದೇ . ನನಗೆ ಇಲ್ಲಿಂದ ಬಂದು ನಿನ್ನ ಜೀವನಾನ ಹಾಳು ಮಾಡಲು ಇಷ್ಟ ಇಲ್ಲ "ಸಾಯುವುದಕ್ಕೆ ಮುಂಚೆ ನಿನ್ನನ್ನ ಯಾರ ಕೈಗಾದರೂ ಇಟ್ಟು ಸಾಯುತ್ತೇನೆ . ನಾನು ಸತ್ತ ಮೇಲೆ ನಿನಗೆ ಯಾರು ಗತಿ ? ಸಮಾಜ ಒಳ್ಳೆಯದಲ್ಲ ಒಂಟಿ ಹೆಣ್ಣು ಬದುಕುವುದು ತುಂಬಾ ಕಷ್ಟ. ತಿಳಿಯಮ್ಮ"
"ಒಂಟಿ ಹೆಣ್ಣು, ಅಬಲೆ , ಇವೆಲ್ಲಾ ನಿಮ್ಮಂಥ ಹೆಂಗಸರಿಂದ ಹುಟ್ಟಿಕೊಂಡ ಪದಗಳು. ಈಗ ಬೆಂಗಳೂರಲ್ಲಿ ಕೈನಲ್ಲಿ ಕಾಸು , ಎದುರಲ್ಲಿ ಗುರಿ ಇದ್ದರೆ ಬದಕುವುದು ತುಂಬಾ ಸುಲಭ. "
ದಿವ್ಯ ಕೊಂಚ ಹಟಮಾರಿ, ಗಂಡಸರೆಂದರೆ ಕೊಂದು ಬಿಡುವಷ್ಟು ಕೋಪ .ಅದಕ್ಕೆ ಕಾರಣ ಅವಳ ಅಪ್ಪ, ಹಾಗು ತನ್ನ ಆಂಟಿಯನ್ನು ವೈಶ್ಯಾವಾಟಿಕೆಗೆ ದೂಡಿದ ಆಂಟಿಯ ಗಂಡ . ಇಬ್ಬರೂ ಈಗ ಬದುಕಿಲ್ಲವಾದರೂ ಅವಳಿಗೆ ಪ್ರತಿ ಗಂಡಸರಲ್ಲೂ ಅವರ ಬಿಂಬವೇ ಕಾಣಿಸಿದಂತಾಗಿ ಮೃಗದಂತಾಗಿದ್ದಳು. ಸಮಯ ಸಿಕ್ಕಿದರೆ ಪ್ರಪಂಚದ ಗಂಡಸರನ್ನೆಲ್ಲಾ ಸುಟ್ಟುಬಿಡಲೂ ಅವಳು ತಯಾರಿದ್ದಳು.
ಅವಳ ಓದಿಗಾಗಿ ಸರೋಜಾ ಪಟ್ಟ ಕಷ್ಟ ಅಷ್ಟಿಷ್ಟಿಲ್ಲ. ದಿವ್ಯಾಳ ಹಾಕಿದ ಗಂಡನನ್ನು ತೊರೆದು ಬೇರೆ ಊರಿಗೆ ಬಂದಿದ್ದಳು.ಮನೆ ಚಾಕರಿಗಾಗಿ ಹೋದಾಗ ಅವಳನ್ನು ಅವಳ ಊರಲ್ಲಿ ಭೇಟಿ ಮಾಡಿದ್ದ ಗಂಡಸರು ಮತ್ತೆ ಅವಳನ್ನು ಅದೇ ಕೂಪಕ್ಕೆ ದೂಡಿದರು. ಸರೋಜಾ ದಿವ್ಯಾಳನ್ನು ಹಾಸ್ಟೆಲ್‍ನಲ್ಲಿ ಇಟ್ಟೇ ಬೆಳೆಸತೊಡಗಿದಳು.
ಚುರುಕು ದಿವ್ಯಾ ಚೆನ್ನಾಗಿ ಓದಿದಳು ಕೆಲಸವೂ ಸಿಕ್ಕಿತು.
ದಿವ್ಯಾಳ ಯಾವುದೇ ಅನುನಯಕ್ಕೂ ಸರೋಜಾ ಒಪ್ಪಲಿಲ್ಲ. ಒಬ್ಬ ಬೆಲೆವೆಣ್ಣಾಗಿ ತಾನು ದಿವ್ಯಾಳ ಜೊತೆ ಇರುವುದರ ಪರಿಣಾಮ ಅವಳಿಗೆ ತಿಳಿದಿತ್ತು . ಹಾಗಾಗಿ ಅವಳು ಯಾವ ಕಾರಣಕ್ಕೂ ದಿವ್ಯಾಳ ಜೊತೆ ಬರಲು ಒಪ್ಪಲಿಲ್ಲ.
ದಿವ್ಯಾ ಮದುವೆಯಾಗಲು ಒಪ್ಪಲೇ ಇಲ್ಲ.
