ರಾಜೀವ್
"ಇವತ್ತು ಸಾಯಂಕಾಲ ಏಳು ಘಂಟೇಗೆ ಕಲಾ ಸಂಗಮದಲ್ಲಿ ಕತೆಗಾರ ಸೋಮಣ್ಣನವರ ಹೊಸ ಕತೆ ಬಿಡುಗಡೆಯಾಗ್ತಿದೆ . ನೀವು ಬರಲೇಬೇಕು . ಇಲ್ಲಾಂದರೆ ಮಾತಾಡೋಲ್ಲ "
ಅಂತ ಸಿರಿ ಏನೋ ಹೇಳಿದಾಳೆ. ಆಗಲೇ ಸಾಯಂಕಾಲ ಆರು ಘಂಟೆ ಆಗಿದೆ.
ಆಫೀಸಿನಿಂದ ಡೈರೆಕ್ಟ್ ಆಗಿ ಹೋಗೋಣ ಅನ್ಕೊಂಡು ಸ್ಕೂಟಿ ಸ್ಟಾರ್ಟ್ ಮಾಡಿದೆ.ಯಾರೋ ಸೋಮಣ್ಣ. ಯಾಕಪ್ಪ ನಿನ್ನ ಕಥೇನ ಬಿಡುಗಡೆ ಮಾಡಿ ಗೋಳ್ಹಾಕ್ಕೋತೀಯಾ.
ಏನ್ ಕತೇನೋ ಕವನಾನೋ, ಸಿನಿಮಾನೋ ಒಂದು ಅರ್ಥ ಆಗಲ್ಲ. ಹಾಗೆ ನೋಡಿದರೆ ನಂಗೆ ಈ ಕತೆ ಕವನ, ಸಿನಿಮಾ ಅಂತ ಭ್ರಾಮಕ ಜಗತ್ತಿನ್ನಲ್ಲಿ ಬದುಕೋದು ಒಂಚೂರು ಇಷ್ಟ ಇಲ್ಲ. ನನಗೆ ಈ ಕಲ್ಪನಾ ವಿಲಾಸಿ ಸಿರಿ ಜೋಡಿಯಾಗ್ತಿರೋದು ಒಂದು ತಮಾಷೇನೆ .ಅವಳು ಬಂದ್ರೆ ಇವತ್ತು ಉಪ್ಪಿ ಹುಟ್ಟಿದ ಹಬ್ಬ, ರಮ್ಯಾಗೆ ಅವಾರ್ಡ್ ಸಿಕ್ತು. ಪೇಪರ್‌ನಲ್ಲಿ ವಿಶ್ವೇಶ್ವರ್ ಭಟ್ ಹೀಗೆ ಬರೆದಿದ್ದಾರೆ, ಭೈರಪ್ಪನವರ ಕಾದಂಬರಿ ಓದಿದ್ಯಾ. ಅಂತ ತಲೆ ತಿನ್ನುತ್ತಾ ಇರುತ್ತಾಳೆ.
ಯಾರಿಗೋ ಏನೋ ಆದರೆ ನಂಗೇನು, ಇರೋ ಕೆಲಸದಲ್ಲಿ ನಿಷ್ಟೆಯಾಗಿ ದುಡಿದೋ ಮುಂದಿನ ಜೀವನ ಸುಖವಾಗಿ ಇರೋದನ್ನ ನೋಡ್ಕೊಳ್ಳೋದು ನನ್ನ ಆಸೆ, ಬೋರ್‌ಗಿರಾಕಿ ಇದು ಅವಳ ಬಿರುದು ನನಗೆ . ನಾನು ವಾಸ್ತವವಾದಿ ಅವಳು ಮಿಥ್ಯಾ ಲೋಕ ಸಂಚಾರಿಣಿ. ಆದರೂ ನನಗೆ ಅವಳಂದ್ರೆ ತುಂಬಾ ಇಷ್ಟ.
