Monday, May 24, 2010

ಪ್ರೇಮವೊಂದು ಹುಚ್ಚು ಹೊಳೆ-ಉತ್ತರ ಭಾಗ

ರಾಜೀವನ ಮನಸ್ಸು ಡೋಲಾಯಮಾನವಾಗಿತ್ತು. ಅಬ್ಬಾ ಈ ಐದು ವರ್ಷಗಳಲ್ಲಿ ಏನೇನಾಗಿ ಹೋಯಿತು?ಹರೀಶನೇನೋ ಜೈಲಿಗೆ ಹೋದ. ಜೀವಾವಧಿ ಶಿಕ್ಷೆ ಆಯ್ತು . ಆತ ಏನು ಮಾಡಿದರೂ ಜೈಲಿನಿಂದ ಹೊರಬರದಂತೆ ಎಲ್ಲಾ ವ್ಯವಸ್ಥೆ ಮಾಡಿದ್ದೂ ಆಯ್ತು.
ಆರು ತಿಂಗಳಲ್ಲಿ ಮದುವೆ ಆಗುತ್ತೇನೆಂದ ಸ್ಮಿತ ಮದುವೆಯ ಮಾತೆತ್ತಿದರೆ ಮಾತು ಮುಂದುವರೆಸುವುದಿಲ್ಲ ಇನ್ನೂ ಗೆಲ್ಲುವ ಕುದುರೆಯೇ ಆದ್ದರಿಂದ ರಾಜೀವನೂ ಬಲವಂತ ಮಾಡಲು ಹೋಗುತ್ತಿರಲಿಲ್ಲ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಮಿತಾಗೆ ಎದುರು ನಿಲ್ಲುವವರು ಯಾರೂ ಇರಲಿಲ್ಲ. ಆರು ವರ್ಷಗಳಿಂದ ಸತತವಾಗಿ ನಂ ೧ ಸ್ಥಾನದಲ್ಲಿಯೇ ಮುಂದುವರೆದಿದ್ದಳು. ಕೈ ತುಂಬಾ ಹಣ ಕಣ್ಣು ಕುಕ್ಕುವ ರೂಪ, ಹದಿನೆಂಟರಂತೇ ಇರುವ ಅದೇ ಪ್ರಾಯ, ಅವಳ ಕಣ್ಣನ್ನುನೆತ್ತಿಯ ಮೇಲೆ ಇಟ್ಟಿದ್ದವು. ಒಮ್ಮೊಮ್ಮೆ ತಾನು ಕಡೇಗಣಿಸಲ್ಪಡುತ್ತಿದ್ದೇನೆಯೇ ಎಂದೂ ಯೋಚಿಸುತ್ತಿದ್ದ ರಾಜೀವ.

ಆದರೂ ಸ್ಮಿತಾಳೇ ತನ್ನ ಜೀವ ಎಂದೇನೂ ಅವನೇನು ಅಂದುಕೊಂಡಿರಲಿಲ್ಲ. ಅಂತಹ ಪ್ರೀತಿಯೂ ಅವಳ ಮೇಲಿರಲಿಲ್ಲ

ಇದ್ದುದ್ದೆಲ್ಲಾ ಕೇವಲ ಎಷ್ಟು ಸವಿದರೂ ಮತ್ತಷ್ಟು ಸವಿಯಬೇಕೆನಿಸುವ ಅವಳ ದೇಹದ ಮೇಲಿನ ದಾಹ, ಹಾಗು ಅಮರ ಪಾಲ್ ನ ನೂರಾರು ಕೋಟಿ ರೂಗಳ ಆಸ್ತಿ ಅಷ್ಟೇ .

ಯಾವುದಾದರೂ ಸಮಯ ನೋಡಿ ಅಟ್ ಲೀಸ್ಟ್ ಅರ್ಧದಷ್ಟು ಆಸ್ತಿಯನ್ನ್ನಾದರೂ ತನ್ನ ಹೆಸರಿಗೆ ಮಾಡಿಕೊಂಡರೆ ಸಾಕು ಅದಕ್ಕೆ ಕಾಯುತ್ತಿದ್ದ ಆದರೆ ಅವಳೋ ತನ್ನ ನೆರಳನ್ನೂ ನಂಬದವಳು. ಇನ್ನೂ ರಾಜೀವನನ್ನು ನಂಬುತ್ತಾಳೆಯೇ. ಅದಕ್ಕೆ ಆಸ್ಪದವೇ ಕೊಡುತ್ತಿರಲಿಲ್ಲ.

