Wednesday, September 2, 2009

ಎರೆಡು ದಡಗಳ ನಡುವೆ-ಭಾಗ ನಾಲಕ್ಕು

ಅಂದು ಎಂದಿನಂತೆ ಅದೇ ಉದಾಸೀನತೆಯಿಂದ ಆಫೀಸಿಗೆ ಬಂದವಳಿಗೆ ಮತ್ತೆ ರಾಬರ್ಟ್‌‍ನ ಮೇಲ್ ಕಾಣಿಸಿತು.



"ಪ್ಲೀಸ್ ಕಮ್ ಆನ್‍ಲೈನ್"



ನೆನ್ನೆ ಸಹಾ ಹೀಗೆ ಹೇಳಿದ್ದ . ಹೋದರೆ "ಹ್ಯಾಡ್ ಯುವರ್ ಬ್ರೇಕ್ ಫಾಸ್ಟ್ ?"ಅದೂ ಇದೂ ಎಂದು ತಲೆ ತಿನ್ನುತ್ತಾನೆ. ಯಾವ ಇಶ್ಯೂಸೂ ಇರುವುದಿಲ್ಲ.



ಶೈಲಾ ಚಾಟಿಂಗ್ ಸ್ವಿಚ್ ಮಾಡಲಿಲ್ಲ.



ಬೆಳಗ್ಗೆ ಉಡುಪಿ ಸಾಗರ್ ಎಂಬ ಹೆಸರಿದ್ದ ಹೋಟೆಲಿಗೆ ಹೋಗಿ ನಾಲಿಗೆ ಕೆಡಿಸಿಕೊಂಡಿದ್ದಳು. ತಿಂಡಿ ಒಂದು ಚೂರು ಚೆನ್ನಾಗಿರಲಿಲ್ಲ.



ಯಾವುದೋ ಫೈಲ್ ಕರಪ್ಟ್ ಆಗಿದೆ ಎಂದು ಕ್ಲೈಂಟ್‌ ಒಬ್ಬರ ಕಾಲ್ ಬಂತು . ಮನಸಿಲ್ಲದ ಮನಸಲ್ಲಿ ಕೆಲಸ ಶುರು ಮಾಡಿದಳು




************************************




ಸಿರಿಗೆ ಇಡ್ಲಿ ಬಡಿಸುತ್ತಿದ್ದಂತೆ ಮನುವಿನ ammana ಕೈ ಅರ್ಧಕ್ಕೆ ನಿಂತಿತು.




"ಯಾಕಮ್ಮ ಏನಯ್ತು" ಮನು ತಲೆ ಎತ್ತಿದ . ಸಿರಿ ತಲೆ ಎತ್ತಿ ಅಜ್ಜಿಯನ್ನು ನೋಡಿತು




ಅಮ್ಮನ ಕಣ್ಣಲ್ಲಿ ನೀರು .




"ಯಾಕಮ್ಮ ?"




"ಅವಳು ಹೀಗ್ಮಾಡ್ತಾಳಂತ ಅಂದ್ಕೊಂಡಿರಲಿಲ್ಲ ಕಣೋ ನಾನು. ಅವಳನ್ನ್ ಬಿಟ್ಟಿರೋದಿಕ್ಕೆ ತುಂಬಾ ಕಷ್ಟವಾಗ್ತಿದೆ. ಸೊಸೆ ಅಲ್ಲ ಮಗಳಂತೆ ಬೆಳೆಸಿದ್ದೆ. ಈ ಸಿರೀನಾ ಬೆಳೆಸ್ತಿರೋ ಕೈ ಅವಳ ಅಮ್ಮನನ್ನೂ ಬೆಳೆಸಿತು. ಎಲ್ಲಿ ಕೊರತೆಯಾಗಿತ್ತು ಕಣೋ ಅವಳಿಗೆ ನನ್ನ, ನಿನ್ನ ಪ್ರೀತಿಲಿ "ಜೋರಾಗಿ ಅಳಲಾರಂಭಿಸಿದರು. ಸಿರಿ ಬೆದರಿದಳೆನಿಸುತ್ತದೆ. ಅಳಲಾರಂಭಿಸಿದಳು




