"ಹರೀಶ್ ನೋಡೋ ಅಲ್ಲಿ" ಸೋಮು ಕೂಗಿದ ಚಪ್ಪಲಿ ರಾಕಿನಲ್ಲಿ ಎತ್ತಿಡುತ್ತಿದ್ದ ಹರೀಶ್‌ನ ದೃಷ್ಟಿ ಬಾಗಿಲ ಕಡೆಗೆ ಬಿತ್ತು \
ಕನಸೋ ನನಸೋ ತಿಳಿಯದಾಯಿತು ಅವನ ಆರಾಧ್ಯ ಮೂರ್ತಿ, ಪ್ರಖ್ಯಾತ ಸಿನಿ ನಾಯಕಿ ಸ್ಮಿತ ನಿಂತಿದ್ದಳು
ಎಲ್ಲರೂ ಅವಳೆಡೆ ಓಡಿದರು
ಸ್ಮಿತಾ ಹೆಸರಿನಂತೆಯೇ ತನ್ನ ನಗುವಿನಿಂದಲೇ ಕನ್ನಡ ಸಿನಿ ರಂಗದಲ್ಲಿ ಮೋಡಿ ಮಾಡಿದ್ದಳು ಮಾದಕ ಸುಂದರಿ, ಕಣ್ನಿನಲ್ಲೇ ಕೊಲ್ಲುವ ಹುಡುಗಿ ಕೇವಲ ಮೂರು ವರ್ಷದಲ್ಲಿ ಇಡೀ ಚಿತ್ರರಂಗವನ್ನೇ ಆಳಲಾರಂಬಿಸಿದ್ದ್ದಳು
ಅಂತಹ ನಾಯಕಿ ಇಂದು ತಾನಾಗೆ ಈ ಚಪ್ಪಲಿ ಅಂಗಡಿಗೆ ಬಂದಿದ್ದಳು
ಹರೀಶ್ ಕೆಲ್ಸ ಮಾಡಿತ್ತಿದ್ದ ಚಪ್ಪಲಿ ಅಂಗಡಿಯೂ ಯಾವ ಐಶಾರಾಮಿ ಬಂಗಲೆಗೂ ಕಡಿಮೆ ಇರಲಿಲ್ಲ. ಚಪ್ಪಲಿಯ ಬೆಲೆ ಕಡಿಮೆಯದ್ದು ಎಂದರೆ ಇಪ್ಪತ್ತೈದು ಸಾವಿರ. ಹೆಚ್ಚಿಗೆ ಎಲ್ಲೆಯೇ ಇರಲಿಲ್ಲ.
ಸ್ಮಿತಾ ಬರುತ್ತಿರುವುದು ಮೊದಲ ಬಾರಿ ಏನಲ್ಲ ಆದರೆ ಹರೀಶ್ ಇತ್ತೀಚಿಗೆ ಈ ಅಂಗಡಿಗೆ ಕೆಲ್ಸಕ್ಕೆ ಸೇರಿದ್ದ . ಹಿಂದೆ ಇದ್ದ ಕೆಲಸ ಬಿಟ್ಟು ಸೇರಿದ್ದು ಕೇವಲ ಸ್ಮಿತ ಇಲ್ಲಿಗೆ ಬರುತ್ತಾಳೆಂದು.