ಅದೆಲ್ಲಾ ಆಗಿ ಐದು ವರ್ಷಗಳೇ ಕಳೆದಿವೆ. ಸರೋಜಾ ಯಾವುದೋ ರೋಗಕ್ಕೆ ಬಲಿಯಾಗಿ ಕಾಲವಾದಳು
ದಿವ್ಯಾ ತನ್ನ nouqariyಲ್ಲಿ ಬಹಳವೇ ಮುಂದೆ ಬರತೊಡಗಿದಳು.
ಅವಳ ಸಿಡುಕು ಮಾತಿಗೆ, ಅವಳ ಚಾಟಿ ಏಟಿನ ವ್ಯಂಗ್ಯಕ್ಕೆ ಸಿಲುಕಲು ಯಾವ ಗಂಡಸರೂ ಇಷ್ಟ ಪಡಲಿಲ್ಲ. ಹಾಗಾಗಿ ಅವಳು ಸೇಫ್ ಆಗಿದ್ದಳು.
ಒಂಟಿ ಹೆಣ್ಣು ಬೆಂಗಳೂರಲ್ಲಿ ಬದುಕುವುದು ಕಷ್ಟ ಎಂಬ ಮಾತಿಗೆ ಅಪವಾದವಾಗಿದ್ದಳು.
ಆದರೂ ಆಗಾಗ ಒಂಟಿ ತನ ಎದ್ದು ಕಾಡುತ್ತಿತ್ತು
ರಾತ್ರಿ ನೀರವತೆಯಲ್ಲಿ ಬೆಚ್ಚಿದ್ದಾಗ ,ಏನೋ ನೆನಸಿಕೊಂಡು ಅತ್ತಾಗ, ಸಮಾಧಾನಿಸಲು ಯಾರಾದರೂ ಬೇಕೆನಿಸುತ್ತಿತ್ತು. ಚಿತ್ರಗಳಲ್ಲಿ ಹೀರೋನ ಜೊತೆ ಕುಣಿವ ಹೀರೋಯಿನ್‌ಗಳನ್ನು, ತಮ್ಮ ಗಂಡ ತಮಡನೆ ಹೀಗೆ ಮಾತಾಡಿದ ಎಂಬ ಸಹೋದ್ಯೋಗಿಗಳ ಮಾತನ್ನು ಕೇಳಿದಾಗ ತನಗೂ ಒಬ್ಬ ಗಂಡನಿರಬೇಕೆಂಬ ಭಾವನೆ ಬರುತ್ತಿತ್ತಾದರೂ ಆ ಗಂಡ ಗಂಡಸೆಂಬ ನೆನೆಪು ಬರುತ್ತಿದ್ದಂತೆ ಮುಷ್ಟಿ ಬಿಗಿಯಾಗುತಿದ್ದವು, ಹುಬ್ಬು ಗಂಟಾಗುತ್ತಿತ್ತು, ಹಲ್ಲುಗಳು ಕದನವಾಡಲು ಆರಂಭಿಸುತ್ತಿದ್ದವು.
ಅವಳ ಜೊತೆಗಾರ್ತಿಯರೆಲ್ಲಾ ಮದುವೆ ಎಂಬ ಬಂಧನಕ್ಕೆ ಬೀಳುತ್ತಿದ್ದಂತೆ ಅವಳ ಅಕ್ಕ ಪಕ್ಕದ ಸ್ಥಾನಗಳು ಖಾಲಿಯಾಗತೊಡಗಿದವು.
ಗೆಳತಿಯರ ಸಲಹೆಗಳ ಮಹಾಪೂರವೇ ಬಂದರೂ ತನ್ನ ನಿರ್ಧಾರದಿಂದ ಹಿಂದೆ ಸರಿಯದಾದಳು ದಿವ್ಯಾ.
ವರ್ಷಗಳುರುಳಿದವು. ಮುಂದಿನ ದಿನಗಳು ಬಲು ನೀರಸವಾಗಿದ್ದವು, ಯಾರಿಗಾಗಿ ಈ ದುಡಿತ ಆಸ್ತಿ . ಮನೆಗೆ ಬಂದರೆ ಗೋಡೆ, ಕಂಪ್ಯೂಟರ್, ಟಿವಿಗಳು ಅವಳ ಸ್ನೇಹಿತರಾಗುತ್ತಿದ್ದವು. ಅಕ್ಕಪಕ್ಕದ ಮಕ್ಕಳ ಜೊತೆ ಆಟವಾಡಿದರೂ ಅದೇನೋ ಒಂಟಿತನ ಕಾಡುತ್ತಲೇ ಇತ್ತು.
ಅಂದೊಮ್ಮೆ ಅವಳ್ ಆಶ್ರಮದ ಗೆಳತಿ ಪ್ರೀತಿ ಸಿಕ್ಕಳು. ಪ್ರೀತಿ ತುಂಬಾ ಪ್ರೀತಿಯ ಗೆಳತಿ . ಅವಳೂ ಒಂದು ಬಗೆಯಲ್ಲಿ ಅನಾಥಳೇ ತಂದೆ ಇದ್ದೂ ತಂದೆ ಬೇರೆ ಮದುವೆಯಾಗಿದ್ದರಿಂದ ಪ್ರೀತಿಯನ್ನು ಆಶ್ರಮಕ್ಕೆ ಸೇರಿಸಿದ್ದ. ಪಿಯುಸಿ ಓದುತ್ತಿದ್ದಾಗ ಅವಳ ತಂದೆ ಹೃದಯಾಘಾತದಿಂದ ಸತ್ತಾಗ ಪ್ರೀತಿಗೆ ಯಾವ ದಿಕ್ಕೂ ಇರಲ್ಲಿಲ್ಲ . ಹಣ ಕೊಡಲಿಲ್ಲವಾದ್ದ್ದರಿಂದ ಪ್ರೀತಿಯನ್ನು ಆಶ್ರಮದಿಂದ ಹೊರಹಾಕಬೇಕೆನ್ನುವಾಗ ಅವಳ ಅಂದಕ್ಕೆ ಮಾರು ಹೋಗಿದ್ದ ವಿಕಾಸ್ ಎಂಬ ಯುವಕನೊಬ್ಬ ಅವಳನ್ನು ಮದುವೆಯಾಗಿದ್ದ.