ಅವಳ ಪರಿಚಯ ಆಗಿದ್ದೂ ಆಕಸ್ಮಿಕಾನೆ. ಗೆಳೆಯ ತುಂಬಾ ಫೋರ್ಸ್ ಮಾಡಿ ಯಾವುದೋ ಸಂಗೀತ ಗೋಷ್ಟಿಗೆ ಕರೆದುಕೊಂಡು ಹೋಗಿದ್ದ. ಬರ್ತಾ ಇದ್ದಾಗ ಪಂಚರ್ ಆಗಿದ್ದ ಸ್ಕೂಟಿ ತಳ್ಳಲಾಗದೆ ಏಳು ಮಲ್ಲಿಗೆ ತೂಕದ ಈ ರಾಜಕುಮಾರಿ ಸಿರಿ ಒದ್ದಾಡುತ್ತಿದ್ದಳು.ಅವಳಲ್ಲದೆ ಬೇರೆ ಯಾರೆ ಇದ್ದರೂ ಸಹಾಯ ಕೇಳುತ್ತಿದ್ದರೇನೋ. ಅಷ್ಟಿದ್ದರೂ ಯಾರ ಸಹಾಯ ಪಡೆಯದೆ ತಳ್ಳಿಕೊಂಡು ಹೋಗುತ್ತಿದ್ದ ಅವಳ ಪರಿಪಾಟಲು ನೋಡಲಾಗದೆ ನನ್ನ ಸ್ಕೂಟಿಯಲಿದ್ದ ಸ್ಟೆಪ್ನಿ ಜೋಡಿಸಿಕೊಟ್ಟೆ. ನಂಗೇನು ಅದು ದೊಡ್ಡ ವಿಷಯ ಅನ್ನಿಸಲಿಲ್ಲ. ಆದರೆ ಸಿರಿಗೆ ಮಾತ್ರ ನಾನು ಅವಳ ಜೋಡಿಯಾಗಲೆಂದೆ ಆ ಸನ್ನಿವೇಶ ಸೃಷ್ಟಿಯಾಯಿತಂತೆ. ಅದನ್ನು ಹೇಳೋಕೂ ಸೇವಂತಿಗೆ ಹೂವಿನ ಎಸಳುಗಳನ್ನು ಕಿತ್ತು ಅದನ್ನು ಜೋಡಿಸಿ ಪತ್ರ ಬರೆದು ಕೊಟ್ಟಿದ್ದು ನೆನೆಸಿಕೊಂಡ್ರೆ ನಗು ಬರುತ್ತೆ.
ನಾನು ಕೇಳಿದ ಪ್ರಶ್ನೆ ಅವಳಿಗೆ ಕೋಪ ಬೇರೆ ತರಿಸಿತು. "ಅಲ್ಲಾ ಮೂರೇ ಶಬ್ದದಲ್ಲಿ ಹೇಳೋದನ್ನ ಸುಮ್ನೆ ಟೈಮ್ ವೇಸ್ಟ್ ಮಾಡಿಕೊಂಡು ಹೂವಿನಲ್ಲಿ ಜೋಡಿಸ್ತೀರಲ್ಲ ನಿಜವಾಗಲೂ ತಲೆ ಕೆಟ್ಟಿದೆ." ಅವಳು ಕೋಪ ಮಾಡಿಕೊಂಡು ಹೊರಟೆ ಹೋಗಿದ್ದಳು.
ಆಮೇಲೆ ನನಗೂ ಗೊತ್ತಾಯ್ತು.
"ಐ ಆಮ್ ಆಲ್ಸೊ ಇನ್ ಲವ್ ವಿತ್ ಹರ್"
ಕೊನೆಗೆ ಅವಳನ್ನು ಕಾಡಿಬೇಡಿ ಸಾರಿ ಕೇಳಿದ್ದಾಯ್ತು.