ಮೊಬೈಲ್‌ನಲ್ಲಿ ಮಾತಾಡುತ್ತಾ ಒಳಗೆ ಬಂದ ಸ್ಮಿತಾಗೆ ಸನ್ನೆಯಲ್ಲೇ ಕೂರಲು ಹೇಳಿದ. ಆ ಮೆತ್ತನೆಯ ಸೋಫ ಕೇವಲ ಅಂತಹ ಗಣ್ಯರಿಗಾಗಿ ಮೀಸಲು. ಹರೀಶನಂತಹವರು ತಮಾಷೆಗಾಗಿಯೂ ಅಲ್ಲಿ ಕೂರುವಂತಿಲ್ಲ
ಫೋನಿನಲ್ಲೇ ಮಾತಾಡುತ್ತಾ ಕುಳಿತವಳನ್ನೇ ಎವೆ ಇಕ್ಕದೆ ನೋಡಲಾರಂಭಿಸಿದ. ಬದುಕಿನ ಸೌಭಾಗ್ಯವೆಲ್ಲಾ ಅಲ್ಲೇ ಇದೆ ಏನೋ ಎಂಬಂತೆ ಭಾಸವಾಗತೊಡಗಿತು ಬೇಡೆಂದರೂ ಮುಂದೆ ಬರುತ್ತಿದ್ದ ಮುಂಗುರಳನ್ನು ತನ್ನ ನೀಳ ಬೆರಳುಗಳಿಂದ ಹಿಂದೆ ಸರಿಸುತ್ತಾ ಅವಳ ತುಟಿಗಳೆರೆಡು ಒಂದರ ಮೋಡಿಗೆ ಇನ್ನೊಂದು ಒಳಗಾಗಿವೆ ಎಂಬಂತೆ ಪದೆ ಪದೆ ಮುತ್ತಿಡುತ್ತಿದ್ದಂತೆ ಇವನ ಮನದಲ್ಲಿ ಕಂಪನ ಕಣ್ಣ ಎವೆಗಳು ಅವಳ ಕಂಗಳನ್ನು ಚುಂಬಿಸಲೆಂದೆ ಬಾಗುತ್ತಿದ್ದವು. ನೀಳ ಮೂಗಿನ ಸುಂದರಿ ಅವಳು ಬೆಳ್ಳನೆ ಮೈ . ಹಾಲಿನ ಕೊಳದಲ್ಲೇ ಇದ್ದಾಳೇನೋ ಎಂಬಂಥಾ ರೂಪ ನೀಳ ಮೈ ಮಾಟ.
ಹರೀಶನ ಭಾಗ್ಯಕ್ಕೆ ಎಣೆಯೇ ಇಲ್ಲವಾಗಿತ್ತು.
"ಏಯ್ ಏಳೋ ಮೇಲೆ " ಗುಡುಗಿನ ಕೂಗಿಗೆ ಎಚ್ಚರವಾಗಿ ವಾಸ್ತವಕ್ಕೆ ಬಂದನು
ಅವಳನ್ನೇ ನೋಡುತ್ತಾ ಗೊತ್ತಿಲ್ಲದೆ ಅವಳ ಎದುರಿಗಿದ್ದ ಸೋಫಾ ಮೇಲೆ ಕೂತು ಬಿಟ್ಟಿದ್ದ. ಸ್ಮಿತಾಳ ಸೆಕ್ರೆಟರಿ ಬೊಬ್ಬೆ ಹೊಡೆಯುತ್ತಿದ್ದ.
"ಏನೋ ಮೇಡಮ್ ಸಮಕ್ಕೂ ಕೂತ್ಕೋತೀಯ ಈಡಿಯಟ್ ಏಳೋ ಮೇಲೆ " ಹರೀಶ್ ನಡುಗತೊಡಗಿದ. ಏನು ಹೇಳಲೂ ತೋಚಲಿಲ್ಲ
ಸ್ಮಿತಾ ಕೂಡ ಫೋನ್ ಆಫ್ ಮಾಡಿ ಸೆಕ್ರೆಟರಿಯತ್ತ ಏನು ಎಂಬಂತೆ ನೋಡಿದಳು
"ಮೇಡಮ್ ನೀವು ಮಾತಾಡ್ತಾ ಇದ್ದರೆ ನಿಮ್ಮನ್ನೇ ಒಳ್ಳೆ ತಿಂದುಬಿಡೋ ಹಾಗೆ ಇಷ್ಟು ಹತ್ರದಲ್ಲಿ ಕೂತ್ಕೊಂಡು ನೋಡ್ತಿದ್ದ ಇವನು" ಸೆಕ್ರೆಟರಿ ಆರೋಪಿಸಿ ಹರೀಶನನ್ನು ಕಡಿದುಬಿಡುವಂತೆ ನೋಡಿದ.