ಅವಳನ್ನು ಎತ್ತಿ ಸಮಾಧಾನ ಪಡಿಸಿದ ಮನು




ಅಮ್ಮನತ್ತ ತಿರುಗಿ




"ಅಮ್ಮಾ ಆಗಿದ್ದು ಆಗಿ ಹೋಯ್ತು. ಅವಳಿನ್ನು ನಮ್ಮ ಪಾಲಿಗಿಲ್ಲ. ಅವಳಿಲ್ಲ ಎಂಬ ನಮ್ಮ ಖೇದಕ್ಕಿಂತ ಅವಳು ಅಲ್ಲಿ ಸಂತೋಷವಾಗಿದ್ದಾಳೆ ಎಂಬುದು ಮುಖ್ಯ ಅಮ್ಮ. ಇನ್ನು ನಮ್ಮ ಪಾಲಿಗಿರೋದು ಈ ಮಗು . ಇದನ್ನ ಚೆನ್ನಾಗಿ ನೋಡಿಕೊಳ್ಳೋಣ ಇದನ್ನೇ ಶೈಲಾ ಅಂತಂದುಕೊಳ್ಳೋಣ "




ಸಿರಿಗೆ ಮುತ್ತು ನೀಡಿದ.




ಮಗುವನ್ನು ಅಮ್ಮನ ಕೈಗೆ ಕೊಟ್ಟು ಕಾರಿನೆಡೆಗೆ ನಡೆದ.




ಇದನ್ನೆಲಾ ನೋಡುತ್ತಾ ನಿಂತಿದ್ದ ರಾಮು ಕಣ್ಣೊರೆಸಿಕೊಳ್ಳುತ್ತಲೇ ಕಾರ್ ಬಾಗಿಲು ತೆರೆದ.ಅವನೂ ಶೈಲಾಳನ್ನು ಆಡಿಸಿ ಬೆಳೆಸಿದವನೇ.




ಅವನ ಬೆನ್ನು ತಟ್ಟಿ ಕಾರ್ ಹತ್ತಿದ ಮನು.




ಕಾರ್‌ಗೊರಗಿ ಕೂರುತ್ತಿದ್ದಂತೆ ಕಾರ್ ಮುಂದೆ ಓಡಿತು . ಮನುವಿನ ಮನ ಹಿಂದೆಯೇ ಉಳಿಯಿತು




**********************************************




ಮೂರು ದಿನದಲ್ಲಿ ಬರುತ್ತೇನೆಂದು ಹೇಳಿದ ವಿಕಾಸ್ ಒಂದು ತಿಂಗಳಾದರೂ ಬಾರದಿದ್ದಾಗ ಶೈಲಾ ಹುಚ್ಚಿಯಾದಂತಾದಳು. ಊಟ ನಿದ್ದೆ ಬಿಟ್ಟಳು. ಮನುವಿನ ಬಳಿಇರಲಿ ಮಗುವಿನ ಬಳಿಯಲ್ಲೂ ಆಟವಾಡಲಿಲ್ಲ. ಕಂಪ್ಯೂಟರ್ ಅನ್ನು ಒಡೆದು ಹಾಕಿದಳು . ತನ್ನ ಬಳಿ ಇದ್ದ ಪುಸ್ತಕಗಳನ್ನೆಲಾ ಹರಿದಳು. ಮೊದಲ ಬಾರಿ ಅವಳ ಬಯಕೆಯ ವಸ್ತು ಅವಳಿಗೆ ಸಿಕ್ಕಿರಲಿಲ್ಲ




ಮನು ಇದನ್ನೆಲ್ಲಾ ಗಮನಿಸುತ್ತಿದ್ದಂತೆ ಅವನ ಮನದಲ್ಲಿ ಕೋಲಾಹಲವಾಗಿತ್ತು.