ಹೀಗೆ ಶುರುವಾಗಿ ಕೊನೆಗೆ ರಾಜಿಯಾಯಿತು
ಕಿರ್ರ್ ಕಿರ್ರ್ ಎನ್ನುತ್ತಾ ಸ್ಕೂಟಿ ನಿಂತಿತು ನಾನು ಬ್ರೇಕ್ ಹಾಕಿದ್ದೆ. ಮನದಲ್ಲಿ ಎಲ್ಲಾ ಯೋಚನೆ ಮಾಡುತ್ತಿದ್ದರೂ ವಿವೇಕಾ ಮಾತ್ರ ಕೈಕೊಡಲ್ಲ ನನಗೆ
ಮಿನಿ ತೊಟ್ಟ ಸುಂದರಿಯೊಬ್ಬಳು ಸ್ಕೂಟಿಯನ್ನು ತಳ್ಳುತ್ತಿದ್ದಳು, ಯಾಕೆ ನಂಗೆ ಸ್ಕೂಟಿ ಸುಂದರಿಯರೆ ಗಂಟು ಬೀಳ್ತಾರೆ ಎಂಬ ತುಂಟ ಯೋಚನೆಯೊಂದಿಗೆ
"ಕ್ಯಾನ್ ಐ ಹೆಲ್ಪ್ ಯು "ಎಂದು ವಿಚಾರಿಸಿದೆ
"ಹೌದು ಪೆಟ್ರೋಲ್ ಆಗಿ ಹೋಗಿದೆ " ಎಂದು ಅಳು ಮೋರೆ ಮಾಡಿ ಹೇಳಿದಳು
ನನ್ನ ಸ್ಕೂಟಿಯಲ್ಲಿ ಪೆಟ್ರೋಲ್ ಇದ್ದರೂ ತೆಗೆಯಲು ಯಾವುದೇ ಸಲಕರಣೆ ಇಲ್ಲ"
"ಸರಿ ನೀವು ಸ್ಕೂಟಿಯಲ್ಲಿ ಕೂತು ಡ್ರೈವ್ ಮಾಡಿ "ಎಂದು ಹೇಳಿದೆ . ಅವಳು ಅನುಮಾನದಿಂದ ನೋಡುತ್ತಲೇ ಕೂತಳು
ನನ್ನ ಸ್ಕೂಟಿಯಲ್ಲಿ ಕೂತು ಒಂದು ಕಾಲನ್ನು ಅವಳ ಸ್ಕೂಟಿಯ ಹಿಂಬದಿಯ ಚಕ್ರದ ಮೇಲೆ ಇಟ್ಟು ನನ್ನ ಸ್ಕೂಟಿ ಸ್ಟಾರ್ಟ್ ಮಾಡಿದೆ ಅವಳ ಸ್ಕೂಟಿ ಮುಂದೆ ಹೋಗಲಾರಂಭಿಸಿತು. ಅಲ್ಲ ನನ್ನ ಕಾಲು ಅದನ್ನ ತಳ್ಳುತ್ತಿತ್ತು
ಪೆಟ್ರೋಲ್ ಬಂಕ್ ಹತ್ತಿರ ಬರುತ್ತಿದ್ದಂತೆ ಅವಳಿಗೆ ಮುಂದೆ ಹೋಗಲು ಹೇಳಿದೆ.
ಸ್ವಲ್ಪ ಹೊತ್ತು ತಡೆಯಲು ಹೇಳಿದಳು .ಟೈಮ್ ಆಗುತ್ತಿದೆ ಎಂದರೂ ಒತ್ತಾಯಿಸಿದಳು
ಪೆಟ್ರೋಲ್ ಹಾಕಿಸಿಕೊಂಡು ಬರುತ್ತಿದ್ದಂತೆ
"ನಿಮ್ಮ ಜೊತೆ ಮಾತಾಡಬೇಕು " ಎಂದಳು
"ಸಾರಿ ನಂಗೆ ಟೈಮ ಆಗಿದೆ ಹೋಗಬೇಕು " ಎಂದೆ.
