Wednesday, December 4, 2013

ಕಣ್ಣು ಮುಚ್ಹೆಂದೆ ನೀ,

ಕಣ್ಣು ಮುಚ್ಹೆಂದೆ ನೀ, 
ನಾ ಮುಚ್ಚಿದ ಕಣ್ಣಿನಿಂದಲೂ 
ಜಗವ ನೋಡಬಹುದೆಂದು ತಿಳಿಯದೆ 
******************************************
ಲೇಖನಿ ಕಿತ್ತರೇನು ಹಾಳೆ ಹರಿದರೇನು 
ಮನದ ಪುಸ್ತಕದಲ್ಲಿ , ಕಣ್ ಪೆನ್ನಿನಲ್ಲಿ 
ನನ್ನದೇ ಜಗದಲ್ಲಿ ಬರೆಯಬಹುದು 
ನಾ ನಿನ್ನ ಹಂಗಿಲ್ಲದೆ
*************************************

ಸೋಲಿಲ್ಲದ ಸರದಾರ

ಸೋಲು ಗೆಲುವಿನ ಹುಡುಕಾಟವಲ್ಲ 
ಮೇಲು ಕೆಳಗೆಂಬ ಪ್ರಶ್ನೆಯೇ ಇಲ್ಲ 
ನಲಿವು, ನರಳಿಕೆಯೂ ನೋವೇ ಇಲ್ಲ 

ಸೂರೆಗೊಂಡ ಸುಖಕೆ ವಾರಸುದಾರರಾರಿಲ್ಲಿ 
ನೀನೋ?, ನಾನೋ? ,ನಾ ನೀ ಬೇರೆಯಾದದ್ದೆಲ್ಲಿ 
ನಾ ನೀ ,ನೀ ನಾ ಆಗಿ ಹೋದ ಶುಭ ಘಳಿಗೆಯಲ್ಲಿ 

ಸೋತರೂ ,ಮೀಸೆಯಡಿ 
ಗೆಲುವಿನ ನಸುನಗೆ 
ನಿಜ ಗೆದ್ದವನು ನೀ,
ಸೋತವಳು ನಾ ನಿನಗೆ

ಗೆಲುವು ಸೋಲತ್ತಟ್ಟಿಗಿರಲಿ ,
ಮತ್ತೆಂದು ಈ ಆಟ
ಸೋಲಿಲ್ಲದ ಸರದಾರ
ಸೋತ ಈ ನೋಟ

ಅಂದು ಇಂದು

ಅಂದು 
ತಣ್ಣನೆ ಗಾಳಿ ಸರ್ರೆಂದು ನೇವರಿಸಿದಂತೆ 
ಆವರಿಸಿದ ದಟ್ಟ ಪರಿಮಳದ ಸೆಳೆತಕೆ 
ಮನ ಮರಳಾಗಿದ್ದು ನಿಜ 