ಸ್ಮಿತಾ ಒಮ್ಮೆ ಹರೀಶನನ್ನು ನೋಡಿದಳು ಆ ನಡುಕದಲ್ಲಿಯೂ ಅವಳ ದೃಷ್ಟಿ ತನ್ನ ಮೇಲೆ ಹರಿದಿದ್ದಕ್ಕೆ ಜನ್ಮ ಪಾವನವಾಯ್ತು ಎಂದು ಕೊಂಡ.
ಮತ್ತೆ ಮಂದ ಸ್ಮಿತಳಾಗಿ "ರಾಜೀವ್ ಹೋಗಲಿ ಬಿಡಿ ಅವನಿಗೇ ಗೊತ್ತಿಲ್ಲದೆ ಹಾಗೆ ಮಾಡಿದ್ದಾನೆ. ಲೆಟ್ ಅಸ್ ನಾಟ್ ಮೇಕ್ ಇಟ್ ಬಿಗ್ ಇಶ್ಯೂ " ನುಡಿದಳು
ಒಮ್ಮೆ ಹರೀಶನತ್ತ ನೋಡಿ ನಕ್ಕಳು
ಇಂಗ್ಲೀಶ್ ಮಾತಾಡಲು ಬರದಿದ್ದರೂ ಅರ್ಥವಾಗುತಿತ್ತು
ಕೊನೆಗೆ ಕಸ್ಟಮರ್ ಕೇರ್ ಇಂದ ಒಬ್ಬರು ಬಂದು ಅವಳಿಗೆ ಸ್ಲಿಪ್ಪರ್ ತೋರಿಸಲು ಕರೆದು ಕೊಂಡು ಹೋದರು.
ರಾಶಿ ಬಿದ್ದಿದ್ದ ಚಪ್ಪಲಿಗಳನ್ನೆಲ್ಲ ಎತ್ತಿಡಲು ಬಗ್ಗುತ್ತಿದ್ದಂತೆ
"ಏನೋ ಹರಿ ಸ್ಮಿತಾ ನಿಂಗೆ ಸಪ್ಪೋರ್ಟ್ ಮಾಡಿದ್ರು. ಏನ್ ವಿಷಯ" ಗುರು ಕೀಟಲೆ ಮಾಡಿದ
"ಏನೋ ಒಂಥರಾ ಏನೋ ಒಂಥರಾ " ಸೋಮ ಹಾಡತೊಡಗಿದ .
ಇವನಿಗೋ ಮನದಲ್ಲಿ ಯಾವುದೋ ವೀಣೆ ಮಿಡಿದ ಹಾಗೆ ರಕ್ತವೆಲ್ಲಾ ಮುಖಕ್ಕೆ ಚಿಮ್ಮಿತು ಮೊದಲೇ ಬಿಳಿ ಮುಖ . ಈಗ ಕೆಂಪಗಾಗಿತ್ತು
ಸ್ಮಿತಾ ಕಾಲಿಗೆ ಹಾಕಿದ್ದ ಚಪ್ಪಲಿ ಬಿಟ್ಟು ಹೊಸ ಚಪ್ಪಲಿ ಹಾಕಿಕೊಂಡಳು. ಆ ಹಳೇ ಚಪ್ಪಲಿ ಯಾರು ಬೇಕಾದರೂ ತೆಗೆದುಕೊಳ್ಳಬಹುದಿತ್ತು. ಅವಳ ಕಾಲಿನ ಸ್ಪರ್ಶವಾಗಿದ್ದ ಆ ಚಪ್ಪಲಿಯನ್ನು ಪ್ರೀತಿಯಿಂದ ತೆಗೆದು ಒಂದು ಬಾಕ್ಸಿನಲ್ಲಿ ಹಾಕಿಟ್ಟ . ಅದನ್ನು ಅವಳೂ ನೋಡಿದಳು ಮತ್ತೊಮ್ಮೆ ಅವಳ ನೋಟ ಇವನ ನೋಟಕ್ಕೆ ಬೆರೆಯಿತು.