ಆಗಿನಿಂದಲೂ ರಾಜೀವ ಪಿ ಎ ಆಗಿದ್ದಷ್ಟೇ ಅವನ ಭಾಗ್ಯ. ಅವಳ ಕೆಲಸ ಮಾಡಿ ಮಾಡಿ ಬಳಲಿದ್ದ. ಆಗಲೇ ಅನ್ನಿಸಿದ್ದು ತನಗೊಬ್ಬ ಅಸಿಸ್ಟೆಂಟ್ ಬೇಕೆಂದು. ಆದರೆ ಬರುವವರು ನಂಬಿಕಸ್ತರಾಗಿರಬೇಕು . ಮುಗ್ದರಾಗಿರಬೇಕು. ತಮ್ಮಷ್ಟಕ್ಕೆ ತಾವು ಇರಬೇಕು. ಹೆಚ್ಚು ಓದಿರಬಾರದು .ಇಂಗ್ಲೀಷ ಮತ್ತು ಕಂಪ್ಯೂಟರ್ ಗೊತ್ತಿದ್ದರೆ ಸಾಕು. ಬಡವರಾಗಿರಬೇಕು. ಅಂತಹವರು ಯಾರಿದ್ದಾರೆ ?ಗೌರಿ ನೆನಪಾಯ್ತು. ಹೌದು ಗೌರಿ ಅಂತಹವಳೇ . ಅವಳ ಪರಿಚಯವಾಗಿದ್ದೂ ಆಕಸ್ಮಿಕವೇ. ಅಂದು ಸ್ಮಿತಾಳ ಅನಾಥೆ ಚಿತ್ರದ ಶೂಟಿಂಗ್ ಇದ್ದುದ್ದು ರಾಜಾಜಿ ನಗರದ ಅಬಲಾಶ್ರಮದಲ್ಲಿ . ಅಲ್ಲಿಯೇ ಆ ಹದಿನೆಂಟರ ಹುಡುಗಿಯ ಪರಿಚಯವಾಗಿತ್ತು. ಗೌರಿ ಅಪ್ಪ ಅಮ್ಮ ಯಾರೆಂದು ಗೊತ್ತಿರದ ಪಾಪದ ಹುಡುಗಿ. ಸಾಧಾರಣ ರೂಪಿನವಳು ನೋಡಿದರೆ ಮುಗ್ದೆ ಎಂದು ತಿಳಿಯುತಿತ್ತು. ಮೊದಲು ಬಳ್ಳಾರಿಯ ಆಶ್ರಮದಲ್ಲಿ ಇದ್ದವಳು ಹದಿನೆಂಟು ವಯಸಾದ ಮೇಲೆ ಅವರೇ ಇಲ್ಲಿ ಅವಳನ್ನು ಕಳಿಸಿದ್ದರು ಅಶ್ರಮಕ್ಕೆ ಬಂದು ಒಂದು ತಿಂಗಳಾಗಿತ್ತಷ್ಟೇ. ಎಲ್ಲಾದರೂಕೆಲಸ ಇದ್ದರೆ ಹೇಳಿ ಎಂದು ಅತ್ತುಕೊಂಡಿದ್ದಳು. ಸಿನಿಮಾದಲ್ಲಿ ಸೈಡ್ ಆಕ್ಟ್ ಮಾಡ್ತೀಯ ಎಂದು ಕೇಳಿದ್ದಳು ಸ್ಮಿತಾ. ಇಲ್ಲ ಎಂದು ತಲೆ ಆಡಿಸಿದ್ದಳು . ತನ್ನ ಈ ರೂಪಿಗೆ ಸಿನಿಮಾ ಸರಿಯಾದ ಫೀಲ್ಡ್ ಅಲ್ಲ ಎಂದಿದ್ದಳು. ಪಿ ಯು ಸಿ ಮಾಡಿದ್ದಾಳೆ .ಜೊತೆಗೆ ಇಂಗ್ಲೀಷ್ ಜ್ನಾನವೂ ಇತ್ತು. ಕಂಪ್ಯೂಟರ್ ಮಾತ್ರ ಹೇಳಿಕೊಟ್ಟರೆ ಆಗುತ್ತದೆ

ಇದಾಗಿ ಎರೆಡು ವರ್ಷಗಳೇ ಕಳೆದಿವೆ . ಅವಳೇನು ಅಲ್ಲೇ ಇದ್ದಾಳ ಇಲ್ಲವಾ ಅದು ಗೊತ್ತಿಲ್ಲ . ಆಫೀಸಿನಿಂದ ಅಬಲಾಶ್ರಮಕ್ಕೆ ಕಾಲ್ ಮಾಡಲು ಹೇಳಿದ.