ಎತ್ತಿಟ್ಟ ಹಂಬಲಗಳ ಮೂಟೆಯೊಂದರಲ್ಲಿ 
ಕಾದು ಕಾದು ಸೊರಗಿದ ಆಸೆಯೊಂದು 
ಚಿಗುರಿ ಹಣ್ಣಾಗಿದ್ದೂ ನಿಜ 

ಪೋಣಿಸಿಟ್ಟ ಮುತ್ತುಗಳು ಸಾಲು 
ಸಾಲಾಗಿ ಕೆನ್ನೆಯ ನೇವರಿಸಿ ಆವರಿಸಿ
ಮತ್ತೇರಿಸಿದ್ದೂ ನಿಜ

ಗುಪ್ತ ಗಾಮಿನಿಯ ಗಮನದ ಗಮ್ಯ
ಬದಲಾಗಿ ದಿಕ್ಕಾಪಾಲಾಗಿ ಸುತ್ತಿ
ಸಂತಸದಿ ಬೆವರಾದದ್ದೂ ನಿಜ

ಇಂದು
ಗಾಳಿ ಸುಂಟರಗಾಳಿಯಾಗಿ
ಮೂಟೆ ಮೊಟ್ಟೆಯಾಗಿ
ಮುತ್ತುಗಳು ಕುತ್ತಾಗಿ ದಾರಿ
ಕತ್ತಲಾಗಿದ್ದೂ ನಿಜ

ಮದ್ಯದಂಗಡಿಯ ಹಾದಿಯಲ್ಲಿ ನಡೆದ ತಪ್ಪಿಗೆ ಮದಿರಾ ಮೋಹಿಯ

ದೀಪದಂತಿದ್ದ ಕಂಗಳಿಂದು 
ಜ್ವಾಲೆಯಾಗಿ ಉರಿದುರಿದು 
ಬೀಳುತಿವೆ ಕಣ್ಣೀರ ಜಲಪಾತಕೂ 
ಸೊಪ್ಪು ಹಾಕದೆ ಆರದೆ 
ಮತ್ತೆ ಅಳಿಸುತಲಿದೆ ಗಾಳಿಯಂತೆ 
************
ಅಂದೊಮ್ಮೆ ಸ್ವೀಕಾರ 
ಎಲ್ಲಿಲ್ಲದ ಮಮಕಾರ 
ಪ್ರೀತಿಯ ಮದರಂಗಿಯಲ್ಲ್ಲಿ 
ಹುದುಗಿತ್ತೇ ಅಪಚಾರ 
************
ಹಚ್ಚಿದ ಬೆಣ್ಣೆಯಲಿ
ಸುಣ್ಣವ ಬೆರೆಸಿದ್ದು
ಕಂಡರೂ ಕಾಣದಂತಿದ್ದಿದ್ದು
ಕಂಗಳ ದೋಷವೋ,
ಮನ ಮುಸುಕಿದ್ದ ಮೋಹವೋ
************
ಉರಿತವೋ ಉಳಿದವನ್ನೂ
ಕಳೆವ ಚೂರಿಯಲುಗಿನ ಇರಿತವೋ
ಸಂಭ್ರಮದ ಮಂಟಪದಲ್ಲಿ ಮಸಣದ
ಜಾತ್ರೆ ಬೇಕೆ ?
************
ಮದ್ಯದಂಗಡಿಯ ಹಾದಿಯಲ್ಲಿ
ನಡೆದ ತಪ್ಪಿಗೆ ಮದಿರಾ ಮೋಹಿಯ
ಪಟ್ಟ ಸರಿಯೇ?

ಇತ್ತಿದ್ದ ದರವ ಅತ್ತೇರಿಸಿ

ಇತ್ತಿದ್ದ  ದರವ ಅತ್ತೇರಿಸಿ
ಅತ್ತಿದ್ದ ಬೆಲೆಯ ಇತ್ತಿಳಿಸಿ
ಕಡಲೆ ಕೆಲಸವ ಗುಡ್ಡ ಮಾಡಿ
ಗುಡ್ಡವ  ಬೆಟ್ಟ ಮಾಡಿ
ಬೆಟ್ಟವ  ಏರಲಾರದೆ
ಉಸಿರೆಳೆದೆಳೆದು
ಉಸ್ಸೆನ್ನುವಷ್ಟ್ರರಲ್ಲಿ ರಾತ್ರಿ
ಅಣಕಿಸುತ್ತಿತ್ತು
ನಿನ್ನ ದಿನ ಮುಗಿಯಿತೆಂದು

ಬೆಂಗಳೂರು ಬೆಚ್ಚೆದ್ದು ಹುಚ್ಚೆದ್ದು ಬೀಳುತಿದೆ

ಬೆಂಗಳೂರು ಬೆಚ್ಚೆದ್ದು
ಹುಚ್ಚೆದ್ದು ಬೀಳುತಿದೆ

ಚಿಗುರು ಮೀಸೆಯ ಪಡ್ಡೆಗಳು
ಗಡಸು ದನಿಯ ಪುಂಡರು
ಒಗರೊಗರು ಮೊಗದೋರು
ಪುಡಿ ಮರಿ ರೌಡಿಗಳು
 ಧಾವಿಸಿ ಬರುತಿರಲು ತನ್ನತ್ತ
ಬೆಂಗಳೂರು ಬೆಚ್ಚೆದ್ದು
ಬೀಳುತಿದೆ

