Wednesday, August 6, 2008

ಮುಪ್ಪಾಗಬಾರದು

ಆಕೆ ಸುಂದರಿ ಎನ್ನುವ ಪದಕ್ಕೂ ನಿಲುಕದಷ್ಟು ಸುಂದರಿ. ತನ್ನ ಸೌಂದರ್ಯದ ಬಗ್ಗೆ ಬಹಳ ಹೆಮ್ಮೆ ಅವಳಿಗೆ .
ಕೆಲವೇ ತಿಂಗಳ ಹಿಂದೆ ಮದುವೆಯಾಗಿತ್ತು . ಒಮ್ಮೆ ತಮಾಷೆಗೆ ಗಂಡ ಹೇಳಿದ " ಈ ನಿನ್ನ ಸೌಂದರ್ಯ ಎಲ್ಲಾ ನಶ್ವರ ಏನಿದ್ರೂ ಯೌವ್ವನ ಇರುವ ತನಕ . ಆಮೇಲೆ ನಿನ್ನ ಬದಲಿಗೆ ಮತ್ತೊಬ್ಬ ಹೆಣ್ಣು ಸುಂದರಿ ಅಂತ ಅನಿಸ್ಕೋತಾಳೆ"
ಆತ ಮರೆತೂ ಬಿಟ್ಟ ಆದರೆ ಈಕೆ ಮರೆಯಲಿಲ್ಲ. ಅದನ್ನೇ ಯೋಚಿಸುತ್ತಾ ಕೂತವಳಿಗೆ ಒಂದು ಉಪಾಯ ಹೊಳೆಯಿತು. ತನಗೆ ಗೊತ್ತಿದ್ದ ಮಂತ್ರವಾದಿಯೊಬ್ಬರಿಂದ ದೇವರನ್ನು ಒಲಿಸಿಕೊಳ್ಳುವ ಮಂತ್ರ ಪಡೆದು ಗಂಡನಿಗೆ ಯಾವುದೋ ನೆಪ ಹೇಳಿ ಯಾರು ಇಲ್ಲದ ಸ್ಥಳವೊಂದಕ್ಕೆ ಹೋಗಿ ದೇವರನ್ನು ಜಪಿಸಲು ಆರಂಭಿಸಿದಳು
ಸುಮಾರು ದಿನಗಳ ಜಪದಿಂದ ದೇವರು ಸಂತುಷ್ಟನಾದ
ಅವಳ ಮುಂದೆ ಪ್ರತ್ಯಕ್ಶನಾಗಿ ಏನು ಬೇಕೆಂದು ಕೇಳಿದ
ಆಕೆ ಕೇಳಿದಳು
"ನನ್ನ ಈ ಸೌಂದರ್ಯ ಹೀಗೆ ಇರಬೇಕು. ಮುಪ್ಪು ನನ್ನ ನೆರಳನ್ನೂ ಸೋಕಬಾರದು, ಸಾವು ಹತ್ತಿರವೂ ಬರಬಾರದು . ಸದಾ ಚಿರಯೌವ್ವನಿಗಳೆನಿಸಿಕೊಳ್ಳಬೇಕು"
"ಇದರಿಂದ ಉಪಕಾರಕ್ಕಿಂತ ಅಪಾಯವೇ ಹೆಚ್ಚು ಯೋಚಿಸು ಬೇರೇನಾದರೂ ಕೇಳು" ಎಂದ
"ಇಲ್ಲ ಈ ವರ ಕೊಡಲಾಗದಿದ್ದರೆ ನೀನು ದೇವರಲ್ಲ "ಎಂದಳು
"ಸರಿ ನಿನ್ನ ವರ ನಿನಗೆ ಶಾಪವಾದರೆ ನಾನು ಹೊಣೆಯಲ್ಲ . ಆದರೆ ನೀನು ಮತ್ತೆ ಸಾವು ಹಾಗು ಮುಪ್ಪು ಕೇಳಲು ಬಹಳ ಕಠಿಣ ತಪಸ್ಸು ಮಾಡಬೇಕಾಗಬಹುದು" ಎಂದು ಹೇಳಿ ತಥಾಸ್ತು ಎಂದು ಹರಸಿ ಮಾಯವಾದ
ಆಕೆ ಹರ್ಷಚಿತ್ತಳಾಗಿ ಮನೆಗೆ ಬಂದಳು
ವರ್ಷಗಳು ಉರುಳಿದವು.