ಹರೀಶನ ಆನಂದ ಮೇರೆ ಮೀರಿತು ಹೋಗುವಾಗ ಬಾಯ್ ಹೇಳಿ ಹೊರಟಳು. ಸೆಕ್ರೆಟರಿ ಮಾತ್ರ ಸಿಡಿಮಿಡಿಗುಟ್ಟುತ್ತಿದ್ದ. ಅದಾದ ಎರಡೆ ದಿನಕ್ಕೆ ಹರೀಶ ಕೆಲಸ ಹೋಯಿತು.
ಕಾರಣ ಕೇಳಿದ್ದ್ದಕ್ಕೆ ಸ್ಮಿತಾ ಮೇಡಮ್ ತೆಗೆಯಲು ಹೇಳಿದ್ದಾರೆ ಎಂಬ ಉತ್ತರ ಬಂತು.
ಹರೀಶ ಗೋಗರೆದ ಬೇಡಿಕೊಂಡ. ಮನೆಯಲ್ಲಿ ತಂಗಿಯ ಮದುವೆಗೆ ಹಣ ಜೋಡಿಸಬೇಕು ಎಂದು ಅತ್ತ
ಮಾಲೀಕ ಮಾತ್ರ ಕಲ್ಲು ಹೃದಯಿಯಾಗಿದ್ದ
ಅಂದು ಅಷ್ಟೆಲ್ಲಾ ಬೆಂಬಲಿಸಿದ ಸ್ಮಿತಾ ಹೀಗೇಕೆ ಮಾಡಿದ್ದಾಳೆಂದು ಯೋಚಿಸುತ್ತಲೇ ಇದ್ದ.
ಸ್ವಲ್ಪ ಹೊತ್ತಿಗೆ ಅವನ ಮೊಬೈಲ್‌ಗೆ ಕಾಲ್ ಬಂತು ಇದ್ಯಾರಪ್ಪ ಎಂದು ಯೋಚಿಸುತ್ತಲೇ ಫೋನ್ ಆನ್ ಮಾಡಿದ
ಸ್ಮಿತಾ ಮೇಡಮ್ ಮನೆಯಿಂದ ಅದು "ಮೇಡಮ್ ಕೂಡಲೆ ಬರುವಂತೆ ಹೇಳಿದ್ದಾರೆ" ಎಂದು ಹೇಳಿದರು ಅಲ್ಲಿಂದ .
ಅನಿರೀಕ್ಷಿತ ಘಟನೆ . ಅದೇನೋ ನಿಜವೋ ಭ್ರಮೆಯೋ . ಏಕಿರಬಹುದು ಅವತ್ತು ಹಾಗೆ ನೋಡಿದ್ದಕ್ಕೆ ಸ್ಮಿತಾ ಕೋಪ ಮಾಡಿಕೊಂಡು ತನ್ನನ್ನು ಹೊಡೆಸಲು ಕರೆಸಿರಬಹುದೇ ಎಂಬ ಯೋಚನೆಯೂ ಬಂತು.
ಮೊಬೈಲ್ನಲ್ಲು ಸ್ಮಿತಾ ಚಿತ್ರವೇ. ಅದನ್ನು ನೋಡುತ್ತಾ ಇಲ್ಲ ಅದಿರಲಿಕ್ಕಿಲ್ಲ ಎಂದುಕೊಂಡು ಧೈರ್ಯ ಮಾಡಿಕೊಂಡು ಮನೆಗೆ ಹೋದ ವಾಚಮನ್ ಪರಿಚಯ ಕೇಲಿ ಅವನನ್ನು ಒಳಗೆ ಬಿಟ್ಟ.
ಮೇಲೆ ಬಾಲ್ಕನಿಯಲ್ಲಿ ಸ್ಮಿತಾ ನಿಂತಿದ್ದಳು ಜೊತೆಗೆ ಅವಳ ಗಾಡಫಾದರ್ ಅಮರ್ ಪಾಲ್ ಕೂಡ. ಇಬ್ಬರ ನಡುವೆ ಏನೋ ಮಾತು ಕಥೆ ನಡೆಯುತ್ತಿತ್ತು.