"ಪ್ಲೀಸ್ ಕೇವಲ ಐದೇ ನಿಮಿಷ" ಬೇಡಿಕೊಂಡಳು
ಸರಿ ಅಲ್ಲೇ ಮರದಡಿಯಲ್ಲಿ ನಿಲ್ಲುತ್ತಿದ್ದಂತೆ
"ರಾಜೀವ್ ಅಲ್ವಾ ನಿಮ್ಮಹೆಸರು" ನಾನು ಬೆಕ್ಕಸ ಬೆರಗು
"ನಿಮಗೆ ಹೇಗೆ ಗೊತ್ತಾಯ್ತು?" ಬಾಯಲ್ಲಿದ್ದ ಪ್ರಶ್ನೆ ಹೊರಗೆ ಬರುವುದರಲ್ಲಿ ಅವಳೇ ಹೇಳಿದಳು
"ನಾನು ನಿಮ್ಮನ್ನ ದಿನಾ ನಿಮ್ಮ ಆಫೀಸ್ ಹತ್ರ ನೋಡ್ತೀನಿ. " ನಾನು ಅವಳನ್ನ ಯಾವತ್ತೂ ನೋಡೇ ಇಲ್ಲ
"ರಿಯಲ್ಲಿ ಯು ಆರ್ ಸ್ಮಾರ್ಟ್ ಅಂಡ್ ಹ್ಯಾಂಡ್ಸಮ್ . ನಂಗಂತೂ ನಿಮ್ಮನ್ನ ನೋಡದೆ ಇರೋಕಾಗಲ್ಲ ಅನ್ನೋ ಲೆವೆಲಿಗೆ ಪ್ರೀತಿ ಬಂದುಬಿಟ್ಟಿದೆ. "
ನನಗೆ ತಲೆ ಚಿಟ್ಟು ಹಿಡೀತು
"ಅಲ್ಲಾರಿ ನೀವ್ಯಾರು ಏನೂ ಒಂದು ಗೊತ್ತಿಲ್ಲದೆ ಇರೋವರ ಹತ್ರ ನಿಮ್ಮನ್ನ ಪ್ರೀತಿಸ್ತೀನಿ ಅಂತೀರಲ್ಲ? ಬುದ್ದಿಇದೆಯಾ? ಇದೆಲ್ಲಾ ಆಗೋ ಕೆಲ್ಸ ಅಲ್ಲ ಇನ್ನ್ಯಾರಾದಾರೂ ಇದ್ರೆ ನೋಡ್ಕೊಳ್ಳಿ" ರೇಗಿದೆ
"ರಾಜೀವ್ ನಾನು ಐಬಿಎಮ್ ನಲ್ಲಿ ಕೆಲಸ ಕೈಗೆ ತಿಂಗಳಿಗೆ ಲಕ್ಷ ಬರುತ್ತೆ. " ನಾನು ದಂಗು ನನ್ನ ಸಂಬಳದ ಐದರಷ್ಟು ಇರಲಿ ಬಿಡು ಸಾಫ್ಟ್‌ವೇರ್ ಅಲ್ಲವಾ.
ಅವಳು ಹೇಳುತ್ತಲೇ ಇದ್ದಳು
"ನಿಮ್ಮ ಪ್ರೀತಿಗೋಸ್ಕರ ನಾನು ಯಾವುದಕ್ಕೂ ರೆಡಿ. ಪ್ಲೀಸ್ ಇಲ್ಲಾಂತ ಹೇಳ್ಬೇಡಿ" ಮಳೆ ಹನಿಯಲಾರಂಭಿಸಿತು. ವಾತಾವರಣ ತಣ್ಣಗಾಯ್ತು.
ಏನು ಹೇಳೋದು
"ನೋಡಿ ನಾನಾಗಲೆ ಒಬ್ಬಳ ಬಂಧಿ. ಅವಳಿಗೆ ಮೀಸಲು. ನೀವು ಬೇರೆ ಯಾರಿಗಾದರೂ ಈ ಆಫರ್ ಕೊಟ್ಟರೆ ಖಂಡಿತಾ ವರ್ಕ್ ಔಟ್ ಆಗುತ್ತೆ."