ಅವಳಿಗೇನಾಯ್ತು ಎಂಬುದು ಯಾರಿಗೂ ತಿಳಿಯಲಿಲ್ಲ . ಮನು ಬಹಳವೇ ಹೆದರಿದ್ದ. ಅವಳ ಸಂಕಟ ನೋಡಲಾಗದೆ ಮನೆಯವರೆಲ್ಲಾ ಒದ್ದಾಡಿದರು




ಯಾವುದನ್ನೂ ಬಾಯಿ ಬಿಟ್ಟು ಹೇಳದ ಶೈಲಾ ಒಗಟಾಗಿದ್ದಳು. ಎಷ್ಟು ಸಮಾಧಾನ ಮಾಡಿ ಕೇಳಿದರೂ ತನಗೇನಾಗಿದೆ ಎಂಬುದನ್ನು ಅವಳು ಹೇಳಲಾರದವಳಾಗಿದ್ದಳು.




ಒಟ್ಟಿನಲ್ಲಿ ಕಂಪ್ಯೂಟರ್ ಕಲಿಯಲು ಆಗದಿದ್ದುದಕ್ಕೆ ಈ ರೀತಿ ಆಡುತ್ತಿದ್ದಾಳೆ ಎಂದು ಭಾವಿಸಿದರು




ಕೊನೆಗೊಮ್ಮೆ ವಿಕಾಸ್ ಮರಳಿದ .




*******************************************************



ಅಂದೇ ತನಗೇನಾದರೂ ತುಸು ಸುಳಿವಾದರೂ ಸಿಕ್ಕಿದ್ದರೆ ಪರಿಸ್ಥಿತಿಯನ್ನ ಇಲ್ಲಿಯವರೆಗೆ ಬರಲು ಬಿಡುತ್ತಿರಲಿಲ್ಲ ಎನಿಸಿತು ಮನೂಗೆ . ಹಾಗೆ ಗೊತ್ತಾಗಿದ್ದರೂ ಮಾಡಲಾದರೂ ಏನಿತ್ತು? ಮರುಕ್ಷಣದಲ್ಲೇ ಮನದ ಮೂಲೆಯಲ್ಲಿನ ಸತ್ಯ ವ್ಯಂಗ್ಯವಾಡಿತು. ಒಮ್ಮೆ ಅವಳ ಮನಸಲ್ಲಿ ತನ್ನ ಸ್ಥಾನ ಇನ್ನೊಬ್ಬರದಾಗಿ ಹೋದಾಗ ಮನಸನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದನಿಸಿತು.



ಅವಳ ಇಲ್ಲದಿರುವಿಕೆ ತನ್ನನ್ನೂ ಬಹಳ ಕಾಡುತ್ತಿದೆ ಎಂಬುದು ಮನೂಗೂ ಚೆನ್ನಾಗಿ ಗೊತ್ತು ಆದರೂ ಅದನ್ನು ತೋರಿಸಲು ಅವನಿಗೆ ಆಗಲಿಲ್ಲ. ಅವನು ಹಾಗೆಯೇ . ಯಾವದನ್ನೂ ಹೊರಗೆ ತೋರಿಸಿದವನಲ್ಲ . ತನ್ನಲ್ಲಿಲ್ಲದ ಯಾವ ಗುಣವನ್ನು ಅವಳು ವಿಕಾಸನಲ್ಲಿ ಕಂಡಳು ಎನ್ನುವ ಪ್ರಶ್ನೆಗೆ ಅದೇ ಉತ್ತರವಾಗಿತ್ತು ಎಂಬುದೂ ಅವನಿಗೆ ಗೊತ್ತಿರದ ವಿಷಯವೇನಾಗಿರಲಿಲ್ಲ.



ಹಿಂದೆ ಓಡುತ್ತಿದ್ದ ಮನಸನ್ನ ಮುಂದೆ ಚಲಿಸುವ ಪ್ರಯತ್ನ ಮಾಡಿದ .



***************************************************************



ವಿಕಾಸ್ ಆಫೀಸಿಗೆ ಬಂದು ಲಾಗಿನ್ ಆದ . ವಾಲ್ ಪೇಪರ್‌ನಲ್ಲಿ ನಗುತ್ತಿದ್ದಳು ಶೈಲಾ. ಈ ನಗು ಮುಗ್ಧತೆಯೇ ತನ್ನನ್ನು ಮತ್ತೆ ಊರಿನಿಂದ ಕರೆಸಿಕೊಂಡಿತಲ್ಲವೇ?