ಅದಾದ ಮೇಲೆ ಅವಳ ಯಾವ ವಿಚಾರವೂ ತಿಳಿದಿರಲಿಲ್ಲ.
ಪ್ರೀತಿಯ ಜೀವನ ಸುಖಕರವಾಗಿತ್ತು. ಅವಳು ಅನಾಥಾಶ್ರಮವೊಂದನ್ನು ನಡೆಸುತ್ತಿದ್ದಳು ವಿಕಾಸ್ ಒತ್ತಾಸೆಯಾಗಿಯೇ ನಿಂತಿದ್ದ
ಎಲ್ಲಾ ರೀತಿಯ ಮಾತುಕತೆಗಳಾದ ಬಳಿಕ "ದಿವ್ಯ ನೀನು ಅಂದುಕೊಂಡಿರುವ ಹಾಗೆ ಎಲ್ಲಾ ಗಂಡಸರೂ ಇಲ್ಲ. ಹೆಂಗಸರಲ್ಲಿ ಕೆಟ್ಟವರಿರುವ ಹಾಗೆ ಅವರಲ್ಲೂ ಒಳ್ಳೆಯ ಕೆಟ್ಟ ಎಂಬ ಮನಸ್ಸು ಇರುತ್ತದೆ. ನೀನು ಇಲ್ಲಿಯವರೆಗೆ ಎಷ್ಟು ಮಂದಿ ಗಂಡ್ಸರನ್ನು ನೋಡಿಲ್ಲ ಅವರೆಲ್ಲಾ ಕೆಟ್ಟವರೇ ? ಒಂಟಿ ಬದುಕು ಬಲು ಹೀನಾಯ, ಯಾರಿಗಾಗಿ ಇಷ್ಟು ಹಣ ಸಂಪಾದಿಸುತ್ತೀಯಾ? ನಿನಗೂ ನಿನ್ನದೇ ಆದ ಮನೆ, ಸಂಸಾರ ಗಂಡಾ ಮಗು ಬೇಡವೇ? ವಿಕಾಸ್ ನೋಡು ನನ್ನ ಮಾತಿಗೆ ಎದುರಾಡದೆ ನನ್ನ anaathaashram ಕಟ್ಟಬೇಕೆಂಬ ಕನಸಿಗೆ ನೀರೆರೆದು ಪೋಷಿಸುತ್ತಿದ್ದಾರೆ. ಅವತ್ತು ನನ್ನ ಹಾಸ್ಟೆಲ್‌ನಿಂದ ಹಣವಿಲ್ಲವೆಂದು ಹೊರಗೆ ಕಳಿಸಿದಾಗಲೆ ನಿರ್ಧರಿಸಿದ್ದೆ ನಾನು ಒಂದು ಅನಾಥಾಶ್ರಮ್ ಕಟ್ಟಿ ಬಡಮಕ್ಕಳಿಗೆ ಅನಾಥರಿಗೆ ಹಣ ತೆಗೆದುಕೊಳ್ಳದೆ ವಿದ್ಯೆ, ವಸತಿ, ಊಟ ಕೊಡಬೇಕೆಂದು . ಅದು ನನ್ನೂಬ್ಬಳಿಂದ ಆಗ್ತಿರಲಿಲ್ಲ. ಅದಕ್ಕೆ ಕಾರಣಾನೆ ವಿಕಾಸ್ .ನೀನು ನಿಮ್ಮ ಆಫೀಸಲ್ಲಿ ಇರೋರನ್ನು ಕಣ್ಣು ಬಿಟ್ಟು ನೋಡು ನಿನಗೆ ತಕ್ಕ ಗಂಡು ಸಿಕ್ಕೇ ಸಿಗುತ್ತಾನೆ"
ಪ್ರೀತಿ ಅಡ್ರೆಸ್ ಕೊಟ್ಟು ಹೊರಟು ಹೋದಳು.