"ಅವಳು ನನಗಿಂತ ಚೆನ್ನಾಗಿದ್ದಾಳಾ?" ನನ್ನ ಕಣ್ಣಲ್ಲಿ ಕಣ್ಣನ್ನಿಟ್ಟು ಪ್ರಶ್ನಿಸಿದಳು
ನೆಟ್ಟ ಕಣ್ಣಿನಿಂದ ಇನ್ನೇನು ಕೊಂದೇಬಿಡುತ್ತಾಳೇನೋ ಎಂಬಂತೆ ನೋಡತೊಡಗಿದಳು.
ಆ ಕಣ್ಣಲ್ಲಿ ಏತಕೋ ಆಹ್ವಾನ. ತುಟಿಯಲ್ಲಿ ಮಿಂಚಿನ ನಗೆ, ಐಶ್ ಅಲ್ಲ ಯಾರೂ ಇವಳ ಮುಂದೆ ನಿಲ್ಲಲಾಗುವುದಿಲ್ಲ ಎನ್ನಿಸಿತು ಅವರ್ಯಾರು ಇರಲಿ ನಂಗೆಇವಳ ಮುಂದೆ ನಿಲ್ಲಕಾಗ್ತಿರಲಿಲ್ಲ. ಅಂತಹ ಮಾದಕ ಸೌಂದರ್ಯ ಅವಳದು . ಸಿರಿ ಇವಳ ಮುಂದೆ ಏನೂ ಅಲ್ಲ . ಗೋದಿ ಬಣ್ಣದ ಸಿರಿ ಇವಳ ಹಾಲು ಮೈಬಣ್ಣದ ಮುಂದೆ ಮಂಕಾಗಿ ಕಾಣುತ್ತಾಳೆ. ಯೋಚಿಸುತ್ತಲೇ ಇದ್ದೆ
ಸ್ವಲ್ಪ ಹೊತ್ತು ಆ ಕಂಗಳ ಮೋಡಿಗೆ ಸಿಲುಕಿದೆ. ಮೆಲ್ಲಗೆ ಬೀಳುತಿದ್ದ ತುಂತುರು ಹನಿಯಿಂದ ವಾತವರಣ ಹಿತಕರವಾಗಿತ್ತು. ಮೆಲ್ಲನೆ ಬಾ ಎನ್ನುವಂತೆ ನನ್ನತ್ತ ಕೈ ಚಾಚಿದಳು . ನಾನು ಇನ್ನೇನು ಕೈ ಚಾಚಿಬಿಡಬೇಕು. ಅಷ್ಟರಲ್ಲಿ ಸಿರಿಯ ಮುಖ ಕಣ್ಣೆದುರು ಬಂದಿತು. ನನ್ನ ಕೈ ಇದ್ದಕಿದ್ದಂತೆ ಹಿಂದೆ ಬಂದಿತು
"ಸಾರಿ ನನ್ನವಳು ಎಲ್ಲರಿಗಿಂತ ಸುಂದರಿ "ಎಂದಷ್ಟೇ ಹೇಳಿ ನನ್ನ ಸ್ಕೂಟಿಯ ಬಳಿ ಬಂದೆ
"ಪ್ಲೀಸ್" ಕೈ ಹಿಡಿದೆಳೆದಳು. ಅದೆಲ್ಲಿತ್ತೋ ಕೋಪ
"ಒಬ್ಬ ಹೆಣ್ಣಾಗಿ ಹೀಗೆ ಮಾಡಬೇಡಿ. ಬಿಹೇವ್ ಯುವರ್ಸೆಲ್ಫ್"
ಎಂದು ಹೇಳಿ ಸ್ಕೂಟಿ ಹತ್ತಿದೆ ಅವಳೇನು ಮಾಡ್ತಿದಾಳೋ ಅದನ್ನೂ ನೋಡಲಿಲ್ಲ
ಸೀದಾ ಬಂದೆ. ಸ್ವಲ್ಪ ದೂರ ಬಂದಮೇಲೆ ಮನಸ್ಸು ಸ್ಥಿಮಿತಕ್ಕೆ ಬಂದಿತು
ಅಲ್ಲೇ ಕಾಮತ್ ಹೋಟೆಲ್‌ನಲ್ಲಿ ಕಾಫಿ ಕುಡಿದೆ ಸಿಗರೇಟ್ ಸೇದಲೇ ಬೇಕೆನಿಸಿತು. ಸಿಗರೇಟು ತೆಗೆದು ಬಾಯಿಗಿಡುತ್ತಿದ್ದಂತೆ
