Tuesday, June 2, 2009

ಪ್ರೇಮವೊಂದು ಹುಚ್ಚು ಹೊಳೆಯಲಿ ಭಾಗ ಮೂರು

ಬೆಳಗ್ಗೆ ಏಳುತ್ತಿದ್ದಂತೆ ಅಮರ್ ಪಾಲ್ ನೆನಪು ಬಂದಿತು.ಸ್ಮಿತಾಳ ಕನಸು ಜರ್ರನೆ ಇಳಿಯಿತು. ಅವನಿಗೇನಾದರೂ ಗೊತ್ತಾದರೆ ತನ್ನನ್ನ ಜೀವ ಸಹಿತ ಉಳಿಸುತ್ತಾನೆಯೇ ಭಯವಾಗತೊಡಗಿತು.. ಇಲ್ಲಿಂದ ಓಡಿ ಹೋಗಿ ಬಿಡುವ ಮನಸ್ಸಾಯ್ತು. ಕೂಡಲೆ ಬಟ್ಟೆ ಬರೆ ಎಲ್ಲವನ್ನೂ ಪ್ಯಾಕ್ ಮಾಡಿಕೊಂಡು ಯಾರಿಗೂ ಕಾಣದಂತೆ ಹೊರಟು ಬಿಡುವ ಎಂದುಕೊಂಡು ಬಾಗಿಲ ಬಳಿ ಬರುತ್ತಿದ್ದಂತೆ ರಾಜೀವ ಕಾಣಿಸಿದ.
"ಎಲ್ಲಿಗೆ ಹೋಗ್ತಿದೀರಾ ?ಹರೀಶ್" ಅವನ ದನಿಯಲ್ಲಿ ತನ್ನ ಮೇಲಿದ್ದ ಗೌರವ ವ್ಯಕ್ತ ವಾಯ್ತು. ಒಮ್ಮೆಲೇ ಬೆರಗಾದ ಹರೀಶ್ ಅಂದು ಲೋ ಎಂದು ಮಾತಾಡಿಸಿದವನಲ್ಲವೇ?
"ಅದೂ................ ನಾನಿಲ್ಲಿ ಕೆಲಸ ಮಾಡೊಲ್ಲ . ಮನೆಗೆ ಹೊರಟು ಹೋಗ್ತಾ ಇದ್ದೀನಿ" ತಡವರಿಸುತ್ತಾ ನುಡಿದ.
"ಹರೀಶ್ ನಿಮ್ಮನ್ನೇ ನಂಬಿರೋ ಹುಡುಗಿ ಕೈ ಬಿಡೋದು ಸರೀನಾ?" ತಣ್ಣಗೆ ಪ್ರಶ್ನಿಸಿದ ರಾಜೀವ್
ಅಚ್ಚರಿಯಾಯ್ತು. ಇವನಿಗೆ ಹೇಗೆ ಗೊತ್ತಾಯ್ತು
ಅವನತ್ತ ಪ್ರಶ್ನಾರ್ಥಕವಾಗಿ ನೋಡಿದ.
"ಹರೀಶ್ ಮೇಡಮ್ ನಿಮ್ಮನ್ನ ತುಂಬಾ ಹಚ್ಚಿಕೊಂಡಿದಾರೆ. ಅವರು ನಿಮ್ಮನ್ನ ತುಂಬಾ ಇಷ್ಟ ಪಟ್ಟಿದಾರಂತೆ. ದಯವಿಟ್ಟು ಅವರಿಗೊಂದು ನೆಮ್ಮದಿಯ ಬಾಳು ಕೊಡಿ."ಕೈಮುಗಿದು ಬೇಡಿಕೊಂಡ
ಹರೀಶ್‌ಗೆ ಬಿಕ್ಷುಕನಿಗೆ ಬಿಕ್ಶೆ ಹಾಕುವುದಲ್ಲದೆ ತಿಂದು ಪಾವನ ಮಾಡಿ ಎಂದು ಬೇಡಿಕೊಂಡಂತಾಯ್ತು.