ದಿವ್ಯಾ ಆ ಬಗ್ಗೆಯೇ ಯೋಚಿಸಿ ಕೊನೆಗೊಂದು ನಿರ್ಧಾರಕ್ಕೆ ಬಂದಳು . ತನ್ನ ಆಪೀಸಲ್ಲೇ ಇದ್ದ ಆಕಾಶ್ ಎಂಬ ಸಹೋದ್ಯೋಗಿ ಮೆಲು ಮಾತಿದ ಹುಡುಗ ದಿವ್ಯಾಳನ್ನು ಮದುವೆಯಾಗುವ ಕನಸು ಹೊತ್ತೆ ಜೀವಿಸುತ್ತಿದ್ದ . ಅವಳಿಂದ ಒಮ್ಮೆ ಕೆನ್ನೆಗೂ ಹೊಡೆಸಿಕೊಂಡಿದ್ದ . ನಂತರವೂ ಅವಳನ್ನೇ ಮದುವೆಯಾಗುವುದಾಗಿ ಕನಸು ಹೊತ್ತಿದ್ದ
ಆಕಾಶ ತನಗೆ ತಕ್ಕ ಜೋಡಿಯಾಗಬಲ್ಲ ಎಂದು ಅವಳಿಗೆ ಅನ್ನಿಸಿತು .
ತನ್ನ ಭಾವನೆಯನ್ನು ಅರುಹಿದಳು
ಆತನೋ ಖುಷಿಯಿಂದ ಕುಣಿದಾಡಿದ.
ಅವನ ಮನೆಯವರೂ ಒಪ್ಪಿದರು. ಮದುವೆಯ ಆಹ್ವಾನ ಪತ್ರಿಕೆ ಸಿದ್ದವಾಯಿತು. ತನಗೆ ಮದುವೆಯಾಗುವ ಪ್ರೇರಣೆ ನೀಡಿದ ಪ್ರೀತಿಗೆ ಮೊದಲ ಆಹ್ವಾನ ಪತ್ರಿಕೆ ಎಂದು ಮೊದಲೇ ನಿರ್ಧರಿಸಿದ್ದಳು .
ಅಂತೆಯೇ ಆಕಾಶ್‌ನ ಜೊತೆ ಅನಾಥಾಶ್ರಮಕ್ಕೆ ಬಂದಳು.
ಪ್ರೀತಿಯ ಆಶ್ರಮವನ್ನೆಲ್ಲ್ಲಾ ಸುತ್ತಾಡುತ್ತಾ ಕಾಫೀ ಕುಡಿಯುತ್ತಾ ಬಂದು ನಿಂತವಳಿಗೆ ಊರುಗೋಲಿನ ಸಹಾಯದಿಂದ ಕಷ್ಟ ಪಟ್ಟು ನಡೆಯುತ್ತಿದ್ದ ಆ ಮಗು ಕಾಣಿಸಿತು
ಸುಮಾರು ಐದಾರು ವರ್ಷಗಳಿರಬಹುದೇನೋ .
ಮುದ್ದು ಮುದ್ದಾದ ಹೆಣ್ಣುಮಗು ಆದರೆ ಅದರ ಒಂದು ಕಾಲು ತಿರುಗಿಕೊಂಡಿತ್ತು.
"ಯಾರೆ ಈ ಮಗು ?"
ಪಾಪ ಕಣೆ ಮಗು ಹುಟ್ಟಿದ ತಕ್ಷಣ ತಾಯಿಯನ್ನು ಕಳೆದುಕೊಂಡಿತಂತೆ. ಆ ಮಗುವಿನ ಕಾಲು ಸರಿ ಇಲ್ಲ
ಯಾರೋ ಅವಳ ತಾಯಿಯ ಸ್ನೇಹಿತೆ ಅಂತೆ ತಂದು ಇಲ್ಲಿ ಬಿಟ್ಟರು
ತುಂಬಾ ಚುರುಕು
ಹೆಸರ್ನ ಭೂಮಿಕಾ ಅಂತ ಇಟ್ಟಿದೀವಿ. "
" ಹಲ್ಲೋ ಭೂಮಿಕಾ. " ಮುಂಚೆಯೇ ತಂದಿದ್ದ ಚಾಕ್ಲೇಟ್ ಕೊಟ್ಟಳು
ಮಗು ಥ್ಯಾಂಕ್ಸ್ ಹೇಳಿ ತೆಗೆದುಕೊಂಡಿತು
"ಹೌದು ಈ ಮಗು ಅಪ್ಪ ಎಲ್ಲಿ. ನೋಡಿದ್ಯಾ ಪ್ರೀತಿ ಇವಳ ಅಪ್ಪಾ ಇವಳನ್ನು ಬಿಟ್ಟು ಹೋಗಿದ್ದನಲ್ಲ. ನಾನು ನೋಡಿದ ಮೂರನೆಯ ಕೆಟ್ಟ ಗಂಡು" ದಿವ್ಯಾ ಪ್ರಶ್ನೆ ಎಸೆದಳು" ಏ ಮಗೂಗೆ ಅಪ್ಪ ಯಾರೂ ಅಂತ ಹೇಗೆ ಹೇಳೊಕಾಗುತ್ತೆ. ಅವಳ ಅಮ್ಮ ಒಬ್ಬ ಪ್ರಾಸ್ಟ್ಯೂಟ್ ಅಂದರೆ ವೇಶ್ಯೆ"
ದಿವ್ಯಾ ಪ್ರೀತಿಯ ಮಾತಿನಿಂದ ದಂಗಾದಳು.