ಆ ಬಂಗಲೆ ನೋಡಿ ದಂಗಾಗಿ ಹೋದ ಅಬ್ಬಾ ಏನೋ ವೈಭವ ಅಂತಹ ಮನೆಗಳನ್ನು ಕೇವಲ ಸಿನಿಮಾದಲ್ಲಿ ಮಾತ್ರ ನೋಡಿದ್ದ. ಸ್ಮಿತಾಳನ್ನು ಕಾಣಲು ಜನವೋ ಜನ . ನಿರ್ಮಾಪಕರು, ನಿರ್ಧೇಶಕರು, ನಟರು, ನಾಯಕರು . ಸುಮಾರು ಜನ ಆಳುಕಾಳುಗಳು. ತಾನೆಲ್ಲಿ ನಿಲ್ಲುವುದು ಎಂದು ತಿಳಿಯದೆ ಹೊರಗಡೆಯೇ ನಿಂತಿದ್ದ ಅಷ್ಟರಲ್ಲಿ ಮನೆಯ ಆಳೊಬ್ಬ ಬಂದು ಮನೆಯ ಹಿಂದಿನ ಪಾರ್ಕ್ ಬಳಿ ಹೋಗಲು ಹೇಳಿದ.
ತಡಕಾಡಿಕೊಂಡು ಅಲ್ಲಿ ಹೋದ ಸ್ಮಿತಾ ಸೆಕ್ರೆಟರಿ ರಾಜೀವ್ ಇದ್ದ ಅಲ್ಲಿಯೇ
"ನೋಡಪ್ಪ ಮೇಡಮ್ ನಿನ್ನನ್ನ ಅವರ ಮನೆಗೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಅಂತ ಇಷ್ಟ ಪಟ್ಟಿದ್ದಾರೆ ಇದೇ ಮನೆಲಿ ಕೆಲಸ ಬಂದೋರಿಗೆ ಕೂರಿಸಿ ಅವರನ್ನ ನೋಡಿಕೊಳ್ಳೋದು ಉಪಚಾರ ಮಾಡೋದು ಅಷ್ಟೆ . ಸಂಬಳ ಚಪ್ಪಲಿ ಅಂಗಡೀಗಿಂತ ಜಾಸ್ತಿ ಸರೀನಾ ಇವತ್ತಿಂದಾನೆ ಜಾಯಿನ್ ಆಗು ಆಯ್ತಾ. ಅಂದ ಹಾಗೆ ನಿಂಗೊಂದು ರೂಮ್ ಕೂಡ ಇದೆ ನೀನುಇಲ್ಲೇ ಇರಬೇಕು ಗೊತ್ತಾಯ್ತಾ" ಅವನು ಹರೀಶನ ಯಾವ ಉತರಕ್ಕೂ ಕಾಯಲಿಲ್ಲ. ಇದು ಅಪ್ಪಣೆ ಎಂಬಂತೆ ಇತ್ತು ಅವನ ಮಾತಿನ ಧಾಟಿ
ಹರೀಶನ ಮನಸ್ಸು ಆಗಸದಲ್ಲಿ ಓಲಾಡಿತು. ಎಂಥ ಭಾಗ್ಯ. ಸ್ಮಿತ ದ ಗ್ರೇಟ್ ಮೇಡಮ್ ನನ್ನನ್ನು ಅವರ ಮನೆಯ ಕೆಲಸಕ್ಕೆ ಕರೆದು ಸೇರಿಸಿಕೊಂಡಿದ್ದಾರೆ ಎಂಬುದನ್ನು ನೆನೆಸಿ ನೆನೆಸಿ ಸಂತಸ ಪಡಲಾರಂಭಿಸಿದ .
ಅಂದೇ ಅವನ ಮನೆಯಿಂದ ಅವನ ವಸ್ತುಗಳೆಲ್ಲಾ ಅವನ ಹೊಸ ರೂಮಿಗೆ ರವಾನೆಯಾದವು. ಹರೀಶನ ಅಮ್ಮ ಹಾಗು ತಂಗಿಗೂ ಖುಶಿ .
ದೊಡ್ಡ ಹೀರೋಯಿನ್ ಮನೇಲಿ ಮಗ ಕೆಲ್ಸ ಮಾಡುತ್ತಾನೆ ಎಂಬುದೇ ಅವರಿಗೆ ಹಿಗ್ಗಿನ ವಿಷ್ಯ.