"ನೀವೋ ನಿಮ್ಮಹಾಳು ಸಿಗರೇಟೋ, ನನಗೆ ಇಷ್ತಾನೆ ಇಲ್ಲ " ಎನ್ನುವ ಸಿರಿಯ ಮಾತು ನೆನಪಿಗೆ ಬಂದಿತು. ಸಿಗರೇಟ್ ಬಿಸಾಡಿದೆ
ಏಳುಘಂಟೆಗೆ ಹತ್ತು ನಿಮಿಷ ಇದೆ. ಆಮೇಲೆ ಸಿರಿ ಕೋಪಿಸಿಕೊಂಡರೆ
ಕೂಡಲೆ ಫಾಸ್ಟ್ ಆಗಿ ಡ್ರೈವ್ ಮಾಡಿಕೊಂಡು ಬಂದೆ
ಸಿರಿ ಗೇಟ್ ಬಳಿಯಲ್ಲೇ ನಿಂತಿದ್ದಳು
ರಾಜೀವ್ ಬಂದ್ರಾ ಆಗಲೆ ಪ್ರೋಗ್ರಾಮ್ ಶುರು ಆಗಿದೆ." ಸಂಭ್ರಮದಿಂದ ಒಳಗೆ ಕರೆದುಕೊಂಡು ಹೋದಳು
ಏನೋ ಪ್ರೋಗ್ರಾಮ್. ಒಂದುಪುಸ್ತಕ ಬಿಡುಗಡೆಗೆ ಇಷ್ಟೊಂದು ಪ್ರಚಾರ ಬೇಕಾ.
ಇಷ್ಟೊಂದು ಮಾತಾಡ್ತಾರಲ್ಲ ಭಾಷಣ ಅಂದ್ರೆ ತಲೆ ಕೊರಿಯುವರಿಗೊಂದು ವರ ಇದ್ದ ಹಾಗೆ. ಅದ್ಯಾರೋ ಬಂದ್ರು ಸನ್ಮಾನ ಅದೂ ಇದೂ ನಡೀತಿತ್ತು. ಒಳ್ಲೇ ಚೈನೀಸ್ ಫಿಲ್ಮ್ ನೋಡಿದ ಅನುಭವ ಆಗ್ತಿತು." ಮಾತನ್ನೂ ಸಾಹಿತ್ಯ ಭಾಷೇಲೆ ಮಾತಾಡಬೇಕಾ?" ಏನೂ ಅರ್ಥವಾಗ್ರ್ತಿರಲಿಲ್ಲ. ಯಾರು ಏನು ಅನ್ನೋದು ತಿಳೀತಿರಲಿಲ್ಲ
ಇವಳು ಮಾತ್ರ ಹಲ್ಲು ಕಿರಿದುಕೊಂಡು ಪ್ರತಿಸಲಾನು ಚಪ್ಪಾಳೆ ತಟ್ಟೋದು ಅವಳನ್ನ ನೋಡಿ ನಾನು ಚಪ್ಪಾಳೆ ತಟ್ತಾ ಇದ್ದೆ.ಏನು ಮಾಡೋದು ಎಲ್ಲಾ ಹೆಂಗಸರಿಗಾಗಿ . ಮದುವೆಗೆ ಮುಂಚೇನೆ ಹೀಗೆ, ಇನ್ನು ಮದುವೆಯಾದ ಮೇಲೆ ದೇವರೆ ಕಾಪಾಡಪ್ಪ, ಕಾಣದ ದೇವರನ್ನು ಕರೆದಿದ್ದಕ್ಕೆ ಮನಸಲ್ಲೇ ನಗು ಬಂತು
ಕೊನೆಗೆ ಆ ಪ್ರುಸ್ತಕ ಒಂದು ಘಂಟೆಯವರೆಗೆ ಅವರಿವರ ಕೈನಲ್ಲಿ ಮುಟ್ಟಿಸಿಕೊಂಡು ಬಿಡುಗಡೆಯಾಯ್ತು. ನನಗೂ ಆ ಸಮಾರಂಭದ ಸೆರೆಯಿಂದ ಬಿಡುಗಡೆ ಆಯ್ತು.