ಅವರ್ಯಾರಿಗೂ ತನ್ನನ್ನ ಬೆಳೆಸಿದವಳೂ ಒಬ್ಬ ವೇಶ್ಯೆ ಎಂಬ ಸತ್ಯ ಹೇಳಿರಲಿಲ್ಲ. ಅದು ಅಂತಹ ಮಹತ್ವ್ದದ್ದೂ ಎಂದೊ ಅನ್ನಿಸಲಿಲ್ಲ. ಹಾಗಾಗಿ ಹೇಳಿರಲಿಲ್ಲ.
ಯಾವುದೋ ಅಕ್ಕರೆಯಿಂದ ಮಗುವನ್ನು ಮುದ್ದಿಸಿದಳು.
"ಪ್ರೀತಿ ಇದರ ತಾಯಿ ಹೆಸರೇನಾದರೂ ಗೊತ್ತಿದೆಯಾ ನಿಂಗೆ?"
"ನೋಡಿ ಹೇಳ್ತೀನಿ ಇರು"
ಪ್ರೀತಿ ರೆಕಾರ್ಡ್ಸ್ ತೆಗೆದು ನೋಡಿ ಹೆಸರು ಹೇಳಿದಳು
ಕಿವಿಗೆ ಬಿಡಿಬಿಡಿಯಾಗಿ ಕೇಳಿಸಿತು
"ಸ ರೋ ಜಾ" ಅಂತ
"ಏನಂದೆ ಸರೋಜಾನ ?"
"ಯಾವ ಊರು ಅಂತ ಕೊಟ್ಟಿದ್ದಾರೆ?"
ಪ್ರೀತಿ ಹೆಸರು ಹೇಳಿದಳು.ಅದು ಅವಳ ಆಂಟಿ ಸರೋಜಾ ಇದ್ದ ಊರು.
ಇದು ಹೇಗೆ ಸಾಧ್ಯ?
ಸರೋಜಾ ಸತ್ತು ಈಗ ಸರಿಯಗಿ ಐದು ವರ್ಷಗಳಾಗಿದ್ದವು .
ಅಂದರೆ ಮಗು ಹುಟ್ಟಿದ ವರ್ಷವೂ ಅದೇ ಆಗಿತ್ತು
ತನಗೆ ತಿಳಿಯದೆ ಇದು ಹೇಗಾಯ್ತು?
ನಂತರ ನೆನೆಪಾಯ್ತು ಎರೆಡು ವರ್ಷ ಯು. ಎಸ್ ಪ್ರಾಜೆಕ್ಟ್ ಮೇಲೆ ಹೋಗಿದ್ದಳು.
ಅಲ್ಲಿಂದ ಹಣವನ್ನೇನೋ ಕಳಿಸುತ್ತಿದ್ದಳು
ಆದರೆ ಸರೋಜಾ ಬಗ್ಗೆ ವಿಷಯ ತಿಳಿದಿರಲಿಲ್ಲ.
ತಾನು ಊರಿನಿಂದ ಬರುವ ದಿನವೆ ಸರೋಜಾ ಹಾಸಿಗೆಯ ಮೇಲೆ ಕಾಯಿಲೆ ಇಂದ ಮಲಗಿದ್ದಳು.
ಅವಳು ಏನೋ ಉಸುರುವ ಮೊದಲೇ ಉಸಿರು ಹೋಗಿತ್ತು.
ಯಾಕೋ ಎಲ್ಲಾ ಗೊಂದಲವಾಗಿತ್ತು.
ಆಕಾಶ್ ಕೇಳುತ್ತಿದ್ದ ಯಾವ ಪ್ರಶ್ನೆಗೂ ಉತ್ತರ ಹೇಳುವ ಸಾವಾಧಾನ ಅವಳಲ್ಲಿರಲಿಲ್ಲ
ಕೂಡಲೆ ಸರೋಜಾಳ ಊರಿಗೆ ಪ್ರಯಾಣ ನಡೆಸಿದಳು
ಇದ್ದ ಏಕೈ ಕ ಕೊಂಡಿ ನಂಜಮ್ಮ ಅವಳೇ ಮಗುವನ್ನು ಇಲ್ಲಿ ತಂದು ಬಿಟ್ಟಿದ್ದು.
ಆದರೆ ನಂಜಮ್ಮ ಸತ್ತು ಮೂರು ವರ್ಷಗಳಾಗಿದ್ದವು.
ನಂಜಮ್ಮನ ಮಗನೊಬ್ಬ ಅವಳಿಗೆ ಕೊಟ್ಟಮಾಹಿತಿಯ ಪ್ರಕಾರ ಸರೋಜಾ ಆ ವರ್ಷಗಳಲ್ಲಿ ದುರುಳರಿಬ್ಬರ ಅತ್ಯಾಚಾರಕ್ಕೆ ಬಲಿಯಾಗಿ ಗರ್ಭಿಣಿಯಾಗಿದ್ದಳು ಏನಾದರೂ ಮಾಡಿಕೊಳ್ಳುವುದಕ್ಕೊ ಸಮಯ ಜಾಸ್ತಿಯಾಗಿತ್ತು.