ರಾಜೀವ್ ಮುಂದುವರೆಸಿದ
"ಅಮರ್ ಪಾಲ್ ತುಂಬಾ ದೊಡ್ಡ ಮನುಶ್ಯ ಅವನಿಗೆ ಎಲ್ಲಾ ಕಡೆ ಕೈಗಳಿವೆ ಅಂತಹುದರಲ್ಲಿ ಅವರಿಂದ ತಪ್ಪಿಸ್ಕೊಳ್ಳೋಕೆ ಸ್ಮಿತಾಗೆ ಬಲ ಶಾಲಿಯಾಗಿರೋ ಗಂಡಿನ ಗಂಡನ ಅವಶ್ಯಕತೆ ಇದೆ. ನಾನು ಇಷ್ಟೆಲ್ಲಾ ಮಾತಾಡಿದರೂ ನಾನು ಮೂಲತ: ತುಂಬಾ ಹೆದರಿಕೆಯ ಮನುಷ್ಯ ಆದರೂ ನಾನು ಕೇವಲ ಸೆಕ್ರೆಟರಿ ನಾನೇನೂ ಮಾಡೋಕೆ ಆಗೋದಿಲ್ಲ . ನೀವೆ ಅವರನ್ನ ಕಾಪಾಡಬೇಕು" ರಾಜೀವನ ಕಣ್ಣಲ್ಲಿ ನೀರು.
ಹರೀಶನಿಗೆ ತನ್ನನ್ನು ಬಲಶಾಲಿ ಎಂದದ್ದಕ್ಕೆ ಸಂತೋಷವಾಯ್ತು. ರಾಜೀವನೆ ಇಷ್ಟೊಂದೆಲ್ಲಾ ಹೇಳಿದರೂ ತಾನು ಕೇಳಲಿಲ್ಲವಾದರೆ ತಾನು ಗಂಡಾಗಿ ಹುಟ್ಟಿದ್ದಕ್ಕೆ ಏನು ಸಾರ್ಥಕತೆ ಎನಿಸಿತು. ಆದರೂ ಅಮರ್ ಪಾಲ್‍೬ನ ಬಗ್ಗೆ ಹೆದರಿಕೆ ಇದ್ದೇ ಇತ್ತು
"ಸಾರ್ ಆದರೆ ಅಮರ್ ಪಾಲ್ ನನ್ನನ್ನ ಜೀವಂತ ಬಿಡ್ತಾನಾ?"
"ನಿಜಕ್ಕೂ ಬಿಡಲ್ಲ. ಆದರೆ ನೀವು ಪ್ರೀತಿಗೆ ಸೋಲ್ತೀರಾ ಇಲ್ಲ ಭೀತಿಗೆ ಹಿಂಜರಿತೀರಾ ನೀವೆ ನಿರ್ಧಾರ ಮಾಡಿ" ರಾಜೀವ ಗಂಭೀರನಾಗಿ ನುಡಿದು ಬಂಗಲೆಯ ಒಳಗೆ ನಡೆದ.
ಕೈನಲ್ಲಿದ್ದ ಸೂಟ್ ಕೇಸ್ ಮಂಚದ ಮೇಲೆಸೆದು ದೊಪ್ಪೆಂದು ಬಿದ್ದ ಹರೀಶ್. ದ್ವಂದ್ವದಲ್ಲಿ ಸಿಲುಕಿದ
ತಾನೇಕೆ ಇಲ್ಲಿ ಬಂದೆ ಇವಳ ಬಲೆಗೇಕೆ ಸಿಲುಕಿದೆ. ಹೊರಟು ಹೋದರೆ ಅಸಹಾಯಕ ಹೆಣ್ಣಿಗೆ ಅಪಚಾರ ಮಾಡಿದಂತಾಗುತ್ತದೆ. ಅದು ಅವಳು ತನ್ನನ್ನು ಅಷ್ಟೊಂದು ಬಯಸುವಾಗ. ಇಲ್ಲೇ ಇದ್ದರೆ ಅಮರ್ ಪಾಲ್ ಖಂಡಿತಾ ಉಳಿಸುವುದಿಲ್ಲ .