ಶೈಲಾಗೆ ತನ್ನ ಮೇಲೆ ಪ್ರೇಮವಾಗುತ್ತಿದೆ ಎಂಬುದು ತಿಳಿಯುತ್ತಲೇ ತಾನು ಅವಳಿಂದ ಮರೆಯಾಗಬಯಸಿ ಊರಿಗೆ ಬಂದದ್ದೇನೋ ನಿಜ . ತಾನೆಂದೂ ಅವರ ಬಾಳನ್ನು ಹಾಳುಮಾಡುವ ಯೋಚನೆಯನ್ನು ಮಾಡಿರಲಿಲ್ಲ.ಆದರೆ ಊರಿಗೆ ಹೋಗಿ ಕೇವಲ ಒಂದೇವಾರಕ್ಕೆ ಅವಳ ನಗು ಮಾತು ತನ್ನನ್ನು ಕಾಡಲಾರಂಭಿಸಿತು. ತಾನೇನು ಅವಳನ್ನು ಪ್ರೀತಿಸುತ್ತಿದ್ದೇನೆಯೇ ಎಂಬುದೂ ಅರ್ಥವೂ ಆಗಲಿಲ್ಲ. ಒಂದು ವೇಳೆ ಇದು ಪ್ರೀತಿಯಾಗಿದ್ದರೆ ತಪ್ಪಾಗುತ್ತದೆಯೇ ಅಥವ ಮದುವೆಯಾದವಳನ್ನು ಅದೂ ಇನ್ನೊಬ್ಬರ ಆಸ್ತಿಯನ್ನು ತನ್ನದಾಗಿಸಿಕೊಳ್ಳುವ ಯೋಚನೆಯೇ? ನಂಬಿ ತನ್ನನ್ನು ಅಲ್ಲಿ ಕೆಲಸಕ್ಕೆ ನೇಮಿಸಿಕೊಂಡಿರುವ ಆ ಸಜ್ಜನ ಮನುವಿಗೆ ದ್ರೋಹ ಬಗೆಯಬಾರದು . ಯೋಚನೆಗಳ ಸಾಲು ಸಾಲು ಮುಂದೆ ನಿಂತೆ ಅಣಕಿಸಲಾರಂಭಿಸಿದಾಗ ದಿಕ್ಕು ತೋಚದವನಾಗಿರಲಿಲ್ಲವೇ?
ಜೊತೆಗೆ ಶೈಲಾಳ ಮೇಲ್ ಸಹಾ ತನ್ನನ್ನು ಇನ್ನಷ್ಟು ಹಣ್ಣು ಮಾಡಿತು. ಅವಳು ತಾನು ಮತ್ತೆ ಬರದೇ ಇದ್ದರೆ ತನ್ನ ಪ್ರಾಣವನ್ನೇ ಕಳೆದುಕೊಳ್ಳುವುದಾಗಿ ಹೆದರಿಸಿದ್ದಳು.
ಏನೇ ಆಗಲಿ ಇದನ್ನು ಮನುವಿಗೆ ಸೂಕ್ಷ್ಮವಾಗಿ ಹೇಳಿ ನಯವಾಗಿ ತಪ್ಪಿಸಿಕೊಳ್ಳಬೇಕೆಂದು ಯೋಚಿಸಿ ತಾನೇ ತಾನು ವಾಪಾಸ್ ಬೆಂಗಳೂರಿಗೆ ಮತ್ತೆ ಬಂದದ್ದು?

ಆದರೆ ಮತ್ತೆ ಶೈಲಾಳನ್ನು ನೋಡುತ್ತಿದ್ದಂತೆ ಮನಸು ಸ್ಥಿಮಿತ ತಪ್ಪಿತು. ಕಡಿವಾಣವಿಲ್ಲದ ಕುದುರೆಯಂತೆ ಮನಸು ತಪ್ಪಾದರೂ ಸರಿ ಶೈಲಾಳನ್ನು ತನ್ನವಳನ್ನಾಗಿ ಮಾಡಿಕೊಳ್ಳಬೇಕೆಂಬ ಹುಚ್ಚು ನಿರ್ಣಯಕ್ಕೆ ಬಂದಿತು.