ಯು.ಎಸ್‌ನಲ್ಲಿದ್ದ ದಿವ್ಯಾಗೆ ಈ ವಿಷಯ ತಿಳಿಸುವುದಕ್ಕೆ ಸರೋಜಾ ಮನಸ್ಸು ಒಪ್ಪಲಿಲ್ಲವೇನೋ ಕೊನೆಗೊಮ್ಮೆ ಮಗು ಹುಟ್ಟಿತು . ನಂಜಮ್ಮನೇ ಸೂಲಗಿತ್ತಿಯಾಗಿದ್ದಳು
ಆದರೆ ಮುದ್ದು ಮುದ್ದ್ದಗಿದ್ದ ಮಗುವನ್ನುನೋಡಿ ಹೆಣ್ಣುಮಕ್ಕಳಿಲ್ಲದ ನಂಜಮ್ಮ ಮಗು ಹುಟ್ಟುತ್ತಲೇ ಬೇರೆಡೆಗೆ ಎತ್ತಿಕೊಂಡು ಬಂದು ಮನೆಯಲ್ಲಿ ಮಗುವನ್ನು ಬಿಟ್ಟು ಬಂದು ಮಗು ಸತ್ತಿದೆ ಎಂದು ಸುಳ್ಳು ಹೇಳಿದಳು.
ಆದರೆ ಮನೆಗೆ ಬಂದ ನಂತರ ಆ ಮಗುವಿನ ಕಾಲು ತಿರುಗಿದ್ದು ಕಂಡು ಅನಾಥಾಶ್ರಮವೊಂದಕ್ಕೆ ಬಿಟ್ಟು ಬಂದಳು

Monday, January 5, 2009

ಹೂ ತೋಟ

"ಅಬ್ಬಾ ಏನೋ ಇದು ಇಷ್ಟು ಚೆನ್ನಾಗಿದೆ ಗಾರ್ಡನ್" ರವಿ ಉದ್ಗರಿಸಿದ , ಕಣ್ಣನ್ನು ಅಲ್ಲಿಂದ ಕೀಳಲಾಗಲಿಲ್ಲ.
ಅದೊಂದು ಸುಂದರ ತೋಟ , ಎಂಥ ತೋಟವೆಂದರೆ ನೋಡಿದ ಕಣ್ಣು ಕಾಲಿಗೆ ಮುಂದೆ ಹೋಗದಂತೆ ಆದೇಶ ನೀಡುತ್ತಿತ್ತು.. ತೋಟದ ತುಂಬೆಲ್ಲಾ ಹೂವಿನ ಘಮಘಮ , ಚೆಲುವಾದ ಗುಲಾಬಿಯಿಂದ ಹಿಡಿದು ಎಲ್ಲಾ ರೀತಿಯ ಹೂಗಳು ಅರಳಿದ್ದವು.
"ಒಂದ್ಸಲ ತೋಟದಲ್ಲಿ ಅಡ್ಡಾಡಿ ಬರೋಣ ಬಾರೋ " ಸುರೇಶನ ಕೈ ಹಿಡಿದು ಜಗ್ಗಿದ
" ಬೇಡ ಕಣೋ. ಹಾಗೆಲ್ಲಾ ಬೇರೆಯವರ ಪರ್ಮೀಶನ್ ಇಲ್ಲದೆ ಹೋಗಬಾರದು" ಸುರೇಶ ಬುದ್ದಿವಾದ ಹೇಳಿದ
"ಸರಿ ಅವರ ಪರ್ಮೀಶನ್ ತಗೊಂಡೇ ಹೋಗೋಣ ಬಾ"
ರವಿ ತೋಟದಲ್ಲಿದ್ದ ಮನೆ ಬಾಗಿಲು ತಟ್ಟಿದ
ಒಂದು ಹೆಂಗಸು ಬಾಗಿಲು ತೆರೆದಳು ಹಿಂದೆಯೇ ಚೆಲುವಾದ ಈಗಷ್ಟೆ ಅರಳಿದ ಹೂವಿನ ತಾಜಾತನದ ಹುಡುಗಿಯೂಬ್ಬಳುರವಿ "ಅದೂ ತೋಟ ತುಂಬಾ ಚೆನ್ನಾಗಿದೆ . ಒಂದಷ್ಟು ಹೊತ್ತು ನೋಡಿ ಹೋಗೋಣಾ ಅಂತ""ಅಯ್ಯೋ ಅದಕ್ಕೇನಪ್ಪ ನೋಡಿ ."
ಸ್ವಲ್ಪ ಹೊತ್ತಿನಲ್ಲಿ ರವಿ ತನ್ನ ಮಾತಿನಿಂದ ಆಪ್ತನಾದ, ರವಿಯ ಕಣ್ಣು ಚೆಲುವಾದ ಹೂವಂಥ ಹುಡುಗಿಯ ಮೇಲೆ ಹರಿಯುತ್ತಿತ್ತು. ನೋಟಕ್ಕೆ ಹುಡುಗಿ ಕರಗಿ ನೆಲ ನೋಡುತ್ತಿದ್ದಳು
ರವಿ ಲವಲವಿಕೆಯ ಹುಡುಗ, ಸುರೇಶ ಸ್ನೇಹಿತ, ಇಬ್ಬರೂ ಒಂದೇ ಕಾಲೇಜಿನಲ್ಲಿ ಓದಿ ಬೇರೆ ಬೇರೆ ಕಡೆಗಳಲ್ಲಿ ಕೆಲಸ ಮಾಡುತಿದ್ದರು. ಪಿಕ್ನಿಕ್ಗೆಂದು ಬಂದಾಗ ತೋಟ ಕಂಡಿತ್ತು.