ಅವಳಿಗೆ ಒಬ್ಬ ಮಗ ಹಾಗು ಮಗಳು ಜನಿಸಿದರು
ಇಬ್ಬರೂ ಬೆಳೆಯುತ್ತಾ ಹೋದರು
ಅವಳ ಗಂಡನಿಗೆ ಅವಳ ಮೇಲೆ ಪ್ರೀತಿ ಜಾಸ್ತಿ ತನ್ನ ಹೆಂಡತಿ ಇಷ್ಟು ವರ್ಷಗಳಾದರೂ ನವಯುವತಿಯಂತಿದ್ದಾಳೆಂದು. ಅವಳಿಗಂತೂ ಸಂಸಾರ ಸ್ವರ್ಗವಾಗಿತ್ತು ತನ್ನ ಓರಗೆಯವರೆಲ್ಲಾ ಆಗಲೆ ದಪ್ಪವಾಗುತಿದ್ದರು ಆದರೆ ಈಕೆ ಮಾತ್ರ ಬಳುಕುವ ಬಳ್ಳಿಯಂತೆ ಇದ್ದಳು.
ಮಕ್ಕಳೂ ಕಾಲೇಜಿಗೆ ಹೋಗಲಾರಂಭಿಸಿದರು
ಗಂಡ ಊದತೊಡಗಿದ ತಲೆಯಲ್ಲಿ ನೆರೆ ಕೂದಲು ಕಾಣತೊಡಗಿದವು . ಈಕೆ ಮಾತ್ರ ಹದಿನೆಂಟರ ಯುವತಿ
ಮಗ ಅಮ್ಮನಿಗೆ ತನ್ನ ಜೊತೆ ಬರಬಾರದಾಗಿ ತಾಕೀತು ಮಾಡಿದ .
ಅವನ ಗೆಳೆಯರೆಲ್ಲಾ ಅವಳು ತನ್ನ ಅಮ್ಮ ಅಂದರೆ ನಂಬುತ್ತಿರಲಿಲ್ಲ .
ಮಗನಿಗೆ ಮದುವೆಯಾಯ್ತು.
ಸೊಸೆ ಬಂದಳು
ಇತ್ತ ಇವಳ ಗಂಡನಿಗೆ ಹೆಂಡತಿಗೇಕೆ ವಯಸ್ಸಾಗುತ್ತಿಲ್ಲ ಎಂಬುದು ಪ್ರಶ್ನೆಯಾಯಿತು.
ಅವಳ ಮೇಲೇ ಅನುಮಾನ ಪಡಲಾರಂಭಿಸಿದ ಅವಳ ಯಾರ ಜೊತೆಯಲ್ಲಾದರೂ ಸಂಭಂಧವಿರಿಸಿಕೊಳ್ಳಬಹುದೆಂದು .
ಕೊನೆಗೂ ಅದೇ ಚಿಂತೆಯಲ್ಲಿ ಸತ್ತ
ಇವಳು ಮಾತ್ರ ನವಯುವತಿಯಂತೆ ಅದೇ ಕಾಯ ಅದೇ ಸೌಂದರ್ಯದಿಂದ ಕಂಗೊಳಿಸುತ್ತಿದ್ದಳು.
ಮಗಳು ಅಮ್ಮನಿಗೆ ಮನೆಗೆ ಬರಬಾರದೆಂದು ಹೇಳಿದಳು. ಅವಳಿಗೆ ಅವಳ ಗಂಡ ಎಲ್ಲಿ ಅಮ್ಮನ ಸೌಂದರ್ಯಕ್ಕೆ ಮರುಳಾಗುತ್ತಾನೋ ಎಂಬ ಭಯ
ಅವಳಿಗೆ 60 ರ ಪ್ರಾಯ .