ಆದರೆ ಕೆಲಸಕ್ಕೆ ಬಂದ ದಿನ ಅವನಿಗೆ ನಿರಾಸೆ. ಒಟ್ಟು ಹದಿನೈದು ಜನ ಕೆಲಸದವರು.
ಅವರಲ್ಲಿ ಐದು ಜನ ಇದೇ ಕೆಲಸಮಾಡುತ್ತಿದ್ದವರು. ಅದರಲ್ಲಿ ಅವನಿಗೆ ಕೆಲಸವೇ ಇಲ್ಲ.
ಸ್ಮಿತಾ ಬೆಳಗ್ಗೆ ಹೋಗುವಾಗ ಇವನತ್ತ ಕೈ ಬೀಸಿದಳು. ಅಷ್ಟು ಸಾಕಾಗಿತ್ತು. ಅಂದೆಲ್ಲಾ ಕೆಲಸವಿಲ್ಲದೆ ಕೂತಿದ್ದ. ಹೊತ್ತು ಹೊತ್ತಿಗೆ ಊಟ ಸಿಕ್ಕಿತು.
ಜೊತೆಗೆ ಕೆಲ್ಸದಾಳು ಮುನಿಯನ ಜೊತೆ ಕೂತಾಗ ಸ್ಮಿತಾಳ ಹಿಂದಿನ ವಿಷ್ಯಗಳು ತಿಳಿದವು "ಸ್ಮಿತಾ ಹುಟ್ಟಿದ್ದು ಯಾವುದೋ ಸ್ಲಮ್ಮಿನಲ್ಲಿ ಆದರೆ ಅವಳ ರೂಪು ಲಾವಣ್ಯಗಳಿಂದ ನಿರ್ಮಾಪಕ ಅಮರ್ ಪಾಲ ಕಣ್ಣಿಗೆ ಬಿದ್ದಳು. ಅಮರ್ ಪಾಲ್‌ರ ಅಪ್ಪಣೆಯಿಲ್ಲದೆ ಅವಳು ಯಾವ ಪ್ರಾಜೆಕ್ಟ್ ಅನ್ನೂ ಕೈಗೆತ್ತಿಕೊಳ್ಳುವುದಿಲ್ಲ. ಅವಳ ಸಂಭಾವನೆಯನ್ನೂ ಅವನೆ ಗೊತ್ತು ಮಾಡುವುದು. ಮುಂದೆ ಅವರಿಬ್ಬರೂ ಮದುವೆಯಾಗಬಹುದು ಎಂದಾಗ ಮಾತ್ರ ಹರೀಶನ ಮನದಲ್ಲಿ ಕಸಿವಿಸಿಯಾಯ್ತು.
ಅವಳ ವಯಸ್ಸು ಇಪ್ಪತ್ತಿರಬಹುದು . ಅಮರಪಾಲ್ ತನ್ನಪ್ಪನ ಕಾಲದಿಂದಲೂ ಚಲನ ಚಿತ್ರ ನಿರ್ಮಿಸುತ್ತಿದ್ದಾನೆ. ಏನಿಲ್ಲ ಎಂದರೂ ಐವತ್ತಕ್ಕಿಂತ ಹೆಚ್ಚು ಇರಬಹುದುಅವನ ವಯಸ್ಸು . ಅವನಂತ ಮುದಿಗೂಬೆಗೆ ಇಂತಹ ದಂತದ ಗೊಂಬೆಯೇ? ಭಗವಂತಾ ಯಾವ್ಯಾವ ಹೂವಿನ ಮೇಲೆ ಯಾರ್ಯಾರ ಹೆಸರನ್ನು ಬರೆದಿಟ್ಟಿದ್ದೀಯೋ ಎಂದುಕೊಂಡಾಗ- ಭಗವಂತ ಈ ಹೂವಲ್ಲಿ ನಿನ್ನ ಹೆಸರಿದೆ ಎಂದಂತೆ ಭಾಸವಾಗಿ ಪುಳಕೊಗೊಂಡ.