ಎರೆಡೇ ನಿಮಿಷದಲ್ಲಿ ಉತ್ತರ ಬಂತು

ಗೌರಿ ಯಾವುದ್ ಕಂಪೆನಿಯಲ್ಲಿ ಕೆಲ್ಸ ಮಾಡುತ್ತಿದ್ದಾಳೆ. ಅಬಲಾಶ್ರಮದಲ್ಲಿ ಇಲ್ಲ.

ಆ ಕಂಪನಿಯ ಫೋನ್ ನಂ ತೆಗೆದುಕೊಂಡು ಅವಳನ್ನು ಸಂಪರ್ಕಿಸಿದರು.

ಕೊನೆಗೂ ಗೌರಿ ಬಂದಳು . ಅದೇ ಸಾಧಾರಣ ರೂಪ ಅದೇ ಮುಗ್ಧತೆ , ಅದೇ ಮಾತು. ಬೆಂಗಳೂರಿನ ಬೆಡಗು ಅವಳನ್ನು ಎಳ್ಳಷ್ಟೂ ಬದಲಾಯಿಸಿರಲಿಲ್ಲ. ಮೇಕ್ ಅಪ್ ಇಲ್ಲದ ಮುಖ . ರಾಜೀವನಿಗೂ ಅದೇ ಬೇಕಾಗಿತ್ತು. ಹಾಗಿದ್ದಲ್ಲಿ ತಮ್ಮೆಲ್ಲಾ ವಿಷಯಗಳಿಗೂ ತಲೆಹಾಕುವುದಿಲ್ಲ

ರಾಜೀವನ ಅಸಿಸ್ಟೆಂಟ್ ಆಗಿರಲು ಒಪ್ಪಿದಳು. ಸ್ಮಿತಾ ಕೂಡ ಈ ಎಣ್ಣೆಗೆಂಪಿನ ಸಾಧಾರಣ ಹುಡುಗಿಯನ್ನು ಯಾವುದೇ ಮಾತ್ಸರ್ಯವಿಲ್ಲದೇ ಒಪ್ಪಿದಳು.