ಏನು ಮಾಡುವುದು? ಗೋಜಲು ಗೋಜಲು ಯೋಚನೆಗಳು ಮುತ್ತುತ್ತಿದ್ದಂತೆ ಅಮ್ಮ ತಂಗಿ ಮನದಿಂದ ದೂರವಾದರು .ಸ್ಮಿತಾ ಹಾಗು ಅವಳ ದೈನ್ಯ ಮುಖವೊಂದೇ ಕಣ್ಣ ಮುಂದೆ ಕಾಣ ತೊಡಗಿತು.
ಅಷ್ಟರಲ್ಲಿ ಮತ್ತೆ ಅವಳದೇ ಫೋನ್ ಮತ್ತೆ ಬಂತು.
"ಹ...... ಲೋ.............." ಅಲ್ಲಿಂದ ಮತ್ತದೆ ಕೋಗಿಲೆಯ ದ್ವನಿ ಬಂತು
ಇವನು ಮಾತಾಡಲಿಲ್ಲ
"ಯಾಕೆ ನನ್ನ ಜೊತೆ ಮಾತಾಡುವುದಿಲ್ಲ ನೀವು? ಬೇಜಾರಾ" ಅಲ್ಲಿಂದ ಅತೀವ ಬೇಸರಗೊಂಡ ದನಿ ಕೇಳಿ ಬಂತು
"ಛೆ ಛೆ ಇಲ್ಲ ಇಲ್ಲ ಬೇಸರ ಯಾಕೆ?" ಮಾತಾಡಿದ
"ನಾನು ನೆನ್ನೆ ಕೇಳಿದ್ದಕ್ಕೆ ಬೇಸರವಾಯ್ತೇ . ರಾಜೀವ್ ಫೋನ್ ಮಾಡಿದ್ದರು. ನಾನು ಮೈಸೂರಲ್ಲಿದ್ದರೂ ನಿಮ್ಮ ಬಗ್ಗೆ ತಿಳ್ಕೊಳೋಕೆ ರಾಜೀವ್‌ಗೆ ಅಲ್ಲೇ ಇರೋದಿಕ್ಕೆ ಹೇಳಿದ್ದೇನೆ. ನೀವ್ಯಾಕೆ ಬಿಟ್ಟು ಹೋಗೋ ನಿರ್ಧಾರ ಮಾಡಿದ್ದು?" ಮುದ್ದಾದ ಆರೋಪಿಸುವ ದನಿಯಲ್ಲಿ ಕೇಳಿದಳು.
"ಸಾರಿ ಸ್ಮಿತಾ ನಂಗ್ಯಾಕೋ ಭಯವಾಗ್ತಿದೆ. ನೀವು ನನ್ನಲ್ಲಿ ಏನು ನೋಡಿ ಈ ನಿರ್ಧಾರ ತಗೊಂಡ್ರಿ?"ಅವನ ಮನದಲ್ಲಿದ್ದ ಅನುಮಾನವನ್ನು ಹೊರಹಾಕಿದ
"ಆವತ್ತು ಆ ಅಂಗಡಿಯಲ್ಲಿ ನೀವು ನನ್ನಮೇಲಿಟ್ಟಿದ್ದುದು ಬರೀ ಅಭಿಮಾನ ಅಲ್ಲ ಅದರ ಜೊತೆಗೆ ಜಗತ್ತನ್ನೆ ಮರೆಯೋ ಪ್ರೀತಿ ಅಂತ ನಂಗೆ ಗೊತ್ತಾಯ್ತು. ನನ್ನ ಚಪ್ಪಲಿಗೂ ನೀವು ತೋರಿದ ಪ್ರೀತಿ ಇದುವರೆಗೂ ಎಲ್ಲೂ ಕೇಳಿಲ್ಲ ನೋಡಿಲ್ಲ . ಒಂದು