ಮಗನಿಗೂ ವಯಸ್ಸಾಗತೊಡಗಿತು
ಸೊಸೆಯೂ ಅಷ್ಟೆ ಬೊಜ್ಜಿನಿಂದ ಊದತೊಡಗಿದಳು.
ಮೊಮ್ಮಗ ಕಾಲೇಜಿಗೆ ಹೋಗಲಾರಂಭಿಸಿದ.
ಅವನಿಗೆ ಇವಳನ್ನು ಅಜ್ಜಿ ಎಂದು ಕರೆಯಲೇ ಮುಜುಗರ.
ಹೀಗಿದ್ದಾಗ ಅವಳ ಮಗಳು ಯಾವುದೋ ಒಂದು ಕಾಯಿಲೆ ಬಂದು ಸತ್ತಳು
ಸ್ವಲ್ಪ ದಿನವಾದ ಮೇಲೆ ಮಗನೂ ಹಾಗು ಸೊಸೆಯೂ ತಮ್ಮ ದೇಹ ತ್ಯಜಿಸಿದರು
ತನ್ನ ಕಣ್ಣ ಮುಂದೆ ತನ್ನ ಕುಡಿಗಳು ಕಳಚುತ್ತಿರುವುದ ನೋಡಿ ಮೌನವಾಗಿ ರೋಧಿಸಿದಳು
ಈಗ ಅವಳಿಗೆ ೭೫ ವರ್ಷಗಳಾಗಿದ್ದವು
ಮೊಮ್ಮಗನ ಮದುವೆಯಾಯ್ತು ಅವನ ಮನೆಯಲ್ಲೇ ವಾಸವಿದ್ದಳು.
ಏಕೋ ತನ್ನ ಕಾಲದಲ್ಲಿದ್ದಂತೆ ಈಗ ಯಾವುದೂ ಇಲ್ಲ ಆನಿಸತೊಡಗಿದವು. ಹೊರಗೆ ಹೋಗುವುದಕ್ಕೆ ಒಂದು ರೀತಿಯ ಹಿಂಜರಿಕೆ ತಾನು ಹೇಗೆ ಇರಬೇಕು. ಅಜ್ಜಿಯ ಮನಸ್ಸು, ನವಯುವತಿಯ ದೇಹ ಹೊತ್ತುಕೊಂಡಿತ್ತು.
ಮನಸಿಗೆ ವಯಸ್ಸಾದ ಹಾಗೆ ಅನ್ನಿಸುತಿತ್ತು. ಹುರುಪಿಲ್ಲ. ಅತ್ತ ಹೊರಗಡೆ ಹೊರಟರೆ ಈಗಷ್ಟೆ ಚಿಗುರು ಮೀಸೆ ಬಂಡ ಹುಡುಗರು ಇವಳನ್ನು ತಿಂದೇ ಬಿಡುವ ನೋಟ ಹರಿಸುತ್ತಿದ್ದರು. ಅತ್ತ ಇವಳ ಮೊಮ್ಮಕ್ಕಳ ವಯಸಿನ ಹೆಂಗಸರು ಹಿಡಿ ಹಿಡಿ ಶಾಪ ಹಾಕುತಿದ್ದರು.