ಅಂದು ರಾತ್ರಿ ಹನ್ನೆರೆಡಾಗಿತ್ತು ಚೆನ್ನಾಗಿ ತಿಂದು ಗಡದ್ದಾಗಿ ನಿದ್ರಿಸುತ್ತಿದ್ದ .ಅವನ ಮೊಬೈಲ್ ಕೂಗಿತು . " ಬಂದಿದೆ ಬದುಕಿನ ಬಂಗಾರದಾ ದಿನ" ಎಂಬ ಹಾಡದು ಅವನ ತಂಗಿ ಸೆಟ್ ಮಾಡಿಟ್ಟಿದ್ದಳು. ನಿದ್ದೆಗಣ್ಣು ಆ ನಂಬರ್ ಯಾರದು ಅಂತಲೂ ತಿಳಿಯಲಿಲ್ಲ ಯಾರಪ್ಪ ಇಷ್ಟು ಹೊತ್ತಲ್ಲಿ ಎಂದುಕೊಂಡು "ಹಲೋ" ಎಂದ "ಹ...ಲೋ" ಎಂಬ ಇಂಪಾದ ದನಿ ಎಲ್ಲೋ ಕೇಳಿರುವಂತಿದೆಯಲ್ಲಾ ಕೂಡಲೆ ನೆನಪಿಗೆ ಬಂತು ಸ್ಮಿತಾ ತನ್ನ ಚಿತ್ರಗಳಿಗೆ ತಾನೆ ಡಬ್ ಮಾಡುತ್ತಿದ್ದುದರಿಂದ ಅವಳ ದನಿ ಅವನಿಗೆ ಪರಿಚಿತವಾಗಿತ್ತು "ಮೇ..................................ಡ..............................ಮ್?" ನಡುಗುವ ದನಿಯಲ್ಲಿ ಕೇಳಿದ ಅವಳು ತನ್ನೊಂದಿಗೆ ಮಾತನಾಡಬಹುದು ಎಂಬ ಕಲ್ಪನೆಯೂ ಇರಲಿಲ್ಲ
"ನಾನು ಜೋರಾಗಿ ಮಾತಾಡೋಹಾಗಿಲ್ಲ್ಲ ದಯವಿಟ್ಟು ನೀವೂ ಜೋರಾಗಿ ಮಾತಾಡಬೇಡಿ ನಾನು ಹೇಳೋದು ಕೇಳಿಸಿಕೊಳ್ಳಿ" ಎಂದಳು
ಇಂತಹ ಮಹಾರಾಣಿಗೆ ಮಾತನಾಡಲೂ ಕಷ್ಟವೇ . ಅಯ್ಯೋ ಎನಿಸಿತು ಅವಳು ಮಾತಾಡತೊಡಗಿದಳು ಎಲ್ಲವನ್ನು ಕೇಳಿಸಿಕೊಂಡ
ಅವಳು ನಾಳೆ ಮತ್ತೆ ಮಾಡುವುದಾಗಿ ಹೇಳಿ ಫೋನಿಟ್ಟಳು ದಂಗಾಗಿ ಕುಳಿತ .