ಸ್ವಲ್ಪ ಹೊತ್ತು ಭೂತದಲ್ಲಿ ಅಡಗಿ ಹೋಗಿದ್ದ ಮನ ವರ್ತಮಾನಕ್ಕೆ ಬರಲೇ ಬೇಕಾಯ್ತು. ಕೆಲಸ ಮುಗಿಸದಿದ್ದರೆ ನೆನ್ನೆ ರಮೇಶ್ ಇಂದು ಪ್ರೀತಿ ನಾಳೆಯ ಹೆಸರು ತನ್ನದಾಗಿರಬಹುದು ಪಿಂಕ್ ಸ್ಲಿಪ್ ಪಡೆಯಲು ಎಂದೆನಿಸಿ ಕೋಡಿಂಗ್ ಸಾಮ್ರಾಜ್ಯದಲ್ಲಿ ತೊಡಗಿದ

********************************

"ಅಲ್ಲಾ ಕಣೇ ಶೈಲಾ ಮನು ಥರಾ ಒಳ್ಳೇ ಗಂಡನ್ನ ಬಿಟ್ಟು ವಿಕಾಸನ ಬಗ್ಗೆ ಆಕರ್ಶಣೆ ಹುಟ್ಟೋಕೆ ಕಾರಣವಾದರೂ ಏನು . ನಾನೊಂದು ಮಾತು ಹೇಳ್ತೀನಿ ಕೇಳು ನಿಂಗೆ ವಿಕಾಸ್ ಮೇಲಿರೋದು ಮೋಹ . ಅದು ಮೋಡದಲ್ಲಿರೋ ಮಳೆ ಥರ.ಬೀಳೋ ತನಕ ತವಕ . ಬಿದ್ದ ಮೇಲೆ ಸ್ವಲ್ಪಹೊತ್ತು ಪುಳಕ ಮತ್ತೆ ಜೀವನದ ಬಿಸಿಲು ಬಿದ್ದಾಗ ಅದರ ತಂಪು ಮಾಯ ಆಗಿರುತ್ತೆ . ಆದರೆ ಮನು ಒಂದು ಜೀವನದಿ ಇದ್ದ ಹಾಗೆ . ಸದಾ ಸಂತಸದ ಒರತೆ .ನಿನ್ನ ಯೋಚನೇನ ಬದಲಾಯಿಸಿಕೋ ದಯವಿಟ್ಟು. ನೀನು ಹೋಗುತ್ತಿರವ ದಾರಿ ಸರಿಯಲ"

ಗೆಳತಿ ಸಂಗೀತಾ ಮೇಲ್‌ನಲ್ಲಿ ಕಳಿಸಿದ್ದ ಮಾತುಗಳು ಮತ್ತೆ ಮತ್ತೆ ಕಣ್ಣ ಮುಂದೆ ಬಂದು ಚುಚ್ಚುತ್ತಿದ್ದವು,ಶೈಲಾಗೆ. ತಾನು ವಿಕಾಸನ ಮೋಹಕ್ಕೆ ಬಿದ್ದಾಗ ಅವಳಿಗೆ ನೆನಪಾಗಿದ್ದೇ ಸಂಗೀತ . ಅವಳ ಆತ್ಮೀಯ ಗೆಳತಿ, ಡೆಲ್ಲಿಯಲ್ಲಿದ್ದಳು. ಅವಳದೂ ಲವ್ ಮ್ಯಾರೇಜ್ . ಮನೆಯವರನ್ನೆಲ್ಲಾ ವಿರೋಧಿಸಿ ತಾ ಮೆಚ್ಚಿದ ಪ್ರತೀಕ್‌ನ್ನ ಮದುವೆಯಾಗಿದ್ದಳು. ಹಾಗಾಗಿ ಈ ವಿಷಯದಲ್ಲಿ ಅವಳ ಸಹಾಯ ಪಡೆಯುವ ಎಂದು ಅವಳಿಗೆ ಮೇಲ್ ಮಾಡಿದ್ದಳು ಶೈಲಾ . ಆದರೆ ಸಂಗೀತಾ ಮರು ಓಲೆ ಕಳಿಸಿ ಚೆನ್ನಾಗಿ ಬೈದಿದ್ದಳು. ಅದನ್ನೆಲ್ಲಾ ನೋಡಿ ಸರಿ ಹೋಗುತ್ತಿದ್ದಳೇನೋ ಶೈಲಾ ಆದರೆ ಮತ್ತೆ ಬಂದ ವಿಕಾಸ್. ಅವಳು ಎಂದೂ ಮರಳದ ದಾರಿಗೆ ಕರೆದಿದ್ದ. ಅವಳನ್ನು ಬಿಟ್ಟು ಇರಲು ಆಗದೆ ಒದ್ದಾಡಿ ವಾಪಾಸ್ ಬಂದಿದ್ದ ವಿಕಾಸ್‌ . ಅಷ್ಟೇ ಅವಳ ಕಣ್ಣು , ಮನಸು ಕುರುಡಾಯ್ತು. ವಿಕಾಸನ ಜೊತೆ ಹಾರಲು ಮನಸು ಸಿದ್ದವಾಗಿತ್ತು.