ಹಾಗೆ ತೋಟದ ಒಡತಿಯ ಬಗ್ಗೆಯೂ ಮಾಹಿತಿ ಸಿಕ್ಕಿತು
ತೋಟದ ಒಡತಿ ಸರೋಜಾ ಒಬ್ಬ ವಿಧವೆ. ಗಂಡ ಗತಿಸಿ ಮೂರ್ನಾಲ್ಕು ತಿಂಗಳಷ್ಟೆ ಉರುಳಿದ್ದವೇನೋ. ಪ್ರಾಯಕ್ಕೆ ಬಂದ ಮುದ್ದು ಮುದ್ದು ಮಗಳು ಕಮಲ ಜೊತೆಗೆ , ಇಬ್ಬರೇ ತೋಟದಲ್ಲೊಂದು ಮನೆ ಮಾಡಿಕೊಂಡು ವಾಸವಾಗಿದರು.ಆದರೂ ತುಂಬಾ ದಿನ ತೋಟದಲ್ಲಿ ವಾಸವಿರುವುದು ಅಪಾಯ ಎಂದು ಅನ್ನಿಸಿದ್ದರಿಂದ ಸರೋಜಾ ತೋಟವನ್ನು ಮಾರಿ ಅದರಿಂದ ಬಂದ ಹಣದಲ್ಲಿ ಬೇರೆ ಎಲ್ಲಾದರೂ ಜನರಿರುವ ಕಡೆ ಬದುಕುವ ಆಸೆ ಹೊಂದಿದ್ದಳು.
ಕೊಂಚ ಹೊತ್ತು ತೋಟ ಹಾಗು ಅದಕ್ಕಿಂತಲೂ ಸುಂದರಿ ಕಮಲಾಳ ಚೆಲುವನ್ನೆಲ್ಲಾ ಕಣ್ನಲ್ಲೇ ಹೀರಿಕೊಂಡು ರೂಮಿಗೆ ಬಂದ ರವಿ."ಸುರೇಶ ನಾನು ಇನ್ನೊಂದೆರೆಡು ದಿನ ಇಲ್ಲೇ ಇರೋಣ ಅಂದ್ಕೊಂಡೀದೀನಿ"
"ಯಾಕೋ? ರಜಾ ಬೇರೆ ಮುಗೀತಲ್ಲ" "ಇಲ್ಲ ಕಣೋ ತೋಟ ತುಂಬಾ ಚೆನ್ನಾಗಿದೆ , ನಾಳೇನೂ ಹೋಗೋಣ ಅನ್ನಿಸ್ತಿದೆ"
" ತೋಟ ಮಾತ್ರಾನಾ ಹುಡುಗೀನೂನಾ?" "ಛೆ ಛೇ ಅಂಥಾ ಚೀಪೇನೋ ನಾನು?"
ಮರುದಿನವೂ ರವಿ ಸುರೇಶನ ಜೊತೆ ಸರೋಜಾರ ಮನೆಗೆ ಬಂದ . " ಆಂಟಿ , ನಮ್ತಂದೆ ಹತ್ರ ಮಾತಾಡಿದ್ದೇನೆ , ತೋಟಾನ ನೀವು ಕೊಟ್ರೆ ನಾನೆ ಕೊಂಡ್ಕೊಳೋದು ಅಂತ ಅಂದ್ಕೊಂಡೀದೀನಿ"

ಸರೋಜಾಗೆ ಪರಮಾನಂದವಾಯಿತು"ಅಲ್ಲ ನಿಮಗ್ಯಾಕೆ ತೋಟ ಇದನ್ನ ನೋಡಿಕೊಳ್ಲೋಕೆ ಆಗತ್ತಾ"

" ಅಯ್ಯೋ ನಮ್ತಂದೆ ಜನಾನ ಇಡ್ತಾರೆ , ನಮ್ತಂದೆಗೂ ತೋಟ ಬೆಳೆಸುವುದರಲ್ಲಿ ಆಸಕ್ತಿ ಜಾಸ್ತಿ , ಇದರ ಬೆಲೆ ಏನು ಹೇಳಿದರೆ ನಂಗೆ ಹಣ ಹೊಂದಿಸೋಕೆ ಸುಲಭ ಆಗುತ್ತೆ"

ಸರೋಜಾ ಹೇಳಿದರು
"ಸರಿ ಒಂದ್ಸಲ ತೋಟ ಸುತ್ತಾಡಿಕೊಂಡು ಬರ್ತೀನಿ, ನಂತರ ಬೆಲೆ ನೋಡೋಣ"

"ಆಯ್ತಪ್ಪ "ರವಿ ತೋಟ ಪೂರ್ತಿ ಸುತ್ತಾಡಿದ

ಹುಡುಗಿಯ ಕಣ್ಣು ಇವನನ್ನೇ ಗಮನಿಸುತ್ತಿತ್ತು. ರವಿಯೂ ಅವಳನ್ನು ನಿಟ್ಟಿಸಿ ನೋಡಿದ,

ಎರೆಡು ದಿನ ಬಿಟ್ಟು ಬರುವುದಾಗಿ ಹೇಳಿ ರೂಮಿಗೆ ವಾಪಸಾದ.