ಹೆಣ್ಣು ಬಯಸೋದು ಅದನ್ನೇ ಅಲ್ಲವೇ. ಸಿನಿಮಾದಲ್ಲಿ ನಾವು ಪ್ರೀತಿಗೋಸ್ಕರ ಹುಚ್ಚ ಆಗೋರು. ರೌಡಿ ಆಗೋರು ಸಾಯೋರು ಎಲ್ಲಾ ತೋರಿಸ್ತೀವಿ, ಕನಸನ್ನ ಮಾರ್ತೀವಿ ಆದರೆ ನಿಜ ಹೇಳ್ಬೇಕೆಂದರೆ ನಮಗೆ ಕನಸು ಕಾಣೋ ಹಕ್ಕಾಗಲಿ ಮನಸಾಗಲಿ ಇರೋಲ್ಲ ಆದರೆ
ನಿಮ್ಮ ಜತೆ ನನಗೆ ಕನಸು ಕಾಣುವ ಅನುಭವವಾಯ್ತು. ಜೊತೆಗೆ ನೀವು ಬಲಶಾಲಿ ಅನ್ನಿಸ್ತು.ನನ್ನನ್ನ ಈ ಕೂಪದಿಂದ ಕಾಪಾಡಬಲ್ಲ್ಲವರು ನೀವೇ ಅಂತ ನನಗೆ ದೃಡವಾಯ್ತು. ಸೋ ಐ ....................ಲವ್ ....................ಯು" ಅವಳ ಮಾತುಗಳನ್ನೇ ಆಸಕ್ತಿಯಿಂದ ಕೇಳುತ್ತಿದ್ದವನಿಗೆ ಆ ಕೊನೆಯ ವಾಕ್ಯ ಕೇಳಿ ಎದೆ ಝಲ್ಲೆಂತು. ಹೃದಯದ ಆವೇಗ ಹೆಚ್ಚಿತು.ಗುಂಡಿಗೆಯ ರಕ್ತ ಕೆನ್ನೆಯನ್ನಾವರಿಸಿ ಕೆಂಪಾಯ್ತು.
" ಐ.......... ಟೂ ......ಲವ್ .....ಯು ಸ್ಮಿತಾ " ಮೆಲ್ಲನುಸುರಿದ . ಆ ಕ್ಷಣಕ್ಕೆ ಯಾವ ಯೋಚನೆಗಳೂ ಮುತ್ತಲಿಲ್ಲ . ಜಗತ್ತಿನ ಯಾವ ಕಷ್ಟಗಳು ಬಂದರೂ ಸ್ಮಿತಾಳ ಪ್ರೀತಿಯಲ್ಲಿ ಗೆಲ್ಲಬಲ್ಲೆ ಎಂದೆನಿಸಿತು
ಅಲ್ಲಿಂದ ಒಂದು ಹೂ ಮುತ್ತು ಕೇಳಿಬಂತು
ಇವನು ಪ್ರತಿಯಾಗಿ ನೀಡಿದ.
ಫೋನ್ ಇಟ್ಟ ಶಬ್ಧ ಕೇಳಿತು.
ಇದಾಗಿ ಸುಮಾರು ವಾರಗಳೇ ಕಳೆದವು
ಒಮ್ಮೆಯಾದರೂ ಅವಳನ್ನು ಮುಖತ್: ಭೇಟಿಯಾಗಿ ಮಾತನಾಡೋಣವೆಂದರೆ ಆಗಿರಲಿಲ್ಲ.
ಅಮರ್ ಪಾಲ್ ಅವಳನ್ನು ಬಿಟ್ತಿರುತ್ತಲೇ ಇರಲಿಲ್ಲ.