ಎವ್ರಿ ಥಿಂಗ್ ಈಸ್ ಫೇರ್ ಇನ್ ಲವ್ ಅಂಡ್ ವಾರ್ ಎನ್ನುವ ನೀತಿ ಅವಳ ನೆನಪಿಗೆ ಬರುತ್ತಿತ್ತು ಹಾಗಾಗಿ ತಾನು ಮಾಡುತ್ತಿರುವುದು ತಪ್ಪೇ ಸರಿಯೇ ಎಂಬುದನ್ನು ಯೋಚಿಸಲೂ ಸಿದ್ದಳಿರಲಿಲ್ಲ. ವಿಕಾಸ್ ಜೊತೆ ಶಾಪಿಂಗ್ ಅಲ್ಲಿ ಇಲ್ಲಿ ಸಿನಿಮಾಗೆ ಹೋಗುತ್ತಿದ್ದಳು. ಮನುವಿನಿಂದ ಉದ್ದೇಶ ಪೂರ್ವಕವಾಗಿ ದೂರವಾಗತೊಡಗಿದಳು. ಪ್ರೇಮ ಲೋಕದಲ್ಲಿ ಎರೆಡೂ ಹಕ್ಕಿಗಳೂ ಸಂತಸದಿಂದ ಕುಣಿದು ಕುಪ್ಪಳಿಸುತ್ತಿದ್ದವು.ವಿಕಾಸನ ಜೊತೆಯ ಒಡನಾಟ ಮೂರು ತಿಂಗಳವರೆಗೆ ಕದ್ದು ಮುಚ್ಚಿಯೇ ನಡೆಯುತ್ತಿತ್ತು. ಯಾರಿಗೂ ಅವಳ ಮೇಲೆ ಸಂಶಯ ಬರುತ್ತಿರಲಿಲ್ಲ.

ಆದರೆ ಹಾಗೆಯೇ ಮುಂದುವರೆಯಲು ವಿಕಾಸ್ ಇಚ್ಚಿಸಲಿಲ್ಲ. ಅವನು ಶೈಲಾಳನ್ನು ತನ್ನ ಜೊತೆಗೆ ಕರೆದೊಯ್ಯಲು ಸಿದ್ದನಾದ. ಅಂತಹ ದಿನಕ್ಕೆ ಸನ್ನದ್ದಳಾಗಬೇಕಾದ ಪರಿಸ್ಥಿತಿ ಶೈಲಾಳಿಗೆ ಎದುರಾಯ್ತು.