ಬರ್ತಾ ಸಿರಿಗೆ ಎಲ್ಲಾ ವಿವರಿಸಿದೆ. ಸ್ವಲ್ಪ ಹೆಮ್ಮೆಯಿಂದಲೇ.
ಅವಳು ನಗುತ್ತಾ ಹಿಂದೆ ನೋಡಿದಳು. ನಂಗೆ ದಿಗ್ಭ್ರಮೆ
ಆ ಮಿನಿ ಸುಂದರಿ ನಿಂತಿದ್ದಳು. ಅವಳು ಸಿರಿಯ ಸ್ನೇಹಿತೆ. " ರಿಯಲ್ಲಿ ಯು ಆರ್ ಲಕ್ಕಿ " ಅಂತ ಸಿರಿಗೆ ಹೇಳುತಿದ್ದಳು
ನನ್ನನ್ನ ಪರೀಕ್ಷೆ ಮಾಡೋಕಂತ ಹೀಗೆ ಮಾಡಿದ್ದಳಂತೆ
ಕೋಪ ಬಂತು. ಹೀಗಾ ಮಾಡೋದು.
ಕೋಪಿಸಿಕೊಂಡೇ ಬಂದು ಸ್ಕೂಟಿ ಶುರು ಮಾಡಿದೆ.
"ರಾಜೀವ್ ಪ್ಲೀಸ್ . ಅವಳ ಕೂಗು ಕೇಳಿ ನಿಂತೆ. ಕೋಪಏನೂ ಇರಲಿಲ್ಲ ಸುಮ್ನೆ ಹಾಗೆ ನಟಿಸುತ್ತಿದ್ದೆ. ಮನದಲ್ಲಿ ಹೆಮ್ಮೆ ನಾನು ನಿನ್ನ ಪರೀಕ್ಷೇಲಿ ಗೆದ್ದೆ.
"ಸಾರಿ ರೀ. ಅದೂ ನಾನು ನಿಮ್ಮನ್ನ ತುಂಭಾ ಹೊಗಳುತಿದ್ದೆ . ಅದಕ್ಕೆ ಒಂದು ಟೆಸ್ಟ್ ಮಾಡೋಣ ಅಂತ ನನ್ನ ಫ್ರೆಂಡ್ ಹೇಳಿದಳು. ಕೊನೆಗೂ ನಾನೆ ಗೆದ್ದೆ"
ಆ ಮಿನಿ ಸುಂದರಿ ಬಂದು "ಸಾರಿ ಮಿ ರಾಜೀವ್, ನಿಮಗೆ ಬೇಸರ ಆಗಿದ್ದರೆ. ಆದರೆ ಈ ಪರೀಕ್ಷೇಲಿ ನಿವು ಗೆದ್ದಿರಿ.ಕಂಗ್ರಾಟ್ಸ್" ಎಂದಳು
(ಮುಂದುವರೆಯುವುದು)