ಇವನನ್ನು ನೋಡಿದಾಗಲೆಲ್ಲಾ ಒಂದು ಹೂ ಮುತ್ತನ್ನು ಗಾಳಿಯಲ್ಲಿ ತೇಲಿ ಬಿಡುತ್ತಿದ್ದಳು . ಇವನು ಅದನ್ನು ಪೂಜ್ಯ ವಸ್ತು ಎಂಬಂತೆ ಹಿಡಿದು ಕಣ್ಣಿಗೊತ್ತಿಕೊಂಡು ಎದೆಗೊತ್ತಿಕೊಳ್ಳುತ್ತಿದ್ದನು.
ಪ್ರತಿ ದಿನ ಅವಳಿಂದ ಫೋನ್ ಬರುತ್ತಿತ್ತು ರಾತ್ರಿಯಲ್ಲಿ
ರಾತ್ರಿಯಾದರೆ ಅಮರ್ ಪಾಲ್‍೬ನ ಹಿಂಸೆ ಮೇರೆ ಮೀರುತ್ತದೆ ಎಂದೂ ಇಷ್ಟವಿಲ್ಲದಿದ್ದರೂ ಅವನ ಬಯಕೆಗೆ ಸಹಕರಿಸಲೇಬೇಕಾಗಿದೆಯೆಂದೂ ಹೇಳುತ್ತಿದ್ದಾಗ ಇವನ ರಕ್ತ ಕುದಿಯುತ್ತಿತ್ತು. ಅವನೊಂದಿಗೆ ದೇಹವನ್ನು ಇಷ್ಟವಿಲ್ಲದಿದ್ದರೂ ಹಂಚಿಕೊಳ್ಳುತ್ತಿದ್ದಾಳ್ಖೆ ಆದರೂ ಅವಳ ಮನಸ್ಸು ತನ್ನದು ಎಂದು ಸಮಾಧಾನಗೊಳ್ಳುತ್ತಿದ್ದ. ಆದರೂ ಇಲ್ಲಿಂದ ಅವಳನ್ನು ಪಾರು ಮಾಡುವುದು ಹೇಗೆಂದು ಯೋಚಿಸುತ್ತಲೇ ಇದ್ದ.
ಅದೊಂದು ದಿನ ಅವಳ ಕಾಲ್ ಬಂದಾಗ ಅವಳ ಬಳಿಯಲ್ಲೇ ಹೇಳಿದ
"ಸ್ಮಿತಾ ಇಲ್ಲಿಂದ ಹೊರಟು ಹೋಗೋಣ ನನ್ನ ಪ್ರಾಣ ಇನ್ನೊಬ್ಬರ ಬಳಿ ನಲುಗುವುದನ್ನು ನೋಡಾಲಾಗುತ್ತಿಲ್ಲ"
"ಆದರೆ ಹರೀಶ್ ಎಲ್ಲಿ ಹೋಗೋದು. ಇವನು ಇಡೀ ಪ್ರಪಂಚದಲ್ಲಿ ಎಲ್ಲಿದ್ದರೂ ನಮ್ಮನ್ನ ಬದುಕೋಕೆ ಬಿಡಲ್ಲ" ಅವಳು ಕಣ್ಣೀರು ಸುರಿಸಿದಳು
"ಹಾಗಿದ್ದರೆ ಏನು ಮಾಡೋದು? ಎಷ್ಟು ದಿನಾಂತ ಈ ನರಕ ಸ್ಮಿತಾ?" ಪ್ರಶ್ನಿಸಿದ
"ಅಮರ್ ಪಾಲ್ ಸಾಯೋ ತನಕ ಇದೇ ಗೋಳು" ಅವಳ ಬಾಯಿಂದ ತಟ್ಟನೆ ಆ ಮಾತು ಬಂತು
"ಸಾಯೋದಾ ?ಅವನು ಯಾವಾಗ ಸಾಯ್ತಾನೆ"ಹರೀಶ್ ಅವನಿಗೇನಾದರೂ ಕಾಯಿಲೆ ಇರಬಹುದೇನೋ ಎಂದುಕೊಂಡ
"ಹರೀಶ್ ಅವನೆಲ್ಲಿ ಸಾಯ್ತಾನೆ. ನಾನೆ ಸತ್ತು ಹೋಗ್ತೀನಿ . ನೀವು ನಂಜೊತೆ ಬಂದು ಬಿಡಿ ಅಟ್ಲೀಸ್ಶ್ಟ್ ಅಲ್ಲಾದರೂ ಸುಖವಾಗಿರೋಣ" ಅವಳ ದನಿ ಗದ್ಗದಿತವಾಗಿತ್ತು
ಅವಳನ್ನು ಸಮಾಧಾನಿಸಿದ. ಅವನಿಗೂ ತುಂಬಾ ಬೇಜಾರಾಗಿ ಹೋಗಿತ್ತು
ರಾತ್ರಿ ಮಲಗಿದಾಗ ಯೋಚನೆ ಮಾಡತೊಡಗಿದ.