*************************************************----------------------*********

ಒಂದು ವೇಳೆ ವಿಕಾಸ್ ಮರಳಿ ಬಾರದಿದ್ದರೆ ತಾನು ಅವನನ್ನು ಮರೆಯುತ್ತಿದ್ದೆನೇ ಪ್ರಶ್ನಿಸಿಕೊಂಡಳು ಶೈಲಾ. ಅಲ್ಲಿಂದ ಬಂದ ಇದ್ದಿರಬಹುದೇನೋ ಎಂಬ ಉತ್ತರ ಅವಳನ್ನು ಧೃತಿ ಗೆಡಿಸಿತು. ಅಂದರೆ ಸಂಗೀತ ಹೇಳಿದಂತೆ ಇದು ಕ್ಷಣಿಕ ಮೋಹವೇ. ತಾನು ವಿಕಿಯನ್ನು ಪ್ರೀತಿಸಲಿಲ್ಲವೇ? ಮತ್ತೆ ತನಗೂ ಹೂವಿಂದ ಹೂವಿಗೆ ಹಾರುವ ದುಂಬಿಗೂ ಯಾವ ವ್ಯತ್ಯಾಸವಿಲ್ಲವೇ? ಮನುವನ್ನೂ ವಿಕಾಸನನ್ನು ಒಟ್ಟಿಗೆ ಬಯಸುತ್ತಿದ್ದೇನೆಯೇ ತಾನು ?. ಇದು ವಿಷಯ ಲಂಪಟತನವಲ್ಲವೇ?

ಶೈಲಾಳ ಮನಸು ಪ್ರಶ್ನೆಗಳ ಗೂಡಾಗುತ್ತಿದ್ದಂತೆ. ಅದನ್ನು ಹೊರಲಾರದಂತೆ ತಲೆ ಭಾರವಾಯ್ತು. ಕಣ್ಣೀರಿನಿಂದ ಕಣ್ಣು ಮಂಜಾಯ್ತು. ತಲೆ ನೋವಿನಿಂದ ಸಿಡಿಯಲಾರಂಭಿಸಿತು. ಮಾನಸಿಕ ಒತ್ತಡ ತಾಳಲಾರದೆ ದುಡುಮ್ ಎಂದು ಚೇರ್ ‌ನಿಂದ ಬಿದ್ದುದಷ್ಟೆ ಅವಳ ನೆನಪು.

ಆಫೀಸಿನಲ್ಲಿದ್ದ ಜನರೆಲ್ಲಾ ಅವಳತ್ತ ಓಡಿದರು

[ ಆತ್ಮೀಯ ಸ್ನೇಹಿತ/ತೆಯರೆ

ನಿಮ್ಮೆಲ್ಲರ ಪ್ರೋತ್ಸಾಹದ ನುಡಿಗೆ ಮೆಚ್ಚುಗೆಯ ನುಡಿಗೆ ನನ್ನ ಧನ್ಯವಾದಗಳು. ಈ ಕತೆ ಇನ್ನೂ ಒಂದೆರೆಡು ಕಂತು ಎಳೆಯುವ ಸಾಧ್ಯತೆ ಇದೆ. ಏಕೆಂದರೆ ಕತೆಯ ಹರಿವು ಬಹಳ ದೊಡ್ಡದಿದೆ (ಇದನ್ನು ಶುರು ಮಾಡಿದಾಗ ನನಗೇ ಗೊತ್ತಿರಲಿಲ್ಲ . ಆದಿ ಗೊತ್ತಿತ್ತು. ಅಂತ್ಯ ಗೊತ್ತಿತ್ತು ಆದರೆ ಅದರ ದಾರಿಯ ವಿಸ್ತಾರ ತೆರೆದುಕೊಂಡಂತೆಲ್ಲಾ ಹರಡುತ್ತಿದೆ . ಇದೇ ಪ್ರೋತ್ಸಾಹವನ್ನು ಮುಂದುವರೆಸಿ ಎಂದು ಕೇಳಿಕೊಳ್ಳುತ್ತೇನೆ ಕೆಲಸದ ಒತ್ತಡವೂ ಹಾಗೆಯೇ ಇದೆ . ಹಾಗಾಗಿ ಸಮಯಾವಕಾಶವಿದ್ದಾಗ ಬರೆಯುತ್ತಿರುತ್ತೇನೆ]

*************************ಇನ್ನೂ ಇದೆ*************************************








ಅದು ಶಾಶ್ವತ ಅಲ್ಲ ಆದರೆ ಪ