ಮನೆಯಲ್ಲಿ ಯಾವುದೇ ಗೌರವ ವಿರಲಿಲ್ಲ
ಸ್ವಂತ ಮೊಮ್ಮಗನ ಹೆಂಡತಿಗೆ ಇವಳ ಮೇಲೆ ಅನುಮಾನ. ತನ್ನ ಗಂಡನನ್ನು ಬಲೆಗೆ ಹಾಕಿಕೊಳ್ಳುತಾಳೇನು ಎಂಬ ಭಯ
ಹಾಗೂ ಹೀಗೂ ದಿನ ತಳ್ಳುತಿದ್ದಳು. ಅವಳ ಬದುಕಿಗೆ ಅಂತ್ಯವೇ ಇರಲಿಲ್ಲವಲ್ಲ
ಇನ್ನೂ ಕೆಲವು ವರ್ಷಗಳು ಕಳೆದವು ಮರಿಮಗ ಕಾಲೇಜಿಗೆ ಹೋಗಲಾರಂಭಿಸಿದ
ಒಮ್ಮೆ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಅಜ್ಜಿಯ ಬಳಿ ಬಂದ
" ನೋಡು ನೀನು ಹ್ಯಾಗೆ ಹೀಗೆ ಮೈಂಟೇನ್ ಮಾಡ್ತಿದೀಯಾ ಅಂತ ಗೊತ್ತಿಲ್ಲ. ಹ್ಯಾಗಿದ್ದರೂ ನಿಂಗೆ ಗಂಡ ಇಲ್ಲ. ಹಾಗೆ ಇಷ್ಟು ವರ್ಷ ಕಳೆದಿದ್ದೀಯಾ. ನಂಗೂ ಏನೂ ಗೊತ್ತಿಲ್ಲ . ಸ್ವಲ್ಪ ನಂಗೆ ಅದರ ಅನುಭವ ಕೊಡ್ತೀಯಾ ಪ್ಲೀಸ್ ಇಲ್ಲ ಅನ್ಬೇಡ. ಒಳ್ಳೇ ತಾಜಾ ತರಕಾರಿ ಥರ ಇದ್ದೀಯಾ. ಬಾ " ಎಂದು ಅವಳ ಮೇಲೆ ಬೀಳಲು ಹೋದ. ಅವನಿಂದ ತಪ್ಪಿಸಿಕೊಂಡು ಮೊಮ್ಮಗನಿಗೆ ಈ ವಿಷಯ ಹೇಳಿದಳು
" ಹೌದು ಪ್ರತಿ ಮನುಷ್ಯನಿಗೂ ಹುಟ್ಟು ಸಾವು, ಬಾಲ್ಯ ಹರೆಯ, ಮುಪ್ಪು ಅಂತ ಇರುತ್ತೆ. ಆದರೆ ನಿಂಗೆ ಅದು ಯಾವುದೂ ಇಲ್ಲ ಎಷ್ಟು ವರ್ಷ ಹೀಗೆ ಇರ್ತೀಯಾ ಯಾವಾಗ ಸಾಯ್ಟಿಯಾ ಅಂತಾನೂ ಗೊತ್ತಿಲ್ಲ ನಂಗೇನೋ ನೀನು ಅಜ್ಜಿ . ಆದ್ರೆ ಮುಂದೇನು ಹೀಗೆ ಇದ್ರೆ ನನ್ನ ಮಗ ಅವನ ಮಗಾನೋ ಮಗಳೋ ನಿನ್ನ ಖಂಡಿತಾ ನೋಡ್ಕೊಳೋದಿಲ್ಲ .ನೀನು ಎಲ್ಲರ ಹಾಗೆ ಮುದುಕಿಯಾದ್ರೂ ಪರವಾಗಿಲ್ಲ . ನಿಂಗೆ ಪ್ರತ್ಯೇಕ ರಕ್ಷಣೆ ಕೊಡ್ಬೇಕು ಅಂದ್ರೆ ನಂಗೆ ಆಗಲ್ಲ. ಈಗ ಕಾಲ ಬೇರೆ ಕೆಟ್ಟು ಹೋಗಿದೆ . ಮನೇಲಿ ಹೀಗೆ ಹರೆಯದ ಹೆಣ್ಣು ಇದ್ರೆ ಎಂಥ ಹುಡುಗರಿಗೂ ಆಸೆ ಬರೋದು ಸಹಜ ಅವನ ತಪ್ಪಲ್ಲ ನಿಂಗೆ ಮುಪ್ಪಿಲ್ಲವಲ್ಲ ಅದು ನಿನ್ನ ತಪ್ಪು " ಎಂದ
ಮೊದಲ ಬಾರಿಗೆ ತಾನು ಮುದುಕಿಯಾಗಿದ್ದರೆ ಎಷ್ಟು ಚೆಂದ ಅನ್ನಿಸತೊಡಗಿದವು
ಮರಿಮಗನ ಕಾಟ ಅತಿಯಾಗತೊಡಗಿದವು ಮನೆಯಲ್ಲಿ ಇದ್ದ ಆದರವೂ ಈಗ ಇರಲಿಲ್ಲ.