ಸಾಯಲು ಧೈರ್ಯ ಬರಲಿಲ್ಲ. ಇರುವುದೊಂದೆ ಉಪಾಯ ಅಮರ್ ಪಾಲ್‍ನ ಮುಗಿಸಿಬಿಡುವುದು
ಆದರೆ ಹೇಗೆ ? . ಅವನನ್ನು ಸಾಯಿಸಿದರೆ ತನ್ನನ್ನ ಜಗತ್ತು ಬಿಡುತ್ತದೆಯೇ? ಸಿಕ್ಕಿ ಹಾಕಿಕೊಂಡರೆ ನೇಣು ಖಂಡಿತಾ.
ಮತ್ತೇನು ಮಾಡುವುದು ಅಂತಹ ಮಾಸ್ಟರ್ ಪ್ಲಾನ್ ಏನು ತನ್ನ ಬಳಿ ಇಲ್ಲವಲ್ಲ. ಸ್ಮಿತಾಗೆ ಮಿಸ್ ಕಾಲ್ ಕೊಟ್ಟ
ಅವಳಿಂದ ಕಾಲ್ ಬಂತು
"ಸ್ಮಿತಾ ನಾವು ಸಾಯೋದು ಬೇಡ. ಆ ಮುದಿಯನ್ನೆ ಕೊಲ್ಲೋಣ . ಏನಂತೀಯಾ?"
"ಹರೀಶ್ ಏನ್ ಹೇಳ್ತಾ ಇದ್ದೀರಾ. ಸಾಯ್ಸೋದು ಅಷ್ಟೊಂದು ಸುಲಭಾನಾ?"ಅವಳ ದನಿಯಲ್ಲಿ ಆತಂಕ
"ಸ್ಮಿತಾ ಅದಕ್ಕೆ ಪ್ಲಾನ್ ಮಾಡಬೇಕಿದೆ. ನಾವು ಬದುಕೋಕೆ ಅವನು ಸಾಯಲೇಬೇಕು "ಹರೀಶ್ ಉಸುರಿದ
"ರಾಜೀವ ಸಹಾಯ ತಗೊಳ್ಳೋಣ ? ತುಂಭಾ ನಂಬಿಕಸ್ತ ಮನುಷ್ಯ ಆತ ಅವನೂ ನಾನು ಚೆನ್ನಾಗಿರೋದನ್ನೆ ಬಯಸ್ತಾನೆ"ಸ್ಮಿತಾ ಕೇಳಿದಳು
"ರಾಜೀವ್ . ಹೂ ಸರಿ "ಸ್ವಲ್ಪ ಹೊತ್ತು ಯೋಚಿಸಿ ಉತ್ತರಿಸಿದ
"ಹರೀಶ್ ನಾನು ರಾಜೀವ್ ಹತ್ರ ಮಾತಾಡಿ ನಿಮಗೆ ಹೇಳ್ತೀನಿ"
ಅವಳು ಫೋನ್ ಆಫ್ ಮಾಡಿದಳು
ಇವನು ರಾತ್ರಿ ಎಲ್ಲಾ ಯೋಚಿಸುತ್ತಲೇ ಇದ್ದ.
(ಮುಂದಿನ ಕಂತಿಗೆ ಮುಕ್ತಾಯ)