ಮತ್ತೊಮೆ ಅವಳ ಮಾತುಗಳು ಮಾರ್ದನಿಸತೊಡಗಿದವು
"ಸಾರಿ ನನ್ನ ಮನಸಲ್ಲಿ ಇರೊದೆಲ್ಲಾ ಎಲ್ಲಾದ್ರೂ ಹೇಳಿಕೊಳ್ಬೇಕು ಅಂತ ಅನ್ನಿಸ್ತಿತ್ತು ಆದರೆ ಹೇಳಿಕೊಳ್ಳೋಕೆ ಕೇಳ್ಸಿಕೊಂಡು ಸಮಾಧಾನ ಮಾಡೋ ಅಂತಹ ಯಾವುದೂ ಹೃದಯಾನೂ ಸಿಗಲಿಲ್ಲ. ಆದರೆ ನಿಮ್ಮನ್ನ ಆವತ್ತು ಚಪ್ಪಲಿ ಅಂಗಡೀಲಿ ನೋಡಿದಾಗಿನಿಂದ ನೀವೆ ನನ್ನ ದನಿಗೆ ಕಿವಿಯಾಗಬಲ್ಲವರು ಅಂತ ಅನ್ನಿಸಿತು. ನಾನು ಎಲ್ಲರ ಹೃದಯಕ್ಕೂ ರಾಣಿ ಆದರೆ ನನ್ನ ರಾಜನನ್ನ ಆರಿಸೋ ಸ್ವಾತಂತ್ರ್ಯ ನಂಗೆ ಇಲ್ಲ. ನಂಗೆ ಬೀದೀಲಿ ಸುತ್ತಬೇಕು. ಸಾಮಾನ್ಯನೊಬ್ಬನ ಹೆಂಡತಿಯಾಗಬೇಕು.ಅವ್ನು ಬೀದಿಲಿ ಕೊಡಿಸೋ ಪಾನಿಪೂರಿ ಮಸಾಲೆ ಪೂರಿ ತಿನ್ನುತ್ತಾ ಥಿಯೇಟ್‌ರ್ ಗೆ ಹೋಗಿ ಸಿನಿಮಾ ನೋಡಬೇಕು ಅಂತೆಲ್ಲಾ ಆಸೆ ಇದೆ. ಆದರೆ ನಾನು ನನ್ನಿಷ್ಟ ಬಂದ ಹಾಗೆ ಇರೋ ಹಾಗಿಲ್ಲ . ಅಮರಪಾಲ್ ನಂಗೆ ಸಿನಿಮಾರಂಗಕ್ಕೆ ಕರೆದುಕೊಂಡು ಬಂದರು ನಿಜಾ ಆದರೆ ನಂಗೆ ಅವರು ತಂದೆ ಇದ್ದ ಹಾಗೆ ಅವರನ್ನು ಯಾವತ್ತೂ ಮದುವೆಯಾಗೋ ದು ಮನಸಲ್ಲಿ ಇಲ್ಲ . ಆದರೆ ನಾನು ಅವರನ್ನೇ ಮದುವೆಯಾಗಬೇಕು ಅಂತ ಅವರ ಒತ್ತಾಯ. ಇಲ್ಲವಾದರೆ ಬಲವಂತವಾಗಿಯಾದರೂ ನನ್ನನ್ನ ಮದುವೆಯಾಗ್ತೀನಿ ಅಂತ ಹೇಳಿದಾರೆ. ನಂಗೆ ನಿಜಕ್ಕೂ ಇಷ್ಟ ಇಲ್ಲ. ಆದರೆ ಅವರನ್ನು ಎದುರು ಹಾಕಿಕೊಳ್ಳೋದಿಕ್ಕೂ ಭಯ . ನಾನೇನ್ಮಾಡಲಿ ಅನ್ನೋದೆ ಪ್ರಶ್ನೆಯಾಗಿ ಹೋಗಿದೆ."
ಆ ಮಾತುಗಳೇ ಮತ್ತೆ ಮತ್ತೆ ಅವನ ತಲೆಯಲ್ಲಿ ಸುತ್ತತೊಡಗಿದವು ಹರೀಶನ ಕಣ್ಣಲ್ಲಿ ನೀರು ಬಂತು ಪಾಪ ದೊಡ್ಡವರ ಬಾಳೇ ಹೀಗೆಯೇ ಹೇಗಾದರೂ ಮಾಡಿ ಸ್ಮಿತಾಗೆ ಸಹಾಯ ಮಾಡಬೇಕು ಆದರೆ ಹೇಗೆ? ಬಡವ ನೀ ಮಡಗಿದಂಗಿರು ಅಂತ ಸುಮ್ಮನೆ ಇರೋಣ . ನಮಗ್ಯಾಕೆ ಇವರ ವಿಷಯ ಬೆಡ್ ಶೀಟ್ ಎಳೆದುಕೊಂಡು ಮಲಗಿದ.
ಆದರೂ ಅವಳ ಬಗ್ಗೆ ಮರುಕ ಮೂಡದಿರಲಿಲ್ಲ (ಮುಂದುವರೆಯುವುದು)