ಸಾಯಬೇಕೆಂದರೆ ಸಾವು ಯಾವ ದಾರಿಯಲ್ಲೊ ಅವಳಿಗೆ ಒದಗಲಿಲ್ಲ.
ಕೊನೆಗೊಮ್ಮೆ ಮತ್ತದೇ ಸ್ಟಳಕ್ಕೆ ಹೋದಳು ದೇವರನ್ನು ಹುಡುಕಿಕೊಂಡು ಆದರೆ ಆ ಸ್ಥಳದಲ್ಲಿ ದೊಡ್ಡದೊಂದು ಕಾಂಪ್ಲೆಕ್ಸ್ ತಲೆ ಎತ್ತಿತು
ಅವಳಿಗೆ ಏಕಾಂತವಿರುವ ಯಾವ ಸ್ಥಳವೂ ತೋರಲಿಲ್ಲ .
ಎಲ್ಲೆಡೆ ಜನಸಾಗರ . ಹುಚ್ಚರಂತೆ ಮೊಬೈಲ್ ನಲ್ಲಿ ಮಾತಾಡುತ್ತಾ ಸುತ್ತಾ ಜನರ ಪರಿವೇ ಇಲ್ಲದಂತೆ ಓಡಾಡುವ ಜನ.
ಅಲ್ಲಲ್ಲಿ ಮೇಲೆ ಬೀಳಲು ಬರುವ ಹುಡುಗರು, ಸಿಕ್ಕ ಸಿಕ್ಕವರನ್ನು ಕೊಚ್ಚುವ ರೌಡಿಗಳು.
ದೇವಸ್ಥಾನಗಳೂ ಹೈಟೆಕ್ ಆಗಿದವು .
ಸುಲಭವಾಗಿ ಅವಳಿಗೆ ಪ್ರವೇಶ ಸಿಗಲಿಲ್ಲ. ಅಲ್ಲೂ ಪುರೋಹಿತರ ಕಾಟ . ಹೆಣ್ಣು ಒಂಟಿಯಾಗಿದ್ದಾಳೆಂದು ಅವರಿಗೂ ಆಸೆ .
ಅಲ್ಲಿಂದ ಕೊನೆಗೆ ತನ್ನ ಹಳೇ ಮನೆಗೆ ಬಂದು ಬಾಗಿಲು ಹಾಕಿಕೊಂಡು ಜಪಿಸತೊಡಗಿದಳು.
ಬಹಳ ಕಠಿಣ ತಪದಿಂದ ದೇವರು ಪ್ರತ್ಯಕ್ಷನಾದ
"ದೇವರೆ ನನಗೆ ಸಾವು ಕೊಡು" ಅರ್ಧಳಾಗಿ ಬೇಡಿಕೊಂಡಳು
ದೇವರು ನಕ್ಕ
"ಅದಕ್ಕೆ ಪ್ರತಿಯೂಬ್ಬರಿಗೂ ಸಾವು, ಮುಪ್ಪು ಇರುವುದು ಅದ ಅರ್ಥ ಮಾಡಿಕೊಳ್ಳದಾಗಲೇ ಈ ರೀತಿ ಆಗುವುದು"
"ದೇವರೆ ನನಗೆ ಒಮ್ಮೆಯಾದರೂ ಮುದುಕಿಯಾಗುವ ಅವಕಾಶ ಕೊಡು"
ಅವಳ ಆಸೆ ಈಡೇರಿತು . ಆ ಅವಸ್ಥೆಯನ್ನು ತುಂಬು ಹೃದಯದಿಂದ ಅನುಭವಿಸಿದಳು
ಹಾಗೆ ಅವಳ ಆತ್ಮ ಪಂಚಭೂತದಲ್ಲಿ ಲೀನವಾಯಿತು