ಗೌರಿ ನಿಜಕ್ಕೂ ಮೌನ ಗೌರಿಯೇ ತಾನಾಯ್ತು ತನ್ನ ಕೆಲಸವಾಯ್ತು. ಎಲ್ಲರ ಜೀವನದಲ್ಲೂ ಇದ್ದಂತೆ ಅವಳ ಜೀವನಕ್ಕೂ ಒಂದು ಗುರಿ ಇತ್ತು . ಬೇರೆಡೆ ಕೆಲಸ ಮಾಡಿ ತಾನಂದುಕೊಂಡದ್ದನ್ನು ಪಡೆಯಲಾಗುವುದಿಲ್ಲ ಎಂದು ತಿಳಿದಿತ್ತು. ಇಲ್ಲಿ ಕೈ ತುಂಬಾ ಸಂಬಳ . ತನ್ನಾಸೆ ಇಲ್ಲಿ ಖಂಡಿತಾ ಈಡೇರುತ್ತದೆ ಎಂಬ ನಂಬಿಕೆ ಬಂತು .ಜೊತೆಗೆ ಪ್ರತ್ಯೇಕ ಕೋಣೆ . ಊಟ ಉಪಚಾರ ಎಲ್ಲಾ ಸ್ಮಿತಾ ಮನೆಯಲ್ಲೇ.
ಗೌರಿಯ ಕೆಲಸ ಸ್ಮಿತಾಳ ದಿನಚರಿಯನ್ನು ಸಿದ್ದಗೊಳಿಸುವುದು. ಅವಳ ಮಿಂಚಂಚೆಗೆ ಉತ್ತರಿಸುವುದು. ಲೆಟರ್ ಕರೆಸ್ಪಾಂಡೆನ್ಸ್ ಮಾಡುವುದು. ಜೊತೆಗೆ ಸ್ಮಿತಾ ಹೊಸತೊಂದು ಬಿಸಿನೆಸ್ ಆರಂಭಿಸಿದ್ದಳು . ಅದರ ಮೇಲುಸ್ತುವಾರಿ ನೋಡಿಕೊಳ್ಳುವುದು.
ರಾಜೀವನಿಗೆ ಈಗ ಪ್ರಯಾಸ ಕಡಿಮೆಯಾಗಿತ್ತು. ಎಲ್ಲಾ ಕೆಲಸಗಳನ್ನೂಗೌರಿ ಒಂದಿನಿತೂ ಬೇಸರಿಸಿಕೊಳ್ಳದೇ ಮಾಡುತ್ತಿದ್ದಳು. ಹುಡುಗಿಯರು ಇಷ್ಟು ಸಾಫ್ಟ್ ,ಟ್ರೆಡಿಷನಲ್ , ಗಂಭೀರವಾಗಿರುತ್ತಾರ ? ಎಂದು ಅಚ್ಚರಿ ಪಡುತ್ತಿದ್ದ. ಸ್ಮಿತಾಳೂ ಗೌರಿಯನ್ನ ರೇಗಿಸುತ್ತಿದ್ದಳು
"ಗೌರಿ ಸ್ವಲ್ಪವಾದರೂ ಚೇಂಜ್ ಇರಬೇಕು . ಹೀಗಿದ್ದಲ್ಲಿ ಮುಂದೆ ಯಾರೇ ನಿನ್ನನ್ನ ಮದುವೆ ಆಗ್ತಾರೆ? "
"ಮೇಡಮ್ ನನಗೆ ಅಂತ ಯಾರನ್ನೋ ಭಗವಂತ ಸೃಷ್ಟಿ ಮಾಡಿರುತ್ತಾನೆ ಸಮಯ ಬಂದಾಗ ಅವನೇ ನನ್ನ ಮುಂದೆ ಬರ್ತಾನೆ.ನನ್ನನ್ನ ಹೇಗಿದ್ದೀನೋ ಹಾಗೆ ಒಪ್ಪಿಕೊಳ್ಳೋ ಅಂತಹ ಗಂಡು "ಮುಗ್ದ ಉತ್ತರ
"ಅಕಸ್ಮಾತ್ ಯಾರೂ ಬರಲಿಲ್ಲಾಂದರೆ"ಸ್ಮಿತಾ ನಗುತ್ತಿದ್ದಳು
"ನನ್ನ ಹಣೇಲಿ ಮದುವೆ ಅನ್ನೋ ಪದ ಇಲ್ಲಾ ಅನ್ಕೋತೀನಿ" ಬೇಜಾರಾಗುತ್ತಿತ್ತೇನೋ ಗೌರಿ ಎದ್ದು ಹೋಗಿಬಿಡುತ್ತಿದ್ದಳು.
ಹೀಗೆ ದಿನಗಳು ಕಳೆಯುತ್ತಿದ್ದವು
ಅರಿವಿಲ್ಲದೆ ಸ್ಮಿತಾಗೆ ಗೌರಿ ತುಂಬಾ ಹತ್ತಿರದವಳಾಗಿದ್ದಳು. ರಾಜೀವನಿಗೂ ಸಹಾ . ಗೌರಿ ಅವಕಾಶ ಕೊಟ್ಟರೆ ಗೌರಿಯನ್ನ ವಶಪಡಿಸಿಕೊಳ್ಳಲು ರಾಜೀವನೂ ತಯಾರಿದ್ದ. ಆದರೆ ಗೌರಿಯೇ ಅಂತಹವಳು ಬೆಂಕಿ ಚೆಂಡಿನಂತಹವಳು. ರಾಜೀವನಷ್ಟೆ ಅಲ್ಲಾ ಎಲ್ಲಾ ಗಂಡಸರನ್ನೂ ಮೂರು ಅಡಿ ದೂರದಲ್ಲೇ ಇರಿಸಿ ಮಾತಾಡುತ್ತಿದ್ದಳು. ಅಲ್ಲದೇ ಗೌರಿ ಸ್ಮಿತಾಗೆ ತುಂಬಾ ಬೇಕಾದವಳಾದ್ದರಿಂದ ರಾಜೀವನೂ ಹೆದರುತ್ತಿದ್ದ.

ಇಂತಹ ಗೌರಿಯ ಜೀವನವನ್ನೇ ಬದಲಾಯಿಸುವಂತಹ ಘಟನೆ ನಡೆಯುತ್ತದೆ ಎಂದೂ ರಾಜೀವನೇಕೆ ಗೌರಿಯೂ ಊಹಿಸಿರಲಿಲ್ಲ.
(ಮುಂದುವರೆಯುತ್ತದೆ)
[ ಎಲ್ಲೋ ಒಂದು ಕಡೆ ಪ್ರೇಮವೊಂದು ಹುಚ್ಚು ಹೊಳೆ ಅಪೂರ್ಣ ಎನಿಸಿದ್ದರಿಂದ ಅದನ್ನ ಮುಂದುವರೆಸುತಿದ್ದೇನೆ. ’ಗಮ್ಯ’ಕ್ಕೂ ಅಂತ್ಯ ಕಾಣಿಸಬೇಕೆಂದಿದ್ದೇನೆ. ಎಲ್ಲಕ್ಕೂ ಸಮಯದ ತೊಂದರೆ. ಓದುಗರು ದಯವಿಟ್ಟು ಸಹಿಸಿಕೊಳ್ಳಿ-ರೂಪ)