ಮರು ದಿನ ಎಂದಿನಂತೆ ಬೆಳಗ್ಗೆ ಹೋಗದೆ ಮದ್ಯಾಹ್ನ ರವಿ ಹೊರಟ
"ಏ ಇದೇನೋ ಇಷ್ಟು ಹೊತ್ತಿಗೆ ಎಲ್ಲೋ ಹೋಗ್ತೀದೀಯಾ" ಸುರೇಶ್ ಕೇಳಿದ
" ಯಾಕೋ ಬೋರ್ ಆಗಿದೆ ಹೊರಗಡೆ ಸುತ್ತಾಡಿಕೊಂಡು ಬರೋಣ , ನಾಳೆ ಊರಿಗೆ ಹೋಗೋಣ"
ಸ್ವಲ್ಪ ಹೊತ್ತಾದ ಮೇಲೆ ರವಿ ಬಂದ
"ಈಗಲೆ ಊರಿಗೆ ಹೋಗೋದು ಅನ್ಕೊಂಡಿದೀನಿ"
"ಯಾಕಪ್ಪ , ನಾಳೆ ಹೋಗೋಣ ಅಂದಿದ್ದೆ"
"ಊರಿನಿಂದ ಫೋನ್ ಬಂದಿತ್ತು , ಅಪ್ಪನಿಗೆ ಹುಶಾರಿಲ್ಲವಂತೆ"
"ಸರಿ ಕಣೋ "
ವ್ಯಾನ್ ಹೊರಡುತ್ತ್ದಿದ್ದಂತೆ
" ಏ ರವಿ ನೀನು ಆ ತೋಟ ಕೊಂಡ್ಕೊಳ್ತೀನಿ ಅಂತಿದ್ದ್ಯಲ್ಲ ಏನಾಯ್ತೋ?"
" ಏ ಸುಮ್ನೆ ಹೇಳ್ದೆ, ತೋಟ ಎಲ್ಲಾ ನೋಡೋಕೆ , ಎಂಜಾಯ್ ಮಾಡೋಕೆ, ಸುತ್ತಾಡೋಕೆ, ಅದನ್ನ ಮೈಂಟೇನ್ ಮಾಡಕ್ಕಾಗಲ್ಲ, ಕೊಂಡ್ಕೊಳೋಕೂ ಆಗಲ್ಲ, ಹಾಗ್ ಹೇಳಿಲ್ಲಾಂದ್ರೆ ಒಳಗಡೆ ಬಿಡ್ತಿದ್ದಳೇನೋ ಆ ಮುದ್ಕಿ "
"ಥೂ ಹಾಗೆಲ್ಲಾ ಮಾತಾಡಬಾರದು ಕಣೋ, ಆಸೆ ಹುಟ್ತಿಸಿ ಮೋಸ ಮಾಡಬಾರದು"
" ಹೋಗೋ ಹೋಗೋ, ಹಾಗಂದುಕೊಂಡ್ರೆ ಲಾಲಭಾಗ್, ಕಬ್ಬನ್ ಪಾರ್ಕ್, ನಾನು ಎಲ್ಲೆಲ್ಲಿ ಸುತ್ತಾಡಿದೀನೋ ಎಲ್ಲಾ ತಗೋಬೇಕಾಗುತ್ತೆ"
ವ್ಯಾನ್ ಸರೋಜಾರವರ ತೋಟದ ಬಳಿ ಬರುತ್ತಿದ್ದಂತೆ , ಸುರೇಶನಿಗೆ ದಂಗಾದಂತಾಯ್ತು
" ರವಿ ನೋಡೋ , ಏನಾಗಿದೆ ಅಲ್ಲಿ "
ತೋಟದ ಹೂಗಳೆಲ್ಲಾ ನೆಲಕ್ಕ ಬಿದ್ದಿದ್ದವು, ಗಿಡಗಳೆಲ್ಲಾ ನಜ್ಜು ಗುಜ್ಜಾಗಿದ್ದವು.
ಸುಂದರ ತೋಟ ಪಾಳು ಬಯಲಂತಾಗಿತ್ತು
"ಯಾವುದೋ ಪುಂಡು ದನ ನುಗ್ಗಿದ್ದಿರಬೇಕು , ಬೇಗ ಬೇಗ ಡ್ರೈವ್ ಮಾಡು ಹೋಗೋಣ" ರವಿ ಅವಸರಿಸಿದ
ವ್ಯಾನ್ ಮುಂದೆ ಹೋಯಿತು.
ಆದರೆ
ಆ ಪಾಳು ತೋಟದ ಮಧ್ಯದಿಂದ ಸೋತು ಬಸವಳಿದು ಬಿದ್ದಿದ್ದ ಆ ಹುಡುಗಿ ಬಿಕ್ಕಳಿಸುತ್ತಾ ಮೇಲೆದ್ದುದ್ದನ್ನು ಸುರೇಶ್ ಗಮನಿಸಲಿಲ್ಲ.