ಉದ್ದ ಜಡೆಯ  ಲಲನೆಯರು
ಸುಂದರ ಸಖಿಯರು
ಸುಮಧುರ ವಾಣಿಯರು
ಶಾಂತ ಕನ್ಯೆಯರು
ತನ್ನೊಡಲಿಗೆ ಬಂದಿಳಿವುದ ನೋಡಿ
ಹುಚ್ಚೆದ್ದು  ಕುಣಿಯುತಿದೆ  

ಜಗದೆಲ್ಲಾ  ಮೋಟಾರು ಕಾರುಗಳು
ಮನೆಗೆರೆಡು  ಬೋರುವೆಲ್ಲುಗಳು
ದಾರಿಗತ್ತು ಬಾರುಗಳು
ಅಲ್ಲಲ್ಲಿ ಮಚ್ಚ ಮಾಮಗಳು
ತನ್ನಲ್ಲಿ ನೆಲೆಸಿರುವುದ ನೋಡಿ
ಗಾಬರಿಯಾಗುತಿದೆ

ಅಮ್ಮ ಅಕ್ಕ ಆಂಟಿ ಎಂಬೆಲ್ಲ
ಬೈಗುಳಗಳು
ಅಂಟಿ  ಕೂತ ಹೆಣ್ಣು
ಗಂಡುಗಳು
ಟಿವಿ ಬಿಟ್ಟಿರದ ಮುದ್ದು
ಕಂದಮ್ಮಗಳು
ಪಾರ್ಲರ್ ದಾರಿ ಹಿಡಿದ
ಎಲ್ಲ್ಲಾ ಲಿಂಗಗಳು
,ತನ್ನೊಳಗೊಂದಾದ ಪರಿಗೆ
ಅಚ್ಚರಿ ಪಡುತಲಿದೆ

ಹುಚ್ಚರಾದ ಮೊಬೈಲ್ ಮಂದಿಗಳು
ಇನ್ನೂ ಸರಿಯಾಗದ ರಸ್ತೆ ಬಿರುಕುಗಳು
ಗಗನ ಚುಂಬಿಸೊ  ಕಟ್ಟಡಗಳು.
ಕಟ್ಟಡದೊಳಗಿನ ಬಿಳಿ ಅಂಗಿಗಳು
ಅಂಗಿಯೊಳಗಿನ ಕರಿಮನಸುಗಳು
ತಾನೇ ಆಗಿ ಹೋದ ಪರಿಗೆ
ನಜ್ಜು ಗೊಜ್ಜಾಗಿದೆ ಬೆಂಗಳೂರು

ಸಾಲ  ಕೊಡುವ ಬ್ಯಾಂಕ್ಗಳು
ಹಣ ಕೊಡುವ ಎಟಿಎಂಗಳು
ಅಲ್ಲಿಂದಲೆ ದೋಚುವ ಕರಗಳು
ಸಾಲ ವಸೂಲಾತಿಯ ಗೂಂಡಾಗಳು
ಕಿರಿಕಿರಿ  ಟೆಲಿಕಾಲರ್ಗಳು
ದಾರಿಯಲಿ  ತಡೆವ  'ಹೊಯ್ಸಳ'ರು
ಹಣ ಕೀಳುವ ಮಂಗಳೆಯರು
ತನ್ನಲ್ಲಿ ನೆಲೆಸಿರುವುದ ನೋಡಿ
ಗಾಬರಿಯಾಗುತಿದೆ

ಅಪರಿಚಿತ ದನಿಗೆ ಬೆರಗಾಗಿ
ಕರಗುವ ಹದಿಹರೆಯದವರು
ಪರಿಚಿತರನ್ನೂ ಅಪರಿಚಿತರಾಗಿಸೊ
ಫೇಸ್ ಬುಕ್ ಇ ಮೇಲ್ ಕಮಾಲುಗಳು
ಎಫ್ ಬಿ ಚಾಟುಗಳು ಕಾಫಿ ಡೇ
ಮೀಟುಗಳು, ಡೇಟಿಂಗ್ಗಳು ,
ಕೊನೆಗೆ ಬ್ರೇಕ್ ಆಗುವ
ಹಾರ್ಟುಗಳು
ಹೆಚಾಗಿ ,ಹಾರ್ಟು
 ಕಳೆದುಕೊಳ್ಳುತ್ತಿದೆ ಬೆಂಗಳೂರು